‘ಟ್ರಿಣ್ ಟ್ರಿಣ್’ ಎಂಬ ಸದ್ದಿಗೆ ಎಚ್ಚರವಾಯಿತು. ಬಡಿದುಕೊಳ್ಳುತ್ತಿರುವುದು ಗಡಿಯಾರವಲ್ಲ, ಟೆಲಿಫೋನು. ಎತ್ತಿ ಕಿವಿಗಿರಿಸಿದೆ. ಮ್ಯಾಥ್ಯೂ ಅವರ ಸ್ವರ. ‘ಏಳಿ, ಏಳಿ, ಆಗಲೇ ನಾಲ್ಕೂ ಮುಕ್ಕಾಲು’ ಎಂದರು. ‘ಥ್ಯಾಂಕ್ಸ್’ ಎಂದು ಉತ್ತರಕೊಟ್ಟು ಎದ್ದೆ. ಬೇಗ ಬೇಗ ಎಲ್ಲ ಕೆಲಸಗಳನ್ನೂ ಮುಗಿಸಿಕೊಂಡು ಉಳಿದ ವಸ್ತುಗಳನ್ನು ‘ಪ್ಯಾಕ್’ ಮಾಡತೊಡಗಿದೆ. ನನ್ನ ಸೂಟ್‌ಕೇಸ್ ಏನೂ ಮಾಡಿದರೂ ಸರಿಯಾಗಿ ಮುಚ್ಚಿಕೊಳ್ಳಲೊಲ್ಲದು. ಗೊಂಬೆಗಳನ್ನಿರಿಸಿದ ರೊಟ್ಟಿನ ಪೆಟ್ಟಿಗೆಗಳನ್ನು ತೆಗೆದೆಸೆದು, ನಂತರ ಪ್ಯಾಕ್ ಮಾಡತೊಡಗಿದೆ. ಆ ವೇಳೆಗೆ ಬಾಗಿಲು ಬಡಿದ ಶಬ್ದವಾಯಿತು. ಬಾಗಿಲು ತೆರೆದೆ. ಈ ನೆಲೆಯಲ್ಲಿ ಮೇಲ್ವಿಚಾರಣೆಗೆ ಕೂರುವ ಮಹಿಳೆ ‘ತಕ್ಸಿ ತಕ್ಸಿ, ರ‍್ಯಾನ ರ‍್ಯಾನ’ ಎಂದಳು. ಆಕೆ ಮಾತಾಡಿದ್ದು ರಷ್ಯನ್‌ನಲ್ಲಿ. ನನಗೋ ಇರುಳೆಲ್ಲ ನಿದ್ದೆ ಸಾಲದ ಮಂಪರು. ಜತೆಗೆ ಹೊರಡುವ ಆತುರ. ಈ ಗೊಂದಲದಲ್ಲಿ ‘ಟ್ಯಾಕ್ಸಿ ಟ್ಯಾಕ್ಸಿ, ರನ್ ರನ್’ – ಎಂದು ತಿಳಿದುಕೊಂಡೆ. ಆರು ಗಂಟೆಗೆ ಟ್ಯಾಕ್ಸಿಗೆ ಹೇಳಿದ್ದರೆ ಈ ಮುದುಕಿ ಈಗಲೆ ಟ್ಯಾಕ್ಸಿ ತರಿಸಿಬಿಟ್ಟಳೇ ಎಂದು ಗಾಬರಿಗೊಂಡೆ. ಭಾರವಾದ ಸಾಮಾನುಗಳ ಪೆಟ್ಟಿಗೆ ಹಿಡಿದು ಕೋಣೆಯಿಂದ ಹೊರಬಿದ್ದೆ. ನಾನೇಕೆ ಹೀಗೆ ಮಾಡುತ್ತಿದ್ದೇನೆಂದು ಆಕೆಗೆ ತಿಳಿಯಲಿಲ್ಲ. ‘ಲಿಫ್ಟ್ ಕೆಲಸ ಮಾಡುತ್ತಿದೆಯೆ’ ಎಂದು ಆಕೆಯನ್ನು ಇಂಗ್ಲಿಷಿನಲ್ಲಿ ಕೇಳಿದೆ: ಅದೇಕೆ ಕೇಳಿದೆನೊ ನಾನು, ನನಗೇ ಗೊತ್ತಿಲ್ಲ. ನನ್ನ ಭಾಷೆ ಆಕೆಗೆ ಅರ್ಥವಾಗಲಿಲ್ಲ. ಕೈ ಅಲ್ಲಾಡಿಸಿದಳು. ಇದು ಬೇರೆ ಗ್ರಹಚಾರ, ಒಂಬತ್ತು ಮಹಡಿಗಳನ್ನು ನಾನು ಭಾರ ಹೊತ್ತು ಹೇಗೆ ಇಳಿಯುವುದೆಂದು ಗಾಬರಿಯಾದೆ. ಲಿಫ್ಟ್‌ನ ಬಟನ್ ಒತ್ತಿದೆ. ಶಬ್ದವಾಯಿತು. ಬಂದ ಲಿಫ್ಟ್‌ಬಾಗಿಲು ತೆರೆಯಿತು. ನಾನು ಅದರೊಳಗೆ ತೂರಿ ನಿಂತೆ. ಆಕೆಯೂ ಜತೆಗೆ ಬಂದು ನಿಂತಳು. ಕೆಳನೆಲೆಗೆ ಬಂದು, ಲಿಫ್ಟ್‌ನಿಂದ ಸಾಮಾನು ತೆಗೆದಿರಿಸಿ ಒಳಾಂಗಳದಲ್ಲಿ ನಿಂತೆ. ಆ ವೇಳೆಗೆ ಆಕೆ ಹೋಗಿ ಪಕ್ಕದ ವಿಚಾರಣಾ ಕೊಠಡಿಯಿಂದ ಇಂಗ್ಲಿಷ್ ಬಲ್ಲಾಕೆಯನ್ನು  ಎಬ್ಬಿಸಿ ಕರೆತಂದಳು. ಬಂದಾಕೆ ಇಂಗ್ಲಿಷಿನಲ್ಲಿ ನನ್ನನ್ನು ಕೇಳಿದಳು; ‘ಅದೇಕೆ ಇಷ್ಟು ಬೇಗ ಕೆಳಗೆ ಬಂದಿರಿ.’ ಈಕೆ ‘ಟ್ಯಾಕ್ಸಿ ಬಂದಿದೆ ಓಡಿರಿ ಎಂದಳು’ ಎಂದು ಆಕೆ ರಷ್ಯನ್ ಭಾಷೆಯಲ್ಲಿ ಅಂದದ್ದನ್ನು ತಿಳಿಸಿದೆ. ‘ರ‍್ಯಾನ ಎಂದರೆ, ಇನ್ನೂ ಹೊತ್ತಿದೆ ಎಂದು ಅರ್ಥ’- ಎಂದು ಹೇಳಿ ಆಕೆ ನಕ್ಕಳು. ನಾನು ಅದನ್ನು ಇಂಗ್ಲಿಷಿನ ‘ರನ್’ ಎಂಬುದಕ್ಕೆ ತಪ್ಪು ತಿಳಿದು ಇಷ್ಟೆಲ್ಲ ಗೊಂದಲವಾಯಿತು. ತೆಪ್ಪಗಾದೆ. ಆರು ಗಂಟೆಯ ವೇಳೆಗೆ ಮ್ಯಾಥ್ಯೂ ಅವರು, ಕೆಳಗೆ ಬಂದರು. ನನ್ನನ್ನು ಕರೆದೊಯ್ಯುವ ಟ್ಯಾಕ್ಸಿ ಬಂದಿತು. ಮ್ಯಾಥ್ಯೂ ಅವರು, ತಮಗೆ ಆಗಲೆ ಬೇರೆಯ ಏರ್ಪಾಡಾಗಿದೆ ಎಂದೂ, ವಿಮಾನ ನಿಲ್ದಾಣದಲ್ಲಿ ನೋಡೋಣ ಎಂದೂ ಹೇಳಿದರು. ರಷ್ಯನ್ ಭಾಷೆಯಲ್ಲಿ ಮೊದಲೇ ಬರೆದಿರಿಸಿಕೊಂಡ ಮಹಾದೇವಯ್ಯನವರ ಮನೆಯ ವಿಳಾಸವನ್ನು ಟ್ಯಾಕ್ಸಿಯವನ  ಕೈಗೆ ಕೊಟ್ಟೆ. ಆತ ಓದಿಕೊಂಡು, ಹದಿನೈದು ನಿಮಿಷದಲ್ಲಿ ಮಹಾದೇವಯ್ಯನವರ ಮನೆಯ ಮುಂದೆ ಚಾಚೂ ವ್ಯತ್ಯಾಸವಾಗದೆ ತಂದು ನಿಲ್ಲಿಸಿದ. ಮೇಲೇರಿ ಹೋಗಿ ಬಾಗಿಲು ಬಡಿದೆ. ಬಾಗಿಲು ತೆರೆಯಿತು. ಸೊಗಸಾದ ಬಿಸಿ ಬಿಸಿ ಕಾಫಿ ಕುಡಿದು, ಮಹಾದೇವಯ್ಯನವರನ್ನು ಕೂಡಿಕೊಂಡು, ಅವರ ಮನೆಯ ‘ಅನ್ನಪೂರ್ಣೆ’ಗೆ ಧನ್ಯವಾದಗಳನ್ನು ಹೇಳಿ, ಏರೋಡ್ರೋಮ್ ಕುರಿತು ಸಾಗಿದೆವು. ದಾರಿಯಲ್ಲಿ ಒಂದೆಡೆ ವೊಲೋಜ ಕಾದು ನಿಂತಿದ್ದ. ಅವನೂ ಟ್ಯಾಕ್ಸಿಯೊಳಗೆ ಸೇರಿದ. ದಾರಿಯುದ್ದಕ್ಕೂ ಬಿದ್ದು ನೆಲವನ್ನು  ತಬ್ಬಿಕೊಂಡ ಹಿಮದ ಮೋಡಿಯನ್ನು ನೋಡುತ್ತ ಮೂವತ್ತು ಮೈಲಿಗಳ ದೂರದ ಷೆರಿಮತ್ಯೇವೋ ವಿಮಾನ ನಿಲ್ದಾಣಕ್ಕೆ ತಲುಪಿದಾಗ ಏಳೂವರೆ. ಪ್ರಯಾಣಿಕರಲ್ಲದೆ, ಅವರನ್ನು ಕಳುಹಿಸಲು ಬಂದ ಕೆಲವರು ಆಪ್ತರಲ್ಲದೆ  ಇನ್ನಾರೂ ಇರಲಿಲ್ಲ. ವಿಮಾನವಿಧಿಗಳಿಗಾಗಿ ನಿಂತ ಕ್ಯೂ ಅನ್ನು ಸೇರಿದಾಗ, ಮುಂದೆ ಮ್ಯಾಥ್ಯೂ ಅವರಿದ್ದರು; ಅವರ ಹಿಂದೆ ರಷ್ಯಾಕ್ಕೆ ಬಂದ ನಮ್ಮ ಭಾರತೀಯ ಕಲಾವಿದರ ತಂಡ – ಲಾಲ್‌ಗುಡಿ ಜಯರಾಮನ್ ಸಹಿತ. ಎಂಟು ಗಂಟೆಗೆ ಎಲ್ಲಾ ಶಾಸ್ತ್ರಗಳೂ ಮುಗಿದು, ಮಹಾದೇವಯ್ಯನವರಿಗೂ ವೊಲೋಜನಿಗೂ ‘ದಸ್ವಿದಾನಿಯಾ’ (ಗುಡ್‌ಬೈ) ಹೇಳಿ ವಿಮಾನವನ್ನೇರಲು ಒಳಕ್ಕೆ ಬಂದೆ.

ಎಂಟೂವರೆ ಗಂಟೆಗೆ ಏರ್ ಇಂಡಿಯಾ ವಿಮಾನ, ಭಾರತೀಯರೇ ವಿಶೇಷವಾಗಿದ್ದ ವಿಮಾನ, ಮಾಸ್ಕೋದ ಮಂಜು ಮುಸುಕಿದ ಆವರಣವನ್ನು ಸೀಳಿಕೊಂಡು ಮೇಲೇರಿದಾಗ, ನಿಚ್ಚಳವಾದ ನೀಲ ಆಕಾಶ. ಅದರೊಳಗೆ ನಗುತ್ತಿದ್ದ ಸೂರ‍್ಯ. ಮನಸ್ಸಿಗೆ ನೆಮ್ಮದಿ ತುಂಬಿತು. ಗಗನಸಖಿ ಧ್ವನಿವರ್ಧಕದ ಮೂಲಕ ಹೇಳುತ್ತಿದ್ದಳು: ‘ನಾವೀಗ ದೆಹಲಿಗೆ ಹೊರಟಿದ್ದೇವೆ. ಮಾಸ್ಕೋದಿಂದ ಟೆಹರಾನ್‌ಗೆ ೧೭೨೦ ಮೈಲಿ. ಹನ್ನೆರಡೂವರೆಗೆ ಟೆಹರಾನ್‌ನಲ್ಲಿ ಐವತ್ತು ನಿಮಿಷಗಳ ಕಾಲ ನಿಲ್ಲುತ್ತೇವೆ. ಟೆಹರಾನ್‌ನಿಂದ ದೆಹಲಿಗೆ ೨೪೦೦ ಮೈಲಿಗಳು. ರಾತ್ರಿ ಎಂಟು ಗಂಟೆಗೆ ದೆಹಲಿ ತಲುಪುತ್ತೇವೆ.’

ತಾಯ್ನಾಡನ್ನು ಬಿಟ್ಟು ಎಷ್ಟೊಂದು ದೂರ ಬಂದಿದ್ದೇನೆ ಅನ್ನಿಸಿತು. ಇಪ್ಪತ್ತೊಂಬತ್ತು ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರುತ್ತಿತ್ತು. ಕೆಳಗೆ ಉಕ್ರೇನ್ ಹಾಗೂ ಜಾರ್ಜಿಯಾನಾ ರಾಜ್ಯಗಳ ನೆಲ. ನಡುವೆ ಮೋಡದ ಸಾಗರವೇ ಸ್ತಬ್ಧವಾಗಿ ನಿಂತಿತ್ತು. ಬೆಳಗಿನ ಬಿಸಿಲು ಮೋಡಗಳ ಮೇಲ್ಭಾಗಕ್ಕೆ ಬಿದ್ದು ಅವೆಲ್ಲ ಗುಲಾಬಿ ಹಾಲಿನ  ಕೆನೆಯಾಗಿದ್ದವು. ಇನ್ನಷ್ಟು ದೂರಹೋದ ನಂತರ ಕೆಳಗೆ ವಿಚಿತ್ರ ವರ್ಣದ ನೆಲ. ಕೆಳಗೆಲ್ಲೋ ತೊದಲುತ್ತಿದ್ದ ಬೆಟ್ಟಗಳ ಮುಡಿಯಲ್ಲಿ ಮಂಜಿನ ಹೊದಿಕೆ; ಕಂದರಗಳಲ್ಲಿ ತೆಳ್ಳಗೆ ಹರಿದು ಮೆತ್ತಿದ ಮೋಡ. ಮಕ್ಕಳು ಪಾಟಿಯ ಮೇಲೆ ಅಕ್ಷರ ತಿದ್ದಿದಂತೆ ಹೊಳೆ – ಹಳ್ಳಗಳ ಚಿತ್ರ. ಮಕ್ಕಳಾಟಿಕೆಯ ಸಾಮಾನುಗಳಂತೆ ಅಲ್ಲಲ್ಲಿ ಊರುಗಳು; ನಗರಗಳು.

೧೨.೩೦ಕ್ಕೆ ಟೆಹರಾನ್‌ನ ನೆಲವನ್ನು ಮುಟ್ಟಿತು ವಿಮಾನ. ನಮ್ಮನ್ಯಾರನ್ನೂ ಇಳಿಯಗೊಡಲಿಲ್ಲ. ಟೆಹರಾನ್‌ನಿಂದ  ದೆಹಲಿಗೆ ಹೋಗುವ ಹೊಸ ಮುಖಗಳು ಒಳಕ್ಕೆ ಬಂದವು. ವಿಮಾನ ಒಂದೂವರೆಯ ವೇಳೆಗೆ ಮೇಲೇರಿತು. ಊಟವಾದ  ನಂತರ ಎಲ್ಲರೂ ವಿಮಾನದ ದಿಂಬುಗಳಿಗೊರಗಿ ‘ನಿದ್ದೆಯ ಲೋಕದ ಕನಸಿನ ಬೀದಿ’ಯಲ್ಲಿ  ಅಲೆಯತೊಡಗಿದರು. ಕಿಟಕಿಯಾಚೆ ನೋಡಿದೆ. ಟೆಹರಾನಿನ ನೆಲವನ್ನು ವಿಮಾನ ದಾಟಿ ಅರಬ್ಬೀಸಮುದ್ರದ ನೀಲಿಯ ಮೇಲೆ ಹಾರುತ್ತಿತ್ತು.  ಕೆಳಗೆ ನೀಲಿ ಕಡಲು; ಮೇಲೆ ನೀಲಿಯ ಆಕಾಶ. ರಷ್ಯಾದಲ್ಲಿ ನಾನು ಕಂಡ ಬದುಕನ್ನು ಪರಿಭಾವಿಸತೊಡಗಿದೆ: ಕೇವಲ ಐವತ್ತು ವರ್ಷಗಳಲ್ಲಿ ಆ ಜನ ಎಷ್ಟೊಂದು ಮುಂದುವರೆದಿದ್ದಾರೆ. ಅವರ ಅಗಾಧವಾದ ಯಂತ್ರಶಕ್ತಿ; ಉತ್ಪಾದನಾ ಸಾಮರ್ಥ್ಯ;  ಸಂಶೋಧಕ ಪ್ರವೃತ್ತಿ ; ಎಲ್ಲಕ್ಕೂ ಮಿಗಿಲಾದ ಆ ದಕ್ಷತೆ – ಎಲ್ಲಿಂದ ಎರವಲು ತರಲು ಸಾಧ್ಯ? ಐವತ್ತು ವರ್ಷಗಳ ಕಾಲ, ಬೇರೆಯವರ ನೆರಳಿನ, ನೆರವಿನ ಹಂಗಿಲ್ಲದೆ, ಹಗಲಿರುಳೂ ದುಡಿದು ನಾಡನ್ನು ಕಟ್ಟಬೇಕಾದರೆ ಅಗತ್ಯವಾದ ರಾಷ್ಟ್ರ ಪ್ರಜ್ಞೆ ತುಂಬ ಅಪೂರ್ವವಾದದ್ದು. ಇವರಿಗೆ ಹೋಲಿಸಿದರೆ ನಾವು ಇನ್ನೂ ಎಲ್ಲಿದ್ದೇವೆ? ಎಂಥ ಜನ ನಮ್ಮವರು? ಇಷ್ಟೊಂದು ವರ್ಷಗಳಾಯಿತು ಸ್ವತಂತ್ರವಾಗಿ, ನಾವೇನು ಮಾಡಿದ್ದೇವೆ? ಮಹತ್ತಾದುದೇನನ್ನಾದರೂ ನಾವು ಸಾಧಿಸಿದ್ದೇವೆಯೇ? ಈ ಜನಕ್ಕೆ ರಾಷ್ಟ್ರಪ್ರಜ್ಞೆ ಇದೆಯೇ? ನಾವೂ ತಲೆಯೆತ್ತಿ ನಿಲ್ಲುವುದು ಯಾವಾಗ? ಹಸಿವಿನಿಂದ ನರಳದ, ನಾಳೆಯೇನು ಎಂಬ ತಳಮಳದಲ್ಲಿ ಬದುಕನ್ನು ಒಂದು ಶಾಪವೆಂದು ಭಾವಿಸದ ‘ಸುಖೀ ರಾಜ್ಯ’ ಎಂದು ಬಂದೀತು……?

ವಿಮಾನದ ಕ್ಯಾಪ್ಟನ್ ಹೇಳುತ್ತಿದ್ದ ‘ನಾವೀಗ ಇಂಡಿಯಾದ ನೆಲದ ಮೇಲಿದ್ದೇವೆ. ಅದೋ ಕೆಳಗೆ ಕಾಣುತ್ತಿದೆಯಲ್ಲ ಕಡಲ ತೀರದಲ್ಲಿ, ಅದೇ ದ್ವಾರಕೆ.’ ಬಲಗಡೆ, ಕೆಳಗಡೆ ದೂರದಲ್ಲಿ ಅಸ್ಪಷ್ಟವಾಗಿ ನೀಲ ಕಡಲಿನ ನೆಲದ ಅಂಚು ಉದ್ದಕ್ಕೂ ಕಾಣುತ್ತಿತ್ತು. ಹೊಳೆಗಳು, ಬಳ್ಳಿವರಿದು ಕಡಲನ್ನು ಕೂಡುತ್ತಿದ್ದುವು. ನಾವಾಗಲೇ ನಮ್ಮ ಜನ್ಮಭೂಮಿಯ ನೀಲಗಗನದಲ್ಲಿದ್ದೆವು. ಸಂಜೆಯ ಸೂರ‍್ಯ ಅಲ್ಲಲ್ಲಿ ನಿಂತ ಮೋಡಗಳ ಮೈಗೆ ಬಂಗಾರ ಸವರುತ್ತಿದ್ದ.

೧೯೭೩