ಸಿಟ್ರಸ್ ಜಾತಿಗೆ ಸೇರಿದ ಹಣ್ಣುಗಳಲ್ಲೊಂದಾದ ’ಕಿನೊ’ ಹೆಚ್ಚಿನ ಪ್ರಮಾಣದಲ್ಲಿ ನೆರೆಯ ಪಾಕಿಸ್ತಾನದಲ್ಲಿ ಬೆಳೆದರೆ, ಅದರ ಅಂಚಿನಲ್ಲಿರುವ ನಮ್ಮ ಪಂಜಾಬ ರಾಜ್ಯದ ರೈತರೂ ಸ್ವಲ್ಪು ಪ್ರಮಾಣದಲ್ಲಿ ಬೆಳೆಯುತ್ತಾರೆ, ಜತೆಗೆ ರಾಜಸ್ಥಾನದಲ್ಲೂ ಈ ಬೆಳೆ ಹಿಂದಿನಿಂದಲೂ ಪಡೆಯುತ್ತಾ ಬಂದಿದ್ದಾರೆ.

ಆದರೆ, ದಕ್ಷಿಣ ಭಾರತದಲ್ಲಿ ಪರಿಚಯವೇ ಇಲ್ಲದ ಈ ಕಿನೊ ಬೆಳೆಯನ್ನು ಮೊಟ್ಟ ಮೊದಲಾಗಿ ಕರ್ನಾಟಕದ ಕೊಪ್ಪಳ ಜಿಲ್ಲೆಯ ಕೆಲ ರೈತರು ಪ್ರಾಯೋಗಿಕವಾಗಿ ಬೆಳೆದು ಈಗ ರೈತ ಸಮೂಹಕ್ಕೆ ಪರಿಚಯಿಸಲು ಹೊರಟಿದ್ದಾರೆ.

ಈಗ್ಯಾಕೆ ಬಂತು? : ’ಹೊಟ್ಟೆ ತುಂಬಿದವ್ನಿಗೆ ಪರ ಮಂದಿಯ ಚಿಂತ್ಯಾಕ’ ಎಂಬಂತೆ ಇದುವರೆಗೂ ಕಣ್ಣು ಕೋರೈಸುವ ದಾಳಿಂಬೆಯ ರಾಶಿಯನ್ನೇ ನಂಬಿ, ಅದರಲ್ಲೇ ಮಗ್ನರಾಗಿದ್ದ ರೈತರಿಗೆ ದಾಳಿಂಬೆ ಬೆಳೆಯ ಮುಂದೆ ಎಲ್ಲ ಬೆಳೆಗಳು ಗೌಣವಾಗಿದ್ದವು. ಆ ಸುಭಿಕ್ಷೆಯ ಸಮಯದಲ್ಲಿ ವಿದೇಶಕ್ಕೆ ರಫ್ತು ಮಾಡಿ ಸಾಕಷ್ಟು ಆದಾಯ ಪಡೆದುಕೊಂಡಿದ್ದರು. ಸಣ್ಣ ರೈತರು ಆಸೆ ಗಣ್ಣಿನಿಂದ ತಾವು ಅಲ್ಪ ಸ್ವಲ್ಪ ಹಣ ಮಾಡಿಕೊಳ್ಳಬಹುದು ಎಂಬ ದೂರದ ಆಸೆಯಿಂದ ಸಾಲ ಮಾಡಿ ದಾಳಿಂಬೆ ಬೆಳೆ ಹಾಕಿಕೊಂಡಿದ್ದರು. ಆದರೆ ಕಳೆದ ಆರು ವರ್ಷಗಳ ಹಿಂದೆ ದಾಳಿಂಬೆಗೆ ಸಣ್ಣದಾಗಿ ಕಾಣಿಸಿಕೊಂಡಿದ್ದ ದುಂಡಾಣು ಎಂಬ ರೋಗ ಈಗ ಬಲಿತು ದಾಳಿಂಬೆ ಗಿಡಗಳನ್ನೇ ನುಂಗಿ ಹಾಕುತ್ತಲಿದೆ. ರೈತರು ಏನೆಲ್ಲ ಪ್ರಯತ್ನ ಮಾಡಿದರೂ ಈ ಅಂಗಮಾರಿ ಬ್ರ್ಯಾಕ್ಟೇರಿಯಲ್ ಬ್ಲೈಟ್ ನಿಯಂತ್ರಣಕ್ಕೆ ಬರಲಿಲ್ಲ. ಮುಂದೆ ದಾಳಿಂಬೆಗೆ ಉಳಿಗಾಲವಿಲ್ಲ ಎಂದು ಹಿಂದೆಯೇ ಅರಿತುಕೊಂಡಿದ್ದ ಕೆಲ ರೈತರು ದಾಳಿಂಬೆಗೆ ಪರ‍್ಯಾಯವಾಗಿ ಇಲ್ಲಿನ ಮಣ್ಣಿಗೆ, ನೀರಿಗೆ, ವಾತಾವರಣಕ್ಕೆ ಸೂಕ್ತವೆನಿಸುವಂತಹ ಬೆಳೆಯ ಬಗ್ಗೆ ಆಲೋಚಿಸಿ ತಂದದ್ದೇ ಈ ಕಿನೊ ಬೆಳೆ.

ಏನಿದು ಕಿನೊ :  ಆಕಾರದಲ್ಲಿ ಹೆಚ್ಚು ಕಡಿಮೆ ಕಿತ್ತಳೆ ಹಣ್ಣಿನ ಆಕಾರವನ್ನೇ ಹೋಲುವ ಈ ಕಿನೊ ರುಚಿಯಲ್ಲಿ ಮಾತ್ರ ಕೊಂಚ ಮೋಸಂಬಿ ಹಣ್ಣಿನ ಮಧುರತೆ ಹೊಂದಿದೆ. ಆದರೆ ಉಳಿದೆಲ್ಲ ಹಣ್ಣುಗಳಲ್ಲಿರುವ ಸಿಟ್ರಸ್ ಪ್ರಮಾಣಕ್ಕಿಂತ ಹೆಚ್ಚು ಪ್ರಮಣ (ಶೇಕಡಾ ೬೦) ಈ ಹಣ್ಣಿನಲ್ಲಿರುತ್ತದೆ.

ಹೆಚ್ಚು ಖರ್ಚು ಬೇಡದ, ಚಳ್ಳೆಹಣ್ಣಿನಂತೆ ಹುಚ್ಚಾಪಟ್ಟಿ ಹಣ್ಣು ಕೊಡುವ ಈ ಗಿಡ ವರ್ಷಕ್ಕೆ ಒಂದು ಬಾರಿ ಬೆಳೆ ನೀಡುತ್ತದೆ.

ಕಿನೊ ಹಣ್ಣುಗಳನ್ನು ವಿಂಗಡಿಸುತ್ತಿರುವುದು.

ಮಧುರ ರುಚಿಯನ್ನು ಹೊಂದಿದೆ. ತಿನ್ನಲು, ಜ್ಯೂಸ್ ತಯರಿಸಲು ಹಾಗೂ ಫಾರ್ಮಟಿಕಲ್ಸ್‌ಗಳಿಗೆ ಹೆಚ್ಚಿನ ರೀತಿಯಲ್ಲಿ ಬಳಕೆಯಗುತ್ತದೆ. ರಸ ಹೀರಿದ ನಂತರ ಉಳಿಯುವ ತಿರುಳು (ಪಲ್ಪ್) ವಿವಿಧ ರೀತಿಯ ಜಾಮ್, ಸಾಸ್ ತಯಾರಿಸುತ್ತಾರೆ. ಪಾಕಿಸ್ತಾನ ಹಾಗೂ ಪಂಜಾಬದಲ್ಲಿನ ಜನರು ಊಟದ ನಂತರ ತಿನ್ನುವ ಸಿಹಿ ಖಾದ್ಯವನ್ನು ಇದರ ರಸ ರಹಿತ ಪಲ್ಪ್‌ನಿಂದ ಮಾಡುವುದು ರೂಢಿ ಇದೆ. ಕಾಯಿ ಮೇಲಿನ ಸಿಪ್ಪೆಯನ್ನು ಒಣಗಿಸಿ ಸೌಂದರ‍್ಯ ವರ್ಧಕಗಳಲ್ಲೂ ಬಳಕೆಯಗುತ್ತದೆ. ಹೀಗೆ ಈ ಕಿನೊ ಹಣ್ಣಿನ ಪ್ರತಿಯೊಂದು ಭಾಗಗಳು ವಿವಿಧ ರೀತಿಯಲ್ಲಿ ಬಳಕೆಯಗುವುದರಿಂದ ‘ಕಿನೊ’ಕ್ಕೆ ಭಾರಿ ಬೇಡಿಕೆ ಇದೆ. ಆದರೆ ಬೆಳೆಯ ಪ್ರಮಾಣ ಕಡಿಮೆ ಇರುವುದರಿಂದ ಎಲ್ಲ ಮರುಕಟ್ಟೆಗಳಲ್ಲಿ ಅಲಭ್ಯ.

ನವ್ಹೆಂಬರ್ ದಿಂದ ಮರ್ಚ ಅಂತ್ಯದವರೆಗೂ ಹಣ್ಣು ಪಡೆಯಲು ಸೂಕ್ತ ಸಮಯವಷ್ಟೆ ಅಲ್ಲ ಕಿನೊ ಬೆಳೆಗೆ ಅದೊಂದು ಪರ್ವ ಕಾಲವು ಹೌದು. ಅದರ ನಂತರದಲ್ಲೂ ಹಣ್ಣುಗಳೇನೂ ಬರುತ್ತವೆ ಆದರೆ ಬೆಳೆಗೆ ಆಗಿನ ವಾತಾವರಣ ಅಷ್ಟೊಂದು ಪೂರಕವಾಗಿರದೆ ಇರುವುದರಿಂದ ಅಷ್ಟೊಂದು ತಾಜಾತನದಿಂದಲೂ ಕೂಡಿರುವುದಿಲ್ಲ, ಜತೆಗೆ ಆ ಹಣ್ಣುಗಳಲ್ಲಿ ಸಿಟ್ರಸ್ ಪ್ರಮಣವೂ ಕಡಿಮೆ ಇರುತ್ತದೆ. ಈ ಕಾರಣದಿಂದಲೇ ನವ್ಹೆಂಬರ್ ದಿಂದ ಮರ್ಚ ಅಂತ್ಯದೊಳಗೆನೇ ಹಣ್ಣು ಕೊಯ್ಲಿಗೆ ಬರುವಂತೆ ಮಾಡಲು ರೈತರು ರೈತರು ವ್ಯವಸ್ಥೆ ಮಾಡಿಕೊಂಡಿರುತ್ತಾರೆ. ಕಿನೊ ಹಣ್ಣು ಸುಲಿಯಲು ಬಹು ಸರಳವಾದ ಮೇಲ್ದೊಗಟೆಯನ್ನು ಹೊಂದಿದ್ದು ಯವುದೇ ಸಂದರ್ಭದಲ್ಲೂ ತಿಂದು ತಕ್ಷಣ ತಾಜಾತನ ಪಡೆದುಕೊಳ್ಳಬಹುದು.

ಮಿಶ್ರಬೆಳೆಯಾಗಿಯೇ ಇತ್ತು : ಆದಾಗ್ಯೂ ಅನುಮಾನದಿಂದಲೇ ಪ್ರಾಯೋಗಿಕವಾಗಿ ದಾಳಿಂಬೆ ಬೆಳೆಯಲ್ಲಿ ಮಿಶ್ರಬೆಳೆಯಾಗಿ ಕಿನೊ ನಾಟಿ ಮಾಡಿದ್ದರು. ಈಗ ದಾಳಿಂಬೆ ನೆಲಕಚ್ಚುತ್ತಿದ್ದಂತೆ ಅದರ ಸ್ಥಾನದಲ್ಲಿ ನಿಂತ ಈ ಕಿನೊ ಅವರ ಕೈ ಹಿಡಿದಿರುವುದನ್ನು ನೋಡಿದರೆ ಈ ಭಾಗದಲ್ಲೂ ಕಿನೊ ಬೆಳೆಯಬಹುದು ಎಂಬ ಆಶಾಭಾವನೆ ರೈತರ ಮನದಲ್ಲಿ ಮೂಡಿದೆ ಎನ್ನುತ್ತಾರೆ.

ಇದೆ ನೋಡಿ ಕನ್ನಡ ನಾಡಿಗೆ ಬಂದ ಕಿನೊ.

ಪಂಜಾಬನನೂ ತಂಪಾದ ವಾತಾವರಣವಿದೆ ಆದ್ರೆ, ಗುಜರಾತ ರಾಜ್ಯದ ಗಂಗಾನಗರದ ಬೇಸಿಗೆಯಲ್ಲಿ ಅತ್ಯಂತ ಬಿಸಿಲು ಹಾಗೂ ಚಳಿಗಾಲದಲ್ಲಿ ಅತ್ಯಂತ ಚಳಿ ಹೀಗಿರುವ ಪ್ರದೇಶದಲ್ಲೂ ಕಿನೋ ಉತ್ತಮ ಇಳುವರಿ ಕೊಡುತ್ತಿದ್ದರೆ ನಮ್ಮಲ್ಲಿಯೂ ಹೆಚ್ಚು ಕಡಿಮೆ ಅಂತಹದ್ದೇ ವಾತಾವರಣ ಇರುವುದರಿಂದ ಬೆಳೆಯಲು ಸೂಕ್ತವೆನಿಸಬಹುದು ಎಂಬ ವಿಚಾರದಿಂದ ಸಸಿ ತೆಗೆದುಕೊಂಡು ಬಂದು ನಾಟಿ ಮಾಡಿದ್ದರು. ಪಂಜಾಬದಲ್ಲಿ ತಂಪಾದವಾತಾವರಣವಿದೆ ಹೀಗಾಗಿ ಅಲ್ಲಿನ ಹಣ್ಣುಗಳು ಹೆಚ್ಚಿನ ಸಿಹಿ ಹೊಂದಿರುತ್ತದೆ, ನಮ್ಮಲ್ಲಿ ಅಷ್ಟೊಂದು ಪೂರಕವಾದ ವಾತಾವರಣವಿಲ್ಲ ಹಣ್ಣುಗಳು ಹುಳಿಯಗುವ ಸಾಧ್ಯತೆ ಇರುತ್ತದೆ, ಪಾಕಿಸ್ತಾನ, ಪಂಜಾಬ, ಗುಜರಾತನಲ್ಲಿ ಇರುವ ಹಣ್ಣಿನ ಗುಣಮಟ್ಟ ನಮ್ಮಲ್ಲಿ ಬರುವ ಸಾಧ್ಯತೆ ಕಡಿಮೆ. ಹೀಗಾಗಿ ರೈತರು ಅಷ್ಟೊಂದು ಆತುರ ಪಡದೇ ಕ್ರಮೇಣ ಗಮನಿಸಿ ಬೆಳೆಯಲು ಹಾಕಲು ಸೂಕ್ತ ಎಂದು ಸಲಹೆ ನೀಡುತ್ತಾರೆ. 

ನಾಟಿಗೆ ಸಮಯ : ಕಿನೋ ಸಸಿ ನಾಟಿ ಮಡಿದ ಮೂರು ವರ್ಷಗಳ ನಂತರ ಫಸಲು ಪಡೆಯಬಹುದು. ಈ ಗಿಡ ಸಿಟ್ರಿಕ್ ಆಮ್ಲ ಹೊಂದಿರುವುದರಿಂದ ರೋಗ-ರುಜಿನಗಳ ಕಾಟ ಕಡಿಮೆ. ಆದರೆ ಥ್ರಿಪ್ಸ್ ರೋಗ ಬರುತ್ತದೆ ಅದನ್ನು ಸರಳವಾಗಿ ನಿಯಂತ್ರಿಸಬಹುದು.

ಸಾವಯವ ಕಿನೊ ಹಣ್ಣುಗಳ ಕೊಯ್ಲು.

ಹೂ ಬಿಟ್ಟ ನಂತರ ೧೮೦ ದಿನಗಳಲ್ಲಿ ಹಣ್ಣು ಕೊಯ್ಲಿಗೆ ಬರುತ್ತದೆ. ರೈತರು ಮಾರ್ಚ ಕೊನೆಯ ವಾರದಲ್ಲಿ ಗಿಡಗಳಿಗೆ ನೀರುಣಸದೇ ವಿಶ್ರಾಂತಿ ನೀಡುತ್ತಾರೆ. ಆ ಸಮಯದಲ್ಲಿ ಗಿಡಗಳಲ್ಲಿದ್ದ ಎಲ್ಲ ಎಲೆಗಳು ಹಳದಿಯಾಗಿ ಉದುರಿ ಗಿಡಗಳು ಬಾಡಿದಂತೆ ಕಾಣುತ್ತಿರುತ್ತವೆ. ಏಪ್ರಿಲ್ ತಿಂಗಳದ ಮಧ್ಯೆದಿಂದ ನೀರುಕೊಡುತ್ತಿದ್ದಂತೆ ಬಾಡಿದ ಗಿಡಗಳು ಗೆಲುವಾಗಿ, ಹೊಸ ಚೈತನ್ಯ ಪಡೆದು ಚಿಗುರುತ್ತವೆ. ಮೇ ತಿಂಗಳಲ್ಲಿ ಹೂ ಕಟ್ಟಲು ಆರಂಭ ಮಾಡುತ್ತವೆ, ನವ್ಹೆಂಬರ್ ಹೊತ್ತಿಗೆ ಕೊಯ್ಲಾಗುತ್ತದೆ. ಈ ಪದ್ಧತಿ ಎಲ್ಲೂ ದಾಖಲಾಗಿಲ್ಲ ಇಲ್ಲಿನ ರೈತರೇ ಕಂಡುಕೊಂಡ ಹೊಸ ಪ್ರಯೋಗ ಇದಾಗಿದೆ.

ಲೆಕ್ಕಾಚರ, ಲಾಭ : ನಾಲ್ಕು ವರ್ಷದ ದಾಳಿಂಬೆ ಗಿಡ ೧೫ ಕೇಜಿ ಫಸಲು ನೀಡಿದರೆ ಕಿನೊ ೩೦ ಕೇಜಿ ಫಸಲು ನೀಡುತ್ತದೆ, ದಾಳಿಂಬೆ ಸ್ಥಳೀಯ ಮರುಕಟ್ಟೆಯಲ್ಲಿ ಕೇ.ಜಿಗೆ ೨೫ ರೂಪಾಯಿ, ಕಿನೊ ೩೦ ರೂಪಾಯಿ, ೮-೧೦ ವರ್ಷದ ದಾಳಿಂಬೆ ಗಿಡದಿಂದ ೩೫ ಕೇ.ಜಿ ಬೆಳೆ ಬಂದರೆ ಕಿನೊ ೧೬೦ ಕೇ.ಜಿ ಫಸಲು ನೀಡುತ್ತದೆ, ದಾಳಿಂಬೆ ಎಕರೆಗೆ ೩೦ ಸಾವಿರ ಖರ್ಚು ಬಂದರೆ ಸಾವಯವ ಪ್ದದತಿಯಲ್ಲಿಯೇ ಬೆಳೆಯಬಹುದಾದ ಕಿನೊ ಎಕರೆಗೆ ೧೫ ಸಾವಿರ ರೂಪಾಯಿ ಖರ್ಚು ಬರುತ್ತದೆ. ದಾಳಿಂಬೆ ಬೆಳೆ ೧೫ ವರ್ಷ ಆಯಸ್ಸು ಹೊಂದಿದ್ದರೆ ಕಿನೊ ೩೦ ವರ್ಷ ಬಾಳಿಕೆ ಬರುತ್ತದೆ. ಅಲ್ಲದೇ ಹತ್ತಾರು ವರ್ಷಗಳ ನಂತರ ದೊಡ್ಡಮರವಾಗುವ ಈ ಕಿನೊ ಗಿಡಗಳಿಂದ ಅಷ್ಟೊಂದು ಖರ್ಚಿಲ್ಲದೇ ಲಾಭ ಪಡೆಯಬಹುದಾಗಿದೆ” ಹೀಗೆ ಕಾರಣಗಳ ಪಟ್ಟಿ ಕೊಡುವ ರೈತರು “ಹಾಗೆ ನೋಡಿದರೆ ದಾಳಿಂಬೆಗಿಂತ ಎರಡು ಪಟ್ಟು ಹೆಚ್ಚು ಲಾಭ ಇದರಲ್ಲಿ ದೊರಕುತ್ತದೆ” ಎನ್ನುತ್ತಾರೆ.

ತೋಟದಿಂದ ಬಂತು ಕಿನೊ ಫಸಲು.

ನಾಟಿ ಪ್ದದತಿ : ೨೦*೨೦ ಹಾಗೂ ಸಾಲಿನಿಂದ ಸಾಲಿಗೆ ೧೮ ಅಡಿ ಅಂತರದಲ್ಲಿ ಝಿಗ್‌ಝಗ್ ಮದರಿಯಲ್ಲಿ ದಾಳಿಂಬೆ ಸಸಿಗಳನ್ನು ನಾಟಿ ಮಡುವ ವಿಧಾನದಂತೆಯೇ ಕಿನೊ ಸಸಿಗಳನ್ನೂ ನಾಟಿ ಮಡಬೇಕು. ಈ ಅಳತೆಯಲ್ಲಿ ನಾಟಿ ಮಡಿದರೆ ಎಕರೆಗೆ ೧೧೦ ರಿಂದ ೧೨೦ ಸಸಿಗಳ ಬೇಕಾಗುತ್ತವೆ.

ಇದೇ ಮದರಿಯಲ್ಲಿ ಬೇಸಾಯ ಮಡಿರುವ ಇವರು ಹಿಂದೆ ಸಾಧಾರಣ ಎನ್ನುವ ಒಂದು ಬೆಳೆ ಪಡೆದಿದ್ದರೆ ಈ ಬಾರಿ ಉತ್ತಮ ಫಸಲು ಪಡೆದುಕೊಂಡಿದ್ದಾರೆ. ಇವರ ಇಪ್ಪತ್ತು ಎಕರೆ ಕಿನೊ ಬೆಳೆಯಲ್ಲಿ ಪ್ರತಿಯೊಂದು ಗಿಡಗಳು ಕನಿಷ್ಠ ಪಕ್ಷ ೫೦ ಕೇ.ಜಿ ಫಲ ತುಂಬಿ ನಿಂತಿವೆ, ಕೆಲವೊಂದು ಗಿಡಗಳು ಹಣ್ಣಿನ ಭಾರದಿಂದ ರೆಂಬೆಗಳು ಮುರಿದು ಬೀಳುವ ಹಾಗೆ ಅಧಿಕ ಹಣ್ಣುಗಳನ್ನು ಹೊತ್ತು ನಿಂತಿವೆ.

ದೇಹಕ್ಕೆ ತಾಜತನ ನೀಡುತ್ತದೆ

ಕರ್ನಾಟಕದ ರೈತರಿಗೆ ಇನ್ನೂ ಅಷ್ಟೊಂದಾಗಿ ಪರಿಚಿತವಲ್ಲದೆ ಈ ಹಣ್ಣಿನ ಬೆಳೆಯನ್ನು ಪಂಜಾಬದ ಸರಗೋದಾ, ಸಹಿವಾಲ, ಲಾಹೊರ, ಶಿಯಲಕೋಟ್ ಹಾಗೂ ಗುಜರಾತ ರಾಜ್ಯದ ಗಂಗಾನಗರದಲ್ಲಿ ರೈತರು ಸಾಮೂಹಿಕವಾಗಿ ಬೆಳೆಯುತ್ತಾರೆ. ಪ್ರಪಂಚದ ಶೇಕಡಾ ೮ ರಷ್ಟು ಉತ್ಪಾದನೆಯನ್ನು ಪಾಕಿಸ್ತಾನದಲ್ಲಿ ಬೆಳೆದರೂ ತನ್ನ ದೇಶದಲ್ಲಿಯೇ ಬಹುತೇಕ ಹಣ್ಣುಗಳನ್ನು ಬಳಸಿಕೊಂಡು ಕೇವಲ ಶೇಕಡಾ ೦.೫ ರಷ್ಟು ಹಣ್ಣುಗಳನ್ನು ಮತ್ರ ರಪ್ತು ಮಡುತ್ತದೆ. ನಮ್ಮ ದೇಶದಲ್ಲಿ ಉತ್ಪಾದನೆಯಗುವ ಕಿನೋ ಹಣ್ಣಿನಲ್ಲಿ ಶೇಕಡಾ ೯೫ ರಷ್ಟು ಪಂಜಾಬದಲ್ಲಿಯೇ ಬೆಳೆಯುತ್ತದೆ. ಅತ್ಯಂತ ಹೆಚ್ಚಿನ ರಸಭರಿತವಾಗಿರುವ ಈ ಹಣ್ಣಿನ ೧೦೦ ಮೀ.ಲಿ ರಸದಲ್ಲ್ಲಿ ೩೨ ಮಿ.ಗ್ರಾಂ ‘ಸಿ’ ಅನ್ನಾಂಗ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಸಿಫಾರಸ್ಸಿನಂತೆ ಆರೋಗ್ಯವಂತ ಒಬ್ಬ ಮನುಷ್ಯನಿಗೆ ದಿನವೊಂದಕ್ಕೆ ೪೫ ಮಿ.ಗ್ರಾಂ ‘ಸಿ’ ಅನ್ನಾಂಗದ ಅವಶ್ಯಕತೆ ಇರುತ್ತದೆ, ಹೀಗಿರುವಾಗ ಒಂದು ಕಿನೊ ಹಣ್ಣು ಅದಕ್ಕಿಂತ ಹೆಚ್ಚು ಮಿ.ಗ್ರಾಂ ಸಿ ಅನ್ನಾಂಗ ಹೊಂದಿರುವುದರಿಂದ ಆ ಸ್ಥಾನ ತುಂಬಬಲ್ಲದು.

ಬಾಯಿಯಲ್ಲಿ ನೀರೂರಿಸುವ ಕಿನೊ.

ಕಿನೊ ಹಣ್ಣಿನ ಮೇಲೆ ಸಂಶೋಧನೆ ಮಾಡಿದ ಅಂತರಾಷ್ಟ್ರೀಯ ವಿಜ್ಞಾನಿ ಡಾ. ಗುರುಕನ್ವಾಲ್ ಸಿಂಗ್ ಎಂಬುವವರು, ಈ ಹಣ್ಣಿನಲ್ಲಿರುವ ಸಿಟ್ರಸ್‌ನಲ್ಲಿ ಲಿಮೋನಿನ್ ಎಂಬ ಅಂಶವಿದ್ದು ಅದು ಕ್ಯಾನ್ಸರ್ ಕೋಶದ ವಿರುದ್ಧ ಹೊರಾಟ ಹೋರಾಡುತ್ತವೆ, ವಿಶೇಷವಾಗಿ ಪಂಜಾಬಿನಲ್ಲಿ ಬೆಳೆಯುವ ಕಿನೊ ಹಣ್ಣಿನಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಲಿಮೋನಿನ್ ಅಂಶವಿದೆ (೨೧೮ ಪಿಪಿಎಂ). ಎಂದು ಅಂತರ್ಜಾಲದಲ್ಲಿ ನೀಡಿರುವ ವರದಿಯೊಂದರಲ್ಲಿ ತಿಳಿಸಿದ್ದಾರೆ.

ಮರುಕಟ್ಟೆ, ಬೆಲೆ : ಸದ್ಯ ಚನ್ನೈ ಮರುಕಟ್ಟೆಯಲ್ಲಿ ಕಿನೊ ಹಣ್ಣಿಗೆ ಭಾರಿ ಬೇಡಿಕೆ ಇದೆ. ಅಲ್ಲಿನ ದಳಿಗಳು ನೇರವಾಗಿ ಇಲ್ಲಗೆ ಬಂದು ವ್ಯಾಪಾರ ಕುದುರಿಸಿಕೊಂಡು ಹೋಗುತ್ತಾರೆ. ತೋಟದಿಂದ ಬಂದು ಹಣ್ಣುಗಳನ್ನು ಮೂರು ಹಂತದಲ್ಲಿ ವಿಂಗಡಿಸುತ್ತಾರೆ. ಉತ್ತಮ ಹಣ್ಣು ಸದ್ಯ ಕೇ.ಜಿಗೆ ೨೫ ರೂಪಾಯಿ ಬೆಲೆ ಇದೆ. ಮುಂದಿನ ದಿನಗಳಲ್ಲಿ ವಿದೇಶಿ ಮರುಕಟ್ಟೆಯ ಸ್ಥಿತಿಗತಿ ಗಮನದಲ್ಲಿಟ್ಟುಕೊಂಡು ರಫ್ತು ಮಡುವ ವಿಚಾರವಿದೆ, ಆಗ ಈ ಬೆಲೆ ಕುದುರಬಹುದು ಎನ್ನುತ್ತಾರೆ.

ಈಗಿನ ದರದಲ್ಲಿಯೇ ಲೆಕ್ಕ ಹಾಕಿದರೆ ಎಕರೆಗೆ ಖರ್ಚು ವೆಚ್ಚಗಳನ್ನು ತೆಗೆದರೆ ಒಂದುವರೆ ಯಿಂದ ಎರಡು ಲಕ್ಷ ರೂಪಾಯಿ ಲಾಭ ದೊರಕುತ್ತದೆ ಎಂಬುವುದು ಇವರ ಲೆಕ್ಕಾಚಾರ.

ರೈತರು ದಾಳಿಂಬೆಗೆ ಬದಲಾಗಿ ಕಿನೊ ಬೆಳೆಯಲು ಮುಂದಾಗಬೇಕು ಎಂದು ಹೇಳುವ ರಮೇಶ ಈ ಬಾರಿ ತಮ್ಮ ೮೦ ಎಕರೆಯಲ್ಲಿ ಸೊರಗಿ ನಿಂತಿರುವ ಗೊಡ್ಡು ದಾಳಿಂಬೆ ಕಿತ್ತು ಹಾಕಿ ಅದರಲ್ಲಿ ಕಿನೊ ಬೆಳೆ ನಾಟಿ ಮಡಲು ಮುಂದಾಗಿದ್ದಾರೆ.