ದಾಸಸಾಹಿತ್ಯ ಭಾಷೆ’ ಎಂಬ ಹೆಸರಿನ ವಿಶಿಷ್ಟ ಕೃತಿಯನ್ನು ವಿದ್ವತ್ ಲೋಕಕ್ಕೆ ಸಾದರಪಡಿಸುತ್ತಿದ್ದೇನೆ. ದಾಸರ ಕೀರ್ತನೆಗಳ ಸಾಧನೆ ಅವರ ಭಾಷೆಯ ಬಳಕೆಯಲ್ಲಿದೆ. ಪಾದದ ನಿಯತತೆ, ಪ್ರಾಸದ ಕಟ್ಟು, ಸಂಸ್ಕೃತ ಸಮಾಸಗಳ ಹೆಣಿಗೆ, ಪೆಡಸು ಶೈಲಿ ಈ ಎಲ್ಲ ಬಂಧಗಳಿಂದ ಪಾರಾಗಲು ಅವರು ದೇಸಿ ಮಾದರಿಯ ಕೀರ್ತನ ರೂಪವನ್ನು ಬಳಸಿಕೊಂಡರು. ಪದ್ಯದ ಅಂತಃಸ್ವರೂಪವನ್ನು ಕಾಯ್ದುಕೊಂಡು ಗದ್ಯದ ಲಯವನ್ನು ಮೆರೆಯುವ ಕೀರ್ತನೆಗಳು ಅವರ ಅಭಿವ್ಯಕ್ತಿಗೆ ಸೂಕ್ತ ಮಾಧ್ಯಮವಾದವು. ಸವೆದ ದಾರಿಯಾಗಿದ್ದ ಸಿದ್ಧ ಶೈಲಿಯನ್ನು ಬಿಟ್ಟು ಶಾಸ್ತ್ರ ಸಂಕಲೆಯಿಂದ ಕಳಚಿಕೊಂಡ ಮುಕ್ತಗೇಯ ರಚನೆಗಳನ್ನು ಸೃಷ್ಟಿಸಿಕೊಂಡರು. ಅದಕ್ಕೆ ಆಡುಮಾತಿ ಧಾಟಿ ಅವರಿಗೆ ಪ್ರಾಪ್ತವಾಯಿತು. ಅದುವೇ ಭಾಷಾ ಕ್ಷೇತ್ರದಲ್ಲಿ ದಾಸರು ಮಾಡಿವ ವೈಚಾರಿಕ ಕ್ರಾಂತಿಯಾಗಿದೆ. ಈ ಕೃತಿಯಲ್ಲಿ ದಾಸಸಾಹಿತ್ಯದ ಭಾಷಾ ಬಳಕೆಯ ಸ್ವರೂಪವನ್ನು ಸಾಮಾಜಿಕ ಚೌಕಟ್ಟಿನಲ್ಲಿ ಇಟ್ಟುನೋಡಲಾಗಿದೆ.

ಈ ಕೃತಿ ಪ್ರಕಟವಾಗುತ್ತಿರುವ ವೇಳೆಯಲ್ಲಿ ಅದಕ್ಕೆ ಸ್ಫೂರ್ತಿ, ಪ್ರೇರಣೆಯಾಗಿರುವ ಶ್ರೇಷ್ಠ ವಿದ್ವಾಂಸ ಡಾ. ಎಂ. ಚಿದಾನಂದಮೂರ್ತಿ ಅವರನ್ನು ಸ್ಮರಿಸುವುದು ನನಗೆ ಪ್ರೀತಿಯೂ ಗೌರವ ವಿಷಯವೂ ಆಗಿದೆ. ಅವರ ಹಲವಾರು ಕೃತಿಗಳಲ್ಲಿ ’ಉಗಾ ಭೋಗಗಳು ಮತ್ತು ವಚನಗಳು’ ಎಂಬ ಸಂಪ್ರಬಂಧವನ್ನು ಹಲವರು ಗಮನಿಸಿರಲಾರರು ಆವರ ಆ ಸಂಪ್ರಬಂಧದ ಮೂಲಕ ನಾನು ’ದಾಸಸಾಹಿತ್ಯ ದೀಕ್ಷೆ’ಯನ್ನು ಪಡೆದುಕೊಂಡಿದ್ದೇನೆ. ಈ ಕೃತಿ ರಚನೆಯಲ್ಲಿ ಸಮಸ್ಯೆಗಳು ಬಂದಾಗ ಅವರ ಬರೆಹದ ಆಶ್ರಯವನ್ನು ಪಡೆದು ಪರಿಹರಿಸಿಕೊಂಡಿದ್ದೇನೆ. ನನ್ನ ಅಧ್ಯಯನಕ್ಕೆ ಬಹುದೊಡ್ಡ ಆಸ್ತಿಯಾಗಿರುವ ಸಂಶೋಧನೆಯ ಆ ಕುಲಗುರುವಿನ ನೆನಪಾದಾಗಲೆಲ್ಲ ಕೃತಜ್ಞತೆಯಿಂದ ಕರಗಿಹೋಗುತ್ತೇನೆ. ಅದರಂತೆ ಕೃತಿ ರಚನೆ ಸಂದರ್ಭದಲ್ಲಿ ಸಹಾಯ ಮಾಡಿದ ಇನ್ನೊರ್ವ ಶ್ರೇಷ್ಠ ವಿದ್ವಾಂಸ ಡಾ. ಎಂ.ಎಂ. ಕಲಬುರ್ಗಿ ಅವರನ್ನು ಸಂತೋಷದಿಂದ ಸ್ವರಿಸುತ್ತೇನೆ.

ನನ್ನ ಬರಹಗಳ ಪ್ರಥಮ ವಿಮರ್ಶಕರು ಗೆಳೆಯ ಮಾಧವ ಪೆರಾಜೆ ಅವರು, ಕನ್ನಡ ವಿಶ್ವವಿದ್ಯಾಲಯ ನನಗೆ ಮಾಡಿದ ಲಾಭಗಳಲ್ಲಿ ಅವರಂತಹ ನಿಷ್ಠಾವಂತ ಸ್ನೇಹಿತರ ಸ್ನೇಹವೂ ಒಂದು.

ಈ ಶಾಸ್ತ್ರ ಕೃತಿ ಸಿದ್ಧವಾಗುತ್ತಿರುವಾಗ ಅವರ ಪ್ರಗತಿಯಲ್ಲಿ ಆಸಕ್ತಿಯಿಟ್ಟು ಅದು ಇಷ್ಟು ಬೇಗ ಸಿದ್ಧಗೊಳ್ಳಲು ಪ್ರೋತ್ಸಾಹಕರಾದ ಕುಲಪತಿಗಳಾದ ಡಾ. ಎ. ಮುರಿಗೆಪ್ಪ ಅವರಿಗೆ, ಕುಲಸಚಿವರಾದ ಡಾ.ಮಂಜುನಾಥ ಬೇವಿನಕಟ್ಟೆ ಅವರಿಗೆ ನನ್ನ ಅನಂತ ನಮನಗಳೂ ಗ್ರಂಥ ಪ್ರಕಟನೆಯಲ್ಲಿ ತುಂಬ ಮುತುವರ್ಜಿ ತೋರಿದ ಪುರಂದರದಾಸ ಅಧ್ಯಯನ ಪೀಠದ ಸಂಚಾಲಕರಾದ ಡಾ. ಅಮರೇಶ ನುಗಡೋಣಿ ಅವರಿಗೆ, ಅಧ್ಯನಾಂಗದ ನಿರ್ದೇಶಕರಾದ ಡಾ.ವೀರೇಶ ಬಡಿಗೇರ ಅವರಿಗೆ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟೆ ಅವರಿಗೆ ನನ್ನ ಅನಂತ ವಂದನೆಗಳು. ಅದರಂತೆ ಪುಟ್ಟವಿನ್ಯಾಸದಲ್ಲಿ ನೆರವು ನೀಡಿದ ಶ್ರೀ ಕೆ.ಕೆ. ಮಕಾಳಿ ಅವರಿಗೆ ಅನಂತ ವಂದನೆಗಳು. ಅಕ್ಷರ ಸಂಯೋಜನೆಯನ್ನು ಪೂರೈಸಿದ ಕಮಲಾಪುರದ ಎಸ್.ವಿ.ಗ್ರಾಫಿಕ್ಸ್ ನ ಶ್ರೀ ಜೆ. ಶಿವಕುವಾರ ಅವರ ಸಹಕಾರ ನೆನೆದಷ್ಟು ಸಾಲದು.

ಎಸ್.ಎಸ್.ಅಂಗಡಿ