ಕಥಾಶ್ರವಣ ಮಾಡೋ

ಪಥವೈಕುಂಠಕೆ ಇದು ನೋಡೋ”

ಈ ಸಾಲುಗಳು ಭಕ್ತಿಗಂಗಾವಾಹಿನಿಯಂತೆ ಹರಿದು ಬರುತ್ತಿದ್ದರೆ ಕನ್ನಡ ನಾಡಿನ ಮೂಲೆಮೂಲೆಗಳಲ್ಲಿ ಅದು ಸಂತ ಭದ್ರಗಿರಿ ಅಚ್ಯುತ ದಾಸರ ಹರಿಕಥಾರಂಭವೆಂದು ಜನರು ಸುಲಭವಾಗಿ ಗುರುತಿಸುತ್ತಾರೆ. ಇದಕ್ಕೆ ಕಾರಣ ಅಚ್ಯುತದಾಸರ ರಸಾರ್ದ್ರವಾದ ಗಾಯನ ಕ್ರಮ. ಅದರಲ್ಲಿ ಭಕ್ತಿಭಾವ ತುಂಬಿ ತುಳುಕುತ್ತದೆ. ಒಂದು ಕ್ಷಣ ಅದರ ಮೋಡಿಗೆ ಒಳಗಾಗದ ಮನಸ್ಸೇ ಇಲ್ಲವೆನ್ನಬಹುದು. ವೃಂದಾವನದ ಮೋಹನ ಮುರಲೀ ಗಾನದಂತೆ ಅದಕ್ಕೊಂದು ಸೆಳೆತವಿದೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಕರ್ನಾಟಕದಲ್ಲಿ ಹರಿಕಥೆ ಎಂಬ ಕಲಾಪ್ರಕಾರಕ್ಕೆ ನೆಲೆ- ಬೆಲೆಗಳನ್ನು ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ.

ಹರಿಕೀರ್ತನ ಕಲೆ ಕನ್ನಡದ ಮಣ್ಣಿನಲ್ಲಿ ಹುಟ್ಟಿದ ಕಲೆ. ಸರ್ವಜ್ಞ ಸೋಮೇಶ್ವರನ ’ರಾಜಮನೋಲ್ಲಾಸ’ (1129) ಗ್ರಂಥದ ಕಥಾವಿನೋದ ಪ್ರಕರಣ, ನಾಲ್ಕನೇ ವೀರ ಸೋಮೇಶ್ವರನ ಕಾಲದ (1184) ಶಾಸನೋಲ್ಲೇಖ, ಬೆಳಗಾವಿ ಜಿಲ್ಲೆಯ ಸೌಂದತ್ತಿ ತಾಲೂಕಿನ ಋಷ್ಯಶೃಂಗ ಎಂಬಲ್ಲಿರುವ ಕಾಲಮ್ಮ ದೇವಸ್ಥಾನದಲ್ಲಿ ಹಬ್ಬೇನಾಯಕ ಮತ್ತು ಬಲಿಯಕ್ಕ ದಂಪತಿಗಳು ಹಬ್ಬೇಶ್ವರ ಲಿಂಗ ಪ್ರತಿಷ್ಠೆ ಮಾಡಿಸಿದ ಸಂದರ್ಭದಲ್ಲಿ (1186) ’ಕಥಾಪ್ರಪಂಚ’ ನಡೆಸಿದ ಗ್ರಂಥಸ್ಥ ದಾಖಲೆ ಮುಂತಾದವುಗಳಿಂದ ಹನ್ನೆರಡನೇ ಶತಮಾನ ದಿಂದಲೇ ಕರ್ನಾಟಕದಲ್ಲಿ ಹರಿಕಥೆ ರೂಡಿಯಾಗಿತ್ತೆಂದು ಹೇಳಬಹುದು. ಬಿಜಾಪುರ ಜಿಲ್ಲೆಯ ಬೀಮಪ್ಪ ಗೋಸಾವಿ ಮತ್ತು ತಿಮ್ಮಪ್ಪ ಗೋಸಾವಿ ಎಂಬ ಸಹೋದರರ ಹರಿಕಥೆ ಯಿಂದ ಮಹಾರಾಷ್ಟ್ರದ ಜನರು ಪ್ರಭಾವಿತರಾಗಿ ಮರಾಠಿಯಲ್ಲಿ ಹರಿಕಥೆಯನ್ನು ಆರಂಬಿಸಿದರೆಂದು ಮರಾಠಿ ಸಾಹಿತ್ಯ ಚರಿತ್ರೆ ಹೇಳುತ್ತದೆ. ಅನಂತರ ಹರಿಕಥೆ ಆಂಧ್ರಪ್ರದೇಶ, ತಮಿಳುನಾಡು, ಕೇರಳಗಳಿಗೆ ಹಬ್ಬಿತೆನ್ನುವುದು ಐತಿಹಾಸಿಕ ಸತ್ಯ. ಕರ್ನಾಟಕದಲ್ಲಿ ’ಹರಿಕಥೆ’ಗೆ ಒಂದು ಭವ್ಯವಾದ ಪರಂಪರೆಯೇ ಇದೆ. 15-16ನೇ ಶತಮಾನದಲ್ಲಿ ಪುರಂದರದಾಸರೇ ಮೊದಲಾದವರು ಕೀರ್ತನ ಸಾಹಿತ್ಯವನ್ನು ರಚಿಸಿ ಹರಿಕೀರ್ತನ ಕಲೆಗೆ ಇನ್ನಷ್ಟು ಶಕ್ತಿಯನ್ನು ತುಂಬಿದರು. ದಾಸಸಾಹಿತ್ಯದ ಕೀರ್ತನೆಗಳನ್ನು ರಚಿಸಿದ ಹರಿದಾಸರುಗಳನ್ನು ’ಹರಿಕಥಾ ಪ್ರವೀಣ’ರೆಂದು ಹೇಳಲಾಗದಿದ್ದರೂ, ಕೆಲವು ಹರಿದಾಸರು ’ಹರಿಕಥೆ’ಯನ್ನು ಮಾಡುತ್ತಿದ್ದರೆಂಬುದಕ್ಕೆ ದಾಖಲೆಗಳು ದೊರೆಯುತ್ತವೆ. ಅಂತಹವರಲ್ಲಿ ಲಿಂಗಸುಗೂರು ಪ್ರಾಣೇಶದಾಸರು (ಪ್ರಾಣೇಶವಿಠಲ), ಸುರಪುರದ ಆನಂದದಾಸರು (ಕಮಲೇಶವಿಠಲ), ಹರಪನಹಳ್ಳಿ ರಾಮಾಚಾರ್ಯರು (ಇಂದಿರೇಶ), ನವಪಾಲಪುರಿ ತಿಪ್ಪಣಾರ್ಯರು (ಖಾದ್ರೀಶ) ಮುಂತಾದವರು ದಾಸದೀಕ್ಷೆಯನ್ನು ಪಡೆದು ಹರಿಕಥಾ ಆಖ್ಯಾನಗಳನ್ನು ರಚಿಸಿ ಪ್ರಸಿದ್ಧರಾಗಿದ್ದಾರೆ. ’ಕೀರ್ತನಕಂಠಾಭರಣ’ವನ್ನು ರಚಿಸಿದ ಹೊಸಕೆರೆ ಚಿದಂಬರಯ್ಯ (1930), ತುಪಾಕಿ ವೆಂಕಟರಮಣಾಚಾರ್ಯ (1895), ಪಾವಂಜೆ ಲಕ್ಷ್ಮೀನಾರಾಯಣಪ್ಪಯ್ಯ (1924), ಬೇಲೂರು ಕೇಶವದಾಸ, ಹಂಡೆ ಶ್ರೀಪಾದದಾಸ ಮುಂತಾದವರು ಕರ್ನಾಟಕದ ಕೀರ್ತನ ಪರಂಪರೆಯಲ್ಲಿ ಪ್ರಾತಃ ಸ್ಮರಣೀಯರಾದವರು. ಈ ಪರಂಪರೆಯ ಸಮಕಾಲೀನ ಸಮರ್ಥ ಪ್ರತಿನಿಧಿಯೇ ಕೀರ್ತನಾಗ್ರೇಸರ, ಕೀರ್ತನಾಚಾರ್ಯ ಸಂತ ಭದ್ರಗಿರಿ ಅಚ್ಯುತದಾಸರು.

ಬಾಲ್ಯ

ಉಡುಪಿಯಿಂದ ಹತ್ತು ಕಿಲೋಮೀಟರ್ ಉತ್ತರದಲ್ಲಿರುವ ಬೈಕಾಡಿ ಗ್ರಾಮದ ಪುಟ್ಟಹಳ್ಳಿಯೇ ಭದ್ರಗಿರಿ. ಸುವರ್ಣಾನದಿಯ ಸುಂದರ ಪ್ರಕೃತಿಯ ಮಡಿಲಲ್ಲಿರುವ ಈ ಭದ್ರಗಿರಿ ವೀರವಿಠ್ಠಲ ದೇವರ ಪುಣ್ಯಭೂಮಿ. ಗುಡ್ಡದ ಮೇಲಿರುವ ಈ ವಿಠ್ಠಲ ದೇಗುಲ ಸುಮಾರು ನಾಲ್ಕು ಶತಮಾನಗಳಷ್ಟು ಪ್ರಾಚೀನವಿರಬಹುದು. ಈ ದೇಗುಲದಲ್ಲಿ ಎರಡು ಅಡಿ ಎತ್ತರದ ವಿಠಲಮೂರ್ತಿ ಬಲ ಕೈಯಲ್ಲಿ ಅಭಯವೀಯುತ್ತ, ಎಡಗೈಯಲ್ಲಿ ಶಂಖ ಹಿಡಿದು ಅದನ್ನು ಕಟಿಭಾಗಕ್ಕೆ ತಾಗಿಸಿ ನಿಂತಿದ್ದಾನೆ. ಈ ದೇವರಿಗೆ ’ಸುಕ್ಕಿನುಂಡೆ’ ಎಂದರೆ ಬಹಳ ಪ್ರೀತಿಯಂತೆ. ಈ ವೀರವಿಠ್ಠಲ ಸ್ವಾಮಿಯು ಮನೆದೈವವಾಗಿರುವ ವೆಂಕಟರಮಣ ಪೈ ಮತ್ತು ರುಕ್ಮಿಣೀಬಾಯಿ ದಂಪತಿಗೆ ಐದು ಗಂಡು ಮೂರು ಹೆಣ್ಣು ಮಕ್ಕಳಲ್ಲಿ ನಾಲ್ಕನೆಯ ಮಗುವಾಗಿ ಅಚ್ಯುತದಾಸರು 31ನೇ ಮಾರ್ಚ್ 1931ರಂದು ಜನಿಸಿದರು. ತಂದೆ ಅನಕ್ಷರಸ್ಥರಾದರೂ ವಿದ್ಯಾವಂತರು, ಸಂಸ್ಕೃತಿ ಸಂಪನ್ನರು. ಬ್ರಹ್ಮಾವರದ ಸುತ್ತುಮುತ್ತಲಿನ ಹಳ್ಳಿಗಳಲ್ಲಿ ಯಕ್ಷಗಾನ ತಾಳಮದ್ದಳೆಯ ಅರ್ಥಧಾರಿಗಳಾಗಿ ಅವರು ಪ್ರಸಿದ್ಧರು. ತಾಯಿ ರುಕ್ಮಿಣಿಯಮ್ಮನವರು ಮಧುರವಾದ ಭಜನೆ ಹಾಡುಗಳನ್ನು ಹಾಡಬಲ್ಲವರಾಗಿದ್ದರು. ಅವರ ತವರುಮನೆ ಇಪ್ಪತ್ತು ಮೈಲು ದೂರದ ಪೆರ್ಡೂರು. ಅಲ್ಲಿಯ ಯಕ್ಷಗಾನ ಮೇಳದಲ್ಲಿ ಭಾಗವತರಾಗಿದ್ದ ಅಣ್ಣಪ್ಪ ನಾಯಕರು ಈ ರುಕ್ಮಿಣಿಯಮ್ಮನವರ ತಂದೆ. ಹೀಗೆ ಸುಸಂಸ್ಕೃತ ಪರಂಪರೆಯಲ್ಲಿ ಅಚ್ಯುತ ದಾಸರ ಜನನವಾಯಿತು. ಬಾಲ್ಯದಿಂದಲೇ ಯಕ್ಷಗಾನ-ತಾಳಮದ್ದಳೆ-ಭಜನೆ- ಕೀರ್ತನೆಗಳ ಸಾಂಸ್ಕೃತಿಕ ಪರಿಸರದಲ್ಲಿ ಅವರು ಬೆಳೆದರು. ಅಚ್ಯುತದಾಸರ ಅಣ್ಣ ನರಸಿಂಹ ಪೈಯವರು ಸಂಗೀತ ಪ್ರಿಯರು. ಭದ್ರಗಿರಿಯಂತಹ ಹಳ್ಳಿಗೆ ಆ ಕಾಲದಲ್ಲೇ ಗ್ರಾಮೋಫೋನ್, ಹಾರ್ಮೋನಿಯಂಗಳನ್ನು ತರಿಸಿ ಸಂಗೀತ ಕಾರ್ಯಕ್ರಮಗಳನ್ನು ಸಂಯೋಜಿಸಿದವರು. ಹದಿನೆಂಟರ ಹರೆಯದಲ್ಲೇ ಅವರು ವಿದಿವಶವಾಗಿದ್ದು ವಿಪರ್ಯಾಸ. ಅಚ್ಯುತದಾಸರ ತಮ್ಮಂದಿರಾದ ಕೇಶವದಾಸರು ಅಂತಾರಾಷ್ಟ್ರೀಯ ಖ್ಯಾತಿವೆತ್ತ ಹರಿಕೀರ್ತನಕಾರರು. ಇಪ್ಪತ್ತೆರಡು ಬಾರಿ ಪ್ರಪಂಚ ಪರ್ಯಟನೆಯನ್ನು ಮಾಡಿ, ದೇಶ ವಿದೇಶಗಳಲ್ಲಿ ಅನೇಕ ಪುರಂದರ ವಿಠ್ಠಲ ಮಂದಿರಗಳನ್ನು ಸ್ಥಾಪಿಸಿ ಹರಿಕಥೆಯನ್ನು ಜಗತ್ತಿನಾದ್ಯಂತ ಪರಿಚಯಿಸಿದವರು. ಉಳಿದಿಬ್ಬರು ಸಹೋದರರಲ್ಲಿ ಒಬ್ಬರು ವಿಠ್ಠಲದಾಸ್, ಈಗ ದಿವಂಗತರು. ಮತ್ತೊಬ್ಬರು ಸರ್ವೋತ್ತಮದಾಸರು. ಇವರೂ ಕೂಡಾ ಹರಿಕೀರ್ತನ ಪ್ರವೀಣರು. ಸದ್ಯ ಅಚ್ಯುತದಾಸರ ಕೃತಿಗಳ ಪ್ರಕಾಶಕರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅಚ್ಯುತದಾಸರ ಒಬ್ಬರು ಅಕ್ಕ ದಿ|| ಶ್ರೀಮತಿ ಪ್ರೇಮಾ ಕೂಡಾ ಕೀರ್ತನಕಾರರಾಗಿ ಪ್ರಸಿದ್ಧರಾಗಿದ್ದವರು. ಹೀಗೆ ಮನೆಮಂದಿಯೆಲ್ಲರೂ ತಾಳತಂಬೂರಿ ಹಿಡಿದು ವಿಠಲನ ಭಜನೆ ಮಾಡಿದವರೇ.

ಅಚ್ಯುತದಾಸರು ಶಾಲಾ ಶಿಕ್ಷಣವನ್ನು ಹೆಚ್ಚು ಪಡೆದವರಲ್ಲ. ಓದಿದ್ದು ಕೇವಲ ಮೂರನೆಯ ತರಗತಿ. ಆದರೆ ಪ್ರಪಂಚವನ್ನೇ ಪಾಠಶಾಲೆಯಾಗಿ ಪರಿಭಾವಿಸಿ ಲೋಕಶಿಕ್ಷಣವನ್ನು ಪಡೆದವರು. ಯಕ್ಷಗಾನ ಪ್ರಸಂಗಗಳನ್ನು ಚೆನ್ನಾಗಿ ಅಭ್ಯಾಸ ಮಾಡಿ ಬಾಲ್ಯದಲ್ಲೇ ತಾಳಮದ್ದಳೆಯಲ್ಲಿ ಅರ್ಥಧಾರಿಗಳಾಗಿದ್ದವರು. ನಾಟಕಗಳಲ್ಲಿ ಪಾತ್ರವಹಿಸಿ, ರಂಗಗೀತೆ ಗಳನ್ನು ಹಾಡಬಲ್ಲವರಾಗಿದ್ದರು. ಸಹಜವಾಗಿಂುೆುೀ ಇದಕ್ಕೆ ಪೂರಕವಾಗಿ ರಾಮಾಯಣ- ಮಹಾಭಾರತಗಳನ್ನು ಓದಿದರು. ಪಂಪ-ರನ್ನ- ಲಕ್ಷ್ಮೀಶ-ಕುಮಾರವ್ಯಾಸರ ಕಾವ್ಯಗಳನ್ನು ಅರ್ಥೈಸಿಕೊಂಡರು. ಹೀಗೆ ಭಾರತೀಯ ಸಂಸ್ಕೃತಿಯ ಹರಿಕಾರರಾಗುವ ಎಲ್ಲ ಗುಣಲಕ್ಷಣಗಳು ಬಾಲ್ಯದಲ್ಲೇ ಅಚ್ಯುತದಾಸರಲ್ಲಿ ಗೋಚರಿಸಿದವು.

1950 ಡಿಸೆಂಬರ 28ರಂದು ಇವರು ಗೃಹಸ್ಥಾಶ್ರಮವನ್ನು ಪ್ರವೇಶಿಸಿದರು. ಪಡುಬಿದ್ರೆಯ ವೈದಿಕ ಶ್ರೇಷ್ಠ ವಾಮನಭಟ್ಟರ ಮಗಳು ಸುಮಿತ್ರಾದೇವಿ ಇವರ ಧರ್ಮಪತ್ನಿ ಯಾದರು. ಮದುವೆಯ ಬಳಿಕ ಅವರಿಗೆ ಶ್ರೀಮತಿ ಬಾಯಿ ಎಂಬ ಹೆಸರಾಯಿತು. ಅಚ್ಯುತದಾಸರ ಪೂಜೆ ಪುನಸ್ಕಾರ, ಅಧ್ಯಯನ-ಸಂಚಾರಗಳಿಗೆಲ್ಲ ಸಹಕಾರಿಯಾಗಿ ನಿಂತು ಮನೆಗೆ ಬಂದ ಅತಿಥಿ ಅಭ್ಯಾಗತರಿಗೆ ಅನ್ನಪೂರ್ಣೆಯಾಗಿ ವಾತ್ಸಲ್ಯವನ್ನುಣಿಸಿದರು. ಅಚ್ಯುತದಾಸರ ವ್ಯಕ್ತಿತ್ವ ನಿರ್ಮಾಣದಲ್ಲಿ ಈ ಮಹಾತಾಯಿಯ ಪಾತ್ರ ಮಹತ್ತರವಾದುದು. ಇವರಿಗೆ ಮೂರು ಗಂಡು, ನಾಲ್ಕು ಹೆಣ್ಣುಮಕ್ಕಳು. ತುಂಬಿದ ಸಂಸಾರದಲ್ಲಿ ನಗುನಗುತ್ತಾ ಬಾಳಿದ ಶ್ರೀಮತಿ ಬಾಯಿಯವರು 1980ರಲ್ಲಿ ಸ್ವರ್ಗಸ್ಥರಾದರು.

ಮೊದಲ ಹರಿಕಥೆ

1951ರ ಫೆಬ್ರವರಿ 23 ಮಹಾಶಿವರಾತ್ರಿಯ ಇರುಳು. ಭದ್ರಗಿರಿಯ ಕಾಮೇಶ್ವರ ದೇವಾಲಯದಲ್ಲಿ ಮಲ್ಪೆ ಶಂಕರನಾರಾಯಣ ಸಾಮಗರ ಹರಿಕಥೆಗೆ ಜನ ಕಿಕ್ಕಿರಿದು ತುಂಬಿದ್ದರು. ಸಮೀಪದ ಹಾರಾಡಿ, ಹೇರೂರು, ಸಾಲಿಕೇರಿ, ಕುಂಜಾಲುಗಳಿಂದ ಜನ ತಂಡತಂಡವಾಗಿ ಬಂದಿದ್ದರು. ಬ್ರಹ್ಮಾವರದಿಂದ ತಬಲಾ, ಗ್ಯಾಸ್ಲೈಟ್ಗಳನ್ನು ಆಗಲೇ ತಂದಾಗಿತ್ತು. ದೇವಸ್ಥಾನದ ಪ್ರಾಂಗಣದಲ್ಲಿ ಮಹಿಳೆಯರು, ಮಕ್ಕಳು ಚಾಪೆ ಹಾಸಿ ಕುಳಿತಿದ್ದರು. ಗ್ರಾಮ ದೇವರಾದ ಕಾಮೇಶ್ವರನಿಗೆ ಆಗಲೇ ಲಕ್ಷ ಬಿಲ್ವಾರ್ಚನೆ ಮುಗಿದಿತ್ತು. ಶಿವ ಸನ್ನಿದಿಯ ರಾತ್ರಿ ಜಾಗರಣೆಗಾಗಿ ’ಗಿರಿಜಾಕಲ್ಯಾಣ’ವೆಂಬ ಹರಿಕಥೆಯ ಏರ್ಪಾಡಾಗಿತ್ತು. ರಾತ್ರಿ ಹನ್ನೆರಡು ದಾಟಿದರೂ ಹರಿದಾಸರು ಬರಲಿಲ್ಲ!

ಉಡುಪಿಯ ಪರಿಸರದಲ್ಲಿ ಆಗ ಮಲ್ಪೆ ಶಂಕರನಾರಾಯಣ ಸಾಮಗರೆಂದರೆ ದೊಡ್ಡ ಹೆಸರು. ಹರಿಕಥೆ, ಪ್ರವಚನ, ಯಕ್ಷಗಾನ ಆಟಕೂಟಗಳಿಗೆ ಅವರು ಬರುತ್ತಾರೆಂದರೆ ಜನರು ಉತ್ಸಾಹದಿಂದ ಗರಿಗೆದರಿ ಕುಣಿಯುತ್ತಿದ್ದರು. ತಲೆಗೆ ಗಾಂದಿ ಟೋಪಿ ಧರಿಸಿ, ಬಿಳಿಧೋತಿಯ ಕಚ್ಚೆ ಹಾಕಿ, ಕೊರಳಿಗೆ ತುಳಸೀಮಾಲೆ ಹಾಕಿಕೊಂಡು ಚಿಟಿಕಿ ಹಿಡಿದರೆಂದರೆ ಅದೊಂದು ಭೋರ್ಗರೆದು ಹರಿಯುವ ಪುರಾಣ ಪುಣ್ಯಕಥಾಪ್ರವಾಹ. ವೇದೋಪನಿಷತ್ತುಗಳ ಸಾರವನ್ನು ಹರಿಕಥೆಯ ಮೂಲಕ ಉಣಬಡಿಸುವ ’ಚಲಿಸುವ ವಿಶ್ವಕೋಶ’ವೆಂದು ಅವರನ್ನು ಜನರು ಗೌರವಿಸುತ್ತಿದ್ದರು. ಅನಾರೋಗ್ಯದ ಕಾರಣದಿಂದಾಗಿ ಅವರು ಅಂದು ಭದ್ರಗಿರಿಗೆ ಬರಲು ಸಾಧ್ಯವಾಗಿಲ್ಲವೆನ್ನುವುದು ವ್ಯಾವಹಾರಿಕ ಸತ್ಯವಾದರೆ, ಪಾರಮಾರ್ಥಿಕ ಸಂಗತಿ ಬೇರೆಯೇ ಇದ್ದಿರಬೇಕು. ಕನ್ನಡ ಹರಿಕೀರ್ತನ ಲೋಕಕ್ಕೆ ಹೊಸ ಹರಿದಾಸನೋರ್ವನನ್ನು ನೀಡುವ ಭಗವತ್ ಸಂಕಲ್ಪ ಹಾಗೆ ಮಾಡಿರಬೇಕು!

’ಕೊನೆಗೂ ದಾಸರು ಬಂದರು!’

ಇಪ್ಪತ್ತರ ಹರೆಯದ ಹುಡುಗ ತಲೆಗೆ ಮುಂಡಾಸು ಕಟ್ಟಿ, ಹಣೆಗೆ ಅಂಗಾರಕ ಅಕ್ಷತೆಯನ್ನು ಇಟ್ಟು, ಕೈಯಲ್ಲಿ ಚಿಟಿಕಿ ಬಾರಿಸುತ್ತಾ ವೇದಿಕೆಯನ್ನೇರಿದಾಗ ಸಭೆಯಲ್ಲಿ ಗುಸುಗುಸು.

’ಇವರು ಸಾಮಗರಲ್ಲ!’

ಆದರೇನಂತೆ? ಹದಿಹರೆಯದ ತೇಜಸ್ವಿ ಬಾಲಕನ ನಿರರ್ಗಳ ಮಾತು, ಸಂದರ್ಭಕ್ಕೆ ತಕ್ಕ ಹಾಡು, ಆಗಾಗ್ಗೆ ನಗುವಿನ ಅಲೆಯುಕ್ಕಿಸುವ ಉಪಕಥೆಗಳು… ಹೀಗೆ ಗಿರಿಜಾಕಲ್ಯಾಣದ ಕಥೆ ಬೆಳಕು ಹರಿಯುವವರೆಗೂ ಸಾಗಿತು. ಯಕ್ಷಗಾನ ತಾಳಮದ್ದಳೆಯ ಹಿನ್ನೆಲೆಯಿಂದಾಗಿ ಬಾಲ ಹರಿದಾಸನಿಗೆ ಹರಿಕಥೆ ನಡೆಸುವುದು ಕಷ್ಟವಾಗಲಿಲ್ಲ. ಮೊದಲ ಹರಿಕಥೆಯಲ್ಲೇ ಬಾಲಕನ ಪ್ರತಿಭೆಗೆ ಸೇರಿದ್ದ ಜನರು ತಲೆದೂಗಿ ’ಭೇಷ್’ ಎಂದರು. ಸುತ್ತುಮುತ್ತಲ ಹಳ್ಳಿಗಳಿಂದ ಅಂದೇ ಹೊಸ ಹರಿದಾಸರ ಹರಿಕಥೆಗಳಿಗೆ ಭರ್ಜರಿ ಬೇಡಿಕೆ ಹರಿದು ಬಂತು. ದಿನ ಬೆಳಗಾಗುವುದರೊಳಗೆ ಭದ್ರಗಿರಿ ವೆಂಕಟರಮಣ ಪೈ ಅವರ ಮಗ ಅಚ್ಯುತ ಪೈ ’ಭದ್ರಗಿರಿ ಅಚ್ಯುತದಾಸ’ರಾಗಿ ಬಿಟ್ಟರು!

ಕಲೆಯಾಗಿ ಅರಳಿತು ಹರಿಕಥೆ

ದಕ್ಷಣಕನ್ನಡ ಜಿಲ್ಲೆಯಲ್ಲಿ ’ಹರಿಕಥೆ’ ಎಂದು ಹೇಳಿದರೆ, ಮೈಸೂರು ಸೀಮೆಯಲ್ಲಿ ಅದಕ್ಕೆ ’ಹರಿಕೀರ್ತನೆ’ ಎಂದು ಕರೆಯುತ್ತಾರೆ. ಇನ್ನು ಕೆಲವೆಡೆ ಅದಕ್ಕೆ ’ಕಥಾಕಾಲಕ್ಷೇಪ’ ಎನ್ನುವ ಹೆಸರಿದೆ. ಭದ್ರಗಿರಿಯವರು ಹರಿಕಥಾ ರಂಗಕ್ಕೆ ಪ್ರವೇಶಿಸಿದ ಕಾಲಘಟ್ಟ ಒಂದು ರೀತಿಯಲ್ಲಿ ಗೊಂದಲದ ಯುಗ. ಒಬ್ಬೊಬ್ಬರ ಹರಿಕಥೆಯ ಜಾಡು ಒಂದೊಂದು ತೆರನಾಗಿದ್ದ ಕಾಲವದು. ಉಪೋದ್ಘಾತಕ್ಕೂ ಉಪಸಂಹಾರಕ್ಕೂ ಪರಸ್ಪರ ಸಂಬಂಧವಿರಲಿಲ್ಲ. ಮೂಲಕಥೆಯ ಬೀಜಕ್ಷೇಪ ಪೀಠಿಕೆಯಲ್ಲಿರಬೇಕೆಂಬ ನಿಯಮವಿರಲಿಲ್ಲ. ಕೆಲವರ ಹರಿಕಥೆಯಂತೂ ಉಪಕಥೆಗಳದೇ ಸಾಮ್ರಾಜ್ಯ. ಜನರನ್ನು ನಕ್ಕುನಗಿಸುವುದೇ ಹರಿಕೀರ್ತನಕಾರನ ಮುಖ್ಯೋದ್ದೇಶವೆಂದು ಭಾವಿಸಿದವರಿದ್ದರು. ಕೆಲವರ ಕೀರ್ತನೆ ನಿಜವಾಗಿಯೂ ಸಂಗೀತದ ’ಕಛೇರಿ’ಯಾಗಿದ್ದರೆ, ಇನ್ನುಳಿದವರ ಹರಿಕಥೆ ಶುಷ್ಕಶಾಸ್ತ್ರ ವಿಚಾರಗಳ ಚರ್ಚೆಯಾಗಿರುತ್ತಿತ್ತು. ಕೀರ್ತನ ಕಲೆಗೆ ಸಂಬಂದಿಸಿದ ಮಾರ್ಗದರ್ಶಕ ಗ್ರಂಥಗಳೂ ಕಡಿಮೆ. ಇಂತಹ ಕಾಲಘಟ್ಟದಲ್ಲಿ ಭದ್ರಗಿರಿ ಅಚ್ಯುತದಾಸರು ’ಕನ್ನಡದ ಹರಿಕಥೆ’ಯ ಕುರಿತು ಸ್ವೋಪಜ್ಞವಾಗಿ ಚಿಂತಿಸಿದರು. ಚಿದಂಬರ ದೀಕ್ಷಿತರ ’ಕೀರ್ತನ ಕಂಠಾಭರಣ’, ಪ್ರಭಾಕರ ಶಾಸ್ತ್ರಿಗಳ ’ಪದ್ಯರತ್ನಾಕರ’ ಅವರಿಗೆ ಮಾರ್ಗದರ್ಶನ ನೀಡಿದವು. ಸಮರ್ಥ ರಾಮದಾಸರು ಮರಾಠಿ ಭಾಷೆಯಲ್ಲಿ ರಚಿಸಿದ ’ದಾಸಬೋಧ’ದಲ್ಲಿರುವ ಕೀರ್ತನ ಲಕ್ಷಣವನ್ನು ಹೃದ್ಗತ ಮಾಡಿಕೊಂಡರು. ಹರಿಕಥೆಯು ಹೇಗಿರಬೇಕೆಂಬುದರ ಬಗ್ಗೆ ಏಕನಾಥರು ಬರೆದ ಅಭಂಗಗಳನ್ನು ಅಭ್ಯಾಸ ಮಾಡಿದರು. ಮಹಾರಾಷ್ಟ್ರದಲ್ಲಿ ಔಧ ಮಹಾರಾಜರು, ಲೋಕಮಾನ್ಯ ತಿಲಕರು, ಕೃ.ಪ್ರ. ಖಾಡಿಲಕರ್ ಮುಂತಾದ ಮಹನೀಯರು ರಾಷ್ಟ್ರೀಯ ಕೀರ್ತನ ಸಮ್ಮೇಳನಗಳ ಅಧ್ಯಕ್ಷತೆ ವಹಿಸಿ ಮಾಡಿದ ಭಾಷಣಗಳನ್ನು ತಲಸ್ಪರ್ಶಿಯಾಗಿ ಓದಿ ಅರ್ಥಮಾಡಿಕೊಂಡರು. ಹೀಗೆ ’ಸತತಾಭ್ಯಾಸ ಪ್ರಯತ್ನ’ದಿಂದ ಅಚ್ಯುತದಾಸರು ಕನ್ನಡದ ಹರಿಕಥೆಯ ಮುಂದಿನ ದಾರಿಯನ್ನು ಮನಸ್ಸಿನಲ್ಲೇ ಚಿಂತಿಸಿದರು.

1953ರಲ್ಲಿ ಶ್ರೀ ಕಾಶೀ ಮಠಾದೀಶ ಶ್ರೀ ಸುದೀಂದ್ರ ತೀರ್ಥ ಶ್ರೀಪಾದಂಗಳವರು ಕೋಟೇಶ್ವರ ಶ್ರೀ ಪಟ್ಟಾಬಿರಾಮಚಂದ್ರ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಕೊಂಡಾಗ ಅಚ್ಯುತದಾಸರು ಗುರುಗಳ ಸನ್ನಿದಿಯಲ್ಲಿ ನಾಲ್ಕು ತಿಂಗಳು ತತ್ವ್ತಜ್ಞಾನ, ಧರ್ಮಾಚರಣೆ, ಪುರಾಣ ಚಿಂತನೆಗಳನ್ನು ತಿಳಿದುಕೊಳ್ಳುತ್ತಾ, ಪ್ರತಿದಿನ ಸಂಜೆ ಹರಿಕಥೆಯನ್ನು ಮಾಡಿದರು. ಶ್ರೀ ಪಾದಂಗಳವರು ಪ್ರತಿನಿತ್ಯವೂ ಇವರ ಹರಿಕಥೆಯನ್ನು ಕೇಳಿ, ಅದರ ಗುಣಾವಗುಣಗಳ ಬಗ್ಗೆ ತಿಳಿಯ ಹೇಳುತ್ತಾ, ಅಚ್ಯುತದಾಸರ ಪ್ರತಿಭೆಗೆ ಪುಟಗೊಟ್ಟರು. 1956ರಲ್ಲಿ
ಶ್ರೀ ಸ್ವಾಮಿಗಳು ಉಡುಪಿಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಾಗ, ಅಚ್ಯುತದಾಸರು ನಾಲ್ಕು ತಿಂಗಳ ಕಾಲ ಮಹಾಭಾರತದ ಕುರಿತು ಹರಿಕಥೆ ನಡೆಸಿದರು. ಈ ಸಂದರ್ಭದಲ್ಲಿ ಶ್ರೀ ಗುರುಗಳು ಅಚ್ಯುತದಾಸರಿಗೆ ದಂಡಿಗೆ ಬೆತ್ತದ ಹಾಸದೀಕ್ಷೆಯನ್ನು ಕೊಟ್ಟು ಚಕ್ರಾಂಕನಪೂರ್ವಕ ’ಮೂಲನಾರಾಯಣ’ ಎಂಬ ಅಂಕಿತವನ್ನು ದಯಪಾಲಿಸಿದರು.

ಅಂದಿನಿಂದ ಅಚ್ಯುತದಾಸರು ’ಮೂಲನಾರಾಯಣ’ ಅಂಕಿತನಾಮದಲ್ಲಿ ಸಾವಿರಾರು ಕೀರ್ತನೆಗಳನ್ನು, ಉಗಾಭೋಗ- ಸುಳಾದಿ-ಸುವ್ವಾಲಿಗಳನ್ನು ರಚಿಸಿದ್ದಾರೆ. ಕನ್ನಡ-ತುಳು-ಕೊಂಕಣಿಯಲ್ಲಿ ಅವರು ರಚಿಸಿದ ಕೀರ್ತನೆಗಳು ನಾಡಿನಾದ್ಯಂತ ಭಜಕರ ನಾಲಗೆಯಲ್ಲಿ ನಡಿದಾಡಿವೆ. ಭದ್ರಗಿರಿಯವರು 1957ರಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಶ್ರೀರಾಮ ಮಂದಿರಕ್ಕೆ ಹರಿಕಥಾಸಪ್ತಾಹ ನಡೆಸಲು ಆಗಮಿಸಿದರು. ಅವರ ಹರಿಕಥಾಶೈಲಿಗೆ ಮಾರುಹೋದ ಬೆಂಗಳೂರಿನ ಜನತೆ, ಅಚ್ಯುತದಾಸರನ್ನು ಮತ್ತೆ ಎಂಟು ತಿಂಗಳ ಕಾಲ ಉಳಿಸಿಕೊಂಡು, ಪ್ರತಿದಿನವೂ ಹರಿಕಥೆ ಮಾಡಲು ಆಗ್ರಹಿಸಿತು! ಅವರು ಹರಿಕಥೆ ಮಾಡುತ್ತಾ ಹೋದರು. ಬದುಕಿದ್ದಾಗಲೇ ದಂತಕಥೆಯಾದರು!

ದಾಸರೆಂದರೆ ಅಚ್ಯುತದಾಸರಯ್ಯ

ಭದ್ರಗಿರಿಯವರ ಹರಿಕಥೆ ಹೇಳುವ ರೀತಿಯೇ ಹೊಸತು. ಅದು ಅವರೇ ರೂಪಿಸಿಕೊಂಡ ನವಿರಾದ ಶೈಲಿ. ಪುರಾಣದ ಸಂದರ್ಭ ಸನ್ನಿವೇಶಗಳನ್ನು ಕಣ್ಣಿಗೆ ಕಟ್ಟುವಂತೆ ಪದ್ಯಗದ್ಯಗಳ ಸುಂದರ ಪಾಕದಲ್ಲಿ ಎರಕ ಹೊಯ್ಯುವುದು ಅವರ ವಿಶೇಷತೆ. ’ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎಂದ ಕವಿವಾಣಿಯಂತೆ, ಅಚ್ಯುತದಾಸರು ಹಾಡಿದರೆ ಕಲಿಯುಗವು ಕೃತ-ತ್ರೇತಾ-ದ್ವಾಪರಗಳೆಂಬ ಮೂರೂ ಯುಗಗಳಾಗಿ ನಿಲ್ಲುವುದು. ಅವರ ಹರಿಕಥೆ ಎಂದರೆ ವಿಜ್ಞಾನ, ವೇದಾಂತ, ಕಲೆ, ಸಾಹಿತ್ಯಗಳ ರಸಪಾಕ. ಕಥೆಯ ಓಘಕ್ಕೆ ಭಂಗವುಂಟಾಗದಂತೆ, ಬಂಧ ಸಡಿಲಾಗದಂತೆ ದೃಷ್ಟಾಂತಗಳನ್ನು ಹೊಸೆಯುವ ಪರಿ ಆಬಾಲವೃದ್ಧರನ್ನು ಮೋಡಿ ಮಾಡುವಂತಹುದು. ನಡುನಡುವೆ ಗಂಬೀರ ಮೌಲಿಕ ವಸ್ತುವಿಷಯಗಳ ವಿಶ್ಲೇಷಣೆ ನಡೆಸುತ್ತಾ ಪಂಡಿತ ಪಾಮರರನ್ನು ಹಿಡಿದಿಡುವಂತಹುದು. ಶಾಸ್ತ್ರದ ವಿಚಾರಕ್ಕೆ ಗ್ರಾಂಥಿಕ ಭಾಷೆಯ ಬಳಕೆ, ಉಳಿದಂತೆ ಆಡುಭಾಷೆಯ ಸೊಗಸು. ಪಾತ್ರಚಿತ್ರಣ ಮತ್ತು ಸನ್ನಿವೇಶ ನಿರ್ಮಾಣಕ್ಕೆ ಒಪ್ಪುವ ದೀರ ಲಲಿತ, ಮಂದ್ರ ಮಧ್ಯಮ ಸ್ವರವಿನ್ಯಾಸ. ಎಲ್ಲ ಕಡೆಯಲ್ಲೂ ಹಳಿ ತಪ್ಪದ ಸಂಯಮ. ಅಷ್ಟು ತೂಕದ ಮಾತು, ಪರಿಪಕ್ವವಾದ ಚಿಂತನಕ್ರಮ. ಹೆಜ್ಜೆಹೆಜ್ಜೆಗೂ ಹಾಸ್ಯ ವಿಡಂಬನೆಗಳ ಚತುರೋಕ್ತಿ ವಿಲಾಸ. ಬಹುಭಾಷೆಗಳ, ಬಹು ಕಾವ್ಯೋದಾಹರಣೆಗಳ ಸಮ್ಮೋಹಕ ವಚನ ಸುಧಾ ಪ್ರವಾಹ. ಸಂದರ್ಭಕ್ಕೆ ಒಪ್ಪುವ ಲೋಕೋಕ್ತಿ, ನಾಣ್ನುಡಿ-ಜಾಣ್ನುಡಿಗಳ ಮಹಾಪೂರ. ವ್ಯಾಪಕ ಜೀವನಾನುಭವ, ವಿಸ್ತಾರವಾದ ಅಧ್ಯಯನ, ಅಪೂರ್ವ ಸ್ಮರಣಶಕ್ತಿ, ರಂಜನೀಯ ಅಂಶಗಳ ಕಥಾಪಾಕ, ನಿರರ್ಗಳವಾದ ನಿರೂಪಣೆ, ಪಾಂಚಜನ್ಯದಂತಹ ಕಂಠಶ್ರೀ, ನಿತ್ಯನೂತನ ಕಥನಕ್ರಮ, ನವನವೋನ್ಮೇಷ ಶಾಲಿನಿಯಾದ ಪ್ರತಿಭಾ ವಿಶೇಷತೆ ಭದ್ರಗಿರಿಯವರ ಹರಿಕಥೆಯ ಮುಖ್ಯಾಂಶಗಳು.

ಅವರೇ ಹೇಳಿಕೊಂಡಂತೆ ’ಹೊಸತು ಕಿನ್ನರಿಯಲಿ ಹಳೆಯ ಹಾಡನುಕ್ಕಿಸು’ ಎಂಬ ಕವಿವಾಣಿ ಅವರಿಗೆ ಆದರ್ಶ. ಜೀವನದ ಉದಾತ್ತತೆ, ಆದರ್ಶ ಮೌಲ್ಯಗಳನ್ನು ಮತಪಂಥ ನಿರಪೇಕ್ಷ ರೀತಿಯಲ್ಲಿ ಜನರಿಗೆ ತಲುಪಿಸುವುದು ಅವರ ಧ್ಯೇಯ. ದ್ವೆತ-ಅದ್ವೆತ- ವಿಶಿಷ್ಟಾದ್ವೆ ತಗಳೆಂಬ ಗೊಂದಲಕ್ಕೆ ಅವಕಾಶವೀಯದೆ ವೈದಿಕ ಅವೈದಿಕ ಪಂಥಗಳ ಸಿದ್ಧಾಂತ ಸಮನ್ವಯದ ಕಡೆ ಗಮನ ಹರಿಸುವ ಪ್ರಾಂಜಲದೃಷ್ಟಿ. ಆ ಕಾರಣದಿಂದಾಗಿಂುೆುೀ ಬುದ್ಧ, ಬಸವ, ಅಂಬೇಡ್ಕರ್ ವಿಚಾರಧಾರೆಗಳು ಅವರ ಹರಿಕಥೆಗಳಲ್ಲಿ ಓತಪ್ರೋತ. ಭದ್ರಗಿರಿಯವರ ಹರಿಕಥೆಗಳಲ್ಲಿ ಗುರುಗ್ರಂಥ ಸಾಹೇಬ್, ಬೈಬಲ್, ಕುರಾನ್, ಜೈನ, ಬೌದ್ಧ ಕಥೆಗಳ ಉಲ್ಲೇಖಗಳು ಹರಿದು ಬರುವುದು ಗಮನಾರ್ಹ. ಇದರಿಂದಾಗಿ ವೈಷ್ಣವ, ಶೈವ ಪೀಠಗಳಲ್ಲದೆ ವೀರಶೈವ, ಜೈನಪೀಠಗಳೂ ಅಚ್ಯುತದಾಸರನ್ನು ತಮ್ಮಲ್ಲಿಗೆ ಕರೆಸಿಕೊಂಡು ಕಥಾಕೀರ್ತನೆ ಏರ್ಪಡಿಸಿವೆ.

ಭದ್ರಗಿರಿಯವರ ಹರಿಕಥೆಯ ಸಂಗೀತ ಕ್ರಮ ಮನಮೋಹಕ. ಹಿಂದೂಸ್ತಾನೀ ಶೈಲಿಯನ್ನು ಹೆಚ್ಚು ಬಳಸಿದರೂ, ಕರ್ನಾಟಕೀ ಪದ್ಧತಿಯ ಬಳಕೆಯೂ ಇಲ್ಲದಿಲ್ಲ. ಗಾನ ಭಾವೋದ್ದೀಪಕವಾಗಿರಬೇಕೆಂಬುದು ಅವರ ನಿಲುವು. ಶಾಸ್ತ್ರೀಯ ಸಂಗೀತದೊಂದಿಗೆ ರಂಗ ಸಂಗೀತ, ಯಕ್ಷಗಾನ, ಜಾನಪದ, ಸುಗಮ ಸಂಗೀತ ಕ್ರಮಗಳ ಸಂಗಮದಿಂದಾಗಿ ಅವರ ಹಾಡು ಆಪ್ಯಾಯಮಾನ. ಸಂಗೀತದೊಂದಿಗೆ ಸಾಹಿತ್ಯಶುದ್ಧಿಯ ಕಡೆಗೂ ಅವರು ಗಮನ ಹರಿಸುತ್ತಾರೆ. ವಾಲ್ಮೀಕಿಯಿಂದ ಹಿಡಿದು ಕಬೀರದಾಸನವರೆಗೂ, ಪಂಪನಿಂದ ತೊಡಗಿ ಕುವೆಂಪುವರೆಗೂ ಕಾವ್ಯಾಂಶಗಳನ್ನು ಕಡೆದಿರಿಸುವ ರೀತಿ ಅನನ್ಯ. ಹಿಂದೀ, ಮರಾಠಿ ಸಂತರ ಸಾಹಿತ್ಯದ ತುಣುಕುಗಳನ್ನು ಇವರಷ್ಟು ಲೀಲಾಜಾಲವಾಗಿ ಉದಾಹರಿಸುವ ಇನ್ನೊಬ್ಬ ಕೀರ್ತನಕಾರ ಇಲ್ಲವೆನ್ನಬಹುದು.

ಈ ಇಳಿಹರೆಯದಲ್ಲೂ ವರ್ಷಕ್ಕೆ ಸುಮಾರು ಮುನ್ನೂರರಷ್ಟು ಕಾರ್ಯಕ್ರಮಗಳನ್ನು ನಡೆಸಿಕೊಡುವ ಉತ್ಸಾಹಶೀಲ. ಅವುಗಳಲ್ಲಿ ಕಥಾಕೀರ್ತನೆ, ಪ್ರವಚನಗಳು, ಸಪ್ತಾಹ ಕಾರ್ಯಕ್ರಮಗಳು, ಸನ್ಮಾನ ಸಮಾರಂಭಗಳು ಎಲ್ಲವೂ ಸೇರಿಕೊಳ್ಳುತ್ತವೆ. ಪ್ರಾಥಮಿಕ ಶಾಲೆಯಿಂದ ತೊಡಗಿ ವಿಶ್ವವಿದ್ಯಾನಿಲಯದವರೆಗೆ, ಹುಚ್ಚಾಸ್ಪತ್ರೆ-ಜೈಲುಗಳಿಂದ ಹಿಡಿದು ಮಠಮಂದಿರಗಳವರೆಗೆ, ಹಳ್ಳಿಯಿಂದ ಹಿಡಿದು ಡಿಲ್ಲಿಯವರೆಗೆ ಅವರ ಕಾರ್ಯಕ್ರಮದ ಹರಹು. ಕನ್ನಡ-ತುಳು-ಕೊಂಕಣಿ-ಹಿಂದಿ-ಮರಾಠಿ ಹೀಗೆ ಐದು ಭಾಷೆಗಳಲ್ಲಿ ಕೀರ್ತನ ನಡೆಸುವ ಇವರ ಭಾಷಾಕೌಶಲ ಅಚ್ಚರಿ ಹುಟ್ಟಿಸುವಂತಹುದು. ಎಷ್ಟೋ ಸಂದರ್ಭಗಳಲ್ಲಿ ಮೂಡಿಬರುವ ಆಶುಕಾವ್ಯಧಾರೆ ವಿಸ್ಮಯಾವಹವಾದುದು. ಅದಕ್ಕಿಂತಲೂ ಮಿಗಿಲಾದುದು ದಿನದಿಂದ ದಿನಕ್ಕೆ ಬದಲಾಗುವ ಕಥನಕ್ರಮದ ವಿನ್ಯಾಸಗಳು. ಒಂದು ಸೀತಾಕಲ್ಯಾಣದಂತೆ ಮತ್ತೊಂದು ಸೀತಾಕಲ್ಯಾಣವಿಲ್ಲ. ಒಂದು ಭಕ್ತ ಸುಧಾಮದಂತೆ ಇನ್ನೊಂದು ಭಕ್ತ ಸುಧಾಮ ವಿಲ್ಲ. ಸಭಾಸದರನ್ನು ಗಮನಿಸಿ ಪ್ರತಿಬಾರಿಯೂ ನಿತ್ಯನೂತನಗೊಳ್ಳುವ ಪ್ರತಿಭಾವಿಲಾಸವದು. ಭದ್ರಗಿರಿಯವರ ಹಿಮ್ಮೇಳನ ಸಾಥಿಗಳಾದ ಗಣಪತಿ ಕಾಮತ್, ಕೆ.ಪಿ. ಕಾಮತ್, ಸುಧಾಕರ ಶೆಣೈ ಅವರುಗಳಿಗೇ ದಾಸರ ಈ ಕೀರ್ತನ ವೈವಿಧ್ಯ ಅಚ್ಚರಿ ಹುಟ್ಟಿಸುತ್ತದೆ. ಹಾಗೆಯೇ ಒಂದು ದೃಷ್ಟಾಂತವನ್ನು ಹತ್ತಾರು ವಿಭಿನ್ನ ಉದ್ದೇಶಕ್ಕೆ ಬಳಸುವ ಕೌಶಲ ಕೂಡಾ ಕುತೂಹಲಕರವಾದುದು. ’’ಈ ಪರಿಯ ಸೊಬಗು ಇನ್ನಾವ ದಾಸರೊಳು ಕಾಣೆ!’’

ಅಚ್ಯುತದಾಸರ ಹರಿಕಥೆಗಳು ರೇಡಿಯೋ, ದೂರದರ್ಶನಗಳಲ್ಲಿ ಅನೇಕ ಬಾರಿ ಪ್ರಸಾರಗೊಂಡಿವೆ. ಅವರ ಹರಿಕಥೆಗಳ ಧ್ವನಿಸುರುಳಿಗಳು, ಸಿಡಿ-ಅಡಕ ಮುದ್ರಿಕೆಗಳು ಅಸಂಖ್ಯ. ಅವುಗಳ ಲೆಕ್ಕವಿಟ್ಟವರಾರು? ಒಂದು ಅಂದಾಜಿನಂತೆ ಕ್ಯಾಸೆಟ್ಗಳು ಸಾವಿರ ಸಂಖ್ಯೆ ದಾಟಿದರೆ, ಸಿ.ಡಿ.ಗಳು ಏಳುನೂರನ್ನು ಮೀರಿವೆ. ಈಗಂತೂ, ದಾಸರಿಗೇ ತಿಳಿಯದಂತೆ ಅಬಿಮಾನಿಗಳು ಅವರ ಹರಿಕಥೆಗಳನ್ನು ವಿದ್ಯುನ್ಮಾನ ತಟ್ಟೆಗಳಲ್ಲಿ ಸಂಗ್ರಹಿಸಿ ಬಿಟ್ಟಿದ್ದಾರೆ! ಆ ಮೂಲಕ ಅವುಗಳು ನಾಡಿನ ಮನೆ ಮನೆಗಳಲ್ಲಿ ಭಕ್ತಿ ಜ್ಞಾನ ವೈರಾಗ್ಯಗಳ ಬೀಜ ಬಿತ್ತಿವೆಯಲ್ಲಾ ಎಂಬುದೇ ದಾಸರಿಗೆ ಸಂತೃಪ್ತಿಯ ವಿಷಯ.

ಅಚ್ಯುತದಾಸರ ಹರಿಕಥೆ ಎಂದರೆ ಯಾವುದೋ ಪೌರಾಣಿಕ ಕಥೆಯ ವಿವರಣೆ ಎಂದೇ ತಿಳಿದುಕೊಳ್ಳಬೇಕಾಗಿಲ್ಲ. ಒಂದು ಕೀರ್ತನೆಯನ್ನೇ ಕೇಂದ್ರವಾಗಿಟ್ಟುಕೊಂಡು ಅವರು ಹರಿಕಥೆ ಮಾಡಬಲ್ಲರು. ’ಮಾನವಜನ್ಮ ದೊಡ್ಡದು ಇದ ಹಾನಿಮಾಡಲು ಬ್ಯಾಡಿ ಹುಚ್ಚಪ್ಪಗಳಿರಾ’ ಎಂಬ ಒಂದೇ ಕೀರ್ತನೆಯನ್ನು ಹಾಡುತ್ತಾ, ಅದಕ್ಕೆ ಪೂರಕವಾದ ಉಪನಿಷತ್ತಿನ ಶ್ಲೋಕಗಳು, ಗಾದೆಮಾತುಗಳು, ಉಪಕಥೆಗಳು ಮುಂತಾದವುಗಳಿಂದ ಹರಿಕಥೆ ಮಾಡುವದು ಅವರ ಹಿರಿಮೆ. ಅವರ ಹರಿಕಥೆಯ ಮತ್ತೊಂದು ವಿಶೇಷತೆಯೆಂದರೆ ಶ್ರುತಿಬದ್ಧವಾದ ಮಾತುಗಾರಿಕೆ. ಗದ್ಯವೂ ಪದ್ಯದಂತೆ ಪ್ರಾಸಯುಕ್ತವಾಗಿ, ಹಾಡಿನ ಮುಂದುವರಿಕೆಯಾಗಿ ಮೂಡಿ ಬರುವುದು. ತಾಳ-ತಬಲಾ-ಹಾರ್ಮೋನಿಯಂಗಳು ಕೀರ್ತನೆಯ ಗುಂಗಿನಲ್ಲಿ ಅನುರಣನಗೊಳ್ಳುತ್ತಿರುವಾಗಲೇ ಇವರು ಪುಟ್ಟಪುಟ್ಟ ವಾಕ್ಯಗಳನ್ನು ಅದೇ ತಾಳಖಂಡದೊಳಗೆ ಹೇಳಿ ರೋಮಾಂಚನವನ್ನುಂಟು ಮಾಡುತ್ತಾರೆ. ನವರಸಾಬಿನಯದ ಸ್ವರಸಂಚಾರಗಳಿಂದ ಪರಿಣಾಮಕಾರಿಯಾದ ನಾಟಕೀಯತೆಯನ್ನು ಸಾದಿಸುತ್ತಾರೆ. ಹಿಂದೂಸ್ತಾನೀ ಸಂಗೀತದ ಕೇದಾರ್, ಹಮೀರ್, ಮಾಲಕಂಸ್, ಸೋಹನಿ ರಾಗಗಳು, ಕರ್ನಾಟಕಿಯ ಷಣ್ಮುಖ ಪ್ರಿಯ, ಕಲ್ಯಾಣಿ, ಮೋಹನ, ಹಂಸಧ್ವನಿಗಳು ಅವರಿಗೆ ತುಂಬಾ ಪ್ರಿಯವಾದವುಗಳು. ಆ ರಾಗಗಳು ಅವತರಿಸಬೇಕಾದರೆ ಕೀರ್ತನೆಗಳೇ ಬೇಕಾಗಿಲ್ಲ. ಒಂದು ರಸವತ್ತಾದ ವಾಕ್ಯವೂ ರಾಗವೊಂದರ ಸುಂದರ ಅಬಿವ್ಯಕ್ತಿಯಾಗಬಲ್ಲುದು. ಹೀಗೆ ಒಮ್ಮೆ ಸಂಗೀತ ಸ್ವರ ಸಂಚಾರದಿಂದ, ಇನ್ನೊಮ್ಮೆ ಆಧ್ಯಾತ್ಮಿಕ ಅನುಭೂತಿಯಿಂದ, ಮತ್ತೊಮ್ಮೆ ವ್ಯಾವಹಾರಿಕ ಸಂವಾದಗಳಿಂದ ಅಚ್ಯುತದಾಸರ ಹರಿಕಥೆ ಕಮಾನು ಕಟ್ಟಿದ ಕಾಮನಬಿಲ್ಲಿನಂತೆ ಕಂಗೊಳಿಸುತ್ತದೆ.

ಉಪಕಥೆಗಳ ಕಣಜ

ರಾಮಾಯ ರಾಮಭದ್ರಾಯ

ರಾಮಚಂದ್ರಾಯ ವೇಧಸೇ

ರಘುನಾಥಾಯ ನಾಥಾಯ

ಸೀತಾಯ ಪತಯೇ ನಮಃ”

ಇದು ಬಹು ಪ್ರಸಿದ್ಧವಾದ ಶ್ಲೋಕ. ಆದರೆ ಆ ಪದಪ್ರಯೋಗಗಳಿಗೆ ಇರುವ ಗೂಢಾರ್ಥ ಮನಸ್ಸಿಗೆ ಮುದವನ್ನುಂಟು ಮಾಡುವಂತಹುದು. ಶ್ರೀರಾಮಚಂದ್ರನನ್ನು ದಶರಥ ಚಕ್ರವರ್ತಿ ಮಾತ್ರ ’ರಾಮಾ’ ಎಂದು ಕರೆಯುತ್ತಿದ್ದನಂತೆ. ಆ ರೀತಿಯ ಅದಿಕಾರ ತಂದೆಯಾದವನಿಗೆ ಮಾತ್ರ. ಇನ್ನು ತಾಯಿಯಾದ ಕೌಸಲ್ಯೆ ಮಗನನ್ನು ’ರಾಮಭದ್ರ’ ಎನ್ನುತ್ತಿದ್ದಳಂತೆ. ಅದು ವಾತ್ಸಲ್ಯಭರಿತವಾದ ಸಂಬೋಧನೆ. ಚಿಕ್ಕಮ್ಮ ಕೈಕೇಯಿ ರಾಮಚಂದ್ರ ಎನ್ನುತ್ತಿದ್ದಳು. ಬಾಲ್ಯದಲ್ಲಿ ಬಾನಿನಲ್ಲಿರುವ ಚಂದ್ರ ಬೇಕೆಂದು ಅಳುತ್ತಿದ್ದ ಶ್ರೀರಾಮನಿಗೆ ಕೈಕೇಯಿ-ಮಂಥರೆಯರು ಕನ್ನಡಿಯೊಳಗೆ ಚಂದ್ರಬಿಂಬ ತೋರಿಸಿ ಸಮಾಧಾನಪಡಿಸಿದ್ದರು! ಆ ಕಾರಣದಿಂದ ರಾಮಚಂದ್ರ ಎಂಬ ಅನ್ವರ್ಥನಾಮ. ಬ್ರಹ್ಮರ್ಷಿಗಳಾದ ವಶಿಷ್ಠರು ಶ್ರೀರಾಮನನ್ನು ಪರತತ್ತ್ವವೆಂದು ತಿಳಿದು ’ವೇಧಸೇ’ ಎಂದು ಕರೆಯುತ್ತಿದ್ದರು. ಆದರೆ ಅಯೋಧ್ಯೆಯ ಪುರಜನರೆಲ್ಲಾ ’ನಮ್ಮ ರಘುವಂಶದ ಅರಸು’ ಎಂಬರ್ಥದಲ್ಲಿ ’ರಘುನಾಥ’ ಎಂದು ಕರೆಯುತ್ತಿದ್ದರು. ಇನ್ನು ’ನಾಥ’ ಎಂದಷ್ಟೆ ಕರೆಯುತ್ತಿದ್ದವಳು ಸೀತಾದೇವಿ ಮಾತ್ರ. ಹಾಗೆ ಕರೆಯುವುದು ಅವಳೊಬ್ಬಳ ಹಕ್ಕು! ಆದರೆ ಮಿಥಿಲೆಯ ಜನರೆಲ್ಲರೂ ’ನಮ್ಮ ಸೀತೆಯ ಗಂಡ’ ಎಂಬ ಅಬಿಮಾನದಿಂದ ’ಸೀತಾಯ ಪತಯೇ’ ಎನ್ನುತ್ತಿದ್ದರು! ಅಂತಹ ರಾಮನಿಗೆ ನಮಸ್ಕಾರ!

ಒಂದು ಸಾಧಾರಣ ಶ್ಲೋಕದ ಮೂಲಕ ಜನಮನವನ್ನು ಅಚ್ಯುತದಾಸರು ಸೂರೆಗೊಳ್ಳುತ್ತಿದ್ದರೆಂಬುದಕ್ಕೆ ಇದು ನಿದರ್ಶನ. ಅವರ ಹರಿಕಥೆಯ ವಿಶೇಷತೆಯೆಂದರೆ ಕಿರಿದಾದ ಉಪಕಥೆಗಳ ಪರಿಣಾಮಕಾರಿ ಬಳಕೆ. ಅದು ಜನರನ್ನು ನಗಿಸುವ ಪರಿಮಿತ ಉದ್ದೇಶದಿಂದ ಕೂಡಿದ್ದಲ್ಲ. ಸರಳವಾದ ದೃಷ್ಟಾಂತದ ಮೂಲಕ ಆಧ್ಯಾತ್ಮಿಕ ಸ್ಪರ್ಶವನ್ನೋ, ಲೋಕೋತ್ತರ ನೀತಿಯನ್ನೋ ಸಾದಿಸುವುದು ಭದ್ರಗಿರಿಯವರ ಪ್ರತಿಭಾವಿಲಾಸ. ಆ ಉಪಕಥೆಗಳು ಎಂದೂ ದೀರ್ಘವಾಗಿರುವುದಿಲ್ಲ ಎಂಬುದು ಮಹತ್ತ ್ವದ ವಿಚಾರ. ಆಕಾರದಲ್ಲಿ ಚುಟುಕು, ಆದರೆ ಆನಂದ ಪ್ರಾಪ್ತಿಗೆ ಚುರುಕು. ಸಮಕಾಲೀನ ಆಧುನಿಕ ಜಗತ್ತಿನ ವಿಲಕ್ಷಣ ನಡವಳಿಕೆಯನ್ನು ಬಿಂಬಿಸುವ ಮಾರ್ಮಿಕ ಕಥೆಗಳ ಸ್ವಾರಸ್ಯ ಅನುಭವೈಕವೇದ್ಯ. ಒಂದೊಂದರ ರುಚಿಯೂ ವಿಬಿನ್ನ, ವಿಶಿಷ್ಟ. ಅಲ್ಲಿ ವ್ಯಂಗ್ಯವಿದೆ, ವಿಡಂಬನೆ ಇದೆ. ಸತ್ತ್ವಶೋಧವಿದೆ, ತತ್ತ್ವಬೋಧವಿದೆ. ಆದರೆ ಎಲ್ಲಿಯೂ ಅಶ್ಲೀಲತೆಯ ಸೋಂಕಿಲ್ಲ, ಅಪಹಾಸ್ಯದ ಆಲಾಪವಿಲ್ಲ. ಅಂತಹ ಸಾವಿರಾರು ಉಪಕಥೆಗಳ ಜನಕನೆಂದು ಅವರನ್ನು ಕರೆಯಬಹುದು. ಅದಕ್ಕಾಗಿಯೇ ಅವರಿಗೆ ’ಉಪಕಥೆಗಳ ಕಣಜ’ ಎಂಬ ಅನ್ವರ್ಥ ನಾಮವಿದೆ. ಮಾದರಿಗಾಗಿ ಕೆಲವು ಉಪಕಥೆಗಳನ್ನು ಇಲ್ಲಿ ಆಯ್ದು ನೀಡಲಾಗಿದೆ.

  • ತಂದೆ ತನ್ನ ಮಗನಿಗೆ ಬುದ್ಧಿವಾದ ಹೇಳುತ್ತಾ – ’ಮಗೂ, ಈ ಪೆನ್ಸಿಲ್ ಎಲ್ಲಿಂದ ಬಂತು? ಶಾಲೆಯಲ್ಲಿ ಬೇರೆ ಮಕ್ಕಳ ಚೀಲದಿಂದ ಕದ್ದುಕೊಂಡು ಬಂದೆಯಾ? ಇನ್ನು ಮುಂದೆ ಹಾಗೆ ಮಾಡಬೇಡ. ಏನು ಬೇಕಿದ್ದರೂ ನನ್ನಲ್ಲಿ ಕೇಳು. ಒಂದಲ್ಲ, ಹತ್ತು ಬೇಕಾದರೂ ಕೇಳು. ನಾನು ಆಫೀಸಿನಿಂದ ತಂದುಕೊಡುತ್ತೇನೆ’ ಎಂದನಂತೆ.
  • ಬಾಲ್ಯದಲ್ಲಿ ಮಗು ’ಹಣ್ಣು, ಹಣ್ಣು’ ಎಂದು ಅಳುತ್ತದೆ. ತಾರುಣ್ಯ ಬಂದಾಗ ’ಹೆಣ್ಣು, ಹೆಣ್ಣು’ ಎಂದು ಹಲುಬುತ್ತಾನೆ. ವೃದ್ಧಾಪ್ಯ ಬಂದಾಗ ಇನ್ನೇನು ಮಣ್ಣು ಎನ್ನುತ್ತಾನೆ.
  • ನಾವು ಏನೇನು ಉಣ್ಣುತ್ತೇವೆಯೋ ಅದೆಲ್ಲಾ ಪ್ರಾಣಿಗಳ ಎಂಜಲು! ಪ್ರಾಣಿಗಳು ತಿಂದು ಬಿಟ್ಟದ್ದನ್ನು ಮನುಷ್ಯ ತಿನ್ನುತ್ತಾನೆ. ನೀರು ಮೀನಿನ ಎಂಜಲು, ಹೂವು ದುಂಬಿಯ ಎಂಜಲು, ಹಾಲು ಕರುವಿನ ಎಂಜಲು. (ಪೋಸ್ಟ್ ಆಪೀಸಿಗೆ ಹೋಗಿ ಸ್ಟಾಂಪ್ ಕೇಳಿದರೆ ಅದೂ ಎಂಜಲು!) ಬೆರಕೆಯ ಪದಾರ್ಥಗಳನ್ನು ತಿಂದೇ ಮನುಷ್ಯ ಬದುಕಬೇಕಾಗುತ್ತದೆ. ಇದರಿಂದ ಬೇಸತ್ತ ವ್ಯಕ್ತಿಯೊಬ್ಬ ಜೀವನವೇ ಸಾಕು ಎಂದು ವಿಷ ತಿಂದನಂತೆ! ಆದರೆ ಅವನು ಸಾಯಲಿಲ್ಲ. ಏಕೆಂದರೆ ವಿಷ ಕೂಡಾ ಬೆರಕೆ! ಅಶುದ್ಧವಾದ ವಿಷವನ್ನು ತಿಂದದ್ದರಿಂದ ಹೊಟ್ಟೆನೋವು ಬಂದು ವೈದ್ಯರ ಹತ್ತಿರ ಹೋಗಿ ಗುಳಿಗೆ ನುಂಗಿದ. ಆದರೆ ಪಾಪ, ಅವನು ಆ ಕೂಡಲೇ ಸತ್ತುಬಿಟ್ಟ! ಏಕೆಂದರೆ ಔಷಧ ಕೂಡಾ ಬೆರಕೆ!
  • ಪ್ರಾಣಿಗಳಿಗೆ ಎಲ್ಲೆಂದರಲ್ಲಿ ಯಾವಾಗ ಬೇಕೋ ಆವಾಗ ಸುಖನಿದ್ರೆ ಬರುತ್ತದೆ. ಆದರೆ ಮನುಷ್ಯನಿಗೆ ನಿದ್ರೆ ಮಾಡಲು ಎಷ್ಟೊಂದು ವ್ಯವಸ್ಥೆ! ಎತ್ತರದ ಮಹಡಿ ಮನೆ, ಮೆತ್ತಗಿನ ಹಾಸಿಗೆಯುಳ್ಳ ಮಂಚ, ತಂಗಾಳಿ ತನ್ನೆಡೆಗೇ ತೀಡುವ ವ್ಯವಸ್ಥೆ. ಇಷ್ಟೆಲ್ಲಾ ಇದ್ದರೂ ನಿದ್ರೆ ಬರಬೇಕಾದರೆ ಡಾಕ್ಟರ್ ಕೊಟ್ಟ ಗುಳಿಗೆ ನುಂಗಬೇಕು. ನಿಮ್ಮಲ್ಲಿ ಯಾರಾದರೂ ನಿದ್ರೆ ಬರದೇ ಇದ್ದವರು ಇದ್ದರೆ, ಅವರನ್ನು ’ಹರಿಕಥೆಗೆ ಕರೆದುಕೊಂಡು ಬನ್ನಿ’. ಗುಳಿಗೆ ಮಾತ್ರೆ ಏನೂ ಕೊಡುವುದೇ ಬೇಡ. ಈ ಕಡೆ ಕಥೆ ಆರಂಭವಾದಾಗ ನಿದ್ರೆ ಪ್ರಾರಂಭ ಆಗುತ್ತದೆ! ಹಾಗಾದರೆ ಅವನಿಗೆ ಯಾವಾಗ ನಿದ್ರೆ ಬರಬೇಕೋ ಆವಾಗ ನಿದ್ರೆ ಬರುವುದಿಲ್ಲ, ಯಾವಾಗ ನಿದ್ರೆ ಬರಬಾರದೋ ಆವಾಗ ನಿದ್ರೆ ಬರುತ್ತದೆ!
  • ಒಮ್ಮೆ ಕಣ್ಣು ಕಿವಿ ಮೂಗು ಕೈಕಾಲುಗಳಿಗೆ ಜಗಳ ಉಂಟಾಯಿತಂತೆ. ಕಣ್ಣು ಹೇಳಿತಂತೆ – ’ನಾನೇ ಶ್ರೇಷ್ಠ. ನಿಮಗೆಲ್ಲಾ ಪ್ರಪಂಚವನ್ನು ತೋರಿಸಿದವನು’. ಕಿವಿ ಹೇಳಿತಂತೆ – ’ನಾನೇ ಹೆಚ್ಚಿನವನು. ನನಗೆ ಚಿನ್ನದ ಒಡವೆ ಹಾಕುತ್ತಾರೆ. ನಿನಗಾದರೋ ಕಾಡಿಗೆ ಹಚ್ಚುತ್ತಾರೆ. ನಾನೇ ನಿನಗೆ ಒಳ್ಳೆಯ ವಿಚಾರಗಳನ್ನು ಕೇಳಿಸಿ ಪ್ರಪಂಚದ ಪರಿಚಯ ಮಾಡಿಸುವವನು.’ ಆಗ ಮೂಗು ಹೇಳಿತಂತೆ – ’ನನ್ನನ್ನೇ ಮರೆತುಬಿಟ್ಟಿರೇ? ಮುಖದ ಮೇಲೆ ನಾನು ಇದ್ದರೇನೇ ಸೌಂದರ್ಯ. ನಾನೇನಾದರೂ ಸೊಟ್ಟಗಾಗಿ ಬಿಟ್ಟರೆ ಸೌಂದರ್ಯವೇ ಇರುವುದಿಲ್ಲ. ಸುಗಂಧ ದುರ್ಗಂಧಗಳನ್ನು ಸೂಚಿಸುವ ನಾನೇ ಶ್ರೇಷ್ಠ’ ನಾಲಿಗೆ ಹೇಳಿತಂತೆ – ’ಏನೋ? ಏಕಕಾಲದಲ್ಲಿ ಎರಡು ಕೆಲಸ ಮಾಡುವವರು ಯಾರು? ಮಾತಾಡುವುದು ಮತ್ತು ತಿನ್ನುವುದು. ಎರಡನ್ನೂ ಒಟ್ಟಿಗೇ ಮಾಡುವ ರಸಜ್ಞಾನವುಳ್ಳ ನನ್ನನ್ನೇ ಮರೆತುಬಿಟ್ಟಿಯಾ?’ ಕೈ ಹೇಳಿತಂತೆ – ನಾನಾ ರುಚಿಕರವಾದ ಪದಾರ್ಥಗಳನ್ನು ಎತ್ತಿ ಎತ್ತಿ ಕೊಡುವುದು ನಾನು. ಸುಮ್ಮನೆ ಕುಳಿತು ಚಪ್ಪರಿಸುವುದು ನೀನು. ಆದ್ದರಿಂದ ನಾನೇ ಶ್ರೇಷ್ಠ’. ಕಾಲು ಹೇಳಿತಂತೆ – ’ನಿಮ್ಮನ್ನೆಲ್ಲಾ ಹೊತ್ತುಕೊಂಡು ತಿರುಗುವವರು ಯಾರು? ಊರೆಲ್ಲಾ ಮೆರೆಸಿದ್ದು ಯಾರು? ಆದ್ದರಿಂದ ನಾನೇ ಶ್ರೇಷ್ಠ?’ ಆಗ ಉಸಿರು ಹೇಳಿತಂತೆ – ’ಸುಮ್ಮನೆ ಜಗಳಬೇಡ. ನೀವು ಇಲ್ಲದಿದ್ದರೆ ಏನಾಗುತ್ತದೆಯೋ ನೋಡೋಣ. ನೀವೆಲ್ಲಾ ಎರಡೆರಡು ತಿಂಗಳು ರಜೆ ಹಾಕಿ ಹೋಗಿ.’

ಮೊದಲು ಕಣ್ಣು ರಜೆ ಹಾಕಿ ಹೋಯಿತು. ಎಲ್ಲಾ ಸಿನೆಮಾ ಥಿಯೇಟರ್ ಬಂದ್! ಕಣ್ಣು ಹೋದದ್ದರಿಂದ ಏನೂ ತೊಂದರೆಯಾಗಲಿಲ್ಲ. ಹೆಣ್ಣು ಮಕ್ಕಳು ಧೈರ್ಯವಾಗಿ ಬೀದಿಯಲ್ಲಿ ತಿರುಗಾಡಿದರು. ಆಮೇಲೆ ಕಿವಿ ರಜೆಯ ಮೇಲೆ ಹೋಯಿತು. ಏನೂ ತೊಂದರೆಯಿಲ್ಲ. ಶಾಂತವಾಗಿದೆ. ಯಾವ ಆರ್ಕೆಸ್ಟ್ರಾದ ಗದ್ದಲವೂ ಕೇಳುವುದಿಲ್ಲ. ಯಾವ ಬೊಬ್ಬೆಯೂ ಇಲ್ಲ. ಹೆಂಡತಿ ಬೈದರೂ ಕೇಳಿಸಲಿಲ್ಲ. ಮೂಗು ರಜೆ ಹಾಕಿ ಹೋಯಿತು. ಏನೂ ತೊಂದರೆ ಆಗಲಿಲ್ಲ. ಮುನಿಸಿಪಾಲಿಟಿಯವರು ಮೂರು ತಿಂಗಳು ಕಸ ಎತ್ತದಿದ್ದರೂ ಏನೂ ವಾಸನೆ ಬರಲಿಲ್ಲ. ಆಮೇಲೆ ನಾಲಿಗೆ ರಜೆ ಮೇಲೆ ಹೋಯಿತು; ಕೈ ಹೋಯ್ತು; ಕಾಲು ಹೋಯ್ತು. ಏನೂ ತೊಂದರೆ ಆಗಲಿಲ್ಲ. ಕೊನೆಗೆ ಉಸಿರು ಎಲ್ಲರನ್ನೂ ಕರೆದು ಹೇಳಿತಂತೆ – ನಾನು ಮೂರು ದಿವಸ ರಜೆ ಹಾಕಿ ಹೋಗಲೇ?

ಆಗ ಉಳಿದವರೆಲ್ಲಾ ಹೇಳಿದರಂತೆ – ’ಬೇಡಪ್ಪಾ… ಮೂರು ದಿವಸ ಅಲ್ಲ, ನೀನು ಮೂರುಗಳಿಗೆ ಹೋದರೂ ನಮ್ಮನ್ನು ಎತ್ತಿ ಹಿಡಿದುಕೊಂಡು ಹೋಗಿ ಸುಟ್ಟು ಹಾಕಿ ಬಿಡುತ್ತಾರೆ! ನೀನಲ್ಲವೇ ನಮ್ಮ ಮುಖ್ಯಪ್ರಾಣ!! ವಾಯು ಜೀವೋತ್ತಮ!’

  • ಸಾವು ನಿಶ್ಚಿತ. ಅದನ್ನು ಮುಂದೂಡಲಿಕ್ಕೆ ನಾವು ಪ್ರಯತ್ನ ಪಡುತ್ತಾ ಇರುತ್ತೇವೆ. ಆದರೆ ಸಾವು ಒಂದೇ ಸವನೆ ಬರುವುದಿಲ್ಲ. ಪ್ರಕೃತಿ ನಮ್ಮನ್ನು ನಿತ್ಯ ತುತ್ತುಗೊಳ್ಳುತ್ತಾ ಇರುತ್ತದೆ. ನಮಗೆ ಮಾತ್ರ ಅದು ತಿಳಿಯುವುದಿಲ್ಲ. ಮೃತ್ಯು ಹೇಳದೇ ಬರುವುದಿಲ್ಲ. ಹೇಳಿ ಕಳುಹಿಸಿದ ಮೇಲೆಯೇ ಬರುವುದು. ನಮಗೆ ಮಾತ್ರ ಅದು ಕೇಳುವುದಿಲ್ಲ. ನೋಡಿ, ನಮಗೆ ವಯಸ್ಸಾದಾಗ ಕಿವಿಯ ಹತ್ತಿರ ಮೊದಲು ಕೂದಲು ಬೆಳ್ಳಗಾಗುತ್ತದೆ. ಮೃತ್ಯು ಬಂದು ಕಿವಿಯ ಹತ್ತಿರ ಹೇಳುವ ವಿಧಾನ ಅದು. ನಮಗೆ ಅದು ಕೇಳುವುದೇ ಇಲ್ಲ. ಮೊದಲನೇ ನೋಟಿಸ್ ಕೇಳುವವರಲ್ಲ ನಾವು! ಎರಡನೇ ರಿಜಿಸ್ತ್ರಿ ನೋಟಿಸ್ ಬರುತ್ತದೆ. ದವಡೆಗೆ ಒಂದು ಏಟು ಬೀಳುತ್ತದೆ. ಒಂದೊಂದೇ ಹಲ್ಲು ಉದುರ ತೊಡಗುತ್ತದೆ!
  • ಒಮ್ಮೆ ಒಬ್ಬ ಫೋಟೋ ತೆಗೆಸಬೇಕೆಂದು ಕ್ಯಾಮೆರಾಮೆನ್ನನ್ನು ಕರೆಸಿದ. ’ಒಳ್ಳೆಯ ಫೋಟೋ ತೆಗೆ’ ಎಂದು ಹೇಳಿದ. ಅದಕ್ಕೆ ಅವನು – ’ಒಳ್ಳೆಯ ಫೋಟೋ, ಕೆಟ್ಟ ಫೋಟೋ ಎಂದೇನೂ ಇಲ್ಲ. ನಿನ್ನ ಮುಖ ಇದ್ದ ಹಾಗೆ ಫೋಟೋ ಬರುತ್ತದೆ’ ಎಂದ. ’ಹೇಗೆ ಕುಳಿತುಕೊಳ್ಳುವುದು ಎಂದು ಗೊತ್ತಿಲ್ಲ, ಸ್ವಲ್ಪ ಹೇಳಿಕೊಡು’ ವಿನಂತಿಸಿದ. ’ಸ್ವಲ್ಪ ಕತ್ತು ಓರೆ ಮಾಡು, ಸ್ವಲ್ಪ ಮುಗುಳು ನಗುತ್ತಾ ಇರು, ಎಲ್ಲಾ ಹಲ್ಲು ಬಿಡಬೇಡ’ ಎಂದು ಸೂಚಿಸಿದ. ಅವನು ಮುಗುಳು ನಗುತ್ತಾ ಕುಳಿತಾಗ ಕ್ಯಾಮೆರಾಮೆನ್ ’ರೆಡಿ, ಸ್ಟೆಡಿ’ ಎಂದು ಗುಂಡಿ ಒತ್ತಿಯೇ ಬಿಟ್ಟ! ಆ ಹೊತ್ತಿಗೇ ಈ ಮಹರಾಯನಿಗೆ ಆಕಳಿಕೆ ಬಂದುಬಿಟ್ಟಿತು! ಹೆಣ ಬಾಯಿ ಬಿಟ್ಟಹಾಗೆ ಫೋಟೋ ಬಂತು. ನಾವು ಕೊನೆಗಾಲದಲ್ಲಿ ಹೇಗಿರುತ್ತೇವೆಯೋ ಹಾಗೆ ನಮ್ಮ ಫೋಟೋ ಬರುತ್ತದೆ.
  • ಒಬ್ಬ ರಾಜ ಒಂದು ಆನೆ ಸಾಕಿದ್ದನಂತೆ. ಅದನ್ನು ನೋಡಿಕೊಳ್ಳುವುದಕ್ಕೆ ಕೆಲಸಗಾರರನ್ನು ಇಟ್ಟಿದ್ದ. ಒಂದು ದಿನ ಆ ರಾಜನು ’ನನ್ನ ಆನೆಯನ್ನು ಸಾಯದೇ ಇದ್ದ ಹಾಗೆ ನೋಡಿಕೊಳ್ಳಿ; ಆನೆ ಸತ್ತು ಹೋಯಿತು ಎಂದು ಯಾರಾದರೂ ಹೇಳಿದಿರೋ, ಅವರನ್ನು ಗಂಡು ಹಾರಿಸಿ ಕೊಲ್ಲಲಾಗುವುದು!’ ಎಂದು ಆಜ್ಞಾಪಿಸಿದನಂತೆ. ಸಾಯದಿದ್ದ ಹಾಗೆ ನೋಡಿಕೊಳ್ಳುವುದು ಹೇಗೆ? ಸಾಯುವಾಗ ನೋಡಿಕೊಳ್ಳಬಹುದು; ಅಷ್ಟೆ. ಹುಟ್ಟಿದವರಿಗೆ ಸಾವು ನಿಶ್ಚಿತ. ಒಂದು ದಿನ ಆನೆ ಸತ್ತೇ ಹೋಯಿತು! ಆದರೆ ರಾಜನಿಗೆ ಆ ಸುದ್ದಿಯನ್ನು ಹೇಳಲು ಯಾರೂ ಸಿದ್ಧರಿಲ್ಲ. ಆಗ ಒಬ್ಬ ಜಾಣ ರಾಜನಲ್ಲಿಗೆ ಹೋಗಲು ಸಿದ್ಧನಾದ.

’ಸ್ವಾಮೀ, ನಾನು ಆನೆ ಇರುವಲ್ಲಿಂದ ಬಂದೆ.’

’ಹೇಗಿದೆ ನನ್ನ ಆನೆ?’

’ಸುಖವಾಗಿದೆ, ಏನೂ ತಂಟೆ ತಕರಾರಿಲ್ಲ, ಸುಮ್ಮನೆ ಮಲಗಿದೆ’

’ಹೋ! ವಿಶ್ರಾಂತಿಯಿಂದಿರಬೇಕು’

’ಹದಿನೈದು ದಿನವಾಯ್ತು. ಅದು ಸೊಂಡಿಲು, ಬಾಲ ಎತ್ತುವುದಿಲ್ಲ’

’ಹೋ, ಮೈಮರೆತು ನಿದ್ರಿಸಿರಬೇಕು’

’ದಾಡೆಗಳು ಮುರಿದಿವೆ ಸ್ವಾಮಿ. ಹೊಟ್ಟೆಯ ಕರುಳೆಲ್ಲ ಹೊರಗೆ ಬಂದಿವೆ. ಎಲ್ಲಾ ಕಡೆ ದುರ್ಗಂಧ ತುಂಬಿದೆ’

’ಸುಮ್ಮನೆ ಏಕೆ ವೇಳೆ ಕಳೆಯುವೆ? ಆನೆ ಸತ್ತು ಹೋಯಿತೆಂದು ಹೇಳು’

’ಸ್ವಾಮಿ, ಅದನ್ನು ತಾವು ಹೇಳಬೇಕು!’

  • ಒಬ್ಬ ಮಂಚದ ಮೇಲೆ ಮಲಗಿದ್ದಾನೆ. ಮತ್ತೊಬ್ಬ ನೆಲದ ಮೇಲೆ ಮಲಗಿದ್ದಾನೆ. ಇಬ್ಬರಿಗೂ ಕನಸು ಬೀಳುತ್ತದೆ. ಮಂಚದ ಮೇಲೆ ಮಲಗಿದವನಿಗೆ ಐನೂರು ರೂಪಾಯಿ ಸಿಕ್ಕಿದ ಕನಸು. ನೆಲದ ಮೇಲೆ ಮಲಗಿದವನಿಗೆ ಐದು ರೂಪಾಯಿ ಸಿಕ್ಕಿದ ಕನಸು. ಇಬ್ಬರಿಗೂ ಎಚ್ಚರವಾಯಿತು. ಇಬ್ಬರೂ ಹಣ ಹುಡುಕತೊಡಗಿದರು! ಇಬ್ಬರಿಗೂ ಪರಸ್ಪರ ಸಂದೇಹ. ಊರಿನ ಪಂಚಾಯ್ತಿಯವರನ್ನು ಕರೆದು ದೂರು ಕೊಟ್ಟರು. ಅವರು ಕೇಳಿದರು –

’ನಿದ್ರೆ ಮಾಡುವ ಮೊದಲು ನಿಮ್ಮ ಹತ್ತಿರ ಎಷ್ಟು ಹಣವಿತ್ತು?’

’ನಮ್ಮ ಕೈಯಲ್ಲಿ ಏನೂ ಇರಲಿಲ್ಲ; ಈಗಲೂ ಇಲ್ಲ’

’ಮತ್ತೆಲ್ಲಿಂದ ಬಂತು ಆ ಹಣ?’

’ಕನಸಿನಲ್ಲಿ ಸಿಕ್ಕಿತು’

’ಕನಸಿನಲ್ಲಿ ಸಿಕ್ಕ ಹಣ ಎಂದ ಮೇಲೆ ಲೆಕ್ಕಾಚಾರಕ್ಕೆ ಸಿಗುವುದಿಲ್ಲ. ಮತ್ತೆ ಇಬ್ಬರೂ ಮಲಗಿ ನಿದ್ರಿಸಿ. ಕನಸು ಬಿದ್ದಾಗ ಅಲ್ಲೇ ಲೆಕ್ಕಾಚಾರ ಮಾಡಿಕೊಳ್ಳಿ’

***

ಇಲ್ಲಿಯ ಒಂದೊಂದು ಉಪಕಥೆಗೂ ದಾರ್ಶನಿಕ ಒಳನೋಟವಿದೆ. ಜೀವನದ ಕ್ಷಣಭಂಗುರತೆಯ ಆಧ್ಯಾತ್ಮಿಕ ಸ್ಪರ್ಶವಿದೆ. ಉಪಕಥೆಯ ಮುಕ್ತಾಯದಲ್ಲಿ ಒಂದು ಉಪನಿಷದ್ ವಾಕ್ಯವನ್ನೋ, ಕೀರ್ತನೆಯ ಸಾಲೊಂದನ್ನೋ ತಂದು ಅಲೌಕಿಕ ವಿಚಾರದೊಂದಿಗೆ ಅದನ್ನು ತಳುಕು ಹಾಕುವ ಅನನ್ಯ ಶೈಲಿ ಭದ್ರಗಿರಿಯವರಿಗೇ ಮೀಸಲು.

ಹರಿಕಥೆಯಲ್ಲಿ ಯಕ್ಷಗೀತೆ

ಅಚ್ಯುತದಾಸರು ಯಕ್ಷಗಾನದ ಹಿನ್ನೆಲೆಯಿಂದ ಬಂದವರಾದ ಕಾರಣ ಅವರ ಹರಿಕಥೆಗಳಲ್ಲಿ ಯಕ್ಷಗಾನದ ಹಾಡುಗಳು ಅಲ್ಲಲ್ಲಿ ಬಳಕೆಯಾಗುತ್ತವೆ. ಪಾರ್ತಿಸುಬ್ಬ, ದೇವಿದಾಸ, ಧ್ವಜಪುರದ ನಾಗಪ್ಪಯ್ಯ, ಹಳೆಮಕ್ಕಿ ರಾಮ ಮುಂತಾದ ಯಕ್ಷಗಾನ ಕವಿಗಳ ಪದ್ಯಗಳನ್ನು ಅಚ್ಯುತದಾಸರು ಹಾಡಿದಾಗ ಸಾಹಿತ್ಯಾಸಕ್ತರು ಮೂಗಿಗೆ ಬೆರಳೇರಿಸುತ್ತಾರೆ. ಸಾಮಾನ್ಯ ಜನರಿಗಿಂತಲೂ ಹೆಚ್ಚಾಗಿ ಇದು ಇತರ ಹರಿದಾಸರುಗಳಿಗೆ ಅಚ್ಚರಿಯ ಸಂಗತಿ. ’ಎಲ್ಲಿಂದ ಹುಡುಕಿತಂದಿರಿ ಈ ಸುಂದರ ಕೀರ್ತನೆಗಳನ್ನು?’ ಎಂದು ಎಷ್ಟೋ ಬಾರಿ ಹರಿದಾಸರುಗಳೇ ಪ್ರಶ್ನಿಸುತ್ತಾರಂತೆ!

ಒಮ್ಮೆ ಒಂದೂರಿನಲ್ಲಿ ’ಶ್ರೀಕೃಷ್ಣಸಂಧಾನ’ದ ಹರಿಕಥೆ. ಭದ್ರಗಿರಿಯವರು ದೇವಿದಾಸರು ರಚಿಸಿದ ಹಾಡನ್ನು ಹಾಡತೊಡಗಿದರು.

“ಅಣ್ಣನವರಿಗೆ ನೀತಿಯಾದರೆ

ನಿನ್ನ ಮನಕೊಪ್ಪಿದರೆ ಭೂತಳ

ವನ್ನು ಕೌರವನಿತ್ತರೆನಗೇ-

ನಿನ್ನು ದುಗುಡ”

ಇಲ್ಲಿರುವ ’ರೆ’ ಪ್ರತ್ಯಯ ಅಪ್ಪಟ ದೇಸೀ ಅಬಿವ್ಯಕ್ತಿ. ’ಕಿರುನಗೆಯ ಕೇವಣಿಸಿ’ ಮಾಧವನು ಹಾಗೆ ಹೇಳುವುದರಲ್ಲಿ ವ್ಯಂಗ್ಯದ ಮೊನಚು ತುಂಬಿದೆ. ಅದನ್ನು ಹರಿಕಥೆಯಲ್ಲಿ ಭದ್ರಗಿರಿಯವರು ಅನಾವರಣ ಮಾಡಿದಾಗ ಯಕ್ಷಗಾನ ಕಾವ್ಯವೂ ಸಾರ್ಥಕವಾಗುತ್ತದೆ.

ಪಾರ್ತಿಸುಬ್ಬನ ’ಉಂಗುರಸಂದಿ’ಯಲ್ಲಿರುವ ’ನೀನೇ ಕಲಿ ಹನುಮ’, ಪಂಚವಟಿಯ ’ಪಾಹಿಪಂಕಜದಳಲೋಚನ’, ಪಟ್ಟಾಬಿಷೇಕದ ’ಏನಾಯಿತಂಬುಜನೇತ್ರೆ’ ಮುಂತಾದ ಪದ್ಯಗಳನ್ನು ಭದ್ರಗಿರಿಯವರ ಕಂಠದಲ್ಲಿ ಕೇಳುವಾಗ ಹೊಸದಾದ ಭಾವಲೋಕವೊಂದು ಸೃಷ್ಟಿಯಾಗುತ್ತದೆ. ಕೃಷ್ಣಾರ್ಜುನ ಕಾಳಗದ ’ಹೇಳಲಾರೆನು ರಂಗ ಹೇಳದುಳಿಯಲಾರೆನು’, ಬಭ್ರುವಾಹನ ಕಾಳಗದ ’ಅಹುದೇ ಎನ್ನಯ ರಮಣ’ ಮುಂತಾದ ಹಾಡುಗಳ ಒಂದೆರಡು ಸಾಲುಗಳು ಅಲ್ಲಲ್ಲಿ ಮಿಂಚಿದಾಗ ಯಕ್ಷಗಾನ ಪ್ರಿಯರಿಗೆ ಉಂಟಾಗುವ ಸಂತಸ ಅಷ್ಟಿಷ್ಟಲ್ಲ. ಭದ್ರಗಿರಿಯವರ ’ಗಿರಿಜಾಕಲ್ಯಾಣ’ ಹರಿಕಥೆಯಲ್ಲಿ ಈಗಲೂ ದೇವಿದಾಸನ ಜೋಗುಳ ಪದ್ಯ ರಸಿಕರನ್ನು ತಣಿಸುತ್ತದೆ.

ಜೋಜೋ ಗಿರಿಕುಲಾದಿಪ ಸುಕುಮಾರಿ

ಜೋಜೋ ಪ್ರಣತಜನೌಘ ಉದ್ಧಾರಿ

ಜೋಜೋ ಸದ್ಗುಣಭರಿತೆ ಸಾಕಾರಿ

ಜೋಜೋ ಪಾವನಚರಿತೆ ಶೃಂಗಾರಿ”

 

ಅಂಬುಜಭವಸುರವಂದಿತೆ ಜೋಜೋ

ಶುಂಭನಿಶುಂಭ ಸಂಹಾರಿಣಿ ಜೋಜೋ

ಕಂಬುಕಂಧರೆ ಕಮಲಾಂಬಕಿ ಜೋಜೋ

ಶಂಭುವಿನರಸಿ ಸದಾಶಿವೆ ಜೋಜೋ”

ಕೀರ್ತನ ಕಲಾಪರಿಷತ್ತು

ಕನ್ನಡದಲ್ಲಿ ಹುಟ್ಟಿದ ಹರಿಕಥಾಕೀರ್ತನ ಕಲೆಯನ್ನು ಕರ್ನಾಟಕದಲ್ಲಿ ಉಳಿಸಿ ಬೆಳೆಸುವ ಕಡೆಗೆ ಅಚ್ಯುತದಾಸರಿಗೆ ಎಲ್ಲಿಲ್ಲದ ಆಸೆ. ಅದಕ್ಕಾಗಿ ಅವರು ಸೋದರ ಸಂತ ಕೇಶವದಾಸರೊಂದಿಗೆ ಕೈಗೊಂಡ ಉಪಕ್ರಮಗಳು ಅನೇಕ. 1960ರಲ್ಲಿ ಅಧ್ಯಾತ್ಮ ಪ್ರಚಾರಕ್ಕಾಗಿ ’ದಾಸಬಂಧು’ ಎಂಬ ಮಾಸಪತ್ರಿಕೆಯನ್ನು ಆರಂಬಿಸಿದರು. 1961ರಲ್ಲಿ ಕೇಶವದಾಸರು ’ದಾಸವಾಣಿ’ ಎಂಬ ದಿನಪತ್ರಿಕೆಯನ್ನು ಆರಂಬಿಸಿದಾಗ, ಅಚ್ಯುತದಾಸರು ಅದಕ್ಕಾಗಿ ಶ್ರಮಿಸಿದರು. ಕೇಶವದಾಸರು ಬರೆಯುತ್ತಿದ್ದ ’ಈಶಕಥಾ’ ಮತ್ತು ಅಚ್ಯುತದಾಸರು ಬರೆಯುತ್ತಿದ್ದ ’ದಾಸಕಥಾ’ ಅಂಕಣ ಆ ಪತ್ರಿಕೆಯ ಖ್ಯಾತಿಯನ್ನು ಹೆಚ್ಚಿಸಿತ್ತು. ಅನಂತರ ’ದಾಸವಾಣಿ’ ಮಾಸ ಪತ್ರಿಕೆಯಾಗಿ ಪರಿವರ್ತನೆಗೊಂಡು ಬಹುಕಾಲ ನಾಡಿನ ಜನತೆಗೆ ಸಂಸ್ಕೃತಿ ಸಿಂಚನವನ್ನು ಮಾಡುತ್ತಾ ಬಂದು, ಇತ್ತೀಚೆಗೆ ನಿಂತು ಹೋಗಿದೆ. ಇದರೊಂದಿಗೆ ’ದಾಸಜ್ಯೋತಿ’ ಎಂಬ ಇಂಗ್ಲಿಷ್ ಪತ್ರಿಕೆಯೂ ಭಾರತೀಯ ಸಾಹಿತ್ಯ ಸಂಸ್ಕೃತಿಯನ್ನು ಪ್ರಸಾರ ಮಾಡುವಲ್ಲಿ ಮಹತ್ತರ ಪಾತ್ರ ವಹಿಸಿತ್ತು. ಈ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳು ಕೀರ್ತನ ಕಲೆಗೆ ಪೋಷಕ ಸಾಹಿತ್ಯವನ್ನು ಒದಗಿಸಿಕೊಟ್ಟು, ಹೊಸ ಹರಿದಾಸರಿಗೆ ಆಕರ ರೂಪದಲ್ಲಿ ಸಹಕಾರಿಯಾಯಿತೆಂಬುದನ್ನು ಮರೆಯಬಾರದು. ಹೀಗೆ ಹೊಸ ಹರಿದಾಸರನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಸಂತ ಕೇಶವದಾಸರು ಮತ್ತು ಸಂತ ಭದ್ರಗಿರಿ ಅಚ್ಯುತದಾಸರು ಆಲೋಚಿಸಿದ ಪರಿಣಾಮವಾಗಿ ಬೆಂಗಳೂರಿನಲ್ಲಿ ’ದಾಸಾಶ್ರಮ’ ಎಂಬ ಸಂಸ್ಥೆ 1962ರಲ್ಲಿ ಸ್ಥಾಪನೆಗೊಂಡಿತು. ಬೆಂಗಳೂರಿನ ರಾಜಾಜಿ ನಗರದಲ್ಲಿ ಪುರಂದರದಾಸರ ಶಿಲ್ಪದೊಂದಿಗೆ ’ದಾಸಾಶ್ರಮ’ ಕಟ್ಟಡ ನಿರ್ಮಾಣಗೊಂಡು ಸಂಗೀತ, ನೃತ್ಯ, ಪ್ರವಚನ, ಹರಿಕಥೆಗಳಿಗೆ ಆಶ್ರಯ ಸ್ಥಾನವಾಗಿದೆ.

ಕರ್ನಾಟಕದ ಕೀರ್ತನಕಾರರನ್ನು ಸೇರಿಸಿ 1964ರಲ್ಲಿ ಮೊದಲ ಅಖಿಲ ಕರ್ನಾಟಕ ಕೀರ್ತನ ಸಮ್ಮೇಳನವನ್ನು ಆಂುೋಜಿಸಲಾಯಿತು. ಮೈಸೂರಿನ ಮಹಾರಾಜ ಶ್ರೀ ಜಯ ಚಾಮರಾಜೇಂದ್ರ ಒಡೆಯರ್ ಅವರು ಈ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಮರುವರ್ಷ 1965ರಲ್ಲಿ ಭಾರತದ ವಿವಿಧ ಭಾಗಗಳಿಂದ ಹರಿಕೀರ್ತನಕಾರರನ್ನು ಕರೆಸಿಕೊಂಡು ಅಖಿಲಭಾರತ ಕೀರ್ತನ ಸಮ್ಮೇಳನವನ್ನು ಬೆಂಗಳೂರಿನಲ್ಲಿ ನಡೆಸಲಾಯಿತು. ಮಹಾರಾಷ್ಟ್ರ ಶಾಸನ ಸಭಾಧ್ಯಕ್ಷರಾಗಿದ್ದ ಭಾರದೆ ಅವರು ಅಧ್ಯಕ್ಷತೆ ವಹಿಸಿದ್ದ ಈ ಸಮ್ಮೇಳನವನ್ನು ಭಾರತದ ರಾಷ್ಟ್ರಪತಿಗಳಾಗಿದ್ದ ಡಾ|| ಎಸ್. ರಾಧಾಕೃಷ್ಣನ್ ಅವರು ಉದ್ಘಾಟಿಸಿದ್ದರು. ಕೀರ್ತನಕಾರರನ್ನು ಸಂಘಟಿಸುವ, ತನ್ಮೂಲಕ ಪರಸ್ಪರ ಪರಿಚಯ-ವಿಚಾರ ವಿನಿಮಯಕ್ಕೆ ಇದರಿಂದ ಅನುಕೂಲವುಂಟಾಯಿತು.

ಭದ್ರಗಿರಿ ಅಚ್ಯುತದಾಸರ ಸಂಘಟನ ಶಕ್ತಿ ಇಷ್ಟಕ್ಕೇ ನಿಲ್ಲಲಿಲ್ಲ. ಅವರು 1980ರಲ್ಲಿ ’’ಅಖಿಲ ಕರ್ನಾಟಕ ಕೀರ್ತನ ಕಲಾಪರಿಷತ್ತು’’ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಈಗಲೂ ಅವರೇ ಈ ಸಂಸ್ಥೆಯ ಗೌರವ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೀರ್ತನ ಕಲಾಪರಿಷತ್ತು ಹರಿಕಥೆಯ ಸಮಗ್ರ ಅಬಿವೃದ್ಧಿಗಾಗಿ ಕಟಿಬದ್ಧವಾಗಿದ್ದು ಅನೇಕ ಕ್ರಿಯಾ ಯೋಜನೆಗಳನ್ನು ಜಾರಿಗೆ ತಂದಿದೆ. ಹೊಸ ಹರಿದಾಸರುಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಕೀರ್ತನ ಕಾಲೇಜು ಆರಂಭಗೊಂಡಿತು. ಅವರುಗಳ ಹರಿಕಥಾ ಪ್ರದರ್ಶನಕ್ಕೆ ಅವಕಾಶ, ವಾರ್ಷಿಕ ಶಿಬಿರಗಳು, ಸಮ್ಮೇಳನಗಳು ಮುಂತಾಗಿ ನಿರಂತರ ಚಟುವಟಿಕೆಗಳಿಗೆ ಕೀರ್ತನ ಕಲಾಪರಿಷತ್ತು ಮುಂದಾಗಿದೆ. ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯಲ್ಲಿ ಕೀರ್ತನ ಕಲೆಗೆ ಪ್ರಾಶಸ್ತ್ಯ, ಹರಿದಾಸರುಗಳಿಗೆ ಅಕಾಡೆಮಿಯಿಂದ ವಾರ್ಷಿಕ ಪ್ರಶಸ್ತಿ, ಅಶಕ್ತ ಕಲಾವಿದರಿಗೆ ಮಾಸಾಶನ ಸೌಲಭ್ಯ ಮುಂತಾದ ಅನೇಕ ಕೆಲಸಗಳು ಈ ಪರಿಷತ್ತಿನ ಮೂಲಕ ಸಾಧ್ಯವಾಗಿದೆ ಎಂಬುದು ಸಮಾಧಾನದ ಸಂಗತಿ. 1996ರಲ್ಲಿ ಎರಡನೇ ಅಖಿಲ ಕರ್ನಾಟಕ ಕೀರ್ತನಕಾರರ ಸಮ್ಮೇಳನ ಭದ್ರಗಿರಿ ಅಚ್ಯುತದಾಸರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ನಡೆಯಿತು. ಇದುವರೆಗೆ ಉಡುಪಿ, ಬೆಂಗಳೂರು, ಮೈಸೂರು ಹೀಗೆ ಅನೇಕ ಕಡೆಗಳಲ್ಲಿ ಕೀರ್ತನೋತ್ಸವಗಳನ್ನು ನಡೆಸಲಾಗಿದೆ. ಅಶಕ್ತ ಕೀರ್ತನಕಾರರಿಗೆ ಸಹಾಯ ನೀಡುವುದು, ಕೀರ್ತನ ಕಲಾಭ್ಯಾಸಿಗಳಿಗೆ ವಿದ್ಯಾರ್ಥಿ ವೇತನ ನೀಡುವುದು ಮುಂತಾದ ಯೋಜನೆಗಳನ್ನೂ ಕಲಾಪರಿಷತ್ತು ಹಮ್ಮಿಕೊಂಡಿದೆ. ಜೊತೆಗೆ ಪರಿಷನ್ಮಂದಿರ ನಿರ್ಮಾಣ, ಕೀರ್ತನ ಮಹಾವಿದ್ಯಾಲಯ ಕಟ್ಟಡ ನಿರ್ಮಾಣ, ಸಮೃದ್ಧ ಗ್ರಂಥ ಭಂಡಾರ ಸ್ಥಾಪನೆ, ಹಿರಿಯ ಕೀರ್ತನಕಾರರ ಹರಿಕಥೆಗಳ ಧ್ವನಿಮುದ್ರಣ – ಮುಂತಾದ ಮಹತ್ತ್ವಾಕಾಂಕ್ಷಿ ಯೋಜನೆಗಳನ್ನು ಹೊಂದಿದೆ. ಇವುಗಳಿಗೆಲ್ಲ ಭದ್ರಗಿರಿ ಅಚ್ಯುತದಾಸರ ಮಾರ್ಗದರ್ಶನ ಸ್ಫೂರ್ತಿಯಾಗಿದೆ.

ಅಚ್ಯುತದಾಸರ ಹರಿಕಥಾ-ಗೀತಾಪ್ರವಚನ ಸೇವೆಯ ರಜತೋತ್ಸವ ಸಂದರ್ಭ (1978)ದಲ್ಲಿ ಅವರ ಅಬಿಮಾನಿ ಜನರೆಲ್ಲ ಸೇರಿ ’ಸಂತರ್ಪಣ’ವೆಂಬ ಗೌರವ ಸಂಚಿಕೆ ಯೋಂದಿಗೆ ಗೌರವ ನಿದಿ ಸಮರ್ಪಣೆಯನ್ನೂ ಮಾಡಿದರು. ಈ ನಿದಿಯಿಂದ ’’ಭಾರತಜ್ಯೋತಿ ಟ್ರಸ್ಟ್’’ ಎಂಬ ಸಂಸ್ಥೆಯನ್ನು ಅಚ್ಯುತದಾಸರು ಆರಂಬಿಸಿದರು. ಭಾರತೀಯ ನಾಟ್ಯ, ಸಂಗೀತ, ನಾಟಕ, ಗಮಕ, ಕೀರ್ತನ ಕಲೆಗಳನ್ನು ಪ್ರೋತ್ಸಾಹಿಸುವುದಕ್ಕೆ ಈ ಸಂಸ್ಥೆ ಹತ್ತಾರು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಭಜನೆ, ಕೀರ್ತನೆ, ಪ್ರವಚನದಂತಹ ಧರ್ಮಜಾಗೃತಿಯ ಕೆಲಸ ಅನೂಚಾನವಾಗಿ ಈ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಾ ಬಂದಿದೆ. ಈಗಾಗಲೇ ಕೆಲವು ಮಹಿಳೆಯರೂ ಅಚ್ಯುತದಾಸರ ಶಿಷ್ಯತ್ವ ವಹಿಸಿ ಕೀರ್ತನ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಉಳಿದಂತೆ ಲಕ್ಷ್ಮಣದಾಸ ವೇಲಣಕರ್, ಪೊಳಲಿ ಜಗದೀಶದಾಸ್, ಶಿರಸಿ ನಾರಾಯಣದಾಸ್, ಶಿರಸಿ ಈಶ್ವರದಾಸ್, ಚೆನ್ನರಾಯ ಪಟ್ಟಣದ ಲೋಕೇಶದಾಸ್, ಶಿವಮೊಗ್ಗದ ಕೇಶವಮೂರ್ತಿ ಮುಂತಾದ ಇವರ ಶಿಷ್ಯರು ಕರ್ನಾಟಕದ ಹರಿಕಥಾ ರಂಗದ ಪ್ರಮುಖ ಕೀರ್ತನಕಾರರಾಗಿದ್ದಾರೆ ಎಂಬುದು ಸಂತಸದ ಸಂಗತಿ.

ಶ್ರುತಿಯಿಂದ ಕೃತಿಗೆ

ಭದ್ರಗಿರಿ ಅಚ್ಯುತದಾಸರು ಹರಿಕಥೆಯನ್ನು ’ನಾನಾ ಕಲೆಗಳನ್ನು ಕಲೆಹಾಕಿದ ಕಲೆ’ ಎಂದು ಹೇಳಿದ್ದಾರೆ. ವಿದ್ಯೆ, ವಿನಯ, ವ್ಯಕ್ತಿತ್ವ, ವಕ್ತತ್ವ, ವೇಷ ಎಂಬ ಪಂಚತತ್ತ ್ವಗಳು ಹರಿಕಥೆಯಲ್ಲಿವೆ ಎಂದು ಅವರು ಸೂಚಿಸಿದ್ದುಂಟು. ಹರಿಕಥೆಯನ್ನು ’ಕಲೆಗಳ ಕಲೆ’ ಎಂದು ಹೇಳಿದಾಗ ಸಹಜವಾಗಿಯೇ ಕಲಾವಿದನ ವಕ್ತತ್ವ ಶಕ್ತಿ ಅಲ್ಲಿ ಮುಖ್ಯವಾಗಿ ಕಂಡುಬರುತ್ತದೆ. ಈ ಶಕ್ತಿ ಅಂತಸ್ಥವಾಗಿ ಬರಹಗಾರನಲ್ಲಿ ಇದ್ದೇ ಇರುತ್ತದೆ. ಭದ್ರಗಿರಿಯವರು ಈ ಕಾರಣದಿಂದಾಗಿಯೇ ಒಬ್ಬ ಒಳ್ಳೆಯ ಲೇಖಕರು ಎಂದು ಹೇಳಬಹುದು. 1985ರಲ್ಲಿ ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದ ವಿಶ್ವಕನ್ನಡ ಸಂಪುಟದಲ್ಲಿ ಅವರು ಹರಿಕಥೆಯ ಕುರಿತಾಗಿಯೇ ಒಂದು ಲೇಖನವನ್ನು ಬರೆದಿದ್ದಾರೆ. ಇದಲ್ಲದೆ ದಾಸವಾಣಿಯ ಸಂಚಿಕೆಗಳಲ್ಲಿ ಅವರು ಬರೆದ ಕೆಲವು ಲೇಖನಗಳು ಸಂಶೋಧನ ದೃಷ್ಟಿಯಿಂದ ಮಹತ್ತ ್ವ ಪಡೆದಿವೆ. ’’ಶ್ರೀ ಕನಕದಾಸರ ಕಾಲ ಮತ್ತು ಕೀರ್ತನೆಗಳು’’, ’’ಕೀರ್ತನ-ನರ್ತನ’’ ಮೊದಲಾದ ಲೇಖನಗಳು ಮತ್ತು ’ದಾಸಕಥಾ’ ಅಂಕಣಗಳು ಅಚ್ಯುತದಾಸರ ವಿದ್ವತ್ತೆಗೆ ನಿದರ್ಶನಗಳು ಎನ್ನಬಹುದು.

ಅನೇಕ ಗ್ರಂಥಗಳನ್ನು ಗಂಬೀರವಾಗಿ ಅಧ್ಯಯನ ಮಾಡುತ್ತಾ ಬಂದ ಅಚ್ಯುತದಾಸರಿಗೆ ಹೊಸತೇನನ್ನೋ ಹೇಳಬೇಕೆನ್ನುವ ತುಡಿತ. ಹರಿಕಥೆಗಳಿಗೆ ಪೂರಕ ಸಾಹಿತ್ಯವನ್ನು ರಚಿಸತೊಡಗಿದ ದಾಸರು ನಿಧಾನವಾಗಿ ಹರಿಕಥೆಯನ್ನು ಕಲಿಯಬೇಕೆಂದಿರುವ ವಿದ್ಯಾರ್ಥಿಗಳ ಕಡೆಗೆ ಗಮನ ಹರಿಸಿದರು. ಈ ಹಂಬಲದಿಂದಾಗಿ ಅವರ ಲೇಖನಿಯಿಂದ ಕೆಲವು ಮುಖ್ಯ ಕೃತಿಗಳು ರಚನೆಗೊಂಡವು. ಕನ್ನಡ, ತುಳು, ಕೊಂಕಣಿ ಭಾಷೆಗಳಲ್ಲಿ ಅವರು ರಚಿಸಿದ ಸಾಹಿತ್ಯ ಹರಿಕೀರ್ತನಕಾರರಿಗೆ ಕೈದೀವಿಗೆಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅವುಗಳಲ್ಲಿ ಹರಿಕಥಾಪೂರ್ವರಂಗ (1991), ಶ್ರೀಹರಿ ಕಥಾಮೃತ ಸಿಂಧು (1992), ಶ್ರೀ ಗುರುಚರಿತಾಮೃತ (1995), ಗೀತಾರ್ಥ ಚಿಂತನೆ (2004) ಪ್ರಮುಖವಾದ ಕೃತಿಗಳು ಎನ್ನಬಹುದು.

ಹರಿಕಥಾಪೂರ್ವರಂಗ : ಇದು ಹರಿದಾಸರುಗಳಿಗೆ ಮಾರ್ಗದರ್ಶನ ಮಾಡುವಂತಹ ಕೃತಿ. ಹರಿಕಥೆಯ ಪೀಠಿಕಾ ಭಾಗವನ್ನು ಹೇಗೆ ನಿರ್ವಹಿಸಬೇಕೆಂಬುದರ ಕುರಿತು ಸೋದಾಹರಣವಾಗಿ ತಿಳಿಯಹೇಳುವ ಮಹತ್ತ್ವದ ಕೃತಿ. ಹರಿದಾಸರ ಕೀರ್ತನೆಗಳು, ಭಗವದ್ಗೀತೆ, ಭಾಗವತ-ರಾಮಾಯಣ-ಮಹಾಭಾರತಗಳ ಶ್ಲೋಕಗಳು, ಸಮರ್ಥ ರಾಮದಾಸರು ಮತ್ತು ತುಕಾರಾಮರ ಅಭಂಗಗಳು, ಶಿವಶರಣರ ವಚನಗಳು ಮುಂತಾದ ಉಲ್ಲೇಖಗಳೊಂದಿಗೆ ತತ್ತ ್ವಚಿಂತನೆಯನ್ನು ಸರಳವಾಗಿ ಸಂಗ್ರಹಿಸಿ ಹೇಳುವ ಇಲ್ಲಿಯ ಶೈಲಿ ಹರಿಕಥೆಯನ್ನು ಅಭ್ಯಾಸ ಮಾಡುವವರಿಗೆ ಕೈದೀವಿಗೆಯಂತಿದೆ.

ಶ್ರೀ ಹರಿಕಥಾಮೃತಸಿಂಧು: ಹರಿಕಥಾ ಸಾಹಿತ್ಯದ ಮೇರುಕೃತಿ ಎಂಬ ಮನ್ನಣೆಗೆ ಪಾತ್ರವಾದ ಗ್ರಂಥವಿದು. ವಿಶೇಷವಾಗಿ ಹರಿಕಥಾ ಕಲಾಭ್ಯಾಸಿಗಳಿಗೆ ಕೈಪಿಡಿಯಂತಿರುವ ಈ ಗ್ರಂಥಮಾಲೆಯಲ್ಲಿ ಮೂರು ಸಂಪುಟಗಳು ಈಗಾಗಲೇ ಪ್ರಕಟಗೊಂಡಿವೆ. ಮೊದಲ ಸಂಪುಟವು ಶ್ರೀರಾಮ ಕಥಾವಾಹಿನಿಯನ್ನೂ, ಅನಂತರದ ಎರಡು ಸಂಪುಟಗಳು ಶ್ರೀಕೃಷ್ಣ ಕಥಾವಾಹಿನಿಯನ್ನೂ ಬಿತ್ತರಿಸುತ್ತವೆ. ಈ ಸಂಪುಟಗಳಲ್ಲಿ ಹರಡಿರುವ ಸಂತವಾಣಿ, ಕಥನವಿಶೇಷ, ಕೀರ್ತನೆಗಳ ಚೆಲುವು, ಪುರಾಣ ಗ್ರಂಥಗಳ ಉಲ್ಲೇಖಗಳು, ಸಾಹಿತ್ಯ ಸಂಗೀತ ಮೌಲ್ಯಗಳು, ಆಧ್ಯಾತ್ಮಿಕ ದರ್ಶನ ಮುಂತಾದವುಗಳಿಂದಾಗಿ ಭಾರತೀಯ ಸಂಕೀರ್ತನ ಸಾಹಿತ್ಯದಲ್ಲೇ ಅತ್ಯಂತ ಮಹತ್ತ್ವದ ಗ್ರಂಥವೆಂಬ ಗೌರವವನ್ನು ಪಡೆದಿದೆ. ಕಲಾಭ್ಯಾಸಿಗಳಿಗೆ ಮಾತ್ರವಲ್ಲ, ಜಿಜ್ಞಾಸುಗಳಿಗೂ ಇದು ಉಪಯುಕ್ತ ಗ್ರಂಥವಾಗಿದ್ದು, ರಾಮಾಯಣ- ಮಹಾಭಾರತಗಳ ಅನೇಕ ಸುಂದರ ಕಥಾವಸ್ತುಗಳಿಗೆ ವಿವಿಧ ಮೂಲಗಳಿಂದ ಸಾಹಿತ್ಯ- ಸಂಗೀತದ ಪೂರಕ ಸಾಮಗ್ರಿಯನ್ನು ನೀಡಲಾಗಿದೆ. ಸಾಂದರ್ಬಿಕವಾಗಿ ನೀಡಲಾದ ಕೆಲವು ಕೀರ್ತನೆಗಳು ಹರಿಕಥಾ ನಿರೂಪಣೆಗೆ ತುಂಬಾ ಪ್ರಶಸ್ತವಾಗಿವೆ. ಕೆಲವೆಡೆ ಅಚ್ಯುತದಾಸರ ಸ್ವಂತ ರಚನೆಗಳಿರುವುದು ಗಮನಾರ್ಹ.

ಸಭಾವರ್ಣನೆ, ವನವರ್ಣನೆ, ಸಮುದ್ರವರ್ಣನೆ ಮುಂತಾದವುಗಳಿಗೆ ಒಪ್ಪುವ ಜಾವಳಿಗಳಂತಹ ರಚನೆಗಳು ಸಾಹಿತ್ಯ ಸಂಗೀತದ ರಸಪಾಕ ಎನ್ನಬಹುದು. ಸೀತಾಕಲ್ಯಾಣ ಸಂದರ್ಭದಲ್ಲಿ ಶ್ರೀರಾಮಚಂದ್ರನು ಶಿವಧನುಸ್ಸನ್ನು ಎತ್ತಿದಾಗ ಜನಕರಾಜನ ಸಭೆಯಲ್ಲಿ ಉಂಟಾದ ಕೋಲಾಹಲದ ವರ್ಣನೆ ಗಮನಾರ್ಹವಾದುದು. ಅಚ್ಯುತದಾಸರು ಮಾಯಾಮಾಳವಗ್ಳ ರಾಗದಲ್ಲಿ ಆದಿತಾಳದಲ್ಲಿ ಈ ಜಾವಳಿಯನ್ನು ರಚಿಸಿದ್ದಾರೆ.

 

ನಡುಗಿದುದಿಳೆಕೆಡೆದುದು ಗಿರಿಶಿಖರ

ಸಿಡಿಲ ಧ್ವನಿಯು ಮಿಂಚಿತು ಬಲುಪ್ರಖರ

ವಡಬಾನಲ ಬಡಿದೆತ್ತಿತು ಕಡಲ

ಸಿಡಿಸಿತು ಜ್ವಾಲಾಮುಖಿ ತಿರೆಯೊಡಲ

ನಡೆಗೆಡುತಲಿ ರವಿ ದಕ್ಷಿಣಕಾಗಿ

ಅಡಿಯಿಡೆ ಅಂಬರ ತಲೆಕೆಳಗಾಗಿ

ಪುಡಿಯಾದುದು ಗ್ರಹತಾರೆಗಳಾಗ

ಹೆಡೆಯಾಡುತ ವಿಷ ಉಗುಳಿತು ಉರಗ

ವಿಂಧ್ಯ ಹಿಮಾಚಲ ಗಿರಿಗುಹೆಯಿಂದ

ಬಂದಿತು ಧ್ಯಾನಯೋಗಿ ಮುನಿವೃಂದ

ದಿಕ್ಕೆಟ್ಟರು ದಿಗುಪಾಲಕರೆಲ್ಲ

ಕುಕ್ಕರಿಸಲು ದಿಗುದಂತಿಗಳೆಲ್ಲ

ಕಳಚುತಲಿರೆ ಬ್ರಹ್ಮಾಂಡದ ಬೆಸುಗೆ

ನಳಿನಭವಾದ್ಯರು ಗಡಗಡ ನಡುಗೆ

ಚಂಡಕರ ಕುಲನು ಕಂಡುಕೋದಂಡ

ದಂಡವ ಸೆಳೆದನು ಸಾರಿ-

ತುಂಡಾದುದು ಭುಜ ದಂಡ ಬಲಕೆ ನಭ

ಮಂಡಲಕಾ ಧನು ನಿಮಿರಿ-

ಕಂಡು ಕೌತುಕವ ದಿಂಡುರುಳಿತು ಸುರ

ದಂಡ ಸುಮಂಗಳ ಬೀರಿ –

ಜನಕ ಶತಾನಂದರ ಒಡಗೂಡಿ

ಮುನಿ ಕೌಶಿಕನಲಿ ಸವಿಮಾತಾಡಿ

ವಿನುತ ಪುಣ್ಯವೋ ಫಲಿಸಿತು ಜೋಡಿ

ನಿಮಿ ರವಿಕುಲ ಎಮಗೈ ಒಡನಾಡಿ

ಹಾಗೆಯೇ ಇನ್ನೊಂದೆಡೆ ’ಭೋಜನವರ್ಣನೆ’ಯ ಪದ್ಯವೊಂದು ಗಮನ ಸೆಳೆಯುತ್ತದೆ.

 

ಯೋಜನದಗಲದ ಭೋಜನಶಾಲೆ

ರಾಜಿಪ ರನ್ನದ ಮಣೆಗಳ ಮೇಲೆ

ರಾರಾಜಿಪ ರಾಜರುಗಳ ಸಾಲೆ

 

ಸೋಜಿಗ ಚತುರ ಶಿಲ್ಪಿಗಳ ಲೀಲೆ

ಇಂತಹ ಪದ್ಯಬಂಧಗಳಿಂದ ಹರಿಕಥೆಯಲ್ಲಿ ರಸನಿರ್ಮಾಣ ಸುಲಭವಾಗುತ್ತದೆ. ವಿವಿಧ ಸಂದರ್ಭಗಳಿಗೆ ಒಪ್ಪುವ ಅನೇಕ ಪದ್ಯಗಳನ್ನು ಬೇರೆಬೇರೆ ಮೂಲಗಳಿಂದ ಸಂಗ್ರಹಿಸಿ ಇಲ್ಲಿ ಕೊಡಲಾಗಿದೆ. ವಾಲ್ಮೀಕಿ ರಾಮಾಯಣ, ತೊರವೆ ರಾಮಾಯಣದಿಂದ ತೊಡಗಿ ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂ ಕಾವ್ಯದ ಸಾಲುಗಳವರೆಗೂ ದೊರಕುವ ಇಲ್ಲಿಯ ಉಲ್ಲೇಖಗಳ ವಿಪುಲತೆ ಲೇಖಕರ ಬಹುಜ್ಞತೆಗೆ ಸಾಕ್ಷಿ. ಭಾರತ ತಾತ್ಪರ್ಯ ನಿರ್ಣಯ, ರಾಮಚರಿತ ಮಾನಸ, ರಾಮದಾಸರ ಮನಾಚೆ ಶ್ಲೋಕ, ದಾಸರ ಸುಳಾದಿ, ಉಗಾಭೋಗ ಹೀಗೆ ಭಾರತೀಯ ವಾಙ್ಮಯದ ಸಾರಸರ್ವಸ್ವವೇ ಇಲ್ಲಿ ಮಡುಗಟ್ಟಿ ನಿಂತಿದೆ.

ಶ್ರೀಗುರು ಚರಿತಾಮೃತ : ಇದು ಮರಾಠಿಯ ಓವೀ ಛಂದಸ್ಸಿನಲ್ಲಿ ರಚನೆಗೊಂಡ ಕೊಂಕಣಿ ಕೃತಿ. ಅಚ್ಯುತದಾಸರು ತಮ್ಮ ಗುರು ಪರಂಪರೆಯನ್ನು ಗೇಯಪೂರ್ಣವಾದ ಸೊಲ್ಲುಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಒಟ್ಟು 6,800 ಓವಿಗಳಲ್ಲಿ ಸಾಗುವ ಈ ಚರಿತಾಮೃತದಲ್ಲಿ ಸಿದ್ಧಸಾಧಕ ಸಂವಾದ, ವ್ಯಾಸಾವತಾರ, ಸಾರಸ್ವತ ಚರಿತ್ರೆ, ಪರಶುರಾಮ ಚರಿತ್ರೆ, ಮಧ್ವಚರಿತ್ರೆ, ಶ್ರೀ ಕಾಶೀಮಠ ಪರಂಪರೆ, ಶ್ರೀ ಸುದೀಂದ್ರ ಚರಿತ್ರೆ ಎಂಬ ಏಳು ಅಧ್ಯಾಯಗಳಲ್ಲಿ ಈ ಭಕ್ತಿಗಂಗಾವಾಹಿನಿ ಹರಿಯುತ್ತದೆ.

ಓಂ ವಿಶ್ವಂಭರ ಗಣಪತಿ |

ತೂಚಿ ಪ್ರಣವ ಸ್ವರೂಪಿ ||

ತೂ ಸರ್ವೋತ್ತಮ ಜಗತ್ಪತಿ |

ಆದಿಮೂರ್ತಿ ||

ಹೇ ಸ್ಪಷ್ಟಾದಿ ಅಷ್ಟಕರ್ತಾ ||

ಅಷ್ಟನಾಮಾ ಸಮರ್ಥಾ ||

ಅಷ್ಟಾಕ್ಷರೀ ಮಹಾಮಂತ್ರ ||

ನಿತ್ಯ ಮುಕ್ತಾ ||

 

ಶ್ರೀಗುರು ಪರಂಪರೆಯ ಚರಿತ್ರೆಯನ್ನು ಸರಳವಾದ ಹಾಡುಗಬ್ಬದಲ್ಲಿ ಹೇಳುವ ಇಲ್ಲಿಯ ಓವೀ ಪದ್ಯಗಳು ಸಂತ ಏಕನಾಥರ ಜ್ಞಾನೇಶ್ವರಿಯನ್ನು ಹೋಲುತ್ತವೆ. ಕೊಂಕಣಿ ಸಾಹಿತ್ಯದಲ್ಲಿ ಇದೊಂದು ಗಮನಾರ್ಹವಾದ ಕೃತಿ ಎಂಬ ಮನ್ನಣೆ ಗಳಿಸಿದೆ.

 

ಗೀತಾರ್ಥ ಚಿಂತನೆ : ಭಗವದ್ಗೀತೆಯನ್ನು ವ್ಯಾಖ್ಯಾನಿಸಿ ಕನ್ನಡದಲ್ಲಿ ಬಂದಿರುವ ಗ್ರಂಥಗಳಲ್ಲಿ ’ಗೀತಾರ್ಥ ಚಂತನೆ’ ಮಹತ್ತ ್ವಪೂರ್ಣವಾದ ಕೃತಿಯಾಗಿದೆ. ಹರಿದಾಸರ ಹಾಡುಗಳ ಮೂಲಕ ಗೀತಾವಾಕ್ಯಗಳನ್ನು ಸುಲಭವಾಗಿ ವಿಶ್ಲೇಷಿಸುವ ಇಲ್ಲಿಯ ಶೈಲಿ ಅನನ್ಯವಾದುದು. ಭಗವದ್ಗೀತೆಯಲ್ಲಿರುವ ಭಕ್ತಿ, ಜ್ಞಾನ, ವೈರಾಗ್ಯ, ಕರ್ತವ್ಯ ಪ್ರಜ್ಞೆ, ಕರ್ಮಫಲ, ಸದಸದ್ ವಿವೇಕ, ಸಮಚಿತ್ತತೆಗಳನ್ನು ಅನೇಕ ಉಪಕಥೆಗಳ ಮೂಲಕ ಸೋದಾಹರಣವಾಗಿ ಇಲ್ಲಿ ವಿವರಿಸಲಾಗಿದೆ. ಸಮಕಾಲೀನ ಸಮಾಜದ ಸಂದರ್ಭದಲ್ಲಿ ಕಿಂಕರ್ತವ್ಯತಾಮೌಢ್ಯದಿಂದ ಬಳಲುತ್ತಿರುವ ಸಾಮಾನ್ಯರ ಬದುಕಿಗೆ ಭರವಸೆಯನ್ನು ತುಂಬುವ ಪ್ರಾಮಾಣಿಕ ಪ್ರಯತ್ನ ಇಲ್ಲಿ ಕಂಡುಬರುತ್ತದೆ. ಅತ್ಯಂತ ಜಟಿಲವಾದ ಗಂಬೀರ ಪ್ರಮೇಯಗಳನ್ನು ಭಾರತೀಯ ದರ್ಶನ ಸಾರದ ಬೆಳಕಿನಲ್ಲಿ ಸರಳವಾಗಿ ಬಿಡಿಸುವ ಭದ್ರಗಿರಿಯವರ ಜಾಣ್ಮೆ ಇಲ್ಲಿಯ ಪುಟಪುಟಗಳಲ್ಲೂ ಸುವ್ಯಕ್ತ.

ಗೀತಾರ್ಥ ಚಿಂತನೆಯ ಕುರಿತು ಭದ್ರಗಿರಿ ಅಚ್ಯುತದಾಸರೇ ಹೇಳಿಕೊಂಡ ಮಾತುಗಳು ಇಲ್ಲಿ ಮನನೀಯ –

’ಶ್ರೀ ಭಗವದ್ಗೀತೆಯ ಮಹಿಮೆ, ಖ್ಯಾತಿ, ಅದರ ಪ್ರಯೋಜನ, ಅದು ಹುಟ್ಟಿದ ನಾಡಾದ ಭರತಖಂಡದಲ್ಲೇ ಮಾಯವಾಗುತ್ತಿರುವುದು ಖೇದದ ಸಂಗತಿ. ಇದು ಗೀತೆಯ ಮೇಲಿನ ಅನಾದರದಿಂದಲ್ಲ; ಅದರ ಸರಳವಾದ ಸುಂದರ ಉಪದೇಶಗಳು ಜನಸಾಮಾನ್ಯರಿಗೆ ಮುಟ್ಟದಿರುವುದರಿಂದ. ದೇವಭಾಷೆ (ಸಂಸ್ಕೃತ) ತಿಳಿಯದ ದೇವಭಕ್ತರಾದ ಜನರಿಗೆ ದೇವವಾಣಿಯನ್ನು ಸರಳಗೊಳಿಸಿ, ಸಾಹಿತ್ಯ ಸಂಗೀತ ಬದ್ಧವಾಗಿಸಿ, ಸಾಮಾನ್ಯ ಜನರಿಗೂ ಮುಟ್ಟಿಸಿದ ಕೀರ್ತಿ ನಮ್ಮ ಭಾರತೀಯ ಸಾಧುಸಂತದಾಸರೇ ಮೊದಲಾದ ಅನುಭಾವಿಗಳಿಗೆ ಸಲ್ಲತಕ್ಕದ್ದು. ಅನಕ್ಷರಸ್ಥರೇ ಹೆಚ್ಚಿರುವ ನಮ್ಮ ದೇಶದಲ್ಲಿ ಈ ಮಹಾನುಭಾವರುಗಳು ತಮ್ಮ ಸುಂದರ ಕಥಾಕೀರ್ತನ, ನರ್ತನ, ಪ್ರವಚನಾದಿಗಳಿಂದ ಜನರನ್ನು ನಿಜವಾದ ಅರ್ಥದಲ್ಲಿ ವಿದ್ಯಾವಂತರಾಗಿಸಿದರು. ಅಂತಹ ಸಾಧು ಸಂತರ ವಾಣಿಗಳಿಗೂ, ಶ್ರೀ ಭಗವದ್ಗೀತೆಗೂ ಇರುವ ಸಾಮ್ಯ, ಭಾರತೀಯ ಸಾಧು ಸಂತರೆಲ್ಲರ ವಾಣಿಗಳಲ್ಲಿರುವ ಸಮಾನಭಾವ – ಇವುಗಳನ್ನು ಅರಿಯಲು ನಾನು ಮಾಡಿದ ಒಂದು ಸಣ್ಣ ಉಪಕ್ರಮ ಮಾತ್ರ ಇದಾಗಿದೆ.’

’ಇದು ಗೀತೆಯ ಕುರಿತು ವಿಮರ್ಶಾತ್ಮಕ ಗ್ರಂಥವಲ್ಲ. ಗೀತೋಕ್ತ ವಿಚಾರಸರಣಿಯನ್ನು ದಾಸಸಾಹಿತ್ಯ ಮತ್ತು ಸಂತರ ಸಾಹಿತ್ಯದ ಜೊತೆಗೆ ಹೋಲಿಸಿದ ಒಂದು ಸಂಯೋಜನಾತ್ಮಕ ವಿವರಣೆ. ಇದರಲ್ಲಿ ನನ್ನದೇನೂ ಇಲ್ಲ. ದಾಸರ ಸಂತರ ನುಡಿಗಳನ್ನು ಆರಿಸಿ, ಪೋಣಿಸಿ ’ಗೀತಾರ್ಥ ಚಿಂತನೆ’ ಎಂಬ ಒಂದು ಹೂಮಾಲೆ ಕಟ್ಟಿದ ಒಬ್ಬ ಮಾಲೆಗಾರ ನಾನು. ಈ ಗ್ರಂಥಕ್ಕೆ ಸಹಜವಾಗಿಯೇ ಒಂದು ಪ್ರವಚನದ ರೂಪ ಬಂದುದು ನಾನು ಪ್ರವಚನಕಾರನೂ, ಕೀರ್ತನಕಾರನೂ ಆದುದರಿಂದ. ಗೀತೆಯ ಪ್ರವಾಹ ಮತ್ತು ಆಳ ಇವೆರಡನ್ನೂ ಕೇಳಿ ತಿಳಿದ ನಾನು ಸಂತರ ಸಹಾಯದಿಂದ ಇದನ್ನು ಈಜಬೇಕೆಂದು ಪ್ರಯತ್ನ ಮಾಡಿದ್ದೇನೆಯೇ ಹೊರತು ಮುಳುಗಿ ಮುತ್ತನ್ನು ಹೆಕ್ಕಲಿಕ್ಕಲ್ಲ. ಆದರೆ ಮುಳುಗು ಹಾಕಬೇಕೆಂಬ ಅದಮ್ಯ ಹಂಬಲವೇ ನನ್ನನ್ನು ಈಜಾಡಲು ಪ್ರೇರೇಪಿಸಿದುದು ಎಂಬುದು ಸತ್ಯ.’

’ಗೀತಾರ್ಥ ಚಿಂತನೆ’ ಭಗವದ್ಗೀತೆಯ ಅಂತರಾರ್ಥವನ್ನು ಹರಿದಾಸರ ಕೀರ್ತನೆಗಳ ಮೂಲಕ ತಿಳಿಯಪಡಿಸುವ ಉಪಯುಕ್ತ ಕೃತಿ. ಶಾಸ್ತ್ರ ಪ್ರಮೇಯಗಳಲ್ಲಿ ತಲಸ್ಪರ್ಶಿ ಪಾಂಡಿತ್ಯವಿರುವ ಭದ್ರಗಿರಿ ಅಚ್ಯುತದಾಸರು ಈ ಕೃತಿಯಲ್ಲಿ ಭಗವಂತನ ವಿರಾಟ್ ದರ್ಶನದೊಂದಿಗೆ ಹರಿದಾಸ ಸಾಹಿತ್ಯದ ವಿಶ್ವರೂಪವನ್ನು ಅನಾವರಣ ಮಾಡಿದ್ದಾರೆ. ಭಗವದ್ಗೀತೆಯಲ್ಲಿ ಕಥೆಯೇ ಇಲ್ಲ; ಕೇವಲ ಉಪದೇಶವಿರುವುದು. ಹಾಗಿರುವಾಗ ಅದನ್ನು ಹರಿಕಥೆಯ ಹಾಗೆ ಹೇಳಲು ಸಾಧ್ಯವಿಲ್ಲ ಎಂದು ತಿಳಿದವರಿಗೆ ಇಲ್ಲಿ ಅಚ್ಚರಿ ಕಾದಿದೆ. ಹೆಜ್ಜೆಹೆಜ್ಜೆಗೂ ದಾಸಸಾಹಿತ್ಯದ ವಿಪುಲ ಕೀರ್ತನೆಗಳನ್ನು ಉದಾಹರಿಸಿ, ಕ್ಲಿಷ್ಟಾತಿಕ್ಲಿಷ್ಟ ಪ್ರಮೇಯಗಳಿಗೆ ಸರಳವೂ ಸರಸವೂ ಆದ ಪರಿಹಾರಗಳನ್ನು ಸೂಚಿಸುವ ’ಅಚ್ಯುತಗೀತೆ’ ಇದು! ಜೀವನದ ಪಾಡು ಹಾಡಾಗುವ ಮೋಡಿ ಇಲ್ಲಿದೆ. ವರಕವಿ ಬೇಂದ್ರೆಯವರು ಹೇಳಿದಂತೆ – ’ಗೀತದೊಳಗಿನ ಬಲವು ಯಾತರೊಳಗೂ ಇಲ್ಲ’.

ಇವುಗಳೊಂದಿಗೆ ಅಚ್ಯುತದಾಸರು ಇನ್ನೂ ಅನೇಕ ಕೃತಿಗಳನ್ನು ರಚಿಸಿದ್ದಾರೆ. ’ಶ್ರೀ ಪುರಂದರದಾಸರ ಒಗಟು ಹಾಗೂ ಪರಾಕು’, ’ಶ್ರೀಗುರುಭಜನಾಮೃತ’, ’ಶ್ರೀ ವೆಂಕಟೇಶ ಮಾಹಾತ್ಮ ್ಯಂ’, ’ಕೀರ್ತನರೂಪೀ ಭಗವದ್ಗೀತೆ’, ’ಪರಿವರ್ತನ’ ಎಂಬ ಕೊಂಕಣಿ ನಾಟಕ, ’ಗೌಡಸಾರಸ್ವತ ಬ್ರಾಹ್ಮಣಾಲೆ ಕುಲದೇವ ಆಣಿ ತಾಂಗೆಲೆ ಧರ್ಮಗುರು’ – ಮುಂತಾದವುಗಳು ಅವರ ಸಾರಸ್ವತ ತಪಸ್ಸಿನ ಫಲ. ಹಿಂದೀ ಮರಾಠಿ ಸಂತ ಸಾಹಿತ್ಯದಿಂದ ಆಯ್ದ ಭಾಗಗಳನ್ನು ಕನ್ನಡಕ್ಕೆ ಅನುವಾದಿಸಿರುವುದು ಭಾಷಾ ಸಮನ್ವಯದ ಕೆಲಸ. ಸಮರ್ಥ ರಾಮದಾಸರ ಮನಾಚೆ ಶ್ಲೋಕಗಳನ್ನು ’ಮನೋಬೋಧೆ’ ಎಂಬ ಹೆಸರಿನಲ್ಲಿ ಕನ್ನಡಕ್ಕೆ ದ್ವಿಪದೀ ರೂಪದಲ್ಲಿ ಭಾಷಾಂತರಿಸಿದ್ದಾರೆ. ಹರಿಕಥೆಗಳಲ್ಲಿ ಅವರು ಬಳಸುತ್ತಿದ್ದ ಉಪಕಥೆಗಳು ’ದೃಷ್ಟಾಂತಸಿಂಧು’ ಎಂಬ ಶೀರ್ಷಿಕೆಯಲ್ಲಿ ಸದ್ಯದಲ್ಲೇ ಪ್ರಕಟವಾಗಲಿದೆ.

ಭದ್ರಗಿರಿಯವರ ಕವಿತಾಶಕ್ತಿಗೆ ನಿದರ್ಶನವಾಗಿ ಈ ಕೆಳಗಿನ ಕೆಲವು ರಚನೆಗಳನ್ನು ನೋಡಬಹುದು.

 

ಚೆನ್ನಕೇಶವ ಸ್ತುತಿ

ಇನ್ನಾದರು ಎನ್ನ ಮನ್ನಿಸು ಮಧವನೆ

ಪನ್ನಗಾದ್ರಿವಾಸ ಚೆನ್ನ ಕೇಶವನೆ || ಪ ||

ಮುನ್ನ ಮಡಿದ ದುಷ್ಕರ್ಮದಿ ಬಳಲಿದೆ

ಇನ್ನು ಪಾರುಕಾಣೆ ಘನ್ನ ನಿನ್ನಾಮೆ

ತನ್ನವರು ತಾನು ತನದೆಂದು ತನ್ಮಯದಿ

ನಿನ್ನ ಮರೆತೆನು ದಾರಿ ಕಾಮದೀ ಭವದಿ || ೧||

ಎನ್ನವರು ಎನಗಿಲ್ಲ ನೀ ಹೊರತು ಗತಿಯಿಲ್ಲ

ಎನ್ನ ಕೈ ಬಿಟ್ಟರಪಕೀರ್ತಿ ನಿನಗೆಲ್ಲ

ನಿನ್ನವರ ಸೇವೆಯಲಿ ನಿನ್ನವನು ನಾನಾಗಿ

ನಿನ್ನ ಪುರಕೊಂನ್ನ ಮನ್ನಿಸೈ ದೊರೆಂ || ೨ ||

ಆಶೆಂನಗಿನಿತಿಲ್ಲ ದಾಸನಾಗಿಹೆನಲ್ಲ

ಆಶ್ರಯವನಿತ್ತು ಪೋಷಿಸು ಕೇಶವನೆ

ರಾಶಿ ದೈವವ ನಂಬಿದಾತ ನಾನಲ್ಲ

ಶ್ರೀ ಚೆನ್ನ ಮೂಲನಾರಾಯಣನೆ ಬಲ್ಲ || ೩ ||

 

ಸುಳಾದಿ

ನಡೆವಾಗ ನುಡಿವಾಗ ಕಡು ಹರುಷಗೊಂಡಾಗ

ಎಡಹಿ ಬಿದ್ದಾಗ ಮನ ಚಡಪಡಿಸುತಿರುವಾಗ

ಕೆಡುವಾಗ ಕೋಪದಿಂ ಕಿಡಿಗೆದರಿಗೊಂಬಾಗ

ಜಡ ಮೂಢನೆಂದು ಜನ ನುಡಿದು ನಿಂದಿಸುವಾಗ ||

 

ಎಡೆಬಿಡದೆ ದುಃಖಗಳು ಅಡವರಸಿ ಬಂದಾಗ

ಮಡದಿ ಮಕ್ಕಳು ಮುನಿದು ಕೆಡುನುಡಿಯ ನುಡಿವಾಗ

ಕಡೆಗಣಿಸಿ ಕಡೆಗಣ್ಣ ನೋಟದಿಂದಿರಿವಾಗ

ಅಡರಿ ಬಹು ದಾರಿದ್ರ  ನುಡಿ ನಡೆಯದಿರುವಾಗ ||

 

ಅಡವಿಯಂ ಪೊಗವೆಳಸಿ ನಡುಗಿ ಭಯಗೊಂಡಾಗ

ಅಡಿಗಡಿಗೆ ನುಡಿ ಬಿಡದೆ ಮೂಲ ನಾರಾಯಣನ

ಅಡಿಗಳನು ಸ್ಮರಿಸುವಗೆ ಕಡಲ ಶಯನನು ಒಲಿದು

ಬಿಡುಗಡೆಯ ಮಳ್ಪನಿದ ದೃಢವಾಗಿ ನಂಬು ||

 

ಸುವ್ವಾಲಿ ಪದ್ಯ

ನಾರಾಯಣನೆ ವಿಶ್ವಕಾರಣನೆ ಗುಣಪೂರ್ಣ

ನೀರದಿsಶಯನ ನಿರವದ್ಯ  | ನಿರ್ದೋಷ

ಕಾರುಣ್ಯಮೂರ್ತಿ ಸಲಹೆಮ್ಮ ||

ಭದ್ರಾದ್ರಿವಾಸ ಶ್ರೀ ರುದ್ರಾದಿ ವಂದ್ಯನೆ

ಭದ್ರಸಿಂಹನೆ ಂಗ ವಿಠಲನೆ  | ದುರಿತವ

ದಗ್ಧವಾಗಿಸು ದೇವ ದಯದಿ ||

ಸಾಧುಸಜ್ಜನ ಪ್ರೀಯ ಬಾದರಾಯಣ ಜೀಯ

ವೇದವ್ಯಾಸ ಬದರಿ ವಾಸ  | ಶ್ರೀಶನೆ ಎಮಗೆ

ಬೋದಿsಸಯ್ಯ ತತ್ತ ಜ್ಞಾನ ||

ಉತ್ತಮ ಬದರಿಂಳ್ ನಿತ್ಯನೆಲೆಸಿರ್ಪೆ ನೀ

ಸತ್ಯವತೀ ಸುತ ಸಲಹೆಮ್ಮ  | ದಯದಿಂದ

ಭೃತ್ಯರಾಗಿಸಬೇಕೋ ನಿನ್ನ ||

 

ಭಾರತಮತೆಯ ಸ್ತೋತ್ರ :

ಪುಣ್ಯಭೂಮಿ ದೇವಭೂಮಿ ವೀರಭೂಮಿ ಭಾರತ

ತಪೋಭೂಮಿ ವೇದಭೂಮಿ ಮತೆ ರಾಷ್ಟ್ರ ದೇವತಾ ||

 

ಸತ್ಯಶೀಲ ಶಾಂತಿ ಸಹನೆ ಮಂತ್ರವಿದುವೆ ತಾರಕ

ಸ್ತುತ್ಯ ಋಷಿ ಪರಂಪರೆಯಿದು ನಿತ್ಯವೆಮಗೆ ಪ್ರೇರಕ ||

 

ಹಿಮವಂತನ ಧೈರ್ಯವಾಂತ ಉದದಿsಯಗಾಂಬಿsರ್ಯ ಬೆರೆತ

ನದ ನದಿ ಸೌಂದರ್ಯದ ಮಹಾಮುಕ್ತಿ ಧಾಮ ಭಾರತ ||

 

ರಾಮಕೃಷ್ಣ ಬುದ್ಧಶಂಕರ ರಾಮನುಜ ಮಧ್ವಪ್ರವರ

ರಾಮಕೃಷ್ಣ ಪರಮಹಂಸ ಬಸವ ರಾಮತೀರ್ಥರ ||

 

ಕನಕ ಪುರಂದರರ ಸಂತ ಜನಕ ಜ್ಞಾನೇಶ್ವರರ ಪಡೆದ

ವಣಿಕ ತುಕಾ ತುಲಸಿ ಗುರು ನಾನಕರ ಪೆತ್ತ ಭಾರತ ||

 

ಬಲಿ ಬಿsಷ್ಮ ನಳ ಸಗರರ ಕಲಿ ಶಿವಾಜಿ ಶೂರರ

ತಿಳಿಯದೆನಿತೊ ಸಂತರು ಮೈ ತಳೆದ ಧನ್ಯ ಭಾರತ ||

 

ರಮಣ ಋಷಿ ವಿವೇಕಾನಂದ ಪೂರ್ಣಂಗಿಯರವಿಂದ

ತಿಲಕ ಗಾಂದಿs ಸಂತರಿಂದ ಪುಲಕಗೊಂಡ ಭಾರತ ||

 

ಸೀತೆ ಸಾವಿತ್ರಿ ಗೌರಿ ಗಾರ್ಗಿ ಮೈತ್ರೇಯಿ ಶಬರಿ

ಅನಸೂಯ ಅರುಂಧತಿ ದಮಯಂತಿಯ ಭಾರತ ||

 

ಮೀರಾ ಶಾರದಾ ಮಣಿಯರ ವೀರ ಝನ್ಸಿ ಗಿರಿಯಮ್ಮರ

ಅಕ್ಕ ಅವ್ವೆಯರಾಂಡಳ ಭಕ್ತಿಧಾಮ ಭಾರತ ||

 

ವಿಶ್ವಹಿಂದು ವಿಶ್ವಬಂಧು ವಿಶ್ವಶಾಂತಿಗೋಸುಗ

ವಿಶ್ವಗುರುವು ಭಾರತಾಂಬೆ ಪೊರೆಯಲೆಮ್ಮ ಸಂತತ ||

 

 

ವೇದವ್ಯಾಸ ಸ್ತುತಿ

ವೇದವ್ಯಾಸ ವಿಷ್ಣು ವ್ಯಾಪಕ

ಮಧವೇಂದ್ರ ಮನಮೋದದಾಯಕ ||

 

ಜಟಾಮುಕುಟ ಸುಂದರ ಯತಿವೇಷ

ಘಟಕಟ ವ್ಯಾಪಕ ಜ್ಞಾನಪ್ರಕಾಶ

ಕುಟಿಲ ದೈತ್ಯಕುಲ ಕುಠಾರಶ್ರೀಶ

ವಟುರೂಪ ಹರಿ ಬದರೀವಾಸ ||

 

ಮೋದತೀರ್ಥಗುರು ಮಧವ ಕೃಷ್ಣ

ಸಾಧುಸಜ್ಜನ ಪ್ರಿಯ ಬಾದರಾಯಣ

ಛೇದ ಭೇದಾದಿ ಅಂತ್ಯರಹಿತ ಹರಿ

ವೇದ ಮಯ ಮೂಲ ನಾರಾಯಣ ||

ಈ ಸ್ತುತಿ ಪದ್ಯದ ಕೊಂಕಣಿ ಅವತರಣಿಕೆಯನ್ನು ಪಂಡಿತ ಬೀಮಸೇನ ಜೋಷಿಯವರು ಹಾಡಿದ್ದಾರೆ. ಕೊಂಕಣಿ ಭಜನಾ ಮಂಡಳಿಗಳಲ್ಲಿ ಅದು ಸುಪ್ರಸಿದ್ಧ ರಚನೆ. ಅದು ಎಷ್ಟು ಜನಪ್ರಿಯವಾಗಿದೆ ಎಂದರೆ ಒಮ್ಮೆ ಮುದುಕಿಂುೊಬ್ಬರು ಅಚ್ಯುತದಾಸರ ಬಳಿಗೆ ಬಂದು ಈ ರಚನೆ ಯಾವ ಕವಿಯದು ಎಂದು ಕೇಳಿದಳಂತೆ! ’ರಾಮಾವತಾರಕಿಂ ಮಿಗಿಲಲ್ತೆ ರಾಮಾಯಣಾವತಾರಂ’ ಎಂಬ ಕವಿವಾಣಿಯಂತೆ, ಕೀರ್ತನೆಂುೊಂದು ಕೀರ್ತನಕಾರನನ್ನೂ ಹಿಂದಿಕ್ಕಿದೆ ಎಂಬುದು ಇಲ್ಲಿಯ ವಿಶೇಷತೆ. ಕವಿಗೆ ಕಾಲದೇಶಗಳ ಬಂಧನವಿದೆ, ಕೃತಿಗಲ್ಲ. ಕೃತಿ ವಿಭೂತಿಗೆ ನಮೋ….

 

ತುಳುಸಾಹಿತ್ಯ ಸೇವೆ

ಭದ್ರಗಿರಿಯವರು ಕನ್ನಡ ಕೊಂಕಣಿಗಳಲ್ಲಿ ಸಾವಿರಾರು ಹರಿಕಥೆಗಳನ್ನು ಮಾಡಿದ್ದಾರೆ. ಹಿಂದಿ ಮರಾಠಿ ಭಾಷೆಗಳ ಸಂತ ಸಾಹಿತ್ಯವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವುಗಳ ನಡುವೆ ಅವರ ತುಳು ಭಾಷೆಯ ಹರಿಕಥೆಗಳು ವಿಶಿಷ್ಟವಾಗಿ ನಿಲ್ಲುತ್ತವೆ. ಅವರು ಬಳಸುವ ತುಳುಭಾಷೆಯ ಬನಿ ಅದಕ್ಕೆ ಕಾರಣ. ಈಗ ಮರೆಯಾದ ಎಷ್ಟೋ ತುಳು ಶಬ್ದಗಳನ್ನು ಅವರು ಹರಿಕಥೆಯಲ್ಲಿ ಬಳಸುವುದು ಭಾಷಿಕ ನೆಲೆಯಲ್ಲಿ ಅತ್ಯಂತ ಮಹತ್ವದ ಸಂಗತಿ. ಈ ದಿಸೆಯಲ್ಲಿ ಕೆಲಸಮಾಡಿದ ಇನ್ನೊಬ್ಬರು ಹರಿದಾಸರೆಂದರೆ ದಿ. ಮಲ್ಪೆ ರಾಮದಾಸ ಸಾಮಗರು.

ಹಂಪಿ ಕನ್ನಡ ವಿಶ್ವವಿದ್ಯಾಲಯ ಹೊರತಂದ ’ತುಳುಸಾಹಿತ್ಯ ಚರಿತ್ರೆ’ ಶ್ರೀ ಭದ್ರಗಿರಿಯವರ ತುಳು ಹರಿಕಥೆಯ ಪದ್ಯಗಳನ್ನು ದಾಖಲಿಸಿದೆ. ಕೆಲವು ಕಡೆ ಪುರಂದರದಾಸರೇ ಮೊದಲಾದವರ ಕೀರ್ತನೆಗಳ ತುಳು ಅನುವಾದವೂ ಗಮನಾರ್ಹವಾಗಿದೆ. ಉದಾಹರಣೆಗೆ ಪುರಂದರದಾಸರ ’ಸತತ ಗಣನಾಥ ಸಿದ್ಧಿಯ ಕೊಡುವ’ ಎಂಬ ಕೀರ್ತನೆಯ ತುಳು ಅನುವಾದವನ್ನು ಗಮನಿಸಬಹುದು.

ಸತತ ಗಣನಾಥೆ ಸಿದ್ಧಿನ್ ಕೊರುಪೆ ಕಾರ್ಯಯೋಲೆಡ್

ಮತಿ ಪ್ರೇರಣೆ ಮಲ್ಪುನಾ ಪಾರ್ವತೀದೇವಿ

ಮುಕುತಿ ಪದೊಕು ಮನ ಕೊರುವೆ ಮಹರುದ್ರ ದೇವೆರ್

ಭಕುತಿದಾಯಕಿ ಭಾರತೀದೇವಿ ||

ಯುಕುತಿ ಶಾಸ್ತ್ರೊಳೆಗ್ ವನಜಸಂಭವನೊ ಸತಿ

ಗತಿ ಕೊರುವೆ ನಮ್ಮ ಗುರು ಪವಮಾನೆ

ಚಿತ್ತೊಗು ಆನಂದಸುಖೊನು ಕೊರುವೊಳು ರಮಾ

ಭಕ್ತ ಜನಕುಳೆ ಸ್ವಾಮಿ ಪುರಂದರ ವಿಠಲೆ ||

ಭದ್ರಗಿರಿಯವರ ಕವಿತೆಗಳಲ್ಲಿರುವ ಛಂದೋಬಂಧಗಳು ಗಮನ ಸೆಳೆಯುವಂತಹುದು. ಈ ಕೆಳಗಿನ ರಚನೆಯಲ್ಲಿ ಅವರು ದ.ರಾ. ಬೇಂದ್ರೆಯವರ ಮೇಘ ಛಂದಸ್ಸನ್ನು ಸುಲಲಿತವಾಗಿ ತುಳುವಿಗೆ ಹೊಂದಿಸಿದ್ದು ಗಮನಾರ್ಹ.

ಓ ಸಿದ್ಧ ಪುರುಷ ಕೇನೊಂಜಿ ನಿಮಿಷ ಬುಲಿಪುಂಡು ಕೋಟಿ ಕರ್ಲ್

ಓ ಯೋಗಿ ಮಹಿಮ ಬುಡುಪಾದ್ ಕೊರುಲ ರೋಗಾದಿ ಬಾಧೆದುರ್ಲು

ಕಲ್ಪಾಂತ ಸಾಕ್ಷಿ ಬೊಲ್ಪಾಂಡ್ ತೂಲ ತೆರಿಯಂದೆ ಪೋಯೆ ನಿನನೆ

ನಿನ ಕಣ್ಣ್ಡೆನ್ನ ಮನಪೂರ್ತಿ ತೂಲ ನಡಪಾಲ ಒಟ್ಟುಗೆನನೆ ||

(ಶ್ರೀ ಒಡಿಯೂರು ಕ್ಷೇತ್ರ ಮಹಾತ್ಮೆ)

 

ಸಾಮೂಹಿಕ ಭಜನೆಯ ಲಯತಾದಾತ್ಮ್ಯ ರೂಪಕಸಾಮರ್ಥ್ಯ, ಅಂತ್ಯಪ್ರಾಸದ ಚೆಲುವು, ಅನುರಣನ ಗುಣ, ಸರಳ ನಿರೂಪಣೆ ಮುಂತಾದವುಗಳು ಭದ್ರಗಿರಿಯವರ ಕಾವ್ಯದ ಮುಖ್ಯಾಂಶಗಳು. ಈ ಕೆಳಗಿನ ಕವಿತೆಗಳಲ್ಲಿ ಅಂತಹ ಸೊಬಗನ್ನು ಗಮನಿಸಬಹುದು.

ಪ್ರಾಣವಿಠಲೆ – ಪಂಚ – ಪ್ರಾಣ ವಿಠಲೆ

ಬಂಧು ವಿಠಲೆ – ದೀನ – ಬಂಧು ವಿಠಲೆ

ಶ್ವಾಸ ವಿಠಲೆ – ವಿ – ಶ್ವಾಸ ವಿಠಲೆ

ದೃಷ್ಟಿ ವಿಠಲೆ – ಮಾತ – ಸೃಷ್ಟಿ ವಿಠಲೆ

ಕರ್ಮವಿಠಲೆ – ಕರ್ಮ – ಧರ್ಮ ವಿಠಲೆ         (ಭಕ್ತ ಗೋರಕುಂಬಾರೆ)

 

ಬತ್ತ್ಂಡ್ ನಂದಿನಿ ತೀರ್ಥ | ಅಪಗನೆ

ಜತ್ತ್ಂಡತ್ತೆ ಅಮೃತ ||

ಬದ್ಕ್ಂಡ್ ಸಕಲ ಜೀವಜಡ ಜಂತು

ಬಿದೆ ಬಿರಿಯಾಂಡ ಚೈತನ್ಯದ ತಂತು

 

ಆಜಿನ ದೊಂಡೆಗ್ ಅಮೃತಧಾರೆ

ಭೂಮಿದೇವಿನ ಬೊಲ್ಪುದ ಸೀರೆ

ಫಲೊಕುಳು ಪುಷ್ಪೊಡು ಮಲೆ ಸಮೃದ್ಧಿ

ನೆಲೊಕು ತಣ್ಪು ಜ್ವಲ ಸ್ವರ್ಗೊದ ಸಿದ್ಧಿ (ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ)

 

ದೇವೆರುಪ್ಪುನಿ ಒಲ್ಪಯ? | ತೆರಿಯೊಣ್ಣೆಯ

ದೇವೆರುಪ್ಪುನಿ ಒಲ್ಪಯ? ||

ಬೆನ್ಪುನ ಬಡವಡ ಬ್ರಹ್ಮಜ್ಞಾನಿಡ

ಉಣ್ಪುನ ತಿನ್ಪುನ ಒಣಸ್ ತಿನಸ್ಲೆಡ

ಪಣ್ಪುನ ನಾಲಯಿ ತಣ್ಪು ಉಷ್ಣೊಲೆಡ

ಮನ್ಪಂದಿನ ಶಕ್ತಿ ಒಲ್ತವುಯಾ ||         (ಭಕ್ತೆ ದಾಮಾಜಿಪಂತೆ)

 

ಮಣ್ಣ್ಡ್ ಬುಳೆತಿನ ಬುಳೆನ್ ತಿಂದ್ದ್

ಮಣ್ಣ್ಡ್ ಮಣ್ಣಾದ್ ಪೋಪೊ ನಮ

ಮಣ್ಣ್ಡ್ ಪುಟುದಿನ ನಿನ್ನ ಉಡಲ್ಡೇ

ಚಿನ್ಮಯ ಮೂರ್ತಿನ್ ತೂವೊಡಣ್ಣ      (ಭಕ್ತ ಚೋಕಾಮೇಳ್)

 

ಈ ತುಳು ಭಕ್ತಿಗೀತೆಗಳ ಸಂಕಲನ ಪ್ರತ್ಯೇಕವಾಗಿಯೇ ಪ್ರಕಟವಾದರೆ ಅದು ತುಳುಸಾಹಿತ್ಯಕ್ಕೆ ಒಂದು ಅಪೂರ್ವ ಕೊಡುಗೆಯಾಗಬಲ್ಲುದು.

 

ಪ್ರಶಸ್ತಿ ಪುರಸ್ಕಾರಗಳು

ಭದ್ರಗಿರಿ ಅಚ್ಯುತದಾಸರನ್ನು ಅನೇಕ ಪ್ರಶಸ್ತಿ ಪುರಸ್ಕಾರಗಳು ಅರಸಿಕೊಂಡು ಬಂದಿವೆ. ಅವುಗಳಲ್ಲಿ ಪ್ರಮುಖವಾದವುಗಳು ಕರ್ನಾಟಕ ಸರಕಾರದ ’ಕನಕಪುರಂದರ ಪ್ರಶಸ್ತಿ’ (2000), ’ರಾಜ್ಯೋತ್ಸವ’ ಪ್ರಶಸ್ತಿ (1985), ಹಂಪಿಯ ಕನ್ನಡ ವಿಶ್ವವಿದ್ಯಾಲಯದ ’ನಾಡೋಜ’ ಪ್ರಶಸ್ತಿ (2000), ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಮತ್ತು ’ಕರ್ನಾಟಕ ಕಲಾತಿಲಕ’ ಪುರಸ್ಕಾರ (1990), ಶ್ರೀ ಕಾಶೀ ಮಠಾದೀಶ ಶ್ರೀ ಸುದೀಂದ್ರತೀರ್ಥರಿಂದ ’ಕೀರ್ತನಾಗ್ರೇಸರ’ (1956), ಶ್ರೀ ಗೋಕರ್ಣ ಪರ್ತಗಾಳಿ ಮಠಾದೀಶರಿಂದ ’ಕೀರ್ತನಾಚಾರ್ಯ’ (1963), ಶ್ರೀ ಪೇಜಾವರ ಮಠಾದೀಶ ಶ್ರೀ ವಿಶ್ವೇಶ ತೀರ್ಥರಿಂದ ’ಶ್ರೀಕೃಷ್ಣಾನುಗ್ರಹ ಪ್ರಶಸ್ತಿ’ (1985), ಶ್ರೀ ಅದಮಾರು ಮಠಾದೀಶ ಶ್ರೀ ವಿಬುಧೇಶ ತೀರ್ಥರಿಂದ ’ಹರಿದಾಸ ಕುಲಭೂಷಣ’ ಪ್ರಶಸ್ತಿ (1987), ಶ್ರೀ ವಿದ್ಯಾದಿರಾಜರಿಂದ ’ನವರತ್ನ ಪುರಸ್ಕಾರ’, ಶ್ರೀಮದ್ ರಾಘವೇಶ್ವರ ಭಾರತಿ ಶ್ರೀಗಳವರಿಂದ ’ಪುರುಷೋತ್ತಮ ಪ್ರಶಸ್ತಿ’ ಇವುಗಳೊಂದಿಗೆ ಕೊಂಕಣಿ ಅಕಾಡೆಮಿ ಪ್ರಶಸ್ತಿ, ವಿಶ್ವಕೊಂಕಣಿ ಸಮಾವೇಶದ ಪುರಸ್ಕಾರ, ಮುಂಬಯಿಯ ಗೌಡಸಾರಸ್ವತ ಸಮಾಜದಿಂದ ’ಕೀರ್ತನ ಸಾಮ್ರಾಟ’ ಪ್ರಶಸ್ತಿ, ಟಿ.ಎಂ.ಎ. ಪೈ ಪ್ರತಿಷ್ಠಾನದ ಪ್ರಶಸ್ತಿ, ಏರ್ಯ ಪ್ರಶಸ್ತಿ, ಶಂಕರನಾರಾಯಣ ಸಾಮಗ ಪ್ರಶಸ್ತಿ, ದೇರಾಜೆ ಪ್ರಶಸ್ತಿ, ಕೊ.ಅ. ಉಡುಪ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ – ಹೀಗೆ ನಾಡಿನಾದ್ಯಂತ ಪ್ರತಿಷ್ಠಿತ ಸಂಘಸಂಸ್ಥೆಗಳು ಇವರ ಮೇಲೆ ಪ್ರಶಸ್ತಿಗಳ ಮಳೆಯನ್ನೇ ಸುರಿಸಿವೆ.

ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿಯ ಸದಸ್ಯತ್ವದ ಗೌರವವೂ (1984-87) ಇವರಿಗೆ ಲಬಿಸಿದೆ. ಇವರ ಹರಿಕೀರ್ತನೆ ಮತ್ತು ಗೀತಾಪ್ರವಚನ ಸೇವೆಯ ಇಪ್ಪತ್ತೈದನೇ ವರ್ಷದ ಸಂದರ್ಭದಲ್ಲಿ ಬೆಂಗಳೂರಿನ ಅಬಿಮಾನಿಗಳು ’ಬೆಳ್ಳಿಸಂಚಿಕೆ’ಯನ್ನೂ (1978), ಐವತ್ತನೇ ಹುಟ್ಟುಹಬ್ಬದ ಸವಿನೆನಪಿಗಾಗಿ ’ಸ್ವರ್ಣಸಂಚಿಕೆ’ಯನ್ನು (1982) ಭದ್ರಗಿರಿಯವರಿಗೆ ಸಮರ್ಪಿಸಿ ಧನ್ಯರಾಗಿದ್ದಾರೆ.

ಮನೆಯೇ ಗ್ರಂಥಾಲಯ

ಮುಂಬಯಿ ಮಹಾನಗರಕ್ಕೆ ಹರಿಕಥೆಗೆ ಹೋಗುತ್ತಿದ್ದಾಗ, ಅಚ್ಯುತದಾಸರು ಹಗಲುಹೊತ್ತು ಹಳೆಯ ಪುಸ್ತಕಗಳು ಸಿಗುವ ಗಲ್ಲಿಗಳಲ್ಲಿ ತಿರುಗುತ್ತಿದ್ದರು. ಅವರ ಜ್ಞಾನದಾಹವೇ ಅಂತಹುದು. ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಅವರು ಸಂಗ್ರಹಿಸಿದ ಕೀರ್ತನೆ ಉಗಾಭೋಗ, ಜಾನಪದ ಹಾಡುಗಳ ಸಾಹಿತ್ಯಿಕ ಮೌಲ್ಯದಿಂದಾಗಿ ಅವರಿಗೆ ಈ ಹುಚ್ಚು ಹಿಡಿದಿತ್ತು. ಒಮ್ಮೆ ಪೂನಾದಲ್ಲಿ ಹರಿಕಥೆ ಮಾಡುತ್ತಿರುವಾಗ ’ನಿಮ್ಮ ಮನೆಗಳ ಅಟ್ಟದಲ್ಲಿ ಯಾವುದಾದರೂ ಪುಸ್ತಕಗಳಿದ್ದು, ನಿಮಗೆ ಅವುಗಳು ಬೇಡವಾಗಿದ್ದರೆ ದಯವಿಟ್ಟು ನನಗೆ ನೀಡಬೇಕು’ ಎಂದು ಕಲಾಭಿಮಾನಿಗಳಲ್ಲಿ ವಿನಂತಿ ಮಾಡಿದರು. ಪರಿಣಾಮವಾಗಿ ರಾಶಿರಾಶಿ ಪುಸ್ತಕಗಳು ಇವರಿದ್ದಲ್ಲಿಗೆ ಬಂದು ಬೀಳಲಾರಂಭಿಸಿದವು. ಒಬ್ಬಳು ಮುದುಕಿಯಂತೂ ನೂರಾರು ಪುಸ್ತಕಗಳನ್ನು ಅಚ್ಯುತದಾಸರಿಗೆ ದಾನವಾಗಿ ನೀಡಿದಳು. ಆದರೆ ಅವುಗಳನ್ನು ಸ್ವೀಕರಿಸಲು ದಾಸರಿಗೆ ಭಯ! ಏಕೆಂದರೆ ಅವುಗಳ ಒಟ್ಟು ಮೌಲ್ಯ ಆಕಾಲದಲ್ಲೇ ಸಾವಿರಾರು ರೂಪಾಯಿಗಳನ್ನು ಮೀರಿತ್ತು. ಕೊನೆಗೂ ನ್ಯಾಯವಾದಿಗಳೊಬ್ಬರ ಸಮಕ್ಷದಲ್ಲಿ ದಾಸರು ಪುಸ್ತಕದಾನವನ್ನು ಪಡೆದುಬಿಟ್ಟರು! ಹೀಗೆ ಸಂಗ್ರಹವಾದ ಪುಸ್ತಕಗಳನ್ನು ಬೆಂಗಳೂರಿಗೆ ತರಲು ಒಂದು ಲಾರಿಯೇ ಬೇಕಾಗಿತ್ತು. ಕೊನೆಗೂ ದಕ್ಷಿಣ ಕನ್ನಡಿಗರೊಬ್ಬರು ಆ ಕೆಲಸವನ್ನು ಒಪ್ಪಿಕೊಂಡು ಲಾರಿಯಲ್ಲಿ ಪುಸ್ತಕಗಳನ್ನು ತುಂಬಿಕೊಂಡು ಬೆಂಗಳೂರಿಗೆ ತಂದು ಹಾಕಿದರು!

ಇಷ್ಟೊಂದು ಪುಸ್ತಕಗಳನ್ನು ಏನು ಮಾಡುವುದು? ಎಲ್ಲಿ ಇಟ್ಟುಕೊಳ್ಳುವುದು? ಅಚ್ಯುತದಾಸರಿಗೆ ಅದು ದೊಡ್ಡ ಸಮಸ್ಯೆಯಾಯಿತು. ವೇದ, ಉಪನಿಷತ್ತು, ಭಗವದ್ಗೀತೆ, ಪುರಾಣಗಳು, ಕಾವ್ಯ-ಇತಿಹಾಸ ಗ್ರಂಥಗಳು…. ಒಂದೇ ಎರಡೇ…. ವಿವಿಧ ಜ್ಞಾನಶಾಖೆಗಳ ತವನಿದಿ ಅದು. ಅವುಗಳನ್ನೆಲ್ಲಾ ವಿಷಯವಾರು ವಿಂಗಡಿಸಿ, ಅವುಗಳಿಗೆ ಪ್ರತ್ಯೇಕ ಸಂಖ್ಯೆಗಳನ್ನು ಕೊಟ್ಟು, ಪರಿವಿಡಿಯಲ್ಲಿ ಪಟ್ಟಿಮಾಡಿ ತಮ್ಮ ಮನೆಯನ್ನೇ ’ಗ್ರಂಥಾಲಯ’ ಮಾಡಿಬಿಟ್ಟರು! ಕೆಲವು ಗ್ರಂಥಗಳಂತೂ ಅಚ್ಯುತದಾಸರಿಗೆ ಬೇಕಾದವುಗಳಾಗಿರಲಿಲ್ಲ. ಅವುಗಳನ್ನು ಉಚಿತವಾಗಿ ಬೇಕಾದವರಿಗೆ ಕೊಟ್ಟುಬಿಟ್ಟರು. ಅದ್ವೆ ತ ವೇದಾಂತಕ್ಕೆ ಸಂಬಂದಿಸಿದ ಅನೇಕ ಗ್ರಂಥಗಳನ್ನು ಸ್ವರ್ಣವಲ್ಲಿ ಶ್ರೀಗಳಿಗೆ ಕಳುಹಿಸಿಕೊಟ್ಟರು. ಶ್ರೀಗಳಿಗಂತೂ ಅಮೂಲ್ಯ ಗ್ರಂಥಗಳನ್ನು ಪಡೆದು ಮಹದಾನಂದವಾಯಿತು.

ಪುಸ್ತಕಗಳ ಸಂಖ್ಯೆ ಬೆಳೆಯುತ್ತಾ ಹೋದಂತೆ, ಬೆಂಗಳೂರಿನ ದಾಸರ ಮನೆ ಚಿಕ್ಕದಾಗತೊಡಗಿತು! ಅಚ್ಯುತದಾಸರು ತಮ್ಮ ಮೂವರು ಮಕ್ಕಳಿಗೆ ಬೇರೆ ಬೇರೆ ಮನೆ ಮಾಡಿಕೊಟ್ಟು, ಜೊತೆಗೆ ಪುಸ್ತಕಗಳನ್ನು ಮೂರು ಪಾಲು ಮಾಡಿದರು. ಪರಿಣಾಮವಾಗಿ ಅಚ್ಯುತದಾಸರ ಮಕ್ಕಳ ಮನೆಗಳೂ ಈಗ ಗ್ರಂಥಾಲಯ! ತನಗೆ ಬೇಕಾದ ಪುಸ್ತಕಗಳ ಸಂಖ್ಯೆ ತಿಳಿಸಿ, ದೂರವಾಣಿ ಕರೆ ಮಾಡಿದರೆ, ಆ ಪುಸ್ತಕ ನೇರವಾಗಿ ಅಚ್ಯುತದಾಸರ ಕೈಸೇರುತ್ತದೆ. ಭಾಗವತ, ರಾಮಾಯಣ, ಮಹಾಭಾರತ, ಯಕ್ಷಗಾನ, ತುಳು-ಮರಾಠಿ- ಕೊಕಣಿ-ಹಿಂದೀ ಸಾಹಿತ್ಯ, ವೇದೋಪನಿಷತ್ತು, ಪುರಾಣಗಳು ಹೀಗೆ ವಿಷಯವಾರು ಕಪಾಟುಗಳಲ್ಲಿ ಸುಮಾರು ಹತ್ತುಸಾವಿರ ಗ್ರಂಥಗಳು ಅಧ್ಯಯನಾಸಕ್ತರನ್ನು ಕೈಬೀಸಿ ಕರೆಯುತ್ತಿವೆ. ಸಂಶೋಧನಾ ವಿದ್ಯಾರ್ಥಿಗಳು ಇಲ್ಲಿ ಕುಳಿತು ಅವುಗಳ ವ್ಯಾಸಂಗ ಮಾಡಲು ಮುಕ್ತ ಅವಕಾಶವಿದೆ.

ಅಚ್ಯುತದಾಸರ ಮಕ್ಕಳ ಮನೆ ಗ್ರಂಥಕಾಶಿಯಾದರೆ, ಅಚ್ಯುತದಾಸರ ಮನೆ ಪ್ರಶಸ್ತಿ ಪುರಸ್ಕಾರ ಸ್ಮರಣಿಕೆಗಳ ಪ್ರತಿಮಾಗೃಹ! ಪ್ರತಿಕ್ಷಣವೂ ಅಲ್ಲಿ ಅಧ್ಯಯನ ಪಾರಾಯಣ; ಭಜನ ಕೀರ್ತನ ಗಾಯನ. ಮನೆಗೆ ಬಂದ ಅತಿಥಿಗಳೆಲ್ಲರಿಗೂ ದೇವರ ಮನೆಂುೊಳಗೆ ನೇರ ಪ್ರವೇಶ. ಜೊತೆಗೆ ಪುಂಡರೀಕ ವರದ ಪಾಂಡುರಂಗ ವಿಠ್ಠಲನ ತೀರ್ಥಪ್ರಸಾದ!

ಭದ್ರಗಿರಿಯಿಂದ ಬದರೀಗಿರಿಯವರೆಗೆ

ಉಡುಪಿಯ ಹತ್ತಿರದ ಭದ್ರಗಿರಿಯಲ್ಲಿ ಹುಟ್ಟಿದ ಅಚ್ಯುತದಾಸರು ವ್ಯಕ್ತಿತ್ವದಲ್ಲಿ ಹಿಮಾಲಯದ ಎತ್ತರವನ್ನೇರಿದವರು. ಹರಿಕಥೆಯನ್ನು ಮಾಡುತ್ತಲೇ ಹಂತಹಂತವಾಗಿ ಮೇಲೇರಿ ಬಂದವರು. ಅವರಿಗೆ ಹೇಳಿಕೊಳ್ಳುವಂತಹ ಶಾಲಾ ಶಿಕ್ಷಣವಿಲ್ಲ. ಆದರೆ ’ಸರ್ವರೊಳು ಒಂದೊಂದು ನುಡಿಕಲಿತು ವಿದ್ಯೆಯ ಪರ್ವತವೆ ಆದ’ ಎಂಬ ಸರ್ವಜ್ಞನ ಮಾತಿನಂತೆ ಲೋಕಸಂಚಾರದಿಂದ ಭದ್ರಗಿರಿಯವರು ಕಲಿತದ್ದು ಹೆಚ್ಚು. ಅವರಿಗೆ ಒಂದೊಂದು ಹರಿಕಥಾ ಕಾರ್ಯಕ್ರಮವೂ ಒಂದೊಂದು ತರಗತಿ. ಒಂದೊಂದು ಊರಿನ ಪ್ರಯಾಣವೂ ಒಂದೊಂದು ಪಾಠ. ಅದು ಹರಿಕಥೆಯ ನಿರ್ವಹಣೆ ಇರಬಹುದು, ಬದುಕಿನ ರೀತಿ ಇರಬಹುದು. ಎಲ್ಲವೂ ಹರಿಕೀರ್ತನೆಯಂಬ ವಿಶ್ವವಿದ್ಯಾಲಯದಲ್ಲಿ ದೊರೆತ ಬೋಧೆಯೇ.

ಒಮ್ಮೆ ಕೊಡ್ಲಿ ಪೇಟೆಯಲ್ಲಿ ಭದ್ರಗಿರಿಯವರ ಹರಿಕಥೆ ’ಕೃಷ್ಣ ಸಂಧಾನ’ ಏರ್ಪಾಡಾಗಿತ್ತು. ಸಮಯಕ್ಕೆ ಸರಿಯಾಗಿ ಆರಂಭವಾಗದೆ ಅವಸರದಲ್ಲಿ ಅರ್ಧಗಂಟೆಯ ಕಾಲಾವಕಾಶದಲ್ಲಿ ಹರಿಕಥೆಯನ್ನು ಮುಗಿಸಬೇಕಾದ ಅನಿವಾರ್ಯತೆ ಉಂಟಾಗಿತ್ತು. ಭದ್ರಗಿರಿಯವರು ’ವಿದುರಾತಿಥ್ಯ’ದ ಭಾಗವನ್ನು ಕೈಬಿಟ್ಟು ನೇರವಾಗಿ ಕೃಷ್ಣನನ್ನು ದುರ್ಯೋಧನನ ಆಸ್ಥಾನಕ್ಕೆ ಕರೆದೊಯ್ದರು! ಕಥೆ ಏನೋ ಬೇಗ ಮುಗಿಯಿತು. ಆದರೆ ಅಲ್ಲಿದ್ದ ತುಳುನಾಡಿನ ಅಜ್ಜಿಯೊಬ್ಬರು ಕಥೆ ಮುಗಿದ ಬಳಿಕ ಬಂದು, ’ವಿದುರನ ಇಲ್ಲಡ್ ಕೃಷ್ಣದೇವೆರ್ ಪೇರ್ ಪರೊಂದಿತ್ತೆರ್ ಅತ್ತೇ?’ ಎಂದು ಕೇಳಿಯೇ ಬಿಟ್ಟರು! ಇದು ಆ ಮುದುಕಿಗೆ ಯಕ್ಷಗಾನದಿಂದ ಬಂದ ಪುರಾಣಜ್ಞಾನ. ಅಂದಿನಿಂದ ಭದ್ರಗಿರಿಯವರು ಕಥಾವಿವರಗಳನ್ನು ಅಡಕವಾಗಿ ಹೇಳಿ ಮುಗಿಸುವುದನ್ನು ಕಲಿತರಂತೆ. ಇದರಿಂದಾಗಿಯೋ

’’ವಿದುರನ ಮನೆಗೆ ಬಂದು

ಕುಡುತೆ ಪಾಲ್ಗೊಂಡು

ಕುಂತೀ ದೇವಿಯನ್ನು ಕಂಡು

ಕುಶಲ ವಿಚಾರಿಸಿದ ಭಕ್ತಬಂಧು’’

ಎಂಬ ಸಂಕ್ಷೇಪಶೈಲಿ ಅಚ್ಯುತದಾಸರ ಕೀರ್ತನ ಕೌಶಲವಾಯಿತು.

 

ಇನ್ನೊಮ್ಮೆ ಮೈಸೂರಿನಲ್ಲಿ ’ಸತ್ಯಹರಿಶ್ಚಂದ್ರ’ ಹರಿಕಥೆ. ರಾಘವಾಂಕನ ಹರಿಶ್ಚಂದ್ರ ಕಾವ್ಯದ ಆಧಾರದಲ್ಲಿ ಭದ್ರಗಿರಿಯವರು ಕಥೆ ನಡೆಸುತ್ತಿದ್ದರು.

’’ನೆನೆದು ಚಂಡಾಲಕಿಂಕರನಾಗಿ ಹೊಲೆವೇಷ

ವನು ಹೊತ್ತು ಸುಡುಗಾಡ ಕಾದ ಶವಶಿರದಕ್ಕಿ

ಯನು ಹೇಸದುಂಡು ಜೀವಿಸುವ ವರಪುತ್ರ ನಳಿದುದನು   ಕಣ್ಣಾರೆ ಕಂಡು’

ವಾರ್ಧಕ ಷಟ್ಪದಿಯ ಸಾಲುಗಳು ಭದ್ರಗಿರಿಯವರ ತುಂಬುಕಂಠದಲ್ಲಿ ಮೊಳಗುತ್ತಿದ್ದವು. ’ಚಂಡಾಲ’ ಶಬ್ದವನ್ನು ಕವಿ ರಾಘವಾಂಕನೇ ತನ್ನ ಕಾವ್ಯದಲ್ಲಿ ಅನೇಕ ಕಡೆ ಬಳಸಿದ್ದುಂಟು. ಆದರೆ ಹರಿಕಥೆ ಮುಗಿದ ಬಳಿಕ ಒಬ್ಬರು ಅಧಿಕಾರಿಗಳು ದಾಸರ ಹತ್ತಿರ ಬಂದು – ’’ಕಥೆಯೇನೋ ಚೆನ್ನಾಗಿತ್ತು, ಆದರೆ ಆಗಾಗ್ಗೆ ತಾವು ಬಳಸಿದ ’ಚಂಡಾಲ’ ಶಬ್ದ ಪ್ರಯೋಗ ಮಾತ್ರ ನನಗೆ ನೋವುಂಟು ಮಾಡುತ್ತಿತ್ತು’’ ಎಂದರು! ಅಂದಿನಿಂದ ಭದ್ರಗಿರಿಯವರು ಜಾತಿಸೂಚಕ ಪದಗಳ ಬಳಕೆಯನ್ನು ಪ್ರಜ್ಞಾಪೂರ್ವಕವಾಗಿ ಕೈಬಿಟ್ಟರು.

ಮತ್ತೊಮ್ಮೆ ಹುಬ್ಬಳ್ಳಿಯಲ್ಲಿ ಹರಿಕಥೆ ಮಾಡುತ್ತಾ ’ಚಿಕ್ಕ ಸಂಸಾರ ಸುಖಕ್ಕೆ ಆಧಾರ’ ಎಂದು ಹೇಳುತ್ತಾ ಕುಟುಂಬ ಯೋಜನೆಯ ಪ್ರಯೋಜನಗಳನ್ನು ವಿವರಿಸುತ್ತಿದ್ದರು. ಪುರಾಣ ಕಾಲದ ಕುಂತೀದೇವಿಗೆ ಐವರು ಮಕ್ಕಳೆಂದೂ ಹಾಗೂ ಗಾಂಧಾರಿಗೆ ನೂರೊಂದು ಮಕ್ಕಳೆಂದೂ ಉದಾಹರಣೆ ಕೊಟ್ಟು, ಐವರು ಪಾಂಡವರೇ ಮಹಾಭಾರತ ಯುದ್ಧವನ್ನು ಗೆದ್ದರೆಂದು ಹೇಳಿದರು. ಆಗ ಒಬ್ಬ ಸಭೆಯಲ್ಲಿ ನಿಂತು ಪ್ರಶ್ನಿಸಿದ –

’ನಿಮಗೆಷ್ಟು ಮಕ್ಕಳು ಸ್ವಾಮಿ?’

’ನನಗೆ ಏಳು ಮಕ್ಕಳು’

’ನಮಗೆ ಮಾತ್ರ ಕುಟುಂಬ ಂುೋಜನೆಯ ಪಾಠ ಏಕೆ?’

’ನಾನು ಪಡುವ ಪಾಡು ನಿಮಗೆ ಬಾರದಿರಲಿ ಎಂಬುದಷ್ಟೇ ನನ್ನ ಉದ್ದೇಶ’

ಪ್ರತ್ಯುತ್ಪನ್ನಮತಿಯಿಂದ ದಾಸರೇನೋ ಪಾರಾದರು. ಆದರೆ ಅಂದು ’ತಾನು ಜೀವನದಲ್ಲಿ ಅನುಸರಿಸದೇ ಇರುವುದನ್ನು ಬೇರೆಯವರಿಗೆ ಉಪದೇಶಿಸಬಾರದು’ ಎಂಬ ನಿರ್ಣಯಕ್ಕೆ ಬಂದರು. ಇಂತಹ ನೂರಾರು ಪಾಠಗಳಿಂದ ಮಾಗುತ್ತಾ ಬಂದವರು ಅಚ್ಯುತದಾಸರು.

ಭದ್ರಗಿರಿಯಿಂದ ಬದರೀಗಿರಿಯವರೆಗೆ ಹತ್ತಾರು ಬಾರಿ ಯಾತ್ರೆ ಕೈಗೊಂಡ ಅಚ್ಯುತದಾಸರಿಗೆ ’ವಿದೇಶಯಾತ್ರೆ’ ಎಂದರೆ ಏಕೋ ಅಲರ್ಜಿ! ’’ಅಲ್ಲಿ ಹೋಗಿ ನಾನು ಏನು ಮಾಡಬೇಕಾಗಿದೆ?’’ ಎಂಬ ನಿರ್ಮಮ ಭಾವ. ಸಹೋದರ ಕೇಶವದಾಸರು ವಿದೇಶಗಳಲ್ಲಿ ಅನೇಕ ಕಡೆ ಪುರಂದರ ವಿಠಲ ಮಂದಿರಗಳನ್ನು ಸ್ಥಾಪಿಸಿ, ವಿದೇಶೀಯರಿಗೆ ಭಕ್ತಿಯ ಹುಚ್ಚು ಹಿಡಿಸಿದ್ದಾರೆ. ಆದರೆ ಅಚ್ಯುತದಾಸರಿಗೆ ಭರತಭೂಮಿಯಲ್ಲೇ ಕೊನೆಯ ಕ್ಷಣದವರೆಗೂ ಇರುವ ಅದಮ್ಯ ರಾಷ್ಟ್ರಭಕ್ತಿ. ’ಪುಣ್ಯಭೂಮಿ ದೇವಭೂಮಿ ವೀರಭೂಮಿ ಭಾರತ; ತಪೋಭೂಮಿ ವೇದಭೂಮಿ ಮಾತೆ ರಾಷ್ಟ್ರದೇವತಾ’ ಎಂಬ ಅನನ್ಯ ದೇಶಪ್ರೇಮ. ಜೊತೆಗೆ ಸಾಂಪ್ರದಾಯಿಕ ಪೂಜೆ, ಸಂಧ್ಯಾವಂದನೆ, ಏಕಾದಶಿ ಉಪವಾಸ, ಗೃಹಭೋಜನ ವಿದಿ ಮುಂತಾದ ನಿಯಮ ನಿಷ್ಠೆಗಳ ಚೌಕಟ್ಟು. ಮನೆಯಲ್ಲೇ ವೀರವಿಠಲನ ನಿರಂತರ ಉಪಾಸನೆ. ವೇದಬ್ರಹ್ಮ ಶ್ರೀನಿವಾಸ, ನಾದಬ್ರಹ್ಮ ವಿಠಲ ಮತ್ತು ಅನ್ನಬ್ರಹ್ಮ ಶ್ರೀಕೃಷ್ಣನ ಆರಾಧನೆ. ವ್ಯಾಸ-ಮಧ್ವರ ಮೂರ್ತಿಗಳಿಗೆ ತುಲಸೀ ಅರ್ಚನೆ. ದಾಸದೀಕ್ಷೆಯ ಸಂಕೇತವಾಗಿರುವ ದಂಡಿಗೆ ಬೆತ್ತಗಳಿಗೆ ಭಗವಂತನ ಸನ್ನಿಧಾನದಲ್ಲೇ ವಿಶೇಷ ಪೂಜೆ. ಎಂಬತ್ತು ತುಂಬಿದ ಈ ಇಳಿಹರೆಯದಲ್ಲೂ ಸದಾ ಭಗವದ್ ಧ್ಯಾನ, ತತ್ತ್ವಚಿಂತನ, ಅಧ್ಯಯನ, ಗೀತ-ಗಾನ.

ಅಚ್ಯುತದಾಸರದು ಕಾವಿಬಟ್ಟೆಯುಟ್ಟರೂ ಕುಟುಂಬ ಪ್ರೀತಿಯಲ್ಲಿ ಬದುಕುವ ಸಂಸಾರಯೋಗ. ಮಕ್ಕಳು ಮೊಮ್ಮಕ್ಕಳೊಂದಿಗೆ ಮಾತಾಡುತ್ತಾ, ಟಿ.ವಿ. ನೋಡುತ್ತಾ, ಪತ್ರಿಕೆ ಓದುತ್ತಾ ಕಾಲಕಳೆಯುವ ಹರ್ಷಚಿತ್ತ ಅವರದು. ಶಿಷ್ಯರು, ಅಭಿಮಾನಿಗಳು ಅವರೊಂದಿಗೆ ಹರಟೆ ಹೊಡೆಯುತ್ತಾ ನಗೆಚಟಾಕಿ ಸಿಡಿಸುವ ಹಾಸ್ಯ ಪ್ರಿಯತೆ. ಅವಿರತ ಸಂಚಾರದಲ್ಲೂ ಆಧಾರಗ್ರಂಥಗಳನ್ನು ಸ್ಮರಣೆಯಲ್ಲಿ ಇರಿಸಿಕೊಳ್ಳಬಲ್ಲ ಬಹುಜ್ಞತೆ. ಹೊರಗಿನ ಪ್ರಪಂಚವನ್ನು ನೋಡುತ್ತಿದ್ದಂತೆಯೇ ಅಂತರ್ಮುಖಿಯಾಗಿ ಮೂಲನಾರಾಯಣ ಅಂಕಿತದಲ್ಲಿ ಪದ್ಯಗಳನ್ನು ಹೆಣೆಯುವ ದಾಸಭಾವ.

’’ಕಥಾಕೀರ್ತನವು ಒಂದು ವೃತ್ತಿಯಲ್ಲ, ಅದೊಂದು ಪ್ರವೃತ್ತಿ. ಅದು ಕೇವಲ ಜೀವನೋದ್ಯೋಗವಲ್ಲ, ಅದೊಂದು ಜೀವನ ಪದ್ಧತಿ ಎನ್ನುವ ಭದ್ರಗಿರಿಯವರು ಕಥಾಕೀರ್ತನದ ಮೂಲಕ ಸಮಾಜವನ್ನು ತಿದ್ದುವ ಕೆಲಸವಾಗಬೇಕು ಎನ್ನುತ್ತಾರೆ. ಕಳವು, ಕೊಲೆ, ಸುಲಿಗೆ, ಜೂಜು, ಮದ್ಯಪಾನ, ಭ್ರಷ್ಟಾಚಾರಗಳೇ ಮುಂತಾದ ಸಾಮಾಜಿಕ ಪಿಡುಗುಗಳನ್ನು ದೂರೀಕರಿಸಲು ಹರಿಕಥೆ ಒಂದು ಸಶಕ್ತ ಮಾಧ್ಯಮವೆಂಬುದು ಅವರ ಅಚಲವಾದ ನಂಬಿಕೆ. ಹರಿಕೀರ್ತನಕಾರರು ಜನರಲ್ಲಿ ಶೀಲ, ಸಂಯಮ, ನೀತಿ, ದೈವೀ ಪ್ರಜ್ಞೆಗಳನ್ನು ಜಾಗೃತಗೊಳಿಸಿ ಭಾರತದ ಭವ್ಯ ಪರಂಪರೆಯ ಮೌಲ್ಯಗಳನ್ನು ಮುಂದಿನ ಜನಾಂಗಕ್ಕೆ ತಿಳಿಯ ಹೇಳುವ ಹರಿಕಾರರಾಗಬೇಕೆಂಬುದು ಅವರ ಮಹೋದ್ದೇಶ. ಜಾತ್ಯತೀತತೆ, ಅಸ್ಪೃಶ್ಯತಾ ನಿವಾರಣೆ, ಅಕ್ಷರವಿದ್ಯಾಪ್ರಚಾರ, ಪರಿಸರ ನೈರ್ಮಲ್ಯ, ಭಾವೈಕ್ಯ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಬೋದಿಸುವುದು ನಮ್ಮ ಹೊಣೆ ಎಂಬುದು ಅವರ ಧೋರಣೆ. ದೇವರ ಅಸ್ತಿತ್ವದ ಕುರಿತು ನಂಬುಗೆಯಿದ್ದರೆ ಸಾಲದು, ಅಚಲವಾದ ಶ್ರದ್ಧೆ ಇರಬೇಕು. ದೇವರನ್ನು ಪೂಜಿಸಿದರೆ ಸಾಲದು, ಪ್ರೀತಿಸಬೇಕು. ಹರಿಕಥೆ ದಾಸರಾದರೆ ಸಾಲದು, ನಿಜವಾಗಿ ಹರಿದಾಸರಾಗಬೇಕು ಎನ್ನುವುದು ಅವರ ಕಳಕಳಿ. ಇಡೀ ಬದುಕನ್ನೇ ಹರಿಕಥಾ ಕಲಾಪ್ರಕಾರಕ್ಕೆ ಅರ್ಪಿಸಿಕೊಂಡು, ಕನ್ನಡವಿಠಲನನ್ನು ಅಂತರಂಗದಲ್ಲಿ ತುಂಬಿಕೊಂಡ ಅಚ್ಯುತದಾಸರು ಕನ್ನಡನೆಲದ ಒಂದು ವಿಸ್ಮಯ.

’ಕನ್ನಡ ನಾಡಿಗೆ ದೇವರು ಸಹ್ಯಾದ್ರಿ, ತುಂಗೆ, ಕಾವೇರಿಯರನ್ನು ದಯಪಾಲಿಸಿದ್ದಾರೆ. ಪಶ್ಚಿಮ ಸಮುದ್ರದ ಸಂಗಸಾನ್ನಿಧ್ಯವನ್ನು ಕರುಣಿಸಿದ್ದಾನೆ. ಅಂತೆಂುೆುೀ ಅವೆಲ್ಲಕ್ಕೂ ಹೆಗಲೆಣೆಯಾಗಿ ನಿಂತರೂ ನಮಗೆ ಒಡನಾಡಿಗಳಾಗಿರುವಂತೆ ಪಂಪ- ನಾರಣಪ್ಪರನ್ನು ಅನುಗ್ರಹಿಸಿದ್ದಾನೆ’ ಎಂದು ಮಹಾಕವಿ ಕುವೆಂಪು ಹೇಳಿದ್ದುಂಟು. ಆ ಸಾಲಿಗೆ ಈಗ ಇನ್ನಷ್ಟು ಹೆಸರುಗಳು ಸೇರಿಕೊಂಡಿವೆ ಎನ್ನುವುದು ಕನ್ನಡಿಗರಾದ ನಮಗೆ ಅಬಿಮಾನದ ಸಂಗತಿ. ಅವುಗಳಲ್ಲಿ ಮುಖ್ಯವಾದ ಹೆಸರು ಸಂತ ಭದ್ರಗಿರಿ ಅಚ್ಯುತದಾಸರದು ಎಂದರೆ ಅತಿಶಯೋಕ್ತಿಯಲ್ಲ.

ಅನುಬಂಧ 1

ಕೀರ್ತನಾಗ್ರೇಸರರ ಇನ್ನಷ್ಟು ಮುತ್ತುಗಳು, ತುತ್ತುಗಳು

ದೇವರು ಭಕ್ತರು ಹೇಳಿದ್ದನ್ನೆಲ್ಲ ಕೊಟ್ಟಿದ್ದಾನೆ. ಅವನು ಕೊಡದಿರುವ ವಸ್ತು
ಯಾವುದೆಂದರೆ ಸಮಯ. ಒಮ್ಮೆ ಕೊಟ್ಟ ಸಮಯವನ್ನು ದುರುಪಗ
ಮಾಡಿಕೊಂಡರೆ ಮತ್ತೆ ಅಂಥ ಅವಕಾಶ ಜೀವ ಕಾಲದಲ್ಲಿ ಸಿಗುವುದಿಲ್ಲ.

 

ದೇಹವೇ ಬೇರೆ, ಆತ್ಮವೇ ಬೇರೆ. ಹ್ಯಾಗಿದ್ದೀ ಕೇಳಿದರೆ ಆರೋಗ್ಯವಾಗಿದ್ದೇನೆ ಎನ್ನುವ
ಉತ್ತರ ಬರುತ್ತದೆ. ಆದರೆ ಜ್ವರ ಬಂದಾಗ ವಿಚಾರಿಸಿದರೆ ಮೈ ಚೆನ್ನಾಗಿಲ್ಲ ಎನ್ನುತ್ತಾನೆ.
ಉತ್ತರ ಕರ್ನಾಟಕದವರಾದರೆ ಪ್ರಕೃತಿ ಚಲೋ ಇಲ್ಲ ಅನ್ನುತ್ತಾರೆ. ಅಂದರೆ ದೇಹ
ಬೇರೆ, ನಾನು ಬೇರೆ.

ಒಬ್ಬನ ಕಾಲಿಗೆ ಕುರು ಆಗಿದೆ. ಕಾಲು ತುಂಡು ಮಾಡದೇ ಹೋದರೆ ನೀನು
ಬದುಕುವುದಿಲ್ಲ ಎಂದಿದ್ದಾರೆ ವೈದ್ಯರು. ಕಾಲು ಹೋದರೂ ಹೋಗಲಿ. ನಾನು
ಬದುಕಬೇಕು. ಅವನ ಹಠ. ಇಲ್ಲಿ ಕಾಲು ಬೇರೆ, ಅವನು ಬೇರೆ. ನಾನು ಪರಮಾತ್ಮನಿಗೆ
ಸಂಬಂಧ ಪಟ್ಟವ. ದೇಹಕ್ಕೆ ಸಂಬಂದಪಟ್ಟವ ಅಲ್ಲ ಎಂದು ಅರ್ಥ.

 

ಪರಮಾತ್ಮನನ್ನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅವನಿಗೂ, ಅವನ ಇಚ್ಛಾ
ಕ್ರಿಯೆಗಳಿಗೂ ಭೇದವಿಲ್ಲ. ಅದು ಅನುಭವವೇದ್ಯ.

 

ಯಾವಾಗ ಮಹಾ ಮೌನ ಆವರಿಸುತ್ತದೆ ಆಗ ವಾದ ಇಲ್ಲದಂಥ ಸಂವಾದ
ಉಂಟಾಗುತ್ತದೆ. ವಿವಾದ ಉಂಟಾಗುವುದಿಲ್ಲ.

 

ನಮ್ಮಲ್ಲಿ ಪ್ರದು ದೇವರ ಮೂರ್ತಿಯ ಹಿಂದೆ ಕೀರ್ತಿ ಇರುತ್ತದೆ. ಅದನ್ನು
ತಿಳಿದುಕೊಳ್ಳುವ ಮೂಲಕ ತತ್ವಜ್ಞಾನ ಸ್ಫೂರ್ತಿಯನ್ನು ಹೊಂದಿರಬೇಕು.

 

ಯಾವುದೇ ಸಂಸಾರದಲ್ಲಿ ಒಳಗೊಳಗೇ ಜಗಳ ಇದ್ದರೆ ಯಜಮಾನ ವಿಷ
ಕುಡಿಯದೇ ಇದ್ದಾನೆಯೇ? ಅವನೂ ವಿಷ ಕುಡಿದ. ಆದರೆ ನುಂಗಲಿಲ್ಲ. ಗಂಟಲಲ್ಲೇ
ಇಟ್ಟುಕೊಂಡಿದ್ದಾನೆ. ಮನಸ್ಸಿಗೆ ಹಚ್ಚಿಕೊಳ್ಳಬಾರದು. ಊರಿಗೆಲ್ಲ ಹೇಳಬಾರದು.
ಗಂಟಲಲ್ಲಿಟ್ಟುಕೊಂಡು ತಿರುಗಾಡಬೇಕು ಎಂದು ಅರ್ಥ.

 

ಹೆಂಡತಿಯಾದವಳು ತಾನು ಊಟ ಮಾಡುವುದಿಲ್ಲ ಎಂದು ಹೇಳುತ್ತಾಳೆ.
ಆದುದರಿಂದ ಅಡಿಗೆ ಕೂಡ ಮಾಡುವುದಿಲ್ಲ ಎನ್ನುತ್ತಾಳೆ. ಅದಾಗುವುದಿಲ್ಲ. ಅಡಿಗೆ
ಮಾಡಲೇಬೇಕು. ಅದು ಪ್ರಾಪ್ತ ಕರ್ಮ. ಊಟ ಮಾಡುವುದು, ಬಿಡುವುದು ಅದು
ವೈಯಕ್ತಿಕ. ಕಾಮ್ಯ ಕರ್ಮ ಪ್ರಾಪ್ತ ಕರ್ಮ ನಡೆಯುತ್ತಲೇ ಇರಬೇಕು. ಅದು ಸೇವೆ.
ಸೇವಾ ಕಾರ್ಯ ನಿಲ್ಲಬಾರದು.

 

ಅನುಬಂಧ 2

ನಾಲ್ಕು ದಶಕಗಳಿಗೂ ಹಿಂದಿನ ನೆನಪು

ಇದೇ ಕುಮಟಾದಲ್ಲಿ ನವರಾತ್ರಿ ಸಂದರ್ಭ. ಸುಮಾರು ಹದಿನೈದು ದಿನಗಳ ಕಾಲ ಕೀರ್ತನೆ-ಹರಿಕಥಾ ಕಾಲಕ್ಷೇಪ. ಇದು ಇಲ್ಲಿನ ಕೆಲವು ದೇವಸ್ಥಾನಗಳಲ್ಲಿ ಮಾಮೂಲು. ಆದರೆ ಕೀರ್ತನ ಕೇಸರಿ ಭದ್ರಗಿರಿ ಅಚ್ಯುತದಾಸರು ಯಾವ ದೇವಸ್ಥಾನದಲ್ಲಿ? ಅಲ್ಲಿಯೇ ಜನಜಂಗುಳಿ. ನಾವು ವಾಲಗಳ್ಳಿಯಿಂದ ಬರುತ್ತಿದ್ದುದು ಅವರನ್ನು ಕೇಳಲೆಂದೇ. ಸುಮಾರು ಮೂರೋ ನಾಲ್ಕೋ ವರ್ಷ ತನ್ಮಯತೆಯಿಂದ ಅನುಭವಿಸಿರಬೇಕು ನಾನು. ಏನೆಂಥ ಚಂದ, ಬಂಧ, ಗಂಧ ಅವರ ಕನ್ನಡಕ್ಕೆ. ಅದೆಷ್ಟು ಜ್ಞಾನ ಸಂಪತ್ತು ಅವರಲ್ಲಿ! ನನ್ನಲ್ಲಿ ಅವರ ಪಾಲು ಎಷ್ಟಿದ್ದೀತು?

ವಿ.ಗ. ನಾಯಕ, (ಉತ್ತರಕನ್ನಡ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಭಾಷಣ ’ದೀವಟಿಗೆ’ ಕೃತಿಯಲ್ಲಿ)

* * *

ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಪ್ರದೀಪಕುಮಾರ್ ಕಲ್ಕೂರ ಅವರಿಂದ 2009ರಲ್ಲಿ ಕನಕದಾಸರಿಗೆ ಸಂಬಂದಿಸಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಪ್ರಧಾನ ಉಪನ್ಯಾಸ ನೀಡಬೇಕು ಎಂಬುದಾಗಿ ಆಮಂತ್ರಣ. ಆ ಹೊತ್ತು ಸಂತ ಭದ್ರಗಿರಿ ಅಚ್ಯುತದಾಸರು ಮುಖ್ಯ ಅತಿಥಿಗಳು. ಆಮಂತ್ರಣ ಪತ್ರಿಕೆ ನೋಡಿದಾಗ ಹೃನ್ಮನಗಳಲ್ಲಿ ಪುಳಕ. ನನ್ನ ಬಾಲ್ಯದಲ್ಲಿ ತಮ್ಮ ಕೀರ್ತನ ಕೌಶಲದಿಂದ ನನ್ನೆದೆಯೊಳಗೆ ಸುಭದ್ರರಾಗಿದ್ದ ಭದ್ರಗಿರಿ ಅಚ್ಯುತದಾಸರು ನನ್ನ ಬರೆವಣಿಗೆಗೂ ಸ್ಫೂರ್ತಿಯೇ ಆಗಿದ್ದ ಹಿರಿಯರು! ಅವರೊಟ್ಟಿಗೆ ಕೂತು ಮಾತನಾಡುವ ಗಳಿಗೆ ಅದೊಂದು ಯೋಗ, ಭಾಗ್ಯ! ಇಂಥದೊಂದು ಅವಕಾಶ ವಿಶೇಷ ಧನ್ಯತೆ, ಸಾರ್ಥಕತೆ. ವೇದಿಕೆಯಲ್ಲಿ ಜೊತೆ ಕೂತಾಗ ಇದನ್ನೇ ಅವರಲ್ಲೂ. ಅವರ ಪಕ್ವತೆಗನುಗುಣವಾಗಿ ಪ್ರತಿಕ್ರಿಯೆ – ಅವರದೇ ನಗು, ಮುಗುಳ್ನಗು! ಈಗೆಲ್ಲಿದ್ದೀರಿ? ಏನು? ಅವಸರವರಸದಲ್ಲೇ ಪ್ರಶ್ನೋತ್ತರ. ಇನ್ನೊಂದು ಕಾರ್ಯಕ್ರಮಕ್ಕಾಗಿ ತನ್ನ ನಿರ್ವಹಣೆ ಮುಗಿದೊಡನೆ ಅತ್ತ ಸಂಚಾರ! ನನಗೆ ಎಲ್ಲವೂ ಶೂನ್ಯವೇ ಆದಂತೆ ಗೋಚರ.

ವಿ.ಗ. ನಾಯಕ

ಸಪ್ಟೆಂಬರ್-2010