ದಾವಣಗೆರೆಗೆ ಬಂದ ಪ್ರತಿಯೊಬ್ಬರೂ ಇಲ್ಲಿನ ಮಂಡಕ್ಕಿ ಮೆಣಸಿನಕಾಯಿ, ಬೆಣ್ಣೆ ದೋಸೆ ರುಚಿ ಸವಿಯುತ್ತಾರೆ, ಹೊಟ್ಟೆ ನಂಜ ಹೋಟಲಿನ ಮೈಸೂರು ಪಾಕು, ನ್ಯಾಮತಿಯ ಗುಳ್ಳುಂಡೆ ಕೂಡ ವಿಶೇಷ ತಿನಿಸಾಗಿದೆ.

ಎತ್ತರದ ಗಡಿಯಾರ ಕಂಬ, ಶಿವಯೋಗಿ ಮಂದಿರ, ಶಂಕರ ಮಠ, ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಲಿಂಗಾಕೃತಿ ವಿಶಿಷ್ಟ~ ಪ್ರಾರ್ಥನಾ ಮಂದಿರ, ರಾಮಕೃಷ್ಣ ಆಶ್ರಮ, ಅನ್ನಪೂರ್ಣೇಶ್ವರಿ ದೇವಾಲಯ, ರಾಘವೇಂದ್ರ ಸ್ವಾಮಿ ಮಠ, ಆರ್.ಹೆಚ್.ಗೀತಾಮಂದಿರ, ಸಂತಪಾಲರ ಚರ್ಚ್, ಬಕ್ಕೇಶ್ವರ ದೇವಸ್ಥಾನ, ಬಿ.ಐ.ಇ.ಟಿ. ಇಂಜಿನಿಯರಿಂಗ್ ಕಾಲೇಜ್, ಯು.ಬಿ.ಡಿ.ಟಿ. ಕಾಲೇಜ್, ಜಿ.ಎಂ.ಐ.ಟಿ. ಕಾಲೇಜು, ವೈದ್ಯಕೀಯ, ದಂತ ವೈದ್ಯಕೀಯ ಕಾಲೇಜು ಹೀಗೆ ಅನೇಕ ಖ್ಯಾತಿವೆತ್ತ ಸ್ಥಳಗಳು ನಗರದಲ್ಲಿವೆ. ಜಿಲ್ಲೆಯು ಚನ್ನಗಿರಿ, ದಾವಣಗೆರೆ, ಹರಪನಹಳ್ಳಿ, ಹರಿಹರ, ಜಗಳೂರು ಮತ್ತು ಹೊನ್ನಾಳಿ ತಾಲ್ಲೂಕುಗಳನ್ನು ಹೊಂದಿದೆ.

ಹೊನ್ನಾಳಿ ಮತ್ತು ಚನ್ನಗಿರಿ ತಾಲ್ಲೂಕುಗಳು ನೆರೆಯ ಶಿವಮೊಗ್ಗದಿಂದ, ದಾವಣಗೆರೆ ಜಿಲ್ಲೆಗೆ ಸೇರಿದ್ದು ಹಾಗೆಯೇ ಹರಪನಹಳ್ಳಿ ತಾಲೂಕು ಬಳ್ಳಾರಿಯಿಂದ ದಾವಣಗೆರೆಗೆ ಬಂದು ಸೇರಿದೆ.

ಹೈದರಾಲಿಯಿಂದ ಮರಾಠ ಪಾಳೆಯಗಾರ ಅಪ್ಪಾಜಿ ರಾವ್‌ಗೆ ಜಹಗೀರೆಂದು ನೀಡಲ್ಪಟ್ಟ ದಾವಣಗೆರೆಯ ಉತ್ಕೃರ್ಷಕ್ಕೆ ಅಪ್ಪಾಜಿರಾವನ ಕೊಡುಗೆ ಅಪಾರವಾಗಿದೆ

ವಿಸ್ತೀರ್ಣ ಮತ್ತು ಜನ ಸಂಖ್ಯೆ :-

ಈ ಜಿಲ್ಲೆಯ ೬ ತಾಲೂಕುಗಳಲ್ಲಿ ೯೩೦ ಹಳ್ಳಿಗಳಿವೆ. ಜಿಲ್ಲೆಯ ಒಟ್ಟು ವಿಸ್ತೀರ್ಣ ೬೦೧೮ ಚ.ಕಿ.ಮಿ ಇದೆ. ಇಲ್ಲಿಯ ಜನಸಂಖ್ಯೆ (೨೦೦೧ರ ಪ್ರಕಾರ) ೧೭,೯೦,೯೫೨ ಇದೆ. ಜಿಲ್ಲೆಯ ಸಾಕ್ಷರತೆ ಪ್ರಮಾಣ ೬೭.೪% ಇದೆ ಇದು ರಾಜ್ಯದ ೧೫ನೇ ದೊಡ್ಡ ಜಿಲ್ಲೆ.

ಜಲ ಸಂಪನ್ಮೂಲ :-

ಶಿವಮೊಗ್ಗ ಜಿಲ್ಲೆಯಿಂದ ಹರಿದು ಬರುವ ತುಂಗಭದ್ರ ನದಿ ಈ ಜಿಲ್ಲೆಗೆ ಅತ್ಯಂತ ಉಪಯುಕ್ತವಾಗಿದೆ ಈ ನದಿಯು ಹೊನ್ನಾಳಿ, ಚನ್ನಗಿರಿ, ಹರಿಹರ, ಹರಪನಹಳ್ಳಿ ಈ ನಾಲ್ಕು ತಾಲೂಕುಗಳಲ್ಲಿ ಹರಿದು ಸುಮಾರು ೫೦ ಸಾವಿರ ಹೆಕ್ಟೇರ್ ಭೂಮಿಗೆ ನೀರುಣಿಸುತ್ತದೆ.

ಅರಣ್ಯ ಸಂಪತ್ತು : ಜಿಲ್ಲೆಯಲ್ಲಿ ಸುಮಾರು ೮೯೯೧೮ ಹೆಕ್ಟೇರ್ ಅರಣ್ಯ ಪ್ರದೇಶವಿದೆ.

ಮುಖ್ಯ ಬೆಳೆ : ಹತ್ತಿ, ನೆಲಗಡಲೆ, ಸೂರ್ಯಕಾಂತಿ, ಮೆಕ್ಕೆಜೋಳ, ಜೋಳ, ತೊಗರಿ, ಭತ್ತ, ನವಣೆ, ಗೋಧಿ, ಸಾಸುವೆ, ತಂಬಾಕು, ಬಾಳೆ, ತೆಂಗು, ಕಂಗು, ಹಣ್ಣು ತರಕಾರಿ ಮುಂತಾದವುಗಳು. ಜಗಳೂರು ಅಡಿಕೆ ತುಂಬಾ ಪ್ರಸಿದ್ದಿಯಾಗಿದೆ.

ಹವಾಗುಣ: ಜಿಲ್ಲೆಯಲ್ಲಿ ಬೇಸಿಗೆ ತಾಪ ಹೆಚ್ಚು. ಮಳೆ ಕಡಿಮೆ. ಚಳಿಗಾಲ ಹಿತಕರ. ಇಲ್ಲಿಯ ವಾರ್ಷಿಕ ಮಳೆಯ ಪ್ರಮಾಣ ೬೨೯.೧೦ ಮಿ.ಮಿ. ಇರುತ್ತದೆ.

 

ನಗರ ದೇವತೆ ದುರ್ಗಾಂಬಿಕಾ

ನಗರ ದೇವತೆ ದುರ್ಗಾಂಬಿಕೆಗೆ ದುರುಗಮ್ಮ, ದುಗ್ಗಮ್ಮ, ದುರುಗವ್ವ ಮುಂತಾದ ಹೆಸರುಗಳಿವೆ. ಮೂರು ಗರ್ಭಗುಡಿಗಳಿವೆ. ದುರ್ಗಾಂಬಿಕ, ವಿಘ್ನೇಶ್ವರ, ನಾಗರ ಕಲ್ಲು ಸಪ್ತಮಾತೃಕೆಯರು ಮುಂತಾದ ವಿಗ್ರಹಗಳಿದ್ದು ಒಂದೊಂದು ಒಂದು ಕಥೆ ಹೇಳುತ್ತದೆ ಇಲ್ಲಿ  ೨ ವರ್ಷಗಳಿಗೊಮ್ಮೆ ವೈಭವದ ಜಾತ್ರೆ ನಡೆಯುತ್ತದೆ.

 

 ಶ್ರೀ ರಂಗಾವಧೂತರ ಮಠ

’ಸುಲಿದ ಬಾಳೆಯಹಣ್ಣಿನಂದದಿ’ ಎಂದು ಕನ್ನಡ ಭಾಷೆಯ ಸರಳತೆಯನ್ನು ಬಣ್ಣಿಸಿದ ರಂಗಾವಧೂತರು ಕ್ರಿ.ಶ. ೧೬೭೫ ರ ಕನ್ನಡದ ಕವಿ ಮಹಲಿಂಗರಂಗ ಎಂಬ ಕಾವ್ಯ ನಾಮ ಹೊಂದಿದ ಇವರು ಭಾಮಿನಿ ಷಟ್ಪದಿಯಲ್ಲಿ ’ಅನುಭವಾಮೃತ’ ಕೃತಿಯನ್ನು ರಚಿಸಿದ್ದಾರೆ ನಗರದ ರೇಣುಕಾ ಮಂದಿರದ ಹಿಂಭಾಗದಲ್ಲಿ ಈ ಕವಿಯ ಸಮಾಧಿಯಿದ್ದು ಅದಕ್ಕಾಗಿ ಇಲ್ಲಿ ಕವಿಯ ಮೂರ್ತಿ ಪ್ರತಿಷ್ಠಾಪಿಸಿ ಗದ್ದುಗೆ, ಮಠರೂಪಿಸಿ ಇವರ ಸೇವಾರ್ಥ ಭಕ್ತರು ಸತ್ಸಂಗ ನಡೆಸಿದ್ದಾರೆ.

 

ಚಿಗಟೇರಿ ಸಾರ್ವಜನಿಕ ಜಿಲ್ಲಾ ಆಸ್ಪತ್ರೆ


೧೯೭೪ ರಲ್ಲಿ ೧೫೦ ಹಾಸಿಗೆಗಳಿದ್ದ ಆಸ್ಪತ್ರೆ ಈಗ ಸಾವಿರಕ್ಕೂ ಹೆಚ್ಚು ಹಾಸಿಗೆಯ ಆಸ್ಪತ್ರೆಯಾಗಿ ಬೆಳೆದಿದೆ ಇಲ್ಲಿ ಶುಶ್ರೂಕರ ತರಬೇತಿ ಕೇಂದ್ರವಿದೆ. ಈ ಸಾರ್ವಜನಿಕ ಆಸ್ಪತ್ರೆಯಲ್ಲಿ ನುರಿತ ವೈದ್ಯರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆ ಎದುರಿಗೆ ಶ್ರೀ ಸರ್ ಎಂ. ವಿಶ್ವೇಶ್ವರಯ್ಯ ಉದ್ಯಾನವನವಿದೆ ಇದು ಬಹಳ ದೊಡ್ಡದಾಗಿದ್ದು, ಅನೇಕ ಜಾತಿಯ ಗಿಡ ಮರಗಳಿಂದ ಕೂಡಿದೆ ಮಕ್ಕಳಿಗೆ ಆಕರ್ಷಣೀಯವಾಗಿದೆ. ಇದರ ಬಳಿಯೇ ಮೋತಿ ವೀರಪ್ಪ ಕಾಲೇಜು ಮತ್ತು ಅದಕ್ಕೆ ಹೊಂದಿಕೊಂಡಂತೆ ದಾವಣಗೆರೆ ದಕ್ಷಿಣ ವಲಯ ಬಿ.ಆರ್.ಸಿ. ಕಛೇರಿಯೂ ಇದೆ.

 

ಕುಂದುವಾಡ ಕೆರೆ

ಈ ಕೆರೆಯು ೨೦೦೪-೦೫ ರಲ್ಲಿ ನವೀಕೃತಗೊಂಡು ದಾವಣಗೆರೆ ನಗರದ ಜನತೆಗೆ ಕುಡಿಯುವ ನೀರಿನ ಮೂಲವಾಗಿ ಪರಿವರ್ತನೆಗೊಂಡಿದೆ. ಭದ್ರಾ ನದಿಯ ನೀರನ್ನು ಸಂಗ್ರಹಿಸಿ ಶುದ್ದೀಕರಿಸುತ್ತಾರೆ. ಮೀನು ಸಾಕಾಣಿಕೆಗೆ, ವಾಯುವಿಹಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ದಾವಣಗೆರೆ ನಗರ ಕ್ರೀಡಾಂಗಣ :-

ಬಾಪೂಜಿ ಆಸ್ಪತ್ರೆಯ ಪಕ್ಕದ ವಿಶಾಲವಾದ ಮೈದಾನದಲ್ಲಿ ನಗರದ ಹೆಮ್ಮೆಯ ಕ್ರೀಡಾಂಗಣವಿದೆ. ಇದು ರಾಷ್ಠ್ರೀಯ ಹಬ್ಬಗಳ ಆಚರಣೆ ಮಾಡಲು ಅನುಕೂಲವಾಗಿದೆ. ವ್ಯಾಯಾಮ ಶಾಲೆ ಕೃತಕ ಗೋಡೆ ಚಾರಣ ತರಬೇತಿಯೂ ಕೂಡ ನಡೆಯುತ್ತದೆ.ಕ್ರೀಡಾಂಗಣದ ಉಸ್ತುವಾರಿ ಮಹಾನಗರ ಪಾಲಿಕೆಗೆ ಸೇರಿದೆ. ಇದಕ್ಕೆ ಸಂಬಂಧಿಸಿದಂತೆ ಬಾಲಕರ ಪ್ರೌಢಶಾಲಾ ಮೈದಾನದ ಆವರಣದಲ್ಲಿ ಅಂತರಾಷ್ಠ್ರೀಯ ಟೆನ್ನಿಸ್ ಕ್ರೀಡಾಂಗಣವೂ ನಿರ್ಮಾಣವಾಗಿದೆ.

ಆವರಗೊಳ್ಳ:-

ದಾವಣಗೆರೆಯಿಂದ ಕೊಂಡಜ್ಜಿ ರಸ್ತೆಯಲ್ಲಿರುವ ಈ ಗ್ರಾಮದಲ್ಲಿ ಶ್ರೀವೀರಭದ್ರಸ್ವಾಮಿ ದೇವಾಲಯವಿದೆ. ಇದರ ಪಕ್ಕದಲ್ಲಿ ಸುಮಾರು ೮೦೦ ವರ್ಷಗಳ ಚಾಲುಕ್ಯ ಶೈಲಿಯ ಈಶ್ವರ ದೇವಾಲಯವಿದೆ.

ಕಡಲೆಬಾಳು :-

ಶ್ರೀ ಆಂಜನೇಯ ಸ್ವಾಮಿ ದೇಸ್ಥಾನ ಪ್ರಸಿದ್ದವಾಗಿದ್ದು, ಶ್ರೀ ಮಧ್ವಾಚಾರ್ಯರು ಆಂಜನೇಯ ಸ್ವರೂಪರಾಗಿ ಈ ಶಿಲೆಯಲ್ಲಿ ಉದ್ಭವಿಸಿದರೆಂದು ಪ್ರತೀತಿ. ಕಲ್ಲಿನ ಮೇಲು ಭಾಗದಲ್ಲಿ ಆಂಜನೇಯ ಕೆಳಗಡೆ ಅರ್ಧ ಭಾಗದಲ್ಲಿ ಮಧ್ವಾಚಾರ್ಯರು, ಇನ್ನರ್ಧ ಭಾಗದಲ್ಲಿ ಭೀಮಸೇನ ದೇವರನ್ನು ಕಾಣಬಹುದು. ಉಡಿಸಲವ್ವನ ಗುಡಿ ಮುಂಭಾಗದಲ್ಲಿ ವೀರಗಲ್ಲು ಇದೆ. ಇಲ್ಲಿ ಮೂರು ಶಿಲಾ ಶಾಸನಗಳಿವೆ.

 

ದಾವಣಗೆರೆ ಜಿಲ್ಲಾ ಪಂಚಾಯತ್ ಕಛೇರಿ


ನಗರದ ಹದಡಿ ರಸ್ತೆಯಲ್ಲಿ ಸಾಗಿದರೆ ಸುಂದರ ವಿನ್ಯಾಸದ ಜಿಲ್ಲಾ ಪಂಚಾಯತ್ ಕಛೇರಿ ೨೩ ಎಕರೆ ವಿಸ್ತಾರದಲ್ಲಿ ನಿರ್ಮಾಣಗೊಂಡಿದೆ. ಈ ಕಟ್ಟಡ ಕಲೋನಿಯಲ್ ಮಾದರಿ ಕಟ್ಟಡವಾಗಿದೆ. ನೆಲ ಮಹಡಿ ಸೇರಿದಂತೆ ಮೂರು ಅಂತಸ್ತುಗಳ ಅರಮನೆಯಂತೆ ಮೂರು ಗುಮ್ಮಟಗಳಿಂದ ನೆಲೆಗೊಂಡಿದೆ ಈ ಕಟ್ಟಡದ ಮುಂದೆ ಸುಂದರ ಉದ್ಯಾನವನವಿದೆ.

 

ಶಾಮನೂರು

ಶಾಮನೂರು ಆಂಜನೇಯ ಸ್ವಾಮಿ ದೇವಸ್ಥಾನ

ದಾವಣಗೆರೆ ನಗರದಿಂದ ಎರಡು ಕಿ. ಮೀ ದೂರದಲ್ಲಿರುವ ಶಾಮನೂರಿನ ಬಲ ಭಾಗದ ಊರಿನ ಕೇಂದ್ರದಲ್ಲಿ ಶ್ರೀ ಆಂಜನೇಯ ಸ್ವಾಮಿಯ ಬೃಹತ್ ದೇವಾಲಯವಿದೆ. ೬ ಅಡಿ ಎತ್ತರದ ಆಂಜನೇಯನ ವಿಗ್ರಹ ಸುಂದರವಾಗಿದೆ.


ತೋಳಹುಣಸೆಯ ಶಿವಗಂಗೋತ್ರಿ

ದೂರ ಎಷ್ಟು ?
ತಾಲ್ಲೂಕು : ದಾ. ದಕ್ಷಿಣ
ಜಿಲ್ಲೆಯಿಂದ : ೦೬ ಕಿ.ಮೀ.
ತಾಲ್ಲೂಕಿನಿಂದ : ೦೬ ಕಿ.ಮೀ.

ಕುವೆಂಪು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ಒಳಪಟ್ಟ ಅಧ್ಯಯನ ಕೇಂದ್ರವಿದು. ೭೪ ಎಕರೆ ವಿಸ್ತೀರ್ಣದಲ್ಲಿ ಸ್ನಾತಕೋತ್ತರ ಕೇಂದ್ರವಿದೆ. ವಿವಿಧ ವಿಷಯಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿಶೇಷ ಗ್ರಂಥಾಲಯ, ವಿದ್ಯಾರ್ಥಿ ವಿದ್ಯಾರ್ಥಿನಿಯರ ಪ್ರತ್ಯೇಕ ವಸತಿ ಗೃಹ ಹಾಗೂ ರಮ್ಯ ಉದ್ಯಾನ ವನವಿದೆ.