ದಾರಾ ಷುಕೋಷಹಜಹಾನನ ಹಿರಿಯ ಮಗ. ಚಕ್ರವರ್ತಿಯಾಗಬೇಕಾಗಿದ್ದವನು ತಮ್ಮ ಔರಂಗ್‌ಜೇಬನಿಂದ ಕೊಲೆಯಾದ. ಎಲ್ಲ ಧರ್ಮಗಳಲ್ಲಿ ಗೌರವವಿದ್ದ  ಈತನು ಹಿಂದೂಗಳ ಧರ್ಮಗ್ರಂಥಗಳನ್ನು ಆಳವಾಗಿ ಅಭ್ಯಾಸ ಮಾಡಿದ. ಯೋಗ ವಾಸಿಷ್ಠ, ಭಗವದ್ಗೀತೆ, ಉಪನಿಷತ್ತುಗಳು ಇಂತಹ ಕೃತಿಗಳನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿದ.

ದಾರಾ ಷುಕೋ

ಭಾರತೀಯ ಇತಿಹಾಸದಲ್ಲಿ ನೂರಾರು ಚಕ್ರವರ್ತಿಗಳು, ರಾಜರು, ರಾಜಕುಮಾರರು ಬಾಳಿ ಬದುಕಿದ್ದಾರೆ. ಇವರೆಲ್ಲರನ್ನೂ ಇತಿಹಾಸ ಜ್ಞಾಪಿಸಿಕೊಳ್ಳುವುದಿಲ್ಲ. ಆದರೆ ದಾರಾ ಷುಕೋ ಕೇವಲ ರಾಜಕುಮಾರನಾಗಿ ಬಾಳಿದವನು. ಚಕ್ರವರ್ತಿಯಂತೂ ಆಗಲೇ ಇಲ್ಲ. ಆದರೂ ನಮ್ಮ ಸಾಂಸ್ಕೃತಿಕ ಇತಿಹಾಸದಲ್ಲಿ ದಾರಾಷುಕೋನಿಗೆ ಬಲು ಗಣ್ಯವಾದ ಸ್ಥಾನವಿದೆ. ಅದಕ್ಕೆ ಕಾರಣವೆಂದರೆ ಅವನು ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಂಡು ಅದರ ಗುಣಗಳನ್ನು ಹೊಗಳಿ ಹಾಡಿದನು. ಎಲ್ಲ ಮತಧರ್ಮಗಳೂ ಸಮಾನವಾದವು; ಹಿಂದೂಗಳು ಮುಸ್ಲಿಮರು ಸಮಾನರು, ದೇವರು ಒಬ್ಬನೇ ಮುಂತಾದ ತತ್ವಗಳನ್ನು ತಿಳಿಯ ಹೇಳಿದ ವೇದಾಂತಿ. ಕೊಲೆ, ಸುಲಿಗೆ, ರಕ್ತಪಾತ, ಮೋಜಿನ ಜೀವನಗಳೇ ರಾಜ ಮಹಾರಾಜರ ಜೀವನಕ್ರಮವಾಗಿದ್ದ ಕಾಲದಲ್ಲಿ ದಾರಾ ಷುಕೋ ಪರಿಶುದ್ಧವೂ, ಸರಳವೂ, ಆಧ್ಯಾತ್ಮಿಕವೂ ಆದ ಜೀವನವನ್ನು ನಡೆಸಿ ಮೊಗಲ್ ಇತಿಹಾಸದಲ್ಲಿ ಅಪರೂಪವಾದ ಸುಸಂಸ್ಕೃತನೆನಿಸಿ ಕೊಂಡಿದ್ದಾನೆ. ಕಷ್ಟಗಳ ಮೇಲೆ ಕಷ್ಟಗಳು ಬಂದರೂ, ಅವುಗಳನ್ನು ಲೆಕ್ಕಿಸದೆ ತನ್ನ ಬಾಳನ್ನು ತತ್ವಶಾಸ್ತ್ರಕ್ಕೆ ಮುಡಿಪಾಗಿಟ್ಟ ದಾರಾಷುಕೋವಿನ ಕಥೆ ಬಲು ದಾರುಣವಾದುದು.

ಜನನ

ಮುನ್ನೂರೈವತ್ತು ವರ್ಷಗಳಿಗೂ ಹಿಂದಿನ ಮಾತು. ಅಜ್ಮೀರ್ ನಗರದಲ್ಲೆಲ್ಲೆಲ್ಲೂ ಸಂಭ್ರಮ, ಸಂತೋಷ. ಮೊಗಲ್‌ದೊರೆ ಯುದ್ಧದಲ್ಲಿ ಗೆದ್ದದ್ದು ಒಂದು ಕಾರಣ. ಅದಕ್ಕೂ ಮುಖ್ಯಕಾರಣವೆಂದರೆ, ೧೬೧೫ನೆಯ ಇಸವಿ ಮಾರ್ಚಿ ೨೦ನೆಯ ತಾರೀಖು ಸೋಮವಾರ ರಾತ್ರಿ ಷಹಜಹಾನನ ರಾಣಿಯಾದ ಮುಮ್ತಾಜ್ ಮಹಲಳು ಗಂಡುಮಗುವಿಗೆ ಜನ್ಮವಿತ್ತಳು. ಈ ಮಗುವಿಗೆ ಮಹಮ್ಮದ್ ದಾರಾ ಷುಕೋ ಎಂದು ಹೆಸರು ಇಟ್ಟರು. ಷಹಜಹಾನನ ಮೊದಲನೆಯ ಮಗನಾದುದರಿಂದ ಮುಂದೆ ಮೊಗಲ್ ಸಾಮ್ರಾಜ್ಯಕ್ಕೆ ಚಕ್ರವರ್ತಿಯಾಗುವವನಾದ್ದರಿಂದ ಅರಮನೆಯಲ್ಲಿ ಎಲ್ಲೆಲ್ಲೂ ಸಂತೋಷ. ಅಜ್ಜನಾದ ಜಹಾಂಗೀರನಿಗಂತೂ ವಿಶೇಷ ಸಂಭ್ರಮ. ಏಕೆಂದರೆ ಇವನೇ ಮೊದಲನೆಯ ಮೊಮ್ಮಗ. ಆದುದರಿಂದ ಈ ಹೊಸ ಮಗುವಿಗೆ ಮೊಗಲ್ ಸಾಮ್ರಾಜ್ಯದ ಗುಲಾಬಿ ಹೂ ಎಂಬ ಪ್ರೀತಿಯ ಅಡ್ಡಹೆಸರು. ಮಗುವು ಪ್ರೀತಿಯಿಂದ ಮುದ್ದಿನಲ್ಲಿ ಬೆಳೆಯತೊಡಗಿತು.

ವಿದ್ಯಾಭ್ಯಾಸ

ರಾಜಕುಮಾರನಿಗೆ ವಿದ್ಯಾಭ್ಯಾಸಕ್ಕಾಗಿ ಅಬ್ದುಲ್ ಲತೀಫ್ ಸುಲ್ತಾನ್‌ಪೂರಿ ಎಂಬುವನನ್ನು ನಿಯಮಿಸಲಾಯಿತು. ಈತನು ದಾರನಿಗೆ ಕುರಾನ್, ಪರ್ಷಿಯನ್ ಸಾಹಿತ್ಯ, ತೈಮೂರನ ಚರಿತ್ರೆಗಳನ್ನು ಹೇಳಿಕೊಟ್ಟನು. ತತ್ವಶಾಸ್ತ್ರದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಗುರುವು ದಾರನ ಮೇಲೆ ವಿಶೇಷಪ್ರಭಾವ ಬೀರಿದನು. ಬರವಣಿಗೆಯ ಕಲೆಯಲ್ಲಿ ಖ್ಯಾತನಾಗಿದ್ದ ಅಬ್ದುಲ್ ರಷೀದ್ ದ್ವೆಲೇಮಿಯು ಆ ಕಲೆಯನ್ನು ದಾರನಿಗೆ ಹೇಳಿಕೊಟ್ಟನು. ಇದರಿಂದ ಸುಂದರವಾಗಿ ಕಲಾತ್ಮಕವಾಗಿ ಬರೆಯುವ ಶಕ್ತಿಯನ್ನು ದಾರನು ಬೆಳೆಸಿಕೊಂಡನು. ಚುರುಕು ಬುದ್ಧಿಯ ಹುಡುಗನಾದುದರಿಂದ ಗುರುಗಳು ಹೇಳಿಕೊಟ್ಟ ಪಾಠಗಳನ್ನೆಲ್ಲ ಸುಲಭವಾಗಿ ಕಲಿತುಕೊಂಡು ಎಲ್ಲರ ಹೊಗಳಿಕೆಗೂ ಪಾತ್ರನಾದನು. ಆದರೆ ಬಾಲಕನ ಮನಸ್ಸು ಎಲ್ಲೆಲ್ಲಿಯೋ ಅಡ್ಡಾಡುತ್ತಿದ್ದಿತು. ರಾಜ್ಯಭಾರಕ್ಕೆ ಸಂಬಂಧಿಸಿದ ಪಾಠಗಳು ಇವನಿಗೆ ರುಚಿಸಲಿಲ್ಲ. ಧಾರ್ಮಿಕ ವಿಷಯಗಳಲ್ಲಿ ಇವನಿಗೆ ವಿಶೇಷ ಅಭಿರುಚಿ. ಅರಮನೆಯಲ್ಲಿ ಎಲ್ಲ ಭೋಗಭಾಗ್ಯಗಳನ್ನು ಹೊಂದಿದ್ದು ಸುಖವಾಗಿದ್ದರೂ, ಇವನ ಮನಸ್ಸಿಗೆ ಒಂದು ವಿಧವಾದ ಅತೃಪ್ತಿ. ಧರ್ಮದ ಆಚರಣೆಗಳಲ್ಲಿ ಕಂಡುಬಂದ ನಿರ್ಬಂಧಗಳನ್ನು ಕಂಡಾಗ ಇವನ ಮನಸ್ಸಿಗೆ ಕಸಿವಿಸಿ. ಕುರುಡುನಂಬಿಕೆಗಳನ್ನು ಹೊಂದಿದ ಧರ್ಮಾಚರಣೆಗಳಿಂದ ಏನೂ ಉಪಯೋಗವಿಲ್ಲ. ಇದರಲ್ಲಿ ಸ್ವಾತಂತ್ರ ಕ್ಕೆ ಅವಕಾಶವಿಲ್ಲ. ಮತಾಚರಣೆಗಳಲ್ಲಿ ಸಮಾನತೆಯಿಲ್ಲ. ಇವುಗಳಿಂದ ಏನು ಉಪಯೋಗ? ಹೀಗೆಲ್ಲ ಮುಗ್ಧ ಬಾಲಕ ದಾರನ ಮನಸ್ಸು ಕೇಳುತ್ತಿದ್ದಿತು.

ವಿವಾಹ

೧೬೨೮ರಲ್ಲಿ ಜಹಾಂಗೀರನ ಮರಣಾನಂತರ ಷಹಜಹಾನನು ಮೊಗಲ್ ಸಾಮ್ರಾಜ್ಯಕ್ಕೆ ಚಕ್ರವರ್ತಿಯಾದನು. ಕೂಡಲೆ ತನ್ನ ಮಕ್ಕಳಿಗೆ ರಾಜಕುಮಾರರ ಪದವಿಯನ್ನು ಕೊಟ್ಟನು. ಬಾಲಕನಾದ ದಾರನು ಮೊಗಲ್ ದರ್ಬಾರಿನಲ್ಲಿ ತನ್ನ ತಂದೆಯೂ ಚಕ್ರವರ್ತಿಯೂ ಆದ ಷಹಜಹಾನನಿಗೆ ನಜರನ್ನು ಒಪ್ಪಿಸಿದನು. ಷಹಜಹಾನ್ ಈ ಸಮಯದಲ್ಲಿ ದಾರನ ಖರ್ಚಿಗಾಗಿ ದಿನಕ್ಕೆ ಒಂದು ಸಾವಿರ ರೂಪಾಯಿಗಳು, ಎರಡು ಲಕ್ಷ ರೂಪಾಯಿಯ ಗೌರವಧನವನ್ನು ಕೊಟ್ಟನು. ಮುದ್ದಿನ ಮಗನಾದುದರಿಂದ ತಾನು ಹೋದಲ್ಲೆಲ್ಲ ದಾರನನ್ನು ಷಹಜಹಾನನು ಕರೆದುಕೊಂಡು ಹೋಗುತ್ತಿದ್ದನು. ೧೬೨೯ರಲ್ಲಿ ಷಹಜಹಾನನು ದಕ್ಷಿಣಕ್ಕೆ ದಂಡಯಾತ್ರೆ ಹೊರಟಾಗ, ದಾರನನ್ನು ತನ್ನ ಜೊತೆಯಲ್ಲೇ ಕರೆದುಕೊಂಡು ಹೋದನು. ಇದೇ ಸಮಯದಲ್ಲಿ ತಾಯಿಯಾದ ಮುಮ್ತಾಜಳು ದಾರನಿಗೆ ಮದುವೆಗಾಗಿ ಹೆಣ್ಣನ್ನು ನೋಡುತ್ತಿದ್ದಳು. ಸುಲ್ತಾನ್ ಪರವೇಜನ ಮಗಳಾದ ಕರೀಂ ಉನ್ನೀಸಾ ಅಥವಾ ನಾದಿರಬೇಗಂ ಎಂಬ ಅನುರೂಪಳಾದ ಕನ್ಯೆಯನ್ನು ಆರಿಸಿದಳು.

೧೬೩೨ರಲ್ಲಿ ನಾದಿರಬೇಗಂ ಜೊತೆಯಲ್ಲಿ ದಾರನ ವಿವಾಹ ನಡೆಯಿತು. ೩೨ ಲಕ್ಷ ರೂಪಾಯಿಗಳ ಖರ್ಚಿನಲ್ಲಿ ಅತ್ಯಂತ ವೈಭವದಿಂದ ಮದುವೆ ನಡೆಯಿತು. ಷಹಜಹಾನನ ಸಂತೋಷಕ್ಕಂತೂ ಪಾರವೇ ಇಲ್ಲ. ತನ್ನ ತಂದೆಯಾದ ಜಹಾಂಗೀರನು, ತನಗೆ ಮದುವೆಯ ಸಮಯದಲ್ಲಿ ಕೊಟ್ಟಿದ್ದ ಮುತ್ತಿನಹಾರವನ್ನೇ ದಾರನ ಕೊರಳಿಗೆ ಹಾಕಿದನು. ದೂರದ ಮತ್ತು ಹತ್ತಿರದ ದೇಶಗಳಿಂದ ಬಂದಿದ್ದ ಎಲ್ಲರಿಗೂ ಬೆಲೆಬಾಳುವ ಉಡುಗೊರೆಗಳನ್ನು ಕೊಡಲಾಯಿತು. ದಾರ ಮತ್ತು ನಾದಿರಾ ಗಂಡ ಹೆಂಡತಿಯರಾದರು. ಮೊಗಲರ ಅರಮನೆಯ ಅಂತಃಪುರದಲ್ಲಿ ಸಾವಿರಾರು ಹೆಣ್ಣುಗಳಿದ್ದರೂ ದಾರನು ಇನ್ಯಾರನ್ನೂ ಗಮನಿಸದೆ, ನಾದಿರಳ ಜೊತೆಯಲ್ಲಿ ಅನ್ಯೋನ್ಯವಾಗಿದ್ದು ಸುಖ ದುಃಖಗಳನ್ನು ಹಂಚಿಕೊಂಡನು. ಕಾಲಕ್ರಮದಲ್ಲಿ ಇವರಿಗೆ ಎಂಟು ಜನ ಮಕ್ಕಳು ಜನಿಸಿದರು.

ಆಡಳಿತ

ಷಹಜಹಾನನು ದಾರನಿಗೆ ಮೇಲುಮೇಲಿನ ಸ್ಥಾನಗಳನ್ನು ಕೊಟ್ಟು ೧೬೪೫ರಲ್ಲಿ ಅಲಹಾಬಾದಿಗೆ ಸುಬೇದಾರನನ್ನಾಗಿ ನಿಯಮಿಸಿದನು. ರಾಜಕೀಯ ಮತ್ತು ಆರ್ಥಿಕ ಕಾರಣಗಳಿಂದಾಗಿ ಅಲಹಾಬಾದ್ ಮುಖ್ಯವಲ್ಲದಿದ್ದರೂ ಹಿಂದೂ ಸಂಸ್ಕೃತಿಯ ಪವಿತ್ರಸ್ಥಾನ ಎಂಬ ಕಾರಣದಿಂದ ಅಲಹಾಬಾದ್ ದಾರನಿಗೆ ಅತಿಪ್ರಿಯವಾಯಿತು. ಇದಾದ ಎರಡು ವರ್ಷಗಳ ನಂತರ ಪಂಜಾಬ್ ಪ್ರಾಂತವೂ ಅವನಿಗೆ ಕೊಡಲ್ಪಟ್ಟಿತು. ಲಾಹೋರ್‌ನಗರವು ದಾರನಿಗೆ ಪ್ರಿಯವಾಯಿತು. ಇಲ್ಲಿ ಅವನು ಅನೇಕ ಜನೋಪಯೋಗಿ ಕಾರ್ಯಗಳನ್ನು ಕೈಗೊಂಡನು. ಹತ್ತಾರು ಮಾರುಕಟ್ಟೆಗಳನ್ನು ನಿರ್ಮಿಸಿದನು. ಇಂದಿಗೂ ಅಲ್ಲಿನ ಜನ ದಾರನನ್ನು ಸ್ಮರಿಸುತ್ತಾರೆ. ದಾರನಿಗೆ ಲಾಹೋರ್ ನಗರದಲ್ಲಿ ಮತ್ತೊಂದು ಆಸಕ್ತಿಯಿದ್ದಿತು. ಅದೇನೆಂದರೆ ಅಲ್ಲಿ ವಾಸವಾಗಿದ್ದ ಸಂತ ಮಿಯಾನ್ ಮೀರ್‌ನಿಂದ ದಾರನು ವಿಶೇಷವಾಗಿ ಪ್ರಭಾವಿತಗೊಂಡಿದ್ದನು. ಸಂತನ ಮರಣಾನಂತರ ಅಲ್ಲಿ ಅವನ ಗೋರಿಯನ್ನು ನಿರ್ಮಿಸಿದನು. ತನ್ನ ಹೆಂಡತಿತೀರಿಕೊಂಡಾಗ ಈ ಪವಿತ್ರ ಸ್ಥಳದಲ್ಲಿಯೇ ಗೋರಿಯನ್ನೂ ಮಾಡಿದನು.

ಅನಂತರ ದಾರನು ಗುಜರಾತಿಗೂ ಸುಬೇದಾರನಾದನು. ಅನಂತರ ಇವನ ಆಧಿಪತ್ಯಕ್ಕೆ ಕಾಬೂಲ್ ಮತ್ತು ಮುಲ್ತಾನ್‌ಗಳೂ ಸೇರಿಸಲ್ಪಟ್ಟವು. ಪರ್ಷಿಯನ್ನರು ಕಾಂದಹಾರ್‌ನಗರಕ್ಕೆ ಮುತ್ತಿಗೆ ಹಾಕುವ ಸೂಚನೆಗಳು ಕಂಡುಬಂದಾಗ ಷಹಜಹಾನನು ದಾರನನ್ನು ಅಲ್ಲಿಗೆ ಯುದ್ಧಕ್ಕಾಗಿ ಕಳುಹಿಸಿದನು. ಆದರೆ ಅಲ್ಲಿ ಯಾವ ಯುದ್ಧವೂ ನಡೆಯಲಿಲ್ಲ. ಹದಿನೈದು ದಿನಗಳು ಆರಾಮವಾಗಿದ್ದು ದಾರನು ಸೈನ್ಯಸಮೇತ ಹಿಂದಿರುಗಿದನು. ಮತ್ತೆ ಮೂರು ವರ್ಷಗಳ ನಂತರವೂ ಇದೇ ರೀತಿ ಕಾಂದಹಾರಿಗೆ ಹೋಗಿ ಹಿಂದಿರುಗಿದನು. ಮೂರನೆಯ ಸಾರಿ ಮಾತ್ರ ಮೊಗಲರಿಗೂ ಪರ್ಷಿಯನ್ನರಿಗೂ ಘೋರಯುದ್ದ ನಡೆಯಿತು. ಆದರೆ ಈ ಯುದ್ಧದಲ್ಲಿ ಮೊಗಲರು ಸೋತರು. ಇದು ದಾರನ ಜೀವನದ ಮೊದಲನೆಯ ಸೋಲು. ಷಹಜಹಾನನಿಗೆ ದಾರನಲ್ಲಿ ಅಪಾರ ಪ್ರೀತಿ ಮತ್ತು ವಿಶ್ವಾಸಗಳಿದ್ದುದರಿಂದ, ಸೋತು ಬಂದರೂ ವೀರೋಚಿತವಾದ ಸ್ವಾಗತವನ್ನು ದಾರನಿಗೆ ನೀಡಿದನು. ಮತ್ತು ಉಡುಗೊರೆಗಳನ್ನು ಕೊಟ್ಟನು. ಇದನ್ನು ನೋಡಿದ ದಾರನ ಸಹೋದರರಾದ ಷೂಜ, ಮುರಾದ್ ಮತ್ತು ಔರಂಗಜೇಬ್ ತಮ್ಮ ತಮ್ಮಲ್ಲೆ ಅಸೂಯೆಪಟ್ಟುಕೊಂಡರು.

ಮುಂದಿನ ಚಕ್ರವರ್ತಿ

ಮೊಗಲ್ ಸಾಮ್ರಾಜ್ಯದಲ್ಲಿ ಸಿಂಹಾಸನಕ್ಕೋಸ್ಕರ ಅಣ್ಣ ತಮ್ಮಂದಿರ ಕೊಲೆ, ಮಗನಿಂದ ತಂದೆಯ ಕೊಲೆ ಮುಂತಾದವು ಬಲು ಸಾಮಾನ್ಯವಾಗಿದ್ದವು. ಅದನ್ನು ಷಹಜಹಾನನು ತಿಳಿದೂ ಇದ್ದನು. ತನ್ನ ಮರಣಾನಂತರ ತನ್ನ ನಾಲ್ವರು ಮಕ್ಕಳು ಒಬ್ಬರಿಗೊಬ್ಬರು ಹೊಡೆದಾಡದೇ ಇರಲಿ ಎಂಬುದು ಅವನ ಆಶಯವಾಗಿತ್ತು. ಅದಕ್ಕಾಗಿ ತಾನು ಬದುಕಿರುವಾಗಲೆ ತನ್ನ ಉತ್ತರಾಧಿಕಾರಿಯನ್ನು ನಿಯಮಿಸಿದರೆ ಒಳ್ಳೆಯದು ಎಂದು ಷಹಜಹಾನನು ಭಾವಿಸಿದ್ದನು. ತನ್ನ ಅರವತ್ತೆ ದನೆಯ ಹುಟ್ಟುಹಬ್ಬದ ಸಮಯದಲ್ಲಿ ಮೊಗಲ್ ದರ್ಬಾರಿನಲ್ಲಿ ಎರಡೂವರೆ ಲಕ್ಷ ರೂಪಾಯಿ ಬೆಲೆ ಬಾಳುವ ಕಿಂಕಾಪಿನ ನಿಲುವಂಗಿಯನ್ನು ದಾರನಿಗೆ ತೊಡಿಸಿದನು. ನಾಲ್ಕೂವರೆಲಕ್ಷ ರೂಪಾಯಿ ಬೆಲೆಬಾಳುವ ಕಿರೀಟವನ್ನು ಅವನಿಗೆ ತೊಡಿಸಿದನು. ಅದು ಸಾಲದೆಂಬಂತೆ ೩೦ ಲಕ್ಷ ರೂಪಾಯಿಗಳನ್ನು ಉಡುಗೊರೆಯಾಗಿ ಕೊಟ್ಟನು. ಜೊತೆಗೆ ಷಾಹಿಬುಲಂದ್ ಇಕ್‌ಬಾಲ್ ಎಂಬ ಬಿರುದನ್ನು ಕೊಟ್ಟನು. ಸಭಾಸದರ ಮುಂದೆ ದಾರನನ್ನು ಉದ್ದೇಶಿಸಿ ಷಹಜಹಾನನು ‘‘ನನ್ನ ಮಗುವೆ, ಇನ್ನು ಮುಂದೆ ರಾಜ್ಯದ ಯಾವ ವ್ಯವಹಾರವನ್ನೇ ಆಗಲಿ- ನಿನಗೆ ತಿಳಿಯದಂತೆ ಮಾಡು ವುದಿಲ್ಲ. ಅವುಗಳಲ್ಲಿ ನಿನ್ನ ಸಲಹೆ ಪಡೆಯುತ್ತೇನೆ. ನಿನ್ನಂತಹ ಒಳ್ಳೆಯ ಮಗನನ್ನು ನನಗೆ ಕರುಣಿಸಿದ್ದಕ್ಕಾಗಿ ಅಲ್ಲಾನಿಗೆ ನಾನು ಎಷ್ಟು ಕೃತಜ್ಞತೆಯನ್ನು ಅರ್ಪಿಸಿದರೂ ಸಾಲದು’’ ಎಂದು ಹೇಳಿದನು. ಎಲ್ಲ ಸಾಮಂತರಾಜರು ದಾರನ ಅರಮನೆಗೆ ಹೋಗಿ ತಮ್ಮ ಗೌರವವನ್ನು ಸಲ್ಲಿಸಬೇಕೆಂದು ಆಜ್ಞೆ ಮಾಡಿದುದೇ ಅಲ್ಲದೆ ತಾನೇ ದಾರನ ಅರಮನೆಗೆ ಹೋಗಿ ಅವನನ್ನು ಅಭಿನಂದಿಸಿ ಬಂದನು. ಇದರಿಂದ ಷಹಜಹಾನನ ನಂತರ ದಾರನೇ ಮೊಗಲ್ ಚಕ್ರವರ್ತಿಯಾಗುತ್ತಾನೆಂಬುದು ಎಲ್ಲರಿಗೂ ತಿಳಿದಂತಾಯಿತು.

ವಿರೋಧ ಪ್ರಾರಂಭ

ಆದರೆ ವಿಧಿಯ ಕೈವಾಡ ಬೇರೊಂದು ತೆರನಾಗಿತ್ತು. ಷಹಜಹಾನನು ತನ್ನ ಇತರ ಗಂಡುಮಕ್ಕಳನ್ನು ಬೇರೆ ಬೇರೆ ಪ್ರಾಂತಗಳಿಗೆ ಸುಬೇದಾರರನ್ನಾಗಿ ನಿಯಮಿಸಿದನು. ಔರಂಗಜೇಬನನ್ನು ದಖ್ಖಣದ ರಾಜ್ಯಗಳಿಗೆ ರಾಜ್ಯಪಾಲನಾಗಿ ನಿಯಮಿಸಿದ್ದನು. ಔರಂಗಜೇಬನು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತಾನೇ ಚಕ್ರವರ್ತಿಯಾಗುವ ಸೂಚನೆಗಳು ಕಂಡುಬಂದವು. ಇದರಿಂದ ದಾರನಿಗೆ ತೊಂದರೆಯುಂಟಾಗುವುದನ್ನು ಗಮನಿಸಿದ ಷಹಜಹಾನನು ಔರಂಗಜೇಬನನ್ನು ದಕ್ಖಣದ ಅಧಿಕಾರದಿಂದ ತೆಗೆಯಬೇಕೆಂದು ಯೋಚಿಸಿದನು. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಮೊದಲೇ ಷಹಜಹಾನನಿಗೆ ತೀವ್ರತರವಾದ ಖಾಯಿಲೆಯುಂಟಾಯಿತು.

ತನ್ನ ತಂದೆಯ ಖಾಯಿಲೆಯಿಂದ ಉತ್ತೇಜಿತನಾದ ಔರಂಗಜೇಬನು ಇದೇ ತಕ್ಕ ಸಮಯವೆಂದು ತನ್ನ ಸಹೋದರರಾದ ಷೂಜ ಮತ್ತು ಮುರಾದರನ್ನು ಪುಸಲಾಯಿಸಿ ತನ್ನ ಗುಂಪಿಗೆ ಸೇರಿಸಿಕೊಂಡು, ದಾರನ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ಸಂಚು ನಡೆಸಲಾರಂಭಿಸಿದನು.

ಘರ್ಷಣೆ

ಇತ್ತ ಷಹಜಹಾನನ ಆರೋಗ್ಯ ತೀರ ಹದಗೆಡುತ್ತ ಬಂದಿತು. ಅವನು ಸತ್ತುಹೋದನೆಂಬ ಸುಳ್ಳು ಸುದ್ದಿಗಳು ಹುಟ್ಟಿದವು. ಆದರೆ ಇದರ ವಿರುದ್ಧವಾಗಿ ಷಹಜಹಾನನು ತನ್ನ ಮುಖ್ಯ ಅಧಿಕಾರಿಗಳನ್ನು ಕರೆದು ಇನ್ನು ಮುಂದೆ ಅವರು ದಾರಾ ಷುಕೋವಿಗೆ ವಿಧೇಯರಾಗಿರಬೇಕೆಂದು ಅಪ್ಪಣೆಮಾಡಿದನು. ೧೬೫೭ನೆಯ ಅಕ್ಟೋಬರ್ ತಿಂಗಳಲ್ಲಿ ಷಹಜಹಾನನು ದಿಲ್ಲಿಯಿಂದ ಆಗ್ರಾ ನಗರಕ್ಕೆ ಹೋದನು. ಆದರೆ ಔರಂಗಜೇಬ್, ಷೂಜ ಮತ್ತು ಮುರಾದರು ಈ ಸುದ್ದಿ ಸುಳ್ಳೆಂದು, ದಾರನೇ ರಾಜ್ಯವನ್ನು ಆಕ್ರಮಿಸಿಕೊಂಡು ಚಕ್ರವರ್ತಿ ಷಹಜಹಾನನನ್ನು ಬಂಧನದಲ್ಲಿ ಇರಿಸಿದ್ದಾನೆಂದು ವದಂತಿಗಳನ್ನು ಹಬ್ಬಿಸಿದರು. ಎಲ್ಲೆಲ್ಲೂ ಅಶಾಂತಿ ತಲೆದೋರಿತು. ಅಣ್ಣ ತಮ್ಮಂದಿರಲ್ಲಿ ರಾಜ್ಯಕ್ಕಾಗಿ ಯುದ್ಧ ಖಚಿತವಾಯಿತು.ಕೆಲವೇ ದಿನಗಳಲ್ಲಿ ಆ ಯುದ್ಧ ಪ್ರಾರಂಭವಾಯಿತು.

ಷೂಜನು ತಾನೇ ಚಕ್ರವರ್ತಿಯೆಂದು ಘೋಷಿಸಿಕೊಂಡನು. ದಾರನು ತನ್ನ ಮಗ ಸುಲೇಮಾನ್ ಷುಕೋನನ್ನು ಅವನ ಮೇಲೆ ಯುದ್ಧಕ್ಕೆ ಕಳುಹಿಸಿದನು. ಷೂಜನು ಸೋತರೂ ತಲೆ ತಪ್ಪಿಸಿಕೊಂಡು ಓಡಿಹೋದನು. ಆದರೆ ಔರಂಗಜೇಬ್ ಮತ್ತು ಮುರಾದ್ ಇಬ್ಬರೂ ಸೇರಿ ಧರ್ಮಾತ್ ಎಂಬಲ್ಲಿ ದಾರನ ಸೈನ್ಯವನ್ನು ಸೋಲಿಸಿದರು. ಇದರಿಂದ ಗಾಬರಿಗೊಂಡ ದಾರನು ತಾನೇ ಸೈನ್ಯಸಮೇತ ನಾಗಿ ಔರಂಗಜೇಬನ ಮೇಲೆ ಯುದ್ಧಕ್ಕೆ ಹೋದನು. ಆತನು ಹೊರಟಾಗ ಇದೇ ಕೊನೆಯ ಸಲವೋ ಎಂಬಂತೆ ಷಹಜಹಾನನು ದಾರನಿಗೆ ನಡುಗುವ ಕೈಗಳಿಂದ ಅನೇಕ ಉಡುಗೊರೆಗಳನ್ನು ಕೊಟ್ಟನು ಮತ್ತು ಆಶೀರ್ವಾದವನ್ನೂ ಮಾಡಿದನು. ಬಹಳಹೊತ್ತು ಅವನನ್ನು ಅಪ್ಪಿಕೊಂಡು ಕಣ್ಣೀರು ಸುರಿಸಿದನು. ಕೊನೆಗೆ ತನ್ನ ನಡುಗುವ ಕೈಗಳನ್ನು ಮೇಲೆತ್ತಿ ಮೆಕ್ಕಾಕಡೆಗೆ ತಿರುಗಿ ಕುರಾನನ್ನು ಪಠಿಸಿ ದಾರನಿಗೆ ಜಯ ಉಂಟಾಗಲೆಂದು ದೇವರನ್ನು ಪ್ರಾರ್ಥಿಸಿದನು. ಮೊಗಲ್ ಸೈನ್ಯವು ದಾರನ ನೇತೃತ್ವದಲ್ಲಿ ಹೊರಟಿತು. ದಾರನು ಕಣ್ಣಿನಿಂದ ಮರೆಯಾಗುವ ವರೆಗೆ ಷಹಜಹಾನನು ಅಲ್ಲಿಯೇ ನೋಡುತ್ತ ನಿಂತಿದ್ದನು. ಇದೇ ಷಹಜಹಾನನಿಗೆ ದಾರನ ಕೊನೆಯ ನೋಟವಾಯಿತು.

ಸೋಲು, ನೋವು

ದಾರನ ಸೈನ್ಯಕ್ಕೂ ಔರಂಗಜೇಬನ ಸೈನ್ಯಕ್ಕೂ ಸಮಗರ್ ಎಂಬಲ್ಲಿ ೧೬೫೮ ನೆಯ ಇಸವಿ ಮೇ ತಿಂಗಳ ೨೯ನೇ ತಾರೀಖು ಯುದ್ಧ ನಡೆಯಿತು. ಈ ಯುದ್ಧದಲ್ಲಿ ದಾರನು ಸೋತನು. ಇದರೊಂದಿಗೆ ಅವನ ಸೈನ್ಯವೂ ನಾಶವಾಯಿತು ಅದಕ್ಕಿಂತ ಹೆಚ್ಚಾಗಿ ಅವನ ಆತ್ಮಸ್ಥೆ ರ್ಯ ನಾಶವಾಯಿತು. ಅಲ್ಲಿಂದ ಅವನು ಓಡಿಹೋಗಿ ಒಂದು ಮರದ ಕೆಳಗೆ ದಣಿವಾರಿಸಿಕೊಳ್ಳಲು ಕುಳಿತನು. ಔರಂಗಜೇಬನ ಸೈನ್ಯವು ಅವನನ್ನು ಅಟ್ಟಿಸಿಕೊಂಡು ಬಂದಿತು. ಯಾರು ಎಷ್ಟೇ ಹೇಳಿದರೂ ಕೇಳದೆ ‘‘ಅಲ್ಲಾನ ಇಚ್ಛೆ ಹೇಗಿದೆಯೋ ಹಾಗಾಗಲಿ. ನಾಳೆ ಆಗಬೇಕಾದದ್ದು ಇಂದೇ ಆಗಲಿ’’ ಎಂದು ಕುಳಿತನು. ಕೊನೆಗೆ ತನ್ನ ಹೆಂಡತಿಯ ಬಲವಂತದಿಂದ ಅಲ್ಲಿಂದ ತಪ್ಪಿಸಿಕೊಂಡು ಆಗ್ರಾ ನಗರದಲ್ಲಿ ತನ್ನ ಅರಮನೆಯನ್ನು ಸೇರಿಕೊಂಡನು. ಇದನ್ನು ಕೇಳಿದ ಷಹಜಹಾನನು ದಾರನಿಗೆ ಹೇಳಿಕಳುಹಿಸಿ ತನ್ನನ್ನು ಬಂದು ನೋಡುವಂತೆ ಪ್ರಾರ್ಥಿಸಿಕೊಂಡನು. ಆದರೆ ದಾರನು ಒಪ್ಪಲಿಲ್ಲ. ಆಶಾಭಂಗವಾದ ದಾರನು ವೃದ್ಧನಾದ ತನ್ನ ತಂದೆಗೆ ಕಾಗದವನ್ನು ಬರೆದನು. ‘‘ಕೆಟ್ಟಮುಖದ ಈ ನನ್ನನ್ನು ಮತ್ತೆ ನೋಡುವ ಹಂಬಲವನ್ನು ದಯವಿಟ್ಟು ಇಟ್ಟುಕೊಳ್ಳಬೇಡಿ. ದಾರಿತಪ್ಪಿದ ಮತ್ತು ಜೀವಚ್ಛವವಾದ ನಾನು ಇನ್ನೂ ಬಹುದೂರ ಪ್ರಯಾಣಮಾಡಬೇಕಾಗಿದೆ. ಅದಕ್ಕಾಗಿ ತಮ್ಮ ಆಶೀರ್ವಾದಪೂರ್ವಕವಾದ ಬೀಳ್ಕೊಡುಗೆಯನ್ನು ಬೇಡುತ್ತೇನೆ’’ ಎಂದು ಬರೆದನು. ಎಲ್ಲರೂ ನಿದ್ರಿಸುತ್ತಿರುವಾಗ ರಾತ್ರಿ ಮೂರು ಘಂಟೆಗೆ ಎದ್ದು ತನ್ನ ಹೆಂಡತಿ ನಾದಿರ ಮತ್ತು ಮೊಮ್ಮಕ್ಕಳೊಡನೆ, ಕೆಲವು ಮಂದಿ ಸೈನಿಕರನ್ನು ಸೇರಿಸಿಕೊಂಡು ದೆಹಲಿಗೆ ಓಡಿ ಹೋದನು. ಇದಾದನಂತರ ಕೇವಲ ಐದು ದಿನಗಳಲ್ಲಿಯೇ ಆಗ್ರಾ ನಗರವು ಔರಂಗಜೇಬನ ವಶವಾಯಿತು. ಇದರಿಂದ ಕಂಗೆಟ್ಟ ದಾರನು ಲಾಹೋರಿಗೆ ಓಡಿಹೋದನು. ಇಲ್ಲಿಯೂ ಅನೇಕರು ದಾರನಿಗೆ ದ್ರೋಹ ಬಗೆದರು. ಈ ಪ್ರಾಂತವೂ ಔರಂಗಜೇಬನ ಸೈನಿಕರ ವಶವಾಯಿತು.

ಏಳುಬೀಳುಗಳು

ಅಲ್ಲಿಂದ ದಾರನು ಮುಲ್ತಾನಿಗೆ ಓಡಿಹೋದನು. ಅಲ್ಲಿನ ಭಕ್ಕರ್ ಕೋಟೆಯಲ್ಲಿ ಚಿನ್ನ, ಬೆಳ್ಳಿ ಮುಂತಾದ ವಸ್ತುಗಳನ್ನು ಇಟ್ಟು ಸಿಂಧೂನದಿಯ ತೀರದಲ್ಲೇ ಹೋಗಿ ಪರ್ಷಿಯದೇಶವನ್ನು ಸೇರುವ ಮಾರ್ಗದಲ್ಲಿ ತಂಗಿದನು. ಔರಂಗಜೇಬನ ಸೈನ್ಯವು ತನ್ನನ್ನೇ ಅಟ್ಟಿಸಿಕೊಂಡು ಬರುತ್ತಿರುವುದನ್ನು ತಿಳಿದ ದಾರನು ದೋಣಿಯಲ್ಲಿ ಕುಳಿತು ಕಚ್ ಪ್ರದೇಶವನ್ನು ಸೇರಿದನು. ಇಲ್ಲಿನ ರಾಜನು ದಾರನಿಗೂ ಅವನ ಪರಿವಾರದವರಿಗೂ ರಕ್ಷಣೆ ಒದಗಿಸಿದನು. ಹತಾಶನಾದ ದಾರನಿಗೆ ಮತ್ತೆ ಆಸೆ ಚಿಗುರಿತು. ಅಲ್ಲಿಂದ ಕಾಥೇವಾಡಕ್ಕೆ ಹೋಗಿ ಗುಜರಾತನ್ನು ತನ್ನ ವಶಪಡಿಸಿಕೊಂಡು ಅಹಮದಾಬಾದಿನಲ್ಲಿ ತಂಗಿದನು. ಅಲ್ಲಿಂದ ಮುಂದೆ ಹೋಗಿ ಬಿಜಾಪುರ, ಗೋಲ್ಕೊಂಡದ ಸುಲ್ತಾನರ ಸಹಾಯದಿಂದ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ದೃಷ್ಟಿಯಿಂದ ಆ ಕಡೆಗೆ ಹೊರಟನು. ಈ ಮಧ್ಯೆ ಔರಂಗಜೇಬನು ಷೂಜನಿಂದ ಪರಾಜಿತನಾದನೆಂಬ ಸುಳ್ಳು ಸುದ್ದಿಯು ಹರಡಿತು. ಇದು ನಿಜವೇ ಸುಳ್ಳೇ ಎಂದು ಪರೀಕ್ಷಿಸದೆ ದಾರನು ದಕ್ಖಣಕ್ಕೆ ಹೋಗುವುದನ್ನು ಬಿಟ್ಟು ರಾಜಪುತ್ರಸ್ಥಾನದ ಕಡೆಗೆ ತಿರುಗಿದನು. ಆದರೆ ರಜಪೂತ ಮುಖಂಡರ ಸಹಾಯ ಇವನಿಗೆ ದೊರಕಲಿಲ್ಲ. ಇಷ್ಟರಲ್ಲಿಯೇ ಔರಂಗಜೇಬನ ಸೈನ್ಯ ಕೇವಲ ಒಂದು ಮೈಲಿ ದೂರದಲ್ಲಿ ಬಂದು ದಾರನ ಸೈನ್ಯದ ಮೇಲೆ ನುಗ್ಗಿತು. ದಾರನ ಜೊತೆಯಲ್ಲಿದ್ದ ಸೈನಿಕರು ನಾಶವಾದರು. ದಾರನು ರಾತ್ರಿ ಎಂಟು ಘಂಟೆಯ ಕತ್ತಲಲ್ಲಿ ಹೆಂಡತಿ, ಮೊಮ್ಮಕ್ಕಳನ್ನು ಕರೆದುಕೊಂಡು ಯಾರಿಗೂ ತಿಳಿಯದಂತೆ ಗುಜರಾತಿನ ಕಡೆಗೆ ಓಡಿದನು.

ರಾತ್ರಿಯೆಲ್ಲ ಪ್ರಯಾಣಮಾಡಿ ಮಾರನೆ ದಿನ ದಾರಾ ಷುಕೋ ಮತ್ತು ಅವನ ಪರಿವಾರ ಜೋಧ್‌ಪುರವನ್ನು ತಲಪಿತು. ಆಗ ಅವರಲ್ಲಿ ಎರಡು ಸಾವಿರ ಯೋಧರು ಮತ್ತು ಒಬ್ಬನೇ ಒಬ್ಬ ಸೇನಾಪತಿ ಮಾತ್ರ ಇದ್ದರು. ಇವರ ಹಿಂದೆಯೇ ಔರಂಗಜೇಬನ ಸೈನ್ಯವೂ ಬಂದಿತು. ಈ ಸಾರಿ ಔರಂಗಜೇಬನು ದಾರನನ್ನು ಜೀವಂತವಾಗಿ ಇಲ್ಲವೇ ಮೃತನಾಗಿಯಾಗಲಿ ತರಲೇಬೇಕೆಂದು ಆಜ್ಞೆಮಾಡಿದ್ದನು. ದಾರನಿಗೆ ಆಶ್ರಯಕೊಟ್ಟವರನ್ನು ನಾಶಮಾಡುವುದಾಗಿ  ಔರಂಗಜೇಬನು ಸಾರಿದನು. ಇದರಿಂದಾಗಿ ದಾರನಿಗೆ ಆಶ್ರಯಸಿಕ್ಕುವುದು ಕಷ್ಟವಾಯಿತು. ಅಹಮದಾಬಾದಿನಲ್ಲಿ ದಾರನ ಕೆಲವು ಸೈನಿಕರು ಸೆರೆಹಿಡಿಯಲ್ಪಟ್ಟರು. ಆದುದರಿಂದ ದಾರನು ಕಾಡಿನೊಳಕ್ಕೆ ನುಗ್ಗಿದನು. ಅಲ್ಲಿ ದರೋಡೆಗಾರರ ಮುಖಂಡನಾದ ಕನ್ಹೋಜಿ ಎಂಬುವನು ದಾರನ ಕರುಣಾಜನಕವಾದ ಕಥೆಯನ್ನು ಕೇಳಿ ಅವನಿಗೆ ಆಶ್ರಯವನ್ನು ಕೊಟ್ಟು, ಅವನನ್ನು ಕಚ್ ಪ್ರದೇಶದ ವರೆಗೆ ತಲುಪಿಸಿದನು. ಹಿಂದೆ ದಾರನಿಗೆ ಇಲ್ಲಿಯೇ ಆಶ್ರಯಕೊಟ್ಟಿದ್ದ ಕಚ್ ಪ್ರದೇಶದ ರಾಜನು ತನ್ನ ಮನಸ್ಸನ್ನು ಬದಲಾಯಿಸಿಬಿಟ್ಟಿದ್ದನು. ಮನಸ್ಸಿಲ್ಲದಿದ್ದರೂ, ಅವನು ಎರಡು ದಿನಗಳ ಕಾಲ ದಾರನ ಪರಿವಾರವನ್ನು ಆದರಿಸಿ, ಅನಂತರ ಅವನನ್ನು ಮುಂದಕ್ಕೆ ಕಳುಹಿಸಿಕೊಟ್ಟನು.

ನಾನು ತಬ್ಬಲಿಯಾದೆ

ಈಗ ದಾರನಿಗೆ ತಪ್ಪಿಸಿಕೊಳ್ಳುವ ಯಾವ ದಾರಿಯೂ ಕಾಣಲಿಲ್ಲ. ಎಲ್ಲ ಕಡೆಯಲ್ಲಿಯೂ ಔರಂಗಜೇಬನ ಸೈನ್ಯಗಳು ಅವನನ್ನು ಸುತ್ತುವರಿದಿದ್ದವು. ಅವನಿಗೆ ಕಂಡ ಒಂದೇ ಮಾರ್ಗವೆಂದರೆ ಸಿಂಧೂನದಿಯನ್ನು ದಾಟಿ ಕಾಂದಹಾರಿನ ಮೂಲಕ ಪರ್ಷಿಯ ದೇಶಕ್ಕೆ ಓಡಿಹೋಗುವುದು. ಆದರೆ ಹೆಂಡತಿ ನಾದಿರ ಮತ್ತು ಪರಿವಾರದ ಇತರ ಸ್ತ್ರೀಯರು ಬೆಲೂಚಿಸ್ಥಾನದಲ್ಲಿ ತಮ್ಮ ಗತಿ ಹೇಗೋ ಎಂದು ಹೆದರಿದರು. ಅವರು ಇಲ್ಲಿಯೇ ಸಾಯಲು ಸಿದ್ಧರಾಗಿದ್ದರೇ ಹೊರತು ಪರ್ಷಿಯಕ್ಕೆ ಹೋಗಲು ಇಷ್ಟಪಡಲಿಲ್ಲ. ಜೊತೆಗೆ ನಾದಿರಬೇಗಂ ಖಾಯಿಲೆಯಿಂದ ನರಳುತ್ತಿದ್ದಳು. ಆದುದರಿಂದ ದಾರನು ಪರ್ಷಿಯ ದೇಶಕ್ಕೆ ಹೋಗುವುದನ್ನು ಕೈಬಿಡಬೇಕಾಯಿತು. ಇಷ್ಟರಲ್ಲಿಯೇ ದಾರನಿಗೆ ಬಲು ದೊಡ್ಡ ಆಘಾತವಾಯಿತು. ಅವನ ಹೆಂಡತಿ ನಾದಿರ ಮರಣ ಹೊಂದಿದಳು. ದಾರನಿಗೆ ಏನೇ ಕಷ್ಟ ಬಂದರೂ ಈಕೆ ಅವನ  ಜೊತೆಯಲ್ಲಿಯೇ ಇದ್ದು ಧೈರ್ಯಹೇಳುತ್ತಿದ್ದಳು. ಆಕೆಯ ಮರಣದಿಂದ ದಾರನು ತತ್ತರಿಸಿ ಹೋದನು. ‘‘ನಿಜವಾಗಿಯೂ ನಾನು ತಬ್ಬಲಿಯಾದೆ. ಆಕೆಯನ್ನು ಕಸಿದುಕೊಂಡು ದೇವರು ನನ್ನ ಸರ್ವಸ್ವವನ್ನೂ ಕಿತ್ತುಕೊಂಡನು’’ ಎಂದು ಹಲುಬಿದನು. ಆದರೆ ಮುಂದೆ ದಾರನಿಗಾದ ಗತಿಯನ್ನು ನೆನೆಸಿಕೊಂಡರೆ ನಾದಿರಳು ಮರಣಹೊಂದಿ ಅವಮಾನವನ್ನು ತಪ್ಪಿಸಿಕೊಂಡಳು ಎಂದೇ ಹೇಳಬೇಕು. ನಾದಿರಬೇಗಂ ಸಾಯುವುದಕ್ಕೆ ಮುಂಚೆ ತನ್ನ ಶರೀರವನ್ನು  ಹಿಂದೂಸ್ಥಾನಕ್ಕೆ ಕೊಂಡೊಯ್ದು, ಅಲ್ಲಿಯೇ ಗೋರಿಮಾಡಬೇಕೆಂದು ಪ್ರಾರ್ಥಿಸಿಕೊಂಡಳು. ಅದರಂತೆ ದಾರನು ಮಲ್ಲಿಕ್‌ಜೀವನ್ ಎಂಬ ಪಠಾಣನ ಸಹಾಯದಿಂದ ನಾದಿರಳ ಕಳೇಬರವನ್ನು ಲಾಹೋರಿಗೆ ಸಾಗಿಸಿ ಅಲ್ಲಿ ಗೋರಿಮಾಡಲು ಆಜ್ಞಾಪಿಸಿದನು.

ಸೆರೆ, ಅಪಮಾನ

ತನ್ನ ಅನುಯಾಯಿಗಳೆಲ್ಲರನ್ನೂ ಹಿಂದಕ್ಕೆ ಕಳುಹಿಸಿ ತಾನು ತನ್ನ ಮಗ ಸಿಫಿರ್ ಷುಕೋನೊಡನೆ ಪರ್ಷಿಯ ದೇಶಕ್ಕೆ ಹೋಗಬೇಕೆಂದು ದಾರನು ಮನಸ್ಸು ಮಾಡಿದನು. ಆದರೆ ಸ್ನೇಹಿತನಂತೆ ವರ್ತಿಸಿದ ಮಲ್ಲಿಕ್ ಜೀವನ್‌ಖಾನನು ದಾರನನ್ನು ಸೆರೆಹಿಡಿದು ಔರಂಗಜೇಬನ ಸೈನಿಕರಿಗೆ ಒಪ್ಪಿಸಿದನು. ವಿಧಿಯ ಲೀಲೆ. ಹಿಂದೆ ಇದೇ ಮಲ್ಲಿಕ್ ಜೀವನ್‌ಖಾನನನ್ನು ದಾರನು ಕಾಪಾಡಿ ಪ್ರಾಣದಾನ ಮಾಡಿದ್ದನು. ಆದರೆ ಈಗ ಅವನು ದಾರನಿಗೆ ದ್ರೋಹ ಬಗೆದನು. ಸೆರೆಸಿಕ್ಕಿದ ದಾರನನ್ನೂ, ಅವನ ಪರಿವಾರದವರನ್ನೂ ದೆಹಲಿಗೆ ಕರೆತಂದು ಜೈಲಿನಲ್ಲಿ ಇಡಲಾಯಿತು. ೧೬೫೯ನೆಯ ಇಸವಿ ಆಗಸ್ಟ್ ೨೯ನೇ ತಾರೀಖು ದಾರ ಮತ್ತು ಅವನ ಮಗ ಸಿಫಿರ್ ಷುಕೋ ಅವರಿಗೆ ಹರಕು ಬಟ್ಟೆಗಳನ್ನು ತೊಡಿಸಿ, ಕಾಲಿಗೆ ಸರಪಳಿಯನ್ನು ಬಿಗಿಸಿ, ಕೊಳಕಾದ ಆನೆಯ ಮೇಲೆ ಕೂರಿಸಿ, ಊರಿನಲ್ಲೆಲ್ಲ ಮೆರವಣಿಗೆ ಮಾಡಿದರು. ಇದೇ ರಸ್ತೆಗಳಲ್ಲಿ ಹಿಂದೆ ದಾರನು ವಜ್ರವೈಢೂರ‍್ಯಗಳಿಂದ ಅಲಂಕೃತನಾಗಿ ವೈಭವದಿಂದ ಮೆರವಣಿಗೆ ಹೋಗುತ್ತಿದ್ದನು. ಆಗ ಇವನು ಚಿನ್ನದ ನಾಣ್ಯಗಳನ್ನು ಭಿಕ್ಷುಕರಿಗೆ ದಾನ ಮಾಡುತ್ತಿದ್ದನು. ಆದರೆ ಈಗ ಅದೇ ದಾರನು ಭಿಕ್ಷುಕನ ವೇಷದಲ್ಲಿ ಅವಮಾನದಿಂದ ತಲೆಯನ್ನು ಮೇಲೆ ಎತ್ತಲಾರದೆ ಕುಳಿತಿದ್ದ ನೋಟ ಚಿಂತಾಜನಕವಾಗಿತ್ತು. ರಸ್ತೆಯಲ್ಲಿ ಹೋಗುತ್ತಿದ್ದ ಭಿಕ್ಷುಕನೊಬ್ಬನು ‘‘ಎಲೈ ರಾಜಕುಮಾರನೇ, ನೀನು ಪ್ರಭುವಾಗಿದ್ದಾಗ ನನಗೆ ಯಾವಾಗಲೂ ಭಿಕ್ಷೆಯನ್ನು ಹಾಕುತ್ತಿದ್ದೆ. ಆದರೆ ಇಂದು ನಿನ್ನಲ್ಲಿ ನನಗೆ ಕೊಡಲು ಏನು ಇಲ್ಲವಲ್ಲ’’ ಎಂದು ದುಃಖದಿಂದ ಕೂಗಿಕೊಂಡನು. ಇದೊಂದೇ ಸಲ ದಾರನು ತಲೆ ಎತ್ತಿ ಭಿಕ್ಷುಕನನ್ನು ನೋಡಿ, ತಾನು ಹೊದ್ದುಕೊಂಡಿದ್ದ ಹರಕಲು ಬಟ್ಟೆಯನ್ನೇ ಅವನ ಕಡೆಗೆ ಎಸೆದನು.

ಅಂತ್ಯ

ಈ ದಾರುಣ ದೃಶ್ಯವನ್ನು ನೋಡಿದ ಎಲ್ಲರ ಕಣ್ಣಲ್ಲೂ ನೀರು ಸುರಿಯುತ್ತಿತ್ತು. ‘‘ದೇವರು ನಿರ್ದಯಿ, ಅವನಿಗೆ ಕರುಣೆಯೇ ಇಲ್ಲ; ಇಂತಹ ಉತ್ತಮ ಮನುಷ್ಯನಿಗೆ ಈ ಸ್ಥಿತಿ ಬರಬಾರದಾಗಿತ್ತು’’ ಮುಂತಾಗಿ ಹಿಂದುಗಳು ಮುಸ್ಲಿಮರೆಂಬ ಭೇದವಿಲ್ಲದೆ ದಾರನಿಗಾಗಿ ಕಣ್ಣೀರು ಹಾಕಿದರು. ಒಳಗೊಳಗೆ ಗೋಳಿಟ್ಟರು. ಆದರೆ ಮಾತನಾಡಲು ಜನ ಹೆದರಿದರು. ಇದನ್ನು ಗಮನಿಸಿದ ಭಟರು ಔರಂಗಜೇಬನಿಗೆ ವರದಿ ಮಾಡಿದರು. ದಾರನ ಪರವಾಗಿ ಜನ ಇನ್ನೂ ಕಣ್ಣೀರು ಸುರಿಸಲು ಸಿದ್ಧರಾಗಿದ್ದಾರೆ; ಅವನಿಗೆ ಜನಗಳ ಸಹಾನುಭೂತಿ ಇದೆ ಎಂದು ತಿಳಿದ ಔರಂಗಜೇಬನು ತನ್ನ ಸಭಾಸದರನ್ನು ಕರೆಸಿದನು. ‘‘ಇಸ್ಲಾಂ ಧರ್ಮದ ಆಚರಣೆಗಳಿಗೆ ಮತ್ತು ನಿಯಮಗಳಿಗೆ ದಾರನು ಬದುಕಿರುವುದರಿಂದ ತೊಂದರೆಗಳು ಬಂದೊದಗಬಹುದು. ಆದುದರಿಂದ ಧರ್ಮ ಮತ್ತು ಮತವನ್ನು ರಕ್ಷಿಸುವ ಸಲುವಾಗಿಯೂ ಮತ್ತು ರಾಜ್ಯದ ಹಿತದೃಷ್ಟಿಯಿಂದಲೂ ದಾರನನ್ನು ಇನ್ನು ಮುಂದೆ ಜೀವಂತವಾಗಿ ಇಡುವುದು ನ್ಯಾಯವಾದುದಲ್ಲ’’ ಎಂದು ಚಕ್ರವರ್ತಿಯು ತೀರ್ಪು ನೀಡಿದನು. ದಾರನನ್ನು ಹಿಡಿದು ಕೊಟ್ಟ ಮಲ್ಲಿಕ್ ಜೀವನನನ್ನು ದರ್ಬಾರಿನಲ್ಲಿ ಸನ್ಮಾನಿಸಿ, ಅವನಿಗೆ ಬಿರುದನ್ನು ಔರಂಗಜೇಬನು ಕೊಟ್ಟನು.

ಇತ್ತ ಜೈಲಿನಲ್ಲಿ ದಾರನೂ ಅವನ ಮಗನಾದ ಸಿಫಿರ್ ಷುಕೋ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಕಣ್ಣೀರು ಸುರಿಸುತ್ತಾ ಕುಳಿತಿದ್ದರು. ಸೈನಿಕರು ಒಳ ನುಗ್ಗಿ ತಂದೆ ಮಗನ ಆಲಿಂಗನವನ್ನು ಮೊಟಕುಗೊಳಿಸಿ ದಾರನನ್ನು ಎಳೆದುಕೊಂಡು ಹೋದರು. ದಾರನ ರುಂಡ ಮುಂಡಗಳನ್ನು ಬೇರ್ಪಡಿಸಿ ಆನೆಯಮೇಲೆ ಮೆರವಣಿಗೆ ಮಾಡಲಾಯಿತು. ಈ ಹೃದಯ ವಿದ್ರಾವಕ ಘಟನೆಯನ್ನು ನೋಡಿ ಜನಗಳು ಮತ್ತೆ ಮತ್ತೆ ಅತ್ತರು. ದಾರನ ಶರೀರವನ್ನು ಯಾವ ವಿಧವಾದ ಧಾರ್ಮಿಕ ಆಚರಣೆಯೂ ಇಲ್ಲದೆ ಹುಮಾಯೂನನ ಗೋರಿಯ ಒಂದುಮೂಲೆಯಲ್ಲಿ ಸಮಾಧಿ ಮಾಡಲಾಯಿತು. ದಾರನ ಮೊದಲನೆಯ ಮಗ ಸುಲೇಮಾನ್ ಷುಕೋ ಮಿತ್ರದ್ರೋಹಕ್ಕೆ ಬಲಿಯಾಗಿ ಸೆರೆಸಿಕ್ಕಿದನು. ಅವನನ್ನು ಕೊಲೆ ಮಾಡಲಾಯಿತು.ಕೇವಲ ಮೂವತ್ತನೆಯ ವಯಸ್ಸಿನಲ್ಲಿ ಶೂರನೂ ಧೀರನೂ ಆದ ಸುಲೇಮಾನ್ ಷುಕೋವಿನ ಜೀವನ ಮುದುಡಿಹೋಯಿತು. ಮತ್ತೊಬ್ಬ ಮಗ ಸಿಫಿರ್ ಷುಕೋ ಹನ್ನೆರಡು ವರ್ಷಗಳ ಕಾಲ ಗ್ವಾಲಿಯರ್ ಜೈಲಿನಲ್ಲಿದ್ದು ಬಿಡುಗಡೆ ಹೊಂದಿದನು. ದಾರನ ಹೆಣ್ಣು ಮಕ್ಕಳಲ್ಲಿ ಕೆಲವರನ್ನು ಅಂತಃಪುರಕ್ಕೆ ಸೇರಿಸಲಾಯಿತು. ಹೀಗಾಗಿ ರಾಜ್ಯದ ಮೇಲಿನ ಆಸೆಯಿಂದ ತಮ್ಮನೇ ಅಣ್ಣನನ್ನೂ, ಅವನ ವಂಶವನ್ನೂ ನಿರ್ನಾಮಮಾಡಿದ ಹೃದಯವನ್ನು ಹಿಂಡುವ ದಾರುಣ ಕಥೆಯಿದು. ಷಹಜಹಾನನ ಮೊದಲನೆಯ ಮಗನಾಗಿ ಹುಟ್ಟಿದ ತಪ್ಪಿಗಾಗಿ, ಅವನು ಎಷ್ಟೇ  ಒಳ್ಳೆಯವನಾಗಿದ್ದರೂ ಕಷ್ಟನಷ್ಟಗಳನ್ನು ಅನುಭವಿಸಿ ತನ್ನ ಮತ್ತು ತನ್ನ ಕುಟುಂಬದವರ ಜೀವಗಳನ್ನೇ ಬಲಿಕೊಡಬೇಕಾಯಿತು.

ಹಿಂದೂಗಳ ಸಾಹಿತ್ಯ, ಸಂಸ್ಕೃತಿಯ ಅಭ್ಯಾಸ

ದಾರನು ಬಾಲಕನಾಗಿದ್ದಾಗಲೇ ಹಿಂದೂ ಸಾಹಿತ್ಯ, ಸಂಸ್ಕೃತಿ, ರಾಮಾಯಣ, ಮಹಾಭಾರತ, ವೇದಗಳು, ಉಪನಿಷತ್ತುಗಳು ಮುಂತಾದವುಗಳ ವಿಷಯದಲ್ಲಿ ಆಸಕ್ತಿ ತಳೆದಿದ್ದನು. ಹಿಂದೂ ತತ್ವಶಾಸ್ತ್ರದ ಆಳವನ್ನು ಮುಟ್ಟಬೇಕಾದರೆ ಅವರ ಪೂಜ್ಯಗ್ರಂಥಗಳಿಂದ ಮಾತ್ರ ಸಾಧ್ಯ ಎಂಬುದನ್ನು ದಾರನು ಚೆನ್ನಾಗಿ ಅರಿತಿದ್ದನು. ಇನ್ನೊಂದು ಮತದ ತತ್ವಗಳನ್ನು ಸ್ವತಃ ಅಭ್ಯಾಸ ಮಾಡದೆ ಅವುಗಳನ್ನು ವಿಮರ್ಶಿಸುವುದು, ತೆಗಳುವುದು ಸರಿಯಲ್ಲವೆಂಬುದು ದಾರನ ಭಾವನೆ. ಅದಕ್ಕಾಗಿ ಅವನು ಹಿಂದೂ ತತ್ವಶಾಸ್ತ್ರವನ್ನು ಅಭ್ಯಾಸ ಮಾಡುವುದಕ್ಕಾಗಿ ತನ್ನ ಹೆಚ್ಚಿನ ಸಮಯವನ್ನು ವಿನಿಯೋಗಿಸಿದನು. ಕಾಶಿ, ಅಲಹಾಬಾದ್ ಮುಂತಾದ ಪಟ್ಟಣಗಳ ಹಿಂದೂ ಪಂಡಿತರನ್ನೂ ಬರಮಾಡಿಕೊಂಡು ಅವರ ಸಹಾಯದಿಂದ ಸಂಸ್ಕೃತ ಗ್ರಂಥಗಳನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಕಲಿತನು. ಇವನ ಪರಿವಾರದಲ್ಲಿ ನೂರಾರು ಮಂದಿ ಸಂಸ್ಕೃತ ಪಂಡಿತರು ಇದ್ದು, ದಾರನು ಹೋದಲ್ಲೆಲ್ಲ ಅವನ ಜೊತೆಯಲ್ಲಿಯೇ ಇರುತ್ತಿದ್ದರು. ಇದು ಆ ಕಾಲದ ಅನೇಕರಿಗೆ ಸಹಿಸಲಾಗದ ಸಂಗತಿಯಾಗಿದ್ದರೂ ದಾರನಿಗೆ ಹೆದರಿ ಸುಮ್ಮನಿದ್ದರು.

ಪರ್ಷಿಯನ್ ಭಾಷೆಗೆ ಅನುವಾದಗಳು

ಮುಸಲ್ಮಾನರು ಹಿಂದೂ ಗ್ರಂಥಗಳಲ್ಲಿ ಅಡಗಿರುವ ತತ್ವಗಳನ್ನು ಅರ್ಥಮಾಡಿಕೊಳ್ಳಬೇಕು ಎಂಬುದು ದಾರನ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದ್ದಿತ್ತು. ಆದರೆ ಅವರಿಗೆ ಸಂಸ್ಕೃತ ಭಾಷೆಯ ಪರಿಚಯವಿಲ್ಲದೇ ಇದ್ದುದರಿಂದ ಇದಕ್ಕೆ ಅವಕಾಶವಿರಲಿಲ್ಲ. ಆದುದರಿಂದ ದಾರನು ಹಿಂದೂ ಮಹಾಗ್ರಂಥಗಳನ್ನು ಸಂಸ್ಕೃತದಿಂದ ಪರ್ಷಿಯನ್ ಭಾಷೆಗೆ ಭಾಷಾಂತರ ಮಾಡುವ ಕಾರ್ಯವನ್ನು ಕೈಗೊಂಡು ಹತ್ತಾರು ಗ್ರಂಥಗಳನ್ನು ಭಾಷಾಂತರಿಸಿದನು. ಭಗವದ್ಗೀತೆಯು ಹಿಂದೂಗಳ ಪೂಜ್ಯಗ್ರಂಥಗಳಲ್ಲೊಂದು ಮಾತ್ರವಲ್ಲದೆ, ಅವರ ಸಂಸ್ಕೃತಿಯ ಸಾರವೂ ಅದರಲ್ಲಿ ಅಡಗಿದೆ ಎಂಬುದನ್ನು ದಾರನು ಮನಗಂಡಿದ್ದನು. ಆದುದರಿಂದ ದಾರನು ಭಗವದ್ಗೀತೆಯನ್ನು ಪರ್ಷಿಯನ್ ಭಾಷೆಗೆ ಸುಂದರವಾಗಿ ಅನುವಾದ ಮಾಡಿದನು.

ಆಧ್ಯಾತ್ಮಿಕ ತತ್ವಗಳನ್ನು ವಿಶೇಷವಾಗಿ ಆಧರಿಸಿರುವ ಮತ್ತೊಂದು ಕೃತಿ ಎಂದರೆ ಪ್ರಬೋಧ ಚಂದ್ರೋದಯ. ಈ ಕೃತಿಯು ದಾರನನ್ನು ವಿಶೇಷವಾಗಿ ಆಕರ್ಷಿಸಿತು. ಆದುದರಿಂದ ದಾರನು ಭವಾನಿದಾಸ್ ಮತ್ತು ಜನವಾಲಿ ದಾಸ್ ಎಂಬಿಬ್ಬರ ಸಹಾಯದಿಂದ ಈ ಕೃತಿಯನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿಸಿದನು. ಈ ಗ್ರಂಥದ ಹೆಸರು ಗುಲ್ಜಾರ್-ಇ-ಹಲ್. ದಾರನು ಅನುವಾದ ಮಾಡಿಸಿದ ಮತ್ತೊಂದು ಮುಖ್ಯಕೃತಿಯೆಂದರೆ ಯೋಗವಾಸಿಷ್ಠ ರಾಮಾಯಣ. ಇದು ದಾರನಿಗೆ ವಿಶೇಷ ಪ್ರಿಯವಾಯಿತು. ಆದುದರಿಂದ ತನ್ನ ಸ್ವಂತ ಉಪಯೋಗಕ್ಕಾಗಿ ಈ ಕೃತಿಯನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿಸಿದ. ಇದರಲ್ಲಿ ಆಧ್ಯಾತ್ಮಿಕ ವಿಷಯದ ಚರ್ಚೆಗಳು ವಿಶೇಷವಾಗಿರುವುದರಿಂದ, ದಾರನು ಈ ಕೃತಿಯಲ್ಲಿ ವಿಶೇಷ ಆಸಕ್ತಿವಹಿಸಿದನು. ಈ ಕೃತಿಗೆ ದಾರನೇ ಮುನ್ನುಡಿಯನ್ನು ಬರೆದಿದ್ದಾನೆ. ಅದರಲ್ಲಿ ಅವನು ಹೇಳುವ ಒಂದು ಕಲ್ಪನೆ ಬಲು ಸುಂದರವಾದುದು. ‘‘ಈ ಪರ್ಷಿಯನ್ ಭಾಷೆಯ ಯೋಗವಾಸಿಷ್ಠವನ್ನು ಓದಿದ ಮೇಲೆ ಒಂದು ರಾತ್ರಿ ನನಗೊಂದು ಕನಸು ಬಿದ್ದಿತು. ಅಲ್ಲಿ ವಸಿಷ್ಠ ಮತ್ತು ಶ್ರೀರಾಮ ನಿಂತಿದ್ದರು. ವಸಿಷ್ಠನು ಪ್ರೀತಿಯಿಂದ ತನ್ನ ಕೈಗಳನ್ನು ನನ್ನ ಬೆನ್ನಿನ ಮೇಲೆ ಇಟ್ಟು, ಶ್ರೀರಾಮನಿಗೆ ಹೇಳಿದನು. ‘ಎಲೈ ರಾಮನೇ ಇವನೂ ನಿನ್ನಂತೆಯೇ ಸತ್ಯವನ್ನು ಹುಡುಕುತ್ತಿರುವ ನಿನ್ನ ತಮ್ಮ. ಇವನನ್ನು ಅಪ್ಪಿಕೊ.’ ಕೂಡಲೆ ಶ್ರೀರಾಮಚಂದ್ರನು ಬಲುಪ್ರೀತಿಯಿಂದ ನನ್ನನ್ನು ಗಾಢವಾಗಿ ಆಲಂಗಿಸಿಕೊಂಡನು ಎಂದು ದಾರನು ಈ ಗ್ರಂಥದ ಮುನ್ನುಡಿಯಲ್ಲಿ ಹೇಳಿಕೊಂಡಿದ್ದಾನೆ. ಇದು ದಾರನಿಗೆ ರಾಮಾಯಣ ಗ್ರಂಥದ ವಿಷಯದಲ್ಲಿ ಮತ್ತು ಶ್ರೀರಾಮನಲ್ಲಿ ಇದ್ದ ಭಕ್ತಿ, ಪ್ರೀತಿಗಳನ್ನು ವ್ಯಕ್ತಪಡಿಸುತ್ತದೆ.

ಉಪನಿಷತ್ತುಗಳ ಅನುವಾದ

ದಾರನ ಸಾಂಸ್ಕೃತಿಕ ಸಾಧನೆಗಳಿಗೆ ಕಳಶ ಪ್ರಾಯವಾದುದು ಅವನು ಐವತ್ತೆರಡು ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ಅನುವಾದ ಮಾಡಿದುದು. ‘ಸಿರ್-ಇ-ಅಕ್ಬರ್’ (ಮಹಾರಹಸ್ಯ) ಅಥವಾ ‘ಸಿರ್-ಉಲ್- ಅಸ್ರಾರ್’ (ರಹಸ್ಯಗಳಲ್ಲಿ ರಹಸ್ಯ) ಎಂಬ ಹೆಸರಿನಿಂದ ಈ ಭಾಷಾಂತರ ಗಳು ಪ್ರಸಿದ್ಧಿ ಪಡೆದಿವೆ. ಇದು ತಿಳಿಯಾದ ಸುಲಭವಾಗಿ ಅರ್ಥವಾಗಬಲ್ಲ ಪರ್ಷಿಯನ್ ಗದ್ಯ ಶೈಲಿಯಲ್ಲಿದೆ. ಇದಕ್ಕಾಗಿ ಅವನು ಕಾಶಿಯ ನೂರೈವತ್ತು ಸಂಸ್ಕೃತ ಪಂಡಿತರನ್ನು ನಿಯಮಿಸಿ, ತಾನೂ ಅವರ ಜೊತೆಯಲ್ಲಿಯೇ ಕುಳಿತು, ಅವರ ಸಹಾಯದಿಂದ ಐವತ್ತೆರಡು ಮುಖ್ಯ ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ಭಾಷಾಂತರ ಮಾಡಿದನು. ಈ ಮಹಾಕಾರ್ಯವು ೧೬೫೭ನೆಯ ಇಸವಿ ಜೂನ್ ೨೮ನೇ ತಾರೀಖು ಕೊನೆಗೊಂಡಿತು. ದೆಹಲಿಯಲ್ಲಿ ಎಲ್ಲೆಲ್ಲೂ ಸುಡುವ ಬೇಸಗೆ. ಷಹಜಹಾನನು ಈ ಬೇಸಗೆಯ ಬೇಗೆಯನ್ನು ತಡೆಯಲಾರದೆ ದೆಹಲಿಯಿಂದ ದೂರ ಹೋಗಬೇಕೆಂದು ತೀರ್ಮಾನಿಸಿದನು. ಆದರೆ ದಾರನು ಈ ಬೇಸಿಗೆಯನ್ನು ಲೆಕ್ಕಿಸದೆ ತನ್ನ ತಂದೆಯ ಜೊತೆಗೆ ಹೋಗದೆ, ಭಾಷಾಂತರ ಕಾರ್ಯವನ್ನು ಮುಗಿಸಿದನು. ಈ ಮಹಾಗ್ರಂಥದ ಮುನ್ನುಡಿಯಲ್ಲಿ ‘‘ಇದನ್ನು ನಾನೇ ಪರ್ಷಿಯನ್ ಭಾಷೆಗೆ ಅನುವಾದ ಮಾಡಿದ್ದೇನೆ. ಈ ಉಪನಿಷತ್ತುಗಳು ದೇವರು ಒಬ್ಬನೇ ಎಂದು ಸಾರಿಹೇಳುವ ಮಹಾಗಣಿಗಳು. ಒಂದು ಚೂರು ಹೆಚ್ಚಿಲ್ಲದೆ, ಕಡಮೆಯಿಲ್ಲದೆ, ಯಾವ ಸ್ವಾರ್ಥವೂ ಇಲ್ಲದೆ, ಪದಕ್ಕೆ ಪದ, ವಾಕ್ಯಕ್ಕೆ ವಾಕ್ಯವಾಗಿ ಈ ಭಾಷಾಂತರವನ್ನು ಮಾಡಿದ್ದೇನೆ’’ ಎಂದು ದಾರನೇ ಹೇಳಿದ್ದಾನೆ. ಈ ಗ್ರಂಥವನ್ನು ಓದಿದವರು ಇದು ಸಂಪೂರ್ಣವಾಗಿ ಸತ್ಯ ಎಂದು ಹೇಳಿ, ಇದನ್ನು ಮೆಚ್ಚಿಕೊಂಡಿದ್ದಾರೆ. ಹತ್ತಾರು ವ್ಯಕ್ತಿಗಳು ಮಾಡುವ ಈ ಭಾಷಾಂತರ ಕಾರ್ಯವನ್ನು ದಾರನು ಒಬ್ಬನೇ ಮಾಡಿ ಮುಗಿಸಿದ್ದು ಅವನ ಕಾರ್ಯಸಾಧನಾ ಶಕ್ತಿಯನ್ನು ಸೂಚಿಸುತ್ತದೆ.

ಉಪನಿಷತ್ತುಗಳು ಸುಲಭವಾಗಿ ಅರ್ಥವಾಗುವ ಗ್ರಂಥಗಳೇನಲ್ಲ. ಆಧ್ಯಾತ್ಮಿಕ ತತ್ವಗಳನ್ನು ತಿಳಿಯಹೇಳುವುದು ಕಷ್ಟಕರವಾದ ಕೆಲಸ. ಅನೇಕ ಸಮಯಗಳಲ್ಲಿ ಕಷ್ಟವಾದ ಪದಗಳಿಗೆ ಅರ್ಥವನ್ನು ಹೇಳುವುದು ಬಲು ಪ್ರಯಾಸದ ಕೆಲಸ. ಇಂತಹ ಪರಿಸ್ಥಿತಿಯು ದಾರನಿಗೆ ಅನೇಕ ಕಡೆಗಳಲ್ಲಿ ಒದಗಿತು. ಇಂತಹ ಸಂದಿಗ್ಧ ಪರಿಸ್ಥಿತಿಗಳಲ್ಲಿ ದಾರನು ಶಂಕರಾಚಾರ್ಯರು ಉಪನಿಷತ್ತುಗಳ ಮೇಲೆ ಬರೆದ ಭಾಷ್ಯಗಳನ್ನು ಓದಿ, ಅರ್ಥವನ್ನು ಸಮರ್ಪಕವಾಗಿ ತಿಳಿದುಕೊಂಡು ಪರ್ಷಿಯನ್ ಭಾಷೆಗೆ ತರ್ಜುಮೆ ಮಾಡಿದ್ದಾನೆ. ಹಾಗೆಯೆ ಕೆಲವು ಕಡೆಗಳಲ್ಲಿ ಮುಸ್ಲಿಮರಿಗೆ ಸುಲಭವಾಗಿ ಅರ್ಥವಾಗುವಂತಹ ಪದಗಳನ್ನು ಬಳಸಿದ್ದಾನೆ. ಹಿಂದೂ ತತ್ವಶಾಸ್ತ್ರದಲ್ಲಿ ಆಳವಾದ ಪಾಂಡಿತ್ಯವಿಲ್ಲದವರೂ ಈ ಪರ್ಷಿಯನ್ ಭಾಷಾಂತರವನ್ನು ಸುಲಭವಾಗಿ ಓದಿ ಅರ್ಥಮಾಡಿಕೊಳ್ಳಬಹುದು ಎಂಬುದು ಈ ಕೃತಿಯ ಹೆಚ್ಚಳ. ಎರಡು ಬೇರೆ ಬೇರೆ ಧರ್ಮಗಳ ಗ್ರಂಥಗಳನ್ನು ತುಲನಾತ್ಮಕವಾಗಿ ನೋಡುವ ದಾರನ ಈ ಮನೋಭಾವ ಆ ಕಾಲಕ್ಕೆ ಅಸಾಧಾರಣ ಎನ್ನಬಹುದು. ಈ ಗ್ರಂಥಗಳಲ್ಲೆಲ್ಲ ತನ್ನ ಹೆಸರನ್ನು ದಾರಾ ಷುಕೋ ಎಂದು ಹೇಳಿಕೊಂಡಿದ್ದಾನೆ.

ಸ್ವತಂತ್ರ ಗ್ರಂಥಗಳು

ದಾರನು ಕೆಲವು ಸ್ವತಂತ್ರ ಗ್ರಂಥಗಳನ್ನು ಪರ್ಷಿಯನ್ ಭಾಷೆಯಲ್ಲಿ ರಚಿಸಿದನು. ಇವೆಲ್ಲವೂ ವಿಶೇಷವಾಗಿ ಅಧ್ಯಾತ್ಮಕ್ಕೆ ಸಂಬಂಧಪಟ್ಟವು. ದಾರನಿಗೆ ಸೂಫಿ ಧರ್ಮದಲ್ಲಿ ವಿಶೇಷ ಆಸಕ್ತಿ ಇದ್ದುದರಿಂದ ಈ ಗ್ರಂಥಗಳಲ್ಲಿ ಇದರ ತತ್ವಗಳನ್ನು ಹೇಳಿದ್ದಾನೆ. ದಾರನು ಕೇವಲ ಇಪ್ಪತ್ತನಾಲ್ಕು ವರ್ಷದವನಾಗಿದ್ದಾಗಲೆ ತನ್ನ ಮೊದಲನೆಯ ಪರ್ಷಿಯನ್ ಗ್ರಂಥವನ್ನು ರಚಿಸಿದನು. ಇದು ಮುಸ್ಲಿಮ್ ಸಂತರ ಜೀವನಚರಿತ್ರೆಯನ್ನು ತಿಳಿಸುತ್ತದೆ. ಮೂರು ವರ್ಷಗಳ ನಂತರ ದಾರನು ತಾನು ವಿಶೇಷವಾಗಿ ನಂಬಿಕೊಂಡಿದ್ದ ಲಾಹೋರಿನ ಸಂತ ಮಿಯಾನ್ ಮೀರನ ಜೀವನಚರಿತ್ರೆಯನ್ನು ಬರೆದನು. ಇವನ ಮೂರನೆಯ ಗ್ರಂಥದಲ್ಲಿ ಸೂಫಿತತ್ವಗಳು ವಿಶೇಷವಾಗಿ ಹೇಳಲ್ಪಟ್ಟಿವೆ. ಭಗವಂತನ ಪ್ರೇರಣೆಯಿಂದ ತಾನು ಈ ಪುಸ್ತಕವನ್ನು ಬರೆದುದಾಗಿ ದಾರನು ಹೇಳಿಕೊಂಡಿದ್ದಾನೆ. ಇವನು ಬರೆದ ನಾಲ್ಕನೆಯ ಪರ್ಷಿಯನ್ ಪುಸ್ತಕವೆಂದರೆ ‘ಮಜ್ಮುವ-ಉಲ್-ಬಹರೇನ್’ ಅಂದರೆ ಎರಡು ಸಾಗರಗಳ ಮಿಲನ. ಇದು ಹಿಂದೂ ಮತ್ತು ಇಸ್ಲಾಮ್ ಧರ್ಮಗಳನ್ನು ತುಲನಾತ್ಮಕ ದೃಷ್ಟಿಯಿಂದ ಪರಿಶೀಲಿಸುವ ಮುಖ್ಯಗ್ರಂಥ. ಇವನ ಮತ್ತೊಂದು ಗ್ರಂಥ ‘ತರಿಕತ್-ಉಲ್-ಅರಿಫಿಲ್’ ನಲ್ಲಿ ಸರ್ವದೈವ ಸಮಭಾವನೆಯ ತತ್ವಗಳು ಸುಂದರವಾಗಿ ಮತ್ತು ಸರಳವಾಗಿ ನಿರೂಪಿತವಾಗಿವೆ. ದಾರನು ಇನ್ನೂ ಹತ್ತಾರು ಗ್ರಂಥಗಳನ್ನು ಬರೆದಿದ್ದಾನೆಂದೂ, ಅವೆಲ್ಲವೂ ನಮಗೆ ದೊರಕಿಲ್ಲವೆಂದೂ ಚರಿತ್ರಕಾರರು ಭಾವಿಸಿದ್ದಾರೆ.

ಜೀವನದ ರೀತಿ

ದಾರನು ಯಾವಾಗಲೂ ಸಾಧುಸಂತರ ಇಲ್ಲವೇ ಧಾರ್ಮಿಕ ಗುರುಗಳ ಸಂಪರ್ಕ ಹೊಂದಿದ್ದು ಅದರಲ್ಲಿಯೇ ಸುಖವನ್ನು ಕಾಣುತ್ತಿದ್ದನು. ದಿನದಲ್ಲಿ ಕೆಲವು ಘಂಟೆಗಳಾದರೂ ಅವರ ಸಾನ್ನಿಧ್ಯದಲ್ಲಿ ಕಳೆಯದೇ ಹೋದರೆ ಅವನಿಗೆ ಸಮಾಧಾನವೇ ಇರುತ್ತಿರಲಿಲ್ಲ. ಸೂಫಿ ಸಂತ ಲಾಹೋರಿನ ಸಂತ ಮಿಯಾನ್ ಮೀರ್‌ನಲ್ಲಿ ದಾರನಿಗೆ ವಿಶೇಷ ಗೌರವವಿದ್ದಿತು. ಅನೇಕ ಸಾರಿ ಅಲ್ಲಿಗೆ ಹೋಗಿ ಸೂಫಿ ಪಂಥದ ತತ್ವಗಳನ್ನು ಚರ್ಚಿಸುತ್ತಿದ್ದನು. ಅದೇ ರೀತಿ ತನ್ನ ಜೀವನದ ಕೊನೆಯವರೆಗೆ ದಾರನು ಸಂಪರ್ಕ ಹೊಂದಿದ್ದ ಮತ್ತೊಬ್ಬ ಸಂತನೆಂದರೆ ಮೌಲಾನ ಷಹಬದಕ್ಷಿ. ಇವನೂ ದಾರನ ಮೇಲೆ ವಿಶೇಷಪ್ರಭಾವ ಬೀರಿದನು.

ದಾರನು ಸೂಫಿ ತತ್ವಗಳಲ್ಲಿ ನಂಬಿಕೆ ಹೊಂದಿದ್ದರೂ, ಅವುಗಳನ್ನು ತನ್ನ ಆಧ್ಯಾತ್ಮಿಕ ಜೀವನಕ್ಕೆ ಒರೆಹಚ್ಚಿ ನೋಡಿ ಅನಂತರ ಬೋಧಿಸುತ್ತಿದ್ದನು. ಇವುಗಳಲ್ಲಿ ಉಪನಿಷತ್ತುಗಳ  ಪ್ರಭಾವ ಎದ್ದು ಕಾಣುತ್ತದೆ. ದಾರನು ಪ್ರಾಣಾಯಾಮವೇ ಮೊದಲಾದ ಯೋಗದ ಅಭ್ಯಾಸಗಳನ್ನು ಮಾಡುತ್ತಿದ್ದನು.

ಎಲ್ಲ ಧರ್ಮಗಳ ತಿರುಳೂ ಒಂದೇ ಎಂಬುದು ದಾರನ ಮುಖ್ಯಭಾವನೆ. ಅದಕ್ಕಾಗಿ ಅವನು ಎಲ್ಲ ಧರ್ಮಗಳ ತತ್ವಗಳನ್ನೂ ಅಭ್ಯಾಸ ಮಾಡಿದನು. ಆದರೆ ಉಪನಿಷತ್ತುಗಳು ದಾರನ ಮೇಲೆ ವಿಶೇಷ ಪರಿಣಾಮವನ್ನು ಬೀರಿದವು. ಉಪನಿಷತ್ತಿನಲ್ಲಿ ಕಾಣಬರುವ ಆತ್ಮನ ವರ್ಣನೆಯನ್ನು ದಾರನ ಆನೇಕ ಪದ್ಯಗಳಲ್ಲಿ ಕಾಣುತ್ತೇವೆ. ಉದಾಹರಣೆಗೆ ಈ ಪದ್ಯವನ್ನು ನೋಡಿ:

ನೀನು ಕಾಬದಲ್ಲಿಯೂ ಇರುತ್ತೀ
ಸೋಮನಾಥದೇಗುಲದಲ್ಲಿಯೂ ಇರುತ್ತೀ
ದೀಪವೂ ನೀನೇ; ಪತಂಗವೂ ನೀನೇ
ಬುದ್ಧಿವಂತನೂ ನೀನೇ; ಮಂಕನೂ ನೀನೇ
ಸ್ನೇಹಿತನೂ ನೀನೇ; ಅಪರಿಚಿತನೂ ನೀನೇ
ಗುಲಾಬಿಯೂ ನೀನೇ; ಸುಗಂಧವೂ ನೀನೇ
ನಾನು ನೀನೇ; ನೀನೂ ನೀನೇ
ನಾನೂ ನೀನೂ ಇಬ್ಬರೂ ನೀನೇ

ಬಾಬಾಲಾಲನೊಡನೆ

ಲಾಹೋರಿನಲ್ಲಿ ಬಾಬಾಲಾಲ್ ಎಂಬ ಹಿಂದೂ ಸಂತನಿದ್ದನು. ಅವನು ಚೇತನಸ್ವಾಮಿಯ ಶಿಷ್ಯ. ತನ್ನ ಒಳ್ಳೆಯ ನಡತೆ ಮತ್ತು ಬೋಧನೆಗಳಿಂದ ಬಾಬಾಲಾಲ್ ಆ ಕಾಲದಲ್ಲಿ ವಿಶೇಷ ಖ್ಯಾತಿಗಳಿಸಿದ್ದನು. ಇವನ ವಿಷಯವು ದಾರನಿಗೂ ತಿಳಿಯಿತು. ಕೂಡಲೇ ಇವನು ಲಾಹೋರಿಗೆ ಹೋಗಿ ಅಲ್ಲಿ ಹದಿನೈದು ದಿನಗಳ ಕಾಲ ತಂಗಿ ಬಾಬಾಲಾಲನೊಡನೆ ಪ್ರತಿನಿತ್ಯವೂ ಧರ್ಮದ ವಿಚಾರಗಳನ್ನು ಕುರಿತು ಚರ್ಚೆಯನ್ನು ಮಾಡುತ್ತಿದ್ದನು. ದಾರನು ಕೇಳಿದ ಪ್ರಶ್ನೆಗಳಿಗೆ ಬಾಬಾಲಾಲನು ಉತ್ತರಗಳನ್ನು ಕೊಡುತ್ತಿದ್ದನು. ಇವುಗಳಲ್ಲಿ ಕೆಲವನ್ನು ಗಮನಿಸೋಣ.

ದಾರ: ನಾದ ಮತ್ತು ವೇದಗಳಿಗಿರುವ ವ್ಯತ್ಯಾಸವೇನು?

ಬಾಬಾ: ರಾಜ ಮತ್ತು ಅವನು ಹೊರಡಿಸುವ ಆಜ್ಞೆ-ಇವೆರಡರಲ್ಲಿ ಏನು ವ್ಯತ್ಯಾಸವಿದೆಯೊ, ಅದೇ ನಾದ-ವೇದಗಳಿಗಿರುವ ವ್ಯತ್ಯಾಸ.

ದಾರ: ಹಿಂದೂಗಳು ವಿಗ್ರಹಗಳನ್ನು ಏಕೆ ಪೂಜಿಸುತ್ತಾರೆ?

ಬಾಬಾ: ನಿಜವಾದ ಸತ್ಯವನ್ನು ತಿಳಿದವನಿಗೆ ವಿಗ್ರಹ ಬೇಕಿಲ್ಲ. ಆದರೆ ಆ ಸತ್ಯವನ್ನು ತಿಳಿಯದವರಿಗೆ, ಅಂದರೆ ಜನ ಸಾಮಾನ್ಯರಿಗೆ, ಆ ದೇವರ ಅರಿವನ್ನು ಮೂಡಿಸಲು ವಿಗ್ರಹಗಳು ಬೇಕು. ಮದುವೆಯಾಗದ ಚಿಕ್ಕಹುಡುಗಿಯು ಬೊಂಬೆಯೊಡನೆ ಆಟವಾಡುತ್ತಾಳೆ. ಆದರೆ ದೊಡ್ಡವಳಾಗಿ ಮದುವೆಯಾದ ಮೇಲೆ ಅವಳಿಗೆ ಬೊಂಬೆ ಬೇಕಿಲ್ಲ. ಅದೇ ರೀತಿ ವಿಗ್ರಹ ಪೂಜೆಯೂ ಕೂಡ. ಸತ್ಯದ ಆಳದವರೆಗೆ ಹೋಗುವವರೆಗೆ ವಿಗ್ರಹ ಬೇಕು. ಆಳವನ್ನು ತಲಪಿದ ನಂತರ ಅದು ಬೇಕಿಲ್ಲ.

ದಾರ: ಸೃಷ್ಟಿಕರ್ತನಿಗೂ ನಮಗೂ ಇರುವ ವ್ಯತ್ಯಾಸವೇನು?

ಬಾಬಾ: ಸೃಷ್ಟಿಕರ್ತನು ಸಮುದ್ರವಿದ್ದಂತೆ. ನಾವು ಆ ಸಮುದ್ರದಿಂದ ತೆಗೆದುಕೊಂಡು ಬಂದ ಒಂದು ಲೋಟ ನೀರಿದ್ದಂತೆ. ಎರಡೂ ನೀರು ಒಂದೇ ಆದರೂ ನಮಗೆ ಬೇರೆ ಬೇರೆಯಾಗಿ ಕಾಣುತ್ತದೆ.

ದಾರ: ಪರಮಾತ್ಮ ಮತ್ತು ಜೀವಾತ್ಮಗಳಿಗಿರುವ ವ್ಯತ್ಯಾಸವೇನು?

ಬಾಬಾ: ಹೊರಗಡೆ ಬೇರೆ ಎಂದು ಕಂಡರೂ, ಆಂತರಿಕವಾಗಿ ಇಬ್ಬರಿಗೂ ಏನೂ ವ್ಯತ್ಯಾಸವಿಲ್ಲ.

ದಾರ: ಆಕಾಶವು ಮಾತ್ರ ಒಂದೇ, ಆದರೆ ಕಿವಿ ಮತ್ತು ಕಣ್ಣುಗಳು ಎರಡೆರಡು. ಏಕೆ?

ಬಾಬಾ: ಕಣ್ಣುಗಳು ಎರಡಾದರೂ, ಅವು ನೋಡುವುದು. ಒಂದೇ ಚೈತನ್ಯವನ್ನು; ಕಿವಿಗಳು ಎರಡಾದರೂ ಅವು ಕೇಳುವುದು ಒಬ್ಬನೇ ಭಗವಂತನ ನಾಮಸ್ಮರಣೆಯನ್ನು.

ದಾರ: ಜೀವಾತ್ಮ ಪರಮಾತ್ಮಗಳೆರಡೂ ಒಂದೇ ಎಂದು ನೀವು ಹೇಳಿದರೂ ನಮ್ಮ ಕಣ್ಣಿಗೆ ಹಾಗೆ ಕಾಣುವುದಿಲ್ಲವೇಕೆ?

ಬಾಬಾ: ಅವುಗಳೆರಡನ್ನು ನಾವು ನೋಡುವ ವಿಧಾನದಲ್ಲಿ ನಿಜವಾದ ತತ್ವ ಅಡಗಿದೆ. ಒಂದು ಹೂಜಿಯಲ್ಲಿ ಗಂಗೆಯ ನೀರನ್ನು ತುಂಬಿಟ್ಟು, ಅದರಲ್ಲಿ ಒಂದು ಹನಿ ಮದ್ಯವನ್ನು ಬೆರೆಸಿದರೆ, ಆ ನೀರೆಲ್ಲವೂ ಮಲಿನವಾಯಿತೆಂದು ಭಾವಿಸುತ್ತೇವೆ. ಅದಕ್ಕೆ ವಿರುದ್ಧವಾಗಿ, ಸಾವಿರಾರು ಹೂಜಿ ಮದ್ಯವನ್ನು ಗಂಗಾನದಿಯಲ್ಲಿ ಸುರಿದರೂ, ಗಂಗೆಯ ನೀರು ಪವಿತ್ರವಾಗಿಯೇ ಉಳಿಯುತ್ತದೆ. ಅದೇ ರೀತಿ ಪರಮಾತ್ಮನನ್ನು ನೆನೆಯುವುದು ನಿತ್ಯವೂ ಶುದ್ಧವಾದುದು. ಆದರೆ ಜೀವಾತ್ಮನೆನ್ನುವುದು ಈ ಶರೀರದಿಂದ ಕಲುಷಿತಗೊಂಡಿರುವುದು. ಈ ಶರೀರವನ್ನು ಬಿಟ್ಟ ತಕ್ಷಣ ಅದು ಪರಮಾತ್ಮನನ್ನೇ ಸೇರುತ್ತದೆ.

ದಾರ: ಹಾಗಾದರೆ ಹುಟ್ಟಿದ ಪ್ರತಿಯೊಬ್ಬನೂ ಮುಕ್ತಿಯನ್ನು ಪಡೆದು ಪರಮಾತ್ಮನನ್ನು ಸೇರುತ್ತಾನೆಯೇ?

ಬಾಬಾ: ಯಾರು ಆಸೆಯೆಂಬ ಬಂಧನದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆಯೋ, ಅವರು ಅದರಿಂದ ಈಚೆಗೆ ಬರದೆ ಅಲ್ಲಿಯೇ ಒದ್ದಾಡುತ್ತಿರುತ್ತಾರೆ. ಆಸೆಯನ್ನು ಬಿಟ್ಟು, ಸನ್ಯಾಸಿಯಂತೆ ಜೀವನವನ್ನು ಯಾರು ನಡೆಸುತ್ತಾರೋ, ಅವರಿಗೆ ಯಾವ ಬಂಧನಗಳೂ ಇಲ್ಲದೆ, ಅಂತಹವರು ಮೋಕ್ಷವನ್ನು ಸುಲಭವಾಗಿ ಪಡೆಯುತ್ತಾರೆ. ಅವರ ಜೀವಾತ್ಮ ಪರಮಾತ್ಮನನ್ನು ಸೇರುತ್ತದೆ.

ಈ ರೀತಿ ನೂರಾರು ಪ್ರಶ್ನೆಗಳನ್ನು ಕೇಳಿದ ದಾರನು ಬಾಬಾಲಾಲನು ಕೊಟ್ಟ ಉತ್ತರಗಳಿಂದ ಸಂತೋಷಗೊಂಡು, ಅವನಿಗೆ ನಮಸ್ಕಾರ ಮಾಡಿ, ಗೌರವಿಸಿ, ಅವನ ಆಶೀರ್ವಾದವನ್ನು ಪಡೆದು ಲಾಹೋರಿನಿಂದ ತನ್ನ ರಾಜಧಾನಿಗೆ ಪ್ರಯಾಣ ಬೆಳೆಸಿದನು. ಈ ಪ್ರಶ್ನೆಗಳನ್ನು ನೋಡಿದರೆ ದಾರನು ಹಿಂದು ತತ್ವಶಾಸ್ತ್ರದ ತಳಹದಿಯನ್ನು ತಿಳಿದುಕೊಳ್ಳಲು ಎಷ್ಟೊಂದು ಕಾತುರನಾಗಿದ್ದನು ಎಂಬುದು ಗೊತ್ತಾಗುತ್ತದೆ.

ದಾರನ ದೃಷ್ಟಿಯಲ್ಲಿ ದೇವರು ಒಬ್ಬನೇ; ಅವನನ್ನು ಅನೇಕ ಹೆಸರುಗಳಿಂದ ಬೇರೆ ಬೇರೆಯವರು ಕರೆಯುತ್ತಾರೆ. ಎಲ್ಲ ಧರ್ಮಗಳು ಒಂದೇ; ಎಲ್ಲ ಮತಗಳೂ ಒಂದೇ; ಇರುವುದು ಒಂದೇ ಒಂದು ಮತ, ಒಂದೇ ಒಂದು ಧರ್ಮ; ಒಬ್ಬನೇ ದೇವರು. ಇದೇ ದಾರನು ಜಗತ್ತಿಗೆ ಸಾರಿದ ಮಹಾತತ್ವ.

ದಾರಾನ ಅನಂತರ ಬಂದ ಅನೇಕರು ಇದೇ ತತ್ವವನ್ನು ಸಾರಿದರು.

ಹಿಂದೂ ಹೇಳುತ್ತಾನೆ, ನಾನು ಹೆಚ್ಚು, ಮುಸ್ಲಿಮ ನೆನ್ನುತ್ತಾನೆ, ನಾನೇ ಹೆಚ್ಚು

ಕಾಳಿನ ಎರಡು ಭಾಗಗಳಿದ್ದಂತೆ ಅವರಿಬ್ಬರೂ

ಆಗ ಯಾರು ಹೆಚ್ಚು, ಯಾರು ಕಡಮೆ?

ಒಬ್ಬ ರಾಮಭಕ್ತ, ಮತ್ತೊಬ್ಬ ರಹೀಮಭಕ್ತ

ಇಬ್ಬರೂ ಒಂದೇ ಸಾಗರದಲ್ಲಿ ಸೇರುತ್ತಾರೆ.

ಇದೇ ದಾರನೂ ಬೋಧಿಸಿದ ನಿತ್ಯಸತ್ಯ.

ಮೊಗಲ್ ಸಾಮ್ರಾಜ್ಯದಲ್ಲಿ ಸಾಕಷ್ಟು ಧನರಾಶಿಯಿದ್ದಿತು. ಶೂರರೂ ಧೀರರೂ ಇದ್ದರು. ರಾಜ್ಯಗಳನ್ನು ಗೆದ್ದ ಚಕ್ರವರ್ತಿಗಳಿದ್ದರು. ನೂರಾರು ಸುಂದರ ಕಟ್ಟಡಗಳನ್ನು ನಿರ್ಮಿಸಿದ ವಾಸ್ತುಪ್ರೇಮಿಗಳೂ ಇದ್ದರು. ಇವರಿಗೆಲ್ಲರಿಗೂ ಭಿನ್ನನಾಗಿ ಭಿನ್ನಧರ್ಮಗಳಲ್ಲಿ ಸಮಾನತೆಯನ್ನು ಕಂಡವನು, ಮಾನವತಾವಾದವನ್ನು ಎತ್ತಿಹಿಡಿದ ದಾರಾ ಷುಕೋ. ಇತರ ಮತದ ಹೆಸರನ್ನು ಹೇಳುವುದೂ ಮಹಾಪಾಪ ಎನ್ನುವ ಸಮಯದಲ್ಲಿ ಹಿಂದೂ ಮತದ ತತ್ವಗಳನ್ನು ಓದಿ ತಿಳಿದುಕೊಂಡು, ಅವುಗಳಲ್ಲಿ ಪ್ರೀತಿ, ವಿಶ್ವಾಸ, ಗೌರವ ಬೆಳೆಸಿಕೊಂಡು, ಅದರಂತೆ ಬಾಳಿದ ದಾರನ ಜೀವನ ಭಾರತೀಯ ಇತಿಹಾಸದಲ್ಲಿ ಮರೆಯಲಾಗದ ಅಧ್ಯಾಯ. ದಾರನಂತಹ ವಿಶಾಲ ಹೃದಯಿಗಳು ಬಹುಮಂದಿ ಹುಟ್ಟಿದ್ದರೆ ಭಾರತೀಯ ಇತಿಹಾಸ ಬೇರೆ ದಿಕ್ಕಿನಲ್ಲಿ ಹರಿಯುತ್ತಿದ್ದಿತು. ಇದರಿಂದ ನಮ್ಮ ಸಾಂಸ್ಕೃತಿಕ ಜೀವನ ಇನ್ನೂ ಹೆಚ್ಚು ಸುಖಮಯವಾಗುತ್ತಿದ್ದಿತು. ದಾರನು ಬೋಧಿಸಿದ ತತ್ವಗಳಿಗೆ ನಾವು ಹೆಚ್ಚಿನ ಗಮನ ಕೊಟ್ಟರೆ ನಮ್ಮ ಧಾರ್ಮಿಕಜೀವನ ಇನ್ನೂ ಸುಖವಾಗಿದ್ದು ಶಾಂತಿಯನ್ನು ನೀಡುತ್ತದೆ. ಇದೇ ನಾವು ಮಹಾ ಪುರುಷನೊಬ್ಬನಿಗೆ ಸಲ್ಲಿಸಬಹುದಾದ ಗೌರವ.