‘ದಾರಿ ಯಾವುದಯ್ಯಾ ವೈಕುಂಠಕೆ ದಾರಿ ತೋರಿಸಯ್ಯಾ’ ಎಂದು ಹಾಡಿದ ದಾಸರು ಪ್ರಪಂಚದಿಂದ ಮುಕ್ತಿ ಪಡೆದ ನಂತರ ವೈಕುಂಠಕ್ಕೆ ದಾರಿ ತೋರಿಸು ಎಂದು ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ವೈಕುಂಠದ ದಾರಿಯನ್ನು ಆ ಭಗವಂತ ತೋರಿಸುವನೋ ಇಲ್ಲವೋ ಕಂಡವರಿಲ್ಲ. ಆದರೆ ಈ ಭೂಮಿಯ ಮೇಲೆ ನೆಲ, ಜಲ ಹಾಗೂ ಗಾಳಿಯಷ್ಟೇ ಅಲ್ಲ ಅಂತರಿಕ್ಷದಲ್ಲಿ ಪಯಣಿಸುವಾಗಲೂ ದಾರಿ ತೋರಿಸುವ ಸಂಗಾತಿಯಂತಿರುವ ‘ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ ರಿಸೀವರ್’ ಈಗ ಲಭ್ಯವಿದೆ. ಇದಕ್ಕೆ ಜಿಪಿಎಸ್ ಎಂದು ಹೇಳುವುದೇ ರೂಢಿ. ಇದನ್ನೇ ಕನ್ನಡಿಸಿ ‘ಭೌಗೋಳಿಕ ಸ್ಥಾನ ನಿರ್ದೇಶಕ’ ಎನ್ನಬಹುದು.

ಆದಿ ಮಾನವ ಗುಹೆಗಳಲ್ಲಿ ವಾಸಿಸುತ್ತಿದ್ದಾಗ ತನ್ನ ವಾಸಸ್ಥಾನದ ಗುರುತು ಕಂಡುಕೊಳ್ಳಲು ಏನು ಮಾಡುತ್ತಿದ್ದ ಎಂದು ಯೋಚಿಸಿದಾಗ ತಾನು ನಡೆಯುವ ದಾರಿಯಲ್ಲಿ ಮರಗಳ ಮೇಲೆ ಅಥವಾ ಕಲ್ಲಿನ ಮೇಲೆ ಏನಾದರೂ ಕೆತ್ತಿದ್ದಿರಬಹುದು ಎನಿಸುತ್ತದೆ.  ಕತ್ತಲಾದ ಮೇಲೆ ಆಕಾಶದಲ್ಲಿ ಕಾಣುವ ನಕ್ಷತ್ರಗಳು ಅವನಿಗೆ ದಾರಿ ತೋರಿರಬಹುದು. ಕ್ರಿಸ್ತನು ಹುಟ್ಟುವ ಜಾಗಕ್ಕೆ ಮೂರು ಜನ ಪ್ರವಾದಿಗಳಿಗೆ ದಾರಿ ತೋರಿಸಿದ್ದು ಮಿನುಗುತ್ತಿದ್ದ ನಕ್ಷತ್ರಗಳೇ ಅಲ್ಲವೆ? ಸಮುದ್ರಯಾನ ಮಾಡುವವರೂ ನಕ್ಷತ್ರಗಳನ್ನು ಗಮನಿಸುತ್ತಿದ್ದರು. ಅನಂತರ ದಿಕ್ಸೂಚಿಯನ್ನೂ ಬಳಸುತ್ತಿದ್ದರು. ಪ್ರಾಣಿಗಳು ತಾವು ಸಾಗಿದ ದಾರಿಯ ಜಾಡು ಹಿಡಿಯಲು ಅನುಕೂಲವಾಗುವಂತೆ ಅಲ್ಲಲ್ಲಿ ನಿಂತು ಮಲವಿಸರ್ಜನೆ ಮಾಡುತ್ತವೆ. ಆಕಾಶದಲ್ಲಿ ಹಾರುವ ಸಣ್ಣ ಪಕ್ಷಿಗಳೂ ಕೂಡ ಸೂರ್ಯನ ಚಲನೆ. ಭೂಮಿಯ ಆಯಸ್ಕಾಂತೀಯತೆಗಳನ್ನು ಗಮನದಲ್ಲಿಟ್ಟುಕೊಂಡು ಹಾರುತ್ತವೆಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಕೆಲವು ಪಕ್ಷಿಗಳು ತಾವು ಹಾರುವ ಜಾಗಗಳನ್ನು ಕಣ್ಣಿನಿಂದ ಗುರುತಿಸುವ ಸಾಮರ್ಥ್ಯವನ್ನೂ ಹೊಂದಿರುವುವಂತೆ! ಅವುಗಳ ಪುಟ್ಟ ತಲೆಯಲ್ಲಿ ನಕ್ಷೆಗಳಿರುತ್ತವೆ ಎಂದರೆ ಸೋಜಿಗವಲ್ಲವೆ?

ಇತ್ತೀಚಿಗೆ ಯದ್ವಾತದ್ವ ಬೆಳೆಯುತ್ತಿರುವ ನಗರಗಳಲ್ಲಿ ಹೊಸಬರಿಗಿರಲಿ ಅಲ್ಲಿಯೇ ಹುಟ್ಟಿಬೆಳೆದವರಿಗೂ ಕೆಲವು ಸ್ಥಳಗಳು ಗೊತ್ತಿರುವುದಿಲ್ಲ. ಒಂದು ಭಾಗದಲ್ಲಿದ್ದವರಿಗೆ ಮತ್ತೊಂದು ಭಾಗದ ಪರಿಚಯವಿರುವುದಿಲ್ಲ. ಆದರೂ ಆ ಸ್ಥಳಕ್ಕೆ ಹೋಗಬೇಕಾಗುತ್ತದೆ. ಇದಕ್ಕೆ ಪರಿಹಾರವೇನು? ತಲುಪಬೇಕಾದ ಸ್ಥಳದ ವಿಳಾಸ ಹಾಗೂ ಗುರುತು ಪಡೆದುಕೊಂಡು ದಾರಿಯಲ್ಲಿ ಹೋಗುವಾಗ ಬೋರ್ಡ್‌ಗಳನ್ನು ನೋಡಿ ಖಚಿತ ಪಡಿಸಿಕೊಳ್ಳುವುದು. ಇಲ್ಲವೇ ಅಲ್ಲಿ ಯಾರನ್ನಾದರೂ ರಸ್ತೆ ಕೇಳುವುದು. ಇದು ಎಲ್ಲರಿಗೂ ಪರಿಚಿತವಾಗಿರುವ ವಿಧಾನ.

ಇದಲ್ಲದೆ ದಾರಿ ಕಂಡುಕೊಳ್ಳಲು ಭೂಪಟಗಳನ್ನು ಅನುಸರಿಸುವ ಮತ್ತೊಂದು ವಿಧಾವೂ ಇದೆ.. ಈಗ ಅಮೆರಿಕದ ‘ಗೂಗಲ್ ಅರ್ಥ್’ ಸಂಸ್ಥೆ ಉಪಗ್ರಹಗಳ ಸಹಾಯದಿಂದ ಭೂಮಿಯ ಹಲವಾರು ಚಿತ್ರಗಳನ್ನು ಸಂಗ್ರಹಿಸಿ ಇಡೀ ಭೂಮಂಡಲದ ಉತ್ತಮ ಮಟ್ಟದ ನಕ್ಷೆಗಳನ್ನು ತಯಾರಿಸಿ ಅಂತರಜಾಲದಲ್ಲಿ ಇರಿಸಿದೆ. ದೊಡ್ಡ ನಗರಗಳ ವಿವರವಾದ ನಕ್ಷೆಗಳು ಲಭ್ಯವಿವೆ. ನಾವು ಹೊರಡುವ ಜಾಗ ಮತ್ತು ತಲುಪುವ ಜಾಗಗಳೆರಡನ್ನೂ ಕಂಪ್ಯೂಟರ್ ನಕ್ಷೆಯ ಪುಟದಲ್ಲಿ ನಿಶ್ಚಿತ ಸ್ಥಳದಲ್ಲಿ ನಮೂದಿಸಿದರೆ ಸಾಕು. ಅವುಗಳ ನಡುವಿನ ದೂರ, ಅಲ್ಲಿಗೆ ಹೋಗಲು ಹತ್ತಿರದ ದಾರಿ, ಪ್ರಮುಖ ಗುರುತುಗಳು ಇತ್ಯಾದಿ ವಿವರಗಳು ಕ್ಷಣ ಮಾತ್ರದಲ್ಲಿ ಕಂಪ್ಯೂಟರ್ ಪರದೆಯ ಮೇಲೆ ಹಾಜರಾಗುತ್ತದೆ. ಈ ನಕ್ಷೆಯಲ್ಲಿ ಅಗತ್ಯವಾದ ಭಾಗವನ್ನು ಹಿಗ್ಗಿಸಿ ನೋಡುವ ಅವಕಾಶವೂ ಇದೆ.

ನಾನು ಮೊದಲ ಬಾರಿ ೨೦೦೪ನೆಯ ಇಸವಿಯಲ್ಲಿ ಅಮೆರಿಕಕ್ಕೆ ಹೋದಾಗ ನನಗೆ ಅಲ್ಲಿನ ಸ್ಥಳಗಳನ್ನು ನೋಡುವ ಕುತೂಹಲವಿತ್ತು. ಆಗಷ್ಟೇ ಇಪ್ಪತ್ತಾರು ವಸಂತಗಳನ್ನು ದಾಟಿದ್ದ ನನ್ನ ಮಗ ಆನಂದನಿಗೆ ಅಮೆರಿಕದ ವಿಶಾಲವಾದ, ಅಚ್ಚುಕಟ್ಟಾದ ರಸ್ತೆಗಳಲ್ಲಿ ವೇಗವಾಗಿ ಕಾರು ಓಡಿಸುವ ಆಸೆ. ಹೀಗಾಗಿ ಅಲ್ಲಿ ತಲುಪಿದ ಎರಡು ದಿನಗಳಲ್ಲಿಯೇ ಒಂದು ಬಾಡಿಗೆ ಕಾರನ್ನು ತಂದ. ಅವನ ಕೆಲಸದ ಮಧ್ಯೆ ಬಿಡುವು ಸಿಕ್ಕಾಗಲೆಲ್ಲಾ ಕಂಪ್ಯೂಟರ್‌ನಿಂದ ನಮಗೆ ಬೇಕಾದ ರಸ್ತೆಯ ನಕ್ಷೆಯನ್ನು ಮುದ್ರಿಸಿಕೊಂಡು ಯಾವುದಾದರೂ ಸ್ಥಳಕ್ಕೆ ಹೊರಟು ಬಿಡುತ್ತಿದ್ದೆವು. ನಾನು ಆ ನಕ್ಷೆಯನ್ನು ನೋಡುತ್ತಾ ಅವನಿಗೆ ದಾರಿ ಹೇಳುತ್ತಿದ್ದೆ. ಮೊದಲು ನನಗೆ ನಾನು ದಾರಿ ತಪ್ಪು ಹೇಳಿಬಿಟ್ಟರೆ ಎಂಬ ಭಯವೂ ಇತ್ತು. ಯಾಕೆಂದರೆ ಒಂದು ಬಾರಿ ತಿರುವನ್ನು ಮರೆತು ಮುಂದೆ ಹೋದರೆ ಮತ್ತೆ ಎಲ್ಲೆಂದರಲ್ಲಿ ತಿರುಗುವಂತಿಲ್ಲ ಮಧ್ಯ ರಸ್ತೆಯಲ್ಲಿ ರಿವರ್ಸ್ ಗೇರ್ ಹಾಕಿ ಎಲ್ಲಾ ಟ್ರಾಫಿಕ್ ನಿಲ್ಲಿಸುವುದಾಗಲೀ, ‘ಯು’ ಟರ್ನ್ ಇಲ್ಲದಿದ್ದರೂ ಜೊಂಯ್ ಎಂದು ತಿರುಗಿಸುವುದಾಗಲೀ ಊಹಿಸಲೂ ಸಾಧ್ಯವಿಲ್ಲದ ಕೆಲಸ(ಈಗ ಇಲ್ಲಿಯೂ ಕಷ್ಟ). ಸಧ್ಯ! ನಮಗೆ ಇಂತಹ ಯಾವ ಅನುಭವವೂ ಆಗಲಿಲ್ಲ. ಸಾಕಷ್ಟು ಸುತ್ತಿದೆವು.

ಆದರೆ ಇದೂ ತ್ರಾಸದಾಯಕ ಎನ್ನುವವರ ನೆರವಿಗೆ ಈಗ ದೊರಕುತ್ತಿದೆ ಜಿಪಿಎಸ್ ಗ್ರಾಹಕ. ೨೦೦೮ನೆಯ ಇಸವಿಯಲ್ಲಿ ಅಮೆರಿಕಕ್ಕೆ ಹೋದಾಗ ನನಗೆ ಬೇರೆ ಅನುಭವವೇ ಕಾದಿತ್ತು. ಈಗ ಯಾವ ನಕ್ಷೆಯೂ ಬೇಡ ಜಿಪಿಎಸ್ ಒಂದಿದ್ದರೆ ಸಾಕು ಎಂದು ಆನಂದ್ ಹೇಳಿದಾಗ ನನಗೆ ಬಹಳ ಆಶ್ಚರ್ಯವಾಯಿತು; ಕುತೂಹಲವೂ ಉಂಟಾಯಿತು. ಮೊದಲ ದಿನ ಕಾರಿನಲ್ಲಿ ಹೊರಡುತ್ತಿದ್ದಂತೆಯೇ ಸೊಸೆ ಕಲ್ಯಾಣಿ ಜಿಪಿಎಸ್‌ನೊಡನೆ ಕಾರಿಗೆ ಹತ್ತಿದಳು. ಇದು ದೊಡ್ಡ ಮೊಬೈಲ್‌ನಂತೆ ಕಾಣುತ್ತದೆ. ಅದರಲ್ಲಿ ನಾವು ತಲುಪಬೇಕಾದ ಸ್ಥಳದ ವಿವರಗಳನ್ನು ಅದರ ಪರದೆಯನ್ನು ಮುಟ್ಟಿ (touch screen) ತುಂಬಿಸಿದಳು. ಅದು ತನ್ನ ವ್ಯಾಖ್ಯಾನ ಪ್ರಾರಂಭಿಸಿತು.

ಹೌದು, ಇದು ನಮಗೆ ಮಾತನಾಡುತ್ತಾ ಸೂಚನೆ ನೀಡುತ್ತದೆ. ಚಾಲಕ/ಚಾಲಕಿ ರಸ್ತೆಯ ಮೇಲೆ ಕಣ್ಣಿರಿಸಿಕೊಂಡು ಕಾರು ಓಡಿಸಲು ಇದು ಅನುಕೂಲವಾಗಿದೆ. ಚಾಲಕರು ಒಬ್ಬರೇ ಇದ್ದಾಗ ಇದು ಅವರ ಸಂಗಾತಿಯೇ ಸೈ. ಈ ವ್ಯಾಖ್ಯಾನ ಇಂಗ್ಲೀಷ್, ಫ್ರೆಂಚ್, ಜಪಾನಿ ಇತ್ಯಾದಿ ಭಾಷೆಗಳಲ್ಲಿ ಲಭ್ಯವಿದೆ. ಇಂಗ್ಲೀಷ್‌ನಲ್ಲಿಯೂ ಅಮೆರಿಕನ್, ಬ್ರಿಟಿಷ್ ಇತ್ಯಾದಿ ಬೇರೆ ಬೇರೆ ಉಚ್ಚಾರಣೆಗಳೂ ದೊರೆಯುತ್ತವೆ. ಗಂಡಸಿನ ಧ್ವನಿ, ಹೆಂಗಸಿನ ಧ್ವನಿ ಎಂದು ನಮಗೆ ಹಿತವೆನಿಸುವ ಧ್ವನಿಯನ್ನೂ ಆಯ್ಕೆ ಮಾಡಿಕೊಳ್ಳಬಹುದು. ಮೊದಲು ಯಾವ ದಿಕ್ಕಿನಲ್ಲಿ ಪ್ರಯಾಣ ಮಾಡಬೇಕು ಎಂದು ಸೂಚಿಸುತ್ತದೆ. ನಂತರ ಎಲ್ಲಿ ತಿರುಗಬೇಕಾದರೂ ಬಹಳ ಮುಂಚೆಯೇ ಮುಂದೆ ಬಲಗಡೆ ತಿರುಗಬೇಕು ಎಂದು ಹೇಳುತ್ತದೆ. ಅಲ್ಲದೆ ತಿರುವಿನಿಂದ ಸುಮಾರು ನೂರು ಮೀಟರ್ ದೂರದಲ್ಲಿದ್ದಾಗ ಮತ್ತೊಮ್ಮೆ ಎಚ್ಚರಿಕೆ ನೀಡುತ್ತದೆ. ಆಗಲೇ ಹೇಳಿದಂತೆ ಇದು ಆ ದೇಶದಲ್ಲಿ ಬಹಳ ಅವಶ್ಯಕ. ಹಾಗೂ ಒಂದು ವೇಳೆ ನೀವು ತಿರುಗದಿದ್ದರೆ ಅದು ಬಹಳ ಶಾಂತವಾಗಿ ನೀವು ತಿರುಗಬೇಕಾದ ಸ್ಥಳವನ್ನು ಬಿಟ್ಟು ಮುಂದೆ ಬಂದಿರುವಿರಿ. ಈಗ ಮುಂದೆ ನಿಮ್ಮ ಗುರಿ ತಲುಪಲು ಈ ಹೊಸ ರಸ್ತೆಯನ್ನು ಅನುಸರಿಸಿ ಎಂದು ಸೂಚನೆ ನೀಡುತ್ತದೆ. ಅಬ್ಬಾ! ಇದರ ಬುದ್ಧಿಯೇ! ಕಾರಿನ ಒಳಗೆ ಕುಳಿತೇ ಇದಕ್ಕೆ ಎಷ್ಟು ಸೂಕ್ಷ್ಮವಾಗಿ ಎಷ್ಟೆಲ್ಲಾ ವಿಚಾರಗಳೂ ತಿಳಿಯುತ್ತದೆಯಲ್ಲಾ ಎಂದು ನನಗೆ ಸೋಜಿಗವಾಯಿತು. ಪರಿಚಿತವಿಲ್ಲದ ಊರುಗಳಲ್ಲಿ ಪಯಣಿಸುವ ಪಯಣಿಗರಿಗೆ ವರವಾಗಿ ಬಂದಿದೆ ಈ ಜಿಪಿಎಸ್ ಗ್ರಾಹಕ. ಇದನ್ನು ಕೇವಲ ಊರೊಳಗೆ ಪಯಣಿಸಲು ಮಾತ್ರ ಬಳಸುವ ಉಪಕರಣವೆಂದು ಭಾವಿಸಬೇಡಿ. ಒಂದು ಊರಿನಿಂದ ಮತ್ತೊಂದು ಊರಿಗೆ ಪ್ರಯಾಣ ಮಾಡುವಾಗಲೂ ಇದು ನಿಮ್ಮ ಆಪ್ತಮಿತ್ರನೆಂದರೆ ತಪ್ಪಿಲ್ಲ. ನೀವು ಅದನ್ನು ಕೈಲಿ ಹಿಡಿದರೆ ಆಯಿತು. ಅದು ನಿಮ್ಮ ಕೈ ಹಿಡಿದು ನಡೆಸುತ್ತದೆ. ಇಂತಹ ಅದ್ಭುತ ಯಂತ್ರವನ್ನು ಹೇಗೆ ತಯಾರಿಸಿದ್ದಾರೆ ಎಂದು ತಿಳಿದುಕೊಳ್ಳುವ ಕುತೂಹಲ ನನಗೆ ಸಾಕಷ್ಟು ವಿಚಾರಗಳನ್ನು ತಿಳಿಸಿತು.

ಭೌಗೋಳಿಕ ಸ್ಥಾನ ನಿರ್ದೇಶಕ ವ್ಯವಸ್ಥೆ ಎಂದರೇನು?

ಭೂಮಿಯ ಮೇಲೆ ಪುಟ್ಟ ಪೆಟ್ಟಿಗೆಯಂತಿರುವ ಜಿಪಿಎಸ್ ಗ್ರಾಹಕ ಹಾಗೂ ಇದಕ್ಕೆ ನಿರಂತರವಾಗಿ ಅವಶ್ಯಕವಾದ ಮಾಹಿತಿ ಒದಗಿಸುತ್ತಾ ಅಂತರಿಕ್ಷದಲ್ಲಿ ಹಾರಾಡುತ್ತಿರುವ ಉಪಗ್ರಹಗಳ ಸಮೂಹವನ್ನು ಒಟ್ಟಾಗಿ ಭೌಗೋಳಿಕ ಸ್ಥಾನ ನಿರ್ದೇಶಕ ವ್ಯವಸ್ಥೆ ಎಂದು ಕರೆಯಲಾಗುತ್ತದೆ. ಮೊತ್ತಮೊದಲಿಗೆ ರೇಡಿಯೋ ತರಂಗಗಳನ್ನು ಬಳಸಿ ೧೯೪೦ರಲ್ಲಿಯೇ ತಯಾರಿಸಿದ್ದ  LORAN ಮತ್ತು Decca Navigator ಎಂಬ ಯಾನದರ್ಶಿ(Navigation) ವ್ಯವಸ್ಥೆಗಳು ವಿಜ್ಞಾನಿಗಳಿಗೆ ಇಂತಹ ಸ್ಥಾನ ಸೂಚಿಯನ್ನು ವಿನ್ಯಾಸ ಮಾಡಲು ಪ್ರೇರಣೆ ನೀಡಿದವು. ಇದರ ನಂತರ ೧೯೫೭ರಲ್ಲಿ ಸೋವಿಯಟ್ ರಶ್ಯಾ ಸ್ಪೂಟ್ನಿಕ್ ಎಂಬ ಕೃತಕ ಉಪಗ್ರಹವನ್ನು ಹಾರಿಸಿದಾಗ ಅಮೆರಿಕದ ಕೆಲವು ವಿಜ್ಞಾನಿಗಳು ಅದರ ಚಲನೆಯನ್ನು ಅಧ್ಯಯನ ಮಾಡುವಾಗ ಒಂದು ಕುತೂಹಲಕಾರಿ ಅಂಶವನ್ನು ಗಮನಿಸಿದರು. ಸ್ಪೂಟ್ನಿಕ್ ಭೂಮಿಯ ಕಡೆ ಧಾವಿಸುತ್ತಿದ್ದಾಗ ಅದರಿಂದ ಹೊರಹೊಮ್ಮಿದ ರೇಡಿಯೋ ತರಂಗಗಳ ಆವರ್ತ ಸಂಖ್ಯೆ ಹೆಚ್ಚಾಗಿರುತ್ತಿತ್ತು. ಅದು ಭೂಮಿಯಿಂದ ದೂರ ಸರಿಯುತ್ತಿದ್ದಾಗ ಆ ಆವರ್ತ ಸಂಖ್ಯೆ ಕಡಿಮೆಯಾಗುತ್ತಿತ್ತು. ಇದಕ್ಕೆ ಭೌತವಿಜ್ಞಾನಿಗಳು ಬಹಳ ಹಿಂದೆಯೇ ನಿರೂಪಿಸಿರುವ ‘ಡಾಪ್ಲರ್ ಪರಿಣಾಮ’ವೇ ಕಾರಣ ಎಂದು ನಿರ್ಧರಿಸುವುದು ಕಷ್ಟವಾಗಲಿಲ್ಲ. ಅವರಿಗೆ ಭೂಮಿಯ ಮೇಲೆ ತಾವಿರುವ ಜಾಗದ ಅಕ್ಷಾಂಶ ರೇಖಾಂಶಗಳು ನಿಖರವಾಗಿ ತಿಳಿದಿದ್ದರಿಂದ ಆವರ್ತ ಸಂಖ್ಯೆಯಲ್ಲಿರುವ ಬದಲಾವಣೆಯನ್ನು ಆಧಾರವಾಗಿಟ್ಟು ಕೊಂಡು ಸ್ಪೂಟ್ನಿಕ್ ಉಪಗ್ರಹವು ಅಂತರಿಕ್ಷದಲ್ಲಿರುವ ಸ್ಥಾನವನ್ನು ಲೆಕ್ಕ ಹಾಕುವುದು ಸಾಧ್ಯವಾಯಿತು. ಇದೇ ರೀತಿ ಅಂತರಿಕ್ಷದಲ್ಲಿ ನಿರ್ದಿಷ್ಟ ಸ್ಥಾನಗಳಲ್ಲಿರುವ ಎರಡು ಉಪಗ್ರಹಗಳಿಂದ ಬರುವ ತರಂಗಗಳನ್ನು ಗ್ರಹಿಸಿ ಭೂಮಿಯ ಮೇಲೆ ಒಂದು ನಿರ್ದಿಷ್ಟ ಸ್ಥಳದ ಗುರುತನ್ನು ಕಂಡು ಹಿಡಿಯಬಹುದು ಎಂಬ ವಿಚಾರವೇ ಇಂದಿನ ಜಿಪಿಎಸ್ ವ್ಯವಸ್ಥೆಗೆ ಬುನಾದಿಯಾಯಿತು. ೧೯೬೦ರಲ್ಲಿ ಅಮೆರಿಕ ತನ್ನ ನೌಕಾ ಪಡೆಯಲ್ಲಿ ಬಳಸಲು ಮೊದಲ ಯಾನದರ್ಶಿ ವ್ಯವಸ್ಥೆಯನ್ನು ಸಿದ್ಧಪಡಿಸಿತು. ಇದಕ್ಕೆ ನೀಡಿದ ಹೆಸರು ಟ್ರಾನ್ಸಿಟ್(Transit). ಈ ವ್ಯವಸ್ಥೆಯಲ್ಲಿ ಅದು ಬಳಸಿದ ಉಪಗ್ರಹಗಳ ಸಂಖ್ಯೆ ಕೇವಲ ಐದು. ಆದರೆ ಈ ವ್ಯವಸ್ಥೆಯಲ್ಲಿ ಗಂಟೆಗೆ ಒಂದು ಬಾರಿ ಮಾತ್ರ ಮಾಹಿತಿ ಲಭ್ಯವಾಗುತ್ತಿತ್ತು.

ಈ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ಪ್ರಯತ್ನಗಳು ಪ್ರಾರಂಭವಾದವು. ಉಪಗ್ರಹದ ದೂರವನ್ನು ಅಳೆಯಲು ಸಮಯವನ್ನೇ ಆಧರಿಸುತ್ತಿದ್ದುದರಿಂದ ನಿಖರವಾದ ಗಡಿಯಾರಗಳ ಅವಶ್ಯಕತೆ ಇತ್ತು. ೧೯೭೦ರಲ್ಲಿ ನಿಖರವಾದ ಪರಮಾಣು ಗಡಿಯಾರಗಳನ್ನು ಉಪಗ್ರಹದಲ್ಲಿಟ್ಟು ರವಾನಿಸುವ ಕಾರ್ಯದಲ್ಲಿ ಅಮೆರಿಕದ ನೌಕಾ ಪಡೆ ಯಶಸ್ವಿಯಾಯಿತು. ಅಂತರಿಕ್ಷದಲ್ಲಿ ನಿರ್ದಿಷ್ಟ ಸ್ಥಾನಗಳಲ್ಲಿರುವ ಎರಡು ಉಪಗ್ರಹಗಳಿಂದ ಸ್ವೀಕರಿಸಲ್ಪಟ್ಟ ಸಂಕೇತಗಳ ಅವಸ್ಥೆಯನ್ನು ಹೋಲಿಸುವ ಆಧಾರದ ಮೇಲೆ ೧೯೭೦ರಲ್ಲಿ ಅಮೆರಿಕದ ನೌಕಾದಳವು ಅಭಿವೃದ್ಧಿಪಡಿಸಲಾದ ಒಮೆಗಾ ನಾವಿಗೇಷನ್ ಸಿಸ್ಟಮ್ ಪ್ರಪಂಚದ ಮೊದಲ ರೇಡಿಯೋ ಯಾನದರ್ಶಿ ವ್ಯವಸ್ಥೆಯಾಯಿತು. ಇದನ್ನು ಬಳಸಿ ಒಂದು ಸ್ಥಳದ ನಿರ್ದೇಶಾಂಕ (co-ordinates)ಗಳನ್ನು ಒಂದು ಮೈಲಿ ನಿಖರತೆಯಲ್ಲಿ ಗುರುತಿಸುವುದು ಸಾಧ್ಯವಾಯಿತು. ಇದನ್ನು ಸಬ್‌ಮರೀನ್‌ಗಳಲ್ಲಿಯೂ ಬಳಸಲಾಯಿತು. ಇದಾದ ನಂತರ ೧೯೭೮ರಲ್ಲಿ ಪ್ರಯೋಗಾತ್ಮಕವಾದ ಬ್ಲಾಕ್_೧ (Block-I GPS) ಜಿಪಿಎಸ್ ವ್ಯವಸ್ಥೆಗೆ ಉಪಗ್ರಹಗಳನ್ನು  ಉಡಾಯಿಸಲಾಯಿತು.

 

ಪ್ರಸ್ತುತ ಅಮೆರಿಕದ ರಕ್ಷಣಾ ವ್ಯವಸ್ಥೆಯವರಿಂದ ನಿರ್ವಹಿಸಲಾಗುತ್ತಿರುವ ‘ನಾವ್‌ಸ್ಟಾರ್’ (NAVSTAR) ಎಂಬ ಭೌಗೋಳಿಕ ಸ್ಥಾನ ನಿರ್ದೇಶಕ ವ್ಯವಸ್ಥೆ ಹೆಚ್ಚು ಬಳಕೆಯಾಗುತ್ತಿದೆ. ಇದರಲ್ಲಿ ೨೧ ಕಾರ್ಯಶೀಲ ಉಪಗ್ರಹಗಳಿದ್ದು ಮತ್ತೆ ಮೂರು ಉಪಗ್ರಹಗಳು ಕೈಗಾವಲಿನಂತೆ ಸಿದ್ಧವಾಗಿರುತ್ತವೆ. ಮತ್ತಷ್ಟು ಅಂದರೆ ಒಟ್ಟು ೩೨ ಉಪಗ್ರಹಗಳು ಈ ವ್ಯವಸ್ಥೆಯಲ್ಲಿ ಇವೆ. ಹೆಚ್ಚುವರಿ ಉಪಗ್ರಹಗಳನ್ನು ಬೇರೆ ಕಾರ್ಯಗಳಿಗೆ ಅಥವಾ ತುರ್ತು ಪರಿಸ್ಥಿತಿಗಾಗಿ ಉಡಾಯಿಸಲಾಗಿದೆ. ಭೂಮಿಯ ಯಾವುದೇ ಸ್ಥಾನದಿಂದ ಒಂದು ಸಮಯದಲ್ಲಿ ನಾಲ್ಕು ಉಪಗ್ರಹಗಳಿಂದ ಸಂಕೇತಗಳನ್ನು ಪಡೆಯಲು ಸಾಧ್ಯವಾಗುವಂತೆ ಈ ಉಪಗ್ರಹಗಳನ್ನ್ಯು ಅಂತರಿಕ್ಷದಲ್ಲಿ ೧೦,೬೦೦ ಮೈಲಿ ಎತ್ತರದ ಕಕ್ಷೆಯಲ್ಲಿ ಬಿಡಲಾಗಿದೆ. ಈ ಉಪಗ್ರಹಗಳು ಆರು ವಿವಿಧ ಸಮತಲದಲ್ಲಿ ಸುತ್ತುತ್ತಿರುತ್ತವೆ. ಹೀಗಾಗಿ ಪ್ರತಿಯೊಂದು ಸಮತಲದಲ್ಲಿ ನಾಲ್ಕು ಉಪಗ್ರಹಗಳಿರುತ್ತವೆ. ಪ್ರತಿಯೊಂದು ಉಪಗ್ರಹದಲ್ಲಿಯೂ ಒಂದು ಕಂಪ್ಯೂಟರ್, ಒಂದು ಪರಮಾಣು ಗಡಿಯಾರ ಮತ್ತು ಸಂಕೇತಗಳನ್ನು ಬಿತ್ತರಿಸಲು ಒಂದು ರೇಡಿಯೋ ಟ್ರಾನ್ಸ್‌ಮಿಟರ್ ಅಳವಡಿಸಲಾಗಿದೆ. ಈ ಉಪಗ್ರಹಗಳ ಸ್ಥಿತಿಯನ್ನು ಸತತವಾಗಿ ಗಮನಿಸಿ, ನಿಯಂತ್ರಿಸಲು  ಭೂಮಿಯ ಮೇಲೆ ಹವಾಯಿ, ಅಸೆನೆಷನ್ ದ್ವೀಪ, ಡಿಯಾಗೋ ಗಾರ್ಷಿಯಾ, ಕ್ವಜಲೈನ್ ಮತ್ತು ಕೊಲೆರಡೋ ಸ್ಪ್ರಿಂಗ್ಸ್ ಎಂಬ ಐದು ಸ್ಥಳಗಳಲ್ಲಿ ಕಾರ್ಯತಾಣಗಳಿವೆ. ಇವು ಉಪಗ್ರಹಗಳು ಸಮರ್ಪಕವಾಗಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಗಮನಿಸಿ, ಏನಾದರೂ ವ್ಯತ್ಯಯಗಳಿದ್ದರೆ ಆಯಾ ಉಪಗ್ರಹಗಳ ಗ್ರಾಹಕಕ್ಕೆ ಸಂದೇಶ ರವಾನಿಸುತ್ತವೆ. ಈ ಸಂದೇಶಗಳನ್ನು ಉಪಗ್ರಹಗಳು ಸೂಕ್ತವಾಗಿ ಬಳಸಿಕೊಳ್ಳುತ್ತವೆ.

ಪ್ರೆಸಿಡೆಂಟ್ ರೋನಾಲ್ಡ್ ರೀಗನ್‌ರವರು ೧೯೮೩ರಲ್ಲಿ ಈ ವ್ಯವಸ್ಥೆಯನ್ನು ನಾಗರಿಕ ಬಳಕೆಗೆ ಮುಕ್ತವಾಗಿ ತೆರೆದಿಡುವ ನಿರ್ಧಾರ ಮಾಡಿದರು. ಈಗಲೂ ಈ ಮಾನವ ನಿರ್ಮಿತ ಉಪಗ್ರಹಗಳ ಸಮೂಹದ ಮಾಲೀಕತ್ವ ಅಮೆರಿಕ ಸಂಯುಕ್ತ ಸಂಸ್ಥಾನಗಳ ರಕ್ಷಣಾ ವಿಭಾಗದ್ದೇ ಆಗಿದೆ ಹಾಗೂ ಅದನ್ನು ನಿರ್ವಹಿಸುವ ಜವಾಬ್ದಾರಿಯನ್ನೂ ಅದು ವಹಿಸಿಕೊಂಡಿದೆ. ಪ್ರಪಂಚದ ಜನತೆಯೆಲ್ಲಾ ಇದಕ್ಕಾಗಿ ಅಮೆರಿಕದ ರಕ್ಷಣಾ ವಿಭಾಗಕ್ಕೆ ಕೃತಜ್ಞರಾಗಿರಬೆಕು. ಇದಲ್ಲದೆ ರಶ್ಯಾ ‘ಗ್ಲೊನಾಸ್’ (GLONASS) ಎಂಬ ಜಿಪಿಎಸ್ ವ್ಯವಸ್ಥೆಯನ್ನೂ, ಯೂರೋಪಿಯನ್ ಯೂನಿಯನ್ ‘ಗೆಲಿಲಿಯೋ’ ಎಂಬ ಜಿಪಿಎಸ್ ವ್ಯವಸ್ಥೆಯನ್ನೂ ನಿರ್ವಹಿಸುತ್ತಿವೆ. ಭಾರತ ಸರ್ಕಾರವೂ ಕೂಡ ೨೦೧೧ರ ವೇಳೆಗೆ ಭಾರತದ ಅಂತರಿಕ್ಷದಲ್ಲಿ ಯಾನದರ್ಶಿ ವ್ಯವಸ್ಥೆಯೊಂದನ್ನು ರೂಪಿಸುವ ಉದ್ದೇಶ ಹೊಂದಿದೆ. ೨೦೦೮ರಿಂದ ಏರ‍್ಪೋರ್ಟ್ ಅಥಾರಟಿ ಆಫ್ ಇಂಡಿಯಾ ಮತ್ತು ಬಾಹ್ಯಾಕಾಶ ಸಂಶೋಧನಾ ಕೇಂದ್ರಗಳು ಜಂಟಿಯಾಗಿ ಈ ಯೋಜನೆಯಲ್ಲಿ ಭಾಗವಹಿಸುತ್ತಿವೆ. ಈ ಯೋಜನೆಗೆ `GAGAN’ ಎಂದು ಹೆಸರಿಸಲಾಗಿದೆ. ‘ಜಿಪಿಎಸ್ ಏಡೆಡ್ ಜಿಯೋ ಆಗ್‌ಮೆಂಟೆಡ್ ನಾವಿಗೇಷನ್ ಸಿಸ್ಟಮ್’ ಎಂಬುದರ ಸಂಕ್ಷಿಪ್ತ ರೂಪವಾದ ‘ಗಗನ್’ ನಮ್ಮ ಭಾಷೆಯಲ್ಲಿಯೂ ‘ಗಗನ’ ಎಂದು ಅಂತರಿಕ್ಷದತ್ತ ಬೆರಳು ತೋರುತ್ತಿರುವುದು ಸೂಕ್ತವಾಗಿದೆ.

ಜಿಪಿಎಸ್ ಲೆಕ್ಕಾಚಾರ ಹೇಗೆ?

ಜಿಪಿಎಸ್ ಉಪಗ್ರಹ ಸಮೂಹದಿಂದ ಪ್ರತಿಯೊಂದು ಉಪಗ್ರಹವೂ ಸತತವಾಗಿ ಸಂದೇಶವನ್ನು ಕಳುಹಿಸುತ್ತಿರುತ್ತದೆ. ಸಂದೇಶದಲ್ಲಿ-ಸಂದೇಶವನ್ನು ಕಳುಹಿಸಿದ ಸಮಯ, ಆ ಉಪಗ್ರಹದ ಸ್ಥಾನ. ಉಪಗ್ರಹ ಸಮೂಹದಲ್ಲಿರುವ ಇತರ ಉಪಗ್ರಹಗಳ ಸ್ಥಾನಗಳು ಮತ್ತು ಅವುಗಳ ಆರೋಗ್ಯ ಸ್ಥಿತಿ-ಇತ್ಯಾದಿ ವಿವರಗಳಿರುತ್ತವೆ. ಸಂಕೇತ ರೂಪದಲ್ಲಿ ಭೂಮಿಗೆ ಧಾವಿಸುವ ಈ ವಿವರಗಳು ಬೆಳಕಿನ ವೇಗದಲ್ಲಿ ಪಯಣಿಸುತ್ತಾ, ನೀರು, ಗಾಳಿ, ಆಕಾಶ ಎಂದು ಲೆಕ್ಕಿಸದೆ ಭೂಮಿಗೆ ತಲುಪುತ್ತವೆ. ಭೂಮಿಯ ವಾತಾವರಣದ ಮೂಲಕ ಹಾದು ಬರುವಾಗ ಮಾತ್ರ ವೇಗ ಸ್ವಲ್ಪ ತಗ್ಗುತ್ತದೆ. ಭೂಮಿಯ ಮೇಲಿರುವ ಯಾವುದೇ ಗ್ರಾಹಕ ಏಕಕಾಲದಲ್ಲಿ ಮೂರು ಉಪಗ್ರಹಗಳಿಂದ ಬರುವ ಸಂಕೇತಗಳನ್ನು ಸ್ವೀಕರಿಸುವಂತೆ ಉಪಗ್ರಹಗಳು ನಿರ್ದಿಷ್ಟ ದೂರದಲ್ಲಿ ಹಾರಡುತ್ತಿರುತ್ತವೆ. ನಿರ್ದಿಷ್ಟ ಸಮಯದಲ್ಲಿ ಈ ಸಂಕೇತಗಳನ್ನು ಭೂಮಿಯ ಮೇಲಿರುವ ಗ್ರಾಹಕವು ಸ್ವೀಕರಿಸುತ್ತದೆ. ಸಂದೇಶವನ್ನು ಸ್ವೀಕರಿಸಿದ ನಂತರ ಭೂಮಿಯ ಮೇಲೆ ಸ್ಥಾನದ ನಿರ್ದೇಶಾಂಕಗಳನ್ನು(co-ordinates) ಗಳನ್ನು ಗುರುತಿಸಲು ಸಾಕಷ್ಟು ಕ್ಲಿಷ್ಟಕರವಾದ ಗಣಿತವನ್ನು ಮಾಡಬೇಕು. ಇದಕ್ಕೆ ಗಣಿತ ವಿಜ್ಞಾನದ ಜ್ಯಾಮಿತಿ ವಿಭಾಗದ ತ್ರಿಪಾರ್ಶ್ವೀಕರಣ (ಟ್ರೈಲಾಟೆರೇಷನ್) ಎಂಬ ವಿಧಾನದಲ್ಲಿ ತ್ರಿಕೋಣದ ಗುಣಗಳ ಹಲವು ಸೂತ್ರಗಳನ್ನು ಬಳಸಲಾಗುತ್ತದೆ. ಇದಕ್ಕೆ ತ್ರಿಕೋಣೀಕರಣ (ಟ್ರೈಯಾಂಗ್ಯುಲೇಷನ್) ಎಂದು ಕರೆಯುವ ವಾಡಿಕೆಯೂ ಇದೆ ಆದರೆ ಸಾಮಾನ್ಯ ಬಳಕೆದಾರರಿಗೆ ಈ ಕಷ್ಟವಿರುವುದಿಲ್ಲ. ಏಕೆಂದರೆ ಗ್ರಾಹಕದಲ್ಲಿ ಕಂಪ್ಯೂಟರ್‌ನಂತೆಯೇ ಇರುವ ಒಂದು ಘಟಕ ಎಲ್ಲಾ ಲೆಕ್ಕಾಚಾರಗಳನ್ನೂ ಸ್ವಯಂಚಾಲಿತವಾಗಿ ಮಾಡಿ ಅಕ್ಷಾಂಶ, ರೇಖಾಂಶ ಮತ್ತು ಭೂಮಟ್ಟದಿಂದ ಇರುವ ಎತ್ತರ ಇತ್ಯಾದಿಗಳನ್ನು ಒದಗಿಸುತ್ತದೆ.. ಇಷ್ಟಾದರೂ ಏನಾದರೂ ತಪ್ಪಾಗಿದ್ದಲ್ಲಿ ಅದನ್ನು ಸರಿ ಪಡಿಸಲು ಮತ್ತಷ್ಟು ತಂತ್ರಾಂಶಗಳನ್ನು ಅಳವಡಿಸಲಾಗಿದೆ. ಇದಕ್ಕೆ ನಾಲ್ಕನೆಯ ಉಪಗ್ರಹದಿಂದ ಬರುವ ಸಂಕೇತವನ್ನು ಬಳಸಿಕೊಳ್ಳಲಾಗುತ್ತದೆ.

ವಿವಿಧೋಪಯೋಗಿಜಿಪಿಎಸ್

ವೈಜ್ಞಾನಿಕ

ಈ ವ್ಯವಸ್ಥೆಯು ಮಿಲಿಟರಿ ಕ್ಷೇತ್ರದಿಂದ ಸಾರ್ವಜನಿಕ ಕ್ಷೇತ್ರಕ್ಕೆ ಪ್ರವೇಶವಾಗುತ್ತಿದ್ದಂತೆಯೇ ಅದರ ಬಳಕೆಯೂ ಜಾಸ್ತಿಯಾಯಿತು. ಭೂಪಟ ತಯಾರಿಕೆಗೆ, ಭೂಮಾಪನ ಕಾರ್ಯಗಳಿಗೆ, ಭೂಖಂಡಗಳ ಚಲನೆಯ ಅಧ್ಯಯನಕ್ಕೆ, ಭೂಕಂಪನಗಳ ಅಧ್ಯಯನಕ್ಕೆ, ಹವಾಮಾನ ಮುನ್ಸೂಚನೆಗೆ, ಪರ್ವತಾರೋಹಣ ಇತ್ಯಾದಿ ಸಾಹಸ ಕಾರ್ಯಗಳಿಗೆ ಜಿಪಿಎಸ್ ನಿಂದ ದೊರೆತ ನೆರವು ಅಪಾರ. ಅಭಿವೃದ್ಧಿಯಾದಂತೆಲ್ಲಾ ಒಂದು ಸ್ಥಳವನ್ನು ಕೆಲವು ಮೀಟರ್ ಅಲ್ಲ ಕೆಲವು ಸೆಂಟಿಮೀಟರ್‌ನಷ್ಟು ನಿಖರವಾಗಿ ಗುರುತಿಸಲೂ ಸಾಧ್ಯವಾಯಿತು! ವಿಮಾನ ಹಾಗೂ ಸಮುದ್ರಯಾನಗಳಲ್ಲಿ, ಜಿಪಿಎಸ್ ಗ್ರಾಹಕದಲ್ಲಿ ಭೂಮಿಯ ಅಕ್ಷಾಂಶ ರೇಖಾಂಶಗಳ ವಿವರ ತುಂಬಿಸಿ, ಸೂಕ್ತ ತಂತ್ರಾಂಶಗಳನ್ನು ಅಳವಡಿಸಿದರೆ, ಪ್ರಯಾಣಿಕರ ಮುಂದೆ ಇರುವ ಕಂಪ್ಯೂಟರ್ ಪರದೆಯ ಮೇಲೆ ವಾಹನ ಸಾಗುತ್ತಿರುವ ಸ್ಥಳದ ನಿಖರವಾದ ವಿವರಗಳು ಪ್ರದರ್ಶಿತವಾಗುತ್ತದೆ.

ವಾಣಿಜ್ಯ

ಸಾಮಾನುಗಳನ್ನು ನಿರ್ದಿಷ್ಟ ಸ್ಥಳಕ್ಕೆ ತಲುಪಿಸುವ ಸಂಸ್ಥೆಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿವೆ. ತುರ್ತು ಪರಿಸ್ಥಿತಿಯಲ್ಲಿ ಅಂದರೆ ರಸ್ತೆ ಅಪಘಾತಗಳಾದಾಗ, ಅಗ್ನಿ ಅನಾಹುತಗಳಾದಾಗ ಸಹಾಯಕ್ಕೆ ಧಾವಿಸುವ ವಾಹನಗಳು ಸುಲಭವಾಗಿ ನಿಖರವಾಗಿ ಆ ಜಾಗವನ್ನು ತಲುಪವುದು ಸಾಧ್ಯವಾಗಿದೆ. ಕೆಲವು ದೊಡ್ಡ ನಗರಗಳಲ್ಲಿನ ಟಾಕ್ಸಿ ಸಂಸ್ಥೆಯವರು ತಮ್ಮ ವಾಹನಗಳ ಮೇಲೆ ನಿಗಾ ವಹಿಸಲು ಈ ಸಾಧನವನ್ನು ಬಳಸುತ್ತಿದ್ದಾರೆ. ಕೃಷಿ ಕ್ಷೇತ್ರದಲ್ಲಿಯೂ ಇದನ್ನು ಟ್ರಾಕ್ಟರುಗಳಲ್ಲಿ ಅಳವಡಿಸಿ ಭೂಮಿಯನ್ನು ಉಳುವಾಗ ಟ್ರಾಕ್ಟರ್ ನೇರವಾಗಿ ಚಲಿಸುವಂತೆ ಮಾಡಲಾಗುತ್ತಿದೆ.

ಪ್ರಪಂಚದಲ್ಲಿ ಸಂಪರ್ಕ ವ್ಯವಸ್ಥೆಯು ಮುಂದುವರಿದು ದೇಶಗಳ ಮಧ್ಯೆ ಪರಸ್ಪರ ಸಂಬಂಧಗಳು ಹೆಚ್ಚಿ ಸಾರಿಗೆಯೂ ಅಭಿವೃದ್ಧಿಯಾಗಿರುವಾಗ ವಿವಿಧ ದೇಶಗಳ ಸಮಯ ಏಕಕಾಲಿಕವಾಗುವುದು ಅನಿವಾರ್ಯ. ಇಂತಹ ಕೆಲಸಕ್ಕೂ ಮನುಕುಲಕ್ಕೆ ನೆರವಾಗುತ್ತಿದೆ ಈ ಜಿಪಿಎಸ್. ಭೂಮಿಯ ಮೇಲಿರುವ ಪ್ರತಿಯೊಂದು ಗ್ರಾಹಕವನ್ನೂ ಕೂಡ ಒಂದು ಪರಮಾಣು ಗಡಿಯಾರವೆಂದು ಭಾವಿಸಬಹುದು. ಖಗೋಳದ ಅಧ್ಯಯನಕ್ಕೆ ಇದು ಬಹಳ ಸಹಾಯಕವಾಗಿದೆ. ಕಂಪ್ಯೂಟರ್ ಜಾಲಗಳು, ಸಂಪರ್ಕ ವ್ಯವಸ್ಥೆಗಳು, ರೇಡಿಯೋ ಮತ್ತು ದೂರದರ್ಶನ ಕೇಂದ್ರಗಳು, ಬ್ಯಾಂಕ್ ಮತ್ತು ಬಹುರಾಷ್ಟ್ರೀಯ ಕಂಪನಿಗಳು ನಿಖರವಾದ ಸಮಯವನ್ನು ಗುರುತಿಸುವ ನಿಟ್ಟಿನಲ್ಲಿ ಜಿಪಿಎಸ್ ವ್ಯವಸ್ಥೆಯಿಂದ ಬಹಳ ಪ್ರಯೋಜನವನ್ನು ಪಡೆಯುತ್ತಿವೆ.

ದಿನನಿತ್ಯ ಜೀವನ

ಇತ್ತೀಚಿಗೆ ಕಣ್ಣು ರೆಪ್ಪೆ ಮಿಟಿಕಿಸುವಷ್ಟರಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಪಾರ ಬೆಳವಣಿಗೆಯಾಗಿ, ಅದರ ಫಲ ಸಾಮಾನ್ಯ ಮನುಷ್ಯನಿಗೂ ಕೂಡ ಸಿಕ್ಕುತ್ತಿರುವುದು ಗಮನಾರ್ಹ. ಹಲವಾರು ದೇಶಗಳಲ್ಲಿ ಈಗ ಕಾರುಗಳಲ್ಲಿ ಜಿಪಿಎಸ್ ಬಳಕೆ ಸಾಮಾನ್ಯವಾಗುತ್ತಿದೆ. ಭಾರತದಲ್ಲಿಯೂ ದೊಡ್ಡ ನಗರಗಳಲ್ಲಿ ಕೆಲವರು ಇದನ್ನು ಬಳಸುತ್ತಿದ್ದಾರೆ. ಆದರೂ ಇಲ್ಲಿ ರಸ್ತೆಯ ಬದಿಯಲ್ಲಿ ವಾಹನ ನಿಲ್ಲಿಸಿ ಅಂಗಡಿಯಲ್ಲೋ, ಓಡಾಡುತ್ತಿರುವ ಜನರನ್ನೋ ದಾರಿ ಕೇಳುವ ರೂಢಿ ಇರುವುದರಿಂದ ಅನೇಕರಿಗೆ ಜಿಪಿಎಸ್ ಅಗತ್ಯ ಕಂಡುಬಂದಿಲ್ಲ. ಆದರೆ ವಾಹನ ದಟ್ಟಣೆ ಹೆಚ್ಚುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಜಿಪಿಎಸ್‌ನ ಅಗತ್ಯ ಹೆಚ್ಚಾಗಬಹುದು. ಭಾಷೆ ಬಾರದಿರುವ ವಿದೇಶಿ ಪ್ರವಾಸಿಗರಿಗೆ ಇದು ಉಪಯುಕ್ತ. ಆಟೋ ಅಥವಾ ಟಾಕ್ಸಿಯಲ್ಲಿ ಇದನ್ನು ಅಳವಡಿಸಿದರೆ ಚಾಲಕರು ಪ್ರವಾಸಿಗರಿಗೆ, ಪ್ರಯಾಣಿಕರಿಗೆ ದಾರಿ ತಪ್ಪಿಸುವ ಅವಕಾಶಗಳೇ ಇರುವುದಿಲ್ಲ. ಆದರೆ ಇದಕ್ಕೆ ಪೂರಕವಾದ ನಕ್ಷೆಗಳು ಸಿದ್ಧವಾಗುವುದು ಅಗತ್ಯ. ಭಾರತದಲ್ಲಿ ಈಗ satnavtech ಎಂಬ ಸಂಸ್ಥೆ ನಕ್ಷೆಗಳು ಹಾಗೂ ತಂತ್ರಾಂಶಗಳನ್ನು ಸಿದ್ಧಪಡಿಸಿ ಮಾರಾಟ ಮಾಡುತ್ತಿದೆ. ಭಾರತ, ಅಮೆರಿಕ, ಜರ್ಮನಿ ಇತ್ಯಾದಿ ದೇಶಗಳ ನಕ್ಷೆಗಳನ್ನು ಒದಗಿಸುತ್ತಿರುವುದರಿಂದ ಅಲ್ಲಿಂದ ಇಲ್ಲಿಗೆ ಬಂದವರಿಗೆ ಹಾಗೂ ಇಲ್ಲಿಂದ ಅಲ್ಲಿಗೆ ಹೋಗುವವರಿಗೆ ಉಭಯತ್ರರಿಗೂ ಇವು ಉಪಯುಕ್ತವೇ ಆಗಿವೆ. ದೆಹಲಿಯಲ್ಲಿರುವ ‘ಮಾಪ್ ಮೈ ಇಂಡಿಯಾ’ ಎಂಬ  ಸಂಸ್ಥೆಯೂ ಭಾರತದಲ್ಲಿ ಸುಮಾರು ೪೦೦ ನಗರಗಳ ನಕ್ಷೆಗಳನ್ನು ಒಳಗೊಂಡಿರುವ ಜಿಪಿಎಸ್ ರೀಸೀವರ್ ಬಿಡುಗಡೆ ಮಾಡಿದೆ(೨೦೦೮-ಜೂನ್). ಇದನ್ನು ಬಹಳ ಸುಲಭವಾಗಿ ಕಾರಿನಲ್ಲಿ ಅಳವಡಿಸಿಕೊಳ್ಳಬಹುದು. ಇದು ಆಗಿಂದಾಗ್ಯೆ ನಗರಗಳಲ್ಲಿ ಉಂಟಾಗುವ ಬೆಳವಣಿಗೆಯನ್ನೂ ಗುರುತಿಸಿ ನಕ್ಷೆಗಳಲ್ಲಿ ಅಳವಡಿಸುತ್ತದೆ. ಮುಂದೊಂದು ದಿನ ನಮ್ಮ ದೇಶದಲ್ಲಿ ಮೊಬೈಲ್ ಫೋನ್ ತರಹ ಜಿಪಿಎಸ್ ಕೂಡ ಸರ್ವೇ ಸಾಮಾನ್ಯವಾಗಿ ಬಳಕೆಯಾಗುವ ವಸ್ತುವಾದರೆ ಆಶ್ಚರ್ಯವೇನಿಲ್ಲ.

ಹೀಗೆ ಜಿಪಿಎಸ್ ಸಾಮಾನ್ಯವಾದ ಬಳಕೆಯ ಸಾಧನವಾದಾಗ ಅದರ ಬೆಲೆ, ಗಾತ್ರ, ರೂಪ ಎಲ್ಲವೂ ಬದಲಾಗಬೇಕಾದದ್ದು ಅಗತ್ಯವಾಯಿತು. ಈಗ ಕೈಗಡಿಯಾರಗಳಲ್ಲಿ ಬೀಗದ ಕೈ ಗೊಂಚಲಿನಲ್ಲಿ ಜಿಪಿಎಸ್ ಅಳವಡಿಸಲಾಗುತ್ತಿದೆ. (ಆದರೆ ಇದರ ಜೊತೆ ಸೂಕ್ತವಾದ ಮೊಬೈಲ್ ದೂರವಾಣಿ ಅವಶ್ಯಕ.) ಉಪಗ್ರಹಗಳಲ್ಲಿ ಅತಿ ನಿಖರತೆಯ ಪರಮಾಣು ಗಡಿಯಾರಗಳಿರುತ್ತವೆ. ಆದರೆ ಸಾರ್ವಜನಿಕ ಬಳಕೆಯಲ್ಲಿ ಇಂತಹ ಗಡಿಯಾರಗಳನ್ನು ಬಳಸುವುದು ಗಾತ್ರದ ದೃಷ್ಟಿಯಿಂದಲೂ, ಬೆಲೆಯ ದೃಷ್ಟಿಯಿಂದಲೂ ಸಾಧ್ಯವಿಲ್ಲದ ವಿಷಯ. ಇದಕ್ಕೆ ಪರಿಹಾರವಾಗಿ ಗ್ರಾಹಕಗಳಲ್ಲಿ ಸ್ಫಟಿಕ ಗಡಿಯಾರಗಳನ್ನು ಅಳವಡಿಸಿ ಕೆಲವು ತಿದ್ದುಪಡಿಗಳನ್ನು ಅಳವಡಿಸಲಾಗುತ್ತಿದೆ.

ಜಿಪಿಎಸ್ ಗ್ರಾಹಕದಿಂದ ಜನರ ಚಲನವಲನವನ್ನೂ ಗಮನಿಸುವುದು ಸಾಧ್ಯವಾಗಿದೆ. ಮರೆವು ರೋಗದಿಂದ ಬಳಲುತ್ತಿರುವ ವ್ಯಕ್ತಿಗಳು ಇದನ್ನು ಧರಿಸಿದರೆ ಅವರ ಮೇಲೆ ನಿಗಾ ವಹಿಸುವುದು ಸಾಧ್ಯ. ವಿದೇಶವೊಂದರಲ್ಲಿ ಮರೆವು ರೋಗದಿಂದ ಬಳಲುತ್ತಿರುವ ವಯಸ್ಸಾದ ತನ್ನ ತಂದೆಗೆ ಸಂಕೇತ ರವಾನಿಸುವ ಉಪಕರಣವನ್ನು ಕಟ್ಟಿ ಆತ ಮನೆಯಲ್ಲಿದ್ದರೂ ಹೊರಗೆ ಹೋದರೂ ಕಂಪ್ಯೂಟರ್ ಸಹಾಯದಿಂದ ತನ್ನ ಕೆಲಸದ ಸ್ಥಳದಿಂದಲೇ ಅವರ ಚಲನವಲನಗಳನ್ನು ಗಮನಿಸುವುದು ಸಾಧ್ಯವಾಗಿದೆ ಎನ್ನುತ್ತಾನೆ ಆತನ ಮಗ. ಸಾಕು ನಾಯಿಗಳಿಗೆ ಇಂತಹ ಉಪಕರಣವನ್ನು ಕಟ್ಟಿದರೆ, ಅದು ಎಲ್ಲಿದೆ ಎಂದು ತಿಳಿದುಕೊಳ್ಳಬಹುದಂತೆ. ಇದು ಕೇವಲ ನಾಯಿಗೇ ಏಕೆ ನಿಮ್ಮ ಮಗುವಿಗೂ ಕಟ್ಟಬಹುದೆಂಬುದು ಮತ್ತೊಂದು ಸಲಹೆ. ಇದೇ ವಾದವನ್ನು ಮುಂದುವರಿಸಿ ದೊಡ್ಡ ಮಕ್ಕಳಿಗೂ, ಗಂಡ ಹೆಂಡತಿಯರಿಗೂ ವಿಸ್ತರಿಸಬಹುದುಲ್ಲವೇ? ಆದರೆ ಇಲ್ಲಿ ಉಪಕರಣವನ್ನು ಧರಿಸಿರುವವರು ಅದನ್ನು ಕಿತ್ತೊಗೆಯಬಹುದೆಂಬುದನ್ನು ಮರೆಯದಿರಿ. ಅದಕ್ಕಾಗಿ ಕೆಲವು ವಿದೇಶಿ ಕಂಪನಿಗಳು ಅದನ್ನು ಧರಿಸುವವರಿಗೂ ಗೊತ್ತಾಗದಂತೆ ಉಡುಪಿನಲ್ಲಿ ಅತಿ ಸೂಕ್ಷ್ಮವಾದ ಸಂವೇದಕಗಳನ್ನು ಅಳವಡಿಸುವುದರಲ್ಲಿ ಯಶಸ್ವಿಯಾಗಿವೆಯಂತೆ!

ಮತ್ತೊಂದು ಕುತೂಹಲಕಾರಿ ವಿಷಯ. ಮೌಂಟ್ ಎವೆರೆಸ್ಟ್‌ನ ಎತ್ತರವನ್ನು ಹಲವರು ಮುಂಚೆಯೇ ಅಳೆದಿದ್ದರೂ ಜಿಪಿಎಸ್ ಗ್ರಾಹಕವನ್ನು ಬಳಸಿ ಅಳೆದ ನಂತರ ಅದಕ್ಕೆ ಮತ್ತಷ್ಟು ಪುಷ್ಟಿ ದೊರೆಯಿತು. ಅಲ್ಲದೆ ಕುಂಬು ಹಿಮನದಿಯು ಎವರೆಸ್ಟ್ ಕಡೆಗೆ ಹರಿದಂತೆಲ್ಲಾ ಪರ್ವತವು ಎತ್ತರವಾಗಿ ಬೆಳೆಯುತ್ತಿರುವುದು ಬೆಳಕಿಗೆ ಬಂತು.

ಜಿಯೋ ಕ್ಯಾಚಿಂಗ್ ಎಂಬ ಸಾಹಸ ಕ್ರೀಡೆ

ಈಗ ಜಿಪಿಎಸ್ ಗ್ರಾಹಕವನ್ನು ಸಾಹಸ ಕ್ರೀಡೆಗಳಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಉನ್ನತ ತಾಂತ್ರಿಕತೆಯನ್ನು ಕಣ್ಣಾಮುಚ್ಚಾಲೆ ಆಟಕ್ಕಾಗಿ ಬಳಸಿಕೊಳ್ಳುವ ಪರಿ ಹೀಗಿದೆ. ಕೆಲವು ಸಂಸ್ಥೆಗಳು ವಾರಾಂತ್ಯಗಳಲ್ಲಿ ‘ಟ್ರೆಷರ್ ಹಂಟ್’ ಆಟದಂತೆಯೇ ಇರುವ ‘ಜಿಯೋ ಕ್ಯಾಚಿಂಗ್’ ಆಟವನ್ನು ಏರ್ಪಡಿಸುತ್ತವೆ. ಸಂಕೇತ ರವಾನಿಸುವ ಒಂದು ಉಪಕರಣವನ್ನು ಗುಪ್ತವಾಗಿಡಲಾಗುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವವರು ಅದರಿಂದ ಹೊರಹೊಮ್ಮುವ ಸಂಕೇತಗಳನ್ನು ತಮ್ಮ ಜಿಪಿಎಸ್ ರಿಸೀವರ್ ಮೂಲಕ ಗ್ರಹಿಸಿ ಆ ಜಾಗಕ್ಕೆ ತಲುಪುವುದೇ ಆಟದ ಕ್ರಮ. ಗುಪ್ತಸ್ಥಳ ತಲುಪಿದ ಸಾಹಸಿಗಳಿಗೆ ಅಲ್ಲಿ ಚಿಕ್ಕ ಕೊಡುಗೆಗಳೂ ಇರುತ್ತವೆ. ಕೊಡುಗೆಯೊಂದನ್ನು ತೆಗೆದುಕೊಂಡು, ಅಲ್ಲಿರುವ ಪುಸ್ತಕದಲ್ಲಿ ಸ್ವವಿವರಗಳನ್ನು ದಾಖಲಿಸಿದರೆ ಅವರು ಆಟದಲ್ಲಿ ಗೆದ್ದಂತೆ. ಅನಂತರ ಮತ್ತಷ್ಟು ಜನ ಆ ಜಾಗವನ್ನು ತಲುಪಲು ಸಾಧ್ಯವಾಗುವಂತೆ ಎಲ್ಲವನ್ನೂ ಅದೇ ಸ್ಥಿತಿಯಲ್ಲಿಡಬೇಕು. ಮೋಜಿನ ಆಟಗಾರರು ನೂರಾರು ಮೈಲಿ ಬೆಟ್ಟಗುಡ್ಡಗಳೆನ್ನದೆ ಅಲೆದಾಡಿ ಗುಪ್ತಸ್ಥಾನವನ್ನು ಕಂಡು ಹಿಡಿಯುತ್ತಾರೆ! ಆಟವನ್ನು ರೂಪಿಸುವವರು, ಅದಕ್ಕೆ ಅಗತ್ಯವಾದ ಉಪಕರಣಗಳನ್ನು ಮಾರಾಟ ಮಾಡುವವರು ಕುಳಿತಲ್ಲಿಯೇ ಹಣ ಸಂಪಾದಿಸುತ್ತಾರೆ!

ಆದರೆ ಕಳೆದ ವರ್ಷ ಎಂದರೆ ೨೦೦೮ರಲ್ಲಿ ಮುಂಬಯಿ ತಾಜ್ ಹೋಟಲಿನ ಮೇಲೆ ದಾಳಿ ಮಾಡಿದ ಉಗ್ರರೂ ಕೂಡ ಜಿಪಿಎಸ್ ಗ್ರಾಹಕದ ಪ್ರಯೋಜನ ಪಡೆದುಕೊಂಡಿದ್ದರೆಂಬುದನ್ನು ನೆನಪು ಮಾಡಿಕೊಳ್ಳಬಹುದು. ವಿಜ್ಞಾನದ ಯಾವುದೇ ಆವಿಷ್ಕಾರಕ್ಕೂ ಇಂತಹ ಕಪ್ಪು ಚುಕ್ಕೆ ತಪ್ಪಿದ್ದಲ್ಲ.

ಜಿಪಿಎಸ್ ಬಗ್ಗೆ ಇಷ್ಟೆಲ್ಲಾ ಹೇಳಿದ ನಂತರ ಒಂದು ಕತೆ ನೆನಪಾಗುತ್ತಿದೆ. ಅದರ ಕರ್ತೃ ಯಾರೆಂಬುದು ನೆನಪಿಗೆ ಬರುತ್ತಿಲ್ಲ. ಸಾರಾಂಶ ಮಾತ್ರ ಮನಸ್ಸಿನಲ್ಲಿ ಅಚ್ಚಳಿಯದೆ ನಿಂತಿದೆ. -ಇಬ್ಬರು ಸ್ನೇಹಿತರು ರಾತ್ರಿಯ ಕತ್ತಲಿನಲ್ಲಿ ಮನೆಗೆ ಬರುತ್ತಿರುತ್ತಾರೆ. ಅದರಲ್ಲಿ ಒಬ್ಬ ಕುರುಡ. ಸ್ನೇಹಿತ ಕುರುಡ ಮಿತ್ರನನ್ನು ಬಹಳ ಕಾಳಜಿಯಿಂದ ಕರೆತರುತ್ತಿರುತ್ತಾನೆ. ಇದ್ದಕ್ಕಿದ್ದಂತೆ ವಿದ್ಯುಚ್ಛಕ್ತಿ ಕಡಿತವಾಗಿ ಗಾಢಾಂಧಕಾರವಾಗುತ್ತದೆ. ಆಗ ಕಣ್ಣಿದ್ದ ಮಿತ್ರನೂ ಕುರುಡಾಗುತ್ತಾನೆ. ಆಗ ಕುರುಡ ತನ್ನ ಮಿತ್ರನಿಗೆ ಧೈರ್ಯವಾಗಿರುವಂತೆ ಹೇಳುತ್ತಾನೆ. ‘ನೀನು ಹೆದರಬೇಡ. ನನಗೆ ಈ ರಸ್ತೆಯಲ್ಲಿ ಸಾಗಲು ಅನೇಕ ಗುರುತುಗಳಿವೆ. ಸ್ವಲ್ಪ ದೂರ ನಡೆದ ನಂತರ ಒಬ್ಬರ ಮನೆಯಲ್ಲಿ ನಿತ್ಯಮಲ್ಲಿಗೆ ಹೂ ಅರಳುತ್ತಿರುತ್ತವೆ. ಅವುಗಳ ಪರಿಮಳ ಮೂಗಿಗೆ ಬಡಿಯುತ್ತಲೇ ಮುಂದೆ ಸುಮಾರು ನೂರು ಹೆಜ್ಜೆಗಳಾದ ನಂತರ ಒಂದು ಬಲ ತಿರುವಿನಲ್ಲಿ ತಿರುಗಬೇಕು. ಮುಂದೆ ಒಂದು ಸಣ್ಣ ಓಣಿ ಇದೆ. ಅಲ್ಲಿ ಒಬ್ಬ ಬೋಂಡಾ ಮಾರುವವನಿದ್ದಾನೆ. ಈರುಳ್ಳಿ ಬೋಂಡಾ ಕರಿದ ಘಮ ಯಾರಿಗೆ ಬರುವುದಿಲ್ಲ? ಆ ಓಣಿಯಲ್ಲಿ ಸಾಗಿದರೆ ಒಂದು ಮನೆಯಲ್ಲಿರುವ ನಾಯಿ ಮನೆ ಮುಂದೆ ಯಾರಾದರೂ ಹೋದರೆ ಸಾಕು, ಬೊಗಳುತ್ತದೆ. ಇಲ್ಲವೆ ಕುಯ್‌ಗುಡುತ್ತಿರುತ್ತದೆ. ಅಲ್ಲಿಂದ ಮೂರನೆಯ ಮನೆಯೇ ನನ್ನ ಮನೆ. ನೀನು ನನ್ನ ಕೈ ಹಿಡಿದುಕೋ ನನ್ನ ಮನೆಯವರೆಗೂ ನಿನ್ನನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಜವಾಬ್ದಾರಿ ನನ್ನದು’ ಎಂದು ಹೇಳುತ್ತಾನೆ.- ಇಲ್ಲಿ ಇಂದ್ರಿಯಗಳು ಹಾಗೂ ಪರಿಸರವೇ ಕುರುಡನಿಗೆ ದಾರಿ ತೋರಿಸುತ್ತವೆ. ಇದೂ ಮನುಷ್ಯನ ಜಾಣ್ಮೆಯೇ   ಇಂದು ಅಪರಿಚಿತ ಪ್ರದೇಶದಲ್ಲಿಯೂ ನಿಖರವಾಗಿ ದಾರಿ ತೋರಲು ನಿಮಗೆ ಸಂಗಾತಿಯಂತಿರುವ ಜಿಪಿಎಸ್‌ನ ವಿನ್ಯಾಸ ಮಾಡಿರುವುದು ಮನುಷ್ಯನ ಬುದ್ಧಿವಂತಿಕೆಯ ಸಂಕೇತವಾಗಿದೆ. ಅತ್ಯುನ್ನತ ವಿಜ್ಞಾನ ಮತ್ತು ತಂತ್ರಜ್ಞಾನಗಳ ಸಹಕಾರದಿಂದ ಸಾಧಿಸಿಲಾಗಿರುವ ಭೌಗೋಳಿಕ ಸ್ಥಾನ ನಿರ್ದೇಶಕ ವ್ಯವಸ್ಥೆ ಮಾನವಕುಲದ ಮಹತ್ತರವಾದ ಸಾಧನೆಗಳಲ್ಲೊಂದಾಗಿದೆ.

ಜಿಪಿಎಸ್ಹೆಚ್ಚುವರಿಮಾಹಿತಿಜಿಪಿಎಸ್ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ, ಕಾಡುಗಳಲ್ಲಿ ಸಹ ಬಳಕೆಯಾಗುತ್ತದೆ. ಒಬ್ಬ ವನ್ಯಜೀವಿ ವಿಜ್ಞಾನಿಯ ಪ್ರಮುಖ ಪರಿಕರಗಳಲ್ಲಿ ಒಂದಾಗಿ ಬೆಳೆದಿದೆ, ಈ ಜಿಪಿಎಸ್. ಇದರಲ್ಲಿ ಅನೇಕ ಬಗೆಗಳು ಬಂದಿದ್ದು, ವನ್ಯಜೀವಿ ಸಂಶೋಧನೆಯಲ್ಲಿ ತೊಡಗಿದವರಿಗೆ ಪ್ರಯೋಜನಕಾರಿಯಾಗಿವೆ.ಬಹಳ ಮುಖ್ಯವಾದ ಉಪಯೋಗವೆಂದರೆ, ಹಿಂದೆ, ಹೊಸ ಪ್ರಭೇದದ ಅಥವಾ ಅಳಿವಿನಂಚಿನಲ್ಲಿರುವ ಪ್ರಾಣಿ ಪ್ರಬೇಧ ಕಂಡಾಗ, ಕಂಡ ಸ್ಥಳದ ಅಕ್ಷಾಂಶ ಹಾಗೂ ರೇಖಾಂಶಗಳನ್ನು ಗುರುತಿಸಿಕೊಳ್ಳಲಾಗುತ್ತಿತ್ತು. ಈಗ ಜಿಪಿಎಸ್ ಬಂದ ನಂತರ ಜಿಪಿಎಸ್ ಕೋಆರ್ಡಿನೇಟ್ಸ್ ಸಂಖ್ಯೆಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇದೊಂದು ಹೊಸಾ ಹೆಜ್ಜೆ ವಿಜ್ಞಾನದಲ್ಲಿ.ಅಂತೆಯೇ, ಇನ್ನು ಅನೇಕ ಬಗೆಯ ಪ್ರಯೋಜನಗಳುಂಟು. ಉದಾಹರಣೆಗೆ, ಕಾಡಿನಲ್ಲಿ ಸಂಚರಿಸುವಾಗ ಮುಖ್ಯಸ್ಥಳಗಳನ್ನು ಇದರಲ್ಲಿ ಗುರುತಿಸಿದರೆ, ಹಿಂದಿರುಗುವಾಗ ಇದೇ ಹಾದಿ ತೋರುತ್ತದೆ! ಹಾದಿ ತಪ್ಪಿದಲ್ಲಿ ಬೀಪ್ ಬೀಪ್ ಶಬ್ದದ ಮೂಲಕ ಎಚ್ಚರಿಸುತ್ತದೆ! ಸದಾ ಕಾಡಿನಲ್ಲಿ ಸಂಚರಿಸುವ ಗಾರ್ಡ್‌ಗಳು ಸೇರಿದಂತೆ ಇತರೆ ಅರಣ್ಯ ಸಿಬ್ಬಂದಿಗೂ ಇದು ತುಂಬಾ ಉಪಕಾರಿ. ಕಾಡು ಪ್ರಾಣಿಗಳು ಅಟ್ಟಿಸಿಕೊಂಡು ಬಂದ ಸಂದರ್ಭದಲ್ಲಿ ಯದ್ವಾತದ್ವ ಓಡಿ ಪ್ರಾಣ ಉಳಿಸಿಕೊಂಡವರಿಗಂತೂ ದಾರಿ ಹುಡುಕಿ ನಗರ ಸೇರಲು ಇದೊಂದು ವರದಾನ!

ಚಿತ್ರ ಮತ್ತು ಮಾಹಿತಿ-ಕೃಪೆ ಅಂತರಜಾಲ