ಸಂತೆಬೆನ್ನೂರು

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೩೬ ಕಿ.ಮೀ.
ತಾಲ್ಲೂಕಿನಿಂದ : ೨೦ ಕಿ.ಮೀ.

ಸಂತೇಬೆನ್ನೂರು ಪುಷ್ಕರಣಿ

ತಾಲ್ಲೂಕಿನ ಅತೀ ದೊಡ್ಡ ಹೋಬಳಿ ಕೇಂದ್ರ ರಂಗಾಪುರ ಎಂಬ ಹಳೆಯ ಹೆಸರು ಇತ್ತು. ತಾಲ್ಲೂಕಿಗೆ ದೊಡ್ಡ ಸಂತೆ ನಡೆಯುತ್ತಿರುವುದರಿಂದ ಸಂತೇಬೆನ್ನೂರಾಗಿದೆ. ವಿಜಯ ನಗರದ ಅರಸರ ಅಧೀನ ಪಾಳೆಯಗಾರರು ಕಟ್ಟಿದ ಸುಂದರ ಪುಷ್ಕರಣಿ ಇಲ್ಲಿದೆ. ೨೩೫ ಅಡಿ ಉದ್ದ, ೨೪೫ ಅಡಿ ಅಗಲ, ೩೦ ಅಡಿ ಆಳ ಹೊಂದಿದ್ದು, ಸ್ಥಳೀಯರು ಇದನ್ನು ಹೊಂಡ ಎನ್ನುವರು.

ಪಾಳೆಗಾರರ ಕೆಂಗ ಹನುಮಪ್ಪ ನಾಯಕ ಅರಮನೆಯನ್ನು, ಶ್ರೀರಾಮಚಂದ್ರ ದೇವಾಲಯವನ್ನು ರೂಪಿಸಿ ಅದರ ಎದುರು ಈ ಐತಿಹಾಸಿಕ ಪುಷ್ಕರಣಿ ಕಟ್ಟಿಸಿದ ದಿಕ್ಕಿಗೆ ಒಂದರಂತೆ ಎಂಟು ಮಂಟಪ, ನೀರಿನ ಮದ್ಯೆ ನಿರ್ಮಿಸಿದ ವಸಂತಮಂಟಪ ಸೊಗಸಾಗಿದೆ. ಇದರ ಎದುರು ಬಿಜಾಪುರ ಆದಿಲ್ ಷಹಾನ ಸೇನಾಧಿಕಾರಿ ರಣದುಲ್ಲಾಖಾನ್ ಕಟ್ಟಿಸಿದ ಮುಸಾಫಿರ್ ಖಾನೆ ಮನಮೋಹಕವಾಗಿದೆ.

 

ಮೆದಿಕೆರೆ

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೩೦ ಕಿ.ಮೀ.
ತಾಲ್ಲೂಕಿನಿಂದ : ೨೫ ಕಿ.ಮೀ.

ಚನ್ನಗಿರಿ ತಾಲ್ಲೂಕಿನ ಬಾಡ ಸಂತೆಬೆನ್ನೂರು ಮಾರ್ಗದಲ್ಲಿನ ಈ ಊರಲ್ಲಿ ಚಾಲುಕ್ಯರ ಕಾಲದ ದೇವಾಲಯವಿದೆ. ಸೂರ್ಯ ನಾರಾಯಣ, ಕೇಶವ, ಸಪ್ತ ಮಾತೃಕೆಯರ ಕಲಾತ್ಮಕ ವಿಗ್ರಹಗಳಿವೆ. ಮಾಸ್ತಿ ಕಲ್ಲು, ವೀರಗಲ್ಲುಗಳನ್ನು ಈ ದೇವಾಲಯಕ್ಕೆ ಹೊಂದಿಸಿ ಇಡಲಾಗಿದೆ. ಬನಶಂಕರಿ ಹಾಗೂ ಮಧುಕೇಶ್ವರ ದೇವಾಲಯಗಳಿವೆ. ಈ ಊರಿಗೆ ಮೆದಕೆರೆ, ಮುದುಕಕೆರೆ ಎಂಬ ಹೆಸರಿದ್ದವು. ಇಲ್ಲಿರುವ ಕೆರೆಯನ್ನು ಸಂತೆಬೆನ್ನೂರಿನ ಕೆಂಗ ಹನುಮಪ್ಪ ನಾಯಕ ಕಟ್ಟಿಸಿದ್ದಾನೆ.

 

ಮೊರಡಿ

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೨೫ ಕಿ.ಮೀ.
ತಾಲ್ಲೂಕಿನಿಂದ : ೨೮ ಕಿ.ಮೀ.

ದಾವಣಗೆರೆ, ಚನ್ನಗಿರಿ ತಾಲ್ಲೂಕಿನ ಗಡಿಗ್ರಾಮ ಇದನ್ನು ’ಮರಡಿ’ ಎಂತಲೂ ಕರೆಯುತ್ತಾರೆ. ಇಲ್ಲಿ ಆಕರ್ಷಕವಾದ ಮಲ್ಲೇಶ್ವರ ದೇವಾಲಯವಿದೆ. ಪಾಳೆಯ ಗಾರರ ಕಾಲದಲ್ಲಿ ಈ ಗ್ರಾಮ ಅಗ್ರಹಾರವಾಗಿತ್ತೆಂದು ಕ್ರಿ.ಶ.೧೭೧೫ ರಲ್ಲಿ ಶಾಸನವೊಂದು ತಿಳಿಸುತ್ತದೆ.

 

ಬಸವಾಪಟ್ಟಣ

ದೂರ ಎಷ್ಟು ?
ತಾಲ್ಲೂಕು : ಚನ್ನಗಿರಿ
ಜಿಲ್ಲೆಯಿಂದ : ೪೦ ಕಿ.ಮೀ.
ತಾಲ್ಲೂಕಿನಿಂದ : ೩೦ ಕಿ.ಮೀ.

ಇದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ. ಇಲ್ಲಿನ ಮಠ ಮಾನ್ಯಗಳು ಜನ ಸೇವೆಯಿಂದ ಖ್ಯಾತಿ ಹೊಂದಿದೆ. ಇಲ್ಲಿನ ವಿಇಂμಂ ಶ್ರೀ.ಹಾಲಸ್ವಾಮಿಗಳ ಪ್ರಾಚೀನ ದೇವಾಲಯ. ಪ್ರತಿ ವರ್ಷ ಜಾತ್ರೆಯ ಆಕರ್ಷಕ ಎಂದರೆ ಮುಳ್ಳುಗದ್ದುಗೆ ಪವಾಡ.

ಶ್ರೀ.ಹಾಲಶಂಕರ ಸ್ವಾಮಿಗಳ ಗುಹೆ, ಗವಿಮಠ, ಮಹಂತಿನ ಮಠ, ಪಂಚವಟಿಗೆ ಮಠಗಳಿದ್ದು, ಇದರ ಬಳಿ ಹಳೆಯ ಕಾಳಿಕಾದೇವಿಯ ಗುಡಿಯೂ ಇದೆ. ಸಮೀಪದಲ್ಲಿಯೇ ಬಾಬಾ ಬುಡೇನ್ ಸಂತರ ಸಮಾಧಿ ಸ್ಥಳವಿದ್ದು ಪ್ರತಿ ವರ್ಷ ಉರುಸು ನಡೆಯುತ್ತಿದೆ. ಗವಿಮಠ, ಬಸವಾಪಟ್ಟಣ ಭಕ್ತರ ಪವಿತ್ರ ತಾಣ. ಬಾವಾಜಿ ಮಠ, ರಾಮದಾಸ್ ಸಮಾಧಿಯೂ ಇಲ್ಲಿದೆ.

 

ಮುಸ್ಟೂರು

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೬೫ ಕಿ.ಮೀ.
ತಾಲ್ಲೂಕಿನಿಂದ : ೧೫ ಕಿ.ಮೀ.

ಇಲ್ಲಿ ಕಲ್ಲೇಶ್ವರ ದೇವಸ್ಥಾನವಿದ್ದು ಕ್ರಿ.ಶ.೯೨೦ ರಲ್ಲಿ ನೊಳಂಬ ವಾಡಿ ರಾಜ ಅಯ್ಯಪ್ಪ ದೇವರು ಆಳುತ್ತಿದ್ದನೆಂದು ಕಲ್ಲೇಶ್ವರ ಶಾಸನದಿಂದ ತಿಳಿದು ಬರುತ್ತದೆ. ಇಲ್ಲಿ ಪುರಾತನವಾದ ಹುಚ್ಚಲಿಂಗೇಶ್ವರ ಸ್ವಾಮಿಯ ಮಠವಿದೆ ಇವರು ಪವಾಡ ಪುರುಷರಾಗಿದ್ದರು.


ಕೊಡದಗುಡ್ಡ

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೪೨ ಕಿ.ಮೀ.
ತಾಲ್ಲೂಕಿನಿಂದ : ೧೯ ಕಿ.ಮೀ.

ಕೊಡದಗುಡ್ಡ ವೀರಭದ್ರಸ್ವಾಮಿ ದೇವಾಲಯ

ಇದು ವೀರಭದ್ರ ಸ್ವಾಮಿಯ ಪ್ರಸಿದ್ಧವಾದ ಕ್ಷೇತ್ರ. ಎತ್ತರವಾದ ಬೆಟ್ಟ ಸುಂದರವಾದ ದೇವಾಲಯವಿದೆ. ವೀರಭದ್ರ ಸ್ವಾಮಿ ದೇವಾಲಯವು ಹೊಯ್ಸಳ, ಚಾಲುಕ್ಯ ಶೈಲಿಯ ಕೆತ್ತನೆಯಿಂದ ಭವ್ಯವಾಗಿದೆ. ನವರಂಗದಲ್ಲಿ ಸುಂದರವಾದ ಕಂಬಗಳಿವೆ. ಸಿಂಹಲಾಂಛನ ದ್ವಾರಪಾಲಕರುಳ್ಳ ಗರ್ಭಗುಡಿ ಬಾಗಿಲನ್ನು ಚಿತ್ತಾರದ ಹಿತ್ತಾಳೆಯ ತಗಡಿನಿಂದ ಅಲಂಕರಿಸಿದ್ದಾರೆ ಇತ್ತೀಚೆಗೆ ಭಕ್ತರು ದೇವಾಲಯವನ್ನು ನವೀಕರಣಗೊಳಿಸಿದ್ದಾರೆ. ಪ್ರತಿ ವರ್ಷ ಹೋಳಿ ಹುಣ್ಣಿಮೆಯ ದಿನ ಜಾತ್ರೆ ನಡೆಯುತ್ತದೆ ವಿವಿದೆಡೆಯಿಂದ ಸಹಸ್ರಾರು ಭಕ್ತರು ಪಾಲ್ಗೊಳ್ಳುತ್ತಾರೆ.


ಕಣಕುಪ್ಪೆ

ದೂರ ಎಷ್ಟು ?

ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೫೬ ಕಿ.ಮೀ.
ತಾಲ್ಲೂಕಿನಿಂದ : ೦೬ ಕಿ.ಮೀ.

ಗವಿಮಠ, ಕಣುಕುಪ್ಪೆ

ಐತಿಹಾಸಿಕ ಮಹತ್ವ ಸ್ಥಳ. ಚಿತ್ರದುರ್ಗದ ಪಾಳೆಗಾರರ ಆಳ್ವಿಕೆಗೆ ಒಳಪಟ್ಟಿದ್ದು, ಚಿತ್ರದುರ್ಗದ ಕೋಟೆಯ ಮಾದರಿಯಂತೆ ಬಲಿಷ್ಠವಾದ ಕೋಟೆಯನ್ನು ಕಾಣಬಹುದು. ೧೮೮೨ರ ವರೆಗೆ ಇದು ತಾಲ್ಲೂಕು ಕೇಂದ್ರ ವಾಗಿದ್ದು, ನಂತರ ಜಗಳೂರು ಕೇಂದ್ರವಾಯಿತು. ಇಲ್ಲಿ ಕೋಟೆ ಕೊತ್ತಳಗಳು ಜನರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ಕಣ್ವ ಮಹರ್ಷಿಗಳು ತಪಸ್ಸು ಮಾಡಿದ ಸ್ಥಳವೆಂದು ಪ್ರತೀತಿ ಇದೆ. ಇಲ್ಲೊಂದು ಗುಹೆಯು ಇದೆ ಇದನ್ನು ಗವಿಮಠ ಎಂದು ಕರೆಯುತ್ತಾರೆ. ಪ್ರವಾಸಿಗರಿಗೆ ತಂಗುವ ವ್ಯವಸ್ಥೆಯು ಇದೆ.

 

ಬಿಳಿಚೋಡು

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೩೦ ಕಿ.ಮೀ.
ತಾಲ್ಲೂಕಿನಿಂದ : ೨೦ ಕಿ.ಮೀ.

ಇದೊಂದು ಐತಿಹಾಸಿಕ ಸ್ಥಳವಾಗಿದ್ದು ಅಶೋಕ ಚಕ್ರವರ್ತಿ ಕೆಲವು ಕಾಲ ಬೀಡು ಬಿಟ್ಟಿದ್ದನೆಂದು ಪ್ರತೀತಿ. ಅನೇಕ ಶಾಸನಗಳು, ವೀರಗಲ್ಲುಗಳು, ಬುರುಜು, ಬತೇರಿಗಳು ಹಾಗೂ ಗ್ರಾಮದಲ್ಲಿರುವ ಜೈನ ಮಂದಿರ, ಕಲ್ಲೇಶ್ವರ ದೇವಾಲಯ ಮತ್ತು ಬೀರಲಿಂಗೇಶ್ವರ ದೇವಾಲಯ ವೀಕ್ಷಿಸಬಹುದು.


ಕಲ್ಲೇದೇವರ ಪುರ

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೬೫ ಕಿ.ಮೀ.
ತಾಲ್ಲೂಕಿನಿಂದ : ೧೫ ಕಿ.ಮೀ.

ಜಿಲ್ಲೆಯ ಮಹತ್ವದ ಪುಣ್ಯ ಕ್ಷೇತ್ರ ಇಲ್ಲಿಯ ಕಲ್ಲೇಶ್ವರ ದೇವಾಲಯ ಪ್ರಸಿದ್ಧವಾದುದು, ಕಲ್ಲೇಶ್ವರ ಸ್ವಾಮಿ ಸ್ವಯಂಭು ಕಲ್ಲಿನಾಥನೆಂದು ಉದ್ಭವನಾಗಿದ್ದಾನೆ. ದೇವಾಲಯದ ಸುತ್ತಲೂ ಕಲಾಕೃತಿಗಳಿವೆ. ಚೋಳರ ಕಾಲದ ಲಿಪಿಯ ಶಾಸನಗಳು ಇಲ್ಲಿವೆ. ಮಾರ್ಚಿ ತಿಂಗಳಲ್ಲಿ ವಿಜೃಂಬಣೆಯಿಂದ ಜಾತ್ರೆ ನಡೆಯುತ್ತದೆ ಇದೇ ಸಂಧರ್ಭದಲ್ಲಿ ದನಗಳ ಜಾತ್ರೆ ಸಹ ನಡೆಯುತ್ತದೆ.

 

ಕೊಣಚಗಲ್ ರಂಗನಾಥ ಸ್ವಾಮಿ ಬೆಟ್ಟ

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೬೩ ಕಿ.ಮೀ.
ತಾಲ್ಲೂಕಿನಿಂದ : ೧೩ ಕಿ.ಮೀ.

ದಳವಯಿ ಮುದ್ದಣ್ಣನ ಹೊಂಡ

ಬೆಟ್ದದ ತಪ್ಪಲಿನಲ್ಲಿ ಮಂಟಪಗಳು, ಹೊಂಡಗಳು ಇವೆ. ಮುಖ ಮಂಟಪ ಗರ್ಭಗುಡಿ ಅಲ್ಲದೇ ದ್ವಾರದ ಮೇಲೆ ದ್ವಾರಪಾಲಕರ ವಿಗ್ರಹ ಇದೆ.

ದಳವಾಯಿ ಮುದ್ದಣ್ಣನ ಹೊಂಡ, ೧೨ ಕೋನಗಳ ಬೃಹತ್ ಹೊಂಡ ಕಲ್ಲಿನ ಹಾಸು ಬಂಡೆಗಳಿಂದ ಕಟ್ಟಲಾಗಿದೆ. ತಳ ಮಟ್ಟದಿಂದ ೩೨ ಮೆಟ್ಟಿಲುಗಳೆವೆ ಅಲ್ಲಲ್ಲಿ ಚಿತ್ರಗಳ ಕೆತ್ತನೆಯಿದೆ ಇದನ್ನು ದಳವಾಯಿ ಮುದ್ದಣ್ಣ ಕಟ್ಟಿದನೆಂದು ಆ ಹೊಂಡಕ್ಕೆ  ಅವನ ಹೆಸರನ್ನು ಇಡಲಾಗಿದೆ. ಕನ್ನಡ ಭಾಷೆಯ ಹಿರಿಮೆಯನ್ನು ಸಾರಿದ ಮಹಾಲಿಂಗ ರಂಗ ಇಲ್ಲಿಯೆ ಕೃತಿ ರಚಿಸಿದ್ದರೆಂಬ ಐತಿಹ್ಯವಿದೆ.

 

ರಂಗಯ್ಯನ ದುರ್ಗ ಅರಣ್ಯ ಪ್ರದೇಶ

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೪೦ ಕಿ.ಮೀ.
ತಾಲ್ಲೂಕಿನಿಂದ : ೩೦ ಕಿ.ಮೀ.

 

ರಂಗಯ್ಯನದುರ್ಗದ ಅರಣ್ಯಪ್ರದೇಶ

ಈ ಅರಣ್ಯ ಪ್ರದೇಶದಲ್ಲಿ ಜಾಲಿ, ಬಿಕ್ಕೆ, ಹೊಂಗೆ ಮುಂತಾದ ಕುರುಚಲು ಗಿಡಗಳಿವೆ. ನವಿಲು, ಮೊಲ, ಕಾಡು ಹಂದಿ, ಕರಡಿ ಜಿಂಕೆಗಳಿವೆ ಏಷ್ಯಾದಲ್ಲಿಯೇ ಅಪರೂಪವೆನಿಸಿದ ’ಕೊಂಡು ಕುರಿಗಳು’ ಇಲ್ಲಿ ವಾಸಿಸುತ್ತಿವೆ. ಈ ಸಂತತಿಯ ಅಭಿವೃದ್ಧಿಗಾಗಿ ಕೊಂಡು ಕುರಿಧಾಮ ಮಾಡಬೇಕೆಂಬ ಯೋಜನೆ ಇದೆ.

 

ಗುಹೇಶ್ವರ ಬೆಟ್ಟ

ದೂರ ಎಷ್ಟು ?
ತಾಲ್ಲೂಕು : ಜಗಳೂರು
ಜಿಲ್ಲೆಯಿಂದ : ೫೮ ಕಿ.ಮೀ.
ತಾಲ್ಲೂಕಿನಿಂದ : ೦೮ ಕಿ.ಮೀ.

ತೋರಣಘಟ್ಟ ಗ್ರಾಮಕ್ಕೆ ಸಮೀಪದ ಈ ಬೆಟ್ಟಕ್ಕೆ ಗುಹೇಶ್ವರ ಬೆಟ್ಟವೆಂದು ಕರೆಯುತ್ತಾರೆ. ಈ ಬೆಟ್ಟದ ಸಾಲಿನಲ್ಲಿ ಪವನ ವಿದ್ಯುತ್ ಉತ್ಪಾದಿಸುತ್ತಾರೆ.