ಅದರಂತೆ ಪರಸತಿ ವ್ಯಾಮೋಹ, ಗರ್ವದ ಮಾತು ಸರಿಯಲ್ಲವೆಂದು ದಾಸರು ಎಚ್ಚರಿಸಿದ್ದಾರೆ. ನಾರಾಯಣನ ನಾಮ ಮನದಲ್ಲಿ ಶಾಶ್ವತವಾಗಿ ಉಳಿಯಬೇಕೆಂಬ ಆಶೆ ಅವರಿಗಿದೆ. ಜಾತಿಯನ್ನು ಹುಟ್ಟಿನಿಂದ ನಿರ್ಣಯಿಸದೆ ವ್ಯಕ್ತಿಯ ರೀತಿ ನೀತಿಗಳಿಂದ ನಿರ್ಣಯಿಸಬೇಕೆಂಬ ಕ್ರಾಂತಿಕಾರಿ ವಿಚಾರ ಪ್ರತಿಪಾದನೆಯನ್ನು ದಾಸರು ಮಾಡಿದ್ದಾರೆ. ನಮ್ಮಲ್ಲಿ ಮನೆ ಮಾಡಿ ಕೊಂಡಿರುವ ಕಾಮ, ಕ್ರೋಧಾದಿ ಭಾವಗಳನ್ನು ವರ್ಜಿಸಿ ಪ್ರೀತಿ, ಪ್ರೇಮ, ವಾತ್ಸಲ್ಯವೇ ಮೊದಲಾದ ಭಾವಗಳನ್ನು ಮಾತ್ರ ಸಮರ್ಪಿಸಬೇಕು. ಹೀಗೆ ಅರ್ಪಣಾ ಭಾವದಲ್ಲಿ ಕೂಡ ಯಾವುದು ಅರ್ಪಿತ ಯಾವುದು ಅನರ್ಪಿತ ಎಂದು ನಿರ್ದರಿಸುವ ಮೌಲ್ಯ ಪ್ರಜ್ಞೆ ನಮ್ಮಲ್ಲಿ ಮೂಡಬೇಕೆಂದು ಪುರಂದರದಾಸರು ಸೊಗಸಾಗಿ ಹೇಳಿದ್ದಾರೆ.

ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ
ಪದುಮನಾಭನ ಪಾದ ಭಜನೆ ಸುಖವಯ್ಯ

ಕಲ್ಲಾಗಿರಬೇಕು ಕಠಿಣ ಭವ ತೊರೆಯೊಳಗೆ
ಬಿಲ್ಲಾಗಿರಬೇಕು ಬಲ್ಲವರೊಳಗೆ
ಮೆಲ್ಲನೆ ಮಾಧವನ ಮನವ ಮೆಚ್ಚಿಸಬೇಕು
ಬೆಲ್ಲವಾಗಲು ಬೇಕು ಬಂಧು ಜನರೊಳಗೇ

ಬದ್ಧಿಯಲಿ ತನುಮನದ ತಿದ್ದಿಕೊಳ್ಳಲು ಬೇಕು
ಮುದ್ದಾಗಿ ಇರಬೇಕು ಮುನಿ ಯೋಗಿಗಳಿಗೆ
ಮಧ್ವ ಮತಾಬ್ದಿಯೊಳು ಮೀನವಾಗಿರಬೇಕು
ಶುದ್ಧನಾಗಲುಬೇಕು ಕರಣತ್ರಯಗಳಲಿ

ವಿಷಯ ಭೋಗದ ತೃಣಕೆ ಉರಿಯಾಗಿರಲು ಬೇಕು
ನಿಶೆಹಗಲು ಶ್ರೀ ಹರಿಯ ನೆನೆಯಬೇಕು
ವಸುಧೇಶ ಪುರಂದರವಿಠ್ಠಲರಾಯನ
ಹಸನಾದ ದಾಸರ ಸೇವಿಸಲು ಬೇಕು

ಬದುಕಿನ ನಿಸ್ಸಾರತೆಯನ್ನು ಪುರಂದರದಾಸರು ಕಂಡ ಬಗೆ ಇಲ್ಲಿದೆ. ಸಂಸಾರದ ನಶ್ವರತೆಯ ಹಿನ್ನೆಲೆಯಲ್ಲಿ ಸಮರ್ಪಣಾಭಾವ ಅರಳಿದೆ. ಮುಕ್ತಿಯೊಂದೆ ಶಾಶ್ವತ ಸುಖ, ಅದನ್ನು ಪಡೆಯಲು ಭಕ್ತನ ನಿರಂತರ ಹೋರಾಟ, ದೇವರ ಸನ್ನಿದಿಯಲ್ಲಿ ಬದುಕು ಸಾರ್ಥಕತೆ ಪಡೆಯುವುದೆಂಬ ಭಾವನೆ ಇಲ್ಲಿ ಪ್ರಬಲವಾಗಿದೆ. ಸ್ನೇಹ, ಪ್ರೇಮ ನಂಟುಗಳು ಸ್ವಯಂ ಉದ್ದೀಪನಗೊಳ್ಳುವ ಅಂತಶ್ವೇತನವುಳ್ಳ ಶಕ್ತಿಗಳಾಗಿವೆ. ಆದರೆ ಅವು ಪ್ರಕಟವಾಗಲು ತಕ್ಕ ಭೂಮಿಕೆಯೊಂದನ್ನು ತಾವೇ ಹುಡುಕಿಕೊಳ್ಳುತ್ತವೆ. ದಾಸರು ಇಲ್ಲಿ ಒಂದು ವೈಜ್ಞಾನಿಕಸತ್ಯ ಮತ್ತು ಭಾವಲೋಕದ ಸತ್ಯ ಇವೆರಡನ್ನು ಬೆರೆಸಿರುವ ಬಗ್ಗೆ ವಿಶಿಷ್ಟವಾದುದಾಗಿದೆ. ದಾಸರು ಹೊಂದಿದ ಕಿಂಕರಭಾವ ಅವರ ಹೃದಯ ವೈಶಾಲ್ಯವನ್ನು ತೋರಿಸುತ್ತದೆ. ತಮ್ಮ ಎದುರಾಗುವ ಕಷ್ಟನಷ್ಟಗಳಿಂದ ದೈವೀಭಕ್ತಿ ಇನ್ನಷ್ಟು ದೃಢವಾಗುವುದು ಇಂತಹ ವಿಚಾರಗಳು ದಾಸಸಾಹಿತ್ಯದಲ್ಲಿ ಹೇರಳವಾಗಿದ್ದರೂ ಪುರಂದರದಾಸರ ಸಮರ್ಪಣಾ ಮನೋಭಾವದಿಂದ ಕಳಕಳಿಸುವ ಈ ಚಿಂತನೆ ತುಂಬ ಮೌಲಿಕವಾದುದು.

ದಾಸ ದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ

ಎಂದು ಕನಕದಾಸರು ಹೇಳಿದ್ದಾರೆ. ದೇವರ ವಿರಾಟ ಶಕ್ತಿಯ ಎದುರು ಭಕ್ತ ತನ್ನನ್ನೇ ತಾನು ಕುಬ್ಜನೆಂದು ಬಗೆಯುವನು. ಕಿಂಕರಭಾವದ ಅಪೂರ್ವ ಮಾದರಿಯಿದು. ಆ ಉಪಮೆ ದಾಸರ ಹೃದಯವು ಬತ್ತಲಾರದ ಚಿಲುಮೆ ಎಂಬುದನ್ನು ಧ್ವನಿಸುತ್ತದೆ. ಇಲ್ಲಿ ದಾಸರ ವ್ಯಕ್ತಿತ್ವದಲ್ಲಿ ಆರ್ದ್ರತೆ, ವಿಶಾಲತೆ ಈ ಗುಣಗಳು ಹೇಗೆ ಮೇಳವಿಸಿವೆ ಎಂಬುದು ಹಲವು ಕೀರ್ತನೆಗಳಲ್ಲಿ ಸಮರ್ಥವಾಗಿ ಅಭಿವ್ಯಕ್ತವಾಗಿದೆ. ಶ್ರೀ ಪಾದರಾಜರ ಒಂದು ಕೀರ್ತನೆ ಹೀಗಿದೆ.

ಪಾಲೊಳಗದ್ದು ನೀರೊಳಗದ್ದು ಹರಿ
ನಾನಿನ್ನ ನಂಬಿದೆನೊ
ಜಲಜನಾಭ ನೀನಿಟ್ಟ ತೆರದಲ್ಲಿ ಇರುವೆನಯ್ಯಾ

ಸುಖದುಃಖದೊಳಗಿಡು ಸುಕೃತ ದುಷ್ಕೃತಮಾಡು
ನಿಖಿಳ ದುರಿತದೊಳೆನ್ನ ಲೋಲಾಡಿಸು
ಅಖಿಳಾಖಿಳನೆ ನೀನು ಅಭಯಾಭಯವಸೂಸು
ಮಕರ ಕುಂಡಲ ನಿನ್ನ ಮತವೆ ಸಮ್ಮತವಯ್ಯ

ದಾಸರು ತಮ್ಮದೆಲ್ಲವನ್ನೂ ದೇವರಿಗೆ ಅರ್ಪಿಸಿ ಮುನ್ನಡೆಯುತ್ತಾರೆ. ದಾಸರ ವ್ಯಕ್ತಿತ್ವ ಎಂತಹದೆಂಬುದನ್ನು ಮೇಲಿನ ಕೀರ್ತನೆ ಧ್ವನಿಸುತ್ತದೆ. ಅಂತರಂಗ ಬಹಿರಂಗಗಳ ನಡತೆ ಒಂದಾಗಿರಬೇಕು. ದ್ವಂದ್ವ ನೀತಿಯ ಒಳಹೊರಗುಗಳು ಬಿಡಿಸಿ ತೋರುವ ನೈಪುಣ್ಯವನು ಆ ಕೀರ್ತನೆಯಲ್ಲಿ ಕಾಣಬಹುದಾಗಿದೆ. ಮನಸ್ಸಿನ ನೆಲೆಯಲ್ಲಿ ಸದಾ ದೇವರನ್ನು ಕಂಡಿದ್ದೇನೆಂಬ ಆತ್ಮವಿಶ್ವಾಸ ಇರುವ ಶ್ರೀ ಪಾದರಾಯರು ತಮ್ಮ ಮನಸ್ಸಿನ ಸ್ಥಿತಿಯನ್ನು ಮುಕ್ತವಾಗಿ ಹಾಗೂ ವಸ್ತುನಿಷ್ಠವಾಗಿ ನೋಡಬಲ್ಲ ದ್ವಂದ್ವಮಾನ ಸತ್ಯ ಉಳ್ಳವರಾಗಿದ್ದಾರೆ. ಅದಕ್ಕಾಗಿ ಅವರು ನೀರು ಮತ್ತು ಹಾಲು ಎರಡು ಹೋಲಿಕೆಗಳನ್ನು ಬಳಸಿಕೊಳ್ಳುತ್ತಾರೆ. ದ್ವಂದ್ವದಿಂದ ಏಕವನ್ನು ಸಾಧಿಸಲು ಇಂತಹ ರೂಪಕಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತವೆ. ಅಲ್ಲದೆ ಸಂವಾದ ರೂಪಿಯಾಗಿರುವ ಈ ಕೀರ್ತನೆ ತರ್ಕವನ್ನು ತುದಿಮುಟ್ಟಿಸುವ ಉತ್ತಮ ನಿದರ್ಶನವೂ ಆಗಿ ನಿಲ್ಲುತ್ತದೆ. ಸಂಸಾರದ ನಶ್ವರತೆಯ ಹಿನ್ನೆಲೆಯಲ್ಲಿ ಅರ್ಪಣಾಭಾವ ಅರಳಿದೆ. ಜನಸಾಮಾನ್ಯರ ನಡುವೆ ಬಾಳಿ ಬದುಕಿದ ದಾಸರು ಜನಭಾಷೆಯನ್ನು ತಮ್ಮ ಕಾರ್ಯಶಕ್ತಿಯಾಗಿಸಿಕೊಂಡಿದ್ದಾರೆ. ಅವರು ಕೆಲವು ಕೀರ್ತನೆಗಳ ಆಶಯ ಗಾದೆಗಳಲ್ಲಿಯೂ ಹೆಣೆದಿವೆ.

ದೇವರಿಲ್ಲದ ಗುಡಿಯು ಹಾಳುಬಿದ್ದಂಗಡಿಯು
ಭಾವವಿಲ್ಲದ ಭಕುತಿಯದು ಕುಹಕ ಯುಕುತಿ
ಹೇಮವಿಲ್ಲದ ಹೆಣ್ಣು ಗಜುಗ ಬೆಳೆದಾಕಣ್ಣು
ಸೇವೆಯರಿಯದ ಧಣಿಯು ಕಲ್ಲಿನಾ ಬಣ್ಣಿಯು

ಧರ್ಮವಿಲ್ಲದ ಅರಸು ಮುರಿದ ಕಾಲಿನ ಹೊರಸು
ಮಕ್ಕಳಿಲ್ಲದ ತಾಯಿ ಕೊಳೆತ ತೆಂಗಿನಕಾಯಿ
ಸೌಖ್ಯವಿಲ್ಲದ ಕೂಟ ಅದು ಕಾಳಕೂಟ
ಒಕ್ಕಲಿಲ್ಲದ ಊರು ಅಡಕೆನಾರುವ ನೀರು

ಕನಕದಾಸರ ಈ ಕೀರ್ತನೆಯು ನಾಣ್ಣುಡಿಗಳಿಂದ ಕೂಡಿದೆ. ಮನುಷ್ಯನ ಮೂಲಭೂತ ಅಗತ್ಯಗಳು ಇರಲೇಬೇಕು ಎಂಬುದನ್ನು ದಾಸರು ಇಲ್ಲಿ ಹೇಳಬೇಕಾಗಿದೆ. ಅದಕ್ಕಾಗಿ ಹಲವು ಸಂಕೇತಗಳ ಮೂಲಕ ಅವರು ಸ್ಪಷ್ಟಪಡಿಸಿದ್ದಾರೆ. ಸಾಮಾನ್ಯ ಮನುಷ್ಯನನ್ನು ಅನುಲಕ್ಷಿಸಿ ಹೇಳುವಾಗ ಭಾಷೆ ಕಟುವಾಗಿರುತ್ತದೆ. ಅದರ ಹಿಂದೆ ಸಾಮಾಜಿಕ ಕಳಕಳಿ ಅಡಗಿದೆ ಎಂಬುದು ಗಮನಿಸಬೇಕಾದ ಸಂಗತಿ.

ಛೀ ಛೀ ಏತರ ಜನ್ಮ
ತಿಳಿಯೋ ನೀತಿ ಧರ್ಮ
ಬಾಯಲಿ ಬಿತ್ತೊಬೂದಿ

ಇಲ್ಲಿ ಬಳಕೆಯಾದ ಸಂಬೋಧನೆಗಳು ಅನೈತಿಕ ವ್ಯಕ್ತಿಯೊಬ್ಬನ ವರ್ತನೆಯನ್ನು ಟೀಕಿಸುತ್ತದೆ. ಇದರ ಜೊತೆಯಲ್ಲಿಯೇ ಹಣದಿಂದ ಉಂಟಾಗುವ ವ್ಯತ್ಯಾಸವನ್ನು ದಾಸರು ಗುರುತಿಸಿದ್ದಾರೆ. “ಹಣವೇ ನಿನ್ನಯ ಗುಣವೇನು ಬಣ್ಣಿಪೆನೊ | ಹಣವಿಲ್ಲದವನೊಬ್ಬ ಹೆಣವೆ ಸರಿ ಕಂಡ್ಯಾ | ಬೆಲೆಯಾಗದವನ್ನೆಲ್ಲ ಬೆಲೆಯ ಮಾಡಿಸುವಿ | ಕುಲಗೆಟ್ಟವರ ಸತ್ಕುಲಕ್ಕೆ ಸೇರಿಸುವಿ | ಸಮಾಜದಲ್ಲಿ ಹಣದ ದುರ್ಬಳಕೆ ಅದು ವಿಪರ್ಯಾಸದ ಪರಿಣಾಮವನ್ನು ಬೀರುತ್ತದೆ.

ದುಗ್ಗಾಣಿ ಎಂಬುದು ದುರ್ಜನ ಸಂಗ
ದುಗ್ಗಾಣಿ ಬಲು ಕೆಟ್ಟದಣ್ಣ

ಆಚಾರ ಹೇಳೋದು ದುಗ್ಗಾಣಿ ಬಹು
ನೀಚರ ಮಾಡೋದು ದುಗ್ಗಾಣಿ
ನಾಚಿಕೆಯಿಲ್ಲದೆ ಮನೆಮನೆ ತಿರುಗಿಸಿ
ಛೀ ಛೀ ಎನಿಸೋದು ದುಗ್ಗಾಣಿಯಣ್ಣ

ನೆಂಟತನ ಹೇಳೋದು ದುಗ್ಗಾಣಿ ಬಹು
ನೆಂಟರನೊಲಿಸೋದು ದುಗ್ಗಾಣಿ
ಒಂಟಿ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು
ಕುಂಟವೆನಿಸುವುದು ದುಗ್ಗಾಣಿಯಣ್ಣ

ಮಾನವನಾಗಿರಿಸೋದು ದುಗ್ಗಾಣಿ
ಮಾನ ಹಸಗೆಡಿಸೋದು ದುಗ್ಗಾಣಿ ಬಹು
ಮಾನನಿಧಿ ಶ್ರೀ ಪುರಂದರವಿಠಲನ
ಕಾಣಸದಿರುವುದು ದುಗ್ಗಾಣಿಯಣ್ಣ

ಹಣದಿಂದ ಸಮಾಜದಲ್ಲಿ ಉನ್ನತ ಸ್ಥಾನಮಾನಗಳು ಗಳಿಸುವ ಹಾಗೆಯೇ ಬಹಳ ಅವಮಾನಕ್ಕೂ ಗುರಿಯಾಗುತ್ತದೆ. ಮನುಷ್ಯನಿಗೆ ಧನ ವ್ಯಾಮೋಹವಾದಾಗ ದಯೆ, ಧರ್ಮ ಇಂತಹ ಮಾನವೀಯ ಗುಣಗಳು ಗಾಳಿಗೆ ತೂರಿಹೋಗಿ ವ್ಯಕ್ತಿ ಸಮಾಜಕ್ಕೆ ಕೆಟ್ಟವನಾಗುತ್ತಾನೆ. ಹಣವನ್ನು ಎಚ್ಚರಿಕೆಯಿಂದ ಬಳಸಬೇಕು. ಮಾನ, ಅಪಮಾನ ಎರಡಕ್ಕೂ ಅದು ಕಾರಣವಾಗುವ ಸಂಭವ ಹೆಚ್ಚಿರುತ್ತದೆ. ಅದು ಪರಮಾತ್ಮನನ್ನು ಕಾಣುವ ಕಣ್ಣಿಗೆ ತಡೆಗೋಡೆ. ಹಣವಿದ್ದಾಗ ಸಾಮಾಜಿಕ ಮೌಲ್ಯಗಳನ್ನು ಮರೆಯಬಾರದೆಂದು ದಾಸರು ಎಚ್ಚರಿಸಿದ್ದಾರೆ. ನಿತ್ಯ ಬಳಕೆಯಲ್ಲಿರುವ ಅಡುಗೆಯ ಪ್ರಸ್ತಾಪ ದಾಸರ ಕೀರ್ತನೆಗಳಲ್ಲಿ ಸೊಗಸಾಗಿ ಬಂದಿದೆ. ಅವು ವಿವಿಧ ಪ್ರತಿಮೆಗಳ ಮೂಲಕ ಆಧ್ಯಾತ್ಮಿಕ ಚಿಂತನೆಯ ಹಿನ್ನೆಲೆಯಲ್ಲಿ ಮೂಡಿಬಂದಿವೆ. ಪುರಂದರದಾಸರ ಕೀರ್ತನೆಯಲ್ಲಿ ಕಡುಬು ತಯಾರಿಸುವ ವಿಧಾನ ಸೊಗಸಾಗಿ ಮೂಡಿ ಬಂದಿದೆ.

ಹೂರಣ ಕಡುಬನು ಮಾಡಿದೆ ನಾ
ಕರಿದಾ ಹೂರಣ ಕಡುಬನು ಮಾಡಿದೆ ನಾ||ಪ||

ಸಾಧನವೆಂಬೋ ಚತುಷ್ಟಯದ ಕಲ್ಲಲಿ
ಸಂಶಯ ಜೀವನ ಗೋಧಿಯ ಬೀಸಿ
ನಾಭಿಯ ಅಷ್ಟಾಂಗದ ಹಸಿಕಲ್ಲಲಿ
ನಾಲ್ಕು ಶ್ರುತದ ಗುಂಡಿಲಿ ಕುಟ್ಟೀ
ರೋಮದ ಮಧ್ಯದಿ ಒಲೆಗಳ ಹೂಡಿ
ಈಡಿಲ್ಲದೆ ಅಗ್ನಿಯ ತುಂಬಿ
ಮದ ಅಷ್ಟವೆಂಬೊ ಕಾಷ್ಠವ ಹಚ್ಚಿ
ಇಡಾಪಿಂಗಳ ಕೊಳವೆಯ ಊದಿ
ಕಾರಣವೆಂಬೋ ಮಡಕೆಯೊಳಗೆ
ಕರುಣ ಕಡಲೇ ಬೇಳೆಯ ಹಾಕಿ
ಪೂರ್ವದಿ ಒಳಿತಾಗಿ ಕುದಿಸಿ
ಪ್ರೇಮ ಹೇಮದ ಸೌಟಲಿ ತೊಳಸಿ
ಗುರುಕರುಣವೆಂಬೋ ಬೆಲ್ಲವ ಹಾಕಿ
ಗುರುವ ನೆನೆಸುತ ಕಣಕವ ನೆಗಚಿ
ಪರಿಪರಿತೇಜದ ಹೂರಣತುಂಬಿ
ಪರಿಪರಿ ಪ್ರಣವದ ಪದವ ಪಾಡುತಲೆ
ವರದನೆಂಬೆಣ್ಣೆ ಬಾಂಡ್ಲೆಯೊಳಗೆ
ಕರಹಾಮೃತದ ತುಪ್ಪವ ಹಾಕಿ
ತಿರಿ ಹೊರಗೆ ಮುರಿಗೆಯ ಕರಿದು
ಪುರಂದರವಿಠಲಗೆ ಎಡೆಯ ಮಾಡಿದೆನು

ಪುರಂದರದಾಸರ ಈ ಕೀರ್ತನೆಯಲ್ಲಿ ಕಡುಬಿಗೆ ಹಾಕುವ ಒಂದೊಂದು ಪದಾರ್ಥವನ್ನು ಪ್ರಸ್ತಾಪಿಸಿ ದೇವರಿಗೆ ಮಾಡುವ ನೈವೇದ್ಯ ಹೇಗಿರಬೇಕೆಂಬುದನ್ನು ಸೊಗಸಾಗಿ ವಿವರಿಸಿದ್ದಾರೆ. ಪ್ರೀತಿ, ಭಕ್ತಿಯಿಂದ ಮಾಡಿದ ಅಡುಗೆ ದೇವರಿಗೆ ಸಲ್ಲುತ್ತದೆ. ಕಡುಬನ್ನು ತಯಾರಿಸುವ ವಿಧಾನದ ಮೂಲಕ ಭಕ್ತಿ ಮಾರ್ಗವನ್ನು ಪುರಂದರರು ಹೇಳಿದ್ದಾರೆ. ದಾಸ ಸಾಹಿತ್ಯದಲ್ಲಿ ಹೀಗೆ ಅಡುಗೆಯ ಪ್ರಸಂಗಗಳು ಧಾರಾಳವಾಗಿ ಕಂಡುಬರುತ್ತವೆ. ಹೆಚ್ಚಾಗಿ ಅಲ್ಲಿ ಕಂಡುಬರುವ ಅಡುಗೆಗಳು ಹಬ್ಬ ಹರಿದಿನಗಳಲ್ಲಿ ಮಾಡುವಂತಹವೇ ಆಗಿವೆ. ಏಕೆಂದರೆ ಅವು ಕೃಷ್ಣನಿಗೆ ನೈವೆಧ್ಯ ಮಾಡುವ ಅಡುಗೆಗಳಾಗಿವೆ. ದಾಸರು ನಿಸರ್ಗದ ವಿವಿಧ ವಸ್ತುಗಳೊಡನೆ ವ್ಯಕ್ತಿಯ ಸ್ವಭಾವವನ್ನು ಹೋಲಿಸಿದ್ದಾರೆ. ದಾಸರು ರೂಪಕ, ಉಪಮೆಗಳ ಮೂಲಕ ಮಾತ್ರವಲ್ಲದೆ ವ್ಯಂಗ್ಯ, ವಿಡಂಬನೆ, ಶ್ಲೇಷೆಯನ್ನೂ ಬಳಸುವುದರ ಮೂಲಕ ಮನುಷ್ಯ ಸ್ವಭಾವವನ್ನು ಚಿತ್ರಿಸಿದ್ದಾರೆ.

ಡೊಂಕು ಬಾಲದ ನಾಯಕರೆ ನೀವೇನೇನೂಟವ ಮಾಡಿದಿರಿ||ಪ||

ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ ||೧||

ಹುಗ್ಗಿ ಮಾಡೋ ಅಲ್ಲಿಗೆ ಹೋಗಿ
ತಗ್ಗಿ ಬಗ್ಗಿ ನೋಡುವಿರಿ
ಹುಗ್ಗಿ ಮಾಡೋ ಸೌಟಲಿ ಬಡಿದರೆ
ಕುಂಯಿ ಕುಂಯಿ ರಾಗವ ಮಾಡುವಿರಿ ||೨||

ಹಿರೇ ಬೀದಿಯಲ್ಲಿ ಓಡುವಿರಿ
ಕರೇ ಬೂದಿಯಲಿ ಹೊರಳುವಿರಿ
ಪುರಂದರ ವಿಠಲ ಈ ಪರಿ
ಮರೆತು ಸದಾ ಚರಿಸುವಿರಿ

ಬುದ್ಧಿಹೀನ ಸಾಮಾನ್ಯ ಜನರನ್ನು ನಾಯಿಯೊಂದಿಗೆ ಹೋಲಿಸಿ ಈ ಕೀರ್ತನೆಯನ್ನು ರಚಿಸಲಾಗಿದೆ. ಇಲ್ಲಿ ನಾಯಿಯನ್ನು ವ್ಯಂಗ್ಯ ಸೂಚಕವಾಗಿ ‘ನಾಯಕರು’ ಎಂದು ಸಂಬೋಧಿಸಲಾಗಿದೆ. ಅಧಿಕಾರ‍ದಿಂದ ಮತ್ತರಾಗಿ, ಅನ್ನಕ್ಕಾಗಿ ಬದುಕುವ ನಾಯಕರು ನಾಯಿಗಳೆಂದು ಪುರಂದರದಾಸರ ಅಭಿಪ್ರಾಯವಾಗಿದೆ. ಕೀರ್ತನೆಯಲ್ಲಿ ಬಳಕೆಯಾದ ಹಣಕಿ, ಇಣಕಿ, ತಗ್ಗಿ, ಬಗ್ಗಿ, ಕುಂಯಿ ಇಂತಹ ರೂಪಗಳು ಮನುಷ್ಯನ ಸಣ್ಣತನವನ್ನು ಹೇಳುತ್ತವೆ. ಪುರಂದರದಾಸರು ಶ್ಲೇಷೆಯನ್ನು ಸಮರ್ಥವಾಗಿ ಬಳಸುತ್ತಾರೆ.

ರಾಗಿ ತಂದಿರಾ ಭಿಕ್ಷಕ್ಕೆ ರಾಗಿ ತಂದಿರಾ
ಯೋಗ್ಯರಾಗಿ, ಭೋಗ್ಯರಾಗಿ, ಭಾಗ್ಯವಂತರಾಗಿ ನೀವು

ಇಲ್ಲಿ ‘ರಾಗಿ’ ಎಂಬುದು ಒಂದು ಧಾನ್ಯವಾಗಿ ಬಳಕೆಯಾಗುವುದರೊಂದಿಗೆ ಸಂಭೋಧನೆಯ ರೂಪವಾಗಿಯೂ ಬಳಕೆಯಾಗಿದೆ. ಅಲ್ಲದೆ ಯೋಗ್ಯ, ಒಳ್ಳೆಯ ಎಂಬರ್ಥದಲ್ಲಿ ಬಳಕೆಯಾಗಿದೆ.

ತುರುಕರು ಕರೆದರೆ ಉಣಬಹುದಣ್ಣ
ತುರುಕರು ಕರೆದರೆ ಅತಿ ಪುಣ್ಯವಯ್ಯ

ಇಲ್ಲಿ ‘ತುರುಕರು’ ಎನ್ನುವ ಪದ ಶ್ಲೇಷಾರ್ಥವನ್ನು ಧ್ವನಿಸುತ್ತದೆ. ತುರುಕರೆಂದರೆ ಮುಸಲ್ಮಾನರು, ತುರು-ಕರು ‘ಹಸುಕರು’ ಎಂದೂ ಹೊಳೆಯುತ್ತದೆ. ದಾಸರ ಕಾಲದಲ್ಲಿ ಬಳಕೆಯಲ್ಲಿದ್ದ ಕೆಲವು ಆಟಗಳ ಪ್ರಸ್ತಾಪವನ್ನು ಕೀರ್ತನೆಗಳಲ್ಲಿ ಕಾಣಬಹುದಾಗಿದೆ. ಆಟಗಳೂ ಸಹಿತ ಆಧ್ಯಾತ್ಮಿಕ ಹಿನ್ನೆಲೆಯಿಂದ ಮೂಡಿಬಂದಿದೆ.

ಪಗಡೆ ಚದುರಂಗಗಳಾಡುತ
ಹೊತ್ತು ಕಳೆವುದೇತಕೆ
-ಪುರಂದರದಾಸ
ಚೆಂಡುಬುಗುರಿ ಚಿಣ್ಣಿಗೋಲುಗಳಾಡುತ್ತ
ಪುಂಡರೀಕನು ಭಕುತಿಗೊಲಿದು ಬಂದುನಿಂದ
-ಗೋಪಾಸದಾಸ
ಚಿಣ್ಣೆಪೊಂಬಗರ್ಚಂಡು ಗುಸುಗುಸು ಕುದುಹಬ್ಬೆ
ಅಣಿಕಲ್ಲು ಹಳ್ಳಗಜಗ ಫಲ್ಲೆ
ಕಣ್ಣುಮುಚ್ಚಾಲೆ ಮರನೇರಾಟ ನೀರಾಟ
ಸಣ್ಣರೊಳಾಡಿ ಸೋಲಿಪೆನೆಂಬ ತವಕದಿ
-ಪ್ರಸನ್ನ ವೆಂಕಟದಾಸ

ಅಲ್ಲಿ ಬಳಕೆಗೊಂಡಿರುವ ಚೆಂಡು, ಬುಗುರಿ, ಚಿಣಿಕೋಲು, ಆಣ್ಣಿಕಲ್ಲು, ಮರನೇರಾಟ, ನೀರಾಟ ಇವು ಮಕ್ಕಳಿಗೆಲ್ಲ ಪ್ರಿಯವಾದ ಆಟಗಳು. ಇಂದಿಗೂ ಈ ಆಟಗಳು ಗ್ರಾಮೀಣ ಪ್ರದೇಶದಲ್ಲಿ ಬಳಕೆಯಲ್ಲಿವೆ. ದಾಸರ ಹಾಡುಗಳಲ್ಲಿ ಕೋಲುಪದಗಳು ಹಾಗೂ ಡೊಳ್ಳು ಪದಗಳ ಧಾಟಿಯನ್ನು ಗುರುತಿಸಬಹುದಾಗಿದೆ.

ಕೋಲು ಕಾಮನ ಗೆದ್ದು ಕೋಲು ಮಾಯ್ಗಳ ನೊದ್ದ
ಕೋಲು ಆನಂದ ಮುನಿಪಿಡಿದೇಹ ಕೋಲೆ||ಪ||
………………………………………………
……………………………………………..
ಹತ್ತವತಾರದಿ ಭಕ್ತ ಜನರ ಪೊರೆವ
ಮತ್ತಾವ ಕಾಲದಿ ರಕ್ಷಿಪಕೋಲಿ
ಮತ್ತಾವ ಕಾಲದಿ ರಕ್ಷಿಪ ಪ್ರಸನ್ವೆಂಕಟ
ಕರ್ತನ ನಂಬಿ ಸಖಿಯಾದ ಕೋಲೆ

ಪ್ರಸನ್ನ ವೆಂಕಟದಾಸರ ಮೇಲಿನ ಈ ಕೀರ್ತನೆಯು ಕೋಲಾಟದ ಧಾಟಿಯಲ್ಲಿದೆ. ಕೋಲಾಟದ ಹಾಡುಗಳಲ್ಲೂ ವಿಷ್ಣುವಿನ ದಶಾವತಾರದ ವರ್ಣನೆಯೇ ಮುಖ್ಯವಾಗಿದೆ.

ದೇವಿ ನಮ್ಮ ದೇವರು ಬಂದರು ಬನ್ನಿರೆ
ಕೆಂಗಣ್ಣ ಮೀನವಾಗಿ ನಮ್ಮರಂಗ
ಗುಂಗಾಡಿ ಸೋಮನ ಕೊಂದಾನ್ಮ್ಯ
ಗುಂಗಾಡಿ ಸೋಮನ ಕೊಂದು ವೇದವನು
ಬಂಗಾರದೊಡಲ ನಿಗಿತ್ತಾನ್ಮ್ಯ

ಕನಕದಾಸರ ಈ ಕೀರ್ತನೆಯು ಡೊಳ್ಳಿನ ಹಾಡಿನ ಧಾಟಿಯಲ್ಲಿದೆ. ಕನಕದಾಸರು ಕುರುಬ ಸಮುದಾಯಕ್ಕೆ ಸೀರಿರುವುದರಿಂದ ಅವರಿಗೆ ಡೊಳ್ಳು ಹಾಡಿನ ತಾಳಗತಿಗಳು ಚಿನ್ನಾಗಿ ಪರಿಚಯವಿದ್ದಿರಬೇಕು. ಆಡು ಮಾತಿನ ಶೈಲಿಯಲ್ಲಿರುವ ಈ ಕೀರ್ತನೆಯು ವಿಷ್ಣುವಿನ ದಶವತಾರದ ವರ್ಣನೆಯನ್ನೊಳಗೊಂಡಿದೆ. ಜನಪದ ಗೀತೆಗಳ ಪಲ್ಲವಿಗಳನ್ನು ತಮ್ಮ ಕೀರ್ತನೆಗಳ ಪಲ್ಲವಿಗಳಾಗಿಸಿಕೊಂಡಿದ್ದು ಜೊತೆಗೆ ದ್ವಿಪದಿ, ಚೌಪದಿ, ರಗಳೆ ಮುಂತಾದ ಛಂದಸ್ಸಿನ ರೂಪಗಳಲ್ಲಿ ಹಾಡನ್ನು ರಚಿಸಿದ್ದು ಕಂಡುಬರುತ್ತದೆ. ಅರ್ಥವಿಲ್ಲದ ಆಚರಣೆಗಳನ್ನು ದಾಸರು ನಿರಾಕರಿಸಿದ್ದಾರೆ.

ತನುವ ನೀರೊಳಗಿದ್ದಿ ಫಲವೇನು ತನ್ನ
ಮನದಲ್ಲಿ ದೃಢ ಭಕ್ತಿಯಿಲ್ಲದವ ಮನುಜನು
-ಪುರಂದರದಾಸ

ದಾಸರು ಆಚರಣೆಗಳನ್ನು ಮಾನವೀಯತೆಯೊಂದಿಗೆ, ಸಂಸ್ಕೃತಿಯೊಂದಿಗೆ ಬೆಸೆಯುವ ಪ್ರಯತ್ನವನ್ನು ಮಾಡಿದ್ದಾರೆ. ದಾನಧರ್ಮ ಮಾಡುವುದು, ನುಡಿದಂತೆ ನಡೆಯುವುದು, ಸಾಮಾಜಿಕ ನ್ಯಾಯವನ್ನು ಕಾಪಾಡುವುದು, ದುಷ್ಟರಸಂಗ ಬಿಡುವುದು, ಹಿರಿಯರನ್ನು ಗೌರವಿಸುವುದು ಇದು ದಾಸ ಸಾಹಿತ್ಯದ ದರ್ಶನವಾಗಿದೆ. ವ್ಯಕ್ತಿಗೆ ಜ್ಞಾನವು ಸಂಸ್ಕಾರದತ್ತ ಬರಬೇಕೆಂಬುದನ್ನು ದಾಸರು ಹಲವು ಉದಾಹರಣೆಗಳಿಂದ ಸ್ಪಷ್ಟಪಡಿಸಿದ್ದಾರೆ. ಅದು ಹೊರಗಿನಿಂದ ಆಮದಾಗಿ ಬರಬೇಕಾದ ವಸ್ತುವಲ್ಲ. ಒಳಗಿನಿಂದಲೇ ಸೃಷ್ಟಿಯಾಗುವ ವಸ್ತುವಾಗಿದೆ. ಭಕ್ತ ಆತ್ಮೀಯವಾಗಿ ದೇವರನ್ನು ವಿಡಂಬಿಸುತ್ತಾನೆ.

ಎನಗೂ ಆಣೆ ರಂಗ ನಿನಗೂ ಆಣೆ
ಎನಗೂ ನಿನಗೂ ಇಬ್ಬರಿಗೂ ಭಕ್ತರಾಣೆ
ನಿನ್ನಬಿಟ್ಟು ಅನ್ಯರ ಭಜಿಸಿದರೆನಗೆ ಆಣೆ ರಂಗ
ಎನ್ನನೀ ಕೈಬಿಟ್ಟು ಪೋದರೆ ನಿನಗೆ ಆಣೆ
ತನುಮನದನದಲಿ ಲಂಚಕನಾದರೆ ಎನಗೆ ಆಣೆ ರಂಗ
ಲೌಕಿಕ ಬಿಡಿಸದಿದ್ದರೆ ನಿನಗೆ ಆಣೆ

ಇಲ್ಲಿ ಭಕ್ತನ ಗಾಢವಾದ ಭಕ್ತಿ ಮತ್ತು ಪ್ರೀತಿಯಿದೆ. ಭಕ್ತನು ಸಂಪೂರ್ಣವಾಗಿ ದೇವರನ್ನು ನಂಬಿರುವನು. ಭಕ್ತ ಸಲುಗೆಯಿಂದ ತನ್ನ ಮನಸ್ಸಿನ ಇಂಗಿತಾರ್ಥವನ್ನು ಬಿಚ್ಚಿಟ್ಟಿದ್ದಾನೆ. ಇಂತಹ ರಚನೆಗಳಲ್ಲಿ ಚಲನಾತ್ಮಕತೆ, ರುಚಿಶುದ್ಧಿ, ಪರಾನುಕಂಪೆಯಿದೆ. ಮಾತು ಕೃತಿಗಳ ಅಂತರ ಇಲ್ಲಿ ಮಾತಿನ ಹೆಣಿಗೆಯಲ್ಲಿ ರೂಪಿತವಾಗಿದೆ. ದಾಸರ ಕೀರ್ತನೆಗಳಲ್ಲಿ ಸಾಂಪ್ರದಾಯಿಕ ತಟಕ್ಕನೆ ಹೊಚ್ಚ ಹೊಸ ಅನುಭವ ಲೋಕವೊಂದನ್ನು ಕಂಡುಬೆರಳು ಕಚ್ಚುವಂತಾಗುತ್ತದೆ. ಭಕ್ತನ ವಿರಹದ ಅತ್ಯುತ್ಕಟ ಸ್ಥಿತಿಯ ವರ್ಣನೆ ಇಲ್ಲಿದೆ. ದಾಸರ ಪದಗಳ ಮತ್ತೊಂದು ಶಬ್ದ ಚಮತ್ಕಾರವೆಂದರೆ ದೇಸಿಯ ಸೊಗಡುತನ. ಅರ್ಥಪೂರ್ಣವಾದ ನುಡಿಗಟ್ಟುಗಳನ್ನು ಬಳಸುತ್ತಾರೆ. ‘ನಗವನೆತ್ತು’, ‘ಕಾಳಿಂಗನಮರ್ದನ’, ‘ಪೂತನಿಸಂಹಾರ’, ‘ಬಿಲ್ಲುಹಬ್ಬ’, ‘ಕಲ್ಕ್ಯಾವತಾರ’ ಇಂತಹ ಪದಪುಂಜಗಳಲ್ಲಿ ಸಂಸ್ಕೃತಿ ವಿಶಿಷ್ಠ ಅಂಶಗಳು ಅಡಗಿವೆ. ‘ಎಳ್ಳುಮೊನೆ’, ‘ಪರಾನ್ನ’, ‘ಬೂಟಕತನ’, ‘ಕಾಳುದಾಸ’, ‘ಬೆಟ್ಟಎತ್ತು’, ಇಂತಹ ನುಡಿಗಟ್ಟುಗಳು ಭಾಷಾ ಬಳಕೆಯ ಸಂದರ್ಭಕ್ಕೆ ಅನುಸಾರವಾಗಿ ಅರ್ಥದ ವ್ಯಾಪ್ತಿಯನ್ನು ವಿಸ್ತರಿಸಿ ಕಾವ್ಯ ಸೌಂದರ್ಯವನ್ನು ಹೆಚ್ಚಿಸಿವೆ. ದಾಸರು ಬಳಸುವ ಪ್ರತಿಮೆಗಳೂ ದೇಸಿ ಮೂಲವಾಗಿವೆ. ವಿಜಯದಾಸರ ‘ವಿಠಲಾನಿನ್ನನಂಬಿದೆ’ ಎಂಬ ಕೀರ್ತನೆ ಪ್ರತಿಮೆಗಳ ಮೂಲಕ ಸಾಗಿದೆ.

ವಿಠಲಾ ನಿನ್ನನಂಬಿದೆ ಎನ್ನ ಕಾಯೋ
ಪುಟ್ಟುವದು ಬಿಡಿಸೊ ನಿನ್ನವರೊಳಗಿರಿಸೋ
ಬಹುಕಾಲ ಮಲಮೂತ್ರ ಡೊಳ್ಳಿನೊಳು ಬಿದ್ದು
ಹಲುಬಿದೆ ಒಂದಿಷ್ಟು ನೆಲೆಗಾಣದೆ ನಾನು
ಹಲವು ಮಾತೇನು ಎನಗೆ ಬಿಡದು
ಸಲಹಬೇಕಯ್ಯಾ ಸಮುದ್ರಶಯ್ಯಾ

ದೇವರು ಸೂತ್ರಧಾರ ಭಕ್ತ ಸೂತ್ರದ ಬೊಂಬೆ. ಭಕ್ತನ ತಪ್ಪುತಡೆಗಳಿಗೆ ದೇವರೆ ಹೊಣೆ ಎಂಬ ಅನಿಸಿಕೆ ಈ ಕೀರ್ತನೆಗಳಲ್ಲಿ ಅಡಗಿದೆ. ಅಸಾಯಕನಾದ ತನನ್ನು ದೇವರು ಕಾಯಬೇಕೆಂದು ದೀನಮೊರೆ ಇಲ್ಲಿದೆ. ಇಲ್ಲಿಯ ಪ್ರತಿಮೆಗಳು ಹೊಸ ಅರ್ಥಸಾಧ್ಯತೆಯನ್ನು ವಿಸ್ತರಿಸುತ್ತವೆ ಎಲ್ಲಿದ್ದರೇನು ಹರಿಗಲ್ಲದವನು ಎಂಬ ಪದ ಪ್ರತಿಮೆಗಳ ಮೂಲಕವಾಗಿಯೆ ಸಾಗುತ್ತದೆ.

ಎಲ್ಲಿದ್ದರೇನು ಹರಿಗಲ್ಲದವನು
ಸಲ್ಲುವದೆ ಸದ್ಗತಿಗೆ ಸಂತತವು ಜಪಿಸಿದರೆ ||ಪ||

ಕಪ್ಪೆ ಕಮಲದ ಬಳಿಯ ತಪ್ಪದಲೆ ಅನುಗಾಲ
ಇಪ್ಪುದೆ ಒಂದು ಅರೆಘಳಿಗೆ ಬಿಡದೆ
ಒಪ್ಪದಿಂದಲಿ ಅದರ ಪರಿಮಳದ ಸೊಬಗು
ಕಪ್ಪೆ ವಾಸನೆಗೊಂಡು ಹರುಷ ಬಿಡಬಲ್ಲುದೆ

ಇಂತಹ ಶಬ್ದ ಚಿತ್ರಗಳಿಂದ ಹೊಸ ಅರ್ಥವಂತಿಕೆ ಹೊಳೆಯುತ್ತದೆ. ಸಮಾಜ ವಿಮರ್ಶೆಯ ಸಂದರ್ಭಗಳಲ್ಲಿ ಅವರು ಉಪಯೋಗಿಸುವ ಉಪಮೇಯಗಳು ಹೆಚ್ಚು ಪ್ರಭಾವಶಾಲಿಯಾಗಿವೆ. ಪುರಂದರದಾಸರ ‘ಪಾಪಿಬಲ್ಲನೆ’? ಎಂಬ ಕೀರ್ತನೆ ನೋಡಿ.

ಪಾಪಿಬಲ್ಲನೆ ಪರರ ಸುಖ ದುಃಖವ
ಕೋಪಿ ಬಲ್ಲನೆ ಶಾಂತಿ ಸುಗುಣದ ಘನವ
ಕತ್ತೆ ಬಲ್ಲುದೆ ಹೊತ್ತ ಕತ್ತುರಿಯ ಪರಿಮಳವ
ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ
ಮೀನು ಬಲ್ಲುದೆ ನೀರು ಸವಳು ಸ್ವಾದೆಂಬುದು
ರೋಗಿ ಬಲ್ಲುದೆ ಮೃಷ್ಟಾನ್ನದ ರುಚಿ

ಮುಂತಾದವು ಅನುಭವಕ್ಕೆ, ಕಲ್ಪನೆಗೆ ನಿಲುಕುವಂತಹ ಸರಳ ದೃಷ್ಟಾಂತಗಳಾಗಿವೆ. ಅತಿ ಕಠಿಣವಾದ ಪ್ರಮೇಯಗಳನ್ನು ಸುಲಭವಾಗಿ ಅರ್ಥವಾಗುವಂತೆ ವಿವರಿಸುವುದು, ದಾಸರ ಕಾವ್ಯ ಪ್ರತಿಭಾ ಶಕ್ತಿಯ ದ್ಯೋತಕವಾಗಿದೆ. ಲೋಕಾನುಭವ ಸರಳ ಹಾಗೂ ನೇರಭಾಷೆ ಯಿಂದ ಅವರ ತ್ತತ್ವೋಪದೇಶ ರಸಾನುಭವವನ್ನುಂಟು ಮಾಡುತ್ತದೆ.

ಭಾವ ಭಾಷೆಗಳೆರಡು ಪಕ್ವವಾದಾಗ ನಿರೂಪಿಸುವ ಕಾವ್ಯ ತತ್ವ ಸ್ಪಷ್ಟವಾಗುತ್ತದೆ. ಹರಿದಾಸರು ಸಂಸ್ಕೃತ ಮತ್ತು ಕನ್ನಡ ಎರಡು ಭಾಷೆಗಳಲ್ಲಿ ಉದ್ದಾಮ ಪಂಡಿತರು. ವ್ಯಾಸಕೂಟದ ದಾಸರು ತಮ್ಮ ತತ್ವಗಳನ್ನು ಸಂಸ್ಕೃತ ಭೂಯಿಷ್ಠ ಶೈಲಿಯಲ್ಲಿ ನಿರೂಪಿಸಿದರು. ವ್ಯಾಸರಾಯರು ‘ಕ್ಷಿರಭಾರಹರಣಿ’, ‘ನಿನ್ನಲ್ಲಿ ಇರಿಸಿ ಕಾಯೋ’ ವಾದಿರಾಜರ ‘ಚಿತ್ತಗೊಟ್ಟುಕಾಯು’ಇಂತಹ ಕೀರ್ತನೆಗಳಲ್ಲಿ ಸಂಸ್ಕೃತ ಪದಗಳು ಅಧಿಕ, ದಾಸಕೂಟದ ಹರಿದಾಸರು (ಪುರಂದರದಾಸ, ಕನಕದಾಸ) ಸರಳ ಕನ್ನಡದಲ್ಲಿ ಹಾಡುಗಳನ್ನು ರಚಿಸಿದರು. ಅವುಗಳ ಶೈಲಿ ದೇಸಿಯ ಶೈಲಿ. ಅವು ಸರಳ ಮತ್ತು ನೇರವಾಗಿವೆ. ದಾಸರ ಮನಸ್ಸು ಸ್ವಭಾವತಃ ಚಿಂತನಪರವಾದದ್ದು ಆದ್ದರಿಂದ ಅವರು ಜೀವವನ್ನು ಯಾವ ರೀತಿ ವಿಶ್ಲೇಷಿಸಿ ನೋಡಿದ್ದಾರೆ ಎನ್ನುವುದು ತುಂಬ ಗಹನವಾದ ಸಂಗತಿ. ಅವರು ‘ಜೀವ’ವನ್ನು ಕುರಿತು ಮಾಡಿರುವ ವಿಜಯದಾಸರ ವ್ಯಾಖ್ಯಾನ ಹೀಗಿದೆ.

ಯಾಕೆ ಬಂದಿ ಜೀವ ಯಾಕೆ ಬಂದಿ
ಲೋಕದ ಅನುಭವ ಬೇಕಾಯಿತೆ ನಿನಗೆ ?||ಪ||

ಮೇರು ಪರ್ವತದಲ್ಲಿ ವಾರಣವಂತನಾಗಿ
ಮಾರುವಣನ ಪಾದ ಆರಾಧನೆ ಬಿಟ್ಟು
ಉಣ್ಣು ಉಣ್ಣು ಉಣ್ಣು ಮತ್ತೆ ಉಣ್ಣು
ಹೆಣ್ಣು ಹೊನ್ನು ಮಣ್ಣು ನಿನ್ನದೆತುಂಬಿ
ಆದದ್ದೆಲ್ಲ ಆಯಿತು ಹೋದ ಮಾತುಗಳ್ಯಾಕೆ
ಶ್ರೀವಿಜಯವಿಠಲನ್ನ ಆದರಿಸಿ ಸ್ಮರಿಸುತಿರು

ಈ ಭೂಮಿಯ ಮೇಲೆ ಹುಟ್ಟಿದ ಜೀವಕ್ಕೆ ವ್ಯಾಮೋಹ ತಪ್ಪಿದ್ದಲ್ಲವಷ್ಟೇ ಆದ್ದರಿಂದ ಈ ಸುಖವನ್ನು ಅನುಭವಿಸಿ ನೋಡು ಎಂದು ಮುಖ ತಿವಿಯುವಂತೆ ಮೂದಲಿಸಿ ನುಡಿಯುವರು. ಆದರೆ ಬಂದ ಮೇಲೆ ಪಾರಾಗುವ ಬಗೆಯಿಲ್ಲವೆ ಎಂಬ ಪ್ರಶ್ನೆ ಸಹಜವಾಗಿ ಉದಿಸುವುದು. ಅದಕ್ಕೂ ಸಹ ಉತ್ತವಿದ್ದೇ ಇದೆ. ದೈವ ಸ್ಮರಣೆಯೊಂದೇ ಅದಕ್ಕೆ ಸಾಧನ. ಮಾನವ ಜೀವನದ ಮೌಲ್ಯವನ್ನು ನಿಷ್ಕರ್ಷಿಸುವುದರಲ್ಲಿ ಜ್ಞಾನ-ಭಕ್ತಿ-ವೈರಾಗ್ಯಗಳ ಪಾತ್ರ ಬಹುಹಿರಿವು. ಇವುಗಳ ಬಗ್ಗೆ ದಾಸರು ಅಮೂಲ್ಯವಾದ ತಿಳಿವಳಿಕೆ ನೀಡಿರುವ ಉತ್ತರವಿದು.

ಏನಾದರೇನು ಮೋಕ್ಷವಿಲ್ಲ ಜ್ಞಾನವಿಲ್ಲದೆ
ವೇದ ಓದಿದರೇನು ಶಾಸ್ತ್ರ ನೋಡಿದರೇನು
ಕಾದಿ ಕಾದಾಡಿ ಗೆದ್ದರೇನು, ಜ್ಞಾನವಿಲ್ಲದೆ
ಕಾಶಿಗೆ ಹೋದರೇನು ಕಾನನ ಸೇರಿದರೇನು
ಕಾಶಿ ಪೀತಾಂಬರ ಉಟ್ಟರೇನು, ಜ್ಞಾನವಿಲ್ಲದೆ
ಜಪತಪ ಮಾಡಲೇನು ಜಾಣತನ ಮೆರೆದರೇನು
ವಿಜಯ ವಿಠಲನ ಸಾರಿದರೇನು ಜ್ಞಾನವಿಲ್ಲದೆ

ಕೇವಲ ವಿಷಯ ಸಂಗ್ರಹವಾಗಲಿ, ಶುಷ್ಕ ಆಚಾರವಾಗಲಿ ಜ್ಞಾನವಾಗಬಾರದೆಂಬ ತಿಳಿವಳಿಕೆ ಬಹುಗ್ರಾಹ್ಯವಾಗಿದೆ. ಶಾಸ್ತ್ರಜ್ಞಾನವನ್ನು ಹೃದ್ಗತ ಮಾಡಿಕೊಂಡ ದಾಸರು ಹೀಗೆ ಹೇಳಿರುವುದು ಸೂಕ್ತವೇ ಸರಿ. ವಿಜಯದಾಸರ ಜ್ಞಾನದ ಶಾಖೆಗೆ ತಕ್ಕಂತೆ ಅವರ ಸುಳಾದಿಗಳು ಅನುಭವ ಪೂರ್ಣವಾಗಿವೆ. ಕರ್ಮದ ಮರ್ಮವನ್ನು ಸಹ ವಿಜಯದಾಸರು ಅಷ್ಟೇ ನೇರವಾಗಿ ಮಂಡಿಸಿದ್ದಾರೆ.

ಎಲೆ ಮನವೆ ನಿತ್ಯ ಮಲವ ತೊಳೆಯದಲೆ
ಹಲವು ಕರ್ಮಗಳು ಒಲಿದು ಮಾಡಿದರೇನು
ಸುಲಭದ ಸದ್ಗತಿಗೆ ನೆಲೆಯಾಗುವುದೇನು ?
ತುಳಿದು ಈ ಪರಿಯಲಿ ಇಳೆಯೊಳಗೆ ಕರ್ಮಾ
ವಳಿಗಳ ಧರಿಸಿ ತೊಟಲಬೇಕಲ್ಲದೆ
ಮಲಿನ ಹೋಗದು ಮನವೆ
ಎಳೆ ಭಕುತಿಯಿಂದ ವಿಜಯವಿಠಲ ಹರಿಯ
ಜಲಜ ಪಾದವ ನಂಬೆ ಕರ್ಮವುಯಾತಕ್ಕೆ

ಪರಿಶುದ್ದವಾದ ಮನಸ್ಸು ಹಾಗೂ ಸ್ವಚ್ಚವಾದ ಭಕ್ತಿಗಳಿದ್ದಲ್ಲಿ ಮಾತ್ರವೇ ನಾವು ಮಾಡುವ ಕರ್ಮಾದಿಗಳು ಫಲದಾಯಕವೆಂಬ ತತ್ವವೇ ಇಲ್ಲಿಯ ತಿರುಳು. ಮನಸ್ಸಿನ ಮಾಲಿನ್ಯವನ್ನು ಹೋಗಲಾಡಿಸುವ ಸಾಧನವೆಂದರೆ ಭಕ್ತಿ. ಅಹಂಕಾರ ನಿರಸನವೇ ಭಕ್ತಿಯ ತಳಹದಿ. ಮಾನವನ ಆಗು ಹೋಗುಗಳಿಗೆಲ್ಲ ಅವನ ಮನಸ್ಸೇ ಕಾರಣ. ಅದರ ನೈಜಸ್ವಭಾವವನ್ನು ವಿಜಯದಾಸರು ಚೆನ್ನಾಗಿ ಬಲ್ಲರು.

ಮನ್ನಸ್ಸ ನಿಲ್ಲಿಸುವುದು ಬಹಳ ಕಷ್ಟ
ಗುಣಿಸುವುದು ನಿಮ್ಮೊಳಗೆ ನೀವೇ ನೆಲೆ ಬಲ್ಲವರು
ಮುರಿದೋಡಿಬರುವ ರಣರಂಗ ನಿಲ್ಲಿಸಬಹುದು
ಹರಿಯುತಿಹ ನದಿಗಳನು ತಿರುಗಿಸಲಿಬಹುದು
ಕರಿಸೊಕ್ಕಿ ಬರುತಿರಲು ತಡೆದು ನಿಲ್ಲಿಸಬಹುದು
ಮರುಳ ಮನನಿಲ್ಲಿಸುವುದು ಸರರಿಗಳವಲ್ಲ

ಇಂತಹ ಚಪಲ ಚಿತ್ತಕ್ಕೆ ಎಚ್ಚರಿಕೆ ಅಗತ್ಯವಷ್ಟೆ. ಆ ಬಗ್ಗೆಯೂ ದಾಸರು ಸಲಹೆ ಕೊಟ್ಟಿದ್ದಾರೆ. ಅವರು ಕೊಡುವ ಶಬ್ದಚಿತ್ರಗಳು ಗಮನಾರ್ಹವಾಗಿವೆ.

ಎಚ್ಚತ್ತು ಇರು ಕಂಡ್ಯ ಮನವೇ ನಮ್ಮ
ಅಚ್ಚುತನಂಫ್ರಿಯನೆನೆ ಕಂಡ್ಯ ಮನವೆ
ಹಾಳು ಹರಟೆಗೆ ಹೋಗಬೇಡ
ಕಾಲವ್ಯರ್ಥ ಕಳೆಯಬೇಡ
ನಾನು ಎಂಬುದು ಬಿಡು ಕಂಡ್ಯ. ನಮ್ಮ
ಪ್ರಾರಭ್ದಕರ್ಮಕ್ಕೆ ಮನ ಸೋಲಬೇಡ

ಪ್ರತಿಯೊಂದು ಚರಾಚರವಸ್ತುವಿನಲ್ಲಿಯೂ ಸ್ವಾಮಿಯ ದರ್ಶನವಾಗುತ್ತದೆ. ವಿಜಯದಾಸರಿಗಂತೂ ಕಲ್ಲು ಸಹ ಚಿಂತನಪರವಾದ ವಸ್ತು. ಮುಕ್ತ ಮನಸ್ಸಿನಿಂದ ಅದನ್ನು ಕೊಂಡಾಡಿದ್ದಾರೆ

ಕಲ್ಲಿನಿಂದ ಸರ್ವಫಲ ಬಾಹುದೊ
ಕಲ್ಲು ಭಜಿಸಿದರೆ ಕೈವಲ್ಯ ತೋರುವುದೊ
ಕಲ್ಲು ಕಡೆಯುತ್ತಿರಲು ಅಮೃತವೇ ಪುಟ್ಟಿತು
ಕಲ್ಲು ಎತ್ತಲು ಮಳೆಯೊಳೆಲ್ಲವರು ಉಳಿದರು
ಕಲ್ಲು ಹರಿಪಾದನು ಸೋಕೆ ಹೆಣ್ಣಾಯಿತು
ಕಲ್ಲು ಲಂಕೆಗೆ ಮಾರ್ಗ ಚೆನ್ನಾಗಿ ಶೋಭಿಸಿತು

ಪುಂಖಾನುಪುಂಖವಾದ ಇಂತಹ ಪ್ರಸಂಗಗಳಿಂದ ಸರ್ವಸಾಮಾನ್ಯ ವಸ್ತುವಾದ ಶಿಲಿಯಾವ ನೆಲೆಯನ್ನು ಮುಟ್ಟಬಲ್ಲದೆಂಬುದನ್ನು ಕಂಡರೆ ವಿಜಯದಾಸರ ವಿಚಾರ ಸರಣಿಗೆ ತಲೆದೂಗುವಂತಾಗುತ್ತದೆ. ಇಂತಹ ಜಟಿಲವಾದ ವಿಷಯವನ್ನು ಸುಲಭ ಗ್ರಾಹ್ಯವಾಗುವಂತೆ ಹೇಳುವಲ್ಲಿ ವಿಜಯದಾಸರ ನಿಶಿತವಾದ ಮತಿಯಷ್ಟು ಪ್ರಾಧಾನ್ಯವೋ ಹಾಗೆಯೆ ಸಂದರ್ಭೋಚಿತವಾಗಿ ಅವರು ಬಳಸುವ ಶೈಲಿಯೂ ಅಷ್ಟೆ ಮುಖ್ಯವಾಗಿದೆ. ಉಪಮೆಯ ಗಳೆಂದರೆ ಅವರಿಗೆ ತುಂಬ ಪ್ರೀತಿ. ವಿಷಯ ಸಮರ್ಥನೆಗಾಗಿ ಉಪಮೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ನಂಬಿನೆಚ್ಚದಿರು ನರಲೋಕ ಸುಖವೆಂಬ ಅಂಬಲಿ ಪರಮಾನ್ನ
ಹಂಬಲಿಸುವುದು ಹರಿಲೋಕಾನಂದವೆಂಬ ಪಿಯೂಷ ಪಾನ ||ಪ||
ದುರುಳ ಜನರ ಸಂಗವೆಂಬುದು ಎಂದಿಗೂ ನೊಣ ಬೆರಸಿದ ಊಟ
ಪರಮ ಭಾಗವತರ ಪದಸಂಗವೆಂಬುದು ಮಸ್ತಕದ ಮುಕುಟ
ಮರೆ ಮೋಸಗೊಳಿಸುವ ಸತಿಸುತರೆಂಬೋದು ಕೇವಲ ಯಮಕಾಟ
ಪರತತ್ವವಾದ ಶ್ರೀಹರಿಯ ತಿಳಿವುದೆ ವೈಕುಂಠಕೆ ಓಟ

ಇದು ಕೀರ್ತನೆಯ ಧಾಟಿಯಾದರೆ, ಉಗಾಭೋಗದ ವಿನ್ಯಾಸ ಹೀಗಿದೆ:

ಬಿಂಬ ಪೊಳೆಯುತಿರೆ ಡಂಬ ದಂಡನೆಯಾಕೆ
ತುಂಬಿದೂಟವಿರೆ ತಿರುಪೆಯಾಕೆ
ಕೊಂಬೆಯುಳ್ಳ ಹಣ್ಣು ತಾನೇ ಬೀಳುತ್ತಲಿರಲು
ಕುಂಬಿಣಿಯಲಿ ಕೆಡಹಿ ಫಲ ಮೆಲುವರೆ
ಹಂಬಲಗೊಳಸಲ್ಲ ಕರ್ಮವೆಂಬುದು ತೊರೆದು
ಜ್ಞಾನಾಂಬುಧಿಯೊಳಗಿರು, ನಂಬಿ ಹರಿಯ ಸಾರು
ಗಂಭೀರ ಪುರುಷ ಶ್ರೀ ಹರಿವಿಜಯ ವಿಠ್ಠಲರೇಯನ
ಬಿಂಬ ನೋಡಿದವರಿಗೆ ಇಂಬು ಉಂಟು ವೈಕುಂಠದಲಿ

ಜೀವವು ಪರಮಾತ್ಮನ ಕೈಗೊಂಬೆಯಂತೆ ಇರುವುದು ಈ ತತ್ವವನ್ನು ಇಲ್ಲಿ ಹಲವಾರು ಹೋಲಿಕೆಗಳ ಮೂಲಕ ತಿಳಿಯಪಡಿಸಿದ್ದಾರೆ. ಈ ಸಾದೃಶ್ಯಭಂಡಾರವನ್ನು ಕಂಡರೆ ದಾಸರ ಲೋಕಾನುಭವ ಎಷ್ಟು ವಿಶಾಲವಾದುದು ಎನಿಸುತ್ತದೆ. ಅವರು ಬದುಕಿನ ಯಾವುದಾದರೊಂದು ಘಟನೆಯನ್ನು ತಮ್ಮ ರಚನೆಗಳಲ್ಲಿ ಸ್ಮರಿಸುವ ರೀತಿ ಮೇಲ್ಮಟ್ಟದ್ದು. ಲೋಕ ಲೋಕಾಂತರದ ವಿಷಯಗಳನ್ನು ಲೋಕದ ಸಮಸ್ತ ಮಸ್ತುಗಳ ಸಂಕೇತಗಳಿಂದ ತುಂಬಿ ಬೆಡಗಿಗೆ ತುಂಬ ಹತ್ತಿರವಾದ ಒಂದು ರಮ್ಯ ವಿಸ್ಮಯಕಾರಿ ಲೋಕವನ್ನು ದಾಸರು ನಮ್ಮೆದುರು ನಿಲ್ಲಿಸುತ್ತಾರೆ. ಪರಿಚಿತ ಪದಗಳನ್ನೇ ಬಳಸಿ ತಾವು ಹೇಳಬೇಕಾದ ಸಂಗತಿಗಳನ್ನು ನೇರವಾಗಿ ನಮ್ಮ ಮನಸ್ಸಿಗೆ ನಾಟುವಂತೆ ಸ್ಪಷ್ಟಪಡಿಸುತ್ತಾರೆ. ಉದಾತ್ತ ಧೋರಣೆಯನ್ನು ತಾಳಿದ ದಾಸರು ಲೋಕಸತ್ಯ ಮತ್ತು ಪುರಾಣ ಸತ್ಯಗಳ ಮಿಶ್ರಣದಿಂದ ಕಾವ್ಯ ಸತ್ಯವು ರೂಪುಗೊಳ್ಳುವ ಬಗೆಯನ್ನು ಮನಗಾಣಿಸಿದ್ದಾರೆ. ನೂರಾರು ಸಾಮಾಜಿಕ ಸಂದರ್ಭಗಳ ಹಿನ್ನೆಲೆಯಲ್ಲಿ ಅವರು ಎತ್ತಿಕೊಂಡು ಪದಪುಂಜಗಳು, ನುಡಿಗಟ್ಟುಗಳು ಅವರ ರಚನೆಗಳ ಒಡಲಲ್ಲಿ ಚೆನ್ನಾಗಿ ಬೆರೆತು ಕೀರ್ತನೆಗಳ ಅರ್ಥವಲಯವನ್ನು ಹಿಗ್ಗಿಸಿವೆ. ದಾಸರು ಸಮರ್ಪಣಾಭಾವದಿಂದ ಕೇವಲ ಜ್ಞಾನವನ್ನು ಬಯಸುತ್ತಾರೆ. ಅದನ್ನು ಗಮನಿಸಿದಾಗ ದಾಸರದು ನಿಜವಾಗಿಯೂ ನಿಷ್ಕಾಮ ಭಕ್ತಿಯೇ ಆಗಿದೆ. ಆದ್ದರಿಂದ ಅವರು ಭಗವಂತನಲ್ಲಿ ಬೇಡಿಕೊಳ್ಳುವುದರ ವೈರಾಗ್ಯವನ್ನು ಗೋಪಾಲದಾಸರ ಕೀರ್ತನೆಯಿಂದ ನೋಡಬಹುದು.

ಏನು ಬೇಡಲೋ ನಿನ್ನ ಬಳಿಗೆ ಬಂದು ||ಪ||
ನೀನಿತ್ತ ಸೌಭಾಗ್ಯ ನಿಬಿಡವಾಗಿದೆ ನನಗೆ ||ಅ.ಪ||

ಜನನಿಯನು ಕೊಡು ಎಂದು ಜಗದೀಶ ಬೇಡುವನೆ
ಜನನಿ ಏನಿತ್ತಳಾ ಧ್ರುವರಾಯನಿಗೆ
ಜನಕನಾ ಕೊಡು ಎಂದು ಜಯವಂತ ಬೇಡುವನೆ
ಜನಕನೇನಿತ್ತನಾ ಪ್ರಹ್ಲಾದಗೆ ||೧||

ಅನುಜನಾ ಕೊಡು ಎಂದು ಅತಿಯಶದಿ ಬೇಡುವನೆ
ಅನುಜನೇನಿತ್ತನೈ ಆ ವಾಲಿಗೆ
ಧನವನ್ನೇ ಕೊಡು ಎಂದು ದೈನ್ಯದಲ್ಲಿ ಬೇಡುವನೆ
ಧನಗಳಿಸಿದೆ ಸುಹೋಧನನೇನಾದ ಕೊನೆಗೆ||೨||

ಸತಿಯಳ ಕೊಡು ಎಂದು ಮತಿವಂತ ಬೇಡುವನೆ
ಸತಿಯಿಂದ ದ್ಯುನಾಮಕನೇನಾದನಯ್ಯ
ಸುತರನೇ ಕೊಡು ಎಂದು ಸತತದಲಿ ಬೇಡುವನೆ
ಸುತರಿಂದ ಧೃತರಾಷ್ಟ್ರಗತಿ ಏನು ಕಂಡ||೩||

ಬಂಧುಗಳ ಕೊಡು ಎಂದು ಬಂದದಲಿ ಬೇಡುವನೆ
ಬಂಧುಗಳ ಏನಿತ್ತಿರಾ ಗಜರಾಜಗೆ
ಅಂದಣವನೇರುವ ಭಾಗ್ಯವನು ಬೇಡುವನೆ
ಅಂದಣೇರಿದ ನಹುಷ ಏನಾದ ಕೊನೆಗೆ ||೪||

ಬೇಡುವೆನೊ ನಾನೊಂದು ಬೇಡತಕ್ಕುದ ದೇವ
ನೀಡೆಂನೆಂಬುದು ನಿನ್ನ ಮನದೊಳಿತ್ತೆ
ಮೂಡಲಾದ್ರೀಶ ಗೋಪಾಲ ವಿಠ್ಠಲ ರೇಯ
ಬೇಡದಂದದಿ ಪಾರು ಮಾಡಾಯ್ಯ ಧೊರೆಯೆ||೫||

ಗೋಪಾಲದಾಸರು ಪೌರಾಣಿಕ ದೃಷ್ಟಾಂತಗಳಿಂದ ಐಹಿಕ ಭೋಗ ಭಾಗ್ಯಗಳು ಸದ್ಗತಿಯನ್ನು ಕೊಡುವೆಂದು ಮನಗಾಣಿಸಿ, ನೀಡೆನೆಂಬವನಿಗೇ ಬೇಡದಂದದಿ ಪಾರು ಮಾಡೆಂದು ಬೇಡತಕ್ಕುದು ಬಹುಮನೋಹರವಾಗಿದೆ. ಇಂದ್ರಿಯ ನಿಗ್ರಹ ತುಂಬ ಕಷ್ಟವೆಂದು ಬಗೆದು ಗೋಪಾಲದಾಸರು ‘ಭಾಂತನಾದೆನೆಲ್ಲಾ’ ಎಂದು ಪಶ್ಚಾತಾಪ ಪಟ್ಟು, ಭವರೋಗ ವೈದ್ಯನಿಗೆ ಹೀಗೆ ಭಿನ್ನಹ ಮಾಡುತ್ತಾರೆ.

ಆವರೋಗವೊ ಎನಗೆ ದೇವ ಧನ್ವಂತ್ರಿ ||ಪ||
ಸಾವಧಾನದಿ ಕೈಯನೀ ಪಿಡಿದು ನೋಡಯ್ಯ ||ಅ.ಪ||

ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ
ಹರಿಕೀರ್ತನೆಯು ಕೇಳಿಸದೆನ್ನ ಕಿವಿಗೆ
ಹರಿಮಂತ್ರ ಸ್ತೋತ್ರಬಾರದು ಎನ್ನ ನಾಲಿಗೆಗೆ
ಹರಿಪ್ರಸಾದವು ಎನಗೆ ಸವಿಯಾಗದೈಯ ||೧||

ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು
ಹರಿಗುರುಗಳಂಘ್ರಿಗೆ ಶಿರಬಾಗದು
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು
ಹರಿಯಾತ್ರೆಗೆನ್ನ ಕಾಲೇಳದಯ್ಯ||೨||

ಅನಾಥ ಬಂಧು ಗೋಪಾಲ ವಿಠ್ಠಲರೇಯ
ಎನ್ನ ಭಾಗದ ವೈದ್ಯನೀನೆಯಾದಿ
ಅನಾದಿ ಕಾಲದ ಭವರೋಗ ಕಳೆಯಯ್ಯ
ನಾನೆಂದಿಗೂ ಮರೆಯ ನೀ ಮಾಡಿದುಪಕಾರ ||೩||