I

ದಾಸರ ರಚನೆ ಭಾಷೆಯಲ್ಲಿ ಉದ್ದೇಶ ಪೂರ್ವಕವಾದ ಜಾಗರೂಕತೆ ಇರುತ್ತದೆ. ಸುಸೂತ್ರತೆ ಇರುತ್ತದೆ. ಅದರಲ್ಲಿ ಭಾಷಾಪ್ರಜ್ಞೆ ಹೆಚ್ಚು ಏಕಾಗ್ರತೆಯಿಂದ ಅರ್ಥಪೂರ್ಣವಾಗಿ ಕೆಲಸ ಮಾಡುತ್ತದೆ. ದಾಸರು ತಮ್ಮ ಕಾಲದ ವ್ಯಾವಹಾರಿಕ ಭಾಷೆಯನ್ನೇ ತಮ್ಮ ರಚನೆಗಳನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಬಳಸಿದ್ದಾರೆ. ಆ ಸಂದರ್ಭದ ಭಾಷೆಯಲ್ಲಿ ಒಂದು ಪುನರ್ ಸಂಯೋಜನ ಇರುತ್ತದೆ. ಅವರ ರಚನೆಗಳೊಳಗೆ ಪ್ರಾಸ, ಛಂದಸ್ಸು, ಅಲಂಕಾರಗಳ ಬಳಕೆಯ ಮೂಲಕ ಕೀರ್ತನೆಗಳ ಅಭಿವ್ಯಕ್ತಿಯ ಶಕ್ತಿ ಹೆಚ್ಚುತ್ತದೆ. ಭಾಷೆಗೆ ಒಂದು ಬಗೆಯ ಅಡಕತನದ ಸಿದ್ಧಿ ಪ್ರಾಪ್ತವಾಗುತ್ತದೆ. ಅಂದರೆ ಶೈಲಿಯ ಮುಖ್ಯ ತುಡಿತವೆಂದರೆ ಅನುಭವವನ್ನು ಹರಳು ಗಟ್ಟಿಸುವ ಪ್ರಯತ್ನ. ಅಲ್ಲಿ ದಾಸರ ಪ್ರತಿಭಾಶಕ್ತಿ ಮತ್ತು ವಸ್ತು ಪ್ರತಿರೂಪ ಭಾಷೆಯಲ್ಲಿ ಪಾಕಗೊಂಡಿರುತ್ತದೆ.

ಭಾಷೆಯ ಮೂಲಕ ಅಭಿವ್ಯಕ್ತಿಯನ್ನು ಕಾಣುವ ಕೀರ್ತನೆಗಳಲ್ಲಿ ಪದ, ವಾಕ್ಯಗಳ ವಿನ್ಯಾಸ, ಕಾಕು, ಸ್ವರಭಾವದ ಸಂಯೋಜನೆ ಇಲ್ಲೆಲ್ಲ ಹಲವು ಬಗೆಯ ಆಯ್ಕೆಗೆ ಅವಕಾಶವಿದೆ. ದಾಸರು ಕೀರ್ತನೆಗಳ ಮೂಲಕ ತಮ್ಮ ಪ್ರತಿಭೆಯ ಅವಿಷ್ಕರಣದಲ್ಲಿ ನಿಯಮಬದ್ಧವಾದ ಅಥವಾ ಸಿದ್ಧಮಾದರಿಯ ಭಾಷಾ ಪ್ರಯೋಗವನ್ನು ಮೀರಿ ನಡೆಯುತ್ತಾರೆ. ಕೀರ್ತನೆಗಳಲ್ಲಿ ಭಾಷೆ ಆಡು ಮಾತಾಡಿ ಬಂದಾಗ ಅದರ ಅರ್ಥಾಭಿವ್ಯಕ್ತಿಯ ಸಾಮರ್ಥ್ಯ ಹೆಚ್ಚುತ್ತದೆ. ಅಕ್ಷರಗಳು, ಸ್ವರಗಳು ಪುನರಾವರ್ತನೆಗೊಂಡಾಗ ಭಾವ ಜೀ ಕುತ್ತದೆ; ಅರ್ಥಹೊಮ್ಮುತ್ತದೆ.

ಜಾಲಿಯ ಮರದಂತೆ ಧರೆಯೊಳು ದುರ್ಜನರು
ಮೂಲಾಗ್ರ ಪರಿಯಂತ ಮುಳ್ಳು ಕೂಡಿಪ್ಪಂತೆ(ಪ)

ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿರು ಬಂದವರಿಗೆ ಹಣ್ಣು ಇಲ್ಲ
ಕುಸುಮವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ

ಪುರಂದರದಾಸ

ಕೀರ್ತನೆ ವಾಕ್ಯಗಳ ಅನುರೂಪತೆಯಿಂದ ಸಾಲುಗಳು ಒಂದು ಭಾಗ ಪುನರಾವೃತ್ತಿಯಾದರೆ ಒಂದು ಭಾಗ ಸ್ಥಿರವಾಗಿರುತ್ತದೆ. ವಾಕ್ಯ, ಪದಪುಂಜಗಳ ಭಾಗಗಳು ಪುನರಾವೃತ್ತಿಯ ಮೂಲಕ ಕೀರ್ತನೆಗಳ ರಚನೆಯಲ್ಲಿ, ಲಕ್ಷಣಗಳಲ್ಲಿ ಒಂದಾದ ಸಾವಕಾಶತೆ ಏರ್ಪಡುತ್ತದೆ. ಕೀರ್ತನೆಗಳು ಮುಖ್ಯವಾಗಿ ಭಕ್ತಿಯ ಅಭಿವ್ಯಕ್ತಿ ಎಂಬುದು ಸ್ಪಷ್ಟವಿದೆ. ಭಕ್ತಿ ಅವರಿಗೆ ಕೇವಲ ದೇವರ ಪೂಜೆಯ ವಿಧಾನವಾಗಿರಲಿಲ್ಲ ಅದು ಅವರ ಸಂವಹದ ಮಾಧ್ಯಮವೂ ಆಗಿದೆ. ಭಕ್ತಿಯ ಸ್ವರೂಪವನ್ನು ಹೇಳಲು ಕೆಲವು ದಾಸರು ಕೆಲವು ಉಪಮೆ-ರೂಪಕಗಳನ್ನು ಬಳಸಿದರೆ ಮತ್ತೆ ಕೆಲವು ದಾಸರು ಬೇರೆ ಉಪಮೆ ರೂಪಕಗಳನ್ನು ಬಳಸುತ್ತಾರೆ.

ಜನರ ನಡತೆ ಕೇಳಿರಯ್ಯ ಇಂಥ
ಜನರ ನೋಡಿ ನೀವು ಏನೆಂಬಿರಯ್ಯ||ಪ||

ತಾಯಿ ಗನ್ನವನಿಕ್ಕರಯ್ಯ, ಬಲು
ಬಾಯಮಾತಿಗೆ ಮರುಳಾಗುವರಯ್ಯ
ನ್ಯಾಯವೆಂಬುದು ಇಲ್ಲವಯ್ಯ
ಅನ್ಯಾಯವೆ ಗತಿಯೆಂದು ಸಾಧಿಪರಯ್ಯ

ಉತ್ತಮ ಸ್ತ್ರೀಯಳ ಬಿಟ್ಟು, ತನ್ನ
ವೃತ್ತಿಗಳೆಲ್ಲವ ಸೂಳೆಗೆ ಕೊಟ್ಟು
ಮತ್ತರೊಡನೆ ಕೂಡಿ ಕೆಟ್ಟು ಇಹ
ರುತ್ತಮರೆಂಬರೀ ಜಗದೊಳು ಮಟ್ಟು
                        ಪುರಂದರದಾಸ
ಅರಿತು ನಡೆಯಲು ಬೇಕು ನರಕಾಯವೆತ್ತಿದ ಮೇಲೆ
ಅರಿಯದಿದ್ದರೆ ನರಕವೇ ಪ್ರಾಪ್ತಿ||ಪ||

ದುರ್ಜನರ ಮನೆಯ ಪಾಯರಾನ್ನಕ್ಕಿಂತ
ಸಜ್ಜನರ ಮನೆಯ ರಬ್ಬಳಿಗೆ ಲೇಸು
ಹೆಜ್ಜೆಗೆ ಸಾವಿರ ಹೊನ್ನನಿತ್ತರೂ ಬೇಡಬಲು
ದುರ್ಜನರ ಸಂಗ ಬಲು ಭಂಗ ಹರಿಯೆ
                                    ಕನಕದಾಸ

ಇಂತಹ ಕೀರ್ತನೆಗಳಲ್ಲಿ ಶಬ್ದ-ಭಾವ, ಪ್ರತಿಮೆ, ಲಯ-ನಾದ ರಚನೆಗಳು ಪುನರಾವೃತ್ತಿಯಾಗುವುದನ್ನು ಕಾಣಬಹುದು. ಪುನರಾವೃತ್ತಿ ಕೀರ್ತನೆ ಶಾಬ್ದಿಕ ವಿನ್ಯಾಸದಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ಅಲ್ಲಿ ಪದಗಳ ಮತ್ತು ವಾಕ್ಯಾಂಗಗಳ ಸಮತೋಲನವನ್ನು ಗಮನಿಸಬಹುದಾಗಿದೆ. ಇದೆಲ್ಲ ಸಾಮೂಹಿಕ ವಚನ ಸಂಸ್ಕೃತಿಯೊಂದನ್ನು ಬೆಳೆಸುವ ಯೋಜನೆಯಾಗಿರುವಂತೆ ತೋರುತ್ತದೆ.

ಗಿರಡ್ಡಿಗೋವಿಂದರಾಜರು ಅಭಿಪ್ರಾಯಪಡುವಂತೆ “ಸಾಮಾನ್ಯವಾಗಿ ದಾಸರ ಕೀರ್ತನೆಗಳು, ಶಿವಶರಣ ಹಾಡುಗಳ ರಾಚನಿಕ ವಿನ್ಯಾಸ ಸಡಿಲ ವಾಕ್ಯವನ್ನು ಹೋತರೆ ವಚನಗಳ ರಾಚನಿಕ ವಿನ್ಯಾಸ ಬಿಗಿವಾಕ್ಯದ ರೀತಿಯನ್ನು ಹೋಲುತ್ತದೆ”೧[1]. ದಾಸರ ಹಾಡುಗಳಲ್ಲಿ, ಶಿವಶರಣರ ಸ್ವರ ವಚನಗಳಲ್ಲಿ ಹಾಡಿನ ಮುಖ್ಯ ಸಂದೇಶ ಆರಂಭದ ಪಲ್ಲವಿ, ಅನುಪಲ್ಲವಿಗಳಲ್ಲಿ ಅಡಗಿರುತ್ತದೆ. ನಂತರ ನುಡಿಗಳು ಏನಿದ್ದರೂ ಆ ಮುಖ್ಯ ಸಂದೇಶದ ಅರ್ಥವನ್ನು ವಿಸ್ತರಿಸುತ್ತ ಹೋಗುತ್ತವೆ. ಉದಾಹರಣೆಗೆ ಶ್ರೀಪಾದರಾಜರ ಕೀರ್ತನೆ ಹೀಗಿದೆ :

ನಾನೀನಗೇನು ಬೇಡುವುದಿಲ್ಲ ಎನ್ನ||ಪ||
ಹೃದಯ ಮಂಟಪದೊಳು ನಿಂತಿರೊ ಕೃಷ್ಣ ||ಅ.ಪ||

ಶಿರ ನಿನ್ನ ಚರಣದಲ್ಲೇರಗಲಿ ಎನ್ನ
ಚಕ್ಷುಗಳು ನಿನ್ನ ನೋಡಲಿ
ನಾಸಿಕ ನಿರ್ಮಾಲ್ಯ ಘ್ರಾಣಿರಲಿ ಕೃಷ್ಣ
………………………………..
……………………………….

ಭಕ್ತ ಜನರ ಸಂಗ ದೊರಕಲಿ ರಂಗ
ವಿಠಲ ನಿನ್ನದಯವಾಗಲಿ ಹರಿಯೆ

“ನಾ ನೀನಗೇನು ಬೇಡುವುದಿಲ್ಲ ಎನ್ನ ಹೃದಯ ಮಂಟದೊಳು ನಿಂತರೊ ಕೃಷ್ಣ” ಎಂಬ ಪಲ್ಲವಿ ಅನುಪಲ್ಲವಿಯಲ್ಲಿಯೇ ಸಕಲ ಇಂದ್ರಿಯಗಳನ್ನು ನಿಗ್ರಹಿಸಿ ಅವುಗಳನ್ನು ಶ್ರೀ ಹರಿಸ್ಮರಣೆಯಲ್ಲಿ ತೊಡಗಿಸಿದಾಗ ಪರಮಾನಂದವಾಗುತ್ತದೆ ಎಂಬ ಧ್ವನಿಯಿದೆ. ಪ್ರತಿಯೊಂದು ನುಡಿಯ ಕೊನೆಗೂ ಪಲ್ಲವಿ – ಅನುಪಲ್ಲವಿಗಳು ಮತ್ತೆ ಮತ್ತೆಬಂದು ಕೀರ್ತನೆಯ ಶಿಲ್ಪಕ್ಕೆ ಅರ್ಥತುಂಬುತ್ತವೆ. ಇದಕ್ಕೆ ವಿರುದ್ದವಾಗಿ ಕೀರ್ತನೆಗಳು ತಮ್ಮ ಮುಖ್ಯ ಸಂದೇಶವನ್ನು ಕೊನೆಯ ಚರಣದಲ್ಲಿ ಸ್ಫೋಟಿಸುತ್ತದೆ. ಕೀರ್ತನೆಯ ಉಳಿದ ಸಾಲುಗಳು ಕೊನೆಯ ಸಾಲಿನ ಬರುವುವಿಕೆಗೆ ತಕ್ಕ ರಾಚನಿಕ ವಾತಾವರಣವನ್ನು ನಿರ್ಮಿಸುತ್ತದೆ. ಆ ಮುಖ್ಯ ಸಂದೇಶ ಬರುವುದನ್ನು ತಡೆಹಿಡಿದು, ಸಹೃದಯರ ಕುತೂಹಲವನ್ನು ಕೆರಳಿಸುತ್ತದೆ.

– ಆಚಾರವಿಲ್ಲದ ನಾಲಗೆ
– ಈಸಬೇಕು ಇದು ಜಯಿಸಬೇಕು
– ಕಲ್ಲುಸಕ್ಕರೆ ಕೊಳ್ಳಿರೋ
– ಕುರುಡು ನಾಯಿ ತಾಸಂತೆಗೆ ಬಂದಂತೆ
– ಗುರುವಿನ ಗುಲಾಮನಾಗುವ ತನಕ
– ಜಾಲಿಯ ಮರದಂತೆ ಧರೆಯೊಳು ದುರ್ಜನರು
– ಡೊಂಕು ಬಾಲದ ನಾಯಕರೆ
– ಬೇವು ಬೆಲ್ಲದೊಳಿಡಲೇನು ಫಲ
– ಕುಲಕುಲಕುಲವೆನ್ನುತಿಹರು

ಈ ಸಾಲುಗಳೇ ಕೀರ್ತನೆಗಳ ಒಟ್ಟುಸಂದೇಶಕ್ಕೆ ಪುಷ್ಠಿಕೊಡುತ್ತವೆ. ಮೊದಲಿನ ಸಾಲು ಉಳಿದ ಸಾಲಿಗಿಂತ ರಚನೆ ಮತ್ತು ಲಯದಲ್ಲಿ ಭಿನ್ನವಾಗಿರುತ್ತದೆ. ಅಂಕಿತವು ಕೊನೆಯ ಸಾಲಿನ ಲಯ ಮತ್ತು ವಾಕ್ಯರಚನೆಯನ್ನು ಬದಲಿಸಲು ಮತ್ತು ಆ ಸಾಲನ್ನು ದೀರ್ಘಗೊಳಿಸಲು ನೆರವಾಗುತ್ತದೆ. ಹೀಗೆ ದಾಸರ ಹಾಡುಗಳಲ್ಲಿ ಮುಖ್ಯ ಸಂದೇಶ ಕೊನೆಗೆಬರುತ್ತದೆ. ಶರಣರ ವಚನಗಳಲ್ಲಿ ಅದು ಮೊದಲಿಗೆ ಬರುತ್ತದೆ. ಅವುಗಳ ಅನುಭವವನ್ನು ಗ್ರಹಿಸುವ ಸ್ವರೂಪ, ಪ್ರಕ್ರಿಯೆಗಳೇ ಅದಕ್ಕೆ ಕಾರಣವಾಗಿವೆ. ಪುರಂದರದಾಸರ ಕೀರ್ತನೆಗಳಲ್ಲಿ ಹೆಚ್ಚಿನ ಆತ್ಮೀಯತೆ ಕಾಣುತ್ತದೆ ಅವರ ಕೆಲವು ಕೀರ್ತನೆಗಳಲ್ಲಿ ವೈರುಧ್ಯವು ಇರುತ್ತದೆ.

ಆವ ಕರ್ಮವೊ ಇದು ಆವ ಧರ್ಮವೊ
ಆವ ಕರ್ಮವೆಂದರಿಯೆ ಹಾರುವರಿವರು ಬಲ್ಲರೆ||ಪ||

ಸತ್ತವನು ಎತ್ತಪೋದ
ಸತ್ತು ತನ್ನ ಜನ್ಮಕೆ ಪೋದ
ಸತ್ತವನು ಉಣ್ಣುವನೆಂದು
ನಿತ್ಯ ಪಿಂಡವಿಕ್ಕುತೀರಿ

ಎಳ್ಳು ದರ್ಭೆ ಕೈಲಿಪಿಡಿದು
ಪಿತರ ತೃಪ್ತಿಪಡಿಸುತೀರಿ
ಎಳ್ಳು ಮೀನು ನುಂಗಿ ಹೋಯಿತು
ದರ್ಭೆ ನೀರೊಳು ಹರಿದು ಹೋಯಿತು
                ಕನಕದಾಸ  

ಇಂತಹ ವೈರುಧ್ಯಗಳು ಕೀರ್ತನೆಗಳು ಭಾವವನ್ನು ತೀವ್ರಗೊಳಿಸುತ್ತವೆ. ಆ ಜೋಡಿಗಳಲ್ಲಿ ಕೀರ್ತನಕಾರರು ‘ಅ’ ಭಾಗವನ್ನು ನಿರಾಕರಿಸಿ ‘ಆ’ ಭಾಗವನ್ನು ಎತ್ತಿ ಹಿಡಿಯುತ್ತಾರೆ. ಆ ಕೀರ್ತನ ಶಿಲ್ಪದ ಹಿಂದೆ ಸಾಮಾಜೀಕರಣದ ತತ್ವ ಅಡಗಿದೆ. ಕೀರ್ತನೆಗಳನ್ನು ಓದುವಾಗ ಅಥವಾ ಹಾಡುವಾಗ ಉಚ್ಚಾರದಲ್ಲಿ ಕಂಡು ಬರುವ ಧ್ವನಿಯ ಏರಿಳಿತಕ್ಕೆ ತಕ್ಕಂತೆ ಅರ್ಥದಲ್ಲಿಯಾ ಏರಿತಳಿತವಾಗುವುದು.

ಮಾವನಾ ಮನೆಯೊಳಗೆ ಇರಬಹುದೆ ಕೋವಿದರು||ಪ||
ಹಾವು ಹಿಡಿಯಲಿಬಹುದು ಹರಣ ಕೊಡಲಿಬಹುದು
ಬೇವ ಕಿಚ್ಚನು ಹಿಡಿದು ನುಂಗಬಹುದು
ಭಾಮೆಯಳ ತಂದೆ ಮನೆಯಲ್ಲಿ ಜೀವಿತಕ್ಕಿಂತ
ಸಾಯುವುದೇ ಲೇಸು ಅಭಿಮಾನಿಗಳಿಗೆ

ಒಂದೇ ಕೀರ್ತನೆ ಉದ್ಗಾರ ವಿಟ್ಟರೆ ಒಂದು ಅರ್ಥ, ಪ್ರಶ್ನೆಯಿಟ್ಟರೆ ಇನ್ನೊಂದು ಅರ್ಥ ಹೊರಡುತ್ತದೆ. ಕೀರ್ತನೆಗಳಲ್ಲಿ ಗದ್ಯದ ಸರಳತೆಯಿದೆ; ಪದ್ಯದಲಯವಿದೆ. ಅವು ಭಾವಗೀತೆಯಂತೆ ಸ್ವತಂತ್ರ. ದಾಸರು ಶಿಷ್ಟ ಮತ್ತು ವ್ಯಾವಹಾರಿಕ ಭಾಷೆಯ ಶಬ್ದಸಾಮಗ್ರಿಗಳನ್ನು ಧಾರಾಳವಾಗಿ ಬಳಸಿಕೊಳ್ಳುವುದರಿಂದ ಅವರ ಶೈಲಿಗೆ ಜೋರು – ಹರುಷಗಳ ನೈಜತೆ ಒದಗಿದೆ. ಪುಟ್ಟಪುಟ್ಟ ವಾಕ್ಯಗಳ ರಚನೆ ಕೀರ್ತನೆಗಳ ವೈಶಿಷ್ಟ್ಯ. ದಾಸರು ತಮ್ಮ ಪರಿಸರದ ರೂಪಕಗಳನ್ನು ಕೀರ್ತನೆಗಳ ರಚನೆಯಲ್ಲಿ ಪೋಣಿಸುತ್ತಾರೆ.

ಕುರುಡು ನಾಯಿ ತಾ ಸಂತೆಗೆ ಬಂತಂತೆ
ಅದು ಏತಕೆ ಬಂತೊ
ಖಂಡ ಸಕ್ಕರೆ ಹಿತವಿಲ್ಲವಂತೆ
ಖಂಡ ಎಲುಬು ಕಡಿದಿತಂತೆ
ಹೆಂಡದಿ ಮಕ್ಕಳ ನೆಚ್ಚಿತಂತೆ
ಕೊಂಡು ಹೋಗುವಾಗ ಯಾರಿಲ್ಲಂತೆ
ಪುರಂದರದಾಸರು

ಸಾಮಾನ್ಯರಿಗೆ ಅದರಲ್ಲಿಯೂ ಅಂಗವಿಕಲರಿಗೆ ಕುರುಡು ನಾಯಿಯ ದೃಷ್ಟಾಂತದ ಮೂಲಕ ಆಧ್ಯಾತ್ಮದ ರಹಸ್ಯವನ್ನು ಸುಲಭವಾಗಿ ಬೋಧಿಸಬಹುದೆಂದೂ ಅವರಿಗೆ ಬೇರೆ ಭಾಷೆ ಅರ್ಥವಾಗುವುದಿಲ್ಲವೆಂದು ಪುರಂದರದಾಸರು ತಿಳಿದಿದ್ದರು. ಅವರವರ ಭಾಷೆಯಲ್ಲಿ ನೀಡುವ ಭೋಧನೆ ಪರಿಣಾಮಕಾರಿಯಾಗುತ್ತದೆಂಬ ಆಧುನಿಕ ಶೈಕ್ಷಣಿಕ ಸಿದ್ಧಾಂತವು ೧೬-೧೭ನೇ ಶತಮಾನದ ದಾಸರಿಗೆ ಪರಿಚಯವಾಗಿತ್ತೆಂಬುದು ಸ್ಪಷ್ಟವಾಗುತ್ತದೆ. ಇಂತಹ ಹಲವಾರು ಕೀರ್ತನೆಗಳು ಕನ್ನಡದ ಶಕ್ತಿಯನ್ನು ಹೆಚ್ಚಿಸಿ, ಶೈಲಿಯ ವೈಶಿಷ್ಟವನ್ನುಳಿಸಿವೆ. ಅನಾಯಾಸವಾಗಿ ಮಾಡುವ ಪ್ರಾಸಗಳ ವಿನ್ಯಾಸ ಭಾಷೆಗೆ ಅಪೂರ್ವ ಸೌಂದರ್ಯವನ್ನೊದಗಿಸಿವೆ. ಕೆಲವು ಕೀರ್ತನೆಗಳಲ್ಲಿಯ ವಾಕ್ಯ ಭಾಗಗಳು ಪುನರುಕ್ತಿಯಾಗಿವೆ.

ತುರುಕರು ಕರೆದರೆ ಉಣಬಹುದಣ್ಣ
ತುರುಕರು ಕರೆದರೆ ಅತಿ ಪುಣ್ಯವಣ್ಣ
ತುರುಕರಿಂದ ಮುಟ್ಟುಮುಡಿ ಬಿಟ್ಟು ಹೋಗೋದು
ತುರುಕರಿಂದ ಎಂಜಲು ಹೋಗೋದು
ತುರುಕರ ಕೂದಲು ತುರುಬಿಗೆ ಸುತ್ತಿದರೆ
ಎಣಿಕೆಯಿಲ್ಲದ ಮುತ್ತೈದೆಯರಣ್ಣ
ತುರುಕರಿಂದ ಸ್ವರ್ಗ ಸಾಧನವಾಗೋದು
ತುರುಕರಿಂದ ನರಕ ದೂರವಯ್ಯ
ತುರುಕರು ಬಂದರೆ ನರಕ್ಕವೆ ಏಳಬೇಕು
ತುರುಕರ ಪೂಜೆ ಹರಿ ಒಲಿವೆ.
                   ಪುರಂದರದಾಸರು

ಈ ಕೀರ್ತನೆಯಲ್ಲಿ ತುರುಕರು ಈ ಪದ ರಚನೆ ಸಾಕಷ್ಟು ಸಾರಿ ಪುನರಾವರ್ತನೆಯಾಗಿದೆ. ಕೀರ್ತನೆಯ ಉದ್ದಗಲಕ್ಕೂ ಪ್ರಾಸಗಳನ್ನು ವಿವಿಧ ರೀತಿಯಲ್ಲಿ ಸಂಯೋಜಿಸಲಾಗಿದೆ. ಲಯ ವಿನ್ಯಾಸ, ಶಬ್ದಗಳ ಸಮತೋಲನ ನಿಖರತೆ, ಹ್ರಸ್ವತೆ, ಪದಗಳ ಆ ವೃತ್ತತೆ, ಪ್ರಾಸಾನುಪ್ರಾಸದ ಬಿಗಿ ಮುಂತಾದ ಗುಣಗಳಿಂದಾಗಿ ಕೀರ್ತನೆಯ ಶ್ರುತಿ ಅನುದಾತ್ತವಾಗಿದೆ. ಇದರಿಂದಾಗಿ ಲಯದಲ್ಲಿ ಒಂದು ಬಗೆಯ ಉಯ್ಯಾಲೆ ಜೀಕಿದ ಪರಿಣಾಮ ಉಂಟಾಗಿದೆ. ಪುರಂದರ ದಾಸರಾದಿ ದಾಸರು ಲಯಾತ್ಮಕ ಗದ್ಯವನ್ನೇ ವಿಶಿಷ್ಟ ರೀತಿಯಲ್ಲಿ ಪರಿಷ್ಕರಿಸಿ ವಾಕ್ಯ ರೀತಿಯಲ್ಲಿ ವಿನ್ಯಾಸಗೊಳಿಸಿ ಮುಕ್ತಕರೂಪದಲ್ಲಿ ರಚಿಸಿದರು.

ಪುರಂದರದಾಸರಾದಿ ದಾಸರು ತಮ್ಮ ಅಭಿವ್ಯಕ್ತಿಯಲ್ಲಿ ಶಿಷ್ಟ (ಗ್ರಾಂಥಿಕ) ಮತ್ತು ವ್ಯಾವಹಾರಿಕ ಶೈಲಿಯನ್ನು ಬಳಸಿದ್ದಾರೆ. ಗ್ರಾಂಥಿಕ ಶೈಲಿಯು ಬರಹದ ಭಾಷೆಗೆ ನಿಕಟವಾಗಿರುತ್ತದೆ. ಮತ್ತು ಔಪಚಾರಿಕ ಭಾಷಿಕ ಸಂದರ್ಬದಲ್ಲಿ ಅದು ಬಳಕೆಯಾಗುತ್ತದೆ. ವ್ಯಾವಹಾರಿಕ ಶೈಲಿಯು ಮಾತು ಮತ್ತು ಬರವಣಿಗೆಯಲ್ಲಿ ಪರಸ್ಪರ ಆತ್ಮೀಯ ಸಲುಗೆ ಇರುತ್ತದೆ. ಅಲ್ಲಿ ಆಡುಮಾತಿನ ಬಳಕೆ ಹೆಚ್ಚಿರುತ್ತದೆ.

ಗ್ರಾಂಥಿಕ ಶೈಲಿ
ಭಾಷೆ ಹೀವರ ಸಂಗವಭಿಮಾನ ಭಂಗ
ಬೇಸತ್ತು ಬೇಲಿಯ ಮೇಲೆರಗಿದಂತೆ
ಹಸಿವೆಗಾರದೆ ಬೆಕ್ಕು ಹತ್ತಿಯನು ಮೆದ್ದಂತೆ
ತೃಷೆಗಾರದೆ ಜೋಗಿ ತೆವರ ತೋಡಿದಂತೆ
ಬಿಸಿಗಾರದೆ ಕೋತಿ ಬಂಡೆ ಮೇಲ್ಕುಳಿತಂತೆ
ಕುಸಬಿಯ ಹೊಲದಲ್ಲಿ ಕಳ್ಳಹೊಕ್ಕಂತೆ
                          ಪುರಂದರದಾಸ

ವ್ಯಾವಹಾರಿಕ ಶೈಲಿ
ಡೊಂಕುಬಾಲದ ನಾಯಕರೆ ನೀವೀನೀನೂಟವ ಮಾಡಿದಿರಿ
ಕಣಕ ಕುಟ್ಟೋ ಅಲ್ಲಿಗೆ ಹೋಗಿ
ಹಣಿಕಿ ಇಣಿಕಿ ನೋಡುವಿರಿ
ಕಣಕ ಕುಟ್ಟೋ ಒನಕೆಲೆ ಬಡಿದರೆ
ಕುಂಯಿ ಕುಂಯಿ ರಾಗವ ಹಾಡುವಿರಿ
ಪುರಂದರದಾಸರು

ವ್ಯಾವಹಾರಿಕ ಶಿಷ್ಟಶೈಲಿ
– ಮಡಿಮಡಿಯೆಂದು ಮುಮ್ಮಾರು ಹಾರುತಿ
ಮಡಿ ಎಲ್ಲಿ ಬಂತೋ ಬಿಕನಾಸಿ

– ಮಾನಭಂಗವ ಮಾಡಿ ಮತ್ತೆ ಉಪಚಾರಗಳ
ಏನು ಮಾಡಿದರಲ್ಲಿ ಇರಬಾರದಯ್ಯ

– ಮಾತಿಗೆ ಬಾರದ ವಸ್ತು ಬಿಹಳಿದ್ದರೇನು
ಹೋತಿನ ಕೊರಳೊಳಗೆ ಮಾಲೆ ಇದ್ದರೇನು

– ಮುಸುರೆ ತೊಳೆಯಬೇಕು ಈ ಮನಸಿನ
ಮುಸುರೆ ತೊಳೆಯಬೇಕು

– ಹಣವೆ ನಿನ್ನ ಗುಣವೇನು ಬಣ್ಣಿಪೆನೊ
ಹಣವಿಲ್ಲದವರೊಬ್ಬ ಹೆಣವೇ ಸರಿಕಂಡ್ಯಾ

– ತಾಳುವಿಕೆಗಿಂತ ತಪವು ಇಲ್ಲ
ಕೇಳಬಲ್ಲವರಿಗೆ ಹೇಳುವನು ಸೊಲ್ಲ

– ಸಂಸಾರವೆಂಬ ಸಾಗರವಸುತ್ತರಿಸುವೊಡೆ
ಕಂಸಾರಿ ನಾಮವೊಂದೇ ಸಾಕು ಮನವೇ

ದಾಸರು ಆಯಾ ಸಾಮಾಜಿಕ ಸಂದರ್ಭಗಳಿಗೆ ತಕ್ಕಂತೆ ಮೇಲಿನ ಭಾಷಿಕ ಶೈಲಿಯ ಪ್ರಭೇದಗಳನ್ನು ತಮ್ಮ ಅಭಿವ್ಯಕ್ತಿಯಲ್ಲಿ ಬಳಸಿದ್ದಾರೆ. ಅನುಕೀರ್ತನ ವಚನದಲ್ಲಿ ಮಹತ್ವದ ಘಟಕಗಳಾಗಿವೆ. ಪುರಂದರದಾಸರ ಕೀರ್ತನೆಯು ಒಂದರಲ್ಲಿಯೇ ಗ್ರಾಂಥಿಕ ಮತ್ತು ವ್ಯಾವಹಾರಿಕ ಶೈಲಿಯನ್ನು ಗುರುತಿಸಬಹುದು.

ಹೆತ್ತತಾಯ್ತಂದೆಗಳ ಚಿತ್ತವನೋಯಿಸಿ
ನಿತ್ಯದಾನವ ಮಾಡಿ ಫಲವೇನು
ಸತ್ಯಸದಾಚಾರ ಇಲ್ಲದವನು ಜಪ
ಹತ್ತು ಸಾವಿರ ಮಾಡಿ ಫಲವೇನು

ತನ್ನ ಸತಿಸುತರು ಬಂಧುಗಳು ನೋಯಿಸಿ
ಚಿನ್ನದಾನವ ಮಾಡಿ ಫಲವೇನು
ಬಿನ್ನಣದಿಂದಲಿ ದೇಶದೇಶವ ತಿರುಗಿ
ಅನ್ನದಾನ ಮಾಡಿ ಫಲವೇನು
ಪುರಂದರದಾಸ

ದಾಸರು ತಮ್ಮ ಕೀರ್ತನೆಗಳಲ್ಲಿ ವಿವಿಧ ಸಾಮಾಜಿಕ ಶೈಲಿಯನ್ನು ಬಳಸಿದ್ದಾರೆ. ಅಲ್ಲಿಯ ತಾತ್ವಿಕ ಅರ್ಥ ಇನ್ನೇನೋ ಇರಬಹುದು. ಆದರೆ ಭಾಷಿಕ ಬಳಕೆಯಲ್ಲಿ ಒಂದುಕತೆ, ಘಟನೆ, ಸಾದೃಶ್ಯಗಳು ಹೇಗೆ ವ್ಯಕ್ತಗೊಂಡಿರುತ್ತವೆ ಎಂಬ ಅಂಶವೇ ಇಲ್ಲಿ ಮುಖ್ಯವಾಗಿರುತ್ತದೆ. ದಾಸರು ತಮ್ಮ ಅಭಿವ್ಯಕ್ತಿಯಲ್ಲಿ ತಮ್ಮ ಕಾಲದಲ್ಲಿ ಬಳಕೆಯಾದ ಅಥವಾ ತಾವೇ ನಿರ್ಮಿಸಿದ ಜಾನಪದ ಪ್ರಕಾರಗಳನ್ನು ಕೀರ್ತನೆಗಳಲ್ಲಿ ಪೂಜಿಸಿದ್ದಾರೆ. ಇದರಿಂದ ಅವರ ಕೀರ್ತನೆಗಳಿಗೆ ಸಾಂಸ್ಕೃತಿಕ ಅನನ್ಯತೆ ಪ್ರಾಪ್ತವಾಗಿದೆ.

– ಬಂಜೆ ಬೇನೆಯನರಿವಳೇ ?
– ಮಲತಾಯಿ ಮುದ್ದ ಬಲ್ಲಳೇ ?
– ನೊಂದ ನೋವ ನೋಯದವರೆತ್ತ ಬಲ್ಲರು ?
ಪುರಂದರದಾಸರು

ಇದರಂತೆ ದಾಸರು ತಮ್ಮ ತಮ್ಮ ಕೀರ್ತನೆಗಳಲ್ಲಿ ಗಾದೆಗಳನ್ನು ಬಳಸಿದ್ದಾರೆ

– ಊರಸೀರೆಗೆ ಅಗಸ ತಡೆಬಡೆಗೊಂಬಂತೆ
– ಹೆಂಡದ ಮಡಿಕೆಯ ಹೊರಗೆ ತೊಳೆದಂತೆ
– ಓಡೆತ್ತ ಬಲ್ಲುದು ಅವಲಕ್ಕಿಯ ಸವಿಯ ?
– ಬಳ್ಳಿಗೆ ಕಾಯಿ ದಿಮ್ಮೆತ್ತೇ ?
– ಹಾಲಹರವಿಯ ಮೇಲೆಮಜ್ಜಿಗೆಯ ತುಂಬಿಸಿದರೇನು ?
– ಹೆಪ್ಪಾಗಬಲ್ಲುದೆ ಸಮ್ಮಿಶ್ರಮದಿಂದಲ್ಲದೆ

ತಮ್ಮ ಮಾತಿಗೆ ಅಭಿಕೃತತೆ ಬರುವುದು ಗಾದಾ ಬಳಕೆಯಿಂದ ಎಂದು ಅವರು ಭಾವಿಸಿದ್ದರು. ಗಾದೆ ಬಳಕೆಯಿಂದ ಅಭಿವ್ಯಕ್ತಿಗೆ ಸಂಕ್ಷಿಪ್ತತೆ, ಬೆಡಗು ಹಾಗೂ ವ್ಯಂಜಕ ಶಕ್ತಿಬರುತ್ತದೆ. ಗಾದೆಗಳಂತೆ ಕೀರ್ತನೆಗಳಲ್ಲಿ ನುಡಿಗಟ್ಟುಗಳೂ ದೊಡ್ಡ ಪ್ರಮಾಣದಲ್ಲಿ ಕಾಣಿಸುತ್ತವೆ.

– ಮೂಗು ಕೊಯ್ಯದೆ ಮಾಣ್ಪನೆ ?
– ತಲೆದಂಡ, ತಲೆದಂಡ
– ಕೊಂಬು ಮೆಟ್ಟಿಕೂಗು
– ಸೆರಗು ಬಿಡುಮರುಳೆ; ಹಲ್ಲು ಕಳೆವರು
– ಸೆರಗು ಹಾಸುವವಳು
– ಕೆನ್ನೆವಾರೆಸೀಳು, ನೂರು ಓದು ನೂರು ಕೇಳು

ಇಂತಹ ನುಡಿಗಟ್ಟುಗಳಲ್ಲಿ ಅಲ್ಲಿಯ ಪದಗಳು ನೀಡುವ ಅರ್ಥಕ್ಕಿಂತ ಭಿನ್ನವಾದ ಅರ್ಥಕೊಡುತ್ತವೆ. ನುಡಿಗಟ್ಟುಗಳ ಬಳಕೆಯಿಂದ ಕೀರ್ತನೆಗಳ ಧ್ವನಿಶಕ್ತಿ ಹೆಚ್ಚುತ್ತದೆ; ಕಾವ್ಯಾತ್ಮಕತೆ ಹಿಗ್ಗುತ್ತದೆ. ಭಾಷೆಯ ಕಸುವು ಮಿಗಿಲಾಗುತ್ತದೆ. ದಾಸರು ತಮ್ಮ ಅಂತರಂಗದ ಅಮೂರ್ತ ಅನುಭವವನ್ನು ಮೂರ್ತಗೊಳಿಸುವ ಕಾರ್ಯವನ್ನು ಪ್ರತಿಮೆಗಳ ಮೂಲಕ ಮಾಡಿದ್ದಾರೆ. ಇದರಿಂದ ಕಾವ್ಯಭಾಷೆಗೆ ಮೊನಚು ಏರ್ಪಡುತ್ತದೆ. ಅರ್ಥಸ್ವಾರಸ್ಯ ಹೆಚ್ಚುತ್ತದೆ. ಕೀರ್ತನೆ ಭಾಷೆ ಅಡಕವಾಗುತ್ತದೆ.

ನಿಮ್ಮ ಬೇರಬಲ್ಲವರಿಗೆ ಎಲೆಯತೋರಿ
ಆಳವಾಡಿ ಕಾಡುವರೆ
ವಿಜಯದಾಸರು

ಹೂವಿನ ಪರಿಮಳದ ತುಂಬಿಯಲ್ಲದೆ
ಹೊರಗಣ ನೊಣವೆತ್ತ ಬಲ್ಲುದೋ
           ಕನಕದಾಸ

ಉರಿವ ಕಿಚ್ಚಿಗೆ ಮೈಯೆಲ್ಲ ಬಾಯಿ
ಗೋಪಾಲದಾಸರು

ಉರಿ ನೀರು ಕುಂಭದಂತೆ ಆಗಬಲ್ಲದೆ ಕಾಯಿಲಿಂಗ ಸಂಬಂಧಿ
ಮೋಹನದಾಸರು

ದಾಸರ ಭಾವನೆಗಳು ಕೀರ್ತನೆ ಸಂಯೋಜನೆಯ ಕ್ರಿಯೆಯಲ್ಲಿ ಪ್ರತಿಮೆಗಳ ಮೂಲಕ, ಸಸ್ಯ, ಪ್ರಾಣಿ, ಸಾಮಾಜಿಕ ವಸ್ತುವನ್ನು ಪ್ರತಿಮೆ ಮೂಲಕ ಬಿಂಬಿಸುತ್ತಾರೆ. ಮಾತನ್ನು ಪರಿಣಾಮಕಾರಿಯಾಗಿ ರೂಪಿಸುವಲ್ಲಿ, ಅಮೂರ್ತ ಅನುಭವವನ್ನು ಮೂರ್ತಗೊಳಿಸುವಲ್ಲಿ ಪ್ರತಿಮೆಗಳು ಪ್ರಮುಖ ಪಾತ್ರವಹಿಸುತ್ತವೆ. ಕೀರ್ತನೆಗಳಲ್ಲಿ ಗಾದೆ, ನುಡಿಗಟ್ತು, ಪ್ರತಿಮೆಗಳಂತೆ ಅನುಕರಣ ವಾಚಕಗಳು, ಆಯಾ ಸನ್ನೀವೇಶವನ್ನು ಬಿಂಬಿಸುವಾಗ ಜೀವನಾಡಿಯಂತೆ ಪ್ರವೇಶಿಸಿ ಕೀರ್ತನೆಗಳಿಗೆ ಕಳೆತರಲು ಸಹಾಯಕವಾಗಿವೆ.

ಮಡಿಮಡಿಮಡಿಯೆಂದಡಿಗಡಿಗಾರುತಿ
ಮಡಿಮಾಡುವ ಬಗೆ ಬೇರುಂಟು
ಪುರಂದರದಾಸ

ಇಂತಹ ಉದಾಹರಣೆಗಳನ್ನು ನೋಡಿದಾಗ ಅನುಕರಣ ವಾಚಕ ಶಬ್ದಗಳು ಕ್ರಿಯೆಯನ್ನು ಅಭಿನಯಿಸುವಂತೆ ಭಾಸವಾಗಿ ಕೀರ್ತನೆಯ ಸೌಂದರ್ಯವನ್ನು ಹೆಚ್ಚಿಸಿವೆ. ಅವು ಕಲಾತ್ಮಕವಾಗಿ, ಸಹಜವಾಗಿ ಮೂಡಿಬಂದಿವೆಯೇ ಹೊರತು ಹೊರೆಯಾಗಿ ಬಂದಿಲ್ಲ. ಇದು ಕೀರ್ತನೆ ಶೈಲಿಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ.

II

ಹರಿದಾಸರು ಅಂದಿನ ಸಮಾಜದ ಅಗತ್ಯಕ್ಕೆ ತಕ್ಕಂತೆ ಆಡು ಭಾಷೆಯನ್ನು ಬಳಸಿದರು. ವಚನ ಸಾಹಿತ್ಯದಿಂದ ಭಾಷೆಯ ಬಳಕೆ ಕುರಿತು ಹರಿದಾಸರು ಅರಿತುಕೊಂಡಿದ್ದರು. ಪಂಡಿತ ಭಾಷೆಯಿಂದ ಜನಭಾಷೆಯೆಡೆಗೆ ಹೊರಳಿದ ಹರಿದಾಸರು ದ್ವೈತತ್ವಗಳನ್ನು ಪ್ರಚಾರ ಮಾಡಲು ನೆಲದ ಭಾಷೆಯನ್ನೇ ಸಾಧನವನ್ನಾಗಿಸಿಕೊಂಡರು. ಪ್ರತಿಯೊಬ್ಬರು ಹರಿದಾಸರೊಳಗಿನ ಅಂತರಂಗದ ತುಮುಲಗಳಿಗೆ ಭಾಷೆ ಧ್ವನಿಯಾಗಿ ಜೀವ ತುಂಬಿದೆ.

ಸಂಕೀರ್ಣವಾಗಿದ್ದ ಮತತತ್ವ ಹಾಗೂ ಆಧ್ಯಾತ್ಮಿಕ ಸಂಗತಿಗಳು ಸಂಗೀತ ಮಾಧ್ಯಮದಲ್ಲಿ, ಸರಳ ಕನ್ನಡದಲ್ಲಿ, ಸುಲಭ ಭಕ್ತಿಯಲ್ಲಿ ಜನಸಾಮಾನ್ಯರಿದ್ದಲ್ಲೇ ದೊರೆತದ್ದು ರೋಚಕವಾದದ್ದು, ದಾಸರು ಕೊಟ್ಟ ಈ ಹೊಸ ಪರಿಕಲ್ಪನೆ ಜನಸಾಮಾನ್ಯರಲ್ಲಿ ಒಂದು ಆತ್ಮವಿಶ್ವಾಸ ಹಾಗೂ ಭರವಸೆಯನ್ನು ಹುಟ್ಟು ಹಾಕಿತು. ಹರಿದಾಸ ಸಾಹಿತ್ಯ ಜನರ ಮಧ್ಯೆ, ಜನರ ಮುಂದೆ ಹುಟ್ಟಿದ ಆಶು ರಚನೆಗಳು. ಅವು ಅಂದಂದಿಗೆ ಹಾಡಿದ ಮೌಖಿಕವಾಗಿ ಹಾಡಿದ ತುರ್ತು ಜನಭಾಷೆಗೆ ದೇವಭಾಷೆಯನ್ನು ಸ್ಥಾನತಂದು ಕೊಟ್ಟವರು ಹರಿದಾಸರು. ಪ್ರಾದೇಶಿಕ ಭಾಷೆಯ ಚಿರಸ್ಥಾಯಿಯಾಗಿ ನೆಲೆಯೂರಿದವು.

ಭಾವ, ಭಾಷೆಗಳ ಮೇಳಕೈಯೇ ಶೈಲಿಯಾಗಿದೆ. ಶೈಲಿಯಿಲ್ಲದಿದ್ದರೆ ಬರವಣಿಗೆ ನೀರಸವಾಗುತ್ತದೆ. ಅಲ್ಲಿ ಕಾವ್ಯಗುಣವಿರುವುದಿಲ್ಲ. ಅಂದಮೇಲೆ ಆನಂದ ಸೊನ್ನೆಯೇ ಸಾಹಿತ್ಯ ಶೈಲಿಗೆ ಸಂಬಂಧ, ಸಾಮಿಪ್ಯ ಬಹಳ, ಶೈಲಿಯೇ ಸಾಹಿತ್ಯವೆಂದು ಹೇಳುವುದುಂಟು. ಶೈಲಿಯ ಹೆಗ್ಗುರುತು ವ್ಯಕ್ತಿತೆ, ಹೇಳಬೇಕಾದ ವಿಷಯವನ್ನು ದೈವಿಕವಾಗಿ, ಭಾವೋತ್ಕರ್ಷದಿಂದ ಉದ್ರೇಕಾವಸ್ಥೆಯಲ್ಲಿ ಮೇಲ್ಮೆಗೊಳಿಸಿ ರೂಪಾಂತರ ಪಡಿಸುವುದರಿಂದ ಬರವಣಿಗೆಗೆ ಗಾಂಭೀರ್ಯವೂ, ವೈಶಿಷ್ಟ್ಯವೂ ಕೂಡಿಕೊಂಡು ಅದೇ ಶೈಲಿಯೆನಿಸಿಕೊಳ್ಳುತ್ತದೆ.

ಕಲ್ಯಾಣ ಕರ್ನಾಟಕದ ಆಡು ಭಾಷೆಯ ಸೊಗಡಿನಿಂದ ಅವರ ಕೀರ್ತನೆಗಳು ವಿಭಿನ್ನವೆನಿಸಿವೆ. ಉದಾಹರಣೆಗೆ : ಭೀಮವ್ವ ಬಳ್ಳಾರಿ ಭಾಗದ ಭಾಷೆಯನ್ನು ತನ್ನ ಸಾಹಿತ್ಯ ರಚನೆಗೆ ಬಳಸಿಕೊಂಡಿದ್ದಾಳೆ. ಭೀಮವ್ವನ ಶಬ್ದ ಸಂಪತ್ತು ವಿಪುಲವಾದುದು. ಶಬ್ದವನ್ನು ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿರುವುದರಿಂದ ಆಕೆಯ ಕಾವ್ಯ ಸೌಂದರ್ಯ ಇಮ್ಮಡಿಸಿದೆ. ಆಡು ಭಾಷೆಯ ಪದಗಳು ಆಕೆಯ ಕೀರ್ತನೆಯ ಸಾಲುಗಳಲ್ಲಿ ಕಂಡುಬರುತ್ತದೆ.

ಕಂಬಂದಿಂದೊಡೆದು ಕಂದನ ತಂದೀ (ದೆಯೇ?) ಕರುಳ್ಹಾರ
ಕಂದರದಿ ಧರಿಸಿ ತಾ ಬಂದನು ಭಾಮೆ

ನುಡಿಯ ಮೊದಲ ಸಾಲಿನಲ್ಲಿ ಬರುವ ‘ತಂದೀ’ ಪದ ತಂದೆಯ ದೇಶಿರೂಪ. ಹಾಗೆಯೇ ಇನ್ನೊಂದು ನುಡಿಯಲ್ಲಿ ದಿನನಿತ್ಯ ಪದದ ಬಳಕೆ ಕಂಡುಬರುತ್ತದೆ.

ಖರೆಯ ವೀ ಮಾತು ತ್ರಿಪುರದ ಸತಿಯರ ಲಜ್ಜೆ
ತೊರೆದು ಕೂಡಿದನೆಂಬೋದು ಪರಮ ಮೋಹಕವೆ

‘ಖರೆ’ ಎಂಬ ಸತ್ಯ, ನಿಜ ಎಂಬ ಅರ್ಥವನ್ನು ನೀಡುತ್ತದೆ. ಹೀಗೆ ಮತ್ತೊಂದು ಹಾಡಿನಲ್ಲಿ

ಅಮ್ಮನೀ ಕರೆತಾರೆ ಅರವಿಂದನಯನ
ಒಮ್ಮಾದರ ಬಾರ‍ನಮ್ಮನೆಗೆ

ಇಲ್ಲಿ ‘ಒಮ್ಮಾದ ಬಾರ’ ಎಂಬ ಪದ ಕಾವ್ಯ ಓದುವವನಿಗೆ ಆತ್ಮೀಯ ಭಾವವನ್ನುಂಟು ಮಾಡುತ್ತದೆ. ‘ಒಮ್ಮೆಯಾದರೂ ಬಾ’ ಎಂಬುದರ ಆಡುನುಡಿಯ ಬಳಕೆಯಾಗಿವೆ. ಆಡುನುಡಿಯ ಬಳಕೆ ಪ್ರತಿಸಾಲಿನಲ್ಲೂ ಕಂಡುಬರುತ್ತದೆ.

ದಬ್ಬಿ (ತಳ್ಳಿ), ಪೀತಾಂಬ್ರ (ಪೀತಾಂಬರ), ತುರುಬು (ಹೆರಳ ಮುಡಿ), ಬ್ಯಾರಾಗಿ (ಬೇರೆಯಾಗಿ), ನಾಯೇನು (ನಾನೇನು), ಮ್ಯಾಲ್ ಬಿದ್ದು (ಮೇಲೆ ಬಿದ್ದು), ಸಿಗಿಸಿ (ಸಿಕ್ಕಿಸಿ) ವ್ಯಾಳ್ಯ (ವೇಳೆ), ಭಾಳ (ಬಹಳ), ರೊಕ್ಕ (ಹಣ), ಮೂರುಪಾವು (ಅರ್ಧಕೇಜಿ ಗಿಂತ ಹೆಚ್ಚು), ಭಕ್ಕರಿ (ಭಕ್ರಿರೊಟ್ಟಿ), ಕುವ್ವಾಡ (ಕುಚೇಷ್ಟೆ), ಹೀಗೆ ಅನೇಕ ಆಡುಭಾಷೆಯ ಪದಗಳು ಅಲ್ಲಲ್ಲಿ ಬಳಕೆಗೊಂಡಿವೆ. ಭೀಮವ್ವ ಬ್ರಾಹ್ಮಣ ಸಮಾಜದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಪದಗಳನ್ನು ಹೆಚ್ಚಿನ ರೀತಿಯಲ್ಲಿ ಬಳಸಿದ್ದಾಳೆ. ಮಂಗಳಗೌರಿ ಹಾಡಿನಲ್ಲಿ ಸಿಹಿತಿನಿಸುಗಳ ವರ್ಣನೆಯಲ್ಲಿ ದೇಶಿಪದಗಳನ್ನು ಬಳಸಿಕೊಂಡಿದ್ದಾಳೆ.

ಮಂಡಿಗೆ ಚೂರ್ಮವು ಬುಂದ್ಯ ಬೀಸೋರಿಗೆ
ದುಂಡು ಗುಳ್ಳೇರಿಗೆಯು
ಚೆಂದವಾಗಿದ್ದ ಚಕ್ಕುಲಿ ಕರ್ಜಿಕಾಯ್ಗಳು
ಅಂದವಾದ ಕಾಯಿರಸ ಶಾಖಪಾಕವು

ಈ ನುಡಿಯಲ್ಲಿ ‘ಬುಂದ್ಯ’, ಲಾಡು ಎಂಬ ಪದದ ಆಡುನುಡಿಯ ಬಳಕೆ ಕಂಡುಬಂದಿದೆ. ಬುಂದ್ಯ ಎಂಬುದು ಎಲ್ಲ ವರ್ಗದವರು ಬಳಸುವ ಪದವಾಗಿದೆ. ಕರ್ಜಿಕಾಯಿ, ಕಾಯಿರಸ, ಎಂಬ ಪದಗಳು ಶಿಷ್ಟಪದಗಳ ರೂಪಾಂತರವಾಗಿವೆ. ಅವ್ವ ಅನಕ್ಷರಸ್ಥೆಯಾಗಿದ್ದರಿಂದ ಆಡುಭಾಷೆಯ ಬಳಕೆಗೆ ಹೆಚ್ಚಿನ ಗಮನ ನೀಡಿದ್ದಾಳೆ. ಭೀಮವ್ವ ಬಾಳಿದ ಪರಿಸರವು ಆಕೆಯ ಭಾಷಾ ಪ್ರಯೋಗದ ಮೇಲೆ ಪರಿಣಾಮ ಬೀರಿದೆ. ಬ್ರಾಹ್ಮಣ ಸಮಾಜದಲ್ಲಿ ಬಳಸಲ್ಪಡುವ ಪಾರಿಭಾಷಿಕ ಪದಗಳು ಆಕೆಯ ಹಾಡುಗಳಲ್ಲಿ ಮೈದುಂಬಿಕೊಂಡು ಬಂದಿವೆ.

ಭೀಮವ್ವನ ಭಾಷಾ ಬಳಕೆಯ ಇನ್ನೊಂದು ವಿಶಿಷ್ಟತೆ ಎಂದರೆ ಒಂದೇ ಶಬ್ಧಕ್ಕೆ ಪರ್ಯಾಯ ಪದಗಳನ್ನು ಬಳಸುವುದು. ಆಕೆಗೆ ಸಹಜವೆಂಬತೆ ತೋರಿದೆ. ‘ಭೂಮಿ’ ಎಂಬ ಶಬ್ಧಕ್ಕೆ ಅವನಿ, ಪೊಡವಿ, ಪೃಥ್ವಿ, ಕೋಣಿ, ಇಳೆ, ಕುಂಭಿಣಿ, ರೂಢಿ, ವಸುಧೆ, ಹಾಗೆಯೇ ‘ಹಸ್ತಿನಾಪುರ’ಕ್ಕೆ ಸಮಾನಾರ್ಥ ನೀಡಬಲ್ಲ ಸಾಮಜಪುರ, ಕರಿಪುರ, ಕಂಪತಿ ರಾಜ್ಯ, ಗಜಪುರ, ಸೊಂಡಿಲುಪುರ, ದಂತಪುರ, ಆನೆವತಿ, ಹಸ್ತಿನಾವತಿ ಎಂಬಿತ್ಯಾದಿ ಪದಗಳನ್ನು ಬಳಸುತ್ತಾಳೆ. ‘ಮನ್ಮಥ’ನಿಗೆ ಪರ್ಯಾಯವಾಗಿ ಅಂಗಜ, ಇಕ್ಷುಚಾಪ, ಮನಸಿನ, ಕಂತು, ಕಂದಕ, ಕಾಮ, ಕುಸುವಶರ, ಪಂಚಾಶರ, ಮಾರ, ಶಂಬರಾರಿ ಇತ್ಯಾದಿ ಶಬ್ಧಗಳನ್ನು ಉಪಯೋಗಿಸಿದ್ದಾಳೆ. ಸಂದರ್ಭಕ್ಕೆ ಹೊಂದುವ ರೀತಿಯಲ್ಲಿ ಕಾವ್ಯದ ಓಘಕ್ಕೆ ಪೂರಕವಾಗುವ ರೀತಿಯಲ್ಲಿ ಪದಗಳ ಬಳಕೆಯ ಕುರಿತು ಎಚ್ಚರಿಕೆ ವಹಿಸಿದ್ದಾಳೆ.

ಅನ್ಯ ಭಾಷೆಯ ಪದಗಳ ಬಳಕೆಯಲ್ಲಿ ಅವ್ವನ ಹಾಡುಗಳಲ್ಲಿ ಕಾಣುತ್ತೇವೆ. ಅವ್ವನ ಬದುಕಿನ ಸಮಯದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ನಿಜಾಮಶಾಹಿ ಆಡಳಿತವಿತ್ತು. ಉರ್ದು ಭಾಷೆಗೆ ಪ್ರಥಮ ಪ್ರಾಶಸ್ತ್ಯವಿತ್ತು. ಈ ಕಾರಣವಾಗಿ ಉರ್ದು ಪದಗಳ ಬಳಕೆ ಸಹಜವೆಂಬಂತೆ ಬಳಕೆಗೊಂಡಿವೆ.

ಹುಟ್ಟಾ ಬಡವಿಯ ದೌಲತ್ತನೆ ನೋಡಿರೆ
ಉಟ್ಟಳು ಪೀತಾಂಬರವ

ಈ ಮೇಲಿನ ನುಡಿಯಲ್ಲಿ ‘ದೌಲತ್ತು’ಎಂಬ ಉರ್ದು ಪದವನ್ನು ಕಾಣಬಹುದು. ಹೀಗೆ ಅನೇಕ ಉರ್ದು ಪದಗಳ ಬಳಕೆ ಅಲ್ಲಲ್ಲಿ ಕಾಣಸಿಗುತ್ತವೆ.

ಮಾಡದಪ್ಪಣೆ ಜುಲು ಮಾನ(ಜುಲ್ಮಾನೆಯೆ)ಕೊಡುವೊಳೆ
ಕೇಳಿ ಬನ್ನ್ಯೆಂದು ಕಳಸಿದನು
………………………………
ಆಕಳ್ಹಿಂಡುಗಳ ಬರೆದಳು ದ್ರೌಪದಿಗೆನಾವ್
ಸಿಪಾರಸ್ತು (ಶಿಫಾರಸ್) ಕೊಡಬೇಕು

ಹಿಂದಿ ಪದಗಳ ಬಳಕೆಯೂ ಕಂಡುಬಂದಿದೆ.

ಅಂಗನೆ ರುಕ್ಮಿಣಿ ಆ ಸೋಳ ಸಾಸಿರ
ತಂಗ್ಯೇರ ಕರದು ಹೇಳುತ ನಿಮ್ಮ

ಹೀಗೆ ಅನೇಕ ಅನ್ಯ ಭಾಷಾ ಪದಗಳ ಬಳಕೆ, ಆಕೆಯ ಕಾವ್ಯ ಕಟ್ಟುವ ಕ್ರಿಯೆಗೆ ಸ್ವಾಭಾವಿಕತೆಯನ್ನು, ಸಹಜತೆಯನ್ನು ಉಂಟುಮಾಡಿದೆ. ಭಾಷೆಯು ವ್ಯಕ್ತಿಯ ಸಂಸ್ಕಾರವನ್ನು, ಬೆಳೆದ ಪರಿಸರವನ್ನು ಕುರಿತು ಹೊಸಬೆಳಕು ಚೆಲ್ಲುತ್ತದೆ.

 

[1]ವಿವರಣೆಗಳಿಗಾಗಿ ನೋಡಿ ಗಿರಡ್ಡಿ ಗೋವಿಂದರಾಜು, ವಚನ ವಿನ್ಯಾಸ, ಪು.೬೮.