ಜಗತ್ತಿನ ತಂದೆತಾಯಿಯರು’

ಹೀಗೆಂದು ಪರಮೇಶ್ವರನನ್ನೂ ಪಾರ್ವತಿಯನ್ನೂ ನಮ್ಮ ದೇಶದ ಮಹಾಕವಿ ಕಾಳಿದಾಸ ವರ್ಣಿಸಿದ.

ಪಾರ್ವತಿ ಪರಮೇಶ್ವರನನ್ನು ಮದುವೆಯಾದದ್ದು ಒಂದು ಸ್ವಾರಸ್ಯದ ಕಥೆ. ‘ಕಾಮನ ಹಬ್ಬ’ ಆಚರಿಸುತ್ತೇವಲ್ಲ? ಕಾಮನ ಕಥೆಯೂ ಪಾರ್ವತಿ-ಪರಮೇಶ್ವರರ ಮದುವೆಯ ಕಥೆಗೆ ಸಂಬಂಧಿಸಿದ್ದೆ.

ಪಾರ್ವತಿಯ ಕಥೆ ದಾಕ್ಷಾಯಣಿಯ ಕಥೆಯಿಂದ ಪ್ರಾರಂಭವಾಗುತ್ತದೆ.

ದಕ್ಷಪ್ರಜಾಪತಿಯ ಮಗಳು ದಾಕ್ಷಾಯಣಿ. ಇವಳ ಇನ್ನೊಂದು ಹೆಸರು ಸತೀದೇವಿ. ಪರಮೇಶ್ವರನಾದ ರುದ್ರದೇವನ ಪತ್ನಿ ಇವಳು. ಗಂಡನಾದ ರುದ್ರದೇವನಿಗೆ ತಂದೆ ದಕ್ಷ ಅಪಮಾನ ಮಾಡಿದಾಗ ಅದನ್ನು ಸಹಿಸದೆ ಪ್ರಾಣತ್ಯಾಗ ಮಾಡಿದ ಸಾಧ್ವೀಶಿರೋಮಣಿ ಇವಳು. ಆ ಬಹು ದುಃಖದ ಪ್ರಸಂಗ ಹೇಗೆ ಸಂಭವಿಸಿತೆಂಬ ಕಥೆಯನ್ನು ನಮ್ಮ ಪುರಾಣಗಳಲ್ಲಿ ಹೇಳಿದೆ.

ಬ್ರಹ್ಮದೇವನ ಅನೇಕ ಮಕ್ಕಳಲ್ಲಿ ದಕ್ಷಪ್ರಜಾಪತಿಯೂ ಒಬ್ಬ. ಪ೦ರಸೂತಿ ಎಂಬುವಳು ಅವನ ಹೆಂಡತಿ. ಇವರಿಗೆ ಹದಿನಾರು ಮಂದಿ ಹೆಣ್ಣುಮಕ್ಕಳು. ಕೊನೆಯ ಮಗಳೇ ದಾಕ್ಷಾಯಣಿ. ಇವಳನ್ನು ಕಂಡರೆ ತಂದೆತಾಯಿಗಳಿಗೆ ಬಹಳ ಪ್ರೀತಿ. ಅವರ ಮುದ್ದುಮಗಳಾಗಿ ದಾಕ್ಷಾಯಿಣಿ ಬೆಳೆದಳು. ಮಹಾಮಹಿಮನಾದ ರುದ್ರದೇವನಿಗೆ, ಎಂದರೆ ಈಶ್ವರನಿಗೆ ಅವಳನ್ನು ದಕ್ಷ ಮದುವೆ ಮಾಡಿ ಕೊಟ್ಟಿದ್ದನು. ಇವನಿಗೇ ‘ಶಿವ’ ಎಂದೂ ಹೆಸರು. ‘ಶಿವ’ಎಂದರೆ ‘ಮಂಗಳ’, ‘ಶುಭ’. ರುದ್ರ – ದಾಕ್ಷಾಯಣಿ ಪ್ರೀತಿಯಿಂದ, ಸಂತೋಷದಿಂದ ಇದ್ದರು. ಹೀಗೆ ಎಷ್ಟೋ ಕಾಲ ಕಳೆಯಿತು.

ಋಷಿಗಳ ಯಾಗದಲ್ಲಿ ವಿರಸ

ಅವರ ಸಂತೋಷಕ್ಕೂ ಭಂಗ ಬಂದಿತು.

ಒಂದು ಬಾರಿ ದಕ್ಷನಿಗೆ ಈಶ್ವರನ ಮೇಲೆ ದ್ವೇಷ ಉಂಟಾಯಿತು.

ಒಳ್ಳೆಯದಾಗಲಿ ಎಂದು ಯಾಗ ಮಾಡುವುದು.  ಋಷಿಗಳು ತಪಸ್ವಿಗಳು, ಒಳ್ಳೆಯ ಜೀವನ ನಡೆಸುವವರು. ಆದರೆ ವಿಚಿತ್ರ! ಋಷಿಗಳು ನಡೆಸಿದ ಯಾಗವೇ ಕೋಪ, ದುಃಖ, ಕಷ್ಟಗಳಿಗೆ ಕಾರಣವಾಯಿತು.

ಒಮ್ಮೆ ಅನೇಕ ಮಹರ್ಷಿಗಳು ಕೂಡಿ ಒಂದು ದೊಡ್ಡ ಯಾಗವನ್ನು ಮಾಡುತ್ತಿದ್ದರು. ದೇವರ್ಷಿಗಳೂ ದೇವತೆಗಳೂ ಬ್ರಹ್ಮರ್ಷಿಗಳೂ ಅಲ್ಲಿ ಸೇರಿದ್ದರು.  ವೇದ ಮಂತ್ರಗಳ ಘೋಷ ಮುಗಿಲನ್ನು ಮುಟ್ಟುವಂತಿತ್ತು. ಹೋಮ ಧೂಮ ಎಲ್ಲೆಲ್ಲಿಯೂ ತುಂಬಿಕೊಂಡಿತ್ತು. ಅಲ್ಲಲ್ಲಿ ಋಷಿಗಳು ಗುಂಪುಗುಂಪಾಗಿ ಕುಳಿತು ತತ್ವ ವಿಚಾರ ಮಾಡುತ್ತಿದ್ದರು.

ದಕ್ಷಪ್ರಜಾಪತಿ ಬಂದ

ಆ ಮಹಾಯಾಗಕ್ಕೆ ಬ್ರಹ್ಮದೇವ ಮತ್ತು ರುದ್ರದೇವ ಇವರೂ ಬಂದಿದ್ದರು. ಆ ಸಂದರ್ಭದಲ್ಲಿ ದಕ್ಷಪ್ರಜಾಪತಿ ಅಲ್ಲಿಗೆ ಬಂದನು. ಜ್ವಲಿಸುವ ಸೂರ್ಯನ ಹಾಗೆ ಅವನು ತೇಜಸ್ವಿಯಾಗಿದ್ದನು. ಅವನನ್ನು ಕಂಡ ಕೂಡಲೇ ಆ ಮಹಾಸಭೆಯಲ್ಲಿದ್ದ ಪುರೋಹಿತರು, ಋಷಿಗಳು, ದೇವತೆಗಳು ಮೊದಲಾದವರೆಲ್ಲಾ ಧಿಗ್ಗನೆ ಎದ್ದು ನಿಂತರು. ದಕ್ಷನಿಗೆ ಮರ್ಯಾದೆ ತೋರಿದರು. ಆದರೆ ಬ್ರಹ್ಮ ಮತ್ತು ರುದ್ರ ಇವರಿಬ್ಬರೂ ಕುಳಿತೇ ಇದ್ದರು. ದಕ್ಷ ಲೋಕಗುರುವಾದ ಬ್ರಹ್ಮದೇವನ ಬಳಿ ಬಂದು ಅವನಿಗೆ ನಮಸ್ಕರಿಸಿ ಅವನ ಅಪ್ಪಣೆಯಂತೆ ಪಕ್ಕದಲ್ಲಿದ್ದ ಆಸನದಲ್ಲಿ ಕುಳಿತನು. ಆದರೆ ತಾನು ಬಂದಾಗ ತನ್ನ ಅಳಿಯನೇ ಆದ ರುದ್ರ ಎದ್ದು ನಿಂತು ತನಗೆ ಮರ್ಯಾದೆ ಮಾಡಲಿಲ್ಲವಲ್ಲಾ ಎಂದು ಅವನಿಗೆ ತುಂಬ ಅಸಮಾಧಾನ. ರುದ್ರದೇವನ ನಿಜ ಸ್ವರೂಪವನ್ನು ಅವನು ಅರಿತಿರಲಿಲ್ಲ. ತಾನು ದೊಡ್ಡವ, ತನಗೆ ಮರ್ಯಾದೆ ಬೇಕು ಎಂಬುದು ಅವನ ಮನೋಭಾವ.

ತನ್ನ ಮುಂದೆ ಕಾಲು ಚಾಚಿಕೊಂಡು ಕುಳಿತಿದ್ದ ರುದ್ರನನ್ನು ದಹಿಸಿಬಿಡುವಂತೆ ಕೆಂಗಣ್ಣುಗಳಿಂದ ನೋಡುತ್ತಾ ದಕ್ಷ ರುದ್ರನನ್ನು ಮೂದಲಿಸಿದ. ಅಲ್ಲಿ ನೆರೆದಿದ್ದವರನ್ನು ಕುರಿತು ಅವನು ಹೇಳಿದ, “ಋಷಿಗಳೇ ಮತ್ತು ದೇವತೆಗಳೇ, ಈ ದುರಹಂಕಾರಿ ರುದ್ರನನ್ನು ನೋಡಿ. ಅವನ ನಡವಳಿಕೆ ಸಜ್ಜನರಿಗೆ ತಕ್ಕುದೇ? ನನ್ನ ಅಳಿಯನಾದ ಇವನು ನನಗೆ ಶಿಷ್ಯನಂತೆ ಅಲ್ಲವೇ? ಆದರೂ ನಾನು ಬಂದಾಗ ಇವನು ಎದ್ದು ನಿಂತನೇ? ಕಾಲು ಚಾಚಿಕೊಂಡು ಕುಳಿತೇ ಇದ್ದನಲ್ಲಾ! ಇಂಥ ದುರಹಂಕಾರಿಗೆ ಗಿಳಿಯಂತಹ ಮಗಳನ್ನು ನಾನು ಕೊಟ್ಟೆನಲ್ಲಾ! ಅದು ನನ್ನದೇ ತಪ್ಪು. ಇವನೋ, ಇವನ ನಡೆನುಡಿಯೋ! ಪ್ರೇತಭೂತಗಳು ಇವನ ಸಂಗಡಿಗರು. ಸ್ಮಶಾನ ವಾಸಸ್ಥಾನ. ಚಿತಾಭಸ್ಮ ಗಂಧ. ಪ್ರೇತಪುಷ್ಪ ಹೂಮಾಲೆ. ದಿಗಂಬರನಾಗಿ ಇವನು ಸಂಚರಿಸುವವನು. ಈ ಅಮಂಗಳನಿಗೆ ‘ಶಿವ’ ಎಂಬ ಹೆಸರೇಕೋ!”

ರುದ್ರನಿಗೇ ಶಾಪ!

ದಕ್ಷ ಬಂದಾಗ ರುದ್ರನು ಎದ್ದು ನಿಲ್ಲಿಲ್ಲ ಎಂಬುದು ಸಣ್ಣ ವಿಷಯ. ಇಷ್ಕ್ಕೇ ದಕ್ಷ ಹುಡುಕಿ ಮಾತಾಡಿದ. ಲೋಕಕ್ಕೇ ರುದ್ರ ಶಿವ, ಮಂಗಳವನ್ನು ಮಾಡುವವನು ಎಂಬುದನ್ನು ತಿಳಿಯದೆ ಹೋದ. ಅವಿವೇಕ ಮತ್ತು ಕೋಪಕ್ಕೆ ವಶನಾದ ದಕ್ಷ ಅಷ್ಟಕ್ಕೇ ಸುಮ್ಮನಾಗಲಿಲ್ಲ. ರುದ್ರನನ್ನು ಇನ್ನೂ ನಿಂದಿಸಿದ. ಆದರೆ ಶಿವ ಶಾಂತ ಮೂರ್ತಿಯಾಗಿ ಯಾವ ಮಾತನ್ನೂ ಆಡದೆ ಮೌನವಾಗಿ ಕುಳಿತಿದ್ದ. ರುದ್ರ ತನ್ನನ್ನು ಇನ್ನೂ ಅಲಕ್ಷ್ಯ ಮಾಡುತ್ತಾ ಇದ್ದಾನೆಂದು ಎನ್ನಿಸಿತು ದಕ್ಷನಿಗೆ. ಅವನು ಇನ್ನೂ ಕೋಪಗೊಂಡ. ಅಲ್ಲಿದ್ದವರು ‘ಬೇಡ ಬೇಡ’ ಎಂದು ತಡೆದರೂ ಕೇಳದೆ ಸಿಟ್ಟಿನ ಭರದಲ್ಲಿ ರುದ್ರನನ್ನು ಶಪಿಸಿಬಿಟ್ಟ. “ಈ ರುದ್ರನಿಗೆ ಇಂದ್ರನೊಡನೆ ವಿಷ್ಣುವಿನೊಡನೆ ಯಾಗದ ಹವಿಸ್ಸಿನಲ್ಲಿ ಭಾಗ ಇಲ್ಲದಂತಾಗಲಿ” ಎಂದು ಶಾಪವಿತ್ತ. (ಯಜ್ಞಯಾಗಾದಿಗಳನ್ನು ಮಾಡಿದಾಗ ದೇವತೆಗಳಿಗೆ ಅರ್ಪಿಸುವ ನೈವೇದ್ಯಕ್ಕೆ ಹವಿಸ್ಸು ಎಂದು ಹೆಸರು.) ಮುಂದೆ ಅಲ್ಲಿ ನಿಲ್ಲದೆ ತನ್ನ ನಿವಾಸಕ್ಕೆ ದಕ್ಷ ಹೊರಟು ಹೋದ. ಈ ಪ್ರಕರಣವನ್ನೇ ನೆನೆಸಿಕೊಂಡು ದಕ್ಷ ರುದ್ರನನ್ನು ದ್ವೇಷಿಸತೊಡಗಿದ.

ದಕ್ಷ ಕೋಪದಿಂದ ಶಿವನನ್ನು ನಿಂದಿಸಿದ.

ಶಾಪಕ್ಕೆ ಪ್ರತಿಶಾಪ

 

ದಕ್ಷನು ಕೋಪಕ್ಕೆ ವಶನಾಗಿ ವಿವೇಕ ಕಳೆದುಕೊಂಡು ಹೀಗೆ ಶಾಪಕೊಟ್ಟ. ರುದ್ರದೇವ ಮಾತ್ರ ಶಾಂತನಾಗಿಯೇ ಇದ್ದ, ಸುಮ್ಮನೆಯೇ ಇದ್ದ. ಅವನ ಕಿಂಕರರಿಗೆ ಇದನ್ನು ಸಹಿಸುವದಕ್ಕಾಗಲಿಲ್ಲ. ಪರಮೇಶ್ವರನಾದ ತಮ್ಮ ಪ್ರಭುವನ್ನು ದಕ್ಷನು ಅಪಮಾನಗೊಳಿಸಿದ, ತಪ್ಪು ರೀತಿಯಲ್ಲಿ ನಡೆದುಕೊಂಡ ಎಂದು ಅವರಿಗೆ ಬಹಳ ಕೋಪ ಬಂದಿತು. ರುದ್ರನ ಕಿಂಕರರಲ್ಲಿ ಮುಖ್ಯನಾದವನು ನಂದಿ. ಅವನು ರೋಷಾವೇಶದಿಂದ ಆ ದಕ್ಷನನ್ನು ಧಿಕ್ಕರಿಸಿ ಅವನಿಗೇ ಶಾಪವೊಂದನ್ನು ಕೊಟ್ಟ. “ಈ ದಕ್ಷ ಅವಿವೇಕಿ. ಇವನಿಗೆ ಆತ್ಮಸ್ವರುಪದ ಅರಿವಿಲ್ಲ. ಲೋಕಮಂಗಳನಾದ ರುದ್ರನ ಮಹಿಮೆ ಇವನಿಗೇನು ಗೊತ್ತು? ಯಾವ ದ್ರೋಹವನ್ನೂ ಮಾಡದ ರುದ್ರನಲ್ಲಿ ಅಪಚಾರ ಮಾಡಿದ ಈ ಪಶುವಿಗೆ ಕುರಿಯ ತಲೆ ಉಂಟಾಗಲಿ” ಎಂದು ನಂದಿ ಗುಡುಗಿದ.

ಈ ಶಾಪ ಕೊಟ್ಟರೂ ನಂದಿಯ ಕೋಪ ಶಾಂತವಾಗಲಿಲ್ಲ. “ಮಂಗಳವನ್ನು ಮಾಡುವ ಈಶ್ವರನನ್ನು ದಕ್ಷ ಅವಮಾನ ಮಾಡಿ ಮಾತನಾಡಿದಾಗ, ಅವನು ಶಾಪ ಕೊಟ್ಟಾಗ ಈ ಋಷಿಗಳು ಸುಮ್ಮನೆಯೇ ಇದ್ದರಲ್ಲ! ದಕ್ಷನಿಗೆ ಬುದ್ಧಿ ಹೇಳಿಲ್ಲವಲ್ಲ!” ಎಂದು ಅವರ ಮೇಲೆಯೂ ಕೋಪ ಹರಿಯಿತು. “ಈ ಜನ ಕರ್ಮಭ್ರಷ್ಟರಾಗಲಿ; ಹೊಟ್ಟೆಪಾಡಿಗಾಗಿ ವಿದ್ಯೆ ಕಲಿಯಲಿ; ಯಾಚನೆ ಮಾಡಿ ಬದುಕಲಿ” ಎಂದು ಆ ಋಷಿಗಳಿಗೂ ನಂದಿ ಶಾಪ ಕೊಟ್ಟ.

ನಿಷ್ಕಾರಣವಾಗಿ ತಮ್ಮನ್ನು ಶಪಿಸಿದ ನಂದಿಯ ಮಾತುಗಳಿಂದ ಋಷಿಗಳಿಗೂ ಕೋಪ ಬಂತು. ಅವರಲ್ಲಿ ಭೃಗುಮುನಿ ಕ್ರೋಧದಿಂದ ಕೆಂಡವಾದ. ಶಿವನನ್ನು ಅನುಸರಿಸುವವರಿಗೆ ಅವನು ಶಾಪ ಕೊಟ್ಟ. ಹೀಗೆ ಆ ಯಾಗಮಂಟಪದಲ್ಲಿ ಅಂದು ಒಬ್ಬರಾದ ಮೇಲೆ ಒಬ್ಬರಂತೆ ಮನಸ್ಸನ್ನು ಹತೋಟಿಯಲ್ಲಿಡಲಿಲ್ಲ. ಕೋಪಕ್ಕೆ ವಶರಾದರು. ಇವೆಲ್ಲಾ ಮಿಂಚಿನಂತೆ ನಡೆದುಹೋದವು.

ಅವರ ನಡತೆ ಕಂಡು ರುದ್ರನಿಗೆ ಬಹಳ ಮನನೊಂದಿತು. ಅಲ್ಲಿ ಇನ್ನು ಇರುವುದು ಅವನಿಗೆ ಇಷ್ಟವಾಗಲಿಲ್ಲ. ತನ್ನ ಪರಿವಾರದೊಡನೆ ಮೌನವಾಗಿ ಅಲ್ಲಿಂದ ಅವನು ಹೊರಟುಹೋದನು.

ರುದ್ರನ ಮೇಲೆ ದಕ್ಷಪ್ರಜಾಪತಿಗೆ ದ್ವೇಷ ಉಂಟಾಗಲು ಇದು ಕಾರಣವಾಯಿತು. ಮುಂದೆ ಅದು ಬೆಳೆಯುತ್ತಾ ಹೋಯಿತು. ರುದ್ರನಿಗೆ ಯಾರಲ್ಲಿಯೂ ದ್ವೇಷಿವಲ್ಲ; ಅವನು ಶಾಂತನು, ಲೋಕಗುರುವು. ಅಂತಹ ರುದ್ರನಲ್ಲಿ ದಕ್ಷ ಸದಾ ದ್ವೇಷಭಾವವನ್ನು ಬೆಳೆಸಿಕೊಂಡ. ಆದರೆ ದಕ್ಷನ ಮೇಲೆ ರುದ್ರನಿಗೆ ಯಾವ ದ್ವೇಷವೂ ಉಂಟಾಗಲಿಲ್ಲ.

ನಾನು ಹೋಗಬೇಡವೆ?’ – ‘ಬೇಡ

ಕೆಲವು ಕಾಲದ ಮೇಲೆ ದಕ್ಷ ಒಂದು ದೊಡ್ಡ ಯಾಗವನ್ನು ನಡೆಸಲು ಆರಂಭಿಸಿದ. ಅದು ಸಾಮಾನ್ಯರು ಮಾಡುವ ಯಾಗವಲ್ಲ. ‘ಬೃಹಸ್ಪತಿಸವ’ ಎಂದು ಅದರ ಹೆಸರು. ಅದನ್ನು ನಡೆಸಲು ಸಹಸ್ರಾರು ಪುರೋಹಿತರೂ ಋಷಿಗಳೂ ಬ್ರಹರ್ಷಿಗಳೂ ಬಂದು ಸೇರಿದರು. ಎಲ್ಲ ದೇವತೆಗಳನ್ನೂ ದಕ್ಷ ಆಹ್ವಾನಿಸಿದ. ತನ್ನ ಮಕ್ಕಳು ಮತ್ತು ಅಳಿಯಂದಿರನ್ನೆಲ್ಲಾ ಅದಕ್ಕಾಗಿ ಕರೆಸಿದ. ಆದರೆ ರುದ್ರನನ್ನೂ ದಾಕ್ಷಾಯಣಿಯನ್ನೂ ಆಹ್ವಾನಿಸಲಿಲ್ಲ. ಅವನಿಗೆ ಅವರ ಮೇಲಿನ ಕೋಪ ಹಾಗೇ ಇತ್ತು.

ದಕ್ಷನ ಯಾಗಕ್ಕೆ ದೇವತೆಗಳೆಲ್ಲಾ ತಮ್ಮತಮ್ಮ ಪತ್ನಿಯರೊಡನೆ ವಿಮಾನಗಳಲ್ಲಿ ಕುಳಿತು ಹೋಗುತ್ತಿದ್ದರು. ಮನೋಹರವಾದ ವೇಷಭೂಷಣಗಳನ್ನು ತೊಟ್ಟು ಸಂತೋಷದಿಂದ ಹೋಗುತ್ತಿದ್ದರು. ದಕ್ಷನ ಯಾಗದ ವೈಭವವನ್ನು ಅವರು ಬಗೆಬಗೆಯಾಗಿ ಬಣ್ಣಿಸುತ್ತಿದ್ದರು. ಅದನ್ನು ಕೇಳಿ ದಾಕ್ಷಾಯಣಿಗೂ ತಂದೆಯ ಯಾಗಕ್ಕೆ ಹೋಗಬೇಕೆಂದು ಬಹಳ ಆಸೆಯಾಯಿತು. ಎಷ್ಟಾದರೂ ದಕ್ಷ ತನ್ನ ತಂದೆ. ಅವನು ಮಾಡುವ ಯಾಗಕ್ಕೆ ತಾನು ಹೋಗಬೇಡವೇ ತನ್ನನ್ನು ಕರೆಯದೆ ಇದ್ದರೆ ತಾನೇ ಏನು? ಅಲ್ಲಿ ಎಲ್ಲರೂ ಎಷ್ಟು ಸಂತೋಷಪಡುತ್ತಿರಬಹುದು? ಅಲ್ಲಿ ಹೋದರೆ ತನಗೂ ಸಂತೋಷವಾದೀತು!

ಹೀಗೆ ಯೋಚಿಸಿಕೊಂಡ ದಾಕ್ಷಾಯಣಿ ತನ್ನ ಪತಿಯ ಒಪ್ಪಿಗೆಯನ್ನು ಪಡೆಯಬೇಕೆಂದುಕೊಂಡಳು. ಯಾಗಕ್ಕೆ ಹೋಗಬೇಕೆಂಬ ವಿಚಾರವನ್ನು ಅವನ ಬಳಿ ಪ್ರಸ್ತಾಪ  ಮಾಡಿದಳು. ಅವಳು ಹೇಳಿದಳು: “ದೇವ, ನಿನ್ನ ಮಾವ ದೊಡ್ಡ ಯಾಗವೊಂದನ್ನು ನಡೆಸುತ್ತಿದ್ದಾನೆ. ದೇವತೆಗಳೆಲ್ಲ ಗುಂಪುಗುಂಪಾಗಿ ಅಲ್ಲಿಗೆ ಹೋಗುತ್ತಿದ್ದಾರೆ. ಋಷಿಗಳೂ ಋಷಿಪತ್ನಿಯರೂ ಅಲ್ಲಿ ಸೇರಿದ್ದಾರೆ. ಅವರನ್ನು ನೋಡಿ ನನಗೂ ಹೋಗೋಣವೆಂದು ಮನಸ್ಸಾಗಿದೆ. ಏನೇ ಆಗಲಿ ದಕ್ಷ ನನ್ನ ತಂದೆಯಲ್ಲವೇ? ಅವನು ಮಾಡುತ್ತಿರುವುದು ‘ಬೃಹಸ್ಪತಿಸವ’. ಸಾಮಾನ್ಯರು ಮಾಡುವ ಯಾಗವಲ್ಲ. ಇಷ್ಟೊಂದು ಮಂದಿ ಹೋಗುತ್ತಿರಬೇಕಾದರೆ ನಾನು ಯಾಗವನ್ನು ನೋಡಬೇಡವೆ? ತವರುಮನೆಯ ಹಬ್ಬಕ್ಕೆ ಹೋಗಲು ಯಾವ ಮಗಳಿಗೆ ತಾನೇ ಆಸೆಯಾಗದು? ಕರೆಯದೇ ಇದ್ದರೂ ಸ್ನೇಹಿತರಲ್ಲಿಗೆ, ಹಿರಿಯರ ಮನೆಗೆ, ಗುರುವಿನ ಮನೆಗೆ, ಗಂಡನ ಮನೆಗೆ ಹೋಗಬಹುದು. ಇದೊಂದು ಬಾರಿ ನನ್ನ ಇಷ್ಟವನ್ನು ಸಲ್ಲಿಸು.”

ಪತ್ನಿಯ ಮಾತನ್ನು ಕೇಳಿ ರುದ್ರದೇವನ ಮನಸ್ಸು ತೂಗುಯ್ಯಾಲೆಯಾಯಿತು. ಅವಳ ಆಸೆ ಅವನಿಗೆ ಅರ್ಥವಾಯಿತು. ತನ್ನ ಪ್ರಿಯೆಯ ಮಾತನ್ನು ಸಲ್ಲಿಸಬೇಕೆಂದು ಅವನಿಗೆ ಆಸೆ. ಆದರೆ ದಕ್ಷ ತನ್ನನ್ನು ದ್ವೇಷಿಸುತ್ತಾನೆ. ಆಗ ರುದ್ರದೇವ ದಾಕ್ಷಾಯ ಣಿಗೆ ಹೇಳಿದ “ದೇವಿ, ನೀನು ಹೇಳಿದುದು ನಿಜ. ಆದರೆ ನಿನ್ನ ತಂದೆ ದುರಭಿಮಾನಿ. ಅಂದು ಬ್ರಹ್ಮನ ಮುಂದೆ ಅವನಾಡಿದ ಕಟುನುಡಿಗಳು ನನ್ನನ್ನು ಇನ್ನೂ ನೋಯಿಸುತ್ತಿವೆ. ಬಂಧುಗಳ ಮನೆಗೆ ಕರೆಯದೇ ಇದ್ದರೂ ಹೋಗಬಹುದು. ಆದರೆ ಕೋಪದಿಂದ ದುಡುಕುವವರ ಮನೆಗೆ, ದ್ವೇಷ ಸಾಧಿಸುವವರ‍ ಮನೆಗೆ, ವಿದ್ಯೆ, ಹಣ, ಕುಲ, ತಪಸ್ಸು ಇವುಗಳಿಂದ ಮತ್ತರಾದವರ ಮನೆಗೆ, ವಕ್ರ ದೃಷ್ಟಿಯಿಂದ ನೋಡುವವರ ಮನೆಗೆ ಬಂಧುಗಳೂ ಹೋಗಬಾರದು. ಹೋದರೆ ಅವರು ಹುಬ್ಬು ಗಂಟಿಕ್ಕಿ ಕೆಂಗಣ್ಣಿನಿಂದ ನೋಡುತ್ತಾರೆ. ಚುಚ್ಚು ಮಾತುಗಳಿಂದ ನೋಯಿಸುತ್ತಾರೆ. ದಕ್ಷ ನನ್ನನ್ನು ದ್ವೇಷಿಸುತ್ತಾನೆ. ನನ್ನನ್ನಾಶ್ರಯಿಸಿದ ನಿನ್ನನ್ನೂ ಧಿಕ್ಕರಿಸುವುದೇ ನಿಜ.  ಆದುದರಿಂದ ನಾವು ಹೋಗುವುದು ಸಲ್ಲದು. ನನ್ನ ಮಾತನ್ನು ಮೀರಿ ನೀನು ಹೋಗುವುದಾದರೆ ಒಳ್ಳೆಯದಾಗದು. ಬಂಧುಗಳಿಂದ ಅವಮಾನ ಮಾಡಿಸಿಕೊಳ್ಳುವುದಕ್ಕಿಂತ ಸಾಯುವುದೇ ಮೇಲಲ್ಲವೇ?”

ದಾಕ್ಷಾಯಣಿ ಹೊರಟೇಬಿಟ್ಟಳು

ಈ ಮಾತುಗಳನ್ನು ಕೇಳಿ ದಾಕ್ಷಾಯಣಿಯ ದುಃಖ ತುಂಬಿಬಂತು. ಅವಳು ಗಳಗಳನೆ ಅತ್ತಳು. ಬಹು ಕಾಲದಿಂದ ಅವಳು ತವರುಮನೆಗೆ ಹೋಗಿರಲಿಲ್ಲ. ತಂದೆತಾಯಿಯರನ್ನೂ ಅಕ್ಕಂದಿರನ್ನೂ ನೋಡಿರಲಿಲ್ಲ. ತಂದೆತಾಯಿಯರನ್ನು ಕಾಣದೆ ಅವಳು ಇರಲಾರದಾದಳು. ತನ್ನ ಪ್ರಿಯಪತಿ ತನ್ನ ಇಷ್ಟವನ್ನು ಈಡೇರಿಸಲಿಲ್ಲವೆಂದು ಅವನ ಮೇಲೆ ಅವಳಿಗೆ ಕೋಪವೂ ಬಂತು. ಅವನನ್ನೊಮ್ಮೆ ನಿಟ್ಟಿಸಿ ನೋಡಿ ತವರಿಗೆ ಹೊರಡುವ ನಿಶ್ಚಯ ಮಾಡಿದಳು. ಕೋಪದ ಭರದಲ್ಲಿ ವಿಚಾರ ಮಾಡದೆ ಅವಳು ತಂದೆಯ ಯಾಗಕ್ಕೆ ಹೊರಟೇ ಬಿಟ್ಟಳು.

ದಾಕ್ಷಾಯಣಿಯೇನೋ ಅಸಮಾಧಾನದಿಂದ ಒಬ್ಬಳೇ ಹೊರಟುಬಿಟ್ಟಳು. ರುದ್ರನ ಪರವಾರದವರಿಗೆ ಪ್ರಮಥ ಗಣಗಳು, ಭೂತಗಣಗಳು ಎಂದು ಹೆಸರು. ಅವರಿಗೆ ರುದ್ರ ಮತ್ತು ದಾಕ್ಷಾಯಣಿಯರಲ್ಲಿ ತುಂಬ ಭಕ್ತಿ. ದಾಕ್ಷಾಯಣಿಯು ಹೊರಡುವುದನ್ನು ಅವರು ನೋಡಿದರು. ಅವಳ ಬೆಂಗಾವಲಿಗೆ ಹೊರಟರು. ಸತಿಪತಿಯರಲ್ಲಿ ಏನೂ ನಡೆಯಲಿಲ್ಲವೆಮಬ ರೀತಿಯಲ್ಲಿ ಪರಿವಾರದವರು ನಡೆಸಿಕೊಂಡು ಹೋದರು. ದುಂದುಭಿಗಳು, ಶಂಖಗಳು, ಕೊಳಲುಗಳು ಮತ್ತು ಮಂಗಳವಾದ್ಯಗಳನ್ನು ಬಾರಿಸುತ್ತಾ ಪರಿವಾರ ಮುಂದೆ ನಡೆಯಿತು. ದಾಕ್ಷಾಯಣಿ ದೇವಿ ಸರ್ವಾಲಂಕರ ಭೂಷಿತಳಾಗಿ, ವೃಷಭಾರೂಢಳಾಗಿ ಹೊರಟಳು. ಭಟರು ಬಿಳಿಕೊಡೆಗಳನ್ನೆತ್ತಿ ಹಿಡಿದರು. ದಾಸಿಯರು ಚಾಮರಗಳನ್ನು ಬೀಸುತ್ತಾ ಬಂದರು. ದಾರಿಯುದ್ಧಕ್ಕೂ ಸುಗಂಧ ಚೆಲ್ಲುವ ಹೂಗಳ ಮಳೆಗರೆದರು. ಕೈಲಾಸದಿಂಧ ಹೀಗೆ ದಾಕ್ಷಾಯಣಿ ದೇವಿ ತಂದೆಯ ಯಾಗಕ್ಕೆ ಹೊರಟಳು.

ವೈಭವದ ಮಂಟಪದಲ್ಲಿ

ದಾಕ್ಷಾಯಣಿ ತಂದೆಯ ಯಾಗಮಂಟಪದ ಬಳಿಗೆ ಬಂದಳು. ಆ ಮಂಟಪದ ಅಲಂಕಾರ ಕಣ್ಣು ಕುಕ್ಕುವಂತಿತ್ತು. ತಳಿರುತೋರಣಗಳಿಂದಲೂ ಬಾಳೆಯ ಕಂಬಗಳಿಂದಲೂ ಚೆಲುವಾಗಿತ್ತು ಆ ಮಂಟಪ. ಹೆಬ್ಬಾಗಿಲಿನಲ್ಲಿ ಪರಿಚಾರಕರು ಸ್ವಾಗತಿಸಲು ನಿಂತಿದ್ದರು. ದಾಕ್ಷಾಯಣಿ ದೇವಿ ಹೆಬ್ಬಾಗಿಲಿನಲ್ಲಿ ನಡೆದು ಬಂದಾಗ ಅವಳನ್ನು ಯಾರೂ ಸ್ವಾಗತಿಸಲಿಲ್ಲ. ಎಲ್ಲರಿಗೂ ದಕ್ಷನ ಭಯ.

ದೇವಿ ಗಂಭೀರವಾಗಿ ಒಳಗೆ ನಡೆದು ಹೋದಳು. ಚಿನ್ನದ ಕಿರೀಟಗಳಿಂದಲೂ ತೋಳ್ಬಳೆಗಳಿಂದಲೂ ಪೀತಾಂಬರಗಳಿಂದಲೂ ಅಲಂಕೃತರಾದ ದೇವತೆಗಳು ಸುಖಾಸನಗಳಲ್ಲಿ ಕುಳಿತಿದ್ದರು. ಬಿಳಿಯ ಜಟೆಗಳಿಂದಲೂ ಜಪಮಾಲೆಗಳಿಂದಲೂ ದಂಡಕಮಂಡಲಗಳಿಂದಲೂ ಶೋಭಿಸುತ್ತಿದ್ದ ಬ್ರಹರ್ಷಿಗಳು ಗುಂಪುಗುಂಪಾಗಿ ಕುಳಿತು ಮಂತ್ರಗಳನ್ನು ಹೇಳುತ್ತಿದ್ದರು. ವೇದಿಕೆಗಳಲ್ಲಿ ಅಗ್ನಿಜ್ವಾಲೆ ಪ್ರಜ್ವಲಿಸುತ್ತಿತ್ತು. ಮರದ ಸೌಟುಗಳಲ್ಲಿ ಎತ್ತಿ ತುಪ್ಪವನ್ನೂ ಹವಿಸ್ಸನ್ನೂ ಅಗ್ನಿಯಲ್ಲಿ ಮಂತ್ರಸಹಿತವಾಗಿ ಅರ್ಪಿಸುತ್ತಿದ್ದರು. ಎಲ್ಲಿ ನೋಡಿದರೂ ಮಣ್ಣಿನ ಭಾಂಡಗಳು, ಮರದ ಪಾತ್ರೆಗಳು, ದರ್ಭೆ, ಕೃಷ್ಣಾಜಿನ, ಮರದ ಸೌಟುಗಳು ಇವೇ ಕಾಣಿಸುತ್ತಿದ್ದವು.

ಇದನ್ನೆಲ್ಲಾ ಉತ್ಸುಕತೆಯಿಂದ ನೋಡುತ್ತಾ ದಾಕ್ಷಾಯಣಿ ಯಾಗಮಂಟಪದ ನಡುವೆ ಬಂದಳು. ಅಲ್ಲಿದ್ದವರು ಯಾರೂ ದೇವಿಯು ಪ್ರವೇಶಿಸಿದಾಗ ಎದ್ದು ನಿಲ್ಲಲಿಲ್ಲ. ಗುರುತಿಸಲಿಲ್ಲ. ಮಾತಾಡಿಸಲಿಲ್ಲ. ದಕ್ಷನಿಗೆ ಭಯಪಟ್ಟು ಅವರೆಲ್ಲ ಸುಮ್ಮನೆಯೇ ಇದ್ದರು. ಮಂಟಪದ ಮಧ್ಯೆ ತಂದೆ ದಕ್ಷ ಯಾಗಮಾಡುತ್ತಾ ಕುಳಿತಿದ್ದ. ಮುದ್ದು ಮಗಳನ್ನು ಕಂಡರೂ ಕಾಣದಂತೆ ಅವನೂ ಮುಖ ತಿರುಗಿಸಿಕೊಂಡನು. ದಾಕ್ಷಾಯಣಿಯ ತಾಯಿ ಮತ್ತು ಅಕ್ಕಂದಿರು ಮಾತ್ರ ಓಡಿಬಂದು ಅವಳನ್ನಪ್ಪಿಕೊಂಡರು. ಅವರ ಕಣ್ಣಿನಲ್ಲಿ ನೀರು ತುಂಬಿ ಬಂತು. “ಕುಳಿತುಕೋ ಮಗು” ಎಂದು ತಾಯಿ ಮಗಳಲಿಗೆ ಹೇಳಿದಳು.

ನಿನ್ನ ಮಗಳಾಗಿ ಬದುಕಿರಲಾರೆ

ಆದರೆ ದಾಕ್ಷಾಯಣಿ ಕುಳಿತುಕೊಳ್ಳಲಿಲ್ಲ.

ತಾನಾಗಿ ಬಂದರೂ ತನ್ನ ತಂದೆ ತನ್ನನ್ನು ಕಣ್ಣೆತ್ತಿಯೂ ನೋಡಲಿಲ್ಲವಲ್ಲಾ ಎಂದು ಅವಳಿಗೆ ದುಃಖ ಉಮ್ಮಳಿಸಿತು. ತನ್ನ ಪತಿ ಪರಮೇಶ್ವರನು ಹೇಳಿದ್ದ ಮಾತುಗಳು ಅವಳಿಗೆ ನೆನಪಿಗೆ ಬಂದುವು. ದಕ್ಷನಿಗೆ ತನ್ನನ್ನೂ ತನ್ನ ಹೆಂಡತಿಯಾದ ದಾಕ್ಷಾಯಣಿಯನ್ನೂ ಕಂಡರೆ ದ್ವೇಷ, ಆದುದರಿಂದಲೇ ತಮ್ಮನ್ನು ಯಾಗಕ್ಕೆ ಕರೆದಿಲ್ಲ ಎಂದು ಹೇಳಿದ್ದನು. ದಾಕ್ಷಾಯಣಿ ಅಲ್ಲಿಗೆ ಹೋದರೆ ಒಳ್ಳೆಯದಾಗುವುದಿಲ್ಲ ಎಂದು ಎಚ್ಚರಿಸಿದ್ದನು. ದಾಕ್ಷಾಯಣಿ ಪತಿಯ ಬುದ್ಧಿವಾದವನ್ನು ಕೇಳದೆ ಕೋಪ ಮಾಡಿಕೊಂಡು ಬಂದುಬಿಟ್ಟಿದ್ದಳು. ತಾನು ಮಾಡಿದುದು ತಪ್ಪಾಯಿತು ಎನಿಸಿತು. ಹಾಗೆಯೇ ತಡೆಯಲಾರದಷ್ಟು ಕೋಪವೂ ಬಂತು. ಅವನು ಮಾಡುತ್ತಿದ್ದ ಆ ಯಾಗ ತಾನೇ ಎಂಥದು? ಲೋಕೇಶ್ವರನಾದ ರುದ್ರದೇವನಿಗೆ ಅದರಲ್ಲಿ ಹವಿರ್ಭಾಗವಿಲ್ಲ! ಆ ಪ್ರಭುವನ್ನು ಇವನು ನಿಂದಿಸುತ್ತಾನೆ; ದ್ವೆಷಿಸುತ್ತಾನೆ. ಕರೆಯದಿದ್ದರೂ ಮಮತೆಯಿಂದ ಬಂದ ತನ್ನನ್ನು ಆ ಸಭೆಯೇ ಅಪಮಾನಗೊಳಿಸಿದೆ! ತಂದೆಯೂ ತನ್ನನ್ನು ಧಿಕ್ಕರಿಸಿದ್ದಾನೆ! ಆ ಸಭೆಯನ್ನೇ ದಹಿಸಿ ಬಿಡಬೇಕೆನ್ನುವಷ್ಟು ಕೋಪ ಉಕ್ಕಿಬಂತು ಅವಳಿಗೆ.

ದಾಕ್ಷಾಯಣಿಯ ಹುಬ್ಬುಗಳು ಗಂಟಿಕ್ಕಿದವು. ಕಣ್ಣುಗಳಿಂದ ಬೆಂಕಿಇಯ ಕಿಡಿಗಳುದುರಿದವು. ಮೂರು ಲೋಕವನ್ನೇ ಸುಟ್ಟು ಬೂದಿ ಮಾಡುವಂತೆ ಉಗ್ರಳಾದಳು ಅವಳು. ಭೂತಗಣಗಳು ಆಗ ಕೋಪಗೊಂಡು ಎದ್ದು ನಿಂತವು. ದಾಕ್ಷಾಯಣಿ ಭೂತಗಣಗಳನ್ನು ಸುಮ್ಮನಾಗಿಸಿ ಲೋಕವೇ ಕೇಳುವಂತೆ ದಕ್ಷನನ್ನು ಕುರಿತು ಗುಡುಗಿದಳು “ಎಲವೆಲವೋ ದುರಹಂಕಾರಿಯೇ, ಲೋಕ ಬಂಧುವಾದ ಶಿವನಲ್ಲಿ ನೀನು ದ್ರೋಹ ಮಾಡಿದ್ದೀಯೆ. ‘ಶಿವ’ ಎಂಬ ಎರಡಕ್ಷರಗಳ ಪವಿತ್ರ ನಾಮವನ್ನು ಉಚ್ಚಾರ ಮಾಡಿದರೆ ಎಲ್ಲ ಪಾಪವೂ ಪರಿಹಾರವಾಗುತ್ತದೆ. ಅಂಥ ಮಂಗಳ ನಾಮನಲ್ಲಿ ನಿನಗೆ ದ್ವೇಷ! ಜನರು ಭಗವಂತನಾದ ರುದ್ರದೇವನ ಪಾದ ಕಮಲಗಳನ್ನಾಶ್ರಯಿಸಿ ಬ್ರಹ್ಮಾನಂದ ಪಡೆಯುತ್ತಾರೆ. ಬೇಡಿದವರ ಬಯಕೆಗಳನ್ನೆಲ್ಲ ಕರುಣಿಸುವವನು ಶಿವ. ಲೋಕವನ್ನು ಸೃಷ್ಟಿ ಮಾಡುವವನು ಅವನು. ಕಾಪಾಡುವವನು ಅವನು. ಸಂಹಾರ ಮಾಡುವವನು ಅವನು. ಅವನಲ್ಲಿ ನಿನಗೆ ದ್ವೇಷ! ಬ್ರಹ್ಮಾದಿ ದೇವತೆಗಳೂ ಸಹ ಶಿವನ ಪಾದಪದ್ಮದಿಂದ ಉದುರಿದ ಹೂವನ್ನು ಕಣ್ಗೊತ್ತಿಕೊಂಡು ಮುಡಿಯಲ್ಲಿ ಧರಿಸುತ್ತಾರೆ. ಅಂಥ ಪರಮ ಪಾವನ ನಿನಗೆ ಅಮಂಗಳ! ನನ್ನ ತಂದೆ ಎಂಬ ಪ್ರೀತಿಯಿಂದ, ನೀನು ಈಶ್ವರನಿಗೆ ಮಾಡಿದ ಅಪಮಾನವನ್ನೂ ನಾನು ಮರೆತೆ; ನೀನು ಕರೆಯದಿದ್ದರೂ ಬಂದೆ. ಇನ್ನೂ ನಿನಗೆ ಮಂಗಳಕರನಾದ ಪರಮೇಶ್ವರನಲ್ಲಿ ದ್ವೇಷ. ಅವನನ್ನು ನಿಂದಿಸಿದ ನಿನ್ನ ನಾಲಿಗೆಯನ್ನು ಕತ್ತರಿಸಿ ಹಾಕಬೇಕು. ಅದು ಸಾಧ್ಯವಾಗದೆ ಹೋದರೆ ನಾನೇ ಸಾಯಬೇಕು. ಶಿವ ದ್ವೇಷಿಯಾದ ನಿನ್ನ ಮಗಳಾಗಿ ನಾನು ಬದುಕಿರಲಾರೆ. ಈ ಕೆಟ್ಟ ಜನ್ಮ ಸಾಕು. ‘ದಾಕ್ಷಾಯಣಿ’ ಎಂಬ ಹೆಸರೇ ಲೋಕದಲ್ಲಿ ಇಲ್ಲದಂತಾಗಲಿ.”

ದಾಕ್ಷಾಯಣಿ ದಕ್ಷನನ್ನು ಧಿಕ್ಕರಿಸಿ, ಶಿವನನ್ನು ಮನಸ್ಸಿನಲ್ಲಿ ಸ್ಮರಿಸಿದಳು.

ಶಿವನನ್ನು ಧ್ಯಾನಿಸುತ್ತಾ

 

ದಾಕ್ಷಾಯಣಿ ಹೀಗೆ ದಕ್ಷನನ್ನು ಧಿಕ್ಕರಿಸಿ ಮಾತನಾಡಿದಳು. ಅವನ ಕಡೆ ಬೆನ್ನು ಮಾಡಿ ಶಿವನನ್ನು ಮನಸ್ಸಿನಲ್ಲಿ ಸ್ಮರಿಸಿದಳು. ಅನಂತರ ಮೌನವಾಗಿ ಉತ್ತರ ದಿಕ್ಕಿಗೆದುರಾಗಿ ಕುಳಿತಳು. ತನ್ನ ಕಣ್ಣುಗಳನ್ನು ಮುಚ್ಚಿದಳು. ಯೋಗಮಾರ್ಗವನ್ನನುಸರಿಸಿ ಸಮಾಧಿಯಲ್ಲಿ ನಿಂತಳು. ಯೋಗಶಕ್ತಿಯಿಂದ ಶರೀರದಲ್ಲಿ ಬೆಂಕಿಯನ್ನು ಉಂಟು ಮಾಡಿದಳು. ಮುಂದಿನ ಜನ್ಮದಲ್ಲಿ ಸಹ ರುದ್ರನೇ ತನ್ನ ಗಂಡನಾಗಲೆಂದು ಪ್ರಾರ್ಥಿಸಿದಳು.

ಒಂದೇ ಕ್ಷಣ. ನೋಡುವವರಿಗೆ ದಿಗ್ಭ್ರಮೆಯಾಗುವಂತಹ ಸಂಗತಿ ನಡೆದುಹೋಯಿತು. ಆಕೆಯ ದೇಹದಲ್ಲಿ ಬೆಂಕಿಯ ಜ್ವಾಲೆಗಳು ಎದ್ದವು. ದೇಹವನ್ನು ಸುಟ್ಟು ಭಸ್ಮಮಾಡಿತು ಆ ಬೆಂಕಿ. ಅಲ್ಲಿದ್ದವರು ಇದನ್ನು ಕಂಡು “ಅಯ್ಯೋ ಏನನ್ಯಾಯ!” ಎಂದು ದುಃಖಿಸಿದರು. ಎಲ್ಲರೂ ದಕ್ಷನನ್ನು ನಿಂದಿಸಿದರು. “ಈ ದಕ್ಷನ ದುರ್ವರ್ತನೆ ನೋಡಿ. ಮಗಳಾದ ದಾಕ್ಷಾಯಣಿಗೇ ಅಪಮಾನ ಮಾಡಿದ. ಅವಳ ಸಾವಿಗೆ ತಾನೇ ಕಾರಣನಾದ. ಈಶ್ವರನನ್ನು ದ್ವೇಷಿಸಿ ಅಪಕೀರ್ತಿಗೊಳಗಾದ. ಮಗಳು ಸಾಯುತ್ತಿದ್ದರೂ ಉಳಿಸಲು ಪ್ರಯತ್ನ ಮಾಡದೆ ಸುಮ್ಮನೆಯೇ ಇದ್ದ ನೀಚ ಇವನು!” ಎಂದರು.

ದಾಕ್ಷಾಯಣಿಯ ಬೆಂಗಾವಲಿಗೆ ಬಂದಿದ್ದ ಗಣಗಳ ದುಃಖವನ್ನು ಎಷ್ಟೆಂದು ಹೇಳುವುದು! ದಕ್ಷನ ಮೇಲೆ ಉಗ್ರವಾದ ಕೋಪವೂ ಅವರಿಗೆ ಉಂಟಾಯಿತು. ಅವನನ್ನು ಕೊಂಡು ಹಾಕಲು ಆ ಗಣಗಳಲು ನುಗ್ಗಿದವು. ಆದರೆ ಭೃಗು ಕೆಲವು ಮಂತ್ರ ಜಪಿಸಿ ಹೋಮ ಮಾಡಿದನು. ಆಗ ಋಭುಗಳೆಂಬ ದೇವತೆಗಳು ಸಹಸ್ರಾರು ಸಂಖ್ಯೆಯಲ್ಲಿ ಉದ್ಭವವಾದರು. ಅವರ ಕೈಗಳಲ್ಲಿ ಬಗೆಬಗೆಯಾದ ಆಯುಧಗಳಿದ್ದವು. ಅವರು ರುದ್ರನ ಗಣಗಳನ್ನು ಹೊಡೆದೋಡಿಸಿದರು.

ದಕ್ಷನ ಅಹಂಕಾರದಿಂದ ಅನರ್ಥಗಳು

ರುದ್ರನು ಕೈಲಾಸದಲ್ಲಿದ್ದ. ಅಲ್ಲಿಗೆ ನಾರದ ಬಂದು ದಾಕ್ಷಾಯಣಿಯ ಮರಣದ ಸುದ್ದಿ ತಿಳಿಸಿದನು. ದಕ್ಷನು ದಾಕ್ಷಾಯಣಿ ಯಾಗಮಂಟಪಕ್ಕೆ ಬಂದುದನ್ನು ಕಂಡು ಕಾಣದವನಂತೆ ಅಲಕ್ಷ್ಯ ಮಡಿದ ಎಂಬುದನ್ನು ಹೇಳಿದ; ದಾಕ್ಷಾಯಣಿ ಅವಮಾನಪಟ್ಟು ನೊಂದು ತನ್ನ ದೇಹವನ್ನು ಅಗ್ನಿಗೆ ಅರ್ಪಿಸಿದುದನ್ನು ವರ್ಣಿಸಿದ;  ಪ್ರಮಥ ಗಣಗಳು ದಕ್ಷನಿಗೆ ಶಿಕ್ಷೆ ಮಾಡಲು ಹೊರಟುದನ್ನೂ ಋಭುಗಳು ಅವರನ್ನು ಹೊಡೆದು ಓಡಿಸಿದುದನ್ನೂ ನಾರದ ವಿವರಿಸಿದ. ಇದನ್ನು ಕೇಳುತ್ತಿದ್ದಂತೆ ರುದ್ರನ ಕೋಪ ಪ್ರಜ್ವಲಿಸಿತು. ಲೋಕವನ್ನೇ ನಾಶ ಮಾಡಿಬಿಡುವಂತೆ ಅವನು ಭಯಂಕರ ನಾದ. ತನ್ನ ಪ್ರಿಯ ಪತ್ನಿಯ ಮರಣಕ್ಕೆ ಕಾರಣನಾದ ದಕ್ಷನ ಮೇಲೆ ಅವನ ಕ್ರೋಧ ಅತ್ಯಧಿಕವಾಯಿತು. ಕೋಪದ ಭರದಲ್ಲಿ ಬೆಂಕಿಯಂತಿದ್ದ ಕೆಂಜೆಡೆಯೊಂದನ್ನು ತನ್ನ ತಲೆಯಿಂದ ಕಿತ್ತು ನೆಲಕ್ಕೆ ಅಪ್ಪಳಿಸಿದ. ಆಗ ಒಬ್ಬ ಭಯಂಕರ ಪುರುಷ ಹುಟ್ಟಿದನು. ಅವನೇ ವೀರಭದ್ರ.

ವೀರಭದ್ರನದು ಮುಗಿಲನ್ನು ಮುಟ್ಟುವ ದೇಹ. ವಿಧ ವಿಧವಾದ ಆಯುಧಗಳನ್ನು ತನ್ನ ಸಾವಿರ ಕೈಗಳಲ್ಲಿ ಅವನು ಹಿಡಿದಿದ್ದನು. ನೀರುಂಡ ಮೇಘದ ಬಣ್ಣ. ಸೂರ್ಯನಂತೆ ಜ್ವಲಿಸುವ ಮೂರು ಕಣ್ಣುಗಳು. ಕರಾಳವಾದ ದಂತಪಂಕ್ತಿಗಳು. ಬೆಂಕಿಯಂತೆ ಹೊಳೆಯುವ ತಲೆಗೂದಲು. ಕತ್ತಿನಲ್ಲಿ ರುಂಡಮಾಲೆಯ ಅಲಂಕಾರ, ಅರಿಭಯಂಕರನಾದ ಅವನು ರುದ್ರನಿಗೆ ಕೈಮುಗಿದು “ಏನಪ್ಪಣೆ?” ಎಂದು ಬೇಡಿದ. ರುದ್ರನೆಂದ.  “ನೀನು ನನ್ನ ಗಣಗಳಿಗೆ ನಾಯಕನಾಗು. ಆ ದುಷ್ಟ ದಕ್ಷನನ್ನೂ ಅವನ ಯಾಗವನ್ನೂ ಧ್ವಂಸಮಾಡಿ ಬಾ.”

ಇಷ್ಟು ಹೇಳಿದ್ದೇ ತಡ, ಆ ವೀರಭದ್ರ ರುದ್ರನಿಗೆ ಮೂರು ಬಾರಿ ಪ್ರದಕ್ಷಿಣೆ ಮಾಡಿ ನಮಿಸಿದ.. ಆಯುಧಗಳನ್ನು ಹಿರಿದು ಆರ್ಭಟಿಸುತ್ತಾ ಗಣಗಳೊಡನೆ ದಕ್ಷನ ಯಾಗಮಂಟಪದ ಕಡೆಗೆ ಧಾವಿಸಿದ. ಅವರ ಆರ್ಭಟ ದಿಕ್ಕು ದಿಕ್ಕುಗಳನ್ನೆಲ್ಲಾ ತುಂಬಿತು. ಅದನ್ನು ಕೇಳಿದವರ ಎದೆಯೊಡೆಯಿತು. ವೀರಭದ್ರ ಶೂಲವನ್ನೆತ್ತಿ ಹಿಡಿದು ಸೇನೆಯ ಮುಂದೆ ನಡೆದು ಬಂದ.

ಉತ್ತರ ದಿಕ್ಕಿನಲ್ಲಿ ಎದ್ದ ಕೆಂಧೂಳಿಯನ್ನು ನೋಡಿ ದಕ್ಷನ ಯಾಗಮಂಟಪದಲ್ಲಿ ಇದ್ದವರು ಬೆದರಿದರು. ಗಾಳಿ ಬೀಸುತ್ತಿರಲಿಲ್ಲ. ದನಗಳ ಮುಂದೆ ಬರುತ್ತಿರಲಿಲ್ಲ. ಈ ಕೆಂಧೂಳಿ ಎಲ್ಲಿಯದು? ಇದು ಲೋಕದ ಪ್ರಳಯಕ್ಕೆ ನಾಂದಿಯೇ ಎಂದು ಅಲ್ಲಿದ್ದ ಋಷಿಗಳೂ ಇತರರೂ ಚಿಂತಿಸಿದರು. ಇದೆಲ್ಲವೂ ದಕ್ಷನ ಪಾಪದ ಫಲ ಎಂದು ಹೆಂಗಸರು ಆಡಿಕೊಂಡರು. ಹೀಗೆ ಇವರು ಯೋಚಿಸುತ್ತಿರುವಲ್ಲಿ ರುದ್ರನ ಕಿಂಕರರು ಅಲ್ಲಿಗೆ ಬಂದೇ ಬಿಟ್ಟರು. ಭಯಂಕರವಾದ ಆ ಸೇನೆ ಯಾಗಮಂಟಪವನ್ನು ಧ್ವಂಸ ಮಾಡಲಾರಂಭಿಸಿತು. ಯಾಗಶಾಲೆಗೆ ಬೆಂಕಿ ಹಚ್ಚಿದರು ಕೆಲವರು. ಯಾಗದ ಸಾಮಾನುಗಳನ್ನು ಎತ್ತಿ ಎಸೆದರು ಕೆಲವರು. ಮತ್ತೆ ಕೆಲವರು ಯಜ್ಞಪಾತ್ರೆಗಳನ್ನು ಒಡೆದು ಹಾಕಿದರು. ಕೆಲವರು ಯಾಗದ ಅಗ್ನಿಯನ್ನೇ ಆರಸಿದರು. ಇನ್ನು ಕೆಲವರು ವೇದಿಗಳನ್ನು ಒಡೆದು ಹಾಕಿದರು. ಮಕಣಿವಂತನೆಂಬ ಪ್ರಮಥನು ಭೃಗುವನ್ನು ಹಿಡಿದುಕೊಂಡನು. ನಂದಿ ಭಗ ಎಂಬುವನನ್ನು ಹಿಡಿದು ಕಟ್ಟಿ ಹಾಕಿದ. ವೀರಭದ್ರ ಭೃಗುವಿನ ಗಡ್ಡಮೀಸೆಗಳನ್ನು ಕಿತ್ತೊಗೆದನು. ಭಗನ ಕಣ್ಣುಗಳನ್ನು ಕಿತ್ತು ಹಾಕಿದರು. ಪೂಷನ್ನಿನ ಹಲ್ಲುಗಳನ್ನು ಉದುರಿಸಿದರು. ದಕ್ಷಪ್ರಜಾಪತಿಯನ್ನು ವೀರಭದ್ರ ಹಿಡಿದು ಉರುಳಿಸಿದನು. ಅಲ್ಲಿದ್ದ ಋಷಿಗಳೂ ದೇವತೆಗಳೂ ಭಯಗೊಂಡು ದಿಕ್ಕುದಿಕ್ಕಿಗೆ ಓಡಿಹೋದರು. ದಕ್ಷನ ಕತ್ತನ್ನು ವೀರಭದ್ರ ಕತ್ತಿಯಿಂದ ಕತ್ತರಿಸಹೋದನು. ಆದರೆ ಶಸ್ತ್ರದಿಂದಾಗಲೀ ಅಸ್ತ್ರದಿಂದಾಗಲೀ ಅವನನ್ನು ಕೊಲ್ಲುವುದು ಸಾಧ್ಯವಿರಲಿಲ್ಲ. ಕೆರಳಿದ ವೀರಭದ್ರ ದಕ್ಷನ ಕತ್ತನ್ನು ಹಿಸುಕಿ ಕಿತ್ತೆಸೆದನು. ಆ ಕತ್ತನ್ನು ಅಗ್ನಿಯಲ್ಲಿ ಹೋಮಾಡಿಬಿಟ್ಟನು. “ಭಲಾ ವೀರಭದ್ರ, ಒಳ್ಳೆಯ ಕೆಲಸ ಮಾಡಿದೆ” ಎಂದು ಭೂತ ಪ್ರೇತಗಳು ವೀರಭದ್ರನನ್ನು ಕೊಂಡಾಡಿದವು. ದಕ್ಷನನ್ನೂ ದಕ್ಷಯಜ್ಞವನ್ನೂ ಭಂಗಗೊಳಿಸಿ ವೀರಭದ್ರ ಗಣಗಳೊಡನೆ ಅಲ್ಲಿಂದ ಹೊರಟುಹೋದನು.

ರುದ್ರನೇ ಗತಿ!

ಪ್ರಮಥ ಗಣಗಳಿಂದ ಭಂಗ ಹೊಂದಿದ ದೇವತೆಗಳಿಗೂ ಋಷಿಗಳಿಗೂ ಏನು ಮಾಡಲೂ ತೋರಲಿಲ್ಲ. ಬ್ರಹ್ಮನ ಬಳಿಗೆ ಓಡಿಹೋಗಿ ತಮ್ಮನ್ನು ಕಾಪಾಡಲು ಬೇಡಿಕೊಂಡರು. ಬ್ರಹ್ಮನೂ ವಿಷ್ಣುವೂ ದಕ್ಷನ ಯಾಗಕ್ಕೆ ಬಂದಿರಲಿಲ್ಲ. ದಕ್ಷನು ರುದ್ರನು ತಿರಸ್ಕರಿಸಿದ್ದನು. ಇದರಿಂದ ಯಾಗ ಸುಗಮವಾಗಿ ಕೊನೆಗಾಣುವುದಿಲ್ಲ. ಕಷ್ಟವೇ ಸಂಭವಿಸುತ್ತದೆ ಎಂದು ಬ್ರಹ್ಮನಿಗೂ ವಿಷ್ಣುವಿಗೂ ತಿಳಿದಿತ್ತು;  ತನ್ನ ಬಳಿಗೆ ಓಡಿಬಂದ ದೇವತೆಗಳಿಗೂ ಋಷಿಗಳಿಗೂ ಬ್ರಹ್ಮ ಹೇಳಿದ – “ಇದರಲ್ಲಿ ತಪ್ಪು ನಿಮ್ಮದೇ. ಯಾಗದಲ್ಲಿ ರುದ್ರನಿಗೆ ಹವಿರ್ಭಾಗವಿಲ್ಲವೆಂದವರು ನೀವು! ಹಾಗೆಲ್ಲಾದರೂ ಉಂಟೇ! ದಕ್ಷ ವಿವೇಕವಿಲ್ಲದೆ ಅವನನ್ನು ಕೆರಳಿಸಿದ. ನಿಮ್ಮ ಕೆಟ್ಟ ಮಾತುಗಳಿಂದ ರುದ್ರನ ಮನಸ್ಸು ನೊಂದಿದೆ. ಈಗಂತೂ ದಾಕ್ಷಾಯಣಿಯ ಸಾವಿನಿಂದ ಅವನು ಬಹಳಕ್ರುದ್ಧನಾಗಿದ್ದಾನೆ. ರುದ್ರನ ನಿಜಸ್ವರೂಪವನ್ನು ಹಾಗೂ ಅವನ ಪರಾಕ್ರಮವನ್ನು ನೀವರಿಯಿರಿ. ನಾನೂ ಅದನ್ನು ಪೂರ್ತಿ ಅರಿತಿಲ್ಲ. ಅವನು ಕೋಪಗೊಂಡರೆ ಲೋಕವೇ ನಾಶವಾಗುವುದು. ಈಗ ಆತನನ್ನು ನಾವು ಸಮಾಧಾನಪಡಿಸಬೇಕು.  ಅದಕ್ಕಾಗಿ ಅವನಲ್ಲಿ ಮೊರೆಹೋಗಬೇಕು. ಅವನು ದಯಾಮಯನೂ ಹೌದು. ತನ್ನಲ್ಲಿ ಶರಣಾದವರಿಗೆ ಅವನು ಒಲಿಯುತ್ತಾನೆ. ಅವನನ್ನು ಸ್ತುತಿಸಿ ಕ್ಷಮಿಸಬೇಕೆಂದು ಬೇಡುವುದೊಂದೇ ಮಾರ್ಗ ಈಗ ನಮಗಿರುವುದು. ಕೈಲಾಸಕ್ಕೆ ನಾವೆಲ್ಲಾ ಈಗ ಹೋಗೋಣ. ನಿಮ್ಮೊಡನೆ ನಾನೂ ಅಲ್ಲಿಗೆ ಬರುತ್ತೇನೆ.”

ಕ್ಷಮೆ, ಕರುಣೆಗಳ ಮಂಗಳ ಮೂರ್ತಿ

ದೇವತೆಗಳು ಮತ್ತು ಋಷಿಗಳು ಎಲ್ಲರೂ ಬ್ರಹ್ಮನೊಡನೆ ಕೈಲಾಸಕ್ಕೆ ಬಂದರು. ಕೈಲಾಸದ ಸೊಬಗು ಮತ್ತು ಮಹಿಮೆ ಇವುಗಳನ್ನು ಯಾರು ತಾನೇ ವರ್ಣಿಸಬಲ್ಲರು? ಪರ್ವತಗಳಿಗೆ ರತ್ನಮಯ ಶಿಖರಗಳು, ಕಿನ್ನರರು,  ಗಂಧರ್ವರು, ಸಿದ್ಧರು, ವಿದ್ಯಾಧರರು, ಚಾರಣರು ಮೊದಲಾದವರು ಕಿಕ್ಕಿರಿದು ನೆರೆದಿದ್ದರು ಅಲ್ಲಿ. ಬಗೆಬಗೆಯ ವೃಕ್ಷಗಳು, ಬಳ್ಳಿಗಳು, ಗಿಡಗಳು, ಪ್ರಾಣಿಗಳು, ಹಕ್ಕಿಗಳು ಇವುಗಳಿಂದ ಚೆಲುವಾಗಿತ್ತು ಆ ಸ್ಥಳ. ಮಧುರವಾದ ಹಕ್ಕಿಗಳ ನಾದ, ನವಿಲುಗಳ ಕೇಕೆ, ಭೃಂಗಗಳ ಝೇಂಕಾರ ಇವುಗಳಿಂದ ತುಂಬಿತ್ತು ಆ ಪ್ರದೇಶ. ಕಲ್ಪವೃಕ್ಷಗಳ ರೆಂಬೆಗಳು ಜನರನ್ನು ಕೈ ಬೀಸಿ ಕರೆಯುತ್ತಿದ್ದವು. ಮಂದಾರ, ಪಾರಿಜಾತ, ಸರಳ ಮುಂತಾದ ಹೂಗಿಡಗಳು ಹೂಮಳೆಯನ್ನು ಕರೆಯುತ್ತಿದ್ದವು. ಕದಂಬ, ನೀಪ, ನಾಗ, ಪುನ್ನಾಗ, ಪಾಟಲ, ಅಶೋಕ, ಬಕುಲ, ಕುಂದ, ಅಶ್ವತ್ಥ, ಭೂರ್ಜರ ಮುಂತಾದ ವಿವಿಧವಾದ ವೃಕ್ಷಗಳು ಉನ್ನತವಾಗಿ ಬೆಳೆದು ನಿಂತಿದ್ದವು.

ಬ್ರಹ್ಮನೂ ಅವನೊಡನೆ ಬಂದ ಋಷಿಗಳೂ ದೇವತೆಗಳೂ ಕೈಲಾಸ ಪರ್ವತಪ್ರದೇಶದಲ್ಲಿ ನಡೆದು ಬರುತ್ತಿದ್ದರು. ಎಂಟು ದಿಕ್ಕುಗಳನ್ನು ಕಾಯುವ ದೇವತೆಗಳಲ್ಲಿ ಒಬ್ಬನಾದ ಕುಬೇರನ ಅಲಕಾಪುರಿಯನ್ನು ನೋಡಿದರು. ಅದರ ಹತ್ತಿರವೇ ಸೌಗಂಧಿಕಾವನ! ಆ ವನದ ಪಕ್ಕದಲ್ಲಿ ನಂದೆ ಮತ್ತು ಅಲಕನಂದೆ ಎಂಬ ದಿವ್ಯನದಿಗಳು ಹರಿಯುತ್ತಿದ್ದವು. ಅಲ್ಲಿಂದ ಮುಂದೆ ಅವರು ನಡೆದು ಬಂದರು. ಅಲ್ಲಿ ಮತ್ತೊಂದು ಸುಂದರವಾದ ಉಪವನ. ಅಲ್ಲಿ ಒಂದು ದೊಡ್ಡ ಆಲದಮರ. ಅದರ ಎತ್ತರ ನೂರು ಯೋಜನ.  (ಒಂದು ಯೋಜನವೆಂದರೆ ಹನ್ನೆರಡು ಮೈಲಿ.) ವಿಸ್ತಾರ ಎಪ್ಪತ್ತೈದು ಯೋಜನ. ಮೂರು ಕಡೆ ಆ ಮರದ ಬಿಳಲುಗಳು ನೆಲದ ಮೇಲೆ ಇಳಿದಿವೆ. ಅಲ್ಲಿ ತಾಪವೆಂಬುದು ಎಂದೂ ಇಲ್ಲ.

ಆ ಶಾಂತವಾದ ಪ್ರದೇಶದಲ್ಲಿ ಶಾಂತಮೂರ್ತಿಯಾದ ಶಿವನು ಕುಳಿತಿದ್ದನು. ಅವನ ಶರೀರ ವಿಭೂತಿಯಿಂದ ಅಲಂಕೃತವಾಗಿತ್ತು. ಅವನ ಶಿರಸ್ಸಿನಲ್ಲಿ ಚಂದ್ರ ಪ್ರಕಾಶಿಸುತ್ತಿದ್ದನು. ಗಜಚರ್ಮವನ್ನು ಶಿವನು ಉಟ್ಟಿದ್ದನು. ಕೈಯಲ್ಲಿ ಜಪಸರ ಹಿಡಿದಿದ್ದನು. ಯೋಗಮುದ್ರೆಯಲ್ಲಿ ಕುಳಿತಿದ್ದ ಶಿವ ನಾರದನಿಗೆ ಉಪದೇಶ ಮಾಡುತ್ತಿದ್ದನು.

ನನಗೆ ಕೋಪವಿಲ್ಲ

ಹೀಗೆ ಯೋಗದಲ್ಲಿದ್ದ ರುದ್ರನನ್ನು ಕಂಡ ಕೂಡಲೇ ಬ್ರಹ್ಮನ ಜೊತೆಯಲ್ಲಿ ಬಂದಿದ ಲೋಕಪಾಲರು ಮತ್ತು ಮುನಿಗಳು ಅವನಿಗೆ ನಮಸ್ಕಾರ ಮಾಡಿದರು. ರುದ್ರ ದೇವ ಅತ್ತ ತಿರುಗಿ ನೋಡಿದಾಗ ಬ್ರಹ್ಮನಿಗೆ ನಮಿಸಿದ. ಆಗ ಬ್ರಹ್ಮನು ನಸುನಕ್ಕು ರುದ್ರನಿಗೆ ಹೇಳಿದ – “ಎಲೈ ರುದ್ರದೇವ, ನೀನೇ ಲೋಕಕ್ಕೆ ಒಡೆಯ. ಜಗತ್ತನ್ನು ಸೃಜಿಸುವವನೂ ಕಾಪಾಡುವವನೂ ಅಳಿಸುವವನೂ ನೀನೇ. ಇದು ನಿನಗೆ ಕ್ರೀಡೆಯೇ ಸರಿ. ನಿನ್ನ ಅಪ್ಪಣೆಯಂತೆಯೇ ಲೋಕದ ಜನ ನಡೆಯುತ್ತಿದ್ದಾರೆ. ಅವರ ಅಪರಾಧಗಳನ್ನು ನೀನು ಕ್ಷಮಿಸಬೇಕು.  ಯಾಗದಲ್ಲಿ ನಿನಗೆ ಹವಿರ್ಭಾಗವನ್ನು ಸಲ್ಲಿಸದೆ ಹೋದುದು ದಕ್ಷನ ಅಪರಾಧ. ಅವನ ಯಾಗ ಅರ್ಧಕ್ಕೆ ನಿಂತು ಹೋದುದಕ್ಕೆ ಅದೇ ಕಾರಣ. ದಯಾಂಯನಾದ ನೀನು ಅವರ ತಪ್ಪನ್ನೆಲ್ಲಾ ಕ್ಷಮಿಸಬೇಕು. ದಕ್ಷನೂ ಬದುಕಬೇಕು. ಅವನ ಯಾಗವೂ ಪೂರ್ಣವಾಗಬೇಕು. ಹಾಗೆ ನೀನು ಅನುಗ್ರಹ ಮಾಡಬೇಕು.” ಆಗ ರುದ್ರದೇವ ಹೇಳಿದನು – “ಎಲೈ ಬ್ರಹ್ಮದೇವ, ಮಾವನವರು ಮಾಡಿದ ಅಪರಾಧಕ್ಕಾಗಿ ನನಗೆ ಕೋಪವೇನೂ ಇಲ್ಲ. ತಪ್ಪು ಮಾಡಿದರೆ ಶಿಕ್ಷೆಯಾಗುವುದು ಎಂಬುದನ್ನು ತೋರಿಸುವುದಕ್ಕಾಗಿ ನಾನು ಹೀಗೆ ಮಾಡಬೇಕಾಯಿತು. ನೀನು ಹೇಳಿದಂತೆ ದಕ್ಷನನ್ನೂ ಮತ್ತು ಇತರರನ್ನೂ ನಾನು ಕ್ಷಮಿಸಿದ್ದೇನೆ. ಅವನಿಗೆ ನಂದಿಯ ಶಾಪದಂತೆ ಕುರಿಯ ತಲೆ ಉಂಟಾಗಲಿ. ಮಿಕ್ಕವರ ಅಂಗಾಂಗಳ ಕಾರ್ಯ ಸರಿಯಾಗಿ ನಡೆಯುವಂತಾಗಲಿ.”

ದೇವತೆಗಳು ಇದನ್ನು ಕೇಳಿ ‘ಸಾಧು, ಸಾಧು’ ಎಂದರು. ಪರಶಿವನನ್ನು ಕೊಂಡಾಡಿದರು. ಅಲ್ಲಿಂದ ಎಲ್ಲರೂ ದಕ್ಷನ ಯಾಗಶಾಲೆಗೆ ಬಂದರು. ಅವರ ಬೇಡಿಕೆಯಂತೆ ಶಿವನೂ ಅಲ್ಲಿಗೆ ಬಂದನು. ಕುರಿಯ ತಲೆಯೊಂದನ್ನು ತಂದು ದಕ್ಷನ ದೇಹಕ್ಕೆ ಹೊಂದಿಸಿದರು. ರುದ್ರದೇವ ತನ್ನ ಕಟಾಕ್ಷವನ್ನು ದಕ್ಷನ ಮೇಲೆ ಬೀರಿದ. ಆಗ ದಕ್ಷ ಬದುಕಿದ. ನಿದ್ರೆಯಿಂದೆದ್ದವನಂಥೆ ಎದ್ದು ಕುಳಿತ. ತಾನು ಮಾಡಿದ ತಪ್ಪಿಗಾಗಿ ಅವನು ದುಃಖಿಸಿದ. ಅವನ ಮನಸ್ಸು ಆಗ ನಿರ್ಮಲವಾಯಿತು. ರುದ್ರದೇವನಲ್ಲಿ ಅವನು ಕ್ಷಮೆ ಬೇಡಿದ. ಅವನನ್ನು ಸ್ತುತಿಬಯಸಿದ. ಆದರೆ ಪ್ರಾಣ ತೆತ್ತ ಮಗಳನ್ನು ನೆನೆಸಿಕೊಂಡು ಕಣ್ಣೀರು ಸುರಿಸಿದ. ಬಹಳ ಕಷ್ಟಪಟ್ಟು ಸಮಾಧಾನ ಮಾಡಿಕೊಂಡು ಭಕ್ತಿಪೂರ್ವಕವಾಗಿ ರುದ್ರನನ್ನು ಸ್ತೋತ್ರ ಮಾಡಿದ. ರುದ್ರ ದೇವನ ಸಾನ್ನಿಧ್ಯದಿಂದ ಅವನ ಮನಸ್ಸು ಶಾಂತವಾಯಿತು. ದಕ್ಷ ರುದ್ರನನ್ನು ಕುರಿತು ಹೇಳಿದ, “ಎಲೈ ದೇವ, ನನ್ನ ಮೇಲೆ ನಿನ್ನ ಅನುಗ್ರಹ ಬಹಳವಾಗಿ ಆಗಿದೆ. ನಿನ್ನ ಮಹಿಮೆಯನ್ನು ತಿಳಿಯದೆ ನಾನಾಡಿದ ಮಾತುಗಳನ್ನು ಮರೆತು ಕಾಪಾಡು. ನನ್ನ ಅಪರಾಧವನ್ನು ಕ್ಷಮಿಸು. ನಿನ್ನನ್ನೂ ವಿಷ್ಣುವನ್ನೂ ಯಾರೂ ಉದಾಸೀನತೆಯಿಂದ ಕಾಣಲಾಗದು, ಪ್ರಾಣಿಗಳನ್ನು ಕಾಪಾಡುವ ರಕ್ಷಕ ನೀನು.”

ಯಾಗ ಪೂರ್ಣವಾಯಿತು

ದಕ್ಷ ಹೀಗೆ ಕ್ಷಮೆ ಬೇಡಿದ ಮೇಲೆ ಯಾಗ ಮತ್ತೆ ಆರಂಭವಾಯಿತು . ಮತ್ತೆ ಯಾವ ವಿಘ್ನವೂ ಬರದಿರಲೆಂದು ವಿಷ್ಣುವಿಗೆ ಹವಿಸ್ಸನ್ನು ಆಗ ಅರ್ಪಿಸಿದರು. ದಕ್ಷ ಆಗ ಒಂದೇ ಮನಸ್ಸಿನಿಂದ ವಿಷ್ಣುವನ್ನು ಧ್ಯಾನಿಸಿದ. ಕೂಡಲೇ ಅಲ್ಲಿಗೆ ವಿಷ್ಣು ಬಂದು ಸೇರಿದನು. ಅಲ್ಲಿದ್ದವರೆಲ್ಲಾ ಅವನಿಗೆ ನಮಿಸಿ ಸ್ತುತಿಸಿದರು. ದಕ್ಷ ವಿಷ್ಣುವನ್ನು ಸ್ತುತಿಸಿ ಹೇಳಿದ, “ಎಲೈ ಭಗವಂತನೇ, ನೀನು ಜ್ಞಾನಸ್ವರೂಪಿ. ಸರ್ವಶಕ್ತ. ಲೀಲಾ ರೂಪಿಯಾಗಿ ಆಗಾಗ ಅವತಾರ ಮಾಡಿ ಲೋಕವನ್ನು ರಕ್ಷಿಸುವವನು ನೀನು. ನಿನಗೆ ಮತ್ತೆ ಮತ್ತೆ ನಮಸ್ಕಾರ.”

ಆಗ ವಿಷ್ಣುವಿನ ಅನುಗ್ರಹದಿಂದ ಆ ಯಾಗಸಾಂಗವಾಗಿ ಮುಗಿಯಿತು. ದಕ್ಷ ರುದ್ರದೇವನಿಗೆ ಸಲ್ಲಬೇಕಾದ ಹವಿರ್ಭಾಗವನ್ನು ಭಕ್ತಿಯಿಂದ ಅರ್ಪಿಸಿದ. ವಿಷ್ಣು ದಕ್ಷನಿಗೆ ಹೇಳಿದ: “ನಾನು, ಬ್ರಹ್ಮ ಮತ್ತು ರುದ್ರ ಬೇರೆಬೇರೆಯಲ್ಲ. ನಾನೇ ಬ್ರಹ್ಮನಾಗಿ ಸೃಷ್ಟಿಮಾಡುತ್ತೇನೆ. ರುದ್ರನಾಗಿ ಲಯ ಮಾಡುತ್ತೇನೆ. ವಿಷ್ಣುವಾಗಿ ಸಂರಕ್ಷಿಸುತ್ತೇನೆ. ನಮ್ಮ ಮೂವರಲ್ಲಿ ಭೇದವೆಣಿಸಬಾರದು.” ಹೀಗೆ ಹೇಳಿ ವಿಷ್ಣು ಅಲ್ಲಿಂದ ಹೊರಟು ಹೋದನು. ರುದ್ರನ ದಯೆಯಿಂದ ದಕ್ಷನ ಯಾಗ ಪೂರ್ಣವಾಯಿತು.

ಶಿವನನ್ನು ಒಲಿಸಿಕೊಳ್ಳಲು ಪಾರ್ವತಿ ಉಗ್ರವಾದ ತಪಸ್ಸನ್ನು ಪ್ರಾರಂಭಿಸಿದಳು.

ಮತ್ತೆ ಶಿವನನ್ನೆ ಕೈಹಿಡಿಯುವೆ

 

ದಾಕ್ಷಾಯಣಿಯ ಕಥೆ ಇಷ್ಟಕ್ಕೇ ಮುಗಿಯಲಿಲ್ಲ. ತನ್ನ ದೇಹವನ್ನು ಬಿಡುವಾಗ ಮುಂದಿನ ಜನ್ಮದಲ್ಲಿಯೂ ಪರಮೇಶ್ವರನೇ ತನ್ನ ಪತಿಯಾಗಬೇಕು ಎಂದು ಪ್ರಾರ್ಥನೆ ಮಾಡಿದ್ದಳು. ಹಿಮವತ್ಪರ್ವತದ ಅಭಿಮಾನ ದೇವತೆ ಹಿಮವಂತ. ದಾಕ್ಷಾಯಣಿಯು ಅವನ ಮಗಳಾಗಿ ಹುಟ್ಟಿದಳು. ಪರ್ವತರಾಜನ ಮಗಳಾದ ಇವಳಿಗೆ ಪಾರ್ವತಿ ಎಂದು ಹೆಸರು ಬಂದಿತು.

ದಾಕ್ಷಾಯಣಿಯ ಅಗಲಿಕೆಯಿಂದ ಮನನೊಂದ ಶಿವ ಆಗ ತಪಸ್ಸನಲ್ಲಿ ಮಗ್ನನಾಗಿದ್ದ. ಪಾರ್ವತಿಗೆ ಆ ಪರಶಿವನಲ್ಲಿಯೇ ಭಕ್ತಿ; ಅವಳು ಅವನ ಸೇವೆಯಲ್ಲಿಯೆ ನಿರತಳಾದಳು.

ತಾರಕಾಸುರ ಎಂಬ ರಾಕ್ಷಸನು ದೇವತೆಗಳಿಗೆ ಬಹಳ ಹಿಂಸೆಯನ್ನು ಕೊಡುತ್ತಿದ್ದನು. ಶಿವ-ಪಾರ್ವತಿಯರ ಮಗನೇ ಇವನನ್ನು ಕೊಲ್ಲಬಲ್ಲ ಎಂದು ದೇವತೆಗಳಿಗೆ ತಿಳಿಯಿತು. ಈಶ್ವರನು ಪಾರ್ವತಿಯನ್ನು ಮದುವೆಯಾಗುವಂತೆ ಅವನ ಮನಸ್ಸನ್ನು ಒಲಿಸಬೇಕಾಯಿತು. ಆದರೆ ಈಶ್ವರನು ಧ್ಯಾನದಲ್ಲಿಯೇ ಇದ್ದನು. ದೇವತೆಗಳ ಪ್ರಾರ್ಥನೆಯಂತೆ ಮನ್ಮಥನು (ಕಾಮನು) ತನ್ನ ಹೆಂಡತಿ ರತಿಯೊಂದಿಗೆ ಈಶ್ವರನು ತಪಸ್ಸು ಮಾಡುತ್ತಿದ್ದ ಸ್ಥಳಕ್ಕೆ ಹೋದನು. ಈಶ್ವರನನ್ನು ತಪಸ್ಸಿನಿಂದ ಎಚ್ಚರಿಸಲು ಪ್ರಯತ್ನಿಸಿದನು. ಸಮ್ಮೋಹನ ಎಂಬ ಬಾಣವನ್ನು ಅವನ ಮೇಲೆ ಬಿಟ್ಟನು. ಕೋಪಗೊಂಡ ಈಶ್ವರನು ತನ್ನ ಹಣೆಯಲ್ಲಿದ್ದ ಮೂರನೆ ಯ ಕಣ್ಣನ್ನು ತೆರೆದನು. ಅದರಿಂದ ಮುಂದಕ್ಕೆ ನುಗ್ಗಿದ ಬೆಂಕಿಗೆ ಸಿಕ್ಕಿ ಮನ್ಮಥನು ಸುಟ್ಟು ಹೋದನು. ಪಾರ್ವತಿ ತಪಸ್ಸಿನಲ್ಲಿದ್ದ ಈಶ್ವರನ ಸೇವೆಯನ್ನು ಮಾಡುತ್ತಿದ್ದಳು. ಮನ್ಮಥನು ಬೂದಿಯಾದ ಮೇಲೆ ಅವಳ ಕಡೆ ನೋಡದೆ ಹೊರಟುಹೋದನು.

ಪಾರ್ವತಿ ಶಿವನನ್ನು ಒಲಿಸಿಕೊಂಡು ಅವನನ್ನೇ ಪಡೆಯಲು ನಿಶ್ಚಯಮಾಡಿದಳು. ಅದಕ್ಕಾಗಿ ತೀವ್ರವಾದ ತಪಸ್ಸನ್ನು ಆರಂಭಿಸಿದಳು. ಅವಳ ತಪಸ್ಸಿನಿಂದ ಸಂತೋಷಗೊಂಡ ಈಶ್ವರ ಅವಳನ್ನು ಪರೀಕ್ಷಿಸಲು ಒಬ್ಬ ಬ್ರಹ್ಮಚಾರಿಯ ವೇಷದಲ್ಲಿ ಅಲ್ಲಿಗೆ ಬಂದ. ಬ್ರಹ್ಮಚಾರಿ ಬಂಧ ಎಂದು ಪಾರ್ವತಿ ಅವನನ್ನು ಗೌರವದಿಂದ ಕಂಡಳು. ಅತಿಥಿ ಸತ್ಕಾರ ಮಾಡಿದಳು. ಅವನು ಪಾರ್ವತಿ ತಪಸ್ಸು ಮಾಡಲು ಕಾರಣವೇನೆಂದು ಕೇಳಿದ. ಪಾರ್ವತಿ ನನ್ನ ಹೃದಯದ ಆಸೆಯನ್ನು ಹೇಳಿದಳು. ಆಗ ಆ ಕಪಟ ಬ್ರಹ್ಮಚಾರಿ ಹೇಳಿದ – “ಅಯ್ಯೋ, ನಿನ್ನಂತಹ ಹುಡುಗಿ ಶಿವನನ್ನು ಮದುವೆಯಾಗಬೇಕೆ? ಯೋಚನೆ ಮಾಡು. ಆ ಶಿವ ಮಾಡುವುದೆಲ್ಲ ಅಮಂಗಳವೇ. ಅವನ ವಾಸ ಸ್ಮಶಾನದಲ್ಲಿ. ಅವನು ಮೈಗೆ ಬಳಿದುಕೊಂಡಿರುವುದು ಚಿತಾಭಸ್ಮ. ರಕ್ತಸಿಕ್ತವಾದ ಗಜಚರ್ಮ ಅವನ ಹೊದಿಕೆ.  ನಾಗಗಳು ಅವನ ಆಭರಣ. ಮುದಿ ಎತ್ತು ಅವನ ವಾಹನ. ಅವನಿಗೆ ಮೂರು ಕಣ್ಣುಗಳು. ನಿನಗೆ ಇನ್ನೂ ಚಿಕ್ಕ ವಯಸ್ಸು. ನೀನು ರಾಜಕುಮಾರಿ, ಪರ್ವತರಾಜನ ಮಗಳು. ಅರಮನೆಯಲ್ಲಿ ಸುಖವಾಗಿ ಬೆಳೆದವಳು. ನಿನ್ನನ್ನು ಸುಖವಾಗಿ ನೋಡಿಕೊಳ್ಳುವ ಗಂಡನನ್ನು ಮದುವೆಯಾಗು. ಈಶ್ವರನ ಹುಚ್ಚನ್ನು ಬಿಟ್ಟುಬಿಡು. ಖಂಡಿತವಾಗಿಯೂ ಆ ಈಶ್ವರ ನಿನಗೆ ಪತಿಯಾಗಲು ತಕ್ಕವನಲ್ಲ.”

ಎಲ್ಲವನ್ನೂ ಕೊಡುವವನೆ ಅವನು

ಈ ಮಾತುಗಳನ್ನು ಕೇಳಿ ಪಾರ್ವತಿಗೆ ದುಃಖವೂ ಕೋಪವೂ ಉಂಟಾದವು. ಅವಳು ಹುಬ್ಬುಗಂಟಿಕ್ಕಿದಳು. ಕೆರಳಿ ಹೇಳಿದಳು – “ಸಾಕು, ನಿನ್ನ ಮೂರ್ಖ ಮಾತುಗಳನ್ನು ನಿಲ್ಲಿಸು. ಮೂಢರಿಗೆ ಮಹಾತ್ಮರ ಚರಿತ್ರೆ ಹೇಗೆ ಅರ್ಥವಾದೀತು? ಶಿವನ ಸ್ವರೂಪವನ್ನು ಅರಿತವರಾರು? ಅವನು ಭಿಕಾರಿ, ಸ್ಮಶಾನದಲ್ಲಿ ವಾಸಿಸುತ್ತಾನೆ ಎನ್ನುತ್ತೀಯೆ. ಅವನು ವಿಶ್ವಮೂರ್ತಿ. ಅವನಿಗೆ ಎಲ್ಲವೂ ಸಲ್ಲುತ್ತದೆ. ಅವನು ಬೂದಿಯನ್ನು ಹಚ್ಚಿಕೊಳ್ಳುತ್ತಾನೆ ಎಂದೆ. ಒಡವೆ ತೊಡಲಿ, ಸರ್ಪಗಳನ್ನು ಧರಿಸಲಿ, ಪೀತಾಂಬರ ಧರಿಸಲಿ ಅಥವಾ ಗಜಚರ್ಮ ಧರಿಸಲಿ, ಅವನ ಸ್ವರೂಪಕ್ಕೆ ಚ್ಯುತಿಯಿಲ್ಲ. ಅವನಿಗೆ ಏನೂ ಇಲ್ಲ ಎಂದು ಹೇಳುತ್ತೀಯ . ಎಲ್ಲರಿಗೂ ಎಲ್ಲವನ್ನೂ ಕೊಡುವವನೆ ಅವನು. ದಿಗಂಬರನಾದ ಅವನು ನಮಸಿದವರಿಗೆ ಕೋರಿದುದನ್ನು ಕರುಣಿಸುವವನಾಗಿದ್ದಾನೆ. ಅವನಲ್ಲಿ ದೋಷ ಹೇಳಲು ಹೊರಟ ನೀನು ಅವನ ಗುಣಗಳನ್ನೇ ಕೊಂಡಾಡಿದ್ದೀಯೆ. ನನ್ನ ಮನಸ್ಸು ಅವನಲ್ಲಿ ನೆಟ್ಟಿದೆ.”

ಆ ಕಪಟ ವಟು ಇನ್ನೂ ಮಾತನಾಡುವುದರಲ್ಲಿದ್ದ. ಅವನು ಮತ್ತೆ ಈಶ್ವರನನ್ನು ಹಾಸ್ಯ ಮಾಡುವನೆಂದು ಪಾರ್ವತಿ ತಿಳಿದಳು; ಅವನೊಡನೆ ಮಾತನಾಡಲು, ಅವನ ಮಾತನ್ನು ಕೇಳಲು ಅವಳಿಗೆ ಇಷ್ಟವಿರಲಿಲ್ಲ. “ಶಿವನಿಮದೆ ಮಾಡುವವನ ನುಡಿಗಳನ್ನು ಕೇಳಬಾರದು. ಕೇಳುವವರಿಗೂ ಪಾಪ” ಎಂದು ಸಖಿಗೆ ಹೇಳಿ ಅಲ್ಲಿಂದ ತಾನು ಹೊರಟು ಹೋಗುವುದಾಗಿ ತಿಳಿಸಿ ಹೊರಟಳು. ಅವಳ ನಿಶ್ಚಲ ಪ್ರೀತಿಯನ್ನು ಪರಮೇಶ್ವರನು ಮೆಚ್ಚಿದನು. ತನ್ನ ನಿಜ ರೂಪವನ್ನು ತೋರಿಸಿದನು. ಪಾರ್ವತಿಗೆ ಅನುಗ್ರಹ ಮಾಡಿ ಹೇಳಿದನು. “ಎಲೈ ಪಾರ್ವತಿ, ನಿನ್ನ ತಪಸ್ಸಿಗೆ ನಾನು ಒಲಿದಿದ್ದೇನೆ.”

ಹೀಗೆ ಪಾರ್ವತಿಯಾಗಿ ಹುಟ್ಟಿದ ದಾಕ್ಷಾಯಣಿ ಶಿವನಿಗಾಗಿ ತಪಸ್ಸನಾಚರಿಸಿ ಶಿವನನ್ನು ಪಡೆದುಕೊಂಡಳು. ಎಂದೆಂದೂ ಅವನನ್ನು ಬಿಡದಂತೆ ಅವನೊಡನೆ ಸೇರಿದಳು. ದಾಕ್ಷಾಯಣಿಗೇ ಅಂಬಿಕೆ, ಸತೀ, ಪಾರ್ವತಿ ಎಂಬ ಹೆಸರುಗಳು. ಶಿವನ ಶಕ್ತಿಸ್ವರೂಪಿಣಿ ಅವಳು. ಪಾರ್ವತಿ ಪರಮೇಶ್ವರರು ಎಂದೆಂದೂ ಕೂಡಿಯೇ ಇರತಕ್ಕವರು. ಲೋಕಕ್ಕೆ ಇವರು ತಾಯಿ ತಂದೆಯರು.

ಕೋಪಕ್ಕೆ ವಿವೇಕದ ಕಡಿವಾಣ ಹಾಕದಿದ್ದರೆ

ಈ ಕಥೆಗಳು ಈಶ್ವರನ ಮಂಗಳಕರ ಸ್ವಭಾವವನ್ನು ಬೆಳಗುತ್ತವೆ. ಋಷಿಗಳ ಯಾಗದಿಂದ ಕಷ್ಟಗಳು ಪ್ರಾರಂಭವಾದುವು. ಇದಕ್ಕೆ ಕಾರಣಗಳು ಗರ್ವ, ಕೋಪ – ದಕ್ಷನ ಗರ್ವ, ನಂದಿ ಮತ್ತು ಭೃಗುಗಳ ಕೋಪ. ಶಿವನ ನಿಜವಾದ ಸ್ವರೂಪವನ್ನೂ ದೊಡ್ಡತನವನ್ನೂ ತಿಳಿಯದ ಅಜ್ಞಾನಿ ದಕ್ಷ. ಶಿವನಿಂದ ತನಗೆ ಅಪಮಾನವಾಯಿತು ಎಂದು ಮನಸ್ಸಿಗೆ ಬಂದಂತೆ ಕೂಗಾಡಿದ. ಶಿವನಿಗೆ ಶಾಪಕೊಟ್ಟ. ಶಿವ ತನ್ನ ಮುದ್ದು ಮಗಳ ಗಂಡ ಎನ್ನುವುದನ್ನೂ ಮರೆತ. ಎಲ್ಲ ಕಷ್ಟಗಳಿಗೆ ಪ್ರಾರಂಭ ಇವನ ಗರ್ವ, ಕೋಪ. ಇವನು ಶಿವನನ್ನೇ ನಿಂದಿಸಿದ, ಆದರೆ ಶಿವ ಶಾಂತನಾಗಿದ್ದ. ನಂದಿ ಕೋಪಗೊಂಡು ದಕ್ಷನಿಗು ಋಷಿಗಳಿಗೂ ಶಾಪಕೊಟ್ಟ. ಇದರಿಂದ ಭೃಗು ಶಿವನ ಕಿಂಕರರಿಗೆ ಶಾಪಕೊಟ್ಟ. ಹೀಗೆ ಕೋಪಕ್ಕೆ ವಿವೇಕದ ಕಡಿವಾಣ ಹಾಕದೆ ಹೋದುದರಿಂದ ಎಷ್ಟು ಅನರ್ಥ ಸಂಭವಿಸಿತು!

ಮತ್ತೆ ದಾಕ್ಷಾಯಣಿ ತಂದೆ ಮಾಡುತ್ತಿದ್ದ ಯಾಗವನ್ನು ನೋಡಲು ಬಂದಾಗಲೂ ದಕ್ಷ ಮೂರ್ಖತನದಿಂದ ವರ್ತಿಸಿದ. ಅಪಮಾನ ಅನುಭವಿಸಿದ ಶಿವ ಉದಾರ ಮನಸ್ಸಿನವನು, ಮಂಗಳವನ್ನೆ ಮಾಡುವವನು; ಅವನು ದಕ್ಷನ ಅವಿವೇಕವನ್ನು ಮರೆಯಲು ಸಿದ್ಧನಾಗಿದ್ದ. ದಕ್ಷನು ಪ್ರೀತಿಯಿಂದ ಬಂದ ಮಗಳನ್ನು ಅಪಮಾನಗೊಳಿಸಿದ. ಅಲ್ಲಿಯೇ ಇದ್ದ ಋಷಿಗಳೂ ಇತರರು ಅವನಿಗೆ ಬುದ್ಧಿ ಹೇಳಲಿಲ್ಲ. ಇದರ ಪರಿಣಾಮವಾಗಿ ದಾಕ್ಷಾಯಣಿ ದೇವಿ ನೊಂದಳು, ದಕ್ಷನ ಮಗಳಾಗಿರುವುದೇ ಅಪಮಾನವೆಂದು ಚಿಂತಿಸಿ ಬೆಂಕಿಗೆ ದೇಹವನ್ನು ಅರ್ಪಿಸಿದಳು. ಇದರಿಂದ ಅನರ್ಥಗಳು ಒಂದರ ಹಿಂದೆ ಒಂದು ಬಂದುವು. ತಪ್ಪು ಮಾಡಿದ ದಕ್ಷನಿಗೆ ಶಿಕ್ಷೆ ಮಾಡಲೆಂದು ಈಶ್ವರನು ವೀರಭದ್ರನನ್ನು ಕಳುಹಿಸಿದ. ಶಿಕ್ಷೆಯಾಗುತ್ತಲೆ ಮತ್ತೆ ಶಾಂತನಾಗಿ ಕೈಲಾಸದಲ್ಲಿ ನಾರದನಿಗೆ ಉಪದೇಶ ಮಾಡುತ್ತಿದ್ದ. ದಕ್ಷನಿಗೆ ಬುದ್ಧಿ ಬಂದು, ತಪ್ಪಾಯಿತು ಎಂದು ಬೇಡುತ್ತಲೆ ಅವನನ್ನು ಕ್ಷಮಿಸಿದ. ದಕ್ಷನ ಕತೆಯಷ್ಟೂ ಅಹಂಕಾರ ಮತ್ತು ಕೋಪಗಳನ್ನು ತಡೆಯದಿದ್ದರೆ ದುಃಖವನ್ನು ಮಡಿಲಲ್ಲಿ ಕಟ್ಟಿಕೊಂಡ ಹಾಗೆ ಎಂಬುದನ್ನು ಎತ್ತಿ ತೋರಿಸುತ್ತದೆ. ಜ್ಞಾನಿಗಳಾದ ಋಷಿಗಳೂ ಕೋಪವನ್ನು ತಡೆಯದೆ ಇದ್ದಾಗ ಅಥವಾ ತಮ್ಮ ಕರ್ತವ್ಯವನ್ನು ಮಾಡದೆ ಹೋದಾಗ ಕಷ್ಟವನ್ನು ಅನುಭವಿಸಬೇಕಾಯಿತು. ಶಿವನು ಸದಾ ವಿವೇಕವನ್ನು ಪ್ರದರ್ಶಿಸಿದ, ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸಿದ, ಆದರೆ ಕ್ಷಮೆಯನ್ನೂ ಔದಾರ್ಯವನ್ನೂ ತೋರಿದ. ತಾಳ್ಮೆ, ಕ್ಷಮೆ, ವಿವೇಕಗಳೇ ಮಂಗಳವನ್ನು ಮಾಡಬಲ್ಲವು.

ಮಂಗಳದ ದಾರಿ

ದಾಕ್ಷಾಯಣಿ ದೇವಿಯ ಪತಿಭಕ್ತಿ ಆದರ್ಶವಾದದ್ದು. ದೇಹವನ್ನು ಬಿಡುವಾಗಲೂ ಮುಂದಿನ ಜನ್ಮದಲ್ಲಿ ಈಶ್ವರನೇ ತನ್ನ ಕೈ ಹಿಡಿಯಬೇಕೆಂದು ಪ್ರಾರ್ಥನೆ ಮಾಡಿದಳು. ಪಾರ್ವತಿಯಾಗಿ ಹುಟ್ಟಿದ ನಂತರವೂ, ಎಳೆಯ ವಯಸ್ಸಿನಲ್ಲೆ ಈಶ್ವರನ ಸೇವೆಯಲ್ಲಿ ನಿರತಳಾದಳು. ಅವಳು ಕೇಳದೆಯೇ ಅವಳ ಸಹಾಯಕ್ಕೆ ಬಂದ ಮನ್ಮಥನೂ ಬೂದಿಯಾದ. ದೇವತೆಗಳು ಸೋತರೂ ಪಾರ್ವತಿ ತನ್ನ ನಿಶ್ಚಯವನ್ನು ಬಿಡಲಿಲ್ಲ. ದೇವತೆಗಳಿಂದ ಆಗದುದನ್ನು, ಮನ್ಮಥನಿಂದ ಆಗದುದನ್ನು, ತನ್ನ ದೃಢ ಮನಸ್ಸಿನಿಂದ ಸಾಧಿಸಿದಳು. ತಪಸ್ಸಿನಿಂದ ಸಾಧಿಸಿದಳು. ಪುರಾಣಗಳಲ್ಲಿ ಹೇಳಿರುವ ದಾಕ್ಷಾಯಣಿಯ ಕಥೆಗಳೂ ಪಾರ್ವತಿಯ ಕಥೆಗಳೂ ಅವಳ ದೃಢ ನಿಶ್ಚಯವನ್ನು ಎತ್ತಿ ತೋರಿಸುತ್ತವೆ.

ನಿರ್ಮಲ ಮನಸ್ಸು, ದೃಢ ನಿಶ್ಚಯ ಇವೇ ಮಂಗಳದ ದಾರಿ.