ದೊಡ್ಡವರು ಗೌರವ ಪಡೆಯುವುದು ತಮ್ಮ ದೊಡ್ಡ ಗುಣಗಳಿಂದ ಮಾತ್ರ.

“ಹಾಗಾದರೆ ಆ ದೊಡ್ಡ ಗುಣಗಳು ಯಾವುವು?” ಎಂದು ಕೇಳುವಿರಲ್ಲವೇ? ಕೇಳಬೇಕಾದ ಪ್ರಶ್ನೆ. ನಮ್ಮ ಪ್ರಾಚೀನ ಸಂಸ್ಕೃತ ಸಾಹಿತ್ಯದಲ್ಲಿ ಸುಭಾಷಿತಗಳೆಂಬ ಅನರ್ಘ್ಯ ರತ್ನ ಭಂಡಾರವುಂಟು. ಅದರಲ್ಲಿ ಒಂದು ದೊಡ್ಡವರ ದೊಡ್ಡ ಗುಣಗಳನ್ನು ಹೀಗೆ ತಿಳಿಸಿ ಕೊಡುತ್ತದೆ:

ಧರ್ಮೇ ತತ್ಪರತಾ, ಮುಖೇ ಮಧುರತಾ, ದಾನೇ ಸಮುತ್ಸಾಹಿತಾ,
ಮಿತ್ರೇ ಪಂಚಕತಾ, ಗುರೌ ವಿನಯಿತಾ, ಚಿತ್ತೇತಿ ಗಂಭೀರತಾ |
ಆಚಾರೇ ಶುಚಿತಾ, ಗುಣೇ ರಸಿಕತಾ, ಶಾಸ್ತ್ರೋತ್ರಿ ವಿಜ್ಞಾನಿತಾ,
ರೂಪೇ ಸುಂದರತಾ, ಹರೌ ಭಜನಿಯಾ ಸತ್ತ್ವೇವ ಸಂದೃಶ್ಯತೆ||

ಅಂದರೆ ಧರ್ಮದಲ್ಲಿ ಶ್ರದ್ಧೆ, ಮುಖದಲ್ಲಿ ಮಾಧುರ್ಯ, ದಾನದಲ್ಲಿ ಉತ್ಸಾಹ, ಗೆಳೆಯರಲ್ಲಿ ಪ್ರಾಮಾಣಿಕತೆ, ಗುರುವಿನಲ್ಲಿ ವಿನಯ, ಗಂಭೀರ ಮನಃಸ್ಥಿತಿ, ಶುದ್ಧ ನಡವಳಿಕೆ, ಸುಂದರ ರೂಪ, ರಸಿಕ ಗುಣ, ಶಾಸ್ತ್ರಗಳಲ್ಲಿ ಪಾಂಡಿತ್ಯ, ದೇವರಲ್ಲಿ ಭಕ್ತಿ – ಇವಿಷ್ಟೂ ಸಜ್ಜನರಾದ ದೊಡ್ಡವರಲ್ಲಿ ಕಾಣಿಸಿಕೊಳ್ಳುವುದಿಲ್ಲ. ದೊಡ್ಡ ಗುಣಗಳನ್ನು ಹೊಂದಿ, ದೊಡ್ಡದನ್ನ ಆರಾಧಿಸಿ, ದೊಡ್ಡವರಾಗಿ ಬದುಕಲು ಎಲ್ಲರಿಗೂ ಅವಕಾಶವುಂಟು. ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ದೊಡ್ಡ ನಂಬಿಕೆಯನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು.

ಹಾಗೆ ದೊಡ್ಡ ಗುಣಗಳಿಂದ, ತಾವು ಹುಟ್ಟಿದ ದೇಶದಲ್ಲಿಯೂ ಇದ್ದ ಹೊರ ದೇಶದಲ್ಲಿಯೂ ದೊಡ್ಡದಾಗಿ ಪ್ರಕಾಶಿಸಿದವರು ದಾದಾಭಾಯಿ ನವರೋಜಿಯವರು. ಭಾರತದಲ್ಲಿ ಮಾತ್ರವೇ ಅಲ್ಲ, ಆಗ ಭಾರತದ ಮೇಲೆ ದರ್ಪದಿಂದ ಅಧಿಕಾರ ನಡೆಸುತ್ತಿದ್ದ ಆಂಗ್ಲ ಪ್ರಭುಗಳ ಮೂಲಭೂಮಿಯಾದ ಇಂಗ್ಲೆಂಡಿನಲ್ಲಿಯೂ ಅವರು ಗೌರವಾನ್ವಿತ ವ್ಯಕ್ತಿ ಎನ್ನಿಸಿಕೊಂಡಿದ್ದರು.

ಹೋರಾಟದ ಕಥಾನಕ

ಹತ್ತೊಂಬತ್ತನೆಯ ಶತಮಾನದ ಮೊದಲ ಭಾಗ. ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಕಾಲ ಅದು; ಮಹಾತ್ಮ ಗಾಂಧಿಯವರಿಗೂ ಎರಡು ತಲೆಮಾರುಗಳ ಹಿಂದೆ, ಗಾಂಧಿಯವರು ಗೋಪಾಲಕೃಷ್ಣ ಗೋಖಲೆಯವರನ್ನು ತಮ್ಮ ರಾಜಕೀಯ ಗುರುಗಳೆಂದು ಆರಾಧಿಸುತ್ತಿದ್ದರು. ಈ ಗೋಖಲೆಯವರಿಗೂ ಹಿಂದಿನವರು ದಾದಾಭಾಯಿ ನವರೋಜಿಯವರು. “ಭಾರತದ ವೃದ್ಧ ಪಿತಾಮಹ” ಎಂದೇ ಅವರು ಎಲ್ಲರ ಪ್ರೀತಿ ಮನ್ನಣೆಗೆ ಪಾತ್ರರಾಗಿದ್ದರು. ನಮ್ಮ ದೇಶ ಬ್ರಿಟಿಷರ ಅಯೋಗ್ಯ ಆಡಳಿತದಲ್ಲಿ ಅನ್ಯಾಯ ಅನುಭವಿಸುತ್ತದೆಯೆಂದೂ ನಮ್ಮ ದೇಶದ ಸಂಪನ್ಮೂಲಗಳನ್ನೆಲ್ಲ ಆಂಗ್ಲರು ಸೂರೆ ಮಾಡಿ, ಈ ದೇಶದ ಬಡತನ, ಹಸಿವು, ಕ್ಷಾಮಡಾಮರಗಳನ್ನು ಹೆಚ್ಚಿಸುತ್ತಿರುವರೆಂದೂ ಅವರು ಧೈರ್ಯವಾಗಿ ಟೀಕೆ ಮಾಡಿದರು. ಬ್ರಿಟನ್ನಿನಲ್ಲಿ ಬ್ರಿಟಿಷ್‌ಪ್ರಜೆಗಳಿರುವಂತೆಯೇ ಭಾರತೀಯ ಪ್ರಜೆಗಳಿಗೂ ಯೋಗ್ಯ ಆಡಳಿತ, ಸಮಾನ ಸ್ಥಾನಮಾನ, ಉದ್ಯೋಗ ಅವಕಾಶ ದೊರೆಯಬೇಕೆಂದು ಕೊನೆಯತನಕ ಹೋರಾಡಿದರು. ಈ ಹೋರಾಟದ ಫಲವಾಗಿ ಭಾರತೀಯರಲ್ಲಿ ಹೊಸ ಜಾಗೃತಿ ಮೂಡಿತು. ದಾದಾಭಾಯಿಯವರ ಜೀವನ ವೃತ್ತಾಂತ ಒಂದು ಹೋರಾಟದ ಕಥಾನಕ.

ಮಹೋನ್ನತ ವೃದ್ಧ”

ದಾದಾಭಾಯಿಯವರು ಪಾರಸೀ ಜನಾಂಗಕ್ಕೆ ಸೇರಿದವರು. ಈ ಜನಾಂಗ ಮೂಲತಃ ಭಾರತಕ್ಕೆ ಬಂದುದು ಪರ್ಷಿಯಾ (ಇರಾನ್‌) ದೇಶದಿಂದ. ಬರೋಡದ ಗಾಯಕವಾಡದಲ್ಲಿ ನವಸಾರಿ ಎಂಬುದೊಂದು ಸಣ್ಣ ಪಟ್ಟಣ. ಪರ್ಷಿಯಾದಿಂದ ಬಂದ ಪಾರಸಿಗಳು ಇಲ್ಲಿಯೇ ಬಂದು ನೆಲೆಸಿದರು. ನವಸಾರಿ ಹಲವು ಅತ್ಯುನ್ನತ ಪಾರಸೀ ದೇಶಭಕ್ತರನ್ನು ಭಾರತಕ್ಕೆ ಕಾಣಿಕೆಯಾಗಿ ಕೊಟ್ಟಿದೆ. ದಾದಾಭಾಯಿ ನವರೋಜಿಯವರ ಪೂರ್ವಿಕರು ನವಸಾರಿಯಲ್ಲಿಯೇ ಬಂದು ನೆಲೆಸಿದವರು. ಭಾರತಕ್ಕೆ ಮೊತ್ತ ಮೊದಲು ವಲಸೆ ಬಂದ ಪಾರಸೀ ಕುಟುಂಬಗಳಲ್ಲಿ ದಾದಾಭಾಯಿಯವರ ಕುಟುಂಬವೂ ಒಂದು. ತಮ್ಮ ಪ್ರಾಚೀನ ಸಂಸ್ಕೃತಿಯನ್ನು ಎಚ್ಚರದಿಂದ ಕಾಪಾಡಿಕೊಳ್ಳುತ್ತಾ ಈ ಪಾರಸೀ ಕುಟುಂಬಗಳು ವ್ಯಾಪಾರ ವಾಣಿಜ್ಯಗಳಲ್ಲಿ ತೊಡಗಿದವು. ಮುಂಬಯಿಯ ಖಡಕ್‌ಎಂಬಲ್ಲಿ ಬಡ ಪಾರಸೀ ಪಲಾಂಜಿ ದೋರ್ದಿ ಮತ್ತು ಇವರ ಹೆಂಡತಿ ಮಾನೆಕ್‌ಭಾಯ್ ಇವರಿಗೆ 1825ರ ಸೆಪ್ಟೆಂಬರ್ 4ರಂದು ಗುಂಡುಮಗುವೊಂದು ಹುಟ್ಟಿತು. ಇದೇ ಅವರ ಮೊದಲನೆಯ ಮಗು ಹಾಗೂ ಒಬ್ಬನೇ ಮಗ. ಈ ಮಗುವಿಗೆ “ದಾದಾಭಾಯಿ” ಎಂದು ನಾಮಕರಣ ಮಾಡಿದರು. ಇದು ಹಿಂದು ಹೆಸರು. ಮಹೋನ್ನತ ವೃದ್ಧ ಎಂದೇ ಈ ಹೆಸರಿನ ಅರ್ಥ. ತಾಯಿ ತಂದೆ ಇಟ್ಟ ಹೆಸರಿಗೆ ತಕ್ಕಂತೆಯೇ ದಾದಾಭಾಯಿ ಬದುಕಿದರು. ಮುಂದೆ ಅವರೇ ಒಮ್ಮ ಹೀಗೆ ಬರೆದಿದ್ದಾರೆ:

“ಭಾರತೀಯ ಮಹಾಕುಲ ವೃದ್ಧ ಎಂದು ನಾನು ಕರೆಸಿಕೊಂಡು ಹೆಮ್ಮೆ ಪಡುವುದರಲ್ಲಿ ನನಗೆ ಒಣಜಂಭವೇನೂ ಇಲ್ಲ. ಈ ಬಿರುದು ನನ್ನ ದೇಶ ಬಾಂಧವರ ಉದಾರತೆ, ಪ್ರೀತಿ, ಕೃತಜ್ಞತೆಗಳ ಪ್ರತೀಕವಾಗಿದೆ. ಅದಕ್ಕೆ ನಾನು ಯೋಗ್ಯನೋ ಇಲ್ಲವೋ, ಅದು ನನ್ನ ಜೀವನದಲ್ಲಿ ದೊರಕಿದ ಬಹುದೊಡ್ಡ ಬಹುಮಾನ”.

ಹೊಸೆದ ಹುರಿ”

ದೋರ್ದಿಯವರು ಪಾರಸೀ ಪುರೋಹಿತ ಮನೆತನಕ್ಕೆ ಸೇರಿದವರು. ಮಗನನ್ನೂ ಪುರೋಹಿತ ಕೆಲಸಕ್ಕೆ ಸಿದ್ಧ ಮಾಡಬೇಕೆನ್ನುವುದು ತಂದೆಯ ಇಚ್ಛೆ. ಅದಕ್ಕೆ ತಕ್ಕಂತೆ ಪಾರಸಿಗಳ ಪದ್ಧತಿಯಂತೆ “ನವರ್” ಎಂಬ ದೀಕ್ಷೆಯು ನಡೆಯಿತು. ಆದರೆ ಅದೃಷ್ಟ ಬೇರೆಯೇ ಇತ್ತು. ಒಂದು ಕುಲದ ಪುರೋಹಿತನಾಗುವ ಬದಲು, ಇಡೀ ಜನಾಂಗದ ಸುಧಾರಣೆಗಾಗಿ ದುಡಿದರು. ದೋರ್ದಿ ಎಂದರೆ “ಹೊಸೆದ ಹುರಿ” ಎಂದರ್ಥ. ಮುಂದೆ ದಾದಾಭಾಯಿಯವರೇ ಗಾಯಕವಾಡ ಮಹಾರಾಜರಿಗೆ ಹೀಗೆ ಹೇಳಿದರಂತೆ: “ಮಹಾರಾಜ್‌, ನನ್ನ ಮನೆತನದ ಹೆಸರೇ ದೋರ್ದಿ. ದೋರ್ದಿಯನ್ನು ಸುಡಬಹುದು. ಆದರೆ ಅದರ ಹೊಸೆತವನ್ನು ಸುಡಲು ಸಾಧ್ಯವಿಲ್ಲ. ಒಮ್ಮೆ ನಾನು ನಿರ್ಧಾರಕ್ಕೆ ಬಂದರೆ ಮುಗಿಯಿತು. ಅದನ್ನು ಬದಲಿಸಲು ಸಾಧ್ಯವಿಲ್ಲ” ಈ ಮಾತುಗಳನ್ನು ನವರೋಜಿಯವರ ವಂಶದ ಗುಣಗಳನ್ನೂ ಅವರದೇ ಆದ ಗುಣಗಳನ್ನೂ ಸೂಚಿಸುತ್ತವೆ. ಸ್ವತಃ ಪರೀಕ್ಷೆ ಮಾಡದೆ ದಾದಾಭಾಯಿ ಯಾವುದನ್ನೂ ಒಪ್ಪುತ್ತಿರಲಿಲ್ಲ. ನಿಜ ಸಂಗತಿ ತಿಳಿಯುವ ತನಕ ಯಾವುದೇ ವಿಷಯದ ಬಗೆಗೆ ಮಾತನಾಡುತ್ತಿರಲಿಲ್ಲ. ತಮ್ಮ ಹದಿನೈದನೆಯ ವರ್ಷದಲ್ಲಿಯೇ ದಾದಾಭಾಯಿ ತಾವೆಂದೂ ಕೆಟ್ಟ ಮಾತುಗಳನ್ನು ಆಡುವುದಿಲ್ಲವೆಂದು ಪ್ರತಿಜ್ಞೆ ಕೈಗೊಂಡರು. ಆ ಪ್ರಜ್ಞೆಯನ್ನು ಕಡೆಯ ತನಕವೂ ಉಳಿಸಿಕೊಂಡರು.

ತಾಯಿಯ ರಕ್ಷಣೆ

ದಾದಾಭಾಯಿಗೆ ಇನ್ನೂ ನಾಲ್ಕು ವರ್ಷ. ತಂದೆ ತೀರಿಕೊಂಡರು. ತಂದೆ ಸತ್ತ ದಿನ ಮಗು ದಾದಾಭಾಯಿಗೆ ಹೀಗೆ ಅನುಭವವಾಯಿತಂತೆ: “ನನಗೆ ಹೆಚ್ಚಿನ ಅನುಕಂಪವನ್ನು ತೋರಿದವನು ಚಂದ್ರ. ನಾನು ಮನೆಯ ಮುಂದಿದ್ದಾಗ ಅವನು ನನ್ನ ಜೊತೆಯಲ್ಲಿದ್ದ. ನಾನು ಮನೆಯ ಹಿಂದಕ್ಕೆ ಹೋದಾಗ ಆಗಲೂ ನನ್ನ ಜೊತೆಗೆ ಬಂದ. ಈ ಅನುಕಂಪ ನನಗೆ ತುಂಬ ಇಷ್ಟವಾಯಿತು. ಈಗಲೂ ಹಾಗೆಯೇ”.

ತಾಯಿಯೇ ಮಗುವಿನ ರಕ್ಷಣೆಯ ಭಾರವನ್ನು ಹೊತ್ತಳು. ಓದು ಬರಹ ಬರದಿದ್ದರೂ ಅವಳು ವಿವೇಕಿ. ಮಗನನ್ನು ಶಾಲೆಗೆ ಕಳಿಸಿದಳು. ಅದಕ್ಕಾಗಿ ಕಷ್ಟಪಟ್ಟಳು. “ನನ್ನನ್ನು ನಾನು ಇರುವ ಹಾಗೆ ಮಾಡಿದವಳು ನನ್ನ ತಾಯಿ”-ಎಂದು ದಾದಾಭಾಯಿ ತಾಯಿಯನ್ನು ಸ್ಮರಿಸಿಕೊಳ್ಳುತ್ತಿದ್ದರು. ಮುಂದೆ ಇದೇ ತಾಯಿ ಮಗ ಕೈಗೊಂಡ ಹೆಣ್ಣು ಮಕ್ಕಳ ಶಿಕ್ಷಣ, ಸಮಾಜದಲ್ಲಿನ ಅಜ್ಞಾನ ನಿವಾರಣೆ ಈ ಎಲ್ಲ ಕಾರ್ಯಗಳಿಗೂ ನೆರವಾದಳು.

ಪ್ರತಿಭಾವಂತ ಬಾಲಕ

“ದೇಶಿಯ ಶಿಕ್ಷಣ ಸಮಿತಿ” ಎಂಬುದು ಮುಂಬಯಿ ಪಟ್ಟಣದಲ್ಲಿ ಸ್ಥಾಪಿತವಾಗಿತ್ತು. ಇಂಗ್ಲಿಷ್‌ಮತ್ತು ದೇಶೀಯ ಬಾಷೆಗಳಲ್ಲಿ ಶಿಕ್ಷಣ ನೀಡುವ ಎರಡು ಶಾಖೆಗಳನ್ನು ಅದು ಪ್ರಾರಂಭಿಸಿತ್ತು. ಬಾಲಕನನ್ನು ವಿದ್ಯಾಭ್ಯಾಸಕ್ಕೆ ಏಕೆ ಕಳುಹಿಸಬಾರದು ಎಂದು ಮಾಸ್ತರರೊಬ್ಬರು ಪ್ರೇರೇಪಿಸಿದ ಮೇಲೆ ತಾಯಿ ಮಾನೆಕ್‌ಭಾಯ್ ಮಗನನ್ನು ಶಾಲೆಗೆ ಸೇರಿಸಿದಳು. ಅದು ಸರ್ಕಾರಿ ಶಾಲೆಯಾದ್ದರಿಂದ ಶುಲ್ಕ ಕೊಡಬೇಕಾಗಿರಲಿಲ್ಲ. ಒಳ್ಳೆಯ ಎತ್ತರ, ಕೆಂಪು ಬಣ್ಣ, ನೋಡಲು ಚೆನ್ನಾಗಿದ್ದ ಈ ಬಾಲಕ ಎಲ್ಲರನ್ನೂ ಆಕರ್ಷಿಸಿದ. ಗಣಿತದಲ್ಲಿ ಈ ಬಾಲಕ ಬಹು ಚುರುಕು. ವಿದ್ಯಾರ್ಥಿಗಳೆಲ್ಲ ಸುತ್ತ ಸೇರಿಕೊಂಡು, ಕಠಿಣವಾದ ಗಣಿತದ ಪ್ರಶ್ನೆಗಳಿಗೆ, ತಾನು ಉತ್ತರಕೊಟ್ಟು ತಬ್ಬಿಬ್ಬಾದ. ದಾದಾಭಾಯಿ ಆ ಪ್ರಶ್ನೆಗಳಿಗೆ ತಾನು ಉತ್ತರಕೊಟ್ಟು ಆ ಸಮಾರಂಭದಲ್ಲಿದ್ದ ಆಂಗ್ಲರೊಬ್ಬರಿಂದ ಮೆಚ್ಚುಗೆಯ ಬಹುಮಾನ ಪಡೆದುಕೊಂಡ.

ಗುಲ್‌ಭಾಯ್‌

ಆಗಿನ ಕಾಲದ ಪಾರಸೀ ಮನೆತನಗಳಲ್ಲಿ ಚಿಕ್ಕಂದಿನಲ್ಲಿಯೇ ಮಕ್ಕಳಿಗೆ ಮದುವೆ ಮಾಡಿಬಿಡುತ್ತಿದ್ದರು. ಅದರಂತೆಯೇ ದಾದಾಭಾಯಿಯವರಿಗೂ ಎಳೆಯ ವಯಸ್ಸಿನಲ್ಲೇ ಮದುವೆಯಾಯಿತು. ಆಗ ಅವರ ವಯಸ್ಸು ಇನ್ನೂ ಹನ್ನೊಂದು. ಅವರ ಹೆಂಡತಿ ಗುಲ್‌ಭಾಯ್‌ಯ ವಯಸ್ಸು ಕೇವಲ ಏಳು. ಪತ್ನಿ ಅನಕ್ಷರಸ್ಥೆಯಾದರೂ ಎಂದೂ ದಾದಾಭಾಯಿ ಅವಳ ಮನಸ್ಸು ನೋಯುವಂತೆ ನಡೆದುಕೊಳ್ಳಲಿಲ್ಲ. ಪತ್ನಿಯನ್ನು ಅಕ್ಷರಸ್ಥೆಯನ್ನಾಗಿ ಮಾಡಬೇಕೆಂದು ದಾದಾಭಾಯಿ ಪ್ರಯತ್ನಗಳನ್ನೇನೋ ನಡೆಸಿದರು. ಆದರೆ ಅವು ಫಲಕಾರಿಯಾಗಲಿಲ್ಲ.

ದಾದಾಭಾಯಿಯ ತಾಯಿ ತನ್ನ ಪ್ರತಿಭಾವಂತ ಮಗನಿಗೆ ಗುಲ್‌ಭಾಯ್‌ತಕ್ಕ ಹೆಂಡತಿಯಲ್ಲವೆಂದೂ ಭಾವಿಸಿದಳು. ಮಗನಿಗೆ ವಿದ್ಯಾವತಿಯಾದ ಇನ್ನೊಂದು ಹೆಣ್ಣನ್ನು ತಂದು ಮದುವೆ ಮಾಡುವ ಪ್ರಯತ್ನವನ್ನೂ ನಡೆಸಿದಳು. ಇದನ್ನು ತಿಳಿದೊಡನೆಯೇ ನವರೋಜಿ ತಾಯಿಯ ಅಭಿಪ್ರಾಯಕ್ಕೆ ಪ್ರತಿಭಟಿಸಿದರು. ಮತ್ತೊಂದು ಹೆಣ್ಣಿನ ಜೊತೆ ಮದುವೆಗೆ ಅವರು ಒಪ್ಪಲಿಲ್ಲ. “ನೀನೇ ಆಕೆಯ ಪರಿಸ್ಥಿತಿಯಲ್ಲಿದ್ದರೆ, ಆಗ ಏನು ಮಾಡುತ್ತಿದ್ದೇ?” ಎಂದು ತಾಯಿಯನ್ನೇ ದಾದಾಭಾಯಿ ಪ್ರಶ್ನಿಸಿದರು. ಮತ್ತೆ ತಾಯಿ ಮಗನ ಮತ್ತೊಂದು ಮದುವೆಯ ಸುದ್ದಿಯನ್ನು ಎತ್ತಲಿಲ್ಲ. ದೊಡ್ಡವರ ದೊಡ್ಡ ಗುಣವೇ ಹಾಗೆ. ತಮಗೆ ಕಷ್ಟವಾದರೂ ಪರಹಿಂಸೆಯನ್ನು ಅವರು ಸಹಿಸರು. ಮುಂದೆ ದಾದಾಭಾಯಿಯವರಿಗೆ ಮೂರು ಮಂದಿ ಮಕ್ಕಳಾದರು. ಒಂದು ಗಂಡು, ಎರಡು ಹೆಣ್ಣು.

ಕಾಲೇಜಿನ ವಿದ್ಯಾರ್ಥಿ

ದಾದಾಭಾಯಿ ಪ್ರತಿಭಾವಂತ ವಿದ್ಯಾರ್ಥಿಯೇನೋ ಸರಿ. ಆದರೆ, ಶ್ರೀಮಂತರ ಮಗನಲ್ಲವಷ್ಟೆ. ಶಾಲೆಯ ಉಪಾಧ್ಯಾಯರು ಬಡಹುಡುಗರನ್ನು ಅಲಕ್ಷ್ಯದಿಂದ ಕಾಣುತ್ತಿದ್ದರು. ದಾದಾಭಾಯಿ ಇದನ್ನು ಒಪ್ಪಲಿಲ್ಲ, ಪ್ರತಿಭಟಿಸುತ್ತಿದ್ದ.

ಆಗ ಹೊಸದಾಗಿ ಪ್ರಾರಂಭಿಸಿದ್ದ ಕಾಲೇಜು ತರಗತಿಗಳಿಗೆ ಐದಾರು ವಿದ್ಯಾರ್ಥಿಗಳನ್ನು ಆರಿಸುವ ಸಂದರ್ಭ ಬಂದಿತು. ಹಾಗೆ ಆರಿಸಲು ಬಂದಿದ್ದ ಬಾಲಗಂಗಾಧರ ಶಾಸ್ತ್ರಿ ಎಂಬುವರು ದಾದಾಭಾಯಿ ಪ್ರತಿಭೆಯನ್ನು ಗುರುತಿಸಿ, ಮೇಲ್ತರಗತಿಗೆ ಆರಿಸಿದರು. ದಾದಾಭಾಯಿ ಮುಂಬಯಿಯ ಪ್ರಖ್ಯಾತ ಎಲ್ಫಿನ್‌ಸ್ಟನ್‌ಕಾಲೇಜಿನ ವಿದ್ಯಾರ್ಥಿಯಾದರು. ದಾದಾಭಾಯಿಯವರದೇ ಈ ಕಾಲೇಜಿನಲ್ಲಿ ಪ್ರಥಮ ತಂಡ. ಇದೇ ಕಾಲೇಜು ದಾದಾಭಾಯಿಯವರ ಎಲ್ಲಾ ಪ್ರತಿಭೆಯ ಪ್ರಕಾಶಕ್ಕೂ ಮೂಲಸ್ಥಾನವಾಯಿತು. ಪ್ರಖ್ಯಾತ ಐರೋಪ್ಯ ವಿದ್ವಾಂಸರು ಈ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಇಲ್ಲಿ ಉತ್ತಮ ಶಿಕ್ಷಣ ದೊರೆಯುವುದರ ಜೊತೆಗೆ, ಉತ್ತಮ ವಾಚನಾಲಯ, ಪುಸ್ತಕ ಭಂಡಾರಗಳಿದ್ದವು. ದಾದಾಭಾಯಿ ಲೋಕದ ವೀರಪುರುಷರ, ಮಹಾಪುರುಷರ ಜೀವನ ಚರಿತ್ರೆಗಳನ್ನು ಅಧ್ಯಯನ ಮಾಡಿದರು. ವ್ಯಕ್ತಿಯಾದವನು ತನ್ನ ದೇಶಕ್ಕೆ, ತನ್ನ ಸಮಾಜಕ್ಕೆ ಸಲ್ಲಿಸಬೇಕಾದ “ಋಣ”ವೇನೆಂಬುದನ್ನು ಅವರು ಅರಿತುಕೊಂಡರು. ಪ್ರತಿ ವ್ಯಕ್ತಿಯ ಜೀವನದಲ್ಲೂ ತಾನು, ತನ್ನ ಕುಟುಂಬ ಇಷ್ಟೇ ಅಲ್ಲದೆ ದೇಶಕ್ಕೂ ಸಲ್ಲಬೇಕಾದ ಭಾಗವೊಂದಿದೆ ಎಂಬ ಎಚ್ಚರ ಅವರಲ್ಲಿ ಮೊಳೆಯಿತು. ದಾದಾಭಾಯಿ ಅದಕ್ಕೆ ಸಿದ್ಧರಾಗುತ್ತಿದ್ದರು. ಶುದ್ಧ ಆಲೋಚನೆ, ಶುದ್ಧ ನುಡಿ, ಶುದ್ಧ ಕಾರ್ಯ ಇವು ಅವರ ಮೇಲೆ ಪರಿಣಾಮ ಬೀರಿದ್ದವು. ಒಂದೇ ಪದ ಸಾಕಾಗುವಾಗ, ಎರಡು ಪದಗಳನ್ನೇಕೆ ಬಳಸಬೇಕು ಎಂದವರು ಯೋಚಿಸುತ್ತಿದ್ದರು. ಮಾತುಗಳ ಬಳಕೆಯಲ್ಲಿ ಎಚ್ಚರಿಕೆ, ಸ್ಪಷ್ಟತೆ ಇರಬೇಕೆಂಬುದನ್ನು ಅವರು ತಿಳಿದರು. ಸವಿಯಾಗಿ, ಅಲಂಕಾರಿಕವಾಗಿ ಮಾತನಾಡುವುದಕ್ಕಿಂತ, ನೇರ, ಸರಳ ಭಾಷೆಯೇ ಹೆಚ್ಚು ಪ್ರಭಾವಯುತವಾದುದು ಎಂದು ಅರಿತರು.

"ನೀನೇ ಆಕೆಯ ಪರಿಸ್ಥಿತಿಯಲ್ಲಿದ್ದಿದ್ದರೆ, ಆಗ ಏನು ಮಾಡುತ್ತಿದ್ದೆ?"

1840ರಲ್ಲಿ ದಾದಾಭಾಯಿಯವರಿಗೆ ಕ್ಲೇರ್ ವಿದ್ಯಾರ್ಥಿ ವೇತನ ದೊರೆಯಿತು. ತತ್ವ ಶಾಸ್ತ್ರ, ರಾಜಕೀಯ ಶಾಸ್ತ್ರಗಳನ್ನು ಅವರು ಅಭ್ಯಾಸ ಮಾಡಿದರು. ಇವರ ಪ್ರಾಧ್ಯಾಪಕರಲ್ಲಿ ಒಬ್ಬರಾದ ಪ್ರೊ|| ಆರ್ಲ್‌ಬಾರ್ ಎಂಬುವರು ದಾದಾಭಾಯಿಯವರನ್ನು “ಭಾರತದ ಭರವಸೆ” ಎಂದೇ ಕರೆದರು. ಭಾರತದ ಭರವಸೆ ಎನ್ನಿಸಿಕೊಂಡ ಈ ವ್ಯಕ್ತಿ ಭವಿಷ್ಯ ಭಾರತದ ಹಲವು ಕ್ಷೇತ್ರಗಳಲ್ಲಿ ಮೊತ್ತ ಮೊದಲನೆಯವರಾದರು. ವಿದ್ಯಾರ್ಥಿ ದಿಸೆಯಲ್ಲಿದ್ದಾಗಲೇ ದಾದಾಭಾಯಿ ತಮ್ಮ ತಾಯ್ನಾಡು ನಿದ್ರೆಯಲ್ಲಿರುವುದನ್ನು ತನ್ನ ಅವಹೇಳನದ ಕಡೆಗೂ ಅದು ಲಕ್ಷ್ಯ ಕೊಡದೆ ಇರುವುದನ್ನು ಕಂಡು ವಿಪರೀತ ಮರುಗಿದರು. 1845ರಲ್ಲಿ ಅವರ ವಿದ್ಯಾರ್ಥಿ ದಿಸೆ ಮುಗಿಯಿತು.

ತಮಗೆ ದೊರೆತ ಶಿಕ್ಷಣ ಬಡಜನರಿಂದ ಬಂದದ್ದು ಎಂಬುದನ್ನು ದಾದಾಭಾಯಿ ತಿಳಿದಿದ್ದರು. ಬಡವರಿಗೆ ವಿದ್ಯಾಭ್ಯಾಸ ದೊರಕಿಸುವ ಶಪಥವನ್ನು ಕೈಗೊಂಡರು.

ಅಧ್ಯಾಪಕ ದಾದಾಭಾಯಿ

ಸರ್ ಅರ್ಸ್ಕಿನ್‌ಪೆರಿ ಎಂಬುವರು ಮುಂಬಯಿಯ ಶ್ರೇಷ್ಠ ನ್ಯಾಯಾಧೀಶರಾಗಿದ್ದರು. ಜೊತೆಗೆ ಮುಂಬಯಿ ಶಿಕ್ಷಣ ಸಮಿತಿಯ ಅಧ್ಯಕ್ಷರೂ ಆಗಿದ್ದರು. ದಾದಾಭಾಯಿಯ ಪ್ರತಿಭೆಯನ್ನು ಅವರು ಗಮನಿಸಿದ್ದರು. ದಾದಾಭಾಯಿ ಮುಂದೆ ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟನ್‌ಪರೀಕ್ಷೆಗೆ ಓದಬೇಕೆಂದು ಅವರು ಸಲಹೆ ಇತ್ತರು.

ಆದರೆ ದಾದಾಭಾಯಿ ಒಂದು ನೂರು ರೂಪಾಯಿ ನೋಟನ್ನೂ ಅದುವರೆಗೆ ಕಣ್ಣಲ್ಲಿ ಕಂಡಿರಲಿಲ್ಲ! ಇಂಗ್ಲೆಂಡಿಗೆ ಹೋಗಿ ಬ್ಯಾರಿಸ್ಟರ್ ಪರೀಕ್ಷೆಗೆ ಓದುವುದೆಂದರೆ ಅದೇನು ಸುಲಭದ ಮಾತೇ? ದಾದಾಭಾಯಿಯ ಈ ಬಡತನ ತಿಳಿದು ಸರ್ ಅರ್ ಸ್ಕಿನ್‌ಪೆರಿ ತಾವೇ ಅರ್ಧ ವೆಚ್ಚವನ್ನು ವಹಿಸಿಕೊಳ್ಳುವುದಾಗಿ ತಿಳಿಸಿದರು. ಆದರೂ ದಾದಾಭಾಯಿ ಇಂಗ್ಲೆಂಡಿಗೆ ಹೋಗಲಾಗಲಿಲ್ಲ. ಪಾರಸೀ ಕುಲದವನೊಬ್ಬ ಸಮುದ್ರಯಾನ ಮಾಡಿ ಜಾತಿ ಭ್ರಷ್ಟನಾಗುವುದು ಅವರ ಕುಲದವರಿಗೆ ಹಿಡಿಸಲಿಲ್ಲ.

ದಾದಾಭಾಯಿ ತಾವು ಕಲಿತ ಕಾಲೇಜಿನಲ್ಲಿಯೇ ಉಪಾಧ್ಯಾಯ ವೃತ್ತಿಗೆ ಸೇರಿದರು. ಮುಂದೆ ಗಣಿತ ಶಾಸ್ತ್ರದ ಉಪ ಪ್ರಾಧ್ಯಾಪಕರಾಗಿ, ಅನಂತರ ಎರಡೇ ವರ್ಷಗಳಲ್ಲಿ ಗಣಿತ ಶಾಸ್ತ್ರ ಮತ್ತು ಪ್ರಕೃತಿ ವಿಜ್ಞಾನಗಳನ್ನು ಕಲಿಸುವ ಪ್ರಾಧ್ಯಾಪಕರಾದರು. ಅದುವರೆಗೆ ಆಂಗ್ಲರೇ ಇರುತ್ತಿದ್ದ ಈ ಪ್ರಾಧ್ಯಾಪಕ ಸ್ಥಾನಕ್ಕೆ ದೇಶೀಯರೊಬ್ಬರು ಬಂದುದು ಇದೇ ಮೊದಲು. ಇದೊಂದು ತಮ್ಮ ಜೀವನದ ಮಹತ್ತರ ಘಟನೆ ಎಂದೇ ದಾದಾಭಾಯಿ ಭಾವಿಸಿದರು. “ಪ್ರೊಫೆಸರ್ ದಾದಾಭಾಯಿ” ಎಂದು ಕರೆಸಿಕೊಳ್ಳುವುದು ಅವರಿಗೆ ತುಂಬ ಪ್ರಿಯವಾಗಿತ್ತು.

ವಿದ್ಯಾರ್ಥಿಗಳ ಮೇಲೆ ದಾದಾಭಾಯಿ ತಮ್ಮ ಪ್ರತಿಭೆ, ಪ್ರೌಢಿಮೆಗಳಿಂದ ಪ್ರಭಾವ ಬೀರಿದರು. ಶ್ರೇಷ್ಠ ಬೋಧಕರೆಂದೂ ಗುಣಾಢ್ಯರೆಂದೂ ಗೌರವಕ್ಕೆ ಪಾತ್ರರಾದರು.

ಚಿಂತೆನೆಗೆ ನೀರೆರೆಯುವ ಯತ್ನ

ದೇಶಕ್ಕೆ ಸಂಬಂಧಿಸಿದ ವಿಷಯಗಳು ಈಗಾಗಲೇ ದಾದಾಭಾಯಿಯವರ ಮನಸ್ಸನ್ನು ಹೊಕ್ಕಿದ್ದವು. ಎಲ್ಫಿನ್‌ಸ್ಟನ್‌ಕಾಲೇಜಿನಲ್ಲಿ “ವಿದ್ಯಾರ್ಥಿಗಳ ಸಾಹಿತ್ಯ ಹಾಗೂ ವಿಜ್ಞಾನ ಸಂಘ”ವೊಂದನ್ನು ಸ್ಥಾಪಿಸಲಾಯಿತು. ದಾದಾಭಾಯಿಯವರೇ ಇದರ ಕೋಶಾಧಿಕಾರಿ. ಈ ಸಂಘದಲ್ಲಿ ಚರ್ಚೆ ಮಾಡಿ, ಇತ್ಯರ್ಥಕ್ಕೆ ಬಂದ ವಿಷಯಗಳನ್ನು ಮುಂಬಯಿಯ ಸಾರ್ವಜನಿಕರ ಮುಂದೆಯೂ ಇಡಲು “ಜ್ಞಾನ ಪ್ರಸಾರಕ ಮಂಡಲಿ”ಗಳನ್ನು ಅವರು ಪ್ರಾರಂಭಿಸಿದರು. ಒಂದು ಗುಜರಾತೀ ಭಾಷೆಯಲ್ಲಿ, ಇನ್ನೊಂದು ಮರಾಠೀ ಭಾಷೆಯಲ್ಲಿ, ಗುಜರಾತೀ ಜ್ಞಾನ ಪ್ರಸಾರಕ ಮಂಡಲಿ ಈ ಭಾಷಣಗಳನ್ನು ತನ್ನದೇ ಪತ್ರಿಕೆಯಾದ “ಜ್ಞಾನ ಪ್ರಸಾರಕ”ದಲ್ಲಿ ಪ್ರಕಟ ಮಾಡುತ್ತಿತ್ತು. ದಾದಾಭಾಯಿಯವರೇ ಈ ಪತ್ರಿಕೆಗೆ ಹಲವು ವರ್ಷಗಳ ಕಾಲ ಸಂಪಾದಕರೂ ಆಗಿದ್ದರು.

ಎಲ್ಫಿನ್‌ಸ್ಟನ್‌ಕಾಲೇಜಿನಲ್ಲಿ ಅವರು ಪ್ರಾಧ್ಯಾಪಕರಾಗಿದ್ದಾಗಲೇ ಚರ್ಚೆಯಾಗುತ್ತಿದ್ದ ಒಂದು ಮುಖ್ಯ ವಿಷಯ ಹೆಣ್ಣು ಮಕ್ಕಳ ಶಿಕ್ಷಣ. ಕೇವಲ ಚರ್ಚೆಗಳಲ್ಲಿಯೇ ಇದು ಮುಗಿಯಲಿಲ್ಲ. ಕಾರ್ಯರೂಪಕ್ಕೂ ಒಂದು ಹೆಣ್ಣು ಮಕ್ಕಳ ಶಾಲೆಗಳು ಕಾರ್ಯಾರಂಭ ಮಾಡಿದವು. ದಾದಾಭಾಯಿಯವರು ಮನೆಮನೆಗೂ ಹೋಗಿ ಶಾಲೆಗಳಿಗೆ ಹೆಣ್ಣು ಮಕ್ಕಳನ್ನು ಕಳುಹಿಸಿಕೊಡಲು ಪ್ರಾರ್ಥಿಸಿದರು. ಮೊದ ಮೊದಲು ತೀರಾ ನಿರಾಶಾದಾಯಕವಾಗಿದ್ದ ಸ್ಥಿತಿ ಮುಂದೆ ಕೆಲವು ತಿಂಗಳುಗಳಲ್ಲಿಯೇ ಸುಧಾರಿಸಿತು. ಹೆಣ್ಣು ಮಕ್ಕಳ ಶಾಲೆಗಳಿಗೆ ವಿದ್ಯಾರ್ಥಿನಿಯರು ಬರಲಾರಂಭಿಸಿದರು. ಒಟ್ಟು ಏಳು ಶಾಲೆಗಳು ಹೆಣ್ಣು ಮಕ್ಕಳಿಗಾಗಿಯೇ ಪ್ರಾರಂಭವಾದವು. ಮುಂಬಯಿಯ ಮೊಟ್ಟ ಮೊದಲನೆಯ ಬಾಲಿಕಾ ಪಾಠ ಶಾಲೆ ದಾದಾಭಾಯಿಯವರಿಂದಲೇ ಪ್ರಾರಂಭವಾಯಿತು. ಸಾಮಾಜಿಕ ಸುಧಾರಣೆಗಳಲ್ಲಿ ದಾದಾಭಾಯಿಯವರ ಆಸಕ್ತಿ ಬೆಳೆಯುತ್ತಾ ಹೋಯಿತು. ತಮ್ಮ ಜನಾಂಗದವರಾದ ಪಾರಸೀಗಳಲ್ಲಿನ ಮೌಢ್ಯ, ಕಂದಾಚಾರಗಳ ವಿರುದ್ಧವಾಗಿಯೂ ಅವರು ಹೋರಾಡಿದರು. ಇದಕ್ಕಾಗಿ ಅವರು “ರಹ್‌ನಾಮೆ ಸಭಾ” ಎಂಬ ಸಂಸ್ಥೆಯನ್ನೂ ಸ್ಥಾಪಿಸಿದರು. ಇದು ಬಹುಕಾಲ ಕೆಲಸ ಮಾಡಿ, ವಜ್ರ ಮಹೋತ್ಸವವನ್ನೂ ಆಚರಿಸಿತು.

ಭಾರತೀಯ ಸಂಘಟನೆಯಾಗಬೇಕು”

ಭಾರತೀಯರಲ್ಲಿ ರಾಷ್ಟ್ರೀಯ ಜಾಗೃತಿಯನ್ನುಂಟು ಮಾಡಬೇಕು ಎನ್ನುವುದೇ ದಾದಾಭಾಯಿ ನವರೋಜಿಯವರ ತವಕ. ಆಳುತ್ತಿದ್ದ ಬ್ರಿಟಿಷರು ಭಾರತೀಯ ವಿಷಯಗಳ ಬಗ್ಗೆ ಅಜ್ಞಾನದಿಂದ ಕೂಡಿದ್ದರು. ಈ ದೇಶದ ಸಂಪತ್ತುಗಳನ್ನು ಸೂರೆ ಮಾಡುವ, ಇಲ್ಲಿನ ಅಜ್ಞಾನ, ಬಡತನಗಳನ್ನು ಹೆಚ್ಚಿಸುವ ಆಂಗ್ಲರ ಭಾರತದ ಆಡಳಿತ ವೈಖರಿಯನ್ನು ದಾದಾಭಾಯಿಯವರು ಸಹಿಸಲಿಲ್ಲ. 1852ರಲ್ಲಿ ಅವರು ಮುಂಬಯಿಯ ಸಭೆಯೊಂದರಲ್ಲಿ ಒಂದು ಚಿಕ್ಕ ಭಾಷಣ ಮಾಡಿದರು. ಅದೇ ಅವರ ಪ್ರಥಮ ರಾಜಕೀಯ ಭಾಷಣ, ಮೊದಲ ಭಾಷಣದಲ್ಲಿಯೇ ಇಂಗ್ಲೆಂಡಿನಿಂದ ಭಾರತಕ್ಕೆ ಆಳುವುದಕ್ಕಾಗಿ ಬರುವ ಆಂಗ್ಲ ಅಧಿಕಾರಿಗಳ ಅಜ್ಞಾನವನ್ನು ಟೀಕಿಸಿದರು. ಆಗ ದೇಶದಲ್ಲಿ ಇನ್ನೂ ರಾಷ್ಟ್ರೀಯ ಪ್ರಜ್ಞೆ ಮೂಡಿರಲಿಲ್ಲ. ಸಾರ್ವಜನಿಕ ಜೀವನ, ಸಾರ್ವಜನಿಕ ಪ್ರಜ್ಞೆಗಳೇನೆಂಬುದನ್ನೇ ಭಾರತೀಯರು ಅರಿಯರು. ದಾದಾಭಾಯಿ ನವರೋಜಿಯವರು ಈ ದೇಶದ ಜನರ ಮೌಢ್ಯವನ್ನು ಮೊದಲು ಹೋಗಲಾಡಿಸಿ, ರಾಷ್ಟ್ರಪ್ರೇಮವನ್ನು ಬೆಳೆಸಬೇಕಾಗಿತ್ತು. ಜನಾಂಗಕ್ಕೆ ಮೊತ್ತ ಮೊದಲ ರಾಜಕೀಯ ಗುರುವಾದರು ಅವರು. ದೇಶೀಯ ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಯದೆಯೇ ಶಾಸನಗಳನ್ನು ಮಾಡಿ, ತಾವು ಮಹಾ ಕಾರ್ಯ ಸಾಧಿಸಿದ್ದೇವೆಂದು ಹೆಮ್ಮೆ ಪಡುವ ಈ ಆಂಗ್ಲ ಅಧಿಕಾರಿಗಳ ಉದ್ಧಟ ನಡತೆಯನ್ನು ಪ್ರತಿಭಟಿಸಿದರು. “ನಮ್ಮಲ್ಲಿ ಹಲವು ದೋಷಗಳಿರಬಹುದು ನಿಜ; ಆದರೆ ಅವು ಆಂಗ್ಲರ ಅನುಕೂಲಕ್ಕಲ್ಲ. ಭಾರತೀಯರು ತಮ್ಮ ಧ್ವನಿಯನ್ನು ಸಂಘಟಿಸುವುದೇ ಇದಕ್ಕೆ ತಕ್ಕ ಪರಿಹಾರ” ಎಂದು ಅವರು ಗುಡುಗಿದರು. ಮುಮದೆ ದಾದಾಭಾಯಿಯವರ ಸಾರ್ವಜನಿಕ ಹೋರಾಟ ಯಾವ ದಿಕ್ಕಿನಲ್ಲಿ ನಡೆಯಬಹುದು ಎಂಬುದನ್ನು ಈ ಮೊದಲನೆಯ ಭಾಷಣವೇ ತಿಳಿಸಿಕೊಡುತ್ತದೆ. ದಾದಾಭಾಯಿಯವರಿಗೆ ಬ್ರಿಟಿಷರ ನ್ಯಾಯ ಪಕ್ಷಪಾತದಲ್ಲಿ ದೃಢ ನಂಬಿಕೆ ಇತ್ತು. “ಚಳವಳಿ, ಚಳವಳಿ, ಚಳವಳಿ”-ಇದೇ ಅವರ ಮೂಲಮಂತ್ರವಾಯಿತು.

"ಬ್ರಿಟಿಷರು ಭಾರತಕ್ಕೆ ಕೊಟ್ಟ ಎಲ್ಲಾ ವಾಗ್ದಾನಗಳನ್ನೂ ಮುರಿದ್ದಿದ್ದಾರೆ".

ಬ್ರಿಟನ್ನಿನಲ್ಲಿ ಬ್ರಿಟಿಷರಿಗೆ ಯಾವ ಹಕ್ಕು, ಸ್ವಾತಂತ್ರ್ಯ ಗಳುಂಟೋ ಅವೇ ಬಗೆಯ ಹಕ್ಕು, ಸ್ವಾತಂತ್ರ್ಯಗಳು ಭಾರತೀಯರಿಗೂ ದೊರಕಬೇಕೆಂದು ಅವರು ಬ್ರಿಟಿಷ್ ಸರ್ಕಾರಕ್ಕೂ ಬ್ರಿಟಿಷ್‌ಪ್ರಜೆಗಳಿಗೂ ವಿನಂತಿ ಮಾಡಿಕೊಳ್ಳುತ್ತಿದ್ದರು.

ದಾದಾಭಾಯಿಯವರು ತಮ್ಮ ಮೂವತ್ತು ವರ್ಷಗಳ ವಯಸ್ಸಿನ ಹೊತ್ತಿಗೆ ಮುಂಬಯಿ ನಗರದ ಸಾಮಾಜಿಕ ಜೀವನದ ಮುಂದಾಳು ಎನಿಸಿದ್ದರು. ಇದೇ ಸಮಯದಲ್ಲಿಯೇ ದೇಶ ವಿಷಯಗಳನ್ನು ಪ್ರಚಾರ ಮಾಡಲು “ರಾಸ್ತ್‌ಗೋಫ್ತಾರ್‌” ಎಂದರೆ “ಸತ್ಯವಾದಿ” ಎಂಬ ಪತ್ರಿಕೆಯನ್ನು ಕೂಡ ಅವರು ತಮ್ಮ ಮಿತ್ರರಾದ ಖರ್‌ಷೇಡ್‌ಜಿ ನಸರ್‌ವಾಂಜಿ ಕಾಮಾ ಇವರ ಸಹಾಯದೊಡನೆ ಪ್ರಾರಂಭಿಸಿದ್ದರು. 1851ರಲ್ಲಿ ಈ ಪತ್ರಿಕೆ ಪ್ರಾರಂಭವಾಗಿ ಕೇವಲ ಎರಡೇ ವಾರಗಳಲ್ಲಿ ಪ್ರಭಾವಶಾಲಿ ವಾರಪತ್ರಿಕೆಯಾಯಿತು.

“ನನ್ನ ಜೀವನದ ಏಕೈಕ ಅಪೇಕ್ಷೆಯೆಂದರೆ ಅವಕಾಶ ದೊರೆತಾಗಲೆಲ್ಲ ನನ್ನ ಜನತೆಗೆ ಸೇವೆ ಸಲ್ಲಿಸುವುದು” ಎಂದೇ ದಾದಾಭಾಯಿಯವರು ಬರೆದಿದ್ದರೆ. ದುಡಿಮೆಯೇ ಅವರಿಗೆ ಪೂಜೆಯೆನಿಸಿತು.

ಕಾಮಾ ಅಂಡ್‌ಕೋ

ಶಿಕ್ಷಕ ವೃತ್ತಿಯಲ್ಲಿರುವುದು ದಾದಾಭಾಯಿಯವರಿಗೆ ಹೆಚ್ಚು ಪ್ರಿಯವಾಗಿತ್ತೇನೋ ಸರಿ. ಆದರೆ ದೇಶಸೇವೆಗೆ ಇನ್ನಷ್ಟು ದೊಡ್ಡದಾದ ಕ್ಷೇತ್ರವನ್ನು ಅವರು ಹುಡುಕುತ್ತಿದ್ದರು. ಆಗ ಲಂಡನ್ನಿನಲ್ಲಿದ್ದ ಕಾಮಾ ಅಂಡ್‌ಕೋ ಎಂಬ ವ್ಯಾಪಾರೀ ಸಂಸ್ಥೆ ದಾದಾಭಾಯಿಯವರನ್ನು ತಮ್ಮ ಕಂಪೆನಿಯ ಪಾಲುದಾರರಾಗಿ ಸೇರಲು ಆಹ್ವಾನಿಸಿತು. ದಾದಾಭಾಯಿಯವರು ಒಪ್ಪಿದರು. “ದಾದಾಭಾಯ್‌, ಇದೆಂತಹ ಪತನ!” ಎಂದು ಅವರ ಎಲ್ಫಿನ್‌ಸ್ಟನ್‌ಕಾಲೇಜಿನಲ್ಲಿ ಪ್ರಾಧ್ಯಾಪಕರು ಹಾಸ್ಯ ಮಾಡಿದರು. ಆದರೆ ದಾದಾಭಾಯಿ ವ್ಯಾಪಾರೀ ಸಂಸ್ಥೆ ಸೇರಿ ಹಣ ಸಂಪಾದಿಸಲು ಆಶಿಸಿರಲಿಲ್ಲ. ಭಾರತ-ಇಂಗ್ಲೆಂಡುಗಳ ನಡುವೆ ಹೆಚ್ಚಿನ ತಿಳಿವಳಿಕೆ, ಹೆಚ್ಚಿನ ಸಂಪರ್ಕಗಳನ್ನು ತರುವುದೇ ಅವರ ಮೂಲ ಉದ್ದೇಶವಾಗಿತ್ತು. 1856ಕ್ಕೂ ಹಿಂದೆಯೇ ಲಂಡನ್ನಿನಲ್ಲಿ ಸ್ಥಾಪಿಸಲ್ಪಟ್ಟಿದ್ದ ಮೊಟ್ಟ ಮೊದಲ ಭಾರತೀಯ ವ್ಯಾಪರೀ ಸಂಸ್ಥೆ ಕಾಮಾ ಅಂಡ್‌ಕೊ. ಭಾರತೀಯರು ಯುವಕರು ಇಂಗ್ಲೆಂಡಿಗೆ ತೆರಳಿ ಇಂಡಿಯನ್‌ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಕುಳಿತು ಪಾಸು ಮಾಡಬೇಕಾಗಿತ್ತು. ಇಂತಹ ಯುವಕರು ಸ್ವತಂತ್ರವಾಗಿ ಇಂಗ್ಲೆಂಡಿಗೆ ತೆರಳಿ ಪರೀಕ್ಷೆಗಳಿಗೆ ಕೂಡಲು ತಕ್ಕ ವಸತಿ ಸೌಕರ್ಯಗಳನ್ನು ಕಲ್ಪಿಸಿಕೊಡುವುದೂ ದಾದಾಭಾಯಿಯವರ ಇನ್ನೊಂದು ಉದ್ದೇಶವಾಗಿತ್ತು. “ಭಾರತ ಭಾರತೀಯರಿಗಾಗಿ” ಎನ್ನುವುದೇ ಅವರ ಘೋಷಣೆ.

1855ರ ಜೂನ್‌27ರಂದು ದಾದಾಭಾಯಿಯವರು ಇಂಗ್ಲೆಂಡಿಗೆ ಪ್ರಯಾಣ ಮಾಡಲು ಮೊತ್ತ ಮೊದಲು ಹಡಗು ಹತ್ತಿದರು.

ಕಾಮಾ ವ್ಯಾಪಾರ ಸಂಸ್ಥೆ ಲಕ್ಷಾಂತರ ರೂಪಾಯಿಗಳ ವ್ಯವಹಾರ ನಡೆಸುತ್ತಿತ್ತು. ಇನ್ನಿತರ ವಸ್ತುಗಳ ಜೊತೆಗೆ ಅಫೀಮು, ಮದ್ಯ ಇಂತಹ ಮಾದಕ ವಸ್ತುಗಳನ್ನೂ ಆ ಕಂಪೆನಿಯವರು ತರಿಸುತ್ತಿದ್ದರು. ಇವರ ವ್ಯಾಪಾರದಿಂದ ಬರುತ್ತಿದ್ದ ಕಂಪೆನಿಯ ಲಾಭದಲ್ಲಿ ಪಾಲು ಪಡೆಯಲು ದಾದಾಭಾಯಿಯವರು ಇಚ್ಛಿಸಲಿಲ್ಲ. ಮುಂಬಯಿಯಲ್ಲಿದ್ದ ಕಂಪೆನಿಯ ಪ್ರಧಾನ ಕಚೇರಿಗೆ ಪತ್ರ ಬರೆದರು. ಕಂಪೆನಿಯವರು ಒಪ್ಪಿಸಲು ಎಷ್ಟೋ ಪ್ರಯತ್ನಿಸಿದರು. ಆದರೆ ದಾದಾಭಾಯಿ ತಮ್ಮ ಪಾಲುದಾರಿಕೆಗೆ ರಾಜೀನಾಮೆ ಸಲ್ಲಿಸಿ ಭಾರತಕ್ಕೆ ಹಿಂದಿರುಗಿಯೇ ಬಿಟ್ಟರು.

ಮತ್ತೆ ಇಂಗ್ಲೆಂಡ್‌

ಮೂರು ವರ್ಷಗಳ ಇಂಗ್ಲೆಂಡಿನ ವಾಸ ಅವರಲ್ಲಿ ಹಲವು ಹೊಸ ಬದಲಾವಣೆಗಳನ್ನು ತಂದಿತ್ತು. ಬ್ರಿಟಿಷರ ಸ್ವಾತಂತ್ರ್ಯಪ್ರಿಯತೆ, ನ್ಯಾಯನಿಷ್ಠೆ, ಉದಾರ ಶಿಕ್ಷಣ, ಉದಾರವಾದೀ ಸಂಘ ಸಂಸ್ಥೆಗಳು – ಇವು ಅವರ ಮೇಲೆ ಪ್ರಭಾವ ಬೀರಿದ್ದವು. ಪಾಶ್ಚಾತ್ಯ ಜಗತ್ತಿನಲ್ಲಿ ಆಗ ನಡೆಯುತ್ತಿದ್ದ ರಾಜಕೀಯ ಹಾಗೂ ಆರ್ಥಿಕ ಪರಿವರ್ತನೆಗಳನ್ನು ನಮ್ಮ ದೇಶದ ಸ್ಥಿತಿಗಳಿಗೆ ತೂಗಿ ನೋಡಿದರು.

ಬ್ರಿಟನ್ನಿನಲ್ಲಿನ ಪ್ರಜಾಸತ್ತಾತ್ಮಕ ಸಂಘ ಸಂಸ್ಥೆಗಳು, ಸಂಸತ್ತಿನ ಪದ್ಧತಿ, ವ್ಯಾಪಾರ ವಾಣಿಜ್ಯ, ಬ್ಯಾಂಕಿಂಗ್‌ವ್ಯವಸ್ಥೆ, ಹಣಕಾಸು, ತಮ್ಮ ಹಕ್ಕುಗಳಿಗಾಗಿ ಬ್ರಿಟನ್ನಿನ ಜನತೆ ಹೋರಾಡುತ್ತಿದ್ದ ರೀತಿ ಇವೆಲ್ಲವನ್ನೂ ಅವರು ಇಂಗ್ಲೆಂಡಿನಲ್ಲಿ ಕಂಡರು. ಬ್ರಿಟಿಷರ ನ್ಯಾಯಪಕ್ಷಪಾತದಲ್ಲಿ ಅವರಿಗೆ ವಿಶ್ವಾಸ ಬೆಳೆಯಿತು.

ದಾದಾಭಾಯಿ ಭಾರತಕ್ಕೆ ಆಗುತ್ತಿರುವ ಅನ್ಯಾಯವನ್ನು ಆಂಗ್ಲ ಜನತೆಯ ಮುಂದೆ ವಿವರಿಸುವ ನಿಶ್ಚಯ ಮಾಡಿದರು. 1856ರಲ್ಲಿ ದಾದಾಭಾಯಿ ಎರಡನೆಯ ಬಾರಿ ಇಂಗ್ಲೆಂಡಿಗೆ ಹೊರಟರು. ಈ ಬಾರಿ ಅವರಿಗೆ ತಮ್ಮದೇ ವ್ಯಾಪಾರ ಸಂಸ್ಥೆ ಇದ್ದಿತು. ವ್ಯಾಪಾರದ ಮೂಲಕವೇ ಹಲವು ಉನ್ನತ ಆಂಗ್ಲ ವ್ಯಕ್ತಿಗಳ ಪರಿಚಯವನ್ನೂ ಸಂಪಾದಿಸಿದರು. ಇವರಲ್ಲಿ ಅನೇಕರು ದಾದಾಭಾಯಿಯವರ ಭಾರತ ವಿಮೋಚನೆಯ ಹೋರಾಟಕ್ಕೂ ಬೆಂಬಲ ಕೊಟ್ಟರು.

ಆಳುವವರಿಗೆ ತಿಳಿಯದು

ಭಾರತದ ಅಪೇಕ್ಷೆಗಳೇನು ಎನ್ನುವುದನ್ನು ಅವರು ಬ್ರಿಟಿಷರ ಎದುರಿಗೆ ವಿವರಿಸುತ್ತಿದ್ದರು. ಭಾರತವನ್ನು ನಿಜವಾಗಿ ಆಳುತ್ತಿದ್ದವರು ಯಾರು? ಚಕ್ರಾಧಿಪತಿಗಳ ಪ್ರತಿನಿಧಿಯಾದ ವೈಸ್‌ರಾಯರೆ? ಅಥವಾ ಅವರ ಸರ್ಕಾರವೇ? ಬ್ರಿಟಿಷ್‌ಸಿಂಹಾಸನದ ಪ್ರಭುಗಳೇ? ಅಥವಾ ಬ್ರಿಟಿಷ್‌ಮಂತ್ರಿ ಮಂಡಲವೆ? ಅಥವಾ ಬ್ರಿಟಿಷ್‌ಅಧಿಕಾರಶಾಹಿಯೇ? ಇವರು ಯಾರೂ ಅಲ್ಲ. ನಿಜವಾಗಿ ಬ್ರಿಟನ್ನಿನ ಜನತೆ ಭಾರತವನ್ನು ಆಳುತ್ತಿತ್ತು. ಬ್ರಿಟನ್ನಿನ ಪ್ರಜೆಗಳ ಪ್ರತಿನಿಧಿಯೇ ಬ್ರಿಟನ್ನಿನ ಸಂಸತ್ತು (ಪಾರ್ಲಿಮೆಂಟ್‌). ಆದರೆ ಬ್ರಿಟನ್ನಿನ ಪ್ರಜೆಗಳಿಗೆ ಭಾರತವೆಂದರೆ ಏನು, ಅದು ಎಲ್ಲಿದೆ ಎಂಬ ವಿಚಾರವೇ ತಿಳಿಯದು. ಈ ಬಗೆಗೆ ತಿಳುವಳಿಕೆ ಕೊಡುವುದು ತಮ್ಮ ಮೊದಲ ಕರ್ತವ್ಯವೆಂದು ದಾದಾಭಾಯಿ ಬಗೆದರು. ಡಬ್ಲ್ಯೂ.ಸಿ. ಬ್ಯಾನರ್ಜಿ ಎಂಬುವರ ಸಹಕಾರ ಪಡೆದು “ಲಂಡನ್‌ಇಂಡಿಯನ್‌ಸೊಸೈಟಿ”ಯನ್ನು ಸ್ಥಾಪಿಸಿದರು. ಆಂಗ್ಲರು ಹಾಗೂ ಭಾರತೀಯರನ್ನು ಒಟ್ಟಿಗೆ ತಂದು ಭಾರತದ ಸಮಸ್ಯೆಗಳೇನು ಎನ್ನುವುದರ ಬಗೆಗೆ ತಕ್ಕ ತಿಳುವಳಿಕೆ ನೀಡುವುದೇ ಇದರ ಗುರಿ. ಐವತ್ತು ವರ್ಷಗಳ ಕಾಲ ಈ ಸಂಘ ಒಂದೇ ಸಮನೆ ಬ್ರಿಟಿಷರಲ್ಲಿ ಭಾರತದ ಬಗ್ಗೆ ನೆಲೆಸಿದ್ದ ತಪ್ಪು ತಿಳುವಳಿಕೆಗಳನ್ನು ಹೋಗಲಾಡಿಸಲು ದುಡಿಯಿತು.

1866ರಲ್ಲಿ ಇನ್ನೊಂದು ಮಹಾಸಂಸ್ಥೆಯನ್ನು ದಾದಾಭಾಯಿ ಸ್ಥಾಪಿಸಿದರು. ಅದರ ಹೆಸರು “ಈಸ್ಟ್‌ಇಂಡಿಯಾ ಅಸೋಸಿಯೇಷನ್‌”. ಭಾರತದ ಹಿತರಕ್ಷಣೆಯಲ್ಲಿ ಆಸಕ್ತಿಯುಳ್ಳವರೆಲ್ಲ ಇದರಲ್ಲಿ ಸದಸ್ಯರಾಗಬಹುದಾಗಿತ್ತು. ಭಾರತಕ್ಕೆ ಸಂಬಂಧಿಸಿದ ಪುಸ್ತಕಗಳು, ಅಂಕಿ ಅಂಶಗಳು ಎಲ್ಲವೂ ಈ ಸಂಘದಲ್ಲಿ ದೊರೆಯುವಂತೆ ದಾದಾಭಾಯಿಯವರು ವ್ಯವಸ್ಥೆ ಮಾಡಿದರು. ತಮ್ಮ ದೇಶದ ಬಗೆಗೆ ಬ್ರಿಟನ್ನಿನ ಜನರಿಗೆ ತಿಳಿವಳಿಕೆ ಕೊಡಲು ಅವರು ಎಲ್ಲ ರೀತಿಗಳಲ್ಲಿಯೂ ಶ್ರಮಿಸಿದರು.

ಮೈಸೂರಿಗಾಗಿ

ಇದೇ ಸಂದರ್ಭದಲ್ಲಿ ಅವರು ಮೈಸೂರಿನ ಜನಕ್ಕೂ ಸಹಾಯ ಮಾಡಿದರು. (ಹಿಂದಿನ ಮೈಸೂರು ಸಂಸ್ಥಾನ. ಈಗ ಕರ್ನಾಟಕ ರಾಜ್ಯದ ಭಾಗವಾಗಿದೆ) ಮೈಸೂರು ಸಂಸ್ಥಾನದ ಆಡಳಿತವನ್ನು ಬ್ರಿಟಿಷರೇ ಆಗ ವಶಪಡಿಸಿಕೊಂಡಿದ್ದರು. ಇದು ತಪ್ಪು ಎಂದೂ ಮೈಸೂರು ರಾಜ್ಯವನ್ನು ಅಲ್ಲಿನ ಅರಸರಿಗೇ ಹಿಂದುರುಗಿಸಿ ಕೊಡಬೇಕೆಂದೂ ದಾದಾಭಾಯಿಯವರು ತಮ್ಮ ಪ್ರಭಾವ ಬೀರಿದರು. ಮೈಸೂರಿನ ಚಿನ್ನದ ಗಣಿಯನ್ನು ಮೈಸೂರೇ ರೂಢಿಸಿ, ಅದರ ಲಾಭವನ್ನೂ ಈ ಸಂಸ್ಥಾನವೇ ಹೊಂದಬೇಕೆಂಬುದೂ ದಾದಾಭಾಯಿ ನವರೋಜಿಯವರ ಆಶಯವಾಗಿತ್ತು. ಹಾಗೆಂದೇ ಅಂದಿನ ಮೈಸೂರಿನ ದಿವಾನರಾಗಿದ್ದ ಸರ್ ಕೆ. ಶೇಷಾದ್ರಿ ಅಯ್ಯರ್ ಅವರಿಗೆ ಪತ್ರವೊಂದನ್ನು ಕೂಡ ಬರೆದಿದ್ದರು.

ಭಾರತಕ್ಕೆ ಬಂದು ದಾದಾಭಾಯಿ ನವರೋಜಿಯವರು ಇಲ್ಲಿನ ಮುಖ್ಯ ನಗರಗಳಲ್ಲಿ “ಈಸ್ಟ್‌ಇಂಡಿಯಾ ಅಸೋಸಿಯೇಷನ್‌”ನ ಶಾಖೆಗಳನ್ನು ತೆರೆಯಲು ಸಂಚಾರ ಮಾಡಿದರು. ಮುಂಬಯಿ ಪಟ್ಟಣದಲ್ಲಿ ಅವರಿಗೆ ಇಪ್ಪತ್ತೈದು ಸಾವಿರ ರೂಪಾಯಿಗಳ ನಿಧಿಯನ್ನು ಅರ್ಪಿಸಲಾಯಿತು. ಆದರೆ ಈ ನಿಧಿಯ ಬಹುಭಾಗ ಹಣವನ್ನು ದಾದಾಭಾಯಿ ಈಸ್ಟ್‌ಇಂಡಿಯಾ ಅಸೋಸಿಯೇಷನ್ನಿಗೇ ಕೊಟ್ಟು ಬಿಟ್ಟರು.

ದಾದಾಭಾಯಿಯವರ ನಿರಂತರ ಪ್ರಯತ್ನದ ಫಲವಾಗಿ ಅರ್ಹತೆಯುಳ್ಳ ಭಾರತೀಯರನ್ನೂ ಸಿವಿಲ್‌ಸರ್ವಿಸ್‌ಗೆ ನೇಮಕ ಮಾಡಬೇಕೆಂದಾಯಿತು. ಅದುವರೆಗೂ ಕೇವಲ ಆಂಗ್ಲರನ್ನೇ ನೇಮಕ ಮಾಡಲಾಗುತ್ತಿತ್ತು.

ಬರೋಡ ಸಂಸ್ಥಾನದಲ್ಲಿ

ಈಸ್ಟ್‌ಇಂಡಿಯಾ ಅಸೋಸಿಯೇಷನ್‌ಬ್ರಿಟಿಷ್‌ಸಂಸತ್ತಿನ ಮೇಲೂ ಪ್ರಭಾವ ಬೀರಲಾರಂಭಿಸಿತು. ಭಾರತದಲ್ಲಿ ಜನಪ್ರಿಯ ಶಿಕ್ಷಣ, ಪಾರ್ಲಿಮೆಂಟಲ್ಲಿ ಭಾರತಕ್ಕೆ ಪ್ರಾತಿನಿಧ್ಯ – ಇವೆಲ್ಲವೂ ಬ್ರಿಟನ್ನಿನ ಸಂಸತ್ತಿನಲ್ಲಿ ಚರ್ಚೆಗೆ ಬಂದವು. ಭಾರತದಲ್ಲಿನ ಬಡತನ, ಹಣಕಾಸು, ಇವೆಲ್ಲವನ್ನೂ ಕುರಿತು ದಾದಾಭಾಯಿಯವರು ಬ್ರಿಟಿನ್ನಿನ ಜನಕ್ಕೆ ತಿಳಿವಳಿಕೆ ನೀಡುವ ಲೇಖನಗಳನ್ನು ಬರೆದು ಪ್ರಕಟಿಸಿದರು.

ಭಾರತದ ದೇಶಿಯ ಸಂಸ್ಥಾನವಾಗಿದ್ದ ಬರೋಡದ ಆಡಳಿತ ದಿನೇ ದಿನೇ ಕೆಟ್ಟು ಹೋಗುತ್ತಿತ್ತು. ತಮ್ಮ ಸಂಸ್ಥಾನದ ಆಡಳಿತವನ್ನು ವ್ಯವಸ್ಥೆಗೆ ತರಲು ಬರೋಡದ ಗಾಯಕವಾಡರು ದಾದಾಭಾಯಿ ನವರೋಜಿಯವರನ್ನು ಕೋರಿದರು. ಆ ಕಾರ್ಯ ಸುಲಭವೇನೂ ಆಗಿರಲಿಲ್ಲ. ಈ ದೇಶಿಯ ಸಂಸ್ಥಾನದ ಆಸ್ಥಾನ ಸ್ವಾರ್ಥ ಸಾಧಕರಿಂದ, ಒಳಸಂಚುಗಾರರಿಂದ ತುಂಬಿದ್ದು, ಆಡಳಿತವು ವಿಪರೀತ ಹದಗೆಟ್ಟು ಹೋಗಿತ್ತು. ಆದರೆ, ದಾದಾಭಾಯಿಯವರು ಈ ಸಂಸ್ಥಾನದ ದಿವಾನರಾಗಿರಲು ಒಪ್ಪಿದ್ದು ಬೇರೆಯೇ ಒಂದು ಕಾರಣದಿಂದ.

“ಮಹಾರಾಜ್‌, ನಾನು ಮಾನವನ ಸೇವೆ ಮಾಡಲು ಇಲ್ಲಿ ಬಂದಿಲ್ಲ. ದೇಶಸೇವೆಯಲ್ಲಿ ಒಂದು ಮಹತ್ತರ ಕರ್ತವ್ಯ ನಿರ್ವಹಿಸಲು ಸಲುವಾಗಿ ಇಲ್ಲಿಗೆ ಬಂದಿದ್ದೇನೆ” ಎಂದೇ ಅವರು ಗಾಯಕವಾಡ ಮಹಾರಾಜರಿಗೆ ತಿಳಿಸಿದರು. ತಮ್ಮ ಜೀವನದಲ್ಲಿ ಯಾವುದೇ ಅವಕಾಶ ಬರಲಿ, ಅದು ದೇಶಸೇವೆಯಾಗಿದೆಯೇ? ಎಂದೇ ಅವರು ಪರಿಗಣಿಸುತ್ತಿದ್ದರೆನ್ನುವುದಕ್ಕೆ ಈ ಮಾತುಗಳು ಉದಾಹರಣೆಯಾಗಿವೆ. ಎಲ್ಲ ಕರ್ತವ್ಯಗಳೂ ದೇಶ ಸೇವೆ ಎಂದೇ ದಾದಾಭಾಯಿ ಬಗೆಯುತ್ತಿದ್ದರು.

"ದೇಶಸೇವೆಯಲ್ಲಿ ಒಂದು ಮಹತ್ತರ ಕರ್ತವ್ಯ ನಿರ್ವಹಿಸಲು ಬಂದಿದ್ದೇನೆ."

ಹದಿಮೂರು ತಿಂಗಳ ಕಾಲ ಅವರು ಬರೋಡಾದಲ್ಲಿ ದಿವಾನಗರಾಗಿದ್ದುಕೊಂಡು, ಆ ಸಂಸ್ಥಾನದ ಆಡಳಿತವನ್ನು ಒಂದು ವ್ಯವಸ್ಥೆಗೆ ತಂದರು. ಮುಂದೆ ಮುಂಬಯಿಗೆ ಬಂದು ಆ ಮಹಾನಗರದ ಮುನ್ಸಿಪಲ್‌ಕಾರ್ಪೋರೇಷನ್ನಿಗೆ ಚುನಾಯಿಸಲ್ಪಟ್ಟರು. ಆಗ ಅವರ ವಯಸ್ಸು ಐವತ್ತೊಂದು. ಇದೇ ಸಮಯದಲ್ಲಿ ಮುಂಬಯಿ ಗವರ್ನರ್‌ರಾಗಿದ್ದ ಲಾರ್ಡ್‌ರೀ ಅವರು ದಾದಾಭಾಯಿಯವರನ್ನು ಮುಂಬಯಿ ಶಾಸನಸಭೆಯ ಸದಸ್ಯರನ್ನಾಗಿ ನೇಮಿಸಿದರು.

ದಾದಾಭಾಯಿ ನವರೋಜಿ ತಮ್ಮದೇ ವ್ಯಾಪಾರ ಸಂಸ್ಥೆಯನ್ನು ಪ್ರಾರಂಭಿಸಿದ್ದರೇನೋ ಸರಿ. ಆದರೆ ಅವರೆಂದೂ ಬುದ್ಧಿವಂತ ವ್ಯಾಪಾರಿಯಾಗಿರಲಿಲ್ಲ. ಮಿತ್ರನೊಬ್ಬನನ್ನು ಉಳಿಸಿಕೊಳ್ಳಲು ಹೋಗಿ ತಾವೇ ಹೆಚ್ಚಿನ ತೊಂದರೆಗೆ ಸಿಲುಕಿದರು. ಆದರೆ ನವರೋಜಿಯವರ ಸತ್ಯ ಸಂಧತೆ ಈ ಸಂದರ್ಭದಲ್ಲಿ ಅವರನ್ನು ಕಾಪಾಡಿತು. ಆದರೂ ವ್ಯಾಪಾರ ಸಂಸ್ಥೆ ಮುಚ್ಚಿತು.

ರಾಷ್ಟ್ರೀಯ ಕಾಂಗ್ರೆಸ್‌

ಈ ವೇಳೆಗೆ ಭಾರತದಲ್ಲಿ ರಾಷ್ಟ್ರೀಯ ಕಾಂಗ್ರೆಸನ್ನು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿದ್ದವು. ಇಂಡಿಯನ್‌ಸಿವಿಲ್ ಸರ್ವಿಸಿನಲ್ಲಿದ್ದು, ನಿವೃತ್ತರಾಗಿದ್ದ ಆಲೆನ್‌ಆಕ್ಟೇವಿಯನ್ ಹ್ಯೂಮ್‌ಎಂಬ ಆಂಗ್ಲರು ಈ ಕಾರ್ಯದಲ್ಲಿ ಆಸಕ್ತಿ ವಹಿಸಿದ್ದರು. 1885ರ ಡಿಸೆಂಬರ್ ಮುಂಬಯಿಯಲ್ಲಿ ಕಾಂಗ್ರೆಸಿನ ಮೊದಲನೆಯ ಸಭೆ ನಡೆಯಿತು. ದಾದಾಭಾಯಿಯವರು ಇದರಲ್ಲಿ ಮುಖ್ಯ ಪಾತ್ರ ವಹಿಸಿದರು. ಬ್ರಿಟನ್ನಿನ ಸಂಸತ್ತಿನಲ್ಲಿ ಹೇಗಾದರೂ ಭಾರತಕ್ಕೆ ಪ್ರಾತಿನಿಧ್ಯ ದೊರಕಿಸಿ ಕೊಡಬೇಕೆನ್ನುವುದು ಅವರ ಉದ್ದೇಶಗಳಲ್ಲಿ ಒಂದಾಗಿತ್ತು. ಇಂಗ್ಲೆಂಡಿಗೆ ಹಿಂತಿರುಗಿ ಸಂಸತ್ತಿಗೆ ಸ್ಪರ್ಧಿಸಲು ಅವರು ಪ್ರಯತ್ನಗಳನ್ನು ನಡೆಸಿದರು. ಹೋಲ್ಟರ್ನ್‌ಮತದಾರರ ಕ್ಷೇತ್ರದಿಂದ ಸ್ಪರ್ಧಿಯಾಗಿ ನಿಲ್ಲಲು ದಾದಾಭಾಯಿಯವರಿಗೆ ಅವಕಾಶ ದೊರೆಯಿತೇನೋ ನಿಜ. ಆದರೆ ಗೆಲ್ಲಲಿಲ್ಲ. ದಾದಾಭಾಯಿ ಬಿಳಿಯ ಜನಾಂಗದವರಲ್ಲ ಎಂಬುದೂ ಈ ಸೋಲಿಗೆ ಕಾರಣವಾಗಿತ್ತು.

1886ನೇ ವರ್ಷದ ಕೊನೆಯ ಹೊತ್ತಿಗೆ ದಾದಾಭಾಯಿಯವರಿಗೆ ಭಾರತಕ್ಕೆ ಬರಲು ಆಹ್ವಾನ ಬಂದಿತು. ಕಲ್ಕತ್ತದಲ್ಲಿ ಸೇರುವ ರಾಷ್ಟ್ರೀಯ ಕಾಂಗ್ರೆಸ್‌ನ ಸಭೆಯಲ್ಲಿ ಅವರು ಭಾಗವಹಿಸಬೇಕೆಂದು ಕೋರಲಾಗಿತ್ತು. ದಾದಾಭಾಯಿ ಕಲ್ಕತ್ತಕ್ಕೆ ಬಂದರು. ಕಾಂಗ್ರೆಸಿನ ಅಧ್ಯಕ್ಷ ಸ್ಥಾನಕ್ಕೇ ಅವರು ಆರಿಸಲ್ಪಟ್ಟರು. ದಾದಾಭಾಯಿಯವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಬ್ರಿಟನ್ನಿನ ಸಂಸತ್ತಿನಲ್ಲಿ ಭಾರತಕ್ಕೆ ತಕ್ಕ ಪ್ರಾತಿನಿಧ್ಯದ ಅವಶ್ಯಕತೆಯನ್ನು ಕುರಿತು ಮಾತನಾಡಿದರು.

ಇಂಗ್ಲೆಂಡಿನ ಸಂಸತ್ತಿನ ಸದಸ್ಯ

ಇಂಗ್ಲೆಂಡಿಗೆ ಹಿಂದುರುಗಿದ ದಾದಾಭಾಯಿಯವರು ತಮ್ಮ ಪ್ರಯತ್ನಗಳನ್ನು ನಿಲ್ಲಿಸಲಿಲ್ಲ. ಹೋಲ್ಬರ್ನ್‌ತಮ್ಮ ಪ್ರಯತ್ನಗಳನ್ನು ನಿಲ್ಲಿಸಲಿಲ್ಲ. ಹೋಲ್ಬರ್ನ್‌ಚನಾವಣೆಯಾದ ಆರು ವರ್ಷಗಳ ಆನಂತರ ಮತ್ತೆ ಸೆಂಟ್ರಲ್‌ಫಿನ್ಸ್‌ಬರಿ ಎಂಬ ಸ್ಥಳದಿಂದ ಬ್ರಿಟಿಷ್‌ಸಂಸತ್ತಿಗೆ ಸ್ಪರ್ಧಿಸಿ, ಜಯಶೀಲರಾದರು. ಆಗ ದಾದಾಭಾಯಿಯವರಿಗೆ 62 ವರ್ಷ ವಯಸ್ಸು. ಭಾರತೀಯನಾದವನೊಬ್ಬ ಬ್ರಿಟಿಷ್‌ಸಂಸತ್ತನ್ನು ಪ್ರವೇಶಿಸಿದುದು ಇದೇ ಮೊತ್ತ ಮೊದಲು. ಸಂಸತ್ತಿನಲ್ಲಿ ಭಾರತದ ನಿಜವಾದ ಪರಿಸ್ಥಿತಿಯನ್ನೂ ಬ್ರಿಟಿಷರ ಅಯೋಗ್ಯ ಆಡಳಿತದಿಂದ ತಮ್ಮ ದೇಶಕ್ಕಾಗುತ್ತಿರುವ ಅನ್ಯಾಯಗಳನ್ನೂ ಅವರು ವಿವರಿಸಿದರು.

ದಾದಾಭಾಯಿಯವರನ್ನು ತಾಯ್ನಾಡಿಗೆ ಕರೆಸಿಕೊಂಡು, ಭಾರಿ ಸನ್ಮಾನ ಸಮಾರಂಭವೊಂದನ್ನು ಏರ್ಪಡಿಸಬೇಕೆಂದು ಭಾರತೀಯರು ಇಚ್ಛಿಸಿದರು. ಈ ನಡುವೆ ಅವರ ಏಕಮಾತ್ರ ಪುತ್ರ ಆಡಿ ಹೃದಯಾಘಾತದಿಂದ ಮರಣ ಹೊಂದಿದ್ದರು. ದಾದಾಭಾಯಿಯವರಿಗೆ ಇದು ಹೃದಯ ನುಚ್ಚು ನೂರಾಗುವಂತಹ ಘಟನೆ. ಆದರೂ ಸ್ವಂತದ ದುಃಖಸಂಕಟಗಳು ತಮ್ಮ ಸಾರ್ವಜನಿಕ ಸೇವೆಗೆ ಅಡ್ಡಿ ಬರದಂತೆ ಎಚ್ಚರಿಕೆ ವಹಿಸಿದರು.

ಭಾರತಕ್ಕೆ ನಿನ್ನಂತಹ ಸುಪುತ್ರರು ಬೇಕು”

ದಾದಾಭಾಯಿ ನವರೋಜಿಯವರು ಸ್ವದೇಶಕ್ಕೆ ಬಂದಾಗ ಭಾರಿ ಸ್ವಾಗತವೇ ಅವರಿಗಾಗಿ ಕಾದಿತ್ತು. ಅವರನ್ನು ಹೊತ್ತ ಹಡಗು ಮುಂಬಯಿಯ ಅಪೋಲೋ ಬಂದರನ್ನು ತಲುಪಿದಾಗ ಜನರ ಸಂಭ್ರಮ ಹೇಳತಿರದು. ರಸ್ತೆಗಳೆಲ್ಲ ತಳಿರು ತೋರಣಗಳಿಂದ ಅಲಂಕೃತಗೊಂಡಿದ್ದವು. ಬಂಗಾರದ ಅಕ್ಷರಗಳಲ್ಲಿ “ಸಂಸತ್ ಸದಸ್ಯ ದಾದಾಭಾಯಿ ನವರೋಜಿಯವರಿಗೆ ಸ್ವಾಗತ” ಎಂದು ಬರೆಯಲಾಗಿತ್ತು. ದಾದಾಭಾಯಿಯವರ ಚಿತ್ರಪಟಗಳನ್ನು ಅಲ್ಲಲ್ಲಿ ತೂಗು ಹಾಕಲಾಗಿತ್ತು. “ಭಾರತಕ್ಕೆ ನಿನ್ನಂತಹ ನೂರು ಸುಪುತ್ರರು ಬೇಕು” ಎಂದು ಒಂದು ಕಡೆ ಬರೆಯಲಾಗಿತ್ತು. ಹೆಂಗಸರು, ಮಕ್ಕಳು, ವೃದ್ಧರು ಎಲ್ಲರೂ ರಸ್ತೆಯ ಎರಡೂ ಕಡೆಗಳಲ್ಲಿ ನೆರೆದರು.

ಮುಂಬಯಿ ಪಟ್ಟಣದ ಮುಖ್ಯರಸ್ತೆಗಳಲ್ಲಿ ನಾಲ್ಕು ಕುದುರೆಗಳಿಂದ ಎಳೆಯಲ್ಪಟ್ಟ, ಅಲಂಕರಿಸಿದ ಸಾರೋಟಿನಲ್ಲಿ ದಾದಾಭಾಯಿಯವರ ಮೆರವಣಿಗೆ ಹೊರಟಿತು. ಹಿಂದೆಂದೂ ಅಂತಹ ದೃಶ್ಯವನ್ನು ಆ ನಗರ ಕಂಡಿರಲಿಲ್ಲ. ಸಾಮ್ರಾಜ್ಯವನ್ನು ಗೆದ್ದು ಬಂದ ವೀರನಿಗೆ ದೊರೆಯುವಂತಹ ಸನ್ಮಾನ ದಾದಾಭಾಯಿಯವರಿಗೆ ದೊರೆಯಿತು. ಮುಂಬಯಿ ಗವರ್ನರ್ ಆಗಿದ್ದ ಲಾರ್ಡ್‌ಹ್ಯಾಂಫ್‌ಕೂಡ ದಾದಾಭಾಯಿಯವರನ್ನು ಎದುರುಗೊಳ್ಳಲು ಆಗಮಿಸಿದ್ದ. ಮುಂಬಯಿಯ ಮುನ್ಸಿಪಲ್‌ಕಾರ್ಪೋರೇಷನ್ ಅವರಿಗೆ ಬಿನ್ನವತ್ತಳೆಯನ್ನು ಅರ್ಪಿಸಿತು.

ಇನ್ನೊಂದು ಮಹಾ ಕರ್ತವ್ಯ ಅವರಿಗಾಗಿ ಇಂಗ್ಲೆಂಡಿನಲ್ಲಿ ಕಾದಿತ್ತು. ಭಾರತೀಯರ ನಿಜವಾದ ಪರಿಸ್ಥಿತಿಗಳನ್ನು ಇಂಗ್ಲೆಂಡ್‌ತಿಳಿಯಬೇಕೆಂದು ದಾದಾಭಾಯಿಯವರು ಮೊದಲಿನಿಂದಲೂ ಒತ್ತಾಯಪಡಿಸುತ್ತಿದ್ದರು. ಭಾರತದ ಹಣಕಾಸಿನ ಸ್ಥಿತಿ ಮಾತ್ರ ಅಲ್ಲದೆ, ಆಡಳಿತ ವ್ಯವಸ್ಥೆಯ ಬಗೆಗೂ ಸುಧಾರಣೆಗಳು ನಡೆಯಬೇಕೆಂದು ಅವರು ವಾದಿಸುತ್ತಿದ್ದರು. “ರಾಯಲ್‌ಕಮಿಷನ್‌” ಎನ್ನುವುದೊಂದು ನೇಮಕವಾಯಿತು. ದಾದಾಭಾಯಿ ನವರೋಜಿಯವರು ಅತ್ಯಂತ ಶ್ರಮಪಟ್ಟು ಅಂಕಿ ಅಂಶಗಳನ್ನೆಲ್ಲ ಸಂಗ್ರಹಿಸಿ ಕಮಿಷನ್ನಿನ ಮುಂದೆ ಸಾಕ್ಷ್ಯ ಇತ್ತರು.

ಇಂಗ್ಲೆಂಡಿಗೆ ಎಚ್ಚರಿಕೆ

1904 ಹೊತ್ತಿಗೆ ಭಾರತದಲ್ಲಿ ಎಲ್ಲೆಲ್ಲಿಯೂ ರಾಷ್ಟ್ರೀಯ ಜಾಗೃತಿ ಉಂಟಾಗಿತ್ತು. ಶಿಕ್ಷಣ ಪಡೆದ ಯುವಕರು ಎಲ್ಲೆಲ್ಲಿಯೂ ಭಾರತದ ಮರೆತು ಹೋದ ವೈಭವದ ಬಗೆಗೆ ಜಾಗೃತಿಗೊಂಡು ಮಾತೃಭೂಮಿಯ ನವೋದಯದ ಕನಸುಗಳನ್ನು ಕಾಣುತ್ತಿದ್ದರು. ಆಗ ಲಾರ್ಡ್‌ಕರ್ಜನ್‌ಭಾರತದ ವೈಸ್‌ರಾಯ್‌ಆಗಿದ್ದರು. ಭಾರತ ಮತ್ತು ಭಾರತೀಯರೆಂದರೆ ಇವರಿಗೆ ಅಷ್ಟೊಂದು ಗೌರವವಿರಲಿಲ್ಲ. ಕಲ್ಕತ್ತ ವಿಶ್ವವಿದ್ಯಾನಿಲಯದ ಪದವೀದಾನ ಮಹೋತ್ಸವದ ಸಂದರ್ಭದಲ್ಲಿ ಈ ವೈಸ್‌ರಾಯ್‌ಮಾತನಾಡುತ್ತಾ ಭಾರತ ಮತ್ತು ಭಾರತೀಯ ಸಂಸ್ಕೃತಿಯನ್ನು ಕುರಿತು ಅವಹೇಳನಕಾರವಾದ ಮಾತುಗಳನ್ನಾಡಿದರು. ಆಗ ಇಡೀ ಭಾರತವೇ ಒಗ್ಗಟ್ಟಾಗಿ ಅವರ ಮಾತುಗಳನ್ನು ಪ್ರತಿಭಟಿಸಿತು. ದಾದಾಭಾಯಿ ನವರೋಜಿ ತಮ್ಮ ದೇಶದ ಈ ಒಗ್ಗಟ್ಟು ಕಂಡು ಹರ್ಷಪಟ್ಟರು. ತಮ್ಮ ಇಷ್ಟು ವರ್ಷಗಳ ಸೇವೆ ಈಗ ಸಾರ್ಥಕವಾಗಿತ್ತು. ಭಾರತದಲ್ಲಿ ಆಂಗ್ಲರ ದುರಾಡಳಿತವನ್ನು ಕುರಿತು ಅವರು ಇಂಗ್ಲೆಂಡಿನಲ್ಲಿ ಭಾಷಣಗಳನ್ನು ಮಾಡಿದರು. “ಬ್ರಿಟಿಷರು ಭಾರತಕ್ಕೆ ಕೊಟ್ಟ ಎಲ್ಲ ವಾಗ್ದಾನಗಳನ್ನೂ ಮುರಿದಿದ್ದಾರೆ” ಎಂದು ಪ್ರತಿಭಟಿಸಿದರು. “ಭಾರತೀಯ ಯುವ ಜನಾಂಗ ಅಶಾಂತಿಗೊಂಡಿದೆ. ಹಿಂದಿನ ಜನಾಂಗದಂತೆ ಈ ಹೊಸ ಜನಾಂಗ ತಾಳ್ಮೆಯನ್ನು ಹೊಂದಿಲ್ಲ. ಹಳಬರು ಬ್ರಿಟಿಷರ ನ್ಯಾಯ, ನೀತಿ ಮತ್ತು ಅವರ ಸಂಘ ಸಂಸ್ಥೆಗಳಲ್ಲಿ ನಂಬಿಕೆಯನ್ನಿಟ್ಟಿದ್ದರು. ಆದರೆ ಯುವ ಜನಾಂಗಕ್ಕೆ ಅಂತಹ ಮೋಹವಾಗಲಿ, ನಿಷ್ಠೆಯಾಗಲಿ ಇಲ್ಲ” ಎಂದು ತಿಳಿಸಿದರು.

ಮುಂದಿನ ಚುನಾವಣೆಯಲ್ಲಿ ದಾದಾಭಾಯಿಯವರು ಸೋತರು. ಈ ವೇಳೆಗೆ ದಾದಾಭಾಯಿಯವರಿಗೆ ವಯಸ್ಸು ಆಗಿತ್ತು; ಆರೋಗ್ಯವೂ ಕೆಡುತ್ತಿತ್ತು.

ಕಾಂಗ್ರೆಸಿನ ಅಧ್ಯಕ್ಷ

ರಾಷ್ಟ್ರೀಯ ಕಾಂಗ್ರೆಸಿನ 22ನೇ ಅಧಿವೇಶನ ಕಲ್ಕತ್ತಾ ನಗರದಲ್ಲಿ ನಡೆಯಬೇಕೆಂದು ಗೊತ್ತಾಗಿತ್ತು. ಎಲ್ಲೆಲ್ಲಿಯೂ ನವಜಾಗೃತಿ ಭಾರತದಲ್ಲಿ ಉಂಟಾಗಿತ್ತು. ಬ್ರಿಟಿಷರ ಸಾರ್ವಭೌಮತ್ವದಲ್ಲಿಯೇ ಭಾರತಕ್ಕೆ ಸ್ವರಾಜ್ಯ ದೊರೆತರೆ ಸಾಕು ಎಂದು ಹಳಬರು ಹೇಳುತ್ತಿದ್ದರೆ, ಹೊಸಬರು ವಿದೇಶಿಯರಿಂದ ಪೂರ್ಣ ಬಿಡುಗಡೆಗೊಂಡ ರಾಷ್ಟ್ರೀಯ ಪರಮಾಧಿಕಾರವುಳ್ಳ ಸ್ವಾತಂತ್ರವೇ ದೇಶಕ್ಕೆ ಅಗತ್ಯವೆಂದು ವಾದಿಸುತ್ತಿದ್ದರು. ಈ ಬದಲಾದ ಸಂದರ್ಭದಲ್ಲಿ ಯಾರು ಕಾಂಗ್ರೆಸಿನ ಅಧ್ಯಕ್ಷರಾಗಬಹುದು? ಎಂದು ಎಲ್ಲರಿಗೂ ಕುತೂಹಲ. ಈ ಸನ್ನಿವೇಶದಿಂದ ಪಾರು ಮಾಡಲು ದಾದಾಭಾಯಿ ನವರೋಜಿಯವರೇ ತಕ್ಕವರೆಂದು ಭಾವಿಸಲಾಯಿತು. ಎಂಬತ್ತೊಂದು ವರ್ಷಗಳ ದಾದಾಭಾಯಿ ನವರೋಜಿ ಕಾಂಗ್ರೆಸ್‌ಅಧ್ಯಕ್ಷ ಸ್ಥಾನವನ್ನು ಏರಿ “ಸ್ವರಾಜ್ಯ” ಘೋಷಣೆಯನ್ನು ಮೊಳಗಿಸಿದರು. ಅದುವರೆಗೂ ನಡೆದ ಅಧಿವೇಶನಗಳಲ್ಲಿ ಕಲ್ಕತ್ತದ ಅಧಿವೇಶನವೇ ಭಾರಿ ದೊಡ್ಡದು. “ಕಳೆದ ಐವತ್ತು ವರ್ಷಗಳ ದುಡಿಮೆ ವ್ಯರ್ಥವಾಗಲಿಲ್ಲ” ಎಂದು ಈ “ಭಾರತೀಯ ಮಹಾಕುಲ ವೃದ್ಧ” ಸಂತೋಷಪಟ್ಟರು. ಅವರು ಮತ್ತೆ ಲಂಡನ್ನಿಗೆ ಹಿಂತಿರುಗಿ “ಸ್ವರಾಜ್ಯ” ಚಟುವಟಿಕೆಗಳನ್ನು ಮುಂದುವರಿಸಿದರು. ಆದರೆ ತೀವ್ರ ಅನಾರೋಗ್ಯಕ್ಕೆ ಈಡಾದರು.

ಮುಪ್ಪಿನಲ್ಲಿ ಸೇವೆ

ದಾದಾಭಾಯಿ ನವರೋಜಿಯವರು ಲಂಡನ್ನಿನ ತಮ್ಮ ದೀರ್ಘವಾದ ಚಟುವಟಿಕೆಗಳನ್ನು ಕೊನೆಯದಾಗಿ ಬಿಟ್ಟುಕೊಟ್ಟು ಭಾರತಕ್ಕೆ ಹಿಂದುರುಗಬೇಕಾಯಿತು. ಮುಂಬಯಿಯ ಅಪೋಲೋ ಬಂದರಿನಲ್ಲಿ ಅವರನ್ನು ಸ್ವಾಗತಿಸಲು ಮಾಡಿಕೊಂಡಿದ್ದ ಸಂಭ್ರಮದ ಸಿದ್ಧತೆಗಳನ್ನೆಲ್ಲ ಅವರ ಅನಾರೋಗ್ಯದ ಕಾರಣದಿಂದ ನಿಲ್ಲಿಸಿ, ಅವರನ್ನು ನೇರವಾಗಿ ಅವರ ಮನೆ “ವೆರ್ಸೋವಾ”ಕ್ಕೆ ಕರೆದೊಯ್ಯಲಾಯಿತು. ದಾದಾಭಾಯಿಯವರ ಮೊಮ್ಮಗಳು ಮೆಹರ್ ಭಾನೂ ತಾತಾನ ಶುಶ್ರೂಷೆಗೆ ನಿಂತಳು. ಮಗಳು ಮನೆಕ್‌ಭಾಯ್‌ಜಾಮ್‌ನಗರದಿಂದ ತನ್ನ ವೈದ್ಯ ವೃತ್ತಿಯನ್ನು ಬಿಟ್ಟು ತಂದೆಯ ಬಳಿಗೆ ಬಂದಳು. ಆತ್ಮೀಯರೊಡನೆ ಒಡನಾಟ, ಶುಶ್ರೂಷೆಗಳಿಂದ ದಾದಾಭಾಯಿ ಬೇಗ ಚೇತರಿಸಿಕೊಂಡರು.

ಆಗ ದಾದಾಭಾಯಿಯವರಿಗೆ ಎಂಬತ್ತನಾಲ್ಕು ವರ್ಷಗಳಾಗಿದ್ದವು. ಆದರೂ ತಮ್ಮ ದಿನಚರಿ ಕೆಲಸಗಳನ್ನು ತಪ್ಪದೆ ನಡೆಸುತ್ತಿದ್ದರು. ಬಂದ ಪತ್ರಗಳನ್ನೆಲ್ಲ ಓದಿ, ಉತ್ತರಗಳನ್ನು ಬರೆಯುತ್ತಿದ್ದರು.

ಬ್ರಿಟಿಷ್‌ಚಕ್ರವರ್ತಿ ಐದನೆಯ ಜಾಜ್‌ದೊರೆ ಭಾರತಕ್ಕೆ ಭೇಟಿ ಕೊಡುತ್ತಿರುವುದಾಗಿ ತಿಳಿಯಿತು. ಕೂಡಲೇ ದಾದಾಭಾಯಿಯವರು ಬ್ರಿಟಿಷರು ಭಾರತಕ್ಕೆ ಕೊಟ್ಟ ವಾಗ್ದಾನಗಳನ್ನು ಕುರಿತು ನೆನಪು ಮಾಡಿಕೊಡುವ ಲೇಖನವೊಂದನ್ನು ಬರೆದರು. ಅವರ ಮನೆ “ವೆರ್ಸೋವಾ; ಒಂದು ಯಾತ್ರಾಸ್ಥಳವಾಗಿಯೇ ಪರಿಣಮಿಸಿತು.

1916ರಲ್ಲಿ ಜೀವಮಾನದ ಕೊನೆಯ ಪ್ರಶಾಂತ ದಿನಗಳಾಗಿದ್ದವು. ಮುಂಬಯಿ ವಿಶ್ವವಿದ್ಯಾನಿಲಯ ಅವರಿಗೆ “ಡಾಕ್ಟರ್ ಆಫ್‌ಲಾಸ್‌” ಎಂಬ ಪ್ರಶಸ್ತಿ ಇತ್ತು ಸನ್ಮಾನಿಸಿತು. ಪದವೀದಾನ ಸಮಾರಂಭದ ಮೇಲೆ ದಾದಾಭಾಯಿಯವರು ಕಾರಿನಲ್ಲಿ ಮೆರವಣಿಗೆ ಹೊರಟರು. ಅವರ ಹಿಂದೆ ನೂರಾರು ಕಾರುಗಳು ಸಾಲುಗಟ್ಟಿದವು. ರಸ್ತೆಗಳು ಜನರಿಂದ ಕಿಕ್ಕಿರಿದು ಹೋಗಿದ್ದವು.

ದಾದಾಭಾಯಿ ಅವರು ಕಂಡ ಸ್ವರಾಜ್ಯದ ಕನಸು ನನಸಾಗುವ ದಿನ ಸಮೀಪವಾಗುತ್ತಿತ್ತು. ಆಡಳಿತದ ಎಲ್ಲ ಕ್ಷೇತ್ರಗಳಲ್ಲಿಯೂ ಭಾರತೀಯರಿಗೆ ಹೆಚ್ಚಿನ ಸ್ಥಾನಮಾನ ನೀಡುವ ಮಾತುಕತೆಗಳನ್ನು ಬ್ರಿಟಿಷ್‌ಸರ್ಕಾರ ಪ್ರಾರಂಭಿಸಿತ್ತು. ಆದರೆ, ದಾದಾಭಾಯಿ ನವರೋಜಿ ಆ ಘೋಷಣೆ ಹೊರಬೀಳುವವರೆಗೂ ಕಾಯಲಿಲ್ಲ.

ನವಜಾಗೃತಿಯ ಶಿಲ್ಪಿಗಳಲ್ಲಿ ಒಬ್ಬರು

1917ರ ಜೂನ್‌30ರಂದು, 92ನೆಯ ವಯಸ್ಸಿನಲ್ಲಿ “ಭಾರತೀಯ ಮಹಾಕುಲ ವೃದ್ಧ”ರೆನಿಸಿದ ದಾದಾಭಾಯಿ ನವರೋಜಿಯವರು ತಮ್ಮ ಕೊನೆಯ ಉಸಿರನ್ನು ಎಳೆದರು.

ಭಾರತದ ನವಜಾಗೃತಿಗೆ ಕಾರಣರಾದವರಲ್ಲಿ ದಾದಾಭಾಯಿ ನವರೋಜಿಯವರು ಒಬ್ಬರು. ಐವತ್ತು ವರ್ಷಗಳಿಗೂ ಹೆಚ್ಚು ಕಾಲ ಭಾರತೀಯರ ಅಂತಃಕರಣದಲ್ಲಿ ಬಹುದೊಡ್ಡ ಸ್ಥಾನವನ್ನು ಪಡೆದಿದ್ದರು ಈ ದೇಶಭಕ್ತ.