ಒಂದೆ, ಎರಡೆ, ಮೂರೆ,
ದಾರಿಯುದ್ದಕೂ ನಾನು ನಿರ್ಮಿಸಿದ
ಪ್ರತಿಮೆಗಳ ಸಾಲೆ !
ಯಾವ ಜಕ್ಕಣನಿಗೂ ನಾನಲ್ಲ ಕಡಮೆ ;
ಹಾಗೆಯೇ ಎಂಥ ಭಕ್ತನಿಗು ಕೂಡ
ಆಗಿರಬೇಕು ನಾಚಿಗೆ
ನಾ ನಡೆಸಿದ ಪೂಜೆಗೆ !

ಒಂದೆ, ಎರಡೆ, ಮೂರೆ,
ದಾರಿಯುದ್ದಕೂ ನಾನು ಕುಟ್ಟಿ ಕೆಡವಿರುವ
ಪ್ರತಿಮೆಗಳ ಸೂರೆ !
ಘಜನಿ ಮಹಮೂದನಿಗೂ
ಆಗಿರಲೇಬೇಕು ನಾಚಿಗೆ
ಈ ನನ್ನ ದಾಳಿಗೆ !
ಈಗಲೂ ನಾನು ನಡೆದಂತೆ ಮುಂದೆ ಮುಂದೆ
ಹಾಳು ಹಂಪೆಯ ನೋಟ ನನ್ನ ಹಿಂದೆ.
ಕಟ್ಟಿ ಕೆಡಹುವುದೆ, ಕೆಡಹಿ ಕಟ್ಟುವುದೆ ಕಡೆಯ ತನಕ?
ದೊಡ್ಡದೊಂದನು ಹಿಡಿದು ಕಡೆದು ನಿಲಿಸುವ ತನಕ
ನನಗಿದೇ ಕಾಯಕ.