ಬ್ದ ಚಿತ್ರ ಇತ್ತೀಚೆಗೆ ಹೆಚ್ಚು ವ್ಯಾಪಕವಾಗಿ ಬಳಕೆಗೆ ಬಂದ ಪದ. ಇಂಗ್ಲೀಷಿನ ‘Image’ ಗೆ ಸಂವಾದಿಯಾಗಿ ಈ ಪದ ಬಳಕೆಯಲ್ಲಿ “ಕನ್ನಡಕ್ಕೆ ಆಂಗ್ಲ ಸಾಹಿತ್ಯದ ಪ್ರಭಾವದಿಂದ ಪ್ರತಿಮಾ ವಿಧಾನವು ಬಳಕೆಗೆ ಬಂತು” ಎಂಬ ಅಭಿಪ್ರಾಯವಿದ್ದರೂ ಈ ಮಾತು ಒಪ್ಪತಕ್ಕದ್ದಲ್ಲ. ಯಾಕೆಂದರೆ ನಮ್ಮ ಪ್ರಾಚೀನ ಕಾವ್ಯಗಳಲ್ಲಿ ವೇದೋಪನಿಷತ್ತುಗಳಲ್ಲಿ ಸಾಕಷ್ಟು ಶಬ್ದಚಿತ್ರಗಳನ್ನು ಕಾಣಬಹುದು. ಉದಾಹರಣೆಗೆ ಅರ್ಥವೇದದ ಉಪವೇದವಾದ ಆಯುರ್ವೇದ ವೈದ್ಯಕೀಯ ಶಾಸ್ತ್ರದ ಆಕರ ಗ್ರಂಥವಾದ ಶ್ರುತ ಸಂಹಿತೆಯ ಈ ಶ್ಲೋಕವನ್ನು ಗಮನಿಸಬಹುದು.

ಯಥಾ ಖರಶ್ಚಂದನ ಭಾರವಾಹೀ ಭಾರಸ್ಯ ವೇತ್ತಾ ನ ತು ಚಂದನಸ್ಯ!
ಏವಂ ಹಿ ಶಾಸ್ತ್ರಾಣಿ ಬಹೂನ್ಯ ಧೀತ್ಯ ಚಾರ್ಥೇಷು ಮೂಢಾಃ
ಖರವದ್ವಂದಂತಿ !!
(ಸುಶ್ರುತ ಸಂಹಿತೆ, ನಾಲ್ಕನೇ ಅಧ್ಯಾಯ)

ಶ್ರೀಗಂಧದ ಹೊರೆಯನ್ನು ಹೊತ್ತಿರುವ ಕತ್ತೆಗೆ ಶ್ರೀಗಂಧವು ಕೇವಲ ಭಾರವಾದ ವಸ್ತುವೆಂಬುದು ಮಾತ್ರ ಗೊತ್ತೇ ಹೊರತು ಪರಿಮಳವುಳ್ಳದೆಂಬ ಜ್ಞಾನವೇ ಇರುವುದಿಲ್ಲ. ಹೀಗೆಯೇ ಕೆಲವರು ಅನೇಕ ಶಾಸ್ತ್ರಗಳನ್ನು ಬಹಳ ಶ್ರಮದಿಂದ ಅಭ್ಯಾಸ ಮಾಡಿ ಅರ್ಥ ಜ್ಞಾನವಿಲ್ಲದೆ ಕಷ್ಟಪಡುತ್ತಾರೆ. ಇದಕ್ಕೆ ಪೂರಕವಾಗಿ ಮಂಡಕೋಪನಿಷತ್ತಿನ ಒಂದು ಸೂಕ್ತವನ್ನು ಉದಾಹರಣೆಯಾಗಿ ಗಮನಿಸಬಹುದು. ಡಾ. ಜಿ.ಎಸ್. ಶಿವರುದ್ರಪ್ಪನವರು ಆ ಸೂಕ್ತವನ್ನು ಹೀಗೆ ಅನುವಾದಿಸಿದ್ದಾರೆ.

ಸುಂದರ ಗರಿಗಳ ಹಕ್ಕಿಗಳೆರಡಿವೆ
ಒಂದೇ ಮರದಲ್ಲಿ
ಒಂದು ತಿನ್ನುವುದು ಹಣ್ಣುಗಳ,
ಮತ್ತೊಂದಿದೆ ತಿನ್ನದೆ ಮೌನದಲಿ

ಇದೊಂದು ಜೀವನವನ್ನು ಕುರಿತ ಚಿತ್ರ. ಮೇಲ್ನೋಟಕ್ಕೆ ಹಕ್ಕಿಗಳ ಚಿತ್ರ ಕಂಡರೂ ಇಲ್ಲಿರುವ ಮರ ಸಂಸಾರ ವೃಕ್ಷ. ಜೀವಾತ್ಮ ಮತ್ತು ಪರಮಾತ್ಮ ಇಲ್ಲಿರುವ ಹಕ್ಕಿಗಳು ಹಣ್ಣನ್ನು ತಿನ್ನುವ ಹಕ್ಕಿಯು ಜೀವಾತ್ಮವಾದರೆ, ಹಣ್ಣನ್ನು ತಿನ್ನದೆ ಸಾಕ್ಷೀಭೂತವಾಗಿರುವುದು ಪರಮಾತ್ಮ ಎಂದು ವ್ಯಾಖ್ಯಾನಿಸಲಾಗಿದೆ. ಈ ಮೇಲಿನ ಉದಾಹರಣೆಯನ್ನು ನಾವು ‘ಶಬ್ದಚಿತ್ರ’ವಾಗಿ ಗುರುತಿಸಬಹುದು. ವೇದೋಪನಿಷತ್ತುಗಳಲ್ಲಿ ಇಂಥ ಎಷ್ಟೋ ಉಕ್ತಿಗಳಿವೆ. ವಾಸ್ತವದ ನಿಸರ್ಗದ ವಿವಿಧ ವ್ಯಾಪಾರಗಳಿಗೆ ಹೀಗೆ ಪ್ರತೀಕಗಳನ್ನು ಕಲ್ಪಿಸಿ ಹಾಡಿದ ಎಷ್ಟೋ ಗೀತಗಳಿವೆ. ಇಂದ್ರನು ತನ್ನ ರಥದಲ್ಲಿ ಕುಳಿತು ವಜ್ರಾಯುಧದಿಂದ ಬೆಟ್ಟದ ರೆಕ್ಕೆಗಳನ್ನು ಕತ್ತರಿಸುತ್ತಾನೆ ಎಂಬ ವರ್ಣನೆ, ವಾಸ್ತವವಾಗಿ ಮಳೆಗಾಲದ ಆಕಾಶದಲ್ಲಿ ಬೆಟ್ಟದಂತೆ ತೇಲುವ ಮೋಡಗಳನ್ನೂ, ಗುಡುಗು ಸಿಡಲುಗಳ ಅಬ್ಬರದಿಂದ ಆ ಮೋಡಗಳೇ ಮಳೆಯಾಗಿ ಕೆಳಗೆ ಸುರಿಯುವ ಕ್ರಿಯೆಯನ್ನೂ ಹೇಳುವ ಒಂದು ಉಕ್ತಿ ವಿಧಾನವಾಗಿದೆ. ನೀರಿನ ಭಾರದಿಂದ ಜೋಲುತ್ತಾ ಗಗನದಲ್ಲಿ ತೇಲುವ ಮೇಘಗಳನ್ನು, ಕೊಡಗೆಚ್ಚಲ ಭಾರದಿಂದ, ಕೊಟ್ಟಿಗೆಗೆ ಧಾವಿಸುವ ಇಂದ್ರನ ಗೋವುಗಳೆಂದು ವರ್ಣಿಸಲಾಗಿದೆ. ನಮ್ಮ ಭಾರತೀಯ ಕಾವ್ಯ ಪರಂಪರೆ ಇಂಥ ಅನೇಕ ಪ್ರತೀಕ ಹಾಗೂ ಪ್ರತಿಮೆಗಳನ್ನು ಸಮೃದ್ಧವಾಗಿ ಸೃಷ್ಟಿಸಿದೆ. ಆದ್ದರಿಂದ ‘ಶಬ್ದಚಿತ್ರ’ ಆಂಗ್ಲ ಸಾಹಿತ್ಯದಿಂದ ಬಂತೆನ್ನುವುದು ಅಷ್ಟು ಸಮಂಜಸವಾಗಲಾರದು. ‘ಶಬ್ದಚಿತ್ರ’ಗಳ ಮೂಲಗಳನ್ನು ನಮ್ಮ ವೇದೋಪನಿಷತ್ತುಗಳಲ್ಲಿ ನಿಚ್ಚಳವಾಗಿ ಗುರುತಿಸಬಹುದು. ಆದರೆ ‘ಶಬ್ದಚಿತ್ರ’ ಎಂಬ ಪದ ಆಧುನಿಕ ಅರ್ಥದಲ್ಲಿ ಬಳಕೆಯಲ್ಲಿದ್ದಿರಲಿಲ್ಲ.

‘ಶಬ್ದಚಿತ್ರ’ ಎಂದರೆ ಒಂದು ಪ್ರತಿಮೆ ಪ್ರಾಚೀನ ಜನಪದ ಸಾಹಿತ್ಯದಲ್ಲಿ ಒಗಟುಗಳು ಅಥವಾ ಜಾಣ್ಮೆಯ ಉಕ್ತಿಗಳು ಗುರುತಿಸಬಹುದು. ನಮ್ಮ ಪ್ರಾಚೀನ ‘ಪ್ರತಿಮೆ’ಯು ಕವಿಯ ಒಂದು ಚಮತ್ಕಾರ ಎಂದರೆ ತಪ್ಪಲ್ಲ. ಆದರೆ ಚಮತ್ಕಾರ, ಉಕ್ತಿವೈಚಿತ್ರ್ಯಗಳೆಲ್ಲ ಪ್ರತಿಮೆಗಳಾಗಲಾರವು. ಉದಾಹರಣೆಗೆ ಕುಮಾರವ್ಯಾಸನ ಗದುಗಿನ ಭಾರತದ ಈ ಪದ್ಯವನ್ನು ಗಮನಿಸಬಹುದು.

ವೇದಪುರುಷನ ಸುತನ ಸುತನ
ಸಹೋದರನ ಹೆಮ್ಮಗನ ಮಗನ
ತಳೋದರಿಯ ಮಾತುಳನ ಮಾವನ ಅತುಳ ಭುಜಬಲದಿ
ಕಾದಿಗೆಲಿದನ ಅಣ್ಣನ ಅವ್ವೆಯ
ನಾದಿನಿಯ ಜಠರದಲಿ ಎನಿಸಿದ
ನಾದಿ ಮೂರುತಿ ಸಲಹೋ ಗದುಗಿನ ವೀರನಾರಾಯಣ

ಈ ಪದ್ಯದಲ್ಲಿ ಪದಗಳನ್ನು ಸರಿಯಾಗಿ ಬಿಡಿಸಿ ಅರ್ಥವನ್ನು ಹೇಳಿದರೆ ವೀರನಾರಾಯಣನ ಪರವಾದ ವಿವರಗಳು ವರ್ಣನಾತ್ಮಕವಾಗಿದ್ದು, ಇಲ್ಲಿರುವುದು ಕೇವಲ ಚಮತ್ಕಾರವಾಗಿದೆ. ಇಲ್ಲಿ ರೂಪಕಾತ್ಮಕ ಅಭಿವ್ಯಕ್ತಿ ಪ್ರತೀಕಗಳು ಇರುವುದಿಲ್ಲ. ಆದ್ದರಿಂದ ಇದು ಪ್ರತಿಮೆಯಾಗಲಾರದು. ವಚನಗಳಲ್ಲಿನ ಪ್ರತೀಕಾತ್ಮಕ ಅಭಿವ್ಯಕ್ತಿಗಳನ್ನು ಡಾ.ಜಿ.ಎಸ್. ಶಿವರುದ್ರಪ್ಪನವರು ‘ಬೆಡಗು’ ಎಂಬುದಾಗಿ ಗುರುತಿಸಿದ್ದಾರೆ. “ಬೆಡಗು ಎಂದರೆ ಸೌಂದರ್ಯ ಎಂದೇ ಅರ್ಥ. ಬೆಡಗು ಎಂದರೆ, ವಿಶೇಷವಾದದ್ದು, ವೈಖರಿಯಿಂದ ಕೂಡಿದ್ದು ಎಂಬ ಅರ್ಥಗಳ ಜತೆಗೆ ಬೆಡಗು ಎಂಬ ಪದವೂ ಎಂದೂ ಅರ್ಥವಿದೆ. ಬೆಡಗು ಎಂಬ ಮಾತಿನ ಜೊತೆಗೆ ಬೆಡಗು ಎಂಬ ಪದವೂ ಇದೆ. ಹಾಗೆಂದರೆ ಚಕಿತಗೊಳಿಸು, ಹೆದರಿಸು ಎಂದು ಅರ್ಥವಾಗುತ್ತದೆ. ಒಟ್ಟಿನಲ್ಲಿ ಈ ಬೆಡಗಿನ ವಚನಗಳಲ್ಲಿ ಓದಿದೊಡನೆ ಆಶ್ಚರ್ಯಗೊಳಿಸುವ ಮತ್ತು ಅದರೆ ಅಸಂಬದ್ಧತೆಯಿಂದಾಗಿ ಸ್ವಲ್ಪಮಟ್ಟಿಗೆ ಹೆದರಿಸುವ ಅಂಶವೂ ಇದೆ.

ಈ ಬಗೆಯ ಬೆಡಗಿನ ರಚನೆಗಳನ್ನು ಬರೆದವರು ಕೇವಲ ವಚನಕಾರರಲ್ಲಿ ಕೆಲವರು ಮಾತ್ರ ಅಲ್ಲ; ವಚನಕಾರ ಅನಂತರದ ಕೀರ್ತನೆ ಪರಂಪರೆಯ ಹರಿದಾಸರಲ್ಲಿಯೂ ಬೆಡಗಿನ ಅಂಶ ಸಾಕಷ್ಟಿದೆ. ಪ್ರತಿಮೆಯು ಶಬ್ದಗಳ ಸಹಾಯದಿಂದ ಕಟ್ಟಿದ ಒಂದು ಚಿತ್ರ. ರೂಪಕ, ಉಪಮೆ ಮತ್ತು ಗುಣನಾಮ ಇವು ಪ್ರತಿಮೆಗಳನ್ನು ಸೃಷ್ಟಿಸಬಲ್ಲವು. ಆದರೆ ಇವೇ ಪ್ರತಿಮೆಗಳಲ್ಲಿ ನಮ್ಮ ಕಲ್ಪನೆಗೆ ಚಾಲನೆ ಕೊಡುವಂಥ ಧ್ವನಿಪೂರ್ಣವಾಗಿರುವ ಯಾವುದೇ ಪದಗುಚ್ಚ ಅಥವಾ ವಾಕ್ಯಸರಣಿಯು ಪ್ರತಿಮೆಯಾಗಬಹುದು. ಆದ್ದರಿಂದ ಪ್ರತಿಯೊಂದು ಕಾವ್ಯ ಪ್ರತಿಮೆಯೂ ಒಂದು ರೀತಿಯಲ್ಲಿ ರೂಪಕಾತ್ಮಕವಾಗಿರುತ್ತದೆ. ಒಬ್ಬ ಕವಿಯ ಯೋಗ್ಯತೆಯನ್ನು ಅಳೆಯಬೇಕಾದರೆ, ನಾವು ಅವರ ರೂಪಕಗಳ ಶಕ್ತಿ ಮತ್ತು ಅಂತಃ ಸತ್ವ ಇವುಗಳನ್ನು ಪರಿಶೀಲಿಸಬೇಕು. ರೂಪಕಗಳ ಮೇಲಿರುವ ಕವಿಯ ಪ್ರಭುತ್ವವೇ ಅವನ ಪ್ರತಿಭೆಯ ಸಂಕೇತ.

ಹೊಸದರ ಹುಡುಕಾಟ ಮನುಷ್ಯನ ಸಹಜ ಪ್ರವೃತ್ತಿಗಳಲ್ಲಿ ಒಂದು. ಈ ಹುಡುಕಾಟದಲ್ಲಿ ಕಾವ್ಯವೂ ಹೊರತಾಗಿಲ್ಲ. ಮಾನವನ ಅನೇಕ ಅವಿಷ್ಕಾರಗಳಂತೆ ಪ್ರತಿಮಾನಿರ್ಮಿತಿಯೂ ಸಹ ಕವಿಪ್ರತಿಭೆಯ ಒಂದು ಅವಿಷ್ಕಾರವೆನಿಸಿದೆ. ಪ್ರತಿಮೆ ಎಂಬುದು ಮೂಲತಃ ಕವಿ ಮನಸ್ಸಿನ ಸೃಜನೆ, ಒಂದು ಮತ್ತೊಂದಕ್ಕೆ ದೂರದಲ್ಲಿರುವ ಮತ್ತು ಯಾವುದೇ ಸಂಬಂಧವಿದೆಯೆಂಬಂತೆ ತೋರದ ಎರಡು ಅಥವಾ ಹೆಚ್ಚಿನ ವಸ್ತು ಸತ್ಯಗಳ ಹೋಲಿಕೆಯಿಂದ, ಸಂಭವಿಸುವುದಲ್ಲ ಅದು; ಅದರ ಬದಲು ದೂರ ದೂರದ ಆ ಎರಡು ವಸ್ತುಗಳಿಗಿರುವ ಯಾವುದೆ ಸಾದೃಶ್ಯವನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ, ಅವೆರಡಕ್ಕಿರುವ ಒಳಸಂಬಂಧವನ್ನು ಕವಿಯ ಪ್ರಜ್ಞೆ ಮಾತ್ರ ಗ್ರಹಿಸಿ, ಅವುಗಳನ್ನು ಸಂಘಟಿಸಿದ್ದರಿಂದ ಅದುವರೆಗೂ ಮನೋಗೋಚರವಾಗಿದ್ದ ಹೊಸತೊಂದು ಹುಟ್ಟಿಕೊಳ್ಳುತ್ತದೆ. ಇದೇ ಪ್ರತಿಮೆ. ಹೀಗೆ ಗೃಹೀತವಾಗುವ ಪ್ರತಿಮೆ, ಗೊತ್ತಿರುವ ಎರಡು ವಸ್ತುಗಳ ಸಾದೃಶ್ಯವನ್ನು ಮೂಲಮಾನವನ್ನಾಗಿ ಉಳ್ಳರೂಪಕದಿಂದ ಭಿನ್ನವಾದುದು. ಪ್ರತಿಮೆ ಒಂದರ ಮೂಲಕ ಮತ್ತೊಂದನ್ನು ತೆರೆಯುವಂಥದ್ದು ಮತ್ತು ಅವೆರಡರ ಸಾಮ್ಯ, ಅಜ್ಞಾತವಾದುದನ್ನು ಜ್ಞಾತವನ್ನಾಗಿ ಮಾಡುತ್ತದೆ. ಮೇಲ್ನೋಟಕ್ಕೆ ಯಾವುದೇ ಸಾದೃಶ್ಯವಿಲ್ಲದಿದ್ದರೂ ಕಾವ್ಯದ ಅಂತರಾಳದ ಸಾದೃಶ್ಯವಿದ್ದರೆ ಅಲ್ಲಿ ಭಾವ ಸಂಚಾರವಾಗಿ ಹೊಸ ಭಾವ ಜಾಗೃತವಾಗುತ್ತದೆ. ದಾಸರ ಕೀರ್ತನೆಗಳಲ್ಲಿ ಎರಡು ವಸ್ತುಗಳ ಆಂತರಿಕ ಸಾಮ್ಯತೆಯನ್ನು ಗುರುತಿಸಬಹುದು.

ಅನುಭವದಡುಗೆಯ ಮಾಡಿ ಆದ
ಕ್ಕನುಭವಿಗಳು ಬಂದು ನೀವೆಲ್ಲ ಸೇರಿ

ಇಲ್ಲಿ ‘ಅನುಭವ’ ಪದದೊಂದಿಗೆ ಅನುಭವ ಪದಕ್ಕೆ ಸಂಬಂಧಿಸಿದ ಎಲ್ಲಾ ಬಗೆಯ ಸಂಕೀರ್ಣ ಭಾವನೆಗಳನ್ನು ಅಡುಗೆ’ ಪ್ರತಿಮೆಯಲ್ಲಿ ಕಾಣಬಹುದು. ‘ಅನುಭವದಡುಗೆ’ ಎಂಬ ಪದವು ಇಲ್ಲಿ ವಿಶೇಷ ಅರ್ಥವಂತಿಕೆಯನ್ನು ಪಡೆಯುತ್ತದೆ. ಕವಿಪ್ರಜ್ಞೆಯಲ್ಲಿ ಗೋಚರವಾಗುವ ಸತ್ಯಾಂಶ ಇಲ್ಲಿ ಓದುಗರಿಗೆ ನಿಜವೆನಿಸುವಂತೆ ಭಾವತೀವ್ರತೆಯನ್ನು ಪಡೆದಿದೆ. ಇಲ್ಲಿ ‘ಅಡುಗೆ’ ವಾಚ್ಯಾರ್ಥವನ್ನು ಬಿಟ್ಟು ಸೂಚಿತವಾಗುವ ವ್ಯಂಗ್ಯಾರ್ಥವೇ ಪ್ರಧಾನವಾಗಿರುವ ಉಕ್ತಿವಿಶೇಷ. ವಾಚ್ಯವಾದ ಅರ್ಥವನ್ನು ಬಿಟ್ಟು ಹೀಗೆ ಸೂಚಿತವಾಗುವ ಅರ್ಥಗಳಿಗೆ ವ್ಯಂಗ್ಯಾರ್ಥವೆಂದು ಅಲಂಕಾರಿಕರು ಕರೆದಿದ್ದಾರೆ. ವ್ಯಂಗ್ಯಾರ್ಥವೇ ಪ್ರಧಾನವಾಗಿರುವ ಉಕ್ತಿ ವಿಶೇಷವನ್ನು ಧ್ವನೋಕ್ತಿ ಎಂದು ಕರೆಯಲಾಗಿದೆ. ಧ್ವನಿ ಶಕ್ತಿ ಪಡೆದ ಒಂದು ಪದ, ಒಂದು ರೂಪಕ, ಒಂದು ವಾಕ್ಯ ಸಮುದಾಯ ಅಥವಾ ಇಡೀ ಕೃತಿಯ ಕೆಲವೊಮ್ಮೆ ಪ್ರತಿಮೆಯಾಗಬಹುದು. ಹೀಗೆ ಪ್ರತಿಮೆಯು ಕೃತಿಯ ಎಲ್ಲಾ ಅಂಶಗಳಿಗೂ ಅನ್ವಯವಾಗಬಹುದು.

ಸಾಹಿತ್ಯದಲ್ಲಿ ಪ್ರತೀಕಗಳು ಪ್ರತಿಮಾ ನಿರ್ಮಿತಿಯ ವಿಧಾನಕ್ಕೆ ಪ್ರೇರಕವಾದವು. ಸಂಕೇತಗಳು ಒಂದು ವಸ್ತುವಿನ ಅಸ್ತಿತ್ವದ ಸೂಚನೆಯನ್ನು ಮಾತ್ರ ಕೊಟ್ಟರೆ, ಪ್ರತೀಕವು ಆ ಘಟನೆ ಅಥವಾ ವಸ್ತುವಿನ ಸ್ವರೂಪವನ್ನು ಸಾಕ್ಷತ್ಕರಿಸುತ್ತದೆ. ಒಂದು ಪದವು ಧ್ವನಿಪೂರ್ಣವಾದಾಗ ಉಪಮೆ ಅಥವಾ ರೂಪಕವೂ ಪ್ರತಿಮೆಯಾಗಬಹುದು. ಉಪಮೆಯಲ್ಲಿ ಸಾದೃಶ್ಯ ಸಂಬಂಧಪಟ್ಟರೆ, ರೂಪಕದಲ್ಲಿ ಉಪಮಾನ ಉಪಮೇಯಗಳು ಅಭೇದವಾಗಿದ್ದು ಸಂಕ್ಷಿಪ್ತ ಗುಣ ಪ್ರಧಾನವಾಗಿರುತ್ತದೆ. ಸಾಂಕೇತಿಕತೆಯನ್ನು ಕಂಡುಕೊಳ್ಳದ ಭಾವನೆಗಳಲ್ಲಿ ಸಂಕ್ಷಿಪ್ತತೆ ಸಾಧನೆಯಾಗದೆ ಪರಿಣಾಮ ಅಸ್ತವ್ಯಸ್ತವಾಗುತ್ತದೆ.

‘ಪ್ರತಿಮೆ’ಯು ಕೇವಲ ಪ್ರ;ತಿಮೆಗಾಗಿ ಅಲ್ಲ. ಅದು ಕಾವ್ಯದಲ್ಲಿ ಕವಿಯ ಅರಿವಿಗೆ ಬಾರದ ರೀತಿಯಲ್ಲಿ ನಿರ್ಮಾಣಗೊಳ್ಳುವುದರಮೂಲಕ ಕವಿಯ ಅಂತರಂಗದ ಭಾವದ ಅಭಿವ್ಯಕ್ತಿಯ ಮಾಧ್ಯಮವಾಗುತ್ತದೆ. ಪುರಂದರದಾಸರಿಗೆ ಅಂತರಂಗದ ಅಭಿವ್ಯಕ್ತಿಯ ಮಾಧ್ಯಮವಾಗಿ ಕೀರ್ತನೆಗಳು ನೆರವಾಗಿವೆ. ಈ ಕೀರ್ತನೆಗಳಲ್ಲಿ ಅವು ಹೊರಹೊಮ್ಮಲು ಪ್ರತಿಮೆಗಳು ನೆರವಾಗಿವೆ.

ಕೀರ್ತನೆಗಳ ಪ್ರಧಾನ ಭಕ್ತಿಯ ಪ್ರತಿಪಾದನೆ ಆಗಿದ್ದಾರೂ ಕೇವಲ ಒಣನೀತಿಯನ್ನು ಹೇಳುವ ಮಾರ್ಗ ಕೀರ್ತನಕಾರರದಲ್ಲ. ಅವರು ಕೀರ್ತನೆಗಳ ಮೂಲಕ ಧಾರ್ಮಿಕ ವಿಚಾರಗಳನ್ನು ಪ್ರತಿಪಾದಿಸುವುದರೊಂದಿಗೆ ಸಮಾಜದ ಓರೆಕೋರೆಗಳನ್ನು ವಿಶ್ಲೇಷಿಸುತ್ತಿದ್ದರು. ಅವುಗಳನ್ನು ‘ಆಚಾರವಿಲ್ಲದ ನಾಲಗೆ ನಿನ್ನ ನೀಚ ಬುದ್ದಿಯ ಬಿಡು ನಾಲಗೆ’,

’ಕಲ್ಲಾಗಿ ಇರಬೇಕು ಕಠಿಣ ಭವತೊರೆಯೊಳಗೆ ‘, ‘ಈಸಬೇಕು ಇದ್ದು ಜೈಸಬೇಕು’ ಮುಂತಾದ ಅನೇಕ ಕೀರ್ತನೆಗಳಲ್ಲಿ ಗುರುತಿಸಬಹುದು. ಪುರಂದರದಾಸರ ಕೀರ್ತನೆಗಳಲ್ಲಿ ಬರುವ ಇಂತಹ ಪ್ರತಿಮಾ ನಿರ್ಮಿತಿಗಳು ಅಂದಿನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಚಿತ್ರಣಗಳನ್ನು ನೀಡುತ್ತವೆ. ಸಾಂದರ್ಭಿಕವಾದ ಕೀರ್ತನೆಗಳಲ್ಲಿ ಅನೇಕ ಘಟನೆಗಳ ಸಂಬಂಧಿತ ವಿಷಯಗಳು ವಸ್ತುರೂಪಗೊಳ್ಳುತ್ತವೆ. ಈ ವಸ್ತುಗಳಲ್ಲಿನ ಪುರಂದರದಾಸರ ಚಿಂತನೆ ವಿಶೇಷವಾದುದು. ದಾಸರ ಕೀರ್ತನೆಗಳಲ್ಲಿ ಬರುವ ಧಾರ್ಮಿಕತೆ, ಸಾಮಾಜಿಕತೆ, ಲೋಕನೀತಿ ಅನನ್ಯವಾದುದು. ಇಲ್ಲಿನ ಕೀರ್ತನೆಗಳಲ್ಲಿ ಅನಗತ್ಯ ವರ್ಣನೆಗೆ ಪ್ರಾಧಾನ್ಯ ನೀಡಿಲ್ಲ. ಹೇಳಬೇಕಾದ ವಿಚಾರಗಳನ್ನು ಸುಲಭಗ್ರಾಹ್ಯವಾಗುವಂತೆ, ಮನಮುಟ್ಟುವಂತೆ ಹೇಳುವಲ್ಲಿ ಪ್ರತಿಮಾ ನಿರ್ಮಿತಿ ಬಹಳಷ್ಟು ಪರಿಣಾಮಕಾರಿಯಾಗಿ ದುಡಿಯುತ್ತವೆ.

ಅಮೂರ್ತ ವಿಚಾರಗಳನ್ನು ಜನಸಾಮಾನ್ಯರಿಗೆ ಅರ್ಥಮಾಡಿಕೊಳ್ಳುವುದು ಕಷ್ಟ, ಉದಾಹರಣೆಗೆ ದೇವರು ‘ದೇವರು’ ಎಂದರೆ ಯಾರು? ದೇವರ ಗುಣಲಕ್ಷಣಗಳೇನು? ಆಕಾರವೇನು? ಇತ್ಯಾದಿ ವಿಚಾರಗಳ ಬಗ್ಗೆ ನಮಗೆ ಅನೇಕ ಸಂದೇಹಗಳು ಏರ್ಪಡುತ್ತವೆ. ದೇವರನ್ನು ಬೇರೆ ಬೇರೆ ಧರ್ಮದವರು ಬೇರೆ ಬೇರೆ ರೀತಿಯಲ್ಲಿ ನೋಡುತ್ತಾರೆ, ಪೂಜಿಸುತ್ತಾರೆ. ಜನರು ತಮ್ಮ ತಮ್ಮ ಧರ್ಮದ ನೀತಿಗನುಸಾರವಾಗಿ, ಭಾವನೆಗಳಿಗನುಸಾರವಾಗಿ ದೇವರಿಗೊಂದು ಆಕಾರ ಕೊಟ್ಟು ಪೂಜಿಸುತ್ತಾರೆ, ಆಗ ಆ ಶಕ್ತಿ ಒಂದು ಮೂರ್ತರೂಪವನ್ನು ಪಡೆಯುತ್ತದೆ. ದೇವರ ಚಿತ್ರ, ಮೂರ್ತಿಗಳಲ್ಲಿ ನಾವು ದೇವರನ್ನು ಕಾಣುವ ಪ್ರಯತ್ನವನ್ನು ಮಾಡುತ್ತೇವೆ. ಇಲ್ಲಿ ಅಮೂರ್ತ ವಿಚಾರಗಳಿಗೆ ನಾವು ದೇವರನ್ನು ಕಾಣುವ ಪ್ರಯತ್ನ ಮಾಡುತ್ತೇವೆ. ಇಲ್ಲಿ ಅಮೂರ್ತ ವಿಚಾರಗಳಿಗೆ ಮೂರ್ತ ರೂಪಕೊಡಲು ಈ ನಂಬಿಕೆ ಅತ್ಯಗತ್ಯ, ಕಾವ್ಯದಲ್ಲಿ ಪ್ರತಿಮೆಯ ಅಗತ್ಯವೂ ಇದೇ ಆಗಿರುತ್ತದೆ. ಕಾವ್ಯದ ಅಂತರಾಳದ ಅರ್ಥ ನಮಗಾಗಲು ಪ್ರತಿಮಾ ನಿರ್ಮಿತಿ ಸಹಾಯಕವಾಗುತ್ತದೆ.

ದಾಸರ ಕೀರ್ತನೆಗಳಲ್ಲಿ ಪ್ರಾಣಿ ರೂಪಕಗಳನ್ನು ಧಾರಾಳವಾಗಿ ಕಾಣಬಹುದು. ಮನುಷ್ಯರ ವಿವಿಧ ಗುಣಗಳನ್ನು ಹೇಳುವ ಸಂದರ್ಭದಲ್ಲಿ ಪ್ರಾಣಿರೂಪಕಗಳು ಧಾರಾಳವಾಗಿ ಬಂದಿವೆ. ‘ನಾಯಿ ಕುನ್ನಿಗಳ ಕೊಂಡೊಳಗಿಟ್ಟುಕೊಂಡರೆ ಕಾಶಿಯಲ್ಲಿ ಮಿಂದ ಫಲವೇನಯ್ಯ’,’ಕಚ್ಚದಿರು, ಎಲ್ಲರಲಿ ಕಚ್ಚದಿರು ಬಲ್ಲರಲಿ ಕಚ್ಚದಿರು ಶ್ವಾನದಂತೆ ಆತ್ಮಾ’, ‘ಏಡಿ ಕಡಗವಿಟ್ಟು ಫಲವೇನಿಲ್ಲ ಬೇಡ ತಾ ಮುತ್ತಿನ ಬೆಲೆ ಏನು ಬಲ್ಲ’, ‘ಕತ್ತೆಗೆ ಹೂರಣದ ರುಚಿ ತಿಳಿಯಲಿಲ್ಲ’, ‘ಮುತ್ತಿನ ಹಾರ ಕಪಿಗೆ ಸಲ್ಲ’, ಎಂಬುದು ಅಪಾತ್ರರಾದವರಿಗೆ ಉತ್ತಮ ಮಸ್ತುವು ಯೋಗ್ಯವಲ್ಲ ಎಂಬುದನ್ನು ತಿಳಿಸುತ್ತದೆ.

‘ಕುರುಡು ನಾಯಿ ಸಂತೆಗೆ ಬಂತಂತೆ’ ಅದು ಏತಕೆ ಬಂತೋ ಎಂಬಲ್ಲಿ ಮನುಷ್ಯ ಪ್ರಾಪಂಚಿಕ ಸುಖದಲ್ಲಿ ಮುಳುಗಿರುವುದರ ಚಿತ್ರಣವಿದ್ದು ಕೊನೆಗೆ ‘ಕೊಂಡೋಗುವಾಗ ಯಾರಿಲ್ಲವಂತೆ’ ಎಂಬಲ್ಲಿ ಮಾನವ ಎಷ್ಟೇ ಸುಖಭೋಗಗಳಲ್ಲಿ ಮರೆತರೂ ಕೊನೆಗೆ ಆತನ ಸಾವು ನಿಶ್ಚಿತ, ಆತ ಹೋಗುವಾಗ ಏನನ್ನೂ ಕೊಂಡೋಗಲು ಸಾಧ್ಯವಿಲ್ಲ ಎಂಬುದನ್ನು ಧ್ವನಿಸುತ್ತದೆ. ‘ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆ ಪಟ್ಟ ಪರಿಯಂತೆ’ ಎಂಬುದು ಮಾನವನು ಅತಿ ಆಸೆ ಪಟ್ಟು ಕಷ್ಟಕ್ಕೀಡಾಗುವುದನ್ನು ಧ್ವನಿಸುತ್ತದೆ.

ದಾಸರ ಕೀರ್ತನೆಗಳಲ್ಲಿ ಆಧ್ಯಾತ್ಮಿಕ ಮೌಲ್ಯಗಳು ಹೆಚ್ಚು ಹೃದ್ಯವಾಗಿ ಮೂಡಿಬಂದಿವೆ. ‘ಒಡಲೆಂಬ ಮನೆಯಲ್ಲಿ ನೀನು ಇರುತಿರ್ದಿ’ ಎಂಬುದು ಪ್ರತಿಯೊಬ್ಬರಲ್ಲೂ ದೇವರಿದ್ದಾನೆ ಎಂದು ಅರ್ಥ. ಜನರು ಲೌಕಿಕ ಸುಖದಲ್ಲೇ ಮುಳುಗಿದಾಗ ‘ಉದರ ವೈರಾಗ್ಯವಿದು ನಮ್ಮ ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ’ ಎಂದು ದಾಸರು ಹಾಡಿದ್ದಾರೆ. ‘ಇದಕ್ಕೊಳಿ ಭವರೋಗಕೌಷಧವನು ಇಂದ್ರಿಯವ ಜಯಿಸುವುದೆ ಇದಕೆ ಇಚ್ಛಾಪಥ್ಯ’ ಎಂಬಲ್ಲಿ ಹುಟ್ಟು ಎಂಬ ರೋಗಕ್ಕೆ ಹರಿನಾಮವೇ ಔಷಧ. ಇಂದ್ರಿಯವನ್ನು ಜಯಿಸುವುದೆ ಪಥ್ಯ ಎಂದು ಸೂಚಿಸಿದ್ದಾರೆ. ‘ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ ಕಲ್ಲುಸಕ್ಕರೆ ಕೊಳ್ಳಿರೋ ಕಲ್ಲುಸಕ್ಕರೆ ಸವಿ ಬಲ್ಲವರೇ ಬಲ್ಲರು’ ಕಲ್ಲುಸಕ್ಕರೆ ಎಂದರೆ ಎಲ್ಲರಿಗೂ ಇಷ್ಟ. ಸಿಹಿಯಾದ ಕಲ್ಲು ಸಕ್ಕರೆಯ ರುಚಿ ಸವಿದವರಿಗೆ ಗೊತ್ತು. ಪುಲ್ಲಲೋಚನ ಶ್ರೀಕೃಷ್ಣನೆಂಬ ಕಲ್ಲುಸಕ್ಕರೆ ಕೊಳ್ಳಿರೊ ಎಂಬುದಾಗಿ ದಾಸರು ಹೇಳುವಲ್ಲಿ ಶ್ರೀ ಕೃಷ್ಣ ಎಂಬ ಕಲ್ಲುಸಕ್ಕರೆಯ ಸವಿ ತಿಳಿಯಬಹುದು.

ಅಂತರಂಗ-ಬಹಿರಂಗ ಎರಡೂ ಶುದ್ಧವಾಗಿದ್ದರೆ ಮಾತ್ರ ನಿಜವಾದ ಶುದ್ಧ ಇರುತ್ತದೆ. ‘ತನುವ ನೀರೊಳಗಿದ್ದ ಫಲವೇನು ಮನದಲ್ಲಿ ದೃಢಶಕ್ತಿ ಇಲ್ಲದ ಮನುಜರು’, ‘ದಾನಧರ್ಮಗಳನ್ನು ಮಾಡುವುದೇ ಸ್ನಾನ’ ಎಂಬಲ್ಲಿ ಸ್ನಾನ ಎಂದರೆ ಶುಚಿತ್ವದ ಸಂಕೇತ. ಇದು ಅಂತರಂಗದ ಶುಚಿತ್ವವನ್ನು ಸೂಚಿಸುತ್ತದೆ. ನಾವು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು. ಧರ್ಮದಿಂದ ನಡೆಯಬೇಕು. ಅದೇ ಸ್ನಾನ. ಇದರಿಂದ ಅಂತರಂಗದ ಶುದ್ಧಿ ಸಾಧ್ಯ.

‘ಧರ್ಮವೆಂಬ ಸಂಬಳವ ಗಳಿಸಿಕೊಳ್ಳಿರೊ ಪೆರ್ಮೆಯಿಂ ದೇಹವ ನಂಬಬೇಡಿ ಕಾಣಿರೊ’ ಅಂದರೆ ನಾವು ಧರ್ಮ ಮಾರ್ಗದಿಂದ ನಡೆಯಬೇಕು, ಧರ್ಮ ಎಂಬ ಸಂಬಳವನ್ನು ಗಳಿಸುವ ದುಡಿಮೆ ನಮ್ಮದಾಗಬೇಕು ಎಂಬ ಆಶಯವನ್ನು ಹೊಂದಿದೆ. ‘ಬುತ್ತಿಯ ಕಟ್ಟೋ ಮನುಜ ಬುತ್ತಿಯ ಕಟ್ಟೋ ಬುತ್ತಿಯನ್ನು ಕಟ್ಟಿದರೆ, ಎತ್ತಲಾದರೂ ಉಣಬಹುದು’ ಎಂಬಲ್ಲಿ ಜ್ಞಾನದ ಹಸಿವನ್ನು ನೀಗಿಸಲು ಶ್ರೀ ಪುರಂದರ ವಿಠ್ಠಲ ತತ್ವವೆಂಬ ಬುತ್ತಿಯನ್ನು ಕಟ್ಟಿಕೊಳ್ಳಬೇಕಿಂದಿದ್ದಾರೆ. ನಾವು ಜ್ಞಾನದ ಬುತ್ತಿಯನ್ನು ಕಟ್ಟಿದರೆ ಯಾವತ್ತಾದರೂ ಎಲ್ಲಾದರೂ ಅದು ನಮ್ಮ ಹೊಟ್ಟೆಯನ್ನು ತುಂಬಿಸಲು ಸಾಧ್ಯ.

ದಾಸರ ಕೀರ್ತನೆಗಳಲ್ಲಿರುವ ಭಾವತೀವ್ರತೆಯ ಗುಣಗಳು. ಅವರ ಚಿಂತನೆಗಳು ಸರಳ ರೂಪದಲ್ಲಿದ್ದು ಸುಲಭಗ್ರಾಹ್ಯವಾಗಿವೆ. ಆದ್ದರಿಂದಲೇ ಕೀರ್ತನೆಗಳು ಜನರ ಅಂತರಂಗದತುಡಿತವನ್ನು ತಿಳಿಸುವ ಒಂದು ವಿಧಾನವಾಗಿ ಕನ್ನಡ ಸಾಹಿತ್ಯದಲ್ಲಿ ಇಂದಿಗೂ ಬಳಕೆಯಲ್ಲಿವೆ. ಇಲ್ಲಿನ ಪ್ರತಿಮಾ ನಿರ್ಮಿತಿಯಿಂದಾಗಿ ಕೀರ್ತನೆಗಳನ್ನು ಹಾಡುವವರಲ್ಲಿ ಮೂಲಾನುಭವಗಳನ್ನು ಉದ್ದೀಪಿಸುವಲ್ಲಿ ಅವು ನಮಗೆ ಹೆಚ್ಚು ಆತ್ಮೀಯವಾಗಿ ಕಾಣುತ್ತವೆ. ಬದುಕಿನ ಅನುಭವ ತೀವ್ರತೆಗಳನ್ನು ಹೇಳುವಲ್ಲಿ ದಾಸರಿಗೆ ಪ್ರತಿಮಾ ನಿರ್ಮಿತಿ ಸಹಕಾರಿಯಾಗಿದೆ. ಲೌಕಿಕದ ಬದುಕಿನ ತಾಕಲಾಟಗಳು, ಅದನ್ನು ಮೀರಿದ ಆತ್ಮಾವಲೋಕನಗಳು ಕೀರ್ತನೆಗಳಲ್ಲಿ ಮುಖ್ಯವಾಗಿವೆ.

ದಾಸರ ಬದುಕಿನಲ್ಲಿ ಅವರ ವ್ಯಕ್ತಿತ್ವ ನಿರ್ಮಾಣಕ್ಕೆ ಕಾರಣವಾದ ಅಂಶಗಳು, ಲೋಕ ನೀತಿ, ಆತ್ಮಾನುಸಂಧಾನ ಅವರ ಕೀರ್ತನೆಗಳಲ್ಲಿ ಮೂಡಿದ ಬಗೆ ಹಾಗೂ ಆಧ್ಯಾತ್ಮಿಕ ನಿಲುವಿನ ಆತ್ಮಾವಲೋಕನದ ಹಿನ್ನೆಲೆಯಲ್ಲಿ ಅವರ ಬದುಕನ್ನರಿಯುವ ಪ್ರಯತ್ನ ಮೊದಲ ಹಂತದ ಅಧ್ಯಯನವಾಗಿದೆ. ಎರಡನೆಯದಾಗಿ ಪ್ರತಿಮಾ ನಿರ್ಮಿತಿಯ ವ್ಯಾಪ್ತಿ, ಸ್ವರೂಪ, ಮಾದರಿಗಳು ಮೊದಲಾದ ಅಂಶಗಳು ಹಾಗೂ ಮೂರನೇ ಹಂತದಲ್ಲಿ ದಾಸರ ಕೀರ್ತನೆಗಳಲ್ಲಿ ಕಂಡುಬರುವ ರೂಪಕ ನಿರ್ಮಿತಿಯ ವೈಶಿಷ್ಟ್ಯ, ಅಂದಿನ ಸಾಮಾಜಿಕ, ಆಧ್ಯಾತ್ಮಿಕ ವಿಚಾರಗಳು ಕೀರ್ತನೆಗಳಲ್ಲಿ ಪ್ರತಿಮೆಗಳಾಗಿ ಮೂಡಿದ ಬಗೆಯನ್ನು ಪರಿಶೀಲಿಸಲಾಗಿದೆ.

II

ದಾಸರು ಸಾಹಿತ್ಯ ಹಾಗೂ ಸಂಗೀತ ಶಾಸ್ತ್ರಗಳೆರಡರ ಮರ್ಮವನ್ನೂ ಚೆನ್ನಾಗಿ ಅರಿತವರು. ಅಂತಲೇ ಅವರು ತಮ್ಮ ಗೀತಗಳಿಗೆ ತಾಳ-ಲಯಗಳಿಗೆ ಅನುಗುಣವಾಗಿ ಮಾತ್ರಗಣ ಅಂಶಗಣಗಳೆರಡನ್ನೂ ಬಳಸಿಕೊಂಡಿರುವರು. ದಾಸರ ಕೀರ್ತನೆಗಳು ಯಾವಾಗಲೂ ತಾಳ-ಗತಿಯೊಂದಿಗೆ ನರ್ತಿಸುತ್ತಿರುವಂತೆ ತೋರುವುದು. ಕೃತಿಯು ಲಘುವಾದುದಿರಲಿ, ದೀರ್ಘವಾದುದಿರಲಿ ಎಲ್ಲ ಕಡೆಗೂ ಛಂದೋಲಯದ ಕೌಶಲ್ಯ ಕಂಡುಬರುವುದು. ಪ್ರಾಸಾನು ಪ್ರಾಸಾನು ಯೋಜನೆಯಂತೂ ಕಿವಿ ಮನಗಳನ್ನು ಸೆಳೆದು ಕೊಂಡು ಸಹೃದಯರ ಹೃದಯವನ್ನು ಗೆಲ್ಲುವುವು.

ದಾಸ ಕೂಟದ ಮೊದಲ ಹಂತದ ಹರಿದಾಸರಾದ ಶ್ರೀ ವ್ಯಾಸರಾಯ, ಪುರಂದರದಾಸ, ಕನಕದಾಸ ಇವರ ಸಾಹಿತ್ಯ ಕೃತಿಗಳನ್ನು ನೋಡಿದರೆ ಅದು ಮೂಲಭಾಗವತ ಪಂಥದ ಪ್ರಭಾವದಲ್ಲಿ ಬೆಳೆದಿದೆಯೆಂದು ಹೇಳಬಹುದು. ಅವರು ನಾಮ ಮಹಾತ್ಮ್ಯ, ಅತ್ಯಂತಿಕ ಭಕ್ತಿ, ಭಕ್ತನ ಆಚರಣೆ ಇವುಗಳಿಗೆ ಹೆಚ್ಚಿನ ಅವಕಾಶಗಳನ್ನು ಕೊಟ್ಟಿರುವರೇ ಹೊರತು ದ್ವೈತ ಮತದ ಪ್ರಕ್ರಿಯೆಗಳ ಪ್ರಚಾರ ಪ್ರಸಾರಗಳ ಕಡೆಗೆ ಹೆಚ್ಚು ಲಕ್ಷ್ಯವನ್ನು ಹರಿಸಿದಂತಿಲ್ಲ. ಆದರೆ ಎರಡನೆಯ ಹಂತದ ದಾಸರಾದ ವಿಜಯದಾಸರು, ಗೋಪಾಲದಾಸರು, ಜಗನ್ನಾಥದಾಸರು ಇವರ ಸಾಹಿತ್ಯ ಶ್ರೀ ಮಧ್ವಾಚಾರ್ಯರ ದ್ವೈತ, ತತ್ವನಿಷ್ಠ ಭಕ್ತಿಯ ಪ್ರಭಾವದಲ್ಲಿ ಮುಂದುವರಿದಿದೆ. ಎರಡೂ ಘಟ್ಟದ ದಾಸರಲ್ಲಿ ಮತ ಪ್ರಕ್ರಿಯೆಗಳ ಜೊತೆಗೆ ಸಮಾಜೊ ಸಾಂಸ್ಕೃತಿಕ ಆಯಾಮದ ಲೇಪನವಿದೆ. ಈ ಕಾರಣದಿಂದಲೇ ಅವರ ಕೀರ್ತನೆಗಳು ಪಂಡಿತಪಾಮರರ ಹೃದಯಗಳಲ್ಲಿ ನೆಲೆಗೊಂಡಿವೆ. ಕೀರ್ತನೆಗಳ ವಸ್ತು ವಿಷಯವೂ ವೈವಿಧ್ಯಮಯವಾಗಿದೆ. ಸ್ತುತಿಸ್ತೋತ್ರ, ಉದಯರಾಗ, ಕೀರ್ತನೆ, ಲಾಲಿಪದ, ಸುವ್ವಾಲಿ, ಮಂಗಳಗೀತ ಇವೆಲ್ಲವೂ ಇವೆ. ಅಷ್ಟೇ ಅಲ್ಲ ಜಾನಪದ ಧಾಟಿಯನ್ನು ದಾಸರು ಬಳಸಿಕೊಂಡರು. ಈ ಧಾಟಿಯ ಮೂಲಕವೋ ಏನೋ ಅವರ ಹಾಡುಗಳು ತುಂಬ ಲೋಕ ಪ್ರಿಯವಾಗಿದ್ದು ಕನ್ನಡ ನಾಡಿನಲ್ಲೆಲ್ಲ ಹರಡಿಕೊಂಡಿವೆ.

ದಾಸರು ತಮ್ಮ ಭಾವನೆಗಳನ್ನು ಉಪಮೆ, ರೂಪಕ, ಪ್ರತಿಮೆಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಹೇಳಬೇಕಾದ ಸಂಗತಿಗಳನ್ನು ನಾಯಿ, ನರಿ, ತಾವರೆ, ನೈದಿಲೆ ಮುಂತಾದ ಪ್ರಾಣಿ, ಸಸ್ಯವಾಚಕಗಳನ್ನು ಬಳಸಿ ಹೇಳುತ್ತಾರೆ. ಹಾಗೆ ಹೇಳುವಲ್ಲಿ ಅವರು ಉಪಯೋಗಿಸುವ ಭಾಷೆ ನೇರವಾಗಿದೆಯಲ್ಲದೆ ಹೇಳಬೇಕಾದ ವಿಷಯದ ಚಿತ್ರವೊಂದನ್ನು ಕಣ್ಣಿಗೆ ಕಟ್ಟುತ್ತದೆ. ದಾಸರು ತಮ್ಮ ಮನಸ್ಸು ಸ್ವೀಕರಿಸಬಹುದಾದ ವಾಸ್ತವ ಲೋಕದ ನಿದರ್ಶನಗಳನ್ನೇ ಕೀರ್ತನೆಗಳಲ್ಲಿ ತರುತ್ತಾರೆ. ತೆರೆದ ಕಣ್ಣಿನಿಂದ, ಬಿಟ್ಟು ಹೃದಯದಿಂದ ಅವರು ಲೋಕವನ್ನು ಕಂಡಿದ್ದಾರೆ ಎಂಬುದಕ್ಕೆ ಅವರ ಕೀರ್ತನೆಗಳು ಸಾಕ್ಷಿಯಾಗಿವೆ. ಪುರಂದರದಾಸರ ಕೀರ್ತನೆ ಹೀಗಿದೆ.

ಮಾನವ ಜನ್ಮ ದೊಡ್ಡದು ಇದೆ
ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ ||ಪ||

ಕಣ್ಣು ಕೈ ಕಾಲ್ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಮರಳಾಗುವರೆ
ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ
ಉಣ್ಣದೆ ಉಪವಾಸ ಇರುವರೆ ಕೋಡಿ ||೧||

ಕಾಲನದೂತರು ಕಾಲ್ಪಿಡಿದೆಳೆವಾಗ
ತಾಳುತಾಳೆಂದರೆ ತಾಳುವರೆ?
ಧಾಳಿ ಬಾರದ ಮುನ್ನ ಧರ್ಮಗಳಿಸಿರೊ
ಸುಳ್ಳಿನ ಸಂಸಾರ ಸುಳಿಗೆ ಸಿಕ್ಕಲು ಬ್ಯಾಡಿ||೨||
……………………………………………..
…………………………………………….

ಬದುಕನ್ನು ಗಾಢವಾಗಿ ಪ್ರೀತಿಸುವ ಸಮಾಜ ಚಿಂತಕರಿಗೆ ಆ ಬದುಕುನ ಸುತ್ತಲು ಇರುವ ಪೊಳ್ಳುಗಳತ್ತಲೂ ಗಮನ ಹರಿಸಬೇಕೆಂದು ಸಲಹೆ ನೀಡಿದ್ದಾರೆ. ‘ಧಾಳಿಬಾರದ ಮುನ್ನ ಧರ್ಮಗಳಿಸಿರೊ’ ಎಂಬುದು ಸಂಸಾರವನ್ನು ಮೋಕ್ಷಕ್ಕೆ ಸಾಧನವಾಗಿ ಬಳಸಿಕೊಳ್ಳಬೇಕೆಂದು ಆ ಮೂಲಕ ಸಂಸಾರದ ನಿಸ್ಸಾರತೆಯನ್ನು ಮನಗಾಣಿಸಿ, ಮೋಕ್ಷಮುಖಿಯಾಗಲು ಕರೆ ನೀಡಿದ್ದಾರೆ. ಇಲ್ಲಿಯ ಪದಗಳ ವಿನ್ಯಾಸ ತುಂಬಾ ಪರಿಣಾಮಕಾರಿಯಾಗಿದೆ. ಇಲ್ಲಿ ದೇಹ ಮನಸ್ಸುಗಳು ವಾಸ್ತವವಾಗಿ ಬೇರೆ ಬೇರೆ ದಿಕ್ಕುಗಳಲ್ಲಿ ಪ್ರಯಾಣ ಮಾಡ ಬಯಸುತ್ತವೆ. ‘ದೇಹ’ ವ್ಯವಹಾರ ಸಾಧನವಾದ ಸಂಸಾರವನ್ನು, ಮನಸ್ಸು ವೈರಾಗ್ಯ ಸಾಧನವಾದ ಧ್ಯಾನವನ್ನು ಸಂಕೇತಿಸುತ್ತವೆ. ದೇಹ ಮತ್ತು ಮನಸ್ಸು ಇವೆರಡನ್ನು ಸಮತೋಲನ ಗೊಳಿಸುವುದೇ ಪುರಂದರರ ಉದ್ದೇಶವಾಗಿದೆ. ಇತ್ತ ಸಂಸಾರಕ್ಕೂ ಅಂಟಿ ನಿಲ್ಲಬೇಕು ಅತ್ತ ಮೋಕ್ಷಕ್ಕೂ ಒಗ್ಗಿಸಬೇಕು. ಯಾವುದನ್ನು ಬಿಡುವಂತಿಲ್ಲ ಇಂತಹ ದ್ವಂದ್ವ ಸೂಕ್ಷ್ಮವನ್ನು ಎದುರಿಸುವ ಪರಿಯನ್ನು ದಾಸರು ಅಭಿವ್ಯಕ್ತಿಸಿದ್ದಾರೆ, ಕಣ್ಣು,ಕಾಲು, ಕಿವಿ, ಮಣ್ಣು, ಹೆಣ್ಣು ಈ ಬಗೆಯ ಶಬ್ದಗಳ ಬೆದರಿಕೆಯಿಂದ ಶಬ್ದ ಜಗತ್ತು ಸಂಪನ್ನವಾಗಿದೆ. ಬಗೆ ಬಗೆಯ ಧ್ವನಿಯ ಛಾಯೆಗಳನ್ನು ಸೂಕ್ಷ್ಮವಾಗಿ ಹಿಡಿದಿಡಬಲ್ಲ ಭಾಷಾಸಿದ್ಧಿ ದಾಸರಿಗೆ ಸಾಧಿಸಿದೆ. ದಾಸರು ಮೌಲ್ಯಯುತ ಬದುಕಿಗೆ ಬೆಲೆಕೊಟ್ಟವರು. ಆದುದರಿಂದ ಅವರ ಕೀರ್ತನೆಗಳಲ್ಲಿ ಬದುಕಿನ ವ್ಯವಹಾರದೊಂದಿಗೆ ಸಜೀವ ಸಂಬಂಧವಿರಿಸಿಕೊಂಡ ಶ್ಲೇಷೆ, ಉಪಮೆಯಗಳು ಧಾರಾಳವಾಗಿ ಬಳಕೆಯಾಗಿವೆ.

ದಾಸರು ಬಳಸಿದ ಉಕ್ತಿ ವೈಚಿತ್ರ್ಯಗಳು ಉದ್ದೇಶಪೂರ್ವಕವಾಗಿ ಮೂಡಿಬಂದಿಲ್ಲ. ಅವು ಕವಿ ಅನುಭವದ ಅಭಿವ್ಯಕ್ತಿಯ ಪರಿಣಾಮಗಳಾಗಿವೆ. ಲೋಕ ವ್ಯವಹಾರದ ಸಂಗತಿಗಳು ಕೀರ್ತನೆಗಳಲ್ಲಿ ಸಹಜವಾಗಿ ಅಭಿವ್ಯಕ್ತವಾಗಿವೆ. ಕವಿಯಾದವನು ಅಮೂರ್ತ ಭಾವನೆಗಳನ್ನು ಅಭಿವ್ಯಕ್ತಿಸುವಾಗ ಮೂರ್ತ ಪ್ರಪಂಚದ ಚಿತ್ರಗಳನ್ನು ಅಭಿವ್ಯಕ್ತಿಸಲಿಕ್ಕೆ ಉಕ್ತಿವೈಚಿತ್ರ್ಯಗಳು ಅವನ ಮನಸ್ಸಿನಲ್ಲಿ ಬಿಂಬಿತವಾಗುತ್ತವೆ. ಆ ಉಕ್ತಿ ವೈಚಿತ್ರ್ಯಗಳೇ ಅಲಂಕಾರಗಳು.ಅಲಂಕಾರಗಳನ್ನು ಶಬ್ದದಿಂದ ಮತ್ತು ಅರ್ಥದಿಂದ ಎರಡು ಬಗೆಯಾಗಿ ಗುರುತಿಸುತ್ತಾರೆ. ಮೊದಲನೆಯದು ಶಬ್ದ ಚಮತ್ಕಾರ ಮೂಲವಾದ ‘ಶಬ್ದಾಲಂಕಾರ’ಗಳಾದರೆ ಎರಡನೆಯದು ಅರ್ಥ ಸೌಂದರ್ಯ ಮೂಲವಾದ ‘ಅರ್ಥಲಂಕಾರ’ಗಳು ಶಬ್ದಾಲಂಕಾರಗಳು ಕಾವ್ಯದೇವಿಯ ಬಾಹ್ಯ ಭೂಷಣವಾದರೆ ಅರ್ಥಾಲಂಕಾರಗಳು ನವರಸಗಳಿಂದೊಡಗೂಡಿ ಕಾವ್ಯದೇವಿಯ ಆಂತರಿಕ ಭಾಷಣಗಳಾಗಿ ಅವಳ ಸೌಂದರ್ಯ ಶೋಭೆ ಹೆಚ್ಚಿಸುತ್ತವೆ. ಇದನ್ನೇ ಲಾಕ್ಷಣಿಕರು ಅರ್ಥಾಲಂಕಾರಗಳು ನೈಸರ್ಗಿಕವಾಗಿರುವ ಸೌಂದರ್ಯವನ್ನು ಹೆಚ್ಚಿಸುವ ರತ್ನ ಖಚಿತ ಕುಂದಣದ ಒಡವೆಗಳಂತೆ ಎಂದು ಅಭಿಪ್ರಾಯ ಪಡುತ್ತಾರೆ. ಶ್ರೀ ಪಾದರಾಜರ ಕೆಲವು ಕೀರ್ತನೆಗಳ ಶಬ್ದಾಲಂಕಾರಕ್ಕೆ ಉತ್ತಮ ಉದಾಹರಣೆಗಳಾಗಿವೆ.

ನಿಚ್ಚ ಸುಭಕತಿಯೊಳಚ್ಚುತನಂಘ್ರಿಗ|
ಳರ್ಚಿಸಿ ಮೆಚ್ಚಿಸುತೆಚ್ಚರದಿ |
ತುಚ್ಚ ವಿಷಯಗಳ ನಿಚ್ಚಿಸದಲೆಯ |
ದೃಚ್ಛಾಲಭದಿಂ ಪ್ರೊಚ್ಚನಾಗುವುದೆ |

ಮಂಗಳ ರಂಗ ನರಸಿಂಗ ಉತ್ತುಂಗನಿಗೆ |
ಮಂಗಳ ಸಂಗರ ಚಿತ್ತಾಂಗದ ಹರಿಗೆ |
ಮಂಗಳ ಸಂಗರದಿ ಕಂಗೊಳಿಪ ಮುಂಗುರುಳ |
ಕಂಗಳ ಢವಳಾಂಗ ಶುಭಾಂಗ ಹರಿಗೆ |

ಈ ಕೀರ್ತನೆಗಳಲ್ಲಿ ವರ್ಣವೈಚಿತ್ರದಿಂದ ಕಾವ್ಯ ಸೌಂದರ್ಯ ಹೆಚ್ಚಿದೆ. ಒಂದು ಮತ್ತೊಂದಕ್ಕೆ ಇರುವ ಸಾದೃಶ್ಯಗಳನ್ನು ಗುರುತಿಸುವುದು ಮನುಷ್ಯನ ಆಲೋಚನೆಯ ಸಹಜ ಕ್ರಿಯೆಯಾಗಿದೆ. ಅದು ಮನುಷ್ಯ ಹಾಗೂ ಅವರಿಗೆ ಹಿನ್ನೆಲೆಯಾಗಿರುವ ಪ್ರಕೃತಿ ಇವುಗಳ ಸಂಬಂಧದಿಂದ ನಿಷ್ಟನ್ನವಾದುದು. ಕವಿ ತನ್ನ ಅಭಿವ್ಯಕ್ತಿಗೆ ತನ್ನ ಸುತ್ತಲ ವಸ್ತುಗಳನ್ನು ಬಳಸಿಕೊಳ್ಳುತ್ತಾನೆ. ಭಾಷೆ ಕೇವಲ ವ್ಯಾವಹಾರಿಕವಾಗಿ ಬಳಕೆಯಾಗದೆ ಧ್ವನ್ಯಾರ್ಥವಾಗಿ ಬಳಕೆಯಾಗಿದೆ. ಆಗ ಅರ್ಥಾಲಂಕಾರಗಳು ಕವಿಯ ನೆರವಿಗೆ ಬರುತ್ತವೆ. ಅರ್ಥಾಲಂಕಾರಗಳಲ್ಲಿ ಅರ್ಥಕ್ಕೆ ಪ್ರಾಮುಖ್ಯತೆ ಇರುತ್ತದೆ. ಅವುಗಳ ಮುಖ್ಯ ಉದ್ದೇಶ ಅರ್ಥವನ್ನು ಸಂವರ್ಧಿಸುವುದು ಮತ್ತು ಸ್ಪಷ್ಟಪಡಿಸುವುದಾಗಿದೆ. ಈ ಕಾರ್ಯವು ಹೋಲಿಕೆ, ವಿರೋಧ, ನಾನಾರ್ಥ, ದೃಷ್ಟಾಂತ, ತರ್ಕಬದ್ಧತೆ ಮುಂತಾದ ಬಗೆಗಳಿಂದ ಅರ್ಥಾಲಂಕಾರಗಳಲ್ಲಿ ನಡೆಯುತ್ತದೆ. ಹೋಲಿಕೆಯಿಂದಾಗುವ ಅರ್ಥಾಲಂಕಾರಗಳೇ ಹೆಚ್ಚು ಸಾದೃಶ್ಯ ಮೂಲವಾದದ್ದು ಉಪಮೆ, ಎರಡು ಭಿನ್ನ ವಸ್ತುಗಳ ನಡುವಣ ಸಾದೃಶ್ಯವನ್ನು ಗುರುತಿಸುವಿಕೆಯಿಂದ ಅವುಗಳನ್ನು ಹೋಲಿಸಿ ಹೇಳುವ ಉಕ್ತಿಕ್ರಮವನ್ನು ಉಪಮೆ ಎಂದು ಕರೆಯಲಾಗಿದೆ. ಇದನ್ನು ಹೀಗೂ ಹೇಳಬಹುದು ಎರಡು ವಸ್ತುಗಳಲ್ಲಿಯ ಪರಸ್ಪರ ಸಾದೃಶ್ಯ ಸಂಪತ್ತನ್ನು ಹೇಳುವುದು ‘ಉಪಮಾಲಂಕಾರ’ ಎನಿಸುವುದು. ಈ ಅಲಂಕಾರದಲ್ಲಿ ಉಪಮಾನ, ಉಪಮೇಯ ಪದಗಳೇ ಆ ಎರಡು ವಸ್ತುಗಳು. ಅವೆರಡರಲ್ಲಿಯ ಸಾದೃಶ್ಯ ಸಂಪತ್ತು ಹೋಲಿಕೆ ಗುರುತಿಸುವುದು ಪ್ರಧಾನ ಅಂಶ. ಅಂದರೆ ಉಪಮಾನದ ಸಾದೃಶ್ಯವನ್ನು ಉಪಮೇಯಕ್ಕೆ ಹೋಲಿಸುವುದನ್ನು ಕಾಣಬಹುದು. ಉಪಮೆಯವು ಹೋಲಿಸಿಕೊಳ್ಳುವ ಪ್ರತ್ಯಕ್ಷ ಪದವಾದರೆ ಉಪಮಾನವು ಉಪಮೇಯವನ್ನು ಹೋಲಿಸುವ ಅಪ್ರತ್ಯಕ್ಷ, ಅಗೋಚರ, ಕಲ್ಪನೆಗೆ, ಭಾವನೆಗೆ, ಅನುಭವಕ್ಕೆ ವೇದ್ಯವಾದ ವರ್ಣವಸ್ತು (ಪದ)ವಾಗಿರುತ್ತದೆ. ಉಪಮಾಲಂಕಾರವು ಉಪಮಾನ, ಉಪಮೇಯ, ಸಮಾನಧರ್ಮ ಮತ್ತು ಉಪಮಾವಾಚಕ ಪದ ಈ ನಾಲ್ಕು ಅಂಶಗಳಿಂದ ಕೂಡಿರುತ್ತದೆ.

ದಾಸರು ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯವನ್ನು ಪ್ರತಿಪಾದಿಸುವಾಗ ಉಪಮೇಯಗಳನ್ನು ಬಳಸಿದ್ದಾರೆ. ಶಬ್ದಗಳನ್ನು ಒಡೆಯುವ, ತಿರುಚುವ ಅದರ ವಿವಿಧಾರ್ಥಗಳಲ್ಲೂ ಬಳಸಿಕೊಳ್ಳುವ ಸಮೀಪದ ರೂಪ ಸಾದೃಶ್ಯವುಳ್ಳ ಶಬ್ದಗಳನ್ನು ಮೇಳವಿಸುವ ಎಲ್ಲ ಬಗೆಯ ಉಕ್ತಿ ವೈಚಿತ್ರ್ಯಗಳನ್ನು ಆಡಿದ್ದಾರೆ. ವಾದಿರಾಜರು ತಮ್ಮ ಕೀರ್ತನೆಯಲ್ಲಿ ಹೀಗೆ ಹೇಳಿದ್ದಾರೆ. ‘ಹಣವೆ ನಿನ್ನಯ ಗುಣವೇನು ಬಣ್ಣಿಪೆನೊ | ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯಾ’ ಧನ ಪ್ರಭಾವ ಮೌಲ್ಯಗಳ ಖಂಡನೆ ಈ ಕೀರ್ತನೆಗಳಲ್ಲಿದೆ. ಹಣ ಗೈಯುವ ಅನರ್ಥಗಳ ನಿರೂಪಣೆ, ಸಂಪತ್ತು ಭಕ್ತಿ ಮಾರ್ಗದಲ್ಲಿ ಅಡ್ಡಿ ಒಡ್ಡುವುದನ್ನು ದಾಸರು ಅರಿತು ಅದರಿಂದ ದೂರ ನಿಂತರು. ಸಮಾಜ ಬಾಂಧವರೂ ಹೀಗೆ ನಿಲ್ಲಬೇಕೆಂದು ಹಂಬಲಿಸಿದರು. ಅಂತೆಯೇ ಭಾಷೆಯ ಗಟ್ಟಿತನ, ಸೂಕ್ಷ್ಮತೆ, ಹರವುಗಳು ಗೊತ್ತಾಗುವುದು ಅದನ್ನು ಅರ್ಥವತ್ತಾಗಿ ಬಳಸಿದಾಗ ಮಾತ್ರ. ದಾಸರ ಈ ಕಾರ್ಯವನ್ನು ಸಮರ್ಥವಾಗಿ ಮಾಡಿದ್ದಾರೆ. ಪುರಂದರ ದಾಸರ ಒಂದು ಕೀರ್ತನೆಯ ನಿದರ್ಶನದಿಂದ ಮನಗಾಣಬಹುದು.

ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರು
ಕಲ್ಲು ಸಕ್ಕರೆ ಕೊಳ್ಳಿರೊ||ಪ||

ಕಲ್ಲು ಸಕ್ಕರೆಯ ಸವಿ ಬಲ್ಲವರೆ ಬಲ್ಲರು
ಪುಲ್ಲನಾಭ ಕೃಷ್ಣನ ದಿವ್ಯನಾಮವೆಂಬ||ಅ.ಪ||

ಎತ್ತಿ ಹೇರುವದಲ್ಲ ಹೊತ್ತು ಮಾರುವದಲ್ಲ
ಒತ್ತೊತ್ತಿ ಗೋಣಿಯನು ತುಂಬುವದಲ್ಲ
ಎತ್ತ ಹೋದರು ಮತ್ತೆ ಸುಂಕವು ಇದಕಿಲ್ಲ
ಹತ್ತೆಂಟು ಸಾವಿರಕೆ ಬೆಲೆಯಿಲ್ಲದಂತಹ||೧||

ನಷ್ಟ ಬೀಳುವದಲ್ಲ ನಾಶವಾಗುವದಲ್ಲ
ಕಟ್ಟಿ ಇಟ್ಟರೆ ಮತ್ತೆ ಕೆಡುವದಲ್ಲ
ಎಷ್ಟು ದಿನವಿಟ್ಟರೂ ಕೆಟ್ಟು ಹೋಗುವದಲ್ಲ
ಪಟ್ಟಣ ದೊಳಗೊಂದು ಲಾಭವೆನಿಸುವಂಥ ||೨||

ಸಂತೆ ಪೇಟೆಗೆ ಹೋಗಿ ಶ್ರಮ ಪಡಿಸುವದಲ್ಲ
ಎರಡು ಮಾರಿದರು ಅಂತರವಿಲ್ಲ
ಸತತ ಪುರಂದರ ವಿಠಲ ನಾಮವ
ಎಂತು ನೆನೆಯಲು ಪಾಪ ಪರಿಹಾರವಲ್ಲದೆ ||೩||

ದಾಸರು ಕೃಷ್ಣ ನಾಮವನ್ನು ಕಲ್ಲು ಸಕ್ಕರೆಗೆ ಹೋಲಿಸಿದ್ದು ಅರ್ಥಪೂರ್ಣವಾಗಿದೆ. ಶ್ರವಣ ಮಾಧ್ಯಮದಿಂದ ಕೇಳುವ ಶಬ್ದಗಳಿಗೆ ಭಿನ್ನ ಅರ್ಥವಲಯ ಹೊಂದಿರುತ್ತದೆ. ಕೆಲವು ಶಬ್ದಗಳ ಅರ್ಥದ ಗಡಿ ಹಿಗ್ಗುವ ಕುಗ್ಗುವ ಗುಣವನ್ನು ಹೊಂದಿರುತ್ತದೆ. ‘ಕಲ್ಲು ಸಕ್ಕರೆ’ ಎಂಬ ವ್ಯವಹಾರ ಜಗತ್ತಿನ ಅರ್ಥವನ್ನು ಮೀರಿ ದಾಸರ ಅಂತರಾರ್ಥವನ್ನು ಹೊರಗೆಡಹುದರಲ್ಲಿ ಸಮರ್ಥವಾಗಿದೆ. ಅದು ನಮ್ಮನ್ನು ಗಂಭೀರವಾದ ಚಿಂತನೆಯ ನೆಲೆಗೆ ಕರೆದೊಯ್ಯುತ್ತದೆ. ಯಾವ ಅಭಿವ್ಯಕ್ತಿಗೆ ಅತ್ಯಂತ ಅಡಕವಾಗಬಲ್ಲುದೋ ಅದು ಪರಿಣಾಮ ತೀವ್ರತೆಯನ್ನು ಮತ್ತು ಅರ್ಥದ ಅನುರಣತೆಯನ್ನು ಸಾಧಿಸಿಕೊಳ್ಳಬಹುದು. ಕನಕದಾಸರ ಕೀರ್ತನೆಯನ್ನು ಈ ನಿಟ್ಟಿನಲ್ಲಿ ಗಮನಿಸಬಹುದು.

ತನು ನಿನ್ನದು ಜೀವನ ನಿನ್ನದು ರಂಗ ||ಪ||
ಅನು ದಿನದಲಿ ಬಾಹೊ ಸುಖದುಃಖ ನಿನ್ನದಯ್ಯ||ಅ.ಪ||

ಸವಿನುಡಿದೇವ ಪುರಾಣ ಶಾಸ್ತ್ರಂಗಳ
ಕಿವಿಯಿಂದ ಕೇಳುವ ಕಥೆ ನಿನ್ನದು
ನವವೋಹನಾಂಗೇರ ರೂಪವ ಕಣ್ಣಿಂದ
ಎವೆಯಿಕ್ಕದೆ ನೋಡುವ ನೋಟ ನಿನ್ನದಯ್ಯ

ಒಡಗೂಡಿ ಗಂಧ ಕಸ್ತೂರಿ ಪರಿಮಳಂಗಳ
ಬಿಡದೆ ಲೇಪಿಸಿಕೊಂಬುದು ನಿನ್ನದು
ಷಡುರಸದನ್ನಕ್ಕೆ ನಲಿದಾಡುವ ಜಿಹ್ವೆ
ಕಡುರುಚಿಗೊಂಡರೆ ಆ ರುಚಿ ನಿನ್ನದಯ್ಯ

ಮಾಯಾ ಪಾಶದ ಬಲೆಯೊಳಗೆ ಸಿಲುಕಿರುವಂಥ
ಕಾಯಾಪಂಚೇಂದ್ರಿಯಂಗಳು ನಿನ್ನವು
ಮಾಯಾರಹಿತ ಕಾಗಿನೆಲೆಯಾದಿ ಕೇಶವ
ರಾಯ ನೀನಲ್ಲದೆ ನರರು ಸ್ವತಂತ್ರರೆ

ಕನಕದಾಸರ ಭಕ್ತಿ ಭಾವ ಇಲ್ಲಿ ಮೂಡಿದೆ. ದೇವರ ವಿರಾಟ ಶಕ್ತಿಯ ಎದುರು ಭಕ್ತ ತನ್ನನ್ನೇ ತಾನು ಕುಬ್ಜನೆಂದು ಬಗೆಯುವನು. ಕಿಂಕರ ಭಾವದ ಅಪೂರ್ವ ಮಾದರಿಯಿದು. ಶರೀರ ನಿನ್ನದಾಗಿರುವಾಗ ಅದರ ಲೋಪದೋಷಗಳ ಹೊಣೆ ನಿನ್ನದೆಂದು ದೇವರಲ್ಲಿ ಮೊರೆಯಿಟ್ಟಿದ್ದಾರೆ. ಅದು ‘ಮನುಷ್ಯನ ಮನಸ್ಥಿತಿಯ ಅವಸ್ಥೆಯೊಂದನ್ನು ತಕ್ಕ ಶಬ್ದ ಚಿತ್ರದ ಮೂಲಕ ಹಿಡಿದಿರಿಸಿದೆ. ಈ ದೃಷ್ಟಿಯಿಂದ ಕಾವ್ಯ ಪ್ರತಿಮೆಯೆಂದರೆ ಕೇವಲ ಶಬ್ದ ಚಿತ್ರವಲ್ಲ ಯಾವುದು ಸಂದರ್ಭವೊಂದರ ಬೌದ್ಧಿಕ ಹಾಗೂ ಭಾವುಕ ಸಂಕೀರ್ಣತೆಯನ್ನು ತಟ್ಟನೆ ಹಿಡಿದು ಕೊಡುತ್ತದೆಯೋ ಅದೇ ಪ್ರತಿಮೆ. ಒಂದು ಸಂದರ್ಭವೊಂದರ ಭಾವ ಸಂಕೀರ್ಣತೆಗೆ ‘ಶಬ್ಧಚಿತ್ರ’ ವೊಂದನ್ನು ರಚಿಸುವ ಪ್ರಯತ್ನದಿಂದ ಮೂಡಿದ್ದಲ್ಲ ಪ್ರತಿಮೆ. ಅದೊಂದು ರೀತಿಯಲ್ಲಿ ಆವಿಷ್ಕಾರ, ಅಷ್ಟೇ ಅಲ್ಲ, ಅದು ಕವಿಯ ಪ್ರಜ್ಞೆಯೊಳಗಿಂದ ಹುಟ್ಟಿಕೊಳ್ಳುವ ಜೀವಂತವಾದ ಬೆಳವಣಿಗೆಯ ಪರಿಣಾಮ[1]. ಭಾಷಾ ಸೂಕ್ಷ್ಮಗಳಿಂದ ವಸ್ತು ಸೂಕ್ಷ್ಮಗಳನ್ನು ಹಿಡಿಯುವ ಕಟ್ಟಿಕೊಳ್ಳುವ ಬದುಕಿನ ಭಾವ ತೀವ್ರತೆಯನ್ನು ಹಿಡಿದಿಡುತ್ತದೆ. ಹೊಸ ಅರ್ಥವಂತಿಕೆಗಳನ್ನು ಹೊಸ ಅರ್ಥ ಸಾಧ್ಯತೆಯನ್ನು ವಿಸ್ತರಿಸುತ್ತದೆ. ದಾಸರು ಬಳಸಿದ ಕಾವ್ಯ ಪ್ರತಿಮೆಗಳು ಜೀವಂತ ವಸ್ತು ಲೋಕದಿಂದ ಎತ್ತಿಕೊಂಡು ಪ್ರದರ್ಶನಾಲಯವಾಗಿವೆ.

ನಾಯಿ ಬಂದದಪ್ಪಾ ಅಣ್ಣಾ ಅತ್ತಲಾಗಿರಿ||ಪ||
ನಾಯಿ ಅಂದರೆ ನಾಯಿ ಅಲ್ಲ
ಮಾನವ ಜನ್ಮದ ಹೀನ ನಾಯಿ ||ಅ.ಪ||

ಕೊಟ್ಟ ಸಾಲವ ಕೊಡದವ ನಾಯಿ
ಇಟ್ಟ ಭಾಷೆಯ ತಪ್ಪುವವ ನಾಯಿ
ಕಟ್ಟೆಯ ಮೇಲೆ ಕುಳಿತುಕೊಂಡು
ಅಟ್ಟ ಹಾಸದಿ ಬಗುಳುವವ ನಾಯಿ||೧||

ಕೊಟ್ಟು ಕುದಿಯುವ ಕೆಟ್ಟನಾಯಿ
ಇಟ್ಟ ಅನ್ನವ ಹಂಗಿಪ ನಾಯಿ
ಪುಟ್ಟಿ ಮಾತೆ ಗರ್ಭದಲ್ಲಿ
ಕೆಟ್ಟ ಕೃತ್ಯವ ಮಾಳ್ವವ ನಾಯಿ ||೨||

ಪಟ್ಟ ಸ್ತ್ರೀಯಳ ಬಿಟ್ಟವ ನಾಯಿ
ಬಿಟ್ಟ ಸ್ತ್ರೀಯಳ ಆಳ್ವವ ನಾಯಿ
ದಿಟ್ಟ ಪುರುಂದರವಿಠಲ ರಾಯನ ಮನ
ಮುಟ್ಟಿ ಭಜಿಸದೆ ಹೋದವ ನಾಯಿ||೩||

ಕ್ರಮತಪ್ಪಿ ನಡೆಯುವ ಮನುಷ್ಯನನ್ನು ದಾಸರು ನಾಯಿಗೆ ಹೋಲಿಸಿದ್ದಾರೆ. ಪುರಂದರ ದಾಸರು ನಾಯಿಯ ಹಾಗೆ ಬಾಳುವ ಮನುಷ್ಯನನ್ನು ನಾಯಿಯೆಂದೇ, ಸಂಕೇತಿಸಿದ್ದಾರೆ. ಅಂತಹವರನ್ನು ಹತ್ತಿರ ಸೇರಿಸಬಾರದು ಎನ್ನುತ್ತಾರೆ ದಾಸರು. ಮನುಷ್ಯ ಬದುಕಿನಲ್ಲಿ ಹೇಗೆ ನಾಯಿಯಾಗುತ್ತಾನೆ ಎನ್ನುವ ವಿವರಣೆ ಮೇಲಿನ ಕೀರ್ತನೆಯಲ್ಲಿ ಸೊಗಸಾಗಿ ಮೂಡಿಬಂದಿದೆ. ಅಲ್ಲಿಯ ಪ್ರತಿಮೆ ವಾಸ್ತವವಾಗಿ ಎಲ್ಲರ ಅನುಭವಕ್ಕೆ ಬಂದಿದ್ದರೂ ಸಾಹಿತ್ಯದಲ್ಲಿ ಲಕ್ಷಣಾರ್ಥದಲ್ಲಿ ತುಂಬ ಪ್ರಯೋಜನಕಾರಿಯಾಗಿ ಬಳಕೆ ಗೊಂಡಿರುವುದು ಅಪೂರ್ವವಾಗಿದೆ. ಚಂಚಲ ಸ್ವಭಾವದ ನಾಯಿ ತನ್ನ ನಿಜವಾದ ನೆಲೆ ಯಾವುದು ಎಂಬುದನ್ನು ಅರಿಯದ ದ್ವಂದ್ವದಲ್ಲಿ ಸಿಕ್ಕಿರುವ ಬಗೆ ಇಲ್ಲಿ ನಿರೂಪಿತವಾಗಿದೆ. ಮಾನವ ಜೀವನದ ವಿಶಿಷ್ಟಾನುಭವ ಇಲ್ಲಿದೆ.

ನಿಂದಕರಿರಬೇಕಿರಬೇಕು||ಪ||
ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೊ ಹಾಂಗೆ||ಅ.ಪ||

ಅಂದಂದು ಮಾಡಿದ ಪಾಪವೆಂಬ ಮಲ
ತಿಂದು ಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ
ಪೊಂದಿದ ಪುಮ್ಯವನೊಯ್ಯುವರಯ್ಯ

ತೆಗಳಿಕೆಯ ಭಕ್ತನನ್ನು ಎಚ್ಚರಿಸಿ ಸನ್ಮಾರ್ಗಕ್ಕೆ ಹಚ್ಚುವುದೆಂದು ಪುರಂದರದಾಸರ ನಂಬಿಕೆ. ನಿಂದಿಸುವ ಜನರನ್ನು ಹಂದಿಗೆ ಹೋಲಿಸುವುದು ತುಂಬ ಸಹಜವಾಗಿದೆ. ಅಂತಹವರು ಇದ್ದರೆ ಸಜ್ಜನರು ಉತ್ತಮ ಮಾರ್ಗ ಹಿಡಿದು ವಿಷ್ಣು ಕೃಪೆಗೆ ಪಾತ್ರರಾಗುತ್ತಾರೆ. ದಾಸರ ಕಾರ್ಯಕ್ಷೇತ್ರ ಜನಸಾಮಾನ್ಯರ ನಡುವೆ. ಬೇರೆ ಬೇರೆ ಮನೋಧರ್ಮದ ಜನರೊಂದಿಗೆ ಬೆರೆಯುತ್ತಾ ಮಾತನಾಡುತ್ತ ಅವರವರ ವೃತ್ತಿ ಹವ್ಯಾಸಗಳಲ್ಲಿ ತೊಡಗುತ್ತಲೇ ಭಕ್ತಿಯ ಹಿರಿಮೆಯನ್ನು ಮನಗಾಣಿಸಿದರು. ಲೋಕ ವ್ಯವಹಾರದ ಬಳಕೆಯ ಮಾತಿನಿಂದ ಉಪಮೆಯನ್ನು ಎತ್ತಿತಂದಿದ್ದಾರೆ. ಕ್ರಿಯಾಜ್ಞಾನವನ್ನು ಪಡೆದ ವ್ಯಕ್ತಿಯಲ್ಲಿ ನೋಟದ ಭಾವ ಸುದ್ಧಿ ಹೇಗಿರಬೇಕೆಂಬುದನ್ನು ‘ಹಂದಿ’ ಪ್ರತಿಮೆ ಮೂಲಕ ತಿಳಿಯ ಪಡಿಸಿದ್ದಾರೆ. ಅನನ್ಯವಾದ ಇಂತಹ ಜೀವಂತ ಉಪಮೆಗಳನ್ನು ದಾಸರು ಲೀಲಾಜಾಲವಾಗಿ ಬಳಸಿದ್ದಾರೆ. ದಾಸರು ಸರಳ ಮಾರ್ಗ ಉದಾತ್ತ ವಿಚಾರಗಳನ್ನು ತೋರಿದರು. ತಾವೂ ಆ ಮಾರ್ಗದಲ್ಲಿ ನಡೆದರು. ಜನಸಮುದಾಯದ ನಡುವೆ ಬದುಕಿದ ದಾಸರು ಸಮಾಜದ ದೌರ್ಬಲ್ಯಗಳನ್ನು, ಕೊರತೆಗಳನ್ನು ತಿದ್ದಿದರು.

ನೋಡದಿರು ಪರಸ್ತ್ರೀಯರ
ನೋಡಿದರೆ ಕೇಡಹುದು ತಪ್ಪದಿದಕೋ

ನೋಡಿದರೆ ಸ್ತ್ರೀ ಹತ್ಯವು ನುಡಿಸಿ ಮಾ
ತಾಡಿದರೆ ಗೋಹತ್ಯವು
ಕಾಡಿದರೆ ಶಿಸು ಹತ್ಯವು ಮೈ
ಗೂಡಿದರೆ ಬ್ರಹ್ಮ ಹತ್ಯವು

ಎಂದು ಪುರಂದರ ದಾಸರು ಹೇಳುತ್ತಾರೆ. ದಾಸರು ತಮಗೆ ಪರಿಚಿತವಾದ ವ್ಯಾವಹಾರಿಕ ಲೋಕದಿಂದ ಸುಂದರವಾದ ಉಪಮೆಯಗಳ ಮೂಲಕ ಸಾಹಿತ್ಯದ ನೆಲವನು ಹದಗೊಳಿಸಿದ್ದಾರೆ. ಪರಸ್ತ್ರೀಯರನ್ನು ಬೆಂಕಿ ಎಂಬಂತೆ ಕಾಣುವುದು ವಿಹಿತವೆಂದು ದಾಸರು ಇಲ್ಲಿ ಸೂಚಿಸಿದ್ದಾರೆ. ವೈಯಕ್ತಿಕ ಹಾಗೂ ಸಾಮಾಜಿಕ ನೆಲೆಯಿಂದಲೂ ಪರಸ್ತ್ರೀ ವ್ಯಾವೋಹ ಸಲ್ಲದು ಎನ್ನುತ್ತಾರೆ. ಪರಸ್ತ್ರೀ ವ್ಯಾವೋಹದಿಂದಾಗುವ ದೊಡ್ಡ ದುರಂತವನ್ನೇ ದಾಸರು ಇಲ್ಲಿ ಚಿತ್ರಿಸಿದ್ದಾರೆ. ದಾಸರ ಲೋಕಾನುಭವ ಇಲ್ಲಿ ಸೊಗಸಾಗಿ ಅಭಿವ್ಯಕ್ತವಾಗಿದೆ. ಅಂತರಂಗ ಶುದ್ದಿ ಇಲ್ಲದ ಜನರ ಬೂಟಾಟಿಕೆಯನ್ನುಕಂಡು ಅಂತಹವರನ್ನು ದಾಸರು ಬಲವಾಗಿ ಖಂಡಿಸಿದರು. ಧನ, ಭೂಮಿ ಇಂತಹ ಲೌಕಿಕ ಆಸೆಗಳ ವ್ಯಾವೋಹವುಳ್ಳ ಜನರ ವರ್ತನೆಯನ್ನು ಅವರು ಖಂಡಿಸಿದರು. ಹುರಿಗೊಳಿಸಿದ ಇಂದ್ರಿಯಗಳ ಅರಿವನ್ನು ಪ್ರಕಟಗೊಳಿಸುವ ದಿಕ್ಕಿನಲ್ಲಿ ಕನಕದಾಸರು ಸೂಚನೆ ಕೊಟ್ಟಿದ್ದಾರೆ.

ನೆಚ್ಚದಿರು ಸಂಸಾರ ನೆಲೆಯಲ್ಲವೀ ಕಾಯ
ಅಚ್ಯುತನ ನಾಮವನು ನೆನೆದು ಸುಖಿಯಾಗೋ

ಗಳಸದಿರು ಸೀಮೆಯನು ಗಳಿಸದಿರು ದ್ರವ್ಯವನು
ಗಳಸದಿರು ನೀ ದುರಿತ ರಾಶಿಗಳನು
ನಳಿನನಾಭವ ದಿವ್ಯನಾಮವನು ನೆನೆ ನೆನೆದು
ನೆಲೆಯಾದ ಪರಮ ಪದವಿಯ ಪಡೆಯೊ ಮನವೆ

 

[1]ಜಿ.ಎಸ್. ಶಿವರುದ್ರಪ್ಪ ಕಾವ್ಯಾರ್ಥ ಚಿಂತನ (೧೯೮೮) ಪು. ೧೦೫ ಶಾರದಾ ಪ್ರಕಾಶನ, ಬೆಂಗಳೂರು