ಭಂಡನಾದೆನು ನಾನು ಸಂಸಾರದಿ
ಕಂಡು ಕಾಣದ ಹಾಗೆ ಇರಬಹುದೆ ಹರಿಯೆ

ಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ
ದಿಂಡಗಾರರ ಮನೆಗೆ ಬಲು ತಿರುಗಿದೆ
ಶುಂಡಾಲನಂತೆನ್ನ ಮತಿ ಮಂದವಾಯಿತೈ
ಪುಂಡರೀಕಾಕ್ಷ ನೀ ಕರುಣಿಸೈ ಬೇಗ

ಸಂಸಾರದಲ್ಲಿ ನೊಂದು ಬೆಂದು ಹತಾಶೆಗೊಂಡ ವ್ಯಕ್ತಿಯ ನೋವನ್ನ ಇಲ್ಲಿ ಕಾಣಬಹುದು ‘ಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ’ ಎಲ್ಲ ದೇವರಿಗೂ ಕೈಮುಗಿದು ಕಷ್ಟ ಪರಿಹಾರವಾಗದಿದ್ದಾಗ ನಿಂದೆಯೊಂದೆಗೆ ದೇವರನ್ನು ಸ್ತುತಿಸುವುದನ್ನು ಕಾಣಬಹುದು.

ಕದವ ಮುಚ್ಚಿದಳಿದಕೋ ಗಯ್ಯಾಳಿ ಮೂಳಿ
ಕದವ ಮುಚ್ಚಿದಳಿದಕೋ ಚಿಲುಕ ಅಲ್ಲಾಡುತಿದೆ
ಒದಗಿದ್ದ ಪಾಪವು ಹೋದೀತು ಹೊರಗೆಂದು

ದಾಸರು ಭಿಕ್ಷೆಗೆ ಹೋದಾಗ ಅವರನ್ನು ಇತರ ಭಿಕ್ಷುಕರಂತೆಯೇ ಕಂಡು ಬಾಗಿಲನ್ನು ಬಡಿದುಕೊಂಡ ಒಂದು ಹೆಣ್ಣಿನ ಮೇಲಿನ ಆಕ್ರೋಶ ಇಲ್ಲಿ ನಿರೂಪಿತವಾಗಿದೆ. ವಾಸ್ತವವಾಗಿ ಇದು ಅಂಥ ಹೆಣ್ಣುಗಳ ಮೇಲಿನ ಸಿಟ್ಟಿನ ಪ್ರತಿಕ್ರಿಯೆ ಮಾತ್ರವಲ್ಲ. ಹರಿದಾಸರಂಥ ಮುಕ್ತಜೀವಿಗಳು ಹಾಡು ಹೇಳಿಕೊಂಡು ಮನೆಮನೆಗೆ ಸಾಹಿತ್ಯ-ಧರ್ಮ, ಸಂಸ್ಕೃತಿ ಪ್ರಸಾರ ಮಾಡುತ್ತಿರುವಾಗ ಜನ ಮನಸ್ಸಿನ ಬಾಗಿಲು ತರೆದು ಇಂಥ ತತ್ವದ ಪದಗಳಿಗೆ ಕಿವಿಕೊಡದೆ ಬದುಕಿನ ಬಾಗೆಲನ್ನೇ ಇಕ್ಕಿಕೊಳ್ಳುತ್ತಿದ್ದಾರಲ್ಲ ಎಂಬ ಸಂಕಟದ ಭಾವವೂ ಈ ಸಿಟ್ಟಿನ ಹಿಂದೆ ಕೆಲಸ ಮಾಡುತ್ತದೆ. ದುಷ್ಟ ಸ್ವಭಾವದ ಹೆಂಗಸು ಮಾಡಿದ ಪಾಪವು ಹೊರಗೆ ಹೋದೀತೆಂದು ಬಾಗಿಲು ಹಾಕಿ ಚಿಲಕ ಹಾಕಿರುವ ಚಿತ್ರಣವು ಮಾನವನು ಪಾಪವನ್ನು ಮಾಡಿಯೂ ಅದರ ಬಗೆಗೆ ಅರಿಯದಿರುವುದರ ಸಂಕೇತವಾಗಿದೆ. ಪಾಪವು ಹೊರಗೆ ಹೋದೀತೆಂದು ಹೇಳುವಲ್ಲಿ ಮನುಷ್ಯನ ಅಜ್ಞಾನದ ಪರಮಾವಧಿಯನ್ನು ಕಾಣಬಹುದು.

ಗಂಡ ಬಂದ ಹೇಗೆ ಮಾಡೆಲೇ ಅಯ್ಯಯ್ಯೋ ಪಾಪಿ
ಪಂಚಮಹಾಪಾತಕಿ ಗಂಡ ಹಿಂಚಿಕ್ಕಿ ನೋಡಿಕೊಂಡು
ವಂಚನೆಯಿಂದಲಿ ಗುಡುಗು ಮಿಂಚಿನಂತೆ ಬಂದು ನಿಂತ
ಮಂಚದ ಕೆಳಗಾರು ಹೊಕ್ಕೊಳ್ಳೆ ನಿಧಿ ಹಿಡಿಸುವಂಥ
ಸಂಚಿಯೊಳಗಾದರು ಕೂಡಲೊ ಧಾನ್ಯದ ದೊಡ್ಡ
ಹಂಚಿನ್ಹರವಿಯಲ್ಲಿ ಅಡಗಲೊ

ಇಲ್ಲಿ ಸಂಸಾರದ ಇನ್ನೊಂದು ಮುಖವನು ಕಾಣಬಹುದು. ಅದು ಇಷ್ಟಪಟ್ಟು ‘ಇಟ್ಟುಕೊಂಡದ್ದು’ ಪರಪುರುಷನೊಂದಿಗೆ ಸಂಪರ್ಕವಿರಿಸಿಕೊಂಡ ಗೃಹೀಣಿಯ ಚಿತ್ರಣ ಕೆಲವೆಡೆ ಬಂದಿದೆ. ಇಲ್ಲಿ ವ್ಯಭಿಚಾರವೆನ್ನುವುದು ‘ಇಹ’ದ ಸಂಸಾರದ ದುಃಸ್ಥಿತಿಯಿಂದ ಪರದೆಡೆಗೆ ಪಾರಾಗಲು ಕಂಡುಕೊಂಡ ದಾರಿಯಾಗಿ ಕಾಣುತ್ತದೆ. ಈ ಅರ್ಥದಲ್ಲೂ ಪರಪುರುಷನು ನಿಜವಾಗುತ್ತಾನೆ. ಪರಪುರುಷನೊಂದಿಗಿದ್ದ ಗೃಹಿಣಿಯ ಸಂದಿಗ್ಧ ಸನ್ನಿವೇಶವೊಂದನ್ನು ಈ ಕೀರ್ತನೆ ಕಟ್ಟಿಕೊಡುತ್ತದೆ.

ಸಾಕು ಸಂಸಾರ ಸಜ್ಜಾಗಿಲ್ಲ ಒಲ್ಲೆ ಒಗೆತನವ
ಆರು ಮಂದಿಯು ಗಂಡರಾಳುವರು ಎನ್ನ
ಆರು ಮಂದಿಗೆ ಮೂರು ಸುತರೆನಗೆ
ಆರು ಮೂರೇಳ್ವರು ಭಾವ ಮೈದುನರೆಲ್ಲ
ಆರೇನೆಂದರೆ ಬಿಡರು ಯಾರಿಗುಸಿರಲಮ್ಮ
………………………………………

ಶಿಥಿಲ ಸಂಸಾರದ ನೋವನ್ನು ಕಂಡ ಹೆಣ್ಣು ಸಂಸಾರದ ಬಗೆಗೆ ತೋರುವ ಅನಾದರವನ್ನು ಇಲ್ಲಿ ಕಾಣಬಹುದು. ಇಲ್ಲಿ ವ್ಯಕ್ತಿಯನ್ನು ಹೆಣ್ಣಾಗಿ ಕಾಣಲಾಗಿದ್ದು ಕೂಡಿ ಬಾಳಲಾರದ ಚಿತ್ರವನ್ನು ದಾಸರು ಕಟ್ಟಿದ್ದಾರೆ. ಈ ಹೆಣ್ಣಿಗೆ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಆರು ಗಂಡಂದಿರು ಕಾಯಿಕ, ವಾಚಿಕ, ಮತ್ತು ಮಾನಸಿಕ ಪಾಪಗಳೆಂಬ ತ್ರಿದೋಷಗಳೇ ಮೂರು ಸುತರು. ಸ್ತ್ರೀ, ಅಕ್ಷ, ಮೃಗಯೆ, ಪಾನ, ವಾಕ್ಷಾರುಷ್ಯ, ದಂಡಪಾರುಷ್ಯ ಮತ್ತು ಅರ್ಥದೂಷಣೆಗಳೆಂಬ ಸಪ್ತ ವ್ಯಸನಗಳೇ ಭಾವಮೈದುನರು, ಇವರೆಲ್ಲ ಸಂಸಾರದ ಕಷ್ಟಕ್ಕೆ ಕಾರಣರಾಗಿದ್ದು ದಶಗುಣಗಳು, ಪಂಚೇಂದ್ರಿಯಗಳು ಇವೆಲ್ಲ ಸಂಸಾರದ ‘ಕೂಡಿ ಬಾಳುವ’ ಸುಖಕ್ಕೆ ಅಡ್ಡಿಯಾಗಿದ್ದಾರೆ ಎಂದು ಹಲುಬುವ ಹೆಣ್ಣಿನ ಮೂಲಕ ಸಂಸಾರದ ಬಗೆಗಿನ ದಾಸರ ವಿಮರ್ಶೆ ಅಪೂರ್ವವಾಗಿದೆ.

ಸುಣ್ಣವಿಲ್ಲ ಭಾಗವತರೆ
ನುಣ್ಣನೆ ಗೋಡೆಯ ನಿನ್ನೆ ತೊಡೆದು ಬಿಟ್ಟೆ

ವೀಳ್ಯ ಹಾಕುವನೆಲ್ಲ ವ್ಯಾಧಿಸ್ಥ ಗಂಡನು
ಬಾಳು ಸಟೆ ಎನ್ನ ಬಾಯಿ ನೋಡಿ
ಹಾಳು ಮನೆಯ ಹೊಕ್ಕು ಎನ್ನ ಒಡಲು ಉರಿಯುತಿದೆ

ಹೇಳಿ ಈ ಬದುಕನ್ನು ಪ್ರಯೋಜನವೇನು

ಮದ್ದು ತಿಂದು ತಿಂದು ಮನೆಯೆಲ್ಲ ಬರಿದಾಗಿ
ಹೊದ್ದಿತು ಮೂದೇವಿ ಮೈದುನಗೆ
ಮುದ್ದಿಕ್ಕೊ ಸಂಚಿಯು ಭಂಗಿ ಮುಕ್ಕಿ ಭಾವ
ಬಿದ್ದುಕೊಳ್ಳುತ್ತಾನೆ ಒಳಗೆ ಕದವ ಮುಚ್ಚಿ

ತೊನ್ನು ಬಡಕ ಮಾವ ಅನ್ಯಕಾರಿ ಅತ್ತೆ
ಗನ್ನ ಘಾತಕಿ ರಂಡೆ ಅತ್ತಿಗೆಯು
ಎನ್ನ ಗೊಳು ತಾನೆ ನಾಶವೆಂದಿಗಹುದೊ
ಪನ್ನಗಶಯನ ಪುರಂದರವಿಠಲ

ವೀಳ್ಯವನ್ನು ಶುಭಕಾರ್ಯಗಳ ಸಂದರ್ಭದಲ್ಲಿ ವಿಶೇಷವಾಗಿ ಬಳಸುತ್ತಾರೆ. ವೀಳ್ಯ ಹಾಕಲು ಸುಣ್ಣಬೇಕು. ಆದರೆ ಇಲ್ಲಿ ಹೆಣ್ಣು ‘ಸುಣ್ಣವಿಲ್ಲ ಭಾಗವತರೆ’ ಎಂದು ಹೇಳೀರುವುದು ಶುಭದ ಸಂಕೇತವಲ್ಲ. ಈ ಹೆಣ್ಣಿನ ಸಂಸಾರದಲ್ಲಿ ಸುಖವಿಲ್ಲ. ಕೀರ್ತನೆಯ ಪಲ್ಲವಿ ಮೇಲ್ನೋಟಕ್ಕೆ ‘ಸುಣ್ಣವಿಲ್ಲ’ದಿರುವುದನ್ನು ಹೇಳಲು ಉದ್ದೇಶಿಸಿರುವಂತೆ ತೋರಿದರೂ ಮುಂದಿನ ನುಡಿಯಲ್ಲಿ ಬರುವ ವಿವರಗಳು ಪಲ್ಲವಿಯನ್ನು ಕೇವಲ ನೆಪವಾಗಿಸಿಕೊಂಡು, ಆ ಉದ್ದೇಶವನ್ನು ಮೀರಿ ಸಂಸಾರದ ಶಿಥಿಲತೆಯ ಚಿತ್ರಣವನ್ನು ಬಿಚ್ಚುತ್ತ ಹೋಗುತ್ತವೆ.

ಮುಪ್ಪಿನ ಗಂಡನ ಒಲ್ಲೆನು ನಾನು
ತಪ್ಪದೆ ಪಡಿಪಾಟ ಪಡಲಾರೆನಕ್ಕ

ಉದಯದಲ್ಲೇಳಬೇಕು ಉದಕ ಕಾಸಲು ಬೇಕು
ಬದಿಯಲ್ಲಿ ನಾನಿದ್ದು ಬಜೆ ಅರೆಯಬೇಕು
ಹದನಾಗಿ ಎಲೆ ಸುಣ್ಣ ಅಡಿಕೆ ಕುಟ್ಟಲು ಬೇಕು
ಬಿದಿರು ಕೋಲನು ಮುಂದೆ ಇಡಬೇಕಕ್ಕ
…………………………………………..

ವಯಸಾದ ಗಂಡನ ಜೊತೆ ಉತ್ತಮ ಸಂಸಾರ ನಡೆಸುವುದು ಕಷ್ಟ ಇದರಲ್ಲಿ ‘ಗಂಡಾ’ ಮಾತ್ರ ಇದ್ದಾನೆ, ಅವನು ಮುಪ್ಪಿಗೆ ಬಂದಿರುವುದರಿಂದ ತಾನು ಪಡುತ್ತಿರುವ ‘ಪಡಿಪಾಟ’ವನ್ನು ಕಣ್ಣಿಗೆ ಕಟ್ಟುವ ದೈನಂದಿನ ವಿವರಗಳೊಂದಿಗೆ ಹೆಂಡತಿ ಮುಂದಿಡುತ್ತಿದ್ದಾಳೆ. ಹೀಗಾಗೆ ಇಲ್ಲಿ ಸೈರಿಸಲಾಗದ ಸಂಸಾರದ ರೂಪಕ ಮತ್ತಷ್ಟು ಮೂರ್ತವಾಗುತ್ತದೆ.

ವಿಷ ಕುಡಿಯುತೇನೆ ನೋಡು ಗಂಡ ವಿಷ ಕುಡಿಯುತೇನೆ
ವಿಷ ಕುಡಿಯುತ್ತೇನೆ ಹಸನಾಗಿರುತಿರು
ಹಂಸದಂತೆ ದೇಹವ ಹತವ ಮಾಡುತೇನೆ
………………………………………………

ಸಾಂಸಾರಿಕ ಬದುಕಿನಲ್ಲಿ ನೊಂದು ವಿಷ ಕುಡಿಯುವ ಚಿತ್ರಣ ಇಲ್ಲಿದೆ. ಹಂಸದಂತೆ ದೇಹವ ಹತವ ಮಾಡುತ್ತೇನೆ ಎಂಬಲ್ಲಿ ಹಂಸವು ಆತ್ಮದ ಸಂಕೇತವಾಗಿದ್ದು ಇಲ್ಲಿ ಲೌಕಿಕ ಬದುಕಿನ ಬಿಡುಗಡೆಯ ಭಾವವಿದೆ. ಇದು ಇಹದ ಪಾಲಿಗೆ ಸಾಯಿಸುವ ವಿಷವಾಗಿ ಪರದ ಪಾಲಿಗೆ ಹುಟ್ಟಿಸುವ ಅಮೃತವಾಗಿರುವುದರಿಂದ ಈ ಹಬ್ಬದ ಸಂಭ್ರಮ. ಪುರಂದರವಿಠಲನ ಚರಣವ ನೆನೆಯುತ ಎಂದೆಂದಿಗೂ ಜೀವ ಸತ್ತು ಪುಟ್ಟದಂತೆ (ವಿಷವ ಕುಡಿಯುತ್ತೇನೆ) ಎಂಬಲ್ಲಿ ಇದನ್ನು ಗಮನಿಸಬಹುದು.

ಲೊಟಪಾಟ ಸಂಸಾರ ಏನಣ್ಣ
ಲೊಟಪಾಟ ಸಂಸಾರದೊಳಗೆ ಸಿಲುಕಿ ನಾ
ವಿಠಲ ನಿನ್ನ ಧಾನ್ಯವ ಮರೆತೆನಯ್ಯ

ಹುಟ್ಟಿದ್ದ ಮುಂಚೆ ಹಸಿವೆಯನರಿಯೆ
ಕೊಟ್ಟಿಗೆಯೊಳಗೆ ಎಂಟು ಆನೆಯ ಕಂಡೆ
ಮನೆಯ ಒಳಗೆ ಏಳು ಕುದುರೆಯ ಕಂಡೆ
ಕಿಲ್ಲೆಯೊಳಗೆ ಏಳು ಚರಣವ ಕಂಡೆ

ಈ ಸಂಸಾರವೆಂಬುದು ಮಿಥ್ಯೆ ಇಲ್ಲಿ ಬರುವ ‘ಎಂಟು ಆನೆ’ಗಳು ಅಷ್ಟಭೋಗಗಳಾದ ಮನೆ, ಹಾಸುಗೆ, ವಸ್ತ್ರ, ಆಭರಣ, ಸ್ತ್ರೀ, ಪುಷ್ಪ, ಗಂಧ, ತಾಂಬೂಲ, ಎಂಬ ಅಷ್ಟಭೋಗಗಳ ಸಂಕೇತವಾಗಿದೆ. ಸಪ್ತ ವ್ಯಸನಗಳೇ ಮನೆಯೊಳಗಿನ ಏಳು ಕುದುರೆಗಳು. ಕೋಟೆಯೊಳಗಿನ ಏಳು ಚರಣಗಳೆಂದರೆ ಸಪ್ತ ವ್ಯಸನಿಗಳಿಂದಾದ ನಡೆಗಳು. ಅವುಗಳು ನಮ್ಮ ಬಂಧನದ ಸಂಕೇತವಾಗಿದೆ. ಹುಟ್ಟುವ ಮೊದಲು ಹಸಿವು ನೀರಡಿಕೆಗಳಿಲ್ಲ. ನಂತರ ಎಲ್ಲವಿದ್ದರೂ ದೇವರನ್ನು ಮರೆತು ಸುಖವಿಲ್ಲ. ಇದೇ ಕೀರ್ತನೆಯಲ್ಲಿ ಬರುವ ‘ರೆಕ್ಕೆಯಿಲ್ಲದೆ ಹಾರ್ವ ಪಕ್ಷಿ’ ಮತ್ತೆ ಭವಬಂಧನದ ಬಿಡುಗಡೆಯ ಸಂಕೇತವಾಗಿದೆ.

ಲೊಡಕ ಲೊಡಕ ಚಿಹ್ಮರ ಕೆಟ್ಟ ಸಂಸಾರವು ನೋಡಮ್ಮಮ್ಮ
ಲೊಡಕ ಸಂಸಾರವು ನಮ್ಮೆಲ್ಲರ ಗತಿರಹಿತ
ಮಾಡುವ ಲೊಡಲೊಟ್ಟೆಮ್ಮ
…………………………….
ಲೊಳೆಲೊಟ್ಟೆ ಎಲ್ಲಾ ಲೊಳಲೊಟ್ಟೆ
ಆನೆ ಕುದುರೆ ಒಂಟೆ ಲೊಳಲೊಟ್ಟೆ ಬಲು
ಸೇನೆ ಭಂಡಾರವು ಲೊಳಲೊಟ್ಟೆ

ಈ ಮೇಲಿನ ಕೀರ್ತನೆಗಳಲ್ಲಿ ಸಂಸಾರವೆಂಬುದು ಬರೀ ಮಿಥ್ಯೆ ಎಂಬ ಭಾವ ವ್ಯಕ್ತವಾಗಿದೆ. ಸಂಸಾರದಲ್ಲಿ ಹೇಗಿರಬೇಕು ಎಂಬುದರ ಬಗ್ಗೆ ದಾಸರು ಈ ಕೀರ್ತನೆಯಲ್ಲಿ ಹೀಗೆ ಹೇಳಿದ್ದಾರೆ.

ಹೀಗಿರಬೇಕು ಸಂಸಾರದಲ್ಲಿ ಹೀಗೆ ಬರೆದಿರಲು ಪ್ರಾಚೀನದಲ್ಲಿ

ಆಡುವ ಮಕ್ಕಳು ಮನೆಯ ಕಟ್ಟಿದರು
ಆಡಿ ಸಾಕೆಂದು ಮುರಿದು ಓಡಿದರು

ಮಕ್ಕಳು ಆಟವಾಡಲು ಕಟ್ಟಿದ ಮನೆಯೇ ಸಂಸಾರ. ಆ ಮನೆಯನ್ನು ಮುರಿದು ಓಡುವುದೇ ಸಾವು. ಹೀಗೆ ಮಕ್ಕಳ ಮನೆಕಟ್ಟುವ ಆಟದಲ್ಲಿ ಸಂತೋಷವೂ ಇದೆ. ಅಂತೆಯೇ ನಾವು ಸಂಸಾರವನ್ನು ಒಂದು ಆಟದಂತೆ ಸ್ವೀಕರಿಸಬೇಕೆಂಬಲ್ಲಿ ಸಂಸಾರದ ಬಗೆಗಿನ ದಾಸರ ದೃಷ್ಟಿಕೋನವು ನಮಗೆ ವಿನೂತನವಾಗಿ ಕಾಣುತ್ತದೆ.

ಹರಿಯಸ್ವರಣೆಯಿಲ್ಲದೆ ಬಾಳಿಬದುಕಿದರೇನು
ನರಜನ್ಮದಲಿ ಜನಿಸಿ ಫಲವೇನು ಹರಿಯೆ

ನೊರಸಿಲ್ಲದಾ ಊಟ ನೂರು ಬಗೆಯಿದ್ದರೇನು
ನಾರಿಯಿಲ್ಲ ಸಂಸಾರವೇನು
ಹೋರಿ ಹೆಣಗುವ ಮಕ್ಕಳು ನೂರಾರು ಇದ್ದರೇನು
ಪಾರಮಾರ್ಥ ತಿಳಿಯದಿಹ ಪುರುಷರೇನು

ಹೆಣ್ಣು ಸಂಸಾರದ ಕಣ್ಣು, ಹೆಣ್ಣಿಲ್ಲದೆ ಸಂಸಾರವೆನಿಸದು. ಅಂತೆಯೇ ಪಾರಮಾರ್ಥ ತಿಳಿಯದೆ. ಹರಿಸ್ಮರಣೆ ಮಾಡದೆ ಬಾಳಿ ಬದುಕಿ ಫಲವಿಲ್ಲ.

ಸಾವು

ಮಡದಿ ಮಕ್ಕಳು ಎಂದು ಒಡವೆ ವಸ್ತುಗಳೆಂದು
ಸಡಗರದಿ ತಾ ಕೊಂಡು ಭ್ರಮಿಸಲೇಕೆ
ಬಿಡದೆ ಯಮನಾಳುಗಳು ಬಾರೆಂದು ಎಳೆವಾಗ
ಮಡದಿ ಮಕ್ಕಳು ಕಡೆಗೆ ತೊಲಗುವರೂ ಮರುಳೆ

ಹುಟ್ಟಿದ ಪ್ರತಿಯೊಬ್ಬರೂ ಸಾಯಲೇಬೇಕು. ಸಾವು ಯಾವಾಗ ಯಾರಿಗೆ ಯಾವ ರೀತಿ ಬಂದೆರಗುತ್ತದೆಂದು ಯಾರಿಗೂ ಹೇಳಲು ಸಾಧ್ಯವಿಲ್ಲ. ಸಾವು ಬರುವಾಗ ನಮ್ಮೊಂದಿಗೆ ಮಡದಿ, ಮಕ್ಕಳು, ಸಂಸಾರ, ಸಂಪತ್ತು, ವೈಭವ ಯಾವುದೂ ಬರವು. ಈ ಬದುಕಿನಲ್ಲಿ ಯಾವುದೂ ಶಾಶ್ವತವಲ್ಲ ಎಂಬ ತತ್ವ ಇಲ್ಲಿ ಅಡಗಿದೆ. ಇದೇ ಭಾವ “ಅರ್ತಿಯಾಗಿದೆ ಬದುಕು ಸಾಯಲಾರೆನು ಎನಲು ಮೃತ್ಯು ಹೆಡತಲೆಯಲ್ಲಿ ನಗುತಿರ್ಪಳಯ್ಯ” ಕೀರ್ತನೆಯಲ್ಲಿದೆ

ಮನಸ್ಸು

ಮಲವ ತೊಳೆಯಬಲ್ಲರಲ್ಲದೆ ಮನವ ತೊಳೆಯಬಲ್ಲರೆ
ಹಲವು ತೀರ್ಥಂಗಳಲಿ ಮುಳುಗಿ ಹಲುಬಿದರೆ ಫಲವೇನು

ಅಂತರಂಗ ಶುದ್ಧಿಯಿಲ್ಲದೆ ಏನು ಮಾಡಿದರೂ ವ್ಯರ್ಥ ಎಂಬುದನ್ನು ಈ ಕೀರ್ತನೆ ಪ್ರತಿಪಾದಿಸುತ್ತದೆ. ಆದ್ದರಿಂದ ಅಂತರಂಗದ ಕೊಳೆಯನ್ನು ತೊಳೆಯಬೇಕು. ಅದನ್ನೇ ದಾಸರು ಇನ್ನೊಂದು ಕೀರ್ತನೆಯಲ್ಲಿ ಈ ತೀರಿ ಹಾಡಿದ್ದಾರೆ.

ಮುಸುರೆ ತೊಳೆಯಬೇಕು ಈ ಮನಸ್ಸಿನ
ಮುಸುರೆ ತೊಳೆಯಬೇಕು
ಮುಸುರೆ ತೊಳೆಯಬೇಕು ಗುಸು ಗುಸು ಬಿಡಬೇಕು
ಈಶ ಪ್ರೇರಣೆಯೆಂಬೋ ಹಸಿಯ ಹುಲ್ಲನು ಹಾಕಿ
ಅಷ್ಟಮದದಿಂದ ಸುಟ್ಟ ಈ ಪಾತ್ರೆಯ
ವಿಷ್ಟುಮಾಮವೆಂಬೊ ಕೃಷ್ಣಾ ನದಿಯಲ್ಲಿ
…………………………………………..

ಹುಲ್ಲನ್ನು ಹಾಕಿ ಸುಟ್ಟ ಪಾತ್ರೆಯನ್ನು ತೊಳೆಯುವಂತೆ ಮನಸ್ಸಿನ ಕೊಳೆಯನ್ನು ವಿಷ್ಣುನಾಮವೆಂಬ ಕೃಷ್ಣಾನದಿಯಲ್ಲಿ ತೊಳೆಯಬೇಕು. ಭಗವಂತನ ನಾಮಸ್ಮರಣೆಯಿಂದ ಮನಶುದ್ಧಿ ಸಾಧ್ಯ ಎಂಬುದು ದಾಸರ ಅಭಿಮತ.

ಗೃಹಕೃತ್ಯ

ಅನುಭವದಡುಗೆಯ ಮಾಡಿ ಅದ
ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ
ತನುವೆಂಬ ಭಾಂಡವ ತೊಳೆದು ಕೆಟ್ಟ
ಮನದ ಚಂಚಲವೆಂಬ ಮುಸುರೆಯ ಕಳೆದು
ಘನವಾಗಿ ಮನೆಯನ್ನು ಬಳಿದು ಅಲ್ಲಿ
ಮಿನುಗುವ ತ್ರಿಗುಣದ ಒಲೆಗುಂಡ ನಡೆದು

ಅಡುಗೆ ಮಾಡಲು ಮುಸುರೆ ಪಾತ್ರೆಯನ್ನು ತೊಳೆದು, ಪರಿಶುದ್ಧವಾಗಿ ಮಿಂದು ಮಡಿಯುಟ್ಟು, ನೀರಿಡುವುದು, ಸೌದೆಗೆ ಬೆಂಕಿ ಹಾಕುವುದು ಇತ್ಯಾದಿ ಅನೇಕ ಕಾರ್ಯಗಳಿವೆ. ಇಲ್ಲಿ ಅಡುಗೆ ಮಾಡುವುದರ ವಿವರಗಳನ್ನು ನೀಡುವುದರೊಂದಿಗೆ ಮನಶುದ್ಧಿಯ ‘ಅಡುಗೆ’ ಮಾಡಬೇಕಾದ ವಿವರಗಳಿವೆ. ಆದ್ದರಿಂದ ಇದು ಅನುಭವದಡುಗೆಯೂ ಹೌದು; ಅನುಭಾವದಡುಗೆಯೂ ಹೌದು.

ಆಚಾರ ವಿಚಾರ

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ
ವಿಚಾರವಿಲ್ಲದ ಪರ ದೂಷಿಪುದಕ್ಕೆ ಚಾಚಿಕೊಂಡಿರುವಂಥ ನಾಲಗೆ
ಇಲ್ಲಿ ಇನ್ನೊಬ್ಬರ ಬಗೆಗೆ ದೂಷಿಸುವ ಮಾನವನ ನೀಚತನದ ಬಗ್ಗೆ ಹೇಳಲಾಗಿದೆ.
ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು ಭೂ
ಮಂಡಲಕ್ಕೆ ಪಾಂಡುರಂಗ ವಿಠಲನೆ ಪರ ದೈವವೆಂದು

ಒಡಲ ಜಾಗಟೆಯ ಮಾಡಿ ನುಡಿವ ನಾಲಿಗೆಯ ಪಿಡಿದು
ಬಿಡದೆ ಢಣಢಣರೆಂದು ಬಡಿದು ಚಪ್ಪಳಿಕ್ಕುತ್ತ

ಈ ದೇಹವನ್ನು ಜಾಗಟೆ ಮಾಡಿ ಡಂಗುರವನ್ನು ಸಾರಬೇಕು. ಅಂದರೆ ಹರಿಭಕ್ತರ ದೇಹವು ಡಂಗುರದ ಜಾಗಟೆಯಂತೆ ಹರಿಭಕ್ತಿಸಾರವನ್ನು ಪ್ರಸಾರಮಾಡಬೇಕು.

ಸಾಮಾಜಿಕ ವಿಡಂಬನೆ

ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ
ಕಣಕ ಕುಟ್ಟೋ ಅಲ್ಲಿಗೆ ಹಣಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲಿ ಬಡಿದರೆ
ಕೈಂ ಕುಯಿ ರಾಗವ ಮಾಡುವಿರಿ

ಜನರಿಗೆ ಪೊಳ್ಳು ಭರವಸೆಗಳನ್ನು ನೀಡುವ ರಾಜಕಾರಣಿಗಳ ಬಗ್ಗೆ ವಿಡಂಬನಾತ್ಮಕವಾಗಿ ದಾಸರು ‘ಡೊಂಕು ಬಾಲದ ನಾಯಕರೆ’ ಎಂದು ಛೇಡಿಸಿದ್ದಾರೆ. ನಾಯಿ ಬಾಲ ಯಾವತ್ತೂ ಡೊಂಕು ಅಂತೆಯೇ ನಾಯಕರ ಬುದ್ಧಿಯೂ ಡೊಂಕು ಎಂಬುದನ್ನು ಸೊಗಸಾಗಿ ಹಾಸ್ಯದೊಂದಿಗೆ ಹೇಳಿದ್ದಾರೆ. ದಾಸರ ಸಾಮಾಜಿಕ ವಿಮರ್ಶೆಯನ್ನು ಇಲ್ಲಿ ಕಾಣಬಹುದು.

ಇದರಲ್ಲಿ ಬರುವ ಶಬ್ದಚಿತ್ರ ಹಾಗೂ ಪ್ರಾಸಬದ್ಧವಾದ ಮಾತುಗಳು ಹಾಸ್ಯಕ್ಕೆ ಕಾರಣವಾಗಿದೆ. ಇದೊಂದು ಪುಟ್ಟ : ಕಥೆಯಾದರೂ ಇದರಲ್ಲಿ ವಿಡಂಬನೆ ಇಲ್ಲದೆ ಇಲ್ಲ. ಆ ನಾಯಿಯಂತೆಯೇ ಪ್ರಪಂಚದ ಜನರು ತಮಗೆ ನಿಲುಕದ ವಸ್ತುಗಳನ್ನು ಗಳಿಸಲು ಅತಿಕ್ರಮ ಪ್ರವೇಶ ಮಾಡಿ ಕ್ಲೇಶಕ್ಕೆ ಗುರಿಯಾಗುವರೆಂಬ ಧ್ವನಿ ಇದರಲ್ಲಿ ನಾವು ಗುರುತಿಸಬಹುದು.

.೪. ಧಾರ್ಮಿಕ ಜಗತ್ತು

‘ಧರ್ಮವೆಂಬ ಸಂಬಳದ ಗಳಿಸಿಕೊಳ್ಳಿರೊ’ ಎಂದು ಸಾರಿದ ಪುರಂದರದಾಸರ ಧಾರ್ಮಿಕ ಚಿಂತನೆಗಳು ವಿನೂತನವಾದುದು. ಪುರಂದರದಾಸರ ಸಮಗ್ರ ದಾಸ ಸಾಹಿತ್ಯ ಧಾರ್ಮಿಕತೆಯೆಡೆಗೂ ಕೇಂದ್ರಿತವಾಗಿದೆ. ಅವರ ಕೀರ್ತನೆಗಳಲ್ಲಿ ಸಾಮಾನ್ಯ ಜನರಿಗೂ ಅರ್ಥವಾಗುವಂತೆ ತಾತ್ವಿಕ ಚಿಂತನೆಗಳು ಅಡಗಿವೆ. ಆತ್ಮನಿವೇದನೆ, ಆಚರಣೆಗಳು,ಲೋಕ ವಿಡಂಬನೆ ಮೊದಲಾದ ರೀತಿಯಲ್ಲಿ ಅಮೂಲ್ಯವಾದ ಧಾರ್ಮಿಕ ಚಿಂತನೆಗಳು ರೂಪಕಗಳಾಗಿ ನಮ್ಮ ಮುಂದೆ ತೆರೆದು ನಿಲ್ಲುತ್ತವೆ.

ಧರ್ಮವೆಂಬ ಸಂಬಳದ ಗಳಿಸಿಕೊಳ್ಳಿರೊ
ಪೆರ್ಮೆಯಿಂ ದೇಹವ ನಂಬಬೇಡಿ ಕಾಣಿರೊ
ಅಟ್ಟ ಅಡುಗೆ ಕೊಡಲು ಬಿಡಾನು ಕೊಟ್ಟ ಸಾಲ ಕೇಳಬಿಡನು
ಪೆಟ್ಟಿಗೆಯೊಳಗಿದ್ದ ಚಿನ್ನವ ತೊಟ್ಟೇನೆಂದರೆ ಯಮನು ಬಿಡನು
………………………………………………………

ಈ ಬದುಕಿನಲ್ಲಿ ಸಾವು ಅನಿಶ್ಚಿತ. ಆದ್ದರಿಂದ ಇರುವಷ್ಟು ಕಾಲದಲ್ಲಿ ನಾವು ಒಳ್ಳೆಯ ಮಾರ್ಗದಲ್ಲಿ ನಡೆದು ಪುಣ್ಯ ಸಂಪಾದಿಸಿದರೆ ಅದೇ ನಮ್ಮ ಸಂಬಳ. ಅಂತಹ ಸಂಬಳವನ್ನು ಗಳಿಸಿ ಎಂಬುದು ದಾಸರ ಅಭಿಮತ.

ತಾರಕ್ಕ ಬಿಂದಿಗೆ ನಾ ನೀರಿಗೋಗುವೆ ತಾರೇ ಬಿಂದಿಗೆಯ
ಬಿಂದಿಗೆ ಒಡೆದರೆ ಒಂದೇ ಕಾಸು ತಾರೇ ಬಿಂದಿಗೆಯ

ರಾಮನಾಮವೆಂಬೋ ರಸವುಳ್ಳ ನೀರಿಗೆ ತಾರೇ ಬಿಂದಿಗೆಯ
ಕಾಮಿನಿಯರ ಕೂಡ ಏಕಾಂತವಾಡೇನು ತಾರೇ ಬಿಂದಿಗೆಯ

ನೀರು ತರಲು ಹೊರಟ ಹೆಣ್ಣು ತನ್ನ ಅಕ್ಕನಲ್ಲಿ ಬಿಂದಿಗೆಯನ್ನು ಕೇಳುತ್ತಾಳೆ. ಅವಳು ತರಲು ಹೊರಟ ನೀರು ಸಾಮಾನ್ಯವಾದುದಲ್ಲ. ಅದು ರಾಮ ನಾಮ ಎಂಬ ರಸ ಇರುವ, ಗೋವಿಂದ ಎಂಬ ಗುಣವಿರುವ ನೀರು. ಆದ್ದರಿಂದ ಆಕೆ ಆಧ್ಯಾತ್ಮಿಕ ನೀರನ್ನೇ ತರ ಹೊರಟಿದ್ದಾಳೆ. ನೀರು ಪರಿಶುದ್ಧಿಯ ಸಂಕೇತ. ಆಧ್ಯಾತ್ಮವೆಂದೂ ಹಾಗೆಯೇ ಎಂಬುದು ದಾಸರ ಭಾವ.

ಮುತ್ತು ಕೊಳ್ಳಿರೋ ಜನರು ಮುತ್ತು ಕೊಳ್ಳಿರೋ
ಮುತ್ತು ಬಂದಿದೆ ಕೊಳ್ಳಿ ಸಚ್ಚಿದಾನಂದ ದಿವ್ಯ

ಜ್ಞಾನವೆಂಬೊ ಪೋಣಿಸಿದ ದಿವ್ಯಮುತ್ತು
ಧ್ಯಾನದಿಂದ ಕೊಂಬುದಿದನು ದೀನರಾದ ಭಕ್ತ ಜನರು

ಹಿಂದೆ ವ್ಯಾಪಾರಿಗಳಾಗಿದ್ದ ದಾಸರು ಇಲ್ಲಿ ಆಧ್ಯಾತ್ಮದ ಮುತ್ತನ್ನು ಮಾರಲು ಹೊರಟಿದ್ದಾರೆ. ಇದಕ್ಕೆ ಕೊಡಬೇಕಾದ ಹಣವೆಂದರೆ ‘ಧ್ಯಾನ’ ಎಂಬಲ್ಲಿ ಭಗವಂತನ ಧ್ಯಾನದ ಮಹತ್ವವನ್ನು ತಿಳಿಯಬಹುದು. ಈ ಮುತ್ತು ‘ಸತ್-ಚಿತ್’ ಆನಂದ ಎಂಬ ಮುತ್ತು. ಹಣ್ಣಿನ ವ್ಯಾಪಾರ ಬೀದಿ ಬೀದಿಯಲ್ಲಿ ನಡೆದರೆ, ಮುತ್ತಿನ ವ್ಯಾಪಾರ ಅಂಗಡಿಯಲ್ಲಿ ನಡೆಯುವಂಥದು. ಶ್ರೀಮಂತರು ಮಾತ್ರ ಮುತ್ತು ಕೊಳ್ಳಲು ಸಾಧ್ಯ. ಉತ್ತಮಾಧಿಕಾರಿಗಳು ಮಾತ್ರ ಜ್ಞಾನ ಹೊಂದಲು ಸಾಧ್ಯ-ಅರ್ಹರು.

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರು ಕಲ್ಲು ಸಕ್ಕರೆ ಕೊಳ್ಳಿರೋ
ಕಲ್ಲು ಸಕ್ಕರೆ ಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀ ಕೃಷ್ಣನಾಮವೆಂಬ

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತ್ಯೊತ್ತಿ ಗೋಣಿಯೊಳ್ತುಂಬುವುದಲ್ಲ
ಎತ್ತ ಹೊದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿ ಲಾಭ ಬರುವಂಥ

ಸಕ್ಕರೆಯು ಸಿಹಿಯಾಗಿದ್ದರೆ, ಕಲ್ಲುಸಕ್ಕರೆ ಇನ್ನೂ ಸಿಹಿಯಾಗಿರುತ್ತದೆ. ಇಲ್ಲಿ ಶ್ರೀ ಕೃಷ್ಣ ನಾಮವೆಂಬ ಕಲ್ಲುಸಕ್ಕರೆ ಎಂಬಲ್ಲಿ ದಾಸರ ಭಾವತೀವ್ರತೆ ವ್ಯಕ್ತವಾಗುತ್ತದೆ. ಇದನ್ನೇ ಅತಿ ಲಾಭ ಬರುವಂಥ ಸರಕೆಂದು ದಾಸರು ಆಧ್ಯಾತ್ಮಿಕ ಮೌಲ್ಯವನ್ನು ಎತ್ತಿಹಿಡಿದಿದ್ದಾರೆ.

ಈ ಸಕ್ಕರೆಯ ಸವಿ ಬಲ್ಲವರೇ ಬಲ್ಲರು ಎಂದರೆ ಕಲ್ಲುಸಕ್ಕರೆ ಜಗಿದು ತಿನ್ನುವಂಥದಲ್ಲ. ಅದನ್ನು ಮೆಲ್ಲನೆ ಸವಿಯಬೇಕು. ಅವಸರದಲ್ಲಿ ನುಂಗಿದರೆ ಗಂಟಲಕ್ಕೆ ಸಿಕ್ಕಿ ಬೀಳುತ್ತದೆ. ಹಾಗೇ ಬ್ರಹ್ಮ ವಸ್ತುವಿನ ಮಹಿಮೆ ಸವಿಯಬೇಕು. ಮೆಲ್ಲಮೆಲ್ಲನೆ ಅರಗಿಸಿಕೊಳ್ಳಬೇಕು.

ವ್ಯಾಪಾರ ನಮಗಾಯಿತು
ಶ್ರೀಪತಿ ಪಾದಾರವಿಂದೆ ಸೇವೆಯೆಂಬೊ

ಹರಿಕರುಣವೆ ಅಂಗಿ ಗುರುಕುರಣ ಮುಂಡಾಸು
ಹರಿದಾಸರ ದಯವೆಂಬೊ ವಲ್ಲಿ
ಪರಮಪಾಪಿ ಕಲಿ ಎಂಬೊ ಪಾಪಾಸು ಮೆಟ್ಟಿ
ದುರಾತ್ಮರಾದವರ ಎದೆ ಮೇಲೆ ನಡೆವಂಥ
…………………………………………

ಶ್ರೀಪತಿಯ ಪಾದಾರವಿಂದ ಸೇವೆಯ ವ್ಯಾಪಾರವು ಆಧ್ಯಾತ್ಮಿಕದ ವ್ಯಾಪಾರ. ಇಲ್ಲಿರುವ ಸರಕುಗಳೆಂದರೆ, ಹರಿಕರುಣ ಎಂಬ ಅಂಗಿ, ದಯೆ ಎಂಬ ಬಳ್ಳಿ ಇತ್ಯಾದಿ. ಮಾನವನು ಕರುಣೆ, ದಯೆ, ಉತ್ತಮವಾದ ನಡೆ, ನುಡಿ ಶೀಲಗಳನ್ನು ಒಳಗೊಂಡಿರಬೇಕು ಎಂಬುದೇ ಇಲ್ಲಿನ ತಾತ್ಪರ್ಯ.

ನೈವೇದ್ಯವ ಕೊಳ್ಳೋ ನಾರಾಯಣ ಸ್ವಾಮಿ
ದಿವ್ಯ ಷಡುರಸಾನ್ನವನಿಟ್ಟೆನೋ

ದಾಸರು ಶ್ರೀಮನ್ನಾರಾಯಣನಿಗೆ ತನ್ನ ಎಲ್ಲಾ ಗುಣಗಳನ್ನು ಸಮರ್ಪಿಸುತ್ತಿದ್ದಾರೆ. ಇಲ್ಲಿನ ನೈವೇದ್ಯವು ಸಮರ್ಪಣ ಭಾವದ ಸಂಕೇತವಾಗಿದೆ. ನಾವು ಎಲ್ಲವೂ ಭಗವಂತನಿಗೆ ಅರ್ಪಿಸಿದಾಗ ಒಳಿತಾಗುತ್ತದೆಂಬುದು ದಾಸರ ನಂಬಿಕೆ.

ಬುತ್ತಿಯ ಕಟ್ಟೋ ಮನುಜ ಬುತ್ತಿಯ ಕಟ್ಟೋ
ಬುತ್ತಿಯನ್ನು ಕಟ್ಟಿದರೆ ಎತ್ತಲಾದರು ಉಣಬಹುದು
ಧರ್ಮವೆಂಬ ಮಡಕೆಯಲ್ಲಿ ನಿರ್ಮಲ ಮನ ಗಂಗೆ ತುಂಬಿ
ಸುಮ್ಮಾನದುರಿಯ ಹಚ್ಚಿ ಒಮ್ಮಾನಕ್ಯನ್ನ ಬಾಗಿ
……………………………………………………

ನಾವು ಈ ಜನ್ಮದಲ್ಲಿ ಸತ್ಕರ್ಮಗಳನ್ನು ಮಾಡಿದರೆ ಅದರಿಂದ ಪುಣ್ಯ ಸಂಪಾದನೆಯಾಗುತ್ತದೆ. ಬುತ್ತಿಯ ಆಹಾರವನ್ನು ನಾವು ಕೊಂಡೋಗಿ ತಿನ್ನುವಂತೆ ಇಲ್ಲಿ ಸತ್ಕರ್ಮಗಳನ್ನು ಮಾಡಿದರೆ ಆ ಪುಣ್ಯದ ಫಲವನ್ನು ಜನ್ಮಾಂತರಗಳಲ್ಲಿ ಅನುಭವಿಸಬಹುದು. ಇಂತಹ ಉಪದೇಶಗಳಲ್ಲಿರುವ ತಿಳಿವಳಿಕೆ ಬದುಕನ್ನು ಹಸನಾಗಿ ಮಾಡಬಲ್ಲದು. ಪುರಂದರದಾಸರು ಇಲ್ಲಿ ಮೆರೆದಿರುವ ಸಂಸ್ಕೃತಿ ಶ್ರೇಷ್ಠವಾಗಿರುವಂತೆ ಕರ್ಮಬುತ್ತಿಯನ್ನು ಮಾಡಿಕೊಂಡಿರುವ ಅವರ ದೇಶಿಯ ಸೊಬಗೂ ಮನೋಹರವಾಗಿದೆ.

ಇದಕ್ಕೊಳ್ಳಿ ಭವರೋಗಕೌಷಧವನು
ಇಂದ್ರಿಯವ ಜಯಿಸುವುದೆ ಇದಕೆ ಇಚ್ಛಾಪಥ್ಯ
ವಾಸುದೇವನ ನಾಮ ವಾತವಿಧ್ವಂಸಿನೀ
ಜನಾರ್ದನನ ನಾಮ ಜ್ವರಾಂಕುಶ
ಮಾಧವನ ನಾಮವೇ ಮನಗಂಡ ಮಂಡೂರ
ಮಂಗಳಾತ್ಮನೆ ನಾಮ ಮಾಲ್ಯವಸಂತ
……………………………………………

‘ಹುಟ್ಟು’ ಎಂಬ ರೋಗಕ್ಕೆ ಔಷಧವನ್ನು ತೆಗೆದುಕೊಳ್ಳಬೇಕು. ಇಂದ್ರಿಯ ನಿಗ್ರಹವೇ ಇದಕ್ಕೆ ಪಥ್ಯ. ಪಥ್ಯ ಮಾಡದವನಿಗೆ ಔಷಧವೇತಕೆ’ ಎಂಬ ಮಾತಿದೆ. ಯಾವುದೇ ಔಷಧ ತೆಗೆದುಕೊಳ್ಳುವಾಗ ಅದು ಹೆಚ್ಚು ಪರಿಣಾಮಕಾರಿಯಾಗಬೇಕಾದರೆ ಪಥ್ಯ ಮುಖ್ಯ. ಇಲ್ಲಿ ಭವರೋಗಕ್ಕೆ ವಿಷ್ಣುವಿನ ನಾನಾ ನಾಮಗಳೇ ಔಷಧಿ. ಇಲ್ಲಿ ಬಳಸಿರುವ ಔಷಧಿಗಳ ಹೆಸರುಗಳೆಲ್ಲವೂ ರಸೌಷಧಿಗಳು. ೧೨ ಭವರೋಗಕ್ಕೆ ಔಷಧಿಯನ್ನು ಕೊಡುವ ವೈದ್ಯನನ್ನಾಗಿ ನಾವು ದಾಸರನ್ನು ಗುರುತಿಸಬಹುದು.

ಯಾರಿಗೆ ಯಾರುಂಟು ಎರವಿನ ಸಂಸಾರ
ನೀರ ಮೇಲಣ ಗುಳ್ಳೆ ನಿಜಬಲ್ಲ ಹರಿಯೆ
ಬಾಯಾರಿತು ಎಂದು ಬಾವಿನೀರಿಗೆ ಪೋದೆ
ಬಾವಿಲಿ ಜಲಬತ್ತಿ ಬರಿದಾಯ್ತು ಹರಿಯೆ
………………………………………….

ಸಾಂಸಾರಿಕ ಬದುಕು ನಶ್ವರ ಎಂಬುದನ್ನು ಈ ಕೀರ್ತನೆ ಸಾರುತ್ತಿದೆ. ನೀರ ಮೇಲಿನ ಗುಳ್ಳೆ ಒಂದು ಮಾಯೆಯಿದ್ದಂತೆ. ಇಲ್ಲಿ ಬಾವಿಯಲ್ಲಿ ಜಲ ಬತ್ತಿರುವುದು, ಮರ ಬಗ್ಗಿ ಶಿರದ ಮೇಲೊರಗುವುದು ನಮಗೆ ಕಷ್ಟ ಬಂದಾಗಿನ ಅಸಹಾಯಕ ಸ್ಥಿತಿಯನ್ನು ಬಿಂಬಿಸುತ್ತದೆ. ಒಟ್ಟಿನಲ್ಲಿ ಕಷ್ಟ ಕಾಲದಲ್ಲಿ ದೇವನೊಬ್ಬನೇ ನಮ್ಮನು ರಕ್ಷಿಸಬಲ್ಲ ಎಂಬ ಭಾವ ಇಲ್ಲಿಯದು.

ಅಂಬಿಗ ನಾ ನಿನ್ನ ನಂಬಿದೆ ಜಗ
ದಂಬಾರಮಣ ನಂಬಿದೆ

ತುಂಬಿದ ಹರಿಗೋಲಂಬಿಗೆ ಅದ
ಕೊಂಭತ್ತು ಛಿದ್ರವು ಅಂಬಿಗ
ಸಂಭ್ರಮದಿಂ ನೋಡಂಬಿಗ ಅದ
ರಿಂಬು ನೋಡಿ ನಡೆಸಂಬಿಗ
………………………………

ಜೀವನವೆಂಬ ದೋಣಿಯ ಪ್ರಯಾಣಕ್ಕೆ ಆ ಪರಮಾತ್ಮನೇ ಅಂಬಿಗ ಎಂದು ನಂಬಿದ ದಾಸರು ತಮ್ಮನ್ನು ಮುನ್ನಡೆಸಲು ದೇವರಲ್ಲಿ ಬೇಡಿಕೊಳ್ಳುತ್ತಾರೆ. ಈ ದೇಹವು ದೋಣಿಯನ್ನು ನಡೆಸುವ ಹುಟ್ಟು ಇದ್ದಂತೆ. ಆದರೆಆ ಹುಟ್ಟು ಒಂಭತ್ತು ರಂಧ್ರಗಳಿಂದ ಅಂದರೆ ನವದ್ವಾರಗಳಿಂದ ಕೂಡಿದೆ. ತೂತಿರುವ ಹುಟ್ಟನ್ನು ಹಾಸಿಯಿದರೆ ದೋಣಿ ಮುಂದೆ ಸಾಗದು. ಹೊಳೆಯಲ್ಲಿನ ನೀರಿನ ಸೆಳೆತದಿಂದ ದೋಣಿ ಮುಳುಗಬಹುದು. ಇಲ್ಲಿ ಜೀವನವು ಸರಿಯಾಗಿ ಸಾಗಲು ಅಂಬಿಗನೇ (ಪರಮಾತ್ಮ)ನೇ ಬೇಕು. ಪದ್ಯದ ಕೊನೆಯಲ್ಲಿ ಬರುವ ‘ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದುಕೊಂಡೊಯ್ಯೊ ನೀ ನಂಬಿಗೆ’ ಎಂಬುದು ಮೋಕ್ಷದ ಸಂಕೇತವಾಗಿದೆ.

ರಾಮ ನಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ
ವಿಠಲ ನಾಮ ತುಪ್ಪವ ಕಲಸಿ ಬಾಯ ಚಪ್ಪರಿಸಿರೊ
ಒಮ್ಮಾನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮಾನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸೆದು
……………………………………………………

ಪಾಯಸವು ಎಲ್ಲರಿಗೂ ಸಿಹಿಯನ್ನು ನೀಡುತ್ತದೆ. ಪಾಯಸದ ಉದಾಹರಣೆಯೊಂದಿಗೆ ನಾವು ಹೇಗೆ ಜೀವಿಸಬೇಕೆಂಬುದನ್ನು ಈ ಕೀರ್ತನೆ ಹೇಳುತ್ತದೆ. ನಾವು ಒಮ್ಮನಸ್ಸಿನಿಂದ, ಹೃದಯವಂತರಾಗಿ, ವಿವೇಚನಶೀಲರಾಗಿ, ನಿರ್ಲಿಪ್ತರಾಗಿ ದೇವರನ್ನು ಭಜಿಸಿದರೆ ಮನಃಶಾಂತಿ, ಆನಂದ ದೊರಕುತ್ತದೆ. ಅದು ಪಾಯಸದಂತೆ ಸಿಹಿಯಾಗಿರುತ್ತದೆ.

ಮುಳ್ಳು ಕೊನೆಯ ಮೇಲೆ ಮೂರು ಕೆರೆಯ ಕಟ್ಟಿ
ಎರಡು ಬರಿದು ಒಂದು ತುಂಬಲಿಲ್ಲ
ತುಂಬಲಿಲ್ಲದ ಕೆರೆಗೆ ಬಂದನು ಮೂವರೊಡ್ಡರು
ಇಬ್ಬರು ಕುಂಟರು ಒಬ್ಬಗೆ ಕಾಲೇ ಇಲ್ಲ
………………………………………

ಈ ಕೀರ್ತನೆಯು ಪುರಂದರದಾಸರ ಗಂಭೀರವಾದ ಆಧ್ಯಾತ್ಮಿಕ ಚಿಂತನೆಗೆ ಸಾಕ್ಷಿ. ಇಲ್ಲಿ ಮಾನವನ ಕಾಯಿಕ, ವಾಚಿಕ, ಮಾನಸಿಕ ಗುಣಗಳ ಸಂಕೇತವಾಗಿ ಮೂರು ಕೆರೆ; ಜಡದೇಹ, ಜೀವಾತ್ಮ, ಪರಮಾತ್ಮನ ಸಂಕೇತವಾಗಿ ಮೂವರು ಒಡ್ಡರು ಎಂಬ ಪದ ಬಳೆಕೆಯಾಗಿರಬೇಕು. ಇದೇ ರೀತಿ ಸಾಗುವ ಕೀರ್ತನೆ “ಇನ್ನು ಈ ಅರ್ಥಗಳೆಲ್ಲ ಪುರಂದರವಿಠಲ ಬಲ್ಲ ಅನ್ಯರಾರೂ ತಿಳಿದವರಿಲ್ಲ” ಎಂಬಲ್ಲಿ ಈ ಭಗವಂತನ ದೃಷ್ಟಿಯನ್ನು ದೇವನೊಬ್ಬನೇ ಬಲ್ಲ ಎಂದು ಅರ್ಥೈಸಬಹುದು.

ನಂಬು ಕಂಡ್ಯ ಮನವೆ ನಂಬು ಶ್ರೀಕೃಷ್ಣನ ಚರಣಕಮಲವ
ಒಂಭತ್ತು ಬಾಗಿಲ ಪಟ್ಟಣದೊಳಗೆ ಸಂಭ್ರಮದಿಂದ ಬೈಲಾಗದ ಮುನ್ನ ನೀ

ಆರು ಮಂದಿ ಕಳ್ಳರು ಊರೊಳಗೆ
ಸೂರೆ ಮಾಡಿ ಗಾಸಿ ಮಾಡದ ಮುನ್ನ ನೀ

ಏಳು ಸುತ್ತಿನ ಕೋಟೆ ಘನದುರ್ಗವನ್ನು
ಕಾಲನವರು ಬಂದು ಕರೆಯದ ಮುನ್ನ ನೀ

ದೇಹನಾಯಕ ದೇವರು ತಾವು
ದೇಹದ ಬಿಡಕೆ ಬಿಡಪಾದ ಮುನ್ನ ನೀ

ಪರವಿದು ಸ್ಥಿರವಲ್ಲ ಮೆಚ್ಚಿ ಕೆಡಲು ಬೇಡ
ಪುರಂದರವಿಠಲನ್ನ ಆ ಪಾದ ಪದುಮವ

ಇಲ್ಲಿ ಬರುವ ‘ಒಂಭತ್ತು ಬಾಗಿಲ ಪಟ್ಟಣ’ ವೆಂದರೆ ನವದ್ವಾರಗಳಿಂದೊಡಗೂಡಿದ ಈ ದೇಹ. ಆರು ಮಂದಿ ಕಳ್ಳರು ಅರಿರ್ಷಡ್ವರ್ಗಗಳು. ಅರಿಷಡ್ವರ್ಗಗಳು ನಮ್ಮನ್ನು ನಾಶಪಡಿಸುತ್ತವೆ ಎಂಬ ತತ್ವ ಇಲ್ಲಿದೆ. ‘ಪುರವಿದು ಸ್ಥಿರವಲ್ಲ’ ಈ ದೇಹ ಶಾಶ್ವತವಲ್ಲ. ಆದ್ದರಿಂದ ಈ ದೇಹದಿಂದ ಆತ್ಮದ ಬಿಡುಗಡೆ ಆಗುವ ಮುನ್ನ ದೇವರನ್ನು ಧ್ಯಾನಿಸಬೇಕು.

ಪುರಂದರದಾಸರ ಕೀರ್ತನೆಗಳಲ್ಲಿನ ರೂಪಕ ಜಗತ್ತನ್ನು ಸ್ಥೂಲವಾಗಿ ಅವಲೋಕಿಸಿದಾಗ ಪ್ರಧಾನವಾಗಿ ಸಸ್ಯಜಗತ್ತು, ಪ್ರಾಣಿಜಗತ್ತು, ಸಾಮಾಜಿಕ ಜಗತ್ತು ಮತ್ತು ಧಾರ್ಮಿಕ ಜಗತ್ತು ಎಂಬ ನಾಲ್ಕು ವಿಷಯಗಳ ಬಗೆಗೆ ದಾಸರ ಚಿಂತನಾ ಲಹರಿ ಹರಿದಿರುವುದು ಕಂಡುಬರುತ್ತದೆ. ಸೂಕ್ಷ್ಮವಾಗಿ ನೋಡಿದಾಗ ಧರ್ಮಶಾಸ್ತ್ರ, ನೀತಿಶಾಸ್ತ್ರ, ತತ್ವಶಾಸ್ತ್ರ, ವೈದ್ಯಕೀಯಶಾಸ್ತ್ರ ಮುಂತಾದ ಅದೆಷ್ಟೋ ಶಾಸ್ತ್ರ ವಿಷಯಗಳ ಬಗೆಗೆ ಅವರ ಪರಿಕಲ್ಪನೆಗಳು ಅವರದೇ ಆದ ಶೈಲಿಯಲ್ಲಿ ಬಿಂಬಿತವಾಗಿವೆ. ಮೋಕ್ಷ ಸಂಗ್ರಾಮದಲ್ಲಿ ಭಕ್ತಿಮಾರ್ಗವೇ ಪ್ರಧಾನವಾಗಿ ಕಂಡುಬಂದರೂ ಜ್ಞಾನಮಾರ್ಗ, ಕರ್ಮಮಾರ್ಗಗಳನ್ನು ಜನರಿಗೆ ತಿಳಿಯಪಡಿಸಿ ಪುರಂದರವಿಠಲನನ್ನ ಸಮರ್ಪಿಸಿಕೊಳ್ಳುವ ರೀತಿಯ ಹಲವು ಮಾರ್ಗಗಳನ್ನು ತೋರಿಸಿಕೊಟ್ಟಿದ್ದಾರೆ.

ಈ ರೀತಿ ಸಸ್ಯ-ಪ್ರಾಣಿ-ಪಕ್ಷಿಗಳ ಸಮುದಾಯದ ಸ್ವಭಾವವನ್ನು ನಿರೀಕ್ಷಿಸಿದ್ದ ಪುರಂದರದಾಸರು ಅವುಗಳ ಮೂಲಕವಾಗಿಯೆ ಮಾನವ ಸ್ವಭಾವದ ವ್ಯಾಖ್ಯಾನ ಮಾಡಲು ತೊಡಗಿದ ರೀತಿಯನ್ನು ವಿಶ್ಲೇಷಿಸಿದ್ದೇವೆ. ಇಲ್ಲಿ ಕೀರ್ತನೆಗಳಲ್ಲಿ ಬಂದ ಎಲ್ಲ ರೂಪಕಗಳನ್ನು ಬಳಸಿಕೊಂಡಿದ್ದೇವೆಂದು ಹೇಳಲಾಗದು; ಆದರೆ ಪುರಂದರದಾಸರು ರೂಪಕಗಳನ್ನು ಬಳಸಿಕೊಂಡ ಬಗ್ಗೆ ಇದರಿಂದ ಒಂದು ಸ್ಪಷ್ಟ ಕಲ್ಪನೆಯುಂಟಾಗುತ್ತದೆಂದು ಭಾವಿಸಬಹುದು.