ನಾಲ್ಕು ನೂರು ವರ್ಷಗಳ ಹಿಂದೆ ಗೆಲಿಲಿಯೊ ತನ್ನ ದೂರದರ್ಶಕವನ್ನು ಆಕಾಶದೆಡೆಗೆ ತಿರುಗಿಸಿ, ವೀಕ್ಷಿಸಿದಂದಿನಿಂದ ಇಲ್ಲಿಯವರೆಗೆ ದ್ಯುತಿ ಸಂಗ್ರಹಣಾ ಸಾಮರ್ಥ್ಯ, ಪೃಥಕ್ಕರಣ ಶಕ್ತಿ ಮೊದಲಾದವುಗಳನ್ನು ಹೆಚ್ಚಿಸಲಾಗಿದೆ. ದೂರದರ್ಶಕಕ್ಕೆ ಪೂರಕವಾಗಿ ಬಳಸುವ ರೋಹಿತ ಮಾಪಕ, ರೋಹಿತ ಲೇಖಿ, ವ್ಯತಿಕರಣ ಮಾಪಕ (interferometer), ಸಿಸಿಡಿ (change coupled device) ಮತ್ತು ಕ್ಯಾಮೆರಾಗಳಲ್ಲೂ ಬಹಳಷ್ಟು ಸುಧಾರಣೆಗಳಾಗಿವೆ. ಕಂಪ್ಯೂಟರ್‌ಗಳ ನೆರವಿನಿಂದ ಲಭ್ಯ ಮಾಹಿತಿಯನ್ನು ಶೇಖರಿಸುವ, ವಿಶ್ಲೇಷಿಸುವ ಮತ್ತು ಲೆಕ್ಕಿಸುವ ಕ್ರಿಯೆಗಳು ಸುಲಭ ಹಾಗೂ ಕ್ಷಿಪ್ರಗೊಂಡು ಅತಿ ಆಳದ ವ್ರೋಮಾಹಿತಿಯನ್ನು ಪಡೆಯಲು ಸಾಧ್ಯವಾಗಿದೆ. ಇಷ್ಟೆಲ್ಲ ಸಾಧ್ಯವಿದ್ದರೂ ಇನ್ನೂ ಬೃಹತ್ ದೂರದರ್ಶಕಗಳ ನಿರ್ಮಾಣ ಕಾರ್ಯ ಸಾಗುತ್ತಲೇ ಇದೆ. ಇದಕ್ಕೆ ಕಾರಣ ಖಗೋಲ ವಿಜ್ಞಾನಿಗಳು ಕೆಳಗಿನ ಅಂಶಗಳನ್ನು ಕುರಿತು ನಿಖರ ಮಾಹಿತಿ ಪಡೆಯಬೇಕೆಂಬುದೇ ಆಗಿದೆ.

 • ವ್ಯೂಮದಲ್ಲಿ ಇನ್ನಷ್ಟು ಸೌರವ್ಯೆಹಗಳಿವೆಯೆ?ಅವುಗಳ ಗ್ರಹಗಳಲ್ಲಿ ಜೀವಿಗಳಿವೆಯ?ಇದ್ದಲ್ಲಿ ಅವುಗಳ ಸ್ಥಿತಿಗತಿಗಳೇನು?ಇದರ ಬಗ್ಗೆ ಭೂಮಿಯಲ್ಲಿಯೇ ಕುಳಿತು ವಿವರಗಳನ್ನು ಅಧ್ಯಯಿಸುವುದು.
 • ವಿಶ್ವದ ಉಗಮದ ಮೊದಲ ಹಂತದಲ್ಲಿದ್ದ ಅಧಿನವ್ಯ (super nova)ಗಳನ್ನು ಪತ್ತೆ ಹಚ್ಚಿ, ಅಧ್ಯಯಿಸಿ, ನಕ್ಷತ್ರಗಳ ಹುಟ್ಟಿನ ಬಗ್ಗೆ ತಿಳಿಯುವುದು.
 • ವಿಶ್ವದಲ್ಲಿರುವ ಲಕ್ಷಾಂತರ ಗೆಲಕ್ಸಿಗಳು ಮತ್ತು ಅವುಗಳಲ್ಲಿರುವ ಕೋಟ್ಯಂತರ ನಕ್ಷತ್ರಗಳು – ಇವುಗಳಲ್ಲಿ ಸಾಧ್ಯವಾದಷ್ಟನ್ನು ಅಧ್ಯಯಿಸಿ, ನಕ್ಷತ್ರಗಳ ಹುಟ್ಟು, ಬೆಳವಣಿಗೆ, ಸಾವು ಇವುಗಳನ್ನು ಅರ್ಥ್ಯೈಸುವುದು.
 • ವಿಶ್ವದ ಒಟ್ಟು ದ್ರವ್ಯರಾಶಿ ಮತ್ತು ಚೈತನ್ಯಗಳಲ್ಲಿ ಅತಿ ಹೆಚ್ಚು ಪ್ರಮಾಣಗಳನ್ನು (ಸುಮಾರು ಸೇಕಡ 95 ಪಾಲು)ಹೊಂದಿದೆ ಎಂದು ಊಹಿಸಲಾಗಿರುವ ಕಪ್ಪು ದ್ರವ್ಯ (dark matter) ಮತ್ತು ಕಪ್ಪು ಶಕ್ತಿ(dark energy)ಗಳನ್ನು ಪತ್ತೆ ಮಾಡುವುದು.
 • ವಿಶ್ವವನ್ನು ಎಲ್ಲ ದಿಕ್ಕುಗಳಿಂದ ಅತಿ ಹೆಚ್ಚು ದೂರದವರೆಗೂ ವೀಕ್ಷಿಸಿ, ಅದರ ಪರಿಪೂರ್ಣ ನಕ್ಷೆಯನ್ನು ಬಿಡಿಸುವುದು.

ಈ ಉದ್ದೇಶಗಳನ್ನು ಪೂರೈಸಲು ಈಗಾಗಲೇ ಕಾರ್ಯನಿರತವಾಗಿರುವ ಸಹಸ್ರಾರು ದೂರದರ್ಶಕಗಳ ಸಾಲಿಗೆ ಮತ್ತಷ್ಟು ಶಕ್ತಿಶಾಲಿ ಬೃಹತ್/ದೈತ್ಯ ದೂರದರ್ಶಕಗಳನ್ನು ಮುಂಬರುವ ದಶಕದಲ್ಲಿ ಸೇರಿಸಲು ಜಗತ್ತಿನಾದ್ಯಂತ ಪ್ರಯತ್ನಗಳು ನಡೆದಿವೆ. ಅವುಗಳಲ್ಲಿ ಕೆಲವುಗಳ ಕಿರುಪರಿಚಯ ಇಲ್ಲಿದೆ.

(1) ಜೇಮ್ಸ್ ವೆಬ್ ವ್ರೋದೂರದರ್ಶಕ (James Webb Space Telescope)

ಜೇಮ್ಸ್‌ವೆಬ್ ದೂರದರ್ಶಕವು ಒಂದು ಬೃಹತ್ ಅವಕೆಂಪು (infrared) ದೂರದರ್ಶಕ. ಇದರ ಪ್ರಾಥಮಿಕ ದರ್ಪಣ 6.5ಮೀ ವ್ಯಾಸವುಳ್ಳದ್ದಾಗಿರುತ್ತದೆ. ಇದರ ಉಡಾವಣೆ 2014ರಲ್ಲಿ ಎಂದು ಯೋಜಿಸಲಾಗಿದೆ.

ಮುಂದಿನ ದಶಕದ ಒಂದು ಪ್ರಮುಖ ವೀಕ್ಷಣಾಲಯವಾಗಿ ಕಾರ್ಯ ನಿರ್ವಹಿಸಿ, ವಿಶ್ವದಾದ್ಯಂತ ಸಹಸ್ರಾರು ಖಗೋಲ ವಿಜ್ಞಾನಿಗಳಿಗೆ ನೆರವು ನೀಡಲಿದೆ JWST.ವಿಶ್ವದ ಇತಿಹಾಸದಲ್ಲಿನ ಪ್ರತಿ ಹಂತವನ್ನೂ ಅಧ್ಯಯಿಸಲು ಸಹಾಯಕಾರಿಯಾಗಲಿದೆ. ಮಹಾಸ್ಫೋಟದ (bigbang)ನಂತರದ ಮೊದಲ ದೀಪ್ತಿಯಿಂದ ಹಿಡಿದು ಭೂಮಿಯಂತೆ ಜೀವರಾಶಿಗಳನ್ನೊಳಗೊಂಡ ಸೌರವ್ಯೆಹಗಳ ರೂಪಣ ಹಾಗೂ ನಮ್ಮದೇ ಸೌರವ್ಯೆಹದ ವಿಕಾಸ ಮೊದಲಾದವುಗಳ ಅಧ್ಯಯನಕ್ಕೆ ಒತ್ತಾಸೆಯಾಗಲಿದೆ.

ಮೊದಲಿಗೆ ಈ ದೂರದರ್ಶಕದ ಹೆಸರು ನೆಕ್ಸ್ಟ್ ಜನರೇಶನ್ ಸ್ಪೇಸ್ ಟೆಲಿಸ್ಕೋಪ್ಎಂದಿತ್ತು. ನಾಸಾದ ಆಡಳಿತಾಧಿಕಾರಿಯಾಗಿದ್ದ ಜೇಮ್ಸ್ ವೆಬ್‌ರವರ ಗೌರವಾರ್ಥ ಇದಕ್ಕೆ 2002ಸೆಪ್ಟೆಂಬರ್‌ನಲ್ಲಿ ‘ಜೇಮ್ಸ್ ವೆಬ್ ವ್ರೋದೂರದರ್ಶಕ’ ವೆಂದು ಮರು ನಾಮಕರಣ ಮಾಡಲಾಯಿತು.

ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿ ಮತ್ತು ಕೆನೇಡಿಯನ್ ಸ್ಪೇಸ್ ಏಜೆನ್ಸಿಗಳ ಸಹಯೋಗದಿಂದ JWSTನಿರ್ಮಾಣವಾಗುತ್ತಿದೆ.  ನಾಸಾದ ಗೊಡಾರ್ಡ್ ಕೇಂದ್ರವು ನಿರ್ಮಾಣಕಾರ್ಯದ ಉಸ್ತುವಾರಿಯಲ್ಲಿದೆ. ಸ್ಪೇಸ್ ಟೆಲಿಸ್ಕೋಪ್ ಸೈನ್ಸ್ ಇನ್ಸ್‌ಟಿಟ್ಯೂಟ್ ಸಂಸ್ಥೆಯು ಉಡಾವಣೆಯ ನಂತರ ದೂರದರ್ಶಕದ ಕಾರ್ಯನಿರ್ವಹಣೆಯ ಹೊಣೆ ಹೊರಲಿದೆ.

JWST  ಯಲ್ಲಿ ಹಲವಾರು ನವೀನ ತಾಂತ್ರಗಳಿವೆ. ಪ್ರಾಥಮಿಕ ದರ್ಪಣವು ಹಲವು ಖಂಡಗಳಿಂದಾಗಿದ್ದು (segment)ಉಡಾವಣೆಯ ನಂತರ ನಿಗದಿತ ಆಕೃತಿಗೆ ಜೋಡಣೆಯಾಗುತ್ತದೆ;ಅತಿ ದುರ್ಬಲ ಸಂಕೇತಗಳನ್ನು ಗುರುತಿಸಿ ದಾಖಲಿಸಬಲ್ಲ ಅತಿ ಹಗುರವಾದ ಬೆರಿಲಿಯಂ ದ್ಯುತಿ ಪತ್ತೆಕಾರಕಗಳು, ರೋಹಿತ ಲೇಖಿ (spectrograph)ಯ ಕಾರ್ಯಕ್ರಮಕ್ಕೆ ನಿಗದಿತವಾದ, ಆಕಾಶ ಕಾಯಗಳ ಆಯ್ಕೆಗೆ ಅನುಕೂಲ ಮಾಡಿಕೊಡುವ ಸೂಕ್ಷ್ಮ ಮುಚ್ಚಳಗಳು;ಮಧ್ಯಮ ಅವಕೆಂಪು ಪತ್ತೆಕಾರಕಗಳನ್ನು ತಂಪುಗೊಳಿಸಲು ಶೈತ್ಯಕಾರಕ –ಮುಂತಾದವು ಸಿದ್ಧವಿರುತ್ತವೆ. ಜನವರಿ 2007ರಲ್ಲಿ JWSTಯೋಜನೆಗೆ ಅಳವಡಿಸಿರುವ ಎಲ್ಲ ತಾಂತ್ರಗಳ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದ್ದಿತು. ಜುಲೈ 2008ರಲ್ಲಿ ನಾಸಾವು JWSTಯೋಜನೆಯನ್ನು ಕಾರ್ಯಗತ ಮಾಡಲು ನಿರ್ಧರಿಸಿತು. ಈಗ ಯೋಜನೆಯ ಅನುಷ್ಠಾನವು ವ್ಯವಸ್ಥಿತವಾಗಿ, ಕ್ರಮಬದ್ಧವಾಗಿ ಜರುಗುತ್ತಿದೆ.

JWSTಯಲ್ಲಿ ನಾಲ್ಕು ವೈಜ್ಞಾನಿಕ ಉಪಕರಣಗಳನ್ನು ಹೊಂದಿಸಲಾಗುತ್ತದೆ. ಒಂದು ಸನಿಹ ಅವಕೆಂಪು ಕ್ಯಾಮೆರಾ, ಒಂದು ರೋಹಿತ ಲೇಖಿ, ಒಂದು ಮಧ್ಯ ಅವಕೆಂಪು ಉಪಕರಣ ಮತ್ತು ಒಂದು Tunable filter imager.ವಿದ್ಯುತ್ಕಾಂತೀಯ ರೋಹಿತದ ಅವಕೆಂಪು ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸಲು ಇದರ ಉಪಕರಣಗಳು ವಿನ್ಯಾಸಗೊಂಡರೂ ದ್ಯುತಿ ವ್ಯಾಪ್ತಿಯಲ್ಲಿಯೂ ಕೆಲಸ ಮಾಡಬಲ್ಲವು. 0.60ರಿಂದ 27ಮೈಕ್ರಾನ್ ತರಂಗ ದೂರದ ಬೆಳಕನ್ನು ಗ್ರಹಿಸಬಲ್ಲವಾಗಿರುತ್ತವೆ.

JWST ಯು ನಾಲ್ಕು ಪ್ರಮುಖ ವೈಜ್ಞಾನಿಕ ವಿಷಯಗಳನ್ನು ಅಧ್ಯಯನಕ್ಕಾಗಿ ಆಯ್ಕೆ ಮಾಡಿಕೊಂಡಿದೆ. ಕತ್ತಲ ಯುಗದ ಅಂತ್ಯ, ಪ್ರಥಮ ಬೆಳಕು ಹಾಗೂ ಗೆಲಕ್ಸಿಗಳ ಕೂಟ, ನಕ್ಷತ್ರಗಳ ಹಾಗೂ ಆದಿ ಗ್ರಹ ವ್ಯೆಹಗಳ ಆವಿರ್ಭಾವ ಮತ್ತು ಪುನರಯಾನೀಕರಣ ವ್ಯವಸ್ಥೆ ಹಾಗೂ ಜೀವಿ ಉತ್ಪತ್ತಿ.

(2) ಲಾರ್ಜ್ ಸಿನಾಪ್ಟಿಕ್ ಸರ್ವೆ ಟೆಲಿಸ್ಕೋಪ್ (Large Synoptic Survey Telescope)

LSSTಎಂದೇ ಹೆಸರಾಗಿರುವ ಈ ಬೃಹತ್ ದೂರದರ್ಶಕದ ನಿರ್ಮಾಣಕಾರ್ಯ2010ರಲ್ಲಿ ಪ್ರಾರಂಭವಾಗಿ ದೂರದರ್ಶಕವು 2015ರ ಅಂತ್ಯದ ವೇಳೆಗೆ ಕಾರ್ಯನಿರತವಾಗುವ ಯೋಜನೆ ಹಾಕಲಾಗಿದೆ. ಈ ದೂರದರ್ಶಕವನ್ನು ಚಿಲಿ ರಾಷ್ಟ್ರದ ಉತ್ತರ ಭಾಗದಲ್ಲಿರುವ ಕೊಕ್ವಿಂಬೋ ಪ್ರದೇಶದ ಸೆರ್ರೊ ಪಾಚಾನ್ ಶಿಖರದ ಮೇಲೆ ಎಲ್ ಪೆನಾನ್ ಎಂಬಲ್ಲಿ ಸ್ಥಾಪಿಸಲಾಗುವುದು. ಈಗಾಗಲೇ ಈ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜೆಮಿನಿ ದಕ್ಷಿಣ ಮತ್ತು ದಕ್ಷಿಣ ಖಭೌತ ದೂರದರ್ಶಕಗಳ ಸಮೀಪದಲ್ಲಿಯೇ LSSTಯ ನೆಲೆಯಿದೆ.

ಬೃಹತ್ ಅಥವಾ ದೈತ್ಯ ದೂರದರ್ಶಕಗಳ (8ಮೀ ಅಥವಾ ಹೆಚ್ಚು ವ್ಯಾಸದ ಪ್ರಾಥಮಿಕ ದರ್ಪಣ ಹೊಂದಿರುವುವು)ಗುಂಪಿನಲ್ಲಿ LSST ಒಂದು ವಿಶಿಷ್ಟ ವಿನ್ಯಾಸ ಹೊಂದಿರುತ್ತದೆ. ಇದರ ದ್ಯುತಿಗ್ರಾಹಕ ಕ್ಷೇತ್ರ 3.5ಡಿಗ್ರಿ ವ್ಯಾಸವಿದ್ದು 9.6ಚದರ ಡಿಗ್ರಿಗಳಷ್ಟು ವ್ಯಾಪ್ತಿ ಹೊಂದಿರುತ್ತದೆ. (ಸೂರ್ಯ ಹಾಗೂ ಚಂದ್ರ ಬಿಂಬಗಳು 0.5ಡಿಗ್ರಿ ವ್ಯಾಸ ಮತ್ತು 0.2ಚದರ ಡಿಗ್ರಿ ವ್ಯಾಪ್ತಿ ಹೊಂದಿವೆ).ಇಷ್ಟು ವಿಸ್ತಾರವಾದ ಕ್ಷೇತ್ರ ಪಡೆಯಲು ದೂರದರ್ಶಕದಲ್ಲಿ ಮೂರು ದರ್ಪಣಗಳನ್ನು ಹೊಂದಿಸಲಾಗುವುದು. ಪ್ರಾಥಮಿಕ ದರ್ಪಣವು 8.4ಮೀ ವ್ಯಾಸ ಮತ್ತು ದ್ವಿತೀಯಕ ದರ್ಪಣ 3.4ಮೀ ವ್ಯಾಸ ಹೊಂದಿರುತ್ತದೆ. ತೃತೀಯಕ ದರ್ಪಣವು 5ಮೀ ವ್ಯಾಸದ್ದಾಗಿದ್ದು ಇದನ್ನು ಪ್ರಾಥಮಿಕ ದರ್ಪಣದ ಕೇಂದ್ರದಲ್ಲಿನ ರಂಧ್ರದಲ್ಲಿ ಕೂರಿಸಲಾಗುವುದು. ಇದರಿಂದ ಪ್ರಾಥಮಿಕ ದರ್ಪಣದ ದ್ಯುತಿಗ್ರಾಹಕ ಕ್ಷೇತ್ರ ಕಡಿಮೆಯಾಗಿ 35ಚ.ಮೀ. ನಷ್ಟಾಗುತ್ತದೆ. ನವೆಂಬರ್ 2007ರಲ್ಲಿ ಪ್ರಾರಂಭವಾದ ದರ್ಪಣದ ಗಾಜುಗಳ ಎರಕದ ಕಾರ್ಯ ಸೆಪ್ಟೆಂಬರ್ 2008ಕ್ಕೆ ಪೂರ್ಣಗೊಂಡಿದೆ. 3.2ಗೀಗಾ ಪಿಕ್ಸೆಲ್ ಪ್ರೈಮ್ ಫೋಕಸ್ ಹೊಂದಿರುವ ಡಿಜಿಟಲ್ ಕ್ಯಾಮೆರಾ ಒಂದನ್ನು ದೂರದರ್ಶಕದೊಡನೆ ಬಳಸಲಾಗುತ್ತದೆ. ಈ ಕ್ಯಾಮೆರಾ ವರ್ಷಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿರುತ್ತದೆ.

ಈ ಯೋಜನೆಗೆ 2008ರಲ್ಲಿ ಉದಾರಿಗಳೂ ಸಾಫ್ಟವೇರ್ ಕೋಟ್ಯಾಧೀಶರೂ ಆದ ಚಾರ್ಲ್ಸ್ ಸಿಮೋನ್ಯಿ ಅವರು 20ದಶಲಕ್ಷ ಡಾಲರ್‌ಗಳನ್ನೂ ಬಿಲ್‌ಗೇಟ್ಸ್‌ರವರು 10ದಶಲಕ್ಷ ಡಾಲರುಗಳನ್ನೂ ದೇಣಿಗೆಯಾಗಿ ನೀಡಿದ್ದಾರೆ. ಈ ಯೋಜನೆ ಪೂರ್ಣಗೊಂಡು ದೂರದರ್ಶಕ ಕಾರ್ಯನಿರತವಾಗುವ ವೇಳೆಗೆ ವೆಚ್ಚ 400ದಶ ಲಕ್ಷ ಡಾಲರುಗಳಾಗುತ್ತದೆಂದು ಲೆಕ್ಕ ಹಾಕಲಾಗಿದೆ.

LSSTಯ ಪ್ರಮುಖ ಉದ್ದೇಶಗಳು ಈ ರೀತಿ ಇವೆ:

 • ವ್ಯೂಮಾಂತರಾಳದಲ್ಲಿ ಇದೆ ಎನ್ನಲಾಗಿರುವ ಕಪ್ಪು ದ್ರವ್ಯ (dark matter),ಕಪ್ಪು ಚೈತನ್ಯ (dark energy)ಇವುಗಳ ಬಗ್ಗೆ ಅಧ್ಯಯನ
 • ಸೌರವ್ಯೆಹದಲ್ಲಿನ ಕ್ಯೂಪರ್ ಪಟ್ಟಿ ಮತ್ತು ಭೂ ಸನಿಹ ಆಕಾಶಕಾಯಗಳ ನಕ್ಷೆ ತಯಾರಿಕೆ
 • ನೋವ, ಸೂಪರ್ ನೋವಗಳ ಅಧ್ಯಯನ
 • ಕ್ಷೀರ ಪಥ (milky way)ದ ನಕ್ಷೆ ತಯಾರಿಸುವುದು.

ಇದರಿಂದ ಲಭ್ಯವಾಗುವ ಅಪಾರ ಮಾಹಿತಿ ರಾಶಿಯು ಅನೇಕ ಅವಿಷ್ಕಾರಗಳಿಗೆ ಆಧಾರವಾಗುವುದೆಂದು ಎಣಿಸಲಾಗಿದೆ.

3) ಥರ್ಟಿ ಮೀಟರ್ ಟೆಲಿಸ್ಕೋಪ್ (Thirty Meter Telescope)

ಇದೊಂದು ಭೂಸ್ಥಿರ ಬೃಹತ್ ದೂರದರ್ಶಕ, ಇದರ ವಸ್ತುಕವು (object glass) 30ಮೀ.(98ಅಡಿ)ವ್ಯಾಸದ ಬಹುದರ್ಪಣ, ನಿಮ್ನ ದರ್ಪಣವಾಗಿರುತ್ತದೆ. ಈ ವಸ್ತುಕದಲ್ಲಿ ಷಡ್ಭುಜಾಕೃತಿಯ 492ಚಿಕ್ಕ ದರ್ಪಣಗಳನ್ನು ಹೊಂದಿಸಲಾಗುತ್ತದೆ. ಅವು ಪ್ರತಿಯೊಂದೂ 1.4ಮೀ. ಅಳತೆಯಾಗಿದ್ದು, ಪ್ರತಿಯೊಂದನ್ನು ಅದರ ಸ್ಥಾನ, ದಿಕ್ಕುಗಳನ್ನು ಹೊಂದಿಸುವಂತೆ ನಿಯಂತ್ರಿಸಬಹುದಾಗಿರುತ್ತದೆ.

3ಮೀ. ವ್ಯಾಸದ ದ್ವಿತೀಯಕ ದರ್ಪಣವು 20ಚಾಪ ನಿಮಿಷದಷ್ಟು ವ್ಯಾಸದ ಅಡಚಣೆ ರಹಿತ ದ್ಯಶ್ಯ ಕ್ಷೇತ್ರವನ್ನು ಒದಗಿಸುತ್ತದೆ. ಮತ್ತೊಂದು ತೃತೀಯಕ ದರ್ಪಣವು ಬಿಂಬಗಳ ಬೆಳಕಿನ ಕಿರಣಗಳನ್ನು ವೈಜ್ಞಾನಿಕ ಉಪಕರಣಗಳಿಗೆ ಹಾಯಿಸುತ್ತದೆ. ಎಲ್ಲ ದರ್ಪಣಗಳೂ ತ್ವರಿತ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ.

ಈ ದೂರದರ್ಶಕವನ್ನು ಉನ್ನತಿ-ದಿಗಂಶ ಜೋಡಣೆಗೆ ಒಳಪಡಿಸಲಾಗುತ್ತದೆ. ಉತ್ತರ-ದಕ್ಷಿಣ ಚಲಿಸಬಲ್ಲ ಮತ್ತು ಪೂರ್ವ-ಪಶ್ಚಿಮ ತಿರುಗಬಲ್ಲ ಜೋಡಣೆ ಉನ್ನತಿ-ದಿಗಂಶ alt-azimuthಜೋಡಣೆ ಎನ್ನುತ್ತಾರೆ. ಈ ಜೋಡಣೆಯಿಂದಾಗಿ ವ್ರೋಯಾವುದೇ ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಕೇವಲ 5ನಿಮಿಷಗಳಲ್ಲಿ ದೂರದರ್ಶಕವನ್ನು 2ಚಾಪ ಸೆಕೆಂಡ್ (are second) ನಿಖರತೆಯಲ್ಲಿ ಹೊಂದಿಸಬಹುದಾಗಿದೆ. ಆಕಾಶಕಾಯವನ್ನು ದೂರದರ್ಶಕದಲ್ಲಿ ಗುರ್ತಿಸಿದ ನಂತರ ದೂರದರ್ಶಕವು ಕಾಯದ ಚಲನ ಪಥದಲ್ಲಿಯೇ ಸುತ್ತುವ ವ್ಯವಸ್ಥೆ ಇರುತ್ತದೆ.

ಈ ದೂರದರ್ಶಕ ಹಾಗೂ ಆನುಷಂಗಿಕ ಉಪಕರಣಗಳ ಒಟ್ಟು ತೂಕ 2000 ಮೆಟ್ರಿಕ್ ಟನ್‌ಗಳಷ್ಟಾಗಲಿದೆ.

ಇದರಲ್ಲಿ ಬಹುಯುಗ್ಮೀಯ ದ್ಯುತಿ ಸಂಯೋಜಕ (multi-conjugate adaptive optics) ವ್ಯವಸ್ಥೆ ಇದೆ. ಇದರಿಂದಾಗಿ ವಾತಾವರಣದಲ್ಲುಂಟಾಗಬಹುದಾದ ಕ್ಷೋಭೆಗಳಿಂದ ವೀಕ್ಷಣೆಗೆ ಆಗುವ ಅಡಚಣೆಗಳನ್ನು ನಿವಾರಿಸುವ ದರ್ಪಣ ಜೋಡಣೆಗಳಿವೆ. ಈ ದೂರದರ್ಶಕ ಕಾರ್ಯನಿರತವಾಗುವ ವೇಳೆಗೆ (ಸುಮಾರು 2018)ಹಲವು ಅತ್ಯಾಧುನಿಕ ವೈಜ್ಞಾನಿಕ ಉಪಕರಣಗಳು ಇದರೊಂದಿಗೆ ಕೈ ಜೋಡಿಸಲಿವೆ. ಅವುಗಳಲ್ಲಿ ಪ್ರಮುಖವಾದವು ವಿಶಾಲ ಕ್ಷೇತ್ರ ದ್ಯುತಿ ರೋಹಿತ ಮಾಪಕ (wide field optic spectrometer),ಅವಕೆಂಪು ಬಿಂಬಕ ರೋಹಿತ ಮಾಪಕ (infrared imaging spectrometer)ಮತ್ತು ಅವಕೆಂಪು ಬಹುವಸ್ತು ರೋಹಿತ ಮಾಪಕ (infrared multi-object spectrometer). ಈ ದೂರದರ್ಶಕವು ಕಾರ್ಯನಿರತವಾದಾಗ ಕೆಳಗಿನ ಉದ್ದೇಶಗಳಿಗಾಗಿ ಬಳಸಲಾಗುವುದು.

 • ಅಗೋಚರ ದ್ರವ್ಯ ಮತ್ತು ಚೈತನ್ಯಗಳ ಕುರಿತು ಆಳವಾದ ಅಧ್ಯಯನ.
 • ಕಳೆದ 13 ಬಿಲಿಯ ವರ್ಷಗಳಲ್ಲಿ ಗೆಲಕ್ಸಿಗಳ ಹುಟ್ಟು ಮತ್ತು ಗುಂಪುಗೂಡುವಿಕೆ ಬಗ್ಗೆ ಮಾಹಿತಿ.
 • ಬೃಹತ್ ಕಪ್ಪುಕುಳಿಗಳಿಗೂ ಗೆಲಕ್ಸಿಗಳಿಗೂ ಇರುವ ಸಂಬಂಧದ ಅಧ್ಯಯನ.
 • 10ದಶಲಕ್ಷ ಪಾರ್‌ಸೆಕ್ ವರೆಗಿನ ದೂರದ ಗೆಲಕ್ಸಿಗಳಲ್ಲಿನ ನಕ್ಷತ್ರಗಳ ಪ್ರತ್ಯೇಕ ಅಧ್ಯಯನ.
 • ನಕ್ಷತ್ರಗಳ ಹುಟ್ಟು, ಗ್ರಹಗಳ ಆವಿರ್ಭಾವ ಇವನ್ನು ಒಳಗೊಂಡ ಭೌತಶಾಸ್ತ್ರ ನಿಯಮಗಳ ಪರಿಶೀಲನೆ.

4. ದೈತ್ಯ ಮೆಗೆಲಾನ್ ದೂರದರ್ಶಕ (Giant Megallan Telescope)

ಇದು ಭೂಸ್ಥಿರ ಬೃಹತ್ ದೂರದರ್ಶಕ. 2018ರ ವೇಳೆಗೆ ಕಾರ್ಯನಿರತವಾಗುವ ಸಂಭವವಿದೆ. ಇದರಲ್ಲಿ 8.4ಮೀ ವ್ಯಾಸದ ಏಳು ಪ್ರಾಥಮಿಕ ದರ್ಪಣಗಳನ್ನು ಹೊಂದಿಸಲಾಗುತ್ತದೆ. ಹಾಗಾಗಿ ಇದರ ಒಟ್ಟಾರೆ ದ್ಯುತಿ ಸಂಗ್ರಹಣ ಶಕ್ತಿ 21.4ಮೀ ವ್ಯಾಸದ ದರ್ಪಣ ದೂರದರ್ಶಕದರಷ್ಟಾಗಲಿದೆ. ಸದ್ಯದಲ್ಲಿ ಅಸ್ತಿತ್ವದಲ್ಲಿರುವ ದೂರದರ್ಶಕಗಳಿಗಿಂತ ನಾಲ್ಕುಪಟ್ಟು ಹೆಚ್ಚು ದ್ಯುತಿ ಸಂಗ್ರಹಣ ಸಾಮರ್ಥ್ಯವಿರುತ್ತದೆ.

ಇದನ್ನು ಚಿಲಿ ರಾಷ್ಟ್ರದ ಲಾ ಸೆರಿನಾದ ಈಶಾನ್ಯಕ್ಕೆ ಸುಮಾರು 115 ಕಿ.ಮೀ. ದೂರದಲ್ಲಿ ಅಟಕಾಮ ಮರುಭೂಮಿ ಪ್ರದೇಶದಲ್ಲಿ ಸ್ಥಾಪಿಸಲಾಗುವುದು. ಜನವಸತಿ ಕೇಂದ್ರಗಳ ವಿರಳತೆ, ವಾತಾವರಣ ಮಾಲಿನ್ಯ ಮತ್ತು ದ್ಯುತಿ ಮಾಲಿನ್ಯಗಳು ಅತ್ಯಲ್ಪವಾಗಿರುವುದು ಹಾಗೂ ವರ್ಷದ ಬಹಳಷ್ಟು ದಿನಗಳು ಶುಭ್ರ ಆಕಾಶ ಲಭ್ಯತೆ -ಇವುಗಳಿಂದಾಗಿ ಈ ಪ್ರದೇಶದ ಆಯ್ಕೆ.

ಇದರ ಏಳು ದರ್ಪಣಗಳಲ್ಲಿ ಒಂದನ್ನು ಕೇಂದ್ರವಾಗಿಸಿ, ಉಳಿದ ಆರನ್ನು ಹೊರ ಸುತ್ತಿನಲ್ಲಿ ಜೋಡಿಸಲಾಗುವುದು. ಈ ಸಮುಚ್ಚಯ ಒಂದೇ ಬೃಹತ್ ದರ್ಪಣದಂತೆ ಕಾರ್ಯನಿರ್ವಹಿಸುವುದು. ಇಂತಹ ಜೋಡಣೆ ಬೇರೆಲ್ಲೂ ಇಲ್ಲ. ಇದು ಅನನ್ಯ.

ದರ್ಪಣಗಳ ನಿರ್ಮಾಣ ಕಾರ್ಯವು ಅರಿಜೋನ ವಿಶ್ವವಿದ್ಯಾಲಯದ ಫುಟ್‌ಬಾಲ್ ಮೈದಾನದ ತಳಗಡೆ ಇರುವ ಸ್ಟೂವರ್ಡ್ ವೀಕ್ಷಣಾಲಯದಲ್ಲಿ ಪ್ರಾರಂಭವಾಗಿದೆ. ಅಲ್ಲಿರುವ ತಿರುಗು ಕುಲುಮೆ (rotating furnace)ಯಲ್ಲಿ ನವೆಂಬರ್ 2005ರಲ್ಲಿ ಮೊದಲ ದರ್ಪಣದ ಎರಕದ ಕೆಲಸ ನಡೆದು, ನಿಗದಿತ ಆಕೃತಿಗೆ ಬರಿಸುವ ಹಾಗೂ ಹೊಳಪು ಕೊಡುವ ಕಾರ್ಯ 2010ರ ವೇಳೆಗೆ ಪೂರೈಸಲಿದೆ. ಕಾರ್ನೆಗಿ ಸಂಸ್ಥೆ, ಚಿಕಾಗೊ ವಿಶ್ವವಿದ್ಯಾಲಯ ಮತ್ತು ಇತರ ಹತ್ತು ಸಂಸ್ಥೆಗಳು ಈ ದೂರದರ್ಶಕದ ನಿರ್ಮಾಣದಲ್ಲಿ ಪಾಲ್ಗೊಳ್ಳುತ್ತಿದೆ.

5. ಯೂರೊಪಿಯನ್ ಎಕ್ಸ್‌ಟ್ರೀಮ್‌ಲಿ ಲಾರ್ಜ್ ಟೆಲಿಸ್ಕೋಪ್ (E-ELT) (ಯೂರೊಪಿನ ಅತಿ ವಿಶಾಲ ದೂರದರ್ಶಕೊ)

ಹೆಸರೇ ಹೇಳುವಂತೆ ಇದೊಂದು ಅತಿ ದೊಡ್ಡ ದೂರದರ್ಶಕ. ಸುಮಾರು 2018ರ ವೇಳೆಗೆ ಕಾರ್ಯನಿರತವಾಗುವ ನಿರೀಕ್ಷೆಯಿದೆ, ಯೊರೋಪಿನ ಸದರ್ನ್ ಅಬ್ಸರ್ವೇಟರಿಯವರು ನಿರ್ಮಿಸ ಹೊರಟಿರುವ ಈ ದೂರದರ್ಶಕದ ದರ್ಪಣದ ವ್ಯಾಸವು 42 ಮೀ. ಮತ್ತು ದ್ಯುತಿ ಗ್ರಹಣ ಕ್ಷೇತ್ರವು 1300ಚ.ಮೀ. ಇರುವುದು.

ಈ ದೂರದರ್ಶಕವನ್ನು ಚಿಲಿ ರಾಷ್ಟ್ರದ ಸೆರೊ ಆರ್ಮಸೋನೀಸ್ ಎಂಬಲ್ಲಿ ಸ್ಥಾಪಿಸಲಾಗುವುದು. 1.5ಬಿಲಿಯನ್ ಯುರೋ (ಸುಮಾರು 75 ಬಿಲಿಯನ್ ರೂಪಾಯಿ)ವೆಚ್ಚದಲ್ಲಿ ನಿರ್ಮಿಸ ಬೇಕೆಂದಿದ್ದ 100ಮೀ.ವ್ಯಾಸದ ಅತಿ ದೈತ್ಯ ದೂರದರ್ಶಕದ ವೆಚ್ಚ ಮತ್ತು ನಿರ್ಮಾಣ ಜಟಿಲತೆಯನ್ನು ಗಮನಿಸಿ, ಅದನ್ನು ಕೈಬಿಟ್ಟು ESOರವರು E-ELTಸ್ಥಾಪನೆಗೆ ಉದ್ಯುಕ್ತರಾಗಿದ್ದಾರೆ. ಇದನ್ನು ಬಿಟ್ಚರೆ ಸದ್ಯದಲ್ಲಿ ಅಸ್ತಿತ್ವದಲ್ಲಿರುವ ಬೃಹತ್ ದೂರದರ್ಶಕಗಳಾದ ಗ್ರಾನ್ ಟೆಲಿಸ್ಕೋಪಿಯ ಕೆನಾರಿಸ್ ಮತ್ತು ದಕ್ಷಿಣ ಆಫ್ರಿಕಾ ದೂರದರ್ಶಕಗಳು (ನೋಡಿ :ಬಾಲವಿಜ್ಞಾನ ಮಾರ್ಚ್ 2010)ಅತಿ ದೊಡ್ಡವು. ಇವುಗಳಲ್ಲಿರುವಂತೆಯೇ E-ELTಯಲ್ಲಿಯೂ ಷಡ್ಭುಜಾಕೃತಿಯ ಅನೇಕ ದರ್ಪಣಗಳನ್ನು ಜೋಡಿಸಲಾಗುತ್ತದೆ. ಅಲ್ಲದೆ ವಾತಾವರಣದ ವಿಕೃತಿಗಳಿಂದಾಗಿ ಒಳಬರುವ ಬೆಳಕಿನ ಮೇಲೆ ಉಂಟಾಗುವ ಪ್ರಭಾವವನ್ನು ನಿವಾರಿಸಲು ಆಧುನಿಕ ದ್ಯುತಿ ಸಂಯೋಜಕ (adaptive optics)ಗಳನ್ನು ಬಳಸಲಾಗುವುದು.

ಈ ದೂರದರ್ಶಕದ ಬಳಕೆಯ ಗುರಿ ವಿಶ್ವವನ್ನು ಕೂಲಂಕಷವಾಗಿ ಅಧ್ಯಯಿಸುವುದೇ ಆಗಿದೆ. ಇದರ ಸಾಮರ್ಥ್ಯ ಹಬಲ್ ಬಾಹ್ಯಾಕಾಶ ದೂರದರ್ಶಕದ ಸಾಮರ್ಥ್ಯವನ್ನು ಮೀರಿದ್ದಾಗಿದೆ.  ಇದರ ನೆರವಿನಿಂದ ಬಾಹ್ಯಸೌರ ಗ್ರಹಗಳ (Exo-planets)ವಾತಾವರಣವನ್ನು ಅಭ್ಯಸಿಸಬಹುದಾಗಿದೆ.

ಇದರ ಸಾಮರ್ಥ್ಯವನ್ನು ವೃದ್ದಿಸಲು ಎಂಟು ವಿವಿಧ ಅತ್ಯಾಧುನಿಕ ಉಪಕರಣಗಳನ್ನೂ ಎರಡು ವಿಶೇಷ ರೀತಿಯ ದ್ಯುತಿ ಸಂಯೋಜಕಗಳನ್ನೂ ಅಳವಡಿಸಬೇಕೆಂಬ ಉದ್ದೇಶದಿಂದ ಆ ಉಪಕರಣಗಳ ಅಧ್ಯಯನ ನಡೆಸಲಾಗುತ್ತಿದೆ.

6. ಯುರೋಪಿಯನ್ ಸದರ್ನ್ ಅಬ್ಸರ್ವೇಟರಿ (European Southern Observatory)

ಭವಿಷ್ಯದ ಖಗೋಲ ವಿಜ್ಞಾನದಲ್ಲಿ ಒಂದು ಘಟ್ಟ – OWL

OWLಎಂದರೆ ಮತ್ತೇನೂ ಅಲ್ಲ – Over Whelmingly Large – ಅಂದರೆ ‘ಊಹಾತೀತದಷ್ಟು ಬೃಹತ್ತಾದುದು’ಎಂದು. ಇದು ESOನಿರ್ಮಿಸ ಹೊರಟಿರುವ 100ಮೀ. ವ್ಯಾಸದ ದೂರದರ್ಶಕಕ್ಕೆ ಬಳಸಲಾಗುತ್ತಿರುವ ಸಂಕ್ಷಿಪ್ತನಾಮ (OW”L). ಈಗಾಗಲೇ 8ಮೀ. ವ್ಯಾಸದ ದೊಡ್ಡ ದೂರದರ್ಶಕವನ್ನು ನಿರ್ಮಿಸಿ, ನಿಯಂತ್ರಿತ ದ್ಯುತಿ ವ್ಯವಸ್ಥೆಗಳ ವಿನ್ಯಾಸದಲ್ಲಿ ಪರಿಣತಿ ಪಡೆದಿರುವ ESOಸಂಸ್ಥೆಯು OWLದೂರದರ್ಶಕದ ಯೋಜನೆಯನ್ನು ಕೈಗೆತ್ತಿಕೊಂಡಿದೆ. ದ್ಯುತಿ ಮತ್ತು ಸನಿಹ ಅವಕೆಂಪು ಕ್ಷೇತ್ರ (near infrared)ಗಳಲ್ಲಿ ಕೆಲಸ ಮಾಡಲಿದೆ. OWLದೂರದರ್ಶಕ. (OWLಎಂದರೆ ಗೂಬೆ;ರಾತ್ರಿ ವೇಳೆ; ಅತಿ ಸೂಕ್ಷ್ಮ ದೃಷ್ಟಿಯನ್ನು ಹೊಂದಿರುತ್ತದೆ. ಇದೂ ಹಾಗೆಯೇ)

ದರ್ಪಣ 100ಮೀ. ವ್ಯಾಸದ್ದಾಗಿರುವುದರಿಂದ ದೂರದರ್ಶಕವು ಮಿಲಿ ಆರ್ಕ್ ಸೆಕೆಂಡ್‌ನಷ್ಟು ಪೃಥಕ್ಕರಣ ಶಕ್ತಿ ಹೊಂದಿರುತ್ತದೆ. 8-10ಮೀ. ವ್ಯಾಸದ ದರ್ಪಣಗಳನ್ನು ಬಳಸುತ್ತಿರುವ ವೀಕ್ಷಣಾಲಯಗಳೆಲ್ಲ ಈಗ ಮುಂದಿನ ಪೀಳಿಗೆಯ ದೈತ್ಯ ದೂರದರ್ಶಕಗಳ ನಿರ್ಮಾಣದತ್ತ ಹೊರಳುತ್ತಿವೆ. ಆಳವಾದ ವೈಜ್ಞಾನಿಕ ಅಧ್ಯಯನದಿಂದ ಲಭಿಸಿರುವ ಒಂದು ವಿಷಯವೆಂದರೆ, ವಿಶ್ವದ ಬಗ್ಗೆ ನಿಖರವಾಗಿ ತಿಳಿಯಲು 25 ಮೀ ಅಥವಾ ಹೆಚ್ಚು ವ್ಯಾಸದ ದರ್ಪಣಗಳ ಅಗತ್ಯ ಎಂಬುದು. 90ರ ದಶಕದ ಪ್ರಾರಂಭದಲ್ಲಿ ಹವಾಯಿಯ ಮೌನಾಕಿಯಾ ಪರ್ವತಗಳ ಮೇಲೆ ಸ್ಥಾಪಿಸಲ್ಪಟ್ಟ 10ಮೀ. ವ್ಯಾಸದ ಅವಳಿ ದೂರದರ್ಶಕಗಳಿಂದ ಸ್ಫೂರ್ತಿ ಪಡೆದು ದೈತ್ಯ ದೂರದರ್ಶಕಗಳ ನಿರ್ಮಾಣ ಮೊದಲಾಗಿದೆ. ವೆಚ್ಚವನ್ನು ತಗ್ಗಿಸಲು ದೂರದರ್ಶಕಕ್ಕೆ ಅಗತ್ಯವಾದ ಯಂತ್ರಭಾಗಗಳು, ಅಟ್ಟಣಿಗೆ ಮೊದಲಾದವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸಿ, ಇತರರಿಗೆ ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಇದರ ಸೂಕ್ಷ್ಮ ದೃಷ್ಟಿಯಿಂದ OWLದೂರದರ್ಶಕವು ಸೌರವ್ಯೆಹದ ಎಲ್ಲ ಕಾಯಗಳನ್ನು ಅತಿ ದೀರ್ಘಕಾಲ ಅತಿ ಹೆಚ್ಚು ಪೃಥಕ್ಕರಣಕ್ಕೊಳಪಡಿಸಿ ಗ್ರಹ ಸಮೂಹದ ರೂಪಣದ ಬಗ್ಗೆ ಹೆಚ್ಚು ಬೆಳಕು ಚೆಲ್ಲಲಿದೆ. ಹಾಲು ಹಾದಿ ಗೆಲಕ್ಸಿಯನ್ನೇ ಅಲ್ಲದೆ ಇತರ ಗೆಲಕ್ಸಿಗಳಲ್ಲಿರಬಹುದಾದ ಗ್ರಹ ಮಂಡಲಗಳ ಕುರಿತು ಮಾಹಿತಿ ಪಡೆಯಲಿದೆ. ಆ ಗ್ರಹಗಳಲ್ಲಿನ ವಾತಾವರಣದ ರಚನೆ, ಜೈವಿಕಗೋಲಗಳ ಅಸ್ತಿತ್ವ ಇವುಗಳ ಬಗೆಗೂ ವಿವರಗಳು ಲಭಿಸಲಿವೆ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವದ ದ್ರವ್ಯರಾಶಿಯ ಸೇಕಡ 96ಪಾಲು ಇದೆ ಎಂದು ಊಹಿಸಲಾಗಿರುವ ಕಪ್ಪುದ್ರವ್ಯ ಮತ್ತು ಕಪ್ಪು ಚೈತನ್ಯಗಳನ್ನು ಅರ್ಥೈಸಲು ನೆರವಾಗಲಿದೆ.