ನೀರ್ಥಡಿ

ದೂರ ಎಷ್ಟು ?
ತಾಲ್ಲೂಕು : ದಾವಣಗೆರೆ
ಜಿಲ್ಲೆಯಿಂದ : ೩೨ ಕಿ.ಮೀ.
ತಾಲ್ಲೂಕಿನಿಂದ : ೩೨ ಕಿ.ಮೀ.

ನೀರ್ಥಡಿ ರಂಗನಾಥಸ್ವಾಮಿ ದೇವಾಲಯ

ನೀರ್ಥಡಿಯಲ್ಲಿ ದೊಡ್ಡದಾದ ಶ್ರೀ ರಂಗನಾಥ ಸ್ವಾಮಿ ದೇವಾಲಯವಿದೆ. ಸುಂದರ ಪ್ರವೇಶ ದ್ವಾರವಿದ್ದು ೩೦-೪೦ ಅಡಿ ಎತ್ತರದ ದೀಪಮಾಲೆ ಕಂಬವಿದೆ. ಹೊರ ಆವರಣದಲ್ಲಿ ಪಟ್ಟಿಕೆಗಳ ಮೇಲೆ ಆನೆಯ ಸಾಲು, ಕುದುರೆ ಸಾಲು, ನರ್ತಕಿಯರ ಸಾಲುಗಳನ್ನು ಕಾಣಬಹುದು. ಇಲ್ಲಿ ಬಾಲಕೃಷ್ಣನ ವಿವಿಧ ಲೀಲೆಯ ಕೆತ್ತನೆಗಳಿವೆ. ಗರ್ಭಗುಡಿಯಲ್ಲಿ ಕಪ್ಪು ಕಲ್ಲಿನ ೦೩ ಅಡಿ ಎತ್ತರದ ಸುಂದರವಾದ ರಂಗನಾಥ ಸ್ವಾಮಿ ವಿಗ್ರಹವಿದೆ. ಚಿತ್ರದುರ್ಗದ ಪಾಳೆಯಗಾರರು ೧೬ನೇ ಶತಮಾನದಲ್ಲಿ ಕಟ್ಟಿಸಿದ ಮೊದಲ ದೇವಾಲಯವೆಂಬ ಉಲ್ಲೇಖವಿದೆ. ಇಲ್ಲಿ ೦೧ ಹೊಂಡ ಹಾಗೂ ಕೆರೆ ಇದೆ. ನೀರ್ಥಡಿಯ ಸುತ್ತಲೂ ಬೆಟ್ಟದ ಸಾಲು ಹಬ್ಬಿದೆ. ಹಿಂದೆ ಇಲ್ಲಿ ಗಾರ್ಘ್ಯ ಮಹರ್ಷಿ ತಪಸ್ಸು ಮಾಡುತ್ತಿದ್ದಾಗ ಧಾರಕಾರ ಮಳೆಯಿಂದ ಉಂಟಾದ ಪ್ರವಾಹವನ್ನು ತಡೆಯಲು ’ನೀರ್-ತಡಿ’ ಎಂದು ಹೇಳಿದ್ದರಿಂದ ನೀರು ಅಲ್ಲಿಯೇ ನಿಂತು ದಡ ಕಟ್ಟಿದ್ದರಿಂದ ’ನೀರ್ಥಡಿ’ ಎಂದಾಗಿದೆ.

 

ಗುತ್ತೂರು

ದೂರ ಎಷ್ಟು ?

ತಾಲ್ಲೂಕು : ಹರಿಹರ
ಜಿಲ್ಲೆಯಿಂದ : ೧೮ ಕಿ.ಮೀ.
ತಾಲ್ಲೂಕಿನಿಂದ : ೦೩ ಕಿ.ಮೀ.

ಮೈಸೂರಿನ ಬ್ರಿಟೀಷ್ ರೆಸಿಡೆಂಟ್‌ನಾದ ಬ್ಯಾರಿಕ್ಲೋಸನು ತನ್ನ ಸೈನ್ಯದ ಠಾಣೆಯನ್ನು ಕ್ರಿ.ಶ. ೧೮೬೫ ರಲ್ಲಿ ಗುತ್ತೂರಿನ ಬಳಿ ಇರಿಸಿದ್ದನು. ಇದು ಬ್ರಿಟೀಷರ ಆಯಕಟ್ಟಿನ ಸ್ಥಳವಾಗಿತ್ತು. ಆ ದಂಡಿನ ಕೆಲವು ಸೈನಿಕರ ಸಮಾಧಿಯನ್ನು ಈಗಲೂ ಇಲ್ಲಿ ಕಾಣಬಹುದು.


ಕೊಂಡಜ್ಜಿ

ಸ್ಕೌಟ್ಸ್ ಮತ್ತು ಗೈಡ್ ತಾಣ

ದೂರ ಎಷ್ಟು ?
ತಾಲ್ಲೂಕು : ಹರಿಹರ
ಜಿಲ್ಲೆಯಿಂದ : ೧೫ ಕಿ.ಮೀ.
ತಾಲ್ಲೂಕಿನಿಂದ : ೧೬ ಕಿ.ಮೀ.

ಕೊಂಡಜ್ಜಿ ವನ

ಪ್ರಖ್ಯಾತ ರಾಜಕಾರಣಿ ದಿ|| ಕೊಂಡಜ್ಜಿ ಬಸಪ್ಪನವರ ಹುಟ್ಟೂರು ಬೆಟ್ಟ ಗುಡ್ಡಗಳ ನಡುವೆ ಜಿಲ್ಲಾ ಸ್ಕೌಟ್‌ಮತ್ತು ಗೈಡ್ ಭವನವಿದ್ದು. ಇಲ್ಲಿ ಜಿಲ್ಲಾ ಮತ್ತು ರಾಜ್ಯದ ಪ್ರಮುಖ ಕ್ಯಾಂಪ್‌ಗಳನ್ನು ನಡೆಸುತ್ತಾರೆ ಸುಂದರ ಉದ್ಯಾನವನ, ಗಾಜಿನಮನೆ, ಕುಟೀರ ಹಾಗೂ ವಸತಿ ಗೃಹಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಹತ್ತಿರದಲ್ಲೆ ಸುಂದರವಾದ ಕೊಂಡಜ್ಜಿ ಕೆರೆಯಿದ್ದು ದೋಣಿ ವಿಹಾರದ ವ್ಯವಸ್ಥೆ ಹಾಗೂ ಸುಂದರ ಜಿಂಕೆ ವನವೂ ಇಲ್ಲಿದೆ.


ಹರಿಹರೇಶ್ವರನ ದೇವಾಲಯ

ದೂರ ಎಷ್ಟು ?
ತಾಲ್ಲೂಕು : ಹರಿಹರ
ಜಿಲ್ಲೆಯಿಂದ : ೧೫ ಕಿ.ಮೀ.
ತಾಲ್ಲೂಕಿನಿಂದ : ೦೦ ಕಿ.ಮೀ.

ಹರಿಹರೇಶ್ವರನ ದೇವಾಲಯ

ಪ್ರಮುಖ ತಾಲ್ಲೂಕು ಕೇಂದ್ರವಾದ ಹರಿಹರ ಐತಿಹಾಸಿಕ, ಧಾರ್ಮಿಕ, ಸಾಂಸ್ಕೃತಿಕ, ಪೌರಾಣಿಕ ಛಾಪನ್ನು ಹೊಂದಿದೆ. ಹರಿಹರೇಶ್ವರನ ನೆಲೆಯಿಂದಾಗಿ ’ದಕ್ಷಿಣ ಕಾಶಿ’ ಎಂದು ಪ್ರಸಿದ್ಧಿ ಪಡೆದ ಸ್ಥಳ. ಕೂಡನೂರು ಎಂಬ ಹಳೆಯ ಹೆಸರೂ ಉಂಟು. ಗುಹಾರಣ್ಯ ಕ್ಷೇತ್ರವೆಂದು ಹೆಸರಾದ ಇಲ್ಲಿ ತುಂಗಭದ್ರಾ ನದಿ ನಗರದ ಪಶ್ಚಿಮಕ್ಕೆ ಹರಿಯುತ್ತದೆ.

ಗುಹನೆಂಬ ರಾಕ್ಷಸನ ಸಂಹಾರಕ್ಕೆ ಏಕೀಭವಿಸಿದ ಹರಿ-ಹರ ರಿಂದಾಗಿ ಈ ಕ್ಷೇತ್ರಕ್ಕೆ ’ಹರಿಹರ’ ಎಂದು ಹೆಸರು ಅನ್ವರ್ಥ. ಕ್ರಿ.ಶ.೧೧೪೫ ರಲ್ಲಿ ನಿರ್ಮಿಸಿದ ಹೊಯ್ಸಳ ಶೈಲಿಯ ಈ ದೇವಾಲಯವನ್ನು ಪೋಲಾಳ್ವ ದೇವನು ಕಟ್ಟಿಸಿದನೆಂದು ಪ್ರತೀತಿ. ಪಕ್ಕದಲ್ಲೇ ಇರುವ ಲಕ್ಷ್ಮೀ, ಪಾರ್ವತಿ,. ಕಾಲಭೈರವ, ಶ್ರೀ ರಾಮರ ದೇವಾಲಯಗಳು ಮನಮೋಹಕವಾಗಿವೆ.


ಆರೋಗ್ಯಮಾತೆ ದೇವಾಲಯ (ಪಗೋಡ ಶೈಲಿ)

ದೂರ ಎಷ್ಟು ?
ತಾಲ್ಲೂಕು : ಹರಿಹರ
ಜಿಲ್ಲೆಯಿಂದ : ೧೫ ಕಿ.ಮೀ.
ತಾಲ್ಲೂಕಿನಿಂದ : ೦೦ ಕಿ.ಮೀ.

ಆರೋಗ್ಯಮಾತೆ ದೇವಾಲಯ

ಜಪಾನ್ ಪಗೋಡ ಶೈಲಿಯ ಆರೋಗ್ಯ ಮಾತೆ ದೇವಾಲಯವನ್ನು ೧೯೯೨ ರಲ್ಲಿ ಜೀಸು ಆರ್.ನಾಥನ್‌ರವರು ಕಟ್ಟಿಸಿದರು. ವಿಶೇಷ ವಾಸ್ತು ಶೈಲಿಯ ಈ ದೇವಾಲಯ ೨೦೦ ಅಡಿ ಎತ್ತರದ ಗೋಪುರ ಹೊಂದಿದೆ. ಪ್ರಾರ್ಥನಾ ಪ್ರಾಂಗಣದ ವಿಸ್ತೀರ್ಣ ೭೦ – ೭೦ ಅಡಿಗಳು. ಇದು ಕ್ರೈಸ್ತರ ಧಾರ್ಮಿಕ ಕೇಂದ್ರ. ಪ್ರತೀ ವರ್ಷ ಸೆಪ್ಟಂಬರ್ ೮ ರಂದು ಆರೋಗ್ಯಮಾತೆಯ ಜಾತ್ರೆ ನಡೆಯುತ್ತದೆ. ದೇಶ ವಿದೇಶದಿಂದ ಜನ ಜಾತ್ರಗೆ ಆಗಮಿಸುತ್ತಾರೆ.

 

ದೇವರ ಬೆಳಕೆರೆ

ದೂರ ಎಷ್ಟು ?
ತಾಲ್ಲೂಕು : ಹರಿಹರ
ಜಿಲ್ಲೆಯಿಂದ : ೧೦ ಕಿ.ಮೀ.
ತಾಲ್ಲೂಕಿನಿಂದ : ೨೦ ಕಿ.ಮೀ.

ದೇವರಬೆಳಕೆರೆ ಪಿಕಪ್ ಡ್ಯಾಂ

ದೇವರಬೆಳಕೆರೆ ಪಿಕ್‌ಅಪ್ ಯೋಜನೆಯನ್ನು (ಭದ್ರಾ ಜಲಾಶಯದ ನೀರು) ೧೯೮೬ ರಲ್ಲಿ ಅಂದಿನ ಲೋಕೋಪಯೋಗಿ ಮತ್ತು ನೀರಾವರಿ ಸಚಿವರಾದ ಶ್ರೀ.ದೇವೆಗೌಡರು ಉದ್ಘಾಟಿಸಿದರು. ಜಲಾಶಯದ ವಿಸ್ತೀರ್ಣ ೩೩ ಚ.ಮೈ. ಈ ಜಲಾಶಯದ ಬಲದಂಡೆಯ ಮೂಲಕ ೧೬ ಹಳ್ಳಿಗಳ ೨೬೯೨ ಹೆಕ್ಟೇರು ಭೂಮಿಯು ನೀರಿನ ಸೌಲಭ್ಯ ಪಡೆಯುತ್ತಿದೆ. ಜಲಾಶಯದ ನಿರ್ಮಾಣದಿಂದಾಗಿ ೧೬೦೦ ಎಕರೆ ಭೂಮಿ ಮುಳಗಡೆಯಾಗಿದೆ.

ಈ ನಾಲೆಗಳಿಗೆ ಪ್ರಸಿದ್ಧ ರಾಜಕಾರಣಿಗಳಾದ ಸಿದ್ದವೀರಪ್ಪ, ಗಾಂಜಿ ವೀರಪ್ಪ ನಾಲೆ ಎಂದು ಹೆಸರಿಡಲಾಗಿದೆ.

ಪ್ರವಾಸ ಮಾಡದವನಿಗೆ ಮನುಷ್ಯರ ಗುಣ, ಅವಗುಣ ಗೊತ್ತಾಗುವುದಿಲ್ಲ.  ಆಫ್ರಿಕಾ ಗಾದೆ

 

ಉಕ್ಕಡಗಾತ್ರಿ

ದೂರ ಎಷ್ಟು ?
ತಾಲ್ಲೂಕು : ಹರಿಹರ
ಜಿಲ್ಲೆಯಿಂದ : ೫೦ ಕಿ.ಮೀ.
ತಾಲ್ಲೂಕಿನಿಂದ : ೩೫ ಕಿ.ಮೀ.

ಶ್ರೀ ಗುರು ಕರೀಬಸವೇಶ್ವರರು ಈಗ್ಗೆ ಸುಮಾರು ೧೦೦ ವರ್ಷಗಳ ಹಿಂದೆ ಬದುಕಿದ್ದು ಅನೇಕ ಪವಾಡಗಳನ್ನು ಮಾಡಿ ಹೋಗಿದ್ದಾರೆ. ಕರಿಬಸವಜ್ಜನ ಅಮೃತ ಶಿಲೆಯ ಮೂರ್ತಿಯನ್ನು ಸ್ಥಾಪಿಸಿ ಪೂಜಿಸಲಾಗುತ್ತಿದೆ. ಇಲ್ಲಿ ಪ್ರತಿ ಅಮಾವಾಸ್ಯೆ ದಿನ ಮತಿಭ್ರಮಣೆ ಹೊಂದಿದ ವ್ಯಕ್ತಿಗಳ (ದೆವ್ವ ಬಿಡಿಸುವುದು ಎನ್ನಲಾಗುವುದು) ಧಾರ್ಮಿಕ ವಿಧಾನಗಳಿಂದ ಮುಕ್ತರನ್ನಾಗಿಸುವ ಕಾರ್ಯ ನಡೆಯುತ್ತಿದೆ.

ಈ ಕ್ಷೇತ್ರವು ತುಂಗಭದ್ರಾ ನದಿಯ ಪಶ್ಚಿಮ ತಟದಲ್ಲಿದೆ.


ಕೊಮಾರನಹಳ್ಳಿ

ದೂರ ಎಷ್ಟು ?

ತಾಲ್ಲೂಕು : ಹರಿಹರ
ಜಿಲ್ಲೆಯಿಂದ : ೩೭ ಕಿ.ಮೀ.
ತಾಲ್ಲೂಕಿನಿಂದ : ೨೨ ಕಿ.ಮೀ

ಸಾಹಿತಿ ತ.ರಾ.ಸು.

ತ.ರಾ.ಸು. ಹುಟ್ಟೂರಾದ ಮಲೆಬೆನ್ನೂರು ಮಾರ್ಗವಾಗಿ ೦೧ ಕಿ.ಮೀ. ಮುಂದುವರೆದರೆ ಕೋಮಾರನಹಳ್ಳಿ ಸಿಗುತ್ತದೆ. ಇದು ಹರಿಹರ ತಾಲ್ಲೂಕಿನ ಕೊನೆಯ ಗ್ರಾಮ. ಇಲ್ಲಿ ಶ್ರೀ.ಲಕ್ಷ್ಮೀ ರಂಗನಾಥಸ್ವಾಮಿ ದೇವಾಲಯವಿದೆ.ಇಲ್ಲಿ ರಂಗ-ಲಿಂಗ (ಹರಿ-ಹರ) ಒಂದೇ ಗರ್ಭಗುಡಿಯಲ್ಲಿರುವುದು ವಿಶೇಷ. ಶ್ರೀ.ರಂಗನಾಥನ ಪರಮಭಕ್ತೆ ಹೆಳವನಕಟ್ಟೆ ಗಿರಿಯಮ್ಮನ ದೇವಾಲಯವು ಇದೆ. ಈಕೆಯು ಅನೇಕ ಕೀರ್ತನೆಗಳನ್ನು ರಚಿಸಿದ್ದಾಳೆ. ಪಕ್ಕದಲ್ಲಿ ಶ್ರೀ.ಶಂಕರಲಿಂಗ ಭಗವಾನರ ಆಶ್ರಮ ಮತ್ತು ಸಮಾಧಿ ಇದೆ. ದೇವಸ್ಥಾನಕ್ಕೆ ಹೊಂದಿಕೊಂಡಂತೆ ವಿಶಾಲವಾದ ಕೆರೆ ಇದೆ.