• ಲೈಂಗಿಕ ದುರ್ಬಲತೆ ಅಥವಾ ಇಂಪೋಟೆನ್ಸ್ ಎಂದರೇನು?

ನಾರ್ಮಲ್ ಲೈಂಗಿಕ ಸಂಭೋಗಕ್ಕಾಗಿ ಪುರುಷ ಉದ್ರೇಕವನ್ನು ಹೊಂದಲು ಅನರ್ಹತೆಯನ್ನು ಹೊಂದಿರುವುದು.

 • ಪುರುಷರಲ್ಲಿ ಮಾನಸಿಕ ಲೈಂಗಿಕ ದುರ್ಬಲತೆ ಉಂಟಾಗಲು ಮುಖ್ಯವಾದ ಕಾರಣಗಳಾವುವು?

೧) ಪರಿಹಾರವಾಗದ ಸಂಘರ್ಷದ ಲಕ್ಷಣವನ್ನು ಪ್ರತಿನಿಧಿಸಬಹುದು.

೨) ಹಿಂಜರಿಯುವ ಪ್ರವೃತ್ತಿಯ ಪ್ರಭಾವ

೩) ನಾಚಿಕೆ

೪) ಲೈಂಗಿಕ ಅಜ್ಞಾನ

೫) ಲೈಂಗಿಕತೆಯ ಬಗ್ಗೆ ಅಪರಾಧದ ಭಾವನೆಗಳು

೬) ಭಯ

೭) ಪ್ರೀತಿಸಲು ಆಗದಿರುವುದು

೮) ಅಭದ್ರತೆಯ ಭಾವನೆಗಳು

೯) ಹಿಂಸಾರತಿ

೧೦) ಶಿಶ್ನದ ಬಗ್ಗೆ ಕೀಳರಿಮೆ

೧೧) ಹೆಣ್ಣಿಗೆ ನೋವುಂಟು ಮಾಡುತ್ತೇನೆ ಎಂಬ ಭಯ

೧೨) ಇತ್ತೀಚಿನ ಸಲಿಂಗರತಿ

೧೩) ಸ್ತ್ರೀಯನ್ನು ಗರ್ಭವತಿ ಮಾಡುತ್ತೇನೆ ಎಂಬ ಭಯ

೧೪) ಗರ್ಭನಿರೋಧಕಗಳ ಬಗ್ಗೆ ಇಷ್ಟವಿಲ್ಲದಿರುವುದು

೧೫) ವಿಕೃತರೀತಿಯ ಕಾಮಕಲ್ಪ ಭ್ರಮೆಗಳು

೧೬) ತಾಯಿ ಅಥವಾ ಸಹೋದರಿಯನ್ನು ಅತೀ ಹೆಚ್ಚಾಗಿ ಅವಲಂಬಿಸಿರುವುದು

೧೭) ಹಸ್ತಮೈಥುನದ ಬಗ್ಗೆ ನಿಜವಾಗಿಸರಿಯಾಗಿಲ್ಲದ ಭಾವನೆ

೧೮) ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಯಾರಾದರೂ ನೋಡುತ್ತಾರೆ ಅಥವಾ ಅಡ್ಡಿಪಡಿಸುತ್ತಾರೆ ಎಂಬ ಭಯ.

೧೯) ಮತಧರ್ಮದ ಬಗ್ಗೆ ಸಂಘರ್ಷ ಅಥವಾ ಪೋಷಕರ ಆಕ್ಷೇಪಣೆ

೨೦) ಅಸೂಯೆ

೨೧) ದ್ವೇಷ ಅಥವಾ ಹಗೆತನ.

 • ವೈವಾಹಿಕ ಜೀವನದಲ್ಲಿ ಪುರುಷ ಯಾವ ಲೈಂಗಿಕ ಹಕ್ಕನ್ನು ಪಡೆದಿರುತ್ತಾನೆ?

ತನ್ನ ಪತ್ನಿಯೊಂದಿಗೆ ನಾರ್ಮಲ್ ಲೈಂಗಿಕ ಸಂಭೋಗವನ್ನು ನಿರೀಕ್ಷಿಸುವುದು ಆತನ ಹಕ್ಕು.

 • ಯಾವ ಶಾರೀರಕ ಸಂಗತಿಗಳಿಂದ ಪುರುಷರಲ್ಲಿ ಇಂಪೋಟೆನ್ಸ್ ಅಥವಾ ಲೈಂಗಿಕ ದುರ್ಬಲತೆ ಉಂಟಾಗುತ್ತದೆ?

೧) ಲೈಂಗಿಕ ಸಾಗಾಣಿಕೆಯ ಕಾಯಿಲೆಗಳು (ಎಸ್.ಟಿ.ಡಿ)

೨) ಗ್ರಂಥಿಗಳ ಕೊರತೆಗಳು (ಗ್ಲಾನ್‌ಡ್ಯುಲರ್ ಡಿಫಿಷಿಯೆನ್ಸೀಸ್)

೩) ಲೈಂಗಿಕ ಅಂಗಗಳಲ್ಲಿ ಟ್ಯೂಮರ್‌ಗಳು (ಗಡ್ಡೆಗಳು)

೪) ಪ್ರಾಸ್ಟೇಟ್ ಗ್ರಂಥಿಯ ತೊಂದರೆ

೫) ಸಾಮಾನ್ಯ ನಿಶ್ಯಕ್ತಿಯ ಫಲಿತದಿಂದ ಉಂಟಾಗಿರುವ ಸೋಂಕು ರೋಗಗಳು

೬) ಔಷಧಿಗಳು ಮತ್ತು ಆಲ್ಕೋಹಾಲ್‌ನ ಅತಿಯಾದ ಉಪಯೋಗ

೭) ಶಾರೀರಕ ಆಯಾಸದಿಂದಾಗಿ ತಾತ್ಕಾಲಿಕವಾಗಿ ಲೈಂಗಿಕ ದುರ್ಬಲತೆಯ ಸ್ಥಿತಿ ಉಂಟಾಗಬಹುದು.

 • ಪುರುಷರಿಗಿಂತಲೂ ಸ್ತ್ರೀಯರು ಲೈಂಗಿಕ ಪರಾಕಾಷ್ಠತೆ (ಕ್ಲೈಮಾಕ್ಸ್) ಯನ್ನು ತಲುಪಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಾರೆ ಎಂಬುದು ನಿಜವೇ?

ಈ ಪ್ರಶ್ನೆಗೆ ಹೌದು ಮತ್ತು ಇಲ್ಲ ಎಂದೇ ಉತ್ತರಿಸಬೇಕಾಗುತ್ತದೆ. ಲೈಂಗಿಕ ಶಾಸ್ತ್ರಜ್ ಡಾ|| ಕಿನ್ಸೆಯ ಪ್ರಕಾರ. ಪುರುಷರಿಗಿಂತಲೂ ಹೆಚ್ಚು ಸಮಯವನ್ನು ಲೈಂಗಿಕ ಪರಾಕಾಷ್ಠತೆಯನ್ನು ತಲುಪಲು ಸ್ತ್ರೀಯರು ನಿಜವಾಗಿ ತೆಗೆದುಕೊಳ್ಳುವುದಿಲ್ಲ. ಲೈಂಗಿಕ ಸಂಭೋಗದ ತಂತ್ರ ಸಮರ್ಪಕವಾಗಿ ನಡೆಯದಿರುವುದು ಹಾಗೂ ಸ್ತ್ರೀ ಲೈಂಗಿಕ ಪ್ರತಿಕ್ರಿಯೆ ತೋರಲು ನಿಧಾನಿಸುವುದೇ ಇದಕ್ಕೆ ಕಾರಣವೆಂದು ಡಾ|| ಕಿನ್ಸೆಯವರ ಅಭಿಪ್ರಾಯ.

ಡಾ|| ಕಿನ್ಸೆಯ ಅಧ್ಯಯನಗಳ ಪ್ರಕಾರ ಸ್ತ್ರೀ ಹಸ್ತಮೈಥುನದ ಮೂಲಕ ಲೈಂಗಿಕ ಪರಾಕಾಷ್ಠತೆಯನ್ನು ತಲುಪಲು ೪ ನಿಮಿಷಗಳನ್ನು ತೆಗೆದುಕೊಳ್ಳುತ್ತಾಳೆ, ಅದೇ ಲೈಂಗಿಕ ಸಂಭೋಗದ ಮೂಲಕ ಲೈಂಗಿಕ ಪರಾಕಾಷ್ಠತೆಯನ್ನು ತಲುಪಲು ೧೦ ರಿಂದ ೨೦ ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ; ನಿಜವಾಗಿಯೂ ಕೆಲವು ಸ್ತ್ರೀಯರು ಕ್ರಮವಾದ ಲೈಂಗಿಕ ಕ್ಲೈಮಾಕ್ಸ್‌ನ್ನು ೧೫ ರಿಂದ ೩೦ ಸೆಕೆಂಡುಗಳಲ್ಲಿ ತಲುಪುತ್ತಾರೆಂದು ತಿಳಿಸಿದ್ದಾರೆ.

 • ದಾಂಪತ್ಯ (ವಿವಾಹ) ಜೀವನದ ಮೂಲಕವೇ ಸೆಕ್ಸ್ (ಲೈಂಗಿಕತೆ) ಎನ್ನುತ್ತಾರೆ. ಕೆಲವರು ಬಗ್ಗೆ ನಿಮ್ಮ ಅಭಿಪ್ರಾಯವೇನು?

ಲೈಂಗಿಕತೆಯೊಂದೇ ದಾಂಪತ್ಯ ಜೀವನವನ್ನು ನಿರ್ಮಾನ ಮಾಡುವುದಿಲ್ಲ. ಶಾಶ್ವತ ಸಂಬಂಧ, ಲೈಂಗಿಕ ಆಕರ್ಷನೆಯೊಂದನ್ನೇ ಅವಲಂಬಿಸಿರುವುದಿಲ್ಲ. ಸಂತೋಷಕರವಾದ ದಾಂಪತ್ಯ ಜೀವನಕ್ಕೆ, ದಂಪತಿಗಳಲ್ಲಿ ಪರಸ್ಪರ ಪ್ರೀತಿ ಮತ್ತು ಮಮತೆಯಿರುವುದು ಅಗತ್ಯ. ಅಭಿರುಚಿಗಳು, ಆರ್ಥಿಕ ವ್ಯವಸ್ಥೆ, ವೈಯಕ್ತಿಕವಾಗಿ ಕುಟುಂಬದಲ್ಲಿ ಮತ್ತು ಸಾಮಾಜಿಕ ಸಂಬಂಧದಲ್ಲಿ ತೃಪ್ತಿಕರವಾಗಿರಬೇಕು; ಹೊಂದಾಣಿಕೆಯೂ ಇರಬೇಕು. ಲೈಂಗಿಕ ಆಕರ್ಷಣೆ ಇಲ್ಲದೆಯು ಆಧ್ಯಾತ್ಮಿಕತೆಯನ್ನು ಅಳವಡಿಸಿಕೊಂಡು ಯಶಸ್ವಿಯುತ ದಾಂಪತ್ಯ ಜೀವನವನ್ನು ನಿರ್ವಹಿಸುತ್ತಿರುವ ದಂಪತಿಗಳು ಅನೇಕರಿದ್ದಾರೆ.

 • ಸೆಕ್ಸುಯಲ್ ಟೆಕ್ನಿಕ್ ಅಥವಾ ಲೈಂಗಿಕ ತಂತ್ರವೆಂದರೇನು?

ಸೆಕ್ಸುಯಲ್ ಟೆಕ್ನಿಕ್ ಎಂದರೆ, ಲೈಂಗಿಕ ಕ್ರಿಯೆಯಲ್ಲಿ ಪರಿಣಾಮಕಾರಿಯಾದ ನಿರ್ವಹಣೆ ಎಂದರ್ಥ. ಇದಕ್ಕೆ ಮುಖ್ಯವಾಗಿ ಮೊದಲು ಅಗತ್ಯವಾದದ್ದು ಲೈಂಗಿಕ ಸಂಭೋಗದಲ್ಲಿ ಒಳಗೊಳ್ಳುವ ಅಂಗಾಂಗಗಳು ಯಾವುವು? ಅವುಗಳ ರಚನೆ, ಕಾರ್ಯಗಳು ಹಾಗೂ ಅವುಗಳಿಂದ ಉಂಟಾಗುವ ಶಾರೀರಕ ಪ್ರಕ್ರಿಯೆ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಎರಡನೆಯದಾಗಿ, ಲೈಂಗಿಕ ಪ್ರೀತಿಗೆ ಅಗತ್ಯವಾದ ಪೋರೆಪ್ಲೇ ಅಥವಾ ಕೂಟಮುನ್ನಲಿವು (ಸಂಭೋಗಕ್ಕೆ ಮೊದಲಿನ ಕಾಮಕೇಳಿ) ಚಟುವಟಿಕೆಯನ್ನು ಹೇಗೆ ಪರಸ್ಪರ ದಂಪತಿಗಳು ನಿರ್ವಹಿಸಬೇಕು ಎಂಬ ಜಾಣ್ಮೆ. ಅಂದರೆ ಪರಸ್ಪರ ದಂಪತಿಗಳು ಲೈಂಗಿಕವಾಗಿ ತೃಪ್ತಿಯನ್ನು ಹೊಂದಲು ಏನನ್ನು ನಡೆಸಬೇಕೆಂಬ ತಿಳುವಳಿಕೆ ಅಗತ್ಯ.

 • ಸಂತೋಷಕರ ವೈವಾಹಿಕ ಜೀವನದ ಮೂಲಾಂಶ ಪ್ರೀತಿಯೇ?

ಹೌದು. ಗಂಡ-ಹೆಂಡತಿಯ ನಡುವೆ ಆಳವಾದ ಪ್ರೀತಿ-ಪ್ರೇಮ ವಿಲ್ಲದಿದ್ದರೆ, ತೃಪ್ತಿಕರವಾದ ವೈವಾಹಿಕ ಸಂಬಂಧ ಅಭಿವೃದ್ಧಿಗೊಳ್ಳುವುದಿಲ್ಲ. ಪ್ರೀತಿಯಿಲ್ಲದಿದ್ದರೆ, ವೈವಾಹಿಕ ಬದುಕಿನಲ್ಲಿ ಸಂತೋಷ ಉಂಟಾಗುವುದಿಲ್ಲ; ಬಾಂಧವ್ಯದ ಬುನಾದಿಯೇ ಪ್ರೀತಿ. ಅದರಿಂದಲೇ ಜೀವನ ನಿರ್ಮಾಣವಾಗುವುದು.

 • ಶೀಘ್ರ ವೀರ್ಯಸ್ಖಲನ ಎಂದರೇನು?

ಅನೇಕ ಪುರುಷದಲ್ಲಿ ವೀರ್ಯಸ್ಖಲನ ಎರಡರಿಂದ ಐದು ನಿಮಿಷಗಳಲ್ಲಿ ಉಂಟಾಗುತ್ತದೆ. ಡಾ|| ಕಿನ್ಸೆಯ ಗುಂಪು ನಡೆಸಿದ ಪರೀಕ್ಷೆಯ ಪ್ರಕಾರ, ಶೇಕಡ ೭೫ರಷ್ಟು ಪುರುಷರ ವೀರ್ಯಸ್ಖಲನ ಎರಡು ನಿಮಿಷಗಳಲ್ಲಿ ಉಂಟಾಗುತ್ತದೆ. ಅನೇಕ ಕೇಸುಗಳಲ್ಲಿ ಇಪ್ಪತ್ತು ಸೆಕೆಂಡುಗಳಿಗಿಂತಲೂ, ಕಡಮೆ ಅವಧಿಯಲ್ಲಿ ಸ್ಖಲನ ಉಂಟಾಗುವುದು ಕಂಡುಬಂದಿದೆ. ಶಿಶ್ನವನ್ನು ಯೋನಿಯಲ್ಲಿ ಪ್ರವೇಶಿಸುವ ಮೊದಲು ಅಥವಾ ಪ್ರವೇಶಿಸಿದ ಕೂಡಲೇ ವೀರ್ಯಸ್ಖಲನವಾದರೆ ಅದನ್ನು ಶೀಘ್ರ ವೀರ್ಯಸ್ಖಲನ ಅಥವಾ ‘ಪ್ರಿಮೆಚ್ಯೂರ್ ಎಜಾಕ್ಯುಲೇಷನ್’ ಎನ್ನುತ್ತಾರೆ.

 • ಶೀಘ್ರ ವೀರ್ಯಸ್ಖಲನ ತರುಣರಲ್ಲಿ ಉಂಟಾಗುವುದಕ್ಕೂ, ವಯಸ್ಸಾಗಿರುವವರಲ್ಲಿ ಉಂಟಾಗುವುದಕ್ಕೂ ಏನಾದರೂ ವ್ಯತ್ಯಾಸವಿದೆಯೇ?

ಹೌದು. ತರುಣರಲ್ಲಿ ಅನುಭವವಿಲ್ಲದೆಯಿರುವುದರಿಂದ, ಅಥವಾ ಅತಿಯಾದ ಕಾಮೋದ್ರೇಕದಿಂದ ಶೀಘ್ರ ವೀರ್ಯಸ್ಖಲನ ಉಂಟಾಗುತ್ತದೆ. ವಯಸ್ಸಾಗಿರುವವರಲ್ಲಿ ಕೆಲವೊಮ್ಮೆ ಅದು ಲೈಂಗಿಕ ದುರ್ಬಲತೆಯ ಪ್ರಥಮ ಲಕ್ಷಣವಾಗಿರಬಹುದೆಂದು ಡಾ|| ಯೂಜೆನ ಬಿ.ಮೋಜಸ್ ಅಭಿಪ್ರಾಯ ಪಡುತ್ತಾರೆ. ಅನೇಕ ಸಂದರ್ಭಗಳಲ್ಲಿ ಇಬ್ಬರ ವಯೋಮಾನದಲ್ಲೂ ಭಾವೋದ್ವೇಗದ ಕಾರಣಗಳಿಂದ ಮತ್ತು ಕೆಲವು ಸಂದರ್ಭಗಳಲ್ಲಿ ಶಾರೀರಕ ಸಂಗತಿಗಳಿಂದ ಉಂಟಾಗುತ್ತದೆ.

 • ಶೀಘ್ರ ವೀರ್ಯಸ್ಖಲನ ಲೈಂಗಿಕ ನಿಶ್ಯಕ್ತಿಯ ಲಕ್ಷಣವೇ? ಇದರಿಂದ ವಯಸ್ಸಿಗೇ ಮುಂಚಿತವಾಗಿಯೇ ಲೈಂಗಿಕ ದುರ್ಬಲತೆ (ಇಂಪೋಟೆನ್ಸ್) ಉಂಟಾಗುತ್ತದೆಯೇ?

ರೂಢಿಗತವಾಗಿ ಶೀಘ್ರ ವೀರ್ಯಸ್ಖಲನ, ಪ್ರತಿ ಪ್ರಯತ್ನದಲ್ಲೂ ಉಂಟಾಗುತ್ತಿದ್ದರೆ. ನಿರಂತರವಾಗಿ ಉಂಟಾಗುತ್ತಿದ್ದರೆ. ಅಸಂತೋಷ-ಅಸಮಾಧಾನದ ಅನುಭವಗಳ ಫಲಿತಾಂಶದಿಂದ ವ್ಯತ್ಯಾಸ ಉಂಟಾಗಬಹುದು. ಇದು ಲೈಂಗಿಕ ನಿರ್ಲಕ್ಷವೇ ಹೊರತು, ಲೈಂಗಿಕ ದುರ್ಬಲತೆಯಲ್ಲ. ಡಾ|| ಕಿನ್ಸೆಯ ಪ್ರಕಾರ. ಶೀಘ್ರ ವೀರ್ಯಸ್ಖಲನ. ಲೈಂಗಿಕ  ನಿಶ್ಯಕ್ತಿಯ ಲಕ್ಷಣವಲ್ಲ. ಅನೇಕ ಕೇಸುಗಳಲ್ಲಿ ಬೇಗನೆ ಉಂಟಾಗುವ ವೀರ್ಯಸ್ಖಲನ ರೋಗವಲ್ಲ ಎಂದು ತಜ್ಞರ ಅಭಿಪ್ರಾಯ.

 • ಶೀಘ್ರ ವೀರ್ಯಸ್ಖಲನ, ಭಾವೋದ್ವೇಗ (ಎಮೋಷನ್) ತೊಂದರೆಯಿಂದ ಉಂಟಾಗುತ್ತದೆಯೇ?

ಅನೇಕ ವೈದ್ಯರ ಪ್ರಕಾರ, ಭಾವೋದ್ವೇಗದ ಸಂಗತಿಗಳಿಂದಾಗಿ ಅನೇಕರಲ್ಲಿ ಶೀಘ್ರ ವೀರ್ಯಸ್ಖಲನ ಉಂಟಾಗುತ್ತದೆ: ತೀವ್ರತರವಾದ ಭಾವೋದ್ವೇಗ ಇರತಕ್ಕವರು ಮನೋವೈದ್ಯರಿಂದ ಚಿಕಿತ್ಸೆಯನ್ನು ಪಡೆಯಬೇಕು.

 • ಹೆಂಗಸರಿಗಾಗಿ ಇರುವ ತಾತ್ಕಾಲಿಕ ಗರ್ಭನಿರೋಧಕ ವಿಧಾನಗಳು ಯಾವುವು?

೧) ಕಾಪರ್‌ಟಿ ಅಥವಾ ಐಯುಡಿ.

೨) ಓರಲ್ ಪಿಲ್ಸ್ (ಓ.ಪಿ) ಅಥವಾ ಗರ್ಭನಿರೋಧಕ ಮಾತ್ರೆಗಳು.

(೧) ಕಾಪರ್‌ಟಿ ಅಥವಾ ಐ.ಯು.ಡಿ.ಯನ್ನು ಗರ್ಭಕೋಶದೊಳಗಡೆ ಅಳವಡಿಸಲಾಗುವುದು. ಇದು ಪಾಲಿಥೀನ್ ಹಾಗೂ ತಾಮ್ರದಿಂದ ಮಾಡಿದ ತಾಮ್ರದ ‘ಟಿ’ ವಿಧಾನವನ್ನು ಒಳಗೊಂಡಿದೆ.

  • ಕಾಪರ್‌ಟಿಯನ್ನು ಒಮ್ಮೆ ಅಳವಡಿಸಿಕೊಂಡು ನಂತರ ಇದನ್ನು ಅಳವಡಿಸಿಕೊಂಡವರಲ್ಲಿ ಗರ್ಭಧಾರಣೆ ಆಗುವುದನ್ನು ತಡೆಗಟ್ಟುತ್ತದೆ.
  • ಮಗು ಬೇಕೆನಿಸಿದಾಗ ಕಾಪರ್‌ಟಿಯನ್ನು ತೆಗೆಸಿಬಿಡಬಹುದು.
  • ಈ ಸಾಧನವನ್ನು ಅಳವಡಿಸಿಕೊಳ್ಳಲು ಆಸ್ಪತ್ರೆಯಲ್ಲಿ ದಾಖಲಾಗಬೇಕಾಗಿಲ್ಲ.
  • ಲೈಂಗಿಕ ಸಂಭೋಗಕ್ಕೆ ತೊಂದರೆಯನ್ನುಂಟು ಮಾಡುವುದಿಲ್ಲ.
  • ಕಡೆಯಪಕ್ಷ ಮೂರು ವರ್ಷಗಳಿಗೊಮ್ಮೆಯಾದರೂ ಕಾಪರ್‌ಟಿಯನ್ನು ಬದಲಾಯಿಸಿಕೊಳ್ಳಬೇಕು
  • ಕೆಲವು ಸ್ತ್ರೀ ರೋಗಗಳಿರುವ ಸಂದರ್ಭಗಳಲ್ಲಿ ಅಳವಡಿಸಿಕೊಳ್ಳಬಾರದು.
  • ಮಕ್ಕಳಿಲ್ಲದ ಮಹಿಳೆಯರು ಕಾಪರ್‌ಟಿಯನ್ನು ಅಳವಡಿಸಿಕೊಳ್ಳಬಾರದು.
  • ಹೆಚ್ಚು ಮಕ್ಕಳನ್ನು ಹೆತ್ತಿರುವ ಮಹಿಳೆಯರು ಅಳವಡಿಸಿಕೊಳ್ಳಬಾರದು
  • ೩೦ ವರ್ಷದೊಳಪಟ್ಟ ವಿವಾಹಿತ ಮಹಿಳೆಯರು ಮಾತ್ರ ಅಳವಡಿಸಿಕೊಳ್ಳಬೇಕು.
  • ಕಾಪರ್‌ಟಿಯನ್ನು ಇತರ ವಿಧಾನಗಳನ್ನು ಅನುಸರಿಸಲು ಸಾಧ್ಯ ವಿಲ್ಲದ ಮಹಿಳೆಯರು, ಒಂದು ಮಗುವಿಗೂ, ಇನ್ನೊಂದು ಮಗುವಿಗೂ ಅಂತರವನ್ನಿಡಲು ಅಳವಡಿಸಿಕೊಳ್ಳಬಹುದು.
  • ಕಾಪರ್ ಟಿಯನ್ನು ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಅಳವಡಿಸುತ್ತಾರೆ.

(೨) ಓರಲ್ ಪಿಲ್ಸ್ ಅಥವಾ ಗರ್ಭನಿರೋಧಕ ಮಾತ್ರೆಗಳು:

ಗರ್ಭಧಾರಣೆಯನ್ನು ಮುಂದೂಡಲು ಇಚ್ಛಿಸುವ ಮಹಿಳೆಯರು ಸಂತಾನದ ನಡುವೆ ಅಂತವನ್ನಿಡಲು ಓರಲ್‌ಪಿಲ್ಸ್‌ನ್ನು ಉಪಯೋಗಿಸಲು ಶಿಫಾರಸ್ಸು ಮಾಡಲಾಗಿದೆ.

ಪ್ರತಿ ಮಾತ್ರೆಯ ಪ್ಯಾಕೆಟ್‌ನಲ್ಲಿ ೨೮ ಮಾತ್ರೆಗಳಿರುತ್ತವೆ. ೨೧ ಬಿಳಿಯ ಮಾತ್ರೆಗಳು ಹಾರ್ಮೊನ್‌ಗಳನ್ನು ಹೊಂದಿದ್ದು ಗರ್ಭಧಾರಣೆಯನ್ನು ತಡೆಗಟ್ಟುತ್ತದೆ. ಮತ್ತು ೭ ಬಣ್ಣದ ಮಾತ್ರೆಗಳಾಗಿದ್ದು ಇವು ಕಬ್ಬಿಣ (ಐರನ್)ವನ್ನು ಹೊಂದಿರುತ್ತದೆ. ಮುಟ್ಟಾದ ೫ನೇ ದಿನದಿಂದ ಮಾತ್ರೆ ತೆಗೆದುಕೊಳ್ಳಲು ಆರಂಭಿಸಬೇಕು.

ಗರ್ಭನಿರೋಧಕ ಮಾತ್ರೆಗಳನ್ನು ವೈದ್ಯರಿಂದ ಪರೀಕ್ಷಿಸಿಕೊಂಡ ನಂತರ ಉಪಯೋಗಿಸಬೇಕು.

 • ಕುಟುಂಬ ಕಲ್ಯಾಣ (ಯೋಜನೆ) ಎಂದರೇನು?

ಕುಟುಂಬ ಕಲ್ಯಾಣ ಸೇವೆಗಳಲ್ಲಿ ಈ ಕೆಳಕಂಡವು ಸೇರಿವೆ:

೧) ಮಕ್ಕಳ ನಡುವೆ ಅಂತರವಿಡಲು ಆಧುನಿಕ ಗರ್ಭನಿರೋಧಕಗಳ ಬಳಕೆ. ಕುಟುಂಬ ಯೋಜನೆಯನ್ನುಎಲ್ಲಾ ವಿವಾಹಿತ ಅರ್ಹದಂಪತಿಗಳು. ಮಕ್ಕಳ ನಡುವೆ ಅಂತರವನ್ನಿಡಲು ಅಭ್ಯಾಸ ಮಾಡಬೇಕು. ಒಂದು ಮಗುವಿಗೂ, ಇನ್ನೊಂದು ಮಗುವಿಗೂ ಕನಿಷ್ಠ ಮೂರು ವರ್ಷಗಳ ಅಂತರವಿರಬೇಕು.

೨) ಬಂಜೆತನದ ಕಾರಣಗಳನ್ನು ಪತ್ತೆ ಹಚ್ಚಿ ಅದರ ನಿವಾರಣೆಗಾಗಿ ಸೂಕ್ತ ಚಿಕಿತ್ಸೆ.

೩) ವಿವಾಹ ಶಿಕ್ಷಣ: ಮದುವೆ ಆಗಲಿರುವ ಗಂಡು-ಹೆಣ್ಣಿಗೆ ವೈವಾಹಿಕ ಹಾಗೂ ಕುಟುಂಬ ಯೋಜನೆಯ ಬಗ್ಗೆ ತಿಳುವಳಿಕೆ.

೪) ವೈವಾಹಿಕ ಸಮಾಲೋಚನೆ: ವೈವಾಹಿಕ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ.

ಕುಟುಂಬ ಯೋಜನೆ (ಫ್ಯಾಮಿಲಿ ಫ್ಲಾನಿಂಗ್) ಯಲ್ಲಿ ನಾರ್ಮಲ್ ಲೈಂಗಿಕ ಸಂಬಂಧಕ್ಕೆ ಅಡ್ಡಿಯಾಗದಂತೆ ಗರ್ಭಧಾರಣೆಯನ್ನು ತಡೆಗಟ್ಟಲು ತಾತ್ಕಾಲಿಕ ವಿಧಾನಗಳಿವೆ.

ಗರ್ಭಧಾರಣೆಯನ್ನು ತಡೆಗಟ್ಟಲು ಅನುಸರಿಸಲು ವಿಧಾನವನ್ನು ಕುಟುಂಬ ಯೋಜನಾ (ಕಲ್ಯಾಣ) ವಿಧಾನವೆನ್ನುತ್ತಾರೆ.

 • ಗಂಡಸರಿಗಾಗಿ ಇರುವ ತಾತ್ಕಾಲಿಕ ವಿಧಾನಗಳಾವುವು?

ಅವುಗಳೆಂದರೆ:

೧) ನಿರೋಧ್ ಅಥವಾ ಕಾಂಡಮ್

೨) ವಿತ್‌ಡ್ರಾವಲ್ ಮೆಥೆಡ್ ಅಥವಾ ಹಿಂತೆಗೆದುಕೊಳ್ಳುವುದು.

ನಿರೋಧ್ ಅಥವಾ ಕಾಂಡಮ್‌ನ್ನು ತೆಳುವಾದ ರಬ್ಬರ್‌ನಿಂದ ತಯಾರಿಸಲಾಗಿರುತ್ತದೆ. ಲೈಂಗಿಕ ಸಂಭೋಗಕ್ಕೆ ಮೊದಲು, ಒಂದು ನಿರೋಧನ್ನು ಪ್ಯಾಕೆಟ್‌ನಿಂದ ಹೊರತೆಗೆದು ನಿಗುರಿರುವ ಶಿಶ್ನ (ಲಿಂಗ)ಕ್ಕೆ ಧರಿಸಿದ ನಂತರ ಲೈಂಗಿಕ ಕ್ರಿಯೆಯಲ್ಲಿ ಪುರುಷ ತೊಡಗಬೇಕು. ನಿರೋಧನ್ನು ಧರಿಸಿ, ಲೈಂಗಿಕ ಕ್ರಿಯೆಯನ್ನು ನಡೆಸುವುದರಿಂದ ವೀರ್ಯಾಣುಗಳು ಯೋನಿಯನ್ನು ಪ್ರವೇಶಿಸುವುದು ತಡೆಗಟ್ಟುತ್ತದೆ.

ಪ್ರತಿ ಸಾರಿ ಲೈಂಗಿಕ ಸಂಭೋಗ ಮಾಡುವಾಗಲು ಹೊಸದಾದ ನಿರೋಧನ್ನು ಬಳಸಬೇಕು. ಲೈಂಗಿಕ ಕ್ರಿಯೆ ಮುಗಿದ ನಂತರ ನಿರೋಧನ್ನು ಪೇಪರ್‌ನಲ್ಲಿ ಸುತ್ತಿ ಕಸದ ಬುಟ್ಟಿಗೆ ಎಸೆಯಬೇಕು.

ನಿರೋಧ್ ಉಚಿತವಾಗಿ ಆರೋಗ್ಯ ಇಲಾಖೆಯ ಎಲ್ಲಾ ಆರೋಗ್ಯ ಸಹಾಯಕರಲ್ಲಿ, ಸರ್ಕಾರ ಆಸ್ಪತ್ರೆಗಳ ಕುಟುಂಬ ಯೋಜನಾ ವಿಭಾಗದಲ್ಲಿ ದೊರೆಯುತ್ತವೆ. ಕಡಮೆ ಬೆಲೆಗೆ ‘ನಿರೋಧ್’ ಔಷಧಿ ಅಂಗಡಿಗಳಲ್ಲಿ, ಸಣ್ಣ ಪುಟ್ಟ ಅಂಗಡಿಗಳಲ್ಲೂ ಮಾರಾಟಕ್ಕೆ ಸಿಗುತ್ತದೆ.

 • ನಿರೋಧ್ ಪರಿಣಾಮಕಾರಿಯೇ?

ದಂಪತಿಗಳು, ಕ್ರಮವಾಗಿ ಉಪಯೋಗಿಸಿದರೆ, ನಿರೋಧ್ ಸುರಕ್ಷಿತ ಹಾಗೂ ಗರ್ಭಧಾರಣೆಯಾಗುವುದನ್ನು ತಡೆಗಟ್ಟುತ್ತದೆ. ಸರಿಯಾಗಿ ಉಪಯೋಗಿಸದಿದ್ದರೆ, ನಿರೋದ್ ಹರಿದು, ವೀರ್ಯ ಯೋನಿಯನ್ನು ಪ್ರವೇಶಿಸಿ ಗರ್ಭಧಾರಣೆಯಾಗಬಹುದು.

 • ನಿರೋಧನ್ನು ಉಪಯೋಗಿಸುವುದರಿಂದ ಆಗುವ ಅನುಕೂಲಗಳೇನು?

– ಇದು ಉಪಯೋಗಿಸಲು ಸುಲಭ ಮತ್ತು ಅನುಕೂಲಕರ

– ಸರಿಯಾಗಿ ಉಪಯೋಗಿಸಿದರೆ, ನಿರೋಧ್ ಗರ್ಭಧಾರಣೆಯಾಗುವುದನ್ನು ತಡೆಗಟ್ಟುತ್ತದೆ.

– ಮಗು, ಬೇಕೆನಿಸಿದಾಗ ನಿರೋಧ್ ಬಳಸುವುದನ್ನು ನಿಲ್ಲಿಸಬಹುದು.

– ನಿರೋಧ್ ಉಪಯೋಗಿಸುವ ಮೊದಲು ವೈದ್ಯರನ್ನು ಕಾಣುವ ಅಗತ್ಯವಿಲ್ಲ.

– ಇದರಿಂದ ಅಡ್ಡಿ ಪರಿಣಾಮಗಳಾಗುವುದಿಲ್ಲ.

– ನಿರೋಧ್, ಲೈಂಗಿಕ ಸಾಗಾಣಿಕೆ ರೋಗಗಳು (ಎಸ್.ಟಿ.ಡಿ.) ಮತ್ತು ಏಯ್ಡ್ಸ್ ಕಾಯಿಲೆ ಹರಡುವುದನ್ನು ತಡೆಗಟ್ಟುತ್ತದೆ.

 • ವಿತ್ಡ್ರಾವಲ್ ಮೆಥೆಡ್ ಎಂದರೇನು?

ವಿತ್‌ಡ್ರಾವಲ್ ಮೆಥೆಡ್‌ನ್ನು ಕ್ವಾಯಿಟಸ್ ಇಂಟರಪ್‌ಟಸ್ ಎಂತಲೂ ಕರೆಯುತ್ತಾರೆ. ಕನ್ನಡದಲ್ಲಿ ಇದಕ್ಕೆ ಹಿಂತೆಗೆದುಕೊಳ್ಳುವುದು ಎನ್ನುತ್ತಾರೆ.

ಈ ವಿಧಾನದಲ್ಲಿ, ಲೈಂಗಿಕ ಕ್ರಿಯೆ ನಡೆಯುತ್ತಿರುವ ಸಮಯದಲ್ಲಿ ವೀರ್ಯವು ಹೊರಚೆಲ್ಲುವುದಕ್ಕೆ ಮೊದಲು, ಪುರುಷ ಶಿಶ್ನ (ಲಿಂಗ)ವನ್ನು ಯೋನಿಯಿಂದ ಹಿಂತೆಗೆದುಕೊಳ್ಳುತ್ತಾನೆ.

 • ವಿತ್ಡ್ರಾವಲ್ ಮೆಥೆಡ್ ಅನುಕೂಲತೆಯೇನು?

– ಗರ್ಭನಿರೋಧಕಗಳ ಅಗತ್ಯವಿಲ್ಲ

– ಹಣ ತೆರಬೇಕಾಗಿಲ್ಲ.

– ಪೂರ್ವಭಾವಿಯಾಗಿ ವೈದ್ಯಕೀಯ ಪರೀಕ್ಷೆಯನ್ನು ಮಾಡಿಸಬೇಕಾಗಿಲ್ಲ.

 • ಇದು ನಂಬಬಹುದಾದ ಗರ್ಭನಿರೋಧಕ ವಿಧಾನವೇ?

ಲೈಂಗಿಕ ಸಂಭೋಗದ ಸಂದರ್ಭದಲ್ಲಿ ವೀರ್ಯದ ಒಂದು ತೊಟ್ಟು ನಿಜವಾದ ವೀರ್ಯ ವಿಸರ್ಜನೆಯಾಗುವ ಮೊದಲೇ, ಹೊರ ಬರಬಹುದು ಮತ್ತು ವೀರ್ಯಾಣುಗಳು ಯೋನಿಯಮೂಲಕ ಗರ್ಭ ಗೊರಳನ್ನು ಪ್ರವೇಶಿಸಲು ದಾರಿ ಮಾಡಿಕೊಡಬಹುದು. ಆದುದರಿಂದ, ಇದು ನಂಬಹುದಾದ ಗರ್ಭ ನಿರೋಧಕ ವಿಧಾನವಲ್ಲ.

 • ವಿಧಾನ ತೃಪ್ತಿಕರವಾದುದೇ?

ಅನೇಕ ದಂಪತಿಗಳಲ್ಲಿ ಈ ವಿಧಾನ ಮಾನಸಿಕ ತೊಂದರೆಯನ್ನು ಮೂಡಿಸುತ್ತದೆ. ಅಲ್ಲದೆ, ಲೈಂಗಿಕ ಕ್ರಿಯೆಗೆ, ಸಂತೋಷಕ್ಕೆ ಅಡ್ಡಿಯನ್ನುಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ.

 • ಲೈಂಗಿಕ ನಾಚಿಕೆಯನ್ನು ನಿವಾರಿಸಿಕೊಳ್ಳುವುದು ಹೇಗೆ?

ನಾಚಿಕೆ, ಸ್ವಲ್ಪ ಮಟ್ಟಿಗೆ ಅಥವಾ ಒಂದಲ್ಲ ಒಂದು ವಿಧದಲ್ಲಿ ಇರುತ್ತದೆ. ನಾವೆಲ್ಲಾ ನಾಚಿಕೆಯ ಸ್ವಭಾವದವರೇ! ಆದರೆ, ನಾಚಿಕೆ [Shyness] ಲೈಂಗಿಕ ವಿಚಾರಕ್ಕೆ ಬಂದಾಗ ವಂಚನೆಯನ್ನುಂಟು ಮಾಡುತ್ತದೆ. ಕೆಲವು ವ್ಯಕ್ತಿಗಳು ಸಾಮಾಜಿಕ ಸಂದರ್ಭದಲ್ಲೂ ನಾಚಿಕೆಯಿಂದಲೇ ನರಳುತ್ತಿರುತ್ತಾರೆ. ಕೆಲವು ಸ್ತ್ರೀ-ಪುರುಷರು ಬೆಡ್ ರೂಂನಲ್ಲೂ ಕೂಡ ಲೈಂಗಿಕ ನಾಚಿಕೆಯಿಂದಲೇ ಪ್ರತಿಕ್ರಿಯಿಸದೆ ತೆಪ್ಪಗಿರುತ್ತಾರೆ. ಇದರಿಂದ, ಏಕಾಂತದಲ್ಲಿ ತಮ್ಮ ಸಂಗಾತಿಯೊಡನೆ ಸಂಭಾಷಿಸಲು ಅವರ ಮನಸ್ಸು ಹಿಂಜರಿಯುತ್ತದೆ. ಇದಕ್ಕೆ ಕಾರಣ ಕೀಳರಿಮೆ ಮತ್ತು ಏಕಾಂಗಿತನ. ಇದನ್ನು ನಿವಾರಿಸಬೇಕಾದರೆ ನಾಚಿಕೆಯುಳ್ಳ ಸ್ತ್ರೀಯನ್ನು ಪುರುಷ, ನಾಚಿಕೆಯುಳ್ಳ ಪುರುಷನನ್ನು ಸ್ತ್ರೀ ಆಕರ್ಷಿಸಿ, ಲೈಂಗಿಕ ಸನ್ನಿವೇಶವನ್ನು ಕಲ್ಪಿಸಿಕೊಂಡು ಕೂಟ ಮುನ್ನಲಿವು ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು.

ಅಲ್ಲದೆ, ಕೂಟ ಮುನ್ನಲಿವು (ಪೋರ್‌ಪ್ಲೇ) ಕ್ರಿಯೆಯಲ್ಲಿ ತೊಡಗಿದ್ದಾಗ ದಂಪತಿಗಳು ತಮಗೆ ಇಷ್ಟವಾಗುವ ಪ್ರೀತಿಯ ಆಟವನ್ನು ಸಂಕೋಚವಿಲ್ಲದೆ ಹೇಳಿಕೊಳ್ಳಬೇಕು.

 • ಸೆಕ್ಸ್ ಬಗ್ಗೆ ನಾಚಿಕೆ ಉಂಟಾಗಲು ಕಾರಣ. ಲೈಂಗಿಕತೆಯ ಬಗೆಗಿನ ಅಪರಾಧ ಮನೊ ವನೇಭಾ:

ನೆನಪಿರಲಿ:-

೧) ಲೈಂಗಿಕ ಅಪರಾಧ ಮನೋಭಾವನೆಯನ್ನು ಮೊತ್ತಮೊದಲು ನಿವಾರಿಸಿಕೊಳ್ಳಿರಿ.

೨) ಮಲಗುವ ಕೊಣೆಯಲ್ಲಿ ಲೈಂಗಿಕ ನಾಚಿಕೆಯನ್ನು ಬಿಟ್ಟು ಸಂಗಾತಿಯ ಜೊತೆ ನವಿರಾಗಿ ವರ್ತಿಸಿರಿ.

೩) ನಾಚಿಕೆಯಿಂದ ಆತಂಕ, ಭಯ ಉಂಟಾದರೆ ಲೈಂಗಿಕ ಕ್ರಿಯೆಯನ್ನು ನಡೆಸಲಾಗುವುದಿಲ್ಲ.

೪) ನಿಮ್ಮ ಲೈಂಗಿಕ ಆಸೆಗಳನ್ನು ನಿಮ್ಮ ಸಂಗಾತಿಗೆ ಆತುರ ಪಡದೆ ಹಂತ ಹಂತವಾಗಿ ತಿಳಿಸಿರಿ. ಸಂಯಮದಿಂದ ವರ್ತಿಸುವುದನ್ನು ಮರೆಯದಿರಿ.

೫) ನಿಮ್ಮ ಸಂಗಾತಿ ತುಂಬಾ ನಾಚಿಕೆಯ ಸ್ವಭಾವದವರಾಗಿದ್ದರೆ ಅದನ್ನು ನಿವಾರಿಸಲು ನೀವೇ ಮುಂದಾಗುವುದರಲ್ಲಿ ತಪ್ಪಿಲ್ಲ.

೬) ನೀವು ತುಂಬಾ ಲೈಂಗಿಕ ನಾಚಿಕೆಯ ಸ್ವಭಾವದವರಾಗಿದ್ದರೆ, ಮಲಗುವ ಕೋಣೆಯಲ್ಲಿ ಏಕಾಂತದಲ್ಲಿ ಅಥವಾ ನಿಮ್ಮ ಸಂಗಾತಿ ನಿಮ್ಮ ಸಂಗಡ ಬೆಡ್‌ರೂಂನಲ್ಲಿದ್ದಾಗ ಆಗಾಗ್ಗೆ ಬೆತ್ತಲೆಯಾಗಿ ನಿಮ್ಮ ಶರೀರದ ಎಲ್ಲಾ ಭಾಗಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಸ್ಪರ್ಶಿಸಿ ಕೊಳ್ಳುವ ಅಭ್ಯಾಸವನ್ನು ಮಾಡುವುದರಿಂದ ಕ್ರಮೇಣ ಲೈಂಗಿಕ ನಾಚಿಕೆ ಹೊರಟುಹೋಗುತ್ತದೆ.

೭) ನಾಚಿಕೆ ಅತಿಯಾದರೆ ದಾಂಪತ್ಯ ಜೀವನದಲ್ಲಿ ದಂಪತಿಗಳ ನಡುವೆ ರಸಿಕತೆ, ರತಿ ರಂಜನೆಗೆ ತೊಡಕು ಉಂಟಾಗುತ್ತದೆ.
೮) ಆಗಿಂದಾಗ್ಗೆ ನಿಮ್ಮ ಸಂಗಾತಿಯನ್ನು ಪ್ರಣಯಭರಿತ ಸಿನಿಮಾ ಗಳಿಗೆ ಕರೆದೊಯ್ಯಿರಿ. ಪ್ರಣಯಭರಿತ ಕಾದಂಬರಿಗಳನ್ನು ಓದಲು ತಂದುಕೊಡಿರಿ.
೯) ಊಟೋಪಚಾರ, ಸ್ನಾನ ಮಾಡುವಾಗ ನಿಮ್ಮ ಸಂಗತಿಯನ್ನು ಹೆಸರಿಡಿದು ಗೌರವವಾಗಿ ಕರೆಯಿರಿ.
೧೦) ಆಗಿಂದಾಗ್ಗೆ, ನಿಮ್ಮ ಸಂಗಾತಿಗೆ ಅಗತ್ಯವಾದ ಉಡುಗೊರೆ ವಸ್ತುಗಳನ್ನು ಉಡುಗೊರೆಯಾಗಿ ತಂದುಕೊಡುವುದನ್ನು ಮರೆಯದರಿರಿ. ಜೊತೆಯಲ್ಲಿ ಸಂಜೆಯ ವೇಳೆ ಶಾಪಿಂಗ್‌ಗೆ ಅಥವಾ ವಾಕಿಂಗ್‌ಗೆ ಕರೆದೊಯ್ಯಿರಿ. ಇದರಿಂದ ಲೈಂಗಿಕ ನಾಚಿಕೆ ನಿವಾರಣೆ ಆಗಲು ಪ್ರೇರಣೆ ಉಂಟಾಗುತ್ತದೆ.

 • ಯಾವ ಹೆಣ್ಣಿನಲ್ಲು ಬೇಕಾಮನೆ ಇರುವುದಿಲ್ಲವೇ?

ವಿಶ್ವವಿಖ್ಯಾತ ಲೈಂಗಿಕ ವಿಜ್ಞಾನಿಗಳಾದ ಡಾ|| ಮಾಸ್ಟರ್ಸ್ ಅಂಡ್ ಜಾನ್ಸನ್. ಬೇಕಾಮನೆ ಅಥವಾ ಪ್ರಿಜಿಡಿಟಿ ಆರೋಗ್ಯವಂತರಾಗಿರುವ ಯಾವ ಹೆಣ್ಣಲ್ಲೂ ಇರುವುದಿಲ್ಲ. ಅಲ್ಲದೆ, ‘ಪ್ರಿಜಿಡಿಟಿ’ ಅನ್ನುವ ಪದವನ್ನು ಕೂಡ ಉಪಯೋಗಿಸುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಸ್ತ್ರೀ, ಲೈಂಗಿಕ ಸಂತೃಪ್ತಿ (ಆರ್ಗ್‌ಸಮ್) ಹೊಂದದಿರಲು ಕಾರಣ ಚಿಕ್ಕಂದಿನಿಂದಲೂ ಸೆಕ್ಸ್. ಕೊಳಕಾದುದು; ಪುರುಷರು ಸೆಕ್ಸ್‌ಗಾಗಿ ಏನೆಲ್ಲ ಮಾಡಲು ತಯಾರಾಗುತ್ತಾರೆ ಎಂಬ ಕೆಟ್ಟ ಅಭಿಪ್ರಾಯಗಳೇ ಆಕೆಯ ಮನಸ್ಸಿನ ತುಂಬಿರುವುದು.

ಸಾಮಾನ್ಯವಾಗಿ, ಸೆಕ್ಸ್ ಬಗ್ಗೆ ನಿರಾಸಕ್ತಿ ವಹಿಸಿರತಕ್ಕ ಸ್ತ್ರೀಯರೆಲ್ಲರೂ ಸಾಂಪ್ರಾದಾಯಿಕ ಮನೆತನದಿಂದ ಬಂದವರೇ ಆಗಿರುತ್ತಾರೆ. ಅಲ್ಲದೆ, ಕಟ್ಟುನಿಟ್ಟಾದ ಸಾಂಪ್ರಾದಾಯಿಕ ಭಾವನೆಗಳು ಅವರು ‘ಕಾಮಾವೇಶ’ ಹೊಂದಲು ತೊಡಕುಂಟು ಮಾಡುತ್ತದೆ. ಆದುದರಿಂದ ಪುರುಷ. ಸಾಂಪ್ರದಾಯಿಕ ಮನೆತನದ ಹೆಣ್ಣನ್ನು ಮದುವೆಯಾಗಿದ್ದರೆ ಆಕೆ, ಸೆಕ್ಸ್ ಬಗ್ಗೆ ನಿರಾಸಕ್ತಿ ಹೊಂದಿದ್ದರೆ ಆತುರ ಪಡದೆ, ಸಂಯಮದಿಂದ ಆಕೆಯಲ್ಲಿ ಹಂತ ಹಂತವಾಗಿ ಸೆಕ್ಸ್ ಬಗ್ಗೆ ಆರೋಗ್ಯಕರ ಮನೋಭಾವನೆಯನ್ನು ಮೂಡಿಸಿ ಆಕೆಯನ್ನು ಒಲಿಸಿಕೊಳ್ಳಬೇಕು.

 • ದಂಪತಿಗಳು ಲೈಂಗಿಕ ಸಂಭೋಗಕ್ಕೆ ಮೊದಲು ನಡೆಸುವ ಚಟುವಟಿಕೆಗೆ ಇರತಕ್ಕ ವಿವಿಧ ಹೆಸರುಗಳೇನು?

ಪ್ರೇಮ, ಪೀಠಿಕೆ, ಪ್ರೀತಿಯ ಆಟ, ಪ್ರೇಮದಾಟ, ಕಾಮಕೇಳಿ, ಲೈಂಗಿಕದಾಟ, ಕೂಟಮುನ್ನಲಿವು, ಕಾಮಕ್ರೀಡೆ, ರತಿಕ್ರೀಡೆ, ರತಿರಂಜನೆ, ಲವ್‌ಪ್ಲೇ, ಪೋರ್‌ಪ್ಲೇ ಮೊದಲಾದವು.

ಕೆಲವು ಪದಗಳ ಅರ್ಥ:

ಕಾಮ = ಬಯಕೆ, ಇಷ್ಟ; ಕೇಳೀ = ಕ್ರೀಡೆ, ಆಟ, ವಿನೋದ; ರಂಜನೆ = ಶೃಂಗಾರ, ಚೆಲುವು ಹುಟ್ಟಿಸುವಿಕೆ, ಸಂತೋಷಕಾರಕ; ರತಿ = ರಾಗ, ಪ್ರೀತಿ, ವಿಲಾಸ, ಶೃಂಗಾರ ಚೇಷ್ಟೆ; ಸಂಭೋಗ = ಆನಂದ, ಸುರತ, ಸ್ತ್ರೀ-ಪುರುಷರ ಕೂಟ

 • ಲೈಂಗಿಕ ಕೂಟ ಮುನ್ನಲಿವು ಅಥವಾ ಪೋರ್ಪ್ಲೇ ಎಂದರೇಣು?

೧) ದಂಪತಿಗಳ ನಡುವೆ ಲೈಂಗಿಕ ಸಂಪರ್ಕಕ್ಕಾಗಿ, ಪರಸ್ಪರ ದಂಪತಿಗಳು ಲೈಂಗಿಕ ಉತ್ತೇಜನವನ್ನು ಪಡೆಯಲು ಪುರುಷ ಶಿಶ್ನವನ್ನು ಯೋನಿಯೊಳಕ್ಕೆ ಪ್ರವೇಶಿಸದೆ ನಡೆಸುವ ಪ್ರೀತಿಯ ಆಟಕ್ಕೆ ಕೂಟಮುನ್ನಲಿವು, ಸಂಭೋಗಪೂರ್ವ ಕಾಮಕೇಳಿ ಅಥವಾ ಪೋರ್‌ಪ್ಲೇ ಎನ್ನುತ್ತಾರೆ.

೨) ಲೈಂಗಿಕ ಸಂಭೋಗದ ಕ್ರಿಯೆಯನ್ನು ನಡೆಸುವುದಕ್ಕಾಗಿ ದಂಪತಿಗಳು ಮಾಡಿಕೊಳ್ಳುವ ಸಿದ್ಧತೆಗೆ ಕೂಟಮುನ್ನಲಿವು ಎಂದು ಕರೆಯತ್ತಾರೆ.

೩) ಸ್ತ್ರೀ-ಪುರುಷರು ಲೈಂಗಿಕ ಭಾವನೆಗಳನ್ನು ಹೊಂದಲು ಪ್ರೀತಿಯ ಆಟ ಅಥವಾ ಕಾಮಕೇಳಿಯ ಚಟುವಟಿಕೆಯಲ್ಲಿ ತೊಡಗುವುದು.

೪) ರಮಿಸುವಿಕೆಯು ಲೈಂಗಿಕ ಸಂಭೋಗದ ಮೂಲಕ ಕೊನೆಗುಳ್ಳುತ್ತದೆ.

೫) ಲೈಂಗಿಕ ಸಂಭೋಗಕ್ಕೆ ಮೊದಲು ಅಗತ್ಯವಾಗಿ ಸಂಭೋಗಪೂರ್ವ ಕಾಮಕೇಳಿ ದಂಪತಿಗಳಿಬ್ಬರ ಹಿತ ದೃಷ್ಟಿಯಿಂದ ನಡೆಯುವುದು ಬಹಳ ಅಗತ್ಯ. ಇದನ್ನು ಫೋರ್‌ಪ್ಲೇ ಎಂದು ಕರೆಯುತ್ತಾರೆ.

೬) ದಾಂಪತ್ಯದಲ್ಲಿ, ಲೈಂಗಿಕ ಸಂತೋಷವನ್ನು ಹೊಂದುವ ಪ್ರಥಮ ಹಂತವೇ ಕೂಟಮುನ್ನಲಿವು ಅಥವಾ ಫೋರ್‌ಪ್ಲೇ.

 • ಕೂಟಮುನ್ನಲಿವು [Fore Play] ಅಗತ್ಯವೇ?

ದಂಪತಿಗಳಿಬ್ಬರ ಮನಸ್ಸು, ದೇಹ ಆರೋಗ್ಯಕರವಾಗಿದ್ದು, ಪರಸ್ಪರ ಇಬ್ಬರಲ್ಲೂ ಲೈಂಗಿಕ ಆಸಕ್ತಿ ಇದ್ದರೆ, ಪರಸ್ಪರ ಇಬ್ಬರು ಮಾನಸಿಕವಾಗಿ ಕಾಮೋತ್ತೇಜನ ಹೊಂದಿದ್ದರೆ, ಕೂಟಮುನ್ನಲಿವು ಕ್ರಿಯೆ ಇಲ್ಲದೆಯೇ, ಸಂಭೋಗ ಕ್ರಿಯೆಯಲ್ಲಿ ತೊಡಗಬಹುದು. ಆದರೆ, ದಂಪತಿಗಳಿಬ್ಬರ ಮನಸ್ಸು ಏಕಕಾಲದಲ್ಲಿ ಸಮಾನವಾಗಿಯೇ ಲೈಂಗಿಕ ಉತ್ತೇಜನಗೊಂಡಿರುತ್ತದೆಂದೂ ಹೇಳುವುದು ಕಷ್ಟ!

ಮದುವೆಯಾದ ಹೊಸದರಲ್ಲಿ ಸಾಮಾನ್ಯವಾಗಿ ತಾರುಣ್ಯವುಳ್ಳ ನವದಂಪತಿಗಳಲ್ಲಿ ಪ್ರೀತಿಗಿಂತಲೂ, ಸೆಕ್ಸ್ ಅನುಭವಿಸುವ ರೀತಿ-ನೀತಿಗಳೇ ಮೊದಲಾಗಿರುತ್ತದೆ. ಪುರುಷನಲ್ಲಿ ಮೊದಲ ರಾತ್ರಿಯೇ ಸೆಕ್ಸ್ ಅನುಭವಿಸಬೇಕೆಂಬ ಆತಂಕ-ಹಂಬಲವಿರುವುದು ಸಹಜ. ಹೆಣ್ಣು ತನ್ನ ಪತಿಗೆ ಸೆಕ್ಸ್‌ನ್ನು ಅರ್ಪಿಸುವ ಮುನ್ನ ಆಖೆ, ಆತನಿಂದ ಪ್ರೀತಿ-ವಿಶ್ವಾಸ ಮೃದು ಮಾತುಕತೆ, ಆರೋಗ್ಯ ವರ್ತನೆಯನ್ನು ನಿರೀಕ್ಷಿಸುತ್ತಾಳೆ. ಮದುವೆಗೆ ಮೊದಲು ಪರಸ್ಪರ ಮನಸ್ಸಿನ ಭಾವನೆಗಳನ್ನುಹಂಚಿಕೊಂಡಿದ್ದರೆ ಅಥವಾ ಲೈಂಗಿಕ ವಿಜ್ಞಾನದ ಬಗ್ಗೆ ತಿಳುವಳಿಕೆ ಇದ್ದರೆ ಮೊದಲ ರಾತ್ರಿಯೇ ದಂಪತಿಗಳು ಸೆಕ್ಸ್‌ನ್ನು ಅನುಭವಿಸಲು ಅನುಕೂಲವಾಗಬಹುದು!

ಮದುವೆಯಾದ ಒಂದೆರಡು ವರ್ಷಗಳು ನವ ದಂಪತಿಗಳಲ್ಲಿ, ಅದರಲ್ಲೂ ತಾರುಣ್ಯವುಳ್ಳ ನವ ದಂಪತಿಗಳಲ್ಲಿ ಕೂಟಮುನ್ನಲಿವು ಹೆಚ್ಚು ಕಾಲ ನಡೆಯಬೇಕಾದ ಅಗತ್ಯವೇ ಬೀಳುವುದಿಲ್ಲ. ಕಾರಣ, ನವ ದಂಪತಿಗಳ ಶರೀರ ಮತ್ತು ಮನಸ್ಸು ಲೈಂಗಿಕ ಪ್ರೀತಿಯ ಭಾವನೆಗಳಿಂದಲೇ ಕೂಡಿದ್ದು. ಅನುಭವಿಸಲು ಹಾತೊರೆಯುತ್ತಿರುತ್ತದೆ. ಆದರೆ ಒತ್ತಾಯದ ಮದುವೆಗಳಲ್ಲಿ ಕೂಟಮುನ್ನಲಿವು ಅಥವಾ ಲೈಂಗಿಕ ಸಂಭೋಗ ನಡೆಯಬೇಕಾದರೆ ಅನೇಕ ದಿನಗಳು ಅಥವಾ ತಿಂಗಳುಗಳೇ ಬೇಕಾಗಬಹುದು!

ಪರಸ್ಪರ ಗಂಡು-ಹೆಣ್ಣು ಅರ್ಥಮಾಡಿಕೊಳ್ಳದಿದ್ದರೆ, ಹೊಂದಾಣಿಕೆ ಮಾಡಿಕೊಳ್ಳದಿದ್ದರೆ ನವ ದಂಪತಿಗಳು ಒಂದೇ ಕೊಠಡಿಯಲ್ಲಿದ್ದರೂ ಅವರ ಶರೀರ-ಮನಸ್ಸು ಬೇರೆ ಬೇರೆ ಆಗಿರುವುದರಿಂದ ಲೈಂಗಿಕ ಭಾವನೆಗಳು ಅರಳುವ ಬದಲು, ಬಾಡುತ್ತಲೇ ಇರುತ್ತವೆ

ದಂಪತಿಗಳಲ್ಲಿ ಯಾರಾದರೂ ಒಬ್ಬರು ಅನುಸರಿಸಿಕೊಂಡು ಹೋದರೆ ಕ್ರಮೇಣ ದಾಂಪತ್ಯದಲ್ಲಿ ಹೊಂದಾಣಿಕೆ ಉಂಟಾಗುತ್ತದೆ. ಪತಿ-ಪತ್ನಿ ಇಬ್ಬರು ವಿರೋಧಿ ಮನೋಭಾವನೆಯಿಂದಲೇ ವರ್ತಿಸುತ್ತಿದ್ದರೆ ದಾಂಪತ್ಯದಲ್ಲಿ ಒಡಕು, ಒರಟುತನ ಆರಂಭವಾಗಿ ವಿರಸ ಉಂಟಾಗುತ್ತದೆ.

ಹಿರಿಯರು ಒತ್ತಾಯದ ಮದುವೆ ಮಾಡುವ ಮೊದಲು ಒಂದು ಸಾರಿಯಲ್ಲಾ ಹತ್ತಾರು ಭಾರಿ ಆಲೋಚಿಸಬೇಕು. ಒತ್ತಾಯದ ಮದುವೆಯನ್ನು ಮಾಡುವುದರಿಂದ ಗಂಡು-ಹೆಣ್ಣಿನಲ್ಲಿ ತೊಡಕು-ತೊಂದರೆ ಉಂಟಾಗುತ್ತದೆ. ಹೆತ್ತವರಿಗೆ ಆತಂಕ, ಹಾನಿಯೂ ಉಂಟಾಗಬಹುದು.

ಪರಸ್ಪರ ಗಂಡು-ಹೆಣ್ಣು ಒಪ್ಪಿ ವಿವಾಹ ಆಗಿದ್ದರೆ ಅವರುಗಳು ಮೊದಲ ರಾತ್ರಿಯೇ ಕೂಟಮುನ್ನಲಿವನ್ನು ಪ್ರಿಯ ಮಾತು, ವರ್ತನೆಗಳಿಂದ ಆರಂಭಿಸಿ ಲೈಂಗಿಕ ಸಂಭೋಗವನ್ನು ನಡೆಸಬಹುದು.

 • ದಂಪತಿಗಳ ನಡುವೆ ಕೂಟಮುನ್ನಲಿವು ಯಾವಾಗ ನಡೆಯಬೇಕು?

೧) ದಂಪತಿಗಳಿಬ್ಬರು ಪ್ರತಿನಿತ್ಯ ಲೈಂಗಿಕ ಸಂಭೋಗವನ್ನು ನಡೆಸುತ್ತಿದ್ದರೆ, ವೈವಿಧ್ಯಮಯ ಕಾಮಕೇಳಿ ಅಗತ್ಯ.

೨) ಊಟವಾದ ನಂತರ ಮಲಗುವ ಕೋಣೆಗೆ ತೆರಳಿ ಲೈಂಗಿಕತೆಯನ್ನು ಅನುಭವಿಸುವ ಆಸೆ ಇದ್ದರೆ.

೩) ಮನೆಯ ಇತರೆ ಸದಸ್ಯರು ಇನ್ನೂ ಎಚ್ಚರಗೊಂಡಿದ್ದರೆ.

೪) ಶರೀರ ಮತ್ತು ಮನಸ್ಸು ಸಮಾಧಾನವಾಗಿದ್ದರೂ ಕೂಡ, ಬೇರೆ ಆಲೋಚನೆಯಲ್ಲಿ ತೊಡಗಿದ್ದಾಗ.

೫) ಇಳಿವಯಸ್ಸಿನವರು ಕಡ್ಡಾಯವಾಗಿ ಹೆಚ್ಚು ಕಾಲ  ಕೂಟಮುನ್ನಲಿವು ಕ್ರಿಯೆಯಲ್ಲಿ ತೊಡಗುವುದು ಬಹಳ ಅಗತ್ಯ.

 • ಕೂಟಮುನ್ನಲಿವು ಯಾವಾಗ ಅನಗತ್ಯ?

೧) ಲೈಂಗಿಕ ಸಂಭೋಗಕ್ಕೆ ಪರಸ್ಪರ ದಂಪತಿಗಳ ಮನಸ್ಸು, ಶರೀರ-ಒಪ್ಪಿತಗೊಂಡು, ಏಕಾಂತವಾದ ಪ್ರಶಾಂತ ಸ್ಥಳ ಇಲ್ಲದಾಗ, ಕೂಟಮುನ್ನಲಿಪು ಚುಟುಕಾಗಿ ನಡೆದರೆ ಸಾಕು. ಆದರೆ, ಸ್ತ್ರೀಯ ಯೋನಿ ಲೈಂಗಿಕ ಸಂಭೋಗಕ್ಕಾಗಿ ಸ್ರಾವಗೊಂಡಿರುವುದು ಬಹಳ ಅಗತ್ಯ. ಸ್ತ್ರೀಯ ಯೋನಿ ಸ್ರಾವಗೊಳ್ಳಬೇಕಾದರೆ ಆ ಭಾಗದಲ್ಲಿ ಪುರುಷ ಉತ್ತೇಜನವನ್ನು ಮೂಡಿಸುವುದು ಆತನ ಕರ್ತವ್ಯ.

೨) ದಂಪತಿಗಳು ಬಹಳ ದಿನ ಪರಸ್ಪರ ಭೇಟಿಯಾಗದೆ ದಿಢೀರನೆ ಭೇಟಿಯಾದಾಗ ಬರೀ ಪ್ರೀತಿಯ ಮಾತುಕತೆಯೇ ಸಂಭೋಗ ನಡೆಸಲು ಪ್ರೇರಣೆ ನೀಡುತ್ತದೆ! ಆದುದರಿಂದ, ಚುಟುಕಾಗಿ ಕಾಮಕೇಳಿ ನಡೆದರೆ ಸಾಕು.

೩) ಪಕ್ಕದಲ್ಲೇ ಮಕ್ಕಳು ಮಲಗಿದ್ದಾಗ ದೀರ್ಘಕಾಲ ಕಾಮಕೇಳಿಯನ್ನು ನಡೆಸಬಾರದು. ಲೈಂಗಿಕಕ್ರಿಯೆ ನಡೆಸಬಾರದು.

೪) ದಂಪತಿಗಳಲ್ಲಿ ಯಾರಿಗಾದರೂ ಒಬ್ಬರಿಗೆ ತೀವ್ರವಾದ ಲೈಂಗಿಕ ಆಸಕ್ತಿ ಉತ್ತೇಜನವಿದ್ದಾಗ ಕೂಟಮುನ್ನಲಿವು ಅಗತ್ಯಕ್ಕೆ ತಕ್ಕಂತೆ ನಡೆದರೆ ಸಾಕು.

೫) ಪತ್ನಿ, ಮುಟ್ಟಾಗಿ ಸ್ನಾನ ಮಾಡಿಕೊಂಡು ೪ ದಿನ ಕಳೆದ ನಂತರ ಹೆಚ್ಚು ಸಮಯ ಕಾಮಕೇಳಿಯ ಅಗತ್ಯ ಬೀಳುವುದಿಲ್ಲ.

೬) ಮುಟ್ಟಿಗೆ ಮುನ್ನ ಹೆಚ್ಚು ಕಾಲ ಕೂಟಮುನ್ನಲಿವಿನ ಅಗತ್ಯ ಬೀಳುವುದಿಲ್ಲ.

 • ಕೂಟಮುನ್ನಲಿವು: ನಡೆನುಡಿಹೇಗಿರಬೇಕು?

೧) ಪೋರ್‌ಪ್ಲೇ ಅಥವಾ ಕೂಟಮುನ್ನಲಿವು ಚಟುವಟಿಕೆಯಲ್ಲಿ ಚುಂಬನ, ಸ್ತನಗಳ ಉತ್ತೇಜನ, ಜನನೇಂದ್ರಿಯಗಳ ಸ್ಪರ್ಶ, ಅನಂತರ ಲೈಂಗಿಕ ಸಂಭೋಗ ಕ್ರಿಯೆ ನಡೆಯುತ್ತದೆ.

೨) ಕೂಟಮುನ್ನಲಿವು ಚಟುವಟಿಕೆಯಲ್ಲಿ ಪರಸ್ಪರ ದಂಪತಿಗಳು ಭಾವನಾತ್ಮಕ ಮತ್ತು ಶಾರೀರಕ ಸಂತೋಷನ್ನು ಗಳಿಸಬೇಕು.

೩) ದಂಪತಿಗಳು, ಪರಸ್ಪರ ಸಂತೋಷ ಹೊಂದುವುದೇ ಒಳ್ಳೆಯ ಲೈಂಗಿಕತೆ. ಪೂರ್ಣಪ್ರಮಾಣದ ಸಂತೋಷ ಗಳಿಸಬೇಕಾದರೆ ಪರಸ್ಪರ, ಗಂಡ-ಹೆಂಡತಿನಿರ್ದೇಶಿಸಿಕೊಳ್ಳುವುದು ಅಗತ್ಯ.

೪) ಪ್ರತಿ ಪುರುಷನಿಗೂ ಸ್ತ್ರೀಗೆ ಏನು ಬೇಕು, ಆಕೆಯ ಭಾವನೆ ಏನೆಂದುತಿಳಿದಿರುವುದಿಲ್ಲ ಅಥವಾ ಆಕೆಯ ಲೈಂಗಿಕ ಅಗತ್ಯತೆಯು ಗೊತ್ತಿರುವುದಿಲ್ಲ.

೫) ಪತ್ನಿಯ ಸ್ತನ (ಮೊಲೆಗಳನ್ನು)ಗಳನ್ನು ಆರೈಕೆ ಮಾಡಿದ ನಂತರ ಅವುಗಳ ಮೊಲೆ ತೊಟ್ಟನ್ನು ಚೀಪುವುದು ಪ್ರೀತಿಯ ಆಟದ ಒಂದು ಭಾಗವೇ ಆಗಿರುತ್ತದೆ.

೬) ಹೆಣ್ಣಿನ ಸ್ತನಗಳು ಅನೇಕ ಪುರುಷರಿಗೆ ಅಧಿಕವಾದ ಕಾಮನೆಯನ್ನುಂಟುಮಾಡುತ್ತದೆ.

೭) ಪುರುಷ, ಸ್ತ್ರೀಯ ಸ್ತನವನ್ನು ಉತ್ತೇಜನಗೊಳಿಸುವುದರಿಂದಲೇ ಆಕೆಯಲ್ಲಿ ಲೈಂಗಿಕ ಚೇತರಿಕೆಯನ್ನು ಮೂಡಿಸಬಹುದು.

೮) ಚುಂಬನ, ಆಲಿಂಗನದ ನಂತರ ನಿಮ್ಮಾಕೆ ಕ್ಲೈಟೋರಿಸ್‌ನ್ನು ಉತ್ತೇಜಿಸಲು ತಿಳಿಸಬಹುದು.

೯) ಪುರುಷನಿಗಿಂತಲೂ ಸ್ತ್ರೀಯಲ್ಲಿ ಲೈಂಗಿಕಾಸಕ್ತಿ ಉಂಟಾಗಿ ಆಕೆ ಲೈಂಗಿಕವಾಗಿ ಪ್ರತಿಕ್ರಿಯೆ ತೋರುವುದು ಬಹಳ ನಿಧಾನ.

೧೦) ಸ್ತ್ರೀಗೆ ಪೂರ್ಣವಾದ ಭದ್ರತಾ ಮನೋಭಾವನೆಯನ್ನು ಪತಿರಾಯರು ಕಲ್ಪಿಸದಿದ್ದರೆ ಆಕೆ ಲೈಂಗಿಕವಾಗಿ ಪ್ರತಿಕ್ರಿಯೆಯನ್ನು ತೋರುವುದಿಲ್ಲ. ಪುರುಷ, ತನ್ನ ಪತ್ನಿಯ ಜೊತೆಯಲ್ಲಿ ತಾಳ್ಮೆ-ಸಹನೆಯಿಂದ ವರ್ತಿಸುವುದರಿಂದ ಆಕೆಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ದಂಪತಿಗಳು, ಕೂಟಮುನ್ನಲಿವು ಕ್ರಿಯೆಗೆ ಮುನ್ನ ನಗ್ನಚಿತ್ರ ಪುಸ್ತಕ ನೋಡುವುದರಿಂದ, ಪ್ರಣಯಭರಿತ, ಕತೆ-ಕಾದಂಬರಿಗಳನ್ನು ಓದುವುದರಿಂದ ಸೆಕ್ಸ್ ಭಾವನೆಗಳು ಮೂಡಲು ಅನುಕೂಲವಾಗುತ್ತದೆ.

ಕೆಲವು ಸೂಚನೆಗಳು:

೧) ತಾರುಣ್ಯ ನವದಂಪತಿಗಳಿಗೆ ಕೂಟಮುನ್ನಲಿವು ಅಥವಾ ಕಾಮಕೇಳಿಯನ್ನು ೧೫ ನಿಮಿಷಕ್ಕಿಂತಲೂ ಹೆಚ್ಚು ಕಾಲ ನಡೆಸುವ ಅಗತ್ಯ ಉಂಟಾಗುವುದಿಲ್ಲ.

೨) ಇಳಿವಯಸ್ಸಿನವರು ಅಂದರೆ ೪೦ ವರ್ಷಗಳ ನಂತರದ ವಯಸ್ಸಿನ ದಂಪತಿಗಳು ಕೂಟಮುನ್ನಲಿವು ಕ್ರಿಯೆಯಲ್ಲಿ ೧೫ ನಿಮಷಕ್ಕಿಂತಲೂ ಹೆಚ್ಚು ಕಾಲ ತೊಡಗಬಹುದು, ಆದರೆ. ೩೦ ನಿಮಷಗಳಿಗಿಂತಲೂ ಹೆಚ್ಚು ಕಾಲ ತೆಗೆದುಕೊಳ್ಳುವುದು ಸೂಕ್ತವಲ್ಲ.

೩) ಆರೋಗ್ಯವಂತ ಸ್ತ್ರೀಯಲ್ಲಿ ಲೈಂಗಿಕ ಆಸಕ್ತಿ ಇದ್ದರೆ ೫ ನಿಮಿಷಗಳಲ್ಲಿ ಆಕೆ ಲೈಂಗಿಕ ಉತ್ತೇಜನವನ್ನು ಪಡೆಯಬಲ್ಲಳು.

೪) ದಿಢೀರನೆ ಸಂಭೋಗ ನಡೆಸುವ ಇಚ್ಛೆ ಇದ್ದರೆ ದಂಪತಿಗಳು ಪ್ರತ್ಯೇಕವಾಗಿ ಕೈಕಾಮ ಅಥವಾ ಹಸ್ತಮೈಥುನ ಕ್ರಿಯೆಯಲ್ಲಿ ಕೆಲವು ನಿಮಿಷ ತೊಡಗಿ ಉತ್ತೇಜನಗೊಂಡ ನಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಬಹುದು.

೫) ಕಾಮ ಸಂತೃಪ್ತಿಯನ್ನು ಹೊಂದಲು ಕೂಟಮುನ್ನಲಿವು ಸಹಾಯ ಮಾಡುತ್ತದೆ ಎಂದು ಹೇಳಲಾಗುವುದಿಲ್ಲ.

೬) ದೀರ್ಘ ಕಾಲ ಕಾಮಕೇಳಿ ಅಥವಾ ಪೋರ್‌ಪ್ಲೇಯನ್ನು ನಡೆಸುವುದರಿಂದ ಹೆಂಡತಿಯಲ್ಲಿ ಬೇಸರಿಕೆ, ತೊಡಕು ಮೂಡಬಹುದು.

೭) ತೊಡಕಿನ ಲೈಂಗಿಕ ಪ್ರತಿಕ್ರಿಯೆ, ತೊಡಕಿನ ಉದ್ವೇಗಕ್ಕೆ ದಾರಿ ಮಾಡಿಕೊಡುತ್ತದೆ!

೮) ಹೆಂಡತಿ ಶೀಘ್ರವಾಗಿ ಲೈಂಗಿಕ ಪರಾಕಾಷ್ಠತೆ [Climax] ಅಥವಾ ಲೈಂಗಿಕ ಸಂತೃಪ್ತಿಯನ್ನು ಪಡೆದರೆ ಅದನ್ನು ಅಪ್ರೌಢತೆ ಎಂದು ಭಾವಿಸಬಾರದು ಅಥವಾ ಆಕೆಯಲ್ಲಿ ಕೊರತೆಯಿದೆ ಎಂದು ತಿಳಿಯಬಾರದು.

೯) ಸ್ತ್ರೀ ಬೇಗನೆ. ಲೈಂಗಿಕ ಪ್ರತಿಕ್ರಿಯೆಯನ್ನು ತೋರದಿದ್ದರೆ ಅದಕ್ಕೆ ಕಾರಣ ಆಕೆಯು ಬೆಳೆದ ವಾತಾವರಣ, ಸಾಮಾಜಿಕ ಸ್ಥಿತಿಯೇ ಕಾರಣ! ಆದುದರಿಂದ, ಹೆಂಡತಿಯೊಂದಿಗೆ, ಗಂಡನ ವರ್ತನೆ ನಾಜೂಕಾಗಿ, ನವಿರಾಗಿ ಸಾಗುವುದು ಬಹಳ ಅಗತ್ಯ. ಒತ್ತಾಯ, ಬಲಾತ್ಕಾರ ಆಕೆಯ ಭಾವನೆಗಳಿಗೆ ಭಂಗವನ್ನುಂಟು ಮಾಡುತ್ತದೆ.

 • ಕೂದಲು ಉನ್ನತ ಲೈಂಗಿಕತೆಯ ಸಂಕೇತವೇ?

ಶರೀರದ ಕೂದಲು ಸ್ತ್ರೀ-ಪುರುಷರಿಬ್ಬರಲ್ಲೂ ಸಾಮಿಪ್ಯತೆಯನ್ನು ಮೂಡಿಸುತ್ತದೆ. ಅಲ್ಲದೆ, ಪ್ರೀತಿಯ ಆಟದಲ್ಲಿ ವಿಶೇಷವಾಗಿ ಉತ್ತೇಜನವನ್ನು ಮೂಡಿಸಿ ಲೈಂಗಿಕ ಆಕರ್ಷಣೆಯನ್ನುಂಟುಮಾಡುತ್ತದೆ.

ಮನುಷ್ಯನು ಹಂತ, ಹಂತವಾಗಿ ವಿಕಾಸವಾಗುತ್ತಿರುವ ಕಾಲದಿಂದಲೂ ಕೂದಲು [Hair] ಸಂಕೀರ್ಣವಾದ ಕಾಮನೆಯನ್ನುಂಟುಮಾಡುವ ಸಂಕೇತವಾಗಿದೆ. ಡೆಸ್ಮಂಡ್‌ಮೊರಿಸ್ ಅವರ ಪ್ರಕಾರ ಶರೀರದಲ್ಲಿ ಅಭಿವೃದ್ಧಿಗೊಳ್ಳುವ ಕೂದಲು ಅದರಲ್ಲೂ ವಿಶೇಷವಾಗಿ ಜನನೇಂದ್ರಿಯಗಳ ಭಾಗದಲ್ಲಿ ಅಭಿವೃದ್ಧಿ ಆಗುವ ಕೂದಲು ಮನುಷ್ಯನ ಲೈಂಗಿಕ ಪ್ರೌಢತೆಯನ್ನು ತಿಳಿಸುತ್ತದೆ ಎಂದು ಹೇಳಿದ್ದಾರೆ.

ಶರೀರದ ವಿವಿಧ ಭಾಗಗಳಲ್ಲಿ ಬೆಳೆದಿರುವ ಕೂದಲು ದಂಪತಿಗಳಿಬ್ಬರ ಕಣ್ಣುಗಳಲ್ಲಿ ‘ದೃಶ್ಯ ಕಾಮನೆ’ ಯನ್ನು ಬಹಳ ನಿಕಟವಾಗಿ ಮೂಡಿಸುತ್ತದೆ. ಅಲ್ಲದೆ, ಶರೀರದಲ್ಲಿ ಮಧುರ ಸುವಾಸನೆಯನ್ನುಂಟುಮಾಡುತ್ತದೆ.

ಶರೀರದ ಮೇಲಿನ ಮತ್ತು ತಲೆಗೂದಲು ಸಹಜವಾಸನೆಯನ್ನು ಸಂಗ್ರಹಿಸುತ್ತದೆ. ಅಲ್ಲದೆ, ನಮ್ಮ ಶರೀರ ಉಂಟುಮಾಡುವ ಲೈಂಗಿಕ ವಾಸನಾದ್ರವ್ಯವನ್ನು ಹಾರ್ಮೋನ್‌ಗಳು ಬಿಡುಗಡೆಮಾಡಿ ಕೂಟಮುನ್ನಲಿವು ಕ್ರಿಯೆಯಲ್ಲಿ ಅನುಕೂಲ-ಆನಂದವನ್ನು ಹೆಚ್ಚಿಸುತ್ತದೆ.

 • ದಾಂಪತ್ಯ ಪ್ರೀತಿಯ ಆಟದ ಸಮಯದಲ್ಲಿ ಕಾಮೋತ್ತೇಜನಕ್ಕಾಗಿ ಮೈಗೂದಲಿನ ಜೊತೆ ಆಟ.

೧) ಪರಸ್ಪರ ದಂಪತಿಗಳು ತಲೆಗೂದಲನ್ನು ನೀವಬೇಕು.

೨) ಎದೆಯ ಭಾಗದಲ್ಲಿನ ಕೂದಲನ್ನು ಉಜ್ಜಬೇಕು. ಮೆಲ್ಲಗೆ ಕೂದಲನ್ನು ನೋವಾಗದಂತೆ ಬೆರಳುಗಳಿಂದ ಲಯಬದ್ಧವಾಗಿ ಎಳೆದಾಡಬಹುದು.

೩) ಪತಿಯ ಗಡ್ಡವನ್ನು ನೀವಬೇಕು

೪) ಶರೀರ ಕೈ-ಕಾಲುಗಳ ಮೇಲಿನ ಕೂದಲನ್ನು ಉಜ್ಜಬೇಕು

೫) ಜನನೇಂದ್ರಿಯ ಭಾಗದಲ್ಲಿನ ಕೂದಲನ್ನು ಹಸ್ತದಿಂದ ಉಜ್ಜುತ್ತಾ ಆರೈಕೆ ಮಾಡಿ ಆನಂದವನ್ನು ಗಳಿಸಬಹುದು, ಲೈಂಗಿಕ ಉತ್ತೇಜನವನ್ನು ಮೂಡಿಸಬಹುದು.

೬) ಶರೀರದ ಯಾವುದೇ ಭಾಗದಲ್ಲಿನ ಕೂದಲನ್ನು ತೀರ ಗಟ್ಟಿಯಾಗಿ ಯಾವುದೇ ಸಮಯದಲ್ಲೂ ಎಳೆದಾಡಬಾರದು. ತೀರಗಟ್ಟಿಯಾಗಿ ಕೂದಲನ್ನು ಎಳೆದಾಡುವುದರಿಂದ ‘ನೋವು’ ಉಂಟಾಗಿ ಕೂಟಮುನ್ನಲಿವು ಹಾಳಾಗಬಹುದು.

೭) ಪತ್ನಿ, ತನ್ನ ಪತಿಯ ಮೀಸೆಯನ್ನು ಬೆರಳುಗಳಿಂದ ನೀವುತ್ತಾ ಮೆಲ್ಲಗೆ ತೀಡಬಹುದು.

ಸಲಹೆ:

ಶರೀರದ ವಿವಿಧ ಭಾಗಗಳಲ್ಲಿ ಬೆಳೆದಿರುವ ಕೂದಲನ್ನು ಚೆನ್ನಾಗಿ ಆರೈಕೆ ಮಾಡಿ ಕಾಪಾಡಿಕೊಳ್ಳಬೇಕಾದ್ದು ದಂಪತಿಗಳ ಕರ್ತವ್ಯ.

 • ದಂಪತಿಗಳು ಪ್ರಣಯದ ಚಲನ ಚಿತ್ರಗಳನ್ನು ನೋಡಬೇಕೆ?

ಪ್ರಣಯ ಅಥವಾ ರೋಮಾನ್ಸ್ ಇರತಕ್ಕ ಚಲನಚಿತ್ರಗಳನ್ನು ದಂಪತಿಗಳು ಒಟ್ಟಾಗಿ ಕೂಡಿ ನೋಡುವುದರಿಂದ ಅವರಲ್ಲಿನ ಪ್ರೀತಿಗೆ ಹೊಸ ಚಾಲನೆ, ಸಂವೇದನೆ ಉಂಟಾಗುತ್ತದೆ. ಅಲ್ಲದೆ, ಅನ್ಯೋನತೆ ಗಟ್ಟಿಯಾಗಲು ಸಹಾಯಕವಾಗುತ್ತದೆ.

ದಂಪತಿಗಳಲ್ಲಿನ ಪ್ರೀತಿ, ಆಸಕ್ತಿಯಿಂದ. ಸ್ನೇಹತ್ವದಿಂದ ಮತ್ತು ಮಮತೆಯಿಂದ ಕೂಡಿದ್ದರೆ ಅದು ಜೀವಂತ. ಉಲ್ಲಾಸಕರ ದಾಂಪತ್ಯ ಎಂಬುದನ್ನು ಪ್ರಣಯದ ಚಲನಚಿತ್ರಗಳು ನೆನಪು ಮಾಡಿಕೊಡುತ್ತವೆ.

ದಾಂಪತ್ಯದಲ್ಲಿನ ಪ್ರಣಯ ಫಜೀತಿಯಾಗದೆ. ಗೌರವಯುತವಾಗಿರಬೇಕಾದರೆ. ಅದನ್ನು ಏಕಾಂತದಲ್ಲಿದ್ದಾಗ ನಡೆಸಬೇಕು ಎಂಬ ಪ್ರಜ್ಞೆಯನ್ನು ಮೂಡಿಸುತ್ತದೆ ರೊಮಾನ್ಸ್ ಸಿನಿಮಾಗಳು!

ಪ್ರಣಯ ಆರಂಭವಾಗುವುದು ಪ್ರೀತಿಯಿಂದ. ಪ್ರೀತಿ ಆರೋಗ್ಯಕರವಾಗಿದ್ದರೆ, ಪ್ರಣಯವು ಆರೋಗ್ಯಕರವಾಗಿರುತ್ತದೆ. ದಂಪತಿಗಳಲ್ಲಿನ ಸ್ನೇಹತ್ವ  ಹಾಗೂ ಸಾಮಿಪ್ಯತೆ ಹಿಂಸೆಯಿಂದ ಕೂಡಿರಬಾರದು. ಸುಖ-ದುಃಖದಲ್ಲಿ ಸಂಯಮದಿಂದ ಇರಬೇಕು ಎಂಬುದನ್ನು ತಿಳಿಸುತ್ತವೆ ಉತ್ತಮ ರೀತಿಯ ಪ್ರಣಯದ ಚಲನ ಚಿತ್ರಗಳು.

ಪ್ರಣಯ-ಪ್ರೀಯ ಭಾಷೆ ಮೃದು-ಮಧುರವಾಗಿರಬೇಕು. ಪರಸ್ಪರ ದಂಪತಿಗಳ ಮನಸ್ಸಿಗೆ. ದೇಹಕ್ಕೆ ಆಘಾತ-ಹಾನಿ ಉಂಟುಮಾಡಬಾರದು ಎಂಬುದನ್ನು ನಿರ್ದೇಶಿಸುತ್ತವೆ.

ದಂಪತಿಗಳಲ್ಲಿನ ಪ್ರೀತಿ ಸಮತೋಲನವಾಗಿರಬೇಕು. ಅಸಮತೋಲನವಾದರೆ ದಾಂಪತ್ಯದಲ್ಲಿ ಅಸಮರ್ಪಕತೆ, ಅಸಮಾಧಾನ ಉಂಟಾಗುತ್ತದೆ ಎಂಬುದನ್ನು ಗುರ್ತುಮಾಡುತ್ತದೆ ಪ್ರಣಯದ ಸಿನಿಮಾ.

ಪ್ರಣಯಪ್ರಧಾನ ಚಲನ ಚಿತ್ರಗಳಲ್ಲಿನ ಅಂಶಗಳನ್ನು ತಮ್ಮ ದಾಂಪತ್ಯಕ್ಕೆ ಸೂಕ್ತವಾಗಿದ್ದರೆ ಮಾತ್ರ ದಂಪತಿಗಳು ಅಳವಡಿಸಿಕೊಳ್ಳಬೇಕು. ಅಲ್ಲಿನ ವೈಭವ, ಭ್ರಮೆಗಳನ್ನು ಸ್ವೀಕರಿಸಬಾರದು.

ಪ್ರಣಯಭರಿತ ಚಲನ ಚಿತ್ರಗಳನ್ನು ದಂಪತಿಗಳು ಬೆಳೆದ ತಮ್ಮ ಮಕ್ಕಳೊಡನೆ ನೋಡುವುದಕ್ಕಿಂತಲೂ ಏಕಾಂತವಾಗಿ ನೋಡಿದರೆ ಆ ಚಿತ್ರದಲ್ಲಿನ ರಸೋಲ್ಲಾಸವನ್ನು ಒಟ್ಟಾಗಿ ಆಸ್ವಾದಿಸಲು ಸಹಾಯಕವಾಗುತ್ತದೆ.

ಸುಖ-ಸಂತೋಷವಾಗಿರುವಾಗಲೆಲ್ಲಾ, ಪ್ರೀತಿ-ಪ್ರಣಯದ ವರ್ತನೆ ದಂಪತಿಗಳಲ್ಲಿ ರಹಸ್ಯವಾಗಿ ನಡೆಯುತ್ತಲೆ ಇರುತ್ತದೆ. ಅಲ್ಲದೆ, ಪ್ರೀತಿ-ಪ್ರಣಯ ದಂಪತಿಗಳು ಮಾನಸಿಕವಾಗಿ, ದೈಹಿಕವಾಗಿ ಚಟುವಟಿಕೆಯಿಂದ ಕೂತಿರಲು ಪೋಷಕವಾಗಿರುತ್ತದೆ.

ಉತ್ತಮ ಪ್ರಣಯಭರಿತ ಚಲನ ಚಿತ್ರಗಳು ದಂಪತಿಗಳಿಗೆ ಪ್ರೇಮದ ವಿಟಮಿನ್‌ಗಳು ಎಂದರೆ ತಪ್ಪಾಗಲಾರದು!

 • ಕಾಮಕೇಳಿಯಲ್ಲಿ ಚುಂಬನದ ಪಾತ್ರವೇನು?

ದಂಪತಿಗಳು, ಸಂಭೋಗಪೂರ್ವ ಕಾಮಕೇಳಿಯನ್ನು ಪರಸ್ಪರ ತುಟಿಗಳನ್ನು ಸೇರಿಸಿ ಚುಂಬಿಸುವುದರ ಮೂಲಲಕವೇ ಆರಂಭಿಸಬಹುದು.

ಚುಂಬನ ಅಥವಾ ಕಿಸ್ ಮಹತ್ವ:

ಮೊದಲನೆಯದಾಗಿ, ಚುಂಬನ ಗೌರವಾನ್ವಿತ ಅಭಿವ್ಯಕ್ತಿಯಾಗಿರುತ್ತದೆ. ಕೂಟಮುನ್ನಲಿವು ಕ್ರಿಯೆಯನ್ನು ಪತಿ ಪತ್ನಿಯ ಕೆನ್ನೆಯನ್ನು ತುಟಿಗಳಿಲಂದ ಚುಂಬಿಸುವುದರ ಮೂಲಕವೂ ಪ್ರಾರಂಭಿಸಬಹುದು. ಎರಡನೆಯದಾಗಿ ಚುಂಬನವನ್ನು ದಂಪತಿಗಳು ಪರಸ್ಪರ ಶುಭಾಶಯಗಳನ್ನು ಏಕಾಂತದಲ್ಲಿ ತಿಳಿಸುವಾಗಲೂ ಅಭಿವ್ಯಕ್ತಿಸಬಹುದು. ಮೂರನೆಯದಾಗಿ, ತುಟಿಗಳ ಚುಂಬನವು ದಂಪತಿಗಳಲ್ಲಿ ಲೈಂಗಿಕ ಮಹತ್ತ್ವವನ್ನು ಪಡೆದಿರುತ್ತದೆ. ಅಲ್ಲದೆ, ಗಂಡು-ಹೆಣ್ಣಿನಲ್ಲಿ ಲೈಂಗಿಕ ಆಸೆಯನ್ನು ಮೂಡಿಸುತ್ತದೆ. ತುಟಿಗಳ ಚುಂಬನ ದೀರ್ಘಕಾಲ ನಡೆಯಬಹುದು ಅಥವಾ ಅಗತ್ಯಕ್ಕೆ ತಕ್ಕಂತೆಯೂ ನಡೆಯಬಹುದು. ಚುಂಬನದ ಸಮಯದಲ್ಲಿ ದಂಪತಿಗಳು ಹಲ್ಲು, ನಾಲಗೆಯನ್ನು ಚಲಿಸಬಹುದು. ಆದರೆ, ಹಲ್ಲುಗಳಿಂದ ತೀರ ನೋವು ಉಂಟಾಗುವ ರೀತಿಯಲ್ಲಿ ಕಚ್ಚಬಾರದು.

ಸೂಚನೆಗಳು:

೧) ನೆಗಡಿ, ಕೆಮ್ಮು ಇದ್ದಾಗ ತಾತ್ಕಾಲಿಕವಾಗಿ ಚುಂಬನ ಕ್ರಿಯೆಯನ್ನು ನಿಲ್ಲಸಬೇಕು.

೨) ಬಾಯಿ, ದುರ್ವಾಸನೆಯಿಂದ ಮುಕ್ತವಾಗಿರಬೇಕು.

೩) ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲು, ನಾಲಿಗೆಯನ್ನು ಸ್ವಚ್ಛಗೊಳಿಸಬೇಕು.

೪) ಕ್ಷಯರೋಗ ಇರತಕ್ಕವರು ಚುಂಬನ ಕ್ರಿಯೆಯನ್ನು ನಡೆಸಬಾರದು.

೫) ಲೈಂಗಿಕ ರೋಗ [ವಿ.ಡಿ.]ಗಳಿಂದ ನರಳುತ್ತಿದ್ದರೆ ಚುಂಬನ ಕ್ರಿಯೆಯನ್ನು ದಂಪತಿಗಳು ನಡೆಸಬಾರದು.

೬) ಧೂಳಿನ ವಾತಾವರಣದಲ್ಲಿ ಓಡಾಡಿ ಬಂದ ಕೂಡಲೇ ಚುಂಬನವನ್ನು ಮಾಡಬಾರದು.

೭) ಚುಂಬನ ಕ್ರಿಯೆಯನ್ನು ನಡೆಸುವ ಮುನ್ನ ಮುಖ, ಬಾಯಿಯನ್ನು ಶುಭ್ರವಾದ ನೀರಿನಿಂದ ಸ್ವಚ್ಛಗೊಳಿಸಿಕೊಂಡಿದ್ದರೆ ಒಳ್ಳೆಯದು.

೮) ಬಾಯಿಯುಣ್ಣು, ಗಂಟಲನೋವು ಇದ್ದಾಗ ತಾತ್ಕಾಲಿಕವಾಗಿ ಚುಂಬನ ಕ್ರಿಯೆಯನ್ನು ನಿಲ್ಲಿಸಬೇಕು

೯) ಚುಂಬನವನ್ನು ಬಹಿರಂಗವಾಗಿ ದಂಪತಿಗಳು ವಿನಿಮಯ ಮಾಡಿಕೊಳ್ಳಬಾರದು. ಚುಂಬನ ಕ್ರಿಯೆಯನ್ನು ದಂಪತಿಗಳು ಏಕಾಂತದಲ್ಲಿದ್ದಾಗ, ಕೂಟಮುನ್ನಲಿವು ಸಂದರ್ಭದಲ್ಲಿ ಮಾತ್ರ ನಡೆಸಬೇಕು.

೧೦) ಚುಂಬನ ಕ್ರಿಯೆನ್ನು ನಡೆಸಿದ ನಂತರ ಅಗತ್ಯವಿದ್ದರೆ, ತುಟಿ, ಬಾಯಿಯನ್ನು ಶುದ್ಧವಾದ ನೀರಿನಿಂದ ತೊಳೆದುಕೊಳ್ಳಬಹುದು.

 • ಸ್ತ್ರೀಯ ಸಂತೋಷದ ಕೇಂದ್ರ ಯಾವುದು?

ಭಗಾಂಕುರ ಅಥವಾ ಕ್ಲೈಟೋರಿಸ್ ಸ್ತ್ರೀಯ ಅಧಿಕವಾಗಿ ಲೈಂಗಿಕ ಸಂವೇದನೆಯನ್ನು ಹೋಂದಲು ಇರತಕ್ಕ ಮುಖ್ಯವಾದ ಲೈಂಗಿಕಾಂಗ. ಸ್ತ್ರೀಯಲ್ಲಿ ಭಗಾಂಕುರ ಇರುವ ತನಕ ಪ್ರತಿ ಸ್ತ್ರೀ ಲೈಂಗಿಕ ಪರಮಾನಂದ ಅಥವಾ ಲೈಂಗಿಕ ಸಂತೃಪ್ತಿಯನ್ನು ಗಳಿಸಬಲ್ಲಳು.

ಭಗಾಂಕುರದ ಏಕೈಕ ಕಾರ್ಯವೆಂದರೆ ಸ್ತ್ರೀಯಲ್ಲಿ ಲೈಂಗಿಕತೆಯ ಸಂತೋಷವನ್ನು ಪ್ರಸರಿಸುವುದು.

ಸ್ತ್ರೀಯ ಶರೀರದ ಅಂಗ ರಚನೆಯಲ್ಲಿ ಆಕೆಯೂ ಏಕಾಂತದಲ್ಲಿದ್ದಾಗ, ಲೈಂಗಿಕ ಸಂಭೋಗ ಸಮಯದಲ್ಲಿ ಸಂತೋಷ-ತೃಪ್ತಿ ನೀಡುವ ಏಕೈಕ ಅಂಗ ಕ್ಲೈಟೋರಿಸ್.

ಲೈಂಗಿಕ ಸಂಭೋಗದ ಸಮಯದಲ್ಲಿ ಕ್ಲೈಟೋರಿಸ್‌ನ ಭಾಗದಲ್ಲಿ ಪರೋಕ್ಷವಾಗಿ ಉತ್ತೇಜನ ಉಂಟಾಗುವುದರಿಂದ ಸ್ತ್ರೀಯಲ್ಲಿ ಜೀವನದ ಪೂರ್ತಿ ಲೈಂಗಿಕ ಸಂವೇದನೆಯನ್ನು ಮೂಡಿಸುತ್ತದೆಂದು ಖ್ಯಾತ ಲೈಂಗಿಕ ವಿಜ್ಞಾನಿಗಳಾದ ಡಾ|| ಮಾಸ್ಟರ್ಸ್ ಮತ್ತು ಜಾನ್‌ಸನ್ ಕೂಡ ತಿಳಿಸಿರುತ್ತಾರೆ.

ಕ್ಲೈಟೋರಿಸ್, ಸ್ತ್ರೀ ಯೋನಿಯ ತೆರಪಿನ ಮೇಲ್ಭಾಗದಲ್ಲಿರುತ್ತದೆ. (ಮೂತ್ರದ್ವಾರದ ಮೇಲ್ಭಾಗದಲ್ಲಿ) ಇದು ಅಂಗಿಯ ಚಿಕ್ಕ ಬಟನ್ ರೀತಿಯಲ್ಲಿರುತ್ತದೆ. ಪ್ರತಿ ಸ್ತ್ರೀಯ ಕ್ಲೈಟೋರಿಸ್ ಸ್ವಲ್ಪ ಮಟ್ಟಿಗೆ ವ್ಯತ್ಯಾಸವನ್ನು ಹೊಂದಿರುತ್ತದೆ.

ಸ್ತ್ರೀಯು, ತನ್ನ ಎರಡು ಕೈಗಳಿಂದ ಯೋನಿ ತುಟಿಗಳನ್ನು ಅಗಲಿಸಿ, ಕನ್ನಡಿಯಮೂಲಕ ನೋಡಿದಾಗ ಉತ್ತೇಜಿತಕ್ಲೈಟೋರಿಸ್‌ನ್ನು ಕಾಣಬಹುದು. ಸಾಮಾನ್ಯವಾಗಿ ಎಲ್ಲಾ ಸ್ತ್ರೀಯರಲ್ಲೂ ಯೋನಿಯ ತುಟಿಗಳನ್ನು ಸ್ವಲ್ಪ ಅಗಲಿಸಿ ನೋಡಿದಾಗ ಪುಟ್ಟ ಕಮಾನು (Arch) ಆಕಾರದಲ್ಲಿ ಭಗಾಂಕುರ ಕಾಣುತ್ತದೆ.

 • ಮಾನಸಿಕ ಆರೋಗ್ಯಕ್ಕೆ ಲೈಂಗಿಕತೆ (ಸೆಕ್ಸ್) ಅಗತ್ಯವೇ?

ಅನೇಕರಿಗೆ ಲೈಂಗಿಕತೆಯ ಅಗತ್ಯತೆಯಿದೆ; ಇಲ್ಲದಿದ್ದರೆ ಕೆಲವರಲ್ಲಿ ಉದಾಸೀನತೆ ಮತ್ತು ಖಿನ್ನತೆ ಉಂಟಾಗುತ್ತದೆ. ಆದರೆ ಅನೇಕರು ಲೈಂಗಿಕ ಸಂಪರ್ಕವಿಲ್ಲದೆಯೇ ಸಂತೋಷಕರ ಜೀವನ ಸಾಗಿಸಬಲ್ಲರು.

 • ಲೈಂಗಿಕತೆಯಲ್ಲಿ ಹೆಚ್ಚಾಗಿ ತೊಡಗಿದರೆ ಶರೀರಕ್ಕೆ ಅಥವಾ ಮನಸ್ಸಿಗೆ ಹಾನಿ ಉಂಟಾಗುವುದೆ?

ಅತಿಯಾದ ಲೈಂಗಿಕತೆಯಲ್ಲಿ ತೊಡಗಿ, ಮದ್ಯಪಾನವನ್ನು ಅತಿಯಾಗಿ ಸೇವಿಸಿದರೆ ಮತ್ತು ಸಾಕಷ್ಟು ನಿದ್ದೆ ಇಲ್ಲದಿದ್ದರೆ, ಶರೀರಕ್ಕೆ ಹಾನಿಉಂಟಾಗುತ್ತದೆ.

 • ಹಸ್ತ ಮೈಥುನ ಸಹಜವಾದುದೆ?

ಡಾ|| ಕಿನ್ಸೆಯ ಪ್ರಕಾರ ಹಸ್ತ ಮೈಥುನ ಸಹಜವಾದುದು. ಕೆಲವು ಪುರುಷರು ಹಾಗೂ ಸ್ತ್ರೀಯರು ತಮ್ಮ ಜೀವಿತದ ಅವಧಿಯಲ್ಲಿ ಸ್ವಲ್ಪ ಅವಧಿಯ ತನಕವಾದರೂ ಹಸ್ತ ಮೈಥುನದಲ್ಲಿ ತೊಡಗಿರುತ್ತಾರೆ.’

 • ಹಾರ್ಮೋನ್ಗಳಿಂದ ಲೈಂಗಿಕ ಆಸೆಗಳನ್ನುನಿಯಂತ್ರಿಸಬಹುದೆ?

ಕೆಲವು ನಿಶ್ಚಿತ ಸಂದರ್ಭಗಳಲ್ಲಿ ನಿಯಂತ್ರಿಸಬಹುದು. ಆದರೆ ಮನಸ್ಸು ಕೂಡ ಲೈಂಗಿಕ ಆಸೆಯನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

 • ಕೆಲವು ದಂಪತಿಗಳಲ್ಲಿ ಲೈಂಗಿಕ ಹೊಂದಾಣಿಕೆ ಏಕೆ ಉಂಟಾಗುವುದಿಲ್ಲ?

ದಂಪತಿಗಳು, ಮಾನಸಿಕವಾಗಿ ಹೊಂದಾಣಿಕೆಯನ್ನು ಪಡೆಯದೆ ಇರುವುದರಿಂದ.

 • ದಾಂಪತ್ಯದಲ್ಲಿ ವೈವಾಹಿಕ ತೊಂದರೆಗಳು ಉಂಟಾದಾಗ ಯಾರನ್ನು ಸಂಪರ್ಕಿಸಬೇಕು?

ಮೊದಲು ಕುಟುಂಬದ ವೈದ್ಯರನ್ನು ಸಂಪರ್ಕಿಸಬೇಕು. ಅಗತ್ಯವಿದ್ದರೆ ಅವರು ತಜ್ಞರಿಗೆ ರೆಫರ್ ಮಾಡಬಹುದು.

 • ಹೆಣ್ಣಿನ ಗರ್ಭಕೋಶ, ಪೆಲೋಪನ್ ನಾಳಗಳು ಮತ್ತು ಓವರೀಸ್ನ್ನು (ಅಂಡಾಶಯಗಳನ್ನು) ತೆಗೆದುಬಿಟ್ಟರೆ ಆಕೆಯಲ್ಲಿ ಲೈಂಗಿಕ ಆಸೆ ಕುಂಠಿತಗೊಳ್ಳುವುದೆ?

ಕುಂಠಿತಗೊಳ್ಳುವುದಿಲ್ಲ.

 • ಸೆಕ್ಸ್ ಹಾರ್ಮೋನ್ಗಳೆಂದರೇನು?

ಸೆಕ್ಸ್ ಹಾರ್ಮೋನ್‌ಗಳು, ರಾಸಾಯನಿಕ ಪದಾರ್ಥಗಳು. ಹೆಂಗಸರಲ್ಲಿ ಅವರ ಓವರೀಸ್‌ನಲ್ಲಿ (ಅಂಡಾಶಯಗಳಲ್ಲಿ) ಮತ್ತು ಗಂಡಸರಲ್ಲಿ ಅವರ ವೃಷಣಗಳಲ್ಲಿ (ಟೆಸ್ಟಿಕಲ್ಸ್) ಉತ್ಪತ್ತಿಯಾಗುತ್ತದೆ.

 • ಇಡೀ ಜೀವಮಾನದ ಪೂರ್ತ ಪುರುಷರಲ್ಲಿ ಸೆಕ್ಸ್ ಹಾರ್ಮೋನ್ ಉತ್ಪತ್ತಿಯಾಗುತ್ತದೆಯೆ?

ಹೌದು. ಆದರೆ ಇಳಿವಯಸ್ಸಿನಲ್ಲಿ ಅದರ ಪ್ರಮಾಣ ಕ್ರಮೇಣ ಕಡಿಮೆಯಾಗುತ್ತಾ ಹೋಗುತ್ತದೆ.

 • ಹೆಂಗಸರಲ್ಲಿ ಮುಟ್ಟು ನಿಂತ ನಂತರವೂ ಅಂಡಾಶಯಗಳಲ್ಲಿ (ಓವರೀಸ್) ಸೆಕ್ಸ್ ಹಾರ್ಮೋನ್ ಉತ್ಪತ್ತಿಯಾಗುವುದು ಮುಂದುವರಿಯುವುದೆ?

ಅತಿ ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ.

 • ಗಂಡಸರಿಫಿ ಗೇಮೇಲ್ ಸೆಕ್ಸ್ ಹಾರ್ಮೋನನ್ನು ಕೊಟ್ಟರೆ ಅವರಲ್ಲಿ ಹೆಣ್ಣಿನ ಗುಣ ಲಕ್ಷ್ಣಗಳು ಕಾಣಿಸಿಕೊಳ್ಳುತ್ತವೆಯೇ?

ಹೆಚ್ಚು ದಿನಗಳವರೆಗೆ, ಫೀಮೇಲ್ ಸೆಕ್ಸ್ ಹಾರ್ಮೋನ್‌ನನ್ನು ಅಧಿಕ ಡೋಸುಗಳಲ್ಲಿ ಕೊಡುತ್ತಿದ್ದರೆ ಪುರುಷರಲ್ಲಿ ಸ್ತನಗಳು ದೊಡ್ಡದಾಗಿ ಬೆಳವಣಿಗೆ ಹೊಂದುತ್ತವೆ. (ಕೆಲವೊಮ್ಮೆ ಪ್ರಾಸ್ಟೇಟ್ ಗ್ರಂಥಿಯ ಕ್ಯಾನ್ಸರ್ ಉಂಟಾಗ ಬಹುದು).

 • ದಂಪತಿಗಳು ಮಲಗುವ ಹಾಸಿಗೆ ಹೇಗಿರಬೇಕು?

ಸಂಶೋಧನೆಗಳ ಪ್ರಕಾರ ಶೇಕಡಾ ೯೨ರಷ್ಟು ಲೈಂಗಿಕ ಚಟುವಟಿಕೆಗಳು ಹಾಸಿಗೆಯಲ್ಲಿ ನಡೆಯುತ್ತವೆಂದು ತಿಳಿದುಬಂದಿದೆ. ದಂಪತಿಗಳ ಪ್ರೀತಿ, ಪ್ರೇಮದ ಏಕಾಂತದ ಚಟುವಟಿಕೆಗೆ ಉತ್ತಮ ರೀತಿಯ ಹಾಸಿಗೆಯು ಬಹಳ ಅಗತ್ಯ.

ಹಾಗಾದರೆ, ದಂಪತಿಗಳು ಮಲಗುವ ಹಾಸಿಗೆ ಹೇಗಿರಬೇಕು?

೧) ಹಾಸಿಗೆ ಕನಿಷ್ಠ ಎಂಟು ಅಡಿ ಅಗಲವಾಗಿರಬೇಕು ಹಾಗೂ ಉದ್ದವಾಗಿಯೂ ಇರಬೇಕು.

೨) ಸಮಮಟ್ಟದಿಂದ ಕೂಡಿರಬೇಕು.

೩) ತೀರ ಮೃದುವಾಗಿಯೂ ಇರಬಾರದು, ತೀರಾ ಒರಟಾಗಿಯೂ ಇರಬಾರದು.

೪) ಹಾಸಿಗೆಯ ಮೇಲೆ ನೈಲನ್ ಶೀಟುಗಳನ್ನ ಹಾಸಬಾರದು, ಹತ್ತಿಯಿಂದ ತಯಾರಿಸಿದ ಹೊದಿಕೆಗಳನ್ನೇ ಹಾಸಬೇಕು.

೫) ಬಿಳಿಯ ಹೊದಿಕೆಗಳು ಬಹಳ ಬೇಗನೆ ಕೊಳೆ ಆಗುವುದರಿಂದ ಹಾಸಿಗೆಯ ಮೇಲೆ ತಿಳಿಬಣ್ಣದ ಹೊದಿಕೆಗಳನ್ನೇ ಹಾಸುವುದು ಉತ್ತಮ.

೬) ಅಲ್ಲದೆ, ಸಮಮಟ್ಟದಲ್ಲಿರುವ ತಲೆದಿಂಬುಗಳನ್ನೇ ಉಪಯೋಗಿಸಬೇಕು.

೭) ಹಾಸಿಗೆಯನ್ನು, ಹೊದಿಕೆಗಳನ್ನು ಆಗಿಂದಾಗ್ಗೆ ಬಿಸಿಲಿನಲ್ಲಿ ಹಾಕುವುದುಒಳ್ಳೆಯದು.

೮) ಹೊದಿಕೆಗಳನ್ನು ವಾರಕ್ಕೊಮ್ಮೆ ಅಥವಾ ಆಗಿಂದಾಗ್ಗೆ ಬದಲಾಯಿಸುವುದು ಅಗತ್ಯ.