ಆನೆ : ಇದು ಶೌರ್ಯಕ್ಕೆ ಸಂಕೇತವಾಗಿದೆ.

ಆನೆ ಬಂದಿತಮ್ಮ ಮರಿಯಾನೆ ಬಂದಿತಮ್ಮಾ
ತೊಲಗಿರೆ ತೊಲಗಿರೆ ಪರಬ್ರಹ್ಮಬಲು
ಸರಮಣಿ ಕಡುಕೊಂಡು ಬಂತಮ್ಮ

ಕಪಟ ನಾಟಕದ ಮರಿಯಾನೆ
ನಿಕಟಸಭೆಯಲಿ ನಿಂತಾನೆ ಶಕಟನ ಬಂಡಿಯ ಮುರಿದಾನೆ
ಕಪಟ ನಾಟಾಕದಿಂದ ಸೋದರ ಮಾವನ
ನಕಟಕತೆನ್ನದೆ ಕೊಂದಾನೆ

ಇಲ್ಲಿ ಆನೆ ಪದವನ್ನು ಪುರಂದರದಾಸರು ನಾಮಪದ ಮತ್ತು ಕ್ರಿಯಾಪದವಾಗಿಯೂ ಬಳಸಿರುವುದು ಅವರ ಕವಿತಾ ಪ್ರೌಡಿಮೆಗೆ ಸಾಕ್ಷಿ. ಆನೆಯು ಶೌರ್ಯದ ಸಂಕೇತವಾಗಿದ್ದು. ಶ್ರೀಕೃಷ್ಣನ ಶೌರ್ಯದ ಸಂಕೇತವಾಗಿಯೂ ಬಂದಿದೆ.

ಸುಲಭವಲ್ಲವೊ ಮಹಾನಂದತನ್ನೊಳಗೆ ತಾ
ತಿಳಿಯಬೇಕು ಗುರುದಯದಿಂದ
ಬೆಕ್ಕನ್ನು ಇಲಿ ನುಂಗುವ ತನಕ ಕಡು
ರಕ್ಕಸಿಯ ಕಂಡು ಗಿಣಿ ನುಂಗುವ ತನಕ
ಸೊಕ್ಕಿದ ಗಜವನ್ನು ನರಿ ನುಂಗುವ ತನಕ

ಮದ ತುಂಬಿದ ಆನೆಯನ್ನು ನರಿ ನುಂಗುವುದು ಅಸಾಧ್ಯವಾದ ಮಾತು. ಅಂತೆಯೇ ಜ್ಞಾನಾರ್ಜನೆಗೆ ಅಂತ್ಯವೆಂಬುದಿಲ್ಲ. ಜ್ಞಾನವನ್ನು ಗಳಿಸಲು ಕಠಿಣ ಪರಿಶ್ರಮ ಅಗತ್ಯ. ನಿರಂತರವಾದ ಕಲಿಕೆಯ ಮಹತ್ವವನ್ನು ದಾಸರು ಇಲ್ಲಿ ವಿಮರ್ಶಿಸಿದ್ದಾರೆ.

ಕುದುರೆ : ಕುದುರೆಯು ಚುರುಕುತನದ ಸಂಕೇತವಾಗಿದೆ.

ಕರಿತುರಗವಿರಲು ಒಟ್ಟು ಕೆಡಹುವ ಕತ್ತೆಯೇರಲು ಬೇಡವೊ
ಪರಮ ಪುರು, ಪುರಂದರ ವಿಠಲನಿರಲು
ನರರ ಭಜಿಸಬೇಡವೊ ಎಂದೆಂದಿಗೂ

ಆನೆ, ಕುದುರೆಗಳು ಇರುವಾಗ ಅವನ್ನು ಬಳಸದೆ ಕತ್ತೆಯನ್ನೇರುವುದು ಮೂರ್ಖತನ, ಇಲ್ಲಿ ಚಾಣಕ್ಷತನದ ಸಂಕೇತವಾಗಿ ಕುದುರೆಯನ್ನು ದಾಸರು ಬಳಸಿದ್ದಾರೆ.

ಬತ್ತಲೆ ಕುದುರೆಯ ಹತ್ತಬೇಡವೆಂದರೆ
ಹತ್ತಿದನು ಈತನು ಚಂದದಿಂದ

ಕುದುರೆಗೆ ಜೇನು, ಕಡಿವಾಣ ಎಲ್ಲ ಇದ್ದಾಗ ಅದನ್ನೇರಿ ಯೋಧರು ಯುದ್ಧಕ್ಕೆ ಹೋಗುವುದು ಧರ್ಮ. ಆದರೆ ಪರರ ಮಾತನ್ನು ಕೇಳದ ಅವಿವೇಕಿಗಳು ಬತ್ತಲೆ ಕುದುರೆಯನ್ನೇರುತ್ತಾರೆ. ಬತ್ತಲೆ ಕುದುರೆಯು ಅವಿವೇಕ, ಉದಾಸೀನತೆಯ ಸಂಕೇತವಾಗಿದ್ದು ಇಲ್ಲಿ ಅದನ್ನು ವಿಡಂಬನಾತ್ಮಕವಾಗಿ ದಾಸರು ಬಳಸಿದ್ದಾರೆ.

ಬತ್ತಲೆ ನಿಂತರೂ ಬಿಡವೆನೆ
ಬೆನ್ನತ್ತಿನಿನಗೆ ಸದಾ ತಿರುಗುವೆ
ಹತ್ತಿದ ಕುದುರೆ ಹಿತವಾಗಿ ಹಿಡಿತಂದು
ಚಿತ್ರಕ್ಕೆ ಕಟ್ಟುವೆ ಪುರಂದರ ವಿಠಲ

ಭೂಮಿಯಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಯೂ ದೇವಋಣ, ಪಿತೃಋಣವನ್ನು ತೀರಿಸಬೇಕಿರುವುದು ಧರ್ಮ, ಧರ್ಮ ಮಾರ್ಗದಲ್ಲಿ ನಡೆಯದವರನ್ನು ಸರಿದಾರಿಗೆ ತರಬೇಕೆಂಬ ಭಾವ ಇಲ್ಲಿದೆ.

ಬೆಕ್ಕು : ಇದು ಮೋಸ, ವಂಚನೆಯ ಪ್ರತೀಕವಾಗಿದೆ.

ಭಾಷೆ ಹೀನರ ಸಂಗಭಿಮಾನ ಭಂಗ
ಹಸಿವಿಗ್ಯಾರದೆ ಬೆಕ್ಕು ಹತ್ತಿಯನು ಮೆದ್ದಂತೆ
ತೃಷಿವಿಗ್ಯಾರದೆ ಕೂಪ ತೋಡಿದಂತೆ

ಈ ಕೀರ್ತನೆಯಲ್ಲಿ ಜನರ ಬುದ್ಧಿಹೀನತೆಯ ಚಿತ್ರಣವಿದೆ. ಜೋರಾಗಿ ಹಸಿವಾದ ಬೆಕ್ಕು ಬೇರೆ. ಆಹಾರವನ್ನು ಹುಡುಕದೇ ಹತ್ತಿಯನ್ನು ತಿನ್ನುವುದು ಮಾನವರ ಬುದ್ಧಿಹೀನತೆಯ ಸಂಕೇತವಾಗಿದೆ. ಬುದ್ಧಿಯಿಲ್ಲದವರ ಜೊತೆಗಿನ ಸಹವಾಸವು ಒಳಿತನ್ನುಂಟು ಮಾಡದು ಎಂಬ ಭಾವ ಇಲ್ಲಿದೆ.

ಬಣ್ಣಿಸಲೆನ್ನಳವೆ ಅನುದಿನ ಪಾಪವ ಮಾಡಿ
ಬೆಣ್ಣೆಯ ತಿಂದ ಬೆಕ್ಕಿನ ಹಾಗೆ ಕಣ್ಣು ಬಿಡುತ ಇಲ್ಲಿಗೆ ಬಂದೆ

ಬೆಕ್ಕು ಕದ್ದು ಬೆಣ್ಣೆಯನ್ನು ತಿಂದು ಏನೂ ಮಾಡದಂತಿರುತ್ತದೆ. ಮಾನವನು ನಾನಾ ಪಾಪ ಕರ್ಮಗಳನ್ನು ಮಾಡಿ ಏನೂ ಅರಿಯದಂತಿರುವುದನ್ನು ಬೆಕ್ಕಿನ ಹೋಲಿಕೆಯ ಮೂಲಕ ಚಿತ್ರಿಸಿದ್ದಾರೆ. ಆತ್ಮವಿಮರ್ಶೆಯನ್ನು ದಾಸರು ಈ ಕೀರ್ತನೆಯಲ್ಲಿ ಮಾಡಿದ್ದಾರೆ.

ಸುಳ್ಳು ನಮ್ಮಲ್ಲಿಲ್ಲವಯ್ಯ ಸುಳ್ಳು ನಮ್ಮಲ್ಲಿಲ್ಲ
ಇಲಿಯು ಒಲೆಯ ಚಾಚ್ವದ ಕಂಡೆ
ಬೆಕ್ಕು ಭಕ್ಕರಿ ಮಾಡ್ವುದ ಕಂಡೆ
ಮೆಣಸಿನ ಕಾಯ್ ಕಂಡೆನಪ್ಪ ಒನಕೆ ಗಡತರ

ಇಲಿಯು ಒಲೆಯನ್ನು ಹಾರುತ್ತಿದ್ದರೂ ಬೆಕ್ಕು ರೊಟ್ಟಿಯನ್ನು ಮಾಡುತ್ತಿರುವುದನ್ನು ಕಂಡೆ ಎಂದು ಇಲ್ಲಿ ದಾಸರು ಹೇಳಿರುವುದು ಸತ್ಯ, ನಿಷ್ಠೆ, ಏಕಾಗ್ರತೆಯ ಸಂಕೇತವಾಗಿದೆ. ಬೆಕ್ಕು ಇಲಿಯನ್ನು ಕಂಡರೂ ರೊಟ್ಟಿಯನ್ನು ಮಾಡುತ್ತಿರುವ ಚಿತ್ರಣವು ಸತ್ಯದ ಮಹತ್ವವನ್ನು ಬಿಂಬಿಸುವಲ್ಲಿ ಯಶಸ್ವಿಯಾಗಿದೆ.

ಕಾಬಿಸಿ ಕಾಬಿಸಿ ಮ್ಯಾಂ ಮ್ಯಾಂ ಮ್ಯಾಂ
ಮಾರ್ಜಾಲ ಕಾಟವನ್ನು ತಡೆಯಲಾರೆವು ಕೃಷ್ಣ

ಬೆಕ್ಕು ಹಾಲಿಗಾಗಿ ಕೂಗುತ್ತಾ ಮನೆಯಿಡೀ ಓಡುತ್ತದೆ. ಅದು ಹಾಲು ಕುಡಿಯುವ ಭರದಲ್ಲಿ ಹಾಲಿನ ಗಡಿಗೆಯನ್ನೊಡೆದು ಬಿಡುತ್ತದೆ. ಅಂತೆಯೇ ಮನುಷ್ಯರು ಮಾರ್ಜಾಲದಂತೆ ಇನ್ನೊಬ್ಬರಿಗೆ ಕಾಟವನ್ನು ನೀಡುವುದನ್ನು ಬೆಕ್ಕಿನ ಪ್ರತಿಮೆಯ ಮೂಲಕ ದಾಸರು ವ್ಯಂಗ್ಯವಾಡಿದ್ದಾರೆ.

ಹುಲಿ : ಇದು ನಿರ್ಭಯದ ಸಂಕೇತವಾಗಿದೆ.

ಉಬ್ಬದಿರು ಉಬ್ಬದಿರು ಎಲೆ ಮಾನವ
ಹೆಬ್ಬುಲಿಯಂತೆ ಯಮ ಬೊಬ್ಬಿಡುವ ಕಾದಿರುವ

ಮಾನವನು ಎಷ್ಟೇ ಸುಖ ಭೋಗಗಳಿಂದ ಮೆರೆದರೂ ಅವನ ಹಿಂದೆಯೇ ಸಾವು ಎಂಬುದು ನಿಶ್ಚಿತವಾಗಿರುತ್ತದೆ. ಮಾನವನ ಕ್ಷಣಿಕ ಬದುಕಿನ ಚಿತ್ರಣ ಈ ಕೀರ್ತನೆಯಲ್ಲಿದೆ. ಹುಟ್ಟು ಸಾವುಗಳು ಸಾಗರದ ತೆರೆಗಳಂತೆ ಬರುತ್ತವೆ. ಹುಟ್ಟಿದವನು ಸಾಯಲೇಬೇಕು ಸತ್ತವರು ಮತ್ತೆ ಹುಟ್ಟುತ್ತಾನೆ. ಈ ಭವ ಬಂಧನದಿಂದ ಮುಕ್ತಿ ಪಡೆಯಲು ಭಕ್ತಿ ಮಾರ್ಗವೇ ರಹದಾರಿಯೆಂದು ದಾಸರು ಸಾರಿದ್ದಾರೆ.

ಆನೆ ಸಿಂಹನ ಕೂಡೆ ಸ್ನೇಹ ಬೆಳೆಸುವುದುಂಟೆ
ಶ್ವಾನೆ ಹೆಬ್ಬುಲಿ ಕೂಡೆ ಸರಸವುಂಟೆ

ಆನೆ ಮತ್ತು ಸಿಂಹದ ನಡುವೆ ಸ್ನೇಹ ಬೆಳೆಯದು, ಶ್ವಾನ ಮತ್ತು ಹೆಬ್ಬುಲಿಯೊಡನೆ ಸರಸ ನಡೆಯದು, ಅದೇ ರೀತಿ ದೈವ ಭಕ್ತರಿಗೆ ನರಕವೆನ್ನುವುದು ಅಸಾಧ್ಯವಾದ ಮಾತು. ದೈವಭಕ್ತಿಗೆ ಮಿಗಿಲಾದುದು ಯಾವುದೂ ಇಲ್ಲ ಎಂಬ ತಾತ್ಪರ್ಯ ಇಲ್ಲಿ ಅಡಗಿದೆ.

ಕರಡಿ : ಇದು ಜನರ ಅಜ್ಞಾನದ ಪ್ರತೀಕವಾಗಿದೆ.

ಮುಲ್ಲೆ ಮಲ್ಲೆಗೆ ಮುಡಿಯಬಲ್ಲ ಮಾನವರಂತೆ
ಭಲ್ಲೂಕಗಳು ಅದರ ಬಗೆ ಬಲ್ಲುವೆ

ಪ್ರತಿಯೊಬ್ಬರು ತಮ್ಮ ತಮ್ಮ ಕ್ಷೇತ್ರದಲ್ಲಿ ಪರಿಣತಿಯನ್ನು ಹೊಂದಿರುತ್ತಾರೆಯೇ ಹೊರತು ಬೇರೆ ಕ್ಷೇತ್ರಗಳಲ್ಲಿ ಕೆಲವೊಮ್ಮೆ ಮೂಢರಾಗಿರುತ್ತಾರೆ. ದುರುಳ ಮೂಢರಿಗೆ ಹರಿಕಥೆಯನ್ನು ಮಾಡಲಾಗದು. ಅದನ್ನು ಮಾಡಲು ಹರಿದಾಸರೆ ಬೇಕು. ಅಂತೆಯೇ ಸಮಾಜದಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳನ್ನು ಸಮರ್ಥವಾಗಿ ನಿರ್ಮಹಿಸಲು ಆಯಾ ಕ್ಷೇತ್ರಗಳಲ್ಲೇ ಪರಿಣತರಾದವರು ಸೂಕ್ತ. ಕರಡಿಗೆ ಮಲ್ಲಿಗೆಯ ಪರಿಮಳದ ಅರಿವಾಗದೆಂಬ ಹೋಲಿಕೆಯನ್ನು ದಾಸರು ನೀಡಿರುವುದು ವಿಷಯ ತಜ್ಞತೆಯ ಮಹತ್ವವನ್ನು ತಿಳಿಸುವಲ್ಲಿ ಯಶಸ್ವಿಯಾಗಿದೆ.

ಇವಗೇಕೆ ಶೃಂಗಾರ ಇವಗೇಕೆ ಭಂಗಾರ‍
ಕಾಡ ಕರಡಿಯಂತೆ ಸೋಲುವ ದೇಹಕೆ

ಸಲಹುವ ದೇವರಿಗೆ ಬಹಿರಂಗದ ಆಭರಣ ಬೇಡ. ಕಾಡ ಕರಡಿಯನ್ನು ಹೋಲುವ ದೇಹಕ್ಕೆ ಶೃಂಗಾರ, ಬಂಗಾರದ ಅಗತ್ಯವಿಲ್ಲ. ಬಾಹ್ಯ ಆಡಂಬರ, ಆಚರಣೆಗ ಬಗೆಗಿನ ವಿರೋಧ ಇಲ್ಲಿ ವ್ಯಕ್ತವಾಗಿದೆ. ಕೇವಲ ಬಾಹ್ಯ ಸೌಂದರ್ಯವು ಮನುಷ್ಯನಿಗೆ ಶೋಭೆಯನ್ನು ತರಲಾರದು. ಆಂತರಿಕ ಸೌಂದರ್ಯದ ಮಹತ್ವವನ್ನು ಪುರಂದರದಾಸರ ಈ ಕೀರ್ತನೆಯಲ್ಲಿ ಕಾಣಬಹುದು.

ಕೋಣ:ಇದು ದಡ್ಡತನಕ್ಕೆ ಪ್ರತೀಕವಾಗಿದೆ.

ಮಾಣಿಕವು ಕೋಡಗನ ಕೈಯಲ್ಲಿ ಇದ್ದಂತೆ
ಕೋಣನಿದಿರಿಗೆ ಕಿನ್ನರಿ ಮೀಟಿದಂತೆ

ಮೂರ್ಖರಿಗೆ ಏನೂ ಉಪದೇಶ ಮಾಡಿದರೂ ವ್ಯರ್ಥ. ಹರಿಭಕ್ತಿಯಿಲ್ಲದವರಿಗೆ ದೇವರು ಸರ್ವಾಂತರ್ಯಾಮಿ ಎಂಬ ಅರಿವು ಆಗದು. ಅರಿವಿಲ್ಲದೆ ಮಾಡುವ ಭಕ್ತಿ ವ್ಯರ್ಥ. ಕೋಣನಿದಿರಿಗೆ ಕಿನ್ನರಿಯನ್ನು ಮೀಟಿದರೆ ಏನೂ ಪ್ರಯೋಜನವಿಲ್ಲವೆಂಬುದು ದಾಸರ ಅಭಿಮತ.

ಎಷ್ಟು ಯುಗಗಳು ತೀರಿಹೋಯಿತಣ್ಣ ದೇವರ ಮಾಡದೆ
ಕಷ್ಟದಿಂದ ನೊಂದೆಕಾಣಣ್ಣ
ಅಷ್ಟದಳದ ಕಂಭ ನಿಲ್ಲಿಸಿ ನಷ್ಟ ಬರುವ ಕಾಲದಲ್ಲಿ
ಕೆಟ್ಟ ದೈವಕ್ಕಾಗಿ ದುಷ್ಟ ಕೋಣನ ಶಿರವ ತರಿದು

ಮಾನವರು ಅನೇಕ ತಪ್ಪುಗಳನ್ನು ಮಾಡಿ ಕಷ್ಟ ಬಂದಾಗ ಅದರ ನಿವಾರಣೆಗೆ ಇನ್ನೊಬ್ಬರನ್ನು ಕಷ್ಟಕ್ಕೀಡು ಮಾಡುತ್ತಾರೆ. ಆದರೆ ವಾಸ್ತವದಲ್ಲಿ ತನ್ನೊಳಗಿನ ಕಷ್ಟಕ್ಕೆ ತಾನೇ ಹೊಣೆ ಎಂಬ ಸತ್ಯವನ್ನು ಆತ ಅರಿತಿರುವುದಿಲ್ಲ. ಜನರ ಈ ಮೌಢ್ಯಕ್ಕೆ ಪ್ರತಿರೂಪವಾಗಿ ಇಲ್ಲಿ ಕೋಣವನ್ನು ಬಲಿ ಕೊಡುವ ಚಿತ್ರಣವಿದೆ.

ಹಂದಿ : ಇದು ಮನುಷ್ಯರ ಅಂತರಂಗದ ಕಲ್ಮಶಕ್ಕೆ ಸಂಕೇತವಾಗಿದೆ.

ನಿಂದಕರಿರಬೇಕು
ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ದಿಯೊ ಹಾಂಗೆ
ಅಂದಂದು ಮಾಡಿದ ಪಾಪವೆಂಬ ಮಲ
ತಂದುಹೋಗುವರಯ್ಯ ನಿಂದಕರು
ವಂದಿಸಿ ಸ್ತುತಿಸುವ ಜನರೆಲ್ಲರು ನಮ್ಮ
ಪೊಂದಿಹ ಪುಣ್ಯವನೊಯ್ಯುವರಯ್ಯ

ಒಂದು ಸಮಾಜದಲ್ಲಿ ಅಭಿವೃದ್ಧಿ ಕಾಣಬೇಕಾದರೆ ಸ್ತುತಿ ನಿಂದೆಗಳು ಅಗತ್ಯ. ಕೇವಲ ಹೊಗಳಿಕೆ ವ್ಯಕ್ತಿಯನ್ನು ಯಶಸ್ಸಿನ ಹಾದಿಗೆ ಕೊಂಡೊಯ್ಯಲಾರದು ಮಾಡುವ ಕೆಲಸ ಕಾರ್ಯಗಳ ಲೋಪದೋಷಗಳನ್ನು ತೆಗಳುವವರು, ನಿಂದಿಸುವವರಿದ್ದಾಗ ವ್ಯಕ್ತಿ ಹೆಚ್ಚು ಜಾಗೃತನಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾನೆ. ಹಂದಿ ಸಮಾಜವನ್ನು ಶುಚಿಗೊಳಿಸಲು ಹೊಲಸನ್ನು ತಿನ್ನುವುದಲ್ಲ. ಅದು ಅದರ ಹೊಟ್ಟೆಪಾಡಿಗಾಗಿ ತಿಂದರೂ ಸಮಾಜಕ್ಕೆ ಅದರಿಂದ ಒಳಿತಾಗುತ್ತದೆ. ಹಾಗೆಯೇ ವ್ಯಕ್ತಿಯ ಕಾರ್ಯದಕ್ಷೆಯನ್ನು ಹೆಚ್ಚಿಸುವಲ್ಲಿ ನಮ್ಮನ್ನು ನಿಂದಿಸುವವರ ಪಾತ್ರವೂ ಮಹತ್ತರವಾದುದು ಎಂಬುದನ್ನು ಗುರುತಿಸಿದ ದಾಸರು “ನಿಂದಕರಿರಬೇಕು ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧಿಯೊ ಹಾಂಗೆ” ಎಂದಿದ್ದಾರೆ. ನಿತ್ಯ ಬದುಕಿನ ಅವಲೋಕನದ ಸಂಕೀರ್ಣ ಚಿತ್ರಗಳನ್ನು ನಾವು ಇಲ್ಲಿ ಕಾಣಬಹುದು.

ಹಳ್ಳೂರು ಕೇರ್ಯಾಗೆ ಇರುವುದು ಹಂದಿ
ನಾನಾ ಜನ್ಮವ ತಿರುಗುತ ಬಂದಿ
ಇಷ್ಟು ಸಂಸಾರದ ಮರೆ ಮಾಡಿಕೊಂಡಿ
ಮುಪ್ಪಿನ ಕಾಲಕ್ಕೆ ಅವಿಚಾರಗೊಂಡಿ

ಮಾನವನು ನಾನಾ ಪಾಪಕರ್ಮಗಳನ್ನು ಮಾಡಿ ಲೌಕಿಕ ಸುಖ ಭೋಗಗಳಲ್ಲಿ ಮುಳುಗಿ ಹೋಗಿರುವ ಚಿತ್ರಣ ಇಲ್ಲಿದೆ. ಮಾನವನು ವಿಚಾರಶೀಲನಾಗಬೇಕು. ಇಲ್ಲದಿದ್ದಲ್ಲಿ ಹೊಲಸನ್ನು ತಿಂದು ಬದುಕುವ ಹಂದಿಗೂ ಮಾನವನಿಗೂ ಏನೂ ವ್ಯತ್ಯಾಸವಿಲ್ಲ. ಮಾನವನು ಭವ ಬಂಧನದಿಂದ ಮುಕ್ತನಾಗಲು ಉತ್ತಮ ಕಾರ್ಯಗಳನ್ನು ಮಾಡಬೇಕೆಂಬ ತಾತ್ಪರ್ಯ ಇಲ್ಲಿದೆ. ಇದೇ ಭಾವ ಇನ್ನೊಂದು ಕೀರ್ತನೆಯಲ್ಲಿ ವ್ಯಕ್ತವಾಗಿದೆ.

ಸ್ನಾನ ಸಂಧ್ಯಾದಿಗಳ ಮಾಡದಲೆ ಮೆಯ್ಗೆಟ್ಟೆ
ಜ್ಞಾನ ಮಾರ್ಗವನಂತು ಮೊದಲೆ ಬಿಟ್ಟೆ
ಏನ ಪೇಳಲಿ ಪರರ ಮಾನಿನಿಗೆ ಮನಸಿಟ್ಟೆ
ಶ್ವಾನ ಸೂಕರನಂತೆ ಹೊರೆದ ಹೊಟ್ಟೆ

ಸ್ನಾನ-ಸಂಧ್ಯಾ ವಂದನೆಗಳನ್ನು ಮಾಡದೆ, ಜ್ಞಾನ ಮಾರ್ಗದಲ್ಲಿ ನಡೆಯದೆ, ಪರಸ್ತ್ರೀ ವ್ಯಾಮೋಹವೇ ಮೊದಲಾದ ನೀಚ ಕಾರ್ಯಗಳನ್ನು ಮಾಡಿ ನಾಯಿ, ಹಂದಿಗಳಂತೆ ಬದುಕನ್ನು ಸವೆಸಿ ಕೊನೆಗೆ ಪಶ್ಚಾತ್ತಾಪ ಪಡುವ ಮಾನವನ ಬದುಕಿನ ಚಿತ್ರಣ ಇಲ್ಲಿದೆ. ಇಂತಹ ನಾಯಿ, ಹಂದಿತನಕ್ಕೆ ತಮ್ಮನ್ನು ಹೋಲಿಸಿಕೊಂಡು ಅದರಿಂದ ಬಿಡುಗಡೆಗಾಗಿ ಮೊರೆಯಿಡುತ್ತಾ ಆತ್ಮ ವಿಮರ್ಶೆ ಮಾಡಿಕೊಳ್ಳುವ ವಿಧಾನವು ಪುರಂದರದಾಸರ ಈ ಕೀರ್ತನೆಯಲ್ಲಿ ಉದಾತ್ತವಾಗಿ ಮೂಡಿಬಂದಿದೆ.

ಗೋವು : ಇದು ಸಮೃದ್ಧಿಯ ಸಂಕೇತವಾಗಿದೆ.

ಹರಿಕಥೆ ಕೇಳುವ ಪರಿಜನರು ಈ
ಪರಿಯ ಪುರಾಣಕ್ಕೆ ಸರಿದು ಕುಳ್ಳಿರುವರು
ನೆಲ್ಲು ಒಣಗಲಿಲ್ಲ ಹುಲ್ಲುನೋವು ಘನ್ನ
ಕಲ್ಲು ಹೋಗದು ಎನ್ನ ಕೈಯಲೆಂದು
ಪುಲ್ಲನಾಭನ ಕಥೆ ಪೂರೈಸಿ ಕೇಳದೆ
ಕಲ್ಲಗೋವಿನ ಹಾಲ ಕರುವು ಬಯಸುವಂತೆ

ಕಲ್ಲುಗೋವಿನಿಂದ ಹಾಲನ್ನು ಪಡೆಯುವುದು ಅಸಾಧ್ಯವಾದ ಮಾತು. ಅಂತೆಯೇ ಪರರನ್ನು ನಿಂದಿಸುತ್ತಾ ನಾನಾ ಪಾಪ ಕರ್ಮಗಳನ್ನು ಮಾಡಿ ಪುರಾಣ ಕಥೆಗಳನ್ನು ಕೇಳದೆ ಪುಣ್ಯ ಸಂಪಾದಿಸುವುದು ಸಾಧ್ಯವಿಲ್ಲ. ಯಾರೇ ಆದರೂ ಒಳ್ಳೆಯ ಕೆಲಸಗಳನ್ನು ಮಾಡದೆ ಪ್ರತಿಫಲ ನಿರೀಕ್ಷಿಸಿದರೂ ಅದು ದೊರಕಲಾರದು ಎಂಬ ಸತ್ಯವನ್ನು ದಾಸರು ಈ ಕೀರ್ತನೆಯ ಮೂಲಕ ಸಾರಿದ್ದಾರೆ.

ಹರಿಚರಣವೆಂಬ ಸುರಧೇನುವನ್ನು
ಗುರುಬೋಧನೆಯೆಂಬ ಕಣ್ಣಿಲಿ ಕಟ್ಟಿರಯ್ಯ
ಭಕ್ತಿಯೆಂಬ ಕರುವನು ಬಿಟ್ಟು ನಿರತ ವಿ
ರಕ್ತಿಯೆಂಬ ಗನದೆಳೆಯನು ಹಾಕಿ
ಯುಕ್ತವಾದ ಅನಿತ್ಯಕಾಯ ಚರಿಗೆಯೊಳಗೆ
ಮುಕ್ತವರ ರಾಮ ನಾಮವ ಕಳೆದುಕೊಳ್ಳೆರೊ

ಹರಿಚರಣವೆಂಬ ಕಾಮಧೇನುವನ್ನು ಗುರುಬೋಧನೆಯೆಂಬ ಹಗ್ಗದಲ್ಲಿ ಕಟ್ಟಿ ಅದಕ್ಕೆ ಭಕ್ತಿ ಎಂಬ ಕರುವನ್ನು ಬಿಟ್ಟು ವಿರಕ್ತಿಯೆಂಬ ಶ್ರೇಷ್ಠವಾದ ಹಗ್ಗದಿಂದ ಹಿಡಿತದಲ್ಲಿಟ್ಟರೆ ಮನುಷ್ಯನು ಸುಖವಾಗಿರಲು ಸಾಧ್ಯ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ, ಭಕ್ತಿ ಇದ್ದರೆ ಒಳಿತಾಗುವುದು ಸಾಧ್ಯ.

ಮೇಕೆ-ಕುರಿ : ಇದು ಮಾನವನ ಅಹಂ ಭಾವದ, ಅಸಹಾಯಕ ಸ್ಥಿತಿಗೆ ಸಂಕೇತವಾಗಿದೆ.

ನಾನೆ ಎಂಬೆ ಮೇಕೆ ಹೋತಣ್ಣ ಅದಕ್ಕೆ ತಕ್ಕ
ಜ್ಞಾನವೆಂಬ ಪೋತ ರಾಜಣ್ಣ
ತಾನೆ ಎಂಬೋ ಭಲ್ಲೆ ಹಿಡಿದು ಹೀನ ಹೋತಿನ ಸೀಳಿ ಬಿಸುಡು
ಜ್ಞಾನ ಗುಡಿಸಲು ಸೊರೆಗೊಂಡು ತಾನೆ ಬೆಳಗೊ ಜ್ಯೋತಿ ನಿಲ್ಲಿಸಿ

ಮಾನವನು ತಾನು ಮಾಡಿದ ಕೆಲಸ ಕಾರ್ಯಗಳ ಬಗ್ಗೆ ಹೇಳಿಕೊಳ್ಳಬಾರದು. ‘ತನ್ನ ಬಣ್ಣಿಸಬೇಡ’ ಎಂದು ಅಂತರಂಗ ಶುದ್ಧಿಯ ಬಗ್ಗೆ ಬಸವಣ್ಣನವರು ಹೇಳಿದ ತತ್ವವೇ ದಾಸರ ಈ ಕೀರ್ತನೆಯಲ್ಲೂ ಪ್ರತಿಪದಿತವಾಗಿದೆ. ಭಲ್ಲೆಯಿಂದ ಹೋತವನ್ನು ಸೀಳಿ ಬಿಡುವಂತೆ ಮನುಷ್ಯನು ತನ್ನ ಅಹಂ ಭಾವವನ್ನು ಬಿಟ್ಟು ಜ್ಞಾನ ಶಿಖರದ ಎತ್ತರವನ್ನು ಏರಬೇಕು.

ಕರ್ತವೆಂಬೊ ಕ್ಲೇಶ ಕುರಿಯಣ್ಣ ಅದನ್ನು ತಂದು
ಕಟ್ಟಿ ತಲೆಯನೆ ಕುಟ್ಟಬೇಕಣ್ಣ
ಅಷ್ಟ ವಿಧದ ಕುರಿಗಳನ್ನು ಕಟ್ಟಿ ತಲೆಯನೆ ಚೆಂಡನಾಡಿ
ಹುಟ್ಟಿ ತಿರುಗೋ ಕೋಳಿಯನ್ನು ಕುಟ್ಟಿ ಚೂರಿ ಹಾಕುತಲಿ

ನಾನೇ ಎಂಬ ಅಹಂ ಭಾವವು ಕ್ಲೇಶಕ್ಕೆ ಕಾರಣವಾಗುತ್ತದೆ. ಅಷ್ಟ ವಿಧದ ಕುರಿಗಳು ಇಲ್ಲಿ ಮನೆ, ಹಾಸಿಗೆ, ವಸ್ತ್ರ, ಆಭರಣ, ಸ್ತ್ರೀ, ಪುಷ್ಪ, ಗಂಧ ಮತ್ತು ತಾಂಬೂಲಗಳೆಂಬ ಅಷ್ಟಭೋಗಗಳನ್ನು ಸಂಕೇತಿಸುತ್ತದೆ. ಅಷ್ಟವಿಧದ ಭೋಗಗಳನ್ನು, ಮನಸ್ಸಿನಲ್ಲಿ ಹುಟ್ಟುವ ದುಷ್ಟಕಾಮನೆಗಳನ್ನು ತ್ಯಜಿಸಿ ಇಂದಿನ ಬಾಳನ್ನು ಸಾರ್ಥಕ್ಯಗೊಳಿಸಬೇಕೆಂಬುದು ಇಲ್ಲಿ ಭಾವವಾಗಿದೆ.

ಹಾವು : ಇದು ಪ್ರಾಪಂಚಿಕ ವಿಷಯ ಹಿಡಿತದಿಂದ ತಪ್ಪಿಸಿಕೊಳ್ಳಲಾಗದ ಭಯ ಮತ್ತು ವಿಪತ್ತುಗಳಿಗೆ ಪ್ರತಿರೂಪವಾಗಿದೆ.

ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ
ಭೋಗಭಾಗ್ಯಗಳೆಂದು ಬಳಲಬೇಕೊ
ನಾಗಪೆಡೆ ನೆರಳಲ್ಲಿ ನಡುಗೊ ಕಪ್ಪೆಯ ರೀತಿ
ಕೂಗಿ ಬೇರಿದರೆ ನಿನ್ನಾಗ ಕೇಳುವರೆ

ಕಪ್ಪೆಯು ಮಂದ ಬುದ್ಧಿಯ ಪ್ರಾಣಿ ಅದು ತಿಳಿಯದೆ ಹೋಗೆ ನಾಗರಹಾವಿಯ ಹೆಡೆಯ ನೆರಳಲ್ಲಿ ಇದ್ದು ಕೂಗಿದರೆ ಅದನ್ನು ರಕ್ಷಿಸುವವರು ಯಾರು ಇರುವುದಿಲ್ಲ. ಅಂತೆಯೇ ಮಾನವನು ಭಕ್ತಿ ಮಾರ್ಗದಲ್ಲಿ ನಡೆಯದೆ, ಪ್ರಾಪಂಚಿಕ ವಿಷಯಗಳಲ್ಲಿ ಸಿಕ್ಕಿಕೊಂಡರೆ ಅದರಿಂದ ಬಿಡುಗಡೆ ಪಡೆಯಲು ಸಾಧ್ಯವಿಲ್ಲ. ಇಂತಹ ಭಯದಿಂದ ಮುಕ್ತಿ ಪಡೆಯಲು ಪುರಂದರವಿಠಲನನ್ನು ನೆನೆದರೆ ಮಾತ್ರ ಸಾಧ್ಯವೆಂದು ದಾಸರು ನಂಬಿದ್ದಾರೆ.

ಪುತ್ರ ಹುಟ್ಟಿದ ದಿವಸ ಹಾಲಿನೂಟದ ಹಬ್ಬ
ಮತ್ತೊಬ್ಬ ಮಗನ ಉಪನಯನ ನಾಳೆ
ಅರ್ತಿಯಾಗಿದೆ ಬದುಕು ಸಾಯಲಾರೆನು ಎನಲು
ಮೃತ್ಯು ಹೆಡೆತಲೆಯಲ್ಲಿ ನಗುತಿರ್ಪಳಯ್ಯ

ಮಾನವನ ಕ್ಷಣಿಕ ಬದುಕಿನ ಚಿತ್ರಣ ಈ ಕೀರ್ತನೆಯಲ್ಲಿದೆ. ಮಾನವನು ಲೌಕಿಕ ಸುಖಭೋಗಗಳಲ್ಲಿ ಮುಳುಗಿದ್ದ ಸಾವನ್ನು ಬಯಸಲಾರನು. ಆದರೆ ಸಾವು ಎಂಬುದು ಯಾರನ್ನು ಕಾಯದು. ಅದು ಅನಿರೀಕ್ಷಿತವಾಗಿ ಬಂದೊದಗಬಹುದು. ಆದ್ದರಿಂದ ಮನುಷ್ಯನು ಇರುವಷ್ಟು ಕಾಲದಲ್ಲಿ ದೇವರನ್ನು ಭಜಿಸಬೇಕು. ಅದನ್ನು ಇನ್ನೊಮ್ಮೆ ಮಾಡುವೆನೆಂದರೆ ಕೆಲ್ಲವೊಮ್ಮೆ ಸಾಧ್ಯವಾಗದೆಂಬ ವಿಚಾರವನ್ನು ಇಲ್ಲಿ ಹೇಳಲಾಗಿದೆ. ಆದ್ದರಿಂದ ಮಾನವರು ಕೇವಲ ಲೌಕಿಕ ಬದುಕಿನಲ್ಲೇ ಮುಳುಗದೆ ಆಧ್ಯಾತ್ಮಕ ವಿಚಾರಗಳ ಕುರಿತು ಒಲವನ್ನು ಹೊಂದಿ ಕೃತಾರ್ಥರಾಗಬೇಕೆಂಬುದು ಪುರಂದರದಾಸರ ಆಶಯವಾಗಿದೆ.

ಬೆಟ್ಟದ ನವಿಲಿಗೆ ಕಣ್ಣೀರು ಬಂದರೆ ಬೇಟೆಗಾರಗೆ ದಯಪುಟ್ಟೀತೆ?
ಕೆಟ್ಟ ಹಾವು ಕಚ್ಚಿದ ಗಾಯಕೆ ಹಳೆ ಬಟ್ಟೆಯೊಳೊರಸೆ ವಿಷ ಹೋದೀತೆ?

ಜನರು ಧರ್ಮಮಾರ್ಗದಲ್ಲಿ ನಡೆಯಬೇಕು. ಇಲ್ಲದಿದ್ದಲ್ಲಿ ದೇವತಾನುಗ್ರಹ ಸಾಧ್ಯವಾಗದು. ಹಾವು ಕಚ್ಚಿದ ಗಾಯಕ್ಕೆ ಹಳೆ ಬಟ್ಟೆಯಿಂದ ಒರೆಸಿದರೆ ವಿಷ ಹೋಗಲು ಸಾಧ್ಯವಿಲ್ಲ. ಅಂತೆಯೇ ಪ್ರತಿದಿನ ದೇವರನ್ನು ನೆನೆಯದಿದ್ದರೆ ಭವ ಬಂಧನದಿಂದ ಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲ.

ಬೇವು ಬೆಲ್ಲದೊಳಿಡಲೇನು ಫಲ ಹಾವಿಗೆ ಹಾಲೆರೆದೇನು ಫಲ
ಕುಟಿಲವ ಬಿಡದಿಹ ಕುಜನರು ಮಂತ್ರವ ಪಠನೆಯ ಮಾಡಿದರೇನು ಫಲ
ಸಟೆಯನ್ನಾಡುವ ಮನುಜರು ಮನದಲಿ ವಿಠಲನ ನೆನೆದರೆಯೇನು ಫಲ

ಬೇವನ್ನು ಬೆಲ್ಲದೊಳಿಟ್ಟರೂ ಅದು ಕಹಿಯ ಗುಣವನ್ನು ಬಿಡದು. ಹಾವಿಗೆ ಹಾಲನ್ನು ಎರೆದರೂ ಅದು ಕಚ್ಚುವ ಗುಣವನ್ನು ಬಿಡದು. ಅದೇ ರೀತಿ ದುಷ್ಟಜನರು ತಮ್ಮ ಕೆಟ್ಟ ಗುಣಗಳನ್ನು ಬಿಡದೆ ಯಾವ ಜಪ, ತಪ, ಮಂತ್ರ, ಪಠಣ ಮಾಡಿದರೂ ನಿಷ್ಪ್ರಯೋಜಕ. ಇಲ್ಲಿ ಹಾವು ದುಷ್ಟಜನರ ಪ್ರತಿರೂಪವಾಗಿದೆ.

ಹುತ್ತದೊಳಗೆ ಒಂದು ಸರ್ಪ ಎಂಟು ಗಜಗಳ ಬಿಡದೆ ನುಂಗಿತು
ಎಂಟು ನೆಂಟರ ನುಂಗಿತು ಮತ್ತೆ ರವಿ ಚಂದ್ರರ ನುಂಗಿತು
ಅಂಥಾ ಸರ್ಪನ ಕಪ್ಪೆಯು ನುಂಗಿತು
ಅಂಥಾದೊಂದು ಕಪ್ಪೆಯ ಮರಿಮಾಡುತ ಬಂದು
ನುಂಗಿ ನೋಡುವ ಸೊಗಸ

ಇಲ್ಲಿ ಸರ್ಪವು ಸಂಸಾರದ ಪ್ರತೀಕವಾಗಿದ್ದು ಅದು ಎಲ್ಲವನ್ನೂ ವ್ಯಾಪಿಸಿರುತ್ತದೆ. ಸಂಸಾರಿಯಾದವನು ಲೌಕಿಕ ವಿಚಾರಗಳಲ್ಲಿ ಮುಳುಗಿ ಹೋಗಿರುವುದರ ಪ್ರತಿರೂಪವಾಗಿ ಇಲ್ಲಿ ಎಂಟು ಗಜ, ಎಂಟು ನಂಟರು ಪದಗಳನ್ನು ದಾಸರು ಬಳಸಿ. ಸಂಸಾರವೆಂಬುದೇ ಹಾಗೆ ಅದು ಎಲ್ಲವನ್ನೂ ಬಿಡದೆ ವ್ಯಾಪಿಸಿರುತ್ತದೆ. ಸಂಸಾರಿಯಾದವನು ಲೌಕಿಕ ಭೋಗದಲ್ಲಿ ಮುಳುಗಿದಾಗ ಸಣ್ಣ ಸಣ್ಣ ವಿಚಾರಗಳಲ್ಲೂ ಸೋತು ಹೋಗುತ್ತಾನೆ. ಈ ಸಂಸಾರವೆಂಬುದೊಂದು ಮಾಯೆ ಎಂಬುದನ್ನು ಪ್ರತಿಪಾದಿಸುವಲ್ಲಿ ಈ ಕೀರ್ತನೆ ಯಶಸ್ವಿಯಾಗಿದೆ. ದಾಸರು ಇಲ್ಲಿ ಪ್ರಾಪಂಚಿಕ ಬದುಕಿನ ಚಿತ್ರಣವನ್ನು ಸೊಗಸಾಗಿ ನಿರೂಪಿಸಿದ್ದಾರೆ.

ಕಾಗೆ : ಇದು ಅಂತರಂಗ ಶುದ್ಧಿಯಿಲ್ಲದ ಭಾವನೆಗಳಿಗೆ ಸಂಕೇತವಾಗಿದೆ.

ಕಾಗೆ ಕೂಗಿತಲ್ಲ ಈಗ ಒಂದು ಕಾಗೆ ಕೂಗಿತಲ್ಲ
ಎಲ್ಲರೇಳದ ಮುನ್ನ ಗುಲ್ಲು ಮಾಡುತಲೆದ್ದು
ಚೆಲ್ಲಿದ ಧನ ಧಾನ್ಯವ ಮೆಲ್ಲುತ

ಕಾಗೆ ಕೂಗುವುದು ಅಪಶಕುನದ ಸಂಕೇತವಾಗಿ ಬಳಕೆಯಾಗುತ್ತದೆ. ಕಾಗೆಯನ್ನು, ಅದರ ಕೂಗನ್ನು ಜನರು ಕೀಳಾಗಿ ಕಾಣುತ್ತಾರೆ. ಆದರೆ ಕಾಗೆಯೂ ಕೂಡ ಶ್ರೇಷ್ಠವಾದುದು. ಅದು ಚೆಲ್ಲಿದ ಧವಸ ಧಾನ್ಯಗಳನ್ನು ತಿಂದು ಬದುಕುತ್ತದೆ. ಕಾಗೆಯನ್ನು ಜನರು ಹೇಯವಾದುದೆಂದು ಹೀಗಳೆಯಬಾರದು. ಅದು ಪಿತೃಗಳ ಕಾರ್ಯಕ್ಕೆ ಅಗತ್ಯ. ಸತ್ತವರ ಸುದ್ದಿಯನ್ನು ಕೂಗಿ ತಿಳಿಸುತ್ತದೆಂಬ ನಂಬಿಕೆಯೂ ಇದೆ. ಇದು ಹಿತವಾದ ಸುದ್ಧಿಯನ್ನು ನೀಡಬಹುದೆಂಬುದು ದಾಸರ ಅಭಿಮತ. ಕಾಗೆಯು ಕೇವಲ ಅಪಶಕುನದ ಸಂಕೇತವಲ್ಲ. ಅದು ಶುಭಶಕುನದ ಸಂಕೇತವೂ ಹೌದು. ಒಳ್ಳೆಯತನ, ಕೆಟ್ಟತನವು ಕೇವಲ ವಸ್ತುವಿನಲ್ಲಿ ಮಾತ್ರ ಇರುವುದಲ್ಲ. ಅದು ನಾವು ನೋಡುವ ದೃಷ್ಟಿಯಲ್ಲಿದೆ ಎಂಬ ವಿಚಾರವನ್ನು ಕಾಗೆಯ ರೂಪಕದ ಮೂಲಕ ಸಾರುವುದರೊಂದಿಗೆ ಅದಕ್ಕೂ ಮಹತ್ತರವಾದ ಸ್ಥಾನವನ್ನು, ಅರ್ಥವನ್ನು. ಕಲ್ಪಿಸಿದ್ದಾರೆ.

ಮನಶುದ್ಧಿಯಿಲ್ಲದವಗೆ ಮಂತ್ರದ ಫಲವೇನು
ತನುಶುದ್ಧಿಯಿಲ್ಲದವಗೆ ತೀರ್ಥದ ಫಲವೇನು
ಮಿಂದಲ್ಲಿ ಫಲವೇನು ಶ್ರೀಶೈಲದ ಕಾಗೆಯಂತೆ
ಹೊರಗೆ ಮಿಂದು ಒಳಗೆ ಮೀಯದವರ ಕಂಡು
ಬೆರಗಾಗಿ ನಗುತ್ತಿದ್ದ ಪುರಂದರವಿಠಲ

ಅಂತರಂಗ ಶುದ್ಧಿಯ ಮಹತ್ವವನ್ನು ಈ ಕೀರ್ತನೆಯಲ್ಲಿ ಕಾಣಬಹುದು. ಹೊರಗೆ ಮಿಂದು ಒಳಗೆ ಮೀಯದವರನ್ನು ಶ್ರೀಶೈಲದಕಾಗೆಗೆ ಹೋಲಿಸಿದ್ದಾರೆ. ಕಾಗೆ ಎಷ್ಟು ಮಿಂದರೂ ಅಶುದ್ಧವೆಂಬುದು ನಂಬಿಕೆ. ಇದು ಪುಣ್ಯ ಕ್ಷೇತ್ರವಾದ ಶ್ರೀಶೈಲದ ಕಾಗೆ. ಕಾಗೆ ಯಾವುದೇ ಪವಿತ್ರ ಕ್ಷೇತ್ರದಲ್ಲಿ ಮಿಂದರೂ ಶುದ್ಧವೆನಿಸದು. ಅಂತೆಯೇ ಅಂತರಂಗ ಶುದ್ಧಿಯಿಲ್ಲದವರು ಶ್ರೀಶೈಲದ ಕಾಗೆಯಂತೆ ಎಲ್ಲಿ ಎಷ್ಟು ಬಾರಿ ಮಿಂದರೂ ಪರಿಶುದ್ಧವನ್ನು ಹೊಂದಲಾರದು.

ಪಕ್ಷಿ : ಇದು ಆತ್ಮದ ಸಂಕೇತವಾಗಿ ಬಂದಿದೆ.

ಎರಡೂ ಒಂದಾಗದು ರಂಗ
ಎರಡೂ ಒಂದಾಗದು ಎಂದೆಂದಿಗೂ ರಂಗ

ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು ಒಂದೆ ಗೂಡಿನಲ್ಲಿ ಇರುತಿಹವು
ಒಂದು ಪಕ್ಷಿ ಫಲಗಳನುಂಬುದು ಮ
ತ್ತೊಂದು ಫಲಂಗಳನುಣ್ಣದು ರಂಗ

ಹಲವು ಕೊಂಬೆಗೆ ಹಾರಿತು ಒಂದು
ಹಲವು ಕೊಂಬೆಗೆ ಹಾರಲರಿಯದು
ಹಲವೆಲ್ಲ ಒಂದು ಬಲ್ಲುದು ಒಂದು
ಹಲವೆನೆಲ್ಲವ ಅರಿಯದು ರಂಗ

ನೂರೆಂಟು ಕೊಂಬೆಗೆ ಹಾರಿತು ಅದು ಹಾರಿ ಮೇಲಕ್ಕೇರಿ ಮೀರಿತು
ಮೀರಿ ಪುರಂದರವಿಠಲ ನಿಮ್ಮನು ಸೇರಿ ಸಖಿಯಾಗಿ ನಿಂತಿತು ರಂಗ

ಇಲ್ಲಿ ಎರಡು ಹಕ್ಕಿಗಳು ಜೀವಾತ್ಮ ಮತ್ತು ಜಡದೇಹದ ಸಂಕೇತವಾಗಿ ಬಂದಿದೆ. ಈ ದೇಹದೊಳಗೆ ಆತ್ಮವಿದ್ದರೂ ಅದು ಕ್ಷಣಿಕ. ಯಾವತ್ತೂ ಅದು ಒಟ್ಟಿಗೆ ಇರುವುದು ಸಾಧ್ಯವಿಲ್ಲ. ಒಂದು ವೃಕ್ಷವು ಜೀವನ ಸಂಕೇತವಾಗಿದೆ. ಅಲ್ಲಿ ದೇಹ ಮತ್ತು ಜೀವಾತ್ಮ ಎರಡೂ ಇದೆ. ಇಲ್ಲಿ ಹಾರುವ ಪಕ್ಷಿ ಜೀವಾತ್ಮದ ಪ್ರತಿನಿಧಿಯಾಗಿದೆ. ಮಾನವರು ನಾನಾ ಕರ್ಮಗಳನ್ನು , ಸುಖಭೋಗಗಳನ್ನು ಅನುಭವಿಸಿ, ಹುಟ್ಟು ಸಾವಿಯ ಕ್ರಿಯೆ ನಡೆಯುತ್ತಿರುತ್ತದೆ. ಹಾರಲರಿಯದ ಪಕ್ಷಿಯು ಜಡೆ ದೇಹದ ಸಂಕೇತವಾಗಿದೆ. ಹಾರುವ ಪಕ್ಷಿ ನೂರೆಂಟು ಕೊಂಬೆಗೆ ಹಾರಿ ಮೇಲಕ್ಕೇರಿ ಪುರಂದರವಿಠಲನ ಪಾದ ಸೇರಿ ಸುಖಿಯಾಗಿರುವುದು ಮೋಕ್ಷದ ಸಂಕೇತವಾಗಿದೆ. ಹೀಗೆ ದೇಹ, ಜೀವಾತ್ಮ, ಪರಮಾತ್ಮನ ಬಗೆಗೆ, ದ್ವೈತ ಸಿದ್ಧಾಂತದ ಬಗೆಗಿನ ಚಿಂತನೆಯನ್ನು ಈ ಕೀರ್ತನೆಯಲ್ಲಿ ಕಾಣಬಹುದು.

ನೋಡಿರಯ್ಯ ನೀವು ನೋಡಿರಯ್ಯ
ನೋಡಿರಯ್ಯ ಹರಿದಾಸರ ಮಾಯವ, ಜೋಡಾಗಿಪ್ಪ ಎರಡು ಪಕ್ಷಿ
ಗೂಡನಗಲಿ ಗೂಡ ತೊರೆದು
ಆಡುತ ಅಂದು ನುಂಗಿ ನೋಡುವ ಸೊಗಸು

ಇಲ್ಲಿ ವಿರೋಧಾಭಾಸಗಳನ್ನು ಚಿತ್ರಿಸುವುದರ ಮೂಲಕ ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಮಾಯಾಜಾಲದ ಬಗೆಗೆ ಹೇಳಲಾಗಿದೆ. ಸಾಧಾರಣ ಜನರು ನಾನಾ ಕರ್ಮಗಳನ್ನು ಮಾಡುತ್ತಾರೆ. ಆದರೆ ಹರಿದಾಸರು ಅವರಿಗೆ ಹರಿಭಕ್ತಿಸಾರವನ್ನು ತಿಳಿಸುವುದರ ಮೂಲಕ ಜ್ಞಾನದೆಡೆಗೆ ಕೊಂಡೊಯ್ಯುವ ಮಹಾಕಾರ್ಯವನ್ನು ಮಾಡುತ್ತಾರೆ. ಇಲ್ಲಿ ಗೂಡು ದೇಹದ ಸಂಕೇತವಾಗಿದ್ದು ಜೀವಾತ್ಮವನ್ನು ಪರಮಾತ್ಮನೆಡೆಗೆ ಕೊಂಡೊಯ್ಯಲು ಹರಿಭಕ್ತಿಯ, ಆಧ್ಯಾತ್ಮಿಕ ಚಿಂತನೆಯ ಅಗತ್ಯವನ್ನು ಮನಗಾಣಬಹುದು.

ಗಿಳಿ : ಇದು ಬಿಡುಗಡೆಯ ಸಂಕೇತವಾಗಿದೆ.

ಗಿಳಿಯು ಪಂಜರದೊಳಿಲ್ಲ
ಶ್ರೀರಾಮ ಶ್ರೀರಾಮ ಬರಿದೆ ಪಂಜರವಾಯ್ತಲ್ಲ
ಅಕ್ಕ ನಿನ್ನ ಮಾತ ಕೆಳಿ ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಾನಿಲ್ಲದ ವೇಳೆ ಬೆಕ್ಕು ಕೊಂಡು ಹೋಯಿತಯ್ಯಾ

ಗಿಳಿಯು ಪಂಜರದೊಳಿಲ್ಲ ಕೀರ್ತನೆಯಲ್ಲಿ ಶ್ಲೇಷೆ. ಅಲಂಕಾರ ಶಬ್ದಗಳನ್ನು ಬಳಸದೇ ಎರಡು ಮೈಗಳನ್ನು ಒಡೆದುಕೊಳ್ಳುತ್ತ ಸಾಗಿದೆ. ದೇಹದಿಂದ ಬಿಡುಗಡೆ ಪಡೆಯುವ ಆತ್ಮದ ಬಗೆಗೆ ಪುರಂದರ ದಾಸರು ಚಿಂತಿಸಿದ್ದಾರೆ. ಇಲ್ಲಿ ನಡೆದ ಘಟನೆಯನ್ನೇ ಇನ್ನೊಬ್ಬರಿಗೆ ವಿವರಿಸುವಂತದ್ದು ಅದು ಈ ರೀತಿ ಇದೆ.

ಅಕ್ಕ ನಿನ್ನ ಮಾತು ಕೇಳಿ ಚಿಕ್ಕದೊಂದು ಗಿಳಿಯ ಸಾಕಿದೆ
ಅಕ್ಕ ನಾನಿಲ್ಲದ ವೇಳೆ ಬೆಕ್ಕುಕೊಂಡು ಹೋಯಿತ್ಯೋ
ಅರ್ತಿಗೊಂದು ಗಿಳಿಯ ಸಾಕಿದೆ ಮುತ್ತಿನ ಹಾರವ ಹಾಕಿದೆ

ಇಲ್ಲಿ ಬರುವ ಗಿಳಿಯ ರೂಪಕ ತನ್ನ ಚೌಕಟ್ಟಿನ ಪರಿಭಾಷೆಯನ್ನೇ ಭದ್ರವಾಗಿ ಆಶ್ರಯಿಸುತ್ತ ಅತ್ಯಂತ ಗಂಭೀರವಾಗಿ ವಿಷಯ ಚಿಂತನದ ಕಡೆಗೆ ನಮ್ಮನ್ನು ಎಳೆ ದೊಯ್ಯುತ್ತದೆ. ಭಾಷೆ ಬಲು ಸರಳವಾಗುತ್ತ ವರ್ಣತ ವಸ್ತುವನ್ನು ತುಂಬ ಜಟಿಲವಾಗಿಸುತ್ತ ಸಾಗಿಸುವುದು ಈ ಕೀರ್ತನೆಯ ವೈಶಿಷ್ಟ್ಯ. ಮಕ್ಕಳ ಹಾಡಿನ ಪುಸ್ತಕಗಳಲ್ಲೂ ಸೇರಿಸುವಷ್ಟು ಸರಳವಾಗಿವೆ, ಈ ಕೀರ್ತನೆ. ಇಲ್ಲಿ ಗಿಳಿ ಎತ್ತಲೋ ಓಡೆ ಹೋಗಿರುವುದು ದೇಹದಿಂದ ಆತ್ಮವು ಪಡೆಯುವ ಬಿಡುಗಡೆಯ ಸಂಕೇತವಾಗಿದೆ. ಕೊನೆಯ ಅಂಬರಕೆ ಹಾರಿ ಹೋಯಿತು ಅಂಗಯ್ಯಲಾಡುವ ಗಿಳಿ, ಮುಂಗಯ್ಯ ಮೇಲಣ ಗಿಳಿ ರಂಗ ಪುರಂದರ ವಿಠಲನಂತೆ, ರಂಗದಿ ಭಜಿಸುವ ಗಿಳಿ ಎಂಬಲ್ಲಿ ಭಕ್ತಿಮಾರ್ಗದ ಮೂಲಕ ಜೀವಾತ್ಮವು ಪರಮಾತ್ಮನೆಡೆಗೆ ಸಾಗಿ ಮೋಕ್ಷವನ್ನು ಪಡೆಯುವುದನ್ನು ಸೊಗಸಾಗಿ ಚಿತ್ರಿಸಿದೆ. ದಾಸರ ಆಧ್ಯಾತ್ಮಿಕ ಚಿಂತನೆಯು ಇಲ್ಲಿ ಸರಳವಾಗಿ ಮನಮುಟ್ಟುವಂತೆ ಚಿತ್ರಿತವಾಗಿದೆ. ಆಧ್ಯಾತ್ಮಿಕ, ಅಮೂರ್ತ ವಿಚಾರಗಳನ್ನು ಮೂರ್ತರೂಪಕ್ಕಿಳಿಸುವಲ್ಲಿ ಗಿಳಿಯ ರೂಪಕವು ಯಶಸ್ವಿಯಾಗಿದೆ.

ಹದ್ದು : ಇದು ಸಾವಿನ ಸಂಕೇತವಾಗಿದೆ.

ನಾಳೆ ಹಿಡಿದು ಎಮದು ಹೀಗೆ ಬಾಳುವ ಕಾಲದಿ ಯಮನು
ಕೋಳಿ ಪಿಳ್ಳೆಯಾಡುವಾಗ ಹಾಳಿನದ್ದಿನಂತೆ ಒಯ್ಯುವ

ಇಲ್ಲಿ ಹದ್ದು ಯಮನ ಪ್ರತಿನಿಧಿಯಾಗಿದ್ದು ಇದು ಮಾನವನ ಸಾವನ್ನು ಸೂಚಿಸುತ್ತದೆ. ಮಾನವನು ತನ್ನ ಕಾಯಕವನ್ನು ಇಂದೇ ಈಗಲೇ ಮಾಡಬೇಕು ‘ನಾಳೆ ಎಂದವನ ಮನೆ ಹಾಳು’ ಎಂಬ ಮಾತಿದೆ. ಯಾವುದೇ ಕಾರ್ಯವನ್ನು ನಾಳೆ ಮಾಡುವೆ ಎಂದರಾಗದು. ಅಷ್ಟರಲ್ಲಿ ಯಮನು ಕೋಳಿಮರಿಯನ್ನು ಹದ್ದು ಕೊಂಡೊಯ್ಯುವಂತೆ ಕೊಂಡೋಗಬಹುದು.

ಸಾಮಾಜಿಕ ಜಗತ್ತು

ಯಾವುದೇ ಸಾಹಿತ್ಯವು ಸಮಾಜದಿಂದ ಪೂರ್ತಿಯಾಗಿ ಹೊರತಾಗಿರಲು ಸಾಧ್ಯವಿಲ್ಲ. ಕವಿ ತನ್ನ ಕಾಲದ ಸಮಾಜದ ಚೌಕಟ್ಟಿನೊಳಗೇ ಚಿಂತನೆಯನ್ನು ನಡೆಸಿ ಎಲ್ಲಾ ಕಾಲಗಳಿಗೂ ನಿಲ್ಲಬಲ್ಲ ಮೌಲ್ಯಗಳನ್ನು ಪ್ರತಿಪಾದಿಸುತ್ತಾನೆ. ಸಮಾಜವು ಸತ್ಯದರ್ಶನದ ಕನ್ನಡಿಯಾಗಿದೆ. ಸಾರ್ವಕಾಲಿಕ ದೃಷ್ಟಿ, ಸಾಮಾಜಿಕ ಪ್ರಜ್ಞೆಗಳೆರಡೂ ಪೂರಕವಾಗಿದ್ದು ಇವುಗಳನ್ನು ನಾವು ದಾಸರ ಕೀರ್ತನೆಗಳಲ್ಲಿ ಕಾಣಬಹುದು.

ಸಂಸಾರ

ಸಾಂಸಾರಿಕ ಅಥವಾ ಕೌಟುಂಬಿಕ ರೂಪಕಗಳು ಪುರಂದರದಾಸರ ಕೀರ್ತನೆಗಳಲ್ಲಿ ಧಾರಾಳವಾಗಿ ಬಂದಿವೆ.

ಇಬ್ಬರೆಂಡಿರ ಸುಖವು ಇಂದು ಕಂಡೆನಯ್ಯ
ಅಬ್ಬಬ್ಬ ಎಂದಿಗೂ ಸಾಕು ಸಾಕಯ್ಯ
ಒಬ್ಬಳಲಿ ಪೋಗಿ ಓರಗವ ಮಾಡೆನ್ನಲು
ಬೊಬ್ಬೆಯೇನಿದು ಕೊಬ್ಬೆ ನಡೆಯೆಂದಳು
ತಬ್ಬಿಬ್ಬುಗೊಂಡು ಇನ್ನೊಬ್ಬಳನು ಮಾಡೆನಲು
ಅಬ್ಬ ಬಿಸಿ ಮುಟ್ಟಲಾಪೆನೆ ಎಂದಳು

ಹಿರಿಯವಳ ಕೂಡಿಯು ಸರಸವಾಡುವೆನೆಂದು
ಇರುಳು ಉಪ್ಪರಿಗೆ ನಾನೇರುತಿರಲು
ಚರಣವೊಬ್ಬಳು ಪಿಡಿದು ಶಿರವನೊಬ್ಬಳು ಪಿಡಿದು
ಸರಸರನೆ ಕೆಳಗೆ ಮೇಲೆಳೆಯುತಿಹರಯ್ಯ

ಲೌಕಿಕ ಆಧ್ಯಾತ್ಮಗಳ ನಡುವಣ ದ್ವಂದ್ವವನ್ನು ಈ ಕೀರ್ತನೆಯಲ್ಲಿ ಕಾಣಬಹುದು. ಇಲ್ಲಿಯ ಗಂಡನಿಗೆ ಇಬ್ಬರು ಹೆಂಡಿರು. ಆತನು ಇಬ್ಬರನ್ನೂ ತೃಪ್ತಿಪಡಿಸಲು ಹೋಗಿ ಕಷ್ಟದಲ್ಲಿ ಸಿಲುಕುವ ಚಿತ್ರಣ ಇಲ್ಲಿದೆ. ಮಾನವನು ಲೌಕಿಕ ಆಧ್ಯಾತ್ಮಿಕ ದ್ವಂದ್ವಗಳ ನಡುವೆ ಸಿಲುಕಿ ಲೌಕಿಕ ಸುಖವನ್ನು, ಆಧ್ಯಾತ್ಮಿಕ ಸುಖವನ್ನು ಅನುಭವಿಸದೆ ಇರುತ್ತಾನೆ. ನಮ್ಮಲ್ಲಿ ದ್ವಂದ್ವ ಇರಬಾರದು. ಆಧ್ಯಾತ್ಮಿಕ ವಿಚಾರಗಳ ಬಗೆಗೆ ಸ್ಪಷ್ಟ ನಿಲುವು, ನಂಬಿಕೆ ನಮ್ಮಲ್ಲಿರಬೇಕು.

ಮಾಡು ಸಿಕ್ಕದಲ್ಲಾ ಮಾಡಿನ ಗೂಡು ಸಿಕ್ಕಿದಲ್ಲಾ
ಜೋಡು ಹೆಂಡಿರಂಜಿ ಓಡಿಹೋಗುವಾಗ
ಗೋಡೆ ಬಿದ್ದು ಬಯಲಾಯಿತಲ್ಲಾ
ಎಚ್ಚರಗೊಳಲಿಲ್ಲಾ ಮನವೇ ಹುಚ್ಚನದೆನಲ್ಲಾ
ಅಚ್ಚಿನೊಳಗೆ ಮೆಚ್ಚು ಮೆಚ್ಚಿನೊಳಗೆ ಅಚ್ಚು
ಕಿಚ್ಚೆದ್ದು ಹೋಯಿತಲ್ಲಾ

ಸಂಸಾರ ಸಾಗರದಲ್ಲಿ ಮುಳುಗಿ ಬಾಳ ಸಂಜೆಯಲ್ಲಿ ವ್ಯಥೆ ಪಡುವ ಮಾನವನ ಬದುಕಿನ ಚಿತ್ರಣ ಇಲ್ಲಿದೆ. ಈ ಮೇಲಿನ ಕೀರ್ತನೆಗಳಲ್ಲಿ ಗಂಡನ ಕಡೆಯಿಂದ ಸಂಸಾರದ ಚಿತ್ರಣವು ನಿರೂಪಿತವಾಗಿದೆ.

ಸಂಸಾರವನ್ನು ಹೆಂಡತಿಯ ಕಡೆಯಿಂದ ನೋಡುವ ರೂಪಕ ಈ ಕೆಳಗಿನ ಕೀರ್ತನೆಯಲ್ಲಿದೆ

ಈಸಲಾರೆನು ಈ ಸಂಸಾರದಲಿ
ಲೇಸು ಕಾಣೆನೆ ಇದರಲ್ಲಿ ಹೇ ಸಖಿಯೇ ಕೇಳೆ
ಅತ್ತಿಗೆಯರು ಅತಿ ವ್ಯಭಿಚಾರಿಯರಮ್ಮ ಎಡೆಬಿಡದೆ ಎನ್ನ
ಸುತ್ತಮುತ್ತ ಕಾದಿಹರೆ ನೋಡಮ್ಮ ಅವರಂತೆ ಎನ್ನ
ಚಿತ್ತದಲೆ ತಿಳಿದಿಹರೆ ಕೇಳಮ್ಮ ಇವರೆಲ್ಲರ ಹಮ್ಮ
ಒತ್ತಿ ಆಳುವರಿಲ್ಲೇ ದುಷ್ಕರ್ಮ ಜೊತೆ ಹಾಕಿದ ಬ್ರಹ್ಮ

ಸಂಸಾರ ಸಾಗರದಲ್ಲಿ ಮುಳುಗಿ, ನೊಂದು ಹೋದ ಬದುಕಿನ ಚಿತ್ರಣ ಇಲ್ಲಿದೆ. ಸಂಸಾರ ಹದಗೆಟ್ಟಾಗ ಬದುಕು ಭಾರವಾಗುತ್ತದೆ. ಇಲ್ಲಿ ‘ವ್ಯಬಿಚಾರಿ’ ಸ್ವಾರ್ಥದ ಸಂಕೇತವಾಗಿದೆ. ‘ದುರುಳರಾರ್ವರು ಭಾವ ಮೈದುನರೆ’ ಎಂಬಲ್ಲಿ ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳು ನಮ್ಮನ್ನು ಪಾಪಕಾರ್ಯದೆಡೆಗೆ ಕೊಂಡೊಯ್ಯುತ್ತವೆ ಎಂಬ ಭಾವವಿದೆ. ಒಟ್ಟಿನಲ್ಲಿ ಈ ರೂಪಕದಲ್ಲಿ ಬದುಕಿನ ಜಂಜಾಟದ ಚಿತ್ರಣವಿದೆ.

ಪುರಂದರದಾಸರ ಕೀರ್ತನೆಗಳಲ್ಲಿ ಸಂಸಾರದ ಬಗೆಗೆ ನೊಂದ ಚಿತ್ರಣಗಳಿರುವಂತೆ ಸಂಸಾರದ ಕಷ್ಟಗಳನ್ನೆದುರಿಸಿಯೂ ನಾವು ಬಾಳಬೇಕೆಂಬ ಸಂದೇಶವೂ ಇದೆ. ಅದನ್ನು ಈ ಕೀರ್ತನೆಯಲ್ಲಿ ಗುರುತಿಸಬಹುದು.

ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸಂಸಾರದಲ್ಲಿ ಆಸೆ ಲೇಶ ಇಡಧಾಗೆ
ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿರಾಮ ಎನುತ ಪಾಡಿ ಕಾಮಿತ ಕಯ್ಗೊಂಬರೆಲ್ಲ

ಗೇರುಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ
ಮೀರಿಯಾಸೆ ಮಾಡದೆಲೆ ಧೀರ ಕೃಷ್ಣನ ಭಕುತರೆಲ್ಲ
ಮಾಂಸದಾಸೆಗೆ ಮತ್ಸ್ಯ ಸಿಲುಕಿ ಪಟ್ಟ ಪರಿಯಂತೆ
ಮೋಸ ಹೋಗಧಾಗೆ ಜಗ ದೀಶ ಪುರಂದರ ವಿಠಲನ ನೆನೆದು

ಸಂಸಾರದಲ್ಲಿ ಎಷ್ಟೇ ಕಷ್ಟ ನಷ್ಟಗಳು ಬಂದರೂ ನಾವು ದೃತಿಗೆಡಬಾರದು; ಅವುಗಳನ್ನೆಲ್ಲ ಎದುರಿಸಿ ಬದುಕಬೇಕು. ಇಲ್ಲಿ ‘ಗೇರು ಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ’ ಎಂದು ನೀಡಿರುವ ಹೋಲಿಕೆ ಬಹಳಷ್ಟು ಅರ್ಥಪೂರ್ಣವಾಗಿದೆ. ಗೇರುಹಣ್ಣಿನ ಬೀಜ ಹೊರಗಿರುವಂತೆ ಸಂಸಾರದಲ್ಲಿದ್ದರೂ ಅದರಲ್ಲಿ ಮುಳುಗದೆ ತನ್ನತನವನು ಉಳಿಸಿಕೊಳ್ಳಬೇಕು. ಇದೇ ಭಾವವು ‘ಇರಬೇಕು ಇಲ್ಲದಿರಬೇಕು ಹರಿದಾಸರು ಸಂಸಾರದೊಳಗೆ’ ಕೀರ್ತನೆಗಳ್ಲಲಿ ವ್ಯಕ್ತಗೊಂಡಿದೆ.

ಬೆಂದ ಸಂಸಾರವೆಂಬ ಮಧ್ಯದಲಿ
ನೊಂದೆನೊ ನಾ ಬಹಳ ಕರೆ ಕರೆಯಲ್ಲಿ
ಸಂಸಾರದಲ್ಲಿ ಅನೇಕ ಬಗೆಯ ನೋವು, ದುಃಖಗಳು ಇರುವಂತಹದ್ದೇ. ಒಂದು ವಸ್ತು ಬೇಯಬೇಕಾದರೆ ಅದಕ್ಕೆ ಬೆಂಕಿಯ ಬಿಸಿ ಮುಟ್ಟಬೇಕು. ಸಂಸಾರದ ನೋವುಗಳು ಬೆಂಕಿಯ ಹಾಗೆ ಸಂಸಾರದ ಕಷ್ಟದಿಂದ ನೊಂದ ಜೀವದ ಬಗೆಗೆ ಪರಿಣಾಮಕಾರಿಯಾಗಿ ಹೇಳುವಲ್ಲಿ ‘ಬೆಂದ ಸಂಸಾರ’ ಪದದ ಬಳಕೆ ಯಶಸ್ವಿಯಾಗಿದೆ.