ದಾರಿ :
ಹರಿದಾರಿ ಹರಿದಾರಿ ಹರಿದಿರುವ ದಾರಿ
ಅಲ್ಲಿಯೂ ದಾರಿ ಇಲ್ಲಿಯೂ ದಾರಿ
ಎಲ್ಲಿಯೂ ನೂರು ದಾರಿ !
ಆಕಾಶದಲ್ಲಿ ಪಾತಾಳದಲ್ಲಿ
ಅಂತರಂಗದಲ್ಲಿ
ಕಾಡುಗಳ ಮೇಲೆ ಮೇಡುಗಳ ಮೇಲೆ
ಬೆಟ್ಟಗಳ ಮೇಲೆ ಘಟ್ಟಗಳ ಮೇಲೆ
ಹಿಮಗಿರಿಯ ತುದಿಯವರೆಗೂ
ಗ್ರಹಗ್ರಹದ ಎದೆಯವರೆಗೂ
ತಲೆ ತಲೆಯ ಮೇಲೆ
ಎದೆ ಎದೆಯ ಮೇಲೆ
ನೂರಾರು ಹೆಜ್ಜೆ ತುಳಿತುಳಿದು ನಡೆದು
ಮಾಡಿರುವ ದಾರಿಯಲ್ಲಿ
ಅತ್ತರಿನ ದಾರಿ ನೆತ್ತರಿನ ದಾರಿ
ಗೋರಿಗಳ ದಾರಿಯಲ್ಲಿ,
ನಡೆದುದೇ ದಾರಿ ನುಡಿದುದೇ ದಾರಿ
ಎಂಬ ರೀತಿಯಲ್ಲಿ
ನೂರು ದಾರಿಗಳ ಜೇಡಜಾಲದಲಿ
ದಿಕ್ಕು ತಪ್ಪುತಲೆದು
ಇದ ಪ್ರಗತಿಯೆಂದು ಕರೆದು
ತಡಕಾಡುತಿಹುದು ಮನುಕುಲವು ನೋಡು
ಆ ಜ್ಯೋತಿ ಪಥವ ಮರೆದು !