ಸೌರಾಷ್ಟ್ರ ತ್ರಿವುಡೆ
ಖೇದವೇಕೆನಗಿನ್ನು ಮೋಹದ | ಸೋದರನ ಕೊಂದಾದ ಮೇಲ್ ಹಗೆ |
ಯಾದ ಹರಿಯನು ಕೊಲ್ಲುವುದೆ ಮೇಲಾದ ಕಾರ್ಯ || ೧ ||
ಖಂಡ ಪರಶು ವಿರಿಂಚಿ ಮೇಣಾ | ಖಂಡಲಾದ್ಯರ ಬಗೆಯದಸುರರ |
ತಂಡಕಿವ ಹಗೆತನವ ತೋರ್ದನೆ | ಗಂಡು ತನದಿ || ೨ ||
ಹುಡುಕುವೆನು ಬ್ರಂಹ್ಮಾಂಡಭಾಂಡದೊ | ಳಡಗಿರುವನೆಲ್ಲ್ಯೆನುತ ಮಿಗೆ ಕಂ |
ಡೊಡನೆ ಹರಿಯನು ಬಿಡೆನು ತಕ್ಷಣ | ಕಡಿವೆ ತಲೆಯಾ || ೩ ||
ಪಂಥವನು ಬಿಡಲೊಲ್ಲೆನಸುರರ | ತಿಂಥಿಣಿಯ ಕುಲಕೀರ್ತಿಯೆತ್ತದೆ |
ಮುಂತೆ ನಿಲುವವನಲ್ಲೆನುತ ಖತಿ | ಯಾಂತು ಪೊರಟ || ೪ ||
ವಾರ್ಧಿಕ್ಯ
ಧಾರುಣಿಯ ಬಿಡದೆ ಸಂಚಾರಗೈದರಸಿ ಕಾಂ |
ತಾರ ಮುಂತಾದೆಡೆಯನೋರಂತೆ ಹುಡುಕುತಂ |
ಮೇರುಮಂದರಗಿರಿಯನೇರಿ ತಾನಿಳಿದೈದಿ ವಾರಿಧಿಯ ನೆರೆ ಹುಡುಕಿದಾ ||
ಶ್ರೀ ರಮಾಧವನಿರುವ ವಾರತೆಯನರಿಯದಿರೆ |
ದಾರಿಯೇನೆಂದೆನುತ ಸಾರಿ ಚಿಂತೆಯೊಳಿರಲು |
ಚಾರುಸನ್ಮೋಹದ ಕುಮಾರನಹ ಪ್ರಹಲ್ಲಾದ ಭೋರನೈ ತಂದೆರಗಿದ || ೧ ||
ಕೇತಾರಗೌಳ ಅಷ್ಟತಾಳ
ಮಗು ಪ್ರಹಲ್ಲಾದನೇ ಸುಗುಣ ಬಂದೆಯಯೆಂದು | ತೆಗೆದೆತ್ತಿ ಕುಳ್ಳಿರಿಸಿ |
ಮೃಗಧರನೊಲುಮೆಯು ತಗಲಿತೆ ನಿನಗೆಂದು | ಬಿಗಿದಪ್ಪಿದನು ಮುದ್ದಿಸಿ || ೧ ||
ತರಳ ನಿನ್ನನು ಮೋಹವೆರಸಿನಾ ಕಳುಹಿದೆ | ಗುರುಮಠಕಾಗಿ ಮುನ್ನಾ |
ಅರುಹಿಸಿದನೆ ವಿದ್ಯ ಬರಹವ ಕಲಿತೆಯೊ | ಮರೆಮಾಜದುಸುರೆಂದನು || ೨ ||
ಬೊಪ್ಪ ಲಾಲಿಸು ಗುರುವಿಪ್ಪಠಾಂವಿಗೆ ನಿ | ನ್ನಪ್ಪಣೆಯೊಳು ಪೋದೆನು |
ಸರ್ಪಶಯನನಿಗೆ ಒಪ್ಪುವಕ್ಷರವೆರ | ಡೊಪ್ಪಿತು ಯೆನಗೆಂದನು || ೩ ||
ಹಾಗೆಂದಡರಿಯೆನು ಪೋಗಿನೀ ಕಲಿತುದ | ಬೇಗದಿ ಪೇಳೆನಲು |
ನಾಗಶಯನಮಹ ಯೋಗಿವಂದ್ಯನನೆನ | ದಾಗಲೆ ಹರಿಯೆಂದನು || ೪ ||
ಕಂದ ಪದ್ಯ
ವರದಿಹನುಡಿಯಾಲಿಸಿ ನಿಶಿ | ಚರನತಿ ಬೆರಗಾಗಿಯೆ ಮನದೊಳ್ ತಾ ಬಳಿಕಂ |
ತರಳನ ಮುದ್ದಿಸಿ ಮೋಹದೊ | ಳರುಹಿದ ಬುದ್ಧಿಯ ನೀತಿಯನವನಿಂಗಾಗಂ || ೧ ||
ಶಂಕರಾಭರಣ ತ್ರಿವುಡೆತಾಳ
ಆಗದಾಗದು ಮಗನೆ ನಮಗಾ | ನಾಗಶಯನನ ನಾಮವು |
ಈಗ ನುಡಿದಕ್ಷರಗಳಹಿತದ | ಭಾಗವಹುದು || ೧ ||
ಎನ್ನರಸನೆಯೊಳುದಯವಹುದೆ ಸು | ಪರ್ಣಗಮನನ ಕೀರ್ತಿಯಾ |
ರನ್ನನಾಮವೆ ಹೊರತು ಬಳಿಕೇ | ನನ್ನೆಲಾರೆ || ೨ ||
ಪರಮಪಾವನಮೂರ್ತಿ ಗಂಗಾ | ಧರನ ನೀ ಹರನೆನ್ನುತಾ |
ವರೆಯೆನಲು ಹರಿಯೆಂದು ಪೇಳಿದ | ಭರದೊಳಾತಾ || ೩ ||
ಭಾಮಿನಿ
ತರಳನೆಂದುದ ಕೇಳ್ದು ಖಳ ಹೂಂ |
ಕರಿಸಿ ಖಡ್ಗವನೆತ್ತಿ ಝಳಪಿಸು |
ತಿರದೆ ಬಳಿಕೆದ್ದಣುಗನಂಗಕ್ಕೊದೆದ ಖಾತಿಯಲಿ ||
ಧರೆಗುರುಳಿ ಪ್ರಹಲ್ಲಾದ ಹಾಶ್ರೀ |
ಹರಿಯೆ ನೀನೆ ಸಲಹೆನುತ್ತಲೆ |
ಮರುಗಿ ಮನದಲಿ ಬಳಿಕ ಸ್ಮರಿಸುತ್ತೀರ್ದ ಭಕ್ತಿಯಲಿ || ೧ ||
ವಾರ್ಧಿಕ್ಯ
ಮುನಿಗಳಿರ ಕೇಳಿರೈ ಕನಕಕಚ್ಚಪು ಘೋರ |
ದನುಜರೊಡನಿತ್ತ ತನ್ನಣುಗನಂ ವಧಿಸಲ್ಕೆ |
ಫಣಿಗಜಾದಿಗಳಿಂದ ಹನನವಾಗದಿರಲ್ಕೆ ವನಧಿಗಿಕ್ಕಲು ಬಾಲನೂ ||
ವನಜಾಕ್ಷ ಸಲಹೆಂದು ಮನ ಮರುಗಿ ನುತಿಸಲ್ಕೆ |
ಚಿನುಮಯನು ದಯದೋರೆ ದನುಜಸುತ ತಡಿಗಡರಿ |
ಕುಣಿಕುಣಿದು ನಡೆ ತಂದು ಜನಕನಂಘ್ರಿಯೊಳೆರಗಿ ಘನತೋಷದೊಳಗೆಂದನು || ೧ ||
ಸೌರಾಷ್ಟ್ರ ಅಷ್ಟತಾಳ
ತಾತ ನೀನಾದೆ ಸಂಪ್ರೀತಿಯೊಳ್ ಸಲಹಿದೆ | ತಾತ ಕೇಳು |
ಈಗ | ಖಾತಿ ಬಂದೇರಿತೆ ಘಾತಿಸೆ ಮನವಾತೆ | ತಾತ ಕೇಳು || ೧ ||
ಕುಲದ ಕೀರ್ತಿಗೆ ಮುಂದೆ ಬೆಳೆವ ವೃಕ್ಷವ ನಿಂದೆ | ತಾತ ಕೇಳ |
ನೀನು | ಕೊಲಿಸುವೆತ್ನವಗೈದೆ ನಳಿವಿಲ್ಲದೈತಂದೆ | ತಾತ ಕೇಳು || ೨ ||
ಏಸುಯೆತ್ನದಿ ನಿನ್ನ ನಾಶವಾದೆನೆ ಪೂರ್ಣ | ತಾತ ಕೇಳು |
ಮುಂದೆ | ವಾಸುದೇವನೆಯನ್ನ ಪೋಶಿಸದಿರ ಮುನ್ನ | ತಾತ ಕೇಳು || ೩ ||
ಕೇತಾರಗೌಳ ಝಂಪೆತಾಳ
ಇನ್ನು ಬಿಡು ನಿನ್ನ ಹರಿಯಾ | ಪ್ರಹಲ್ಲಾದ | ಮನ್ನಿಪುದು ಹರನ ಕೃಪೆಯಾ |
ಯೆನ್ನ ಮಾತೊಂದ ಕೇಳು | ಮುಂದೆ ಗುಣ | ರನ್ನ ನೀನಾಗಿ ಬಾಳು || ೧ ||
ಬಿಡೆನು ಬಿಡೆ ಹರಿಯನಾಮ | ಯೆನ್ನನೆಡೆ | ಬಿಡದಿಹನು ಶ್ರೀಲಲಾಮ |
ಪೊಡವಿಯೊಳು ಖಳರಸ್ತೋಮ | ಹತಿಸುವುದೆ | ದೃಢವೈಸೆ ಹರಿಯ ಪ್ರೇಮ || ೨ ||
ಎಲ್ಲಿಹನು ನಿನ್ನ ಪೊರೆವಾ | ಹರಿಯು ನಿ | ನ್ನಲ್ಲಿಹನೆ ಪೇಳು ನಿಜವಾ |
ನಿಲ್ಲದೀಕ್ಷಣ ತೋರ್ಪೆಯಾ | ತೋರಿದರೆ | ಕೊಲ್ಲುವೆನು ದೃಢ ನಿಶ್ಚಯಾ || ೩ ||
ಅಲ್ಲಿಯಿಲ್ಲ್ಯೆಂಬುದೇನು | ಹರಿ ಸರ್ವ | ರಲ್ಲಿ ತಾ ನೆಲಸಿರ್ಪನು |
ಯಿಲ್ಲ ಸಂಶಯವಾತನು | ಸ್ತಾವರದೊ | ಳೆಲ್ಲ ವ್ಯಾಪಿಸುತೀರ್ಪನು || ೪ ||
ಭೈರವಿ ಏಕತಾಳ
ಭಳಿರೆ ಭಳಿರೆಲೆ ಸುಕುಮಾರಾ | ಶಿರ | ವುಳಿಸುವ ಹರಿಯನುತೋರಾ |
ಯಿಳಿಸುವೆನಾತನ ಶೌರ್ಯ | ಮ | ತ್ತಿಳಿಸುವೆ ನಿನ್ನಯ ತಲೆಯಾ || ೧ ||
ತಾತನೆ ನಿನಗೀ ಮರುಳು | ಬರಿದ್ಯಾತಕೆ ಬಂತಿಂದಿನೊಳು |
ಆತನ ನೀನೀಕ್ಷಿಸಲು | ಪು | ಣ್ಯಾತುಮನಾಹೆಯೊಪೇಳು || ೨ ||
ನಂಬಿದ ಭಕ್ತರ ಪೊರೆವಾ | ವಿ | ಶ್ವಂಭರ ನೀ ಮುಂದಿರುವಾ |
ಕಂಭದೊಳಿಹನೇ ಪೇಳು | ನೀ | ನಂಬಿರೆ ತೋರಿದಿರಿನೊಳು || ೩ ||
ಭಾಮಿನಿ
ತೋರು ತೋರೀ ಕಂಭದೊಳು ನೀ |
ವೀರ ನಾರಾಯಣನ ನೆನಲು ಕು |
ಹರಿ ನೆಲಸೀರ್ಪನೆಂದನು ಭಕ್ತಿಭಾವದಲಿ ||
ಕ್ರೂರ ನಿಶಿಚರ ನಾಗಕಲ್ಪದ |
ಮಾರಹರನಂತೆದ್ದು ಘನ ಗಂ |
ಭೀರ ಧ್ವನಿಯಿಂದೊದದ ಕಂಭವನುಗ್ರಖಾತಿಯಲಿ || ೧ ||
ವಾರ್ಧಿಕ್ಯ
ದುರುಳ ನಿಂತೊದೆಯಲಾ ಚರಣ ಹತಿಗಂ ಸ್ತಂಭ |
ಭರದಿಂದಲೊಡೆದು ದುರ್ಧರ ಭಯಂಕರರೂಪ |
ವೆರದು ಶ್ರೀಹರಿಯು ನರಹರಿಯಾಗಿ ಮೈದೋರ್ದವರೆಯಲೇನದ್ಭುತವನು ||
ತ್ವರಿತದಿಂ ಪೊರಟು ಮುಂದಿರುವ ದೈತ್ಯನ ಸೀಳ್ದು |
ಕರುಳಮಾಲೆಯ ತನ್ನ ಕೊರಳೊಳಂ ಧರಿಸಿ ಮಿಗೆ |
ತರಳ ಪ್ರಹ್ಲಾದನಂ ಕರದಿಂದಲೆತ್ತಿಕುಳ್ಳಿರಿಸಲ್ಕೆ ಪ್ರಾರ್ಥಿಸಿದನೂ || ೧ ||
ಸರಾಗ || ಅಷ್ಟತಾಳ
ಸರಸಿಜಾಕ್ಷನೆ ನಿನ್ನ | ಚರಣ ಸೇವಕನೆನ್ನ | ನಿರತ ಉದ್ಧರಿಸೊ ಮುನ್ನಾ ||
ಶರಣಜನ ಸುರಧೇನು ಸಚರಾ | ಚರಭರಿತ ವಿಶ್ವಾತ್ಮ ಮುರಹರ |
ಗರುಡಗಮನ ಸುರೋರಗಾರ್ಚಿತ | ಹರಿಯೆ ರಕ್ಷಿಸು ದುರಿತನಾಶನ || ಸರಸಿ || ೧ ||
ಆದಿಮಧ್ಯಾಂತ್ಯದ | ಬೇಧವೇನೊದಗದ | ವೇದವಂದಿತ ವಿನೋದಾ ||
ಮೇಧಿನಿಗೆ ಸರ್ವಾಧಿಕಾರಣ | ನಾದ ನಿರತ ವಿನೋದ ಮಹಿಮನೆ |
ನೀ ದಯದೊಳೆನಗಾದೆ ದರ್ಶನ | ಹೇ ದಯಾಂಬುಧಿ ಪಾದಕೊಂದಿಪೆ || ಸರಸಿ || ೨ ||
ತಂದೆ ತಾಯಿಗಳಿಂದ | ಹೊಂದಿದೆ ನಿರ್ಬಂಧ | ಮಂದರಧರ ಗೋವಿಂದಾ |
ಸಿಂಧುಶಯನ ಮುಕುಂದ ನೀನೇ | ಬಂದು ಕಂಭದಿನಿಂದುಯನ್ನಯ |
ಬಂಧನವ ತೊಲಗಿಸಿದೆ ಪರಮಾ | ನಂದ ಮೂರುತಿಯಿಂದಿರಾಧವ || ಸರಸಿ || ೩ ||
ನೀಲಾಂಬರಿ || ಯೇಕ
ತರಳ ನೀನಂಜದಿರು | ನಿನ್ನೊಳು ಮೋಹ | ವೆರಸಿ ಬಂದಿಹೆನಿದಿರು |
ನಿರತ ಧ್ಯಾನಿಸುತಲಿರು | ಮುಂದಕೆ ಮುಕ್ತಿ | ದೊರಕಿಪೆನೆನ್ನಸೇರು || ೧ ||
ಶೋಣಿತ ಪುರವರದಿ | ಪಟ್ಟವನಾಳಿ | ನೀನಿರು ಸೌಭಾಗ್ಯದಿ |
ದಾನವರನು ಧರ್ಮದಿ | ಪಾಲಿಸು ಮುದ್ದು | ನಾನಿಹೆ ನಿನ್ನಾತ್ಮದಿ || ೨ ||
ವಾರ್ಧಿಕ್ಯ
ನರಹರಿಯು ಸಂತೋಷ ಶರಧಿಯೊಳ್ ಭಕ್ತನಹ |
ತರಳ ಪ್ರಹಲ್ಲಾದನಂ ಕರದಿಂದಲೆತ್ತಿ ಕು |
ಳ್ಳಿರಿಸಿ ಶೋಣಿತ ಪುರದ ಮೆರವ ಪಟ್ಟವನಾಗ ವಿರಚಿಸಿದನುತ್ಸವದೊಳು ||
ಮರುಗುತಿಹ ನಾರಿಯರ ನೆರವಿಯಂ ಸಂತೈಸಿ |
ಧರಣಿಯೊಳ್ ಸತ್ಕೀರ್ತಿಧರಿಸಿ ನೀನಾಳೆಂದು |
ಹರಸಿ ಮಿಗೆ ಹರುಷದಿಂ ತೆರಳಿ ರಂಜಿಸಿದನಾ ನರಹರಿಯು ವೈಭವದೊಳು || ೧ ||
ಬಲಿಚಕ್ರವರ್ತಿ – ವಿಂದ್ಯಾವಳಿ – ವಾಮನ
ಭಾಮಿನಿ
ಮಿತ್ರನುದಯದೊಳೊಂದಿವಸ ಹರಿ |
ಭಕ್ತನಹ ಪ್ರಹಲ್ಲಾದನೆಂಬನ |
ಪೌತ್ರನಾ ಬಲಿಚಕ್ರವರ್ತಿಯು ಪರಮ ವೈಭವದಿ ||
ನಿತ್ಯನಿಯಮವನೆಸಗಿಮನದೊಳು |
ಚಿತ್ತಜಯ್ಯನ ಪದವ ಧ್ಯಾನಿಸು |
ತುತ್ತಮಾಸನವೇರಿ ಬಳಿಕಿಂತೆಂದನತಿಮುದದಿ || ೧ ||
ಕಾಂಬೋಧಿ ಝಂಪೆತಾಳ
ಆದಿತಿಯಾತ್ಮಜರು ಹುಲು ತ್ರಿದಶಾದಿ ವರ್ಗದಿತಿ |
ಸುದತಿಯಣುಗರು ನಾವು ಜಗದಿ ||
ಉದಧಿ ಮಥನದ ಕಾರಣದಿ ಹಗೆಯು ಸಹಿತುದಿಸಿ |
ಮುದವೆ ಸುರತತಿಗಾಯ್ತು ದಿವದಿ || ೧ ||
ಹಿರಿಭಾಗ ನಮ್ಮಸುರ ನೆರವಿ ಮತ್ತನಿಮಿಷರ |
ಶರಧಿಕಿರಿ ವರ್ಗವಿದು ವಿವರಾ ||
ಸುರಗದ್ದುಗೆಯನೇರಿ ಮೆರೆಯುವಧಿಕಾರ ಹರಿ |
ಮರಸುತ್ತಲಿಹನು ಮೈದೋರಿ || ೨ ||
ಸೊಕ್ಕಿದನಿಮಿಷರ ಮುರಿ |
ದಿಕ್ಕಬೇಕೆಂದು ಕೈಯಿಕ್ಕಿದೆನು ಪೋಗಿ ಸಂಗರದಿ ||
ರಕ್ಕಸಾರಿಯ ಸೂತ್ರ ಮಿಕ್ಕಿ ಪೋದುದು ಮುಂದೆ |
ತಕ್ಕು ಪಾಯವ ಕಾಣೆ ಮನದಿ || ೩ ||
ಧರೆಯಮರನಾಗಿ ಸುರ | ರೆರೆಯನೈ ತಂದೆನಗೆ |
ಕರವ ಮುಗಿದೆಂದ ವಾಂಛಿತಕೆ ||
ಹರಿಯ ಕಾರುಣ್ಯದಲಿ ದೊರೆತಧರ್ಮದ ಗುಣವ |
ನೆರೆದಿತ್ತೆ ಧಾರೆ ಬೇಡಿದಕೆ || ೪ ||
ಸ್ವರ್ಗದಧಿಕಾರ ನ ಮ್ಮಗ್ರಭಾಗಕೆ ಬರಲು |
ಶೀಘ್ರದಲಿ ವಿಶ್ವಜಿತು ಮಖವ ||
ಭಾರ್ಗವನ ಮತವನು ಪರಿಗ್ರಹಿಸಿ ಗೈದಮರ |
ವರ್ಗಗೆಲಿದೆಳದೆ ಸುರಪುರವಾ || ೫ ||
ಸುರಪತಿಯ ಸೌಭಾಗ್ಯ | ಸ್ಥಿರಗೊಳಿಸಬೇಕೆಂದು |
ಗುರುಮತದೊಳೆಸವ ನರ್ಮದೆಯಾ ||
ಸರಿಸದೊಳು ಶತಕೃತುವ | ವಿರಚಿಸುವ ನಿರ್ಧರದಿ |
ಧರಿಸುವೆನು ಧೀಕ್ಷೆಯಿದು ಕಾರ್ಯ || ೬ ||
ಮಧುಮಾಧವಿ ತ್ರಿವುಡೆತಾಳ
ಇತ್ತ ಚಿನ್ಮಯನದಿತಿಗವತರಿ | ಸುತ್ತ ವಾಮನನೆಂದೆನುವ ಪೆಸ |
ರೆತ್ತಿ ದ್ವಿಜವಟುರೂಪದಲಿ ಮೆರ | ವುತ್ತ ಯೋಚಿಸುತೆಂದನು | ಯುಕ್ತಕಾರ್ಯ || ೧ ||
ಭಕ್ತರಲಿ ಮೆರದೀರ್ಪ ಪರಮ ಪ | ವಿತ್ರಗುಣ ಪ್ರಹಲ್ಲಾದನೆಂಬನ |
ಪೌತ್ರನಹ ಬಲಿಯೆನುವ ಖಳ ಮೆರ | ವುತ್ತಲಿಹ ಸೌಭಾಗ್ಯದ | ಮತ್ತನಾಗಿ || ೨ ||
ಛೇದಿಸಲು ಬೇಕವನ ಗರ್ವವ | ನಾದರಾತನ ಕೊಲ್ಲದುಳಿಸುವ |
ಹಾದಿಯಿದಕೇನೆಂದು ಪೊರಟು ವಿ | ನೋದದಲಿ ನಡೆತಂದನು | ವೇದಮಯನು || ೩ ||
ಭಾಮಿನಿ
ಸರಿಸಿಜೋಪಮವದನ ವಿಸ್ಮಯ |
ಕಿರುನಗೆಯ ರಂಜಿಸುವ ತುಳಸೀ |
ಸರದಿ ರಾಜಿಪ ಕಂಠದೇಶದೊಳೆಸವ ಮಂಗಲದಿ ||
ಮೆರವ ದ್ವಾದಶನಾಮ ವಾಮದ |
ಕರದಿ ಪಿಡಿದಿಹ ಛತ್ರದಕ್ಷಿಣ |
ಕರದೊಳಗೆ ದಂಡವನು ಧರಿಸುತ ಬಂದನತಿ ಭರದಿ || ೧ ||
ನೆರೆವಿರಾಜಿಪ ವಾಮನನ ಬರ |
ವರಿತು ವೈರೋಚನಿಯು ಹರುಷದಿ |
ತ್ವರಿತದಿಂದಿದಿರೈದಿ ಕರತಂದಧಿಕ ಭಕ್ತಿಯಲಿ ||
ಸುರಚಿರಾಸನವಿತ್ತುವಟುವಿನ |
ಚರಣ ಪೂಜಾದಿಗಳ ನೆಸಗುತ ಶಿರದಿ |
ತೀರ್ಥವ ಧರಿಸಿ ಮಗುಳಿಂತೆಂದನೊಲವಿನಲಿ || ೨ ||
ಸಾಂಗತ್ಯ ರೂಪಕತಾಳ
ಎಲೆ ಮಹೋತ್ತಮನೆ ನೀ | ನಿಳಿದುದೆಲ್ಲಿಂದಲೀ | ಸ್ಥಳದೆಡೆಗಾಗಿ ತೇಜದಲಿ ||
ನೆಲೆಯಲ್ಲಿ ನಿನಗೀರ್ಪ || ಲಲಿತ ನಾಮವದೇನು | ತಿಳುಹಿಸೆನ್ನೊಡನೆ ಪ್ರೀತಿಯಲಿ || ೧ ||
ಕಾಂಬೋಧಿ ಝಂಪೆತಾಳ
ಸ್ಥಿರವಿಲ್ಲ ನೆಲೆಯೆನಗೆ | ಚರಿಸುವೆನು ಕಂಡೆಡೆಗೆ | ಕಿರಿಯವಾಮನನೆಂಬರೆನಗೆ ||
ತುರಗಮೇಧವ ನೀನು || ವಿರಚಿಸುವೆನೆಂಬುದನು | ಅರಿತು ಬಂದವನೈಸೆ ನಾನು || ೧ ||
ಸಾಂಗತ್ಯ ರೂಪಕತಾಳ
ತುರಗಮೇಧಕೆ ನಿನ್ನ | ದೊರಕಿದ ದರ್ಶನ | ಪರಮ ಭಾಗ್ಯೋದಯವೆನ್ನಾ ||
ವಿರಚಿಸಿದೆಯ ಸ್ನಾನ | ತ್ವರಿತವು ಭೋಜನ | ದಿರವೈಸೆಯೆನಲೆಂದ ಹದನಾ || ೧ ||
ಕಾಂಬೋಧಿ ಝಂಪೆತಾಳ
ಧರೆಯಪಾವನೆ ಗಂಗೆ | ದುರಿತನಾಶಿನಿ ಯಮುನೆ | ವರನರ್ಮದಾದಿ ನದಿಗಳನು ||
ನಿರತ ಸಂಚರಿಸುತಿಹೆ | ಸ್ಥಿರದ ಜವೆನಗಿಲ್ಲ | ವಿರಚಿಸದೆ ಸ್ನಾನ ತೊರದಿಹೆನೂ || ೧ ||
ಸಾಂಗತ್ಯ ರೂಪಕತಾಳ
ಉದಯ ಕಾಲದಿ ನಿತ್ಯ | ವಿಧಿ ಜಪಾದಿಗಳನ್ನು | ಬುಧರೆಸಗಲು ಬೇಕೀ ವಿಷಯ ||
ವದಗಿಸಿದೆಯ ನೀನಿ | ನ್ನದು ಲೋಪವಿರಲು ಬೇ | ಗದಲಿ ಮಾಳ್ಪುದು ಮಹಕಾರ್ಯ || ೧ ||
ಕಾಂಬೋಧಿ ಝಂಪೆತಾಳ
ಶರಧಿ ಮೇರು ಹಿಮಾದ್ರಿ | ಹರನಗಿರಿ ಶೇಷಾದ್ರಿ | ಚರಿಸಿ ಬಳಲುವೆನು ದಿನದಿನದಿ ||
ವರಜಪಾನ್ಹಿಕದ ವಿಧಿ | ವಿರಚಿಸೆ ನಿರಾಶ್ರಯದಿ | ತೊರದೆನೀತನಕ ಬೇಸರದಿ || ೧ ||
ಕಂದ ಪದ್ಯ
ಇನಿತೆಂದುದನಾಲೋಚಿಸಿ |
ದನುಜಾಧಿಪ ವೈರೋಚನಿ ತಾನಾಗಂ ವಾ |
ಮನ ನೀನೇಕೈದಿಹೆ ಮನ |
ದೆಣಿಕೆಯೊಳಿದ್ದುದಪೇಳೆನಲಾ ವಟು ನುಡಿದಂ || ೧ ||
ಕೇತಾರಗೌಳ ಅಷ್ಟತಾಳ
ಚಿತ್ತವಿಸೆಲೆ ಚಕ್ರವರ್ತಿ ನೀ ನುಡಿಯಾ | ಚಿತ್ತಜಯ್ಯನ ಪಾದಭಕ್ತ ನೀನಹೆಯಾ ||
ಧಾತ್ರಿಯೊಳ್ನಿನ್ನ ಪ್ರಶಸ್ತಕೀರ್ತಿಯ ಶ್ವೇತ | ಛತ್ರವೆಂದೆನುತ ವಿಚಿತ್ರದ ರವಿಯು ಮೇ |
ಲೆತ್ತಿ ಬಂದಿಹ ಕಾಂತಿಯಾ | ನೋಡಿದೆನು ನೀ | ವರ್ತಿಸುವಶ್ವಸೂಯಾ ||
ಪೂರ್ಣಾಹುತಿ | ಯೊತ್ತುವ ವಾರತೆಯ | ನಾನರಿತು ಮೇ |
ಣಿತ್ತ ಬಂದೆನು ಭಿಕ್ಷೆಯಿತ್ತೆನ್ನ ಕಳುಹಯ್ಯ || ೧ ||
ವರ ವಿಪ್ರವಟು ನಿನ್ನ ಚರಣ ಸಂದರ್ಶನ | ದೊರಕಿಹುದದರಿಂದ ದುರಿತವೆ ಹರಿದಂದ ||
ಹರುಷಾಬ್ಧಿಯೊಳು ಸ್ನಾನವೇ | ಗೈದಂತಾಯ್ತು | ಭರಿತ ದಾನಗಳ ನೀವೆ | ಧನ ಧಾನ್ಯಾದಿ |
ಗಿರಿಯ ನಾ ನೆರಹಿರುವೆ | ಸ್ವೀಕರಿಸುವ ನಿ | ನ್ನಿರವ ಬೇಗೆನೆ ವಟು ವರನೆಂದನಾಗಲೇ || ೨ ||
ಕೇತಾರಗೌಳ ಅಷ್ಟತಾಳ
ಲೇಸನಾಡಿದೆ ದನುಜೇಶ ನಿನ್ನಯ ಧನ | ರಾಶಿಯ ದಾನವಿನ್ನು |
ದೇಶ ಸಂಚರಣೆಯ ಭೂಸುರನಹೆ ದ್ರವ್ಯ | ದಾಶೆಯಿಲ್ಲೆನಗೆಂದನು || ೧ ||
ಧಾರುಣೀಸುರ ನಿನ್ನ ವಾರತೆಯಿದು ಚೋದ್ಯ | ತೋರುವುದಾದರಿನ್ನು |
ಚಾರು ಮಕುಟರತ್ನಹಾರಾದಿ ವಸ್ತುವ | ಧಾರೆಯ ನೆರದೀವೆನು || ೨ ||
ಸತ್ಯವಾಗಿಹುದು ನೀನೆತ್ತುತೀಯುವ ಸುಪ | ವೀತ್ರ ಭೂಷಣಗಳೆಲ್ಲ |
ಪೃಥ್ವಿಪ ನಾನಲ್ಲ ಪತ್ನಿಯಳೆನಗಿಲ್ಲ | ವ್ಯರ್ಥವಿದಾಹುದಲ್ಲ || ೩ ||
ಯೇನು ಚೋದ್ಯವಿದೈಸೆ ನೀನೇನ ಬಯಸಿದೆ | ನಾನೇನು ಕೊಡಲಿಂದಲಿ |
ಶ್ರೀನಿವಾಸನಭಕ್ತನಾನಹೆ ನಿನಗಹು | ದೇನದನುಸುರೆನ್ನಲಿ || ೪ ||
ಭಾಮಿನಿ
ಜನಜನೇತ್ರವ ತೆರದೊಳಿಹೆ ನೀ |
ಚೆಲುವ ವಾಮನಮೂರ್ತಿ ಬಂದೆಯ |
ತಿಳಿಯಲೆನ್ನಯ ಪುಣ್ಯವಿಂದಿನೊಳತಿಥಿ ಭಾವಿಸಲು ||
ಯೆಲೆ ಮಹಾವಟು ನಿನ್ನ ನುಡಿಯಲಿ |
ಸಲೆ ಚಮತ್ಕೃತಿಯಿಹುದು ವಾಂಛಿತ |
ತಿಳುಹಿದಡೆ ನಾನೀವೆನೆನೆಸತಿಯೆಂದಳೆರೆಯನೊಳು || ೧ ||
ಆನಂದಭೈರವಿ ಏಕತಾಳ
ಪ್ರಾಣಕಾಂತೆಯೇನೀದಿಂತ | ನ್ಯೂನ ಪಂಥದಾನವೆಂತ |
ಕ್ಷೋಣಿಯಲ್ಲಿ ಕಾಣೆನಿಂತ | ಮಾನವಂತನಿವನೆ ಭ್ರಾಂತ || ೧ ||
ಕನಕ ರತ್ನಾಭರಣಗಳನು | ತನಗೆ ಬೇಡೆಂದೆನುತಲಿಹನು |
ಯಿನಿತು ಪೇಳ್ವರುಂಟೆ ನೀನು | ಮನದಿ ಗ್ರಹಿಸುಚೋದ್ಯವಿದನು || ೨ ||
ಗುರುವು ಪೇಳ್ದುದರಿತೆ ನಿಂದು | ಹರಿಯೆ ನಮ್ಮನರಿಯಲೆಂದು |
ತಿರುಕನಾಗಿ ದೊರವನೆಂದು | ಅರಿಯೆನಿವನ ಸ್ಥಿರವಾರೆಂದು || ೩ ||
ಸುರಪಗಿತ್ತೆ ಭರಿತಗುಣವ | ಬರಿದೆ ಕಳದೆ ನಿರತ ಸುಖವ ||
ತೆರುವದೆಲ್ಲ ತೊರೆಯುತ್ತಿರುವ | ಕಿರಿಯ ಕೀರ್ತಿತಿರುಕನೆನುವ || ೪ ||
ಕೇತಾರಗೌಳ ಝಂಪೆತಾಳ
ಸರಸಿಜಾಂಬಕಿಯೆ ಚದುರೆ | ನೀನೆನ್ನೊ | ಳೊರದ ನುಡಿಧಿಟವಾದರೆ |
ಹರಿ ನಮ್ಮ ಪರಿಕಿಸಿದರೆ | ನಿನಗೆನಗೆ | ಹರುಷವೇನಿಹುದು ಬೇರೆ || ೧ ||
ಧಿಟವೈಸೆ ನಿನ್ನ ಮಾತು | ಪಿಂತೆ ಸುರ | ಕಟಕಾಧಿಪನೊಳು ಸೋತು |
ಘಟಿಸಿರುವ ಭಾವಮರತು | ಯಿಂದಿವನ | ವಟುವೆಂದು ನಂಬಲೆಂತು || ೨ ||
ಗಜಗಮನೆ ನಮ್ಮೊಳೇನು | ಹಗೆಯಿಹುದು | ಭುಜಗಶಯನನಿಗರಿಯೆನು |
ಭಜಕರಲ್ಲವೆ ನಮ್ಮನು | ಮೋಸದಿಂ | ದಜಪಿತನು ಕೆಡಿಸನಿನ್ನು || ೩ ||
ಯೇನೀಯಲೊಲ್ಲದಿರಲು | ಮತ್ತಿವನಿ | ಗೇನೆಮ್ಮೊಳಿಹುದು ಕೊಡಲು |
ನೀನರಿತು ನೋಡೀತನು | ದ್ವಿಜರ ವಟು | ತಾನಲ್ಲಧಿಟವೆಂಬೆನು || ೪ ||
ಇಚ್ಛೆಯಾದುದ ನೀಯದೆ | ನಾವೀರ್ದ | ಡಚ್ಚುತನ ಭಕ್ತರಹುದೆ |
ಸಚ್ಚಿದಾನಂದನಹುದೆ | ಯಾರಾದ | ಡುಚ್ಚರಿಸಲೆಮಗೇನಿದೆ || ೫ ||
ಪತಿಪರಾಯಣೆ ನಿನ್ನೊಳು | ನುಡಿದುದಕೆ | ಖತಿಯ ತಾಳದಿರೆನ್ನೊಳು |
ಅತಿಥಿಯಿಚ್ಛೆಯ ನೀಡಲು | ನೀನೆಮನ | ಧೃತಿಯರಿತು ನಡಸೆಂದಳು || ೬ ||
ಕಂದಪದ್ಯ
ಬಲಿವಿಂದ್ಯಾವಳಿಯರ ಮನ |
ವಳುಕಿನ ನುಡಿಯಂ ಕೇಳುತ ವಾಮನನಾಗಂ |
ಮುಳಿದವರಂತುಸುರಿದ ನಿಂ |
ನೊಳಗೇನನು ಕೇಳೆನು ಪೋಗುವೆನೆನಲೆಂದಂ || ೧ ||
ಕೇತಾರಗೌಳ ಅಷ್ಟತಾಳ
ಪೋಗದಿರಲೆವಟುಯಾಗಮಂದಿರದಿಂದ | ಈಗ ನಿನ್ನಭಿಮತವಾ |
ಸಾಗಿಸುವೆನು ಧಿಟ ನಾಗಶಯನನಾಣೆ | ಬಾಗುವೆ ನೀ ಶಿರವಾ || ೧ ||
ಪರಿಕಿಸಿದರೆ ನಿನ್ನ ತಿರುಕನಲ್ಲೆಂಬುದ | ನರಿತೆ ನಾನಾದರಿನ್ನು |
ಸರಸಿಜಭವನಾಗು ಗಿರಿಜೆಯಧವನಾಗು | ಹರಿಯಾಗುಬೇಡೆಂದನು || ೨ ||
ಭಾಮಿನಿ
ಪಾರಮಾರ್ಥಿಕವಿರಲು ನಿನ್ನಲಿ |
ಬೇರೆ ಮತವೇನಿಲ್ಲವೆನ್ನಲಿ |
ಮೂರಡಿಯಧಾರುಣಿಯ ಕೊಡುಯೆನಲಧಿಕ ಹರುಷದಲಿ ||
ವಾರಿಜಾಕ್ಷನನೆನೆದು ಮನದಲಿ |
ನಾರಿವಿಂದ್ಯಾವಳಿಸಹಿತಬಲಿ |
ಧಾರೆಯೆರದನು ಹರಿಯೆ | ನಿನಗರ್ಪಿತವಿದೆನ್ನುತಲಿ || ೧ ||
ಸೌರಾಷ್ಟ್ರ ತ್ರಿವುಡೆತಾಳ
ಭರದಿವಟು ವರವಿಶ್ವರೂಪವ | ಧರಿಸಿ ವೈರೋಚನಿಯ ಸರಿಸದಿ |
ಸ್ಥಿರವೆನಿಸಿ ರಂಜಿಸಿದ ನಿನ್ನೇ | ನೊರೆಯಲಿಹುದು || ೧ ||
ಧಾರುಣಿಯೊಳಿಡುತೊಂದಡಿಯ ಮೇ | ಲೂರಿ ವ್ಯೂಮದೊಳೊಂದು ಪಾದವ |
ತೋರು ತೋರಿನ್ನೊಂದಡಿಯ ಸ್ಥಳ | ಭೋರನೆನಲು || ೨ ||
ಅರಿತೆ ನೀನ್ಯಾರೆಂದು ಮನದಲಿ | ಪರಮಪಾವನ ಮೂರ್ತಿಯೆನ್ನಯ |
ಶಿರದೊಳಿಡು ಪದವೆಂದು ಮಣಿದನು | ಕರವ ಮುಗಿದು || ೩ ||
ಭಾಮಿನಿ
ಸಿರಿಯರಸನುರು ಚರಣ ಸೋಂಕಿದ |
ಭರಕೆ ಬಲಿಯು ರಸಾತಳಾಗ್ರಕೆ |
ಸರಿದು ಮೆರದನನಂತತೇಜದ ಭಕ್ತಿಭಾವದಲಿ ||
ಮೆರವ ಸೌಭಾಗ್ಯಗಳ ಬಲಿಗನ |
ವರತ ಸ್ಥಿರಗೊಳಿಸುತ್ತ ಮುರಹರ |
ಧರೆಗೆ ಲೀಲೆಯ ತೋರಿನಿಂದನು ಬಲಿಯ ಬಾಗಿಲಲಿ || ೧ ||
ಕಾರ್ತಿವೀರ್ಯ – ಭಾರ್ಗವ
ಭಾಮಿನಿ
ತಾಪಸರು ಚಿತ್ತವಿಸಿ ಕಥೆಯ ಕ |
ಲಾಪವನು ವಿಸ್ತರಿಪೆನುಬ್ಬಿದ |
ಭೂಪರನು ಸದೆಬಡಿಯ ಬೇಕೆಂದೆನುತ ಹರುಷದಲಿ ||
ತಾಪಸಾನ್ವಯ ಕುಲದೊಳುದಿಸಿ ಪ್ರ |
ತಾಪ ಸನ್ನಿಭ ಭಾರ್ಗವಾಖ್ಯೆಯ |
ತಾ ಪಡದು ಮೆರದೀರ್ದ ಶ್ರೀಹರಿ ಪರಮತೇಜದಲಿ || ೧ ||
Leave A Comment