ಅತ್ತ್ಯುತ್ತಮ ಆರೋಗ್ಯ ಮತ್ತು ಪುನಃಶ್ಚೇತನಗೊಳಿಸುವ ಶಕ್ತಿಯನ್ನು ಹೊಂದಿದ ಹಣ್ಣುಗಳಲ್ಲಿ ದಾಳಿಂಬೆ ಮುಖ್ಯವಾದುದು. ದಾಳಿಂಬೆಯನ್ನು ಪ್ರಮುಖವಾಗಿ ಬಾಗಲಕೋಟೆ, ಬಿಜಾಪುರ, ಬಳ್ಳಾರಿ, ರಾಯಚೂರು, ಕೊಪ್ಪಳ, ಚಿತ್ರದುರ್ಗ, ತುಮಕೂರು ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಬೆಳೆಯಲಾಗುತ್ತದೆ. ದಾಳಿಂಬೆಯ ಸೇವನೆ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನು ಬೀರಬಹುದಾಗಿದೆ. ದಾಳಿಂಬೆಯ ರಸವು ಅತಿ ಹೆಚ್ಚು ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳನ್ನು ಹೊಂದಿದ್ದು ಆರೋಗ್ಯದ ಮೇಲೆ ತುಂಬಾ ಪ್ರಭಾವ ಬೀರುತ್ತದೆ. ಈ ರಸವು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದಲ್ಲದೇ ಇನ್ನೂ ಪ್ರಮುಖ ರೋಗಗಳಾದ ಪ್ರೋಸ್ಟ್ರೇಟ್ ಕ್ಯಾನ್ಸರ್, ಸಂದು ನೋವುಗಳಂತಹ ರೋಗಗಳ ನಿವಾರಣೆಯಲ್ಲಿ ತುಂಬಾ ಉಪಯುಕ್ತವಾಗಿದೆ. ಹಣ್ಣಿನ ಪೌಷ್ಟಿಕ ಮೌಲ್ಯವು ಹೆಚ್ಚಾಗಿದ್ದು ಹೇರಳವಾಗಿ ವಿವಿಧ ಪೋಷಕಾಂಶಗಳನ್ನು ಹೊಂದಿದೆ. ದಾಳಿಂಬೆಯಲ್ಲಿರುವ ವಿವಿಧ ಪೋಷಕಾಂಶಗಳ ಪ್ರಮಾಣವನ್ನು ಈ ಕೆಳಗೆ ನೀಡಲಾಗಿದೆ.

ಹಣ್ಣಿನಲ್ಲಿ ಪೌಷ್ಟಿಕಮೌಲ್ಯ ಹಾಗೂ ಪ್ರತಿ ೧೦೦ಗ್ರಾಂ. ತಿರುಳಿನಲ್ಲಿರುವ ಪೋಷಕಾಂಶಗಳ ಪ್ರಮಾಣ

ತೇವಾಂಶ ೭೮.೦೦ ಗ್ರಾಂ
ಪ್ರೋಟಿನ್ ೦೧.೬೦ ಗ್ರಾಂ
ಶರ್ಕರ ಪಿಷ್ಠ ೧೪.೫೦ ಗ್ರಾಂ
ನಾರು ೫.೧೦ ಗ್ರಾಂ
ಆಕ್ಸಲಿಕ್ ಆಮ್ಲ ೧೪.೦೦ ಮಿ. ಗ್ರಾಂ
‘ಸಿ’ ಜೀವಸತ್ವ ೧೪.೦೦ ಮಿ. ಗ್ರಾಂ
ಸಕ್ಕರೆ ೧೬.೫೭ ಗ್ರಾಂ
ರಂಜಕ ೭೦.೦೦ ಮಿ. ಗ್ರಾಂ
ಮೇದಸ್ಸು ೦೦.೧೦ ಗ್ರಾಂ
ಖನಿಜ ಪದಾರ್ಥ ೦೦.೭೦ ಗ್ರಾಂ
ಸುಣ್ಣ ೧೦.೦೦ ಮಿ. ಗ್ರಾಂ
ಮೆಗ್ನೇಸಿಯಂ ೧೨.೦೦ ಮಿ. ಗ್ರಾಂ
ಕಬ್ಬಿಣ ೦೦.೩೦ ಮಿ. ಗ್ರಾಂ
ರೈಬೋಪ್ಲೆವಿನ್ ೦೦.೧೦ ಮಿ. ಗ್ರಾಂ
ನಿಕೋಟಿನ್ ಆಮ್ಲ ೦೦.೩೦ ಮಿ. ಗ್ರಾಂ
ತಿನ್ನುವ ನಾರಿನಂಶ ೦.೬೦ ಗ್ರಾಂ
ಶಕ್ತಿ ೭೦ ಕಿ. ಕ್ಯಾಲರಿಗಳು

ಸೂಕ್ತವಾದ ವಾತಾವರಣ

ದಾಳಿಂಬೆಯ ಉತ್ತಮ ಬೆಳವಣಿಗೆ ಹಾಗೂ ಉತ್ತಮ ಗುಣಮಟ್ಟದ ಇಳುವರಿ ಪಡೆಯಬೇಕೆಂದರೆ ಸೂಕ್ತವಾದ ಹವಾಗುಣದ ಅವಶ್ಯಕತೆ ಇದೆ. ಈ ಬೆಳೆಯು ಪ್ರಮುಖವಾಗಿ ಒಣ ಹವೆಯಲ್ಲಿ ಚೆನ್ನಾಗಿ ಬೆಳೆಯುವುದಲ್ಲದೇ ತಂಪಾದ ಚಳಿಗಾಲ ಹಾಗೂ ಸುಡುವ ಬೇಸಿಗೆ ಕಾಲಗಳು ಇದಕ್ಕೆ ಯೋಗ್ಯ. ಸುಮಾರು ೧೦ F ಗಿಂತ ಉಷ್ಣತೆಯು ಕುಸಿದರೆ ಅಂತಹ ಕಡಿಮೆ ಉಷ್ಣತೆಯು ದಾಳಿಂಬೆಗೆ ಖಂಡಿತಾ ಹಾನಿ ಮಾಡುವುದು ಮತ್ತು ಅಂತಹ ವಾತಾವರಣದಲ್ಲಿ ಹಣ್ಣು ಉತ್ಪಾದನೆಯು ಕುಂಠಿತವಾಗುತ್ತದೆ. ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಆರ್ದ್ರತೆಯಿರುವ ಪ್ರದೇಶಗಳನ್ನು ಹೊರತುಪಡಿಸಿ ಉಳಿದೆಲ್ಲ ಕಡೆಯಲ್ಲಿ ದಾಳಿಂಬೆಯು ಫಲಪ್ರದವಾಗಿ ಬೆಳೆಯಬಹುದಾಗಿದೆ. ನಿರ್ದಿಷ್ಟ ಚಳಿಗಾಲ, ಆರ್ದ್ರತೆ ಸಹಿತ ಒಣಹವೆ ಮತ್ತು ಹೆಚ್ಚು ಉಷ್ಣಾಂಶವಿರುವ ಬೇಸಿಗೆಯು ಉತ್ತಮವಾದ ಹಾಗೂ ರುಚಿಕರವಾದ ಹಣ್ಣುಗಳ ಉತ್ಪಾದನೆಯಲ್ಲಿ ಸಹಕಾರಿಯಾಗುತ್ತವೆ ಹಾಗೂ ತುಂಬಾ ಆಕರ್ಷಕವಾಗಿ ಹಣ್ಣುಗಳು ಅಭಿವೃದ್ಧಿ ಹೊಂದುವವು. ದಾಳಿಂಬೆಯು ಬರಗಾಲ ಹಾಗೂ ಶುಷ್ಕ ಹವಾಮಾನವನ್ನು ಸಹಿಸುವ ಗುಣಧರ್ಮ ಹೊಂದಿದ್ದರೂ, ಅವಶ್ಯ ಹಂತಗಳಲ್ಲಿ ನೀರಾವರಿ ನೀಡಿದರೆ ಇಳುವರಿ ಹೆಚ್ಚುವುದಲ್ಲದೇ ಉತ್ತಮವಾದ ಗುಣಮಟ್ಟದ ಹಣ್ಣುಗಳನ್ನು ಪಡೆಯಬಹುದು. ಅತಿ ಹೆಚ್ಚಿನ ಬರಗಾಲದ ಪ್ರಸಂಗಗಳು ಉತ್ಪಾದನೆಯ ಮಟ್ಟವನ್ನು ಕುಂಠಿತಗೊಳಿಸುವುದು.

ಸೂಕ್ತವಾದ ಮಣ್ಣು

ದಾಳಿಂಬೆಯನ್ನು ಹಲವಾರು ಪ್ರಕಾರದ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಇದಕ್ಕೆ ಅತಿ ಸೂಕ್ತವಾದ ಮಣ್ಣು ಎಂದರೆ ಆಳವಾದ ಕೆಂಪುಗೋಡು, ಮರಳುಮಿಶ್ರಿತ ಗೋಡು, ಮೆಕ್ಕಲು ಮಣ್ಣುಗಳಲ್ಲಿ ಕಡಿಮೆ ಆಳವಿರುವ ಹಾಗೂ ಸಣ್ಣ-ಪುಟ್ಟ ಕಲ್ಲುಗಳಿಂದ ಕೂಡಿದ ಜಮೀನುಗಳಲ್ಲಿಯೂ ಇದನ್ನು ಬೆಳೆಯಬಹದು. ಇದಲ್ಲದೇ ಸುಣ್ಣದ ಕಲು ಹೊಂದಿರುವ ಕರಲು ಹಾಗೂ ಸಾಧಾರಣ ಕ್ಷಾರದ ಗುಣವಿರುವ ಜಮೀನುಗಳಲ್ಲಿಯೂ ದಾಳಿಂಬೆಯನ್ನು ಬೆಳೆಯಬಹುದಾಗಿದೆ. ಉತ್ತಮ ಬಸಿಯುವ ಗುಣ ಹೊಂದಿರುವ ಜಮೀನುಗಳು ಇದಕ್ಕೆ ತುಂಬಾ ಯೋಗ್ಯ. ಕೆಲವೊಂದು ಪ್ರದೇಶಗಳಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲು ಅತಿ ಸೂಕ್ತವಲ್ಲದ ಜಮೀನುಗಳಲ್ಲಿಯೂ ದಾಳಿಂಬೆಯನ್ನು ಉತ್ತಮವಾಗಿ ಬೆಳೆದ ನಿದರ್ಶನಗಳಿವೆ.

ದಾಳಿಂಬೆಯ ತಳಿಗಳು

ದಾಳಿಂಬೆಯಲ್ಲಿ ವಿವಿಧ ಪ್ರಕಾರದ ತಳಿಗಳು ಪ್ರಚಲಿತವಾಗಿವೆ. ಪ್ರಮುಖವಾದ ತಳಿಗಳೆಂದರೆ- ೧) ಗಣೇಶ್, ೨) ಜ್ಯೋತಿ, ೩) ಆರ್.ಸಿ.ಆರ್. -೧, ೪) ಮೃದುಲಾ ಮತ್ತು ಆರಕ್ತ, ೫) ರೂಬಿ, ೬) ಜಿ-೧೩೭, ೭) ಕೇಸರ.

. ಗಣೇಶ್

ಗಣೇಶ್ ತಳಿಯು ಪ್ರಮುಖವಾದ ದೊಡ್ಡ ಗಾತ್ರದ ಹಣ್ಣನ್ನು ಹೊಂದಿದ್ದು ಆಕರ್ಷಕ ಹಳದಿಯುಕ್ತ ಗುಲಾಬಿ ಬಣ್ಣ ಹೊಂದಿರುತ್ತದೆ. ಹಣ್ಣುಗಳನ್ನು ತಂಪಾದ ಹವಾಮಾನದಲ್ಲಿ ಕೊಯ್ಲು ಮಾಡಿದರೆ, ಹಣ್ಣುಗಳಲ್ಲಿಯ ಕಾಳುಗಳು ಗುಲಾಬಿ ಬಣ್ಣ ಹೊಂದಿರುತ್ತವೆ. ಉಷ್ಣತೆ ಹೆಚ್ಚಿರುವಾಗ ಹಣ್ಣುಗಳನ್ನು ಕೊಯ್ಲು ಮಾಡಿದರೆ ಅಂತಹ ಹಣ್ಣುಗಳಿಂದ ಕಾಳುಗಳು ಬಿಳಿಚಿಕೊಳ್ಳುತ್ತವೆ. ಹೀಗಾಗುವುದರಿಂದ ಹಣ್ಣುಗಳಿಗೆ ಹೆಚ್ಚಿನ ಬೆಲೆ ದೊರೆಯಲಿಕ್ಕಿಲ್ಲ.

. ಜ್ಯೋತಿ

ಈ ತಳಿಯ ಹಣ್ಣುಗಳು ಗಾತ್ರದಲ್ಲಿ ದೊಡ್ಡದಾಗಿದ್ದು, ಆಕರ್ಷಕ ಬಣ್ಣವನ್ನು ಹೊಂದಿವೆ. ಇದರಲ್ಲಿಯೂ ಸಹ ಮೃದುವಾದ ಬೀಜಗಳು ಇರುತ್ತವೆ. ಇದರ ಕಾಳುಗಳು ಕಡುಗೆಂಪು ಬಣ್ಣ ಹೊಂದಿದ್ದು ಹೆಚ್ಚಿನ ಸಕ್ಕರೆಯ ಅಂಶವನ್ನು ಹೊಂದಿದೆ.

. ಆರ್.ಸಿ.ಆರ್. –

ಈ ತಳಿಯು ರಾಯಚೂರು ಕೃಷಿ ಸಂಶೋಧನಾ ಕೇಂದ್ರದಿಂದ ಬಿಡುಗಡೆಯಾಗಿದ್ದು ಇದರ ಬೀಜಗಳು ಸಹ ಮೃದುವಾಗಿದೆ.

. ಮೃದುಲಾ / ಆರಕ್ತ

ಆರಕ್ತ ಹಾಗೂ ಮೃದುಲಾ ತಳಿಗಳು ತುಂಬಾ ಪ್ರಚಲಿತ ತಳಿಗಳಾಗಿದ್ದು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಹೊಂದಿವೆ. ಈ ಎರಡು ತಳಿಗಳು ಒಂದೇ ತರಹದ ಗುಣಧರ್ಮಗಳನ್ನು ಹೊಂದಿದ್ದು ಮಧ್ಯಮ ಗಾತ್ರದ ದುಂಡಾದ ಹಣ್ಣುಗಳನ್ನು ಕೊಡುತ್ತವೆ. ಈ ತಳಿಗಳಲ್ಲಿ ಕಾಳುಗಳು ತುಂಬಾ ರಸಭರಿತವಾಗಿದ್ದು ಮೃದುವಾದ ಬೀಜಗಳನ್ನು ಹೊಂದಿವೆ. ಈ ತಳಿಗಳ ಹಣ್ಣುಗಳನ್ನು ಅತಿ ಹೆಚ್ಚು ಉಷ್ಣತೆ ಹೊಂದಿದ ಬೇಸಿಗೆಯ ಸಮಯದಲ್ಲಿ ಕೊಯ್ಲು ಮಾಡಿದರೂ ಕಾಳು ಅಥವಾ ತೊಗಟೆಯ ಬಣ್ಣದಲ್ಲಿ ಯಾವುದೇ ರೀತಿಯ ಬದಲಾವಣೆ ಕಂಡುಬರುವುದಿಲ್ಲ. ಹಣ್ಣುಗಳು ಚುಕ್ಕೆಯಿಂದ ಬಾಧಿಸಲ್ಪಟ್ಟರೂ ಒಳಗಿನ ಕಾಳುಗಳ ಬಣ್ಣದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವದಿಲ್ಲ.

) ರೂಬಿ

ರೂಬಿ ತಳಿಯ ಹಣ್ಣಿನ ತೊಗಟೆಯು ಸಾಮಾನ್ಯವಾಗಿ ಕಂದುಯುಕ್ತ ಕೆಂಪು ಬಣ್ಣ ಹೊಂದಿರುವುದಲ್ಲದೇ ಅಲ್ಲಲ್ಲಿ ಹಸಿರು ಬಣ್ಣದ ಗೆರೆಗಳು ಕಂಡುಬರುವುದು ಸಾಮಾನ್ಯ. ಈ ತಳಿಯ ಕಾಳುಗಳಲ್ಲಿ ಬೀಜಗಳು ಮೃದುವಾಗಿರುತ್ತವೆ. ಕಾಳುಗಳ ಬಣ್ಣ ಕೆಂಪಾಗಿರುವುದು ಹಾಗೂ ಈ ಕಾಳುಗಳ ರಸಭರಿತವಾಗಿರುತ್ತವೆ.

) ಜಿ೧೩೭

ಈ ತಳಿಯನ್ನು ಗಣೇಶ್ ತಳಿಯಿಂದ ಆಯ್ಕೆ ಮಾಡಲಾಗಿದ್ದು ತಿರುಳು ಮತ್ತು ಸಕ್ಕರೆ ಅಂಶವನ್ನು ಹೆಚ್ಚಾಗಿ ಹೊಂದಿದೆ. ಗಣೇಶ್ ತಳಿಗೆ ಹೋಲಿಸಿದರೆ ಈ ತಳಿಯ ಹಣ್ಣುಗಳ ಗಾತ್ರ ದೊಡ್ಡದಾಗಿದೆ.

) ಕೇಸರ್

ಕೇಸರ್ ತಳಿಯನ್ನು ಭಗವಾ ಅಥವಾ ಸಿಂಧೂರ ತಳಿಗಳೆಂದು ಕರೆಯುತ್ತಾರೆ. ಇದು ಮೂಲತಃ ಮಹಾರಾಷ್ಟ್ರದ ನಾಸಿಕ ಪ್ರದೇಶದ ತಳಿಯಾಗಿದೆ. ಈ ತಳಿಯ ಹಣ್ಣುಗಳು ಮಧ್ಯಮ ಗಾತ್ರ ಹೊಂದಿರುತ್ತದೆ ಮತ್ತು ಹೊಳಪಾದ ಕೆಂಪು ಬಣ್ಣವನ್ನು ಹೊಂದಿರುತ್ತದೆ. ಇದರ ಇನ್ನೊಂದು ವಿಶೇಷ ಗುಣವೆಂದರೆ, ಕಾಳುಗಳು ತುಂಬಾ ರಸಭರಿತವಾಗಿದ್ದು, ಈ ರಸಭರಿತ ಗುಣವನ್ನು ಬಹಳ ದಿನಗಳವರೆಗೆ ಉಳಿಸಿಕೊಂಡು ಹೋಗುವ ಗೂಣವಿದೆ. ಈ ತಳಿಯು ಕೂಡಾ ಮೃದುವಾದ ಬೀಜವನ್ನು ಹೊಂದಿದೆ. ಕಾಳುಗಳು ರಕ್ತಗೆಂಪು ಬಣ್ಣವನ್ನು ಹೊಂದಿದ್ದು ಹಣ್ಣು ಕೊಯ್ಲಿಗೆ ಬರಲು ಸುಮಾರು ೧೮೫-೧೯೦ ದಿನಗಳು ಬೇಕಾಗುವುದು. ಈ ತಳಿಯ ವಿವಿಧ ಆಕರ್ಷಕ ಗುಣಗಳ ಪರಿಣಾಮವಾಗಿ ಮಾರುಕಟ್ಟೆಯಲ್ಲಿ ಇದರ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ.

ನಾಟಿಗೆ ಸೂಕ್ತ ಸಸಿಗಳ ಆಯ್ಕೆ

ನಾಟಿ ಮಾಡಲು ಸೂಕ್ತವಾದ ಹಾಗೂ ಆರೋಗ್ಯವಂತ ಸಸಿಗಳ ಆಯ್ಕೆ ಬೆಳೆಯ ಒಟ್ಟಾರೆ ಸಫಲತೆಯಲ್ಲಿ ಪ್ರಮುಖವಾದಂತಹ ಪಾತ್ರವನ್ನು ವಹಿಸುವುದು. ಈ ದೃಷ್ಟಿಯಿಂದ ಸುಮಾರು ಮೂರು ವರ್ಷಗಳವರೆಗೆ ಕಡಿಮೆ ಇರದ, ಬಲಿತಂತಹ ಸಸಿಗಳನ್ನು ಆಯ್ಕೆ ಮಾಡಬೇಕು. ಸಾಮಾನ್ಯವಾಗಿ ಗೂಟಿ ಪದ್ಧತಿಯಿಂದ ಸಸ್ಯಾಭಿವೃದ್ಧಿ ಮಾಡಿದ ತಳಿಗಳು ನಾಟಿ ಮಾಡಲು ಸೂಕ್ತ. ಸಸಿಗಳ ಆಯ್ಕೆಯಲ್ಲಿ ಅನುಸರಿಸಬೇಕಾದ ಇನ್ನೊಂದು ಪ್ರಮುಖ ಎಚ್ಚರಿಕೆ ಎಂದರೆ ಸಸಿಗಳು ಯಾವದೇ ರೀತಿಯ ರೋಗಗಳಿಂದ ಮುಕ್ತವಾಗಿರಬೇಕು.

ನಾಟಿ ಮಾಡುವುದು

ಸಸಿಗಳನ್ನು ನಾಟಿ ಮಾಡಲು ಸೂಕ್ತವಾದ ತಯಾರಿ ಮಾಡಿಕೊಳ್ಳುವುದು ಆವಶ್ಯಕ. ಬೇಸಿಗೆಯಲ್ಲಿ ಅದರಲ್ಲೂ ಮುಂಗಾರು ಮಳೆಗಳು ಪ್ರಾರಂಭವಾಗುವುದಕ್ಕೆ ಮುಂಚೆಯೇ ಸುಮಾರು ೬೦ ಸೆಂ.ಮೀ. ಆಳವಿರುವ ಗುಂಡಿಗಳನ್ನು ತೆಗೆಯಬೇಕು. ಈ ಗುಂಡಿಗಳನ್ನು ಸ್ವಲ್ಪ ಸಮಯದವರೆಗೆ ಬಿಸಿಲಿಗೆ ಬಿಟ್ಟ ನಂತರ, ಸಂಪೂರ್ಣವಾಗಿ ಕಳಿತ ಗೊಬ್ಬರ ಹಾಗೂ ಉತ್ತಮ ಗುಣಮಟ್ಟದ ಮೇಲ್ಮಣ್ಣನ್ನು ನಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಗುಂಡಿಗೆ ತುಂಬಿ, ನೀರು ಹಾಯಿಸಬೇಕು. ಈ ರೀತಿ ಮಾಡುವುದರಿಂದ ಗುಂಡಿ ನಾಟಿ ಮಾಡಲಿಕ್ಕೆ ಸಿದ್ಧವಾಗುವುದು. ದಾಳಿಂಬೆಯನ್ನು ವಿವಿಧ ಅಂತರಗಳನ್ನು ಅನುಸರಿಸಿ ಚೌಕಾಕಾರ ಅಥವಾ ಷಟ್ಕೋನಾಕಾರದಲ್ಲಿ ನೆಡುವುದು ರೂಢಿ.

ನಾಟಿಗೆ ಸೂಕ್ತ ಸಮಯ

ದಾಳಿಂಬೆ ಬೆಳೆಯನ್ನು ನಾಟಿ ಮಾಡಲು ಸೂಕ್ತವಾದ ಸಮಯವೆಂದರೆ ಜೂನ್‌ದಿಂದ ಜುಲೈ ತಿಂಗಳುಗಳು.

ಪೋಷಕಾಂಶ ನಿರ್ವಹಣೆ

ದಾಳಿಂಬೆಯನ್ನು ನಾಟಿ ಮಾಡುವುದರಿಂದ ಹಿಡಿದು ಮುಂದಿನ ಪ್ರತಿ ಇಳುವರಿಯ ಹಂಗಾಮಿಗೆ ಸೂಕ್ತವಾಗುವಂತೆ ಪೋಷಕಾಂಶಗಳನ್ನು ನೀಡಬೇಕಾಗುವುದು. ಬೆಳೆಗೆ ನೀಡಬೇಕಾದ ಪೋಷಕಾಂಶಗಳ ಪ್ರಮಾಣವು ಪ್ರಮುಖವಾಗಿ ಬೆಳೆಯ ವಯಸ್ಸಿನ ಮೇಲೆ ಅವಲಂಬಿತವಾಗಿರುತ್ತದೆ. ಗಿಡಗಳನ್ನು ನಾಟಿ ಮಾಡಿದ ನಂತರ ಅವುಗಳ ವಯಸ್ಸಿಗೆ ಅನುಗುಣವಾಗಿ ಪ್ರತಿ ವರ್ಷ ಪೋಷಕಾಂಶಗಳನ್ನು ನೀಡುವುದು ಅವಶ್ಯಕ. ನಾಟಿ ಮಾಡಿದ ಪ್ರಾರಂಭಿಕ ವರ್ಷಗಳಲ್ಲಿ ಗಿಡಗಳ ಗಾತ್ರ ಕಡಿಮೆಯಿರುವುದರಿಂದ ಮಳೆಗಾಲ ಪ್ರಾರಂಭವಾಗುವಾಗ ಪೋಷಕಾಂಶಗಳನ್ನು ಕೊಡಬೇಕು. ಈ ಪದ್ಧತಿಯನ್ನು ಮೊದಲನೇ ಮೂರು ವರ್ಷಗಳ ಕಾಲ ಅನುಸರಿಸಬೇಕು. ಮೂರು ವರ್ಷಗಳ ನಂತರ ನಾವು ನಿರ್ಧರಿಸಿದ ಹೂವು ಬಿಡುವ ಸಮಯಕ್ಕೆ ಅನುಸಾರವಾಗಿ ಪೋಷಕಾಂಶಗಳನ್ನು ನೀಡಬೇಕು. ಪೋಷಕಾಂಶಗಳನ್ನು ಹಾಕುವಾಗ ಅವುಗಳನ್ನು ಗಿಡದ ಸುತ್ತಲಿನ ಮಡಿಗಳಲ್ಲಿ ಸರಿಯಾಗಿ ಬೆರೆಸಬೇಕು.

ಪ್ರತಿ ಗಿಡಕ್ಕೆ ಅವುಗಳ ವಯಸ್ಸಿಗೆ ತಕ್ಕಂತೆ ನೀಡಬೇಕಾದ ಕೊಟ್ಟಿಗೆ ಗೊಬ್ಬರ ಅಥವಾ ಸಾವಯವ ಮೂಲದ ಗೊಬ್ಬರ, ಸಾರಜನಕ, ರಂಜಕ ಹಾಗೂ ಪೊಟ್ಯಾಷ್ ಪೋಷಕಾಂಶಗಳ ಪ್ರಮಾಣವನ್ನು ಈ ಕೆಳಗೆ ನೀಡಲಾಗಿದೆ.

ಗಿಡದ ವಯಸ್ಸು
ಕಿ. ಗ್ರಾಂ
ಕೊಟ್ಟಿಗೆ ಗೊಬ್ಬರ ಗ್ರಾಂ ಸಾರಜನಕ ಗ್ರಾಂ ರಂಜಕ ಗ್ರಾಂ ಪೊಟ್ಯಾಶ್
ನಾಟಿ ಮಾಡುವಾಗ ೨೦
೧ನೇ ವರ್ಷ ೧೦ ೧೦೦ ೧೫೦ ೫೦
೨ನೇ ವರ್ಷ ೨೦ ೨೦೦ ೧೦೦ ೧೦೦
೩ನೇ ವರ್ಷ ೩೦ ೩೦೦ ೧೫೦ ೧೫೦
೪ನೇ ವರ್ಷ ೪೦ ೪೦೦ ೨೦೦ ೨೦೦
೫ನೇ ವರ್ಷ ಹಾಗೂ ನಂತರದ ವರ್ಷಗಳಲ್ಲಿ ೫೦ ೬೨೫ ೨೫೦ ೨೫೦

ಲಘು ಪೋಷಕಾಂಶಗಳು

ಲಘು ಪೋಷಕಾಂಶಗಳು ದಾಳಿಂಬೆ ಬೆಳವಣಿಗೆ ಹಾಗೂ ಉತ್ಪಾದನೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತವೆ. ಲಘು ಪೋಷಕಾಂಶಗಳಾದ ಬೋರಾನ್, ಸತು, ಮ್ಯಾಂಗನೀಸ್, ಕಬ್ಬಿಣಗಳು ಪ್ರಮುಖವಾದವುಗಳು. ಈ ಪೋಷಕಾಂಶಗಳನ್ನು ಪ್ರತಿ ಲೀಟರ್ ನೀರಿಗೆ ಫೆರಸ್‌ಸಲ್ಫೇಟ್‌ ೨ ಗ್ರಾಂ, ಮ್ಯಾಂಗನೀಸ್ ಸಲ್ಫೇಟ್ ೨ ಗ್ರಾಂ, ಬೋರಿಕ್ ಆಮ್ಲ ೧ ಗ್ರಾಂ, ಸತುವಿನ ಸಲ್ಫೇಟ್‌ದ ಮಿಶ್ರಣ ಬೆರೆಸಿದ ಸಿಂಪಡಣಾ ದ್ರಾವಣವನ್ನು ದಾಳಿಂಬೆಗೆ ಸಿಂಪಡಿಸುವುದರಿಂದ ಈ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದಾಗಿದೆ. ಈ ಸಿಂಪಡಣೆಯ ಫಲವಾಗಿ ದಾಳಿಂಬೆ ಹಣ್ಣಿನ ಗಾತ್ರ ಹೆಚ್ಚುವುದಲ್ಲದೇ ಹಣ್ಣು ಸೀಳುವಿಕೆ ಪ್ರಮಾಣ ಕಡಿಮೆಯಾಗಿ ಉತ್ತಮ ಗುಣ ಮಟ್ಟದ ಹಣ್ಣುಗಳನ್ನು ಬೆಳೆಯಬಹುದಾಗಿದೆ. ಈ ಲಘು ಪೋಷಕಾಂಶಗಳ ಜೊತೆಗೆ ಕ್ಯಾಲ್ಸಿಯಂ ಹಾಗೂ ಮೆಗ್ನೇಶಿಯಂ ಪೋಷಕಾಂಶಗಳನ್ನು ಪೂರೈಸಲು ಪ್ರತಿ ಲೀಟರ್ ನೀರಿಗೆ ೧ ಗ್ರಾಂ ಕ್ಯಾಲ್ಸಿಯಂ ಕ್ಲೋರೈಡ್ ಹಾಗೂ ೨ ಗ್ರಾಂ ಮೆಗ್ನೆಶಿಯಂ ಕ್ಲೋರೈಡ್‌ನ್ನು ಉಪಯೋಗಿಸಬಹುದಾಗಿದೆ.

ನೀರು ನಿರ್ವಹಣೆ

ದಾಳಿಂಬೆಯು ಸಾಕಷ್ಟು ಬರಗಾಲದ ಬವಣೆಯನ್ನು ತಡೆಯುವ ಸಾಮರ್ಥ್ಯ ಹೊಂದಿದ್ದರೂ ಅತಿಯಾದ ಬರಗಾಲವನ್ನು ತಡೆಯಲಾರದು. ಆದುದರಿಂದ ಅವಶ್ಯಕತೆಗೆ ಅನುಗುಣವಾಗಿ ನೀರು ಹಾಯಿಸುವುದು ಅವಶ್ಯಕ. ಹೊಸದಾಗಿ ನಾಟಿ ಮಾಡಿದ ಸಸಿಗಳಿಗೆ ಸಕಾಲದಲ್ಲಿ ಮಳೆ ಬರದಿದ್ದರೆ ನಿಯಮಿತವಾಗಿ ನೀರು ಹಾಯಿಸುವುದನ್ನು ಮುಂದುವರಿಸಬೇಕು. ಇದರಿಂದ ಸಸಿಗಳು ಸಮರ್ಪಕವಾಗಿ ಬೇರು ಬಿಟ್ಟು ಹತ್ತಿಕೊಳ್ಳಲು ಸಹಕಾರಿಯಾಗುವುದು. ಇದಾದ ನಂತರ ಅವು ಸ್ವಲ್ಪ ನೀರಿನ ಕೊರತೆಯನ್ನು ಸಹಿಸಿಕೊಂಡು ಬೆಳೆಯುವ ಸಾಮರ್ಥ್ಯ ಹೊಂದುತ್ತವೆ. ಮಣ್ಣಿನ ವಿಧ ಹಾಗೂ ಆ ಪ್ರದೇಶಕ್ಕೆ ಸೂಕ್ತವಾಗುವಂತೆ ಪ್ರತಿ ಎರಡರಿಂದ ನಾಲ್ಕು ವಾರಕ್ಕೆ ಒಮ್ಮೆ ನೀರು ಕೊಡಬೇಕು. ನೀರು ನೀಡುವಲ್ಲಿ ಹೆಚ್ಚು ಕಡಿಮೆಯಾದರೆ ದಾಳಿಂಬೆ ಹಣ್ಣುಗಳು ಗಿಡದಲ್ಲಿಯೇ ಒಡೆಯಲು ಪ್ರಾರಂಭಿಸುತ್ತವೆ. ಹನಿ ನೀರಾವರಿ ಪದ್ಧತಿ ತುಂಬಾ ಯೋಗ್ಯವಾದ ಪದ್ಧತಿಯಾಗಿದ್ದು ಇದನ್ನು ಅಳವಡಿಸುವುದರಿಂದ ಸುಮಾರು ೪೦% ನೀರಾವರಿ ನೀರನ್ನು ಉಳಿಸಬಹುದು ಹಾಗೂ ಸುಮಾರು ೩೧% ರಷ್ಟು ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ. ಹನಿ ನೀರಾವರಿಯಲ್ಲಿ ಗಿಡಕ್ಕೆ ನೀಡಬಹುದಾದ ನೀರಿನ ಪ್ರಮಾಣವನ್ನು ನಿಯಂತ್ರಿಸಬಹುದಾಗಿದೆ. ಹಂಗಾಮು ಆಧರಿಸಿ ನೀರಿನ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಬಹುದಾಗಿದೆ. ಮುಂಗಾರಿನಲ್ಲಿ ಸುಮಾರು ೧೧ ಲೀಟರ್/ಪ್ರತಿ ದಿನಕ್ಕೆ, ಹಿಂಗಾರಿನಲ್ಲಿ ಸುಮಾರು ೧೨ ಲೀಟರ್/ಪ್ರತಿ ದಿನಕ್ಕೆ ಹಾಗೂ ಬೇಸಿಗೆಯಲ್ಲಿ ೨೨ ಲೀಟರ್/ಪ್ರತಿ ದಿನಕ್ಕೆ ಸೂಕ್ತ ಪ್ರಮಾಣಗಳು. ಗಿಡಗಳು ಹೂ ಬಿಟ್ಟು – ಕಾಯಿ ಕಟ್ಟುವ ದಿನಗಳಲ್ಲಿ ಅವಶ್ಯಕ ಪ್ರಮಾಣದಲ್ಲಿ ನೀರು ಹಾಯಿಸದೇ ಇದ್ದರೆ ಪ್ರಾರಂಭದ ಹಂತದಲ್ಲಿರುವ ಕಾಯಿಗಳು ಉದುರುವ ಸಾಧ್ಯತೆಗಳು ಹೆಚ್ಚು. ಆದುದರಿಂದ ಕಾಯಿಗಳು ಬಲಿತು ಪಕ್ವವಾಗುವವರೆಗೆ ನಿಯಮಿತವಾಗಿ ನೀರು ಹಾಯಿಸಬೇಕು.

ಅಂತರ ಬೇಳೆಗಳು

ದಾಳಿಂಬೆಯನ್ನು ನಾಟಿ ಮಾಡಿದ ನಂತರ ಎರಡು ವರ್ಷಗಳ ಕಾಲ ವಿವಿಧ ಅಂತರ ಬೆಳೆಗಳನ್ನು ಬೆಳೆಯಬಹುದಾಗಿದೆ. ಮಣ್ಣಿನ ಗುಣವನ್ನು ಆಧರಿಸಿ ಹೆಸರು, ಅಲಸಂದಿ, ಉದ್ದು, ಶೇಂಗಾ, ಮೆಕ್ಕೆಜೋಳ ಇತ್ಯಾದಿ ಬೆಳೆಗಳನ್ನು ಮಧ್ಯಂತರ ಬೆಳೆಗಳಾಗಿ ಬೆಳೆಯಬಹದು. ಇದಲ್ಲದೇ ವಿವಿಧ ಪ್ರಕಾರದ ತರಕಾರಿ ಬೆಳೆಗಳಾದ ಹಾಗಲಕಾಯಿ, ನವಿಲುಕೋಸು, ಹೂಕೋಸು, ಎಲೆಕೋಸು, ಹೀರೆಕಾಯಿ, ಬೂದುಗುಂಬಳ, ಕಲ್ಲಂಗಡಿ, ಕುಂಬಳಕಾಯಿ ಇತ್ಯಾದಿಗಳನ್ನು ಬೆಳೆಯಬಹುದಾಗಿದೆ. ಇವುಗಳಲ್ಲದೇ ತಿಂಗಳ ಹುರುಳಿ, ಟೊಮ್ಯಾಟೊ, ಈರುಳ್ಳಿ, ಮೂಲಂಗಿ, ಆಲೂಗಡ್ಡೆ ಇತ್ಯಾದಿಗಳನ್ನು ಬೆಳೆಯಲು ಸೂಕ್ತವಾಗಿದೆ. ಇನ್ನೂ ಬಹುವಾರ್ಷಿಕ ಬೆಳೆಯಾದ ಪಪ್ಪಾಯವನ್ನು ದಾಳಿಂಬೆಯ ಮಧ್ಯದಲ್ಲಿ ಲಾಭದಾಯಕವಾಗಿ ಬೆಳೆಯಬಹದು.

ದಾಳಿಂಬೆ ಹೂವುಗಳ ವಿಧಗಳು

ದಾಳಿಂಬೆಯು ೩ ಪ್ರಕಾರಗಳ ಹೂವುಗಳನ್ನು ಹೊಂದಿದ್ದು ಅವುಗಳೆಂದರೆ ಗಂಡು ಹೂವು, ದ್ವಿಲಿಂಗ ಹೂವು ಹಾಗೂ ಮಧ್ಯವರ್ತಿ ಹೂವು. ಈ ಮೂರರಲ್ಲಿ ದ್ವಿಲಿಂಗ ಹೂವುಗಳು ಮಾತ್ರ ಕಾಯಿಕಟ್ಟಿ ಹಣ್ಣು ನೀಡುತ್ತವೆ. ಇತರೆ ಎರಡು ಪ್ರಕಾರದ ಹೂವುಗಳು ಉದುರಿ ಹೋಗುತ್ತವೆ. ದಾಳಿಂಬೆಯು ಹವಾಮಾನವನ್ನು ಆಧರಿಸಿ ವರ್ಷದಲ್ಲಿ ೩ ಸಲ ಹೂ ಬಿಡುವುದು. ಇವುಗಳೆಂದರೆ:

ಅ. ಅಂಬೆ ಬಹಾರ್ (ಜನೆವರಿಯಿಂದ ಫೆಬ್ರವರಿ ಎರಡನೇ ವಾರ)

ಬ. ಮೃಗ ಬಹಾರ್ (ಜೂನ್-ಜುಲೈ)

ಕ. ಹಸ್ತ ಬಹಾರ್ (ಅಕ್ಟೋಬರ್ ಮೊದಲ ವಾರದಿಂದ ನವ್ಹೆಂಬರ್ ಕೊನೆಯ ವಾರದವರೆಗೆ)

. ಅಂಬೆ ಬಹಾರ್

ಜನವರಿಯಿಂದ ಹಿಡಿದು ಫೆಬ್ರವರಿ ಎರಡನೇ ವಾರದಿಂದ ಪ್ರಾರಂಭವಾಗುವ ಈ ಅವಧಿಯಿಂದ ಹಿಡಿದು, ಕಾಯಿ ಕಟ್ಟಿ ಜೂನ್ ತಿಂಗಳಲ್ಲಿ ಕಟಾವಿಗೆ ಸಿದ್ಧವಾಗುತ್ತವೆ. ಈ ಅವಧಿಯು ತನ್ನದೇ ಆದಂತಹ ಪ್ರಯೋಜನಗಳನ್ನು ಹೊಂದಿದ್ದು ಅವುಗಳಲ್ಲಿ ಪ್ರಮುಖವಾದವು ಎಂದರೆ, ಹಣ್ಣು ಜೂನ್-ಜುಲೈ ತಿಂಗಳುಗಳಲ್ಲಿ ಕಟಾವಿಗೆ ಬರುವುದರಿಂದ ತುಂಬಾ ಆಕರ್ಷಕವಾದ ಬಣ್ಣ ಪಡೆಯುತ್ತವೆ ಮತ್ತು ಗಿಡವು ಉತ್ತಮವಾದ ವಿಶ್ರಾಂತಿ ಪಡೆಯುವುದರಿಂದ ಉತ್ತಮವಾದ ಫಸಲು ಬರುವುದು ಮತ್ತು ಆ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಹಣ್ಣುಗಳು ಲಭ್ಯವಿರದೇ ಇರುವುದರಿಂದ ಉತ್ತಮ ಬೆಲೆ ಬರುವುದರಿಂದ ಅಧಿಕ ಲಾಭ ಪಡೆಯಬಹುದಾಗಿದೆ. ಈ ಅವಧಿಯ ಸಾಮಾನ್ಯ ತೊಂದರೆಗಳೆಂದರೆ ಮಳೆಯ ಪ್ರಮಾಣ ಹೆಚ್ಚಾದರೆ ಕಾಯಿಗಳು ಸೀಳುವ ಸಂಭವನೀಯತೆ ಇರುವುದು ಮತ್ತು ಹೂವು ಹಿಡಿಯುವ ಸಮಯ ಬೇಸಿಗೆಯಾಗಿರುವುದರಿಂದ ಹೆಚ್ಚಿನ ಉಷ್ಣತೆಯಿಂದ ಹೂವುಗಳು ಉದುರುವ ಸಾಧ್ಯತೆಗಳೂ ಉಂಟು.

. ಮೃಗ ಬಹಾರ್

ಈ ಅವಧಿಯಲ್ಲಿ ಹೂವುಗಳನ್ನು ಪಡೆಯಬೇಕಾದರೆ ಸುಮಾರು ಒಂದೂವರೆ ತಿಂಗಳಷ್ಟು ಸಮಯ ಮಾರ್ಚ್ – ಏಪ್ರಿಲ್ ತಿಂಗಳುಗಳಲ್ಲಿ ಗಿಡಗಳಿಗೆ ನೀರಾವರಿಯನ್ನು ನೀಡಬಾರದು. ಗಿಡಗಳ ಮಡಿಗಳನ್ನು ಅಗೆದು, ಗೊಬ್ಬರ ನೀಡಿ ಮೃಗಶಿರ ಮಳೆಯ ಪ್ರಾರಂಭದ ಹಂತದಲ್ಲಿ ನೀರು ಹಾಯಿಸಬೇಕು. ಹೀಗೆ ಮಾಡುವುದರಿಂದ ಜೂನ್ – ಜುಲೈ ತಿಂಗಳುಗಳಲ್ಲಿ ಹೂ ಬಂದು ಮುಂದೆ ಡಿಸೆಂಬರ್ ಸುಮಾರಿಗೆ ಹಣ್ಣುಗಳ ಕೊಯ್ಲಿಗೆ ಸಿದ್ಧವಾಗುತ್ತದೆ. ಈ ಅವಧಿಯಲ್ಲಿ ಗಣೇಶ್ ಹಾಗೂ ಜಿ-೧೩೭ ತಳಿಗಳು ತುಂಬಾ ಸೂಕ್ತವಾದ ತಳಿಗಳು. ಈ ಅವಧಿಯಲ್ಲಿ ಕಡಿಮೆ ನೀರು ನೀಡಿ ಫಸಲು ಪಡೆಯಬಹುದಾಗಿದೆ. ಈ ಅವಧಿಯ ಪ್ರಮುಖ ತೊಂದರೆಗಳೆಂದರೆ ರಸ ಹೀರುವ ಪತಂಗದ ಬಾಧೆ ಬರಬಹುದು. ಇದಲ್ಲದೇ ಫಸಲು ಮಳೆಗಾಲದಲ್ಲಿ ಬರುವುದರಿಂದ ಅಂಥ್ರ‍್ಯಾಕ್ನೋಸ್ ಹಾಗೂ ಬ್ಯಾಕ್ಟೀರಿಯಾ ಅಂಗಮಾರಿ ರೋಗಗಳ ಬಾಧೆ ಮೂಡಬಹುದು.

. ಹಸ್ತ ಬಹಾರ್

ಈ ಅವಧಿಯಲ್ಲಿ (ಅಕ್ಟೋಬರ್ ಮೊದಲ ವಾರದಿಂದ ನವೆಂಬರ್ ಕೊನೆಯವರೆಗೆ) ಹೂವುಗಳನ್ನು ಪಡೆಯಬೇಕಾದರೆ ಬೆಳೆಗೆ ಅಗಸ್ಟ್ – ಸೆಪ್ಟೆಂಬರ್ ತಿಂಗಳಿನಲ್ಲಿ ನೀರು ಹಾಯಿಸುವುದನ್ನು ನಿಲ್ಲಿಸಿ ನಂತರ ಗಿಡದ ಮಡಿಗಳನ್ನು ಅಗೆದು ಗೊಬ್ಬರ ಹಾಕಿ ನೀರು ಹಾಯಿಸಬೇಕು. ಇದರಿಂದ ದಾಳಿಂಬೆ ಹಣ್ಣುಗಳು ಫೆಬ್ರವರಿ – ಮಾರ್ಚ್ ತಿಂಗಳಿನಲ್ಲಿ ಕೊಯ್ಲಿಗೆ ಬರುತ್ತವೆ. ಮೃದುಲಾ ಮತ್ತು ಆರಕ್ತ ತಳಿಗಳು ಸೂಕ್ತವಾಗಿದ್ದು ಫಸಲು ಬೇಸಿಗೆಯಲ್ಲಿ ಬರುವುದರಿಂದ ಕೀಟ ಹಾಗೂ ರೋಗಗಳ ಬಾಧೆ ಕಡಿಮೆಯಾಗುವುದು ಮತ್ತು ಉತ್ತಮ ಬೆಲೆ ಸಿಗುವುದು. ಗಣೇಶ್, ಜ್ಯೋತಿ ಹಾಗೂ ಜಿ-೧೩೭ ಈ ಅವಧಿಗೆ ಸೂಕ್ತವಾದ ತಳಿಗಳಲ್ಲ. ಏಕೆಂದರೆ, ಅವುಗಳ ಕಾಳುಗಳು ಬಿಳಿ ಬಣ್ಣಕ್ಕೆ ತಿರುಗುವುದರಿಂದ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುವುದಿಲ್ಲ. ಈ ಅವಧಿಯಲ್ಲಿಯ ತೊಂದರೆಗಳೆಂದರೆ ಬೇಸಿಗೆಯ ಉಷ್ಣತೆಯ ಪರಿಣಾಮವಾಗಿ ಬೀಜಗಳು ಗಾತ್ರದಲ್ಲಿ ಚಿಕ್ಕವಾಗಬಹುದು ಮತ್ತು ಬಿರುಸಾಗಬಹುದು.

ಚಾಟನಿ ಪದ್ಧತಿ

ದಾಳಿಂಬೆ ಗಿಡಗಳಿಗೆ ಸೂಕ್ತವಾದ ಆಕಾರ ನೀಡಲು ಮತ್ತು ಆರೋಗ್ಯಕರವಾದ ವಾತಾವರಣವನ್ನು ನೀಡುವ ದೃಷ್ಟಿಯಿಂದ ಚಾಟನಿ ಮಾಡುವುದು ಆವಶ್ಯಕವಾಗಿದೆ. ಇದನ್ನು ಎರಡು ರೀತಿಯಿಂದ ಮಾಡಬಹುದು. ಮೊದಲನೇ ಪದ್ಧತಿಯಲ್ಲಿ ಸುಮಾರು ೩ ರಿಂದ ೪ ಮುಖ್ಯ ರೆಂಬೆಗಳನ್ನು ಭೂಮಿಯಿಂದ ಬೆಳೆಯಲು ಬಿಟ್ಟು ಉಳಿದ ರೆಂಬೆಗಳನ್ನು ತೆಗೆದುಹಾಕಬೇಕು. ಎರಡನೇ ಪದ್ಧತಿಯಲ್ಲಿ ಒಂದೇ ಮುಖ್ಯ ಕಾಂಡದ ಮೇಲೆ ಉಳಿದ ರೆಂಬೆಗಳನ್ನು ಬೆಳೆಸಿದ ನಂತರ ಅವುಗಳನ್ನು ೧೦ ರಿಂದ ೧೫ ಸೆಂ.ಮೀ. ಎತ್ತರದವರೆಗೆ ಬೆಳೆಯಲು ಬಿಟ್ಟು ಚಾಟನಿ ಮಾಡಬೇಕು. ಹೀಗೆ ಮಾಡುವುದರಿಂದ ಮೊದಲ ೩ ರಿಂದ ೪ ವರ್ಷಗಳವರೆಗೆ ಚಾಟನಿ ಮಾಡುವುದರಿಂದ ಒಂದೇ ಸಮನಾದ ಗಿಡಗಳನ್ನು ಹೊಂದಬಹುದಾಗಿದೆ. ನಂತರದ ವರ್ಷಗಳಲ್ಲಿ ಉತ್ತಮವಾದ ಫಸಲು ಪಡೆಯಲು ಚಾಟನಿ ಪ್ರಮುಖವಾದದ್ದು. ಚಾಟನಿಯನ್ನು ಸಾಮಾನ್ಯವಾಗಿ ವಿಶ್ರಾಂತಿಯ ಅವಧಿಯಲ್ಲಿ ಮಾಡಬೇಕು. ಚಾಟನಿ ಮಾಡಿದ ನಂತರದಲ್ಲಿ ಶಿಫಾರಸ್ಸು ಮಾಡಿದ ಪ್ರಮಾಣದಲ್ಲಿ ಗೊಬ್ಬರಗಳನ್ನು ಕೊಟ್ಟು ನೀರು ಹಾಯಿಸುವುದರಿಂದ ಗಿಡಗಳು ಉತ್ತಮವಾಗಿ ಚಿಗುರು ಬಿಡುತ್ತವೆ. ಗಿಡಗಳು ಚಿಗುರಿದ ನಂತರ ಲಘುವಾಗಿ ಚಾಟನಿ ಹೂವುಗಳು ತುದಿಗಳಲ್ಲಿ ಗುಂಪಾಗಿ ಬರದೇ ರೆಂಬೆಯ ಒಳಗೆ, ಎಲೆಯ ಕಂಕುಳದಲ್ಲಿ ಒಂದು ಅಥವಾ ಎರಡು ಹೂವು ಬರುವಲ್ಲಿ ಸಹಕಾರಿಯಾಗುವುದು. ಈ ರೀತಿಯಾಗಿ ಹೂವು ಬರುವುದರಿಂದ ಬಿಸಿಲಿನ ತಾಪಕ್ಕೆ ತುತ್ತಾಗದೇ ಉತ್ತಮ ಗಾತ್ರದ ಹಣ್ಣುಗಳನ್ನು ಪಡೆಯಬಹುದಾಗಿದೆ.