ನನ್ನ ಕೈಗದ್ದೆಯಲಿ ವಿಧಿ ಉತ್ತ ಗೆರೆಗಳಲಿ
ಬರುವ ಫಸಲೇನೆಂದು ನಾನಿವನ ಬೆಸಗೊಳ್ಳಲೆ ?
ಇವನ ಇಂದಿನ ಸ್ಥಿತಿಯೆ ಮರುಕ ತರುವುದು ನನಗೆ
ನನ್ನ ‘ನಾಳೆ’ಯನಿವನು ತೆರೆಯಬಹುದೆ ?

ಚಿಂತೆ ನೇಗಿಲುಗೆರೆಯ ಹಳೆ ಹೊಲದ ಮುಖದವನು
ಈ ಜೋಯಿಸ.
ಮೂಗಿನಂಚಿಗೆ ಬಂದು ಕೂತ ಕನ್ನಡಕಗಳ ಒಳಗೆ
ನೀರಿರದೆ ತಳಕಂಡ ಬಾವಿಕಣ್ಣನು ತೆರೆದು
ಮೋಡದ ದಂಡು ದಟ್ಟೈಸಿದೀ ಅನೇಕ ಮುಖಗಳ
ಗ್ರಹಗತಿಯನಿವನು ಹೇಳುತ್ತಿದ್ದಾನೆ, ಈ
ಬಡಪಾಯಿ.

ಓ ಎಲ್ಲಿ ನಾಳಿನ ದಾರಿ ?
ಕವಿದ ಕತ್ತಲಿನಾಚೆ ಯಾವ ಚಿನ್ನದ ಅದುರೋ
ಮೊರೆವ ಕಡಲಿನ ತುದಿಗೆ ಯಾವ ಹೊಸ ಬಂದರೋ
ಮುಳ್ಳು ಬೇಲಿಯ ಆಚೆ ಯಾವ ನಂದನ ವನವೋ
ಈ ಮೊರೆವ ಬಿರುಗಾಳಿಯಾಚೆ ಯಾವ ಕನಸಿನ ನೆಲೆಯೋ

ಏನಾದರೂ ಇರಲೇ ಬೇಕು ಇವನೆದುರು ಕೈಚಾಚಿ ಕೂತ
ಪ್ರತಿಯೊಬ್ಬನಿಗೂ ಭವ್ಯ ಭವಿಷ್ಯ !
ಕೈ ನೋಡಿ, ಕವಡೆಯ ಚಲ್ಲಿ, ಹಳೆ ಓಲೆಗರಿ
ಪುಸ್ತಕವ ಓದಿ, ಏನೇನನೋ ಗುಣಿಸಿ, ಈ ಜನಕೆ
ಕಣಿ ಹೇಳುವುದರಲ್ಲೇ ಕಳೆದಿದೆ ಇವನ
ಮುಕ್ಕಾಲು ಆಯುಷ್ಯ.

ಇಷ್ಟೊಂದು ಜನಕ್ಕೆ ಭವಿಷ್ಯದ ಬಗೆಗಿರುವ ಚಿಂತೆಯೇ
ಈ ಇವನ ವರ್ತಮಾನಕ್ಕೆ ಜೀವನಾಧಾರ !
ಇವನ ಈ ನಿತ್ಯ ಭವಿಷ್ಯದವಸ್ಥೆಯ ನಿಟ್ಟುಸಿರಿಗಿಲ್ಲ
ಬೇರೆ ಪರಿಹಾರ.