ಜನನ : ೩೧-೮-೧೯೩೮ ರಂದು ತಿಕೋಟಾ ಗ್ರಾಮ ವಿಜಾಪುರ.

ಮನೆತನ : ಕಲಾವಿದರ ಮನೆತನ. ತಂದೆ ಸಿದ್ರಾಮಪ್ಪ, ತಾಯಿ ದೊಡ್ಡಮ್ಮ.

ಶಿಕ್ಷಣ : ಸ್ವಾಧ್ಯಾಯಿ, ದೈವದತ್ತವಾಗಿ ಬಂದ ಕಲೆ, ಕನ್ನಡ ಕಾವ್ಯಗಳು ಹಾಗೂ ಶರಣ ಸಾಹಿತ್ಯಾಧ್ಯಯ ಮಾಡಿ ಕಥಾ ಕೀರ್ತನ ಕಲೆಯನ್ನು ಕರಗತ ಮಾಡಿಕೊಂಡವರು.

ಕ್ಷೇತ್ರ ಸಾಧನೆ : ಸುಮಾರು ನಲವತ್ತು ವರ್ಷಗಳಿಂದಲೂ ಕಥಾ ಕೀರ್ತನ ಕಲಾವಿದರಾಗಿ ಕಾರ್ಯಕ್ರಮ ನಡೆಸುತ್ತಾ ಬಂದಿದ್ದಾರೆ. ಧಾರವಾಡ ಆಕಾಶವಾಣಿ ಕೇಂದ್ರದಿಂದ ಇವರ ಕಾರ್ಯಕ್ರಮಗಳು ಪ್ರಸಾರವಾಗಿವೆ. ರಂಗಭೂಮಿಯಲ್ಲೂ ಸಾಕಷ್ಟು ಪರಿಶ್ರಮವಿದ್ದು ನಟರಾಗಿ ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ’ಭಾರತ ರತ್ನ’ ಚಲನಚಿತ್ರದಲ್ಲೂ ಕಿರುಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕೃತ ಕಲಾವಿದರಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಕಥಾ ಕೀರ್ತನೆಗಳ ಮೂಲಕ ಜನರಲ್ಲಿ ಸಾಮಾಜಿಕ ಪ್ರಜ್ಞೆ ಮೂಡಿಸುವಲ್ಲಿ ಶ್ರಮಿಸಿದ್ದಾರೆ. ಜಾನಪದ ಶೈಲಿಯ ಬಯಲಾಟಗಳಲ್ಲಿ ಪಾತ್ರ ವಹಿಸಿರುತ್ತಾರೆ.

ಅಮೂಲ್ಯ ಕಾಣಿಕೆ (ಕಥಾ ಸಂಕಲನ) ಭಾವ ಸೌರಭ (ಕವನ ಸಂಕಲನ), ವಚನಾಮೃತ, ಬಸವತತ್ವ ದರ್ಶನ, ಶರಣರು ನಕ್ಕಾಗ ಎಂಬ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಇವರ ಹರಿಕಥೆ, ಶಿವ ಕಥಾ ಪ್ರಸಂಗಗಳು ಧ್ವನಿ ಸುರುಳಿಯಾಗಿಯೂ ಮೂಡಿಬಂದಿವೆ.

ಪ್ರಶಸ್ತಿ – ಪುರಸ್ಕಾರಗಳು : ಹಲವಾರು ಜಂಗಮ ಮಠಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ನವ್ಯ ಕೀರ್ತನ ಕಲಾಕೇಸರಿ, ಪ್ರವಚನ ಪ್ರಭಾಕರ, ವಚನರಚನಾ ಚತರು ಮೊದಲಾದ ಬಿರುದುಗಳನ್ನು ಪಡೆದಿರುತ್ತಾರೆ. ೧೯೯೨ ರಲ್ಲಿ ಇವರ ೫೫ನೇ ಹುಟ್ಟು ಹಬ್ಬದ ಅಂಗವಾಗಿ ’ದಾನಸಿರಿ’ ಎಂಬ ಅಭಿನಂದನಾ ಗ್ರಂಥವನ್ನು ಪ್ರಕಟಿಸಿ ಅಭಿಮಾನಿಗಳು ಇವರಿಗೆ ಸಮರ್ಪಿಸಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ತನ್ನ ೧೯೯೩-೯೪ರ ಸಾಲಿನ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ  ನೀಡಿ ಗೌರವಿಸಿದೆ.