ಚಲನಚಿತ್ರ – ಸಿನಿಮ – ನೋಡಬೇಕು ಎಂದರೆ ಅನೇಕ ಜನ ಎಷ್ಟು ಆಸೆ ಪಡುತ್ತಾರೆ, ಅಲ್ಲವೆ?

ಸ್ವಲ್ಪ ದೊಡ್ಡ ಊರಿನಲ್ಲಿಯೂ ಒಂದು ಚಲನಚಿತ್ರ ಮಂದಿರ ಇರುತ್ತದೆ; ಕಡೆಯ ಪಕ್ಷ ಆಗಾಗ ಸಂಚಾರಿ ಚಲನಚಿತ್ರ ಪ್ರದರ್ಶನ ಲಭ್ಯವಾಗುತ್ತದೆ.

ಪ್ರತಿನಿತ್ಯ ವಾರ್ತಾಪತ್ರಿಕೆ ತೆರೆದರೆ ಚಲನಚಿತ್ರಗಳ ಜಾಹೀರಾತುಗಳು. ರಸ್ತೆಯಲ್ಲಿ ಚಲನಚಿತ್ರಗಳ ಪ್ರಚಾರದ ದೊಡ್ಡ ಪತ್ರಗಳು. ಲಘುಸಂಗೀತ ಎಂದರೆ ಮತ್ತೆ ಮತ್ತೆ ಕಿವಿಗೆ ಬೀಳುವುದು ಚಲನಚಿತ್ರಗಳ ಹಾಡುಗಳು. ಜೊತೆಗೆ ಸಾಕ್ಷ್ಯ ಚಿತ್ರಗಳು. ದೇಶದ ವಿವಿಧ ಪ್ರದೇಶಗಳನ್ನು ಹಬ್ಬಗಳು ಉತ್ಸವಗಳನ್ನು, ದೇವಸ್ಥಾನ ಗುರುಪೀಠಗಳನ್ನು, ಕಲಾಕೃತಿಗಳನ್ನು ನಮ್ಮೆಡೆಗೆ ಕರೆತಂದು ಕಾಣಿಸುವ, ಹಲವಾರು ಮುಖ್ಯ ಘಟನೆಗಳನ್ನು ನಮ್ಮ ಕಣ್ಣ ಮುಂದೆ ನಿಲ್ಲಿಸುವ ಸಾಕ್ಷ್ಯಚಿತ್ರಗಳು.

ಇಂದಿನ ಜೀವನದಲ್ಲಿ ಚಲನಚಿತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇದೆ!

ಇದರ ಪ್ರಾಮುಖ್ಯತೆ ಎಷ್ಟು ಎಂದು ಪರಿಚಯ ಮಾಡಿಕೊಳ್ಳುವುದಕ್ಕೆ ಕೆಲವು ಅಂಕಿ – ಅಂಶಗಳನ್ನು ಗಮನಿಸಬಹುದು. (ಖಚಿತವಾಗಿ ಅಂಕಿ ಅಂಶಗಳು ಸಿಕ್ಕುವುದು ಕಷ್ಟ.)

ಈಗ ನಮ್ಮ ದೇಶದಲ್ಲಿ ವರ್ಷಕ್ಕೆ ಸುಮಾರು ನಾಲ್ಕು ನೂರು ಚಿತ್ರಗಳು (ಕೇವಲ ಕಥಾ ಚಿತ್ರಗಳು) ತಯಾರಾಗುತ್ತವೆ. ಇವುಗಳಲ್ಲಿ ಅರ್ಧಕ್ಕರ್ಧ- ಸುಮಾರು ಇನ್ನೂರು- ವರ್ಣಚಿತ್ರಗಳು.

ಪ್ರತಿನಿತ್ಯ ಸುಮಾರು ಆರೂವರೆ ಕೋಟೆ ಜನ ಚಲನಚಿತ್ರಗಳನ್ನು ನೋಡುತ್ತಾರೆ. ಒಂದು ಚಲನಚಿತ್ರವನ್ನು ತಯಾರು ಮಾಡಿ, ಪ್ರದರ್ಶನ ಮಾಡುವುದಕ್ಕೆ ಎಷ್ಟು ಜನ ದುಡಿಯಬೇಕು, ಅಲ್ಲವೆ! ಕಥೆ ಬರೆಯುವವರು, ಚಿತ್ರ ನಿರ್ದೇಶಕರು, ಚಿತ್ರ ತೆಗೆಯುವವರು, ಚಿತ್ರ ತೆಗೆಯುವ ’ಸ್ಟುಡಿಯೋ’ದಲ್ಲಿ ಕೆಲಸ ಮಾಡುವವರು, ನಟ-ನಟಿಯರು, ಅವರಿಗೆ ಬಣ್ಣ ಹಾಕುವವರು, ಧ್ವನಿ ಮುದ್ರಿಸುವವರು, ಚಲನಚಿತ್ರ ಮಂದಿರಗಳನ್ನು ನಡೆಸುವವರು- ಎಷ್ಟು ಜನ ಕೆಲಸ ಮಾಡಬೇಕು! ಭಾರತದಲ್ಲಿ ಸುಮಾರು ಒಂದೂವರೆ ಲಕ್ಷ ಜನ ಕೆಲಸ ಒದಗಿಸಿದೆ ಚಲನಚಿತ್ರ ಪ್ರಪಂಚ.

ಎಂತಹ ಅದ್ಭುತ ಪ್ರಪಂಚ ಇದು!

ಇದು ಬಾರತದಲ್ಲಿ ಹುಟ್ಟಿ ಬೆಳೆದಿರುವುದು ಕಳೆದ ಎಪ್ಪತ್ತು- ಎಂಬತ್ತು ವರ್ಷಗಳಲ್ಲಿ. ನಮ್ಮ ದೇಶದ ಮೊದಲು ಚಲನಚಿತ್ರ ಪ್ರದರ್ಶನವಾದದ್ದು ೧೮೯೬ರಲ್ಲಿ ನಮ್ಮದೇಶದಲ್ಲಿಯೆ ತಯಾರಾದ ಮೊದಲನೆಯ ಚಲನಚಿತ್ರ ’ಹರಿಶ್ಚಂದ್ರ’; ಅದು ತೆರೆಗೆ ಬಂದದ್ದು ೧೯೧೩ರಲ್ಲಿ. ಈ ಚಿತ್ರವನ್ನು ತಯಾರು ಮಾಡಿದವರು ದಾದಾ ಸಾಹೇಬ್ ಫಾಲ್ಕೆ.

ಪ್ಯಾರಿಸ್ನಿಂದ ಮುಂಬಯಿಗೆ ಬಂತು ಚಲನಚಿತ್ರ

ಚಲನಚಿತ್ರ ಅಥವಾ ಸಿನಿಮ ಸೃಷ್ಟಿ ಆಗಿದ್ದು ೧೮೯೫ ರಲ್ಲಿ. ಫ್ರಾನ್ಸಿನ ಲ್ಯೂಮಿಯೇರ್ ಸೋದರರು ಪ್ಯಾರಿಸಿನಲ್ಲಿ ತಮ್ಮ ಮೊಟ್ಟಮೊದಲನೆಯ ಚಿತ್ರವನ್ನು ಪ್ರದರ್ಶಿಸಿದರು. ಅಂದಿನಿಂದ ಈವರೆಗೆ ಸಿನಿಮ ಪ್ರಪಂಚದ ಮೂಲೆ ಮೂಲೆಗೂ ಹರಡಿದೆ.

ಸಿನಿಮ ನಮ್ಮ ದೇಶಕ್ಕೆ ಬಂದದ್ದು ೧೮೯೬ರಲ್ಲಿ. ಅದೇ ಲ್ಯೂಮಿಯೇರ್ ಸೋದರರ ಚಿತ್ರಗಳನ್ನು ಮುಂಬಯಿಯಲ್ಲಿ ಪ್ರದರ್ಶಿಸಿದಾಗ. ಈ ೭೦-೮೦ ವರ್ಷಗಳಲ್ಲಿ, ನಮ್ಮ ದೇಶದಲ್ಲಿ ಇದೊಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಇನ್ನೂ ಬೆಳೆಯುತ್ತಿದೆ. ಪ್ರತಿ ವರ್ಷದ ಚಿತ್ರ ತಯಾರಿಕೆಯ ಸಂಖ್ಯೆ ತೆಗೆದುಕೊಂಡರೆ, ಭಾರತವು ಅತಿ ಮುಂದುವರಿದ ರಾಷ್ಟ್ರಗಳಾದ ಅಮೆರಿಕ, ಜಪಾನ್‌ಗಳೊಡನೆ ಹೆಚ್ಚು ಕಡಿಮೆ ಸರಿಸಮಾನವಾಗಿದೆ. ಆಗಾಗ್ಗೆ ಒಂದು ಕೈ ಮುಂದೆಯೂ ಇದೆ. ಸತ್ಯಜಿತ್ ರಾಯ್ ಅಂತಹ ನಿರ್ದೇಶಕರ ಕೆಲಸದಿಂದ ಕಲಾತ್ಮಕದೃಷ್ಟಿಯಿಂದಲೂ ಅಂತರರಾಷ್ಟ್ರೀಯ ಖ್ಯಾತಿ

ಸಿನಿಮ ಅತಿ ದುಬಾರಿಯಲ್ಲದ ಮನರಂಜನೆ. ಓದು ಬರಹ ಬರದವರೂ ಕೂಡ ಸುಲಭವಾಗಿ ರಜತ ಪರದೆಯ ಕಥೆಗಳನ್ನು ಅರ್ಥ ಮಾಡಿಕೊಂಡು ಆನಂದ ಪಡೆಯಬಹುದು. ಸಿನಿಮದಲ್ಲಿ ಆಸಕ್ತಿ ಕೆಲವರಿಗೆ, ಆದರೆ ಇದು ವ್ಯಾಮೋಹವೂ ಆಗಿದೆ ಎಂದರೆ ತಪ್ಪಾಗಲಾರದು.

ಭಾರತೀಯ ಚಲನಚಿತ್ರೋದ್ಯಮದ ತಳಹದಿ ಹಾಕಿದವರಲ್ಲಿ ದಾದಾಸಾಹೇಬ್ ಫಾಲ್ಕೆಯವರದು ಅಗ್ರ ಪಂಕ್ತಿ- ಅಗ್ರ ಸ್ಥಾನ.

ದಾದಾ ಸಾಹೇಬ್ ಫಾಲ್ಕೆಯವರ ಪೂರ್ತಿ ಹೆಸರು ಧೂಂಡಿರಾಜ್ ಗೋವಿಂದ ಫಾಲ್ಕೆ. ನಾವು ತಾತಣ್ಣನವರು ಎನ್ನುವಂತೆ ’ದಾದಾಸಾಹೇಬ್’, ಗೌರವ ಮತ್ತು ಆತ್ಮೀಯತೆಯನ್ನು ಸೂಚಿಸುವ ವಾತ್ಸಲ್ಯದ ಬಿರುದು.

’ಭಾರತೀಯ ಚಲನಚಿತ್ರದ ತಂದೆ’, ’ಚಿತ್ರಪಟ ಮಹರ್ಷಿ’ ಎಂದು ಖ್ಯಾತಿವಂತರಾದ ಇವರ ಜನ್ಮ ಶತಮಾನೋತ್ಸವವನ್ನು ಭಾರತೀಯ ಚಲನ ಚಿತ್ರೋದ್ಯಮಿಗಳು ಮುಂಬಯಿಯಲ್ಲಿ ಏಪ್ರಿಲ್ ೩೦, ೧೯೭೦ರಂದು ಅದ್ದೂರಿಯಾಗಿ ಆಚರಿಸಿದರು. ಆ ಸಂದರ್ಭಕ್ಕಾಗಿ, ಫಾಲ್ಕೆಯವರ ಜೀವನದ ಬಗ್ಗೆ ’ಕನಸಿಗೆ ರೆಕ್ಕೆ ಬಂದಿತು’ (ಎ ಡ್ರೀಂ ಟೇಕ್ಸ್‌ವಿಂಗ್ಸ್) ಎಂಬ ಒಂದು ಸಾಕ್ಷ್ಯಚಿತ್ರವೂ ತಯಾರಿಸಿ ತೋರಿಸಲಾಯಿತು. ಅವರ ನೆನಪಿಗಾಗಿ ಅಂಚೆಚೀಟಿಯನ್ನೂ ಸರ್ಕಾರ ಬಿಡುಗಡೆ ಮಾಡಿತು.

ದಾದಾಸಾಹೇಬ್ ಫಾಲ್ಕೆಯವರ ಜೀವನಕಥೆ ಸಾಹಸ ಪೂರ್ಣವಾದ, ಹೃದಯಂಗಮವಾದೊಂದು ಚಲನಚಿತ್ರಕಥೆಯಂತೆಯೇ ಇದೆ.

ಬಾಲ್ಯ

ಫಾಲ್ಕೆಯವರು ಹುಟ್ಟಿದ್ದು ಏಪ್ರಿಲ್ ೩೦, ೧೮೭೦ ರಂದು. ಗೋದಾವರಿ ನದಿ ತೀರದಲ್ಲಿನ ನಾಸಿಕ್ ಪುಣ್ಯಕ್ಷೇತ್ರದಿಂದ ಸುಮಾರು ೨೯ ಕಿಲೋಮೀಟರ್ ದೂರದಲ್ಲಿರುವ ತ್ರಯಂಬಕೇರ್ಶವರ ಎಂಬ ಗ್ರಾಮದಲ್ಲಿ. ಅವರ ತಂದೆ ದಾಜಿಶಾಸ್ತ್ರಿ ಪಾಲ್ಕೆಯವರ ಸಂಸ್ಕೃತದಲ್ಲಿ ಘನ ವಿದ್ವಾಂಸರು. ಇವರಿಂದ ಹುಡುಗ ಫಾಲ್ಕೆಗೆ ವೇದ ಉಪನಿಷತ್ತುಗಳ ಪರಿಚಯ, ರಾಮಾಯಣ, ಮಹಾಭಾರತ ಮೊದಲಾದ ಪೌರಾಣಿಕ ಕಾವ್ಯಗಳ ಅರಿವು, ರುಚಿ ಬಾಲ್ಯದಲ್ಲಿಯೇ ಮೂಡಿ ಬಂತು. ಈ ಅನುಭವ ಅವರಿಗೆ ಮುಂದೆ ಅವರ ಚಲನಚಿತ್ರ ಕಥೆಗಳ ಆಯ್ಕೆ ಮತ್ತು ನಿರ್ದೇಶನದಲ್ಲಿ ಬಹಳ ಉಪಯೋಗವಾಯಿತು.

ತ್ರಯಂಬಕೇಶ್ವರದಲ್ಲಿ ಅಕ್ಷರಾಭ್ಯಾಸ, ಆರಂಭದ ವಿದ್ಯಾಭ್ಯಾಸವನ್ನು ಮುಗಿಸಿಕೊಂಡು, ಫಾಲ್ಕೆಯವರು ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಮುಂಬಯಿಗೆ ಬಂದು ಪ್ರಸಿದ್ಧವಾದ ಜೆ.ಜೆ. ಸ್ಕೂಲ್ ಆಫ್ ಆರ್ಟ್ಸ್‌‌ನಲ್ಲಿ ಚಿತ್ರಕಲೆ

ಕಲೆ ಎಂದರೆ ಪ್ರಾಣ

ಆ ವಯಸ್ಸಿನಲ್ಲೇ ಅವರಿಗೆ ರಂಗಭೂಮಿಯ ಚಟುವಟಿಕೆಗಳಲ್ಲಿ ಬಹಳ ಆಸಕ್ತಿ. ಹವ್ಯಾಸಿ ನಾಟಕಗಳಲ್ಲಿ ಪಾತ್ರ ವಹಿಸುತ್ತಿದ್ದರು. (ಕೆಲವರು ನಾಟಕ ಆಡುವುದನ್ನೇ ವೃತ್ತಿಯಾಗಿ ಮಾಡಿಕೊಂಡಿರುತ್ತಾರೆ. ಕೆಲವರು ಬೇರೆ ವೃತ್ತಿಗಳಲ್ಲಿದ್ದು, ಸಂತೋಷಕ್ಕೋಸ್ಕರ ನಾಟಕಗಳನ್ನು ಆಡುತ್ತಾರೆ. ಹೀಗೆ ಹವ್ಯಾಸಕ್ಕಾಗಿ, ಖುಷಿಗಾಗಿ ಅಭಿನಯಿಸುವವರ ನಾಟಕಗಳು ಹವ್ಯಾಸಿ ನಾಟಕಗಳು.) ಒಮ್ಮೆ ಇವರು ಅಣ್ಣನೊಡನೆ ಬರೋಡಕ್ಕೆ ಹೋಗಬೇಕಾಗಿ ಬಂತು. ಬರೋಡದ ಕಲಾಭವನದಲ್ಲಿ ಚಿತ್ರಕಲತೆಯ ವ್ಯಾಸಂಗ ಮಾಡಲು ಸೇರಿಕೊಂಡರು. ಕಲಾಭವನದ ಪ್ರಿನ್ಸಿಪಾಲರಾದ ಪ್ರೊಫೆಸರ್ ಗಜ್ಜರ್ ಬಹಳ ಮೃದುಸ್ವಭಾವದ, ಎಲ್ಲರಿಗೂ ಸಹಾಯ ಮಾಡುತ್ತಿದ್ದ ಸಾಧು ವ್ಯಕ್ತಿ.

ಫಾಲ್ಕೆಯವರ ಕಲಾಭಿರುಚಿ, ಜಾಣ್ಮೆ, ಚುರುಕುತನ, ಬುದ್ಧಿಶಕ್ತಿ, ಕರ್ತವ್ಯನಿಷ್ಠೆಯನ್ನು ಗಜ್ಜರ್‌ರವರು ಅತಿ ಸೂಕ್ಷ್ಮವಾಗಿ, ಅತಿ ಬೇಗ ಕಂಡು ಕೊಂಡರು. ಅವರು ಫಾಲ್ಕೆ ಯವರಿಗೆ ಎಲ್ಲ ವಿಧದಲ್ಲಿಯೂ ಪ್ರೋತ್ಸಾಹ, ಸ್ಫೂರ್ತಿಗಳನ್ನು ನೀಡಿದರು. ಫಾಲ್ಕೆಯವರು ತಮ್ಮ ಇಪ್ಪತ್ತನೆಯ ವಯಸ್ಸಿನಲ್ಲಿಯೆ ಕ್ಯಾಮರಾ ಒಂದನ್ನು ಕೊಂಡುಕೊಂಡು ಚಿತ್ರಗಳನ್ನು ಉಪಯೋಗಿಸುವುದಕ್ಕೆ ಗಜ್ಜರ್ ಇವರಿಗೆ ಪೂರ್ಣ ಅವಕಾಶ ಮಾಡಿಕೊಟ್ಟರು. ಈ ಅವಕಾಶವನ್ನು ಸದುಪಯೋಗಪಡಿಸಿ ಕೊಂಡು, ಫಾಲ್ಕೆಯವರು ಛಾಯಾಗ್ರಹಣ ಕಲೆಯಲ್ಲೂ ನುರಿತ ಪಟುಗಳಾದರು. ಇದಲ್ಲದೆ ಚಿತ್ರಕಲೆ, ವಾಸ್ತು ಶಿಲ್ಪ, ಶಿಲ್ಪ ಕಲೆ ಇವೆಲ್ಲದರಲ್ಲೂ ಉತ್ತಮ ಉತ್ತಮ ತರಬೇತಿ ಪಡೆದರು. ಇಷ್ಟೇ ಸಾಲದೆಂದು ಯಕ್ಷಿಣಿ ವಿದ್ಯೆಯನ್ನು ಸ್ವಲ್ಪ ಅಭ್ಯಾಸ ಮಾಡಿದರು. ಎಲ್ಲ ವಿಷಯಗಳನ್ನೂ ಚೆನ್ನಾಗಿ ಕಲಿಯುವ ಹುಮ್ಮಸ್ಸು.

ಫಾಲ್ಕೆಯವರು ಜೀವಮಾನ ಪೂರ್ತಿ, ತಮ್ಮ ಕಲಾ ಭವನದಲ್ಲಿ ತುಂಬ ಪ್ರೀತಿ ಇಟ್ಟುಕೊಂಡಿದ್ದರು. “ನಾನೊಬ್ಬ ಉತ್ತಮ ಮತ್ತು ಯಶಸ್ವಿ ಚಲನಚಿತ್ರ ನಿರ್ಮಾಪಕ – ನಿರ್ದೇಶಕನಾಗಲು ಮುಖ್ಯ ಕಾರಣ, ಕಲಾಭವನದಲ್ಲಿ ನಾನು ಪಡೆದ ಅಮೂಲ್ಯವಾದ ಶಿಕ್ಷಣ ಮತ್ತು ಅನುಭವ” ಎಂದು ಅವರೇ ಹೇಳಿದ್ದಾರೆ.

ಫಾಲ್ಕೆಯವರದು ಅಂತಹ ಶ್ರೀಮಂತ ಮನೆತನವಲ್ಲ. ಕಲಾಭವನವನ್ನು ಬಿಟ್ಟ ಮೇಲೆ, ಜೀವನೋಪಾಯಕ್ಕಾಗಿ ಫೋಟ್ರೊಗ್ರಫಿ ಮತ್ತು ಚಿತ್ರಕಲೆಗಳಿಗೆ ಸೇರಿದ- ನಾಟಕದ ಪರದೆಗಳು, ’ಸೀನ್’ (ದೃಶ್ಯಗಳ ಪರದೆಗಳು)ಗಳ ಚಿತ್ರಣ – ಕೆಲಸವನ್ನು ತೆಗೆದುಕೊಳ್ಳಬೇಕಾಯಿತು.

ಸರ್ಕಾರಿ ಕೆಲಸ – ರಾಜೀನಾಮೆ

ತಮ್ಮ ಮೂವತ್ತಮೂರನೆಯ ವಯಸ್ಸಿನಲ್ಲಿ ಭಾರತ ಸರ್ಕಾರದ ಪ್ರಾಚೀನ ಇತಿಹಾಸ ಸಂಶೋಧನೆಯ ಇಲಾಖೆಯಲ್ಲಿ ಛಾಯಾಗ್ರಾಹಕ ಕೆಲಸಕ್ಕೆ ಸೇರಿಕೊಂಡರು. ತಮಗೆ ಬಂದ ಕೆಲಸವನ್ನು ಪೂರ್ಣ ಶ್ರದ್ಧೆ, ಉತ್ಸಾಹಗಳಿಂದ ಉತ್ತಮ ವಾಗಿ ನಿರ್ವಹಿಸಿ, ಮೇಲಧಿಕಾರಿಗಳ ಮೆಚ್ಚುಗೆಯನ್ನು ಗಳಿಸಿದರು.

ಆದರೂ ಅವರಿಗೆ ತೃಪ್ತಿ ಇಲ್ಲ. ಸ್ವಂತ ಉದ್ಯಮವನ್ನು ಆರಂಭಿಸಬೇಕು ಎಂಬ ತವಕ ಎದೆಯಲ್ಲಿ ಕುದಿಯುತ್ತಿತ್ತು. ಸರ್ಕಾರಿ ಕೆಲಸದಲ್ಲಿ ಅನುಕೂಲಗಳೇನೋ ಇದ್ದವು. ಪ್ರತಿ ತಿಂಗಳೂ ಸಂಬಳ, ಬೇಕಾದಾಗ ರಜ ತೆಗೆದುಕೊಳ್ಳಬಹುದು – ಹೀಗೆ. ಆದರೂ ಎರಡೂವರೆ ವರ್ಷಗಳ ಕೊನೆಯಲ್ಲಿ ಆ ಕೆಲಸಕ್ಕೆ ರಾಜೀನಾಮೆ ಕೊಟ್ಟರು.

ಸ್ವತಂತ್ರವಾಗಿ ಉದ್ಯಮ

ಆನಂತರ ಫಾಲ್ಕೆಯವರು ಮುಂಬಯಿ, ಪೂನಾ ಮಧ್ಯೆ ಇರುವ ಲೋಣಾವಳ ಎಂಬ ಸ್ಥಳದಲ್ಲಿ ’ಫಾಲ್ಕೆ ಕೆತ್ತನೆ ಮತ್ತು ಮುದ್ರಣ ಕಾರ್ಯಾಲಯ’ ಎಂಬ ವ್ಯಾಪಾರವನ್ನು ಆರಂಭಿಸಿದರು. ಇವರ ಕೆಲಸ ಬಹಳ ಉತ್ತಮವಾಗಿದ್ದರಿಂದ, ವ್ಯಾಪಾರ ಬಹಳ ಯಶಸ್ವಿಯಾಯಿತು. ಆನಂತರ ಮುಂಬಯಿಯಲ್ಲಿ ಮುದ್ರಣಾಲಯವನ್ನು ಪ್ರಾರಂಭಿಸಿದರು. ಜೊತೆಗೆ ಕೆಲವರು ಪಾಲುದಾರರನ್ನು ಸೇರಿಸಿ ಕೊಂಡರು.

೧೯೦೯ರಲ್ಲಿ ಅಂದರೆ ತಮ್ಮ ೩೯ನೇಯ ವಯಸ್ಸಿನಲ್ಲಿ ಇವರು ಜರ್ಮನಿಗೆ ಹೋಗಿ, ತಮ್ಮ ಕೆಲಸಕ್ಕೆ ಬೇಕಾದ ಆಧುನಿಕ ಯಂತ್ರ ಸಾಮಗ್ರಿಗಳನ್ನು ತಂದರು. ನವೀನ ಯಂತ್ರಗಳು ಮತ್ತು ಫಾಲ್ಕೆಯವರ ತಾಂತ್ರಿಕ ನಿಪುಣತೆ ಇವುಗಳಿಂದ ಮುದ್ರಣಾಲಯದ ಕೀರ್ತಿ ಹೆಚ್ಚಿತು, ಕೈತುಂಬ ಹಣ ಬಂದಿತು.

ದುಡ್ಡಿನ ಲೋಭ ಯಾವಾಗಲೂ ವಿರಸ, ವ್ಯಾಜ್ಯಗಳಿಗೆ ಕಾರಣವಾಗುತ್ತದೆ. ಫಾಲ್ಕೆ ಮತ್ತು ಅವರ ಪಾಲುದಾರರಲ್ಲಿ ಭಿನ್ನಾಭಿಪ್ರಾಯಗಳು ತಲೆದೋರಿ, ಫಾಲ್ಕೆಯವರು ಈ ಉದ್ಯಮದ ಕೈಬಿಡಬೇಕಾಯಿತು. ತುಂಬ ಶ್ರದ್ಧೆಯಿಂದ, ಆಸೆಯಿಂದ ಮುದ್ರಣಾಲಯವನನ್‌ಉ ಫಾಲ್ಕೆ ಬೆಳೆಸಿದ್ದರು. ಬೇರೆ ದೇಶಗಳಿಂದ ಯಂತ್ರಗಳನ್ನು ತಂದಿದ್ದರು. ತಮ್ಮ ಕಾಲ, ಶಕ್ತಿ, ಬುದ್ಧಿ ಎಲ್ಲವನ್ನೂ ಈ ಕೆಲಸಕ್ಕೆ ಮುಡಿಪು ಮಾಡಿ ಬೆಳೆಸಿದ್ದರು. ಹಣಕ್ಕಾಗಿ ತಮ್ಮ ಜೊತೆಯವರು ತಮ್ಮಿಂದ ದೂರ ವಾದರಲ್ಲ. ಕೆಲಸವನ್ನೇ ನಿಲ್ಲಿಸಿದರಲ್ಲ ಎಂದು ಅವರಿಗೆ ವ್ಯಥೆಯಾಯಿತು.

ಹೊಸ ಪ್ರಪಂಚ

ಹೀಗಿರುವಾಗ ಒಂದು ದಿನ – ೧೯೧೦ನೆಯ ಇಸವಿ, ಕ್ರಿಸ್‌ಮಸ್ ಸಮಯ – ಅವರು ಮುಂಬಯಿಯ ಸ್ಯಾಂಡ್ ಹರ್ಸ್ಟ್ ರಸ್ತೆಯಲ್ಲಿದ್ದ ಅಮೆರಿಕ- ಇಂಡಿಯ ಚಿತ್ರಮಂದಿರದಲ್ಲಿ ’ಯೇಸುಕ್ರಿಸ್ತನ ಜೀವನ’ (ಲೈಫ್ ಆಫ್ ಕ್ರೈಸ್ಟ್) ಎಂಬ ಚಲನಚಿತ್ರ ನೋಡಿದರು.

ಈ ಘಟನೆ ಅವರ ಜೀವನವನ್ನೇ ಬದಲಾಯಿಸಿತು. ಭಾರತದಲ್ಲಿ ಚಲನಚಿತ್ರದ ಜನನಕ್ಕೆ ಕಾರಣವೂ ಆಯಿತು.

ಪರದೆಯ ಮೇಲೆ ಯೇಸುಕ್ರಿಸ್ತನ ಜೀವನದ ಕಥೆಯನ್ನು ನೋಡುತ್ತಿದ್ದಂತೆಯೇ, ಫಾಲ್ಕೆಯವರ ಮನಸ್ಸಿನ ತೆರೆಯ ಮೇಲೆ ಶ್ರೀಕೃಷ್ಣ, ಶ್ರೀರಾಮ, ನಂದಗೋಕುಲ, ಅಯೋಧ್ಯಾ ನಗರಿಯ ಚಿತ್ರಗಳು, ಆ ಸೊಗಸಾದ ಕಥೆಗಳ ಸನ್ನಿವೇಶಗಳು ಸುಳಿದಾಡತೊಡಗಿದವು.

ಅದೇ ದಿನ ಆ ಚಿತ್ರವನ್ನು ಇನ್ನೊಂದು ಸಲ ನೋಡಿದರು. ಮನಸ್ಸಿನ ತಳಮಳದಿಂದ ರಾತ್ರಿಯೆಲ್ಲಾ ನಿದ್ರೆಯೂ ಇಲ್ಲದೆ ಕಳೆದರು. ರಾಮಾಯಣ,ಮಹಾಭಾರತದ ಕಥೆ ಗಳನ್ನು ಏಕೆ ತೆರೆಯ ಮೇಲೆ ತರಬಾರದು? ಆದರೆ ಹೇಗೆ ತರುವುದು? ಈ ಪ್ರಶ್ನೆಗಳೇ ಅವರ ತಲೆಯಲ್ಲಿ ಸುತ್ತುತ್ತಿದ್ದವು.

ಅಲ್ಲಿಂದ ಮುಂದೆ ಮುಂಬಯಿಗೆ ಯಾವ ಚಲನಚಿತ್ರವೇ ಬರಲಿ- ಫಾಲ್ಕೆಯವರು ಚಿತ್ರಮಂದಿರದಲ್ಲಿ ಇರುತ್ತಿದ್ದರು. ಕೇವಲ ಚಿತ್ರಗಳನ್ನು ನೋಡುವುದಷ್ಟೇ ಅಲ್ಲ. ಅವುಗಳ ಚಿತ್ರಕಥೆ, ಅವನ್ನು ತೆಗೆದಿರುವ ರೀತಿ, ಬೇರೆ ಬೇರೆ ದೃಶ್ಯಗಳನ್ನು ಜೋಡಿಸಿರುವ ಕ್ರಮ (ಸಂಕಲನ), ಛಾಯಾ ಗ್ರಹಣದ ವೈಶಿಷ್ಟ್ಯ ಇವೆಲ್ಲವನ್ನೂ ಆಳವಾಗಿ ವಿಮರ್ಶಿಸಿ, ಅಧ್ಯಯನ ಮಾಡಿದರು. ತಮ್ಮಲ್ಲಿ ಚಲನಚಿತ್ರಗಳನ್ನು ನಿರ್ಮಿಸಲು, ನಿರ್ದೇಶಿಸಲು ಬೇಕಾದ ವಿದ್ಯೆ, ಸಾಮರ್ಥ್ಯ ಎಲ್ಲವೂ ಇದೆ ಎಂದು ಖಚಿತ ಮಾಡಿಕೊಂಡರು.

ಮನಸ್ಸಿನ ತಳಮಳದಿಂದ ಫಾಲ್ಕೆಗೆ ರಾತ್ರಿಯೆಲ್ಲಾ ನಿದ್ರೆ ಇಲ್ಲ.

ಹುಚ್ಚೋಕುರುಡೋ?

ಎರಡು ತಿಂಗಳು ಕಳೆಯಿತು. ಫಾಲ್ಕೆಯವರಿಗೆ ಯಾವಾಗಲೂ ಇದೇ ಯೋಚನೆ. ರಾಮಾಯಣ, ಮಹಾಭಾರತಗಳ, ಪುರಾಣದ ಅನೇಕ ಕಥೆಗಳ ಗಣಿಗಳು ಇವೆ; ಇವನ್ನೆಲ್ಲ ಬಳಸಿಕೊಂಡರೆ ಎಷ್ಟು ಸೊಗಸಾದ, ಹೃದಯ ಮುಟ್ಟುವ ಚಲನಚಿತ್ರಗಳನ್ನು ತಯಾರು ಮಾಡಬಹುದಲ್ಲ! ಆದರೆ ಚಲನಚಿತ್ರ ತೆಗೆಯುವುದೆಂದರೆ ಸಾಮಾನ್ಯವೆ? ಎಷ್ಟು ಹಣ ಎಷ್ಟು ಯಂತ್ರಗಳು, ಎಷ್ಟು ಜನರ ನೆರವು ಬೇಕು? ಮುಖ್ಯವಾಗಿ-ಬಂಡವಾಳ ಬೇಕಲ್ಲ?ಹಣ ಎಲ್ಲಿದೆ?

ಯಾವಾಗಲೂ ಇದೇ ಯೋಚನೆ, ಇದೇ ಲೆಕ್ಕಾಚಾರ, ಎಲ್ಲರ ಜೊತೆಗೆ ಇದೇ ಮಾತು.

ಅವರಿಗೆಲ್ಲ ಅನುಮಾನ ಬಂದಿತು, ಹೆದರಿಕೆಯಾಯಿತು- ಈತನಿಗೆ ಹುಚ್ಚು ಹಿಡಿದಿದೆಯೇ ಎಂದು.

ಫಾಲ್ಕೆಯವರ ಕೆಲವರು ಸ್ನೇಹಿತರು ಅವರನ್ನು ಹುಚ್ಚರ ಆಸ್ಪತ್ರೆಗೆ ಸೇರಿಸುವ ಪ್ರಯತ್ನವನ್ನೂ ಮಾಡಿದರು!

ಫಾಲ್ಕೆಯವರಿಗೆ ಆಗಾಗಲೇ ನಲವತ್ತು ವರ್ಷ ವಯಸ್ಸು. ಹಣಕಾಸಿನ ವಿಷಯದಲ್ಲಿ ಅವರು ಅಷ್ಟೇನೂ ಅನುಕೂಲಸ್ಥರೂ ಆಗಿರಲಿಲ್ಲ. ಎಷ್ಟೇ ಕಷ್ಟವಾದರೂ, ಅವರು ತಮ್ಮ ಛಲವನ್ನು ಬಿಡಲಿಲ್ಲ. ಸಿನಿಮ ಕಲೆ, ತಂತ್ರ,ಯಂತ್ರೋಪಕರಣಗಳಿಗೆ ಸಂಬಂಧಿಸಿದ ಮಾಹಿತಿ, ಸಾಹಿತ್ಯವನ್ನು ಇಂಗ್ಲೆಂಡಿನಿಂದ ತರಿಸಿಕೊಂಡು ಅಧ್ಯಯನ ಮಾಡಿದರು. ’ಆಕಾಲದಲ್ಲಿ ದಿವಸಕ್ಕೆ ಮೂರು ಘಂಟೆ ನಾನು ನಿದ್ರೆ ಮಾಡಿದ್ದರೆ ಹೆಚ್ಚು’ ಎಂದು ಅವರೇ ಹೇಳಿದ್ದಾರೆ. ಈ ರೀತಿಯ ಶ್ರದ್ಧೆ, ಶ್ರಮ, ಏಕಾಗ್ರತೆ, ಉತ್ಸಾಹಗಳಿಲ್ಲದೆ ಜೀವನದಲ್ಲಿ ಏನನ್ನು ಸಾಧಿಸುವುದೂ ಕಷ್ಟ.

ಫಾಲ್ಕೆಯವರ ಹಟ, ಸಿನಿಮ ಚಟ ಇವುಗಳಿಂದ ಅವರು ಕುರುಡಾಗುವ ಪರಿಸ್ಥಿತಿಯೇ ಬಂದಿತ್ತು. ಒಂದು ಕಡೆ ಕಣ್ಣಿನ ಬೇನೆ – ಇನ್ನೊಂದು ಕಡೆ ಗೃಹಕೃತ್ಯದ ಕಷ್ಟ ಕಾರ್ಪಣ್ಯಗಳು – ಇವೆರಡೂ ಸಾಲದೆಂದು ಸ್ನೇಹಿತರು, ಬಂಧುಗಳ ಹಂಗು, ಅಣಕು ಮಾತುಗಳು! ಫಾಲ್ಕೆಯವರಿಗೆ ಹುಚ್ಚು ಹಿಡಿಯದಿದ್ದದು ಆಶ್ಚರ್ಯವೇ.

ದೈವವಶಾತ್, ಫಾಲ್ಕೆಯವರು ಅವರ ಮಿತ್ರರಾದ ಡಾಕ್ಟರ್ ಪ್ರಭಾಕರ್ ಎಂಬ ನೇತ್ರ ವೈದ್ಯರ ಚಿಕಿತ್ಸೆಯಿಂದ ಕಣ್ಣುಬೇನೆಯ ಅಪಾಯದಿಂದ ಪಾರಾದರು. ಆದರೆ, ಡಾಕ್ಟರರು ಫಾಲ್ಕೆಯವರಿಗೆ ಕಣ್ಣಿನ ಬಗ್ಗೆ ಬಹಳ ಜಾಗರೂಕ ರಾಗಿರಬೇಕೆಂದು ಮುನ್ನೆಚ್ಚರಿಕೆಯನ್ನು ಕೊಟ್ಟರು. ಸಿನಿಮ ಕೆಲಸಕ್ಕೆ ಮುಖ್ಯವಾಗಿ ಬೇಕಾದದ್ದು ಕಣ್ಣ. ’ಹೆಚ್ಚು ಕೆಲಸ ಮಾಡಿದರೆ ಕಣ್ಣು ಹೋದೀತು, ಹುಷಾರಾಗಿರಿ’ ಎಂದು ಬಿಟ್ಟರು ವೈದ್ಯರು. ಆದರೆ ಫಾಲ್ಕೆಯವರು ಧೈರ್ಯಗೆಡಲಿಲ್ಲ. ತಮ್ಮ ಪ್ರಯತ್ನಗಳನ್ನು ಕೊಂಚವೂ ಕಡಿಮೆ ಮಾಡಲಿಲ್ಲ.

ಸಾಲ ಮಾಡಿ ಇಂಗ್ಲೆಂಡಿಗೆ

ಹಲ್ಲಿದ್ದವರಿಗೆ ಕಡಲೆ ಇಲ್ಲ-ಕಡಲೆ ಇದ್ದವರಿಗೆ ಹಲ್ಲಿಲ್ಲ; ಇದು ನಮ್ಮಲ್ಲಿ ಬಹಳ ಹಳೆಯ ಗಾದೆ. ಫಾಲ್ಕೆಯವರಿಗೆ ಬುದ್ಧಿ, ಆತ್ಮವಿಶ್ವಾಸ, ಕಾರ್ಯದಕ್ಷತೆ ಬಲು ಹೆಚ್ಚು. ಆದರೆ ಅವರ ಹಣಕಾಸಿನ ಅಭಾವ ಅಷ್ಟೇ ತೀವ್ರವಾಗಿತ್ತು. ಅವರದು ಬಹಳ ಕಷ್ಟ ಪರಿಸ್ಥಿತಿ. ಆದರೂ ಸ್ವಲ್ಪವೂ ಎದೆಗುಂದದೆ, ತಮ್ಮಲ್ಲಿದ್ದ ವಿಮೆಯ ’ಪಾಲಿಸಿ’ಯನ್ನು ಒತ್ತೆಯಿಟ್ಟು, ಹತ್ತು ಸಾವಿರ ರೂಪಾಯಿಗಳ ಸಾಲ ಎತ್ತಿದರು. (ಮುಂದೆ ಕಷ್ಟ ಬಂದೀತು ಎಂದು ಒಬ್ಬ ವ್ಯಕ್ತಿ ’ಇಷ್ಟು ಹಣಕ್ಕೆ’ಎಂದು ವಿಮೆ ಮಾಡುತ್ತಾನೆ. ವಿಮೆಯ ಕಂಪನಿಗೆ ತಿಂಗಳಿಗೆ ಅಥವಾಮೂರು ತಿಂಗಳಿಗೆ ಹೀಗೆ ಗೊತ್ತಾದ ಕಾಲಕ್ಕೆ ಇಷ್ಟು ಹಣ ಎಂದು ಕಟ್ಟುತ್ತಿರಬೇಕು. ವಿಮೆ ಕೊಡುವ ಪತ್ರ ’ಪಾಲಿಸಿ’.) ಚಲನಚಿತ್ರ ತಯಾರಿಕೆಗೆ ಬೇಕಾದ ಕ್ಯಾಮೆರಾ ಸಲಕರಣೆಗಳನ್ನು ತರಲು, ಮತ್ತು ಈ ವಿಷಯದಲ್ಲಿ ಹೆಚ್ಚಿನ ಶಿಕ್ಷಣ ಅನುಭವಗಳನ್ನು ಪಡೆಯಲು, ೧೯೧೨ರ ಫೆಬ್ರವರಿ ಒಂದರಂದು ಇಂಗ್ಲೆಂಡಿಗೆ ಸಮುದ್ರ ಪ್ರಯಾಣ ಮಾಡಿದರು. ವಿಮಾನಗಳ ಅನುಕೂಲವಿಲ್ಲದ ಕಾಲ. ಇಂಗ್ಲೆಂಡಿಗೆ ಸಮುದ್ರ ಮಾರ್ಗವಾಗಿ ಮೂರು ನಾಲ್ಕು ವಾರಗಳ ಪ್ರಯಾಣ ಮಾಡಬೇಕಾಗಿತ್ತು.

ಲಂಡನ್ ಸೇರಿದೊಡನೆಯೇ, ಫಾಲ್ಕೆ ತಮ್ಮ ಕೆಲಸದಲ್ಲಿ ನಿರತರಾದರು. ’ಬಯಾಸ್ಕೋಪ್’ ಎಂಬ ಚಲನಚಿತ್ರ ವಾರಪತ್ರಿಕೆಯ ಸಂಪಾದಕರಾದ  ಕೆಬೋರ‍್ನ್ ಎಂಬುವರ ಪರಿಚಯ ಮಾಡಿಕೊಂಡು, ಅವರ ಸ್ನೇಹವನ್ನು ಗಳಿಸಿದರು. ಕೆಬೋರ‍್ನ್ ಅವರು ಚಲನಚಿತ್ರ ನಿರ್ಮಾಣದ ಕಷ್ಟ ನಿಷ್ಠೂರಗಳನ್ನು, ಇಂಗ್ಲೆಂಡಿನಲ್ಲೇ ಈ ಉದ್ಯಮದಲ್ಲಿ ಕೈಸುಟ್ಟು ಕೊಂಡವರ ವಿಷಯಗಳನ್ನು ತಿಳಿಸಿ, ಫಾಲ್ಕೆಯವರಿಗೆ ಎಚ್ಚರಿಕೆ ಕೊಟ್ಟರೂ ಅವರು ತಮ್ಮ ಮನಸ್ಸಿನ ನಿರ್ಧಾರವನ್ನು ಬದಲಾಯಿಸಲಿಲ್ಲ. ಅದರ ಬದಲು, ಚಲನಚಿತ್ರ ತಯಾರಿಕೆಯ ವಿಷಯವಾಗಿ ತಾವು ಮಾಡಿರುವ ವ್ಯಾಸಂಗ, ದೃಢನಿಶ್ಚಯ ಹಾಗೂ ಪಟ್ಟಿರುವ ಶ್ರಮಗಳನ್ನು ಕೆಬೋರ‍್ನ್ ಅವರಿಗೆ ಮನದಟ್ಟು ಮಾಡಿ ಅವರ ಸ್ನೇಹ, ವಿಶ್ವಾಸ, ಗೌರವವನ್ನು ಗಳಿಸಿದರು. “ನಾನು ಸಸ್ಯಹಾರಿ, ಸಿಗರೇಟ್ ಸೇದುವವನಲ್ಲ. ಮದ್ಯಪಾನ ಮಾಡುವವನಲ್ಲ ಎಂದು ತಿಳಿದಾಗ, ಅವರಿಗೆ ನನ್ನಲ್ಲಿ ಇನ್ನೂ ಹೆಚ್ಚಿನ ಗೌರವ ಮೂಡಿದ್ದಿರಬೇಕು” ಎಂದು ಫಾಲ್ಕೆಯವರು ಹೇಳಿಕೊಂಡಿದ್ದಾರೆ.

ಕೆಬೋರ್ನ್ ಅವರು ಫಾಲ್ಕೆಯವರಿಗೆ ಸುಪ್ರಿಸಿದ್ದ ಚಿತ್ರ ನಿರ್ಮಾಪಕರಾದ ಸೆಸಿಲ್ ಹೆಪ್‌ವರ್ತ್‌ಎಂಬುವರ ಪರಿಚಯ ಮಾಡಿಕೊಟ್ಟರು. ಹೆಪ್‌ವರ್ತ್‌ಅವರ ಸ್ಟುಡಿಯೋ ಲಂಡನ್ನಿನಿಂದ ಸುಮಾರು ೭೦ ಕಿಲೋಮೀಟರ್ ದೂರದಲ್ಲಿ ವಾಲ್ಟನ್ ಎಂಬ ಸ್ಥಳದಲ್ಲಿತ್ತು. ಫಾಲ್ಕೆಯವರು ಅಲ್ಲಿಗೆ ಹೋದಾಗ ಆ ಸ್ಟುಡಿಯೋವಿನ ಮ್ಯಾನೇಜರ್ ಇವರನ್ನು ಬಹಳ ಮರ್ಯಾದೆಯಿಂದ ಬರಮಾಡಿಕೊಂಡರು. ಸ್ಟುಡಿಯೋವಿನ ಪ್ರತಿ ವಿಭಾಗವನ್ನೂ ತೋರಿಸಿ ವಿವರಿಸಿದರು. ಅಷ್ಟೇ ಅಲ್ಲ, ಇವರಿಗಾಗಿ, ’ಸ್ಟೆಷಲ್ ಷೂಟಿಂಗ್’ ಏರ್ಪಡಿಸಿ, ಎಲ್ಲ ವಿವರಗಳನ್ನೂ ತಿಳಿಸಿಕೊಟ್ಟರು. ಫಾಲ್ಕೆಯವರು ಅಲ್ಲಿ ಒಂದು ವಾರ ಕೆಲಸ ಮಾಡಿ, ತಮಗೆ ಬೇಕಾದ ಎಲ್ಲ ವಿಷಯಗಳನ್ನೂ – ಸ್ಟುಡಿಯೋ ಆಡಳಿತ ವ್ಯವಸ್ಥೆ, ಕ್ಯಾಮರಾ, ಷೂಟಿಂಗ್, ಪ್ರೋಸೆಸಿಂಗ್, ಎಡಿಟಿಂಗ್ ಹೀಗೆ ವಿವಿಧ ತಾಂತ್ರಿಕ ವಿವರಗಳು ಎಲ್ಲವನ್ನೂ – ಗ್ರಹಿಸಿಕೊಂಡರು. ಈ ಅನುಭವದಿಂದ, ಸ್ವಪ್ರಯತ್ನದಿಂದ ತಾವು ಭಾರತದಲ್ಲೇ ಓದಿ, ಚಿತ್ರಗಳನ್ನು ನೋಡಿ ಅರಿತುಕೊಂಡಿದ್ದ ವಿಷಯಗಳು ಸರಿ ಎಂದು ಇವರಿಗೆ ಖಚಿತವಾಯಿತು. ಇನ್ನು ಆ ದೇಶದಲ್ಲಿದ್ದು ಸಮಯ ವ್ಯರ್ಥ ಮಾಡುವುದು. ಉಚಿತವಲ್ಲವೆಂದು, ಚಿತ್ರನಿರ್ಮಾಣಕ್ಕೆ ಬೇಕಾದ ಕ್ಯಾಮರಾ ಮತ್ತು ಪ್ರಿಂಟಿಂಗ್ ಮೆಷಿನ್ ಇವುಗಳನ್ನು ಕೊಂಡುಕೊಂಡು ಭಾರತಕ್ಕೆ ಹಿಂತಿರುಗಿದರು. ಅವರು ಲಂಡನಿನಲ್ಲಿ ಇದ್ದದ್ದು ಕೇವಲ ೧೫ ದಿವಸಗಳು! ಅವರ ಕಾರ್ಯತತ್ಪರತೆ, ಉದ್ದೇಶಿಸಿದ ಕೆಲಸವನ್ನು ಪೂರೈಸುವುದರಲ್ಲಿ ಅವರಿಗಿದ್ದ ಏಕಾಗ್ರತೆ ಎಷ್ಟು ತೀಕ್ಷ್ಣವಾಗಿತ್ತು ಎಂಬುದನ್ನು ಇದು ತೋರಿಸುತ್ತದೆ.

ಚಲನಚಿತ್ರ ತಯಾರಿಕೆಗಾಗಿ ಫಾಲ್ಕೆಯವರ ಹೆಂಡತಿ ತಮ್ಮ ಒಡವೆಗಳನ್ನೆಲ್ಲ ಅಡವಿಡಲು ಕೊಟ್ಟರು.

ಆಗ ಭಾರತ ಬ್ರಿಟಿಷರ ಅಧೀನದಲ್ಲಿದ್ದಕಾಲ. ಭಾರತೀಯರು ಸ್ವರಾಜ್ಯಕ್ಕಾಗಿ ಹೊಡೆದಾಡುತ್ತಿದ್ದ ಕಾಲ. ಫಾಲ್ಕೆಯವರು ಬಹು ದೇಶಪ್ರೇಮಿಗಳು. ಸ್ವರಾಜ್ಯದ ಹೋರಾಟದಲ್ಲಿ ನಂಬಿಕೆ ಇದ್ದವರು. ಆದ ಕಾರಣವೇ ಅವರಿಗೆ ಸ್ವದೇಶಕ್ಕೆ ಹಿಂತಿರುಗಿ ಸ್ವದೇಶಿ ಚಿತ್ರಗಳನ್ನು ತಯಾರಿಸಬೇಕೆಂಬ ಆತುರ.

ತೆಗೆದ ಸಾಲವೆಲ್ಲಾ ಇಂಗ್ಲೆಂಡಿಗೆ ಹೋಗಿ ಬರುವುದಕ್ಕೆ ಹಾಗೂ ಕ್ಯಾಮರಾ ಮತ್ತಿತರ ಸಲಕರಣೆಗಳನ್ನು ಕೊಂಡು ಕೊಳ್ಳುವುದರಲ್ಲಿ ಖರ್ಚಾಯಿತು. ಭಾರತಕ್ಕೆ ಹಿಂತಿರುಗಿದಾಗ ಇವರಿಗೆ ಪುನಃ ಹಣದ ಬಿಕ್ಕಟ್ಟು.

ಕಷ್ಟಗಳನ್ನು ಹಿಮ್ಮೆಟ್ಟಿಸಿದ ಶೂರ

೬೦-೭೦ ವರ್ಷಗಳ ಹಿಂದೆ ಸಿನಿಮ ತೆಗೆಯುವುದು ಎಷ್ಟು ಕಷ್ಟವಾದ ಕೆಲಸವಾಗಿತ್ತು ಎನ್ನುವುದನ್ನು ನಾವು ಸ್ವಲ್ಪ ಯೋಚಿಸಿಕೊಳ್ಳಬೇಕು. ಯಾಂತ್ರಿಕ ಮತ್ತು ತಾಂತ್ರಿಕ ಸೌಲಭ್ಯಗಳು ಇಂದಿನಂತಿರಲಿಲ್ಲ. ಕ್ಯಾಮರಾ ಮತ್ತು ಪ್ರೊಜೆಕ್ಟರುಗಳಲ್ಲಿ ಫಿಲ್ಮನ್ನು ಓಡಿಸುವುದಕ್ಕೆ ಬೇಕಾದ ಫಿಲ್ಮಿನ ಎಡ ಬಲ ಭಾಗದಲ್ಲಿರುವ ರಂಧ್ರಗಳನ್ನು ಫಾಲ್ಕೆಯವರೇ ಸ್ವತಃ ಮಾಡಬೇಕಾಗಿತ್ತು. ಇದು ಬಹಳ ಕುಶಲ ಕೆಲಸ. ಜಾಗರೂಕತೆಯಿಂದ ಪೂರ್ತಿ ಕತ್ತಲಿನ ಕೋಣೆಯಲ್ಲಿ ಮಾಡಬೇಕಾಗಿತ್ತು. ಬಿಸಿಲು ಹೆಚ್ಚಾದರೆ ಅತಿ ಶಾಖದಿಂದ ಕಚ್ಚಾ ಫಿಲ್ಮ್ ಕೆಟ್ಟು ಹೋಗುತ್ತಿತ್ತು. ಚಿಕ್ಕ ಕಿಡಿ ತಾಕಿದರೂ ಸಾಕು, ಧಗ್ಗೆಂದು ಹತ್ತಿಕೊಂಡು ಭಸ್ಮವಾಗುತ್ತಿತ್ತು. ಕ್ಯಾಮರಾವನ್ನು ಕೈಯಲ್ಲೆ ತಿರುಗಿಸಬೇಕಾಗಿತ್ತು. ತಿರುಗಿಸುವ ವೇಗ ಹೆಚ್ಚು ಕಡಿಮೆಯಾದರೆ ಅನರ್ಥವಾಗುತ್ತಿತ್ತು. ಸೂರ್ಯನ ಬೆಳಕಿನಲ್ಲೇ ಚಿತ್ರೀಕರಣವಾಗಬೇಕಿತ್ತು. ಫಿಲ್ಮಿನ ವೇಗವೂ ಬಹಳ ಕಡಿಮೆಯಾಗಿತ್ತು.

ಇಷ್ಟೆಲ್ಲಾ ತೊಂದರೆ ತೊಡಕು ಸಮಸ್ಯೆಗಳನ್ನು ಎದುರಿಸಿ ಫಾಲ್ಕೆಯವರು ಬಟಾಣಿ ಬೀಜ ಮೊಳಕೆ ಒಡೆದು ಸಸಿಯಾಗಿ ಬೆಳೆಯುವ ಚಿತ್ರ ಒಂದನ್ನು ತೆಗೆದರು. ೨೦೦ ಅಡಿ ಚಲನಚಿತ್ರಕ್ಕೆ ಸುಮಾರು ೩೨೦೦ ಬಿಡಿ ಚಿತ್ರಗಳನ್ನು ಒಂದೊಂದಾಗಿ ಮಧ್ಯೆ-ಮಧ್ಯೆ ಸ್ವಲ್ಪ ಸಮಯವನ್ನು ಬಿಟ್ಟು-ತೆಗೆಯಬೇಕಾಗಿತ್ತು. (ಇದಕ್ಕೆ ಇಂಗ್ಲಿಷಿನಲ್ಲಿ ಟೈಂ ಲ್ಯಾಪ್ಸ್ ಫೋಟೋಗ್ರಫಿ ಎನ್ನುತ್ತಾರೆ.) ಅಂದಿನ ಕಾಲಕ್ಕೆ ಇದು ಅದ್ಬುತವಾದ ಸಂಗತಿ. ಫಾಲ್ಕೆಯವರ ಚಿತ್ರ ಯಶಸ್ವಿ ಯಾಯಿತು. ಪ್ರೇಕ್ಷಕರು ಆಶ್ಚರ್ಯದಲ್ಲಿ ಮುಳುಗಿದರು, ಪುಳಕಿತರಾದರು.

ಫಾಲ್ಕೆಯವರಿಗೆ ಶಹಭಾಸ್‌ಗಿರಿ ಬೇಕಾದಷ್ಟು ಸಿಕ್ಕಿತು. ಆದರೆ ಮುಂದಿನ ಚಿತ್ರ ತಯಾರಿಕೆಗೆ ಹಣವನ್ನು ಕೊಡಲು ಯಾರೂ ಮುಂದೆ ಬರಲಿಲ್ಲ. ಪುನಃ ಅವರು ಸಾಲ ಮಾಡಬೇಕಾಯಿತು. ಈ ಬಾರಿ ಅವರ ಹೆಂಡತಿ ಸರಸ್ವತಿಬಾಯಿ ತಮ್ಮ ಒಡವೆಗಳನ್ನೆಲ್ಲ ಅಡವಿಡಲು ಕೊಟ್ಟರು. ಹೀಗೆ ಹಣವನ್ನು ಹೊಂದಿಸಿಕೊಳ್ಳಬೇಕಾಯಿತು.

ಹಣ ಒಂದೇ ಅಲ್ಲ. ಬೇರೆ ಸಮಸ್ಯೆಗಳೂ ಬೇಕಾದಷ್ಟಿದ್ದವು. ಸ್ತ್ರೀ ಪಾತ್ರಗಳನ್ನು ವಹಿಸಲು ಹೆಂಗಸರು ಯಾರು ಬರುತ್ತಿರಲಿಲ್ಲ. ನಾಟಕ, ಸಿನಿಮಗಳಲ್ಲಿ ಪಾತ್ರ ವಹಿಸುವುದು ಹೇಯವಾದ ಕೆಲಸ ಎಂಬ ಸಾಮಾಜಿಕ ನಂಬಿಕೆ. ಆದುದರಿಂದ ಫಾಲ್ಕೆಯವರು ಸ್ತ್ರೀ ಪಾತ್ರಗಳಿಗೂ ಗಂಡಸರನ್ನೇ ತೆಗೆದುಕೊಳ್ಳಬೇಕಾಯಿತು.

ಚಲನಚಿತ್ರಗಳೇ ದೇಶಕ್ಕೆ ಹೊಸದು. ಆದುದರಿಂದ ಈ ಕೆಲಸ ತಿಳಿದವರು ಯಾರೂ ಇರಲಿಲ್ಲ. ಒಂದು ಚಲನಚಿತ್ರ ಸಿದ್ಧ ಮಾಡಬೇಕು ಎಂದರೆ ಎಷ್ಟು ಬಗೆಯ ಕೆಲಸಗಳಾಗಬೇಕು! ಚಿತ್ರಕಥೆ ಬರೆಯುವುದು, ನಿರ್ದೇಶನ, ಚಿತ್ರಗಹಣ, ಸಂಕಲನ, ಪ್ರೊಸೆಸಿಂಗ್‌, ಹಂಚಿಕೆ, ಪ್ರದರ್ಶನ- ಎಲ್ಲವನ್ನೂ ಫಾಲ್ಕೆಯವರೇ ಮಾಡಬೇಕಾಗಿತ್ತು.

ಕಷ್ಟಗಳನ್ನು ಎದುರಿಸಿ ಹಿಮ್ಮೆಟ್ಟಿಸುವುದೇ ಶೂರರ ಲಕ್ಷಣ.

ಚಲನಚಿತ್ರ ಯುಗ ಪ್ರಾರಂಭ

ಮೊದಲು ಚಲನಚಿತ್ರ ತೆಗೆಯಲು ಒಂದು ’ಸ್ಟುಡಿಯೋ’ ಬೇಕಲ್ಲವೆ? ಫಾಲ್ಕೆಯವರು ಮುಂಬಯಿಯ ದಾದರ್ ಮೈನ್  ರೋಡಿನಲ್ಲಿ ಮಥುರಾ ಭವನವೆಂಬ ಬಂಗಲೆಯಲ್ಲಿ ಸ್ಟುಡಿಯೋ ಸ್ಥಾಪಿಸಿದರು. ಏಳೆಂಟು ತಿಂಗಳು ಸತತವಾಗಿ ಶ್ರಮಿಸಿದರು. ’ರಾಜಾ ಹರಿಶ್ಚಂದ್ರ’ ಎಂಬ ಚಿತ್ರವನ್ನೂ ತಯಾರಿಸಿದರು.

ಈ ಚಿತ್ರದಲ್ಲಿ ದಾಬ್ಕೆ ಎಂಬುವರು ಹರಿಶ್ಚಂದ್ರನ ಪಾತ್ರವನ್ನೂ, ಸಾಲುಂಕೆ ಎಂಬಾತ ತಾರಾಮತಿಯ ಪಾತ್ರವನ್ನೂ, ಫಾಲ್ಕೆಯವರ ಮಗ ಬಾಲಚಂದ್ರ ರೋಹಿತಾಶ್ವನ ಪಾತ್ರವನ್ನೂ ವಹಿಸಿದ್ದರು. ಈ ಚಿತ್ರದ ಉದ್ದ ೩೭೦೦ ಅಡಿ. ಪ್ರದರ್ಶನ ಸಮಯ ಸುಮಾರು ಒಂದು ಘಂಟೆಯ ಕಾಲ. ೧೯೧೩ ಮೇ ೩ ರಂದು ಮುಂಬಯಿಯ ಕಾರೋನೇಷನ್ ಚಿತ್ರಮಂದಿರಲ್ಲಿ ಬಿಡುಗಡೆಯಾಯಿತು.

ಮಗ ಬಾಲಚಂದ್ರನಿಗೆ ’ರೋಹಿತಾಶ್ವ’ನ ವೇಷ ಹಾಕುತ್ತಿರುವ ಫಾಲ್ಕೆ’

ಭಾರತದಲ್ಲಿ ಮೊದಲನೆಯ ಚಲನಚಿತ್ರದ ಪ್ರದರ್ಶನ ವಾಯಿತು. ಚಲನಚಿತ್ರ ಯುಗ ಪ್ರಾರಂಭವಾಯಿತು.

ಚಿತ್ರವನ್ನು ತೋರಿಸಿದ ಕಡೆಗಳಲ್ಲೆಲ್ಲ ಜನ ಕಿಕ್ಕಿರಿದು ನೋಡಿದರು, ಬೆರಗಾದರು, ಸಂತೋಷಪಟ್ಟರು. ಚಿತ್ರ ಅಪಾರ ಹಣವನ್ನು ಸಂಪಾದಿಸಿತು.

ಈ ಚಿತ್ರವಾದ ನಂತರ ಫಾಲ್ಕೆಯವರು ತಮ್ಮ ಸ್ಟುಡಿಯೋವನ್ನು ಮುಂಬಯಿಯಿಂದ ನಾಸಿಕ್‌ಗೆ ವರ್ಗಾಯಿಸಿದರು. ಕಾರಣ, ಅಲ್ಲಿದ್ದ ಅನುಕೂಲತೆಗಳು. ಒಳ್ಳೆಯ ಹವಾಮಾನ, ಸುತ್ತಮುತ್ತಲಿದ್ದ ನದಿ, ಕಾಡುಮೇಡುಗಳ ಸುಂದರ ದೃಶ್ಯಗಳು. ಇಲ್ಲಿ ಅವರ ಮುಂದಿನ ಚಿತ್ರ ’ಮೋಹಿನಿ ಮತ್ತು ಪಾರ್ವತಿ ಈ ಎರಡು ಪಾತ್ರಗಳನ್ನು ಅಭಿನಯಿಸಲು ಕಷ್ಟಪಟ್ಟು ಇಬ್ಬರು ಹೆಂಗಸರನ್ನು ಒಪ್ಪಿಸಿದರು. ’ರಾಜಾ ಹರಿಶ್ಚಂದ್ರ’ನಂತೆಯೇ ಈ ಚಿತ್ರವೂ ಬಹಳ ಯಶಸ್ವಿಯಾಯಿತು.

ಮುಂದಿನ ಮೂರೇ ತಿಂಗಳುಗಳಲ್ಲಿ ’ಸಾವಿತ್ರಿ- ಸತ್ಯವಾನ್’ ಚಿತ್ರವನ್ನು ತಯಾರಿಸಿದರು. ಇದೂ ಬಹಳ ಯಶಸ್ವಿಯಾಯಿತು. ಫಾಲ್ಕೆಯವರು ಆರಿಸಿಕೊಂಡ ಕತೆಗಳೆಲ್ಲಾ ನಮ್ಮ ಪುರಾಣದ ಕತೆಗಳು. ಚಿಕ್ಕಂದಿನಿಂದಲೇ ಇವುಗಳಲ್ಲಿ ಅವರಿಗೆ ಬಹು ಆಸಕ್ತಿ ಇತ್ತು. ಅವು ಫಾಲ್ಕೆಯವರ ಮೇಲೆ ಜೀವನದುದ್ದಕ್ಕೂ ಪ್ರಭಾವ ಬೀರಿದವು. ವ್ಯವಹಾರದ ದೃಷ್ಟಿಯಿಂದಲೂ ಎಲ್ಲರಿಗೂ ಚಿರಪರಿಚಿತವಾದ ಪುರಾಣ ಕಥೆಗಳು, ತಮ್ಮ ಚಲನಚಿತ್ರಗಳಿಗೆ ಉತ್ತಮವಾದ ಕಥಾವಸ್ತು ಎಂಬುದೂ ಫಾಲ್ಕೆಯವರಿಗೆ ತಿಳಿದಿತ್ತು. ಇಷ್ಟೇ ಅಲ್ಲದೆ ಪುರಾಣಕಥೆಗಳು, ಅವರು ಸ್ವದೇಶಿ ಚಿತ್ರಗಳನ್ನು ತಯಾರಿಸುವ ಉದ್ದೇಶಕ್ಕೂ ಬೆಂಬಲವಾಗಿದ್ದವು.

ಅಂತೂ ಫಾಲ್ಕೆಯವರು ಮನಸ್ಸು ಮಾಡಿದ ಕೆಲಸ ಜಯಪ್ರದವಾಯಿತು. ಇವರ ಕೀರ್ತಿ, ಇವರ ಚಿತ್ರಗಳ ಕೀರ್ತಿ ದೂರದ ಇಂಗ್ಲೆಂಡಿಗೂ ಮುಟ್ಟಿತು.

ಮತ್ತೆ ಇಂಗ್ಲೆಂಡಿಗೆ

ತಮ್ಮ ಚಿತ್ರದ ಪ್ರತಿಗಳು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಬೇಕಾಗಿದ್ದರಿಂದ, ಇಂಗ್ಲೆಂಡಿನಿಂದ ಎಲೆಕ್ಟ್ರಿಕ್ ಪ್ರಿಟಿಂಗ್ ಯಂತ್ರ ತರುವ ಯೋಚನೆ ಮಾಡಿದರು. ಹಾಗೆಯೇ ಇಂಗ್ಲೆಂಡಿನಲ್ಲಿ ತಮ್ಮ ಚಿತ್ರಗಳನ್ನೂ ಪ್ರದರ್ಶಿಸಿ ಭಾರತದ ಚಲನಚಿತ್ರಕ್ಕೆ ವಿದೇಶಿ ಮಾರುಕಟ್ಟೆಯನ್ನು ಗಳಿಸುವ ಯೋಚನೆಯನ್ನೂ ಮಾಡಿದರು.

ಈ ಉದ್ದೇಶದಿಂದ ೧೯೧೪ರ ಜೂನ್ ತಿಂಗಳಲ್ಲಿ ಪುನಃ ಇಂಗ್ಲೆಂಡಿಗೆ ಹೋದರು. ಆದರೆ ಅನಿರೀಕ್ಷಿತವಾಗಿ ಅಡ್ಡಿಗಳು ಎದ್ದು ನಿಂತವು. ಇವರು ಅಲ್ಲಿಗೆ ಹೋದ ಕೆಲವು ದಿನಗಳಲ್ಲೇ ಮೊದಲನೆಯ ಮಹಾಯುದ್ಧ ಆರಂಭವಾಯಿತು. ಇದರಿಂದ ಫಾಲ್ಕೆಯವರ ಯೋಜನೆಗಳೆಲ್ಲಾ ತಲೆಕೆಳಗಾದವು. ಇವರಿಗೆ ಹಣ ಒದಗಿಸುತ್ತಿದ್ದವರಿಗೆ ಹೆದರಿಕೆ ಯುದ್ಧ ಪ್ರಾರಂಭವಾಯಿತಲ್ಲ, ಚಲನಚಿತ್ರಗಳ ತಯಾರಿಕೆ ಸುಗಮವಾಗಿ ನಡೆಯಬಹುದೇ ಎಂದು. ಅವರು ಹಣ ಕೊಡುವುದನ್ನು ನಿಲ್ಲಿಸಿಬಿಟ್ಟರು.

ಇಂಗ್ಲೆಂಡಿನಲ್ಲಿ ಫಾಲ್ಕೆಯವರ ಹಳೆಯ ಸ್ನೇಹಿತರಾದ ಕೆಬೋರ‍್ನ್ ಅವರು ಫಾಲ್ಕೆಯವರ ಚಿತ್ರಗಳನ್ನು ನೋಡಿ ಸಂತೋಷಪಟ್ಟರು. ಇಂಗ್ಲೆಂಡಿನಲ್ಲಿಯೇ ಚಿತ್ರ ನಿರ್ದೇಶನ ಮಾಡಲು ಇವರಿಗೆ ಆಹ್ವಾನಗಳೂ ಬಂದವು. ತಿಂಗಳಿಗೆ ೩೦೦ ಪೌಂಡ್ ಸಂಬಳ, ಲಾಭದಲ್ಲಿ  ಶೇ. ೨೦ ಭಾಗ ಹಣ ವನ್ನು ಕೊಡಲು ತಯಾರಿದ್ದರು. ಫಾಲ್ಕೆಯವರು ಇದಕ್ಕೆ ಒಪ್ಪಲಿಲ್ಲ. ಕೇವಲ ಹಣವನ್ನು ಸಂಪಾದಿಸುವುದಕ್ಕಾಗಿ, ಹಿತ ಜೀವನಕ್ಕಾಗಿ ಅಲ್ಲೇ ನೆಲಸಲು ಅವರ ಮನಸ್ಸು ಸಮ್ಮತಿಸಲಿಲ್ಲ. ಭಾರತದಿಂದ ಇವರಿಗೆ ಹಣ ಬಾರದ ಕಾರಣ,ಕೊಂಡ ಯಂತ್ರಗಳನ್ನು ತಮ್ಮ ಜೊತೆಯಲ್ಲಿ ತರುವುದಕ್ಕಾಗಲಿಲ್ಲ.

ಮತ್ತೆ ಕಷ್ಟಗಳ ಪರಂಪರೆ

ಅವರು ನಾಸಿಕ್‌ಗೆ ಹಿಂತಿರುಗಿದಾಗ, ಅಲ್ಲಿ ಎದೆಯೊಡೆಯುವ ಸ್ಥಿತಿ. ಸ್ಟುಡಿಯೋ ಮುಚ್ಚುವ ಘಟ್ಟಕ್ಕೆ ಬಂದಿತ್ತು. ಕೆಲಸಗಾರರೊಬ್ಬರಿಗೂ ಸಂಬಳವಿಲ್ಲ. ಫಾಲ್ಕೆಯವರ ಹೆಂಡತಿಯವರ ಧೈರ್ಯ ಮತ್ತು ಕೆಲಸಗಾರರ ಸ್ವಾಮಿ ಭಕ್ತಿ ಇವು ಗಳಿಂದ ಸ್ಟುಡಿಯೋ ಕುಂಟುತ್ತಾ ಕುಂಟುತ್ತಾ ನಡೆದಿತ್ತು. ಫಾಲ್ಕೆಯವರು ಎಷ್ಟು ಬೇಡಿಕೊಂಡರೂ, ಅವರ ಬಂಡವಾಳಗಾರನ ಕರಗಲಿಲ್ಲ.

ಕಷ್ಟಗಳು ಬಂದರೆ ಒಂಟಿಯಾಗಿ ಬರುವುದಿಲ್ಲ. ಗುಂಪು ಗುಂಪಾಗಿ ಬರುತ್ತವೆ ಎನ್ನುತ್ತಾರೆ. ಫಾಲ್ಕೆಯವರು ತಯಾರು ಮಾಡಿದ ಮೊದಲನೆಯ ಚಲನಚಿತ್ರ ಹರಿಶ್ಚಂದ್ರನ ಕಥೆ; ಹರಿಶ್ಚಂದ್ರನಂತೆಯೇ ಅವರೂ ಅನೇಕ ಕಷ್ಟಗಳನ್ನು ಎದುರಿಸಬೇಕಾಯಿತು. ಹಾಗೂ ಹೀಗೂ ಪ್ರಯತ್ನಿಸಿ, ಇಂಗ್ಲೆಂಡಿನಿಂದ ’ಪ್ರಿಂಟಿಂಗ್’ ಯಂತ್ರಗಳನ್ನು ತರಿಸಿಕೊಂಡರು. ಕೆಲಸಗಾರರೆಲ್ಲರೂ ಸಂಬಳವಿಲ್ಲದೆಯೇ ದುಡಿದರು. ಇವರ ಕಷ್ಟದಲ್ಲೂ ಭಾಗಿಗಳಾದರು.

ಆದರೆ ಕೆಲಸಗಾರರನೇಕರು ಮಲೇರಿಯ ಜ್ವರ ಬಂದು ಮಲಗಿದರು. ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಕೆಲಸವನ್ನೆಲ್ಲ ನೋಡಿಕೊಳ್ಳುತ್ತಿದ್ದ ಎಲೆಕ್ಟ್ರಿಷಿಯನ್ ಕಾಲರಾ ರೋಗದಿಂದ ಮೃತನಾದ; ಇವರ ಮುಖ್ಯ ಛಾಯಾಗ್ರಾಹಕರು, ಎರಡು ಸಲ, ಇನ್ನೇನು ಈಗಲೋ ಆಗಲೋ ಪ್ರಾಣ ಹೋಗುತ್ತದೆ ಎಂಬ ಪರಿಸ್ಥಿತಿಯಲ್ಲಿದ್ದರು. ವಿದ್ಯುಚ್ಛಕ್ತಿ ಉತ್ಪತ್ತಿ ಮಾಡುವ ಯಂತ್ರ ಸರಿ ಮಾಡುವುದಕ್ಕೆ ಸಾಧ್ಯವಾಗದಷ್ಟು ಕೆಟ್ಟುಹೋಯಿತು. ಇವರ ಮ್ಯಾನೇಜರ‍್ಗೆ ಬೇನೆ ಬಂದು ಶಸ್ತ್ರಚಿಕಿತ್ಸೆ ಮಾಡಿಸಬೇಕಾದ ಪ್ರಮೇಯ ಬಂತು. ಅದೇ ಸಮಯದಲ್ಲೇ ಮ್ಯಾನೇಜರ್ ಮೇಲೆ ಸುಳ್ಳು ಆರೋಪದ ಪೊಲೀಸ್ ಕೇಸೂ ಬಂತು. ಎಂತಹ ಕೆಟ್ಟ ಸ್ಥಿತಿ!

ಇಷ್ಟಾದರೂ ಅಲ್ಲಿ ಇಲ್ಲಿ ಸ್ವಲ್ಪ ಹಣ ಹೊಂದಿಸಿಕೊಂಡು ’ಶ್ರಿಯಾಲ್‌ನ ಜೀವನ’ವೆಂಬ ಚಿತ್ರವನ್ನು ತಯಾರಿಸಲು ಆರಂಭಿಸಿದರು. ಆದರೆ ಕೆಲಸ ಆರಂಭಿಸಿದಾಗಲೇ ರಾಜಾ ಶ್ರಯಾಲ್ ಪಾತ್ರ ಮಾಡುವವನಿಗೆ ೧೦೩ ಡಿಗ್ರಿ ಜ್ವರ ಪ್ರಾರಂಭವಾಯಿತು. ಅದನ್ನು ಲೆಕ್ಕಿಸದೆ ಹಾಗೇ ಅವನು ಮೂರು ನಾಲ್ಕು ದಿವಸ ಕೆಲಸ ಮಾಡಿದ. ಇದರಿಂದ ಅವನಿಗೆ ವಿಪರೀತ ಕಾಯಿಲೆಯಾಗಿ ಹಾಸಿಗೆ ಬಿಟ್ಟೇಳುವುದೇ ಕಷ್ಟ ವಾಯಿತು. ರಾಣಿ ಚಂಗುಣ ಪಾತ್ರ ವಹಿಸುತ್ತಿದ್ದವಳು ಎಡವಿಬಿದ್ದು ಕಾಲು ಹೊರಳಿಕೊಂಡಿತು. ಚಿತ್ರೀಕರಣ ನಿಲ್ಲಬೇಕಾಯಿತು. ಈ ಚಿಂತೆಗಳಿಂದ ಫಾಲ್ಕೆಯವರಿಗೆ ನಿದ್ರೆಯೇ ಬಾರದಂತಾಯಿತು. ಆಗಾಗ ತಲೆನೋವೂ ಪ್ರಾರಂಭವಾಯಿತು.

ಫಾಲ್ಕೆಯವರಿಗೆ ತಮ್ಮ ಪತ್ನಿ ಸರಸ್ವತಿಬಾಯಿಯಲ್ಲಿ ಅಪಾರ ಪ್ರೇಮ, ಗೌರವ. ಆಕೆ ಫಾಲ್ಕೆಯವರ ಕಷ್ಟ ಕಾಲದಲ್ಲೆಲ್ಲಾ ಸಮಾಧಾನವಾಗಿದ್ದುಕೊಂಡು, ಗೊಣಗದೆ-ಗೋಳಾಡದೆ, ತಮ್ಮಕೈಲಾದ ಸಹಾಯವನ್ನೆಲ್ಲಾ ಮಾಡಿದರು. ರಾಣಿ ಚಂಗುಣ ಪಾತ್ರವನ್ನು ತಾವೇ ವಹಿಸಲು ಮುಂದೆ ಬಂದರು. ತಮ್ಮ ಒಡವೆಗಳನ್ನು ಅಡವಿಡಲು ಕೊಟ್ಟಾಗಲೂ ಆಕೆಯದು ನಿಶ್ಚಿಂತೆ.

“ದೇವರು ನಿಮಗೆ ಆಯುಷ್ಯವನ್ನು ಕೊಟ್ಟು ನನ್ನ ಮಂಗಳಸೂತ್ರವನ್ನು ಕಾಪಾಡಿದರೆ ಸಾಕು. ನನಗಿನ್ನೇನೂ ಬೇಡ. ಇದೇ ನನ್ನ ನಿತ್ಯ ಪ್ರಾರ್ಥನೆ” ಎನ್ನುತ್ತಿದ್ದರು ಆ ಸಾಧ್ವಿ.

ಬೇರೆ ಬೇರೆ ಕಾರಣಗಳಿಂದಾಗಿ ’ಶ್ರಿಯಾಲ್’ ಚಿತ್ರವನ್ನು ಫಾಲ್ಕೆಯವರು ಅರ್ಧದಲ್ಲೇ ತ್ಯಜಿಸಬೇಕಾಯಿತು. ತಮ್ಮ ಜೀವನದಲ್ಲಿ ಎಂದೂ ಯೋಚಿಸಿದಷ್ಟು ಹತಾಶರಾದರು. ಹಣಕ್ಕಾಗಿ ಎಲ್ಲೆಲ್ಲೂ ಅಲೆದರು. ಸಾರ್ವಜನಿಕರಲ್ಲಿ ಬಿನ್ನವಿಸಿಕೊಂಡರು. ಏನಾದರೂ, ಇವರ ಪ್ರಯತ್ನವೆಲ್ಲಾ ಅರಣ್ಯರೋದನವಾಯಿತು.

ಫಾಲ್ಕೆಯವರು ತಮ್ಮ ಚಿತ್ರಗಳನ್ನು ಪ್ರದರ್ಶಿಸುವುದಕ್ಕೆ ಆಗಿಂದಾಗ್ಗೆ ತಮ್ಮ ಪರಿವಾರ, ಪ್ರೊಜೆಕ್ಟರ್‌ನೊಡನೆ ಊರೂರು ಸುತ್ತುತ್ತಿದ್ದರು. ಹೀಗೆ ಇಂದೂರಿಗೆ ಹೋಗಿದ್ದಾಗ ಅಲ್ಲಿ ಎಂಟು ಸಾವಿರ ರೂಪಾಯಿಗಳನ್ನು ಸಲುವಾಗಿ ಪಡೆದರು. ಪುನಃ ’ರಾಜಾ ಹರಿಶ್ಚಂದ್ರ’ ಮತ್ತು ’ಲಂಕಾ ದಹನ’ ಈ ಎರಡು ಚಿತ್ರಗಳನ್ನು ತಯಾರಿಸಿದರು.

ಲಂಕಾದಹನ ದಿಂದ ಮೋಡಗಳು ಚದುರಿದವು

ಫಾಲ್ಕೆಯವರ ಜೀವನದಲ್ಲಿ ಕವಿದಿದ್ದ ಕಾರ್ಮೋಡ ’ಲಂಕಾದಹನ’ ಬಿಡುಗಡೆಯಿಂದ ಚದುರಿತು. ’ಲಂಕಾದಹನ’ ಅವರ ಹಿಂದಿನ ಎಲ್ಲಾ ಚಿತ್ರಗಳನ್ನೂ ಮೀರಿಸಿ ಯಶಸ್ವಿಯಾಯಿತು. ಪ್ರೇಕ್ಷಕರ ಗುಂಪು ಅಸಾಧ್ಯವಾಗಿದ್ದ ಕಾರಣ, ಚಿತ್ರವನ್ನು ಬೆಳಗಿನಿಂದ ಸಾಯಂಕಾಲದವರೆಗೂ ಬಿಡುವಿಲ್ಲದೆ ಪ್ರದರ್ಶಿಸಬೇಕಾಯಿತು. ಮುಂಬಯಿಯಲ್ಲಿ ಹತ್ತೆ ದಿವಸಗಳಲ್ಲಿ ಈ ಚಿತ್ರ ಮೂವತ್ತೆರಡು ಸಾವಿರ ರೂಪಾಯಿ ಗಳಿಸಿತು. ಮದರಾಸಿನಲ್ಲಿ ಗಲ್ಲಾಪೆಟ್ಟಿಗೆಯ ಹಣವನ್ನು ಪೊಲೀಸರ ರಕ್ಷಣೆ ಪಡೆದು ಎತ್ತಿನ ಗಾಡಿಗಳಲ್ಲಿ ಸಾಗಿಸಬೇಕಾಯಿತು. ಆಗಿನ ನಾಣ್ಯಗಳು ಬಹಳ ತೂಕ ವಾಗಿದ್ದುದೂ ಇದಕ್ಕೆ ಕಾರಣ. ’ಲಂಕಾದಹನ’ ಬಿಡುಗಡೆ ಆದದ್ದು ೧೯೧೭ರ ಸೆಪ್ಟೆಂಬರ್ ತಿಂಗಳಿನಲ್ಲಿ.

ಚಿತ್ರ ತಯಾರಿಕೆಗೆ ಹಣವನ್ನು ಕೊಡಲು ಹಿಂಜರಿಯುತ್ತಿದ್ದವರಿಗೆ ಈ ಧೈರ್ಯ ಬಂದಿತ್ತು. ಹಲವರು, ಅವರಲ್ಲಿ ಲೋಕಮಾನ್ಯ ತಿಲಕರೂ ಒಬ್ಬರು, ಇವರಿಗೆ ಹಣ ಒದಗಿಸುವುದಕ್ಕೆ ಮುಂದೆ ಬಂದರು.

೧೯೧೭ರ ಕೊನೆಯಲ್ಲಿ ನಾಲ್ಕು ಮಂದಿ ಇತರ ಪಾಲುದಾರರೊಡನೆ ’ಹಿಂದೂಸ್ಥಾನ್ ಫಿಲ್ಮ್‌ಕಂಪೆನಿ’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಹಣದ ಚಿಂತೆ, ಕೊರತೆಗಳು ನೀಗಿದವು. ಸ್ಟುಡಿಯೋವನ್ನು ಪರಿಷ್ಕರಿಸಿ ಉತ್ತಮಗೊಳಿಸಿದರು. ಈ ಕಂಪೆನಿಗೆ ಅವರು ತಯಾರಿಸಿದ ಮೊದಲನೆಯ ಚಿತ್ರ ’ಶ್ರೀಕೃಷ್ಣ ಜನ್ಮ’. ಇದು ’ಲಂಕಾದಹನ’ಕ್ಕಿಂತಲೂ ಗುಣಮೌಲ್ಯಗಳಲ್ಲಿ ಉತ್ತಮವಾಗಿದ್ದು ೧೯೧೮ರಲ್ಲಿ ಬಿಡುಗಡೆಯಾದಾಗ ವಿಶೇಷ ಲಾಭವನ್ನು ಗಳಿಸಿತು. ಅವರ ಮುಂದಿನ ಚಿತ್ರ ’ಕಾಳೀಯ ಮರ್ದನ’ವೂ ಬಹಳ ಜನಪ್ರಿಯವಾಗಿ ಲಾಭದಾಯಕವಾಯಿತು. ಈ ಚಿತ್ರದಲ್ಲಿ ಫಾಲ್ಕೆಯವರ ಮಗಳು ಮಂದಾಕಿನಿ ಕೃಷ್ಣನ ಪಾತ್ರದಲ್ಲಿ ಅತಿ ಮುದ್ದಾಗಿ ನಟಿಸಿ ಪ್ರೇಕ್ಷಕರನ್ನು ಮುಗ್ಧಗೊಳಿಸಿದಳು.

ಚಲನಚಿತ್ರದಿಂದ ಆಚೆಮತ್ತೆ ಚಲನಚಿತ್ರ

ಫಾಲ್ಕೆಯವರ ಜೀವನದಲ್ಲಿ ಏಳುಬೀಳುಗಳು ಹೆಚ್ಚು. ಬಹಳ ಕಷ್ಟವನ್ನು ಕಂಡು. ’ಲಂಕಾದಹನ’ದ ಚಿತ್ರ ನಂತರ ಮತ್ತೆ ಹಣ – ಕೀರ್ತಿಗಳನ್ನು ಸಂಪಾದಿಸಿದರು. ಆದರೆ ಮತ್ತೆ ಬೇಸರ ಕಾದು ಕುಳಿತಿತ್ತು. ಫಾಲ್ಕೆಯವರು ಲಾಭದ ದೃಷ್ಟಿಯಿಂದ ಚಲನಚಿತ್ರಗಳ ಪ್ರಪಂಚಕ್ಕೆ ಕಾಲಿಟ್ಟಿರಲಿಲ್ಲ. ಅವರಿಗೆ ಚಲನಚಿತ್ರ ಒಂದು ಕಲೆ. ಒಂದು ಸುಂದರ ಚಿತ್ರ ವನ್ನು ರಚಿಸಿದಾಗ ಚಿತ್ರಗಾರನಿಗಾಗುವ, ಮಾತಿನಲ್ಲಿ ವರ್ಣಿಸಲು ಸಾಧ್ಯವಿಲ್ಲದ ಆನಂದ-ತೃಪ್ತಿಗಳು, ಅವರಿಗೆ ಒಳ್ಳೆಯ ಚಿತ್ರವನ್ನು ತಯಾರಿಸಿ ಮುಗಿಸಿದಾಗ ದೊರೆಯುತ್ತಿದ್ದವು. ಚಿತ್ರ ಸುಂದರವಾಗಿರಬೇಕು, ನೋಡಿದವರಿಗೆ ನಿರ್ಮಲ ಸಂತೋಷ ಸಿಕ್ಕಬೇಕು ಎಂದು ಅವರ ಉದ್ದೇಶ. ಆದರೆ ಅವರ ಪಾಲುದಾರರಿಗೆ ಚಲನಚಿತ್ರ ಹಣ ಉದುರಿಸುವ ಗಿಡ. ಅವರಿಗೆ ಬೇಕಾದದ್ದು ಲಾಭ. ಇದರಿಂದ ಪಾಲುದಾರರಲ್ಲೇ ಮನಸ್ತಾಪವಾಯಿತು. ಫಾಲ್ಕೆಯವರಿಗೂ ಬೇಸರವಾಯಿತು.

ಬೇಸರಗೊಂಡು, ೧೯೧೯ರಲ್ಲಿ ಫಾಲ್ಕೆಯವರು ಕಂಪೆನಿಯಿಂದ ನಿವೃತ್ತರಾಗಿ ಕೆಲಕಾಲ ಕಾಶಿಗೆ ಹೋದರು. ರಂಗಭೂಮಿಯ ಕಡೆ ತಮ್ಮ ಆಸಕ್ತಿಯನ್ನು ತಿರುಗಿಸಿ ’ರಂಗಭೂಮಿ’ ಎಂಬ ಏಳು ಅಂಕಗಳ ನಾಟಕ ಒಂದನ್ನು ರಚಿಸಿದರು. ನಾಟಕ ಕಂಪೆನಿಯೊಂದನ್ನೂ ಕೆಲಕಾಲ ನಡೆಸಿದರು. ನಾಟಕ ವೃತ್ತಿಯಲ್ಲಿ ಅವರಿಗೆ ದುಡ್ಡೇನೂ ಹುಟ್ಟಲಿಲ್ಲ- ಅಂಥ ಯಶಸ್ಸೂ ದೊರೆಯಲಿಲ್ಲ.

ಏತನ್ಮಧ್ಯೆ, ಹಿಂದೂಸ್ಥಾನ್ ಫಿಲ್ಮ್ ಕಂಪೆನಿ, ಫಾಲ್ಕೆಯವರ ಪ್ರತಿಭೆ, ತಾಂತ್ರಿಕ ಜ್ಞಾನದ ನೆರವಿಲ್ಲದೆ ಹದಗೆಟ್ಟಿತ್ತು. ೧೯೨೨ರಲ್ಲಿ ಹಳೆಯ ಪಾಲುಗಾರರ ಒತ್ತಾಯದಿಂದ ಪುನಃ ಈ ಕಂಪೆನಿಯನ್ನು ಸೇರಿದರು. ಕಂಪೆನಿಯ ಬದಲಾಯಿಸಿದ ಕಟ್ಟುನಿಟ್ಟುಗಳು, ನೀತಿ ನಿಯಮಗಳಿಂದಾಗಿ, ಫಾಲ್ಕೆಯವರಿಗೆ ಹಳೆಯ ಹುರುಪಿನಿಂದ ಕೆಲಸ ಮಾಡಲು ಸಾಧ್ಯವಾಗಲಿಲ್ಲ. ಹೇಗೋ ಹಲ್ಲು ಕಚ್ಚಿಕೊಂಡು ಹತ್ತು ವರ್ಷಗಳ ಕಾಲ, ಈ ಕೆಲಸವನ್ನು ತಳ್ಳಿಕೊಂಡು ಬಂದರು. ಇಲ್ಲಿ ಫಾಲ್ಕೆಯವರೇ ಸುಮಾರು ನೂರು ಚಿತ್ರಗಳನ್ನು ತಯಾರಿಸಿದವರೆಂದು ಹೇಳುತ್ತಾರೆ.

ತಮ್ಮ ೬೨ನೆಯ ವಯಸ್ಸಿನಲ್ಲಿ ಈ ಕಂಪೆನಿಯಿಂದ ನಿವೃತ್ತರಾದಾಗ ಫಾಲ್ಕೆಯವರದು ಯಥಾಸ್ಥಿತಿ. ಕೈಯಲ್ಲಿ ಕಾಸಿರಲಿಲ್ಲ.

ಕಂಪೆನಿಯನ್ನು ಬಿಟ್ಟಮೇಲೆ, ಎನಾಮಲ್ ಬೋರ್ಡ್‌ಗಳನ್ನು ತಯಾರಿಸುವ ಕೆಲಸ ಆರಂಭಿಸಿದರು. ಆದರೆ ಯಶಸ್ವಿಯಾಗಲಿಲ್ಲ. ಆನಂತರ ಕೊಲ್ಹಾಪುರ್ ಸಿನೆಟೋನ್ ಕಂಪೆನಿಗೆ ’ಗಂಗಾವತರಣ’ ಎಂಬ ವಾಕ್ಚಿತ್ರವನ್ನು ತಯಾರಿಸಿದರು. ಈ ಚಿತ್ರದ ಬಗ್ಗೆ ಬರೆಯುತ್ತಾ “ಇದೇ ನನ್ನ ಕೊನೆಯ ಚಿತ್ರವಾಗಬಹುದು. ನನ್ನ ಚಿತ್ರಗಳನ್ನು ನಾನು ಅವುಗಳನ್ನು ತಯಾರಿಸಿದ ರೀತಿಯನ್ನು ಚೆನ್ನಾಗಿ ವಿಮರ್ಶಿಸಿ, ಟೀಕಿಸಿದರೆ ನನಗೆ ಬಲು ಸಂತೋಷ. ಉತ್ತಮ ವಿಮರ್ಶೆಯಿಂದಲೇ ಮುಂದೆ ಬರುವ ಚಿತ್ರಗಳು ಗುಣಮೌಲ್ಯಗಳಲ್ಲಿ ಹೆಚ್ಚು ಪ್ರಗತಿ ಮತ್ತು ಪ್ರಭಾವಯುತವಾಗುವುವು” ಎಂದು ಆಶಿಸಿದರು.

’ಗಂಗಾವತರಣ’ವೇ ಅವರ ಕೊನೆಯ ಚಿತ್ರವಾಯಿತು. ’ಗಂಗಾವತರಣ’ವನ್ನು ನಿರ್ದೇಶಿಸಿದಾಗ ಅವರಿಗೆ ೭೦ ವಯಸ್ಸು. ನಾಲ್ಕು ವರ್ಷಗಳ ನಂತರ ೧೯೪೪ರ ಫೆಬ್ರವರಿ ೧೬ ರಂದು ನಾಸಿಕ್‌ನಲ್ಲಿ ಮೃತರಾದರು.

ಫಾಲ್ಕೆಯವರ ಜೀವನದ ಕಡೆಯ ನಾಲ್ಕು ವರ್ಷಗಳು ಬಹು ಕಷ್ಟದ ಕಾಲ. ಕೈಯಲ್ಲಿ ಕಾಸಿರಲಿಲ್ಲ. ಬಹು ಬಡತನ. ಭಾರತಕ್ಕೆ ಚಲನಚಿತ್ರವನ್ನು ತಂದುಕೊಟ್ಟ ಈ ಸಾಹಿಸಿಯನ್ನು ರಸ್ತೆಯಲ್ಲಿ ಕಂಡರೆ, ಪರಿಚಿತರು ಮುಖ ತಿರುಗಿಸಿಕೊಂಡು ಹೋಗುತ್ತಿದ್ದರು.

ಹೀಗೆ ಸಾಹಸ, ಸಾಧನೆ, ದುರಂತ ಮಿಶ್ರಿತವಾದ ಕಥೆ, ಫಾಲ್ಕೆಯವರ ಜೀವನಕಥೆ.

ಅಮೋಘ ಜಯ

ಇಪ್ಪತ್ತೈದು ವರ್ಷಗಳ ಕಾಲ ಭಾರತೀಯ ಚಿತ್ರೋದ್ಯಮಕ್ಕಾಗಿ ದುಡಿದರು. ಅದನ್ನು ಪಾಲಿಸಿ, ಪೋಷಿಸಿ ಬೆಳೆಸಿದರು. ಅವರು ಎಡೆಬಿಡದೆ ಸಲ್ಲಿಸಿದ ಸೇವೆಯಲ್ಲಿ ಎಳ್ಳಷ್ಟೂ ಬಳಲಿಕೆಯಾಗಲೀ ಬೇಸರವಾಗಲೀ ಇರಲಿಲ್ಲ. ತಮಗೆ ಹಣ, ಕೀರ್ತಿ ಬರಬೇಕೆಂಬ ಆಸೆ ಇಲ್ಲದೆ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು.

ಸುಮಾರು ನೂರು ಕಥಾ ಚಿತ್ರಗಳು, ೨೦-೨೨ ಸಾಕ್ಷ್ಯ ಚಿತ್ರಗಳನ್ನು ತಯಾರಿಸಿದರು.

’ರಾಜಾ ಹರಿಶ್ಚಂದ್ರ’ ಚಿತ್ರದ ಒಂದೆರಡು ಭಾಗಗಳು ’ಸಿಂಹಸ್ಥಮೇಳ’ ಎಂಬ ಸಾಕ್ಷ್ಯಚಿತ್ರದ ಕೆಲವು ಭಾಗಗಳು, ’ಕಾಳೀಯ ಮರ್ದನ್’ ಚಿತ್ರದ ಬಹುಭಾಗ – ಇಷ್ಟೆ ಈಗ ನಮಗೆ ದೊರೆತಿರುವುದು. ಪೂನಾದ ’ನ್ಯಾಷನಲ್ ಫಿಲ್ಮ್‌ಆರ್ಕೈವ್ಸ್’ ಅವರ ಶ್ರದ್ಧೆ, ಶ್ರಮ ಪ್ರಯತ್ನಗಳಿಂದಾಗಿ ಇವು ನಮಗೆ ಉಳಿದುಬಂದಿವೆ. ಫಾಲ್ಕೆಯವರ ಇತರ ಚಿತ್ರಗಳೆಲ್ಲಾ ಕಣ್ಮರೆಯಾಗಿವೆ.

ಈ ಚೂರು-ಪಾರು ಉಳಿದಿರುವ ಚಿತ್ರಗಳನ್ನು ನೋಡುವುದುರಿಂದಲೂ, ಫಾಲ್ಕೆಯವರ ನಿರ್ದೇಶನದ ಸಾಮರ್ಥ್ಯ, ಅವರ ಛಾಯಾಗ್ರಹಣದ ಕೌಶಲ್ಯ, ಅವರ ಸರ್ವತೋಮುಖವಾದ ಪ್ರತಿಭೆಯ ಲಕ್ಷಣಗಳು ನಿಸ್ಸಂದೇಹ ವಾಗಿ ಅರಿವಾಗುತ್ತವೆ. ಅವರು ಶ್ರಮಿಸಿದ ಕಾಲ ಪರಕೀಯ ಸರ್ಕಾರ ದೇಶೀಯ ಉದ್ಯಮಗಳ ಬೆಳವಣಿಗೆಗೆ ಹೆಚ್ಚು ಅವಕಾಶವನ್ನು ಕೊಡಗೆ ಇದ್ದ ಯುಗ; ಸಿನಿಮಾ ’ಟೆಕ್ನಾಲಜಿ’ (ತಂತ್ರಜ್ಞಾನ) ಇನ್ನೂ ಶೈಶವಾವಸ್ಥೆಯಲ್ಲಿತ್ತು. ಇಂತಹ ಕಾಲದಲ್ಲಿ ಇವರು ಅಮೋಘವಾದ ಜಯವನ್ನು ಸಾಧಿಸಿದರು. ಅಮೆರಿಕದ ಡೇವಿಡ್ ವಾರ್ಕ್‌ಗ್ರಿಫಿತ್, ಸೋವಿಯತ್ ರಷ್ಯದ ಸರ್ಜಿ ಐಸೆನ್‌ಸ್ಟೈನ್‌, ಫ್ರಾನ್ಸಿನ ಲ್ಯೂಮಿಯೇರ್ ಸೋದರರು ಮತ್ತು ಜಾರ್ಜ್‌ಮೆಲಿಯಸ್ ಇಂತಹ ಅಗ್ರಗಾಮಿಗಳ ತಂಡಕ್ಕೆ ಸೇರಿದವರು ದಾದಾ ಸಾಹೇಬ್ ಫಾಲ್ಕೆ.

ಅಂದು ನೆಟ್ಟ ಸಸಿ

ಬಟಾಣಿ ಬೀಜ ಒಡೆದು ಮೊಳಕೆಯಾಗಿ ಸಸಿಯಾಗುವ ಚಿತ್ರವನ್ನು ತೆಗೆದಾಗ ಫಾಲ್ಕೆ ಭಾರತದಲ್ಲಿ ಚಲನಚಿತ್ರದ ಸಸಿಯನ್ನು ನೆಟ್ಟರು. ಇಂದು ಅದು ಬೃಹತ್ ವೃಕ್ಷವಾಗಿದೆ.

ನಾವು ಆಗಲೇ ಕಂಡಂತೆ ಭಾರತದಲ್ಲಿ ವರ್ಷಕ್ಕೆ ನಾಲ್ಕು ನೂರು ಚಿತ್ರಗಳು ತಯಾರಾಗುತ್ತವೆ. ಇದಕ್ಕಾಗಿ ಒಂದೂವರೆ ಲಕ್ಷ ಜನ ಕೆಲಸ ಮಾಡುತ್ತಾರೆ.

ಪ್ರತಿ ದಿನ ಭಾರತದಲ್ಲಿ ಆರೂವರೆ ಕೋಟಿ ಜನ ಚಲನಚಿತ್ರಗಳನ್ನು ನೋಡುತ್ತಾರೆ. ಏಳು-ಏಳುವರೆ ಸಾವಿರ ಚಲನಚಿತ್ರ ಮಂದಿರಗಳಿವೆ. ಇವುಗಳಲ್ಲಿ ಅರ್ಧಕ್ಕರ್ಧ ’ಟೆಂಟ್’ ಅಥವಾ ’ಟೂರಿಂಗ್’ ಸಿನಿಮಾಗಳ ಮಂದಿರಗಳು. ಚಲನಚಿತ್ರ ಮಂದಿರಗಳಲ್ಲಿ ಕೆಲವು ಬಹು ದೊಡ್ಡವು. ಹಲವು ಚಿಕ್ಕವು. ಸರಾಸರಿ ಆರು ನೂರ ಐವತ್ತು ಜನ ಕುಳಿತು ಚಲನಚಿತ್ರ ನೋಡಬಹುದು.

’ರಾಜಾ ಹರಿಶ್ಚಂದ್ರ’ ಚಿತ್ರಕ್ಕೆ ಕೆಲವು ಸಾವಿರ ರೂಪಾಯಿ ಗಳ ಬಂಡವಾಳ ಒದಗಿಸಿಕೊಳ್ಳಲು ಫಾಲ್ಕೆ ತುಂಬ ಕಷ್ಟಪಡಬೇಕಾಯಿತು. ಈಗ ಚಲನಚಿತ್ರಗಳ ಉದ್ಯುಮದ ಒಟ್ಟು ಬಂಡವಾಳ ಸುಮಾರು ೧೫೦ ಕೋಟಿ ರೂಪಾಯಿಗಳು. ಇದರಿಂದ ವರ್ಷಕ್ಕೆ ಆದಾಯ ಸುಮಾರು ೧೬೦ ಕೋಟಿ ರೂಪಾಯಿಗಳು. ಚಲನಚಿತ್ರಗಳನ್ನು ಪ್ರದರ್ಶಿಸುವ ಮಂದಿರಗಳು ಸರ್ಕಾರಕ್ಕೆ ಮನರಂಜನೆಯ ತೆರಿಗೆ ಕೊಡಬೇಕಲ್ಲ? ೧೯೭೦-೭೧ರಲ್ಲಿ ಈ ತೆರಿಗೆಯಿಂದ ಸರ್ಕಾರಕ್ಕೆ ಅರವತ್ತು ಕೋಟಿ ರೂಪಾಯಿಗಳಷ್ಟು ಹಣ ಬಂದಿತು.

ನಮ್ಮ ದೇಶದ ಚಲನಚಿತ್ರಗಳು ಬೇರೆ ದೇಶಗಳಿಗೆ ಹೋಗುತ್ತವೆ. ಇದರಿಂದ ನಮಗೆ ಆ ದೇಶಗಳ ಹಣ, ವಿದೇಶಿ ವಿನಿಮಯ ಬರುತ್ತದೆ. ೧೯೭೦-೭೧ ರಲ್ಲಿ ಹೀಗೆ ಬಂದ ಹಣ ಸುಮಾರು ಆರೂವರೆ ಕೋಟಿ ರೂಪಾಯಿ ಗಳು.

ಕನ್ನಡದಲ್ಲಿಯೇ ಪ್ರತಿ ವರ್ಷ ಇಪ್ಪತ್ತೈದರಿಂದ ಮೂವತ್ತೈದು ಚಲನಚಿತ್ರಗಳು ತಯಾರಾಗುತ್ತವೆ. ಸುಮಾರು ನಾಲ್ಕು ನೂರು ಚಲನಚಿತ್ರ ಮಂದಿರಗಳಿವೆ.ಇವುಗಳಲ್ಲಿ ಸುಮಾರು ಒಂದು ನೂರು ’ಟೆಂಟ್’ ಚಿಲನಚಿತ್ರ ಮಂದಿರಗಳು.

ಭಾರತೀಯ ಚಲನಚಿತ್ರ ಕ್ಷೇತ್ರದಲ್ಲಿ ಫಾಲ್ಕೆಯವರ ನೆನಪು, ಕೀರ್ತಿ ಅಕ್ಷಯ, ಅಮರ.