ಕೆರೆ ಹಳ್ಳ ಬಾವಿಗಳು, ಮೈದೆಗೆದರೆ
ಗುಳ್ಳೆ ಗೊರಚೆ ಚಿಪ್ಪುಗಳು ಕಾಣಬಹುದು.
ವಾರಿಧಿ ಮೈದೆಗೆದರೆ ರತ್ನಂಗಳು ಕಾಣಬಹುದು!
ಕೂಡಲ ಸಂಗನ ಶರಣರು ಮನದೆರೆದು ಮಾತನಾಡಿದರೆ
ಲಿಂಗವೆ ಕಾಣಬಹುದು.

ಬಸವಣ್ಣನವರ ಈ ವಚನ ಕವಿ-ಕಾವ್ಯದ ಪರವಾಗಿ ಅಮೋಘವಾದ ಅರ್ಥವನ್ನು ಧ್ವನಿಸುತ್ತದೆ. ಕಾವ್ಯ ರಾಶಿಯನ್ನೆಲ್ಲ ನಾವು ಹೀಗೆ ಮೂರು ವಿಭಾಗಗಳನ್ನಾಗಿ ವಿಂಗಡಿಸಬಹುದೆಂದು ತೋರುತ್ತದೆ; ದೈನಂದಿನ ಸಾಧಾರಣ ವಾಸ್ತವ ವಿಷಯಗಳಷ್ಟರಲ್ಲೆ ರಮಿಸಿ ವಿರಮಿಸುವ, ಅಷ್ಟರಿಂದಲೇ ತೃಪ್ತಿಯನ್ನು ಪಡೆಯುವ ಕವಿಗಣ ಎಲ್ಲ ಕಾಲದಲ್ಲೂ ಉಂಟು. ಅಂಥವರ ಸಾಹಿತ್ಯದ ಸ್ವರೂಪವನ್ನು ಮೊದಲ ರೂಪಕ ಸ್ಪಷ್ಟಪಡಿಸುತ್ತದೆ. ಅಂತೆಯೇ ಅಂಥ ಸಾಹಿತಿಗಳ ವ್ಯಕ್ತಿತ್ವವನ್ನು ‘ಕೆರೆ’, ‘ಹಳ್ಳ’, ‘ಬಾವಿ’- ಎನ್ನುವ ಪ್ರತಿಮೆಗಳು ಸೂಚಿಸುತ್ತವೆ. ಮತ್ತೆ ಕೆಲವರುಂಟು ‘ವಾರಿಧಿ’ ಸದೃಶರಾದ ಮಹಾಕವಿಗಳು, ಅವರ ಕಾವ್ಯಗಳಲ್ಲಿ ಎಲ್ಲ ಕಾಲಕ್ಕೂ ಬೆಲೆಯುಳ್ಳ ಚಿರಂತನ ಭಾವರತ್ನಗಳಿವೆ. ಎರಡನೆಯ ರೂಪಕ ಅಂಥ ಮಹಾಕವಿಗಳ ವ್ಯಕ್ತಿತ್ವವನ್ನು, ಅವರ ಕಾವ್ಯದ ಮಹತ್ವವನ್ನು ಸೂಚಿಸುತ್ತದೆ. ಮೂರನೆಯದಂತೂ ಇವೆರಡನ್ನೂ ಮೀರಿದ ಶರಣಸಾಹಿತ್ಯದ, ಅನುಭಾವಿಗಳ ಅಮೃತವಾಣಿಯ ಮಹಿಮೆಯನ್ನು ವಿವರಿಸುತ್ತದೆ. ಈ ಶರಣರು ‘ಮನದೆರೆದು ಮಾತನಾಡಿದರೆ’ ‘ಲಿಂಗವೆ’, ದೈವೀ ಪ್ರಕಾಶವೇ ಕಾಣುತ್ತದೆಯಂತೆ.

ಯಾರ ಪಾಲಿಗೆ ಈ ಇರವು ಇಂದ್ರಿಯಾರಾಮತೆಯ ತೊಟ್ಟಿಲಾಗದೆ, ದೈವೀ ತೇಜಸ್ಸಿನೆಡೆಗೆ ಮೆಟ್ಟಿಲಾಗಿದೆಯೋ, ಯಾರು ತಮ್ಮ ದೈನಂದಿನ ಸಮಸ್ತ ವ್ಯಾಪಾರಗಳಲ್ಲಿ, ನೆನಹಿನಲ್ಲಿ, ಮನದಲ್ಲಿ ದೇವರನ್ನಲ್ಲದೆ ಬೇರೆಯದನ್ನು ಇರಗೊಡಿಸರೋ ಅಂಥ ಶರಣರ, ದಾಸರ ನುಡಿಗಳಲ್ಲಿ ಲಿಂಗವಲ್ಲದೆ, ದೈವೀ ತೇಜಸ್ಸಲ್ಲದೆ ಇನ್ನೇನು ತಾನೆ ಕಂಡೀತು! ಈ ಲೋಕದ ಚೆಲುವಿಗೆ ಬೆರಗಾಗಿ ಆ ಆಶ್ಚರ‍್ಯಾನುಭವವನ್ನೆತ್ತಿ ಬಣ್ಣಿಸುವುದಾಗಲಿ, ತಮ್ಮ ಕಲ್ಪನೆಯ ರಂಗಿನಿಂದ ಚೆಲುವಿನ ಅನುಭವವನ್ನು ಸಿಂಗರಿಸಿ ಹಾಡುವುದಾಗಲಿ ಇವರ ಪಾಲಿಗೆ ಸಲ್ಲದ ಕಾರ‍್ಯ. ಅವರು ಈ ಲೋಕದ ಚೆಲುವನ್ನು ಕಂಡರೂ, ಒಲಿದರೂ, ಅವರ ಕಣ್ಣು ಅದರಾಚೆಯ ಬೆಳಕಿಗೆ ಸದಾ ಕಾತರಿಸುವ ಸ್ವಭಾವದ್ದು. ಈ ಎಲ್ಲ ಚೆಲುವಿನೊಳಗೆ ಈ ಚೆಲುವಿಗೆ ಪ್ರೇರಣೆಯಾಗಿ, ಸ್ಫೂರ್ತಿಯಾಗಿ ಇರತಕ್ಕದ್ದೇನು, ಅದರ ಸ್ವರೂಪವೇನು- ಎಂಬ ರಸಜಿಜ್ಞಾಸೆಯೇ ಇವರ ಪರಿಭಾವನೆಯ ವಸ್ತು. ಈ ಲೋಕವನ್ನು ನೋಡಿ, ಅದರ ಚೆಲುವನ್ನು ನೋಡಿ ಕವಿಯ ಹಾಗೆ ಈ ಶರಣರಿಗೆ ಬೆರಗೇನೊ ಕವಿಯುತ್ತದೆ. ಜೇಡರ ದಾಸಿಮಯ್ಯ ಈ ಲೋಕವನ್ನು ನೋಡಿ ಎತ್ತಿದ ಉದ್ಗಾರವಿದು-

ಶರಧಿಯಮೇಲೆ ಧರೆಯ ಕರಗದಂತಿರಿಸಿದೆ!
ಅಂಬರಕ್ಕೆ ಗದ್ದುಗೆ ಬೋದುಗೆ ಇಲ್ಲದಂತಿರಿಸಿದೆ!

ಸುತ್ತಲೂ ಕಡಲಿನ ಅಪಾರ ಜಲರಾಶಿ, ನಡುವೆ ಈ ನೆಲ. ಅದು ಹೇಗೆ ಈ ನೆಲದ ಮಣ್ಣು ಕರಗಿ ಹೋಗದೆ ಇದೆ! ಮೇಲಿನ ಆಕಾಶ ನೀಲಿಯ ಗುಮ್ಮಟದಂತೆ ತೋರುತ್ತದೆ. ಆದರೆ ಅದನ್ನು ಹಿಡಿದು ನಿಲ್ಲಿಸಿರುವ ಯಾವ ಗದ್ದುಗೆಯೂ ಬೋದುಗೆಯೂ ಇಲ್ಲವಲ್ಲ! ಎಂಥ ಬೆರಗು ಇದು. ಕವಿಸಹಜವಾದ ಬೆರಗು. ಅಷ್ಟೇ ಏಕೆ? ಸುತ್ತಣ ತರುಮರಾದಿಗಳನ್ನು ನೋಡಿ: ಮಾವಿನಲ್ಲಿ ಸಿಹಿ, ಈಳೆಯಲ್ಲಿ ಹುಳಿ, ಮರುಗ ಮಲ್ಲಿಗೆಯಲ್ಲಿ ಎಂಥ ಪರಿಮಳ! ನೆಲ ಒಂದೇ, ಜಲ ಒಂದೇ. ಇದನ್ನು ಕುರಿತು ಅಕ್ಕಮಹಾದೇವಿ ಹೇಳುತ್ತಾಳೆ-

ಈಳೆ ನಿಂಬೆ ಮಾವು ಮಾದಲಕ್ಕೆ
ಹುಳಿ ನೀರನೆರೆದವರಾರಯ್ಯ!
ಕಬ್ಬು ಬಾಳೆ ಹಲಸು ನಾರಿಕೇಳಕ್ಕೆ
ಸಿಹಿನೀರನೆರೆದವರು ಯಾರಯ್ಯ
ಕಳವೆ ಶಾಲಿಗೆ ಓಗರದ ಉದಕವನೆರೆದವರಾರಯ್ಯಾ
ಮರುಗ ಮಲ್ಲಿಗೆ ಪಚ್ಚೆಗೆ
ಪರಿಮಳದುದಕವನೆರೆದವರಾರಯ್ಯಾ!
ಇಂತೀ ಜಲವು ಒಂದೇ ನೆಲವು ಒಂದೇ
ಆಕಾಶವು ಒಂದೇ-

ಈ ಆಶ್ಚರ್ಯವನ್ನು ಕಂಡ ಕಣ್ಣು, ಆಶ್ಚರ್ಯವನ್ನು ಮಾತಿನಲ್ಲಿ ಕಟ್ಟಿದ ರೀತಿ ಎರಡೂ ಕವಿಗೆ ಮಾತ್ರ ಸಾಧ್ಯವಾದುವು. ಬೆಟ್ಟದ ತುದಿಯಲ್ಲಿ ಬೆಳೆದ ವೃಕ್ಷವೊಂದನ್ನು ನೋಡಿ ಕನಕದಾಸರು ಬೆರಗಾಗಿದ್ದಾರೆ-

ಬೆಟ್ಟದಾ ತುದಿಯಲ್ಲಿ ಹುಟ್ಟಿರುವ ವೃಕ್ಷಕ್ಕೆ
ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ!

ಎಂದು. ಈ ಎಲ್ಲ ಬೆರಗೂ ವಿಸ್ಮಯಮೂಲವಾದುದು; ಆದರೆ ಸೃಷ್ಟಿಯ ಈ ವಿಸ್ಮಯಕ್ಕೆ ಈ ಶರಣರು- ದಾಸರು ಬೆರಗಾದರೂ, ಈ ಎಲ್ಲ ಬೆರಗು ಕವಿಯಂತೆ ಕೇವಲ ಚೆಲುವಿನ ಪರಿಯನ್ನು ಕುರಿತ ಪರಿಭಾವನೆಯಿಂದ ಮೂಡಿದುದಲ್ಲ; ಅದರ ಹಿಂದಿರುವ ಪ್ರೇರಕಶಕ್ತಿಯನ್ನು ಕುರಿತ ಜಿಜ್ಞಾಸೆಯಿಂದ ಮೂಡಿದುದು. ಕೇವಲ ಕವಿಗೂ, ಅನುಭಾವಿಗೂ ಇರುವ ವ್ಯತ್ಯಾಸವೇ ಇದು; ಸಾಮಾನ್ಯ ಕವಿ ಎಲ್ಲಿ ಬಂದು ನಿಲ್ಲುತ್ತಾನೆಯೋ, ಅನುಭಾವಿ ಕವಿ ಅಲ್ಲಿಂದ ಹೊರಡುತ್ತಾನೆ. ದಾಸಿಮಯ್ಯ, ಅಕ್ಕ ಮಹಾದೇವಿ, ಕನಕದಾಸರೂ ಈ ಸೃಷ್ಟಿಯ ಚೆಲುವನ್ನು ನಮಗೆ ಬಣ್ಣಿಸುತ್ತಿಲ್ಲ, ಅದರ ರಮ್ಯೋಜ್ವಲ ವರ್ಣವಿಲಾಸಕ್ಕಾಗಲಿ, ಅದನ್ನು ತಮ್ಮ ಕಲ್ಪನೆಯಿಂದ ಬೇರೊಂದೆಂಬಂತೆ ಚಿತ್ರಿಸುವುದಕ್ಕಾಗಲಿ ಹೊರಟವರಲ್ಲ. ಎಲ್ಲರನ್ನೂ ಸೆಳೆಯುವ ಬಹಿರಂಗ ಅವರಿಗೆ ಅಪ್ರಕೃತ. ಆದರೆ ಎಲ್ಲ ಬಹಿರಂಗದಾಚೆಗೆ ಇರುವ ಶಿವನ ನೆಲೆಗೆ ಇವರ ಗಮನ. ಈ ಎಲ್ಲ ಚೆಲುವಿನ ಲೀಲೆಯನ್ನು ಕಣ್ಣಮುಂದೆ ತಂದು ನಿಲ್ಲಿಸಿ, ತಾನು ಮಾತ್ರ ಮರೆಯಾಗಿ ಮನಸ್ಸನ್ನು ಕೆಣಕುವ ಆ ಚೆಲುವಿನ ನೆಲೆಯನ್ನು ಕುರಿತು ಇವರು ವಿಚಾರ ಮಾಡಿದ್ದಾರೆ. ಈ ಮಾಯೆಯ ಪರಿಯನ್ನು ಕುರಿತು ಕನಕದಾಸರು-

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ
ನೀ ದೇಹದೊಳಗೋ ನಿನ್ನೊಳು ದೇಹವೋ

ಎಂದು ಹೊರಟು-

ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನ ಒಳಗೊ ಮನಸು ಜಿಹ್ವೆಯ ಒಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ

ಎಂದು ದೈವದ ಮಾಯೆಯನ್ನು ಕುರಿತು ನಡೆಸಿದ ಈ ತರ್ಕ ಸೌಂದರ್ಯ ಜಿಜ್ಞಾಸೆಯೂ ಆಗಿದೆ. ಸೌಂದರ್ಯವೆಂದರೇನು? ಅದು ವ್ಯಕ್ತಿನಿಷ್ಠವೋ ವಸ್ತುನಿಷ್ಠವೋ, ಅಥವಾ ಈ ಎರಡೂ ಅಲ್ಲದ ಈ ಎರಡನ್ನೂ ಒಳಗೊಳ್ಳುವ ಮೂರನೆಯದೊಂದು ಶಕ್ತಿನಿಷ್ಠವೋ ಎಂಬ ತರ್ಕ ಈ ರೀತಿಯದೇ. ಐಂದ್ರಿಯ ಹಾಗೂ ಕಲ್ಪನಾಮಯ ಹಂತಗಳನ್ನು ಮೀರಿ ಚಿತ್ತದ ಚೆಲುವಿನ ನೆಲೆಯನ್ನೇರಿ ಆತ್ಮ ಸೌಂದರ್ಯದ ಸೀಮೆಯಲ್ಲಿ ವಿಹರಿಸುವ ಈ ಸಂತರ ದೃಷ್ಟಿ, ಕಡಕೋಳು ಮಡಿವಾಳೇಶ್ವರನ ಪ್ರಕಾರ,

ಕಣ್ಣಿಗೆ ಕಣ್ಣಾಗಿಹನಂತೇ ಶಿವ
ಕಣ್ಣುತೆರೆದು ತನ್ನನರಸುವ ಜನರಿಗೆ
ಬಣ್ಣ ಬಣ್ಣವಾಗಿಹನಂತೆ

ಎನ್ನುವುದನ್ನು ಕಾಣುತ್ತದೆ. ಮೊದಲು ಈ ‘ಶಿವ’ ಕಾಣುವುದು ಸೌಂದರ್ಯವಾಗಿ, ಬಣ್ಣಬಣ್ಣವಾಗಿ. ಬಣ್ಣ ಸೌಂದರ್ಯದ ಭಾಷೆ. ಲೋಕದ ಚೆಲುವು ನಮ್ಮ ಮನಸ್ಸನ್ನು ಮೊದಲು ಸೆರೆ ಹಿಡಿಯುವುದು ಬಣ್ಣಗಳ ಮೂಲಕವಾಗಿಯೇ. ಯಾರು ಕಣ್ಣನ್ನು ತೆರೆದು ಈ ಸೃಷ್ಟಿಕರ್ತನನ್ನು ಹುಡುಕಲು ಹೊರಡುತ್ತಾರೋ ಅವರ ಕಣ್ಣಿಗೆ ಭಗವಂತ ಬಣ್ಣ ಬಣ್ಣವಾಗಿ ಅಥವಾ ಸೌಂದರ್ಯರೂಪಿಯಾಗಿ ಕಾಣುತ್ತಾನೆ. ಆದರೆ ಹೀಗೆ ಬಣ್ಣವಾಗಿರುವವನೂ ಅವನೇ, ಆ ಬಣ್ಣಗಳನ್ನು ಕಾಣುವ ಆಸ್ವಾದಿಸುವ, ನಮ್ಮ ಕಣ್ಣಿನ ಕಣ್ಣಾಗಿರುವವನೂ ಅವನೇ, ಯಾವ ಶಕ್ತಿ ಸೌಂದರ್ಯವಾಗಿ ಒಂದೆಡೆ ಹೊರಹೊಮ್ಮಿ ವಸ್ತುನಿಷ್ಠವೆಂಬಂತೆ ತೋರುತ್ತದೆಯೋ, ಅದೇ ಶಕ್ತಿ ನೋಡುವವನ ಕಣ್ಣಿನ ಕಣ್ಣಾಗಿ ಆಸ್ವಾದಿಸುವಲ್ಲಿ ವ್ಯಕ್ತಿನಿಷ್ಠವೆಂಬಂತೆಯೂ ತೋರುತ್ತದೆ. ‘ಒಳಗಿನ ಆತ್ಮ’ ‘ಹೊರಗಿನ ಆತ್ಮ’ ಈ ಎರಡರ ಸಂಗಮದಲ್ಲೇ ರಸ. ಅಂತರಂಗ ಬಹಿರಂಗಗಳ ಆತ್ಮಸಂಗಮದಲ್ಲೇ ಆನಂದ. ಈ ಚೋದ್ಯವನ್ನು ಕುರಿತು ಅಲ್ಲಮ ಪ್ರಭುಗಳು ಒಂದೆಡೆ-

ಕಣ್ಣಮೊದಲಲ್ಲಿ ಕುಳ್ಳಿರ್ದು
ಬಣ್ಣದೋರುವ ಪರಿಯ ನೋಡಾ!

ಎಂದು ಸೂತ್ರರೂಪದಲ್ಲಿ ಹೇಳಿದ್ದಾರೆ. ಈ ಎಲ್ಲ ಮಾತಿನಲ್ಲಿ ಶರಣರ ದಾಸರ ಸೌಂದರ್ಯ ಜಿಜ್ಞಾಸೆಯ ಸ್ವರೂಪವನ್ನು ಗುರುತಿಸಬಹುದು.

ಈ ಸಂತರ ಪಾಲಿಗೆ ಸೃಷ್ಟಿಯ ಚೆಲುವು, ಆ ಚೆಲುವನ ಇರವಿಗೆ ಸಾಕ್ಷಿ. ಈ ಸೌಂದರ್ಯ, ಆ ಸುಂದರನ ಪ್ರಕಾಶನ. ಈ ಎಲ್ಲ ಸೌಂದರ್ಯಕ್ಕೂ ಮೂಲವಾದ ಆ ಪರಮ ಸುಂದರನ ಚೆಲುವನ್ನು ತಮ್ಮ ಧ್ಯಾನ ನೇತ್ರಗಳಿಂದ ಕಂಡು ಚಿತ್ರಿಸಿದ್ದಾರೆ. ಅದು ಇವರಿಗೆ ಪ್ರಧಾನವಾಗಿ ಎರಡು ರೀತಿಯಲ್ಲಿ ಕಂಡಿದೆ: ಸಾಕಾರ ಸುಂದರವಾಗಿ ತೋರಿದೆ, ನಿರಾಕಾರ ಬಂಧುರವಾಗಿ ತೋರಿದೆ. ಸಾಕಾರದಲ್ಲಿ ಅದು ಮನೋಹರವಾಗಿ, ಸಾಲಂಕೃತವಾಗಿ, ಉಜ್ವಲವಾಗಿ ಪ್ರಿಯವಾಗಿ ತೋರಿದರೆ, ನಿರಾಕಾರದಲ್ಲಿ ಅದು ತೇಜಸ್ಸಾಗಿ, ಅರೂಪವಾಗಿ ಭವ್ಯವಾಗಿ, ಅನಿರ್ವಚನೀಯವಾಗಿ ತೋರಿದೆ. ಸಾಕಾರದ ಚೆಲುವು ವರ್ಣನೀಯವಾದರೆ, ನಿರಾಕಾರದ ಚೆಲುವು ಅವರ್ಣನೀಯವಾಗಿದೆ. ಸಾಕಾರವಾಗಿ ತೋರುವಲ್ಲಿ ಆಯಾ ಭಕ್ತರು ಯಾವ ಸಂಪ್ರದಾಯದ ಪಾತ್ರದಲ್ಲಿ ಬೆಳೆದವರೋ ಆ ಕಲ್ಪನೆಗಳಿಂದ ಮೂರ್ತವಾಗಿದೆ; ನಿರಾಕಾರದಲ್ಲಿ ಮಾತ್ರ ಅದು ಕೇವಲ ಬೆಳಕಾಗಿ, ಬಯಲಾಗಿ ಕಂಡಿದೆ. ದಾಸರಲ್ಲಿ ಪ್ರಧಾನವಾಗಿ ಕಾಣುವುದು ಸಾಕಾರ ಸೌಂದರ್ಯವಾದರೆ, ಶರಣರಲ್ಲಿ ಪ್ರಧಾನವಾಗಿ ಗೋಚರಿಸತಕ್ಕದ್ದು ನಿರಾಕಾರದ ಸೌಂದರ್ಯ.[1]

ಲೊಕದ ಚೆಲುವನ್ನು ಕಂಡು, ತನ್ಮೂಲಕ ಅದರ ಸೃಷ್ಟಿಕರ್ತನ ರೂಪವನ್ನು ಕಲ್ಪಿಸಿಕೊಳ್ಳುವ ಸಾಧಕರು ಮೊದಲು ತಮ್ಮ ಇಷ್ಟ ದೈವವನ್ನು ತಮಗೆ ಪ್ರಿಯವಾದ. ಸುಂದರವಾದ, ಪರಂಪರಾಗತವಾಗಿ ಒಪ್ಪಿಕೊಂಡ ರೂಪವೊಂದರಲ್ಲಿ ಧ್ಯಾನಿಸುವುದು ಸಹಜ. ಹರಭಕ್ತನಾದವನು ಹರನ ಸೌಂದರ್ಯವನ್ನು, ಹರಿಭಕ್ತನಾದವನು ಹರಿಯ ಸೌಂದರ್ಯವನ್ನು ಭಾವಿಸುವ ಬಗೆ ಬೇರೆ ಬೇರೆ. ಅವರವರ ಭಾವದಂತೆ ದೇವ. ಹರಿದಾಸರಿಗಂತೂ ಹರಿಯ ಚೆಲುವು ಅನುಪಮವಾದುದು. ‘ಈ ಪರಿಯ ಸೊಬಗು’ ಅವರಿಗೆ ಬೇರೆ ಯಾವ ದೇವರಲ್ಲಿಯೂ ಕಾಣಿಸದು. ಪುರಂದರದಾಸರು ಹಾಡಿದ್ದಾರೆ-

ಈ ಪರಿಯ ಸೊಬಗಾವ ದೇವರೊಳು ನಾ ಕಾಣೆ
ಗೋಪೀಜನಪ್ರಿಯ ಗೋಪಾಲಗಲ್ಲದೆ

ಎಂದು. ಈ ಚೆಲುವ ‘ದಿವಿಜರೊಡೆಯ’ ‘ಗರುಡಗಮನ’- ‘ಲಾವಣ್ಯದಲಿ ನೋಡೆ ಲೋಕ ಮೋಹಕ ಪಿತನು’. ಇಂಥ ಸೊಬಗಿನ ಮೂರ್ತಿಯನ್ನು ಭಾವಿಸಿಕೊಂಡು ಸಾಕ್ಷಾತ್ತಾಗಿ ಕಾಣಬೇಕೆಂದು ದಾಸರ ಕಣ್ಣು ಕಾತರಿಸುತ್ತದೆ. ಅವನನ್ನೇ ಕುರಿತು ಅವರು ಮೊರೆಯಿಡುತ್ತಾರೆ-

ಮೂರುತಿಯನು ನಿಲ್ಲಿಸೋ! ಎನ್ನ
ಹೃದಯ ಕಮಲದೊಳು ಒದಗಿ ನೆನೆಯುವಂತೆ! ನಿನ್ನ
ಮೂರುತಿಯನೆ ನಿಲ್ಲಿಸೋ

ಎಂದು. ಆ ಮೂರ್ತಿ ಹೇಗೆ ತಮಗೆ ಕಂಡರೆ ಇಷ್ಟ ಎನ್ನುವುದನ್ನು ಕುರಿತು ಅವರು ದೇವರಿಗೇ ನಿರ್ದೇಶನ ಕೊಡುವಂತೆ ತೋರುತ್ತದೆ-

ಎಳ ತುಳಸಿಯ ವನಮಾಲೆಯು ಕೊರಳೊಳು
ಹೊಳೆವ ಪೀತಾಂಬರ ಉಡಿಯೊಳೊಪ್ಪುವ ನಿನ್ನ||
ಮುತ್ತಿನಹಾರ ನವರತ್ನದುಂಗುರ ಬೆರಳೊಳು
ಮತ್ತೆ ಶ್ರೀಲಕುಮಿಯ ಉರದೊಳೊಪ್ಪುವ ನಿನ್ನ
ಮೂರುತಿಯನೆ ನಿಲ್ಲಿಸೋ!

ತಾವು ಕಾಣಬೇಕಾದ ಮೂರ್ತಿ ಹೀಗಿರಬೇಕೆಂದು ಅವರ ಅಪೇಕ್ಷೆ. ಈ ಮೋಹನ ಮೂರ್ತಿಯೆ ಅವರ ಕಣ್ಣ ತುಂಬಾ. ಈ ನೆನಹು ಮನದಲ್ಲಿ ನಾಂದು ಕನಸಿನಲ್ಲಿಯೂ ಮೊಳೆತು ನಿಲ್ಲುತ್ತದೆ. ಆ ಕನಸಿನ ಅನುಭವವನ್ನು ಕುರಿತು-

ಕಂಡೆನಾ ಕನಸಿನಲಿ ಗೋವಿಂದನ|
ಕಂಡೆನಾ ಕನಸಿನಲಿ ಕನಕರತ್ನದ ಮಣಿಯ
ನಂದನ ಕಂದ ಮುಕುಂದನ ಚರಣವ.
ಉಟ್ಟ ಪೀತಾಂಬರ ಉಡಿಯ ಕಾಂಚೀಧಾಮ
ತೊಟ್ಟ ಮುತ್ತಿನಹಾರ ಕೌಸ್ತುಭವು.
…………………….
ಬಣ್ಣದ ತುಟಿ ಭಾವರಚನೆ ಸುಲಿಪಲ್ಲು
ಸಣ್ಣ ನಗೆಯ ನುಡಿ ಸವಿಮಾತಿನ
ಪುಣ್ಯ ಚರಿತ್ರನ ಪೊಳೆವ ಕಿರೀಟದ
ಕಣ್ಣುಮನ ತಣಿಯದು ಕಂಸಾರಿ ಕೃಷ್ಣನ
ಕಂಡೆನಾ ಕನಸಿನಲಿ ಗೋವಿಂದನ||

ಇದು ದಾಸರು ಕನಸಿನಲ್ಲಿ ಕಂಡ ಗೋವಿಂದನ ಚೆಲುವು. ಆ ಚೆಲುವು ಖಚಿತಾಕಾರ ಪೂರ್ಣವಾಗಿದೆ; ಸಾಲಂಕೃತವಾಗಿದೆ; ರಮ್ಯೋಜ್ವಲವಾಗಿದೆ; ಭೋಗಮೂರ್ತಿಯಾಗಿದೆ. ಭಕ್ತರಾದ ನಿಜಗುಣಶಿವಯೋಗಿಗಳು ಕಂಡ ಶಿವನ ಚೆಲುವು ಹೀಗೇ ಸಾಕಾರ ಸುಂದರವಾಗಿದೆ. ಒಂದೆಡೆ ಅವರು-

ಕೆಂಬೊಗರಿನ ಜಡೆಮುಡಿಯರಮನೆಯೊಳು
ಅಂಬುನಿತಂಬಿನಿಯಾಳ್ದನೆ
ಅಶ್ವತ ಕಂಬಲ ಕರ್ಣಾಕಲಿತನೆ
ಕಂತು ಕದಂಬಕ ರೂಪಕನೇ
…………
ಥಳಥಳಿಸುವ ತಂಬೆಳಗು ಬಿಸಿಲು ಸೆಕೆ
ಕಂಗಳ ಕಳೆವೆಳಗಿನ ಕತ್ತುರಿಗೆರೆಯನೆ
ಪೊಸಬಿಸದಳನೆ ಪೇರುರನೇ

ಎಂದು ಶಿವನನ್ನು ಕೀರ್ತಿಸಿದ್ದಾರೆ. ಇಲ್ಲಿಯೂ ಶಿವನು, ‘ಕಂತುಕದಂಬಕ ರೂಪಕ’ ನಾದವನು, ಥಳಥಳಿಸುವ ಬೆಳಕಿನ ಮೂರ್ತಿ. ಆದರೆ ಇಲ್ಲಿನ ಥಾಳಥಳ್ಯಕ್ಕೆ, ದಾಸರು ದರ್ಶಿಸಿದ ಗೋವಿಂದನಿಗಿರುವಂತೆ, ಹೊಳೆ ಹೊಳೆಯುವ ರತ್ನಾಭರಣಗಳು ಸೇರಿಕೊಂಡಿಲ್ಲ. ಇದು ಒಂದು ರೀತಿಯಲ್ಲಿ ತ್ಯಾಗದ ಸೌಂದರ‍್ಯವೆನ್ನ ಬಹುದು. ಅಕ್ಕ ಮಹಾದೇವಿ ಒಲಿದದ್ದು ಚೆಲುವನಾದ ಚನ್ನಮಲ್ಲಿಕಾರ್ಜುನನನ್ನು. ಅವಳು ತನ್ನ ‘ಲಿಂಗಪತಿ’ಯನ್ನು ಕಂಡದ್ದು ಹೀಗೆ-

ಹೊಳೆವ ಕೆಂಜೆಡೆಗಳ, ಮಣಿಮಕುಟ, ಒಪ್ಪುವ ಸುಲಿಪಲ್ಲ
ನಗೆಮೊಗದ ಕಂಗಳ ಕಾಂತಿಯಿಂ ಈರೇಳು ಭುವನಮಂ
ಬೆಳಗುವ ದಿವ್ಯ ಸ್ವರೂಪನ ಕಂಡೆ ನಾನು| ಕಂಡೆನ್ನ
ಕಂಗಳ ಬರ ಹಿಂಗಿತ್ತಿಂದು.

ಎಂದು ಹೇಳುವಲ್ಲಿ, ಶಿವನ ತ್ಯಾಗಮೂರ್ತಿಯ ಸೌಂದರ್ಯ, ರೂಪಾರೂಪಗಳ ಸೀಮೆಯಲ್ಲಿ ವ್ಯೋಮವ್ಯಾಪಕವಾಗಿದೆ. ಶರಣರಾಗಲಿ, ದಾಸರಾಗಲಿ ಮರುಳಾದುದು ಈ ‘ದಿವ್ಯ ಸ್ವರೂಪಕ್ಕೆ. ಹರನಾಗಲಿ, ಹರಿಯಾಗಲಿ ಭಕ್ತರ ಬಯಕೆಯಂತೆ, ಅವರಿಗೆ ಪ್ರಿಯತಮವಾದ, ಇಂದ್ರಿಯ ಗ್ರಾಹ್ಯವೂ ಆಗುವಂಥ ರೂಪದಲ್ಲಿ ಅವರಿಗೆ ಮೈದೋರಿದ್ದಾರೆ. ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನನ ಚೆಲುವಿಗೆ ವಶವಾಗಿ ಈ ಲೋಕದ ಚೆಲುವನ್ನೆಲ್ಲಾ ಕಳಪೆಯಾಗಿ ಕಂಡಂತೆ, ದಾಸರೂ ಚೆನ್ನಕೇಶವನ ‘ಈ ಪರಿಯ ಸೊಬಗ’ನ್ನು ಕಂಡು, ಲೋಕದ ಚೆಲುವಿನ ಬಗೆಗೆ ಇದ್ದ ರುಚಿಯನ್ನು ವರ್ಜಿಸಿಕೊಂಡರು. ಶರಣರು ಶಿವಪರವಾದ ವ್ಯಾಕುಲವನ್ನೂ, ತಮ್ಮ ಅಂತರಂಗದ ಲೋಕ ಸಂಚಾರೀ ಭಾವಗಳನ್ನೂ, ಶಿವಸ್ಥಾಯೀ ಭಾವಗಳನ್ನೂ ನೂರಾರು ಬಗೆಯ ರೂಪಕಗಳಲ್ಲಿ ತೋಡಿಕೊಂಡರೆ, ದಾಸರು ಆ ಪರಮನ ಚೆಲುವನ್ನು ನೂರಾರು ಭಾವಗಳ ಪಾತ್ರಗಳಲ್ಲಿ ತಮ್ಮನ್ನು ತಾವು ನಿಲ್ಲಿಸಿಕೊಂಡು ಹಾಡಿಕೊಂಡಿದ್ದಾರೆ.[2] ಅದರಲ್ಲಿಯೂ ಶ್ರೀಕೃಷ್ಣನ ಬಾಲಲೀಲೆಯ ರಮ್ಯತೆಯನ್ನು ಕುರಿತು ವಿಶೇಷವಾಗಿ ಹಾಡುವುದರ ಮೂಲಕ ಕೃಷ್ಣನ ಚೆಲುವನ್ನು ತಮ್ಮ ಧ್ಯಾನದ ವಸ್ತುವನ್ನಾಗಿ ಮಾಡಿಕೊಂಡಿದ್ದಾರೆ. ‘ಮೆಲ್ಲಮೆಲ್ಲನೆ ಬಂದು ಗಲ್ಲಕೆ ಮುತ್ತುಕೊಟ್ಟು ನಿಲ್ಲದೆ ಓಡಿಪೋದ’ ಆ ಕಳ್ಳ ಕೃಷ್ಣನ ಚಿತ್ರ, ತೊಟ್ಟಿಲಲ್ಲಿ ಮಲಗಿಕೊಂಡು ‘ಅಮ್ಮ, ಗುಮ್ಮನ ಕರೆಯದಿರೆ’ ಎಂದು ಗೋಗರೆಯುವ ಗೋಪಾಲನ ಚಿತ್ರ, ಮಣ್ಣು ತಿಂದು ಬಾಯ್ದೆರೆದು ತನ್ನ ತುಟಿಯುಂಗುರದಲ್ಲಿ  ಬ್ರಹ್ಮಾಂಡವನ್ನೆ ಯಶೋದೆಗೆ ತೋರಿಸಿದ ಆ ಮಾಯಾವಿಯ ಚಿತ್ರ- ಇಂಥ ಎಷ್ಟೋ ಚಿತ್ರಗಳಲ್ಲಿ ಕೃಷ್ಣನ ಬಾಲ ಲೀಲೆಗಳ ಸೊಗಸಿನಲ್ಲಿ ದಾಸರು ಕರಗಿದ್ದಾರೆ. ವಾತ್ಸಲ್ಯ ಭಾವದಲ್ಲಿ, ಮಧುರ ಭಾವದಲ್ಲಿ, ದಾಸ್ಯ ಭಾವದಲ್ಲಿ ನಿಂತು ಗೋಪಾಲನ ಚೆಲುವನ್ನು ಹಾಡಿದ್ದಾರೆ. ಒಂದೆಡೆ ಗೋಪೀಭಾವದ ಗೀತೆಯಲ್ಲಿ, ಗೋಪಿಯೊಬ್ಬಳು ತನ್ನ ಮನೆಯಲ್ಲಿ ಆದ ಮಾರ್ಪಾಟುಗಳನ್ನು ಗಮನಿಸಿ-

ಯಾರೇ ಬಂದವರು, ಮನೆಗೆ ಮತ್ಯಾರೆ ಬಂದವರು
ನಾರಾಯಣ ಕೃಷ್ಣ ನಾಥನಲ್ಲದೆ ಮನೆಗೆ
ಯಾರೇ ಬಂದವರು?

ಎಂದು ಹೇಳಿಕೊಳ್ಳುತ್ತಾಳೆ. ಪ್ರಶ್ನೆ, ತಟಕ್ಕನೆ ಉತ್ತರ-ಈ ಎರಡೂ ಬೆಸೆದುಕೊಂಡ ರೀತಿಯಲ್ಲಿ ಕಂಡು ಬರುವ ತೀರ್ಮಾನ ಅರ್ಥಪೂರ್ಣವಾಗಿದೆ. ಏಕೆಂದರೆ ಅವನು ಮನೆಗೆ ಬಂದುದಕ್ಕೆ ಸಾಕಷ್ಟು ಸಾಕ್ಷಿಗಳಿವೆ-

ವಜ್ರರೇಖೆಗಳಿವೆ ಮನೆಯಲ್ಲಿ
ಗೆಜ್ಜೆ ಧ್ವನಿ ಕೇಳಿಬರುತಿವೆ.
ವಜ್ರಮಾಣಿಕ್ಯವೆಲ್ಲ ಹರಿದು ಬಿದ್ದಿವೆ
ಮಜ್ಜಿಗೆಯೊಳಗೆ ಕಾಣ್ವ ಬೆಣ್ಣೆಯ ಕಾಣೆ
ಕೊಂಬು ಕೊಳಲು ರಭಸಗಳಿವೆ ಕ-
ದಂಬ ಕಸ್ತೂರಿ ಕಂಪೆಸೆದಿವೆ
ಪೊಂಬಣ್ಣ ಚಲ್ಲಣ್ಣ ಚಲ್ಲಿದೆ, ಹಾಲು
ಕುಂಭ ಒಡೆದು ಮನೆ ತುಂಬ ಬೆಳ್ಳಗಾಯಿತು

ಇದೊಂದು ಅಪುರ್ವವಾದ ಕವಿತೆ. ಕೃಷ್ಣನ ಬಾಲಲೀಲೆಯ ರಮ್ಯಚೇಷ್ಟೆಗಳ ವರ್ಣನೆಯ ವಾಚ್ಯವೈಭವ ಹಾಗಿರಲಿ, ಭಕ್ತನ ಹೃದಯವೆಂಬ ಮನೆಯಲ್ಲಿ ಭಗವದಾಗಮನದಿಂದ ಆಗಿರುವ ಅಪೂರ್ವ ಘಟನೆಗಳನ್ನು ಇದು ಧ್ವನಿಸುತ್ತಿರುವ ರೀತಿ ಅದ್ಭುತವಾಗಿದೆ. ತಳಿರಂಥ ಬೆರಳಿನಲ್ಲಿ ಕೊಳಲನ್ನು ಹಿಡಿದು ಊದಿ, ಯಮುನೆಯ ನಡಿಗೆಯನ್ನೇ ಸಾವಧಾನವನ್ನಾಗಿಸಿದ, ಗೋವುಗಳಿಗೆ ಹಸಿವು ತೃಷೆಯನ್ನೇ ಮರೆಯಿಸಿದ ಮುರಳೀ ಮೋಹನನ ಲೀಲೆಯ ಸೊಗಸನ್ನು ಹಾಡಿದಂತೆಯೇ, ಕಾಳಿಂಗನ ಹೆಡೆಯ ಮೇಲೆ ಬಾಲಕೃಷ್ಣನು ಅಡಿದ ರೀತಿಯೂ ವಿಸ್ಮಯಕರವಾಗಿದೆ. ಅದನ್ನು ಕುರಿತು-

ಅಡಿದನೋ ರಂಗ ಅದ್ಭುತದಿಂದಲಿ
ಕಾಳಿಂಗನ ಫಣೆಯಲಿ
ಫಣವ ಮೆಟ್ಟಿ ಬಾಲವ ಕೈಯಲ್ಲಿ ಪಿಡಿದು
ಫಳ ಫಳಿಸುತ್ತ ನಾಟ್ಯವನಾಡೆ
ಚಂದ್ರಮಂಡಲದಂತೆ ಪೊಳೆಯುವ ಮುಖದೊಳು
ಚಲಿಸುವ ನೀಲ ಕೇಶಗಳಾಡೆ
ಕಾಲಲದುಂಗೆ ಗೆಜ್ಜೆ ಘಲುಘಲು ಘಲಿರೆನೆ
ಉಡಿಗೆಜ್ಜೆ ಗಂಟೆಗಳಾಡೆ
ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ
ಪುಟ್ಟ ಪಾದವ ಇಟ್ಟು ಶ್ರೀಕೃಷ್ಣನು
ಮೆಟ್ಟಿದನು ತಕಧಿಮಿ ತಧಿಕೆನುತ

ಎಂದು ದಾಸರು ಹಾಡಿದ್ದಾರೆ. ಕಾಳಿಂಗನ ಹೆಡೆಯ ಮೇಲೆ ಪುಟ್ಟಪಾದವನ್ನಿಟ್ಟ ಈ ದಿಟ್ಟ ಪೋರನ ನಾಟ್ಯವೂ ರಮ್ಯಾದ್ಭುತವಾಗಿದೆ. ಇಂಥಾ ನೂರಾರು ಗೀತೆಗಳಲ್ಲಿ ದಾಸರು ಕೃಷ್ಣಲೀಲೆಯ ಚೆಲುವಿನ ಭಾಂಡಾರದ ಮುದ್ರೆಯನ್ನೊಡೆದಿದ್ದಾರೆ. ದೈನಂದಿನ ಶಿಶುಲೀಲೆಯ ಸಾಮಾನ್ಯ ಸುಂದರವ್ಯಾಪಾರಕ್ಕೆ ಶ್ರೀಕೃಷ್ಣನ ಚೆಲುವಿನ ಬೆಳಕನ್ನು ಹಾಯಿಸಿ ಇಹದ ಸೊಗಸನ್ನು ದಿವ್ಯವನ್ನಾಗಿ ಮಾಡಿದ್ದಾರೆ. ಈ ಬಗೆಯ ಸೊಗಸಿನ ಪರಿಭಾವನೆಯಿಂದ ಸಂತತವೂ ತಮ್ಮ ಹೃದಯದ ತಂಬೂರಿಯನ್ನು ಶೃತಿ ಮಾಡಿಕೊಂಡು ಆ ದಿವ್ಯಮೂರ್ತಿಯ ದರ್ಶನವನ್ನು ಪಡೆದು ಧನ್ಯರಾಗಿದ್ದಾರೆ. ಆ ದಿವ್ಯ ಮೂರ್ತಿಯನ್ನು ಕಂಡು-

ನಿನ್ನ ದಿವ್ಯ ಮೂರುತಿಯ ಕಣ್ಣು ದಣಿಯ ನೋಡಿ
ಧನ್ಯನಾದೆನೋ ಧರೆಯೊಳು
ಇನ್ನು ಭವಭಯಕೆ ಅಂಜಲೇತಕೋ
ಚೆನ್ನ ಸಿರಿವೆಂಕಟೇಶ ಶ್ರೀಶ.
ಶಿರದಲ್ಲಿ ರವಿಕೋಟಿ ತೇಜದಿಂದೆಸೆವಂಥ
ವರ ಕಿರೀಟ ಕುಂಡಲ
ಕೊರಳೊಳು ಸರಿಗೆ ವೈಜಯಂತಿಯ ಮಾಲೆ
ಪರಿಪರಿಯ ಹಾರಗಳನು

ಹೀಗೆ ಹಾಡಿದ್ದಾರೆ. ಯಾವ ನಿಲುವಿನಲ್ಲಿ ನೋಡಿದರೂ ಈ ದಾಸರ ಕಣ್ಣಿಗೆ ಕಾಣತಕ್ಕದ್ದು ಭದ್ರಸೌಂದರ್ಯ, ಅದೇ ಕಿರೀಟ ಕುಂಡಲಾದಿಗಳ, ವೈಜಯಂತಿ ಮಾಲೆಯ ಮದನಮೋಹನ ಸಾಕಾರ ಸೌಂದರ್ಯ. ನಿಜಗುಣ ಶಿವಯೋಗಿ ಅಕ್ಕಮಹಾದೇವಿಯರಂಥ ಶರಣರು ಕಂಡ ಸೌಂದರ್ಯ ಸಾಕಾರದಂತೆ ತೋರಿದರೂ, ಅದು ನಿರಾಕಾರದ ಕಡೆಗೆ ಮೈಚಾಚಿದ ತೇಜಸ್ಸಿನ ಹಾಗೆ ಗೋಚರಿಸುತ್ತದೆ. ಆದರೆ ಈ ರೂಪವು ಬರಬರುತ್ತಾ ಅರೂಪದ ಕಡೆಗೆ, ತನ್ನ ರೂಪವನ್ನು ನೀಗಿಕೊಳ್ಳುತ್ತಾ ಕಡೆಗೆ ಅರೂಪವೇ ಆಗುವಂಥ ನೆಲೆಗೆ ಹೋದ ಅನುಭವಗಳನ್ನು ಈ ಶರಣರು ಬಣ್ಣಿಸಿದ್ದಾರೆ. ನಿಜಗುಣ ಶಿವಯೋಗಿಗಳು ಒಂದು ಕಡೆ ಶಿವನ ಪಾದ ಮಾತ್ರವನ್ನು ಕುರಿತು-

ಶರಣಜನ ಸದುಹೃದಯನಳಿನದೊಳು
ಪರಿಶೋಭಿಸುತ್ತಿಹುದು ನಿಮ್ಮಪಾದ
ನೆಟ್ಟನಂಧಕಾಸುರನೆದೆಯಮೇಲೆ ಭರತದ
ಕಟ್ಟಲೆಗೆ ಕುಣಿದುದು ನಿಮ್ಮ ಪಾದ
ದಿಟ್ಟ ರಾವಣನು ರಜತಾಚಲವನೆತ್ತಲೊತ್ತಿ
ಮೆಟ್ಟಿತು ರಸಾತಳಕೆ ನಿಮ್ಮ ಪಾದ

ಎಂದು ಹಾಡಿದ್ದಾರೆ. ಇಲ್ಲಿ ಇಡೀ ರೂಪದ ವರ್ಣನೆ ಮರೆಯಾಗಿ ಭಕ್ತನಾದವನ ನಿಷ್ಠೆಗೆ ನೆಲೆಯಾದ ಶಿವನ ‘ಪಾದ’, ಅದರ ಮಹಿಮೆ ಇವು ಪ್ರಧಾನವಾಗಿವೆ. ಇಂತಹ ಪಾದ ನಾಟ್ಯಕ್ಕೆ ನಿಂದಲ್ಲಿ-

ಅದುರಿತು ಪದಾಘಾತದಿಂದ ಧರೆ
ಬಿದಿರಿದುವು ಮಕುಟ ತಾಗಿ ತಾರಕೆಗಳು
ಉದುರಿದುವು ಕೈತಾಗಿ ಲೋಕಂಗಳೆಲ್ಲಾ
……………………..
ನಮ್ಮ ಕೂಡಲ ಸಂಗಮದೇವನಿಂದು ನಾಟ್ಯವನಾಡೆ

ಇಂತಹ ಶ್ರೀ ಪಾದಕ್ಕೆ-

‘…. ಅನಂತಕೋಟಿ ದೇವರುಗಳೆಲ್ಲ ತಂಡತಂಡದಲ್ಲಿ
ಪ್ರಣಾಮಂಗೈಯಲು, ಅವರ ಮುಕುಟರಜವುದುರಲಿಕೆ
ಅಲ್ಲಿ ರಜತಗಿರಿಗಳಾದವು, ಕಪಿಲಸಿದ್ಧ ಮಲ್ಲಿಕಾರ್ಜುನಾ
ನಿಮ್ಮ ಮುಂದೆ.’

ಎಂದು ಸಿದ್ಧರಾಮಯ್ಯನವರು ಹೇಳುತ್ತಾರೆ. ಇದು ಭವ್ಯಾನುಭೂತಿ ಪ್ರಚೋದಕವಾದ ರುದ್ರಸೌಂದರ‍್ಯ. ದಾಸರು ದರ್ಶಿಸಿದ ಚೆನ್ನಕೇಶವನ ಭದ್ರಸೌಂದರ‍್ಯ, ಶರಣರು ದರ್ಶಿಸಿದ ಶಿವನ ರುದ್ರಸೌಂದರ‍್ಯ ಇವುಗಳು ಸ್ಪಷ್ಟಮನೋಹರ ಹಾಗೂ ಅಸ್ಪಷ್ಟ ಭವ್ಯ ಸೌಂದರ‍್ಯದ ನಿದರ್ಶನಗಳಾಗಿವೆ.

ಶರಣರು ಮಾತ್ರ, ತಮ್ಮ ಅನುಭವದಲ್ಲಿ, ರೂಹಿಲ್ಲದ ಅಥವಾ ರೂಹಿಗೆ ನಿಲುಕದ ಚೆಲುವಿನ ನೆಲೆಯನ್ನು ಕಂಡರು. ಈ ಒಂದು ನಿಲುವಿನಲ್ಲಿ ನಾಮರೂಪದ ಹಂಗು ಹರಿದು, ಆ ಚೆಲುವು ಕೇವಲ ಜ್ಯೋತಿ ರೂಪವಾಗಿ ಅನುಭವಕ್ಕೆ ಬರುತ್ತದೆ. ಅಲ್ಲಿ ‘ಅಸುರ ಮಾಲೆಗಳಿಲ್ಲ, ತ್ರಿಶೂಲ ಡಮರುಗವಿಲ್ಲ.’ ಅದೊಂದು ರೂಪಾತೀತವಾದ ನಿಲುವು. ಶರಣರು ಅದನ್ನು ಕುರಿತು-

ಸಮಸ್ತ ಕತ್ತಲೆಯ ಮಸಕವ ಕಳೆದಿಪ್ಪ ಇರವ ನೋಡಾ
ಬೆಳಗಿಂಗೆ ಬೆಳಗು ಸಿಂಹಾಸನವಾಗಿ
ಬೆಳಗು ಬೆಳಗ ಕೂಡಿದ ಕೂಟವ
ಕೂಡಲ ಸಂಗಯ್ಯ ತಾ ಬಲ್ಲ.

ಎನ್ನುತ್ತಾರೆ. ಅದೊಂದು ಬೆಳಗಿನ ಸಿಂಹಾಸನದ ಮೇಲೆ ಕೂತ ಬೆಳಗು! ಅದು ‘ಕಂಗೆ ಕಾಂಬಡೆ ರೂಪಲ್ಲ, ಕೈಗೆ ಸಿಲುಕುವರೆ ದೇಹಿಯಲ್ಲ.’ ಅದೊಂದು ನಿರುಪಾಧಿಕ ಜ್ಯೋತಿ-

ಜ್ಯೋತಿ ಬೆಳಗುತಿದೆ| ನಿರ್ಮಲ ಪರಂ
ಜ್ಯೋತಿ ಬೆಳಗುತಿದೆ.
ಮಾತು ಮನಂಗಳಿಂದತ್ತತ್ತಮೀರಿದ
ಸಾತಿಶಯದ ನಿರುಪಾಧಿಕ ನಿರ್ಮಲ
ಜ್ಯೋತಿ ಬೆಳಗುತಿದೆ.

ಎಂದು ನಿಜಗುಣ ಶಿವಯೋಗಿಗಳು ಹಾಡಿದ್ದಾರೆ. ಈ ಜ್ಯೋತಿರನುಭವವನ್ನು ಕುರಿತು, ಶರಣರು-

ಉಪಮೆ ಉಪಮಿಸಲರಿಯದೆ
ಉಪಮಾತೀತವೆನ್ನುತಿದ್ದಿತ್ತು!

ಅರಿವು ಅರಿವಿನ ಮರೆಯಲಿದ್ದುದನರಿಯದೆ
ಅರಿವು ಪರಾಪರವೆನ್ನುತ್ತಿದ್ದಿತ್ತು.

ಎಂದು ವರ್ಣಿಸಿದ್ದಾರೆ. ಅಂತಹ ‘ಬಯಲ ಬೆರಗಿನ ಸುಖದ ಸವಿ’ ಅದು, ಅಲ್ಲಿ ‘ಬೆರಗಲ್ಲದೆ ಕಾಣೆ’; ಅಷ್ಟೇ ಅಲ್ಲ ‘ಕಾಣೆನೆಂಬ ನುಡಿಗೆಣೆಯ ಕಾಣೆ’! ನುಡಿಗೇ, ನಾಚಿಕೆಯಾಗಿ, ಮೌನ ಮುಗ್ಧವಾಗಿ ಮೂಗುವಡುವ ನಿಲುವು ಅದು. ವೇದೋಪನಿಷತ್ತಿನ ಋಷಿಗಳು ಕಂಡದ್ದೂ, ತಮಸ್ಸಿನಾಚೆಯ, ಆದಿತ್ಯ ವರ್ಣದ ಪರಂಜ್ಯೋತಿ ಸ್ವರೂಪದ ಈ ಆತ್ಮಸೌಂದರ‍್ಯವನ್ನೇ. ನಮ್ಮ ಕನ್ನಡದ ಸಂತರೂ ಕಂಡುದು ಅದೇ ಜ್ಯೋತಿರಾತ್ಮಕವಾದ ಸೌಂದರ‍್ಯವನ್ನೇ.

ಪರಿಶೀಲನ (೧೯೬೭)

* * *


[1] ವೀರಶೈವರಲ್ಲಿ ಕೆಲವು ಕವಿಗಳು ಹಾಗೂ ಕೀರ್ತನಕಾರರನ್ನು ಬಿಟ್ಟರೆ ವಚನಕಾರರೆಲ್ಲರೂ ವರ್ಣಿಸುವುದು ಲಿಂಗದ ಚೆಲುವನ್ನು, ಅದು ಸಾಂಪ್ರದಾಯಿಕವಾದ ಶಿವನ- ಪುರಾಣೋಕ್ತ ವಾದ-ವರ್ಣನೆಯ ಪ್ರತೀಕವಲ್ಲ. ಆದರೆ ‘ಲಿಂಗ’ ಎನ್ನುವುದು ನಿರಾಕಾರಕ್ಕೆ ಅತ್ಯಂತ ಸಮೀಪವಾದ ಸಂಕೇತ. ಒಂದು ದೃಷ್ಟಿಯಿಂದ ನೋಡಿದರೆ ‘ಲಿಂಗ’ ಎನ್ನುವುದು ಸಾಕಾರವೂ ಅಲ್ಲ, ನಿರಾಕಾರವೂ ಅಲ್ಲ; ಅದು ಸಾಕಾರ ನಿರಾಕಾರಗಳ ಅಪೂರ್ವ ಸಂಗಮದ ಸಂಕೇತ. ಸಮನ್ವಯ ದರ್ಶನವನ್ನು ಆಚರಣೆಗೆ ತಂದ ಶರಣರು, ದೈವೀ ಕಲ್ಪನೆಯಲ್ಲೂ, ಸಾಕಾರ ನಿರಾಕಾರಗಳ ಸಮನ್ವಯದ ಸಂಕೇತವಾಗಿರುವ ಲಿಂಗದ ಚೆಲುವನ್ನು ಒತ್ತಿಹೇಳಿದ್ದು, ಗಮನಿಸಬೇಕಾದ ಸಂಗತಿಯಾಗಿದೆ. ಹಾಗೆ ನೋಡಿದರೆ ಅಕ್ಕಮಹಾದೇವಿ ಒಬ್ಬಳೆ ತನ್ನ ಆರಾಧ್ಯದೈವಕ್ಕೆ ಸುಂದರ ಸಾಕಾರವನ್ನು ಕೊಟ್ಟಂತೆ ತೋರುತ್ತದೆ. ಆದರೆ ಉಳಿದ ವಚನಕಾರರಲ್ಲೂ ಈ ಸಾಂಪ್ರದಾಯಿಕವಾದ ರೂಪಕಲ್ಪನೆ ಕ್ವಚಿತ್ತಾಗಿ ಬಂದಿದೆ.

[2] ಭಗವಂತನ ರೂಪವನ್ನು ಕುರಿತು ಧ್ಯಾನಕಲ್ಪನೆಯಲ್ಲಿ ದಾಸರು ನೂರಾರು ರಮ್ಯ ಚಿತ್ರಗಳನ್ನು ಕೊಟ್ಟು ಭಾಗವತಕಾವ್ಯದ ಸುಂದರ ಲೋಕಕ್ಕೆ ಬಾಗಿಲನ್ನು ತೆರೆದರೆ, ಶಿವಶರಣರು ಶಿವನಿಗಾಗಿ ತಮ್ಮ ಅಂತರಂಗ ಪಡುವ ವ್ಯಾಕುಲಗಳನ್ನು ಅತ್ಯಂತ ವಾಸ್ತವ ಲೋಕದ ವ್ಯಾಪಾರಗಳನ್ನೆ ಪ್ರತಿಮೆಯನ್ನಾಗಿ ಮಾಡಿ ಅದರ ಮೂಲಕ ಅಭಿವ್ಯಕ್ತಗೊಳಿಸಿದ ರೀತಿ ಅಪೂರ್ವವಾಗಿದೆ.