ದಾರಿಯುದ್ದಕ್ಕೂ ವನವಾಸ, ಅಗ್ನಿಪರೀಕ್ಷೆ,
ಹೇಗೆ ದಾಟುತ್ತೀಯೆ ನನ್ನ ಮಗಳೆ ?
‘ನಸ್ತ್ರೀ ಸ್ವಾತಂತ್ರ್ಯಮರ್ಹತಿ’- ಎಂದು ವಟಗುಟ್ಟು-
ತ್ತಲೇ ಇದೆ ಮನುಧರ್ಮಶಾಸ್ತ್ರದ ರಗಳೆ.

ಅಗ್ನಿಪರೀಕ್ಷೆ ಸೀತೆಗೆ ಮಾತ್ರ ; ಶ್ರೀರಾಮ-
ನಾದರೋ ಅಕಳಂಕ ಪ್ರಶ್ನಾತೀತ !
ಚಂದ್ರಮತಿ ಹರಾಜಿಗೆ, ದ್ರೌಪದಿ ಜೂಜಿಗೆ
ವಸ್ತುವಾಗುಳಿದದ್ದು ಎಂಥ ವಿಪರೀತ !

ದ್ರೌಪದಿಯಂತೆ ಎಲ್ಲರಿಗು ಅಕ್ಷಯ ವಸ್ತ್ರ
ಲಭಿಸುವುದೆಂಬ ನಂಬಿಕೆಯಿಲ್ಲ ;
ಇಂದಿಗೂ ಹೊಸ್ತಿಲ ಹೊರಗೆ ಲಕ್ಷ್ಮಣರೇಖೆ
ದಾಟಿ ನಡೆದೇನೆಂಬ ಧೈರ್ಯವಿಲ್ಲ.

ಎಲ್ಲ ಧರ್ಮಗಳ ನಿಲುವೂ ಇಷ್ಟೆ : ಈಡನ್ನಿನ ತೋಟ-
ದಲ್ಲಿ ತಿನ್ನಬಾರದ ಹಣ್ಣ ತಿನ್ನಿಸಿದವಳು
ಈವ್ : ಗಂಡಸಿನ ಪತನಕ್ಕೆ ಕಾರಣ ಹೆಣ್ಣು ;
ಮಾಯೆ ; ಋಷಿಗಳ ತಪಸ್ಸು ಕೆಡಿಸಿದವಳು.

ಬುದ್ಧ ಹೇಳಿದ್ದೇನೆ ಆನಂದನಿಗೆ ? ಸದ್ಯಕ್ಕೆ
ಹೆಣ್ಣು ಸೇರುವುದು ಬೇಡ ನಮ್ಮ ಸಂಘಕ್ಕೆ ;
ಅರ್ಹಂತ ಮತದಂತೆ ಗಂಡಾಗಿ ಹುಟ್ಟಿದರೆ
ಮಾತ್ರ ಅರ್ಹತೆಯುಂಟು ಮೋಕ್ಷಕ್ಕೆ !

ಹೇಳುತ್ತದೆ ಖುರಾನ್ : ಹೆಣ್ಣೊಂದು ಬರಿಯ ಹೊಲ,
ನಿನ್ನ ಸ್ವತ್ತು ; ಮೂರು ಸಲ ತಲಾಖ್ ಎಂದರೆ ಸಾಕು.
ಸ್ತ್ರೀಶೂದ್ರಾದಿಗಳಿಗೆಲ್ಲಿಯದೊ ವೇದಾಧಿಕಾರ ?
ಇಂಥ ದಯವಿರದ ಧರ್ಮಗಳ ಆಚೆ ನೂಕು.

ಹೊಸ ತಿಳಿವಿನೆಚ್ಚರದಲ್ಲಿ ಲೋಕ ಸಾಗಿದೆ
ಮಗಳೆ. ದಾಟಿ ಬಾ ಮಹದೇವಿಯಕ್ಕನ ಹಾಗೆ
ನಿರ್ಭಯದ ನಿಲುವಿಗೆ. ಆತ್ಮಗೌರವದ ಗಿರಿಶಿಖರ-
ದೆತ್ತರದಲ್ಲಿ ಅರಳಿಕೊಳ್ಳಲಿ ಬದುಕು ಹೊಸ ಬೆಳಕಿಗೆ.