ರಿದಾಸ ಸಾಹಿತ್ಯದ ಇನ್ನೊಂದು ವೈಶಿಷ್ಟ್ಯಪೂರ್ಣ ಗೇಯ ಪ್ರಕಾರ ಸುಳಾದಿ, ಸಂಗೀತ ಶಾಸ್ತ್ರದ ಸಾಲಗಸೂಡ ಪ್ರಬಂಧ ಮೂಲದಿಂದ ಹರಿದಾಸರ ಮೂಲಕ ಕನ್ನಡಕ್ಕೆ ಬಂದ ಪ್ರಕಾರವಿದು. ‘ಸೂಡ’ ಒಂದು ಪ್ರಬಂಧ ವಿಶೇಷ; ತಾಳವಲ್ಲ. ಮಾಗೀಪದ್ಧತಿಯ ರಾಗಗಳನ್ನಳವಡಿಸಿದ ಪ್ರಬಂಧ ‘ಶುದ್ಧಸೂಡ’. ದೇಶೀರಾಗ ಪದ್ಧತಿಯನ್ನಳವಡಿಸಿದ್ದು ‘ಸಾಲಗಸೂಡ’. ವಿದ್ವಾಂಸರ ಪ್ರಕಾರ ಸು. ೧೨-೧೩ನೇ ಶತಮಾನಗಳಲ್ಲಿ ಸುಳಾದಿ ತಾಳಗಳೆನಿಸಿದ್ದ ಧ್ರುವ, ಮಠ್ಯ, ರೂಪಕ, ಝಂಪಕ, ತ್ರಿಪುಟ ಅಡ್ಡ ಏಕ ಈ ಏಳು ತಾಳಗಳನ್ನೂ ಬೇರೆ ಬೇರೆ ರಚನೆಗಳೆಂದು ಪರಿಗಣಿಸಿದ್ದು ಅವುಗಳನ್ನು ಒಂದು ಗೊತ್ತಾದ ಕ್ರಮದಲ್ಲಿ ಹಾಡಬೇಕೆಂಬ ನಿಯಮವಿತ್ತು. ಸು. ೧೫ನೇ ಶತಮಾನದಲ್ಲಿ ಹರಿದಾಸರಿಂದ ಅವು ಏಳು ತಾಳಗಳಿದ್ದರೂ ಒಂದೇ ಪ್ರಬಂಧವೆಂದು ಪರಿಗಣಿತವಾಗಿ ‘ಸುಳಾದಿ’ ಎಂದು ಕರೆಸಿಕೊಂಡಿತು. ಪ್ರಾಚೀನ ಲಕ್ಷಣ ಗ್ರಂಥಗಳಲ್ಲಿ ಧ್ರುವ ಎಂಬ ಹೆಸರಿದ್ದ ಅದೊಂದು ವಿಶಿಷ್ಟ ಪ್ರಬಂಧವು ಅನೇಕ ತಾಳಗಳ ರಚನೆಯಾಗಿದೆ. ಧ್ರುವಾದಿ ಸಪ್ತತಾಳಗಳಲ್ಲದೆ ಯತಿ(ಜತಿ)ತಾಳವೂ ಅದರಲ್ಲಿ ಸೇರಿದೆ. ದಾಸರ ಕೃತಿಗಳಲ್ಲಿ ಸುಳಾದಿಯೆಂಬ ವಿಶೇಷ ಸಂಜ್ಞೆಯಿರುವುದೂ ತಾಳಮಾಲಿಕೆಯಂಥಾ ಆ ಪ್ರಬಂಧಕ್ಕೆ. ೧೬ನೇ ಶತಮಾನದ ಪುಂಡರೀಕ ವಿಠ್ಠಲ ತನ್ನ ‘ನರ್ತನ ನಿರ್ಣಯ’ದಲ್ಲಿ ಕ್ರಮವಾಗು ಧ್ರುವ, ಮಠ್ಯ, ರೂಪಕ, ಝಂಪಕ, ತ್ರಿಪುಟ, ಅಡ್ಡ ಮತ್ತು ಏಕ ಈ ಸಪ್ತತಾಳಗಳಲ್ಲಿರುವ ಪ್ರಬಂಧಗಳನ್ನು ಕೋವಿದರು ‘ಸೂಡಾದಿ’ಗಳೆಂದು ಲಕ್ಷಿಸುತ್ತಾರೆ ಎಂದಿರುವುದು ಸಾಹಿತ್ಯದಲ್ಲಿ ಏಕಾರ್ಥವಾಗಲಿ ಏಕಸೂತ್ರವಾಗಲಿ ಇದ್ದು ಎಲ್ಲವನ್ನು ಒಂದೇ ರಾಗದಲ್ಲಿ (ದೇಶಿರಾಗ) ಅಳವಡಿಸಿ, ಸಾಹಿತ್ಯದ ಬೇರೆ ಬೇರೆ ಖಂಡಗಳನ್ನು (ನುಡಿಗಳನ್ನು) ಬೇರೆ ಬೇರೆ ತಾಳಗಳಲ್ಲಿ ಹೆಣೆದರೆ ಅದು ಸುಳಾದಿಯ ಸ್ವರೂಪ. ಸುಳಾದಿಯಲ್ಲಿ ಸಾಹಿತ್ಯ ಸುದೀರ್ಘ, ಸ್ವರಸಂಚಾರಗಳು ವಿಸ್ತೃತ. ತಾಳಗಳ ಹಿಡಿತ. ಹೀಗೆ ಸುಳಾದಿಯ ಸ್ವರೂಪದ ಬಗ್ಗೆ ವಿದ್ವಾಂಸರು, ಲಾಕ್ಷಣಿಕರು ಹೆಚ್ಚು ಕಡಿಮೆ ಒಂದೇ ರೀತಿಯ ಅಭಿಪ್ರಾಯವನ್ನು ತಳೆದಿದ್ದಾರೆ. ಬಹುಮುಖವಾಗಿದ್ದ ಸಾಲಗಸೂಡ ಏಕಮುಖ ತಾಳಮಾಲಿಕಾ ಪ್ರಬಂಧವಾದದ್ದು ಹರಿದಾಸರ ಅನಂತರವೇ. ಸಪ್ತತಾಳಗಳ ಬಳಿಕ ಎರಡು ಸಾಲಿನ ಒಂದು ‘ಜತಿ’ ಬರುತ್ತದೆ. ಕೆಲವೊಮ್ಮೆ ಏಳಕ್ಕೆ ಬದಲಾಗಿ ಐದು ತಾಳಗಳೂ, ಜೊತೆಗೆ ಆದಿತಾಳವೂ ಬರುವುದುಂಟು. ಸುಳಾದಿಯ ಮಾದರಿ ಹೀಗಿದೆ :

ರಾಗ : ನಾಟಿ, ಧ್ರುವತಾಳ

ಅನ್ನಂತ ಕಾಲದಲ್ಲಿ ನಿನ್ನ ನಾನರಿಯದೆ ಭವಗಳಲ್ಲಿ ಬಂದೆನೂ
ಅನ್ನಂತ ಕಾಲದಲ್ಲಿ ನಿನ್ನವನೆನಿಸಿದೆ ಮೂರುಖನಾದೆನೋ
ಅನ್ನಂತ ಕಾಲದಲ್ಲಿ ನಿನ್ನ ಚರಣರತಿಯಿಲ್ಲದೆ ನೊಂದೆನೊ
ಅನ್ನಂತ ಕಾಲದಲ್ಲಿ ಅದಾವ ಪುಣ್ಯದಿಂದ ಬಂದು ಇಂದು
ನಿನ್ನವನೆನಿಸಿದೆ ಅದಾವ ಪುಣ್ಯದಿಂದಲೆನ್ನ ಮನ
ನಿನ್ನಲ್ಲೆರಗಿತೊ ನೋಯದಂತೆ
ಎನ್ನ ಪೊರೆದು ಪಾಲಿಸೋ ದೀನನಾಥ ಶ್ರೀರಂಗವಿಠಲ ||೧||
ಮಠ್ಯತಾಳ

ಅನ್ನಕ ಭಯ ದ್ರವಿಣ ದೇಹ ನಿಮಿತ್ತ
ಅನ್ನಕ ಶೋಕಾಶಯ ಮಾರಿ
ಅನ್ನಕ ಲೋಭ ಅಶುಭದಲಾಭ
ಅನ್ನಕ ನನ್ನದು ನಾನೆಂಬಹಮ್ಮಿಕೆ
ಅವನ್ನಕ ನಿನ್ನ ಚರಣರತಿ ದೊರಕೊಳ್ಳದೊ
ಉನ್ನಂತ ಗುಣ ಪರಿಪೂರ್ಣ ರಂಗವಿಠಲ ||೨||
ತ್ರಿಪುಟತಾಳ

ತೊಳಲಿ ಸಂಸಾರ ಚಕ್ರದಲಿ ಸಿಲುಕಿ
ಬಳಲಿದ ಜೀವಗಣಕೆ ಸಂತತ
ನಳಿನನಾಭಾ ನಿನ್ನ ಪದಾಂಭೋಜ
ನೆಳಲು ನೆಮ್ಮುಗೆಯಲ್ಲದೆ
(ಒಳವೆ) ಜಗದೊಳು ಸಕಲ ಸುಖಂಗಳು
ಕಳಾಳಿಸುವರು ರಂಗವಿಠಲ ||೩||
ರೂಪಕತಾಳ

ನೀ ಕರುಣೆಯೆಂದು ನಿನ್ನ ನಾ ಮೊರೆಹೊಕ್ಕೆ
ನೀಕರಿಸದೆ ಎನ್ನ ಶ್ರೀಕಾಂತ ಕಾಯಯ್ಯ
ನಿನ್ನವನೆಂಬೆ ನಾನು ಮತ್ತನ್ಯವನರಿಯೆನು
ನಿನ್ನವನೆಂಬೆ ನಾನು
ಕಂದರ್ಪನೆಂದೆಂದು ಕಾಡದಂತೆ ಮಾಡೊ
ವೃಂದಾರಕಾಧೀಶ ರಂಗವಿಠಲ ||೪||
ಝಂಪೆತಾಳ

ಪರರ ಬಾಗಿಲು ಕಾಯಿದು ಹೋಯಿತೀ ಸಂಸಾರ
ಪರರ ಗುಣಗಳ ತುತಿಸಿ ಹೋಯಿತೀ ನಾಲಗೆ
ಪರರ ಹಾರಿ ಹಾರಿ ಹೋಯಿತ್ತಿಂತೆನ್ನ ಮನ
ಪರಮ ಕಾರುಣಿಕನೆ ನಮೋ ರಂಗ ವಿಠಲಯ್ಯ||೫||
ಅಟ್ಟತಾಳ

ಎನ್ನ ಮನ ಹರಿ ಇನ್ನ ಚರಣದೊಳೊಮ್ಮೆ
ಎರಗದು ದುರಿತ ದುಷ್ಟೃತವೆಂದು ಸೈರಿಪೆನೊ
ನಂದನಂದನ ಮುಕುಂದ ಎಂತು ಸೈರಿಪೆನೊ
ಮಂದಹಾಸ ಗೋವಂದ ಎಂತು ಸೈರಿಪೆನೊ
ಎನ್ನ ಮನವನು ನಿನ್ನ ಚರಣದೊಳೊಮ್ಮೆ
ಎರಗಿಸೊ ರಂಗವಿಠಲ ಎಂತು ಸೈರಿಪೆನೊ ||೬||
ತ್ರಿಪುಟತಾಳ

ವ್ರತ ಜಪ ತಪ ಯಾಗಂಗಳ ಮಾಡುವೆನೆಂದು
ಮನೆ ಮನೆದಪ್ಪದೆತಿರುಗಿ ಬಳಲಿದೆ
ಬೆಲೆಗೆ ಹೋಗದು ಸರಕು ಸಡಿಲದಯ್ಯಾ ಹರಿಯೆ
ಕೊಂಬುವರಿಲ್ಲ ಬೆಲೆಗೆ ಹೋಗದು ಸರಕು
ಸಡಿಲುವಂತೆ ಮರೆಗೆ ತೆಗೆದು ನಿನ್ನ
ಚರಣದಡಿಯಲ್ಲಿಟ್ಟು ಕಾಯೊ ರಂಗವಿಠಲ||೭||

ಏಕತಾಳ

ಭವವೆಂಬಟವಿಯಲ್ಲಿ ಭಯಕೊಳದಲಿ ಸಿಕ್ಕಿ
ತಾಪತ್ರಯವೆಂಬ ದಾವಾನಲತಪ್ಪ ನರರಿಗೆ
ಹರಿ ನಿನ್ನ ನಾಮಾಶ್ರಯವಲ್ಲದೆ ಮತ್ತುಂಟೆ
ಮನುಲೋಕದಲ್ಲುಂಟೆ ತನುಪರಿಣವಲ್ಲಭ
ಅಮೃತ ಒಸರುವ ಪದಪದುಮದ
ನೆಳಲ ನೆಲೆವನೆಯಲಿ ಎನ್ನನಿರಿಸೊ ರಂಗವಿಠಲ||೮||
ಜತಿ

ಬೆಂದ ಸಂಸಾರದಿ ಬಂದು ನೊಂದು ಬಳಲಿದೆನಯ್ಯಾ
ನಂದನಂದನ ಕಾಯೋ ರಂಗವಿಠಲ

ಈ ಸುಳಾದಿ ತ್ರಿಪುಟತಾಳದ ಎರಡು ನುಡಿಗಳಿರುವುದರಿಂದ ಒಟ್ಟು ಎಂಟು ನುಡಿಗಳಿವೆ. ಸುಳಾದಿಗಳು ತಾಳದ ಕಟ್ಟಿಗೆ ಬದ್ಧವಾಗಿದ್ದರೂ ಪಾದಗಳಲ್ಲಿ ನಿಯತವಾದ ಸಂಖ್ಯಾ ನಿಯಮವಿಲ್ಲ, ತತ್ವಪ್ರಧಾನ ರಚನೆಗಳಿವು. ಒಂದೊಂದು ನುಡಿಯೂ ಒಂದೊಂದು ತಾಳದಲ್ಲಿದ್ದು ಪ್ರತಿಯೊಂದು ನುಡಿಯ ಕೊನೆಯಲ್ಲೂ ರಚನಕಾರರ ಅಂಕಿತವಿರುತ್ತದೆ. ಸಾಮಾನ್ಯವಾಗಿ ಕೀರ್ತನೆಯ ಸಾರ ಪಲ್ಲವಿಯಲ್ಲಿರುವಂತೆ, ಸುಳಾದಿಯ ಸಾರವೇ ‘ಜತಿ’ಯಲ್ಲಿ ಅಡಗಿರುತ್ತದೆ. ಇದು ಕೀರ್ತನೆಗಿಂತ ಬಿಗಿಯಾದ ಬಂಧ. ಒಂದು ತಾಳದಲ್ಲಿನ ಮೊದಲ ಅಕ್ಷರ ಗುರುವಾಗಿದ್ದರೆ ಆ ತಾಳದಲ್ಲಿನ ಎಲ್ಲ ಪಾದಗಳ ಮೊದಲಕ್ಷಗಳೂ ಗುರುವಾಗಿರುವುವು; ಲಘುವಾಗಿದ್ದಲ್ಲಿ ಲಘುವಾಗಿರುವುವು. ಸಾಹಿತ್ಯ ಸಂಗೀತ ಆಧ್ಯಾತ್ಮಗಳ ಸಂಗಮವಾದ ಈ ಸುಳಾದಿಗಳಲ್ಲಿ ನುಡಿಯಿಂದ ನುಡಿಗೆ ತಾಳದಿಂದ ತಾಳಕ್ಕೆ ವ್ಯಾಪಿಸುತ್ತ ಸಾಗುವ ವಿಚಾರಧಾರೆ, ವಸ್ತುವೈಶಿಷ್ಟ್ಯ, ಕೊನೆಯ ಜತಿಯಲ್ಲಿ ಮಡುಗಟ್ಟಿ ನಿಲ್ಲುವ ರೀತಿ ವಿಶಿಷ್ಟವಾದುದು. ಬಹುಕಾಲದವರೆಗೆ ಸಂಗೀತ ಪ್ರಪಂಚದಲ್ಲಿ ಪುರಂದರರ ಸುಳಾದಿಗಳೇ ಬಳಕೆಯಲ್ಲಿದ್ದವು. ಸುಳಾದಿ ಕನ್ನಡ ಹರಿದಾಸ ಸಾಹಿತ್ಯದ ವೈಶಿಷ್ಟ್ಯವೆಂಬ ಮಾತಿದೆ.

ಈಗ ಸುಳಾದಿಗಳನ್ನು ಹಾಡುವ ಕ್ರಮ ತಪ್ಪಿ ಹೋಗಿದೆ. ಕಾರಣ ಸ್ಪಷ್ಟವೇ. ಒಂದು ಹಾಡಿನಲ್ಲಿ ಏಳು ತಾಳಗಳ ವಿನ್ಯಾಸಕ್ಕೆ ತಕ್ಕಂತೆ ಶಬ್ಧ, ಅರ್ಥ, ಭಾವಗಳನ್ನು ಕೂಡಿಸುವುದು ಸುಲಭವಲ್ಲ. ಅವುಗಳನ್ನು ಸಾಧಿಸಿ ಹಾಡುವುದು ಅದಕ್ಕಿಂತಲೂ ಕಷ್ಟ. ಆ ಹಾಡಿನ ಸಮುದಿತ ಸ್ವರೂಪವನ್ನು ಅನುಭವಿಸಿ ಆನಂದಿಸುವುದು ಮತ್ತೂ ಶ್ರಮ. ಕೆಲವರು ಯಾವುದೋ ಒಂದು ಧಾಟಿಯನ್ನು ಹಿಡಿದು ಹಾಡುತ್ತಾರೆಯೇ ವಿನಾ ನಾವು ಇಂದು ಶ್ರಾಸ್ತ್ರೀಯ ಸಂಗೀತವೆಂದು ಪರಿಗಣಿಸುವ ರೀತಿಯಲ್ಲಲ್ಲ. ದಿನನಿತ್ಯ ಪೂಜಾಕಾಲದಲ್ಲಿ ಹಾಡುವವರೂ ಹೀಗೆಯೇ ಒಂದು ಧಾಟಿ ಹಿಡಿದು ಹಾಡುತ್ತಾರೆ. ಅಷ್ಟೇ. ೧೯೦೪ರಲ್ಲಿ ಸುಬ್ಬರಾಮ ದೀಕ್ಷಿತರಿಂದ ರಚಿತವಾಗಿ ಪ್ರಕಟವಾಗಿರುವ ‘ಸಂಗೀತ ಸಂಪ್ರದಾಯ ಪ್ರದರ್ಶಿನಿ’ ಎಂಬ ಪುಸ್ತಕದಲ್ಲಿ ಎರಡು ಸುಳಾದಿಗಳನ್ನೂ ಒಂದು ಕೀರ್ತನೆಯನ್ನೂ ಸ್ವರಪ್ರಸ್ತಾರದೊಂದಿಗೆ ಒಂದು ಕಡೆ ಉದಾಹರಿಸಲಾಗಿದೆ. ರಾಗಗಳ ಲಕ್ಷಣವನ್ನು ಹೇಳುತ್ತ ‘ಭೂಪಾಳ’ ರಾಗಕ್ಕೆ ಲಕ್ಷ್ಯವಾಗಿ ಪುರಂದರದಾಸರ ‘ತಂದೆಯಾಗಿ ತಾಯಿಯಾಗಿ’ ಎಂಬ ಸುಳಾದಿಯನ್ನು ಇಲ್ಲಿ ಉದಾಹರಿಸಿದೆ. ವಿಳಂಬ ಮಧ್ಯ ದ್ರುತಗತಿಗಳಲ್ಲಿ ಹಾಗೂ ರೂಪಕ, ರಗಣಮಠ್ಯ, ಧ್ರುವ, ತ್ರಿಪುಟ, ಏಕತಾಳಗಳಲ್ಲಿ ಒಟ್ಟು ಸುಳಾದಿಯನ್ನು ನಿರ್ವಹಿಸಲಾಗಿದೆ. ‘ಹಸುಗಳ ಕರವ ಧ್ವನಿ’ ಎಂಬ ಸುಳಾದಿಯನ್ನು ದೇವಗಾಂಧಾರಿರಾಗ, ಆದಿ ಮಠ್ಯ, ರೂಪಕ ಏಕ ಅಟ್ಟ ತಾಳಗಳಲ್ಲಿ ನಿರ್ವಹಿಸಲಾಗಿದೆ. ಬಹುಶಃ ಈ ಸುಳಾದಿಗಳನ್ನು ಆಗ ಹಾಡುತ್ತಿದ್ದಿರಬಹುದಾದ ಕ್ರಮ ಅದಾಗಿರಬಹುದು.

ಗಹನ ತತ್ವಗಳನ್ನು ಸಾಹಿತ್ಯದ ಚೌಕಟ್ಟು, ಸಂಗೀತದ ಹಿನ್ನೆಲೆ, ಆಧ್ಯಾತ್ಮಿಕ ಮಹತ್ವಗಳೊಂದಿಗೆ ಬಿತ್ತರಿಸುವ ಸುಳಾದಿಗಳು ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ಮತ್ತು ಸಂಗೀಶಾಸ್ತ್ರಕ್ಕೆ ಹರಿದಾಸರ ಮಹತ್ವಪೂರ್ಣ ಕೊಡುಗೆಯಾಗಿದೆ. ೧೬ನೆಯ ಶತಮಾನದ ಪುಂಡರೀಕವಿಠಲ ಎಂಬ ಶಾಸ್ತ್ರಕಾರನ ಪ್ರಕಾರ ಸುಳಾದಿ ಧ್ರುವ, ಮಠ್ಯ, ರೂಪಕ, ಝಂಪಕ, ತ್ರಿಪುಟ, ಅಡ್ಡ ಮತ್ತು ಏಕತಾಳಗಳಿಂದ ಕೂಡಿರುತ್ತದೆ.

ಧ್ರುವಕೋ ಮಂಠಕಶ್ಚೈವ ರೂಪಕೋ ಝಂಪಕಸ್ತಥಾ
ತ್ರಿಪುಟಶ್ಚಾಡ್ಡತಾಲಾಶ್ಯಾಶ್ವ್ಯೆಕತಾಲ ಇತಿ ಕ್ರಮಾತ್
ಸಪ್ತ ಸೂಡಾದಿರಿತ್ಯುಕ್ತೋ ಲಕ್ಷ್ಯ ಲಕ್ಷಣ ಕೋವಿದ್ಯೆಃ

ಕೆಲವು ಸಲ ಈ ಏಳು ತಾಳಗಳಿಗೆ ಬದಲಾಗಿ ೫ ತಾಳಗಳೂ ಬರುವುದುಂಟು ಮತ್ತು ಈ ತಾಳಗಳೊಂದಿಗೆ ಆದಿತಾಳವೂ ಬರುತ್ತದೆ. ಅವುಗಳ ಅನಂತರ ಕೊನೆಯಲ್ಲಿ ಎರಡು ಸಾಲುಗಳು ಒಂದು ‘ಜೊತೆ(ಜತೆ)’ ಇರುತ್ತದೆ. ವಿವರಣಾತ್ಮಕ ನೆಲೆಯಲ್ಲಿ ಹೇಳುವುದಾದರೆ ಅಂದರೆ ಇನ್ನಷ್ಟು ಸ್ಪಷ್ಟವಾಗಿ ಹೇಳುವುದಾದರೆ ಸುಳಾದಿಯ ಸಾಮಾನ್ಯ ಸ್ವರೂಪ ಹೀಗಿದೆ :

ರಾಗ : ರೇಗುಪ್ತಿ

ಧ್ರುವತಾಳ

ಎನಗಿಂದುತ್ತಮರಿಲ್ಲವೆಂಬೋದೊಂದು ದೋಷ
ಎನಗಿಂತ ನೀಚ ದೊಡ್ಡವನೆಂಬೋದಿದೊಂದು ದೋಷ
ತನಗಿಂದಧಿಕನ್ನ ಸಮಾನವೆಂಬೋದು ದೋಷ
ತನ್ನಿಂದ ಭಿನ್ನವಸ್ತು ತನ್ನದೆಂಬೋದು ದೋಷ
ತನಗೆ ತಾನರಿಯ ಅನ್ಯಬಲ್ಲೆನೆಂಬೋದು ದೋಷ
ತನಗೆ ತಾ ತುತಿಸಿಕೊಂಡು ಧನ್ಯನೆಂಬೋದು ದೋಷ
ತನಗೆ ಶಕುತಿ ಇದ್ದು ಕರ್ಮ ಬಿಟ್ಟುಕೊಡುವುದೇ ದೋಷ
ತನಗಿಲ್ಲದ ಕರ್ತೃತ್ವ ತಾನು ಎಂಬೋದು ದೋಷ
ಇನಿತು ದೋಷಂಗಳೆಲ್ಲ ಎಣಿಸಿದಡಾಯಿತಿನ್ನು
ತನಗೆ ಈಶಗೆ ಐಕ್ಯ ಪೇಳುವುದಕ್ಕಿಂತದೋಷ
ಸನಕಾದಿಗಳ ಒಡೆಯ ಗೋಪಾಲವಿಠನ
ನೆನಸದಲಿದ್ದವಗೆ ದೊಡ್ಡ ದೋಷ

ಮಠ್ಯತಾಳ

ಬೊಮ್ಮಾಂಡ ವ್ಯಾಪ್ತನ ಬಯಲು ಎಂಬೋದು ದೋಷ
ಬೊಮ್ಮನ ಸೃಜ್ಜನ ಪುಟ್ಟದನೆಂಬೋದು ದೋಷ
ಬೊಮ್ಮಾಂಡ ಸಂಹಾರಗೆ ಲಯ ಪೇಳ್ವುದೆ ದೋಷ
ಬೊಮ್ಮನ ಪಿತನಲ್ಲದೆ ಇನ್ನೊಂದೆಂಬೋದೆ ದೋಷ
ಸಮನಸರಪ್ರಿಯ ಗೋಪಾಲವಿಠಲಂಗೆ
ಸಮ ಉಂಟೆಂಬುವಗೆ ಸರಿಯಿಲ್ಲದ ದೋಷ

ರೂಪಕತಾಳ

ಮಾಡಬೇಕು ಮಂದ್ಯೆಲ್ಲ ಸಾರುತಿರಲು
ಮಾಡದೆ ಇದ್ದದ್ದು ಮುಖ್ಯವಾದ ದೋಷ
ಬೇಡಬೇಕೆಂದು ಜಗವೆಲ್ಲ ಪೇಳುತಿರಲು
ಬೇಡದಲಿಪ್ಪೋದು ಅಗತ್ಯವಾದ ದೋಷ
ನೋಡಬೇಕೆಂದು ಲೋಕವೆಲ್ಲ ಪೇಳುತಲಿರಲು
ನೋಡದಲಿಪ್ಪೋದು ನೋವಾಗುವುದೆ ದೋಷ
ಕೂಡಿ ಆಡಿ ತನ್ನಲ್ಲಿ ಫಲವನರಿಯದೆ
ನಾಡ ದೇವತೆಗಳಿಗೆ ಹಾರೈಸುವುದೆ ದೋಷ
ರೂಢಿ ಗೊಡೆಯ ನಮ್ಮ ಗೋಪಾಲ ವಿಠಲನ
ನೋಡಿ ಪೂಜಿಸದವಗೆ ನಿತ್ಯ ದೋಷ

ಝಂಪೆತಾಳ

ಅವಾವನು ಈ ಜಗಕೆ ದೇವನೆಂದರಿಯದೆ
ಅವನಿಂದೀ ಜಗಕೆ ಸೃಷ್ಟಿಯೆಂದರಿಯದೆ
ಅವನಿಂದೀ ಜಗವು ಪಾಲನೆಂದರಿಯದೆ
ಅವನಿಂದೀ ಜಗವು ಲಯವು ಎಂದರಿಯದೆ
ದೇವರಿಗೆ ಜೀವರಿಗೆ ವಿಲಕ್ಷಣರಿಯದ
ಆವಾವನು ಕರ್ಮ ಆನಂದ ಮಾಡಿದರು
ಅವನಿಗೆ ಅನಂತ ದೋಷಾಗಿ ತೋರುವುದು
ಆವ ಕರ್ಮವು ಕಡೆಯ ಗೆಲಿಸಲಿರಿಯವು
ಜೀವ ಜಡ ಭಿನ್ನ ಗೋಪಾಲವಿಠಲ ರೇಯ
ಅವರಿಗೆ ತಾ ಒಲಿವ ಅವನೆ ಅರಿವ

ತ್ರಿಪುಟತಾಳ

ಅನ್ಯದೈವರಿಯದೆ ಅನ್ಯಕ್ಕೆ ಎರಗದೆ
ತನ್ನದೆ ನೆರೆನಂಬಿ ಚಿಂತೆಪರ
ತನ್ನವನೆಂತೆಂದು ತನ್ನ ತಿಳಿಸಿಕೊಟ್ಟು
ಘನ್ನಪದವಿಗೆರೆಸಿನ್ನು ತಾ ಸಲಹುವ
ಅನ್ಯ ಆಸೆಯ ಉಳ್ಳ ಜೀವರೆಲ್ಲರಿಗೆ
ಅನ್ಯ ನಂತವರಿಗೆ ತೋರುತಿಪ್ಪ
ತನ್ನವ ಅನ್ಯನೆಂಬ ವೈಷಮ್ಯನೈರ್ಗುಣ್ಯ
ಇನ್ನಿಲ್ಲ ಇನ್ನಿಲ್ಲ ಈಶಗಿನ್ನು
ಭಿನ್ನ ಜೀವರ ಅತಿ ಅರಿತು ಪಾಲುಸುವನು
ಇನ್ನೊಬ್ಬರಿಗೆ ಪೂರ್ಣ ಲಭ್ಯನಲ್ಲ
ಘನ್ನ ಮಹಾಮಹಿಮ ಗೋಪಾಲ ವಿಠಲ
ತನ್ನ ತಿಳಿವರನು ತನ್ನವನೆಂತೆಂಬ

ಅಟ್ಟತಾಳ

ಇವನಂಥ ವಸ್ತುವು ಇಂದ್ರರೊಳಗಿಲ್ಲ
ಇವನಂಥ ವಸ್ತುವು ರುದ್ರಾದಿಯೊಳಗಿಲ್ಲ
ಇವನಂಥ ವಸ್ತುವು ಬೊಮ್ಮಾದಿಯೊಳಗಿಲ್ಲ
ಇವನ ಸತಿಯಳಾಗಿ ಸಿರಿದೇವಿ ಓಲೈಸೆ
ಅವರ ಪಾಡೇನಜಭವಾದಿಗಳಿವನ
ನವವಿಧ ಭಕುತಿಂದ ಸೇವಿಸುತಿಪ್ಪರು
ಭವನಾಶ ಭಯಹಾರಿ ಗೋಪಾಲವಿಠಲ
ಭುವನೆರಡೇಳಕ್ಕೆ ಒಡೆಯ ಕಾಣೋ
ಆದಿತಾಳ

ಒಳಗುಂಟು ಹೊರಗಿಲ್ಲ ಒಳಗಿಲ್ಲ ಹೊರಗುಂಟು
ತಿಳಿಯದಿಪ್ಪನು ನಾನಾಸ್ಥಳದಿ ವ್ಯಾಪುತನಾಗಿ
ಬೆಳಕು ಕತ್ತಲು ಇನ್ನು ಸ್ಥಳ ಎರಡೆನ್ನದೆ
ಬಲು ಸುಂದರಾಂಗನಂತೋಳೆವುತಲಿಪ್ಪನು
ಸುಲಭ ಭಕುತರಿಗೆ ಗೋಪಾಲವಿಠಲರೇಯ
ನೆಲೆಯಾಗುವನು ತನ್ನ ತಿಳಿದರ್ಚಿಪುವಗೆ

ಜತೆ

ಹಿರಿದು ಕಾರ್ಯಕೆ ಇವನೆ ಕಿರಿದಾರ್ಯಕೆ ಇವನೆಂ
ಹರಿದು ಭಜಿಸಿರೋ ಗೋಪಾಲವಿಠಲ ಒಲಿವ
(ಗೋಪಾಲದಾಸರು)

ಸುಳಾದಿಯ ಸಾರವೆಲ್ಲ ಈ ‘ಜತೆ’ಯಲ್ಲಿ ಅಡಕವಾಗಿರುತ್ತದೆ. ಪಾದಗಳಲ್ಲಿ ನಿಯತವಾದ ಸಂಖ್ಯೆಯಿಲ್ಲ; ತತ್ವ ಪ್ರಧಾನವಾದ ರಚನೆಗಳು; ಒಂದೊಂದು ನುಡಿ ಒಂದೊಂದು ತಾಳದಲ್ಲಿದ್ದು, ಪ್ರತಿನುಡಿಯ ಕೊನೆಯಲ್ಲೂ, ‘ಜತೆ’ಯಲ್ಲೂ ಕರ್ತೃವಿನ ಅಂಕಿತವಿರುತ್ತದೆ. ಆದರೆ ಸುಳಾದಿಗಳನ್ನು ಮೂಲತಃ ಹೆಗೆ ಹಾಡುತ್ತಿದ್ದರೋ ನಮಗೆ ತಿಳಿಯದು. ಆದ್ದರಿಂದ ಅವುಗಳ ಖಚಿತ ನಡೆಯನ್ನು ಗುರುತಿಸಿ ತೋರಿಸುವುದು ಕಷ್ಟ. ಕೇವಲ ಪದಗುಚ್ಚಗಳ ಆಧಾರದ ಮೇಲೆ ಸಂಗೀತಶಾಸ್ತ್ರದಲ್ಲಿ ಬರುವ ತಾಳಗಳ ಮಾತ್ರೆಗಳನ್ನನುಸರಿಸಿ ಸುಳಾದಿಗಳ ಛಂದೋರೂಪವನ್ನು ಗುರುತಿಸುವುದು ಸಾಧ್ಯವಿಲ್ಲ. ಉದಾಹರಣೆಗೆ, ಸಂಗೀತಾಶಾಸ್ತ್ರದಲ್ಲಿ ಮಠ್ಯತಾಳದ ಸ್ವರೂಪ : ಒಂದು ಆವರ್ತಕ್ಕೆ ೧೦ ಮಾತ್ರೆಗಳು. ನಾಲ್ಕು ಮಾತ್ರೆಯ ಒಂದು ಲಘು : ಎರಡು ಮಾತ್ರೆ ಒಂದು ದ್ರುತ : ಹಾಗೂ ಮತ್ತೊಂದು ನಾಲ್ಕು ಮಾತ್ರೆಯ ಲಘು, ಆ ಪ್ರಕಾರ ಶ್ರೀ ಪಾದರಾಜರ ಸುಳಾದಿಯ, ಮಠ್ಯತಾಳದಲ್ಲಿದೆಯೆಂದು ನಿರ್ದೇಶಿಸಲಾಗಿರುವ ಒಂದು ಪಾದವನ್ನು ತೆಗೆದುಕೊಂಡರೆ

– – – U U-U U U U- U U -U
ನಿನ್ನಾಧೀನ ಶರೀರ ಕರಣ ಚೇಷ್ಟೆಗಳೆಲ್ಲ

೨೧ ಮಾತ್ರೆಗಳು ಈ ೨೧ಮಾತ್ರೆಗಳನ್ನು ಕೇವಲ ಹತ್ತು ಅಕ್ಷರಗಳನ್ನು ಉಚ್ಚರಿಸುವ ಕಾಲಪ್ರಮಾಣಕ್ಕೆ ಹೊಂದಿಸಿ ಹಾಡಬೇಕು. ಅದಕ್ಕೆ ಯಾವ ಮಟ್ಟನ್ನು. ಏರಿಳಿತಗಳನ್ನು ಬಳಸುತ್ತಿದ್ದರೋ, ಯಾವ ಗತಿಗೆ ಹೊಂದಿಸಿ ಹಾಡುತ್ತಿದ್ದರೋ ತಿಳಿಯದು. ಬಹುಶಃ ಸಂಗೀತಶಾಸ್ತ್ರದಲ್ಲಿ ನಿರ್ದೇಶಿಸುವಂತೆ ‘ಎರಡನೆಯ ಕಾಲ’ದಲ್ಲಿ ನಿರ್ವಹಿಸುತ್ತಿದ್ದಿರಬೇಕು.

U U U -UUU-U U
ಧ್ರುವನ ನೋಡು ಸುರಲೋಕದಿ = ೧೨ ಮಾತ್ರೆಗಳು
(ವಾದಿರಾಜರ ಸುಳಾದಿಯ ಸಾಲು)

U U U-U -UU U U U U U – U
ನಿಧಿಯ ಮೇಲೆ ಇದ್ದು ನಿಧಿಯನರಿಯದಂತೆ =೧೮ ಮಾತ್ರೆಗಳು
(ವ್ಯಾಸರಾಯರ ಸುಳಾದಿಯ ಸಾಲು)

U- U U- U- U U- UU- U U U U
ಅನಂತ ಅನಂತದೇಹ ಅನಂತ ಅನಂತ ಜನುಮ= ೨೨ ಮಾತ್ರೆಗಳು
(ಗೋಪಾಲದಾಸರ ಸುಳಾದಿಯ ಸಾಲು)

ಇವೆಲ್ಲ ಮಠ್ಯತಾಳವೆಂದು ನಿರ್ದೇಶಿತವಾಗಿರುವ ನುಡಿಗಳ ಒಂದೊಂದು ಪಂಕ್ತಿಗಳೇ ಆದರೂ ೧೨, ೧೮, ೨೨ ಹೀಗೆ ಸಾಲುಗಳ ಮಾತ್ರೆಗಳಲ್ಲಿ ವ್ಯತ್ಯಸವಿದೆ. ಸಂಗೀತ ಶಾಸ್ತ್ರದಲ್ಲಿ ಮಠ್ಯತಾಳದ ಒಂದು ಆವರ್ತಕ್ಕೆ ಹತ್ತು ಸ್ವರಗಳ ಕಾಲಪ್ರಮಾಣಕ್ಕೆ ಮಾತ್ರ ಅವಕಾಶ, ಆದ್ದರಿಂದ ಇಲ್ಲಿ ಸಾಹಿತ್ಯವನ್ನು ಅಷ್ಟರಳ್ಳೆ ಅಡಕಮಾಡಿ, ಅಗತ್ಯ ಬಿದ್ದರೆ ಎರಡು, ಮೂರನೆಯ ಕಾಲಗಳಲ್ಲಿ ಅಳವಡಿಸಿ ನಿರ್ವಹಿಸಬೇಕಾಗುತ್ತದೆ. ಹಾಗೆಯೇ ಕಡಿಮೆ ಬಿದ್ದ ಕಡೆ ಆಲಾಪನೆಯಿಂದ ಆವರ್ತವನ್ನು ತುಂಬಿಕೊಳ್ಳಬೇಕಾಗುತ್ತದೆ. ಈ ಸೌಕರ್ಯ ಇರುವುದರಿಂದ ಸುಳಾದಿಯ ಒಂದು ತಾಳದ ಒಂದು ಪಂಕ್ತಿಯನ್ನು ಎಷ್ಟು ಆವರ್ತಗಳಲ್ಲಿ ನಿರ್ವಹಿಸುತ್ತಿದ್ದರೋ ತಿಳಿಯದು. ಹೀಗೆಯೇ ಧ್ರುವ, ತ್ರಿಪುಟ, ಝಂಪೆ, ಅಟ್ಟ, ಏಕತಾಳಗಳ ನಿರ್ವಹಣೆಯೂ ಕೂಡ. ಎಂದರೆ, ಕ್ರಮವಾಗಿ ಆವರ್ತಗಳನ್ನುಳ್ಳ. ಈ ತಾಳಗಳಿಗೆ ಸಾಹಿತ್ಯವನ್ನು ಹೆಚ್ಚು ಕಡಿಮೆ ಅಳವಡಿಸುವ ಸಾಧ್ಯತೆಯಿದೆಯೆಂದಾಗುತ್ತದೆ. ಒಟ್ಟು ಆವರ್ತದ ಕಾಲಪ್ರಮಾಣದಲ್ಲಿ ಸಾಹಿತ್ಯದ ಹೆಚ್ಚಳ ಕೊರತೆಗಳನ್ನು ಸರಿತೂಗಿಸಬಹುದು. ಈ ಆಧಾರದ ಮೇಲೆ ರಚಿತವಾಗಿರುವ ಸಾಹಿತ್ಯ ಕೃತಿಗಳು ಈ ಸುಳಾದಿಗಳು ಎಂದು ಹೇಳಬಹುದು.ಸಂಗೀತದ ‘ಮಾತ್ರೆ’ಗಳಿಗೂ ಛಂದೋಮಾತ್ರೆಗಳಿಗೂ ಹೀಗೆ ವ್ಯತ್ಯಾಸವಿದೆ. ಸಂಗೀತದ ‘ಮಾತ್ರೆ’ಗಳನ್ನು ‘ತಾಳ’ ನಿಯಂತ್ರಿಸುತ್ತದೆ.

ಸುಳಾದಿಗಳಲ್ಲಿ ಸಾಮಾನ್ಯವಾಗಿ ಆದಿಪ್ರಾಸ ಕಂಡುಬರುತ್ತದೆ. ಅಲ್ಲಲ್ಲಿ ಅಂತ್ಯ ಪ್ರಾಸದ ಸೊಗಸನ್ನೂ ಕಾಣಬಹುದು. ಸುಳಾದಿ ಮೇಲ್ನೋಟಕ್ಕೆ ಸರಳ ರಗಳೆಯನ್ನು ಹೋಲುತ್ತದೆ. ಕೀರ್ತನೆಗಳಿಗಿಂತ ಬಿಗಿಯಾದ ಬಂಧವನ್ನಿಲ್ಲಿ ಕಾಣುತ್ತೇವೆ. ಸುಳಾದಿಗಳ ನಿಯಮಗಳನ್ನು ಸಂಗೀತದ ಹಿನ್ನೆಲೆಯಲ್ಲಿ, ಸಾಹಿತ್ಯದ ಚೌಕಟ್ಟಿನಲ್ಲಿ, ಆಧ್ಯಾತ್ಮಿಕ ಮಹತ್ವದೊಂದಿಗೆ ಬಿತ್ತರಿಸುವ ಈ ಸುಳಾದಿ ಪ್ರಕಾರ ನಿಜಕ್ಕೂ ಕನ್ನಡ ಸಾಹಿತ್ಯಕ್ಕೆ ಹರಿದಾಸರ ಗಣ್ಯವಾದ ಕೊಡುಗೆಯಾಗಿದೆ. ಸುಳಾದಿಯ ಚರಣಗಳಲ್ಲಿ ಐದೈದು ಮಾತ್ರೆಗಳು ನಾಲ್ಕು ನಾಲ್ಕ ಗಣಗಳು ಹೊಂದಿಕೊಂಡಿರುತ್ತವೆ. ಅದರ ಗಣ ಸಂಯೋಜನೆಯನ್ನು ಸಂಜ್ಞೆಯಿಂದ ಹೀಗೆ ಸೂಚಿಸಬಹುದು.

೫ :೫:೫:೫
೫ :೫:೫:೫

ಆದಿ ಅಂತ್ಯ ಪ್ರಾಸಗಳೆರಡೂ ಸುಳಾದಿಯಲ್ಲಿ ನಿಯಮಿತವಾಗಿ ರೂಢಗೊಂಡಿವೆ. ಅದರ ಗತಿಯಲ್ಲಿಯೇ ಒಂದು ಲಾಲಿತ್ಯವುಂಟು. ಸುಳಾದಿಯ ಗತಿ ನಿಧಾನವಾದುದು. ಭಾವ ಮತ್ತು ನಾದ ತುಂಬ ಗಂಭೀರವಾಗಿ ಸಮಪ್ರವಾಹದಲ್ಲಿ ಹರಿಯುವುದಕ್ಕೆ ಸುಳಾದಿಯಷ್ಟು ಅನುಕೂಲವಾದ ಬಂಧ ಬೇರೊಂದಿಲ್ಲವೆಂದೇ ಹೇಳಬಹುದು. ಕತೆಯ ಸರಣಿಗೆ ಅದು ತುಂಬ ನೆರವಾಗಬಲ್ಲದು. ಅಚ್ಚಗನ್ನಡ ಶಬ್ದಗಳು ಸೇರಿದಷ್ಟು, ಸುಳಾದಿಗಳ ಲಾಲಿತ್ಯ ಹೆಚ್ಚುತ್ತದೆ.