ಅವನಿಂದಲ್ಲದೆ ಈ ರೋಗ ಗುಣವಾಗದು. ಜೀವರಿಗೆ ದತ್ತ ಸ್ವಾತಂತ್ರ್ಯವಿದ್ದರೂ ಇಂದ್ರಿಯಗಳ ವ್ಯಾಪಾರ ಹಾಗೂ ಅರಿಷಡ್ ವರ್ಗಗಳು ಪ್ರಬಲವಾಗಿರುವುದರಿಂದ ಈ ಶರೀರವೆಂಬ ದುರ್ಗವನ್ನು ಅಂಕಿತದಲ್ಲಿರಿಸಿಕೊಂಡು ಆಳುವದಕ್ಕಾವುದಿಲ್ಲ. ಆದ್ದರಿಂದಲೇ ದಾಸರು ‘ಈ ಪರಿಯ ಅಧಿಕಾರವನು ಒಲ್ಲೆ ನಾನು’ | ಎಂದು ಪರಿಪರಿಯಾಗಿ ತನ್ನ ಆರಾಧ್ಯದೈವ ಗೋಪಾಲವಿಠ್ಠಲನಲ್ಲಿ ಪ್ರಾರ್ಥಿಸಿದ್ದಾರೆ. ಹರಿಭಕ್ತಿ ತತ್ವವನ್ನು ಸಾಮಾನ್ಯರಿಗೂ ತಿಳಿಸಬೇಕೆಂಬ ಅಪೇಕ್ಷೆಯಿಂದ ಜಗನ್ನಾಥದಾಸರು ತಮ್ಮ ಕೃತಿಗಾಗಿ ಜಾನಪದ ಮಟ್ಟುವಾದ ತ್ರಿಪದಿಯನ್ನು ಬಳಸಿದ್ದಾರೆ. ‘ಸುವ್ವಾಲಿ’ ಎಂಬುದು ಕನ್ನಡ ನಾಡಿನ ಹೆಣ್ಣು ಮಕ್ಕಳ ಒನಕೆ ಹಾಡು. ಈ ಹೆಸರನ್ನು ಬಳಸಿದುದನ್ನು ನೋಡಿದರೆ ದ್ವೈತ ತತ್ತ್ವಾನು ಸಾರಿಯಾದ ಹರಿಭಕ್ತಿಯನ್ನು ಮಹಿಳೆಯರಲ್ಲಿ ಹರಡಬೇಕೆಂಬ ಉದ್ದೇಶ ದಾಸರಿಗಿದೆ. ಸುವ್ವಾಲಿಯ ಒಂದೊಂದು ತ್ರಿಪದಿಯೂ ಭಕ್ತಿ ಕುಸುಮದ ಮಂಜರಿಯಾಗಿದೆ. ಇನ್ನು ಮಡಿಮಡಿಯೆನ್ನುವ ಅತಿವಾದಿಗಳನ್ನು ಕುರಿತು ದಾಸರು ಮಾತನಾಡಿದುದು ಮಾರ್ಮಿಕವಾಗಿದೆ.

ಜಲದೊಳು ಮಿಂದು ನಿರ್ಮಲರಾದೆವೆಂದು ತ
ಮ್ಮೊಳು ತಾವೆ ಹಿಗ್ಗಿ ಸುಖಿಸುವರು ಸುಖಿಸುವರು | ಪರಮಮಂ
ಗಳ ಮೂರ್ತಿ ನಿನ್ನ ನೆನೆಯಿದೆ||೧||

ಜಡಭೂತ ಜಲಜನರ ಮಡಿ ಮಾಡಬಲ್ಲುದೆ ?
ಜಡಧಿ ಮಂದಿರನ ಶುಭನಾಮ ಶುಭನಾಮ ಮೈಲಿಗೆಯ
ಕೆಡಿಸಿ ಮಂಗಳವ ಕೊಡದೇನೋ ?

ಓಡಿಹೋಗುವ ಮಡಿಯ ಮಾಡಿ ದಣಿಯಲಿ ಬೇಡ
ನೋಡು ಸರ್ವತ್ರ ಹರಿರೂಪ | ಹರಿರೂಪ ನೋಡಿ ಕೊಂ
ಡಾಡು ಮನವುಬ್ಬಿ ಸುಖಿಸುತ್ತ ||೨||

ಹೀಗೆಯೇ ಮಾನವತೆಯ ಸಿದ್ದಿಯ ವಿಚಾರಗಳನ್ನು ನಿರೂಪಿಸುವ ಅನೆಕ ತ್ರಿಪದಿಗಳನ್ನು ದಾಸರು ರಚಿಸಿದ್ದಾರೆ. ಸ್ವರ್ಗ ನರಕಗಳ ಬಗೆಗಿರುವ ಜಗನ್ನಾಥದಾಸರ ವಾಸ್ತವ ವಿಚಾರವಿದು.

ನರಕ ಸ್ವರ್ಗಗಳೆಂಬವೆರಡು ಇಲ್ಲಿಹವು ವಿ
ಸ್ಮರಣೆಯ ನರಕ ಸ್ಮೃತಿ ಸ್ವರ್ಗ ಸ್ಮೃತಿ | ಸ್ವರ್ಗವಿರೆ ಬಾಹ್ಯ
ನರಕ ಭಯಕಂಜಿ ಎಂದೆಂದೂ

ಕೀರ್ತನೆಗಳು ಹಾಗೂ ಹರಿಕಥಾಮೃತಸಾರ‍ಇವುಗಳಲ್ಲಿ ಕಾಣುವ ಜಗನ್ನಾಥ ದಾಸರ ಸಾಹಿತ್ಯಕ ವ್ಯಕ್ತಿತ್ವಕ್ಕಿಂತ ‘ತತ್ವಸುವ್ವಾಲಿ’ಯಲ್ಲಿಯ ಸಾಹಿತ್ಯಕ ಸ್ವರೂಪ ಬೇರೆ ಬಗೆಯದಾಗಿಯೆ ಕಾಣುವುದು. ಎರಡರ ಹೊರ ರೂಪಗಳು ಬೇರೆ ಬಗೆಯಾಗಿ ಕಂಡರೂ ಅಂತಸ್ಸತ್ತ್ವ ಮಾತ್ರ ಒಂದೆ ಬಗೆಯದು. ಎರಡರಲ್ಲಿಯೂ ಒಂದೇ ಭಕ್ತಿಯ ಸ್ವರೂಪವಿದೆ. ಸಮಾಜ ಜೀವನವನ್ನು ಕುರಿತಾದ ಮೋಹನದಾಸರ ಕೀರ್ತನೆಗಳಲ್ಲಿ ವೈರಾಗ್ಯದ ತಿಳಿವಳಿಕೆಯು ಸಂಸಾರದ ಸತ್ಯಚಿತ್ರದ ಹಿನ್ನೆಲೆಯಲ್ಲಿ ಮೂಡಿ ಅವು ಸಹೃದಯರ ಎದೆಯಲ್ಲಿ ಆಧ್ಯಾತ್ಮದ ಒಲವನ್ನು ಚಿಮ್ಮಿಸುತ್ತದೆ. ಅಂತಹ ರಚನೆಗಳ ಪರಿಣಾಮವು ಅಷ್ಟಕ್ಕೆ ನಿಲ್ಲದೆ ಜೀವನಿಷ್ಠೆಯನ್ನು ಸಂಪಾದಿಸಿಕೊಟ್ಟು ಅನೀತಿ, ಡಂಭಾಚಾರಗಳನ್ನು ಟೀಕಿಸಿ, ಭಕ್ತಿಯ ಮಹಿಮೆಯನ್ನು ಶಾಶ್ವತಗೊಳಿಸುತ್ತವೆ. ಅಂತಹ ಒಂದು ಕೀರ್ತನೆ ಹೀಗಿದೆ.

ಡಂಭಕದ ಭಕುತಿಯನು ಬಿಡು ಕಂಡ್ಯಾಮನವೆ||ಪ||
ಅಂಬುಜಾಕ್ಷನು ಒಲಿಯ ಅನಂತ ಕಾಲಕ್ಕು ||ಅ.ಪ||

ಬಹಿರ ಅಂಗಡಿ ಹೂಡಿ ಜನರ ವಂಚಿಸಿದರೆ
ಐಹಿಕ ಫಲವಲ್ಲದೆ ಮೋಕ್ಷವುಂಟೆ
ವಿಹಿತಾವಿಹಿತವ ತಿಳಿದು ಸತ್ಕರ್ಮ ಕಿಂಚಿತು ಮಾಡೆ
ದಹಿಸುವುದು ಅಘುರಾಶಿ ಅಹಿಶಾಯಿ ಒಲಿವ||೧||

ಎಂಬ ಮಾತುಗಳು ನ್ಯಾಯ, ನಿಷ್ಠುರತೆಗಳು ಮಾನವನ ಸಾಧನಕ್ಕೆ ಬೇಕಾಗುವ ಮುಖ್ಯ ಸಾಧನಗಳೆಂದೂ ಅವಿಲ್ಲದ ಬದುಕು ಸುಖವಾಗಿದ್ದರೂ ಅದು ಶಾಶ್ವತ ಸುಖ ನೀಡಲಾರದೆಂದು ಸಾರುತ್ತವೆ. ದಾಸರು ಮುಂದೆ ಸಾಗಿ

ವರವೈಷ್ಣವರು ಬಂದು ನಿಲಲು ವಂದಿಸಲು
ಹರಿಪೂಜೆ ಮಾಳ್ವೆನೆಂದು ಕುಳಿತುಕೊಂಬೆ
ಅರಿಯದ ಊರೊಳಗೆ ಅಗಸರ ಮಾಳಿಯೇ
ಹಿರಿಯ ಮುತ್ತೈದೆಯು ಎಂದು ಕರೆಸುವಂತೆ||೨||

ಎಂದೂ ಸಮಾಜವನ್ನು ವಿಮರ್ಶಿಸುವಾಗ ಅವರ ಲಕ್ಕಣಿಕೆ ಬಹುತೀಕ್ಷ್ಣವಾಗಿದೆ. ಮಾತುಗಳೂ ಶಕ್ತಿಯುತವಾಗಿವೆ. ಕಲ್ಲಿನ ಮೂರ್ತಿಯು ದೇವರಲ್ಲ. ಅಂತಹ ಮೂರ್ತಿಯು ಸಾಧನೆಗೆ ಸಾಕ್ಷಾತ್ಕಾರಕ್ಕೆ ಕಾರಣ ಮಾತ್ರ. ಆದ್ದರಿಂದ ಭಗವಂತನ ಪ್ರೇಮಿಗಳಾದ ಹರಿದಾಸರು ಹೊಸ್ತಿಲಿಗೆ ಬಂದಾಗ ಮೂರ್ತಿಪೂಜೆ ಬಿಟ್ಟು ಅವರನ್ನು ಸತ್ಕಾರ ಮಾಡುವುದೇ ಪರಮಾತ್ಮನ ಪೂಜೆ. ಅಂತಹವರಿಗೆ ವಿನಯದಿಂದ ವಂದನೆ ಮಾಡುವುದೇ ಸಂಧ್ಯಾವಂದನೆ. ಅದೇ ದಾಸತ್ವ. ಈ ಮೊದಲಾದ ಭಾವಗಳನ್ನು ಕುರಿತು ಮೋಹನದಾಸರ ಕೃತಿಗಳು ಸಮಾಜದಲ್ಲಿ ಮೌಢ್ಯವನ್ನು ಹೊಡೆದೋಡಿಸಲು ಸಾಧನಗಳಾಗಿವೆ.

ದಾಸರೂ ತಮ್ಮ ಕಾಲದ ಸಮಾಜದಲ್ಲಿ ಬೇರೂರಿರಬಹುದಾಗಿದ್ದ ಡಾಂಭಿಕ ಭಕ್ತಿಯ ಮುಳ್ಳನ್ನು ಕಿತ್ತೆಸೆದು ಸಮಾಜವನ್ನು ಶೋಧಿಸಿ ಚೊಕ್ಕಾಗಿಸಬೇಕೆನ್ನುತ್ತಾರೆ. ಅಂದಿನ ಸಮುದಾಯವು ಇಂದಿನ ಸಮುದಾಯದಂತೆಯೇ ಬಹುಶಃ ‘ಜಪವ ಮಾಡುವೆನೆಂದು ಮುಸುಕಿಟ್ಟು ಕುಳಿತು’ ಕೊಂಡವನಾಗಿರಬೇಕು. ಅಂತೆಯೇ ಅವನಿಗೆ

ತಪಿಸುವೆ ಒಳಗೆ ನೀ ಧನದಾಸೆಯಿಂದ
ಕಪಟ ಬುದ್ಧಿಯ ಬಿಟ್ಟು ಮೋಹನ ವಿಠ್ಠಲನ
ಗುಪಿತ ಮಾರ್ಗದಿ ಭಜಿಸು ಸಮರ್ಥವನರಸು||೩||

ಎಂದು ಎಚ್ಚರಿಸಿ ಭಕ್ತಿ ಗುಪ್ತವಾಗಿರಬೇಕೆಂದೂ ಪರಮಾತ್ಮನೊಡನೆ ಭಕ್ತನ ನಡೆನುಡಿ ಗುಟ್ಟಾಗಿರಬೇಕೆಂದೂ ಬಹು ಕಳಕಳಿಯಿಂದ ಸಾಧನ ಮಾರ್ಗವನ್ನು ತೋರಿಸಿದ್ದಾರೆ. ಸಾಧನ ಮಾರ್ಗದಲ್ಲಿ ಸಾಗಿ ಹೋಗಬೇಕಾದಾಗ ಸಾಧಕನು ಭಕ್ತಿ ಜ್ಞಾನಗಳೆರಡನ್ನೂ ಮೇಳವಿಸಿಕೊಂಡಿರಬೇಕು. ಏಕೆಂದರೆ ಜ್ಞಾನವಿಲ್ಲದ ಭಕ್ತಿಯು ನೀರಲ್ಲಿ ನೆನೆಯಿಟ್ಟ ಕಲ್ಲಿನಂತೆ, ಕತ್ತೆ ಕತ್ತುರಿಯನು ಹೊತ್ತು ತಂದಂತೆ. ಭಕ್ತಿಗೆ ಜ್ಞಾನವು ಆತ್ಮಸೂಚಿಯಾಗಿ ಬಂದಾಗ ಸ್ವಲ್ಪ ಕಾಲದಲ್ಲಿಯೇ ಸಾಧಕನು ವೈರಾಗ್ಯ ನಿಧಿಗೆ ಒಡೆಯನಾಗುತ್ತಾನೆ. ಆದರೆ ಅದು ಸ್ವಾನುಭವನ ಜ್ಞಾನವಾಗಿರಬೇಕು. ಇದನ್ನೇ ಪುರಂದರದಾಸರು ‘ಸ್ವಾನುಭವದಾಜ್ಞಾನ ಹೀನ ಮಾನವನೇ ಮಾನವನೇ’ ಎಂದು ಒತ್ತಿ ಹೇಳಿದ್ದಾರೆ. ಅದನ್ನೇ ವಿಜಯದಾಸರು ‘ಏನಾದರೇನು ಮೋಕ್ಷವಿಲ್ಲ ಜ್ಞಾನವಿಲ್ಲದೆ’ ಎಂದು ಬೇರೊಂದು ರೀತಿಯಲ್ಲಿ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಅದೇ ಭಾವವನ್ನು ಮೋಹನದಾಸರು ತಮ್ಮ ಒಂದು ಕೀರ್ತನೆಯಲ್ಲಿ ಸೊಗಸಾಗಿ ಹೇಳಿದ್ದಾರೆ.

ಏನು ಮಾಡಿದರೇನು ಜ್ಞಾನವಿಲ್ಲದಲೇ||ಪ||
ಆನೆಗೆ ಮಜ್ಜನವನು ಮಾಡಿಸಿದ ತೆರದಿ||ಅ.ಪ||

ವೇದ ಓದಿದರೇನು, ಶಾಸ್ತ್ರ ಪಠಿಸಿದರೇನು
ವಾದಿಸಿದರೇನು ತರ್ಕವನು ಮಾಡಿ
ಪಾದದಿಂ ಗಂಗೆಯನು ಪಡೆದ ನಾರಾಯಣನೇ
ಆದಿಯೆನ್ನುತ ಪಂಚಭೇದವನು ಅರಿಯದಿರೆ||೧||

ಯಾತ್ರೆ ಮಾಡಿದರೇನು, ತೀರ್ಥಮಿಂದರೆ ಏನು
ಪಾತ್ರದೆನಿಸಿದರೇನು ಡಂಭದಿಂದ
ಗಾತ್ರವ ಬಳಲಿಸಿ ಯಜ್ಞಮಾಡಿ ಅಗ್ನಿ
ಹೋತ್ರಾವಿಟ್ಟರೇನು ಹರಿಮಹಿಮೆ ತಿಳಿಯದಿರೆ||೨||

ಹದ್ದಿನಂದದಿ ಬಹುಕಾಲ ಬಾಳಿದರೇನು
ಸದ್ಧರ್ಮ ವೃತ್ತಿಯನು ಜರಿದು ನಿತ್ಯ
ಮಧ್ಯವಲ್ಲಭ ನಮ್ಮ ಮೋಹನ್ನ ವಿಠ್ಠಲನ
ಪದ್ಮಪಾದವ ನಿತ್ಯ ಪೊದ್ದು ಕೊಂಡಿರದೇ||೩||

ಎಂದು ದೃಷ್ಟಾಂತಗಳೊಂದಿಗೆ ಪರಿಣಾಮಕಾರಿಯಾಗಿ, ಸ್ವಷ್ಟವಾಗಿ ಜ್ಞಾನ ಭಕ್ತಿಗಳ ದೃಢ ಸಮ್ಮೇಳನವನ್ನು ಎತ್ತಿಹಿಡಿದಿದ್ದಾರೆ. ಆ ಮೂಲಕ ಮುಕ್ತಿಸೂಪಾನಕ್ಕೆ ಸಾಧಕನು ಹಕ್ಕುದಾರನಾಗುತ್ತಾನೆಂಬುದನ್ನು ನಾವು ಮನಗಾನಬೇಕು. “ಹದ್ದಿನಂದದಿ ಬಹುಕಾಲ ಬಾಳಿದರೇನು” ಎಂಬ ಮೊದಲಾದ ಮಾತುಗಳಲ್ಲಿ ಕಾವಿದೆ. “ಆನೆಗೆ ಮಜ್ಜನವನು ಮಾಡಿಸಿದ ತೆರದಿ” ಮೊದಲಾದ ಅಲಂಕಾರಗಳು ಶಕ್ತಿಯುತವಾಗಿವೆ. ಇಲ್ಲಿ ಭಾವವು ಎಲ್ಲಿಯೂ ಮಸಕಾಗಿಲ್ಲ. ನಿಚ್ಚಳವಾಗಿದೆ. ಯುಕ್ತವಾಗಿದೆ. ಮೋಹನದಾಸರ ಇಂತಹ ಕೀರ್ತನೆಗಳಲ್ಲಿ ಸಮಾಜದ ಅಭ್ಯುದಯದ ತುಡಿತವಿದೆ. ಸರಳವಾದ ಭಾಷೆಯಲ್ಲಿ ನಿರಾಡಂಬರತೆಯಿಂದ ಕೂಡಿದ ದಾಸರ ಜೀವನದ ಒಲವು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಪಾಂಡಿತ್ಯದ ಕಾಠಿಣ್ಯವಿಲ್ಲದೆ ಅರ್ಥ, ಅಭಿವ್ಯಕ್ತಿ ಎರಡೂ ಮನೋಹರವಾಗಿದೆ. ಅವರ ಮಾತಿನಲ್ಲಿ ಸ್ವಾರಸ್ಯವಾಗಿ ಉಕ್ತಿಗಳು ನಿರಾಯಾಸವಾಗಿ ಬಂದು ಸಂಗಮಿಸಿವೆ. ಅವರು ಬಳಸಿದ ಶಬ್ದ ಸಮುದಾಯದಲ್ಲಿ ಜೀವನಾನುಭವದ ಶಕ್ತಿಯು ತುಂಬಿದೆ. ದಾಸರಲ್ಲಿ ಕಂಡುಬರುವ ಸಂಗತಿಗಳಲ್ಲಿ ನೀತಿ ತತ್ತ್ವಗಳು ಪ್ರಮುಖ ಸ್ಥಾನವನ್ನು ಪಡೆದಿರುವಂತೆ ಭಕ್ತಿಯೂ ಮಹತ್ವವನ್ನು ಹೊಂದಿದೆ. ಭಗವಂತನ ಸ್ತುತಿ, ನಾಮರೂಪಗಳ ವರ್ಣನೆ, ಭಕ್ತನ ಆರ್ತಭಾವ, ಪುಣ್ಯ ಕ್ಷೇತ್ರಗಳಲ್ಲಿ ಭಕ್ತಿ ಹಾಗೂ ಭಕ್ತನ ಮಹಿಮೆ ಮೊದಲಾದವು ಈ ಭಕ್ತಿಯ ಸ್ವರೂಪವನ್ನು ತಿಳಿಯಲು ಸಹಾಯಕವಾಗುವಂತೆ ಕೀರ್ತನೆಗಳಲಿ ಮೂಡಿ ಬಂದಿವೆ. ದಾಸರು ತಮ್ಮನ್ನು ದಾಸರದಾಸರ ದಾಸರೆಂದು ಹೇಳಿಕೊಳ್ಳುವುದು ರೂಢಿ. ಅದು ಹರಿಭಕ್ತಿಯ ಪರಾಕಾಷ್ಠೆಯಾಗಿದೆ.

ನಿನ್ನ ದಾಸರ ದಾಸರು ಪೊದ್ದ ವಸನವೆ ಎನಗಾಗಲಿ
ನಿನ್ನ ದಾಸರು ಉಂಡ ಎಂಜಲು ಎನಗಾಗಲಿ
ನಿನ್ನ ದಾಸರ ಪಾದೋದಕವೆ ಎನಗಾಗಲಿ
ನಿನ್ನ ದಾಸರ ಇಟ್ಟಾಭರಣವೆ ಎನಗಾಗಲಿ
ಎನ್ನುವಲ್ಲಿ ಭಕ್ತಿಯ ಮೆರುಗನ್ನು ಕಂಡರೆ
ನಿನ್ನ ದರುಶನಕೆ ಬಂದವನಲ್ಲವೊ ಮಹಾ
ಪುಣ್ಯವಂತರ ದಿವ್ಯ ಚರಣ ನೋಡಲು ಬಂದೆ
…………………………………………
………………………………………..
 ಕಠಿಣವೊ ನಿನ್ನ ಭಕ್ತರ ದರುಶನ ಲಾಭ

ಎಂದು ವಿಜಯದಾಸರು ಹೇಳುವಾಗ ನಿಂದಾಸ್ತುತಿಯ ರಮ್ಯತೆಯನ್ನು ಕಾಣುತ್ತೇವೆ. ಈ ವಿವೇಚನೆಯಲ್ಲಿ ಕಠಿಣ ತತ್ವಗಳ ಸುಲಭ ನಿರೂಪಣೆ ತುಂಬಿದೆ. ಈ ದಾರ್ಶನಿಕರ ಕಲ್ಪನೆಯನ್ನು ಭವ್ಯತೆ ಮರೆಯಲಿಕ್ಕಾಗದು.

ಮಳೆಯ ಮಜ್ಜನವು ದಿಗ್ವಲಯಂಗಳ ವದನ
ಬೆಳೆದ ಬೆಳಸುಗಳೆ ನೈವೇದ್ಯ ಜನರ ಕಂ
ಗಳ ಕಾಂತಿ ನಿನಗಾರ್ತಿ ||

ಎಂಬಲ್ಲಿಯೂ ಭವ್ಯತೆ ಅಡಗಿದೆ. ವಿಶ್ವವ್ಯಾಪ್ತಿಯಾದ ಪರಮಾತ್ಮನಿಗೆ ಅಖಂಡ ಭೂಮಿಯನ್ನಲ್ಲದೆ ಎಲ್ಲಿಂದ ಪೀಠವನ್ನು ತರುವುದು? ಆಕಾಶವಲ್ಲದೆ ಬೇರೆ ಛತ್ರ ಯಾವುದು? ಇಂತಹ ದಿವ್ಯ ಪುರುಷನಿಗೆ ಮಜ್ಜನವಾಗಬೇಕಾದರೆ ನಭವೇ ನೀರು ಸುರಿಯಬೇಕು. ನೈವೇದ್ಯಕ್ಕೆ ಪ್ರಪಂಚದ ಬೆಳೆಯಲ್ಲ ಬೇಕು. ಈ ಭವ್ಯಮೂರ್ತಿಯ ಎದುರು ಇಡುವ ದೀಪ ಸ್ತೋಮ ಸೂರ್ಯರಾದರೆ, ಎತ್ತುವ ಆರತಿ ಜನದ ಕಣ್ಣಿನ ಕಾಂತಿ, ಭವ್ಯತೆ ರಮ್ಯತೆಗಳ ಸಂಗಮವಿದು. ತತ್ವ ಕಾವ್ಯಗಳ ಹೊಂದಿಕೆ ಇದು. ಜನನಾನುಭವದ ದೃಷ್ಟಾಂತಗಳಿಂದ ತತ್ವನಿರೂಪಣೆಗೆ ಸೊಬಗನ್ನುಂಟು ಮಾಡಿದುದನ್ನು ವಿಜಯದಾಸರ ಒಂದು ಕೀರ್ತನೆಯಲ್ಲಿ ಕಾಣಬಹುದು.

ಭಕುತನ ಮುಂದೆ ನೀನವರ ಹಿಂದೆ ||ಪ||
ಮುಕುಟ ಕೈಗೊಳ್ಳದೆ ಗಯಾ ದಾಧರನೆ||ಅ.ಪ||

ಕಟ್ಟೆರಡು ಬಿಗಿದು ನದಿಸೂಸಿ ಹರಿಯುತ್ತಿರೆ |
ಕಟ್ಟೆಲೆಯಲಿ ಹರಿಗೋಲು ಹಾಕಿ
ನೆಟ್ಟಗೆ ಆಚೆಗೀಚೆಗೆ ಪೋಗಿಬರುವಾಗ
ಹುಟ್ಟುಮುಂದಲ್ಲದೆ ಹರಿಗೋಲು ಮುಂದೆ||೧||

ಕಾಳೆಹೆಗ್ಗಾಳೆ ದುಂದುಭಿ ಭೇರಿ ತಮಟೆ ನಿ
ಸ್ಸಾಳ ನೀನಾ ವಾದ್ಯ ಘೋಷಣಗಳು
ಸಾಲಾಗಿ ಬಿಳಿವಿಡಿದು ಸಂಭ್ರಮದಿ ಬರುವಾಗ
ಆಳು ಮುಂದಲ್ಲದೆ ಅರಸು ತಾ ಮುಂದೆ ?||೨||

ಉತ್ಸಾಹ ವಾಹನದಿಬೀದಿಯೊಳು ಮೆರೆಯುತಿರೆ
ಸತ್ಸಂಗತಿಗೆ ಹರಿದಾಸರೆಲ್ಲ
ವತ್ಸಲಸಿರಿ ವಿಜಯವಿಠಲ ವೆಂಕಟಾಧೀಶ
ವತ್ಸಮುಂದಲ್ಲದೆಧೇನು ತಾ ಮುಂದೆ ?

ಇಲ್ಲಿ ಕಾಣುವ ಭಾವರಮ್ಯತೆಗೆ ಲೋಕಾನುಭವ ಗಮ್ಯತೆಯೂ ಸೇರಿದೆ. ಜೊತೆಗೆ ಕಾವ್ಯ ಮನೋಹರತೆಯೂ ಇದೆ. ದಾಸ ಸಾಹಿತ್ಯದಲ್ಲಿ ಬಳಕೆಯಾದ ಶಬ್ದಗಳಿಗೆ ಸಾಂಸ್ಕೃತಿಕ ಅನನ್ಯತೆಯಿದೆ. ಅವು ಕೀರ್ತನೆಗಳಲ್ಲಿ ಬಳಕೆಯಾದಾಗ ಹೊಸ ಅರ್ಥಲೋಕವನ್ನು ತೆರೆಯುತ್ತವೆ. ಜನಸಾಮಾನ್ಯರ ನಡುವೆ ಬದುಕಿದ ದಾಸರು ಸಮುದಾಯದಲ್ಲಿ ಬಳಕೆಯಾದ ಹಲವಾರು ಗಾದೆಗಳನ್ನು ತಮ್ಮ ಕೀರ್ತನೆಗಳ ಒಡಲಲ್ಲಿ ಸಹಜವಾಗಿ ಬೆರೆಸಿದ್ದಾರೆ. ಜನಸಾಮಾನ್ಯರ ಬದುಕು ಭಾಷೆಯಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿರುವುದು ಮಾತ್ರವಲ್ಲದೆ ಅದಕ್ಕೆ ಶಕ್ತಿಯನ್ನೂ ಸಂಪನ್ನತೆಯನ್ನೂ ತಂದುಕೊಟ್ಟಿದೆ. ಗಾದೆಯಿಲ್ಲದೆ ಅವರ ಬದುಕಿಲ್ಲ, ಭಾಷೆಯಿಲ್ಲ, ಕಿರಿದರಲ್ಲಿ ಹಿರಿದಾದ ಅರ್ಥ ತುಂಬಿದ ಗಾದೆಗಳು ಜನಾನುಭವದ ಸರ್ವಾದರಣೀಯ ಸಣ್ಣ ಹರಳುಗಳಂತೆ ಕಾಣಿಸಿಕೊಳ್ಳುತ್ತವೆ. ಸಂಕ್ಷಿಪ್ತತೆ, ವಿವೇಕ ಪೂರ್ಣತೆ, ತೀಕ್ಷತೆ ಮತ್ತು ಜನಪ್ರಿಯತೆ ಇವು ಗಾದೆಗಳ ಲಕ್ಷಣಗಳಾಗಿವೆ. ಗಮನಾರ್ಹವಾದ ಉಪಯೋಗದಲ್ಲಿನ ಅಡಕವೂ ಸಾರಭೂತವೂ ಆದ ಮಾತು ಅಥವಾ ಹೆಚ್ಚು ವಿಷಯಗಳನ್ನು ಕೆಲವೇ ಮಾತುಗಳಲ್ಲಿ ಭಟ್ಟಿಯಿಳಿಸುತ್ತವೆ ಗಾದೆಗಳು. ಸಾಹಿತ್ಯದ ಸಮಸ್ತ ಚಟುವಟಿಕೆಗಳನ್ನೂ ಸೃಷ್ಟ್ಯಾತ್ಮಕ ಶಕ್ತಿಯನ್ನೂ ಒಳಗೊಂಡಿರುವ ಗಾದೆಯ ಭಾಷೆ ಸಾಂಕೇತಿಕ, ಭಾವ ಬಹುಮಟ್ಟಿಗೆ ರೂಪಕ. ಅಲ್ಲದೆ ಉಪಮಾನ ಕಲ್ಪನೆಗಳ, ಸಾದೃಶ್ಯ ವೈದೃಶ್ಯಗಳ, ಪ್ರಾಸಾನು ಪ್ರಾಸಗಳ, ವ್ಯಂಗ್ಯ ಹಾಸ್ಯಗಳ ಸರಮಾಲೆಗಳೇ ಆಗಿವೆಯಲ್ಲದೆ ಜ್ಞಾನದ ತವನಿಧಿಯೂ ಆಗಿವೆ. ಉದಾಹರಣೆಗೆ ಕೆಲವು ಗಾದೆಗಳನ್ನು ನೋಡಬಹುದು.

-ಅಡಕೆಗೆ ಹೋಳಿಗೆ ಹೋದ ಮಾನ
-ಆನೆಕೊಟ್ಟರೂ ಬಾರದು

-ಅಟ್ಟ ಮೇಲೆ ಒಲೆಯು ಉರಿಯುವಂತೆ ಎನಗೀಗ
-ಕೆಟ್ಟ ಮೇಲೆ ಅರಿವು ಬಂದಿತಯ್ಯಾ

-ಅಂಬಲಿಯನುಂಬುವಗೆ ಅಮೃತಾನ್ನ ತಾನೇಕೆ

-ಆಕಳು ಡೊಂಕಾದರೇನು ಹಾಲುಡೊಂಕೆ

-ಇಕ್ಕಲಾರದ ಕೈ ಎಂಜಲು

-ಗಾಳಿಗೆ ಗಿರಿಯು ಅಲ್ಲಾಡಬಲ್ಲುದೆ

-ಕೈಮೀರಿ ಹೋದ ಮಾತಿಗೆ ಹುಡುಕಾಡಬಾರದು

-ಕಬ್ಬುಡೊಂಕಾದರೇನು ಸಿಹಿ ಡೊಂಕೆ

-ನದಿಯ ಡೊಂಕಾದರೇನು ಉದಕ ಡೊಂಕೆ

-ಪಂಕ್ತಿಯಲ್ಲಿ ಪರಪಂಕ್ತಿ ಮಾಡಬಾರದು

-ಮಾಣಿಕವು ಕೋಡಗನ ಕೈಯಲಿ ಇದ್ದಂತೆ

-ಮೂಕ ತಾ ಮಾತಿನ ಸವಿ ಏನು ಬಲ್ಲ

ಇಂತಹ ಸಾವಿರಾರು ಸೂಕ್ತಿಗಳು ದಾಸ ಸಾಹಿತ್ಯದಲ್ಲಿ ಉಂಡೆ ಉಂಡೆಯಾಗಿ ಸಿಗುತ್ತವೆ. ಅಲ್ಲಿಯ ಶಬ್ದ ನಿರೂಪಣೆ, ಸೂಚ್ಯಭಾವುಕತೆ ಹಾಗೂ ಅನುಭವಗಮ್ಯತೆ ತುಂಬ ಮನೋಹರವಾಗಿದೆ. ಗಾದೆಗಳು ಗ್ರಾಮ್ಯ ಭಾಷೆಯ ಹಾವಭಾವಗಳನ್ನು, ಕೆಚ್ಚನ್ನು, ಸೊಗಡನ್ನು ಅಷ್ಟೇ ನಿಚ್ಚಳವಾಗಿ ಪ್ರಕಟಿಸುತ್ತವೆ. ಅವು ಒಂದು ಕಾಲಘಟ್ಟದ ಸಂಸ್ಕೃತಿಯ ಚಿತ್ರಣವನ್ನು ಜೀವನ ಮೌಲ್ಯವನ್ನು ಕಟ್ಟಿಕೊಡುತ್ತವೆ. ದಾಸರು ಕಟ್ಟಿಕೊಡುವ ಸಾಮಾಜಿಕ ಚರಿತ್ರೆ ಈ ಗಾದೆಗಳಲ್ಲಿ ತೆರೆದುಕೊಳ್ಳುತ್ತದೆ. ಗಾದೆಗಳ ಮೂಲಕ ದಾಸರು ಬದುಕನ್ನು ವಾಸ್ತವವಾಗಿ ಚಿತ್ರಿಸಿದ್ದಾರೆ. ದಾಸಸಾಹಿತ್ಯದಲ್ಲಿ ಪ್ರಾಸ, ದ್ವಿರುಕ್ತಿ, ವರ್ಣಾವೃತ್ತಿ ಮೊದಲಾದ ಲಾಕ್ಷಣಿಕ ಅಂಶಗಳು ಹೇರಳವಾಗಿವೆ. ಕೆಲವು ಉದಾಹರಣೆಗಳನ್ನು ಗಮನಿಸಬಹುದು.

ಅಕಟಕಟ ಸಂಸಾರವನುನೆಚ್ಚಿಕೆಡಬ್ಯಾಡ
ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ

-ಶ್ರೀಪಾದರಾಜರು

ಕಡೆಗೋಲ ತಾರೆನ್ನ ಚಿನ್ನವೆ ಹೊಸ
ರೂಡದರೆ ಬೆಣ್ಣೆ ಬಾರದು ಮುದ್ದುರಂಗ
-ವ್ಯಾಸರಾಯರು
ಬಾಯೆನ್ನರನ್ನವೆ ಬಾಯೆನ್ನ ಚಿನ್ನವೆ
ಬಾಯೆನ್ನ ಮೋಹದ ಗಿಣಿಯೆ ಗೋವಿಂದ

-ವಾದಿರಾಜ

ಅಕ್ಕ ಮೋಹನ ಕಾಣೆ ಮಧುರಾಪುರ
ಅಕ್ಕ ಮೋಹನ ನಾರಿಯರು ಉದಾರ
ಅಕ್ಕ ಮೋಹನ ಕಾಣೆಯ ಯಮುನಾತೀರ
ಅಕ್ಕ ಮೋಹನ ರಂಗ ಮನೆಗೆ ಬಾರ

-ಪುರಂದರದಾಸ

ಇರಬೇಕು ಇಲ್ಲದಿರಬೇಕು
ಹರಿದಾಸರು ಸಂಸಾರದೊಳಗೆ

-ಪುರಂದರದಾಸ

ಕೋಕೋಕೋ ಎನ್ನಿರೊ ಕುಂಭಿನಿಯರೆಲ್ಲ
ಕೋಕೋಕೋ ಎನ್ನಿರೊ ನಮ್ಮ
ಗೋಕುಲದೊಳಗೊಬ್ಬ ಕಳ್ಳಬರುತಾನೆಂದು ಕೋ………….

-ಕನಕದಾಸ

ಕೀರ್ತನೆಗಳ ಶಿಲ್ಪರಚನೆಲ್ಯನ್ನು ಕುರಿತು ಜಿಜ್ಞಾಸೆ ಇಲ್ಲಿದೆ. ಹರಳು ಗಟ್ಟಿದ ಮಾತಿನ ಹೆಣಿಕೆ, ಶಬ್ದಜೋಡಣೆಯ ತಂತ್ರ ಮೊದಲಾದ ಶಬ್ದ ಪರಿಕರಗಳನ್ನು ಇದು ಸೂಚಿಸುತ್ತದೆ. ಮೇಲಿನ ಉದಾಹರಣೆಗಳನ್ನು ಗಮನಿಸಿದರೆ ದಾಸರು ಶಬ್ಧಗಳೊಂದಿಗೆ ಲೀಲಾಜಾಲವಾಗಿ ಚೆಲ್ಲಾಟ ನೆಡಿಸಿರುವುದನ್ನು ಕಾಣಬಹುದಾಗಿದೆ. ಅಕ್ಷರಗಳು ವಾಕ್ಯದ ಎಲ್ಲ ಉಪ ಘಟಕಗಳನ್ನು ಅನುಕರಿಸುವಂತೆ ಮಾಡಿದ್ದಾರೆ. ಒತ್ತಕ್ಷರ, ದೀರ್ಘಾಕ್ಷರ ಇವು ಗೆಜ್ಜೆಯನಾದದಂತೆ ಪೋಣಿಸಿಕೊಂಡಿವೆ. ಈ ಶಬ್ದತಂತ್ರದ ಹಿಂದೆ ಅನುಭವ ಪೂರ್ಣವಾಗಿ ಪ್ರಬುದ್ಧ ಮನಸ್ಸು ಕೆಲಸ ಮಾಡಿದೆ. ದಾಸರು ತಮ್ಮ ಇಷ್ಟ ದೇವರನ್ನು ‘ಮಗು’ ಇಲ್ಲವೆ ‘ಗುರು’ವಿನಂತೆ ಕನಿಕರದಿಂದ ಮಾತನಾಡಿಸುವ, ರಮಿಸುವ ಆತ್ಮೀಯ ಶೈಲಿ ಇಲ್ಲಿ ಪರಿಭಾವನೆಗೆ ಅರ್ಹವಾಗಿದೆ. ಶಬ್ದಗಳ ಸ್ಥಾನವನ್ನು ಪಲ್ಲಟಿಸುವುದರಿಂದ ಹೆಚ್ಚಿನ ಅರ್ಥ ಸಿದ್ಧಿಯನ್ನು ಸಾಧಿಸಬಹುದು ಎಂಬುದನ್ನು ದಾಸರು ತೋರಿಸಿಕೊಟ್ಟಿದ್ದಾರೆ. ಯಶೋದೆ ಕೃಷ್ಣನನ್ನು ಆತ್ಮೀಯವಾಗಿ ಮಾತನಾಡಿಸುವ ಧಾಟಿ ಹೀಗಿದೆ.

ಪೋಗದಿರೆಲೊ ರಂಗ, ಬಾಗಿಲಿಂದಾಚೆಗೆ
ಭಾಗವತರು ಕಂಡರೆತ್ತಿ ಕೊಂಡೋಯ್ವರೊ

ಮಾತೃವಾತ್ಸಲ್ಯದ ಮುದ್ದಿನ ಶೈಲಿ ಸೊಗಸಾಗಿದೆ. ಶಬ್ದಾಂತರಾಳವನ್ನು ಬಲ್ಲ ಕವಿಗಳ ಕೈಯಲ್ಲಿ ಹೀಗೆ ಸಂಸ್ಕಾರ ಒಪ್ಪವನ್ನು ಪಡೆಯುತ್ತದೆ ಎಂಬುದಕ್ಕೆ ಹಲವಾರು ಮಾದರಿಗಳು ಉತ್ತಮ ನಿದರ್ಶನಗಳಾಗಬಲ್ಲವು. ಅವರು ಬಳಸಿದ ಅಲಂಕಾರಗಳೂ ನಾನಾ ಭಾವಗಳ ಅರ್ಥವನ್ನು ವೃದ್ಧಿಸುವ ದಿಕ್ಕಿನಲ್ಲಿ ಹೆಜ್ಜೆಹಾಕಿವೆ. ಭಾಷೆಯನ್ನು ಜನರ ಬಳಿಗೆ ಕೊಂಡೊಯ್ಯುವ ಪ್ರಯತ್ನದ ಅಂಗವಾಗಿ ದಾಸರು ದೇಸೀಯ ನುಡಿಗಟ್ಟುಗಳನ್ನು ಅರ್ಥಪೂರ್ಣವಾಗಿ ಬಳಸಿ ಪದಗಳಿಗೆ ಜೀವ ತುಂಬಿದ್ದಾರೆ. ಆತ್ಮವಿಶ್ವಾಸವನ್ನು ತುಂಬಿ ನಿರ್ಭಯವಾಗಿ ತಮ್ಮ ಅನಿಸಿಕೆಗಳಿಗೆ ವಾಗ್ರೂಪವನ್ನು ಕೊಡಲು ಬೇಕಾದ ಮನೋಧೈರ್ಯ ದಾಸರಿಗಿದೆ. ವ್ಯಕ್ತಿ ಪ್ರತಿಷ್ಠೆಗಳನ್ನು ತಗ್ಗಿಸಿ ಸಾಮೂಹಿಕ ಪ್ರಜ್ಞೆ ಅರಳುವಂತೆ ಮಾಡಿದ ಕೀರ್ತಿಯೂ ದಾಸರಿಗೆ ಸಲ್ಲಬೇಕು. ಸಂಭಾಷಣೆ, ವಾಗ್ವಾದ ಹಾಗೂ ಚರ್ಚೆಯ ಕಾವಿನ ಸಂದರ್ಭದಲ್ಲಿ ಅವರು ತುಂಬ ಮುಕ್ತ ಮನಸ್ಸಿನಿಂದ ಸಮಾಜವನ್ನು ವಿಮರ್ಶೆ ಮಾಡಿದ್ದಾರೆ. ದಾಸರು ಕನ್ನಡ ಭಾಷೆಗೆ ಶಕ್ತಿಯನ್ನು ತಂದುಕೊಟ್ಟಿದ್ದಾರೆ. ಕನ್ನಡ ಭಾಷೆಯನ್ನು ಫಲವತ್ತಾದ ನುಡಿಗಾರಿಕೆಯಿಂದ ಮೆರೆಸಿದ ಕೀರ್ತಿ ದಾಸರಿಗೆ ಸಲ್ಲಬೇಕು. ತುಂಬ ಸರಳವಾಗಿ ಸಾಗುವ ಅವರ ಕೀರ್ತನೆಗಳಲ್ಲಿ ಅನೇಕ ಚಿಂತನ ಪರವಾದ ನುಡಿಮುತ್ತುಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಕಲೆ ಹಾಕಲಾಗಿದೆ.

ಹಲವು ಕಾಲ ಕಲ್ಲು ನೀರೊಳಗಿದ್ದರೇನು
ಬಲು ನೆನೆದಮೃತ ಶಿಲೆಯಾಗುವುದೆ
ಕರದಲಿ ಜಪಮಾಲೆ ಮಣಿಗಳ ನೆಣಿಸುತ
ಪರನಿಂದೆ ಬಾಯಲಿ ಮಾಡುವರಯ್ಯ
*
ಅನ್ಯಸರಿಯರೊಲುಮೆ ಗೊಲಿದು ಅಧಮಗತಿಗೆ ಬೀಳಲೇಕೆ
ತನ್ನ ಸತಿಯರೊಲುಮೆ ಗೊಲಿದು ತಾನು ಸುಳಿಸಬಾರದೆ
*
ಆಚಾರವಿಲ್ಲದನಾಲಗೆನಿನ್ನ
ನೀಚಬುದ್ಧಿಯಬಿಡುನಾಲಿಗೆ
ಚಾಡಿಹೇಳಲಿಬೇಡನಾಲಗೆ
ನಿನ್ನಬೇಡಿಕೊಂಬುವೆನುನಾಲಗೆ
ರೂಢಿಗೊಡೆಯಶ್ರೀರಾಮನನಾಮವ
ಪಾಡುತಲಿರುಕಂಡ್ಯನಾಲಗೆ
*
ಆವಕುಲವಾದರೇನುಆವನಾದರೇನುಆತ್ಮ
ಭಾವವರಿತಮೇಲೆ
ಹಸಿಕಬ್ಬುಡೊಂಕಿರಲುಅದರರಸತಾನುಡೊಂಕೇನೊ
ವಿಷಯಾಸೆಗಳೇಬಿಟ್ಟುಹಸನಾದಗುರುಭಕ್ತಿಮಾಡೋ ಮನುಜಾ
*
ಇಕ್ಕಲಾದಕೈಎಂಜಲುಚಿಕ್ಕ
ಮಕ್ಕಳುಆಳುತಾವೆ ಹೋಗೋದಾಸಯ್ಯ
*
ಇನ್ನಾದರೂಹರಿಯನೆನೆಕಂಡ್ಯಮನುಜ
ಮುನ್ನಾದದುಃಖವುನಿಜವಾಗಿತೊಲಗುವುದು
*
ಈಸಬೇಕುಇದ್ದುಜಯಿಸಬೇಕು
ಹೇಸಿಗೆಸಂಸಾರದಲ್ಲಿಆಸಲೇಶ ಇಡದಹಾಗೆ
ಗೇರುಹಣ್ಣಿನಲ್ಲಿಬೀಜ
ಸೇರಿದಂತೆಸಂಸಾರದಿ
ಮೀರಿಆಸೆಮಾಡದಂತೆ
ಧೀರಕೃಷ್ಣನಭಕುತರೆಲ್ಲ
*

ಉದರ ವೈರಾಗ್ಯವಿದು ನಮ್ಮ
ಪದನಾನಾಭದಲ್ಲಿ ಲೇಶ ಭಕುತಿಯಲ್ಲ

ಉದಯಕಾಲದಲೆದ್ದು ಗಡಗಡ ನಡುಗುತ
ನದಿಯಲಿ ಮಿಂದೆನೆಂದು ಹಿಗ್ಗುತಲಿ
ಮದ ಮತ್ಸರ ಕ್ರೋಧ ಒಳಗೆ ತುಂಬಿಟ್ಟುಕೊಂಡು
ಬದಿಯಲ್ಲಿದ್ದವರಿಗೇ ಶ್ವರ್ಯದ ತೋರುವುದು
*
ಆಸೆ ಮಾಡಲು ಬೇಡ ಭಾಷೆ ತಪ್ಪಲು ಬೇಡವಯ್ಯ
ಸ್ತ್ರೀ ಸಂಗವು ಬೇಡ ಜೀವವೆ
ಏಸೇಸು ಜನ್ಮಾಂತರ ಕಳೆದುಳಿದರು
ಈ ಸಾವು ತಪ್ಪದು ಜೀವವೆ
*
ಎಲ್ಲಾನು ಬಲ್ಲೆನೆಂಬುವಿರಲ್ಲ ಅವಗುಣ ಬಿಡಲಿಲ್ಲ
ಸೊಲ್ಲಿಗೆ ಶರಣರ ಕಥೆಗಳ ಪೇಳುತ
ಅಲ್ಲದ ನುಡಿಯನು ನುಡಿಯುವಿರಲ್ಲ
*
ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರು
ಕಲ್ಲು ಸಕ್ಕರೆ ಕೊಳ್ಳಿರೋ
ಎತ್ತು ಹೇರುಗಳಿಂದ ಹೊತ್ತುಮಾರುವುದಲ್ಲ
ಒತ್ತೊತ್ತಿ ಗೋಣಿಯೊಳು ತುಂಬುವುದಲ್ಲ
ಎತ್ತಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿಲಾಭ ಬರುವಂಥ
*
ಕುರುಡುನಾಯಿ ತಾ ಸಂತೆಗೆ ಬಂತಂತೆ
ಅದು ಏತಕೆ ಬಂತೊ
*
ಕೊಬ್ಬಲಿರಬೇಡ ಮನುಜ ನೀನು ಕೊಬ್ಬಲಿರಬೇಡ
ಸಿರಿಮಾನ ಬಂದಾಗ ಬಿರಿಬಿರಿ ನಡೆವರು
ಸರಿಯಲಾರೆನೆಂದು ಮಿಡುಕವರು
ಸರಿ ಹೋದ ಮರುದಿನ ಬಡತನ ಬಂದರೆ
ಹುರುಕು ಹತ್ತಿದಂತೆ ಕೆರೆಕೊಂಬರಯ್ಯ
*
ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
*
ಚಿತ್ತ ಶುದ್ದಿಯಿಲ್ಲದ ಮನುಜು ಜ್ಞಾನಿಯೇ
ಪಾತಕಗಳನರಿಯದವ ಮನುಜನೆ ಕೃಷ್ಣ
ತೋಳ ಅಡವಿಯ ತಿರುಗಲು ಅದು ದಿಗಂಬರನೆ
ಗಾಳಿಯುಂಬುವ ಭುಜಗ ಉಪವಾಸಿಯೇ
ಆಲದ ಮರಕೆ ಜಡೆಯಿರಲು ಅದು ತಪಸ್ವಿಯೆ
ಕಾಲದಲ್ಲಿಹ ಗೂಗೆ ಹಿರಿಯದಾಗಬಹುದೆ
*
ಜಾಲಿಯ ಮರದಂತೆ ಧರೆಯೊಳು ದುರ್ಜನರು
ಅಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ
ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ
*
ಜ್ಞಾನವೊಂದೇ ಸಾಕು ಮುಕ್ತಿಗೆ
ಇನ್ನೇನು ಬೇಕು ಹುಚ್ಚುಮರುಳೆ
*

ತಂಗಿಗೇಳಿದ ಕೃಷ್ಣ ಚಂದದಲಿ ಬುದ್ದಿ
ಅತ್ತೆಯ ಮನೆಯಲ್ಲಿ ಇರುವಂಥ ಸುದ್ಧಿ
ಯಾರೇನು ಅಂದರೂ ಮೋರೆಯನು ತಿರುಹದಿರು
ಮೋರೆ ಮೇಲೆ ಕೈಯತ್ತಿ ಬಲ್ಲಳೆಂದೆಣಿಸಿ
ವಾರಿಗೇವರ ಕೂಡಿ ನೀರನ್ನು ತರುವಾಗ
ವಾರೆಗಣ್ಣಲಿ ನೋಟ ನೋಡದಿರು ಕಂಡ್ಯ
*
 ತನುವ ನೀರೊಳಗದ್ದಿ ಫಲವೇನು ತನ್ನ
ಮನದಲ್ಲಿ ದೃಢಭಕ್ತಿ ಇಲ್ಲದ ಮನುಜನು
*
 ತುದಿನಾಲಿಗೆ ಬೆಲ್ಲ ಎದೆಗತ್ತಿರಿಯರ ಸಂಗಬೇಡ
ಹೃದಯ ದಾಕ್ಷಿಣ್ಯವನರಿಯದ ಮನುಜರ ಪ್ರಸಂಗಬೇಡ
*
ದುಗ್ಗಾಣಿ ಎಂಬುದು ದುರ್ಜನ ಸಂಗ
ದುಗ್ಗಾಣಿ ಬಲು ಕೆಟ್ಟದಣ್ಣ
*
ನಗೆಯು ಬರುತಿದೆ ಎನಗೆ ನಗೆಯು ಬರುತಿದೆ
ಜಗದೊಲಿರುವ ಜಾಣರೆಲ್ಲ ಹಗರಣ ಮಾಡವುದನೆ ಕಂಡು
*
ನಾಯಿ ಬಂದದಪ್ಪಾ ಅಣ್ಣಾ ಅತ್ತಲಾಗಿರಿ
ನಾಯಿ ಅಂದರೆ ನಾಯಿ ಅಲ್ಲ
ಮಾನವ ಜನ್ಮದ ಹೀನ ನಾಯಿ
ಕೊಟ್ಟ ಸಾಲವ ಕೊಡದವ ನಾಯಿ
ಇಟ್ಟ ಭಾಷೆಯ ತಪ್ಪುವನ ನಾಯಿ
ಕಟ್ಟೆಯ ಮೇಲೆ ಕುಳಿತು ಕೊಂಡು
ಅಟ್ಟಹಾಸದಿ ಬುಗುಳುವ ನಾಯಿ
*
ನಿಂದಕರಿರಬೇಕಿರಬೇಕು
ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೊ ಹಾಂಗೆ
*
ಬೇವು ಬೆಲ್ಲದೊಲಿಡಲೇನು ಫಲ
ಹಾವಿಗೆ ಹಾಲೆರೆದೇನು ಫಲ
*
ಭಾಷೆ ಹೀನರ ಸಂಗವಭಿಮಾನ ಭಂಗ
ಬೇಸತ್ತು ಬೇಲಿಯ ಮೇಲೆರಗಿದಂತೆ
*
ಮಾತಿಗೆ ಬಾರ‍ದ ವಸ್ತು ಬಹಳಿದ್ದರೇನು
ಹೋತಿನ ಕೊರಳೊಳಗೆ ಮಾಲೆ ಇದ್ದರೇನು
ದಾನವಿಲ್ಲದ ಮನೆಯು ದೊದ್ದದಾದರೇನು
ಹೀನಗುಣವುಳ್ಳವಗೆ ಹಿರಿಯತನ ಬಂದರೇನು
ಶ್ವಾನದ ಮೊಲೆಯೊಳಗೆ ಹಾಲಿದ್ದರೇನು
*
ಮಾನವಜನ್ಮ ದೊಡ್ದದು ಇದ
ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ
*
ಹೆಣ್ಣು ಕೊಟ್ಟತ್ತೆ ಮಾವಂದಿರ ಮನೆಯಲ್ಲಿ
ಸೇರಿ ಇರುವರೆ ಎಲೆ ಮನುಜ
ಬಂದ ಮೊದಲು ಇತ್ತ ಬನ್ನಿ ಕುಳ್ಳಿರೆಂದು ಬಲು ಉಪಚರಿಸುವರು
ಅಂದಿನ ಮರುದಿನ ಬಂದ ಸ್ನೇಹಿತರನ್ನು ಕಂಡಂತೆ ಕಾಣುವರೊ
ಬಂದ ಮೂರರಲ್ಲಿ ಪರದೇಶಿಯ ಕಂಡಂತೆ ಸಡ್ಡೆ ಮಾಡದೆ ಇಹರೊ
ಮುದದಿಂದ ನಾಲ್ಕು ದಿವಸವಿದ್ದರೆ ಮಾನಭಂಗ ಮಾಡಿ ಮಾತಾನಾಡುವರೋ
*
ಹೆತ್ತತಾಯ್ತಂದೆಗಳ ಚಿತ್ತವ ನೋಯಿಸಿ
ನಿತ್ಯದಾನವ ಮಾಡಿ ಫಲವೇನು
ಸತ್ಯ ಸದಾಚಾರ ಇಲ್ಲದವನು ಜಪ
ಹತ್ತು ಸಾವಿರ ಮಾಡಿ ಫಲವೇನು
*
ಅಜ್ಞಾನಿಗಳ ಕೂಡೆ ಅಧಿಕ ಸ್ನೇಹಕ್ಕಿಂತ
ಸುಜ್ಞಾನಿಗಳ ಕೂಡೆ ಜಗಳವೇ ಲೇಸು
*

ದಾನ ಧರ್ಮವ ಮಾಡಿ ಸುಖಿಯಾಗು ಮನವೆ
ಹೀನ ವೃತ್ತಿಯಲಿ ನೀ ಕೇಡಬೇಡ ಮನವೆ

*
ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ
ಸಜ್ಜನರ ಸಂಗದೊಳಗಿರು ಸೆನ್ನ ರಂಗ
*
ವರಕವಿಗಳ ಮುಂದೆ ನರಕವಿಗಳ ವಿದ್ಯೆ ತೋರಬಾರದು ಈ
ಧರಣಿಯ ಕಲ್ಲಿಗೆ ಶರಣೆಂದು ಪೂಜೆಯ ಮಾಡಬಾರದು
*

ಸಮಾಜಮುಖಿಯಾದ ಇಂತಹ ಕೀರ್ತನೆಗಳ ಘಟಕಗಳು ಬದುಕಿನ ಹಲವು ಮಗ್ಗಲುಗಳನ್ನು ಬಿಚ್ಚಿಕೊಳ್ಳುತ್ತವೆ. ಅವು ಸಾಹಿತ್ಯಿಕ ಮೌಲ್ಯವನ್ನೊಳಗೊಂಡಿದ್ದು ತೀವ್ರವಾದ ಸಾಮಾಜಿಕ ಚಿಂತನೆಯ ಫಲವಾಗಿ ಮೂಡಿಬಂದು ನೇರವಾಗಿ ಸಹೃದಯರಿಗೆ ತಲುಪಿವೆ. ಆತ್ಮೀಯವಾದ ಸಂಭಾಷಣೆ, ಪ್ರಾಸ, ಆಡುನುಡಿಯ ಬಳಕೆ, ಶ್ಲೇಷ ಇವು ಕೀರ್ತನೆಗಳ ವೈಶಿಷ್ಟ್ಯವಾಗಿವೆ. ಕನ್ನಡ ಭಾಷೆಗೆ ಸಹಜವಲ್ಲದ ಸುದೀರ್ಘಸಮಾಸಗಳು, ದೀರ್ಘ ವಾಕ್ಯಗಳು ಇವುಗಳನ್ನು ಸಂಪೂರ್ಣಾವಾಗಿ ಕೈಬಿಟ್ಟು ವಿರಳ ಪದರಚನೆಯನ್ನು ಇರಿಸಿದ್ದು ದಾಸ ಸಾಹಿತ್ಯದ ದೊಡ್ಡ ಸಾಧನೆಯಾಗಿದೆ. ದಾಸರು ಜನಬಳಕೆಯ ಭಾಷೆಯನ್ನು ಕಾವ್ಯದ ಹಾಗೂ ತತ್ವದರ್ಶನದ ಉನ್ನತ ಶಿಖರಕ್ಕೇರಿಸುವ ಮಾಹಾಕಾರ್ಯ ಮಾಡಿದ್ದಾರೆ. ದಾಸರು ಜನಮಧ್ಯದಲ್ಲಿ ನಿಂತು ಜನತೆಯನ್ನೇ ಜ್ಞಾನದ ವೈಕುಂಠ(ಔನತ್ಯಕ್ಕೆ)ಕ್ಕೆ ಎತ್ತುವ ಸಾಹಸ ಮಾಡಿದ್ದಾರೆ. ದಾಸ ಸಾಹಿತ್ಯವು ಸಾರ್ವಕಾಲಿಕ ಸತ್ಯ, ನೀತಿ, ಧರ್ಮ, ಜೀವಮೌಲ್ಯಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ. ಅಲ್ಲಿ ಬಳಕೆಯಾದ ಶಬ್ದ ಚಿತ್ರಗಳು ದೇಶಿಯತೆಯ ನೆಲೆಯಿಂದ ಮೂಡಿಬಂದಿವೆ. ಈ ಕಾರಣದಿಂದ ದಾಸ ಸಾಹಿತ್ಯವು ಕನ್ನಡಿಗರೆಲ್ಲರ ಹೃದಯ ಶ್ರೀಮಂತಿಕೆಯನ್ನು ಹೆಚ್ಚಿಸುವ ಕಾವ್ಯ ಭಂಡಾರವಾಗಿದೆ[1].

 

[1]ಇಲ್ಲಿ, ಆಯ್ಕೆ ಮಾಡಿಕೊಂಡ ಕೀರ್ತನೆಗಳ ಘಟಕಗಳನ್ನು ’ಈಸಬೇಕು’ ಇದ್ದು ಜೈಯಿಸಬೇಕು’ ಸಂ.ಪ್ರೊ. ಎ.ವಿ. ನಾವಡ, ಕ.ವಿ.ವಿ. ಹಂಪಿ ಈ ಕೃತಿಯಿಂದ ಆಯ್ಕೆ ಮಾಡಿಕೊಳ್ಳಲಾಗಿದೆ.