|| ಶ್ರೀ ಶಾರದಾಂಬಾಯೈ ನಮಃ ||
ಯಕ್ಷಗಾನ ದಶಾವತಾರವೆಂಬ ಪ್ರಸಂಗವು

ರಾಗ ಶ್ರೀ || ಯೇಕ
ನಮೋ ವಿದ್ಯಮಾತೆ | ಹೇ ಮಾತೆ | ನಮೋ ಭಾಗ್ಯದಾತೆ ||
ಶಕ್ತಿ ಕಲಾನ್ವಿತೆ | ಮುಕ್ತಿಯನೀಯುತೆ | ಭಕ್ತರ ಪಾಲಿತೆ | ಪೃಥ್ವಿಗೆ ಲಲಿತೆ || ನಮೋ || ೧ ||

ಮಾಯಾವಿನೋದಿತೆ | ತೋಯಜ ಭವ ಹಿತೆ |
ಗಾಯನ ಶೋಭಿತೆ | ಪ್ರೀಯದ ಮಾತೆ || ನಮೋ      || ೨ ||

ಧ್ಯಾನವನೀಯುತ | ಜ್ಞಾನದೊಳೊಲಿಯುತ | ಕಾಣಿಸು ಕವಿತಾ
ಶ್ರೇಣಿಯ ಸಂತತಾ || ನಮೋ       || ೩ ||

ಭಾಮಿನಿ

ಗೌರಿ ಭಾರತಿ ಲಕ್ಷ್ಮಿ ಶಿವ ವಿಧಿ |
ಮಾರಪಿತ ದಿಕ್ಪಾಲ ಗಜ ಮುಖ |
ನಾರದಾದಿ ಮುನೀಂದ್ರ ಮುಖ್ಯರಿಗೆರಗಿ ಪ್ರಾರ್ಥಿಸುತಾ ||
ವಾರಣಾರಿ ವರೂಥೆ ಖಳ ಸಂ |
ಹಾರೆ ಮಹದುರ್ಗಾಂಬಿಕೆಯ
ಪಾದಾರವಿಂದಕೆ ಮಣಿದು ವರ್ಣಿಪೆನೀ ಮಹಾಚರಿತಾ  || ೧ ||

ಸೌರಾಷ್ಟ್ರ | ತ್ರಿವುಡೆ

ಸೂತಮುನಿ ನೈಮಿಷವನದಿ ಸಂ | ಪ್ರೀತಿಯಲಿ ಶೌನಕರಿಗನುಪಮ |
ನೂತನದಿ ಭಾಗವತ ಕಥೆಯ | ನ್ನೋತು ತಿಳುಹೆ      || ೧ ||

ಎಲೆ ಮಹೋತ್ತಮ ಲಾಲಿಸಾ ಮಹ | ಜಲಜನಾಭನ ಪೂರ್ಣ ಚರಿತೆಯ |
ಜಲಧಿ ಸ್ನಾನದಿ ಧನ್ಯರಾದೆವು | ತಿಳುಹಲೇನು          || ೨ ||

ಮಾಧವನು ಮನವಲಿದು ವರ ಮ | ತ್ಸ್ಯಾದಿ ಪತ್ತವತಾರದಿಂದಲಿ ||
ಮೇದಿನಿಯೊಳುದ್ಭವಿಸಿ ಗೈದ ವಿನೋದ ಕಥೆಯಾ      || ೩ ||

ವಿಸ್ತರಿಪುದಿನ್ನೊಮ್ಮೆ ನಮಗೆನು | ತರ್ಥಿಯಲಿ ಬಿನ್ನವಿಸೆ ಸೂತನು |
ಚಿತ್ತಜಯ್ಯನ ನೆನದುಸೂರ್ದ ಪ | ವಿಪ್ರ ಕಥೆಯಾ       || ೪ ||

 

ದೇವೇಂದ್ರ – ಮಹಾವಿಷ್ಣು

ವಾರ್ಧಿಕ್ಯ

ಚಿತ್ತವಿಸಿ ಮುನಿವರರು ವಿಸ್ತರಿಪೆ ಸತ್ಕಥೆಯ |
ವೃತ್ರಾರಿ ನಾಕದೊಳು ಮಿತ್ತನುದಯದೊಳಮಲ |
ನಿತ್ಯನಿಯಮವನೆಸಗಿ ರತ್ನಮಯ ವಿಷ್ಠರದೊಳಿತ್ತ ತಾನೋಲಗವನು ||
ಸಪ್ತದಿಕ್ಪಾಲರು ಸಮಸ್ತರಿಹ ಮಧ್ಯದೊಳ್ |
ವೃತ್ತಕುಚೆಯರ ಚೆಲ್ವ ನರ್ತನವ ನೀಕ್ಷಿಸುತ |
ಪೊತ್ತು ತೋಷವನು ಸುಪವಿತ್ರ ಸಭೆಯಿದಿರಿನೊಳ್ ಬಿತ್ತರಿಸಿದಂ ಸುರಪನು        || ೧ ||

ಕಾಂಬೋದಿ || ಝಂಪೆ

ಕೇಳಿರೈ ದಿಗಧಿಪರು ಪೇಳುವೀ ನುಡಿಯ ನ | ಮ್ಮಾಳಿಕೆಯ ನಾಕನಗರಿಯಲಿ ||
ನೀಲಕಂಠನ ದಯವ ನೋಲೈಸುತೀವರೆಗೆ | ಬಾಳಿದೆವು ಸುಖದ ಸೊಭಗಿನಲಿ    || ೧ ||

ಭೂತಳದೊಳೋರ್ವ ವಿಖ್ಯಾತನಹ ತಮನೆಂಬ | ಯಾತುಧಾನನು ಹಿರಿಯ ಕುಲದಿ ||
ಭೀತಿಯಿಲ್ಲದೆ ನಮ್ಮನೋತು ಕಂಗೆಡಿಸುವನು | ಪಾತಕಿಯು ಮದದಿ ಹಗೆತನದಿ    || ೨ ||

ಮೇಧಿನಿಯೊಳಿಹ ಸಕಲ | ಕಾಧಾರಬಿಂಬವಹ | ವೇದಗಳನೈದಡಗಿಸಿಹನು ||
ಭೂದಿವಿಜರಿಂಗೆ ಕ | ರ್ಮೋದಯಕೆ ಬಲುಭಂಗ |
ಸಾಧಿಸಿದನಾ ತಮಾಸುರನು        || ೩ ||

ಆದ ಕಾರಣದಿಂದ | ಛೇದಿಸಲು ಬೇಕವನ | ಮಾಧವನ ಬಳಿಗೈದಿ ಬಹೆನು ||
ಭಾದೆಯಿಲ್ಲದ ತೆರದಿ | ಕಾದಿಹುದು ನೀವೆನುತ | ಲೋದಿ ತೆರಳಿದ ಸುರಾಧಿಪನು   || ೪ ||

ಭಾಮಿನಿ

ಸುರಪತಿಯು ವೈಕುಂಠ ಮಹ ಮಂ |
ದಿರದೆಡೆಗೆ ನಡೆತರಲು ಶ್ರೀಹರಿ |
ಮೆರೆದಿರಲು ಕಂಡೆರಗಿದನು ಕೈಮುಗಿದು ಭಕ್ತಿಯಲಿ ||
ಪರಮ ಕರುಣಾ ಶರಧಿ ಮುರಹರ |
ದುರಿತಹರ ಸಲಹೆಂದು ನುತಿಸಲು |
ಶಿರವನೆರೆಪಿಡಿದೆತ್ತಿ ಚಿನ್ಮಯನೆಂದ ವಿನಯದಲಿ        || ೧ ||

ಕೇತಾರಗೌಳ || ಅಷ್ಟತಾಳ

ಸುರಪಾಲ ಕೇಳ್ನಿನ್ನ | ಸಿರಿಯ ಸಾಮ್ರಾಜ್ಯದ | ಶರಧಿಯೆಂತಿಹುದೀಗಲು |
ಸುರರು ದಿಕ್ಪತಿಗಳೆಲ್ಲರು ಕ್ಷೇಮದಿಂದಲಿ | ಮರೆದುಕೊಂಡಿಹರೆ ಪೇಳು     || ೧ ||

ಹಿರಿಯ ಭಾಗಿಗಳೆಂದು ದುರುಳ ದೈತ್ಯರು ನಿಮ್ಮ | ಸುರಗದ್ದುಗೆಯನೇರಲು |
ಭರಿತ ವಿಕ್ರಮದಿಂದ ತೆರಳಿ ಬಂದರಿಗೆಲ್ಲ | ದೊರಕಿತು ಹಾನಿಗಳು        || ೨ ||

ಇಂದಿನೊಳೋರ್ವನೀ ಬಂದ ಕಾರ‍್ಯಗಳೇನು | ಕುಂದಿದೆ ವದನವಿನ್ನು |
ಬಂದುದೆ ಭಯವು ಪೇಳೆಂದೆನಲೆರಗಿ ಪು | ರಂದರ ನಿಂತೆಂದನು         || ೩ ||

ಭೈರವಿ || ಝಂಪೆತಾಳ

ಪರಮಪಾವನಮೂರ್ತಿ | ಹರಿಯೆ ನೀನೆನ್ನೊಡನೆ |
ಅರಿಯದವರೋಲೆಂದ | ಡೊರೆಯಲೇನಿನ್ನು  || ೧ ||

ಸೃಷ್ಟಿಯೊಳು ತಮ ದನುಜ | ಪುಟ್ಟಿ ಬೆಳೆದಿಹನೆಮ್ಮ |
ಪಟ್ಟಕೈತರೆ ಮುಂದೆ | ಬಟ್ಟೆಯೇನೆಮಗೆ       || ೨ ||

ಆದಕಾರಣದಿಂದ | ಛೇದಿಸುತ ಮುಂದೆಮಗೆ |
ಬಾಧೆಯಿಲ್ಲದ ತೆರದಿ | ಮಾಧವನೆ ಸಲಹು   || ೩ ||

ಶಂಕರಾಭರಣ || ತ್ರಿವುಡೆ

ಬೆದರದಿರು ಸುರರಧಿಪ ನಿಮ್ಮಯ | ಸದನ ಕೈತಹ ದುರುಳ ನಾ ||
ನಿಧನವೆಸಗುತಲೀವೆ ಸುಖಸಂ | ಪದವ ನಿಮಗೆ       || ೧ ||

ವೇದಗಳನೈದಬ್ಧಿಮಧ್ಯದೊ | ಳಾ ದುರುಳನಡಗಿರ್ಪನು ||
ಮೇದಿನಿಯೊಳಹ ಕಾರ‍್ಯಭಾಗಕೆ | ಬಾಧೆಯಹುದು      || ೨ ||

ವೇದ ಮಂತ್ರಳಡಗಿದರೆ ಕ | ರ್ಮೋದಯಕ್ಕತಿ ವಿಘ್ನವು ||
ಸಾಧಿಪುದು ಯಾಗಗಳನೆಸಗುವ | ಹಾದಿಯಿಲ್ಲ         || ೩ ||

ಕೆಲದಿನದೊಳೀ ಕಾರ‍್ಯವೆಸಗುತ | ನೆಲೆಯೊಳಿರಿಸುವೆನೆಲ್ಲವಾ ||
ಖಳನ ಭಯಬಿಡಿರೆಂದು ಸುರಪನ | ಕಳುಹೆ ಹರಿಯು  || ೪ ||

 

ತಮಾಸುರ-ಮತ್ಸ್ಯ

ಭೈರವಿ || ಝಂಪೆತಾಳ

ಶರಧಿ ಮಧ್ಯದೊಳೆಸೆವ | ಪುರದಿ ತಮನೆಂದೆನುವ |
ದುರುಳ ತಾನೋಲಗವ | ಮೆರೆದೆಂದ ವಿಭವ || ೧ ||

ಶತ್ರುಗಳು ಹಗೆತನದಿ | ಯಿತ್ತ ಬಾರದ ತೆರದಿ |
ವತ್ತಿಕ್ಷೇತ್ರವೆ ಶರಧಿ | ನಿತ್ತುದತಿ ಸುಖದಿ       || ೨ ||

ದಿತಿಯದಿತಿ ಸುತರು ಸಂ | ತತಿಯೊಂದೆ ಭಾವಿಸಲು |
ಗತಿಗೆಡಿಸಿದರು ನಮ್ಮ | ನತಿ ಮತ್ಸರದೊಳು || ೩ ||

ಬ್ರಂಹ್ಮ ಕ್ಷತ್ರಿಯರ ಶುಭ | ಕರ್ಮಕಾರ‍್ಯಾದಿಗಳು |
ನಿರ್ಮೂಲಗತಿಗಿಳಿದು | ದೊಮ್ಮೆ ಧಾತ್ರಿಯೊಳು        || ೪ ||

ವೇದಮಂತ್ರಾದಿಗಳ | ನೋದಿ ಭೂಸುರರಖಿಳ |
ರೀ ಧರೆಗೆ ಭೇದಗಳ | ಸಾಧಿಪರು ಬಹಳಾ    || ೫ ||

ಯಾಗ ಹೋಮಾದಿಗಳ | ಸಾಗಿಸಿದರದರ ಫಲ |
ಭೋಗಿಪರು ದಿಕ್ಪಾಲ | ರೀಗ ನಮಗಿಲ್ಲ        || ೬ ||

ನಿದ್ರಿಸುವ ಕಮಲಜನು | ಕದ್ದು ವೇದಗಳನ್ನು |
ಅಬ್ಧಿಯೊಳಗಿಟ್ಟಿಹೆನು | ಗೆದ್ದನೆಲ್ಲರನು          || ೭ ||

ಕಂದಪದ್ಯ

ಇನಿತು ತಮಾಸುರ ತನ್ನಯ | ಮನದೊಳು ಧೈರ‍್ಯವನೆಣಿಸಿದ ವೈರಿಗಳಿನ್ನೀ |
ವನಧಿಗೆ ಬರಲಾರಿಲ್ಲೆಂ | ದೆನುತಲೆ ಘನ ಗರ್ವದಿ ನಿಶಿಚರ ತಾ ಮೆರದಂ || ೧ ||

ಭಾಮಿನಿ

ಧರೆಯ ಭಾರವನಿಳಿಸಲೆಂದಾ |
ಹರಿಯು ಮತ್ಸ್ಯಾಕೃತಿಯ ಧರಿಸುತ |
ಶರಧಿಗಿಳಿದೈತಂದನಾ ಮಹದುರುಳನಿದ್ದೆಡೆಗೆ ||
ಪರಿಕಿಸುತ ಮತ್ಸ್ಯವ ತಮಾಸುರ ನರರೆ |
ಚೋದ್ಯವಿದೇನಿದೀ ಭೀ |
ಕರ ಮಹೋನ್ನತ ಪ್ರಾಣಿ ಬಂದುದ ಕಾಣೆನೀವರೆಗೆ     || ೧ ||

ಕೇತಾರಗೌಳ ಅಷ್ಟತಾಳ

ಹಿಡಿವೆನೀ ಮತ್ಸ್ಯವ ಬಿಡೆನೆಂದು ಮುಂದಡಿ | ಯಿಡಲು ಕಂಡಾಕ್ಷಣದಿ |
ಅಡಗುತ್ತ ಜಲದಡಿಗೊಡನೆ ಮೇಲಕೆ ಬಂದು ಹುಡುಕಲು ಜಲಮಧ್ಯದಿ     || ೧ ||

ದನುಜನೀಕ್ಷಿಸಿ ಬಂತೆಂದನುತ ಹತ್ತಿರಕೈದಿ | ಮನದೊಳಾಲೋಚಿಸುತಾ |
ವನಧಿಯೊಳಿಹ ಮತ್ಸ್ಯ ಗಣಗಳೀ ತೆರನಾಗಿ | ದಣಿಯುವದಿಲ್ಲೆನುತ       || ೨ ||

ಎಲೆ ಮತ್ಸ್ಯಾಧಿಪನೆನೀ ಜಲನಿಧಿಯೊಳಗಿಂತು | ಚಲಿಸುತ್ತ ಹುಡುಕಲೇನು |
ಯಿಳೆಯಿಂದಲೇನಾದರಿಳಿದು ಬಂದಿತ್ತಲು | ಮುಳುಗಿತೆ ಪೇಳೆಂದನು     || ೩ ||

ಆರು ನೀನೆಲೆ ಬಂದು ತೋರುವೆನೆನ್ನ ವಿಚಾರವೇನಿಂದಿನೊಳು |
ವಾರಿಧಿಯೊಳಗೆ ಸಂಚಾರಕೆ ಬೇರೊಂದು | ಕಾರಣವಿಹುದು ಕೇಳು        || ೪ ||

ಮಾರವಿ || ಯೇಕ

ವೇದಗಳನು ಕದ್ದೊ ದಿಹ ದುರುಳ ಖ | ಳಾಧಮನ್ಯಾರೆನುತಾ |
ಈ ದುರ್ಧರ ಶರದಾದ್ಯಂತ್ಯವ ನೆರೆ | ಶೋಧಿಸುವೆನು ನಿರತಾ  || ೧ ||

ಜಲದೊಳಗನುದಿನ ಚಲಿಸುವ ಪ್ರಾಣಿಗೆ | ಸಲಲೇಕೀ ವೇದಾ |
ಯಿಳೆಯಮರರ ಸಂಕುಲಕಲ್ಲದೆ ಬೇ | ರುಳಿದರಿಗೇನ್‌ವಾದ     || ೨ ||

ಆದಿಪ್ರಪಂಚದೊಳಾಧಾರವು ಚತು | ರ್ವೇದವೆಧಾತ್ರಿಯಲಿ |
ಸಾಧನವಿದ ಸಂಪಾದಿಸಬೇಕೆಂ | ದೈದಿದೆ ನಾನಿಲ್ಲಿ     || ೩ ||

ಶತಧೃತಿಯೆಂಬನ ಶ್ರುತಿತತಿಗಳ ತಂ | ದತಿಬಲ ನಾನಹೆನು |
ಮತಿಯುತ ನೀನ್ಯಾರತಿಶಯವಾಡಲು | ಮಥಿಸುವೆ ನಿನ್ನುವನು || ೪ ||

ಕಡು ಪಾತಕಿ ನಿನ್ನಡೆಯಿಹ ನಿಗಮವ | ಕೊಡುವೆಯ ಪೇಳ್ ಭರದಿ |
ಕೊಡದಿರೆ ನಿನ್ನನು ಮಡುಹುವೆನೀ ಮಹ | ಕಡಲೊಳಗೀ ಕ್ಷಣದಿ  || ೫ ||

ಹರಿವಿಧಿ ಮುಖ್ಯರಿದರಿದೆನ್ನನು ಸಂ | ಹರಿಸಲು ಸತ್ವದಲಿ |
ಚರಜಂತುವೆನಿನ್ನುರವ ಬಗಿವೆ ನೋ | ಡರೆ ಕ್ಷಣಮಾತ್ರದಲಿ      || ೬ ||

ಭಾಮಿನಿ

ಮೂರು ಮೂರ್ತಿಗಳೈದು ತೀ ಮಹ |
ಘೋರ ಶರಧಿಯ ನಡಿ ಮುಗುಚಿಮಿಗೆ |
ಚಾರು ಪಾದಕ್ಕೆರಗಿ ಬೇಡಿದರೀವನಲ್ಲಿನ್ನು ||
ಚೋರತನದಿಂದೈದಿನೀನಿ |
ವಾರಿಧಿಯ ಮಧ್ಯದಲಿ ವಿಕ್ರಮ |
ದೋರುವೆಯ ನಿಲ್ಲೆನುತ ಉಗ್ರದೊಳೊದದ ಮತ್ಸ್ಯವನು        || ೧ ||

ಸಾಕು ಸಾಕೀ ದುರುಳನೊಡನೆ ವಿ |
ವೇಕ ನೀತಿಯೊಳೆಂಬ ಮತಿ ||
ನ್ನೇಕೆನುತ ಸೀಳ್ದನು ತಮಾಸುರನೊಡಲ ನಿಮಿಷದಲಿ ||
ಆ ಕಮಲ ಲೋಚನನು ಶ್ರುತಿಗಳ |
ತಾಕರದೊಳಾಂತೈದುತಲಿ ಮಿಗೆ |
ಲೋಕ ರಕ್ಷಣೆಗಿರಿಸಿ ಮೆರೆದನು ಬಹಳ ಕೀರ್ತಿಯಲಿ    || ೨ ||

 

ಕೂರ್ಮ

ವಾರ್ಧಿಕ್ಯ

ವರ ಋಷಿಗಳಾಲಿಸಿರಿ ಸುರರಸುರರೊಂದಾಗಿ |
ಶರಧಿಯಂ | ಮಥಿಸೆ ಮಂದರಗಿರಿಯ ನೆಳ ತಂದು
ಶರನಿಧಿಯೊಳಿಳುಹಲ್ಕೆ ಜರಿದುದದು ಪಾತಾಳಕಿರದಾತು ಮಹಜಲದೊಳು ||
ಸರುವರೊಂದಾಗಿ ಮನ ಮರುಗಿ ಬೆಂಡಾಗಿ ಶ್ರೀ |
ಹರಿಯನಂ ಸಂನ್ನುತಿಸಲ ರಿತು ಕೂರ್ಮಾಕೃತಿಯ |
ಧರಿಸಿ ವಾರಿಧಿಯ ಬಳಿ ತೆರಳಿ ವದಗಿಹ ಕಾರ‍್ಯವರಿತೆಂದನಚ್ಚರಿಯೊಳು   || ೧ ||

ಸಾಂಗತ್ಯ || ರೂಪಕ

ಸುರರೊಂದು ಭಾಗ ದೈತ್ಯರು ವಂದು ಭಾಗ ವಿಂ | ತೆರಡ ಭಾಗಗಳೊಂದುಗೂಡಿ ||
ಶರಧಿಯ ಮಥಿಸೆ ಮಂದರಗಿರಿಯನು ತಂದು | ಯಿರಿಸಿದರಬ್ಧಿಯ ನೋಡಿ         || ೧ ||

ಶರಧಿಯೊಳ್ ಮುಳುಗಿತದ್ಗಿರಿಯು ಕಾಣಿಸದಾಗೆ | ಬರಿದಾತು ಸುಧೆಯಬ್ಧಿ ಮಥನಾ ||
ಸರುವರಿಂಗಿಹ ಗರ್ವ ಮುರಿದುದಿಂದಿಗೆ ಯೆನ್ನ | ಸ್ಮರಿಸುವರಿದು ಚೋದ್ಯ ಹದನಾ || ೨ ||

ತಾಮಸೀ ಚರರ ನಿರ್ನಾಮವನೆಸಗಿ ಸು | ತ್ರಾಮ ಮುಖ್ಯರನೆಲ್ಲ ಪೊರೆದು ||
ಕಾಮಿತವೀಯಲೀ ನೇಮಕಿತ್ತಂಡದ | ಸ್ತೋಮ ವಂದಾಗಿರಲರಿದು        || ೩ ||

ವನಧಿಯೊಳಮೃತ ಸಂಜನಿಸಿದ ಮೇಲೆ ನಾ | ನುಣಿಸುವೆ ಮನ ಬಂದ ತೆರದಿ ||
ಘನ ಕಾರ‍್ಯದೊಳಗಿಂದು ದಣಿಸಲಾಗದುಯೆಂದು | ಚಿನುಮಯ ನುಡಿದ ಸಂತಸದಿ || ೪ ||

ಮಂದರಾದ್ರಿಯನೆತ್ತಿ ಮುಂದೆ ಕಾಣಿಸದಿರೆ | ಸಿಂಧುಶಯನನೆಂಬ ಬಿರಿದು ||
ಕುಂದಿ ಪೋದಪುದು ತನ್ನಿಂದಾಹ ಕಾರ‍್ಯವ | ನಿಂದೆಸಗುವೆನು ತಾನೊಲಿದು        || ೫ ||

ಬೇರೊಬ್ಬರಿಂದಲೀ ಘೋರ ಕಾರ್ಯವಗೈಯ | ಲಾರದೆಂದೆನ್ನ ನಂಬಿಹರು ||
ಸಾರಿ ಪಾತಾಳದಿಂದೇರಿಸುವೆನು ಮತ್ತೆ | ತೋರಿದಂತೆಸಗಲೆಲ್ಲವರೂ    || ೬ ||

ಭಾಮಿನಿ

ಮುರಹರನು ಮುಳುಗಿರ್ಪ ಮಂದರ |
ಗಿರಿಯ ಬೆನ್ನಿನೊಳೆತ್ತಿ ಕಾಣಿಸೆ |
ಪರುವತೋದಯವಾಯ್ತೆನುತಲೆಲ್ಲವರು ಸಂತ ಸದಿ ||
ಶರಧಿಮಥನವ ಗೈದರಾ ಮಧು |
ಹರನು ಭಕ್ತರ ಪೊರೆದು ದುಷ್ಟರ |
ತರಿದು ಕೀರ್ತಿಯ ನಾಂತು ಮೆರೆದನು ನಿರತ ವೈಭವದಿ        || ೧ ||

 

ಹಿರಣ್ಯಾಕ್ಷ-ವರಾಹ

ಸೌರಾಷ್ಟ್ರ || ತ್ರಿವುಡೆ

ಇತ್ತ ಶೋಣಿತ ಪುರದೊಳೊಂದಿನ | ದೈತ್ಯನಹ ಕನಕಾಂಬಕನು ನವ |
ರತ್ನಪೀಠದೊಳೋಲಗವ ತಾ | ನಿತ್ತು ನುಡಿದಾ        || ೧ ||

ಕೇಳಿದಿರೆ ಸಚಿವಾದಿ ಮುಖ್ಯರು | ಪೇಳುವೀನುಡಿ ನಮ್ಮ ಹಿರಿಯರ ||
ಪೀಳಿಗೆಯ ಮಧುಕೈಟಭರ ನೆರೆ | ಸೀಲು ಮಾಡಿ       || ೨ ||

ಮಾಧವನು ಮತ್ಸರದೊಳೀ ಮಹ | ಮೇಧಿನಿಯ ಗೈದೀರ್ಪನಂತೆ ವಿ ||
ರೋಧವೇನೆಮ್ಮವರು ಗೈದಪ | ರಾಧವೇನು  || ೩ ||

ಹರದೃಹಿಣಸುರಪಾದ್ಯರೊಳಗತಿ | ಪರಮಘಾತಕಿ ಕಪಟನಿಶಿಚರ ||
ನೆರವಿಗಂತಕನಾದ ಹರಿಯೇ | ನೊರೆಯಲಿನ್ನು         || ೪ ||

ಕುಲವಿರೋಧಿಯನುಳಿಸಿದರೆ ಮುಂ | ದಳಿವು ನಮ್ಮಯ ನೆರವಿಗಲ್ಲದೆ ||
ಬೆಳಗದೆಮ್ಮಯ ಕೀರ್ತಿಯ ದರಿಂ | ಕೊಲುವೆ ಹರಿಯ  || ೫ ||

ಕಾಂಬೋಧಿ ಝಂಪೆತಾಳ

ಎಲ್ಲಿ ನೋಡಲು ಹರಿಯ ಸೊಲ್ಲಕಾಣೆನು ಬಹಳ | ಬಲ್ಲಿದನು ಕಪಟಸೂತ್ರದಲಿ ||
ಯೆಳ್ಳಿನಿತುದಾಕ್ಷಿಣ್ಯವಿಲ್ಲದವ ಸುರರಿಂಗೆ | ಸಲ್ಲುವನು ಪ್ರೀತಿಭಾವದಲಿ     || ೧ ||

ಧರೆಯ ಸ್ಥಾವರ ಚರಾ | ಚರ ಭರಿತನಾಗಿ ಸಂ | ಚರಿಸುವನ ಮುರಿವದೆಂತಿನ್ನು ||
ಅರಿಯದಾದೆನು ಸೂತ್ರ | ವಿರಚಿಸುವೆ ಪೊಸತೊಂದ | ದೊರಕದಿರಲಾರಧಿಟವವನು        || ೨ ||

ಭೂತಳವನೊವೆನು ರ | ಸಾತಳಕೆ ಮತ್ತದರೊ | ಳ್ಯಾತಕಿರನೆಂದು ಪರಿಕಿಪೆನು ||
ಯಾತುಧಾನರವಂಶ ಘಾತಕಿಯ ನೀಕ್ಷಿಸಿ ನಿ | ಪಾತವೆಸಗುವೆ ಹಗೆಯ ಬಿಡೆನು    || ೩ ||

ವಿಧಿಭವಾದಿಗಳೆ ಬಂದಿದಿರಡ್ಡಗಟ್ಟಿದರು ಬೆದರುವವನಲ್ಲ ತ್ರೈಜಗದಿ |
ಬದಲು ಮಾತಿಲ್ಲೆನುತಲೊದರಿ ಧಾತ್ರಿಯನೆತ್ತಿ | ಮದದೊಳೈದಿದ ನಿಶಾಚರನು    || ೪ ||

ಭಾಮಿನಿ

ದುರುಳನವನಿಯನೊದನೆಂಬುದ |
ನರಿತು ಹರಿಯು ವರಾಹರೂಪವ |
ಧರಿಸಿ ಧರೆಯಿಂದಿಳಿದನತ್ತ ರಸಾತಳಾಗ್ರದಲಿ ||
ಭರದೊಳೈತರುವಸುರ ನುರುಪಥ |
ವರಿತು ಮುಂದೈತರೆ ಮಹಾದು ||
ರ್ಧರ ಭಯಂಕರ ರೂಪಿಯನು ಕಂಡೆಂದನುಗ್ರದಲಿ    ||  ೧ ||

ಸೌರಾಷ್ಟ್ರ ತ್ರಿವುಡೆತಾಳ

ಆರೆಲವೊ ಬಡವರಹ ಗಿರಿ ಕಾಂ | ತಾರ ಮಧ್ಯವನುಳಿದು ತನ್ನಯ |
ದಾರಿಗಡ್ಡವಗಟ್ಟಿ ನಿಂದೆಯ | ಸಾರು ಕೆಲಕೆ    || ೧ ||

ಪ್ರಾಣಿವರ್ಗದ ಪಥದೊಳಸುರ | ಶ್ರೇಣಿ ನಡೆತಹುದಿದುವೆ ಚೋದ್ಯವಿ |
ದೇನು ನಿನ್ನಯ ಶಿರದೊಳೀರ್ಪನ | ವೀನ ಹೊರೆಯು  || ೨ ||

ಧಾರುಣಿಯ ಪೊತ್ತೈದುತಿಹೆನು ವಿ | ಚಾರವೇನಿದರೊಳು ವರಾಹನೆ |
ದಾರಿ ಬಿಡದಿರೆ ಕೊಲುವೆನೆಂದೆನ | ಲಾರು ಭಟಿಸಿ      || ೩ ||

ಕಾನನವು ಸಹಿ ತುದಿಸಿ ಬೆಳದಿಹ | ಕ್ಷೋಣಿಯನು ನೀನೊದರೆಮ್ಮಯ |
ಪ್ರಾಣಿಗಳಿಗಿಹ ನೆಲೆಗಳೆಲ್ಲಿದೆ | ಕಾಣಿಸೆನಗೆ    || ೪ ||

ಭೈರವಿ ಮಟ್ಟೆತಾಳ

ನಿಶಿಚರಾಗ್ರಘಂಣ್ಯ ನೀನು | ವಸುಮತಿಯನು ಕೊಂಡು ಬರಲು |
ಪೊಸತು ಹಗೆಗಳೇನು ಧರೆಯೊ | ಳುಸುರುಯೆನ್ನೊಳು || ೧ ||

ಮಧು ಮಹಾತ್ಮ ಕೈಭಟರನು | ವಧಿಸಿ ಹರಿಯು ಧರೆಯ ಗೈದ |
ನದುವೆ ಕುಲವಿರೋಧವೆನ್ನೊ | ಳುದಯವಿಂದಿಗೆ       || ೨ ||

ಕೊಂದ ಹರಿಯ ಕೊಲದೆ ನೀ ವ | ಸುಂಧರೆಯನು ತಂದರಿದರೊ |
ಳೆಂದಿಗಹುದು ಹಗೆಯ ಕಾರ್ಯ | ದಂದ ನಿನಗೆಲಾ     || ೩ ||

ಕಡುದುರಾತ್ಮನೆನಿಪ ಹರಿಯ ಪೊಡವಿಯಲ್ಲಿ ಕಾಣೆನೀಗ |
ಪಿಡಿದೆನವನ ದೃಢವಿದೈಸೆ | ಕಡಿವೆ ತಲೆಯನು        || ೪ ||

ಮರುಳೆ ನಿನ್ನ ಕರಕೆ ಹರಿಯು | ದೊರಕಲಾರ ಧಿಟವುದನುಜ |
ನೆರವಿಗಹಿತನಾನೆಯೆನ್ನ | ಪರಿಕಿಸೆಂದನು    || ೫ ||

ಭಾಮಿನಿ

ಧರಣಿಯನು ಧರಿಸಿರ್ಪೆನೆನ್ನಯ |
ತ್ವರಿತ ಗಮನಕ್ಕೆಡರನಿತ್ತಪೆ |
ತೆರಳೆನುತ ಖತಿಯಿಂದಲೊದದನು ವರಹನಂಗದಲಿ ||
ಉರಿಮಸಗುತಾರ್ಭಟಿಸಿ ವಿಲಯದ |
ಪುರಹರನ ವೋಲೆದ್ದು ದೈತ್ಯನ |
ಮೆರವ ವಕ್ಷಸ್ಥಳಕೆ ತಿವಿದನು ಘೋರ ದಾಡೆಯಲಿ       || ೧ ||

ವರಹನೆರಗಿದಹತಿಗೆ ಖಳನಸು |
ಜರಿದು ಬಿದ್ದುದನರಿತು ಹರಿರುಂ |
ಹರಿಯನೇತ್ತುತಲೈದಿ ಮುನ್ನಿನ ತೆರದಿ ಸ್ಥಿರವೆಸಗಿ ||
ಧರೆಯ ಭಾರವನಿಳುಹಿ ಶಕ್ರಾ |
ದ್ಯರಿಗೆ ಸಹಿ ತಂದಭಯವೀಯುತ |
ಮುರಹರನು ಮೆರೆದೀರ್ದ ನಿತ್ಯಾನಂದಮಯನಾಗಿ    || ೨ ||

 

ಹಿರಣ್ಯಕಶಿಪು – ಪ್ರಹಲ್ಲಾದ – ನರಸಿಂಹ

ಭಾಮಿನಿ

ಮುನಿವರರು ಚಿತ್ತವಿಸಿ ಮುಂಗಥೆ |
ಯೆನುವೆ ಶೋಣಿತ ಪುರದೊಳತ್ತಲು |
ಕನಕಕಚ್ಚಪು ರತ್ನಪೀಠದೊಳೀರ್ದನೋಲಗದಿ ||
ಘನ ಪರಾಕ್ರಮಿಯೆನಿಸುತಿಹ ತ |
ನ್ನನುಜನಳಿದಿಹ ವಾರ್ತೆಯನು ತಿಳಿ |
ದಿನಿತು ಕಷ್ಟಗಳಾಯ್ತೆ ಹಾಯೆಂದಳಲಿದನು ಮನದಿ    || ೧ ||

ನಾದನಾಮಕ್ರಿಯೆ ಅಷ್ಟತಾಳ

ಶಿವನೆ ತ್ರೈಲೋಕಪಾಲಕನೆ | ಗೌರೀ | ಧವನೆ ರಾಕೇಂದು ಶೇಖರನೆ |
ಭವರಹಿತನೆ ತ್ರಿಯಂಬಕನೆ | ಯಿಂತಾ | ಭವಣೆ ಬಂದುದೆ ಮಹೇಶ್ವರನೇ || ೧ ||

ಸೋದರನಹಕನಕಾಕ್ಷನಾ | ಮಧು | ಸೂಧನನಿಂದಾಯ್ತೆ ನಿಧನಾ |
ಆದುದೇತಕೆ ಹಗೆ ದರ್ಶನಾ | ಯಿನಿ | ತಾದುದೆ ಬಹುಚೋದ್ಯ ಕಥನಾ    || ೨ ||

ಸುರರ ಸಂಕುಲಕತಿ ಮಿತ್ರನು | ನಿಶಿ | ಚರರ ಭಾಗಕೆ ಹಗೆಯೆನಿಪನು |
ದೊರಕಿಹುದಿಲ್ಲೇನು ಕಾರಣ | ಸಂ | ಹರಿಸಬಹುದೆ ವ್ಯರ್ಥ ಸಹಜನಾ     || ೩ ||