ಕಂ|| ಶ್ವೇತನ ಗಂಗಾಜಾತನ
ಮಾತನೆ ಪಾರ್ದೆರಡುಮೊಡ್ಡಣಂ ಕಾದಲ್ಕೆಂ|
ದೀ ತೆಱದಿನೊಡ್ಡಿ ನಿಂದುವು
ಭೂತಳಮಳ್ಳಾಡೆ ಕೆಸಱ ಕಡಿತದ ತೆಱದಿಂ|| ೫೩

ವ|| ಆಗಳ್ ಧರ್ಮಪುತ್ರಂ ಪುರುಷೋತ್ತಮನ ಮೊಗಮಂ ನೋಡಿ ಕೌರವ ಬಲದೊಡ್ಡಣದ ನಾಯಕರಿವರಾರೆಂದು ಬೆಸಗೊಳೆ ಮಕರ ಮಸ್ತಕಭೂಮಿಯೊಳ್ ಯುದ್ಧಸನ್ನದ್ಧನಾಗಿ-

ಕಂ|| ಕೆಂಬಣ್ಮದ ಕುದುರೆಗಳೊಳೊ
ಡಂಬಡೆ ನಿಜರಜತರಥಮಗುರ್ವುರ್ವರೆಯಂ|
ತಿಂಬೆ ಕಶಳಧ್ವಜಂ ಮಿಳಿ
ರ್ದಂಬರಮಂ ಬಳಸೆ ನಿಂದನಾತಂ ದ್ರೋಣಂ|| ೫೪

ಆತನ ಸಾರೆ ಕಮಂಡಲು
ಕೇತನಮಂಬರಮನಡರೆ ಚತುರಂಗ ಬಲೋ|
ಪೇತನತಿ ಧವಳ ರಥನಭಿ
ಜಾತಂ ಕ್ಷತ್ರಿಯರನುಱದ ಕಲಿ ಕೃಪನಾತಂ|| ೫೫

ವ|| ಮತ್ತಿತ್ತ ಗಾಂಗೇಯನ ದಕ್ಷಿಣೋಪಾಂತದೊಳ್ ಕರ್ಗನೆ ಕರ್ಗಿದ ಸಮದ ಗಜಘಟಾಟೋಪದ ನಡುವೆ-

ಕಂ|| ಸರದದ ಮುಗಿಲನೆ ಬಿಡದನು
ಕರಿಸುವ ಧವಳಾಶ್ವದಿಂದಮೆಸೆದೊಪ್ಪುವ ಲೋ|
ಹ ರಥಮದು ಪುಲಿಯ ಪೞಯಿಗೆ
ವೆರಸು ತೞತ್ತೞಸೆ ನಿಂದನಾತಂ ಶಲ್ಯಂ|| ೫೬

ವ|| ಮತ್ತಿತ್ತ ಗಂಗಾಸುತನ ವಾಮಭಾಗದೊಳಂಬರಭಾಗಮಂ ಕಟ್ಟಿ ಮೆಡಱದಂತಾಗಿ ತನ್ನ ರಥದೊಳೊಟ್ಟಿದ ಕೆಯ್ದುಗಳ ಬೆಳಗೆ ಬೆಳಗಾಗೆ-

ಹೂಡಿರುವ ಕುದುರೆಗಳು ಸಿದ್ಧವಾಗಿದ್ದುವು. ಜೋತು ಹೋಗಿರುವ ಹುಬ್ಬನ್ನು ಎತ್ತಿ ಕಟ್ಟಿರುವ ಹಣೆಯಲ್ಲಿ ಸೊಗಸಾಗಿ ಪ್ರಕಾಶಿಸುತ್ತಿರುವ ವೀರಪಟ್ಟವು ಅತಿಶಯವಾಗಿ ಮೆರೆಯುತ್ತಿರಲು ದಿವ್ಯವಾದ ಕವಚವನ್ನು ತೊಟ್ಟು ‘ಪರಶುರಾಮನು ಬಾಳಲಿ’ ಎಂದು ತನ್ನ ಆಚಾರ್ಯವನ್ನು ನೆನೆದನು. ಭಯಂಕರವಾದ ಬಿಲ್ಲನ್ನು ಹಿಡಿದು ಪಾಂಡವಸೈನ್ಯವನ್ನು ಪ್ರತಿಭಟಿಸಿ ನಿಂತನು. ಈ ಕಡೆ ಶ್ವೇತನೂ ಆ ಮಕರವ್ಯೂಹಕ್ಕೆ ಪ್ರತಿಯಾಗಿ ಸೂಜಿಯ ಆಕಾರದ ಸೇನಾರಚನೆಯನ್ನು ಒಡ್ಡಿದನು. ಚಿನ್ನದ ಕವಚದಿಂದ ಅಲಂಕೃತವಾದ ಶರೀರವುಳ್ಳವನೂ ಯುದ್ಧೋತ್ಸಾಹದಿಂದ ಕೂಡಿದವನೂ ಆಗಿ ಕೈಲಾಸವಾಸಿಯಾದ ಈಶ್ವರನಿಗೆ ನಮಸ್ಕರಿಸಿ ಬಿಲ್ಲನ್ನು ಹಿಡಿದು ಭೀಷ್ಮನಿಗೆ ಹೆದರದೆ ಎದುರಿಸಿ ನಿಂತನು. ೫೩. ಶ್ವೇತ ಮತ್ತು ಭೀಷ್ಮರ ಆಜ್ಞೆಯನ್ನೇ ನಿರೀಕ್ಷಿಸುತ್ತ ಎರಡು ಸೈನ್ಯವೂ ಯುದ್ಧ ಮಾಡುವುದಕ್ಕಾಗಿ ಈ ರೀತಿಯಲ್ಲಿ ನಿಂತಿರಲು ಕೆಸರಿನ ಮೇಲೆ ಹರಡಿದ ಕಡಿತದಂತೆ ನೆಲವು ನಡುಗುತ್ತಿತ್ತು. ವ|| ಆಗ ಧರ್ಮರಾಜನು ಕೃಷ್ಣನ ಮುಖವನ್ನು ನೋಡಿ ಕೌರವ ಸೇನಾವ್ಯೂಹದ ಒಡೆಯರಾದವರಿವರಾರು ಎಂದು ಪ್ರಶ್ನಿಸಿದನು. ಮಕರವ್ಯೂಹದ ತಲೆಯ ಪ್ರದೇಶದಲ್ಲಿ (ಮುಂಭಾಗದಲ್ಲಿ) ಯುದ್ಧ ಸನ್ನದ್ಧನಾಗಿ. ೫೪. ತನ್ನ ಬೆಳ್ಳಿಯ ತೇರು ಕೆಂಪು ಬಣ್ಣದ ಕುದುರೆಗಳಿಂದ ಒಪ್ಪಿರಲು ಭಯಂಕರನಾದ ಕಳಶ ಚಿಹ್ನೆಯುಳ್ಳ ಬಾವುಟವು ಚಲಿಸುತ್ತ ಆಕಾಶವನ್ನು ಬಳಸಿರುವಂತೆ ನಿಂತಿರುವವನು ದ್ರೋಣಾಚಾರ್ಯ ೫೫. ಅವನ ಪಕ್ಕದಲ್ಲಿಯೇ ಕಮಂಡಲು ಗುರುತಿನ ಬಾವುಟವು ಆಕಾಶವನ್ನು ವ್ಯಾಪಿಸಿರಲು ಚತುರಂಗಸೈನ್ಯದಿಂದ ಕೂಡಿರುವವನೂ ಅತ್ಯಂತ ಬಿಳುಪಾದ ತೇರನ್ನುಳ್ಳವನೂ ಒಳ್ಳೆಯ ಕುಲದಲ್ಲಿ ಹುಟ್ಟಿದವನೂ ಕ್ಷತ್ರಿಯರನ್ನು ಲಕ್ಷ್ಯಮಾಡದವನೂ ಶೂರನೂ ಆದವನು ಕೃಪಾಚಾರ್ಯ. ವ|| ಮತ್ತು ಈ ಕಡೆ ಭೀಷ್ಮನ ಬಲಗಡೆಯ ಪಕ್ಕದಲ್ಲಿ ಬಹಳ ಕಪ್ಪಾದ ಮದ್ದಾನೆಗಳ ಸಮೂಹದ ಆರ್ಭಟದ ನಡುವೆ ೫೬. ಶರತ್ಕಾಲದ ಮೋಡವನ್ನೇ ಅನುಕರಿಸುತ್ತಿರುವ ಬಿಳಿಯ ಕುದುರೆಗಳಿಂದ ಪ್ರಕಾಶಿಸುತ್ತಿರುವ ಆ ಲೋಹ ರಥದಲ್ಲಿ ಹುಲಿಯ ಬಾವುಟದಿಂದ ಕೂಡಿ ಥಳಥಳಿಸುತ್ತ ನಿಂತಿರುವವನು ಶಲ್ಯ, ವ|| ಮತ್ತು ಈ ಕಡೆ ಭೀಷ್ಮನ ಎಡಪಾರ್ಶ್ವದಲ್ಲಿ ಆಕಾಶ ಭಾಗವನ್ನು ತಡಿಕೆಯಿಂದ ಹೆಣೆದ ಹಾಗೆ ಮಾಡಿ

ಕಂ|| ಕ ಕೊರಲೊಳ್ ಕಣ್ಣೊಸಲೊಳ್
ಪೆ ಮಕುಟದೊಳುಗ್ರಧನು ಕರಾಗ್ರದೊಳಿರೆಯ|
ಳ್ಳಿಱಯೆ ಹರಿಕೇತು ನಭದೊಳ್
ಮಿಱುಗುವ ಚೆಂಬೊನ್ನ ರಥದನಶ್ವತ್ಥಾಮಂ|| ೫೭

ವ|| ಆ ರುದ್ರಾವತಾರನ ಕೆಲದೊಳ್ ಕಿಕ್ಕಿಱಗಿಱದ ತೞೆದುಱುಗಲ ನಡುವೆ ಪೊನ್ನ ರಥಮನೇಱ ನಿಂದಂ ಭೂರಿಶ್ರವನಾತನ ಕೆಲದೊಳ್ ಬಾಳಬಟ್ಟಂ ತೂಂತಿಟ್ಟಂತೆ ಸಂದಣಿಸಿ ನಿಂದ ಗೋಪಕುಮಾರರಣಿಯ ನಡುವೆ ಪೊನ್ನ ರಥಮನೇಱ ನಿಂದಾತನೆನ್ನ ತಮ್ಮಂ ಕೃತವರ್ಮನಾತನ ಕೆಲದೊಳೊಂದಕ್ಷೋಹಿಣೀ ಬಲಂಬೆರಸು ಸುತ್ತಿಱದು ಕನಕ ದಂಡ ಮಂಡಿತ ವಿಚಿತ್ರಾತಪತ್ರಂಗಳ ನಡುವೆ ಮಣಿಮಕುಟ ಮರೀಚಿಗಳ್ ಪೊಳೆಯೆ ನಾನಾ ವಾಹನಂಗಳನೇಱ ನಿಂದರ್ ಜಯತ್ಸೇನ ಕಾಂಭೋಜ ಸುದಕ್ಷಿಣ ದಂಡಧಾರ ಶತದಂಡಧರರವರ ಕೆಲದೊಳ್ ನೀಳ ಶ್ರುತಾಯುಧ ನಿಯುತಾಯುಧಾಚ್ಯುತಾಯುಧರೆಂಬರವರ ಕೆಲದೊಳ್ ನಿಲೆ ಬಲದ ಸೆಕೋಲೊಳೊಂದ ಕ್ಷೋಹಿಣೀಬಲಂಬೆರಸುಮಯ್ವತ್ತುಸಾಸಿರ ಮದದಾನೆವೆರಸು ನಿಂದಂ ಸುಯೋಧನನಣುಗ ಮಯ್ದುನುಂ ಸಿಂಧು ದೇಶಾಶ್ವರಂ ಜಯದ್ರಥನಾತನ ಕೆಲದೊಳ್ ಮಕರಮಸ್ತಕಭೂಮಿಯೊಳ್ ಕರಟತಟಗಳಿತ ಮದಜಳಧಾರಾಪೂರ ಪರಿಪ್ಲಾವಿತ ಸಕಳ ಭೂತಳಮಪ್ಪ ನಾಲ್ಕು ಲಕ್ಕ ಭದ್ರಹಸ್ತಿಯುಮನೊಂದು ಮಾಡಿ ಘಟೆಯ ಮೊನೆಯೊಳ್ ದಿಗ್ಗಜೇಂದ್ರಮೆನಿಸಿದ ಸುಪ್ರತೀಕ ಗಜೇಂದ್ರಮನೇಱ ನಿಂದಾತನಿಂದ್ರನ ಕೆಳೆಯಂ ಭಗದತ್ತನಾತನ ಕೆಲದೊಳೊಂದು ಲಕ್ಕ ಕುದುರೆಯುಮಱುವತ್ತು ಸಾಸಿರ ರಥಮುಮೊಂದ ಕ್ಷೋಹಿಣಿಯ ಕಾಲಾಳ್ವೆರಸು ನಿಂದರ್ ಸೋಮದತ್ತ ಬಾಹ್ಲೀಕರವರ ಕೆಲದೊಳ್ ದೇವೇಂದ್ರಂಗೆ ಪಗೆವರಾಗಿ ವಿಕ್ರಮಾರ್ಜುನನ ಕೆಯ್ಯೊಳ್ ಸತ್ತ ನಿವಾತಕವಚ ಕಾಳಕೇಯ ಪೌಳೋಮ ತಳತಾಳುಕರೆಂಬ ದೈತ್ಯರ್ ವೃದ್ಧ ವೈರಮಂ ನೆರೆದು ತ್ರಿಗರ್ತಾಶ ಸುಶರ್ಮ ಪ್ರಭೃತಿಗಳುಂ ಸಂಸಪ್ತಕುರಮಾಗಿ ಪುಟ್ಟಿ ಮೂರು ಕೋಟಿಯುಮಱುವತ್ತು ಸಾಸಿರ ದೈತ್ಯಪ್ರಧಾನನಾಯಕರುಮರ್ಜುನನೊಳ್ ಕಾದುವ ಬೆಸನಂ ದುರ್ಯೋಧನನೊಳ್ ಬೇಡಿ ಪಡೆದು ಪದಿನೆಂಟು ಕೋಟಿ ರಥಂಬೆರಸು ಬೇಡ್ಡಿ ನಿಂದರ್ ಮತ್ತಿತ್ತ ಚತುರಂಗಬಳಜಳನಿಯ ನಡುವೆ ಕಳಿಂಗರಾಜ ವಂಗ ಕೊಂಗ ದೇಶಾಶ್ವರ ರೆಣ್ಬತ್ತುಸಾಸಿರ ಗಜಘಟೆಗಳುಂ ಮೂಱುಲಕ್ಕ ರಥಮುಮಱವತ್ತು ಕೋಟಿ ಪದಾತಿಯುಂ ಬೆರಸು ನಿಂದರ್ ಮತ್ತಂ ಕ್ಷೇಮಧೂರ್ತಿಯುಂ ಭೀಮಸೇನನ ಕೆಯ್ಯೊಳ್ ಸತ್ತ ಬಕಾಸುರ ಜಟಾಸುರರನ ಮಕ್ಕಳಳಂಭೂಷ ಹಲಾಯುಧ ಮುಸಲಾಯುಧ ಕಾಳ ನೀಳ ಪ್ರಮುಖ ರೂಕ್ಷರಾಕ್ಷಸ ಬಲಂಬೆರಸು ಸುತ್ತಿಱದು ಬಳಸಿಯುಮಿರೆ ದುಶ್ಶಾಸನಂ ಮೊದಲಾಗೆ ನೂರ್ವರ್ ತಮ್ಮಂದಿರುಂ ಲಕ್ಕಣಂ ಮೊದಲಾಗೆ ನೂರ್ವರ್ ಮಕ್ಕಳುಮಱುವತ್ತು ಸಾಸಿರ ರಥಮುಂ ಪದಿನೆಂಟು ಸಾಸಿರ

ತನ್ನ ರಥದಲ್ಲಿ ರಾಶಿ ಹಾಕಿದ ಆಯುಧಗಳ ಬೆಳಕೇ ಬೆಳಕಾಗಿರಲು ೫೭. ಕತ್ತಿನಲ್ಲಿ ಕರಿಯ ಮಚ್ಚೆ ಹಣೆಯಲ್ಲಿ ಕಣ್ಣು ಕಿರೀಟದ ತುದಿಯಲ್ಲಿ ಚಂದ್ರ ಕೈಯಲ್ಲಿ ಉಗ್ರವಾದ ಬಿಲ್ಲು ಇವುಗಳಿಂದ ಕೂಡಿ ಆಕಾಶದಲ್ಲಿ ಸಿಂಹಧ್ವಜವು ಮಿಡುಕುತ್ತಿರುವ ಪ್ರಕಾಶವಾದ ಹೊಂಬಣ್ಣದ ತೇರಿನಲ್ಲಿರುವವನು ಅಶ್ವತ್ಥಾಮ. ವ|| ಆ ರುದ್ರಾವತಾರನ ಪಕ್ಕದಲ್ಲಿ ಒಟ್ಟಾಗಿ ಸೇರಿಕೊಂಡಿರುವ ಛತ್ರಿಗಳ ಸಮೂಹದ ಮಧ್ಯದಲ್ಲಿ ಚಿನ್ನದ ರಥವನ್ನು ಹತ್ತಿ ನಿಂತಿರುವವನು ಭೂರಿಶ್ರವ; ಆತನ ಪಕ್ಕದಲ್ಲಿ ಆಕಾಶ ಪ್ರದೇಶವನ್ನು ತೂತುಮಾಡಿದ ಹಾಗೆ ಗುಂಪುಕೂಡಿಸಿ ನಿಂತಿರುವ ಗೋಪಕುಮಾರರ ಸೈನ್ಯದ ನಡುವೆ ಚಿನ್ನದ ತೇರನ್ನು ಹತ್ತಿ ನಿಂತಿರುವವನು ನನ್ನ ತಮ್ಮನಾದ ಕೃತವರ್ಮ, ಆತನ ಪಕ್ಕದಲ್ಲಿ ಒಂದಕ್ಷೋಹಿಣೀ ಸೈನ್ಯದಿಂದ ಕೂಡಿ ಸುತ್ತಲೂ ವ್ಯಾಪಿಸಿ ಚಿನ್ನದ ದಂಡಿಗೆಯಿಂದಲಂಕೃತವಾದ ಚಿತ್ರಖಚಿತವಾದ ಛತ್ರಿಗಳ ನಡುವೆ ರತ್ನಖಚಿತವಾದ ಕಿರೀಟವು ಹೊಳೆಯುವ ಹಾಗೆ ಅನೇಕ ವಿಧವಾದ ವಾಹನಗಳನ್ನು ಹತ್ತಿ ನಿಂತಿರುವವರು ಜಯತ್ಸೇನ, ಕಾಂಭೋಜ, ಸುದಕ್ಷಿಣ, ದಂಡಧಾರ, ಶತದಂಡಧರರು. ಅವರ ಪಕ್ಕದಲ್ಲಿ ಬಲದಂಚಿನಲ್ಲಿ ಒಂದಕ್ಷೋಹಿಣೀ ಸೈನ್ಯದಿಂದಲೂ ಐಯ್ವತ್ತು ಸಾವಿರ ಮದ್ದಾನೆಯಿಂದಲೂ ಕೂಡಿ ನಿಂತಿರುವವನು ದುರ್ಯೋಧನ ಪ್ರೀತಿಯ ಮೈದುನನೂ ಸಿಂಧುದೇಶಾಶ್ವರನೂ ಆದ ಜಯದ್ರಥ. ಆತನ ಪಕ್ಕದಲ್ಲಿ ಮಕರವ್ಯೂಹದ ಮುಂಭಾಗದಲ್ಲಿ ಕಪೋಲಪ್ರದೇಶದಿಂದ ಧಾರಾಕಾರವಾಗಿ ಹರಿಯುತ್ತಿರುವ ಮದೋದಕದಿಂದ ತೊಳೆಯಲ್ಪಟ್ಟ ಭೂಮಿಯನ್ನುಳ್ಳ ನಾಲ್ಕು ಲಕ್ಷ ಭದ್ರಜಾತಿಯ ಆನೆಗಳನ್ನು ಒಟ್ಟುಗೂಡಿಸಿಕೊಂಡು ಅವುಗಳ ಮುಂಭಾಗದಲ್ಲಿ ದಿಗ್ಗಜವೆಂದು ಪ್ರಸಿದ್ಧಿಗೊಂಡಿರುವ ಸುಪ್ರತೀಕವೆಂಬ ಆನೆಯನ್ನು ಹತ್ತಿ ನಿಂತಿರುವವನು ಇಂದ್ರನ ಸ್ನೇಹಿತನಾದ ಭಗದತ್ತ. ಆತನ ಪಕ್ಕದಲ್ಲಿ ಒಂದು ಲಕ್ಷ ಕುದುರೆಯನ್ನು ಅರವತ್ತು ಸಾವಿರ ರಥವನ್ನು ಒಂದು ಲಕ್ಷ ಕಾಲಾಳನ್ನು ಕೂಡಿಕೊಂಡು ನಿಂತವರು ಸೋಮದತ್ತ ಬಾಹ್ಲಿಕರು. ಅವರ ಪಕ್ಕದಲ್ಲಿ ದೇವೇಂದ್ರನಿಗೆ ಶತ್ರುಗಳಾಗಿ ವಿಕ್ರಮಾರ್ಜುನನ ಕಯ್ಯಲ್ಲಿ ಸತ್ತ ನಿವಾತಕವಚ, ಕಾಳಕೇಯ, ಪೌಳೋಮ, ತಳತಾಳುಕರೆಂಬ ರಾಕ್ಷಸರು ಹಳೆಯ ಶತ್ರುತ್ವವನ್ನು ನೆನೆಸಿಕೊಂಡು ಈಗ ತ್ರಿಗರ್ತಾಶ, ಸುಶರ್ಮರೇ ಮೊದಲಾದವರಾಗಿಯೂ ಸಂಸಪ್ತಕರಾಗಿಯೂ ಹುಟ್ಟಿ ಬಂದಿರುವ ಮೂರುಕೋಟಿ ಅರವತ್ತು ಸಾವಿರ ರಾಕ್ಷಸಮುಖ್ಯರಾದ ನಾಯಕರು ಅರ್ಜುನನೊಡನೆ ಯುದ್ಧ ಮಾಡುವ ಕಾರ್ಯವನ್ನು ದುರ್ಯೋಧನನಲ್ಲಿ ಬೇಡಿ ಪಡೆದು ಹದಿನೆಂಟು ಕೋಟಿ ರಥದಿಂದ ಕೂಡಿ ಪ್ರತ್ಯೇಕವಾಗಿ ಸನ್ನದ್ಧರಾಗಿ ನಿಂತಿದ್ದಾರೆ. ಅಲ್ಲದೆ ಈ ಕಡೆ ಚತುರಂಗ ಸೇನಾಸಮುದ್ರದ ಮಧ್ಯದಲ್ಲಿ ಕಳಿಂಗ ಕೊಂಗ ವಂಗಾಶರು ಎಂಬತ್ತು ಸಾವಿರ ಆನೆಯ ಗುಂಪುಗಳನ್ನೂ ಮೂರುಲಕ್ಷ ರಥವನ್ನೂ ಅರವತ್ತು ಕೋಟಿ ಕಾಲಾಳು ಸೈನ್ಯವನ್ನೂ ಕೂಡಿ ನಿಂತಿದ್ದಾರೆ.

ಮದಾಂಧಗಂಧಸಿಂಧುರಂಗಳುಂ ಬೆರಸು ಪೊಯ್ವ ಪಂಚಮಹಾಶಬ್ದಂಗಳ್ ಕಾಳ ನೀಳ ಜಳಧರಂಗಳ್ ಮೊೞಗುವಂತೆ ಮೊೞಗೆ ಗಗನತಳಂ ತಳಿರ್ತಂತೆ ಪೊಳೆದು ಮಿಳಿರ್ವ ಪಾಳಿ ಮಹಾಧ್ವಜಂಗಳುಂ ಗಗನಸಿಂಧು ಫೇನ ಪಟಳ ಶಂಖ ಸಂಕಾಶ ಪಾಂಡು ಛತ್ರಚಾಮರಂಗಳುಂ ಪೆಱವುಂ ರಾಜಚಿಹ್ನಂಗಳುಮೆಸೆಯೆ-

ಚಂ|| ಕನಕ ಗಿರೀಂದ್ರ ರುಂದ್ರ ಶಿಖರಸ್ಥಿತ ಬಾಳದಿನೇಶಬಿಂಬಮಂ
ನೆನೆಯಿಸೆ ತನ್ನ ಪೊನ್ನ ರಥದೊಳ್ ನೆಲಸಿರ್ದು ವಿಳಾಸದಿಂದೆ ಭೀ|
ಮನ ಮೊನೆಯಂ ವನೀಪಕರನಾರಯಲಟ್ಟಿ ಯುಗಾಂತರ್ವಾ ಭೋಂ
ಕೆನೆ ತಳರ್ವಂದದಿಂ ತಳರಲಟ್ಟಿಪನಲ್ತೆ ಫಣೀಂದ್ರಕೇತನಂ|| ೫೮

ಕಂ|| ಸೆಕೋಲ್ ಸೆಕೋಲಿಂ ಪ
ತ್ತಱುಗಾವುದ ಬಲದ ಪವಣನನಿತಿನಿತೆಂದಾ|
ನಱಯೆಂ ದೇವಾಸುರರೊಳ
ಮಱಯೆಂ ಕಂಡಿನಿತು ಬಲಮನಾನವನಿಪತೀ|| ೫೯

ವ|| ಎಂದು ನಾಮುಂ ನಮ್ಮ ಬಲದ ನಾಯಕರನೆಡೆಯಱದೊಡ್ಡುವಮೆಂದು ದ್ರೋಣನ ಮೊನೆಗಱುವತ್ತು ಸಾಸಿರ ರಥಂಬೆರಸು ಧೃಷ್ಟದ್ಯುಮ್ನನುಮನಶ್ವತ್ಥಾಮನ ಮೊನೆಗೆ ನಾಲ್ವತ್ತು ಸಾಸಿರ ರಥಂ ಬೆರಸು ಶಿಖಂಡಿಯುಮಂ ಕೃತವರ್ಮನ ಮೊನೆಗೊಂದಕ್ಷೋಹಿಣೀ ಬಲಂ ಬೆರಸು ಸಾತ್ಯಕಿಯುಮಂ ದುರ್ಯೋಧನನ ಮೊನೆಗೊಂದು ಕೋಟಿ ರಥಮುಮೊಂದು ಲಕ್ಕ ಭದ್ರಹಸ್ತಿಯುಂ ಬೆರಸು ಭೀಮನುಮಂ ಬೃಹದಬಳನ ಮೊನೆಗೆ ಮೂವತ್ತು ಸಾಸಿರ ರಥಂಬೆರಸಭಿಮನ್ಯುವುಮಂ ದುಶ್ಶಾಸನನ ಮೊನೆಗೆ ನಾಲ್ವತ್ತು ಸಾಸಿರ ರಥಂಬೆರಸು ನಕುಲನುಮಂ ಶಕುನಿಯ ಮೊನೆಗೆ ನಾಲ್ವತ್ತು ಸಾಸಿರ ರಥಂಬೆರಸು ಸಹದೇವನುಮಂ ಕೃಪನ ಮೊನೆಗೊಂದಕ್ಷೋಹಿಣೀ ಬಲಂಬೆರಸು ಕೇಕಯರುಮಂ ಸಿಂಧುರಾಜನ ಮೊನೆಗೊಂದಕ್ಷೋಹಿಣೀ ಬರಂಬೆರಸು ದ್ರುಪದನುಮಂ ಭಗದತ್ತನ ಮೊನೆಗೊಂದಕ್ಷೋಹಿಣೀ ಬಲಂಬೆರಸು ವಿರಾಟನುಮಂ ಜಟಾಸುರ ಬಕಾಸುರರ ಮಕ್ಕಳಳಂಭೂಷ ಹಳಾಯುಧ ಮುಸಳಾಯುಧ ಕಾಳ ನೀಳ ನಕ್ತಂಚರರ ಮೊನೆಗೊಂದಕ್ಷೋಹಿಣೀ ಬಲಂಬೆರಸು ಘಟೋತ್ಕಚನುಮಂ ವಿಂದನ ಮೊನೆಗೆ ಪದಿನೆಂಟು ಸಾಸಿರ ರಥಮುಮೊಂದುಲಕ್ಕ ಮದದಾನೆಯುಂ

ಅಲ್ಲದೆ ಕ್ಷೇಮಧೂರ್ತಿಯೂ ಭೀಮನ ಕಯ್ಯಲ್ಲಿ ಸತ್ತ ಬಕಾಸುರ ಜಟಾಸುರರ ಮಕ್ಕಳಾದ ಅಳಂಭೂಷ, ಹಲಾಯುಧ, ಮುಸಲಾಯುಧ, ಕಾಳನೀಳರೇ ಮೊದಲಾದವರೂ ಕ್ರೂರರಾಕ್ಷಸಸೈನ್ಯದೊಡನೆ ಸುತ್ತಲೂ ವ್ಯಾಪಿಸಿ ಬಳಸಿ ನಿಂತಿದ್ದಾರೆ. ದುಶ್ಶಾಸನನೇ ಮೊದಲಾದ ನೂರು ಜನ ಮಕ್ಕಳೂ ಅರವತ್ತು ಸಾವಿರ ರಥದಿಂದಲೂ ಹದಿನೆಂಟು ಸಾವಿರ ಮದದಿಂದ ಕುರುಡಾದ ಶ್ರೇಷ್ಠವಾದ ಆನೆಗಳಿಂದಲೂ ಕೂಡಿ ಪಂಚಮಹಾಶಬ್ದಗಳು ಪ್ರಳಯಕಾಲದ ಕರಿಯ ಮೋಡಗಳು ಮೊಳಗುವ ಹಾಗೆ ಮೊಳಗುತ್ತಿರಲು ಆಕಾಶ ಪ್ರದೇಶವೇ ಚಿಗುರಿದ ಹಾಗೆ ಹೊಳೆದು ಚಲಿಸುತ್ತಿರುವ ಧ್ವಜ ಮಹಾಧ್ವಜಗಳೂ ದೇವಗಂಗಾನದಿಯ ನೊರೆ ಮತ್ತು ಶಂಖಗಳಿಗೆ ಸಮಾನವಾದ ಬಿಳಿಯ ಬಣ್ಣದಿಂದ ಕೂಡಿದ ಛತ್ರಚಾಮರಗಳೂ ಇನ್ನೂ ಇತರ ರಾಜ್ಯಚಿಹ್ನೆಗಳೂ ಪ್ರಕಾಶಿಸುತ್ತಿರಲು- ೫೮. ಮೇರುಪರ್ವತದ ವಿಶಾಲವಾದ ಶಿಖರದ ಮೇಲಿರುವ ಬಾಲಸೂರ್ಯನ ಬಿಂಬವನ್ನು ಜ್ಞಾಪಕಕ್ಕೆ ತರುತ್ತ ತನ್ನ ಸುವರ್ಣರಥದಲ್ಲಿದ್ದುಕೊಂಡು ವೈಭವದಿಂದ ಭೀಮನ ಯುದ್ಧರೀತಿಯನ್ನು ವಿಚಾರಮಾಡಿ ಬರಲು ಗೂಢಚಾರರನ್ನು ಕಳುಹಿಸಿ, ಪ್ರಳಯಕಾಲದ ಸಮುದ್ರವು ಇದ್ದಕ್ಕಿದ್ದ ಹಾಗೆ ಚಲಿಸುವಂತೆ ಚಲಿಸಲು ದುರ್ಯೋಧನನು (ಸಂದೇಶವನ್ನು) ಕಳುಹಿಸಿದನು. ೫೯. ಒಂದು ಪಕ್ಕದ ಅಂಚಿನಿಂದ ಇನ್ನೊಂದು ಪಕ್ಕದ ಅಂಚಿನವರೆಗಿರುವ ಹತ್ತಾರು ಗಾವುದ ವಿಸ್ತಾರವಾದ ಪ್ರದೇಶದಲ್ಲಿರುವ ಸೈನ್ಯದ ಪ್ರಮಾಣವನ್ನು ಅಷ್ಟಿಷ್ಟೆಂದು ನಾನು ಹೇಳಲಾರೆ, ರಾಜನೇ ದೇವಾಸುರರ ಯುದ್ಧದಲ್ಲಿಯೂ ಇಷ್ಟು ಸೈನ್ಯವನ್ನು ನಾನು ಕಂಡಿರಲಿಲ್ಲ. ವ|| ಎಂದು ನಾವೂ ನಮ್ಮ ಸೈನ್ಯದ ನಾಯಕರನ್ನು ವಿಚಾರಮಾಡಿ ಒಡ್ಡೋಣ ಎಂದನು. ದ್ರೋಣನ ಸೈನ್ಯಕ್ಕೆ ಪ್ರತಿಯಾಗಿ ಅರವತ್ತು ಸಾವಿರ ರಥದೊಡನೆ ಕೂಡಿದ ಧೃಷ್ಟದ್ಯುಮ್ನನನ್ನು ಗೊತ್ತುಮಾಡಿದನು. ಅಶ್ವತ್ಥಾಮನ ಸೈನ್ಯಕ್ಕೆ ನಲವತ್ತು ಸಾವಿರ ತೇರಿನಿಂದ ಕೂಡಿದ ಶಿಖಂಡಿಯನ್ನು ನೇಮಿಸಿದನು. ಕೃತವರ್ಮನ ಕಾಳಗಕ್ಕೆ ಒಂದಕ್ಷೋಹಿಣೀ ಸೈನ್ಯದಿಂದ ಕೂಡಿದ ಸಾತ್ಯಕಿಯನ್ನು ನಿಯಮಿಸಿದನು. ದುರ್ಯೋಧನನೊಡನೆ ಯುದ್ಧ ಮಾಡುವುದಕ್ಕೆ ಒಂದು ಕೋಟಿ ರಥವನ್ನೂ ಒಂದುಲಕ್ಷ ಉತ್ತಮಜಾತಿಯ ಆನೆಗಳನ್ನೂ ಒಳಗೊಂಡ ಭೀಮನನ್ನು ಸಿದ್ಧಪಡಿಸಿದನು. ಬೃಹದ್ಬಳನನ್ನು ಎದುರಿಸುವುದಕ್ಕೆ ಮೂವತ್ತು ಸಾವಿರ ರಥದಿಂದ ಕೂಡಿದ ಅಭಿಮನ್ಯವೂ ದುಶ್ಶಾಸನನ ಕಾಳಗಕ್ಕೆ ನಲವತ್ತು ಸಾವಿರ ರಥದಿಂದ ಕೂಡಿದ ನಕುಲನೂ ಕೃಪನೊಡನೆ ಯುದ್ಧ ಮಾಡುವುದಕ್ಕೆ ಒಂದಕ್ಷೋಹಿಣೀ ಬಲದಿಂದ ಕೂಡಿದ ಕೇಕಯರೂ ಸೈಂಧವನ ಯುದ್ಧಕ್ಕೆ ಒಂದಕ್ಷೋಹಿಣೀ ಬಲದಿಂದ ಕೂಡಿದ ದ್ರುಪದನೂ ಸಿದ್ಧರಾದರು. ಭಗದತ್ತನ ಸೈನ್ಯಕ್ಕೆ ಒಂದಕ್ಷೋಹಿಣೀ ಬಲದೊಡನೆ ವಿರಾಟನೂ ಬಕಾಸುರನ ಮಕ್ಕಳಾದ ಅಳಂಬೂಷ ಹಳಾಯುಧ ಮುಸಳಾಯುಧ ಕಾಳನೀಳರಾಕ್ಷಸರ ಮೊನೆಗೆ ಒಂದಕ್ಷೋಹಿಣೀ ಬಲದಿಂದ ಕೂಡಿದ ಘಟೋತ್ಕಚನೂ ನೇಮಕರಾದರು.

ಬೆರಸು ಕೊಂತಿಯ ಮಾವನಪ್ಪ ಕೊಂತಿಭೋಜನುಮಂ ವಿಂದಾನುವಿಂದರ ಮೊನೆಗಱುವತ್ತು ಸಾಸಿರ ರಥಂಬೆರಸು ನಾಗಕುಮಾರನನಂತ ಬಲಸಮನ್ವಿತನಿಳಾವಂತನುಮಂ ಭೂರಿಶ್ರವನ ಮೊನೆಗೆ ನಾಲ್ವತ್ತು ಸಾಸಿರ ರಥಮುಂ ನಾಲ್ವತ್ತು ಸಾಸಿರ ಮದಹಸ್ತಿಗಳುಂ ಬೆರಸು ಮದಗಜಾರೂಢನುತ್ತರನುಮಂ ಸುಯೋಧನನ ಮಕ್ಕಳ್ ಲಕ್ಕಣಂ ಮೊದಲಾಗೆ ನೂರ್ವರ ಮೊನೆಗಱವತ್ತು ಸಾಸಿರ ರಥಂಬೆರಸು ಸುತ ಸೋಮಕ ಪ್ರಮುಖರಪ್ಪ ಪಂಚಪಾಂಡವರುಮಂ ಪೇೞ್ದು ಕಾಂಭೋಜ ಸುದಕ್ಷಿಣ ದಂಡಧಾರರೆಂಬ ಮೂವರಕ್ಷೋಹಿಣೀಪತಿಗಳ ಮೊನೆಗೆ ಮೂಱುಕೋಟಿ ರಥಂಬೆರಸು ಪಾಂಡ್ಯ ಶ್ರೀಜಯ ಸೋಮಕರಂ ಪೇೞ್ದು ವೀರ ಪುಷ್ಕರ ಪಾರಿಯಾತ್ರ ಬರ್ಬರ ಶಬರ ನೇಪಾಳ ಮಹೀಪಾಳರ ಮೊನೆಗೆರಡು ಕೋಟಿ ರಥಂಬೆರಸು ಹೈಹಯರಂ ಪೇೞ್ದು ನೀಳನನಱುವತ್ತು ಸಾಸಿರ ಭದ್ರಹಸ್ತಿವೆರಸು ತನ್ನ ಚಕ್ರರಕ್ಷೆಗೆ ಪೇೞ್ದು ಸಂಸಪ್ತಕರ ಪದಿನೆಂಟು ಕೋಟಿ ರಥಕ್ಕರಿಕೇಸರಿಯ ರಥಮನೊಂದನೆ ಪೇೞ್ದು ಯುಷ್ಠಿರಂ ಶಲ್ಯನ ಮೊನೆಗೆ ನೆದು ನಿಂದು ಕೆಯ್ವೀಸುವಾ ಪ್ರಸ್ತಾವದೊಳ್ ‘ಶೂರಂ ಭೇದೇನ ಯೋಜಯೇತ್’ ಎಂಬ ನಯಮಂ ಕೆಯ್ಕೊಂಡು ವಿನಯಮನೆ ಮುಂದಿಟ್ಟು-

ಕಂ|| ಬಳಮೆರಡುಂ ತನ್ನನೆ ಮಿಳ
ಮಿಳ ನೋಡೆ ನರೇಂದ್ರನೊಂದೇ ರಥದಿಂದಸುಹೃ|
ದ್ಬಳಮನಿರದೆಯ್ದಿ ಭೀಷ್ಮರ
ಚಳಣಯುಗಕ್ಕೆಱಗೆ ನಿನಗೆ ಜಯಮಕ್ಕೆಂದಂ|| ೬೦

ವ|| ಎಂದು ಭೀಷ್ಮರ್ ತಮ್ಮ ಮೊಮ್ಮನ ವಿನಯಕ್ಕೆ ಮೆಚ್ಚಿ ಪರಸೆ ಪರಕೆಯಂ ಕೆಯ್ಕೊಂಡು-

ಕಂ|| ಗುರು ಕೃಪ ಗುರುಸುತ ಶಲ್ಯರ
ಚರಣಂಗಳ್ಗೆಱಗಿ ಪೋಗಿ ಪೊಡೆವಡುವುದುಮಾ|
ದರದಿಂದಂ ನಲ್ಮೆಯೊಳಂ
ಪರಸಿ ಮನಗೊಂಡು ನುಡಿದರವರಾ ನೃಪನಂ|| ೬೧

ನಿನ್ನ ಬರವಿಂದವೆಮ್ಮ ಮ
ನನ್ನಿನಗೆಱಗಿದುದು ಜಯಮುಮೆಮ್ಮೀ ದೆಸೆಯಿಂ|
ದನ್ನಿನಗೆ ಸಾರ್ಗೆ ಪೋಗೆನೆ
ಮನ್ನಿಸಿ ಗುರುಜನಮನಾಗಳಂತಕನತನಯಂ|| ೬೨

ವಿಂದನೊಡನೆ ಯುದ್ಧಮಾಡುವುದಕ್ಕೆ ಹದಿನೆಂಟು ಸಾವಿರ ರಥವೂ ಒಂದು ಲಕ್ಷ ಮದ್ದಾನೆಗಳೂ ಕೂಡಿದ ಕುಂತಿಯ ಮಾವನಾದ ಕುಂತಿಭೋಜನು ಸಿದ್ಧನಾದನು. ವಿಂದಾನುವಿಂದರ ಸೈನ್ಯಕ್ಕೆ ಅರವತ್ತು ಸಾವಿರರಥದೊಡಗೂಡಿ ನಾಗಕುಮಾರನನ್ನೂ ಅನಂತಬಲದಿಂದ ಕೂಡಿದ ಇಳಾವಂತನನ್ನೂ ಭೂರಿಶ್ರವನೊಡನೆ ಯುದ್ಧ ಮಾಡುವುದಕ್ಕೆ ನಲವತ್ತು ಸಾವಿರ ತೇರುಗಳನ್ನೂ ನಲವತ್ತು ಸಾವಿರ ಮದ್ದಾನೆಗಳನ್ನೂ ಕೂಡಿ ಮದ್ದಾನೆಯನ್ನೇರಿದ್ದ ಉತ್ತರನನ್ನೂ ಏರ್ಪಡಿಸಿದನು. ದುರ್ಯೋಧನನ ಮಕ್ಕಳಾದ ಲಕ್ಷಣನೇ ಮೊದಲಾದ ನೂರು ಜನಗಳ ಯುದ್ಧಕ್ಕೆ ಅರವತ್ತು ಸಾವಿರ ತೇರಿನೊಡನೆ ಕೂಡಿದ ಸುತ ಸೋಮಕರೇ ಮುಖ್ಯರಾದ ಪಂಚಪಾಂಡವರನ್ನು ನೇಮಿಸಿದನು. ಕಾಂಭೋಜ ಸುದಕ್ಷಿಣ ದಂಡಧಾರರೆಂಬ ಮೂರುಮಂದಿ ಅಕ್ಷೋಹಿಣೀಪತಿಗಳ ಯುದ್ಧಕ್ಕೆ ಮೂರುಕೋಟಿ ರಥಗಳಿಂದ ಕೂಡಿದ ಪಾಂಡ್ಯ ಶ್ರೀಜಯ ಸೋಮಕರನ್ನೂ ಗೊತ್ತುಮಾಡಿದನು. ವೀರರಾದ ಪುಷ್ಕರ ಪಾರಿಯಾತ್ರ ಬರ್ಬರ ಶಬರ ನೇಪಾಳ ರಾಜರುಗಳ ಬಲಕ್ಕೆ ಎರಡುಕೋಟಿ ರಥಗಳಿಂದ ಕೂಡಿದ ಹೈಹಯರನ್ನು ನಿಯಮಿಸಿದನು. ಅರವತ್ತು ಸಾವಿರ ಭದ್ರಗಜಗಳೊಡನೆ ನೀಲನನ್ನು ತನ್ನ ಸೇನಾರಕ್ಷಣೆಗೆ ಇರಹೇಳಿದನು. ಸಂಸಪ್ತಕರ ಹದಿನೆಂಟುಕೋಟಿ ರಥಕ್ಕೆ ಅರಿಕೇಸರಿಯ (ಅರ್ಜುನ) ರಥವೊಂದನ್ನೇ ಸಿದ್ಧಪಡಿಸಿದನು. ಧರ್ಮರಾಯನು ತಾನೇ ಶಲ್ಯನ ಇದಿರಾಗಿ ನಿಂತನು. ‘ಶೂರನನ್ನು ಭೇದೋಪಾಯದಿಂದಲೇ ಗೆಲ್ಲಬೇಕು’ ಎಂಬ ನೀತಿಯನ್ನು ಅಂಗೀಕರಿಸಿ ವಿನಯವನ್ನೇ ಮುಂದು ಮಾಡಿಕೊಂಡು ೬೦. ಎರಡು ಬಲವೂ ತನ್ನನ್ನೇ ಮಿಟಮಿಟನೆ ನೋಡುತ್ತಿರಲು ಧರ್ಮರಾಯನು ಸಾವಕಾಶಮಾಡದೆ ಒಂದೇ (ಏಕಾಕಿಯಾಗಿ) ತೇರಿನಿಂದ ಶತ್ರುಸೈನ್ಯವನ್ನು ಸೇರಿ ಭೀಷ್ಮರ ಎರಡು ಕಾಲುಗಳಿಗೂ ನಮಸ್ಕಾರ ಮಾಡಿದನು. ಅವರು ನಿನಗೆ ಜಯವಾಗಲಿ ಎಂದು ಆಶೀರ್ವದಿಸಿದರು. ವ|| ಆ ಹರಕೆಯನ್ನು ಸ್ವೀಕರಿಸಿದನು. ೬೧. ದ್ರೋಣ ಕೃಪ ಅಶ್ವತ್ಥಾಮ ಶಲ್ಯರ ಪಾದಗಳಿಗೂ ಹಾಗೆಯೇ ಹೋಗಿ ನಮಸ್ಕಾರಮಾಡಿದನು. ಅವರೂ ಆದರದಿಂದಲೂ ಸದ್ಭಾವದಿಂದಲೂ ಹರಸಿ ತೃಪ್ತರಾಗಿ ರಾಜನನ್ನು ಕುರಿತು ಹೇಳಿದರು. ೬೨. ನಿನ್ನ ಬರುವಿಕೆಯಿಂದ ನಮ್ಮ ಮನಸ್ಸು ನಿನ್ನ ಕಡೆಗೆ ಓಸರಿಸಿತು. ಹಾಗೆಯೇ ನಮ್ಮ ಕಡೆಯಿಂದ ನಿನಗೂ ಜಯವು ಉಂಟಾಗುತ್ತದೆ

ವ|| ಮಗುೞ್ದು ತನ್ನೊಡ್ಡಣಕ್ಕೆ ಬರುತ್ತುಂ ದುರ್ಯೋಧನನ ತಮ್ಮನಪ್ಪ ಯುಯುತ್ಸುವಂ ಕಂಡು-

ಚಂ|| ಪವನಜನಿಂದೆ ಕೌರವಕುಲಂ ಪಡಲಿಟ್ಟವೊಲಕ್ಕುಮಾದೊಡಿ
ನ್ನವರವರಾರುವಿಲ್ಲಣಮೆ ಸಂತತಿ ಕೆಟ್ಟಪುದಿಲ್ಲಿ ಕಾವೆನೀ|
ಬವರದೊಳೀಗಳಾನಿವನನೆಂದು ನೃಪಂ ದಯೆಯಿಂದಮಾ ಯುಯು
ತ್ಸುವನೊಡಗೊಂಡು ಬಂದನೆನಿತಾದೊಡಮೇಂ ಪ್ರಭು ಪೊಲ್ಲಕೆಯ್ಗುಮೇ|| ೬೩

ವ|| ಅಂತಾ ಯುಯುತ್ಸುವನೊಡಗೊಂಡು ಬಂದು ಧರ್ಮಪುತ್ರನುತ್ಸಾಹದೊಳಿರ್ಪ ಪದದೊಳ್ ವಿಕ್ರಮಾರ್ಜುನನ ಮನದೊಳಾದ ವ್ಯಾಮೋಹಮಂ ಕಳೆಯಲೆಂದು ಮುಕುಂದಂ ದಿವ್ಯಸ್ವರೂಪಮಂ ತೋಱ-

ಚಂ|| ಅದಿರದಿದಿರ್ಚಿ ತಳ್ತಿಱಯಲೀ ಮಲೆದೊಡ್ಡಿದ ಚಾತುರಂಗಮೆಂ
ಬುದು ನಿನಗೊಡ್ಡಿ ನಿಂದುದಿದನೋವದೆ ಕೊಲ್ವಡೆ ನೀನುಮೆನ್ನ ಕ|
ಜ್ಜದೊಳೆಸಗೆಂದು ಸೈತಜಿತನಾದಿಯ ವೇದರಹಸ್ಯದೊಳ್ ನಿರಂ
ತದ ಪರಿಚರ್ಯೆಯಿಂ ನೆಯೆ ಯೋಜಿಸಿದಂ ಕದನತ್ರಿಣೇತ್ರನಂ|| ೬೪

ವ|| ಆಗಳ್ ಪರಸೈನ್ಯಭೈರವಂ ಪುರಾಣಪುರುಷನಪ್ಪ ಪುರುಷೋತ್ತಮಂಗೆಱಗಿ ಪೊಡಮಟ್ಟು ರಿಪುಪಕ್ಷಕ್ಷಯಕರಮಪ್ಪ ವಿಶ್ವಕರ್ಮ ನಿರ್ಮಿತಮಾದ ತನ್ನ ದಿವ್ಯರಥಮಂ ಮನೋರಥಂ ಬೆರಸು ರಥಾಂಗಧರನಂ ಮುನ್ನಮೇಱಲ್ವೇೞ್ದು ಮೂಱು ಸೂೞು ಬಲವಂದು ಪೊಡಮಟ್ಟು ಬೞಯಂ ತಾನೇಱ ವಜ್ರಕವಚಮಂ ತೊಟ್ಟು ತವದೊಣೆಗಳನೆರಡುಂ ದೆಸೆಯೊಳಂ ಬಿಗಿದು ದ್ರೋಣಾಚಾರ್ಯಂಗೆ ಮನದೊಳ್ ನಮಸ್ಕಾರಂಗೆಯ್ದು ದ್ರೋಣಂ ಬಾೞ್ಗೆಂದು ಮಹಾಪ್ರಚಂಡ ಗಾಂಡೀವಮಂ ಕೊಂಡೇಱಸಿ ನೀವಿ ಜೇವೊಡೆದು ದೇವದತ್ತ ಶಂಖಮಂ ಪೂರಿಸಿ ಸಂಸಪ್ತಕರೊಡ್ಡಣದತ್ತ ರಥಾಂಗಧರನಂ ರಥಮಂ ಚೋದಿಸಲ್ವೇೞುಗಳ್-

ಮ||ಸ್ರ|| ಕುಳಶೈಳೇಂದ್ರಂಗಳಂಭೋನಿಗಳಖಿಳ ದಿಗ್ದಂತಿಗಳ್ ವಿಶ್ವಧಾತ್ರೀ
ವಳಯಂ ಪಾತಾಳಮೂಲಂ ಸಕಲ ಭುವನಮೊಂದೊಂದಳ್ ಕೇಣಿಗೊಂಡು|
ಚ್ಚಳಿಸಲ್ ಸೂಸಲ್ ಪಳಂಚಲ್ ಸಿಡಿದೊಡೆದಳಱಲ್ ಪಾಱ ಜೀೞಲಂದು
ಮ್ಮಳಿಸುತ್ತತ್ತಿರ್ದರಾವಂ ಹರಿಗನೊಳಿದಿರಂ ಮೀಱ ಮಾಱುಂಪ ಗಂಡಂ|| ೬೫

ವ|| ಎಂಬನ್ನೆಗಂ ಪ್ರಳಯಕಾಲ ಜಾತೋತ್ಪಾತ ವಾತ ನಿರ್ಘಾತದಿಂದಮಳ್ಳಾಡಿ ತಳ್ಳಂಕಂಗುಟ್ಟುವ ಜಳನಿಗಳಂತೆ ಮೇರೆದಪ್ಪಲ್ ಬಗೆವುಭಯಸೈನ್ಯಂಗಳಂ ಕಂಡತ್ತ ರಾಜರಾಜನು ಮಿತ್ತ ಧರ್ಮರಾಜನುಮೊಡನೊಡನೆ ಕೆಯ್ವೀಸಿದಾಗಳ್-

ಹೋಗು ಎಂದರು. ಧರ್ಮರಾಜನು ತಮ್ಮ ಹಿರಿಯರನ್ನು ಗೌರವಿಸಿ ವ|| ತನ್ನ ಸೈನ್ಯಕ್ಕೆ ಹಿಂತಿರುಗಿ ಬರುತ್ತ ದಾರಿಯಲ್ಲಿ ದುರ್ಯೋಧನನ ತಮ್ಮನಾದ ಯುಯುತ್ಸುವನ್ನು ಕಂಡನು. ೬೩. ಹೇಗೂ ಭೀಮನಿಂದ ಕೌರವಕುಲವು ನಾಶವಾದಂತಾಗುತ್ತದೆ. ಅವರ ಕಡೆಯವರಾರೂ ಇಲ್ಲದಂತಾಗುತ್ತದೆ. ಸಂತತಿಯು ಸಂಪೂರ್ಣವಾಗಿ ನಾಶವಾಗುತ್ತದೆ. ಈ ಯುದ್ಧದಲ್ಲಿ ಇವನನ್ನಾದರೂ ರಕ್ಷಿಸುತ್ತೇನೆ ಎಂದು ರಾಜನು ದಯೆಯಿಂದ ಆ ಯುಯುತ್ಸುವನ್ನು ಒಡಗೊಂಡು ಬಂದನು. ಪ್ರಭುವಾದವನು ಕೆಟ್ಟದ್ದನ್ನು ಮಾಡುತ್ತಾನೆಯೇ? ವ|| ಯುಯುತ್ಸುವನ್ನು ಒಡಗೊಂಡು ಬಂದು ಧರ್ಮರಾಜನು ಉತ್ಸಾಹದಿಂದಿರುವ ಸಮಯದಲ್ಲಿ ವಿಕ್ರಮಾರ್ಜುನನ ಮನಸ್ಸಿನಲ್ಲುಂಟಾದ ವ್ಯಾಮೋಹವನ್ನು ಕಳೆಯುವುದಕ್ಕಾಗಿ ಕೃಷ್ಣನು ವಿಶ್ವರೂಪವನ್ನು ತೋರಿದನು. ೬೪. “ಹೆದರದೆ ಎದುರಿಸಿ ಪ್ರತಿಭಟಿಸಿ ಯುದ್ಧಮಾಡಲು ಮಲೆತು ಚಾಚಿದ ಈ ಚತುರಂಗ ಸೈನ್ಯವು ನಿನಗೆ ಪ್ರತಿಭಟಿಸಿ ನಿಂತಿದೆ. ಇದನ್ನು ಕೊಲ್ಲಬೇಕಾದರೆ ನೀನು ನಾನು ಹೇಳಿದ ರೀತಿಯಲ್ಲಿ ಕೆಲಸ ಮಾಡು” ಎಂದು ಶ್ರೀಕೃಷ್ಣನು ನೇರವಾಗಿ ಆದಿಕಾಲದಿಂದ ಬಂದ ವೇದ ರಹಸ್ಯವನ್ನು ಮನದಟ್ಟಾಗುವಂತೆ ಉಪದೇಶಿಸಿ ಅರ್ಜುನನನ್ನು ಯುದ್ಧಕಾರ್ಯದಲ್ಲಿ ನಿಯೋಜಿಸಿದನು. ವ|| ಆಗ ಅರ್ಜುನನು ಪುರಾಣಪುರುಷನಾದ ಶ್ರೀಕೃಷ್ಣನಿಗೆ ನಮಸ್ಕಾರಮಾಡಿ ಶತ್ರುಪಕ್ಷವನ್ನು ನಾಶಮಾಡುವ ಶಕ್ತಿಯನ್ನುಳ್ಳವಿಶ್ವಕರ್ಮನಿಂದ ನಿರ್ಮಿತವಾದ ತನ್ನ ದಿವ್ಯರಥವನ್ನು ಶ್ರೀಕೃಷ್ಣನನ್ನು ಮೊದಲು ಹತ್ತಲುಹೇಳಿ ಅದನ್ನು ಮೂರುಸಲ ಪ್ರದಕ್ಷಿಣೆ ಮಾಡಿ ನಮಸ್ಕರಿಸಿದ ಬಳಿಕ ತಾನೂ ಹತ್ತಿದನು. ವಜ್ರಕವಚವನ್ನು ಧರಿಸಿದನು. ಅಕ್ಷಯತೂಣೀರ (ಬತ್ತಳಿಕೆ)ಗಳನ್ನು ಎರಡು ಕಡೆಯಲ್ಲಿಯೂ ಬಿಗಿದುಕೊಂಡನು. ದ್ರೋಣಾಚಾರ್ಯರಿಗೆ ಮನಸ್ಸಿನಲ್ಲಿಯೇ ನಮಸ್ಕರಿಸಿ ‘ದ್ರೋಣಾಚಾರ್ಯರು ಬಾಳಲಿ’ ಎಂದು ಪ್ರಾರ್ಥಿಸಿದನು. ಮಹಾಪ್ರಚಂಡವಾದ ತನ್ನ ಗಾಂಡೀವವೆಂಬ ಬಿಲ್ಲಿಗೆ ಹೆದೆಯನ್ನೇರಿಸಿ ನೀವಿ ಟಂಕಾರಮಾಡಿದನು. ದೇವದತ್ತ ಶಂಖವನ್ನು ಊದಿ ಸಂಸಪ್ತಕರ ಸೈನ್ಯದ ಕಡೆಗೆ ತೇರನ್ನು ನಡೆಸುವಂತೆ ಕೃಷ್ಣನಿಗೆ ಹೇಳಿದನು. ೬೫. ಕುಲಪರ್ವತಗಳೂ, ಸಮುದ್ರಗಳೂ, ದಿಗ್ಗಜಗಳೂ, ಸಮಗ್ರಭೂಮಂಡಲವೂ ಪಾತಾಳಲೋಕದ ತಳಭಾಗವೂ ಸಮಸ್ತಲೋಕಗಳೂ ಒಂದೊಂದೂ ಸಾಲಾಗಿ ಮೇಲಕ್ಕೆ ಚಿಮ್ಮಿ, ಚೆಲ್ಲಾಡಿ, ತಾಗಿ, ಸಿಡಿಲೊಡೆದು, ನಡುಗಿ, ಹಾರಿ, ಜೀರೆಂದು ಶಬ್ದಮಾಡಿ ವ್ಯಾಕುಲಪಟ್ಟವು. ಅರ್ಜುನನಿಗೆ ಇದಿರಾಗಿ ಪ್ರತಿಭಟಿಸುವ ಶೂರನು ಯಾವನಿದ್ದಾನೆ? ವ|| ಎನ್ನುವಷ್ಟರಲ್ಲಿ ಪ್ರಳಯಕಾಲದಲ್ಲಿ ಹುಟ್ಟಿ ಮೇಲಕ್ಕೆ ನೆಗೆದ

ಕಂ|| ಪೂರ್ವಾಪರ ಜಳನಿಗಳ
ಗುರ್ವಿಸುವಿನಮೊಂದನೊಂದು ತಾಗುವವೊಲಗು|
ರ್ವುರ್ವಿರೆ ಪರ್ವಿ ಚತುರ್ವಲ
ಮೇರ್ವೆಸದಿಂದಂದು ಬಂದು ತಾಗಿತ್ತಾಗಳ್|| ೬೬

ಘಟೆಯ ದೞದುಲಿವು ಲಯ ಘನ
ಘಟೆಗಳ ಮೊೞಗೆನಿಸೆ ಪೊಟ್ಟಗೊಡೆದತ್ತು ರಟ|
ತ್ಪಟು ಪಟಹ ಶಂಖ ಭೇರಿಯ
ಚಟುವಳಿತದಿಂದಟಳಪಟಳಮಂಬರಪಟಳಂ|| ೬೭

ಕರಿ ತುರಗ ರಥ ಪದಾತಿಯ
ಚರಣಾಸಂಘಾತ ಜಾತ ರಜಮಾಜಸ್ರಂ|
ನೆರೆದಂಬರಕೊಗೆಯಲ್ ಬಳ
ಭರದಿಂ ಧರೆಯೆೞ್ದು ಪಾಱುವಂತಾಯ್ತಾಗಳ್|| ೬೮

ಸಮರ ರಸಪ್ರಿಯರೊಳ್ ಸ
ತ್ತ್ವಮುಮಿಳೆಯೊಳ್ ರಜಮುಮೊದವೆ ರಣಗೞ್ತಲೆಯೊಳ್|
ತಮಮುಂ ಮಿಗೆ ಸತ್ತ್ವ ರಜ
ಸ್ತಮಂಗಳುಂ ಕಾಣಲಾದುವೆರಡುಂ ಪಡೆಯೊಳ್|| ೬೯

ಪಡೆಯ ಪೊಗಗಿದು ಶೇಷಂ
ಪೆಡೆಗಳನುಡುಗುವುದುಮೆಳೆ ಬೊದಿಲ್ಲೆನೆ ಬಿೞ್ದ|
ತ್ತಡಿಗಿಡೆ ಕೂರ್ಮನ ಬೆನ್ನಂ
ದೊಡೆದು ಸಿಡಿಲ್ದೊಡನೆ ನುಚ್ಚುನೂಱಪ್ಪಿನೆಗಂ|| ೭೦

ವ|| ಅಂತು ನೆಲನುಮಾಕಾಶಮೊಂದೊಂದಳ್ ತಾಗಿದ ಬೇಗದೊಳಂಬರಂ ಬರಂ ನೆಗೆದ ಧೂಳಿಯೊಳ್ ದೆಸೆಯಱಯದೆಯುಂ ತಮ್ಮ ಬಲಮಂ ಮಾರ್ವಲಮನಱಯದೆಯುಂ ಚಾತುರ್ವಲಂಗಳ್ ಮೊದಲ ಸಮಕಟ್ಟುಗೆಟ್ಟು ತಡವರಿಸಿ ತಟ್ಟುಪೊಟ್ಟೆಂದಚ್ಚುಮಿಟ್ಟು ಮಿದು ತಱದು ಘಟ್ಟಿಸೆಯುಮಾಂಕೆಗೊಂಡು ಕಿಱದುಪೊೞ್ತು ಕಾದೆ ಕಾದೆ ಸುರಿವ ಬಿಸುನೆತ್ತರ ಸರಿಯೊಳಮಂಬಿನ ಸರಿಯೊಳಮಂಬಿರಿವಿಟ್ಟು ಪಾಯ್ವ ಮದಗಜಂಗಳ ಮದಜಲದೊಳಂ ಬಲದ ಕಳಕಳಕ್ಕೆ ಮಸಗಿ ದೆಸೆಯಱಯದೆಯುಂ ಪಱಯೆ ಘಟ್ಟಿಸಿದ ಕೀಳ ಘಟ್ಟಣೆಯೊಳ್

ಗಾಳಿಯ ಹೊಡೆತದಿಂದ ಅಲುಗಿ ಕ್ಷೋಭೆಗೊಂಡ ಸಮುದ್ರದಂತೆ ಎಲ್ಲೆಯನ್ನು ಮೀರಲು ಯೋಚಿಸುತ್ತಿರುವ ಎರಡು ಕಡೆಯ ಸೈನ್ಯಗಳನ್ನೂ ಕಂಡು ಈ ಕಡೆ ಚಕ್ರವರ್ತಿಯಾದ ದುರ್ಯೋಧನನೂ ಆ ಕಡೆ ಧರ್ಮರಾಜನೂ ಯುದ್ಧ ಸೂಚಕವಾಗಿ ಕೈಬೀಸಿದರು. ೬೬. ಪೂರ್ವ ಪಶ್ಚಿಮ ಸಮುದ್ರಗಳು ಭಯವನ್ನುಂಟುಮಾಡುತ್ತ ಒಂದನ್ನೊಂದು ತಗಲುವ ಹಾಗೆ ಭಯಂಕರವಾದ ಚತುರಂಗಸೇನೆಗಳು ಉತ್ಸಾಹದಿಂದಲೂ ಯುದ್ಧೋದ್ಯೋಗದಿಂದಲೂ ಬಂದು ಸಂಘಟಿಸಿದುವು. ೬೭. ಆನೆಯ ಸೈನ್ಯದ ಘೀಂಕಾರ ಶಬ್ದವು ಪ್ರಳಯಕಾಲದ ಮೋಡಗಳ ಸಮೂಹದ ಗುಡುಗೆನ್ನಿಸಿತು. ಉಗ್ರವಾಗಿ ಶಬ್ದಮಾಡುತ್ತಿರುವ ದಮಟೆ, ಶಂಖ, ನಗಾರಿಯ ಧ್ವನಿಯಿಂದ ಅತಲವೆಂಬ ಪಾತಾಳ ಲೋಕದ ಮಾಳಿಗೆಯೂ ಆಕಾಶದ ಮೇಲ್ಚಾವಣಿಯೂ ಏಕಕಾಲದಲ್ಲಿ ಒಡೆದು ಹೋದುವು. ೬೮. ಆನೆ ಕುದುರೆ ತೇರು ಕಾಲಾಳುಗಳ ಪಾದಘಟ್ಟಣೆಯಿಂದ ಉಂಟಾದ ಧೂಳು ಒಟ್ಟಿಗೆ ಕೂಡಿ ಆಕಾಶಕ್ಕೆ ಹಾರಲು ಸೈನ್ಯದ ಭಾರದಿಂದ ಭೂಮಿಯೇ ಎದ್ದು ಹಾರುವ ಹಾಗಾಯಿತು. ೬೯. ಯುದ್ಧಾಸಕ್ತರಾದವರಲ್ಲಿ ಸತ್ತ್ವಗುಣವೂ (ಶಕ್ತಿಯೂ) ಭೂಮಿಯಲ್ಲಿ ರಜೋಗುಣವೂ (ಧೂಳೂ) ರಣಗತ್ತಲೆಯಲ್ಲಿ ತಮೋ ಗುಣವೂ (ಕತ್ತಲೆ) ಉಂಟಾಗಲು ಎರಡು ಸೈನ್ಯಗಳಲ್ಲಿಯೂ ಸತ್ತ್ವರಜಸ್ತಮೋಗುಣಗಳು ತೋರಿಬಂದುವು. ೭೦. ಸೈನ್ಯಗಳ ಭಾರಕ್ಕೆ ಹೆದರಿ ಆದಿಶೇಷನು ಹೆಡೆಗಳನ್ನು ಸಂಕೋಚ ಮಾಡಿಕೊಂಡನು. ಭೂಮಿಯು ಬೊದಿಲ್ಲೆಂದು ಬಿದ್ದಿತು. ತಳಭಾಗವು ನಷ್ಟವಾಗಲು ಆಮೆಯ ಬೆನ್ನು ಒಡೆದು ತಕ್ಷಣ ನುಚ್ಚುನೂರಾಯಿತು. ವ|| ಹಾಗೆ ಭೂಮ್ಯಾಕಾಶಗಳು ಒಂದೊಂದರಲ್ಲಿ ತಗುಲಿದ ವೇಗದಲ್ಲಿ ಆಕಾಶದವರೆಗೆ ಹಾರಿದ ಧೂಳಿನಿಂದ ದಿಕ್ಕು ಕಾಣದೆಯೂ ತಮ್ಮ ಪಕ್ಷ ಪ್ರತಿಪಕ್ಷಗಳನ್ನರಿಯದೆಯೂ ಚತುರಂಗ ಸೈನ್ಯವು ತಮ್ಮ ಮೊದಲಿನ ವ್ಯವಸ್ಥೆ ತಪ್ಪಿಹೋಗಿ ಹುಡುಕಾಡುತ್ತ ಥಟ್ ಪೊಟ್ಟೆಂದು ಹೊಡೆದು ಇಟ್ಟು ಕತ್ತರಿಸಿ ತರಿದು ಪ್ರತಿಭಟಿಸಿ ಕೆಲವು ಕಾಲ ಯುದ್ಧ ಮಾಡಿದರು. ಸುರಿಯುತ್ತಿರುವ ಬಿಸಿರಕ್ತದ ಮಳೆ, ಬಾಣವರ್ಷದಿಂದ ಪ್ರವಾಹವಾಗಿ ಹರಿಯುವ ಮದ್ದಾನೆಗಳ ಮದೋದಕ, ಸೈನ್ಯದ ಗದ್ದಲಕ್ಕೆ ರೇಗಿ ದಿಕ್ಕು ತೋಚದಂತೆ ಓಡಿ ತಗುಲಿದ ಕಡಿವಾಣದ ಸಂಘರ್ಷಣೆಯಿಂದ ಪೂರ್ಣವಾಗಿ ಸೀಳಿದ

ಪೊಟ್ಟಗೊಡೆದ ತಾಳುಗೆಗಳ ರುರಜಲದೊಳ್ ಬೆರಸಿ ಪದಗೆಂಪನಾಳ್ದ ಜಾತ್ಯಶ್ವದ ಲಾಳಾಜಳದೊಳಂ ನೆಲದೊಳೊಗೆವ ರಜಂ ಮೊದಲ್ಮೂಲಂಗಿಡೆಯುಂ ತಿಱದಿಕ್ಕಿದಂತೆ ತಲೆಗಳ್ ಪಱದುರುಳ್ದೊಡೆ ಪೆರ್ಮರಂಗಳ ಪೋೞ್ಗಳೊಳಗಣಿಂದಮೊಗೆದ ಕೇಸುರಿಗಳ ಬಳಗದಂತಟ್ಟೆಗಳಿಂದ ಬರಂಬರಂ ನೆಗೆದು ಪಾಱುವ ನೆತ್ತರ ಸುಟ್ಟುರೆಗಳಿಂದಂ ಮೇಗೆ ನೆಗೆದ ರಜಂ ಮಸುಳನಾಗೆ ದೆಸೆಯಱದು ತಮ್ಮ ಬಲಮುಮಂ ಮಾರ್ವಲಮುಮನಱದು ನವರುರಜಳ ಚಳತ್ಸೇಚನದೊಳ್ ಘಟ್ಟಿಸಿ ಸಿಂದುರದೊಳ್ ನೆಲಗಟ್ಟಿಸಿದಂತಿರ್ದ ರಂಗಭೂಮಿಯೊಳೆರಡುಂ ಪಡೆಯ ನಾಯಕರ್ ಬಿಲ್ಗಾಳೆಗಂಗಾದುವಾಗಳ್-

ಕಂ|| ಪಿಡಿಕೆಯ್ ತೀವಿದ ಕೂರ್ಗಣೆ
ಮಡಕಾಲ್ವರಮಲೆವ ಕಚ್ಚೆ ನಿಡಿಯಸಿಯೊ ಕ|
ರ್ಪಿಡಿದ ಪಣೆಗಟ್ಟು ಕೆಯ್ಪೊಡೆ
ಬೆಡಂಗನೊಳಕೊಳೆ ಧನುರ್ಧರರ್ ಪೆಣೆದೆಚ್ಚರ್|| ೭೧

ಶರಸಂಧಾನಂ ನಿಟ್ಟಿಸ
ಲರಿದೆಂಬಿನಮೆರಡು ಬಲದ ಕಡುವಿಲ್ಲರ್ ಭೋ|
ರ್ಗರೆದಿಸೆ ಕೂರ್ಗಣೆಯೊಳ್ ಪಂ
ದರಿಕ್ಕಿದಂತಾಯ್ತು ಗಗನಮಂಡಳಮೆಲ್ಲಂ|| ೭೨

ಗಱಸನ್ನೆಗೆಯ್ದು ತೆಗೆನೆ
ದೆಱಗಿ ಪರಂಕಲಿಸಿ ಪರ್ಮಿ ಕೂಕಿಱದಿಸೆ ಕೆಂ|
ಗಱಯ ಮೊನೆಯಂಬುಗಳ್ ಕ
ಣ್ದೆಯಿಸಿದುವು ಪೊಣರ್ವ ಬಿಲ್ಲ ಕಡುವಿತ್ತೆಗರಂ|| ೭೩

ಅರಿವ ನಡುವುಡಿವ ನೇರ್ಗೋ
ಲ್ವರಿದುರ್ಚುವ ನಟ್ಟು ತೊನೆವ ಕಣೆಗಳ್ಗೆ ಸೊಗಂ|
ದಿರಿಯದಿದಿರಿದಿರನದಿರದೆ
ಸುರಿಗಿಱವಂತೆಚ್ಚರಂಬನಂಬಟ್ಟುವಿನಂ|| ೭೪

ಪಿಡಿಕೆಯ್ಯ ದೊಣೆಯ ಪೊದೆಯಂ
ಬಿಡೆ ಮುಡಿವಿನಮೆಚ್ಚು ಸುರಿಗೆಗಿೞದಿರಿದಿರಂ|
ಪಡೆ ಪೆಣೆದಿಱದುಂ ಬಿಲ್ವಡೆ
ಪಡೆದುದು ಭೋರ್ಗರೆದು ಪರಿವ ನೆತ್ತರ ಕಡಲಂ|| ೭೫