ಗಿಡಗಳಿಗೆ ವಿಶ್ರಾಂತಿ ನೀಡುವುದು

ಗಿಡಗಳಿಗೆ ಸೂಕ್ತವಾದ ವಿಶ್ರಾಂತಿ ನೀಡುವುದರಿಂದ ಹೂಗಳ ನಿಯಂತ್ರಣ ಮಾಡಬಹುದಾಗಿದೆ. ಇದಕ್ಕಾಗಿ ಸುಮಾರು ೪೫ ದಿನಗಳ ವಿಶ್ರಾಂತಿಯು ಆವಶ್ಯಕ. ವಿಶ್ರಾಂತಿ ನೀಡಲು ನೀರನ್ನು ಕೊಡದೇ ಇರುವುದು ಅಥವಾ ಬೇರುಗಳ ಚಾಟನಿ ಮಾಡುವಂತಹ ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ನೀರನ್ನು ಕೊಡದೇ ಇರುವುದರಿಂದ ಗಿಡದಲ್ಲಿಯ ಎಲ್ಲಾ ಎಲೆಗಳು ಉದುರುವುದಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಶರ್ಕರ ಪಿಷ್ಠಗಳ ಸಂಗ್ರಹವಾಗುತ್ತದೆ. ಮಳೆಗಾಲದಲ್ಲಿ ವಿಶ್ರಾಂತಿ ನೀಡಲು ಇಥ್ರೇಲ್ ೩೯ ಇ.ಸಿ. ೧೦೦೦ ಪಿಪಿಎಂ ದ್ರಾವಣವನ್ನು (೨.೫ ಮಿ.ಲೀ. ಪ್ರತಿ ಲೀಟರ್ ನಿರಿನಲ್ಲಿ), ೧೫-೨೦ ದಿನಗಳ ಮುಂಚಿತವಾಗಿ ಎಲೆಗಳ ಮೇಲೆ ಸಿಂಪಡಿಸಬೇಕು, ಇದರಿಂದಾಗಿ ಎಲೆಗಳು ಉದುರುತ್ತವೆ. ದಾಳಿಂಬೆವನ್ನು ಕಪ್ಪು ಮಣ್ಣಿನಲ್ಲಿ ಬೆಳೆದಿದ್ದರೆ ಇಥ್ರೇಲ್ ೩೯ ಇ.ಸಿ.ಯನ್ನು ೫ ಮಿ.ಲೀ. ಪ್ರತಿ ಲೀಟರ್ ನೀರಿಗೆ ಸೇರಿಸಿ ಸಿಂಪಡಣೆ ಮಡುವುದರಿಂದ ಗಿಡಗಳನ್ನು ವಿಶ್ರಾಂತಿಯತ್ತ ಒಯ್ಯಬಹುದಾಗಿದೆ.

ಮೊದಲ ಫಸಲು

ನಾಟಿ ಮಾಡಿದ ೧೮ ರಿಂದ ೨೪ ತಿಂಗಳುಗಳ ನಂತರ ಗಿಡವು ಹೂ ಬಿಡಲು ಪ್ರಾರಂಭಿಸುವುದು. ಮೊದಲ ಸಲ ಫಸಲು ಪಡೆಯುವಾಗ ಪ್ರತಿ ಗಿಡದಲ್ಲಿ ಹೆಚ್ಚಿನ ಸಂಖ್ಯೆಯ ಹಣ್ಣುಗಳು ಬೆಳೆಯದೇ, ಕನಿಷ್ಟ ಸಾಧ್ಯವಿರುವ ಸಂಖ್ಯೆಯ ಹಣ್ಣುಗಳಿರುವಂತೆ ನೋಡಿಕೊಳ್ಳಬೇಕು. ಅದಾದ ನಂತರದ ಹಂಗಾಮುಗಳಲ್ಲಿ ಕ್ರಮೇಣದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೂವುಗಳನ್ನು ಬೆಳೆಯಲು ಅವಕಾಶ ನಿಡಿ ಉತ್ತಮ ಹಣ್ಣುಗಳನ್ನು ಪಡೆಯಬಹುದಾಗಿದೆ.

ರೋಗಗಳು ಹಾಗೂ ನಿರ್ವಹಣಾ ಕ್ರಮಗಳು

ದಾಳಿಂಬೆಯನ್ನು ಬಾಧಿಸುವ ಪ್ರಮುಖ ರೋಗಗಳೆಂದರೆ, ಸರ್ಕೊಸ್ಟೋರಾ ಎಲೆಚುಕ್ಕೆ ರೋಗ, ಅಂಥ್ರ‍್ಯಾಕ್ನೋಸ್ ಎಲೆಚುಕ್ಕೆ ರೋಗ, ಹಣ್ಣು ಕೊಳೆ ರೋಗ, ಎಲೆ ಮಚ್ಚೆ ರೋಗ ಹಾಗೂ ಬೇರುಗಂಟು ರೋಗ.

. ಹಣ್ಣು ಕೊಳೆ ರೋಗ

ಈ ರೋಗವು ಕೊಲೆಟೋಟ್ರೈಕಮ್ ಗ್ಲಿಯೋಸ್ಪೊರೈಡ್‌ಸ್ ಎಂಬ ಶಿಲೀಂಧ್ರದಿಂದ ಬರುವ ರೋಗವಾಗಿದ್ದು, ಅಂಥ್ರ‍್ಯಾಕ್ನೋಸ್ ರೋಗವೆಂದೇ ಹೆಚ್ಚು ಪ್ರಚಲಿತವಾಗಿದೆ. ರೋಗಪೀಡಿತ ಗಿಡಗಳ ಎಲೆ, ಹೂವು ಮತ್ತು ಹಣ್ಣುಗಳ ಮೇಲೆ ಈ ರೋಗದ ಲಕ್ಷಣಗಳನ್ನು ನೋಡಬಹುದು. ಈ ರೋಗವು ಪ್ರಮುಖವಾಗಿ ಮೃಗಬಹಾರ್ ಹಂಗಾಮಿನಲ್ಲಿ ಬೆಳೆದ ಫಸಲಿನಲ್ಲಿ ಕಾಣಬಹುದು. ರೋಗದ ಪ್ರಮುಖವಾದ ಲಕ್ಷಣಗಳೆಂದರೆ, ಹಣ್ಣುಗಳ ಮೇಲೆ ನೀರಿನಿಂದ ಆವೃತವಾದ ಕಪ್ಪು ಚುಕ್ಕೆಗಳು ಕಂಡುಬಂದು ತದನಂತರ ಈ ಚುಕ್ಕೆಗಳು ಪೂರ್ತಿ ಭಾಗವನ್ನು ಆವರಿಸಿ ನಂತರ ಉದ್ದನೆಯಾಕಾರದ ದೊಡ್ಡ ಮಚ್ಚೆಗಳಾಗಿ ಹರಡುತ್ತವೆ. ಈ ಮಚ್ಚೆಗಳ ಕೇಂದ್ರಭಾಗದಲ್ಲಿ ಕಪ್ಪು ಬಣ್ಣದಿಂದ ಕೂಡಿದ ಶಿಲೀಂದ್ರ ಕಾಣಿಸುವುದು.

ರೋಗ ಹತೋಟಿಗೆ ೧ ಗ್ರಾಂ ಕಾರ್ಬನ್‌ಡೈಜಿಮ್ ಅಥವಾ ೨ ಗ್ರಾಂ ಕ್ಲೊರೊಥೆಲೊನಿಲ್ ಅಥವಾ ೧ ಮಿ.ಲೀ. ಪ್ರೊಪಿಕಾನಾಜೋಲ್ ಅಥವಾ ೧ ಮಿ.ಲೀ. ಹೆಕ್ಸಾಕೋನಾಜೋಲ್ ಅಥವಾ ೨ ಗ್ರಾಂ ಇಪ್ರಾಬೋನಾಫಾಸ್ ಅಥವಾ ೦.೫ ಮಿ.ಲೀ. ಡೈಫೆನಾಕೋನಾಜೋಲ್ ಪ್ರತಿ ಲೀಟರ್ ನಿರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು.

. ಸರ್ಕೊಸ್ಪೋರಾ ಎಲೆಚುಕ್ಕೆ ರೋಗ (ಸರ್ಕೊಸ್ಪೋರಾ ಪುನಿಕೆ, ಶಿಲೀಂದ್ರ)

ರೋಗಪಿಡಿತ ಗಿಡಗಳಲ್ಲಿ ತಿಳಿಕಂದು ಬಣ್ಣದ ಚುಕ್ಕೆಗಳು ಎಲೆ, ಹೂವು ಮತ್ತು ಹಣ್ಣುಗಳು ಮೇಲೆ ಹಾಗೂ ಕಾಂಡದ ಮೇಲೆ ಕಪ್ಪು ಬಣ್ಣದ ಚುಕ್ಕೆಗಳು ಕಾಣಿಸುವವು.

ರೋಗದ ಹತೋಟಿಗಾಗಿ ೨.೫ ಗ್ರಾಂ ಮ್ಯಾಂಕೋಜೆಬ್‌ನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

. ಸೊರಗು ರೋಗ (ಸೆರೆಟೊಸಿಸ್ಟಿಸ್ ಫಿಂಬ್ರಿಯಾಟ)

ಸೊರಗು ರೋಗ ಬಂದ ಗಿಡಗಳಲ್ಲಿ ಒಂದು ಟೊಂಗೆ ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಸಂಪೂರ್ಣ ಗಿಡ ಹಳದಿ ಬಣ್ಣಕ್ಕೆ ತಿರುಗಿ ಒಣಗುತ್ತದೆ. ಇಂತಹ ಲಕ್ಷಣಗಳು ಹಣ್ಣುಗಳು ಗಿಡದಲ್ಲಿ ಹೆಚ್ಚಾಗಿ ಇದ್ದಾಗ ಕಂಡುಬರುತ್ತದೆ. ಒಣಗಿದ ಗಿಡದ ಕಾಂಡ ಮತ್ತು ಬೇರುಗಳನ್ನು ಕತ್ತರಿಸಿ ನೋಡಿದಾಗ ಕಂದು ಬಣ್ಣದ ಅಥವಾ ನೇರಳೆ ಬಣ್ಣದ ಮಚ್ಚೆಗಳು ಕಂಡುಬರುತ್ತವೆ.

ರೋಗದ ಹತೋಟಿಗಾಗ ರೋಗರಹಿತ ಸಸಿಗಳನ್ನು ನಾಟಿಗೆ ಉಪಯೋಗಿಸಬೇಕು. (ನೀಲಿ ಅಥವಾ ನೇರಳೆ ಬಣ್ಣದ ಮಚ್ಚೆಯು ಗೂಟಿ ಸಸಿಯು ಮೇಲೆ ಇಲ್ಲದಿರುವುದನ್ನು ಖಾತರಿ ಮಾಡಿಕೊಳ್ಳಬೇಕು).

ತೀವ್ರ ರೋಗಕ್ಕೆ ತುತ್ತಾದ ಗಿಡವನ್ನು ಕಿತ್ತುಹಾಕಿ, ಆ ಜಾಗದಲ್ಲಿ ಫಾರ್ಮಲಿನ್ ದ್ರಾವಣ (೨೦೦ ಮಿ.ಲೀ. ಪ್ರತಿ ಲೀಟರ್ ನೀರಿಗೆ) ವನ್ನು ಮಣ್ಣಿನ ಗುಂಡಿಗೆ ಉಣಿಸಬೇಕು. ನಂತರ ಪ್ಲಾಸ್ಟಿಕ್ ಹಾಳೆಯಿಂದ ಮುಚ್ಚಬೇಕು. ಇದರಿಂದ ಮಣ್ಣಿನಲ್ಲಿರುವಂತಹ ಶಿಲೀಂದ್ರವು ನಾಶವಾಗುತ್ತದೆ.

ರೋಗದ ಲಕ್ಷಣಗಳು ಗಿಡದ ಮೇಲೆ ಕಾಣಿಸಿಕೊಂಡ ಕೂಡಲೆ, ಪ್ರೊಪಿಕೊನ ಜೋಲ್ (೧ ಮಿ.ಲೀ. ಪ್ರತಿ ಲೀಟರ್ ನೀರಿಗೆ) + ಒವಿಸ್ ಪೌಡರ್ + ಕಾಲ್ಛೋಮಿಲ್ (೩ ಮಿ.ಲೀ./ ಪ್ರತಿ ಲೀಟರ್‌ಗೆ) ೪-೭ ದಿನಗಳ ಅಂತರದಲ್ಲಿ ೫ ಲೀಟರ್‌ನಷ್ಟು ದ್ರಾವಣವನ್ನು ಗಿಡಗಳ ಸುತ್ತಲೂ ಮಣ್ಣಿನಲ್ಲಿ ಉಣಿಸಬೇಕು. ಇದರ ಜೊತೆಗೆ ಬೋರಿಕ್ ಆಸಿಡ್ ಕೂಡ (೫ ಗ್ರಾಂ/ ಪ್ರತಿ ಗಿಡದ ಬುಡಕ್ಕೆ) ಉಪಚರಿಸಬಹುದು. ಇದಲ್ಲದೇ ರೋಗದ ಹತೋಟಿಗೆ ಮಣ್ಣಿನಿಂದ ಸ್ವಲ್ಪ ಮೇಲಕ್ಕೆ ಟೊಂಗೆಯ ಮೇಲೆ ಸೂಜಿ ಮೊನೆಯಾಕಾರದ ರಂಧ್ರಗಳು ಕಂಡುಬಂದಲ್ಲಿ ಕ್ಲೋರ್‌ಫೈರಿಫಾಸ್ (ಶೇ. ೦.೨ ರಷ್ಟು) ಅಥವಾ ಡೈಜಿನಾನ್ (೩೦ ಗ್ರಾಂ/ಪ್ರತಿ ಗಿಡಕ್ಕೆ) ನಿಂದ ಉಪಚರಿಸಬೇಕು.

ಹನಿ ನೀರಾವರಿ ಪದ್ಧತಿ ಅಳವಡಿಸುವುದರಿಂದ ಮತ್ತು ಗಿಡದಿಂದ ಗಿಡಕ್ಕೆ ಅಂತರ ಹೆಚ್ಚಿಸುವುದರಿಂದ ಈ ರೋಗ ಹರಡುವಿಕೆಯನ್ನು ನಿಯಂತ್ರಿಸಬಹುದು.

. ದುಂಡಾಣು ಅಂಗಮಾರಿ (ಕಜ್ಜಿರೋಗ): (ಜಾಂತೋಮೋನಾಸ್ ಆಕ್ಸಿನೋ ಪೊಡಿಸ್ ಪಿ.ವಿ. ಪುನಿಕೆ)

ಈ ರೋಗಾಣು ಭೂಮಿಯ ಮೇಲೆ ಬಿದ್ದ ರೋಗಪೀಡಿತ ಎಲೆಗಳಲ್ಲಿ ಸುಮಾರು ೪ ತಿಂಗಳುಗಳವರೆಗೆ ಸುಪ್ತಾವಸ್ಥೆಯಲ್ಲಿ ಇರುವುದು. ನಂತರ ಮುಂಬರುವ ಬೆಳೆಗೆ ಅಂಟಿಕೊಂಡು ಹಾನಿಯನ್ನು ಉಂಟುಮಾಡುತ್ತದೆ. ಈ ರೋಗವು ಹೆಚ್ಚಾಗಿ ರೋಗಪೀಡಿತ ಸಸಿಗಳನ್ನು ನಾಟಿ ಮಾಡುವುದರಿಂದ ಮತ್ತು ಮುಂಜಾಗ್ರತೆ ಇಲ್ಲದ ಚಾಟನಿ ಪದ್ಧತಿ ಅನುಸರಿಸುವುದರಿಂದ ಹರಡುತ್ತದೆ. ಹೆಚ್ಚು ಉಷ್ಣಾಂಶ ಮತ್ತು ಕಡಿಮೆ ತೇವಾಂಶ ಇದ್ದಂತಹ ವಾತಾವರಣದಲ್ಲಿ ರೋಗಾಣುಗಳು ವೃದ್ಧಿ ಹೊಂದುತ್ತವೆ. ಎಲೆಯ ಮೇಲೆ ನೀರಿನಿಂದ ಕೂಡಿದ ಚುಕ್ಕೆಗಳು ಕಾಣಿಸುತ್ತವೆ. ನಂತರ ಈ ಚುಕ್ಕೆಗಳು ಕಪ್ಪು ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ. ರೋಗ ಹೆಚ್ಚಾದಾಗ ರೋಗ ಪೀಡಿತ ಎಲೆಗಳು ನೆಲಕ್ಕೆ ಉದುರುತ್ತವೆ. ಕಾಯಿ (ಹಣ್ಣು)ಗಳ ಮೇಲೆ ಚುಕ್ಕೆಗಳು ಎಣ್ಣೆಯಂತಿದ್ದು ಉಬ್ಬಿಕೊಂಡಿರುತ್ತದೆ. ಮೋಡ ಕವಿದ ವಾತಾವರಣ ಮತ್ತು ಆಗಾಗ ಬೀಳುವ ತುಂತುರು ಮಳೆಯಿಂದ ರೋಗದ ತೀವ್ರತೆ ಹೆಚ್ಚಾಗಿ ಹಣ್ಣಿನ ಮೇಲೆ ಇರುವ ಚುಕ್ಕಿಗಳು ಬೆಳೆದು ಮಚ್ಚೆಯಾಗುತ್ತವೆ. ನಂತರ ಆ ಜಾಗದಲ್ಲಿ ಕಾಯಿಗಳು ಸೀಳಲು ಪ್ರಾರಂಭಿಸುವುವು. ಇದರಿಂದ ಹಣ್ಣುಗಳು ಕಳಪೆ ಗುಣಮಟ್ಟದ್ದಾಗಿರುತ್ತವೆ ಹಾಗೂ ಉದುರಲು ಪ್ರಾರಂಭವಾಗುತ್ತದೆ.

ಈ ರೋಗವು ಕಾಂಡದ ಮೇಲೆ ಬಂದಾಗ ಕುಡಿಗಳು ಮೇಲಿನಿಂದ ಒಣಗಿ ಕಪ್ಪು ಮಚ್ಚೆಗಳು ಕಾಣುತ್ತವೆ. ರೋಗದ ತೀವ್ರತೆ ಹೆಚ್ಚಾದಂತೆ ಕಾಂಡವು ಭಾಗವು ಸೀಳುವುದಲ್ಲದೇ ಇದರಿಂದ ರೋಗಪಿಡಿತ ಕಾಂಡ ಮುರಿದು ಬೀಳುತ್ತದೆ. ರೋಗದ ನಿರ್ವಹಣೆಗಾಗಿ ಬೆಳೆಯ ಎರಡು ಹಂತಗಳಲ್ಲಿ ಅನುಸರಿಸಬೇಕಾದ ಕ್ರಮಗಳು ಕೆಳಗಿನಂತಿರುವವು.

. ನಾಟಿ ಪೂರ್ವದಲ್ಲಿ ಅನುಸರಿಸಬೇಕಾದ ಕ್ರಮಗಳು

ರೋಗರಹಿತ ಸಸಿಗಳನ್ನು ನಾಟಿಗೆ ಉಪಯೋಗಿಸಬೇಕು, ಶಿಫಾರಸ್ಸು ಮಾಡಿದ ಪೋಷಕಾಂಶಗಳ ಜೊತೆಗೆ ಕೊಟ್ಟಿಗೆ ಅಥವಾ ಎರೆಹುಳುವಿನ ಗೊಬ್ಬರ ಮತ್ತು ಜೈವಿಕ ಜೀವಿಗಳಾದ ಸುಡೋಮೋನಾಸ್ ಫ್ಲುರೋಸೆನ್ಸ ಅಥವಾ ಬೆಸಿಲರ್ ಸಬ್‌ಟಲಿಸ್‌ಗಳನ್ನು ಬಳಸುವುದರಿಂದ ರೋಗದ ಬಾಧೆಗೆ ಗಿಡದ ಸಹಿಷ್ಣುತೆ ಪ್ರಮಾಣ ಹೆಚ್ಚಿಸಬಹುದು, ಲಘು ಪೋಷಕಾಂಶಗಳಾದ ಸತುವಿನ ಸಲ್ಫೇಟ್ (೨೫ ಗ್ರಾಂ), ಬೋರಾನ್ (೫೦ ಗ್ರಾಂ), ಮೆಗ್ನೆಶಿಯಂ ಸಲ್ಫೇಟ್ (೨೫ ಗ್ರಾಂ)ಗಳನ್ನು ಪ್ರತಿ ಗಿಡಕ್ಕೆ ಕೊಡುವುದರಿಂದ ಗಿಡದಲ್ಲಿ ರೋಗನಿರೋಧಕತೆ ಹೆಚ್ಚಾಗುವುದು.

. ಚಾಟನಿ ಪೂರ್ವ ಮತ್ತು ನಂತರದಲ್ಲಿ ಅನುಸರಿಸಬೇಕಾದ ಕ್ರಮಗಳು

ದಾಳಿಂಬೆ ತೋಟವನ್ನು ಸ್ವಚ್ಛವಾಗಿಡಬೇಕು. ರೋಗಪೀಡಿತ ಎಲೆ, ಕಾಂಡ ಮತ್ತು ಕಾಯಿಗಳನ್ನು ಕತ್ತರಿಸಿ ಸುಡುವುದು. ಚಾಟನಿ ಕತ್ತರಿಯನ್ನು (೨೫ ಮಿ.ಲೀ./ಪ್ರತಿ ಲೀ. ನೀರಿಗೆ) ಸೋಡಿಯಂ ಹೈಪೋಕ್ಲೋರೈಡ್ ದ್ರಾವಣದಲ್ಲಿ ಅದ್ದಿ ಉಪಯೋಗಿಸಬೇಕು. ಚಾಟನಿಯ ಪೂರ್ವದಲ್ಲಿ ರೋಗ ತಗುಲಿದ ಎಲೆಗಳ ಸೋಂಕನ್ನು ಕಡಿಮೆ ಮಾಡಲು, ಶೇ.೧ ರ ಬೋರ್ಡೋ ದ್ರಾವಣವನ್ನು ಸಿಂಪಡಿಸಿದ ನಂತರ ಪ್ರತಿ ಲೀಟರ್ ನೀರಿಗೆ ೨.೦ ರಿಂದ ೨.೫ ಮಿ.ಲೀ. ಇಥ್ರೇಲ್ ಬೆರೆಸಿ ಗಿಡಗಳಿಗೆ ಸಿಂಪಡಿಸಿ ಎಲೆ ಉದುರಿಸಬೇಕು ಹಾಗೂ ಸುಟ್ಟು ಹಾಕಬೇಕು. ಅಳಿದುಳಿದ ಎಲೆಗಳ ಮೇಲೆ ಹೆಕ್ಟೇರಿಗೆ ೨೦-೨೫ ಕಿ.ಗ್ರಾಂ ಬ್ಲೀಚಿಂಗ್ ಪೌಡರನ್ನು ಧೂಳೀಕರಿಸಬೇಕು. ಚಾಟನಿ ನಂತರ ರೋಗ ತಗುಲಿದ ಗಿಡದ ಕಾಂಡಕ್ಕೆ ಸ್ಟ್ರೆಪ್ಟೋಸೈಕ್ಲಿನ್ (೦.೫ ಗ್ರಾಂ) ಅಥವಾ ಬ್ರೊಮೋಪಾಲ್ (ಬ್ಯಾಕ್ಟೀರಿಯಾನಾಶಕ್ ೦.೫ ಗ್ರಾಂ) ಮತ್ತು ತಾಮ್ರದ ಆಕ್ಸಿಕ್ಲೋರೈಡ್ (೩.೦ ಗ್ರಾಂ) ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಕೆಂಪು ಹುರುಮಂಜು ಅಥವಾ ಕೆಂಪು ಮಣ್ಣನ್ನು ಕೂಡಿಸಿ ಗಿಡದ ಕಾಂಡಕ್ಕೆ ಲೇಪಿಸಬೇಕು. ರೋಗದ ತೀವ್ರತೆ ಅಧಿಕವಾಗಿದ್ದಲ್ಲಿ ಹಸ್ತ ಬಹಾರ್‌ನಲ್ಲಿ (ಸೆಪ್ಟೆಂಬರ್ – ಅಕ್ಟೋಬರ್ ಚಾಟನಿ ಮಾಡುವುದು) ತೆಗೆದುಕೊಳ್ಳುವುದು ಸೂಕ್ತ. ಜೂನ್- ಜುಲೈ ತಿಂಗಳಲ್ಲಿ ಚಾಟನಿ ಮಾಡುವ ಬೆಳೆಗೆ ೬ ತಿಂಗಳುಗಳವರೆಗೆ (ಡಿಸೆಂಬರ್ – ಮೇ) ವಿಶ್ರಾಂತಿ ಕೊಡುವುದು ಸೂಕ್ತ. ರೋಗದ ಪ್ರಾರಂಭಿಕ ಹಂತದಲ್ಲಿ ಬ್ರೋಮ್‌ಪಾಲ್ ( ಬ್ಯಾಕ್ಟೀರಿಯಾನಾಶಕ್) ೦.೫ ಗ್ರಾಂ ಅಥವಾ ಸ್ಟ್ರೆಪ್ಟೋಸೈಕ್ಲಿನ್ ೦.೫ ಗ್ರಾಂ ಮತ್ತು ತಾಮ್ರದ ಆಕ್ಸಿಕ್ಲೋರೈಡ್ ೨ ಗ್ರಾಂ ಪ್ರತಿ ಲೀ. ನೀರಿಗೆ ಬೆರೆಸಿ ಸಿಂಪಡಿಸಬೇಕು. ಹವಾಮಾನ ಹಾಗೂ ರೋಗ ಬಾಧೆಗೆ ಅನುಸಾರವಾಗಿ ೬ ರಿಂದ ೭ ಸಿಂಪಡಣೆಗಳನ್ನು ೧೫ ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಪ್ರತಿ ದುಂಡಾಣು ನಾಶಕ ಸಿಂಪಡಣೆಯ ನಂತರ, ಸತುವಿನ ಸಲ್ಫೇಟ್ – ೧ ಗ್ರಾಂ, ಮೆಗ್ನೇಶಿಯಂ ಸಲ್ಫೇಟ್ – ೧ ಗ್ರಾಂ, ಸುಣ್ಣದ ಸಲ್ಫೇಟ್ – ೧ ಗ್ರಾಂ ಮತ್ತು ಬೋರಾನ್-೧ ಗ್ರಾಂ ನಂತೆ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಣೆ ಮಾಡುವುದರಿಂದ ಸಸ್ಯಗಳ ರೋಗನಿರೋಧಕತೆ ಹೆಚ್ಚಿಸಬಹುದು.

. ಬೇರುಗಂಟು ರೋಗ (ನಿಮ್ಯಾಟೋಡ್)

ಇತ್ತೀಚಿನ ದಿನಗಳಲ್ಲಿ ಬೇರುಗಂಟು ರೋಗವು ದಾಳಿಂಬೆಯಲ್ಲಿಯೂ ಸಹ ಕಂಡುಬಂದಿರುವುದು. ಈ ರೋಗವು ಮಣ್ಣಿನಲ್ಲಿ ವಾಸಿಸುವ ಸೂಕ್ಷ್ಮಜೀವಿ ಜಂತು ಹುಳುವಿನಂತಿರುವ ಮೆಲ್ಯಾಡೊಗೈನ್‌ದಿಂದ ಬರುತ್ತದೆ. ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಪೋಷಕಾಂಶಗಳ ಕೊರತೆಯಿಂದ ಬಳಲುತ್ತಿರುವ ಹಾಗೆ ಕಂಡುಬರುತ್ತದೆ.

ನಿರ್ವಹಣೆ: ಪ್ರತಿ ಗಿಡಕ್ಕೆ ೧೦೦ ಗ್ರಾಂ. ಬೇವಿನ ಹಿಂಡಿ ಮತ್ತು ೫೦ ಗ್ರಾಂ ಫೋರೇಟ್ ಹರಳುಗಳನ್ನು ವರ್ಷದಲ್ಲಿ ೨ ಸಾರಿ ಹಾಕಬೇಕು.

ಕೀಟಗಳು ಹಾಗೂ ಅವುಗಳ ನಿರ್ವಹಣೆ

ದಾಳಿಂಬೆಯ ಪ್ರಮುಖ ಕೀಟಗಳೆಂದರೆ ಅನಾರ್ ಚಿಟ್ಟೆ, ದಾಳಿಂಬೆ ಕಾಯಿಕೊರಕ, ಹಣ್ಣಿನ ರಸ ಹೀರುವ ಪತಂಗ, ತೊಟ್ಟು ತಿನ್ನುವ ಹುಳು, ದಾಳಿಂಬೆ ಕುಟ್ಟಡ ಹುಳು, ರಸ ಹೀರುವ ಕೀಟಗಳು, ಹಿಟ್ಟು ತಿಗಣೆ ಇತ್ಯಾದಿ.

. ಅನಾರ್ ಚಿಟ್ಟೆ/ದಾಳಿಂಬೆ ಕಾಯಿ ಕೊರೆಯುವ ಹುಳು (ಡಿಯೇಡರಿಕ್ಸ್ ಐಸೋಕ್ರೇಡಸ್)

ಇದು ಮುಖ್ಯವಾದ ಕೀಟವಾಗಿದ್ದು, ಹೂವು ಮತ್ತು ಎಲ್ಲ ಗಾತ್ರದ ಕಾಯಿಗಳನ್ನು ಕೊರೆದು ಬೀಜಗಳನ್ನು ತಿಂದು ಕೊಳೆಯುವಂತೆ ಮಾಡುತ್ತವೆ.

ಚಿಟ್ಟೆಯು ನೀಲಿ-ಬೂದು ಬಣ್ಣದ್ದಾಗತಿದ್ದು, ಕೆಳರೆಕ್ಕೆಗಳ ತುದಿಯಲ್ಲಿ ಬಾಲದಂತಹ ರಚನೆಯಿದೆ. ಈ ಚಿಟ್ಟೆಯ ಚಟುವಟಿಕೆ ಹೆಚ್ಚು ಉಷ್ಣವಿರುವ ದಿನಗಳಲ್ಲಿ ಹಾಗೂ ಹೂವು ಕಾಯಿಗಳಿರುವ ತೋಟಗಳಲ್ಲಿ ಚುರುಕಾಗಿದ್ದು ಹೂವು ಕಾಯಿಗಳ ಮೇಲೆ ಕಂದು ಬಣ್ಣದ ಮೊಟ್ಟೆಗಳನ್ನಿಡುವುದು. ನಂತರದ ಹಂತದಲ್ಲಿ ಮೊಟ್ಟೆಯಿಂದ ಮರಿಹುಳು ಹಿಕ್ಕಿ ಕಾಣುತ್ತದೆ. ಈ ಕೀಟದ ಹಾವಳಿ ಮೃಗ ಬಹಾರ ಫಸಲಿನಲ್ಲಿ ಅಂದರೆ ಅಗಸ್ಟ್‌ನಿಂದ ಅಕ್ಟೋಬರ್ ತಿಂಗಳಿನಲ್ಲಿ ಬರುವ ಫಸಲಿನಲ್ಲಿ ಹೆಚ್ಚಾಗಿರುತ್ತದೆ.

ಹತೋಟಿ: ತೋಟವು ಸಣ್ಣದಾಗಿದ್ದಲ್ಲಿ ಪ್ರತಿಯೊಂದು ಕಾಯಿಗೆ ಪ್ಲಾಸ್ಟಿಕ್ ಚೀಲದಿಂದ ಮುಚ್ಚಬೇಕು. ಹೀಗೆ ಮಾಡುವುದರಿಂದ ಚಿಟ್ಟೆಯು ಕಾಯಿಗಳ ಮೇಲೆ ಮೊಟ್ಟೆಗಳನ್ನು ಇಡುವುದನ್ನು ತಪ್ಪಿಸಬಹುದು. ನಂತರ ಈ ಕೀಟದ ಬಾಧೆ ಕಂಡುಬಂದಲ್ಲಿ ಕಾರ್ಬರಿಲ್ ೪ ಗ್ರಾಂ. ಅಥವಾ ಡೈಕ್ಲೋರ್‌ಫಾಸ್ ೧ ಮಿ.ಲೀ. ಪ್ರತಿ ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು.

. ದಾಳಿಂಬೆ ಕಾಯಿಕೊರಕ ಹುಳು (ಡೊಕೊಕ್ರೋಸಿಸ್ ಪಂಕ್ವಿಫೇರಾಲಿಸ್)

ಈ ಕೀಟದ ಮರಿಗಳು ಹಣ್ಣುಗಳನ್ನು ಕೊರೆದು ನಾಶ ಮಾಡುತ್ತವೆ. ಪತಂಗವು ಸಾಮಾನ್ಯ ಗಾತ್ರದಿದ್ದು ಮಾಸಿದ ಹಳದಿ ಬಣ್ಣದ ರೆಕ್ಕೆಗಳ ಮೇಲೆ ಹಲವು ಕಪ್ಪು ಚುಕ್ಕೆಗಳನ್ನು ಕಾಣಬಹುದು. ಹೆಣ್ಣು ಪತಂಗಗಳು ಹಳದಿ ಬಣ್ಣದ, ಗೋಪುರಾಕಾರದ ಮೊಟ್ಟೆಗಳನ್ನು ಒಂದೊಂದಾಗಿ ಚಿಗುರು, ಮೊಗ್ಗು ಹಾಗೂ ಹೀಚುಗಳ ಮೇಲೆ ಇಡುತ್ತವೆ. ಮೊಟ್ಟೆಯಿಂದ ಹೊರಬಮದ ಮರಿಗಳು ಕಾಯಿಯನ್ನು ಕೊರೆದು ಬೀಜಗಳನ್ನು ತಿನ್ನುತ್ತವೆ. ಬೆಳೆದ ಮರಿಹುಳು ಹಣ್ಣಿನ ತೊಟ್ಟು, ರೆಂಬೆಗಳ ಮೇಲೆ ರೇಷ್ಮೆಯ ಗೂಡಿನೊಳಗೆ ಕೋಶಾವಸ್ಥೆಯನ್ನು ಹೊಂದುತ್ತದೆ. ಈ ಕೀಟದ ನಿರ್ವಹಣೆಗೆ ಕಾಯಿಗಳನ್ನು ಬಟ್ಟೆ ಅಥವಾ ಕಾಗದದ ಚೀಲದಿಂದ ಮುಚ್ಚಬೇಕು. ಬಾಧೆಗೊಳಗಾದ ಎಲ್ಲ ಗಾತ್ರದ ಕಾಯಿಗಳನ್ನು ಕಿತ್ತು ಸಂಗ್ರಹಿಸಿ ನಾಶಪಡಿಸಬೇಕು. ಈ ಹುಳುವಿನ ಚಟುವಟಿಕೆ ಕಂಡುಬಂದ ಕೂಡಲೇ ಶೇ. ೦.೪ ರ ಕಾರ್ಬರಿಲ್ ಅಥವಾ ಶೇ. ೦.೦೦೨ ರ ಡೆಮಕ್ರಾನ್ ಅಥವಾ ಶೇ. ೦.೦೭೫ ಸೈಪರ್ ಮೆಥ್ರಿನ್ ಅಥವಾ ಶೆ. ೦.೦೫ ಫೆನ್ಥೊಯೇಟ್ ಸಿಂಪರಣಾ ದ್ರಾವಣವನ್ನು ೧೫ ರಿಂದ ೨೦ ದಿನಗಳ ಅಂತರದಲ್ಲಿ ೨ ರಿಂದ ೩ ಸಲ ಸಿಂಪಡಿಸಬೇಕು.

. ಹಣ್ಣಿನ ರಸ ಹೀರುವ ಪತಂಗಗಳು (ಒಥೆರಿಸ್ ಪ್ರಬೇಧಗಳು)

ರಸ ಹೀರುವ ಪತಂಗಗಳಿಗೆ ವರ್ಷವಡೀ ಆಹಾರ ದೊರೆಯುವುದರಿಂದ ಕೀಟಗಳು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾಗಿ ದಾಳಿಂಬೆ ಬೆಳೆಯನ್ನು ಬಾಧಿಸುವ ಪ್ರಮುಖ ಕೀಟವಾಗಿದೆ. ಈ ಪತಂಗಗಳು ಬಲಿಷ್ಠ, ದೊಡ್ಡ ಗಾತ್ರವಾಗಿರುವವು. ಹರಡಿದ ರೆಕ್ಕೆಗಳ ಬಣ್ಣ ಕಿತ್ತಳೆ ಹಳದಿ, ಮುಂಭಾಗದ ರೆಕ್ಕೆಗಳು ಕಂದು ಬಣ್ಣದ್ದಾಗಿದ್ದು ಕಪ್ಪು ಪಟ್ಟಿಗಳಿರುತ್ತವೆ.

ಹತೋಟಿ: ತೋಟದ ಬೇಲಿಯಲ್ಲಿ ಅಮೃತಬಳ್ಳಿ ಮತ್ತು ಕಾಕುಲಸ್ ಬಳ್ಳಿಗಳು ಇದ್ದಲ್ಲಿ ಕಿತ್ತು ನಾಶಪಡಿಸಬೇಕು. ಬಹಾರ್ ಕ್ರಮವನ್ನು ಅನುಸರಿಸುವಾಗ ಫಸಲು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತೊಂಗಳಿನಲ್ಲಿ ಕಟಾವಿಗೆ ಬರದಂತೆ ನೋಡಿಕೊಳ್ಳುವುದರಿಂದ ಕೀಟದ ಬಾಧೆಯನ್ನು ಹತೋಟಿಯಲ್ಲಿಡಲು ಸಹಕಾರಿ ಆಗುವುದು.

. ಕಾಂಡ ಕೊರೆಯುವ ದುಂಬಿ

ಈ ಕೀಟಗಳು ಉದ್ದ ಮೀಸೆಯ ಹಳದಿ ನಸುಗೆಂಪು ಬಣ್ಣದ್ದಾಗಿದ್ದು, ಹೆಣ್ಣುದುಂಬಿಯು ಕಾಂಡದ ತೊಗಟೆ ಕೊರೆದು ತತ್ತಿಯನ್ನಿಡುತ್ತದೆ. ಮರಿ ಹುಳುಗಳು ಕಾಂಡ ಹಾಗೂ ಬೇರು ಕೊರೆಯುತ್ತ ಒಳಗೆ ಸೇರುತ್ತವೆ. ಇಂತಹ ಗಿಡದ ಕೆಳಗೆ ಹಳದಿ ಲದ್ದಿಯು ಬಿದ್ದಿರುವುದನ್ನು ಕಾಣಬಹುದು ಬಾಧಿತ ಗಿಡದ ಟೊಂಗೆಗಳು ಒಣಗುತ್ತವೆ ಇಲ್ಲವೇ ಗಿಡವೇ ಒಣಗಿ ಹೋಗುತ್ತದೆ.

ನಿರ್ವಹಣಾ ಕ್ರಮಗಳು

೧. ಥ್ರಿಪ್ಸ್ ನುಸಿ ಬಾಧೆ ತಡೆಯಲು ಗಿಡಗಳು ಹೂ ಬಿಡುವ ಸಮಯದಲ್ಲಿ ಪ್ರತಿ ಲೀಟರ್‌ ನೀರಿನಲ್ಲಿ ೧.೦ ಮಿ.ಲೀ. ಮಾನೊಕ್ರೋಟೋಫಾಸ್ ಅಥವಾ ೪ ಗ್ರಾಂ ಕಾರ್ಬಾರಿಲ್ ಪುಡಿ ಬೆರೆಸಿ ಸಿಂಪಡಿಸಬೇಕು.

೨. ಹಿಟ್ಟುತಿಗಣೆ ಬಾಧೆಯನ್ನು ತಡೆಯಲು ಪ್ರತಿ ಲೀಟರ್ ನೀರಿಗೆ ೨ ಮಿ.ಲೀ. ಡೈಕ್ಲೋರ್‌ವಾಸ್ ಮತ್ತು ೫ ಗ್ರಾಂ ಮೀನಿನ ಎಣ್ಣೆಯ ಸಾಬೂನು (ಮಿನಾರ್ಕ್) ಇವುಗಳನ್ನು ಬೆರೆಸಿ ಬೆಳೆಗೆ ಸಿಂಪಡಿಸಬೇಕು.

೩. ಬಿಳಿನೊಣದ ಬಾಧೆ ನಿಯಂತ್ರಿಸಲು ಪ್ರತಿ ಲೀಟರ್ ನೀರಿಗೆ ೧.೫೦ ಮಿ.ಲೀ. ಟ್ರೈಅಜೋಫಾಸ್ ಬೆರೆಸಿ ಸಿಂಪಡಿಸಬೇಕು.

೪. ದಾಳಿಂಬೆ ಕಾಯಿ ಕೊರೆಯುವ ಹುಳುವಿನ ಹತೋಟಿಗೆ ಹೂಬಿಡುವ ಸಮಯದಲ್ಲಿ ಪ್ರತಿ ಲೀಟರ್ ನೀರಿಗೆ ೨ ಮಿ.ಲೀ. ಮೆಲಾಥಿಯಾನ್ ಅಥವಾ ೪ ಗ್ರಾಂ. ಕಾರ್ಬರಿಲ್ ಪುಡಿಯನ್ನು ಬೆರೆಸಿ ಸಿಂಪಡಿಸಬೇಕು. ಕಾಯಿ ಬಿಟ್ಟ ಹಂತದಿಂದ ಹಣ್ಣಿನ ಹಂತದವರೆಗೂ ಮೇಲೆ ಹೇಳಿದ ಕೀಟನಾಶಕಗಳನ್ನು ಪ್ರತಿ ೧೫ ದಿನಗಳ ಅಂತರದಲ್ಲಿ ಅವಶ್ಯಕತೆಗೆ ಅನುಗುಣವಾಗಿ ಸಿಂಪಡಿಸಬೇಕು.

೫. ಗುಂಡು ರಂಧ್ರ ಕೊರಕದ ಬಾಧೆಯನ್ನು ತಡೆಗಟ್ಟಲು ಸಾಮೂಹಿಕವಾಗಿ ದಾಳಿಂಬೆ ಗಿಡಗಳಿಗೆ ಸೂಚಿಸಿದ ನಿರ್ವಹಣಾ ಕ್ರಮಗಳನ್ನು ತಪ್ಪದೇ ಅಳವಡಿಸಿದಲ್ಲಿ, ಮುಂದೆ ಗಿಡದ ಮೇಲೆ ಆಗಬಹುದಾದ ಹಾನಿಯನ್ನು ತಡೆಗಟ್ಟಬಹುದಾಗಿದೆ.
ಅ. ದಾಳಿಂಬೆ ಗಿಡದ ಬುಡದಲ್ಲಿ ಮಣ್ಣನ್ನು ಬೇರು ಕಾಣಿಸುವವರೆಗೆ (ಕಾಂಡ ಹಾಗೂ ಬೇರಿಗೆ ಗಾಯ ಮಾಡದಂತೆ) ತೆಗೆಯಬೇಕು. ನಂತರ ಕೀಟನಾಶಕಗಳಾದ ೪ ಮಿ.ಲೀ. ಕ್ಲೋರ್‌ಪೈರಿಫಾಸ್ ೨೦ ಇ.ಸಿ ಅಥವಾ ೬ ಗ್ರಾಂ. ಕಾರ್ಬಾರಿಲ್ ೫೦ ಡಬ್ಲು. ಪಿ. ಅಥವಾ ೪.೫ ಮಿ.ಲೀ. ಕ್ವಿನಾಲ್‌ಫಾಸ್ ೨೫ ಎ. ಎಫ್. ಪ್ರತಿ ಲೀಟರ್ ನೀರಿನಲ್ಲಿ ೧ ಗ್ರಾಂ ಕಾರ್ಬೆಂಡೈಜಿಮ್ ೫೦ ಡಬ್ಲು. ಪಿ.ನೊಂದಿಗೆ ಬೆರೆಸಿ. ಒಟ್ಟು ೫-೮ ಲೀಟರ್ ದ್ರಾವಣವನ್ನು ಮೂರು ವರ್ಷ ಮೇಲ್ಪಟ್ಟ ಎಲ್ಲಾ ಗಿಡಗಳಿಗೆ ಬುಡ ತೊಯ್ಯುವ ಹಾಗೆ ಮಣ್ಣಿನಲ್ಲಿ ಗಿಡದ ಬುಡದ ಸುತ್ತಲೂ ಸುರಿಯಬೇಕು. ವರ್ಷಕ್ಕೆ ಎರಡು ಬಾರಿ ಈ ರೀತಿ ಹಾಕುವುದರಿಂದ ಮುಂದೆ ಗಿಡಗಳ ಒಣಗುವುದನ್ನು ತಡೆಗಟ್ಟೆಬಹುದು.

ಆ. ಈ ಉಪಚಾರಗಳನ್ನು ಅನುಸರಿಸಿದ ಒಂದು ದಿನ ಮುಂಚೆ ಹಾಗೂ ನಂತರ, ಗಿಡಗಳಿಗೆ ನೀರನ್ನು ಉಣಿಸಬಾರದು.

ಇ. ಈಗಾಗಲೇ ಈ ಬಾಧೆಯಿಂದ ಒಣಗಿದ ಗಿಡಗಳನ್ನು ಬುಡಸಮೇತ ಕಿತ್ತು ಶೇಖರಿಸಿದ ಗಿಡಗಳನ್ನು ತಡಮಾಡದೇ ತಕ್ಷಣ ಸುಟ್ಟು ನಾಶಪಡಿಸಬೇಕು. ನಂತರ ಖಾಲಿಯಾದ ಜಾಗದಲ್ಲಿ ಮೇಲೆ ತಿಳಿಸಿದ ಕ್ರಮ (ಅ) ದಲ್ಲಿ ಉಪಚಾರ ಮಾಡಿ, ಸಸಿ ನೆಡಬೇಕು.

ಈ. ಕಾಂಡ ಕೊರೆಯುವ ದುಂಬಿಯಿಂದ ಬಾಧಿತ ಗಿಡದ ಕಾಂಡದಲ್ಲಿ ಕಾಣುವ ರಂದ್ರವನ್ನು ಗುರುತಿಸಿ ನಂತರ ಒಂದು ಸಣ್ಣ ಗಟ್ಟಿ ತಂತಿಯ ಸಹಾಯದಿಂದ ರಂದ್ರದ ಆಳದವರೆಗೆ ಹಾಕಿ, ಅಲುಗಾಡಿಸಬೇಕು. ನಂತರ ಶೇಕಡಾ ೮ರ (೮೦ ಮಿ.ಲೀ. ಪ್ರತಿ ಲೀಟರ್ ನೀರಿಗೆ) ಡೈಕ್ಲೊರ್‌ವಾಸ್ ೭೬ ಡಬ್ಲು.ಎಸ್.ಸಿ.ಯನ್ನು ಇಂಜಕ್ಷನ್ ಸಿರಿಂಜ್ ಅಥವಾ ಹಿಚುಕು ಬಾಟಲಿ ಮೂಲಕ ಹಾಕಿ ಮಣ್ಣಿನಿಂದ ರಂಧ್ರವನ್ನು ಮುಚ್ಚಬೇಕು. ಒಂದು ವಾರದ ನಂತರ ಗಿಡದ ಕೆಳಗೆ ಮತ್ತೆ ಹುಳದ ಲದ್ದಿ ಬಿದ್ದರೆ ಮತ್ತೊಮ್ಮೆ ಮೇಲೆ ಹೇಳಿದ ಕ್ರಮವನ್ನು ಅನುಸರಿಸಬೇಕು.

೬. ಹಣ್ಣಿನ ರಸ ಹೀರುವ ಚಿಟ್ಟೆಗಳನ್ನು ತಡೆಗಟ್ಟಲು ಕೆಳಗಿನ ಕ್ರಮಗಳನ್ನು ಅನುಸರಿಸಬೇಕು.

ಅ. ಮರಿ ಹುಳುಗಳು ಕಳೆಗಳ ಮೇಲೆ ಬೆಳೆಯುವುದರಿಂದ ತೋಟದಲ್ಲಿ ಹಾಗೂ ಸುತ್ತ ಮುತ್ತಲೂ ಅಮೃತಬಳ್ಳಿ ಮತ್ತು ದಾಗಡಿ ಬಳ್ಳಿಗಳು ಬೆಳೆಯದಂತೆ ನೋಡಿಕೊಳ್ಳಬೇಕು.

ಆ. ರಾತ್ರಿ ಹೊಗೆಯನ್ನು ಹಾಕುವುದರ ಮೂಲಕ ಪತಂಗಗಳನ್ನು ದೂರ ವಿಡಬಹುದು.

ಇ. ದೀಪದಬಲೆಗಳಿಂದ ರಾತ್ರಿ ಪತಂಗಗಳನ್ನು ಆಕರ್ಷಿಸಿ, ನಾಶಪಡಿಸಬೇಕು.

ಈ. ಹಣ್ಣುಗಳನ್ನು ಬಟ್ಟೆ, ಪ್ಲಾಸ್ಟಿಕ್ ಅಥವಾ ಕಾಗದದ ಚೀಲಗಳಿಂದ ಮುಚ್ಚುವುದರಿಂದ ಇವುಗಳ ಬಾಧೆಯಿಂದ ಸಂರಕ್ಷಿಸಬೇಕು. ಸಾಧ್ಯವಾದಲ್ಲಿ ಇತ್ತಿತ್ತಲಾಗಿ ಈ ಕೀಟದ ಹಾವಳಿ ಬಂದ ಕಡೆ ಇಡೀ ತೋಟವನ್ನು ನೈಲಾನ್ಬಲೆಯ ಹೊದಿಕೆಯಿಂದ ಮುಚ್ಚುವುದು ಉತ್ತಮವೆಂದು ಕಂಡುಬಂದಿದೆ.

ಉ. ಕೀಟ ಬಾಧೆಯಿಂದ ಗಿಡದ ಕೆಳಗೆ ಬಿದ್ದ ಹಣ್ಣುಗಳನ್ನು ಗುಂಪು ಮಾಡಿ ಸುಡಬೇಕು.

ಊ. ಕೀಟಬಾಧೆ ಕಂಡುಬಂದಲ್ಲಿ ಸ್ಪರ್ಶ ಕೀಟನಾಶಕಗಳನ್ನು ಸಾಯಂಕಾಲ ಸಿಂಪಡಿಸಬೇಕು.

ಎ. ೨ ಮಿ.ಲೀ. ಮೆಲಾಥಿಯಾನ್ ಮತ್ತು ೨೦೦ ಗ್ರಾಂ ಕಬ್ಬಿನ ಮುಳ್ಳಿಯನ್ನು ೨ ಲೀ. ನೀರಿನಲ್ಲಿ ಬೆರೆಸಿ, ಪಾತ್ರೆಗಳಲ್ಲಿ ಹಾಕಿ ಪ್ರತಿ ಎಕರೆಯಲ್ಲಿ ೬-೭ ಸ್ಥಳಗಳಲ್ಲಿ ೨-೩ ಹಣ್ಣುಗಳೊಂದಿಗೆ ಇಟ್ಟು ಆಕರ್ಷಿಸಿ ನಾಶಪಡಿಸಬೇಕು.

. ತೊಗಟೆ ತಿನ್ನುವ ಹುಳು (ಇಂದ್ರಬೇಲ ಟೆಟ್ರಾಓನಿಸ್)

ಹಳೆಯ ಗಿಡದಲ್ಲಿ ನಿರ್ಲಕ್ಷ್ಯಕ್ಕೊಳಗಾದ ಹಾಗೂ ಹೆಚ್ಚು ಸಂಖ್ಯೆಯಲ್ಲಿ ಗಿಡಗಳಿರುವ ತೋಟದಲ್ಲಿ ಈ ಕೀಟದ ಹಾವಳಿ ಹೆಚ್ಚಾಗಿ ಕಂಡುಬರುವುದು. ಈ ಕೀಟದ ಪತಂಗ ಕಂದುಮಿಶ್ರಿತ ಕೆಂಪು ಬಣ್ಣದ್ದಾಗಿರುತ್ತದೆ. ಹೊಟ್ಟೆ ಮತ್ತು ಹಿಂಭಾಗದ ರೆಕ್ಕೆಗಳು ನಸುಕಂದು ಬಣ್ಣದ್ದಾಗಿರುತ್ತದೆ. ಪತಂಗಗಳು ಜೂನ್ ತಿಂಗಳಿನಲ್ಲಿ ಸಡಿಲವಾಗಿ ತೊಗಟೆ ಅಥವಾ ಕಾಂಡದ ಬಿರುಕುಗಳಲ್ಲಿ ೧೫-೨೫ ರ ಗುಂಪುಗಳಿರುವ ಮೊಟ್ಟೆಗಳಿನ್ನಿಡುತ್ತೆವೆ. ಮರಿಗಳು ತೊಗಟೆಯನ್ನು ತಿಂದು, ಹಿಕ್ಕಿ ಮತ್ತು ಮರದ ಪುಡಿ ಬೆರೆತ ಸುರಂಗಗಳನ್ನು ರಚಿಸಿ, ಅವುಗಳನ್ನು ಆಶ್ರಯ ಪಡೆಯುತ್ತವೆ. ಮರಿಗಳು ಬೆಳೆದಂತೆ ಅವು ಕಾಂಡಗಳನ್ನು ಕೊರೆದು ಸುರಂಗಗಳನ್ನು ರಚಿಸಿ ಅದರೊಳಗೆ ಆಶ್ರಯ ಪಡೆಯುತ್ತವೆ ಮತ್ತು ಕೋಶಾವಸ್ಥೆಯನ್ನು ಹೊಂದುತ್ತವೆ. ಇದರಿಂದಾಗಿ ಹಣ್ಣಿನ ಇಳುವರಿ ಕಡಿಮೆಯಾಗುತ್ತವೆ.

ಹತೋಟಿ: ಕಾಂಡ ಹಾಗೂ ಕೊಂಬೆಗಳ ಮೇಲಿನ ಹಿಕ್ಕೆ ಹಾಗೂ ಮರದ ಪುಡಿಯಿಮದ ನಿರ್ಮಿಸಿದ ಸುರಂಗಗಳನ್ನು ಉಜ್ಜಿ ತೆಗೆಯಬೇಕು. ಕಾಂಡಗಳಲ್ಲಿ ಮಾಡಿರುವ ಸುರಂಗಗಳಲ್ಲಿ ಶೇ. ೦.೦೭ ರ ಕ್ಲೋರ್‌ಫೈರಿಸ್ ಅಥವಾ ಶೇ. ೦.೦೫ ಮೊನೋಕ್ರೋಟೋಫಾಸ್ ಔಷಧಿಯನ್ನು ಸ್ಕೀಜ್ ಬಾಟಲಿ ಅಥವಾ ಸಿರಿಂಜ್ ಮೂಲಕ ಹಾಕಬೇಕು. ನಂತರ ಸುರಂಗದ ಬಾಯಿಯನ್ನು ಒದ್ದೆ ಮಣ್ಣಿನಿಂದ ಮುಚ್ಚಬೇಕು.

. ದಾಳಿಂಬೆಯ ಕುಟ್ಟೇಹುಳು (ಜೈಲಿಬೋರಸ್ ಫಾರ್ನಿಕೇಟಸ್)

ಇತ್ತಿಚಿನ ದಿನಗಳಲ್ಲಿ ಈ ಕೀಟ ಹೆಚ್ಚಿನ ಮಹತ್ವವನ್ನು ಪಡೆಯುತ್ತವೆ. ದುಂಬಿಗಳು ಅತಿ ಸಣ್ಣ ಕಡುಕಂದು ಬಣ್ಣದ್ದಾಗಿರುವವು. ಮುಖ್ಯ ಕಾಂಡ ಹಾಗೂ ಕೊಂಬುಗಳನ್ನು ಕೊರೆದು ಅಂಕುಡೊಂಕಾದ ಸುರಂಗಗಳನ್ನು ಮಾಡುತ್ತವೆ. ಈ ಕೊರೆತವು ಬುಡದಿಂದ ಪ್ರಾರಂಭವಾಗಿ ಮೇಲಿನ ಕಾಂಡಗಳವರೆಗೆ ಮುಂದುವರಿಯುವುದು. ಎಲ್ಲ ವಯಸ್ಸಿನ ಗಿಡಗಲಳು ಈ ಕಿಟದ ಬಾಧೆಗೆ ತುತ್ತಾದರೂ, ೨ ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮರಗಳಲ್ಲಿ ಈ ಕೀಟದ ಬಧೆ ಹೆಚ್ಚು. ಬಾಧೆಗೀಡಾದ ಗಿಡಗಳು ಮೊದಲು ಬಾಡುತ್ತವೆ. ನಂತರ ಪೂರ್ಣವಾಗಿ ಒಣಗುತ್ತವೆ.

ಹತೋಟಿ: ಸಮಯಕ್ಕೆ ಸರಿಯಾಗಿ ನೀರು ಹಾಗೂ ಗೊಬ್ಬರವನ್ನು ಕೊಟ್ಟು ಮರಗಳ ಆರೋಗ್ಯವನ್ನು ಉತ್ತಮ ಮಟ್ಟದಲ್ಲಿ ಕಾಪಾಡಿಕೊಳ್ಳಬೇಕು. ಕಾಂಡ ಮತ್ತು ಮುಖ್ಯ ಕೊಂಬೆಗಳಿಗೆ ಶೇ. ೦.೪ರ ಕಾರ್ಬಾರಿಲ್ ದ್ರಾವಣವನ್ನು ಬಳಿಯಬೇಕು. ಹರಳು ಗಿಡಗಳೂ ಈ ಕೀಟದ ಆಸರೆ ಸಸ್ಯವಾಗಿರುವುದರಿಂದ ಅವುಗಳನ್ನು ತೋಟದ ಸುತ್ತಮುತ್ತ ಬೆಳೆಯದಂತೆ ನೋಡಿಕೊಳ್ಳಿ.

. ರಸ ಹೀರುವ ಕೀಟಗಳು

ದಾಳಿಂಬೆ ಬೆಳೆಯಲ್ಲಿ ಮುಖ್ಯವಾಗಿ ಕಂಡುಬರುವ ರಸ ಹೀರುವ ಕೀಟಗಳೆಂದರೆ ಥ್ರಿಪ್ಸ್ (ಥ್ರಿಪ್ಯೂನಿಕೆ), ಬಿಳಿನೊಣ (ಸೈಪೋನಿಮಸ್ ಫೆನಿಮಟಿಸ್), ಬೂಷ್ಟು ತಿಗಣೆ(ಸುಡೋಕಾಕಸ್), ಶಲ್ಕ ಕೀಟಗಳು (ಅಸ್ಟಡಿಯೋಟಸ್ ಪ್ರಭೇಧ), ಸಸ್ಯಹೇನು, ಬೂಷ್ಟು ತಿಗಣೆ ಮತ್ತು ಶಲ್ಕ ಕೀಟಗಳು ದಾಳಿಂಬೆ ಎಲೆ, ಚಿಗುರು ಕೆಲವೊಮ್ಮೆ ಹಣ್ಣುಗಳ ಮೇಲೆ ಕಾಣಿಸಿಕೊಂಡು ರಸವನ್ನು ಹೀರುತ್ತವೆ. ಇದರಿಂದ ಮರಗಳು ನಿಸ್ತೇಜಗೊಳ್ಳುತ್ತವೆ. ಬಿಳಿನೊಣ ಮತ್ತು ಅದರ ಅಪ್ಸರೆಗಳು ಎಲೆಗಳ ಕೆಳಭಾಗದಲ್ಲಿ ಗುಂಪಾಗಿದ್ದು ರಸವನ್ನು ಹೀರಿ ಹಾನಿ ಮಾಡುತ್ತವೆ. ರಸ ಹೀರುವ ಕೀಟಗಳ ಬಾಧೆ ಕಂಡುಬಂದಾಗ ಸಾಮಾನ್ಯವಾದ ಗಿಡದ ಎಲೆಗಳು ಮುದುಡುತ್ತವೆ.

ಹತೋಟಿ: ರಸ ಹೀರುವ ಕೀಟಗಳ ಹತೋಟಿಗೆ ಶೇ. ೦.೦೫ ಮೊನೋಕ್ರೋಟೋಫಾಸ್ ಅಥವಾ ಡೈಮಿಥೋಯಟ್ ಅಥವಾ ಮೆಲಾಥಿಯನ್ನು ಹೊಸ ಚಿಗುರು ಬರುವ ಸಮಯದಲ್ಲಿ ಕೀಟಗಳ ಬಾಧೆ ಕಂಡುಬಂದಾಗ ಸಿಂಪಡಣೆ ಮಾಡಬೇಕು. ಇಮಿಡಾಕ್ಲೋಪ್ರಿಡ್‌ನ್ನು ಲೀಟರಿಗೆ ೦.೨೫ ಮಿ.ಲೀ.ನಂತೆ ಸಿಂಪಡಣೆ ಮಾಡಬಹುದಾಗಿದೆ.

. ಹಿಟ್ಟುತಿಗಣಿ

ಹಿಟ್ಟುತಿಗಣಿ ಗುಂಪುಗುಂಪಾಗಿ ಗಿಡದ ವಿವಿಧ ಭಾಗಗಳಾದ ರೆಂಬೆ, ಎಲೆಗಳು ಹಾಗೂ ಹಣ್ಣಿನ ಮೇಲೆ ಬಿಳಿಯ ಹಿಟ್ಟಿನ ರೂಪದಲ್ಲಿ ಅಂಟಿಕೊಂಡಿರುತ್ತವೆ. ಈ ಕೀಟ ಹೂವಿನ ಮೊಗ್ಗಿನಿಂದ ಹಾಗೂ ಹಣ್ಣಿನಿಂದ ರಸ ಹೀರುತ್ತವೆ. ಇದರ ಬಾಧೆ ಹೆಚ್ಚಾದಾಗ ಎಲೆ, ಕಾಂಡ ಹಾಗೂ ಹಣ್ಣುಗಳ ಮೇಲೆ ಕಪ್ಪು ಶಿಲೀಂಧ್ರದ ಬೆಳವಣಿಗೆ ಆಗುವುದರಿಂದ ದ್ಯುತಿ ವಿಶ್ಲೇಷಣೆ ಕ್ರಿಯೆ ಕುಂಠಿತವಾಗುವುದು. ಈ ಕೀಟದ ನಿರ್ವಹಣೆಗಾಗಿ ಕೀಟದಿಂದ ಬಾಧೆಗೊಂಡ ಎಲೆ ಹಾಗೂ ಕಾಯಿಗಳನ್ನು ಕಿತ್ತು ನಾಶಪಡಿಸಬೇಕು. ಕೀಟದ ಬಾಧೆ ಅಧಿಕವಾದರೆ ೧ ಗ್ರಾಂ ಅಸಿಪೇಟ್ ಅಥವಾ ಡಿ.ಡಿ.ವಿ.ಪಿ. (೨ ಮಿ.ಲೀ. ಪ್ರತಿ ಲೀಟರ್‌ ನಿರಿನಲ್ಲಿ ಮತ್ತು ಫಿಶ್ ರೋಜಿಜ್ ಆಯಿಲ್ ಸೋಪ್ (೫ ಮಿ.ಲೀ. ಪ್ರತಿ ಲೀಟರ್ ನೀರಿಗೆ) ಬೆರೆಸಿ ಸಿಂಪಡಿಸಬೇಕು. ರೋಗ ಬಂದ ಗಿಡಗಳಲ್ಲಿ ಭಕ್ಷಕ ಕೀಟಗಳನ್ನು ಬಿಡುಗಡೆ ಮಾಡಬೇಕು.