I

ಗಾಭೋಗ : ಹರಿದಾಸರಗೇಯರಚನೆಗಳಲ್ಲಿ ಉಗಾಭೋಗಗಳು ಅತ್ಯಂತ ಚಿಕ್ಕವು ಮತ್ತು ಸಾರವತ್ತಾದವು. ಸಂಗೀತ ಪ್ರಧಾನವಾದ ಈ ರಚನೆಯನ್ನು ‘ಅನಿಬದ್ಧ ಗಾಯನ’ (ತಾಳರಹಿತ ಸಂಗೀತ ರಚನೆ)ವೆಂದು ಕರೆಯಲಾಗಿದೆ. ಉಗಾಭೋಗವನ್ನು ಇಂತಹುದೇ ರಾಗದಲ್ಲಿ ಹಾಡಬೇಕೆಂಬ ನಿಯಮವಿಲ್ಲ. ಕಟ್ಟುಪಾಡುಗಳ ದೃಷ್ಟಿಯಿಂದ ಕೀರ್ತನೆ, ಸುಳಾದಿಗಳಿಗಿಂತ ಉಗಾಭೋಗಗಳು ಭಿನ್ನವಾದ ಮತ್ತು ಸರಳವಾದ ರಚನೆಗಳು. ಶ್ಲೋಕಗಳನ್ನು ಹಾಡುವ ರೀತಿಯಲ್ಲಿ ರಾಗದಲ್ಲಿ ಅಥವಾ ರಾಗಮಾಲಿಕೆಯಲ್ಲಿ ಹಾಡುವುದು ಪದ್ಧತಿ. ಉಗಾಭೋಗದ ಮಾದರಿ ಹೀಗಿದೆ:

” ಕರುಣದಿ ತನುಮನಧನಂಗಳೆಲ್ಲವು ನಿನ್ನ
ಚರಣಕಮಲಕೊಪ್ಪಿಸಿದ ಬಳಿಕ
ಮರಳಿ ಎನ್ನ ಮರುಳು ಮಾಡುವರೆ
ಸರಕು ಒಪ್ಪಿಸಿದ ಮ್ಯಾಲೆ ಸುಂಕವುಂಟೆ ದೇವಾ
ಕರುಣಾಕರ ನಿನ್ನ ಚರಣದಡಿಯೊಳಿಟ್ಟು ಕಾಯೊ ರಂಗವಿಠಲ”

ಸಂಗೀತಶಾಸ್ತ್ರದ ತಳಹದಿಯ ಮೇಲೆ ರೂಪಿತವಾಗಿರುವ ಅನುಭವದ ರಸಗಟ್ಟಗಳಿವು. ವಚನಗಳ ಶೈಲಿಯ ಮೂಲವನ್ನು ಉಗಾಭೋಗದಲ್ಲಿ ಕಾಣಬಹುದು. ಆದ್ದರಿಂದ ಹರಿದಾಸರು ಉಗಾಭೋಗವೆಂಬ ತಾಳವೃತ್ತವನ್ನು ಸ್ವೀಕರಿಸಿ ವಚನ ಶೈಲಿಯನ್ನು ರೂಪಾಂತರಿಸಿದಂತೆ ತೋರುತ್ತದೆ. ಅಂದರೆ ಬಹುಶಃ ವಚನ ಉಗಾಭೋಗಗಳೆರಡಕ್ಕೂ ಪ್ರಾಚೀನ ಉಗಾಭೋಗವೆಂಬ ತಾಳವೃತ್ತವೇ ಮೂಲವೆಂಬ ಅಭಿಪ್ರಾಯ ಇರಬಹುದು. ಮೇಲುನೋಟಕ್ಕಂತೂ ಎರಡೂ ಒಂದೇ ರೀತಿ ಕಾಣುತ್ತವೆ. ಬಹುತೇಕ ಉಗಾಭೋಗಗಳು ದ್ವಿತೀಯ ಪ್ರಾಸದಿಂದ ಕೂಡಿವೆ ವಚನಗಳಲ್ಲಿ ಸಾಮಾನ್ಯವಾಗಿ ದ್ವಿತೀಯ ಪ್ರಾಸವಿರುವುದಿಲ್ಲ. ಅಷ್ಟೇ ಕೆಲವು ಉಗಾಭೋಗಗಳಂತೂ ಅಂಕಿತ ಬದಲಿಸಿದಲ್ಲಿ ವಚನಗಳೇ ಆಗಿಬಿಡುತ್ತವೆ. ಆದ್ದರಿಂದಲೇ ಚಿದಾನಂದಮೂರ್ತಿಗಳಂತಹ ವಿದ್ವಾಂಸರು ” ವಚನಗಳೇ ಉಗಾಭೋಗಗಳಿಗೆ ಮೂಲವೋ ಅಥವಾಅವರೆಡಕ್ಕೂ ಬೇರೆಒಂದು ಮೂಲವಿರಬಹುದೋ” ಎಂಬ ಪ್ರಶ್ನೆಯನ್ನೆತ್ತಿರುವುದು. ರಚನೆಗಳ ಹೊರರೂಪದಲ್ಲಿ ಸಾಮ್ಯವಿದ್ದರೂ ಶಾಸ್ತ್ರದ ದೃಷ್ಟಿಯಿಂದ “ಅದು ಬೇರೆ : ಇದು ಬೇರೆ”. ಎಲ್ಲ ಉಗಾಭೋಗಗಳನ್ನೂ ಗದ್ಯಪ್ರಬಂಧಗಳೆಂದು ಭಾವಿಸಿ ವಚನಗಳೆಂದು ಪರಿಗಣಿಸಬಹುದಾದರೂ ಎಲ್ಲ ವಚನಗಳನ್ನು ಉಗಾಭೋಗಗಳಲ್ಲಿ ಸೇರಿಸುವಂತಿಲ್ಲ. ಉಗಾಭೋಗ ಸುಳಾದಿಗಳ ಒಂದು ಅಂಗವಾಗಿ ಜನ್ಮ ತಾಳಿತು…… ಕನಿಷ್ಠ ಪಕ್ಷ ಐದು ಶತಮಾನಗಳ ಕಾಲದ ಹಿಂದಿನ ಇತಿಹಾಸವುಳ್ಳದಾದರೂ ಯಾವ ಸಂಗೀತ ಶಾಸ್ತ್ರಗ್ರಂಥದಲ್ಲಿಯೂ ಉಕ್ತವಾಗಿಲ್ಲವೆಂಬುದನ್ನೂ ಗಮನಿಸಲಾಗಿದೆ. ಸ್ವಾರಸ್ಯವೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಉಗಾಭೋಗಗಳನ್ನು ರಚಿಸಿರುವ ಪುರಂದರದಾಸರಲ್ಲೂ ಉಗಾಭೋಗವೆಂಬ ಹೆಸರು ಬರುವುದಿಲ್ಲ. ಸಂಗೀತಸಾರಾಮೃತದ ತುಳಜಾಜಿ, ಸುಬ್ಬರಾಮ ದೀಕ್ಷಿತರು – ಇಬ್ಬರೂ ಸುಳಾದಿಗಳ ಬಗ್ಗೆ ಹೇಳಿರುವರು, ಉದಾಹರಿಸಿರುವರೇ ವಿನಾ ಉಗಾಭೋಗದ ಪ್ರಸ್ತಾಪ ಮಾಡಿಲ್ಲ. ಇದಕ್ಕೆ (ಉಗಾಭೋಗ ರಚನೆಗೆ) ಸ್ಪೂರ್ತಿಯಾಗಿ ಮಾರ್ಗದರ್ಶಕವಾಗಿ ಮರಾಠೀ ಅಭಂಗಗಳು ಓವಿಗಳೂ ಸಂಸ್ಕೃತ ಆರ್ಯಗಳೂ ದಂಡಿಗಳೂ ಇದ್ದವು. ಶಿವಶರಣರ ವಚನಗಳಿಂದ ಕೊಂಚಮಟ್ಟಿಗೆ ಪ್ರಭಾವಿತರಾಗಿರಬಹುದು ಎಂಬ ಅಭಿಪ್ರಾಯವೂ ಇದೆ. ಸುಮಾರು ನೂರುವರ್ಷಗಳ ಅನಂತರ ಬಂದ ವಿಜಯದಾಸರ ಸುಳಾದಿಯ ನುಡಿಯೊಂದರಲ್ಲಿ ಉಗಾಭೋಗವೆಂಬ ಹೆಸರು ನಮಗೆ ಮೊಟ್ಟಮೊದಲು ಕಾಣಸಿಗುತ್ತದೆ “ಶಿವಶರಣರ ಉಕ್ತಿಗಳು ಗೇಯಪ್ರಕಾರಗಳಲ್ಲಿ, ಸಾಹಿತ್ಯದ ಸೊಗಸು ರಾಗದ ನವಿರು ಉಗಾಭೋಗಗಳ ಹಾಡುವಿಕೆಯಲ್ಲಿನ ಪ್ರಮುಖ ಆಕರ್ಷಣೆ.

ಉಗಾಭೋಗಗಳಲ್ಲಿ ನುಡಿಗಳ, ತಾಳಗಳ ಕಟ್ಟಿಲ್ಲ; ಆದಿ ಮಧ್ಯಾಂತ ಪ್ರಾಗಳ ಕಟ್ಟಲೆಯಿಲ್ಲ. ಘನೀಭೂತ ಭಾವನೆಗಳ, ಅನುಭಗಳ ಅಭಿವ್ಯಕ್ತಿಯಿಂದಾಗಿ ಒಂದೊಂದು ಪ್ರತ್ಯೇಕ ಮುಕ್ತಕದಂತಿದೆ. ಎರಡು ಸಾಲುಗಳಿಂದ ಸುಮಾರು ಇಪ್ಪತ್ತು ಸಾಲುಗಳವರೆಗೆ ಉಗಾಭೋಗಗಳ ವ್ಯಾಪ್ತಿಯಿದೆ. ಸಮಾನ್ಯವಾಗಿ ಆರರಿಂದ ಎಂಟು ಹತ್ತು ಸಾಲುಗಳಿದ್ದು ಗಹನವಾದ ತತ್ವ ಲೋಕಾನುಭವ ನೀತಿಬೋಧೆ-ಇತ್ಯಾದಿ ವಸ್ತುಗಳ ಸರಳ ನಿರೂಪಣೆಯಿರುವ ಉಗಾಭೋಗಗಳೇ ಹೆಚ್ಚು. ಸಂಸ್ಕೃತ ಶ್ಲೋಕಕ್ಕೆ ಸಂವಾದಿಯಾದ ಪ್ರಕಾರವಿದೆನ್ನಬಹುದು. ಕೆಲವು ಉಗಾಭೋಗಗಳಂತೂ ಸಂಸ್ಕೃತ ಶ್ಲೋಕಗಳ ಕನ್ನಡ ಅನುವಾದಗಳೇ ಆಗಿವೆ. ಉದಾಹರಣೆಗೆ ; ಖಿಲವಾಯುಸ್ತುತಿಯ “ಬುದ್ಧಿರ್ಬಲಂ ಯಶೋಧ್ಯೆರ್ಯಂ” ಶ್ಲೋಕವನ್ನು ಶ್ರೀಪಾದರಾಜರು “ಬರುವುದು ಬುದ್ಧಿಯು ಬಲವು ಕೀರುತಿಯು” ಎನ್ನುವ ಉಗಾಭೋಗವಾಗಿ ಕನ್ನಡಿಸಿರುವರು. ಅಂತೆಯೇ ಕೆಲವು ಸುಳಾದಿಗಳ ನುಡಿಗಳು ಉಗಾಭೋಗಗಳಾಗಿ ಸ್ವತಂತ್ರ ಅಸ್ತಿತ್ವ ಪಡೆದು ಪ್ರಚಲಿತವಾಗಿರುವುದನ್ನು ಗಮನಿಸಿ, ಉಗಾಭೋಗ ಪ್ರಕಾರವು ಸುಳಾದಿಯ ಖಿಲಭಾಗವಾಗಿ ರೂಪುತಾಳಿದ ಬಳಿಕ ಅದು ಸ್ವತಂತ್ರವಾಗಿ ಬೆಳೆದು ದೃಢವಾಯಿತೆಂದು ನಾವು ಬಳಸಿದರೆ ತಪ್ಪಿಲ್ಲ. ಈ ರೀತಿ ಅದು ಒಂದು ವಿಶಿಷ್ಟ ಪ್ರಕಾರವಾಗಿ ಬೆಳೆಯುವುದರಲ್ಲಿ ಆಳ್ವಾರರ ‘ಪಾಶುರಗಳು’ ನಾಯನ್ನಾರರ ‘ತೇವಾರಂಗಳು’ ಮತ್ತು ಶಿವಶರಣರ ವಚನಗಳು ಯಾವ ಪಾತ್ರ ವಹಿಸಿವೆ ಎನ್ನುವುದನ್ನು ಪ್ರತ್ಯೇಕವಾಗಿ ಪರಿಶೀಲಿಸುವುದು ಅಗತ್ಯ.

ಈಗ ತಿಳಿದಿರುವಂತೆ ಮೊಟ್ಟಮೊದಲ ಕನ್ನಡ ಉಗಾಭೋಗ ರಚನಕಾರರು ೧೫ನೇ ಶತಮಾನದ ಶ್ರೀಪಾದರಾಜರೇ. ಪುರಂದರದಾಸರು ಹೆಚ್ಚಿನ ಸಂಖ್ಯೆಯಲ್ಲಿ ಉಗಾಭೋಗಗಳನ್ನು ರಚಿಸಿರುವರು. ಉಗಾಭೋಗಗಳು ‘ಸುಳಾದಿಗಳ ಖಿಲ ಭಾಗಗಳು’ ಎಂಬುದು ಬಹುತೇಕ ವಿದ್ವಾಂಸರ ಅಭಿಪ್ರಾಯ.

ವಚನಗಳಿಗೂ ಉಗಾಭೋಗಗಳಿಗೂಇರುವ ಸಂಬಂಧವನ್ನು ಕುರಿತು ಎಂ.ಚಿದಾನಂದಮೂರ್ತಿ ಅವರು ಕುಲಂಕುಷವಾದ ಜಿಜ್ಞಾಸೆ ಮಾಡಿದ್ದಾರೆ. ಉಗಾಭೋಗಗಳ ಬಂಧ ವಚನಗಳ ಬಂಧವನ್ನು ಬಹುಮಟ್ಟಿಗೆ ಹೋಲುತ್ತವೆ. ಉದಾಹರಣೆಗೆ ಕೆಳಗಿನ ಕೆಲವನು ನೋಡಬಹುದು.

ಮನೆಯಿಂದ ಸಂತೋಷ ಕೆಲವರಿಗೆ ಲೋಕದೊಳು
ಧನದಿಂದ ಸಂತೋಷ ಕೆಲವರಿಗೆ ಲೋಕದೊಳು
ವನಿತೆಯಿಂ ಸಂತೋಷ ಕೆಲವರಿಗೆ ಲೋಕದೊಳು
ತನಯರಿಂ ಸಂತೋಷ ಕೆಲವರಿಗೆ ಲೋಕದೊಳು
ಇನಿತು ಸಂತೋಷವವರವರಿಗಾಗಲಿ ನಿನ್ನ
ನೆನೆಹೆನೆಗೆ ಸಂತೋಷ ರಂಗವಿಠಲರೇಯ
(ಶ್ರೀಪಾದರಾಯರು)

ಜಾರತ್ವವನು ಮಾಡಿದ ಪಾಪಗಳಿಗೆಲ್ಲ
ಗೋಪೀಜನಜಾರನೆಂದರೆ ಸಾಲದೆ
ಚೋರತ್ವವನು ಮಾಡಿ ಪಾಪಿಗಳಿಗೆಲ್ಲ
ನವನೀತಚೋರನೆಂದರೆ ಪಾಪಿಗಳಿಗೆಲ್ಲ
ಕ್ರೂರತ್ವವನು ಮಾಡಿದ ಪಾಪಿಗಳಿಗೆಲ್ಲ
ಮಾವನ ಕೊಂದವನೆಂದರೆ ಸಾಲದೆ
ಪ್ರತಿದಿವಸ ಮಾಡಿದ ಪಾಪಗಳಿಗೆಲ್ಲ
ಪತಿತ ಪಾವನನೆಂದರೆ ಸಾಲದೆ
ಇಂತಿಪ್ಪ ಮಹಿಮೆಯೊಳೊಂದನಾದರು ಒಮ್ಮೆ
ಸಂತತ ನೆನೆವರ ಸಲಹುವ ಸಿರಿಕೃಷ್ಣ
(ಶ್ರೀ ವ್ಯಾಸರಾಯರು)

ಹಾಡಿದರೆ ಎನ್ನೊಡೆಯನ ಹಾಡುವೆ
ಬೇಡಿದರೆನ್ನೊಡೆಯನ ಬೇಡುವೆ
ಒಡೆಯಗೆ ಒಡಲನು ತೋರುತ ಎನ್ನ
ಬಡತನ ಬಿನ್ನಹ ಮಾಡುವೆ
ಒಡೆಯ ಪುರಂದರವಿಠಲರಾಯನ
ಅಡಿಗಳನು ಸಾರಿ ಬದುಕುವ ಸಾರಿ ಬದುಕುವೆ
(ಶ್ರೀ ಪುರಂದರದಾಸರು)

ಎಲ್ಲ ಹರಿದಾಸರಿಗಿಂತ ಪುರಂದರದಾಸರ ಮೇಲೆ ವಚನ ಸಾಹಿತ್ಯದ ಅದರಲ್ಲೂ ಬಸವಣ್ನನವರ ವಚನಗಳ ಪ್ರಭಾವವು ಹಿರಿದಾಗಿದೆ. ಪುರಂದರದಾಸರು ಬಸವಣ್ಣನವರ ವಚನಗಳ ಸೊಗಸಿಗೆ ಮಾರು ಹೋಗಿದ್ದರು; ಅವುಗಳ ಭಾಷೆ, ಸೊಗಸುಗಳಲ್ಲಿ ಮಿಂದಿದ್ದರು; ಅವುಗಳ ಧಾಟಿ ಅವರ ಮನಸ್ಸನ್ನು ವಿಶೇಷವಾಗಿ ಆಕರ್ಷಿಸಿದ್ದಿತು. ಭಾವಗಳಲ್ಲಿ ಅಭಿಪ್ರಾಯಗಳಲ್ಲಿ ಅವರಿಬ್ಬರಿಗೂ ಅನೇಕ ಕಡೆ ಸಾಮ್ಯಗಳಿವೆ. ಮಹಾತ್ಮರು ಸದೃಶವಾಗಿ ಆಲೋಚನೆ ಮಾಡುತ್ತಾರೆ ಎಂಬ ಮಾತನ್ನು ಇಲ್ಲಿ ನೆನೆಯಬಹುದು. ಪುರಂದರದಾಸರ ಆಲೋಚನಾ ವಿಧಾನದ ಮೇಲೆ. ಅವರ ದೃಷ್ಟಿಯನ್ನು ರೂಪಿಸಿದ ಹಲವು ಶಕ್ತಿಗಳಲ್ಲಿ ಒಂದಾಗಿ ಬಸವಣ್ಣನವರ ಪ್ರಭಾವವೂ ಇರಬಹುದು. (ಅದರ ಪರಿಶೀಲನೆ ಇಲ್ಲಿ ಅನಗತ್ಯ, ಅದಕ್ಕೆ ಹೆಚ್ಚು ಅಧ್ಯಯನವೂ ಅಗತ್ಯ). ಬಸವಣ್ಣನವರವಚನಗಳ ಪ್ರಭಾವವು ಅವರ ಕೀರ್ತನೆಗಳಲ್ಲಿ ಮತ್ತು ತಕ್ಕಮಟ್ಟಿಗೂ ಉಗಾಭೋಗಗಳಲ್ಲಿ ವಿಶೇಷವಾಗಿಯೂ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ ಕೆಲವನ್ನು ನೋಡಬಹುದು.

iii) ಬೇವಿನ ಬೀಜ ಬೆಲ್ಲದ ಕಟ್ಟೆಯ                                  iii.ಬೇವಿನ ಬೀಜವ ಬಿತ್ತಿ ಬಿಲ್ಲದ ಕಟ್ಟಿಯ
ಕಟ್ಟಿ |                                                                        ಕಟ್ಟಿ |
ಜೇನುಮಳೆಗರೆದರೆ ವಿಷ ಹೋಗುವು                                   ಆಕಳ ಹಾಲನೆಱದು ಜೇನುತುಪ್ಪವ
ದೇನಯ್ಯ |ಹೊಯ್ದರೆ |
ಏನು ಓದಿದರೇನು ಏನು ಕೇಳಿದರೇನು|                                ಸಿಹಿಯಾಗಬಲ್ಲುದೆ ಕಹಿಯಾಗಲೊಲ್ಲದೆ
ಮನದೊಳಗಿನ ತಾಮಸ ಬಿಡುವದನಕ                                 ಶಿವಭಕ್ತರೆಲ್ಲದವರ ಕೂಡೆ ನುಡಿಯ
ಕೊಳಲದನಿಗೆ ಸರ್ಪ ತಲೆದೂಗು                                         ಲಾಗದು
ವಂದದಿ ಯ |                                                               ಕೂಡಲಸಂಗಮದೇವಾ ||
ನ್ನೊಡೆಯ ಕೇಳು ಶ್ರೀ ಪುರಂದರವಿಠಲ ||

iv) ಉರಿಯಗಂಜೆ ಸೆರೆಗಂಜೆ ಶರೀರದ ಭಯ                         iv. ಹರಿವ ಹಾಗಿಗಂಜೆ ಉರಿಯ ನಾಲಗೆ
ಕಂಜೆ |                                                                        ಗಂಜೆ ಸುರಗಿಯ ಮೊನೆಗಂಜೆ|
ಹಾವಿನಗಂಜೆ ಚೇಳಿಗಂಜೆ ಕತ್ತಿಯ                                       ಒಂದಕ್ಕಂಜುಎ ಒಂದಕ್ಕಳುವೆ
ಧಾರೆಗಂಜೆ |                                                                 ಪರಸ್ತ್ರೀ ಪರಧನವೆಬೀ ಜೂಬಿಂಗಂಜುವೆ|
ಇನ್ನೊಂದಕ್ಕಂಜುವೆ ಇನ್ನೊಂದಕ್ಕ                                     ಮುನ್ನಂಜದ ರಾವಣನೇವಿಧಿಯಾದ
ಳಕುವೆ |                                                                      ಅಂಜುವೆನಯ್ಯ ಕೂಡಲಸಂಗಮ
ಪರಧನ ಪರಸತಿಎರಡಕ್ಕಂಜುವೆನಯ್ಯ                                ದೇವಾ ||
ಹಿಂದೆ ಕೌರವ ರಾವಣರೇನಾಗಿ
ಪೋದರು |
ಮುಂದೆ ಸಲಹೊ ಪುರಂದರವಿಠಲ |

v) ಜಗವ ಸುತ್ತಿಹುದೆಲ್ಲ ನಿನ್ನ ಮಾಯ                              v. ಜಗವ ಸುತ್ತಿಪ್ಪುದು ನಿನ್ನ ಮಾಯೆ
ವಯ್ಯ |                                                                      ಯಯ್ಯಾ
ನಿನ್ನ ಸುತ್ತಿಹುದೆಲ್ಲ ಎನ್ನ ಮಾಯ                                  ನಿನ್ನ ಸುತ್ತಿಪ್ಪುದು ಎನ್ನ ಮನ
ವಯ್ಯ | ನೋಡಯ್ಯ |
ಜಗವು ನಿನ್ನೊಳಗೆ ನೀನು ಎನ್ನೊಳಗೆ                                 ನೀನು ಜಗಕ್ಕೆ ಬಲ್ಲಿದನು, ಆನು ನಿನಗೆ
ಜಗಕೆ ಬಲ್ಲಿದ ನೀನು                                                     ನಿನಗೆ ಬಲ್ಲಿದಬಲ್ಲಿದನು ಕಂಡಯ್ಯಾ |
ನಾನು |
ಕರಿಯು ಕನ್ನಡಿಯೊಳಗೆ ಅಡಗಿಪ್ಪ                                    ಕರಿಯು ಕನ್ನಡಿಯೊಳಗಡಗಿದಂತಯ್ಯ|
ತೆರನಂತೆ |
ನೀನು ಎನ್ನೊಳಗಡಗಿಪ್ಪೆ ಪುರಂದರ                                  ಎನ್ನೊಳಗೆ ನೀನಡಗಿದೆ ಕೂಡಸಂಗಮ
ವಿಠಲ ||                                                                      ದೇವಾ ||

ಇವು ಎಲ್ಲೋ ಕೆಲವು ಸ್ಪಷ್ಟ ಸಾದೃಶ್ಯಗಳು. ಈ ಸಾದೃಶ್ಯ ಎಷ್ಟರಮಟ್ಟಿಗಿದೆಯೆಂದರೆ ಕೆಲವೆಡೆಗಳಲ್ಲಿ ಅಂಕಿತವನ್ನು ಮಾರ್ಪಡಿಸಿ ಇತರ ಒಂದೆರಡು ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿದರೆ ವಚನವು ಉಗಾಭೋಗವಾಗುತ್ತದೆ.

ಈ ಪ್ರಭಾವಕ್ಕೆ ಕಾರಣವನ್ನು ಚಿದಾನಂದಮೂರ್ತಿ ಅವರು ಸರಿಯಾಗಿಯೇ ಗುರುತಿಸಿದ್ದಾರೆ.೨[1] ವಚನಸಾಹಿತ್ಯದ ಇತಿಹಾಸದಲ್ಲಿ ಎರಡು ಪ್ರಮುಖ ಘಟ್ಟಗಳನ್ನು ಗುರುತಿಸಬಹುದು. ಹನ್ನೆರಡನೆಯ ಶತಮಾನದಲ್ಲಿ ಬಸವ. ಅಕ್ಕಮಹಾದೇವಿ, ಅಲ್ಲಮ ಮುಂತಾದ ನೂರಾರು ಶರಣರು ಸಾವಿರಾರು ವಚನಗಳನ್ನು ರಚಿಸಿದರು. ಇದು ವಚನಗಳ ‘ಸೃಷ್ಟಿ’ಯ ಕಾಲ. ಮುಂದಿನ ಎರಡು ಶತಮಾನಗಳಲ್ಲಿ ಬೇರೆ ಬೇರೆಡೆಗಳಲ್ಲಿ ಕಾರಣಾಂತರಗಳಿಂದ ಚದುರಿಹೋದ ವಚನಗಳನ್ನು ಸಂಕಲಿಸುವ, ಷಟ್ಸ್ಥಲಾನುಕ್ರಮವಾಗಿ ಜೋಡಿಸುವ ಮತ್ತು ಅವುಗಳನ್ನು ವ್ಯಾಖ್ಯಾನಿಸುವ ಕಾರ್ಯವು ಹದಿನೈದು ಹದಿನಾರನೇ ಶತಮಾನಗಳಲ್ಲಿ ನಡೆಯಿತು (‘ಸಂಕಲನ’, ‘ವ್ಯವಸ್ಥಾಪನ’ ಮತ್ತು ವ್ಯಾಖ್ಯಾನ’), ವಚನಗಳ ದೃಷ್ಟಿಯಿಂದ ಇದು ಅನೇಕ ಚಟುವಟಿಕೆಗಳ ಕಾಲ. ವಚನಗಳಿಗೆ ಬಹುವಾದ ಪ್ರಸಾರ ದೊರೆತದ್ದು ಬಹುಶಃ ಈ ಕಾಲದಲ್ಲಿಯೇ. ಈ ಚಟುವಟಿಕೆಗಳು ಮುಖ್ಯವಾಗಿ ಎರಡು ಕೇಂದ್ರಗಳು ನಡೆದುವು. ಹದಿನೈದನೇ ಶತಮಾನದ ಪೂರ್ವಾರ್ಧದಲ್ಲಿ ಹಂಪೆ, ಅದೇ ಶತಮಾನದ ಉತ್ತರಾರ್ಧದಲ್ಲಿ ಮತ್ತು ಹದಿನಾರನೇ ಶತಮಾನದ ಆತಂಭದಲ್ಲಿ ತುಮಕೂರು ಜಿಲ್ಲೆಯ ಎಡೆಯೂರು ಇವೇ ಆ ಎರಡು ಕೇಂದ್ರಗಳು. ಹರಿದಾಸ ಪರಂಪರೆಯ ಮೊದಮೊದಲು ಹರಿದಾಸರು ವಿಜಯನಗರ ಸಾಮ್ರಾಜ್ಯದ ದೊರೆಗಳ ರಾಜಗುರುಗಳಾಗಿದ್ದರು. ಶ್ರೀವ್ಯಾಸರಾಯರು, ಶ್ರೀಪುರಂದರದಾಸರು, ಮುಂತಾದ ದಾಸರಿಗಂತೂ ಹಂಪೆ ಕೇಂದ್ರವಾಗಿದ್ದಿತು. ಹೀಗೆ ಹಂಪೆಯಲ್ಲಿ ವಚನಗಳ ಸಂಕಲನಾದಿಯಲ್ಲಿ ಆಸಕ್ತರಾಗಿದ್ದ ವೀರಶೈವ ವಿದ್ವಾಂಸರೂ ಹರಿದಾಸರೂ ಒಂದೆಡೆ ಮಿಳಿತವಾಗಿದ್ದರು. ಎಲ್ಲ ಧರ್ಮಗಳಿಗೂ ಏಕರೀತಿಯಾದ ಪ್ರೋತ್ಸಾಹವನ್ನೂ ಆಶ್ರಯವನ್ನೂ ನೀಡಿದ್ದ ವಿಜಯನಗರ ಸಾಮ್ರಾಜ್ಯದ ದೊರೆಗಳು ಆಶ್ರಯದಲ್ಲಿ ಒಟ್ಟಿಗೆ ಸಾಮರಸ್ಯದಿಂದ ಪರಸ್ಪರ ಸಹಾನುಭೂತಿಯಿಂದ ಒಂದೇ ರೀತಿಯಾದ ಭಗವಧ್ಬಕ್ತಿಯಿಂದ ಪ್ರೇರಿತರಾಗಿ ಬದುಕುತ್ತಿದ್ದ ಅವರಲ್ಲಿ ಹರಿದಾಸರ ಮೇಲೆ, ಅದರಲ್ಲೂ ವ್ಯಾಸರಾಯರ ಮತ್ತು ಪುರಂದರದಾಸರ ಮೇಲೆ ವಚನಗಳ ಪ್ರಭಾವ ಆಗಿರುವುದು ಆಶ್ವರ್ಯದ ಸಂಗತಿಯೇನೂ ಅಲ್ಲ. ಉಗಾಭೋಗಗಳು ಯಾವುದೇ ರಾಗದ ಬಂಧನಕ್ಕಾಗಲಿ, ತಾಳದ ಕಟ್ಟಿಗಾಗಲಿ ಒಳಪಟ್ಟಿಲ್ಲ. ಅಲ್ಲಲ್ಲಿ ನಿಯತವಾಗಿ ಲಯವನ್ನು ಗುರುತಿಸಬಹುದಾದರೂ ಇಡೀ ಉಗಾಭೋಗ ಅದೇ ಲಯದಲ್ಲಿ ಇಲ್ಲದಿರುವುದು ಅನುಭವಕ್ಕೆ ಬರುತ್ತದೆ. ಉದಾಹರಣೆಗೆ:

ಜಾರತ್ವವನು ಮಾಡಿದ. ಪಾಪಗಳಿಗೆಲ್ಲ
ಗೋಪೀಜನ. ಜಾರನೆಂದರೆ. ಸಾಲದೆ
ಚೋರತ್ವವನು ಮಾಡಿದ. ಪಾಪಗಳಿಗೆಲ್ಲ
ನವನೀತ. ಚೋರನೆಂದರೆ. ಸಾಲದೆ
ಕ್ರೂರತ್ವವನು ಮಾಡಿದೆ. ಪಾಪಗಳಿಗೆಲ್ಲ
ಮಾವನ ಕೊಂದವನೆಂದರೆ, ಸಾಲದೆ
ಪ್ರತಿದಿವಸ ಮಾಡಿದ. ಪಾಪಗಳಿಗೆಲ್ಲ
ಪತಿತಪಾವನನೆಂದರೆ, ಸಾಲದೆ
ಇಂತಿಪ್ಪ ಮಹಿಮೆಯೊಳೊಂದನಾದರು. ಒಮ್ಮೆ
ಸಂತತ ನೆನೆವರ ಸಲಹುವ ಸಿರಿಕೃಷ್ಣ ||
(ವ್ಯಾಸರಾಯರು)

ಈ ಮೇಲಿನ ಉಗಾಭೋಗದಲ್ಲಿ ೧ ಮತ್ತು ೩ನೆಯ ಪಾದಗಳು ಹಾಗೂ ೨ ಮತ್ತು ೪ನೆಯ ಪಾದಗಳಲ್ಲಿ ಕಾಣುವ ಲಯ ಮುಂದೆ ಬದಲಾಯಿಸಿಬಿಟ್ಟಿದೆ. ಅಂತೆಯೇ.

ಹಾಡಿದರೆ, ಎನ್ನೊಡೆಯನ, ಹಾಡುವೆ
ಬೇಡಿದರೆ, ಎನ್ನೊಡೆಯನ, ಬೇಡುವೆ
ಒಡೆಯಗೆ, ಒಡಲನು, ತೋರುತ, ಎನ್ನ
ಬಡತನ, ಬಿನ್ನಹ, ಮಾಡುವೆ
ಒಡೆಯ ಪುರಂದರ, ವಿಠಲ, ರಾಯನ
ಅಡಿಗಳನು, ಸಾರಿ ಬದುಕುವೆ, ಸಾರಿ ಬದುಕುವೆ
(ಪುರಂದರದಾಸರು)

ಇಲ್ಲಿ ಮೊದಲ ಎರಡು ಪಾದಗಳ ಲಯ ಮುಂದೆ ಕಾಣುವುದಿಲ್ಲ. ಹೀಗೆ ಅಲ್ಲಲ್ಲಿ ಕಂಡುಬರುವ ನಿಯತ ಲಯಗಳನ್ನು ಗುರುತಿಸುವುದರಿಂದ ಪ್ರಯೋಜನವಿಲ್ಲ. ಕೀರ್ತನೆ, ಸುಳಾದಿಗಳಲ್ಲಿರುವಂತೆ ಉಗಾಭೋಗಗಳಲ್ಲಿ ನುಡಿಗಳ ಅಡೆತಡೆಗಳಿಲ್ಲ, ಪಾದಗಳ ನಿಯಮವಿಲ್ಲ. ಘನೀಭೂತವಾದ ಅನುಭವದ ಅಭಿವ್ಯಕ್ತಿಗಳು, ಈ ಉಗಾಭೋಗಗಳು. ಆಯಾ ಉಗಾಭೋಗದ ಮೊದಲ ಪಾದವನ್ನು ಒಂದು ಘಟಕವೆಂದು ಭಾವಿಸಿ, ಉಳಿದ ಪಾದಗಳನ್ನು ಅದಕ್ಕನುಗುಣವಾಗಿ ಹಿಗ್ಗಿಸಿ ಕುಗ್ಗಿಸಿ ಹಾಡಬೇಕಾಗುತ್ತದೆ. ತಾಳದ ಕಟ್ಟಿಲ್ಲವಾದ್ದರಿಂದ ಉಗಾಭೋಗಗಳಲ್ಲಿ ಖಚಿತವಾಗಿ ಅಂಶಗಣಗಳನ್ನಾಗಲಿ, ಮಾತ್ರಾಗಣಗಳನ್ನಾಗಲಿ ಗುರುತಿಸುವುದು ಸಾಧ್ಯವಿಲ್ಲ. ಇವು ಸ್ಥೂಲವಾಗಿ ವಚನಗಳ ಬಂಧವನ್ನು ಹೋಲುತ್ತವೆ. ವಚನಗಳಲ್ಲಿ ಕಂಡುಬರುವಂತೆ ಉಗಾಭೋಗಗಳಲ್ಲೂ ಕಂಡುಬರುವ ಇನ್ನೊಂದು ಲಕ್ಷಣವೆಂದರೆ ಪದಗಳ ಪುನರುಕ್ತಿ. ಮೇಲಿನ ಎರಡು ಉಗಾಭೋಗಗಳನ್ನೇ ಈ ದೃಷ್ಟಿಯಿಂದಲೂ ಪರಿಶೀಲಿಸಬಹುದು. ಸಾಮಾನ್ಯವಾಗಿ ಉಗಾಭೋಗಗಳಲ್ಲಿ ಆದಿ ಪ್ರಾಸ ನಿಯತ. ಸಂಪೂರ್ಣ ಸ್ವರಪ್ರಧಾನವಾದ ಈ ಸಂಗೀತರಚನೆಗಳನ್ನು ಶ್ಲೋಕಗಳನ್ನು ಹಾಡುವ ರೀತಿಯಲ್ಲಿ, ರಾಗಮಾಲಿಕೆಯಲ್ಲಿ ಸುಶ್ರಾವ್ಯವಾಗಿ ಹಾಡಬಹುದು.

II

ಹರಿದಾಸರ ಈ ಎಲ್ಲ ರಚನಾಪ್ರಕಾರಗಳನ್ನೂ ಕೀರ್ತನೆ, ಸುಳಾದಿ, ಉಗಾಭೋಗ, ಒಟ್ಟಾಗಿ ‘ಕೀರ್ತನೆಗಳು’, ಕೃತಿಗಳು’, ‘ದಾಸರ ಪದಗಳು’ ಎಂದೇ ವ್ಯವಹರಿಸುವುದು ರೂಢಿ. ಮತ್ತು ಕೀರ್ತನೆ ಕೃತಿ ಪದ, ಹಾಡು ಈ ಶಬ್ದಗಳು ಸಮಾನಾರ್ಥಕವಾಗಿ ಬಳಕೆಯಲ್ಲಿವೆ. ಹರಿಭಕ್ತಿ ಇವುಗಳ ಮೂಲ ಸ್ರೋತವಾದರೂ ಕೀರ್ತನೆಗೆ ವಸ್ತುವಾಗುವ ವಸ್ತುವಿಲ್ಲ. ದ್ವೈತಮತ ತತ್ವಗಳಿಂದ ಹಿಡಿದು ಬಡವರ ಆಹಾರವಾದ ರಾಗಿ, ಮೆಣಸಿನಕಾಯಿಗಳವರೆಗೂ ಕೀರ್ತನೆಗಳ ವಸ್ತುವ್ಯಾಪ್ತಿಯಿದೆ. ಪ್ರತಿಯೊಂದು ಕೀರ್ತನೆಯೂ ಆಯಾ ರಚನಕಾರರ ಅಂಕಿತವನ್ನು ಪಡೆದಿರುತ್ತದೆ. ರಂಗವಿಠಲ (ಶ್ರೀಪಾದರಾಜರು), ಶ್ರೀಕೃಷ್ಣ (ವ್ಯಾಸರಾಯರು), ಪುರಂದರವಿಠಲ(ಪುರಂದರದಾಸರು), ಆದಿಕೇಶವ (ಕನಕದಾಸರು), ಹಯವದನ(ವಾದಿರಾಜರು), ಇತ್ಯಾದಿ ಪ್ರತಿಯೊಬ್ಬ ಹರಿದಾಸರೂ ನೂರಾರು ಸಂಖ್ಯೆಯಲ್ಲಿ ಕೃತಿರಚನೆ ಮಾಡಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿರುವ ಅವುಗಳನ್ನು ಸ್ಥೂಲವಾಗಿ ಮೂರು ಭಾಗಗಳಲ್ಲಿ ವಿಂಗಡಿಸಿಕೊಂಡು ಅಭ್ಯಸಿಸಬಹುದು.

೧.ಆತ್ಮಶೋಧನೆಯ ಹಾಗೂ ಭಕ್ತಿಸಾಧನೆಯ ಕೃತಿಗಳು

೨.ತತ್ವಪ್ರತಿಪಾದಕ ಕೃತಿಗಳು

೩.ಉಪದೇಶಾತ್ಮಕ ಕೃತಿಗಳು

ಭಕ್ತನ ಆತ್ಮಶೋಧನೆಗೆ ಭಕ್ತಿ ಸಾಹಿತ್ಯದಲ್ಲಿ ಪ್ರಮುಖ ಪಾತ್ರ. ಇಂತಹ ಕೀರ್ತನೆಗಳಲ್ಲಿ ಭಕ್ತ ತನ್ನ ಇಷ್ಟದೈವವನ್ನು ಕಾಣುವ ಹಂಬಲ. ತವಕ, ಕಳಕಳಿಗಳನ್ನು ಮತ್ತೆ ಮತ್ತೆ ತೋಡಿಕೊಂಡಿರುವನು. ತಾನು ಅದುವರೆಗೆ ಬಾಳಿದ ಬಾಳನ್ನು ಹೀಗಳೆದು ‘ವ್ಯರ್ಥವಾಯಿತಲ್ಲ ಜನುಮ ಸಾರ್ಥಕಾಗಲಿಲ್ಲ’ ಎಂದು ಮುಂತಾಗಿ ಪಶ್ಚಾತ್ತಾಪ ಪಟ್ಟು ಆ ಮೂಲಕ ಪರಿಶುದ್ಧನಾಗುವನು. ಸದಾ ಭಗವಂತನನ್ನು ನೋಡುವ, ಅವನೊಡನಾಡುವ, ಅವನನ್ನು ತನ್ನ ಹೃದಯಮಂದಿರದಲ್ಲಿ ನೆಲೆ ನಿಲ್ಲಿಸುವ ಅದಮ್ಯ ಬಯಕೆಯನ್ನು ಬಗೆಬಗೆಯಾಗಿ ತೋಡಿಕೊಳ್ಳುವನು ದೇವರೊಡನೆ ವಿವಿಧ ರೀತಿಯ ಮಾನವ ಸಂಬಂಧಗಳನ್ನು ಕಲ್ಪಿಸಿಕೊಂಡು ಭಕ್ತಿ ಸಾಧನೆ ಮಾಡಿರುವನು. ದಾಸ್ಯ, ಸಖ್ಯ, ಮಧುರ, ವಾತ್ಸಲ್ಯ ಹಾಗೂ ಶಾಂತ- ಈ ಐದೂ ಭಾವನೆಗಳಿಂದ ಭಕ್ತ ಭಗವಂತನನ್ನು ಓಲೈಸುವನು. ಭಗವಂತ ಒಡೆಯ, ತಾನು ಸೇವಕನೆಂದು ಭಾವಿಸುವ ಭಕ್ತ ‘ದಾಸ ದಾಸರ ಮನೆಯ ದಾಸಿಯರ ಮಗ ನಾನು’ (ಕನಕದಾಸ) ‘ದಾಸನ ಮಾಡಿಕೊ ಎನ್ನ ಸ್ವಾಮಿ’ (ಪುರಂದರದಾಸ) ‘ದಾಸೋಹಂ ತವ ದಾಸೋಹಂ’ (ಜಗನ್ನಾಥದಾಸ) ಎಂದು ಮುಂತಾಗಿ ಆ ‘ಧಣಿ’ಯಲ್ಲಿ ಅಂಗಲಾಚುವನು. ಭಗವಂತನೊಡನೆ ಸಲಿಗೆಯ ಗೆಳೆತನವನ್ನಾರೋಪಿಸಿಕೊಂಡು “ಕೊಟ್ಟು ಹೋಗೋ ಎನ್ನ ಸಾಲವ ಕಣ್ಣುಬಿಟ್ಟರಂಜುವನಲ್ಲ” (ಪುರಂದರದಾಸರು), “ಮರೆತೆಯೇನೋ ರಂಗ ಮಂಗಳಾಂಗ” (ಶ್ರೀಪಾದರಾಜರು) ಎಂದು ಸಲಿಗೆಯಿಂದ ಹರಿಯನ್ನು ಹಂಗಿಸಿ ಭಂಗಿಸುವನು. ಸಾಕ್ಷಾತ್ ಶ್ರೀಹರಿಯೇ ತಮ್ಮ ‘ಪತಿ’ಯೆಂದು ಭಾವಿಸಿ ತಾವು ಅವನ ‘ಸತಿ’ಯೆಂದೂ ಹೆಣ್ತನವನ್ನಾ ರೋಪಿಸಿಕೊಂಡು ‘ಮಧುರಭಾವ’ದಿಂದ ಭಕ್ತಿ ಸಾಧನೆ ಮಾಡುವನು. ‘ಒಲ್ಲೆನವ್ವ ನಮ್ಮ ನಲ್ಲ ಬಾರದಿರೆ ತನು ಹೊರೆಯನೊಲ್ಲೆನವ್ವಾ’ (ಶ್ರೀಪಾದರಾಜರು) ಎಂದು ವಿರಹದಿಂದ ಪರಿತಪಿಸುವನು. ‘ಮುತ್ತೈದೆಯಾಗಿರಬೇಕು ಮಡದಿ! ಹತ್ತುನೂರು ನಾಮದೊಡೆಯ ಹರಿ ನಮ್ಮ ಪತಿಯೆಂದು’ (ಪುರಂದರದಾಸರು)- ಎಂದು ಸಂತುಷ್ಟನಾಗುವನು. ಅಂತೆಯೇ ‘ವಾತ್ಸಲ್ಯ ಭಾವ’ದ ಕೃತಿಗಳಲ್ಲಿ ಭಕ್ತ ಭಗವಂತನನ್ನೇ ‘ಮಗು’ವೆಂದು ಭಾವಿಸಿರುವುದು ವಿಶೇಷ. “ಎಲ್ಲಾಡಿ ಬಂದ್ಯೊ ಎನ್ನ ರಂಗಯ್ಯ ! ನೀನೆಲ್ಯಾಡಿ ಬಂದ್ಯೋ ಎನ್ನ ಕಣ್ಣ ಮುಂದಾಡದೆ. (ಮಹಿಪತಿದಾಸರು) ಎಂದು – ಸಾಕ್ಷಾತ್ ಶ್ರೀಹರಿಯನ್ನು ಪ್ರಶ್ನಿಸುತ್ತಾ. ‘ಆಡಿಸಿದಳೆಶೋದೆ ಜಗದೋದ್ಧಾರನ’ (ಪುರಂದರದಾಸರು) ಎಂದು ಆನಂದಿಸುತ್ತಲೋ ತಮ್ಮ ಭಕ್ತಿ ಸಾಧನೆಯನ್ನು ಮುಂದುವರಿಸುವರು. ಇಂತಹ ಯಾವ ಮಾನವ ಸಂಬಂಧವನ್ನೂ ಆರೋಪಿಸಿಕೊಳ್ಳದೆ ಕೇವಲ ಭಕ್ತ ಭಗವಂತ ಎಂಬ ಭಾವನೆಯಿಂದ ಭಗವಂತನ ಲೀಲಾವಿನೋದಗಳನ್ನೂ ಗುನವಿಶೇಷಗಳನ್ನೂ ರೂಪಲಾವಣ್ಯಗಳನ್ನೂ ವರ್ಣಿಸುವುದು ‘ಶಾಂತಭಾವ’ವೆನ್ನಿಸಿಕೊಳ್ಳುತ್ತದೆ. “ವಿಶ್ವತೋಮುಖ ನೀನೆ! ವಿಶ್ವತಶ್ಚಕ್ಷು……”, “ಶ್ರೀರಂಗನ ಶ್ರೀಮುಕುಟಕೆ ಶರಣು…” ಇತ್ಯಾದಿ ಕೀರ್ತನೆಗಳನ್ನು ಶಾಂತಭಾವದ ಕೀರ್ತನೆಗಳೆಂದು ಹೆಸರಿಸಬಹುದು. ಹೀಗೆ ‘ಪಂಚಭಾವ’ಗಳಿಂದ ಹರಿಯನ್ನು ಓಲೈಸಿಒಲಿಸಿಕೊಂಡು, ಅವನನ್ನು ತಮ್ಮ ಮನೋಮಂದಿರದಲ್ಲಿ ಹಿಡಿದಿಟ್ಟ ಭಾವನೆಯಿಂದ ದಾಸರು ನೆಮ್ಮದಿ ಪಡೆಯುವರು. ಕನಸು ಮನಸಿನಲ್ಲೂ ಅವನೇ ವ್ಯಾಪಿಸುವನು. “ಕಂಡೆ ನಾ ಕನಸಿನಲಿ ಗೋವಿಂದನ….” ಎಂದು ಸಾರಿ ಹೇಳುತ್ತಾ “ಕಣ್ಣಾರೆ ಕಂಡೆ ಅಚ್ಯುತನ…”, “ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದ್ದಂತಿದೆ” -ಎಂದು ಮುಂತಾಗಿ ಸಾಕ್ಷಾತ್ ಭಗವಂತ ಶ್ರೀಹರಿಯನ್ನು ತಾವು ಕಣ್ಣಾರೆ ಕಂಡುದಾಗಿ ಭಾವಿಸಿ ವರ್ಣಿಸಿರುವರು. ಮನಸ್ಸು ಭಕ್ತಿಯ ಆ ಹಂತವನ್ನು ತಲುಪುತ್ತಿದ್ದಂತೆಯೇ ಭಕ್ತನ ಮನದ ಕಳವಳವೆಲ್ಲವೂ ಇಂಗಿ “ಬದುಕಿದೆನು ಭವವೆನಗೆ ಹಿಂಗಿತು…”, “ಅಂತರಂಗದ ಕದವು ತೆರೆಯಿತಿಂದು…”, ಎಂದು ಮುಂತಾಗಿ ಹಾಡಿ ಧನ್ಯರಾಗಿರುವರು. ಸಂಪೂರ್ಣವಾಗಿ ವ್ಯಕ್ತಿಯ ಮಾನಸಿಕ ಸ್ತರಗಳನ್ನು ಬಿಂಬಿಸುವ ಆತ್ಮನಿಷ್ಠ ಕೃತಿಗಳಿವು. ಒಂದು ತಾತ್ವಿಕ ಚೇತನ ಭಗವದನು ಗ್ರಹಕ್ಕಾಗಿ ಎಷ್ಟು ರೀತಿಯಲ್ಲಿ ಹಂಬಲಿಸುತ್ತದೆನ್ನುವುದು ಇಲ್ಲಿ ನಮಗೆ ಅರಿವಾಗುತ್ತದೆ. ಹೀಗೆ ವೈಯಕ್ತಿಕ ನೆಲೆಯಲ್ಲಿ ಭಕ್ತಿ ಸಾಧನೆ ಮಾಡಿಬ ಬಳಿಕ ಹರಿದಾಸರು ಸಮಾಜದ ಸಾಮಾನ್ಯ ಜನತೆಯನ್ನು ತಮ್ಮ ಕೀರ್ತನೆಗಳ ಮೂಲಕ ಹರಿಭಕ್ತಿಯತ್ತ ಸೆಳೆಯುವರು.

ತತ್ವಪ್ರತಿಪಾದಕ ಕೀರ್ತನೆಗಳನ್ನು ಗಮನಿಸಿದರೆ ಅವು ದೇವರು, ಭಕ್ತಿ ಮೌಲ್ಯಗಳು, ಪುರಾಣ ಪುಣ್ಯಕತೆಗಳ ಅಗರಗಳೇ ಆಗಿವೆ. ಮಧ್ವಾಚಾರ್ಯರು ಬೋಧಿಸಿದ ಹರಿಸರ್ವೋತ್ತಮ ವಾಯುಜೀವೋತ್ತಮ : ಜೀವರಿಗೆ ದತ್ತಸ್ವಾತಂತ್ರ್ಯ ಮಾತ್ರ, ಜಗತ್ತು ಸತ್ಯ ಇತ್ಯಾದಿ ತತ್ವಗಳ ಪುಂಖಾನುಪುಂಖವಾಗಿ ಕೀರ್ತನೆಗಳ ಮೂಲಕ ಜನರತ್ತ ಹರಿದುಬಂದಿದೆ. ಕೇವಲ ಸಂಸ್ಕೃತ ಭಾಷೆಯಲ್ಲಿ ಮಾತ್ರವಿದ್ದು ವಿದ್ವಾಂಸರ, ಪಂಡಿತರ ಸ್ವತ್ತಾಗಿದ್ದ ಮಾಧ್ವತತ್ವ ಮೀಮಾಂಸೆಯನ್ನು ಅರ್ಥಮಾಡಿಸಲು ಅನೇಕ ವ್ಯಾಖ್ಯಾನಗಳೇ ಬಂದಿದ್ದವು. ಆ ವ್ಯಾಖ್ಯಾನಗಳಿಗೆ ವ್ಯಾಖ್ಯಾನುಗಳು ಹುಟ್ಟಿಕೊಂಡವು. ‘ಟೀಕಾಚಾರ್ಯ’ರೇ ಅವತರಿಸಿದ್ದರು. ಆದರೂ ಜನಸಾಮಾನ್ಯರು ದ್ವೈತತತ್ವ ವಿವರಣೆಗಳಿಂದ ದೂರವೇ ಉಳಿದಿದ್ದರು. ಪುರಂದರದಾಸರು ಆ ಆತ್ಮ-ಪರಮಾತ್ಮ ತತ್ವಗಳೆರಡರ ಸ್ವರೂಪವನ್ನು, ತಿರುಳನ್ನು ಎಷ್ಟು ಸರಳ ಮಾತುಗಳಲ್ಲಿ ಹೇಳಿ ಜನಸಾಮಾನ್ಯರಿಗೆ ಮನದಟ್ಟಾಗುವಂತೆ ಮಾಡಿದ್ದಾರೆ ನೋಡಿ :

ಎರಡೂ ಒಂದಾಗದು ರಂಗ||ಪ||
ಎರಡೂ ಒಂದಾಗದು ಎಂದೆಂದಿಗೂ ರಂಗ||ಅ.ಪ||

ಒಂದು ವೃಕ್ಷದಲ್ಲಿ ಎರಡು ಪಕ್ಷಿಗಳು
ಒಂದು ಗೂಡಿನಲ್ಲಿ ಇರುತಿಹವು
ಒಂದು ಪಕ್ಷಿ ಫಲಗಳನುಂಬುವು ಮ
ತ್ತೊಂದು ಫಲಂಗಳಮಣ್ಣದು ರಂಗ||೧||

ಹಲವು ಕೊಂಬೆಗೆ ಒಂದು ಹಾರಿತು ಒಂದು
ಹಲವು ಕೊಂಬೆಗೆ ಹಾರಲರಿಯದು
ಹಲವನೆಲ್ಲ ಒಂದು ಬಲ್ಲುದು ಒಂದು
ಹಲವನೆಲ್ಲವ ಅರಿಯದು ರಂಗ ||೨||

ನೂರೆಂಟು ಕೊಂಬೆಗೆ ಹಾರಿತು ಅದು
ಹಾರಿ ಮೇಲಕ್ಕೇರಿ ಮೀರಿತು
ಮೀರಿ ಪುರಂದರ ವಿಠ್ಠಲ ನಿಮ್ಮನು
ಸೇರಿ ಸುಖಿಯಾಗಿ ನಿಂತಿತು ರಂಗ||೩||

ದೇಶವೆಂಬ ವೃಕ್ಷದಲ್ಲಿ ಗೂಡುಕಟ್ಟಿ ಕುಳಿತ ಆತ್ಮ – ಪರಮಾತ್ಮವೆಂಬ ಎರಡು ಪಕ್ಷಿಗಳಲ್ಲಿ ಆತ್ಮಫಲಾನುಭವಿ ಪರಮಾತ್ಮ ನಿರ್ಲಿಪ್ತವೆಂಬ ವಿಚಾರಗಳನ್ನು ಸರಳ ಸುಲಭವಾಗಿ ಹೆಳಿರುವರು. ಆತ್ಮದ ಜನ್ಮಾಂತರಗಳ ಜಂಜಾಟ ಸವೆದು, ಅದು ಆ ಪರಮಾತ್ಮನ ಬಳಿ ಸೇರಿ ಮುಕ್ತಿಯನ್ನು ಪಡೆದು ಸುಖಿಯಾಗಿ ನಿಂತ ಬಗೆಯನ್ನು ವಿವರಿಸಿರುವರು. ಆತ್ಮ, ಪರಮಾತ್ಮ ಈ ಎರಡು ವಿಭಿನ್ನ ತತ್ವಗಳ ಐಕ್ಯ ಎಂದಿಗೂ ಸಾಧ್ಯವಿಲ್ಲವೆಂಬುದನ್ನು ಇಲ್ಲಿ ಸೂಚಿಸಿಬಿಟ್ಟಿದ್ದಾರೆ. ಅಂತೆಯೇ ಹರಿಸರ್ವೋತ್ತಮ ತತ್ವ. “ಡಂಗುರವ ಸಾರಿ ಹರಿಯ ಡಿಂಗರಿಗರೆಲ್ಲರು | ಭೂಮಂಡಲಕೆ ಪಾಂಡುರಂಗ ವಿಠ್ಠಲ ಪರದೈವವೆಂದು”, ಎಂದು ಜನಸಾಮಾನ್ಯರಿಗೆ ಚಿರಪರಿಚಿತವಾಗಿದ್ದ ಡಂಗುರ ಹೊಯ್ಯುವ ಕ್ರಿಯೆಯ ಮೂಲಕ ತಿಳಿಸಿಕೊಟ್ಟಿರುವರು. ಅಂತೆಯೇ ದತ್ತ ಸ್ವಾತಂತ್ರ್ಯದ ಬಗ್ಗೆ ಕನಕದಾಸರ ‘ತನು ನಿನ್ನದು ಜೀವನ ನಿನ್ನದು ಅನುದಿನದಲಿ ಬಾಹೋ ಸುಖದುಃಖ ನಿನ್ನದಯ್ಯಾ’ ಎನ್ನುವ ಕೀರ್ತನೆಯಲ್ಲಿ ನೋಡಬಹುದು. ‘ನೀನಲ್ಲದೆ ನರರು ಸ್ವತಂತ್ರರೇ?’ ಎಂಬ ಅವರ ಒಂದೇ ಒಂದು ಉದ್ಗಾರ ಹತ್ತಾರು ವ್ಯಾಖ್ಯಾನಗಳಿಗಿಂತ ನಿಚ್ಚಳವಾಗಿದೆ.

ಮೂರನೆಯದಾಗಿ ಉಪದೇಶಾತ್ಮಕ ಕೀರ್ತನೆಗಳನ್ನು ಗಮನಿಸಬಹುದು. ಸಮಾಜದಲ್ಲಿ ಬೇರೂರಿದ್ದ ಸ್ವಾರ್ಥ, ಸಣ್ಣತನ, ಅರ್ಥಲಾಲಸೆ, ಅಂಧಶ್ರದ್ಧೆ ಎಲ್ಲವನ್ನೂ ಬಹಳ ಹತ್ತಿರದಿಂದ ಗಮನಿಸಿದ್ಧ ಹರಿದಾಸರು ಅತ್ಯಂತ ಕಳಕಳಿಯಿಂದ ಕೀರ್ತನೆಗಳ ಮೂಲಕ ಅವುಗಳಿಗೆ ಪ್ರತಿಕ್ರಿಯಿಸಿರುವರು. ಜನತೆಯ ಮೌಢ್ಯ ಅಜ್ಞಾನಗಳಿಗೆ ಹರಿಭಕ್ತಿಯ ಬೆಳಕನ್ನು ಚೆಲ್ಲಿದ್ದಾರೆ. ಎಲ್ಲ ಲೌಕಿಕ ಸಮಸ್ಯೆಗಳಿಗೂ ತಾವು ಕಂಡುಕೊಂಡ ಹರಿಭಕ್ತಿಯ ಪರಿಹಾರವನ್ನು ಉಳಿದವರಿಗೂ ತೋರಿದ್ದಾರೆ. “ಸ್ನಾನ ಮಾಡಿರೋ ಜ್ಞಾನತೀರ್ಥದಲ್ಲಿ…”, “ಬಟ್ಟೆಯನು ಒಣಗಿಸಿ ಉಟ್ಟರೆ ಮಡಿಯಲ್ಲ. ಹೊಟ್ಟೆಯೊಳಗಣ ಕಾಮಕ್ರೋಧವ ಬಿಟ್ಟರದು ಮಡಿ”, “ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೇ”, “ಧರ್ಮವೆ ಜಯವೆಂಬ ದಿವ್ಯಮಂತ್ರ”, “ಕುಲ ಕುಲವೆಂದು ಹೊಡೆದಾಡದಿರಿ” – ಇಂತಹ ಅನುಭವದ ಮಾತುಗಳು ಕೀರ್ತನ ಸಾಹಿತ್ಯದಲ್ಲಡಗಿವೆ. ಸತ್ಯ, ಧರ್ಮ, ದಯೆ, ಅಹಿಂಸೆ, ದಾನವೇ ಮೊದಲಾದ ಮೌಲ್ಯಗಳನ್ನು ಅನುಸರಿಸಿ ಅದರಂತೆ ನಡೆದುಕೊಂಡಾಗ ಬಾಳು ಬಂಗಾರವಾಗುತ್ತದೆ; ಮಾನವ ಜನ್ಮ ಬಂದದ್ದು ಸಾರ್ಥಕ. “ಮಾನವ ಜನ್ಮ ದೊಡ್ಡದು ಇದ ಹಾನಿಮಾಡಲು ಬೇಡಿ ಹುಚ್ಚಪ್ಪಗಳಿರಾ”, “ಈಸಬೇಕು ಇದ್ದು ಜೈಸಬೇಕು ಹೇಸಿಗೆ ಸಂಸಾರದಲ್ಲಿ ಆಶ-ಲೇಶ ಮಾಡದ್ದಾಂಗ”, – ಇವು ಕೀರ್ತನೆಗಳುಭೋಧಿಸುವ ಜೀವನಧರ್ಮ. ಅಜ್ಞಾನಿಗಳು ಅನಕ್ಷರಸ್ಥರು ಲಕ್ಷ ಲಕ್ಷ ಸಂಖ್ಯೆಯಲ್ಲಿರುವ ಕನ್ನಡ ನಾಡು ತನ್ನ ಸಂಸ್ಕೃತಿ ಸಂಸ್ಕಾರಗಳನ್ನು ಉಳಿಸಿಕೊಂಡು ಬಂದಿರುವುದೇ ಇಂತಹ ಸಂತರ ಕೀರ್ತನೆ ಸಾಹಿತ್ಯದಿಂದ, ವಚನ ಸಾಹಿತ್ಯದಿಂದ. ಮೊಗಮೊಗೆದಷ್ಟೂ ಚಿಮ್ಮಿ ಹರಿಯುವ ಕನ್ನಡದ ತವನಿಧಿಗಳವು.

ಕೀರ್ತನೆ-ಸುಳಾದಿ-ಉಗಾಭೋಗಗಳು ಸಂಗೀತದ ಹಿನ್ನೆಲೆಯಲ್ಲಿ ರಚಿತವಾಗಿರುವುದರಿಂದ ಕಾವ್ಯಗಳಲ್ಲಿ ಪ್ರಯೋಗವಾಗಿರುವ ನಿಯತವಾದಛಂದೋಪದ್ಧತಿಗೂ ಇವುಗಳಿಗೂ ಅಂತರವಿದೆ.ಕನ್ನಡದ ಜೀವಾಳವಾದ ಆದಿಪ್ರಾಸ ಇವುಗಳಲ್ಲಿ ನಿಯತವಾಗಿ ಬರುತ್ತದೆ. ಈ ಕೃತಿಗಳೆಲ್ಲ ಬಾಯಿಂದ ಬಾಯಿಗೆ ಹರಿದು ಬಂದಿರುವುದರಿಂದ ಇವುಗಳ ಸ್ವರೂಪದಲ್ಲಿ ಅನೇಕ ಬದಲಾವಣೆಗಳು ತೋರಿಬಂದಿವೆ. ಈಗ ದೊರೆತಿರುವ ಹಸ್ತಪ್ರತಿಗಳಲ್ಲಿ ಬಹುತೇಕ ಕೃತಿಗಳು ಶಾಸ್ತ್ರೀಯ ಸಂಗೀತದ ರಾಗ-ತಾಳಗಳ ನಿರ್ದೇಶನವಿರುವುದಾದರೂ ನಮ್ಮ ಹಿರಿಯರು ಕೇವಲ ಒಂದು ಧಾಟಿಯಲ್ಲಿ ಒಂದು ಹಾಡನ್ನು ಹಾಡುತ್ತಾ ಬಂದಿರುವುದನ್ನು ನೋಡಬಹುದು. ಶಾಸ್ತ್ರೀಯ ಸಂಗೀತ ಬಾರದವರೂ ಈ ರಚನೆಗಳನ್ನು ಸುಲಭವಾಗಿ ಕಲಿಯಬಲ್ಲರು; ಹಾಡಿ ಜನತೆಯನ್ನು ನೇರವಾಗಿ ಮುಟ್ಟಬಲ್ಲರು. ಇದೇ ಕೀರ್ತನೆಗಳ ವೈಶಿಷ್ಟ್ಯ.

ಹೀಗೆ ಕನ್ನಡದಲ್ಲಿ ಕೀರ್ತನ ಸಾಹಿತ್ಯವು ಉಗಾಭೋಗ ಸುಳಾದಿಗಳನ್ನೂ ಗರ್ಭಿಕರಿಸಿಕೊಂಡು ಸು.೧೫ನೇ ಶತಮಾನದಲ್ಲಿ ಶ್ರೀಪಾದರಾಜರಿಂದ ಪ್ರಾರಂಭವಾಗಿ ವ್ಯಾಸರಾಯರು, ವಾದಿರಾಜರು, ಪುರಂದರದಾಸರೇ ಮೊದಲಾದ ಹರಿದಾಸರಿಂದ ಪೋಷಿತವಾಗಿ ಒಂದು ಸುದೀರ್ಘ ಪರಂಪರೆಯಾಗಿ ಬಳೆದು ಬಂದಿದೆ. ಇಂದಿಗೂ ಬೆಳೆಯುತ್ತಿದೆ; ‘ಕರ್ನಾಟಕ ಹರಿದಾಸ ಸಾಹಿತ್ಯ’ವೆಂದು ಕರೆಸಿಕೊಂಡಿದೆ. ಅಲ್ಲಲ್ಲಿ ಸಿಗುವ ಹರಿದಾಸರ ದಂಡಕ, ವೃತ್ತನಾಮ, ಕೋಲು ಹಾಡು, ಕೊರವಂಜಿ ಪದಗಳೂ ಈ ಕೀರ್ತನ ಸಾಹಿತ್ಯದ ವಲಯದೊಳಗೇ ಪರಿಗಣಿತವಾಗಿವೆ. ಕೇಳುಗರ ಹೃದಯದಲ್ಲಿ ಹರಿಭಕ್ತಿಯನ್ನು ನೆಲೆಗೊಳಿಸುವುದೇ ಈ ಕೀರ್ತನ ಸಾಹಿತ್ಯದ ಪರಮ ಗುರಿಯಾಗಿದೆ.

 

[1]ವಿವರಣೆಗಾಗಿನೋಡಿ : ಎಂ. ಚಿದಾನಂದಮೂರ್ತಿ, ಪೋರ್ವೋಕ್ತ, ಪು. ೨೧೫-೨೧೬.