ದಾಸರು ತಮ್ಮ ಭಾವಾಭಿವ್ಯಕ್ತಿಗೆ ಭಾಷೆಯನ್ನು ದುಡಿಸಿಕೊಂಡಂತೆಯೇ ರೂಪಕ ಸಂಪತ್ತನ್ನೂ ಬಳಸಿಕೊಂಡ ವಿಷಯವು ಸರ್ವವಿದಿತವಾದುದು. ತಾವು ಸಮಾಜದಲ್ಲಿ ಕಂಡ ವಿಷಯಗಳನ್ನು, ತಮ್ಮ ಅಂತರಾಳದಲ್ಲಿ ತುಡಿದ ಭಾವನೆಗಳನ್ನು ಸಮರ್ಪಕವಾಗಿ ತಿಳಿಸಲು ಅವರು ನಿರ್ಮಾಣ ಮಾಡಿದ ರೂಪಕಗಳು ಯಾರನ್ನಾದರೂ ಬೆರಗುಗೊಳಿಸುವಂತಹುದು. ಪ್ರಾಣಿ-ಪಕ್ಷಿಗಳ ಸ್ವಭಾವನ್ನು ಸೂಕ್ಷ್ಮವಾಗಿ ಅವಲೋಕಿಸಿದ್ದ ದಾಸರಿಗೆ ಅವುಗಳನ್ನೇ ರೂಪಕಗಳನ್ನಾಗಿ ಬಳಸಿಕೊಂಡ ವಿಷಯ ನಿರೂಪಣೆ ಮಾಡುವುದು ಅನುಕೂಲಕರವಾಯಿತು. ಅನೇಕ ಬಗೆಯ ಅನುಭವಗಳಿಗೆ ಸಸ್ಯ-ಪ್ರಾಣಿ-ಪಕ್ಷಿಗಳ ಪ್ರತಿಮೆಗಳನ್ನೊಡ್ಡಿ ಅವುಗಳ ಬಗ್ಗೆ ತಮ್ಮ ಸೂಕ್ಷ್ಮಾವಲೋಕವನ್ನು ತೋರಿಸಿಕೊಂಡಿರುವುದಲ್ಲದೆ, ಮಾನವ ಸ್ವಭಾವವನ್ನು, ಆ ರೂಪಕಗಳ ಮೂಲಕ ಕುಶಲವಾಗಿ ವ್ಯಾಖ್ಯಾನಿಸುತ್ತಾರೆ. ಶ್ರೇಷ್ಠ-ನೀಚ, ಹಿರಿದು-ಕಿರಿದು, ದುಷ್ಟ-ಸಾಧು, ಅಂತರಂಗ-ಬಹಿರಂಗ, ಸಹಜ-ಕೃತಕ, ಒಳಿತು-ಕೆಡಕು, ತಿಳಿವು-ಮರೆವು ಈ ಅನೇಕ ವಿರೋಧಗಳ ನಿರೂಪಣೆಗೆ ಅವರು ಒಡ್ಡುವ ರೂಪಕಗಳು ಅಭ್ಯಾಸಿಯನ್ನು ಚಕಿತಗೊಳಿಸುತ್ತವೆ. ಪುರಂದರದಾಸರ ರೂಪಕಗಳನ್ನು ಕೇಂದ್ರವಾಗಿಟ್ಟುಕೊಂಡು ಈ ಅಧ್ಯಾಯದಲ್ಲಿ ವಿವೇಚಿಸಲಾಗಿದೆ.

ಪುರಂದರ ದಾಸರ ಪಾಂಡಿತ್ಯ, ಪ್ರತಿಮೆಗಳು ಜೀವನಾನುಭವದ ಆಳ ಆಗಾಧವಾಗಿದ್ದು ಅವುಗಳನ್ನು ನಾವು ಅವರ ಕೀರ್ತನೆಗಳಲ್ಲಿ ಕಾಣಬಹುದು. ಅವರು ನಾನಾ ರೀತಿಯ ಜನರನ್ನು ನೋಡಿದವರು. ಅವರ ವಿಚಿತ್ರ ಸ್ವಭಾವವನ್ನು ಕಂಡು ಅಲ್ಲಿಯೇ ಪ್ರತಿಕ್ರಿಯಿಸಿದವರು. ಪುರಂದರದಾಸರು ಜನರ ಉಪದೇಶಕ್ಕೆ ಕೀರ್ತನೆಗಳನ್ನು ಮಾಧ್ಯಮವಾಗಿ ಮಾಡಿಕೊಂಡರು. ಅವರು ಜನರಿಗೆ ಅರ್ಥವಾಗುವ ರೀತಿಯಲ್ಲಿ ಜೋಡಿಸಿ ಪೋಣಿಸಿದ ಪದಪುಂಜಗಳು ಅವರ ಕೀರ್ತನೆಯ ಹಾರದ ಮಣಿಗಳಾಗಿವೆ. ಈ ಕೀರ್ತನೆಗಳಲ್ಲೆಲ್ಲಾ ಅನೇಕ ರೂಪಕಗಳಿದ್ದು ಅವುಗಳು ವಿವಿಧ ವಸ್ತು ವಿಷಯಗಳನ್ನೊಳಗೊಂಡಿವೆ. ಅವುಗಳಲ್ಲಿ ಅನೇಕ ಸಸ್ಯ ಸಂಬಂಧೀ ರೂಪಕಗಳು, ಪ್ರಾಣಿ ಸಂಬಂಧೀ ರೂಪಕಗಳಿದ್ದು ಸಾಮಾಜಿಕ, ಧಾರ್ಮಿಕ, ನೀತಿಯನ್ನು ಒಳಗೊಂಡ ರೂಪಕಗಳೂ ಧಾರಾಳವಾಗಿವೆ. ಇವುಗಳನ್ನೆಲ್ಲಾ ಅಧ್ಯಯನದ ಅನುಕೂಲಕ್ಕೋಸ್ಕರ ಸಸ್ಯ ಜಗತ್ತು. ಪ್ರಾಣಿ ಜಗತ್ತು, ಸಾಮಾಜಿಕ ಜಗತ್ತು, ಧಾರ್ಮಿಕ ಜಗತ್ತು ಎಂಬ ನಾಲ್ಕು ಮುಖಗಳನ್ನಾಗಿ ಗುರುತಿಸಲಾಗಿದೆ.

ಸಸ್ಯ ಜಗತ್ತು

ಪುರಂದರದಾಸರು ಗೇರುಹಣ್ಣು, ಎಳ್ಳು ಕಾಳು, ಜಾಲಿಯಮರ, ಬೇವು, ಬಾಳೆಹಣ್ಣು, ಮೂಲಂಗಿ, ಈರುಳ್ಳಿ ಮುಂತಾದ ಸಸ್ಯ ಹಾಗೂ ಸಸ್ಯಮೂಲ ವಸ್ತುಗಳನ್ನು ತಮ್ಮ ಕೀರ್ತನೆಗಳಲ್ಲಿ ಸಂಕೇತ, ರೂಪಕಗಳಾಗಿ ಬಳಸಿದ್ದಾರೆ. ಜನರ ಆಚಾರ ವಿಚಾರಗಳನ್ನು ದೃಢಪಡಿಸಲು ಸಸ್ಯ ಜಗತ್ತಿನ ಸಂಕೇತಗಳನ್ನು ಬಳಸಿರುವುದಲ್ಲದೆ ಜಾಲಿಯಮರ, ಬೇವು ಮುಂತಾದುವನ್ನು ಆತ್ಮವಿಮರ್ಶೆಗಾಗಿ ಹಾಗೂ ವಿಜ್ಞಾನ ದುರ್ಜನರ ರೀತಿ ನೀತಿಗಳನ್ನು ಖಂಡಿಸುವ ಸಾಧನವಾಗಿ ಬಳಸಿದ್ದಾರೆ. ಇದರಿಂದ ಕಾವ್ಯ ಧ್ವನಿಯು ತೀಕ್ಷ್ಣವಾಗಿ ಹೊರಹೊಮ್ಮುವುದರೊಂದಿಗೆ ಅವರ ಕೀರ್ತನೆಗಳ ಕಾವ್ಯಗುಣದ ಮೌಲ್ಯವೂ ಹೆಚ್ಚಿದೆ.

ಈಸಬೇಕು ಇದ್ದು ಜಯಿಸಬೇಕು
ಹೇಸಿಗೆ ಸಂಸಾರದಲ್ಲಿ ಆಸೆ ಲೇಶ ಇಡದ್ದಾಗೆ
…………………..
ಗೇರುಹಣ್ಣಿನಲ್ಲಿ ಬೀಜ ಸೇರಿದಂತೆ ಸಂಸಾರದಿ
ಮೀರಿಯಾಸೆ ಮಾಡದಲೆ ಧೀರ ಕೃಷ್ಣನ ಭಕುತರೆಲ್ಲಾ

ಎಷ್ಟೇ ಲೌಕಿಕ ಸುಖ ಭೋಗಗಳಿದ್ದರೂ ಅವುಗಳನ್ನು ಅನುಭವಿಸುವುದರೊಂದಿಗೆ ಸಂಸಾರದಲ್ಲಿ ಮುಳುಗಿರಬಾರದು. ಇರಬೇಕು ಇಲ್ಲದಿರಬೇಕು ಸಂಸಾರದಲ್ಲಿ ಎಂಬ ದಾಸರವಾಣಿಯಂತೆ ಜನರು ಸಾಗಬೇಕು. ಹೀಗೆ ಗೇರುಹಣ್ಣಿನಲ್ಲಿ ಬೀಜವು ಅದರೊಂದಿಗೆ ಇದ್ದರೂ ಪ್ರತ್ಯೇಕವಾಗಿ ಕಾಣುವಂತೆ ಸಂಸಾರಿಗಳಾದವರು ಸಂಸಾರದಲ್ಲಿದ್ದುಕೊಂಡು ಈಸಿ ಜಯಿಸಬೇಕು.

ಜಾಲಿಯ ಮರದಂತೆ ಧರೆಯೊಳು ದುರ್ಜನರು
ಜಾಲಿಯ ಮರವಂತೆ ಆ
ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂಥ
ಬಿಸಿಲಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ

ಒಂದು ಮರವು ಜನರಿಗೆ ಬಹುಪಯೋಗಿಯಾಗಿದ್ದು ಹಸಿದು ಬಂದವರಿಗೆ ಹಣ್ಣು, ಸುವಾಸನೆ, ಬಳಲಿದವರಿಗೆ ನೆರಳು ನೀಡುತ್ತದೆ. ಮರವು ಪರಿಸರ ಸಂರಕ್ಷಣೆಗೂ ಕಾರಣೀಭೂತವಾಗಿದೆ. ಅಂತೆಯೇ ಸಜ್ಜನರಾದವರು ಪರೋಪಕಾರಿಗಳಾಗಿದ್ದು ದೀನ ದಲಿತರ ಉದ್ಧಾರಕ್ಕಾಗಿ ಶ್ರಮಿಸುತ್ತಾರೆ. ಜಾಲಿಯ ಮರ ಒಂದು ನಿರುಪಯುಕ್ತ ಸಸ್ಯ. ಅಂತೆಯೇ ದುರ್ಜನರು ಯಾವುದೇ ಒಳ್ಳೆಯ ಕೆಲಸವನ್ನು ಮಾಡಲಾರರು ಎಂಬ ಸತ್ಯವನ್ನು ದಾಸರು ಜಾಲಿಯ ಮರದ ರೂಪಕದ ಮೂಲಕ ಸೊಗಸಾಗಿ ಚಿತ್ರಿಸಿದ್ದಾರೆ.

ದುರ್ಜನರಾದವರು ಧಾರ್ಮಿಕ ಆಚಾರ ವಿಚಾರಗಳನ್ನು ಬಿಟ್ಟಿರುತ್ತಾರೆ. ಅದನ್ನೇ ದಾಸರು ಇನ್ನೊಂದು ಕೀರ್ತನೆಯಲ್ಲಿ ಹೀಗೆ ಹೇಳಿದ್ದಾರೆ.

ಮಾಯಾವಾದಿ ಗಂಡನೊಲ್ಲೆನೆ ಅವನ
ಮಾಯವಾಣಿ ಪೂಜೆ ಮಾಡಲಾರೆನಕ್ಕ
……………………
ಎಳೆ ತುಳಸಿಗಂಗೆ ಅಗ್ರೋದಕದಿ ನಿ
ರ್ಮಲವಾಗಿ ಪೂಜೆಯ ಮಾಡೆಂದರೆ
ಬಿಳಿ ನೀರ ಕುಡಿದು ಬತ್ತಲೆ ಬೇವು ಉಟ್ಟು
ಹುಳಿ ಮೂಲಂಗೀರುಳ್ಳಿ ತಿಂಬುವನೆ ಖೋಡಿ

ಭಕ್ತಿ ಭಾವವಿಲ್ಲದೆ ಪೂಜಿಸುವವರನ್ನು ದುರುಳರೆಂದು ಈ ಮೇಲಿನ ಕೀರ್ತನೆಯಲ್ಲಿ ಹೇಳಲಾಗಿದೆ. ತುಳಸಿ, ಗಂಗಾಜಲವನ್ನು ಬಳಸಿ ನಿರ್ಮಲ ಮನಸ್ಸಿನಿಂದ ಪೂಜೆ ಮಾಡಬೇಕಾದ ಜನರು ಶೇಂದಿಯನ್ನು ಕುಡಿದು ಪೂಜೆಗೆ ವರ್ಜ್ಯವಾದ ಹುಳಿ, ಮೂಲಂಗಿ, ಈರುಳ್ಳಿಯನ್ನು ತಿಂದು ಪೂಜೆಯನ್ನು ಮಾಡುವವರು ದುರುಳರು ಎಂದಿದ್ದಾರೆ. ಇಲ್ಲಿ ಬಳಸಿದ ಬಿಳಿ ನೀರು ಅಮುಲು ಪದಾರ್ಥವಾಗಿದ್ದು ಅದು ಅಜ್ಞಾನದ ಸಂಕೇತವಾಗಿದೆ. ಹುಳಿ, ಮೂಲಂಗಿ, ಈರುಳ್ಳಿ ಪೂಜೆಗೆ, ಪೂಜೆ ಮಾಡುವವರಿಗೆ ವರ್ಜ್ಯವಾದ ಆಹಾರವಾಗಿದ್ದು ಅದು ಇಲ್ಲಿ ಅನಾಚಾರದ ಸಂಕೇತವಾಗಿ ಬಳಕೆಯಾಗಿದೆ. ಧಾರ್ಮಿಕ ಸಾಧನೆಗೆ ಅಡ್ಡಿಪಡಿಸುವ ಹೀನ ಸ್ಥಿತಿ ಈ ರೂಪಕದಲ್ಲಿದೆ.

ದುರ್ಜನರು ಎಂದಿಗೂ ತಮ್ಮ ಹುಟ್ಟುಗುಣವನ್ನು ಬಿಡರು ಎಂಬುದನ್ನು ಪುರಂದರ ದಾಸರ ಈ ಕೀರ್ತನೆಯಲ್ಲಿ ಗಮನಿಸಬಹುದು.

ಬೇವು ಬೆಲ್ಲದೊಲಿಡಲೇನು ಫಲ / ಹಾವಿಗೆ ಹಾಲೆರೆದರೇನು ಫಲ
ಕುಟಿಲವ ಬಿಡದಿಹ ಕುಜನರು ಮಂತ್ರವ ಪಠನೆಯ ಮಾಡಿದರೇನು ಫಲ /
ಸಟೆಯನ್ನಾಡು ಮನುಜರು ಮನದಲಿ ವಿಠಲನ ನೆನೆದರೆಯೇನು ಫಲ /

ಬೇವು ದುರ್ಜನರ ಸಂಕೇತವಾಗಿ ಬಂದರೆ, ಬೆಲ್ಲ ಸಜ್ಜನರ ಸಂಕೇತವಾಗಿದೆ. ಬೇವನ್ನು ಬೆಲ್ಲದಿಳಗಿಟ್ಟರೂ ಕೂಡ ಏನೂ ಫಲವಿಲ್ಲ. ಅದು ಎಂದೂ ತನ್ನ ಕಹಿಯನ್ನು ಬಿಡದು ಹಾವಿಗೆ ಹಾಲೆರೆದು ಫಲವಿಲ್ಲ. ಅಂತೆಯೇ ದುರ್ಜನರು ಮಂತ್ರ ಪಠಣವನ್ನು ಮಾಡಿದರೂ ಏನೂ ಫಲವಿಲ್ಲ. ಅಂತರಂಗ ಶುದ್ಧಿಯಿಲ್ಲದೆ ಮಾಡುವ ಪೂಜೆ ವ್ಯರ್ಥ, ದುರ್ಜನರು ಎಂದೂ ಬದಲಾವಣೆಯನ್ನು ಹೊಂದಲಾರರು ಎಂಬ ಭಾವವನ್ನು ಈ ಮೇಲಿನ ಕೀರ್ತನೆಗಳಲ್ಲಿ ಕಾಣಬಹುದು.

ದಾಸರ ಪ್ರಕಾರ ಎಷ್ಟು ಕಷ್ಟಗಳಿದ್ದರೂ, ದುಃಖಗಳಿದ್ದರೂ ಜನರಲ್ಲಿ ತಾಮಸ ಗುಣವೇ ಕಾರಣ. ಈ ತಾಮಸ ಗುಣವನ್ನು ಬಿಡದ ಜನರು ಎಂದಿಗೂ ಬದಲಾಗಲಾರರು.

ಬೇವಿನ ಬೀಜವ ಬಿತ್ತಿ ಬೆಲ್ಲದ ಕಟ್ಟೆಯ ಕಟ್ಟಿ
ಜೇನುಮಳೆಗರೆದರೆ ವಿಷ ಹೋಗುವುದೇನಯ್ಯಾ?
ಏನು ಓದಿದರೇನು ಏನು ಕೇಳಿದರೇನು
ಮನದೊಳಗಿನ ತಾಮಸ ಬಿಡದನಕ

ಎಂದೂ ಪ್ರಶ್ನಿಸಿದ್ದಾರೆ. ಪ್ರತಿಯೊಬ್ಬ ಮಾನವನಿಗೂ ಜೀವನ ಸಂಸ್ಕಾರ ಅಗತ್ಯ ಅದಕ್ಕಾಗಿ ತಾಮಸ ಗುಣವನ್ನು ಬಿಡಬೇಕು.

“ಸಜ್ಜನರ ಸಂಗ ನಮಗೆಂದಿಗಾಗುವುದೊ ದುರ್ಜನರ ಸಂಗದಲಿನೊಂದೆ ಹರಿಯೆ” ಎಂದು ಹಾಡಿ ದಾಸರು ಸಜ್ಜನರ ಸಹವಾಸಕ್ಕಾಗಿ ಹಾತೊರಿದಿದ್ದಾರೆ. ಮನುಷ್ಯನಿಗೆ ಉತ್ತಮವಾದ ಆಹಾರ ಅಗತ್ಯವಾಗಿರುವಂತೆ ಆಸ್ತಿಕತೆ, ಧಾರ್ಮಿಕತೆಯೂ ಅತ್ಯಗತ್ಯ. ನಾವು ಧರ್ಮ ಮಾರ್ಗದಲ್ಲಿ ನಡೆಯಬೇಕು ಎಂಬ ನಿಲುವು ಪುರಂದರದಾಸರದು.

ರಾಗಿ ತಂದೀರಾ ಭಿಕ್ಶ್ಕಕೆ ರಾಗಿ ತಂದೀರಾ
ಯೋಗ್ಯರಾಗಿ ಭೋಗ್ಯರಾಗಿ ಭಾಗ್ಯವಂತರಾಗಿ ನೀವು
ಅನ್ಯವಾರ್ತೆಯ ಬಿಟ್ಟವರಾಗಿ ಅನುದಿನ ಭಜನೆಯ ಮಾಡುವರಾಗಿ

ದಕ್ಷಿಣ ಕರ್ನಾಟಕದ ಮುಖ್ಯ ಆಹಾರಗಳಲ್ಲಿ ಒಂದಾದ ರಾಗಿಯನ್ನು ಕುರಿತ ಪ್ರಶ್ನೆಯಿಂದ ಈ ಕವಿತೆ ಆರಂಭವಾಗುತ್ತದೆ. ನಾಮಪದವನ್ನು ಕ್ರಿಯಾಪದಕ್ಕೆ ತಿರುಗಿಸಿ ಹೆಚ್ಚಿನ ಅರ್ಥವಂತಿಕೆ ಕಾಣುವುದು ಈ ಪದದ ವೈಶಿಷ್ಟ್ಯ. ರಾಗಿ ಎಂಬ ಶಬ್ದದ ಹಿಂದಾಗಲಿ ಅಥವಾ ಮುಂದಾಗಲಿ ಕೆಲವು ಶಬ್ದಗುಚ್ಛಗಳನ್ನಿರಿಸಿದರೆ ಅವು ಹೊಸ ಹುಟ್ಟು ಪಡೆಯುತ್ತವೆ. ಇಲ್ಲಿ ಪದಗಳ ಜೋಡಣೆಯ ಚಮತ್ಕಾರವನ್ನು, ಶ್ಲೇಷೆಯನ್ನು ಗುರುತಿಸಬಹುದು. ಮಾತಪಿತೃಗಳಗ ಸೇವಿಪರಾಗಿ ಪಾಪ ಕಾರ್ಯವ ಬಿಟ್ಟವರಾಗಿ, ಜಾತಿಯಲ್ಲಿ ಮಿಗಿಲಾದವರಾಗಿ, ನೀತಿ ಮಾರ್ಗದಲಿ ಖ್ಯಾತರಾಗಿ ಹೀಗೆಯೇ ಇಡೀ ಕೀರ್ತನೆಯುದ್ದಕ್ಕೂ ರಾಗಿ ಪದವನ್ನು ವಿಶಿಷ್ಟವಾಗಿ ಬಳಸಿದ್ದಾರೆ. ಭಿಕ್ಷೆಯೂ ರಾಗಿಯೂ ಸಾರ್ಥಕ್ಯವನ್ನು ಪಡೆಯುವಂತೆ ನಾವು ಒಳ್ಳೆಯ ಕೆಲಸವನ್ನು ಮಾಡುವಂತಹರಾಗಿ ಸಾರ್ಥಕ್ಯವನ್ನು ಪಡೆಯಬೇಕು ಎಂಬುದನ್ನು ದಾಸರು ಈ ಕೀರ್ತನೆಯಲ್ಲಿ ಸೊಗಸಾಗಿ ಚಿತ್ರಿಸಿದ್ದಾರೆ.

ಪುರಂದರದಾಸರು ಹಣ್ಣಿನ ರೂಪಕದ ಮೂಲಕ ಧರ್ಮದ ಮರ್ಮವನ್ನು ವಿವರಿಸಿದ್ದಾರೆ.

ಹಣ್ಣು ಬಂದಿದೆ ಕೊಳ್ಳಿರೊ ನೀವೀಗ
ಚಿನ್ನ ಬಾಲಕೃಷ್ಣನೆಂಬೊ ಕನ್ನೆಬಾಳ
………………………………
ಹವ್ಯಕವ್ಯದ ಹಣ್ಣು ಸವಿದ ಸಕ್ಕರೆ ಹಣ್ಣು
ಭವರೋಗಗಳನೆಲ್ಲ ಕಳೆವ ಹಣ್ಣು

ಬಾಳೆಯ ಹಣ್ಣನ್ನು ಮಾಧ್ಯಮವಾಗಿ ಮಾಡಿಕೊಂಡು ಪುರಂದರದಾಸರು ಇಲ್ಲಿ ಧಾರ್ಮಿಕ ಉಪದೇಶವನ್ನು ಮಾಡುತ್ತಾರೆ. ಇಲ್ಲಿ ಹಣ್ಣು ಬಂದಿದೆ ಎಂಬುದು ವಿಶೇಷವಾದ ಅರ್ಥವನ್ನು ಪಡೆದಿದ್ದು. ಅದು ಸಾಧಾರಣ ಹಣ್ಣಲ್ಲ. ಅಪೂರ್ವವಾದ ಚಿನ್ನ ಬಾಲಕೃಷ್ಣನೆಂಬ ಹಣ್ಣು. ವ್ಯಾಪಾರಿಗಳು ವಸ್ತುಗಳ ಗುಣಗಾನ ಮಾಡುವಂತೆ ದಾಸರು ಇಲ್ಲಿ ಹಣ್ಣಿನ ಮೂಲಕ ಬಾಲಕೃಷ್ಣನ ಗುಣಗಾನ ಮಾಡಿದ್ದಾರೆ. ಬಾಳೆಯ ಹಣ್ಣನ್ನು ಸುಲಿದು ತಿನ್ನುವುದು ಬಹಳ ಸುಲಭ. ಅಂತೆಯೇ ಭವರೋಗಗಳನ್ನೆಲ್ಲಾ ಕಳೆಯುವ ಭಗವಂತನ ನಾಮವನ್ನು ಸೇವಿಸಿದರೆ ಹಳೆಯ ಪಾಪಗಳೆಲ್ಲವೂ ಪರಿಹಾರವಾಗುವುದು.

ಕೊಳೆತು ಹೋಗುವುದಿಲ್ಲ ಹುಳುತು ಹೋಗುವುದಿಲ್ಲ
ಕಳೆದು ಬಿಸಾಡಿಕೊಳ್ಳುವುದಲ್ಲ
ಅಳತೆ ಕೊಂಬುವುದಲ್ಲ ಗಿಳಿ ಕಚ್ಚಿ ತಿಂಬೋದಲ್ಲ
ಒಳಿತಾದ ಹರಿಯೆಂಬೊ ಮಾವಿನ ಹಣ್ಣು

ಈ ಹಣ್ಣು ಕೊಳೆತು ಹೋಗಲಾರದು. ಹುಳ ಹಿಡಿಯಲಾರದು, ಕಳೆದು ಹೋಗುವಂತಹದ್ದಲ್ಲ, ಪಕ್ಷಿಗಳು ತಿಂದು ಹೋಗಲಾರದು. ಅಂತಹ ರುಚಿಕರವಾದ ಮಾವಿನಹಣ್ಣು ಎಂದು ಶ್ರೀ ಹರಿಯನ್ನು ನೆನೆದಿದ್ದಾರೆ. ನಾವು ದೇವರ ಸ್ಮರಣೆಯೊಂದಿಗೆ ಒಳ್ಳೆಯ ಕೆಲಸವನ್ನು ಮಾಡಿದರೆ ಶಾಶ್ವತ ಎಂಬುದನ್ನು ದಾಸರು ಮಾವಿನ ಹಣ್ಣಿನ ರೂಪಕದ ಮೂಲಕ ಹೇಳಿದ್ದಾರೆ.

ಸಂಸಾರದಿಂದ, ಭವಬಂಧನದಿಂದ ಪಾರಾಗಲು ವಿಷವನ್ನು ಕುಡಿಯಲು ನಿರ್ಧರಿಸಿದ ಹೆಂಡತಿಯೊಬ್ಬಳ ಮಾತನ್ನು ಈ ಕೀರ್ತನೆ ನಿರೂಪಿಸುತ್ತದೆ.

ವಿಷ ಕುಡಿಯುತೇನೆ ನೋಡು ಗಂಡ ವಿಷ ಕುಡಿಯುತೇನೆ
ವಿಷ ಕುಡಿಯುತೇನೆ ಹಸನಾಗಿರುತಿರು
ಹಸದಂತೆ ದೇಹವ ಹತವ ಮಾಡುತ್ತೇನೆ
……………………………………………………
ಕಬ್ಬಿನ ರಸದೊಳಗೆ ಗಸಗಸ ರುಬ್ಬಿಯೇ ನೀ ಬೆರೆಸಿ
ಹುಬ್ಬು ಜೇನುತುಪ್ಪ ತಂಪಿಗೆ ಏಲಕ್ಕಿ ಪುಡಿ ಹಾಕಿ
ಸಜ್ಜನರೆಲ್ಲ ಕೈಸೇರಿದ ಬಳಿ ಹಬ್ಬ ಬಂದಿತೆಂದು ಉಬ್ಬುಬ್ಬಿ ಈಗ

ಈ ವಿಷಯವು ಇಹದ ಪಾಲಿಗೆ ಸಾಯಿಸುವ ವಿಷವಾದರೂ ಅಮರತ್ನವನ್ನು, ಮೋಕ್ಷವನ್ನು ಪಡೆಯುವ ವಿಷವಾದ್ದರಿಂದ ಅಮೃತವಾಗುತ್ತದೆ. ಆದ್ದರಿಂದಲೆ ಕಬ್ಬಿನ ರಸ, ಏಲಕ್ಕಿ ಪುಡಿ, ಜೇನು ಮುಂತಾದವುಗಳನ್ನು ಹಾಕಿ ಸ್ವಾದಿಷ್ಟಭರಿತವಾಗಿ ಸಂಭ್ರಮದಿಂದ ಕುಡಿಯುವ ಹಂಬಲದ ಚಿತ್ರಣ ಇಲ್ಲಿದೆ. ಇಲ್ಲಿ ವಿಷವು ಅಮರತ್ವದ ರೂಪಕವಾಗಿದೆ.

ಈ ಸಂದರ್ಭದಲ್ಲಿ ಗಮನಿಸಬೇಕಾದ ಇನ್ನೊಂದು ಕೀರ್ತನೆ ಹೀಗಿದೆ.

ರಾಮರಾಮ ಪಾಯಸಕ್ಕೆ ಕೃಷ್ಣನಾಮ ಸಕ್ಕರೆ
ವಿಠ್ಠಲನಾಮ ತುಪ್ಪವ ಕಲಸಿ ಬಾಯಿ ಚಪ್ಪರಿಸಿರೊ
ಒಮ್ಮನ ಗೋಧಿಯ ತಂದು ವೈರಾಗ್ಯ ಕಲ್ಲಲಿ ಬೀಸಿ
ಸುಮ್ಮನೆ ಸಜ್ಜಿಗೆಯ ತೆಗೆದು ಸಣ್ಣ ಶಾವಿಗೆಯ ಹೊಸದು

ಇಲ್ಲಿ ಪಾಯಸ, ಸಕ್ಕರೆ, ಗೋಧಿ, ಬೀಸುವಕಲ್ಲು ಇತ್ಯಾದಿ ಪದಗಳನ್ನು ಅರ್ಥವಂತಿಕೆಯಿಂದ ಬಳಸಿದ್ದು ಗಮನೀಯ. ಒಮ್ಮನಸ್ಸು ಎಂಬ ಗೋಧಿಯನ್ನು ಬೀಸಲು ವೈರಾಗ್ಯ ಎಂಬ ಕಲ್ಲು. ಇಲ್ಲಿ ಒಟ್ಟಾಗಿ ಪಾಯಸ ತಯಾರಿಯ ಚಿತ್ರಣವಿದ್ದು ಅದು ಸಿಹಿಯ, ಆನಂದದ ಧಾರ್ಮಿಕತೆಯನ್ನು ಚಿತ್ರಿಸುತ್ತದೆ.

ದೇವರ ಸ್ವರಣೆಯನ್ನು ಮಾಡದಿದ್ದರೆ ಅವರು ಬದುಕಿ ಫಲವಿಲ್ಲ. ಅದನ್ನು ದಾಸರು ಈ ರೀತಿ ಹೇಳಿದ್ದಾರೆ.

ಹರಿಸ್ವರಣೆಯಿಂದ ಬಾಳಿ ಬದುಕಿದರೇನು,
ನರಜನ್ಮದಲ್ಲಿ ಜನಿಸಿ ಫಲವೇನು ಹರಿಯೇ,
ಸುಳ್ಳನಾಡುವ ಕಳ್ಳನೊಡನೆ ಗೆಳೆತನವೇನು
ಹಳ್ಳ ಹೊಳೆಯಿಲ್ಲದಿಹ ವಳ್ಯವೇನು
ಎಳ್ಳು ನುರಿಯದವಂತೆ ಗಾಣಿಗನೆಂಬ ಪೆಸರೇನು
ಹಳ್ಳಿಯಿಲ್ಲದವಂಗೆ ಹೆಗ್ಗಳಿಕೆಯೇನು

ಹರಿಯ ಸ್ಮರಣೆಯನ್ನು ಮಾಡದೆ ಬದುಕಿ ಫಲವಿಲ್ಲವೆಂಬುದನ್ನು ಹರಿಯ ಸ್ಮರಣೆಯನ್ನು ಮಾಡದೆ ಬದುಕಿ ಫಲವಿಲ್ಲವೆಂಬುದನ್ನು ಪುಷ್ಟೀಕರಿಸಲು ಕಳ್ಳ, ಗಾಣಿಗ ಮುಂತಾದ ಪದಗಳು ಮೂರ್ತರೂಪವಾಗಿ ಬಂದಿವೆ. ಒಟ್ಟಿನಲ್ಲಿ ಗೇರುಹಣ್ಣು, ಎಳ್ಳು, ಜಾಲಿಯ ಮರ, ಬೇವು, ಹುಳಿ, ಮೂಲಂಗಿ, ಈರುಳ್ಳಿ ಹೀಗೆ ವಿವಿಧ ಬಗೆಯ ಸಸ್ಯ ರೂಪಕಗಳು ಮಾನವರ ಸ್ವಭಾವಗಳ ಗುಣವಿಮರ್ಶೆಗಾಗಿ, ಧಾರ್ಮಿಕ ವಿಚಾರಗಳನ್ನು, ಭಕ್ತಿಯನ್ನು, ಪ್ರತಿಪಾದಿಸಲು ಮೂಡಿಬಂದಿವೆ. ಈ ರೂಪಕಗಳಲಿ ಪುರಂದರದಾಸರ ಅಂತರಂಗದ ಭಾವ ಪ್ರಕಟವಾಗಿವೆ.

ಪ್ರಾಣಿ ಲೋಕ

ಮಾನವನಿಗೆ ನಿಸರ್ಗದ ಜೊತೆ ನಿಕಟವಾದ ಸಂಬಂಧವಿದೆ. ಈ ಭೂಮಿಯ ಅದೆಷ್ಟೋ ಪ್ರಾಣಿ ಪಕ್ಷಿಗಳೊಂದಿಗೆ ಸಹಜವಾಗಿ ಬದುಕುವ ರೀತಿಯಲ್ಲಿ ಮನುಷ್ಯರ ವರ್ತನೆಗಳು ಕೆಲವೊಮ್ಮೆ ಪ್ರಾಣಿಗಳ ವರ್ತನೆಗಳನ್ನು ಅನುಕರಿಸಿದಂತೆ ಕಾಣುತ್ತದೆ. ಮನುಷ್ಯರ ನಡವಳಿಕೆಗಳ ಓರೆಕೋರೆಗಳನ್ನು ಗುರುತಿಸಿ, ಖಂಡಿಸಿ, ವಿಮರ್ಶಿಸುವಲ್ಲಿ ಪುರಂದರದಾಸರು ಪ್ರಾಣಿ ರೂಪಕಗಳನ್ನು ಬಳಸಿದ್ದಾರೆ. ಮಾನವನ ಬದುಕಿನ ಅಸಹಾಯಕತೆ, ಮೌಲ್ಯಹೀನತೆ, ಅರ್ಥಹೀನತೆಗಳನ್ನು ದಾಸರು ತಮ್ಮ ಕೀರ್ತನೆಗಳಲ್ಲಿ ನಿವೇದನೆಯ ರೂಪದಲ್ಲಿ, ವಿಡಂಬನಾತ್ಮಕವಾಗಿ ಕೆಲವೊಮ್ಮೆ ತೀಕ್ಷ್ಣವಾಗಿ ನಿರೂಪಿಸಿದ್ದಾರೆ. ಪುರಂದರದಾಸರ ಕೀರ್ತನೆಗಳಲ್ಲಿ ನಾಯಿ, ಕತ್ತೆ, ಗಿಳಿ, ಮಂಗ, ಕುರಿ, ತುರಗ, ಕಪ್ಪೆ, ಹಾವು ಏಡಿ, ಹಲ್ಲಿ, ಕರಡಿ, ಕಾಗೆ, ಮೀನು, ಮೊಸಳೆ, ಹುಲಿ, ಮೇಕೆ, ಕುರಿ, ಕೋಳಿ, ಹದ್ದು, ಕೋಣ, ಬೆಕ್ಕು, ಒರಳೆ, ಸಿಂಹ ಮುಂತಾದ ಅನೇಕ ಪ್ರಾಣಿ, ಪಕ್ಷಿ ಸರಿಸೃಪಗಳು ಪ್ರತಿಮೆಗಳಾಗಿ ಬಂದಿವೆ.

ನಾಯಿ : ನಾಯಿಯನ್ನು ಪುರಂದರದಾಸರು ಅನೇಕ ಕೀರ್ತನೆಗಳಲ್ಲಿ ಸಂಕೇತವಾಗಿ ಬಳಸಿದ್ದಾರೆ. ನಾಯಿಯು ಚಂಚಲ ಸ್ವಭಾವ, ಮೊಂಡುತನ, ಹೀನಭಾವ, ಅಜ್ಞಾನದ ಸಂಕೇತವಾಗಿದೆ.

ಕುರುಡ ನಾಯಿ ಸಂತೆಗೆ ಬಂತಂತೆ ಅದು ಏತಕೆ ಬಂತೋ |
ಖಂಡ ಸಕ್ಕರೆ ಹಿತವಿಲ್ಲವಂತೆ ಖಂಡ ಎಲುಬು ಕಡಿದಿತಂತೆ |
ಹೆಂಡರಿ ಮಕ್ಕಳ ನೆಚ್ಚಿತಂತೆ ಕೊಂಡು ಹೋಗುವಾಗ ಯಾರಿಲ್ಲವಂತೆ

ಇಲ್ಲಿ ನಾಯಿಯ ರೂಪಕದ ಮೂಲಕ ಸಾರ್ಥಕ್ಯವನ್ನು ಕಂಡುಕೊಳ್ಳದ ಮಾನವನ ಬದುಕಿನ ಚಿತ್ರಣವನ್ನು ನೀಡಲಾಗಿದೆ. ಕುರುಡು ನಾಯಿಯು ಅಜ್ಞಾನ, ಅಂಧಕಾರದ ಪರಾಕಾಷ್ಠೆಯ ಸಂಕೇತವಾಗಿದೆ. ನಾಯಿಯು ಸಿಹಿಯನ್ನು ಅಪೇಕ್ಷಿಸದು ಬದಲಾಗಿ ತುಂಡು ಎಲುಬು ತಿನ್ನುತ್ತದೆ. ಇಲ್ಲಿ ಹೆಂಡಿರ ಮಕ್ಕಳ ನೆಚ್ಚಿತಂತೆ, ಕೊಂಡು ಹೋಗುವಾಗ ಯಾರಿಲ್ಲವಂತೆ ಎಂಬುದು ಮಾನವನ ಸಂಸಾರದ ಬಗೆಗಿನ ವ್ಯಾಮೋಹವನ್ನು ಚಿತ್ರಿಸುವುದರೊಂದಿಗೆಮಾನವನು ಸ್ವಾರ್ಥದಿಂದ ಎಷ್ಟೇ ಸಂಪತ್ತನ್ನು ಸಂಪಾದಿಸಿದರೂ ಇಹಲೋಕ ತ್ಯಜಿಸಿದಾಗ ಏನನ್ನೂ ಕೊಂಡೊಯ್ಯಲಾಗದು ಎಂಬ ವಿಚಾರವನ್ನು ಪ್ರಚುರಪಡಿಸುತ್ತದೆ.

ಭರದಿ ಅಂಗಡಿ ಹೊಕ್ಕಿತಂತೆ
ತಿರುವಿ ದೊಣ್ಣೆಯಲಿ ಇಕ್ಕಿದರಂತೆ
ಮರೆತರಿನ್ನು ವ್ಯರ್ಥವಂತೆ
ನರಕದೊಳಗೆ ಬಿದ್ದಿತಂತೆ

ಇತ್ಯಾದಿ ನಾಯಿಗೆ ಸಂಬಂಧಿಸಿದ ಅನೇಕ ಚಿತ್ರಣಗಳಿವೆ. “ಆದರೆ ಇದರಲ್ಲಿ ಬರುವ ಮಾನವ ಸಂಬಂಧಿಯಾದ ವಿವರಗಳು ( ಹೆಂಡಿರ ಮಕ್ಕಳ ನೆಚ್ಚಿತಂತೆ, ವೇದಾವಾದಗಳನೋದಿತಂತೆ, ಮಾನವನಾಗಿ ಹುಟ್ಟಿತಂತೆ) ಇದೊಂದು ಶುದ್ಧ ರೂಪಕವಾಗಿ ಬೆಳೆಯದಂತೆ ಮಾಡಿವೆ”.

ನಾಯಿ ಬಂದದಪ್ಪಾ ಅಣ್ಣಾ ಅತ್ತಲಾಗಿರಿ
ನಾಯಿ ಬಂದರೆ ನಾಯಿ ಅಲ್ಲ ಮಾನವ ಜನ್ಮದ ಹೀನ ನಾಯಿ

ಕೊಟ್ಟ ಸಾಲವ ಕೊಡದವ ನಾಯಿ ಇಟ್ಟ ಭಾಷೆ ತಪ್ಪುವ ನಾಯಿ
ಕೆಟ್ಟ ಮೇಲೆ ಕುಳಿತುಕೊಂಡು ಅಟ್ಟಹಾಸದಿ ಬಗುಳುವ ನಾಯಿ

ಕೊಟ್ಟಕುದಿಯುವೋ ಕೆಟ್ಟ ನಾಯಿ ಇಟ್ಟ ಅನ್ನವ ಹಂಗಿಪ್ಪ ನಾಯಿ
ಪುಟ್ಟಿ ಮಾತೆ ಗರ್ಭದಲ್ಲಿ ಕೆಟ್ಟಕೃತ್ಯವ ಮಾಳ್ವವ ನಾಯಿ

ಪಟ್ಟ ಸ್ತ್ರೀಯಳ ಬಿಟ್ಟವ ನಾಯಿಬಿಟ್ಟ ಸ್ತ್ರೀಯಳ ಆಳ್ವವ ನಾಯಿ
ದಿಟ್ಟ ಶ್ರೀ ಪುರಂದರ ವಿಠಲರಾಯನ ಮನ
ಮುಟ್ಟಿ ಭಜಿಸದೆ ಹೋದವ ನಾಯಿ

ಇಲ್ಲಿ ನಾಯಿಯನ್ನು ಮನುಷ್ಯ ಜನ್ಮ ಹೀನರಿಗೆ ಸಂಕೇತವಾಗಿ ಬಳಸಲಾಗಿದೆ. ಈ ಕೀರ್ತನೆಯಲ್ಲಿ ಮಾನವರಾಗಿ ಹುಟ್ಟಿ, ಭಾಷೆ ತಪ್ಪುವವರನ್ನು, ಕೊಟ್ಟ ಸಾಲವನ್ನು ಕೊಡದವರನ್ನು ಇತ್ಯಾದಿಯಾಗಿ ಹೇಳುತ್ತಾ ಪುರಂದರ ವಿಠಲನನ್ನು ಮನಮುಟ್ಟಿ ಭಜಿಸದವ ನಾಯಿ ಎಂದಿದ್ದಾರೆ. ನಾಯಿ ಪದವನ್ನು ರೂಪಕವಾಗಿ ಬಳಸಿದರೂ ಮತ್ತೆ ನಾಯಿ ಅಂದರೆ ನಾಯಿ ಅಲ್ಲ ಮಾನವ ಜನ್ಮದ ಹೀನ ನಾಯಿ ಎಂದು ಹೀನ ಕೆಲಸ ಮಾಡುವ ಮಾನವರ ಬಗ್ಗೆ ನೇರವಾಗಿ ನುಡಿದಿದ್ದಾರೆ.

ನೇಮವನು ತಾಳುವರು ದಾನ ಮಾಡುವರು
ಕಾಮ ಕ್ರೋಧ ಮದ ಮತ್ಸರ ಬಿಡದೆ ಇಂಥಾ
ನಾಯಿಕುನ್ನಿಗಳ ಕಂಡೊಳಗಿಟ್ಟುಕೊಂಡರೆ
ಕಾಶಿಯಲಿ ಮಿಂದ ಫಲವೇನಯ್ಯ

ನಿಯಮ ನಿಷ್ಠೆಯಿಂದಿರದೆ, ಕಾಮ, ಕ್ರೋಧ, ಮದ, ಮತ್ಸರಗಳಿಂದೊಡಗೂಡಿದವರನ್ನು ನಾಯಿಕುನ್ನಿಗಳೆಂಬುದಾಗಿ ಕರೆದಿದ್ದು ಇದು ಮಾನವರ ಹೀನತೆಯನ್ನು, ಅಂತರಂಗ ಶುದ್ಧ ಇಲ್ಲದಿರುವುದನ್ನು ಚಿತ್ರಿಸುತ್ತದೆ. ಅಂತರಂಗ ಶುದ್ಧಿಯ ಅಗತ್ಯವನ್ನು ದಾಸರು ಈ ಕೀರ್ತನೆಯಲ್ಲಿ ಚಿತ್ರಿಸಿದ್ದಾರೆ.

ಎಂತಹುದೋ ನಿನ್ನ ಭಕುತಿ
ಸಂತತ ನಿನ್ನ ದಾಸರ ಸಂಗ ಸುಖವೆನಗೆ
……………………………………
 ಅನ್ನವನೆ ತೋರೆ ಚಿಟಿಕಿರಿಯೆ ಬಾಲವ ಬೀಸಿ
ಕುನ್ನಿ ಸುಳಿದಾಡಿ ಕಾಲ್ಗೆರಗುವ ತೆರದಿ
ಹೆಣ್ಣಿನಾಸೆಗೆ ಬಾಯಿಬಿಡುವ ಸ್ತ್ರೈಣವಾಡಿದರೆ
ಘನ್ನನಯ್ಯ ಮನ್ನಿಸೆಲೊ ಚಿನ್ನಬಹು
ಕುನ್ನಿ ಮನಕೆಂತಹುದು ನಿನ್ನಯ ಭಕುತಿ

ಅಂತರಂಗದಲ್ಲಿ ಭಕ್ತಿಯಿಲ್ಲದೆ ಸ್ವಾರ್ಥದಿಂದ ದೇವರ ಧ್ಯಾನವನ್ನು ಮಾಡುವವರ ಬಗೆಗಿನ ವಿಡಂಬನೆ ದಾಸರ ಈ ಕೀರ್ತನೆಯಲ್ಲಿದೆ. ಕುನ್ನಿ ಸುಳಿದಡಿ ಕಾಲ್ಗೆರಗುವ ಕುನ್ನಿ ಮನವು ಮಾನವನ ಸ್ವಾರ್ಥದ ಸಂಕೇತವಾಗಿದೆ.

ಎಲ್ಲಾನು ಬಲ್ಲೆನೆಂಬುವಿರಲ್ಲ ಅವಗುಣ ಬಿಡಲಿಲ್ಲ
ಸೊಲ್ಲಿಗೆ ಶರಣರ ಕಥೆಗಳ ಪೇಳುತ
ಅಲ್ಲದ ನುಡಿಯನು ನುಡಿಯುವಿರಲ್ಲ
ಕಾವಿಯನ್ನುಟ್ಟು ತಿರುಗುವಿರಲ್ಲ ಕಾಮವ ಬಿಡಲಿಲ್ಲ
ನೇಮನಿಷ್ಠೆಗಳ ಮಾಡುವಿರಲ್ಲ ತಾಮಸ ಬಿಡಲಿಲ್ಲ
ತಾವೊಂದರಿಯದೆ ಪರರನು ತಿಳಿಯದೆ
ಶ್ವಾನನ ಕುಳಿಯಲಿ ಬೀಳುವಿರಲ್ಲ

ಇಲ್ಲಿ ಜನರ ಅಹಂಕಾರದ ಚಿತ್ರಣವಿದೆ. ಎಲ್ಲವನ್ನು ತಿಳಿದವರೆಂಬ ಅಹಂಕಾರದ ಜನರು ಕೊನೆಗೆ ಅಧಃಪತನವಾಗುವುದನ್ನು ‘ಶ್ವಾನನ ಕುಳಿಯಲಿ ಬೀಳುವಿರಲ್ಲ’ ಎಂದಿದ್ದಾರೆ. ಇಲ್ಲಿ ಅಧಃಪತನದ ಸಂಕೇತವಾಗಿ ಶ್ವಾನವು ಬಂದಿದೆ.

ಕಾಯಲಾರೆನುರಂಗ ಕಂಡವರ ಬಾಗಿಲನು
ನಾಯಿ ಕುನ್ನಿಯಂತೆ ನರರ ಪೀಡಿಸುತ

ಇಲ್ಲಿ ಲೌಕಿಕ ಜೀವನದ ಸ್ವಾರ್ಥ ಹಾಗೂ ಹತಾಶೆಯ ಜೀವನದ ಚಿತ್ರಣವಿದ್ದು ಪ್ರಾಪಂಚಿಕ ಬದುಕಿನಿಂದ ಬಿಡುಗಡೆ ಪಡೆಯಬೇಕೆಂಬ ಹಂಬಲವಿದೆ. ಇದೇ ಭಾವವನ್ನು ಇನ್ನೊಂದು ಕೀರ್ತನೆಯಲ್ಲಿ ಕಾಣಬಹುದು.

ಕಚ್ಚದಿರು ಎಲ್ಲರಲಿ ಕಚ್ಚದಿರು ಬಲ್ಲರಲಿ
ಕಚ್ಚದಿರು ಶ್ವಾನನಂತೆ ಆತ್ಮಾ

ಭವ ಬಂಧನದಿಂದ ಬಿಡುಗಡೆಗೆ ಹಾತೊರೆಯುವ ಚಿತ್ರಣಕ್ಕೆ ಪೂರಕವಾಗಿ ಇಲ್ಲಿ ಶ್ವಾನ ಬಳಕೆಯಾಗಿದೆ.

ಇಷ್ಟು ಪಾಪ ಮಾಡಿದ್ದೆ ಸಾಕು
ಸೃಷ್ಟೀಶನೆ ಎನ್ನನುದ್ಧರಿಸಬೇಕು
…………………………..
 ಸ್ನಾನ ಸಂಧ್ಯಾದಿಗಳ ಮಾಡದಲೆ ಮೆಯ್ಗೆಟ್ಟೆ
ಜ್ಞಾನ ಮಾರ್ಗವನಂತು ಮೊದಲೆ ಬಿಟ್ಟೆ
ಏನ ಪೇಳಲಿ ಪರರ ಮಾನಿನಿಗೆ ಮನಸಿಟ್ಟೆ
ಶ್ವಾನ ಸೂತಕರನಂತೆ ಹೊರೆದೆ ಹೊಟ್ಟೆ

ದಾಸರ ಈ ಕೀರ್ತನೆಯಲ್ಲಿಯೂ ಭವ ಬಂಧನದ ಬಿಡುಗಡೆಗೆ ಹಂಬಲವಿದೆ. ‘ಶ್ವಾನ ಸೂಕರನಂತೆ ಹೊರೆದೆ ಹೊಟ್ಟೆ’ ಎಂದು ಸ್ವಾರ್ಥದ ಬದುಕಿನ ಬಗ್ಗೆ ಪರಿತಪಿಸುವ ಚಿತ್ರಣವಿದೆ.

ಪರೋಪಕಾರವನ್ನು ಮಾಡದ ದುರ್ಜನರ ಬಗ್ಗೆ ದಾಸರು ಈ ರೀತಿ ಹೇಳಿದ್ದಾರೆ.

ಜಾಲಿಯ ಮರವಂತೆ ಧರೆಯೊಳು ದುರ್ಜನರು
ಜಾಲಿಯ ಮರವಂತೆ
………………………
 ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ

ಅನ್ನಕ್ಕಾಗಿ ನಾಯಿಯು ಜಗಳ ಮಾಡುತ್ತದೆ. ಅಂತೆಯೇ ದುರ್ಜನರು ತಮ್ಮ ಸ್ವಾರ್ಥಕ್ಕಾಗಿಯೇ ಇರುತ್ತಾರೆ. ಅವರೆಂದಿಗೂ ಇತರರಿಗೆ ಉಪಕಾರ ಮಾಡಲಾರರು. ಇದೇ ಭಾವ ಇನ್ನೊಂದು ಕೀರ್ತನೆಯಲ್ಲಿ ಹೀಗಿದೆ.

ಮಾತಿಗೆ ಬಾರದ ವಸ್ತು ಬಹಳಿದ್ದರೇನು
ಹೋತಿನ ಕೊರಳೊಳಗೆ ಮಾಲೆ ಇದ್ದರೇನು
ತಾನು ಉಣ್ಣದ ದ್ರವ್ಯ ತಾಳ್ಯುದ್ದ ಇದ್ದರೇನು
ದಾನವಿಲ್ಲದ ಮನೆಯು ದೊಡ್ಡದಾದರೇನು
ಹೀನಗುಣವುಳ್ಳವಗೆ ಹಿರಿಯತನ ಬಂದರೇನು
ಶ್ವಾನನ ಮೊಲೆಯೊಳಗೆ ಹಾಲಿದ್ದರೇನು

ಪರೋಪಕಾರವನ್ನು ಮಾಡವರಲ್ಲಿ ಏನಿದ್ದರೂ ವ್ಯರ್ಥ ಎಂಬುದರ ಸಂಕೇತವಾಗಿ ‘ಶ್ವಾನನ ಮೊಲೆಯೊಳಗೆ ಹಾಲಿದ್ದರೇನು’ ಎಂದಿದ್ದಾರೆ.

ಪಾಪಿ ಬಲ್ಲನೆ ಪರರ ಸುಖ ದುಃಖವ
ಕೋಪಿ ಬಲ್ಲನೆ ಶಾಂತ ಸುಗುಣದ ಘನವ
……………………………………
 ಶ್ವಾನಬಲ್ಲುದೆ ರಾಗ ಭೇದಂಗಳ
…………………………..

ಪಾಪಿಯಾದವನು ಇತರರ ಸುಖ ದುಃಖವನ್ನು ಅರಿಯಲಾರನು. ಅಂತೆಯೇ ಶ್ವಾನವು ರಾಗ ವೈವಿಧ್ಯವನ್ನು ಅರಿಯಲಾರದು. ಅದೇನಿದ್ದರೂ ಬೊಗಳುವುದು ಮಾತ್ರ. ಇಲ್ಲಿ ಮಾನವನ ಅಜ್ಞಾನದ ಸಂಕೇತವಾಗಿಯೇ ಶ್ವಾನವು ಬಂದಿದೆ.

ಕೆಂಡಕೆ ಒರಳೆ ಮುತ್ತುವುದುಂಟೇ
ಪಾಂಡುರಂಗನ ದಾಸರಿಗೆ ಭಯವುಂಟೆ
ಆನೆ ಸಿಂಹವ ಕೂಡೆ ಸ್ನೇಹ ಬೆಳೆಸುವುದುಂಟೆ
ಶ್ವಾನ ಹೆಬ್ಬುಲಿ ಕೂಡೆ ಸರಸವುಂಟೆ
……………………………….
ಸ್ವಾಮಿ ಶ್ರೀ ಪುರಂದರ ವಿಠಲರಾಯನ
ನಾಮಧಾರಿಗಳಿಗೆ ನರಕವುಂಟೆ

ಧೈವ ಭಕ್ತರಿಗೆಂದೂ ನರಕವಿಲ್ಲ ಎಂಬುದನ್ನು ಪ್ರತಿಪಾದಿಸಲು ಶ್ವಾನ ಹೆಬ್ಬುಲಿ ಕೂಡೆ ನರಕವುಂಟೆ ಎಂಬ ಚಿತ್ರಣವನ್ನು ದಾಸರು ನೀಡಿದ್ದಾರೆ. ಇಲ್ಲಿ ಶ್ವಾನ ಮತ್ತು ಹೆಬ್ಬುಲಿ ಎರಡು ವಿರುದ್ಧ ದಿಕ್ಕುಗಳ ಸಂಕೇತವಾಗಿದೆ. ಅವೆರಡೂ ಒಂದಾಗದು ಅಂತೆಯೇ ದೈವ ಭಕ್ತರಿಗೆಂದೂ ನರಕವುಂಟಾಗದು ಎಂಬುದು ಇಲ್ಲಿನ ಭಾವ.
ಡೊಂಕು ಬಾಲದ ನಾಯಕರೆ ನೀವೇನೂಟವ ಮಾಡಿದಿರಿ
ಕಣಕಕುಟ್ಟೋ ಅಲ್ಲಿಗೆ ಹೋಗಿಹಣಿಕಿ ಇಣಿಕಿ ನೋಡುವಿರಿ
ಕಣಕಕುಟ್ಟೋ ಒನಕೆಲಿ ಬಡಿದರೆ
ಕೈ ಕುಂಯಿ ರಾಗವ ಮಾಡುವಿರಿ

ಸ್ವಾರ್ಥ, ಭ್ರಷ್ಟಾಚಾರವನ್ನು ಮಾಡುವ ನಾಯಕರ ಬಗೆಗಿನ ವಿಡಂಬನೆ ಈ ಕೀರ್ತನೆಯಲ್ಲಿದೆ. ಹೀಗೆ ಸಮಾಜದ ಅಂಕು ಡೊಂಕುಗಳನ್ನು ಶ್ವಾನ, ನಾಯಿ, ನಾಯಿಕುನ್ನಿ ಪದಗಳನ್ನು ಬಳಸಿ ವಿಭಿನ್ನವಾಗಿ ಪುರಂದರದಾಸರು ಚಿತ್ರಿಸಿದ್ದಾರೆ.

ಕಪಿ : ಮನಸ್ಸಿನ ಚಂಚಲ ಸ್ವಭಾವದ, ಇಂದ್ರಿಯ ವಿಕಾರದ ಪ್ರತಿರೂಪವಾಗಿ ಕಪಿಯನ್ನು ಚಿತ್ರಿಸಲಾಗಿದೆ.

ಎಂತು ನೋಡಿದರು ಚಿಂತೆ ಈ ಒಡಲು ನಿ
ಶ್ಚಿಂತರಾಗಿಹರ ಒಬ್ಬರನು ಕಾಣೆ
ಬ್ರಹ್ನನಿಗೆ ಶಿರಹೋಗಿ ಬಾಡಿ ಬಳಲುವ ಚಿಂತೆ
ಮುನ್ನ ಮೂರುತಿಗೆ ಕಪಿಯಾದ ಚಿಂತೆ

ಈ ಲೋಕದಲ್ಲಿ ಎಲ್ಲರಿಗೂ ಒಂದಲ್ಲ ಒಂದು ಚಿಂತೆ ಇದ್ದೇ ಇದೆ. ಇಲ್ಲಿ ‘ಮಾರುತಿಗೆ ಕಪಿಯಾದ ಚಿಂತೆ’ ಎಂದು ಹೇಳುವುದರ ಮೂಲಕ ಈ ಲೋಕದಲ್ಲಿ ಹುಟ್ಟಿದವರು ಒಂದಲ್ಲ ಒಂದು ವಿಚಾರದಲ್ಲಿ ಕಷ್ಟಪಡಬೇಕು. ಪ್ರತಿಯೊಬ್ಬರಿಗೂ ಚಿಂತೆ ಇದ್ದರೂ ಪುರಂದರ ವಿಠಲನಂತೆ ನಿಶ್ಚಿಂತರಾಗಿರಬೇಕು. ಪ್ರತಿಯೊಬ್ಬರೂ ಕಷ್ಟವನ್ನೆದುರಿಸಿ ಬದುಕನ್ನು ಸಾಗಿಸಬೇಕು. ಅದಕ್ಕಾಗಿ ಚಿಂತಿಸಬಾರದು ಎಂಬ ತತ್ವವನ್ನು ನಾವಿಲ್ಲಿ ಕಾಣಬಹುದು.

ಕೋತಿಹಾಗೆ ಕುಣಿದಾಡಬೇಡ
ರೀತಿ ಮಾರ್ಗವ ಹಿಡಿಯೆಲೊ ಮೂಢ
ಆತುರ ಹೆಚ್ಚಿ ಕೂಗಾಡಬೇಡ
ಪಾತಕ್ಕೆ ಈ ಜನ್ಮ ಬಿಡದಿರೋ ಮೂಢ

ಕೋತಿಯು ಕುಣಿದಾಡುವುದು ಅದರ ಗುಣ, ಆದರೆ ಮಾನವನು ಅದರಂತೆ ಕುಣಿದಾಡಬಾರದು. ಮಾನವರು ಉತ್ತಮ ನಡೆ ನುಡಿಯೊಂದಿಗೆ ಒಳ್ಳೆಯ ಬದುಕನ್ನು ಸಾಗಿಸಬೇಕು. ಸಂಸಾರದ ವ್ಯಾಮೋಹದಲ್ಲಿ ಮುಳುಗಿ ಸ್ವಾರ್ಥ ಜೀವನವನ್ನು ನಡೆಸುವ ಮಾನವರನ್ನು ಪುರಂದರದಾಸರು ಈ ಕೀರ್ತನೆಯಲ್ಲಿ ಖಂಡಿಸುತ್ತಾರೆ.

ಏಕೆ ಚಿಂತಿಸುತಿದ್ದಿ ಕೋತಿ ಮನವೇ
ಲೋಕನಾಥನ ನೆನೆದು ಸುಖಯಾಗಿರು ಮನವೇ

ದೇವರನ್ನು ನೆನೆಯದೆ ಸುಮ್ಮನೆ ಸಣ್ಣ ಪುಟ್ಟ ಸಮಸ್ಯೆಗಳಿಗೆ ಚಿಂತಿಸುವ ಮಾನವರ ಮನಸ್ಸಿನ ಸಂಕೇತವಾಗಿ ಇಲ್ಲಿ ಕೋತಿಯನ್ನು ಬಳಸಲಾಗಿದೆ.

ಎಂತಹದೋ ನಿನ್ನ ಭಕುತಿ
ಸಂತತ ನಿನ್ನ ದಾಸರ ಸಂಗ ಸುಖನೆನಗೆ
…………………
ಹೋಗಿ ಬಾರೈ ಎಂದಾಚೆಗೆಳೆದರೂ ತಲೆ
ಬಾಗಿ ನಿಂತೂ ಅಲ್ಲಿ ಮೌನವಾಗಿ
ಓಗರಕೆ ಮನೆ ಮನೆಯ ತಪ್ಪದೆ ತಿರುಗುವ ಜೋಗಿಯು ಕೈಯ ಕಟ್ಟೋಡೆದ ಕೋ
ಡಗದ ಮನಕೆಯೆಂತಹುದು ನಿನ್ನಯ ಭಕುತಿ

ಇಲ್ಲಿ ಏಕಾಗ್ರತೆಯಿಲ್ಲದೆ ದೇವರ ಧ್ಯಾನವನ್ನು ಮಾಡುವ ಭಕ್ತನ ಭಕ್ತಿಯನ್ನು ಪುರಂದರದಾಸರು ಪ್ರಶ್ನಿಸಿದ್ದಾರೆ. ಜೋಗಿಯೊಂದಿಗೆ ಮನೆ ಮನೆ ತಿರುಗುವ ಕೋಡಗನಂತಹ ಮನವು ಇನ್ನಷ್ಟು ಚಂಚಲ ಸ್ವಭಾವವನ್ನು ಬಿಂಬಿಸುತ್ತದೆ.

ಕತ್ತೆಗೆ ಹೂರಣದ ರುಚಿ ತಿಳಿಯಲಿಲ್ಲ
ತೊತ್ತಿಗೆ ಪತಿವ್ರತೆ ಗುಣ ಬರಲಿಲ್ಲ
ಮುತ್ತಿನ ಹಾರ ಕಪಿಗೆ ಸಲ್ಲ
ಕುತ್ತಿಗೆ ಕೊಯ್ವಗೆ ಕರುಣವೇ ಇಲ್ಲ

ಕತ್ತೆಗೆ ಹೂರಣವ ರುಚಿ ತಿಳಿಯಬಾರದು. ಸೂಳೆಯಾದವಳಿಗೆ ಪತಿವ್ರತೆಯ ಗುಣವು ತಿಳಿಯದು ಅಂತೆಯೇ ಮುತ್ತಿನ ಹಾರವನ್ನು ಕಪಿಗೆ ಹಾಕುವುದು ಶ್ರೇಯಸ್ಕರವಲ್ಲ ಎಂದು ಇಲ್ಲಿ ಅಪಾತ್ರರಾದ ಮಾನವರಿಗೆ ನಮ್ಮ ಶಾಸ್ತ್ರ, ಧರ್ಮದ ಒಳತಿರುಳು ಅರ್ಥವಾಗದೆಂಬುದನ್ನು ಹೇಳಲಾಗಿದೆ.

ಕನಕದಾಸನ ಮೇಲೆ ದಯಮಾಡಲು ವ್ಯಾಸ
ಮುನಿ ಮಠದವರೆಲ್ಲ ದೂರಿಕೊಂಬುವರೊ
……………………………………….
ಮಾಣಿಕವು ಕೋಡಗನ ಕೈಯಲ್ಲಿ ಇದ್ದಂತೆ
ಕೋಣನಿದಿರಿಗೆ ಕಿನರಿಯ ಮೀಟಿದಂತೆ
ವೇಣುಧ್ವನಿ ಬದಿರನ ಬಳಿ ಮಾಡಿದಂತೆ ಕಣ್ಣು
ಕಾಣದವನಿಗೆ ಕನ್ನಡಿಯು ತೋರಿದಂತೆ

ಈ ಕೀರ್ತನೆಯಲ್ಲಿ ದಾಸರು ಕನಕದಾಸರು ಬಾಳೆಹಣ್ಣು ತಿನ್ನಲು ಹೊರಟ ಕಥೆಯನ್ನು ಹೇಳುವುದರೊಂದಿಗೆ ವಿಜ್ಞಾನಿಗಳಿಗೆ ತಮ್ಮಲ್ಲಿರುವ ಶಕ್ತಿ ಗೊತ್ತಾಗದು ಮತ್ತು ಅಜ್ಞಾನಿಗಳಿಗೆ ಮಾಡುವ ಉಪದೇಶವು ವ್ಯರ್ಥ ಎಂಬ ಭಾವವನ್ನು ವ್ಯಕ್ತಪಡಿಸಿದ್ದಾರೆ. ಕೋಡಗಲ್ಲಿನಲ್ಲಿರುವ ಮಾಣಿಕ್ಯ ಕೋಣನೆದುರು ಬಾರಿಸುವ ಕಿನ್ನರಿ, ಕಿವುಡುತನ ಬಿಳಿಯ ಕೊಳಲು ವಾದನ, ಕುರುಡನಿಗೆ ತೋರುವ ಕನ್ನಡಿ ಇವ್ಯಾವುದೂ ಉಪಯೋಗಕ್ಕೆಬಾರದು ಎಂಬ ವಿಚಾರವನ್ನು ಈ ಕೀರ್ತನೆಯಲ್ಲಿ ಕಾಣಬಹುದು. ಕಾಡಿನಲ್ಲಿರುವ ಕಪಿಗೆ ಮಾಣಿಕ್ಯದ ಬೆಲೆ ಅರಿಯಲಾರದು. ಅಂತೆಯೇ ಅಜ್ಞಾನಿಗಳಿಗೆ, ಮೂಢರಿಗೆ ಜ್ಞಾನ, ಭಕ್ತಿ ಮತ್ತು ಅದರ ಮಹತ್ವ ತಿಳಿಯಲಾರದು.

ಪಾಪಿಬಲ್ಲನೆ ಪರರ ಸುಖ ದುಃಖವ
ಕೋಪಿ ಬಲ್ಲನೆ ಶಾಂತ ಸುಗುಣದ ಘನ
ಹೇಡಿಬಲ್ಲನೆ ರಣದ ಸಾಹಸದ ಶೌರ್ಯವನು
ಕೋಡಗವು ಬಲ್ಲದೆ ರತ್ನ ಬೆಲೆಯನು

ಪಾಪಿಗಳಿಗೆ ಇನ್ನೊಬ್ಬರ ಕಷ್ಟ ಸುಖ ಅರಿಯದು. ಅಂತೆಯೇ ರತ್ನ ಬೆಲೆಯನ್ನು ಮಹತ್ವವನ್ನು ಕಪಿ ಅರಿಯದು. ಹಾಗೆಯೇ ಅಜ್ಞಾಮೊಗಳಾದವರಿಗೆ ಒಳ್ಳೆಯ ವಿಚಾರಗಳ ಮಹತ್ವ ತಿಳಿಯದು.

ಕುರುಡು ನಾಯಿ ಸಂತೆಗೆ ಬಂತಂತೆ ಅದು ಏತಕೆ ಬಂತೋ
ಮಂಗನ ಕೈಯ ಮಾಣಿಕ್ಯವಂತೆ ಹಾಂಗೂ
ಹಿಂಗೂ ಕಳೆದಿತಂತೆ

ಈ ಕೀರ್ತನೆಯಲ್ಲೂ ಮನುಷ್ಯರ ಅಜ್ಞಾನದ ಚಿತ್ರಣವನ್ನು ಕಾಣಬಹುದು. ಹೀಗೆ ಅನೇಕ ಕೀರ್ತನೆಗಳಲ್ಲಿ ಮಂಗನ ರೂಪಕವನ್ನು ಮನುಷ್ಯನ ಅಜ್ಞಾನ, ಚಂಚಲ ಸ್ವಭಾವದ ಸಂಕೇತವಾಗಿ ಬಳಸಲಾಗಿದೆ.

ಕತ್ತೆ : ಇದು ಮಾನವನ ದಡ್ಡತನ, ವ್ಯರ್ಥ ಭಾವನೆಗಳಿಗೆ ಪ್ರತಿರೂಪವಾಗಿದೆ.

ಕರಿತುರಗವಿರಲು ಬಿಟ್ಟು ಕೆಡಹುವ ಕತ್ತೆಯೇರಲು ಬೇಡವೋ
ಪರಮಪುರುಷ ಪುರಂದರ ವಿಠಲನಿರಲು
ನರರ ಭಜಿಸಬೇಡವೋ ಎಂದೆಂದಿಗೂ

ಬಲಶಾಲಿಯಾದ ಆನೆ, ಕುದುರೆಗಳಿರುವಾಗ ಅದನ್ನು ಬಳಸುವುದು ಬಿಟ್ಟು ಕೆಡಹುವ ಕತ್ತೆಯನ್ನೇರುವುದು ಹೇಡಿತನದ ಪರಮಾವಧಿ. ಅಂತೆಯೇ ಎಲ್ಲರನ್ನು ರಕ್ಷಿಸುವ ಪರಮಪುರುಷ ಪುರಂದರವಿಠಲನಿರುವಾಗ ಅವನನ್ನು ಭಜಿಸದೇ ನರರನ್ನು ಭಜಿಸುವುದು ಮೂರ್ಖತನದ ಲಕ್ಷಣ. ವ್ಯಕ್ತಿ ಪೂಜೆಯ ಬಗೆಗಿನ ವಿರೋಧ ಪುರಂದರದಾಸರ ಈ ಕೀರ್ತನೆಯಲ್ಲಿ ಚಿತ್ರಿತವಾಗಿದೆ.

ಕತ್ತೆಗೆ ಹೂರಣದ ರುಚಿ ತಿಳಿಯಲಿಲ್ಲ
ತೊತ್ತಿಗೆ ಪತಿವ್ರತೆ ಗುಣ ಬರಲಿಲ್ಲ
ಮುತ್ತಿನ ಹಾರ ಕಪಿಗೆ ಸಲ್ಲ
ಕುತ್ತಿಗೆ ಕೊಯ್ವಗೆ ಕರುಣವೇ ಇಲ್ಲ

ಕತ್ತೆಗೆ ಕಡುಬಿನೊಳಗಿನ ಹೂರಣದ ರುಚಿ ತಿಳಿಯದು. ಸೂಳೆಗೆ ಪತಿವ್ರತೆಯ ಗುಣಗಳೂ ಅರಿಯವು. ಮುತ್ತಿನ ಹಾರವು ಕಪಿಗೆ ಹಿಡಿಸದು. ಹಿಂಸೆಯನ್ನು ಮಾಡುವವರಿಗೆ ಕರುಣೆಯೆಂದೂ ಬರದು. ಅಂತೆಯೇ ಅನ್ಯಾಯವನ್ನು ಮಾಡುವವರಿಗೆ ಮೋಕ್ಷವೆಂದೂ ಸಿಗದು. ಇಲ್ಲಿ ನಿತ್ಯ ಬದುಕಿನ ಅವಲೋಕನದ ಸಂಕೀರ್ಣ ಚಿತ್ರಗಳಿದ್ದು ಕತ್ತೆಯ ದಡ್ಡತನದ ಚಿತ್ರವು ಅತ್ಯಂತ ಸಹಜ ರೀತಿಯಲ್ಲಿ ಚಿತ್ರಿತವಾಗಿದೆ.

ಪಾಪಿ ಬಲ್ಲನೆ ಪರರ ಸುಖ ದುಃಖವ
ಕೋಪಿ ಬಲ್ಲನೆ ಶಾಂತ ಸುಗುಣದ ಘನವ
ಕತ್ತೆಬಲ್ಲುದೆ ಹೊತ್ತ ಕತ್ತುರಿಯ ಪರಿಮಳವ
ಮೃತ್ಯುಬಲ್ಲಳೆ ವೇಳೆ ಹೊತ್ತೆಂಬುದ

ಕತ್ತೆಯು ಕಸ್ತೂರಿಯನ್ನು ಹೊತ್ತುಕೊಂಡು ಹೋದರೂ ಅದರ ಪರಿಮಳವನ್ನು ಅರಿಯದು. ಅಂತೆಯೇ ಅಜ್ಞಾನಿಗಳು ತಮ್ಮ ನಡುವೆ ಎಷ್ಟೇ ಉತ್ತಮ ವಿಚಾರಗಳಿದ್ದರೂ ಅದರ ಮಹತ್ವವನ್ನು ಅರಿಯದೇ ಕೆಲಸವನ್ನು ಮಾಡುತ್ತಾರೆ. ಜನರ ಮೌಢ್ಯವನ್ನು ದಾಸರು ಇಲ್ಲಿ ವಿಮರ್ಶಿಸಿದ್ದಾರೆ.