ಮಾಸಡಿ

ದೂರ ಎಷ್ಟು ?

ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೫೧ ಕಿ.ಮೀ.
ತಾಲ್ಲೂಕಿನಿಂದ : ೦೪ ಕಿ.ಮೀ.

ಮದಕರಿ ನಾಯಕನ ಕಾಲದ ಹುಡ್ಡೇವು

 

ಹೊನ್ನಾಳಿಯಿಂದ ತುಂಗಭದ್ರಾ ನದಿಯ ಸೇತುವೆಯ ಮೇಲೆ ಕ್ರಮಿಸಿದರೆ ಹರಿಹರ ರಸ್ತೆಯ ಬಲ ಬದಿಯಲ್ಲಿರುವ ಗ್ರಾಮವೇ ಮಾಸಡಿ.

ಮದಕರಿ ನಾಯಕನ ಕಾಲದ್ದೆಂದು ಹೇಳಲಾದ ಮುಕ್ಕಾಗದ ಮಾಸದ ಒಂದು ಹುಡ್ಡೇವು ಇಲ್ಲಿದ್ದು ಗತಕಾಲದ ಐತಿಹ್ಯವಿದೆ. ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾದ ಕೃಷ್ಣ ಮಾಸಡಿ ಅವರ ಊರಿದು.

 

ಗಡ್ಡೆರಾಮೇಶ್ವರ

ದೂರ ಎಷ್ಟು ?
ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೬೫ ಕಿ.ಮೀ.
ತಾಲ್ಲೂಕಿನಿಂದ : ೧೦ ಕಿ.ಮೀ

ಜನಪದ ತಜ್ಞ ಕುರುವ ಬಸವರಾಜರ ಊರು ಗಡ್ಡೇರಾಮೇಶ್ವರ ಶಿವಲಿಂಗವು ರಾಮಾಯಣ ಕಾಲದ್ದೆಂದು ಐತಿಹ್ಯವಿದೆ. ಶ್ರೀರಾಮನು ತನ್ನ ತಂದೆಗೆ ಪಿತೃ ತರ್ಪಣ ನೀಡಿದ ಸ್ಥಳವೆಂದು ಗುರುತಿಸಿದ್ದಾರೆ. ಒಂದಾಗಿ ಹರಿದು ಬರುವ ತುಂಗಭದ್ರಾ ನದಿಯು ಇಬ್ಭಾಗವಾಗಿ ನಡುಗಡ್ಡೆಯಾಗಿದೆ. ಇದೊಂದು ಪುಣ್ಯಸ್ಥಳ.

 

ನ್ಯಾಮತಿ

ದೂರ ಎಷ್ಟು ?
ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೬೮ ಕಿ.ಮೀ.
ತಾಲ್ಲೂಕಿನಿಂದ : ೧೩ ಕಿ.ಮೀ

ಹೊನ್ನಾಳಿಯಿಂದ ನೈಋತ್ಯದಲ್ಲಿ ಸಾಗಿದರೆ ಶಿವಮೊಗ್ಗ ರಸ್ತೆಯಲ್ಲಿ ನ್ಯಾಮತಿ ಸಿಗುತ್ತದೆ. ಇಲ್ಲಿ ಹೆಚ್ಚಾಗಿ ವಣಿಕರಿದ್ದು ನ್ಯಾಯವಂತಿಕೆಯಿಂದ ವ್ಯವಹರಿಸುತ್ತಿದ್ದುದರಿಂದ ’ನ್ಯಾಯಮತಿ’ ಎಂದು ಕರೆಯುತ್ತಿದ್ದು ’ನ್ಯಾಮತಿ’ ಆಗಿದೆ.

ಪ್ರಪ್ರಥಮವಾಗಿ ಕನ್ನಡ ನಾಡಿಗೆ ’ಕನ್ನಡ ನಿಘಂಟು’ ಕೊಡುಗೆಯಾಗಿ  ಕೊಟ್ಟ ನ್ಯಾಮತಿ ಪ್ರಭಣ್ಣನವರು ಇದ್ದ ಊರು.

ಇಲ್ಲಿರುವ ಕಲ್ಮಠ ಮೂಲತಃ ಜೈನದೇವಾಲಯವಾಗಿದ್ದು ಈಗ ಶೈವ ದೇವಾಲಯವಾಗಿ ಮಾರ್ಪಾಟು ಹೊಂದಿದೆ. ಪ್ರಾಚೀನ ಕಾಲದ ಅವಶೇಷಗಳನ್ನು ಇಲ್ಲಿನ ತಳವಾರ ಬೀದಿಯಲ್ಲಿ ಕಾಣಬಹುದು.

 

ಸವಳಂಗ

ದೂರ ಎಷ್ಟು ?

ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೭೭ ಕಿ.ಮೀ.
ತಾಲ್ಲೂಕಿನಿಂದ : ೨೨ ಕಿ.ಮೀ.

ಜಿಲ್ಲಾ ಮಾದರಿ ಶಾಲೆ

ಮಲೆನಾಡ ಸೆರಗಿನಲ್ಲಿ ಕಲಬೀರ ರಂಗನ ಗಿರಿಗಳ ತಪ್ಪಲಲ್ಲಿ ಇರುವ ಸವಳಂಗ ಗ್ರಾಮದ ೦೨ ಭಾಗಗಳಲ್ಲಿ ಒಂದೊಂದು ದೊಡ್ಡ ಕೆರೆಗಳಿದ್ದು, ಹಳೆಕೆರೆಯನ್ನು ಕ್ರಿ.ಶ. ೧೮೮೮ ರಲ್ಲಿ ಕಟ್ಟಿಸಲಾಗಿದ್ದು, ಹೊಸಕೆರೆಯನ್ನು ೧೯೨೬ ರಲ್ಲಿ ಬ್ರಿಟೀಷರು ಕಟ್ಟಿಸಿದ್ದಾರೆ. ಇಲ್ಲಿಂದ ಸುತ್ತ-ಮುತ್ತ ಹಳ್ಳಿಯ ೮೦೦ ಎಕರೆಗಳಿಗೆ ನೀರೊದಗಿಸುತ್ತಿದೆ. ಆರಕ್ಷಕ ಠಾಣೆಯ ಮುಂಭಾಗದಲ್ಲಿ ವೀರಗಲ್ಲನ್ನು ನೋಡಬಹುದು.

ಇಲ್ಲಿಯ ಸಮೀಪದ ಮಾಚಗೊಂಡನಹಳ್ಳಿ ತಾಂಡಾದ ಸರ್ಕಾರಿ ಶಾಲೆ ಜಿಲ್ಲಾ ಮಟ್ಟದ ಉತ್ತಮ ಶಾಲೆಯಾಗಿದ್ದು, ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕರಿದ್ದಾರೆ.

 

ಕುದುರೆ ಕೊಂಡ

ದೂರ ಎಷ್ಟು ?
ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೭೨ ಕಿ.ಮೀ.
ತಾಲ್ಲೂಕಿನಿಂದ : ೧೭ ಕಿ.ಮೀ.

ಸುಮಾರು ೧೨೫ ವರ್ಷಗಳ ಹಿಂದೆ ಯುರೋಪಿನ್ ಮೂಲದವರೆಂದು ಹೇಳಲಾಗುವ ’ಮೆಸರ್ಸ್ ವಿಲ್ಸನ್’ ಗಣಿ ಕೈಗಾರೀಕೋದ್ಯಮಿಗಳು ಕ್ರಿ.ಶ.೧೮೮೩ ರಲ್ಲಿ ಚಿನ್ನದ ಗಣಿ ಆರಂಭಿಸಿದರು. ಗಣಿಗಾರಿಕೆ ಲಾಭದಾಯಕವಲ್ಲದ್ದರಿಂದ ಕ್ರಿ.ಶ. ೧೯೩೭-೩೮ರಲ್ಲಿ ಗಣಿಗಾರಿಕೆ ನಿಲ್ಲಸಲಾಯಿತು. ಸುತ್ತಲೂ ಗುಡ್ಡಗಳ ಸಾಲನ್ನು ಕಾಣಬಹುದಾಗಿದೆ.


ಕಲಬಗಿರಿ ಗುಡ್ಡ

ದೂರ ಎಷ್ಟು ?
ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೭೪ ಕಿ.ಮೀ.
ತಾಲ್ಲೂಕಿನಿಂದ : ೧೯ ಕಿ.ಮೀ

ಪವನ ಯಂತ್ರ, ಕಲಬಗಿರಿ ಗುಡ್ಡ

ಕಲ್ಖಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ್ದುದರಿಂದ ಇದು ಕಲಬಗಿರಿ ಎಂದು ಹೆಸರಾಗಿದೆ. ಗುಡ್ಡದ ಕೆಳಭಾಗದಲ್ಲಿ ವೀರಭದ್ರಸ್ವಾಮಿ, ಭದ್ರಕಾಳಮ್ಮ, ನಾಗಲಿಂಗೇಶ್ವರ ದೇವಾಲಯಗಳಿವೆ. ಗುಡ್ಡದ ತುದಿಯಲ್ಲಿ ಶ್ರೀರಂಗನಾಥ ಸ್ವಾಮಿ ದೇವಾಲಯ ನೋಡಬಹುದು. ಗುಡ್ಡದ ಮೇಲೆ ಗಾಳಿಯಿಂದ ವಿದ್ಯುತ್ ತಯಾರಿಸುವ ಪವನ ಯಂತ್ರ ನೋಡಬಹುದು. ಗುಡ್ಡದ ಸಾಲು ಮುಂದುವರಿದಂತೆ ತುಪ್ಪದ ಗಿರಿಯನ್ನು ಕಾಣಬಹುದು.

 

ತೀರ್ಥರಾಮೇಶ್ವರ

ದೂರ ಎಷ್ಟು ?

ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೮೧ ಕಿ.ಮೀ.
ತಾಲ್ಲೂಕಿನಿಂದ : ೨೬ ಕಿ.ಮೀ.

ತೀರ್ಥರಾಮೇಶ್ವರ ದೇವಸ್ಥಾನ

ಇದು ಬೆಟ್ಟಗಳ ಸಾಲಿನ ಸುಂದರ ಪ್ರಕೃತಿ ತಾಣವಾಗಿದೆ. ಶ್ರೀ ರಾಮ ಸ್ಥಾಪಿಸಿದ ಲಿಂಗ ಎಂದೇ ಪ್ರಸಿದ್ಧಿಯಿದೆ. ಬೆರಳು ಗಾತ್ರದ ನೀರಧಾರೆ ನಿರಂತರವಾಗಿಹರಿಯುವುದರಿಂದ ತೀರ್ಥರಾಮೇಶ್ವರ ಎಂದಾಗಿದೆ. ಇಲ್ಲೊಂದು ಕೊಳವಿದ್ದು ಶಿಲಾಮಯವಾದ ಸಿಂಹದ ಮುಖದಿಂದ ಶುಭ್ರವಾದ ನೀರು ಸದಾ ಸುರಿಯುತ್ತದೆ. ಈ ಪವಿತ್ರ ನೀರು ರೋಗಹರ ಎಂಬ ನಂಬಿಕೆ ಇದೆ.

ತೀರ್ಥರಾಮೇಶ್ವರದಲ್ಲಿ ಚತುರ್ಮುಖ ಬ್ರಹ್ಮದೇವನ ವಿಶೇಷ ಮೂರ್ತಿ ಇದೆ. ಸಂತಾನ ಭಾಗ್ಯ ದೇವರು ಎಂಬ ನಂಬಿಕೆಯು ಇದೆ. ಯಾತ್ರಿಕರಿಗೆ ಪವಿತ್ರ ಕ್ಷೇತ್ರವಾಗಿದೆ. ಈ ಬೆಟ್ಟದ ಕೆಳ ಭಾಗದಲ್ಲಿ ೦೧ ಕಿ.ಮೀ. ಅಂತರದಲ್ಲಿ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ನಿರ್ಮಿಸಿರುವ ವಸತಿ ನಿಲಯವಿದ್ದು, ರಾಜ್ಯ, ಜಿಲ್ಲಾ, ತಾಲ್ಲೂಕು ಮಟ್ಟದ ಕ್ಯಾಂಪ್‌ಗಳು ವಿವಿಧ ತರಬೇತಿಗಳು ನಡೆಯುತ್ತವೆ. ಸಂಶೋಧಕರಾದ ಹೆಚ್.ದೇವೀರಪ್ಪನವರು ಸಮೀಪದ ಮಲ್ಲಿಗೇನಳ್ಳಿ ಗ್ರಾಮದವರು.

 

ಮಾರಿಕೊಪ್ಪ

ದೂರ ಎಷ್ಟು ?
ತಾಲ್ಲೂಕು : ಹೊನ್ನಾಳಿ
ಜಿಲ್ಲೆಯಿಂದ : ೫೯ ಕಿ.ಮೀ.
ತಾಲ್ಲೂಕಿನಿಂದ : ೦೪ ಕಿ.ಮೀ.

ಮಾರಿಹಳ್ಳದ ದಡದ ಮೇಲಿರುವ ಹಳ್ಳಿಯೇ ಮಾರಿಕೊಪ್ಪ. ಇಲ್ಲಿ ಹಳದಮ್ಮದೇವಿಯ ಮಾರಿಹಬ್ಬ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.