ಭಾಮಿನಿ

ಇತ್ತ ಮಾಹೀಷ್ಮತಿಪುರಾಧಿಪ |
ಕಾರ್ತಿವೀರ್ಯ ನೃಪಾಲ ನಾ ಮುನಿ |
ಪೋತ್ತಮನು ಜಮದಗ್ನಿಗಿಹ ಸುರಧೇನುವನು ಪುರಕೆ ||
ಸತ್ವದಿಂದೊದುದನರಿತು ಮುನಿ |
ಪುತ್ರನಹ ಭಾರ್ಗವನು ತಾಖತಿ |
ವೆತ್ತು ನೃಪನಿದ್ದೆಡೆಗೆ ಬಂದಿದಿರಾದನಾಹವಕೆ  || ೧ ||

ಸೌರಾಷ್ಟ್ರ ತ್ರಿವುಡೆತಾಳ

ನೀನೆಲಾ ಜಮದಗ್ನಿ ಮುನಿಪನ | ಧೇನುವನ್ನಪಹರಿಸಿ ತಂದಿಹ |
ಮಾನನಿಧಿ ನೃಪನಹುದೆ ಪೇಳನು | ಮಾನವಿಡದೆ      || ೧ ||

ಮೌನಿಗಳಿಗಿಹುದಲ್ಲ ಮಹಸುರ | ಧೇನು ಭೂಮಿಪರಿಂಗೆ ಮೆರವಭಿ |
ಮಾನವೆಂದೊದಿಹೆನು ಕೇಳ್ವರೆ | ನೀನಾದಾರೈ         || ೨ ||

ಮೌನಿಪತಿ ಜಮದಗ್ನಿ ಮುನಿಪನ | ಸೂನು ಭಾರ್ಗವನೆಂಬರೆನ್ನನು |
ಮಾನವಾಧಿಪ ನಿನಗೆ ಮೆರವಭಿ | ಧಾನವೇನು         || ೩ ||

ಘನಪರಾಕ್ರಮಿ ಕಾರ್ತಿವೀರ‍್ಯಾ | ರ್ಜುನನೆನುತ್ತಲಿ ಕರವರೆನ್ನನು |
ಮುನಿಕುಮಾರಕನಹೆಯ ನಿನಗೇ | ಕಿನಿತು ಶೌರ್ಯ   || ೪ ||

ನಿತ್ಯ ಮುನಿಗಳಿಗಾಶ್ರಯದಮಹ | ವಸ್ತು ಮಹಿಪರಿಗಿಹುದೆ ಧರ್ಮದ |
ಹೊತ್ತ ನೆಲೆಯೆಂದೆಂಬ ಮಾತಿನೊ | ಳರ್ಥವಿಹುದೆ     || ೫ ||

ಮೃತ್ಯುಹರನಭಿಧಾನವನು ಜಪಿ | ಸುತ್ತ ಗಿರಿಕಾಂತಾರದೊಳಗಿಹ |
ಋತ್ವಿಜರಿಗಿದು ಸಲ್ಲದೆಂಬಯ | ಥಾರ್ಥವಿದುವೆ         || ೬ ||

ಭೈರವಿ ಮಟ್ಟೆತಾಳ

ಸುರಪನೆಮಗೆ ದತ್ತಗೈದ | ಸುರಭಿಯಿಂದಲೊದಗಿದಂತ |
ಪರಮಭೋಜನವನು ಗೈದು | ತುರುವನೊದೆಯಾ    || ೧ ||

ನೀತಿಯಿಂದ ಕೇಳ್ದೆ ನಿನ್ನ | ತಾತನೀಯದಿರಲು ಪಶುವ |
ಖಾತಿಯಿಂದಲೊದೆನದುದು | ರ್ನೀತಿಯಾಯಿತೆ        || ೨ ||

ಎಲೆ ನೃಪಾಲವರ್ಯ ನಮ್ಮ | ನೆಲೆಯ ಸುರಭಿಯನ್ನು ಮರಳಿ |
ನಲವಿನಿಂದಲಿತ್ತುಯನ್ನ | ಕಳುಹು ಬೇಗದಿ    || ೩ ||

ಜಲಜಭವಭವಾದಿ ಮುಖ್ಯ | ರೊಲಿದು ಕೇಳ್ದರೀವನಲ್ಲ |
ಬಲುಹ ತೋರ್ದರೀಗನಿನ್ನ | ತಲೆಯನುಳಿಸೆನು        || ೪ ||

ಪೃಥ್ವಿಸುರರ ನಿರತ ಪೊರೆವ | ಹೊತ್ತ ಕೀರ್ತಿ ಕ್ಷತ್ರಿಯರಿಗೆ |
ವ್ಯರ್ಥಹಗೆಯನೆಸಗಿ ಬ್ರಹ್ಮಹತ್ಯ | ಗೈವೆಯ   || ೫ ||

ಪತ್ತು ಮಾಸ ಪೊತ್ತು ನಿನ್ನ | ಪೆತ್ತವಳನು ಹತ್ಯಗೈದ |
ಧೂರ್ತ ನಿನ್ನ ಕೊಲಲು ದುರಿತ | ವೆತ್ತಲಿಹುದೆಲ        || ೬ ||

ತಾತನಾಜ್ಞೆಯಿಂದತರಿದ | ಮಾತೆಯಳನು ಜೀವಗೈದೆ |
ಪಾತಕಂಗಳಿಹುದೆ ತಿಳಿಯ | ದ್ಯಾತಕುಸುರುವೆ        || ೭ ||

ಅತ್ರಿಸುತನವಲುಮೆಯಿಂದ | ಪತ್ತುಶಿರನ ಸೆರೆಯೊಳಿಟ್ಟ |
ಸತ್ವಶಾಲಿಯೈಸೆಯೆನ್ನ | ವಾರ್ತೆಯರಿಯೆಯಾ        || ೮ ||

ಪೃಥ್ವಿಸುರರ ಕೊಲ್ಲಬಲುಹು | ನಿತ್ತುದುಂಟೆಯತಿಪನಿನಗೆ |
ಸತ್ವವಿರಲುಶರವಕೊಳ್ಳೆ | ನುತ್ತಲೆಸದನು     || ೯ ||

ಭಾಮಿನಿ

ಇಳೆಯಮರನೆಸದೀರ್ಪ ಶಸ್ತ್ರಾ |
ವಳಿಯ ಖಂಡಿಸುತೊಡನೆ ಶರಮಯ |
ಜಲಧಿಯನು ಕವಿಸಲ್ಕೆ ತರಿದನು ನಿಮಿಷಮಾತ್ರದಲಿ |
ಅಳುಕುವನೆ ಭಾರ್ಗವನು ಪುನರಪಿ |
ಮುಳಿದು ತೆಗದೆಚ್ಚಂಬು ನೃಪತಿಯ |
ಚೆಲುವ ಹಸ್ತಾವಳಿಯ ತರಿದಿಳುಹಿದುದು ಧಾತ್ರಿಯಲಿ  || ೧ ||

ಭೈರವಿ ಏಕತಾಳ

ಎತ್ತಿತು ನೃಪಬಾಹುಗಳು | ಹರಿ | ಕತ್ತರಿಸಿದ ನಿಮಿಷದೊಳು |
ಮತ್ತುದ್ಭವಿಸುತ್ತಿರಲು | ಮೇ | ಣೋತ್ತರಿಸಲ್ಕುದಯಿಸಲು         || ೧ ||

ಬೆರಗಾಗಿಯೆ ಭಾರ್ಗವನು | ನೃಪ | ನುರದ ಸುಧಾ ಕಲಶವನು |
ವರ ವೈಷ್ಣವ ಶರಮುಖದಿ | ಪರಿ | ಹರಿಸುತಲರಿಯದ ತೆರದಿ    || ೨ ||

ಪರಶುವಕೊಂಡಾ ಕ್ಷಣದಿ | ತಾ | ತಿರುಹುತ ನೃಪನೆಡೆಗೈದಿ |
ಕರಗಳ ಖಂಡಿಸುತೊಡನೆ | ರಿಪು | ಶಿರವಿಳುಹಿದಹರಿತಾನೆ     || ೩ ||

ಭಾಮಿನಿ

ಧರೆಯಧಿಪನನು ಗೆಲಿದು ಪಶು ಸಹ |
ತೆರಳಿ ಪಿತನಿಂಗೊಪ್ಪಿಸುತಲಾ |
ಪರಶುಧರ ತಾನೆನದ ತನ್ನಯ ಚಿತ್ತದೆಣಿಕೆಯಲಿ ||
ಧರೆಯೊಳಿಹ ಕ್ಷತ್ರಿಯರ ಕುಲ ಸಂ |
ಹರಿಸಬೇಕೆಂದೆನುತ ಭಾರ್ಗವ |
ಪೊರಟು ಸವರಿದ ನೃಪರನಿಪ್ಪತ್ತೊಂದು ಸೂಳಿನಲಿ    || ೧ ||

ಸಾಂಗತ್ಯ ರೂಪಕತಾಳ

ಬಳಿಕ ಭಾರ್ಗವ ಕ್ಷತ್ರಿಕುಲ ನಿಪಾತವಗೈದ | ಬಲು ದೋಷ ಕಳೆಯಲೆಂದೆನುತಾ |
ಯಿಳೆಯ ನಿರ್ಮಿಸಿ ವಿಪ್ರ | ಕುಲಕೆ ದತ್ತವಗೈದು | ಕಳೆದೀರ್ದ ಹತ್ಯ ತೀರಿಸುತಾ    || ೧ ||

ದಿನನಾಥ ಶಶಿಗಳೀರ್ಪನಕ ಜೀವಿತನಾಗಿ | ಘನ ಕೀರ್ತಿಯುತನೆಂದು ಮೆರವಾ |
ಮನದಿ ತೋಷವಗೊಂಡ ಜನನಿ ಜನಕರಿಂದ | ವಿನಯದಿ ಪಡೆದೀರ್ದವರವಾ     || ೨ ||

 

ರಾವಣ – ಮಂಡೋದರಿ _ ಶ್ರೀರಾಮ

ವಾರ್ಧಿಕ್ಯ

ದುರುಳ ರಾವಣ ಕುಂಭಕರ್ಣರಂ ಮಥಿಸೆ ಶ್ರೀ |
ಹರಿಯು ರಾಮಾವತಾರದೊಳುದಿಸಿ ಸೀತೆಯಂ |
ನೆರಹಿ ಕಾನನಕೈದಿ ತರುಣಿಯಂ ಖಳನೊದುದರಿತು ಕಪಿಗಳ ಮುಖದಲೀ ||
ಶರಧಿಯಂ ಬಲಿದು ಮುಂದ್ವರಿದು ಸಂಗರದೊಳಾ |
ವರಕುಂಭಕರ್ಣಾದಿ ದೈತ್ಯರಂ ಸವೆದು ದಶ |
ಶಿರನ ವಧೆಗಂ ಪಥವನರಸುತ್ತ ಮನದಿ ರಘುವರನೀರ್ದನುತ್ಸವದಲಿ     || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇತ್ತ ದಶಶಿರ ನೋಲಗವನುಳಿ | ದೊತ್ತಿ ಮಂಡೋದರಿಯ ಭವನದಿ |
ಪೊತ್ತುದುಗುಡದೊಳೀರ್ದ ಮನದೊಳ | ಗತ್ತು ಕೊಳುತಾ       || ೧ ||

ರಾಮನೊಡನಾಹವದಿ ಸೋತಿಹ | ಪ್ರೇಮದರಸನ ಕಂಡು ಮಯಸುತೆ |
ತಾ ಮರುಗಿ ಬಿಗಿದಪ್ಪಿ ಕೇಳ್ದಳು | ಕಾಮಿತವನು        || ೨ ||

ರಾಗ ಕೇತಾರಗೌಳ ಝಂಪೆತಾಳ

ದುಗುಡವಿಂತೇನು ಪ್ರೀಯ | ನಿನ್ನ ದಶ | ಮೊಗವಿಹುದು ಕುಂದಿಕಲೆಯ | ನಗೆಯೊಗುವ
ಖಗಕಾಂತಿಯ | ಬಿಂಬವೇ | ನಗಲಿಹುದು ಮುಗಿಲಿನೆಡೆಯಾ     || ೧ ||

ಮಂಗಲೆ ಶುಭಾಂಗ ನಗೆಯು | ಸರಿದುದಾ | ಮಂಗಗಳ ಸಂಗದೆಡೆಯು | ಸಂಗರದಿ
ಭಂಗಕಲೆಯು | ಯೆನಗಾತು | ಹಂಗಿಗಳೆ ಸೀತಾಂಗಿಯು        || ೨ ||

ನಲ್ಲನಾನಿನಗೆ ಮೊದಲು ನುಡಿದಿಹುದ | ನಲ್ಲಗಳೆದಹುದೆ ಪೇಳು |
ಯೆಲ್ಲರಾಡಿದ ನುಡಿಯೊಳು | ನಿನಗೆ ಹಿತ | ವಿಲ್ಲದಂದಾಯ್ತು ಮರುಳು     || ೩ ||

ಸುತ ಮೇಘನಾದ ರಣದಿ | ಮಡಿದುದಕೆ  | ವ್ಯಥೆಯ ಹೊರತಿಲ್ಲ ಮಡದಿ |
ಖತಿಯೇರಿತಿದಕೊ ಮನದಿ | ಪೋಗುವೆನು | ಧೃತಿಯಿಹುದು ಗೆಲುವೆಹವದಿ         || ೪ ||

ಭಾಮಿನಿ

ಎನ್ನ ಮಂಗಲಸೂತ್ರ ಬಿಂಬವು |
ನಿನ್ನ ದೇಹದೊಳೀರ್ಪುದದರನು |
ಕನ್ನೆಗಾಗಿಯೆ ರಾಘವನಿಗೊಪ್ಪಿಸಲು ಬೇಡಿಂದು ||
ಯಿನ್ನುಳಿದ ಸುತನೋರ್ವನಿಹ ಸಾ |
ಕಿನ್ನು ಸಂಗರ ಬೇಡ ಸೀತೆಯ |
ನೆನ್ನ ಮಾತಿನೊಳೊದು ರಾಮನಿಗೀಯಬೇಕಿಂದು      || ೧ ||

ರಾಗ ಭೈರವಿ ಝಂಪೆತಾಳ

ಮಡದಿಯೆನಿಸಲು ತಂದ | ಪೊಡವಿಜೆಯ ನೆವೆದಿಂದ |
ಲಡಗಿತಾದರು ವೃಂದ | ಕೊಡುವನಲ್ಲೆಂದಾ   || ೧ ||

ಧರಣಿಜೆಯ ಕೊಡೆದಿರಲು | ಗರಳವೀಯುತ ತೆರಳು |
ಭರದಿಮದಲೆನಗೆನಲು | ವರದ ಮೋಹದೊಳು        || ೨ ||

ಭಾಮಿನಿ

ಸುಂದರಾಂಗಿಯೆ ನಿನ್ನ ಮೃದು ನುಡಿ |
ಬಂಧನದಿ ಸಿಲುಕಿದೆನು ಪೂರ್ವದ |

ಬಂಧನವೆ ಬೇರಿಹುದು ನಿನ್ನೊಳಗೊರೆಯಲೆಂತದನು ||
ಚಂದಿರಾನನೆ ನಿನ್ನ ಮೋಹದ |

ಮಂದಿರವ ತೊಲಗುವೆನು ಪ್ರಿಯೆ ಬಾ |
ರೆಂದು ಮಂಡೋದರಿಯ ಮುದ್ದಿಸಿ ನುಡಿದೆ ದಶಮುಖನು       || ೧ ||

ರಾಗ ಬೇಗಡೆ ಯೇಕತಾಳ

ಇತ್ತ ಕೇಳ್ ಮಯಪುತ್ರಿ ಸುಚರಿತ್ರೆ | ನಿನ್ನಾತ್ಮ ಶುದ್ಧದ | ಸತ್ಯನುಡಿಯ ವಿಚಿತ್ರ ಮೃಗನೇತ್ರೆ ||
ಉತ್ತಮದ ಹರಿಪತ್ತನದೊಳಿಹ | ಭೃತ್ಯರೊಳು ಸುಖವೆತ್ತಿರಲು ಮುನಿ |
ಪೋತ್ತಮರು ಮುಳಿದಿತ್ತ ಶಾಪದೊ | ಳೆತ್ತಲಾಯ್ತಿ ದೈತ್ಯ ಜನ್ಮವು || ಯಿತ್ತ         || ೧ ||

ಸತ್ತ ಸಹಜನೆನ್ನೊತ್ತಿನವ ವಿಜಯ | ಜಯನೆಂಬುವನು ನಾ | ವೆತ್ತ ಜನ್ಮವಿದಿತ್ತಲೆರಡನೆಯ ||
ಮತ್ತ ಕಾಶಿನಿಯಿತ್ತು ತನುಸುಖ | ಪತ್ನಿಯೆಂದೆನಿಸುತ್ತಲಿಹುದೀ |
ಹೊತ್ತಿನಲಿ ತೊರದತ್ತಲೈದುವೆ | ಪೃಥ್ವಿಯಲಿ ಸುಖವೆತ್ತಿ ಬಾಳಿರು || ಯಿತ್ತ || ೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮಾನಿನಿಯ ಮನ್ನಿಸುತಲುನ್ನತ ದಾನ ಧರ್ಮಾದಿಗಳನೆಸಗುತ |
ತಾನಿಳಿಯೆ ಪತಿಯಂಘ್ರಿಗೆರಗಿದ | ಳಾನಿತಂಬೆ         || ೧ ||

ಬರಸೆಳದು ಬಿಗಿದಪ್ಪಿ ಮುದ್ದಿಸಿ | ಸ್ಥಿರದೊಳಿರು ನೀನೆಂದು ಬೋಧಿಸಿ |
ಹರುಷದಿಂ ಪೊರಮಟ್ಟನಾ ದಶ | ಶಿರನುಧುರಕೆ        || ೨ ||

ಕಂದಪದ್ಯ

ಇತ್ತಲು ಸುರಪತಿ ರಥಮಂ | ಚಿತ್ತಜ ಪಿತನೆಡೆಗಂ ಕಳುಹಲ್ ಪರಿಕಿಸುತಂ |
ಹತ್ತದೆ ತಾನಿರಲನಿಬರ | ಚಿತ್ತವನನುಕರಿ ಸುತ್ತಡರಲು ಖಳ ನುಡಿದಂ    || ೧ ||

ರಾಗ ಭೈರವಿ ಯೇಕತಾಳ

ಸುರಪತಿ ನಿನಗೀರಥವಾ | ಸಂ | ಗರಕೆನುತಲಿ ಕಳುಹಿರುವಾ |
ಧುರದೊಳಗೆನ್ನನು ಗೆಲುವಾ | ಬಲು | ಗರುವಗಳಿರೆ ಪರಿಕಿಸುವಾ         || ೧ ||

ವಿಧಿಭವತ್ರಿದಶಾಧಿಪರು | ನಿ | ನ್ನದುಭುತಭಯಕಂಜುವರು |
ಕದನವನೀಕ್ಷಿಸುತಿಹರು | ನಿನ್ನ | ವಧಿಸಲು ರಥವಿತ್ತಿಹರು        || ೨ ||

ಬಲುಭಟ ನೀನಾಗಿರಲು | ನಿನ್ನ | ಲಲನೆಯ ನಾರಣ್ಯದೊಳು |
ತೊಲಗುತಲೈದಿಹುದೆಲ್ಲಿ | ಬಂ | ದಿಳಿದೆಯ ಸತಿಯಾಸೆಯಲಿ   || ೩ ||

ಯಿನನನ್ವಯದೊಳು ಮುನ್ನಾ | ನೀ | ನನರಣ್ಯಕ ನೆಂಬವನಾ |
ಹನನವಗೈದಿಹೆ ಮೇಣಾ | ಹಗೆ | ತಣಿಸಲುಧುರಕೈದಿಹೆನಾ      || ೪ ||

ರಾಗ ಕಾಂಬೋದಿ ಝಂಪೆತಾಳ

ಎನ್ನ ಸೋದರಿಯಳನು | ಮನ್ನಿಸದೆ ದೇಹವನು | ಬಂಣಗೆಡಿಸಿಹುದರಿತು ನಾನು |
ನಿನ್ನವಳನೊದಿಹೆನು ಉನ್ನತ ವಿರೋಧವನು | ಮುನ್ನ ಒದಗಿಸಿದಾತ ನೀನು       || ೧ ||

ನಿನ್ನ ಭಗಿನಿಯನೊಲಿದು | ಮುನ್ನಕಿವಿಗಳ ತರಿದು | ಉನ್ನತದ ಮೂಗನೆರೆ ಕೊದು ||
ಬಂಣ ತಾ ಕುಂದಿಹುದು | ಯೆನ್ನ ಸತಿಯಳನೊದು | ರನ್ನೆಗುದಿಸಿಹುದೆ ಪೇಳೊಲಿದು        || ೨ ||

ದುರುಳೆಯೋರ್ವಳ ತರಿದು | ಧರೆಯಪಟ್ಟವ ನುಳಿದು | ಹರಿಣವನು ವಿಪಿನದಲಿಸದೆದು ||
ಮರುಳು ಕಪಿಗಳ ನೆರೆದು | ಶರಧಿಯನು ನೆರೆಬಲಿದು | ಮೆರೆದ ವಿಕ್ರಮಿಯು ನೀನಹುದು    || ೩ ||

ಧರಣಿಪನ ಸೆರೆಬಿದ್ದು | ಹರಧನುವಿನಡಿಗೆಡದು | ಕಿರಿಯ ಕಪಿ ತೊಟ್ಟಿಲನು ಕಾದು |
ಹರನಗಿರಿಯೆತ್ತಿಹುದು | ತರುಣಿಯೋರ್ವಳನೆಳೆದು | ಧರಿಸಿ ಶಾಪವ ಮೆರದುದಹುದು       || ೪ ||

ಭಾಮಿನಿ

ಮೂರು ಮೂರ್ತಿಗಳಿಂದ ಸಾಯದ |
ಘೋರ ವರಬಲ ವಿಹುದೆನಗೆ ನೀ |
ವೀರನಾದಡೆ ತೋರು ನಿನ್ನಯ ಸತ್ವವಿಂದಿನಲಿ ||
ಚಾರು ಮಾಯಾತೀತನರಿತದ | ಕೂರಲಗನೊಂದೆಸೆಯಲಾಶರ |
ಸಾರುತಸುರನ ಶಿರಕರಂಗಳನಿಳುಹಿತವನಿಯಲಿ      || ೧ ||

ರಾಗ ಭೈರವಿ ಯೇಕತಾಳ

ಶಿರಗಳು ಭುಜಗಳು ಸಹಿತಾ | ಮ | ತ್ತಿರದುದಯಿಸಲೀಕ್ಷಿಸುತಾ |
ತರಿದಿಳುಹಲುಧಾತ್ರಿಯಲಿ | ತಾ | ನಿರದುದಿಸಿತು ಚೋದ್ಯದಲಿ  || ೧ ||

ಕತ್ತರಿಸಿದ ಭುಜಗಳನು | ಮೇ | ಣೊತ್ತರಿಸಿದ ಶಿರಗಳನು |
ಮತ್ತುದ್ಭವಿಸಲು ಭರದಿ | ನೋ | ಡುತ್ತಲಿ ಯೋಚಿಸಿ ಮನದಿ     || ೨ ||

ಭಾಮಿನಿ

ಮೆರವಶಾಂರ್ಗಮಹಾಧನುವ ತಾ |
ಕರದಿಪಿಡಿದಬ್ಬರಿಸೆ ಬೇಗದಿ |
ಶರವತೊಡಲನಿತರೊಳು  ವಿಶ್ವಾಕಾರತಾನಾದ ||
ಹರಪಿತಾಮಹ ಸುರಪಮನು ಮುನಿ |
ವರರುಗಳು ಬ್ರಂಹ್ಮಾಂಡ ತಂಡವ |
ಧರಿಸಿರುವ ಶ್ರೀ ವಿಮಲ ಮೂರ್ತಿಯ ಕಂಡನಸುರೇಂದ್ರ         || ೧ ||

ರಾಗ ಭೈರವಿ ಝಂಪೆತಾಳ

ಆದಿ ಮಾಯಾತೀತ | ವೇದವಂದಿತ ನಿರತ |
ಸಾಧುಗಳ ಕುಲಕಮೃತ | ಮಾಧವನೆ ಜಯತು        || ೧ ||

ಎಲ್ಲಿ ಸತಿಸುತರುಗಳು | ಎಲ್ಲಿ ಸುಖದುಃಖಗಳು |
ಯೆಲ್ಲಿ ಸೌಭಾಗ್ಯಗಳು | ಯಿಲ್ಲವವನಿಯೊಳು   || ೨ ||

ಮೂರು ದಿನದಧಿಕಾರ | ಧಾರುಣಿಯ ಸುವಿಚಾರ |
ಚಾರುತರ ಸಂಸಾರ | ವಾರಿಗಿದು ಪೂರಾ    || ೩ ||

ಭಾಮಿನಿ

ಎನುತ ಮಾಯಾತೀತನನುಪಮ |
ಘನಮಹೋನ್ನತ ಮೂರ್ತಿಯನು ತಾ |
ಮನದಣಿಯಲೀಕ್ಷಿಸುತಲೆರಗಿದ ಭಕ್ತಿಭಾವದಲಿ ||
ದನುಜನಾತ್ಮೋದಯವ ತಿಳಿಯುತ |
ಚಿನುಮಯನು ನಗುತೆಂದ ಖಳನೀ |
ನೆನಗೆ ಶೃಣಾಗುವೆಯೊ ಪೇಳೆನಲೆಂದನುಗ್ರದಲಿ        || ೧ ||

ಧಾರುಣಿಯೆ ತಲೆಕೆಳಗೆ ಮಗುಚಲಿ |
ವಾರಿಧಿಗಳುರೆ ಬೆರತು ಹೋಗಲಿ |
ಮೂರು ಮೂರ್ತಿಗಳೈದಿ ಬೇಡಲಿ ಶರಣು ಪೊಗೆ ನಿನ್ನಾ ||
ಧಾರುಣೀಸುತೆಗಾಗಿಯೆನ್ನೊಳು |
ಹೋರಿ ನಿನ್ನೊಳು ಸೋತೆನಾದರೆ |
ಗೌರಿಧವನಡಿಭಜಕ ತಾನಲ್ಲೆಂದದಶವದನಾ  || ೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹೊತ್ತಕೀರ್ತಿಯ ಸತ್ವಯುತನೀ | ವ್ಯರ್ಥಕದನಾಗ್ರಹದ ಗರ್ವದಿ |
ನಿತ್ತು ಕಾದಲು ಬೇಡ ಮಡಿವೆ ನಿ | ರರ್ಥವಾಗಿ          || ೧ ||

ಧುರಕೆ ಬೆದರುವನಲ್ಲವೀದಿನ | ದುರಿತಕಂಜುವನಲ್ಲ ನಿನ್ನೊಳು |
ಮರಣ ಭಯವೆನಗಿಲ್ಲವಿದುವೇ | ಸ್ಥಿರದ ನುಡಿಯು      || ೨ ||

ಇನಿತು ನಿರ್ಧರವಿಹುದೆ ನಿನ್ನಲಿ | ಯೆನಗೆ ಮುಂದಪವಾದನುಡಿಯರು |
ಹನನ ಕಾಲವನರಿತು ನಿಲ್ಲೆಂ | ದೆನುತ ನುಡಿದ         || ೩ ||

ತಿಳಿದಿಹೆನು ನಾ ನಿನ್ನ ನೆಲೆಯನು | ಪ್ರಳಯದೊಳು ವಟಪತ್ರದೊಳು ನೀ |
ಮಲಗಿ ಕೊಂಡೆಸದೀರ್ಪ ಮಾಯಾ | ಲಲಿತನೆಂದು    || ೪ ||

ದಣಿಸುವೆಯದ್ಯಾಕಿನ್ನು ಬೇಗದೊ | ಳನುಕರಿಸು ನಿನ್ನಡಿಯ ಸೇವೆಯ |
ನೆನಗೆ ಶ್ರೀ ರಘುರಾಮ ರಾಮೆಂ | ದೆ | ನುತ ಮಣಿದಾ || ೫ ||

ಶರಣನನು ಮತಿಯಿಂದಲಾದಶ | ಶಿರ ನುರಸ್ಥಳಕಂಬನೆಸೆಯಲು |
ಸುರಪತಿಯ ರಂಗದಲಿದಶಶಿರ | ಮೆರದನಾಗ         || ೬ ||

ಭಾಮಿನಿ

ದುರುಳನವಸಾನದಲಿ ರಘುಪತಿ |
ಶರಣನನು ಸಂತೈಸಿ ಪಟ್ಟವ |
ವಿರಚಿಸುತ ಕಪಿವರರನುಚಿತ್ತೋಕ್ತಿಯಲಿ ಮನ್ನಿಸುತಾ |
ಅರಸಿ ಜನಕಜೆ ಸಹಿತ ನಿಜಪುರ |
ವರಕೆ ನಡೆತಂದವನಿಪಟ್ಟವ |
ಧರಿಸಿ ಕೀರ್ತಿಯನಾಂತು ರಂಜಿಸುತೀರ್ದ ರಘುನಾಥ || ೧ ||

 

ಶಿಶುಪಾಲ – ಶ್ರೀಕೃಷ್ಣ

ವಾರ್ಧಿಕ

ಹರಿಯು ಕೃಷ್ಣಾವತಾರದೊಳುದಿಸಿ ಕಂಸಾದಿ |
ದುರುಳರಂ ಸದೆಬಡಿದು ಪಾಂಡವರ ನುರೆಬೆರೆತು |
ಮೆರವರಾಜಾಧ್ವರದೊಳಗ್ರಪೀಠವನೇರಿ ವಿಭವದೊಳ್ ರಂಜಿಸಿದನು ||
ಧರೆಯಧಿಪ ಶಿಶುಪಾಲ ಹರುಷದಿಂ ಸಭೆಗೈದಿ |
ಪರಿಕಿಸುತಲಗ್ರ ಪೀಠವನೇರಿ ಕುಳಿತಿರುವ |
ಪರಮಪುರುಷನ ನೋಡಿ ಭರಿತ ವೈರಾಗ್ಯದಿಂ ಜರದೆಂದ ಶ್ರೀ ಹರಿಯನು          || ೧ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನೆಲವೊ ಗೋವಳನೆ ರಾಜ | ಸ್ಥಾನ ಮಧ್ಯದೊಳಗ್ರಪೂಜೆಯ |
ಮಾನ ಪೀಠವನೇರಿ ಕುಳಿತೆಯ | ಹೀನಮತಿಯೆ       || ೧ ||

ಸಾಗರಾಂತ್ಯದ ನೃಪರ ಮಧ್ಯದಿ | ಯಾಗ ಪೂಜಾಸನವನೇರಲು |
ಯೋಗ ನಿನಗೆಲ್ಲಿಹುದು ಕೀರ್ತಿಯ | ಭಾಗಿಯಹುದೆ     || ೨ ||

ಮೇಧಿನಿಪರನ್ವಯಕೆ ಪೂಜಾ | ರಾಧನೆಗಳಹುದಲ್ಲದೆಂದಿಗು |
ಯಾದವನು ನೀನಿದಕೆ ಬಾಧ್ಯನೆ | ವಾದಿಸಿದರೆ         || ೩ ||

ಕ್ಷೋಣಿಯೊಳು ನೃಪಸೂಯವೆಂಬ ಪ್ರ | ಧಾನ ಕಾರ್ಯಾದ್ರಿಯೊಳು ಗರ್ವದಿ |
ಭಾನು ನೀನಾಗುದಿಸಿದೆಯ ಸ್ವ | ರ್ಭಾನುವಿದಿರು       || ೪ ||

ಇಳೆಯೊಳುತ್ತಮನೈಸೆ ನಿನ್ನನು | ಮೊಲೆಯುಣಿಸೆ ಬಂದವಳ ತರಿದಿಹೆ |
ನಳಿನ ಮುಖಿಯರ ವಸನವೆಳದಿಹೆ | ಕಳವಿನಿಂದಾ    || ೫ ||

ಚೆಲುವ ಸತಿಯರನೆಳದು ಮಾವನ | ತಲೆಯ ಕಡಿದಿಹೆ ಕಾಳಿಯನ ಹೆಡೆ |
ತುಳಿದು ಕೊಂದವನೈಸೆ ಕೀರ್ತಿಯ | ತಿಲಕನಹುದೆ    || ೬ ||

ಕನಕ ಪೀಠವನಿಳಿಯದಿರಲೀ | ಕ್ಷಣದಿ ಕರಪಿಡಿದೆಳದು ನಿನ್ನಯ |
ತನಿರಕುತ ತೆಗೆದುಣಿಸುವೆನು ಯೋ | ಗಿನಿಯರಿಂಗೆ   || ೭ ||

ಭಾಮಿನಿ

ಹರಿಯ ನೀ ಪರಿ ಜರದು ಖಳ ಮುಂ |
ದ್ವರಿಯಲಾಕ್ಷಣ ತಿಳಿದು ಮುರಹರ |
ದುರುಳನೊರದ ಶತಾಪರಾಧವ ಮನ್ನಿಸಿದ ಮನಕೆ ||
ಭರದಿ ಪೀಠವನಿಳಿದು ಚೈದ್ಯನ |
ಗುರುವವಿಳಿಸುವೆನೆಂದು ವಿಲಯದ |
ಪುರಹರನ ವೋಲುಗ್ರದಿಂದಿದಿರಾದನಾಹವಕೆ || ೧ ||

ರಾಗ ಭೈರವಿ ಯೇಕತಾಳ

ಭಳಿ ಭಳಿರೆಲೆ ಶಿಶುಪಾಲ | ಹಗೆ | ಬೆಳೆದುದೆಯೊನ್ನೊಳು ಬಹಳ |
ಮುಳಿದೀಪರಿಜರದಿಹುದು | ಮನ | ದೊಳು ಹಿತವೆನಗಾಗಿಹುದು || ೧ ||

ಹಾರದಿರೆಲೋ ಗೋಪಾಲ | ನೀ | ಚೋರರೊಳಧಿಕ ವಿಶಾಲ |
ಧಾರುಣಿಪರಮಧ್ಯದಲಿ | ಕಲೆ | ಯೇರಿತೆ ನಿನಗಿಂದಿನಲಿ         || ೨ ||

ನಿನ್ನನು ಪೂಜಿಸದುದಕೆ | ನಿನ | ಗೆನ್ನೊಳು ಮನ ಮುನಿಸೇಕೆ |
ಬಂಣದ ಪೂಜಾಸನಕೆ | ನೀ | ಗಣ್ಯನೆ ಜರೆಯುವದೇಕೆ || ೩ ||

ವೋರ್ವಳ ಬಸುರಲಿ ಜನಿಸಿ | ಮ | ತ್ತೋರ್ವಳ ಮಗನೆಂದೆನಿಸಿ |
ವೋರ್ವನೆ ತಂದೆಯೊ ನಿನಗೆ | ಮ | ತ್ತೀರ್ವರೊಧಿಟ ಪೇಳೆನಗೆ || ೪ ||

ಪಿತನೋರ್ವನೆ ವಸುದೇವ | ಮ | ತ್ತಿತರರು ಸಲಹುತ್ತಿರುವ |
ಶ್ರುತಿ ಮತ ಪಿತರೈದೆನುವಾ | ಬಹು | ಮತವಿದೆ ನೀನರಿಯದವ          || ೫ ||

ಧರೆಯಾಲಯದೊಳಗಿರದೆ | ಮಹ | ಶರಧಿಯನ್ಯಾತಕೆಸರಿದೆ |
ಅರಿಗಳ ಭಯ ನಿನಗಿಹುದೆ | ಬರಿ || ಮರುಳುತನವು ದೊರಕಿದುದೆ       || ೬ ||

ಮಗಧನ ಭಯಕಂಜುತಲಿ | ಪೊಸ | ನಗರದೊಳಿಹೆ ನಬ್ಧಿಯಲಿ |
ಹಗರಣದೊಳಗಾತನನು | ಭಯ ಮುಗಿಸುತಲೈ ತಂದಿಹೆನು    || ೭ ||

ಸತ್ಯಾತ್ಮಕ ಧರ್ಮಜನು | ಕೈ | ವರ್ತಿಪ ನೃಪಸೂಯವನು |
ಸತ್ವದಿ ನಿನ್ನಯ ತಲೆಯ | ಕಡಿ | ದೊತ್ತುವೆ ಪೂರ್ಣಾಹುತಿಯ   || ೮ ||

ಭಾಮಿನಿ

ಮಾತು  ಸಾಕೆಲವೆಲವೊ ಬಲ್ಲೆನು |
ಭೂತಳಾಧಿಪರಧಮ ರೈಸೆ ನಿ |
ಪಾತವೆಸಗಲು ಬಂದಿಹೆನು ನೀ ಪರಿಕಿಸೆಂದೆನುತಾ ||
ಯಾತುದಾನ ವಿರೋಧಿಯೊರದಿಹ |
ಮಾತ ಮನದೊಳಗರಿತು ಮಾಯಾ |
ತೀತನೆನ್ನೊಳುಧುರಕೆ ಬಂದಿಹುದೈಸೆ ಧಿಟವೆನುತಾ   || ೧ ||

ರಾಗ ಮಾರವಿ ಯೇಕತಾಳ

ತಿಳಿದಿಹೆ ನಿನ್ನಯ ನೆಲೆಯ ದುರಾತ್ಮಕ | ಕೊಲುವವನೆಂದೆನು ತಾ |
ಯಿಳೆ ಭಾರವ ಮುಂದಿಳಿಸುತ ಧರ್ಮವ | ಸಲಹುವನಹೆಯೆನುತಾ       || ೧ ||

ದಣಿಸುವದೇಕೆನ್ನನು ನಿನ್ನಯ ಪದ | ವನಜವ ಕಾಣಿಸುತಾ |
ಚಿನುಮಯ ಸಲಹೆಂದೆನುತಲಿ ದೈನ್ಯದಿ | ಮಣಿದನು ಪ್ರಾರ್ಥಿಸುತಾ      || ೨ ||

ಭಾಮಿನಿ

ವರ ಸುದರ್ಶನದಿಂದ ಚೈದ್ಯನ |
ಕೊರಳ ಕತ್ತರಿಸುತ್ತಮಿಗೆ ಮುಂ |
ದ್ವರಿವುತೈತಹ ದಂತವಕ್ತ್ರನ ಕೆಡಹಿ ಧಾತ್ರಿಯಲಿ ||
ಮೆರವ ರಾಜಾಧ್ವರವ ತೀರಿಸು |
ತುರುತರಾನಂದದಲಿ ಶ್ರೀಹರಿ |
ಮೆರವ ಕೀರ್ತಿಯ ಧರಿಸುತೀರ್ದನು ದಿವ್ಯತೇಜದಲಿ    || ೧ ||

 

ಬೌದ್ಧ-ಕಲ್ಕ್ಯ

ರಾಗ ಸಾಂಗತ್ಯ ರೂಪಕತಾಳ

ಹರಿ ಬೌದ್ಧನಾಗಿ ಶ್ರೀ ಧರೆಯ ಮಾನವರಿಂಗೆ | ವರತತ್ವ ಬೋಧೆಯನೊರದು ||
ಮೆರವ ಸದ್ಧರ್ಮವ ಸ್ಥಿರಗೈದು ಧಾತ್ರಿಯ | ಹೊರೆಯ ತಾನಿಳುಹಿದ ನಲಿದು        || ೧ ||

ಶ್ರೀ

ಸರುವ ಶಕ್ತಿಯೊಳು ಮುಂದಿರದೆ ಕಲ್ಕ್ಯಾಂಕಿತ | ಧರಿಸಿ ದುಷ್ಟರನೆಲ್ಲ ತರಿದು ||
ಪರಮ ಸಜ್ಜನರಿಂಗೆ ಹರುಷವಗೊಳಿಸುತ್ತ | ಧರೆಯ ಪಾಲಿಸುತೀರ್ಪನೊಲಿದು      || ೨ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಶ್ರೀನಿವಾಸ ದಶಾವತಾರವ | ತಾನಿಳುಹಿಗೈದೀರ್ಪ ಚರಿತೆಯ |
ಮೌನಿ ಸೂತನುಸೂರ್ದನಾ ಮಹ | ಶೌನಕರಿಗೆ       || ೧ ||

ಭಕ್ತಿಯಲಿ ಕೈಮುಗಿದು ಶೌನಕ | ಮೊತ್ತ ಸೂತ ಮುನೀಂದ್ರಗೊಂದಿಸಿ |
ಚಿತ್ತ ಹರುಷಿತರಾಗಿ ವಿಷ್ಣುವ ಪ್ರಾರ್ಥಿಸಿದರು   || ೨ ||

ರಾಗ ಡವಳಾರ ಯೇಕತಾಳ

ವರಮತ್ಸ್ಯಗೆ ಕೂರ್ಮನಿಗೆ | ಮೆರವ ವರಾಹಗೆ ನರಸಿಂಹನಿಗೆ |
ಕಿರಿವಾಮನನಿಗೆ ಭಾರ್ಗವನೆನಿಪಗೆ | ಸುರಚಿರದಾರತಿಯಾ ಬೆಳಗಿದರು || ಶೋಭಾನೆ       || ೧ ||

ವರ ಶ್ರೀರಾಮಗೆ ಕೃಷ್ಣನಿಗೆ | ಮೆರೆಯುವ ಬೌದ್ಧಗೆ ಕಲ್ಕ್ಯನಿಗೆ | ಧರೆಯನು ಪೊರೆದಗೆ |
ಸ್ಥಿರದ ಮಹಾತ್ಮಗೆ | ಹರುಷದೊಳಾರತಿಯ ಬೆಳಗಿದರು || ಶೋಭಾನೆ    || ೨ ||

ಭಾಮಿನಿ

ಕ್ಷಿತಿಯೊಳುರುಡೂರೆನುವ ಕ್ಷೇತ್ರದಿ |
ಸತತಭಕ್ತರ ಪೊರೆವ ಶಿವನಿಗೆ |
ಹಿತನೆನಿಪ ಮಹವಿಷ್ಣುವಿನ ಪದಕರ್ಪಿಸಿದೆನಿದರಾ ||
ಕ್ಷಿತಿಯಮರ ಸುಬ್ರಾಯರನುಪಮ |
ಪ್ರಥಮಸುತನಹ | ವಿಷ್ಣು ನಾನೀ |
ಕೃತಿಯನೆಸಗಿದೆ ತಪ್ಪಿರಲು ತಿದ್ದುವದು ಬಲ್ಲವರೂ      || ೧ ||

|| ಶ್ರೀ ಶಾರದಾಂಬಾಯೈ ನಮಃ ||

|| ಶ್ರೀ ||

ತಾ. ೨೩-೧೧-೧೯೫೮ಕ್ಕೆ ಕೃತಿ ಸಮೊಕಪ್ತವು ಈ ಪ್ರಸಂಗದಲ್ಲಿ ಜುಮುಲ ಪದ್ಯಗಳು ೨೪೯