III

ಹರಿದಾಸ ಸಾಹಿತ್ಯದಲ್ಲಿ ಕಥೆ, ಪರಮಾತ್ಮನ ಸ್ತುತಿ, ಗುರುಸ್ತುತಿ, ವೇದಾಂತ ನಿರೂಪಣೆ, ಉಪದೇಶ, ಅನುಭವ ನಿರೂಪಣೆ, ಚಾರಿತ್ರಿಕ ವಿಷಯಗಳ ನಿರೂಪಣೆ, ಸ್ಥಳಾದಿಗಳ ವರ್ಣನೆ ಮುಂತಾಗಿ ವಸ್ತುವೈವಿಧ್ಯವಿದೆ. ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ, ನಾರದ ಕೊರವಂಜಿ, ಪ್ರಹ್ಲಾದಚರಿತ್ರೆ, ರಾಮಕಥೆ, ಶ್ರೀನಿವಾಸ ಕಲ್ಯಾಣ ಮುಂತಾದುವು ಕಥೆಗಳನ್ನು ವಸ್ತುವಾಗಿ ಉಳ್ಳುವು. ಇವುಗಳಲ್ಲಿ ವಿವಿಧ ರಸಗಳಿಗೆ ವಿವಿಧ ವರ್ಣನೆಗಳಿಗೆ ಕೂಡ ಎಡೆ ದೊರೆತಿದೆ. ಗುರುಸ್ತುತಿ, ವೇದಾಂತ ನಿರೂಪಣೆ ಮುಂತಾದುವುಗಳಲ್ಲಿ ಗಂಭೀರ ಗತಿ ಪ್ರಧಾನವಾಗಿರುತ್ತದೆ. ಉಪದೇಶಾದಿಗಳಲ್ಲಿ ಕೆಲವೊಮ್ಮೆ ಭಯೋತ್ಪಾದನೆ, ಕೆಲವೊಮ್ಮೆ ಆಸೆ ತೋರಿಸುವಿಕೆ ನೇರವಾಗಿ ತಿಳಿಸಿ ಯೋಚನೆಗೆ ತೊಡಗಿಸುವುಕೆ ಇವೆಲ್ಲ ಕಂಡುಬರುತ್ತವೆ.

ಉದಾಹರಣೆ.
ರಾಮ ರಾಮ ರಾಮ ಸೀತಾರಾಮ ಎನ್ನಿರೋಪ
ಅಮರಪತಿಯ ದಿವ್ಯನಾಮ ಅಂದು ಒದಗದೊಅ

ಭರದಿ ಯಮನ ಭಟರು ಬಂದು
ಹೊರಡಿರೆಂದು ಮೆಟ್ಟ ಮುರಿಯೆ
ಕೊರಗಾತ್ಮ ಸೇರಿದಾಗ ಹರಿಯ ನಾಮ ಒದಗದೊ
………………………….
ಕೆಟ್ಟಜನ್ಮದಲ್ಲಿ ಹುಟ್ಟಿ
ದುಷ್ಟಕರ್ಮಮಾಡಿ ದೇಹ
ಬಿಟ್ಟು ಹೋಗುವಾಗ ಪುರಂದರ
ವಿಠಲಧ್ಯಾನ ಒದಗದೊ
ಇಂತಹ ಕೀರ್ತನೆಗಳಲ್ಲಿ ಭಯೋತ್ಪಾದನೆಯ ಮಾರ್ಗದ ಉಪದೇಶವಿದೆ.
ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರು
ಕಲ್ಲು ಸಕ್ಕರೆ ಕೊಳ್ಳಿರೊ                             ಪ

ಕಲ್ಲುಸಕ್ಕರೆಸವಿ ಬಲ್ಲವರೆ ಬಲ್ಲರು
ಪುಲ್ಲಲೋಚನ ಶ್ರೀಕೃಷ್ಣನಾಮವೆಂಬ                       ಅ

ಎತ್ತು ಹೇರುಗಳಿಂದ ಹೊತ್ತು ಮಾರುವುದಲ್ಲ
ಒತ್ತೊತ್ತಿ ಗೋಣೊಯೊಳ್ ತುಂಬುವುದಲ್ಲ
ಎತ್ತ ಹೋದರು ಬಾಡಿಗೆ ಸುಂಕವಿದಕಿಲ್ಲ
ಉತ್ತಮ ಸರಕಿದು ಅತಿಲಾಭ ಬರುವಂಥ
……………………………………….
ಸಂತೆ ಸಂತೆಗೆ ಹೋಗಿ ಶ್ರಮಪಡಿಸುವುದಲ್ಲ
ಸಂಜೆಯೊಳಗೆ ಇಟ್ಟು ಮಾರುವುದಲ್ಲ
ಸಂತತ ಭಕ್ತರ ನಾಲಿಗೆ ಸವಿಗೊಂಬ
ಕಾಂತಪುರಂದರ ವಿಠಲನಾಮವೆಂಬ

ಎಂಬಂತಹ ಕೀರ್ತನೆಗಳಲ್ಲಿ ಆಸೆ ಹುಟ್ಟಿಸುವ ಮಾರ್ಗದ ಉಪದೇಶವಿದೆ.

ಮನವೆ ಮರೆವರೇನೊ ಹರಿಯ ಬಹು
ಜನಮಗಳಲಿ ಪಟ್ಟ ಬವಣೆಗಳರಿಯ                           ಪ

ವಿಷಯಚಿಂತನೆ ಮಾಡೆ ಸಲ್ಲ ಮೇಷ
ವೃಷಣನಾದನು ಪೌಲೋಮಿಯ ನಲ್ಲ
ಝುಷಕೇತುವಿನ ಮೇಳ ಹೊಲ್ಲನಿ
ರಸನನಾಗೊ ಯಮರಾಯ ಎಂದೆಂದು ಕೊಲ್ಲ

ಧನವೆ ಜೀವನವೆಂಬೆ ನಿನಗೆ ಸುಯೋ
ಧನ ನೋಡು ಧನದಿಂದ ಏನಾದ ಕೊನೆಗೆ
 ಅನಿರುದ್ದ ದೇವನ ಪೋಷ
ಘನವಿಜ್ಞಾನ ಸಂಪಾದಿಸೊ ಕೊನೆಗೆ

ಎಂಬಿಂತಹವುಗಳಲ್ಲಿ ಮಸ್ತುಸ್ಥಿತಿಯ ನೇರ ನಿರೂಪಣೆಯಿದ್ದು ಚಿಂತನಕ್ಕೆ ತೊಡಾಗಿಸುವಂತಹ ಉದ್ದೇಶಮಾರ್ಗವಿದೆ.
ಪರಮಾತ್ಮನ ಸ್ತುತಿಗಳಲ್ಲಿ ಅವನ ಲೋಲಾವಿನೋದಗಳ ವೈವಿಧ್ಯಮಯ ಚಿತ್ರಣವಿದೆ. ವಿವಿಧ ಭಾವಗಳ ನಿರೂಪಣೆಗೆ ಅಲ್ಲಿ ಅವಕಾಶ ದೊರೆತಿದೆ. ವಾತ್ಸಲ್ಯ, ಶೃಂಗಾರ, ಮಧುರ, ವಿರಹ, ವಿನೋದ, ನಿಂದೆ ಮುಂತಾದ ಹಲವಾರು ಚಿತ್ರಗಳನ್ನು ಅಲ್ಲಿ ಕಾಣುತ್ತೇವೆ.

ನಲ್ಲ ಕೃಷ್ಣನಿಲ್ಲಿ ಬರಲಿಲ್ಲ ಸಖಿ ಫುಲ್ಲಾನನೆ
ಮೆಲ್ಲನುಡಿಗಳಲ್ಲಿ ಶೆಳದೆಲ್ಯೊ ಪೋದನಲ್ಲ ಚೋರ
(ವೆಂಕಟದಾಸ)

ಅಗಲಿರಲಾರೆ ಬಾ ಪ್ರಾಣಕಾಂತ
ಅಗಲಿರಲಾರೆ ಕೈಮುಗಿದು ಬೇಡುವೆನೈ
ಬಗೆಬಗೆಯಿಂದಲಿ ನಿಗಮಗೋಚರ ಕೃಷ್ಣ
 (ಕಮಲೇಶವಿಠಲ)

ಕಾಡಬ್ಯಾಡೊ ಬೇಡಿಕೊಂಬೆ ಕಾಡಬ್ಯಾಡೊ
(ಭಾಗ್ಯನಿಧಿವಿಠಲ)

ಅನ್ಯಾಯದ ಮಾತುಗಳಾಡದಿರಿ ನೀವು
ಹೆಣ್ಣುಗಳಿರ ಕೇಳಿರಿ
ಪುಣ್ಯವಂತರಾದ ಕಾರ‍ಣ ಕೃಷ್ಣನ
ಕಣ್ಣಿಂದ ನೋಡಿದಿರಿ
(ಹಯವದನ)

ಗೋಪಿ ದೇವಿ ಎಂತು ಪೇಳಲೆ ನಾನೆಂತು ತಾಳಲೆ
(ವಿಜಯವಿಠಲ)

ಊಟವನು ಮಾಡು ಬಾ ಉದಧಿಶಯನಾ
ಆಟವನು ಸಾಕುಮಾಡಿ ಅತಿವೇಗದಿಂದಲಿ
(ವಿಜಯವಿಠಲ)

ತೋಳು ತೋಳು ತೋಳು ರಂಗ ತೋಳನ್ನಾಡೈ ಸ್ವಾಮಿ
ನೀಲವರ್ಣದ ಬಾಲಕೃಷ್ಣನ ತೋಳನ್ನಾಡೈ
(ಪುರಂದರವಿಠಲ)

ತಾ ಹೊನ್ನ ಹಿಡಿ ಹೊನ್ನ ಚಿನ್ನದ ಗುಬ್ಬಿ
ಹಿಡಿ ಹೊನ್ನ ತಾ ಕೃಷ್ಣ ಎಂದಳೆ ಗೋಪಿ
(ಪುರಂದರವಿಠಲ)

ಮನಸು ನಿನ್ನ ಮೇಲೆ ಬಹಳ ಎನ
ಗನುಕೂಲವಾಗೋದು ಹೇಳಾ
 (ಪುರಂದರವಿಠಲ)

ಏಕೆ ವೃಂದಾವನ ಸಾಕು ಗೋಕುಲವಾಸ
ಏಕೆ ಬಂದೆಲೊ ಉದ್ಧವ
ಸಾಕು ಸ್ನೇಹದ ಮಾತನೇಕಮ
ಆ ಕಬುಜೆಯನು ಕೂಡಿದ ಉತ……..
(ಪುರಂದರವಿಠಲ)

ರಮಣಿ ಕೇಳಲೆ ಮೋಹನ ಶುಭದೋಯನ
ಅಮರವಂದಿತ ರವಿಶತಕೋಟಿತೇಜನ
ವಿಮಲ ಚರಿತ್ರದಿ ಮೆರೆವ ಶ್ರೀಕೃಷ್ಣನ
ಕಮಲವದನೆ ನೀ ತೋರೆ ರಮಣಿ
(ಆದಿಕೇಶವ)

ಇಂತಹ ಹಲವಾರು ಕೀರ್ತನೆಗಳು ಅದಕ್ಕೆ ಉದಾಹರಣೆಗಳಾಗಿವೆ. ಪರಮಾತ್ಮನನ್ನು ಮಗುವಾಗಿ, ಬಾಲಕನಾಗಿ, ಸಖನಾಗಿ, ಪ್ರಿಯತಮನಾಗಿ, ಒಡೆಯನಾಗಿ ಹೀಗೆ ಹಲವಾರು ರೀತಿಗಳಲ್ಲಿ ಕಾಣುವ ವಿವಿಧ ದೃಷ್ಟಿಕೋನಗಳು ಇಲ್ಲಿವೆ. ಅಂತೆಯೇ ಇಲ್ಲೆಲ್ಲ ವಸ್ತು ವೈವಿಧ್ಯ ಕಾಣಿಸಿಕೊಳ್ಳುತ್ತದೆ. ಉಳಿದಂತೆ ಯಾತ್ರಸ್ಥಳಗಳ, ಕ್ಲೇತ್ರಮೂರ್ತಿಗಳ ಹಾಗೂ ಚಾರಿತ್ರಿಕ ವಿಷಯಗಳ ವರ್ಣನೆಗಳು ವಸ್ತು ವೈವಿಧ್ಯದಿಂದ ಕೂಡಿರುವುದು ಸರಿಯೇ ಸರಿ. ಇದು ಇಲ್ಲಿಯ ಚೆಲುವಿನ ಇನ್ನೊಂದು ಮುಖ.

IV

ಹರಿದಾಸರ ಕೃತಿಗಳ ಒಂದು ವಿಶಿಷ್ಟ ಲಕ್ಷಣವೆಂದರೆ ಅವುಗಳಲ್ಲಿ ಕಂಡುಬರುವ ಆತ್ಮೀಯತೆ, ತನ್ಮಯತೆ ಮತ್ತು ನೇರಸಂಭಾಷಣೆಯ ರೀತಿ. ನಿಂದಾಸ್ತುತಿಗಳಲ್ಲಿ ಇದನ್ನು ಪ್ರಧಾನವಾಗಿ ಕಾಣುತ್ತೇವೆ. ಪರಮಾತ್ಮನೊಡನೆ ತಾವು ನೇರವಾಗಿ ಸಂಭಾಷಿಸುತ್ತಿರುವಂತೆ ಭಾವಿಸಿಕೊಂಡು ಅವನನ್ನು ಬೈಯುತ್ತ ಆ ಮೂಲಕವೇ ಅವನನ್ನು ಸ್ತುತಿಸುತ್ತಾರೆ ಅವರು. ಗೋಪಿಯರ ವಿರಹವನ್ನು ವರ್ಣಿಸುವಾಗ ತಾವೇ ಗೋಪಿಯರಾಗಿ ತನ್ಮಯತೆಯಿಂದ ವರ್ಣಿಸುತ್ತಾರೆ. ಯಶೋದೆ ಬಾಲಕೃಷ್ಣನನ್ನು ಆಡಿಸುವುದನ್ನು ತಾವೇ ಯಶೋದೆಯೆಂಬಂಎ ನಿರೂಪಿಸುತ್ತಾರೆ. “ಮನೆಯೊಳಗಾಡೊ ಗೋವಿಂದ” ಪೋಗ ದಿರೆಲೊ ರಂತ” ಮುಂತಾದ ಕೀರ್ತನೆಗಳು ಇದಕ್ಕೆ ಉತ್ತಮ ಉದಾಹರಣೆಗಳಾಗಿವೆ. ಬಾಲಲೀಲೆಯನ್ನೇ ಆಗಲಿ ಮತ್ತೊಂದನ್ನೇ ಆಗಲಿ, ಕಣ್ಣೆದುರಿಗೆ ನಡೆಯುತ್ತಿರುವುದನ್ನು ನೋಡುತ್ತಾ ಹೇಳುತ್ತಿರುವವಂತೆ ಸೂಕ್ಷ್ಮವಾಗಿ ವಿವರವಾಗಿ ಕಣ್ಣಿಗೆ ಕಟ್ಟುವಂತೆ ಅವರು ಚಿತ್ರಿಸುತ್ತಾರೆ. ಗೋವಿಂದನ ಮೂರ್ತಿಯ ಆಪಾದಮಸ್ತಕ ಅಲಂಕಾರದ ವರ್ಣನೆ, ವೈಕುಂಠ ವರ್ಣನೆ, ಮೋಹಿನೀ ಅವತಾರದ ವರ್ಣನೆ, ಭೀಮಸೇನ ಸ್ತ್ರೀವೇಷ ಧರಿಸಿದ್ದರು, ಕೀಚಕನನ್ನು ಕೊಂದದ್ದರ ವರ್ಣನೆ ಮುಂತಾದೆಡೆಗಳಲ್ಲಿ ಅವರ ಕೌಶಲದ ಔನ್ನತ್ಯವನ್ನೂ ಕಲ್ಪನ್ನವಿಲಾಸವನ್ನೂ ಕಾಣಬಹುದು. ನೈವೇದ್ಯದ ವರ್ಣನೆ, ಅಲಂಕಾರದ ವರ್ಣನೆ, ವಿವಾಹಸಂಬಂಧದ ಕೃತಿಗಳು ಮುಂತಾದವುಗಳಲ್ಲಿ ಆ ಕಾಲದ ಊಟತಿಂಡಿಗಳು, ಉಡುಗೆತೊಡುಗೆಗಳು, ಆಚಾರವಿಚಾರಗಳು ಮುಂತಾದವುಗಳ ಮಾಹಿತಿ ದೊರೆಯುತ್ತದೆ. ಈ ದೃಷ್ಟಿಯಿಂದ ಅಂತಹ ಕೃತಿಗಳಿಗೆ ಸಾಂಸ್ಕೃತಿಕ ಮಹತ್ವವೂ ಉಂಟು.

ಉಪದೇಶ ಹಾಗೂ ಸಿದ್ಧಾಂತ ನಿರೂಪಣೆಯ ಕೃತಿಗಳಲ್ಲಿ ಉಪದೇಶದ ಅಧಿಕಾರವಾಣಿಯಿರುತ್ತದೆ. ದಾರಿಯಿಂದ ಜಾರುತ್ತಿರುವವರನ್ನು ಎಚ್ಚರಿಸುವ ದನಿಯಿರುತ್ತದೆ. ಜನರ ತಪ್ಪುಗಳನ್ನು ಎತ್ತಿತೋರಿಸಿ, ಅದರಿಂದುಂಟಾಗುವ ದುಷ್ಪರಿಣಾಮಗಳನ್ನು ಸ್ಪಷ್ಟಪಡಿಸಿ, ಸನ್ಮಾರ್ಗದತ್ತ ಅವರನ್ನು ಮುನ್ನೆಡೆಸುವ ಗುರುತನವಿರುತ್ತದೆ. ಉದರವೈರಾಗ್ಯವಿದು (ಪುರಂದರ ದಾಸರು) ಮುಂತಾದ ಕೀರ್ತನೆಗಳು ಇದಕ್ಕೆ ಉತ್ತಮ ನಿದರ್ಶನಗಳಾಗಿವೆ. ಉದಾಹರಣೆಗೆ ವಾದಿರಾಜರ.

ನಂಬು ನಂಬು ನಾರಾಯಣನ ಈ
ಮಿಕ್ಕ ದೈವಗಳು ಕಾಯಬಲ್ಲವೆ                   ಪ

ಅಂಬರದಿ ಧ್ರುವನ್ನ ನೋಡು ಈ ಭಕ್ತಿ ಮೌಳಿ
ಯೆಂಬೊ ಪ್ರಹ್ಲಾದನ್ನ ನೋಡು
ಕುಂಭಿಯೊಳು ವಿಭೀಷಣಗೆ ಶ್ರೀರಾಮ ಕೊಟ್ಟ
ತುಂಬಿದ ಭಾಗ್ಯವ ನೋಡಯ್ಯ

ಹಿರಣಾಕ್ಷನೆಂಬೊ ದೈತ್ಯನ ಆ ಸಿರಿಯೆಲ್ಲ
ಕರಗಿಹೋದದ್ದು ನೋಡಯ್ಯ
ದುರುಳರಾವಣ ಏನಾದ ಆ ದುಃಖವನ್ನು
ಪಾರಂಪರ್ಯದಿಂದ ಕೇಳಯ್ಯ

ನ್ಯಾಯಕ್ಕಾಗಿ ಮನೆಗೆ ಬಂದ ಶ್ರೀಕೃಷ್ಣನ
ಕಟ್ಟೆಂದ ಖಳನೇನಾದ

ಹಯವದನನ್ನ ನಂಬಿದ ನಮ್ಮ ಧರ್ಮ
ರಾಯನ ಭಾಗ್ಯ ನೋಡಯ್ಯ

ಎಂಬ ಕೀರ್ತನೆಯನ್ನು ನೋಡಬಹುದು. ಇಡೀ ಕೀರ್ತನೆಯ ಸಾರವು ಪಲ್ಲವಿಯಲ್ಲಿ ಅಡಗಿದೆ. ಅದನ್ನು ಪುಷ್ಟೀಕರಿಸುವ ಅಂಶಗಳು ಉಳಿದ ನುಡಿಗಳಲ್ಲಿ ಹರಡಿವೆ. ಈ ದೃಷ್ಟಿಯಿಂದ ಇಂತಹ ಕೀತನೆಗಳು ಸಾನೆಟ್ಟಿಗೆ ಸಮೀಪವಾಗಿ ನಿಲ್ಲುತ್ತವೆ. ಇಲ್ಲೆಲ್ಲ, ಕೆಲವೊಮ್ಮೆ, ವಸ್ತುವನ್ನು ಬಹಳವಾಗಿ ಹಿಂಜಿದಂತೆ ಕಂಡುಬಂದರೂ ವಿಷಯವನ್ನು ಸ್ಪಷ್ಟಪಡಿಸಿ, ಮನಸ್ಸಿನ ಆಳಕ್ಕೆ ಇಳಿಸುವಲ್ಲಿ ಈ ಹಿಂಜುವಿಕೆ ಉಚಿತವೆನಿಸುತ್ತದೆ. ಕಥನಕೃತಿಗಳಲ್ಲಿ ಮಾತ್ರ ಇಂತಹ ಹಿಂಜುವಿಕೆಯಾಗಲಿ ಪುನರಾವರ್ತನೆಯಾಗಲಿ ಇರುವುದಿಲ್ಲ. ಶ್ರೀಘ್ರವಾಗಿ ಕಥೆ ಓಡುವುದನ್ನು ಅಲ್ಲಿ ಕಾಣುತ್ತೇವೆ. ಆದರೆ ಪರಮಾತ್ಮನ ವರ್ಣನೆಯೋ ಸ್ತುತಿಯೋ ಬಂದಾಗ ಮಾತ್ರ ಭಕ್ತಿಪರವಶತೆ ತಲೆಯಾಕುತ್ತದೆ. ವರ್ಣನೆಗೆ ಹೆಚ್ಚಿನ ಅವಕಾಶ ಸಿಕ್ಕುತ್ತದೆ.

ಇಷ್ಟೆಲ್ಲ ಆದರೂ ವರ್ಣನೆಗಳೆಲ್ಲ ಜನಸಾಮಾನ್ಯರ ಸುತ್ತುಮುತ್ತಲ ಪರಿಸರವೇ ಆಗಿರುತ್ತದೆ. ಲಕ್ಷ್ಮೀನಾರಾಯಣರ ಉರುಟಣೆಯನ್ನು ವರ್ಣಿಸುವಲ್ಲಿ ನಮ್ಮ ಸುತ್ತಮುತ್ತ ನಡೆಯುವ ಮದುವೆಗಳ ಉರುಟಣೆಯ ವರ್ಣನೆಯೇ ಪ್ರತಿಫಲಿಸುತ್ತದೆ. ಶೋಭಾನೆ ಹೇಳುವಲ್ಲಿ, ಹಸೆಗೆ ಕರೆಯುವಲ್ಲಿ, ನಾವು ಕಂಡ ಮದುವೆಗಳೇ ನೆನಪಿಗೆ ಬರುತ್ತವೆ. ದೇವ ಲೋಕದ ದಿವ್ಯ ವೈಭವವನ್ನು ಕೂಡ, ನಮ್ಮ ಕಲ್ಪನೆಗೆ ನಿಲುಕುವ ರೀತಿಯಲ್ಲಿ, ನಮಗೆ ಅದು ತುಂಬ ಪರಿಚಿತವಾದುದು ನಮ್ಮ ಸುತ್ತಲಿನ ಪರಿಸರವೇ ಅದು ಎಂಬ ರೀತಿಯಲ್ಲಿ ವರ್ಣಿಸಿವುದನ್ನು ಕಾಣುತ್ತೇವೆ. ಯಾವುದನ್ನೇ ವರ್ಣಿಸಲಿ ಹರಿದಾಸರು ಮನಮುಟ್ಟುವಂತೆ ವರ್ಣಿಸುತ್ತಾರೆ. ವರ್ಣನೆಯಲ್ಲಿ ಔಚಿತ್ಯಪ್ರಜ್ಞೆಯಿರುತ್ತದೆ. ತನ್ನಯತೆಯಿರುತ್ತದೆ. ಇಂತಹ ಆಕರ್ಷಕ ವರ್ಣನೆಗಳು ಮತ್ತು ನಿರೂಪಣೆಯ ರೀತಿ ಅವರ ಕೃತಿಗಳ ಚೆಲುವಿನ ಮತ್ತೊಂದು ಮುಖ.

V

ವರ್ಣಾವೃತ್ತಿಯ ಸೊಬಗಿನ ಬಗ್ಗೆ ಹಿಂದೆಯೇ ಹೇಳಲಾಗಿದೆ. ಯಮಕಕ್ಕೆ ಉದಾಹರಣೆಯಾಗಿ ಇದನ್ನು ನೋಡಬಹುದು.

ಮಾವಾರಿ ಮಾವಾರಿಜಜರ ಮನಕತಿ ದೂರ
ಯಶೋದಜ ಯೋಶೋದಜಯವನೀಯೊ
ಜಂಭಾರಿಜಂ ಭಾರಿ ದುಃಖಪಡೆ ನೀ
ಪೇಳ್ದಿ ಕುರುಪಂಥ ಕುರುಪಂಥರ ಥರಿಪಂತೆ
ನಗಪ ಪನ್ನಗಪ ಪಂಚಾಸ್ಯನುತ ಕಾಯೊ
ಗೋಪಾಲ ಗೋಪಾ ಲವನ ತಂದೆಯೇ

ಹೀಗೆಯೇ, ಅನುಕರಣ ಶಬ್ದಗಳ ಬಳಕೆಯಿಂದ ನೈಜ ಚಿತ್ರವನ್ನು ಮೂಡಿಸುವ ಕೌಶಲವನ್ನು ಕೂಡ ಅಲ್ಲಲ್ಲಿ ಕಾಣುತ್ತೇವೆ;

ಬಿದಿರ ಮಳೆ ಧಗಧಗಿಸೆ ಘನಹೆ
ಬ್ಬಿದಿರು ಛಟಛಟರೆನಲು ಉರಿಯೊಳು
ಕದಳಿಗಳು ಸಿಮಿಸಿಮಿಸೆ ತರುಗಳನುರುಹಿ ಮೆಳೆಗಳನು
ಗದಗದಿಸೆ ಗುಹೆಯಲ್ಲಿ ಮೃಗತತಿ
ಹೆದರಿ ಹಾಯ್ದವು ಪಕ್ಷಿಸಂಕುಲ
ಉದುರಿದವು ಗರಿಸಹಿತ ಬೆಂದವು ವನದ ಮಧ್ಯದಲಿ
(ನಳಚರಿತ್ರೆ)

ಕಾಳ್ಗಿಚ್ಚಿನ ಚಿತ್ರ ಕಣ್ಣಿಗೆ ಕಟ್ಟುವಂತೆ ಮೂಡಿರುವುದನ್ನೂ ಕಾಳ್ಗಿಚ್ಚಿನ ಶಬ್ದ ಕಿವಿಗೆ ಹೊಡೆಯುತ್ತಿರುವಂತಿರುವುದನ್ನೂ ಇಲ್ಲಿ ಕಾಣುತ್ತೇವೆ. ಇದೇ ರೀತಿ ಬಾಲಕೃಷ್ಣನ ಈ ವರ್ಣನೆ.

ಬಂದನೆ ರಂಗ ಬಂದನೇನ ಎನ್ನ
ತಂದೆ ಬಾಲಕೃಷ್ಣ ನವನೀತಚೋರ
ಗಿಲಿಗಿಲಿ ಗಿಲಿಯೆಂಬೊ ಹೊನ್ನಕಡಗ ಗೆಜ್ಜೆ
ಹೊಳೆಹೊಳೆಹೊಳೆವ ಪಾದವನೂರುತ
ನಲಿನಲಿದಾಡುತ ಉಂಗುಂದರಳೆಲೆ
ಥಳ ಥಳ ಥಳ ಥಳಾ ಥಳ್ಳನೆ ಹೊಳೆಯುತ

ಕಿಣಿ ಕಿಣಿ ಕಿಣಿಯೆಂಬೊ ಕರದಿ ಕಂಕಣ ಬಳೆ
ಝಣ ಝಣ ಝಣವೆಂಬೊ ನಡುವಿನ ಗಂಟೆ
ಧಡಿ ಧಡಿ ಧಡಿಯೆಂಬೊ ಪಾದವ ತೊಡರಿಸುತ
ಮಣಿ ಮಣಿ ಮಣಿ ಮಣಿಯೆಂದಾಡುತ ಕೃಷ್ಣ

ಹಿಡಿ ಹಿಡಿ ಹಿಡಿಯೆಂದು ಪುರಂದರವಿಠಲನ
ದುಡು ದುಡು ದುಡು ದುಡ್ಡನೆ ಓಡುತ
ನಡಿ ನಡಿ ನಡಿಯೆಂದು ಮೆಲ್ಲನೆ ಪಿಡಿಯಲು
ಬಿಡಿ ಬಿಡಿ ಬಿಡಿ ಬಿಡಿ ದಮ್ಮಯ್ಯ ಎನುತ

ಶಬ್ದಗಳನ್ನು ಚಾಮತ್ಕಾರಿಕವಾಗಿ ಬಳಸುವುದು ಹರಿದಾಸರ ಕೃತಿಗಳಲ್ಲಿ ಅಲ್ಲಲ್ಲಿ ಕಂಡುಬರುವ ಒಂದು ವೈಶಿಷ್ಟ್ಯ.
೧. ಕೆರೆಕಟ್ಟೆ ಪೊದೋಟಗಳ ರಚಿಸುವನೆ
ಗುರುದೈವಹಿರಿಯರನ್ನು ಬೈಯುವನೆ
ಸಿರಿಕಾಗಿನೆಲೆಯಾದಿಕೇಶವನ ಚರಣವನು
ನಿರುತದಲ್ಲಿ ಸ್ಮರಿಸುವನೆ ಅವಿಚಾರಪುರುಷ

ಇದನ್ನು ಓದಿದಕೂಡಲೇ ಇದೇನು! ದಾಸರು ಇಲ್ಲಿ, ಒಳ್ಳೆಯ ಕೆಲಸ ಮಾಡುವವರನ್ನೇ ಕೆಟ್ಟವನು ಎಂದಿದ್ದಾರಲ್ಲ ! ಎಂದು ಆಶ್ಚರ್ಯವಾಗುತ್ತದೆ. ರಚಿಸುವನೆ, ಬೈಯುವನೆ, ಸ್ಮರಿಸುವನೆ ಎಂಬುದನ್ನು ರಚಿಸುವವನೇ, ಬೈಯುವವನೇ, ಸ್ಮರಿಸುವವನೇ ಎಂಬ ಅರ್ಥದಲ್ಲಿ ತೆಗೆದುಕೊಳ್ಳುವುದು ಈ ರೀತಿಯ ಅಪಾರ್ಥಕ್ಕೆ ಕಾರಣವಾಗುತ್ತದೆ. ಆದರೆ ಇವನ್ನು ಕ್ರಮವಾಗಿ ರಚಿಸುತ್ತಾನೆಯೆ ಬೈಯುತ್ತಾನೆಯೆ? ಸ್ಮರಿಸುತ್ತಾನೆಯೆ? ಎಂಬ ಅರ್ಥಗಳಲ್ಲಿ ತೆಗೆದುಕೊಂಡಾಗ, ದಾಸರು ಹೇಳುತ್ತಿರುವ ಒಳ ಅರ್ಥ ದೃಗ್ಗೋಚರವಾಗುತ್ತದೆ.

೨. ಕ್ರೂರ ವ್ಯಾಧಿಗಳೆಲ್ಲ ಹೀರೆಕಾಯಿ
ಪೋರದುಷ್ಕೃತಗಳ ತೋರೆಕಾಯಿ
ಭಾರತಕಥೆ ಕರ್ಣ ತುಂಬಿದೆ ಕಾಯಿ
ವಾರಿಜಕ್ಷನೆ ಗತಿಯೆಂದಿಪ್ಪೆ ಕಾಯಿ
(ಕನಕದಾಸರು)

ಇಲ್ಲಿ ಹೀರೆಕಾಯಿ, ತೋರೆಕಾಯಿ, ತುಂಬಿದೆ (?) ಕಾಯಿ, ಇಪ್ಪೆಕಾಯಿ ಎಂಬುದಾಗಿ ಕಾಯಿಗಳ ಹೆಸರನ್ನು ಹೇಳುತ್ತಿರುವಂತೆ ಭ್ರಾಂತಿಯಾಗುತ್ತದೆ. ಆದರೆ ಇವನ್ನು, ಹೀರೆ-ಹೀರಲು, ತೋರೆ-ತೋರಲು, ತುಂಬಿದೆ-ಭರ್ತಿಯಾಗಿದೆ. ಇಪ್ಪೆ-ಇದ್ದೇನೆ, ಕಾಯಿ-ಕಾಪಾಡು ಎಂಬುದಾಗಿ ಒಡೆದು ನೋಡಿದಾಗ ಒಳಮರ್ಮ ತಿಳಿಯುತ್ತದೆ.

೩. ಕರುಣಾಕರ ಶ್ರೀಶ ಹುಶೈನ್
ಗರುಡವಾಹನನೆಂಬ ಹುಶೈನ್
ಅರಿತು ಬಂದೆನಲ್ಯಲ್ಲಿ
ಪುರಂದರವಿಠಲನಲ್ಲದಿಲ್ಲಲ್ಲಾ

“ಅಲ್ಲಾ” ಮತು “ಹುಸೇನ್” ಎಂಬ ಶಬ್ದಗಳ ಭ್ರಾಂತಿ ಮೂಡುವುದನ್ನು ಗಮನಿಸಬೇಕು. ಹುಶಿಏನ್ ಹ್ಯುಶೈನ್ ಎಂಬುದಾಗಿ ಅರ್ಥೈಸಿಕೊಂಡಾಗ ಈ ಭ್ರಾಂತಿ ನಿವಾರಣೆಯಾಗುತ್ತದೆ. ಇದೇ ರೀತಿ ತುರುಕರು (ಹಸುಕರು) ಎಂಬ ಶಬ್ದವನ್ನು ಬಳಸಿದ ಕೀರ್ತನೆಯನ್ನೂ ಇಲ್ಲಿ ಸೂಚಿಸಬಹುದು. ಒಟ್ಟಾರೆ ಇಲ್ಲೆಲ್ಲ ಮೇಲ್ನೋಟಕ್ಕೆ ಒಂದು ವಿಚಿತ್ರ ಪದದ ಭ್ರಾಂತಿಯುಂಟಾಗುತ್ತದೆ. ಆದರೆ ಅದರ ಒಳಹೊಕ್ಕು ನೋಡಿದಾಗ ಮಾತ್ರ ನಿಜವಾದ ಅರ್ಥ ಗೋಚರಿಸುತ್ತದೆ.
ಇನ್ನು, ನಾನಾರ್ಥಗಳನ್ನು ಹೊಂದಿದ ಒಂದೇ ಪದವನ್ನು ಬಳಸಿ ಚಮತ್ಕಾರವನ್ನು ಪ್ರದರ್ಶಿಸುವುದಕ್ಕೆ ಇದನ್ನು ಉದಾಹರಣೆಯಾಗಿ ನೋಡಬಹುದು.

೪.ಸಂವತ್ಸರಾಕ್ಷನುತ ಗಜವೈರಿ ಸಂಹರನೆ
ಸಂವತ್ಸರಾದಿ ಸಂವತ್ಸರತರಿದಿಯೊ
ಸಂವತ್ಸರ ಕುವರನೆ ಸಂವತ್ಸರನೆ ಯೆನ್ನ
ಸಂವತ್ಸರಳಿದು ಕೊಡು ಸಂವತ್ಸರಮತಿ
 (ಪ್ರಾಣೇಶವಿಠಲ)

ಸಂವತ್ಸರದ ಅರವತ್ತು ಹೆಸರುಗಳಲ್ಲಿ ಕೆಲವನ್ನು ಬಳಸಿ ಈ ಪದ್ಯಕ್ಕೆ ಹೀಗೆ ಅರ್ಥ ಹೇಳಬಹುದು : ಚಿತ್ರಭಾನು ನೇತ್ರನಿಂದ ಸ್ತುತಿಸಲ್ಪಟ್ಟವನೆ, ಗಜವೈರಿಯಾದ ನಕ್ರನನ್ನು ಕೊಂದವನೆ, ಖರನೇ ಮೊದಲಾದ ರಾಕ್ಷಸರನ್ನು ತರಿದೆಯೊ, ನಂದನ ಕಂದನೆ ಈಶ್ವರನೆ, ಎನ್ನ ದುರ್ಮತಿಯನ್ನು ಹೋಗಲಾಡಿಸಿ ಸೌಮ್ಯಮತಿಯನ್ನು ಕೊಡು.

ಇದೇ ರೀತಿ ಸಂಬಂಧನಿರೂಪಣೆಯವು. ಮಾದರಿಗೆ,
ಅಂಧ ಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ
ಚಂದದಿ ಪಡೆದನ ನಂದನೆಯಳ ನಲ
ವಿಂದ ಧರಿಸಿದ ಮುಕುಂದನಿಗೆ
(ಕನಕದಾಸರು)

ಅಂಧಕನಾದ ದೃತರಾಷ್ಟ್ರನ, ಅನುಜನಾದ ಪಾಂಡುವಿನ, ಕಂದನಾದ ಧರ್ಮರಾಯನ, ತಂದೆಯಾದ ಯಮಧರ್ಮರಾಯನನ್ನು ಕೊಂದಂತಹ ಶಿವನ ಶಿರಸ್ಸಿನಲ್ಲಿ ನಿಂದಂತಹ ಚಂದ್ರನನ್ನು ಚಂದದಿಂದ ಪಡೆದಂತಹ ಸಮುದ್ರ ರಾಜನ ಮಗಳಾದ ಲಕ್ಷ್ಮಿಯನ್ನು ನಲವಿಂದ ಧರದಿಂದ ಮುಕುಂದನಿಗೆ ಎಂಬುದಾಗಿ ಇದರ ಅರ್ಥ.

ಅರ್ಥಾಲಂಕಾರಗಳ ಬಳಕೆಗಂತೂ, ಹರಿದಾಸರು ಕೃತಿಗಳಲ್ಲಿ, ಕೊರತೆಯಿಲ್ಲ, ಉಪಮೆಗಳು, ರೂಪಕಗಳು, ದೃಷ್ಟಾಂತಗಳು ಇವೆಲ್ಲ ಮೇಲಿಂದ ಮೇಲೆ ಬರುತ್ತವೆ. ಕೆಲವೊಮ್ಮೆಯಂತೂ ಮಾಲೆಮಾಲೆಯಾಗಿ ಬರುವುದೂ ಉಂಟು:

೧. ವಾರಿಧಿಗೆ ಮಳೆಭಯವೆ ಮೇರುವಿಗೆ ಚಳಿಭಯವೆ
ಮಾರನ್ನ ಗೆದ್ದವಗೆ ನಾರಿಭಯವೆ
ತಾರಕಪ್ರಿಯ ಶಿರಿ ಗೋವಿಂದವಿಠಲನ
ಸೇರಿರುವ ಶೂರರಿಗೆ ಯಾರಭಯವಯ್ಯ

೨.ಕೋಣನ ಸಮುಖದಿ ವೀಣೆ ಬಾರಿಸಿದಂತೆ
ಜಾಣತನವಿಲ್ಲದಮಾತ್ಯನಂತೆ
ಮಾನವನು ಕಳಕೊಂಡ ಮಾನವನ ತೆರದಂತೆ
ವಾನರನ ಕೈಯಲ್ಲಿ ಮಾಣಿಕವ ಕೊಟ್ಟಂತೆ
(ಶ್ಯಾಮಸುಂದರ)

ಹೇಳಬೇಕಾಗಿರುವ ವಿಷಯವನ್ನು, ಎಳೆಳೆಯಾಗಿ ಬಿಡಿಸಿ ಎಷ್ಟು ರೀತಿಯಿಂದ ಸಾಧ್ಯವೊ ಅಷ್ಟುರೀತಿಯಿಂದಲೂ ಅದನ್ನು ವಿವರಿಸಿ, ಮನಮುಟ್ಟುವಂತೆ ಹೇಳುವ ಅಲಂಕಾರಗಳ ಇಂತಹ ಬಳಕೆ ಸಫಲವಾಗಿದೆ. ಸ್ವಭಾವೋಕ್ತಿಗೆ ಮಾದರಿಯಾಗಿ ಇದನ್ನು ನೋಡಬಹುದು.

ದೊಡ್ಡ ಹೊಟ್ಟೆಯ ಗೂನುಬೆನ್ನಿನ
ಅಡ್ಡಮೋರೆಯ ಗಂಟುಮೂಗಿನ
ದೊಡ್ಡ ಕೈಕಾಲುಗಳ ಉದುರಿದ ರೋಮಮೀಸೆಗಳ
ಜಡ್ಡು ದೇಹದ ಗುಜ್ಜುಗೊರಲಿನ
ಗಿಡ್ಡ ರೂಪಿನ ಹರಕುಗಡ್ಡದ
ಹೆಡ್ಡನಾದ ಕುರೂಪಿತನದಲಿ ನೃಪತಿ ವಿಷದಿಂದ
(ನಳಚರಿತ್ರೆ)

ಕಾರ್ಕೋಟಕನು, ಕಡಿದಾಗ ನಳನಿಗುಂಟಾದ ವಿಕಾರರೂಪಿನ ವರ್ಣನೆ ಇದು. ಇದ್ದುದನ್ನು ಇದ್ದಹಾಗೆಯೇ ಹೇಳಿದ್ದರೂ ಕಣ್ಣಿಗೆ ಕಟ್ಟುವಂತಹ ಚಿತ್ರ ಇಲ್ಲಿದೆ. ಸ್ವಭಾವೋಕ್ತಿಯ ಬಳಕೆ ಇಲ್ಲಿ ಸಫಲವಾಗಿದೆ. ಹೀಗೆಯೇ ಭಗವನ್ಮೂರ್ತಿಯ ಪಾದಾದಿಕೇಶಪರ್ಯಂತ ಅಲಂಕಾರದ ವರ್ಣನೆ, ಸ್ತ್ರೀಯರು ಸಿಂಗರಿಸಿಕೊಂಡಿದ್ದ ರೀತಿಯ ವರ್ಣನೆ, ಕೃಷ್ಣನ ಬಾಲಲೀಲೆಗಳ ವರ್ಣನೆ ಮುಂತಾದೆಡೆಗಳಲ್ಲೆಲ್ಲ ಸ್ವಭಾವೋಕ್ತಿ ಬಹಳವಾಗಿ ಬರುತ್ತಿದ್ದು ಬಳಕೆಯ ಸಾಫಲ್ಯವನ್ನು ಹೊಂದಿದೆ. ಅಲ್ಲೆಲ್ಲ ಸಹಜ ಸೊಬಗು, ಓದುಗಗರನ್ನು ಆಕರ್ಷಿಸುತ್ತದೆ. ಹೀಗೆ ಬಳಕೆಯಾಗಿರುವ ವಿವಿಧ ಅಲಂಕಾರಗಳು ಹರಿದಾಸರ ಕೃತಿಗಳ ಚೆಲುವಿನ ಮತ್ತೊಂದು ಮುಖವಾಗಿವೆ.

ಹರಿದಾಸರ ಕೃತಿಗಳ ಚೆಲುವಿನ ಇನ್ನೊಂದು ಮುಖ ಅದರ ಭಾಷೆಯ ಬಳಕೆಯಲ್ಲಿದೆ. ಹರಿದಾಸರು ಗ್ರಾಂಥಿಕ ಶೈಲಿಯನ್ನು ಆದಷ್ಟೂ ಕೈಬಿಟ್ಟು ಆಡುಮಾತಿನ ಧಾಟಿಯನ್ನು ವಿಶೇಷವಾಗಿ ಹಿಡಿದಿದ್ದಾರೆ. ದೊರೆ, ಅಕೋ, ಯಾಕೆ, ಬ್ಯಾಡ, ಮ್ಯಾಲೆ, ನೀನಾದ್ಯೋ, ತರಿದ್ಯೊ, ಮಿರಿದ್ದ, ಸೇರಿದ್ದ, ತೋರಿದ್ದ, ಉಂಬೋ, ಎಂಬೋ, ಮಾಡ್ದ, ಕೂಡ್ವ, ಜಾರ್ವ, ಹೇಳ್ವ, ಸೇರೋ (ಸೇರುವ), ತ್ವರದಿ (ತ್ವರೆಯಿಂದ) ಅಡವಿಲಿ, ಕಾಲಲಿ, ಮೂಲೇಲಿ, ನಡತೇಲಿ, ಸಿಟ್ಟಲಿ, ಸಡಿಲೋವು, ಹೋಗೋದು, ಬಾಹೋದು, ಮಾಡ್ಯಾರು, ಕೇಳ್ದರೆ, ಮದುವ್ಯಾದೆ, ಮರೆತಗೆ, ಕಿರಾತನ್ನ, ತಕ್ಕೊಂಡು, ಗೊಲ್ಲತೇರು, ಅಂಗನೇರು, ಮಾಡುಶಾನೆ, ತಿರುಗುತ್ತಾನೆ, ತೋರುತ್ತಾನೆ, ಹಿಡಕೊಳ್ಳೊ, ಹೊಕ್ಕೊಳ್ಳೊ, ಕೂತುಕೊಳ್ಳೊ, ಇನ್ಹೇಗೆ, ಎಂದೇಳಿ, ತಮ್ಹೆಂಡಿರು, ಮಾಡಿದ್ದಾಂಗೆ, ಬಂದಿಡಿಯೆ, ಮಾಯ್ಗಳ ಸಕಲಿಷ್ಟ, ಮಕ್ಕಳಾಧೀನ, ಮಾವಾರಿ, ಚಿಗುರುಚರಣ, ಎಲ್ಲಾಭೀಷ್ಟ, ಇಂದಿರೆ ರಮಣ, ರಾಜೀವ ಉಪಮ ಮುಂತಾದ ವಿಶಿಷ್ಟ ರೀತಿಯ ನುಡಿ ರಚನೆಗಳು; ಅಯ್ಯ, ಅಪ್ಪ, ಅಣ್ಣಯ್ಯ, ಅಪ್ಪಯ್ಯ, ಅಪ್ಪಯ್ಯ, ಮಾವಯ್ಯ, ಕಂದಯ್ಯ ಮುಂತಾದ ಸಂಬೋಧನೆಗಳು, ಇವೆಲ್ಲ ದಾಸರ ಭಾಷೆಯ ಮೆರುಗಿನ ಅಂಶಗಳು. ಸಂದರ್ಭಕ್ಕೆ ತಕ್ಕಂತೆ ಭಾಷೆಯನ್ನು ಬಳಸುವುದು ಮತ್ತೊಂದು ಗಮನಾರ್ಹ ಅಂಶ. ಬುಡು ಬುಡಿಕೆಯಪದ ಬಂದರೆ ಬುಡುಬುಡಿಕೆಯವನ ಧಾಟಿಯ ಭಾಷೆಯನ್ನೇ ಬಳಸುತ್ತಾರೆ;

ಜಯವದೆ, ಜಯವದೆ ಈ ಮನೆತನಕೆ
ಭಯವಿಲ್ಲ ಎಂದೆಂದಿಗು ನಿಜವು
ಬಿಡು ಬಿಡು ಬಿಡು ಬಿಡು ಮನಸಂಶಯವ

ಶುಕನೆಂಬಕ್ಕಿ ಹೇಳುತದಪ್ಪ
ಜಗವೆಂಬಾಗಿಡ ಹುಟ್ಟಿತಣ್ಣ
ಹಕ್ಕಿಗಳೆರಡು ಕೂದೈದಾವೆ
ಹಣ್ಣುಗಳೆರಡು ಐದಾವಪ್ಪ………
(ಪುರಂದರದಾಸರು)

ಎಂಬುದನ್ನು ನೋಡಬಹುದು. ಅಂತೆಯೇ ಕೊರವಂಜಿಯ ಮಾವು ಬಂದಾಗ ಅವಳದೇ ಮಾತಿನ ಧಾಟಿ. ಮಾದರಿಗೆ ;

ಅವ್ವವ್ವ, ಏಯವ್ವ ಕೈಯ್ಯ ತಾರೆ ಕೈಯ ತೋರೆ, ನೀ ಉಂಡ ಊಟಗಳೆಲ್ಲ ಕಂಡ ಕನಸುಗಳೆಲ್ಲ ಭೂಮಂಡಲದೊಳಗೆ ಕಂಡಾಗೆ ಪೇಳುವೆ ನವ್ವಾ…. ಸತ್ಯಮುಗಾ ಚೆಪ್ಪುತಾ ನಮ್ಮಾ ಸಂತೋಷಮುಗಾ ವಿನುವಮ್ಮ….(ವಾದಿದಾರರು) ಎಂಬುದನ್ನು ನೋಡಬಹುದು. ಇದೇ ರೀತಿ ಪ್ರಸನ್ನ ವೆಂಕಟದಾಸರು ಮುಂತಾದವರಲ್ಲಿ ಕೆಲೆವೊಮ್ಮೆ ಬಾಲಕೃಷ್ಣನ ಮಾತಿಗೆ ಬಾಲಭಾಷೆ ಬಳಕೆಯಾಗಿರುವುದೂ ಉಂಟು. ಇಂತಹ ಭಾಷೆಯೋಜನೆಯಿಂದಾಗಿ ಆಯಾ ಸಂದರ್ಭಗಳಲ್ಲಿ ಹೆಚ್ಚಿನ ಸಹಜತೆ ಮೂಡಲು ಅವಕಾಶವಾಗಿದೆ, ಸ್ಪಷ್ಟ ಹಾಗೂ ಆಕರ್ಷಕ ಚಿತ್ರಕಲ್ಪನೆಗೆ ಪೋಷಣೆ ದೊರೆತಿದೆ. ಆದರೆ,

ಗುರುಶ್ರೀನಿವಾಸ ಶರಣರ ಪೋಷ
ಗುರುಶ್ರೀನಿವಾಸ ಶ್ರೀಚರಣ ಸೇವಕರನು
ಪರಿಪಾಲಿಸಬೇಕೊ ಪರಮೋಲ್ಲಾಸ

ನಂಬಿದೆ ನಿನ್ನ ದಿವ್ಯಪಾದಾಂಬುಜವನ್ನೆ
ಕುಂಭಿನಿವಳಗೆನ್ನ ಡಂಭವ ತೊಲಗಿಸಿ
ಅಂಬುಜಧರನಂಘ್ರಿ ಸಂಭ್ರಮದಲಿ ತೋರೊ

ಶರಣಾಳುತು ಜಲಧರುನಿಹತಾ ಸರಿರೇ ತುಷಜಲ
ಶರಣಾಗತರ ಕ್ಷಮಣಿ ತವ
ಚಿರದೇ ವಿಸರಿಸವೇನಾರಿಕ ಅಹೇಕಾರೇ ದಯಾಕರು (ಮರಾಠಿ)

ರಕ್ಷಿಂಚ ನನ್ನು ಮಿಧ್ಯಾನಮು ಯಿಚ್ಛೆಯಿಂತಿಹನು
ತುಚ್ಛ ವಿಷಯಲನು ನಿಚ್ಚಯಿಂಚ ಗಮನ
ಸಚ್ಚಿದಾನಂದುನಿ, ಸತತಮಿದವೇಮೋ (ತೆಲುಗು)
ಉನಕ್ ನಾ ಶೋಲ್ಲ ಶಕ್ತಿ ನೆಯಿಪ್ಪಾ ಭಕ್ತವತ್ಸಲಾ
ಅನುಮಾನತ್ತೆ ಕಡತಿ ಸನುಮಾನಂ ಶೆಯ್ಯವೋ
ಗನಕರುಣಾಕರ ಅನುದಿನ ಮೊರೆವಾರೇ (ತಮಿಳು)
ಅರೆಮೇರೇ ದಾತ ಗುರೂಜಿ ಪರಮಪ್ರಖ್ಯಾತಾ
ಸರಸಿಜೋದ್ಭವಪಿತ ವೆಂಕಟವಿಠಲಕೆ
ದರಸನ ತರೆವಾರೆ ಮವಸುಪ್ರೀತಾ (ಉರ್ದು)
(ಪಾಠ ತುಂಬ ಕೆಟ್ಟದೆ)

ಎಂಬುದರಲ್ಲಿ ಕನ್ನಡ, ಮರಾಠಿ, ತೆಲುಗು, ತಮಿಳು ಮತ್ತು ಉರ್ದು ಭಾಷೆಗಳ ಬಳಕೆಯಿದ್ದರೂ ಅದರಿಂದ ಅಂತಹ ಪೋಷಣೆಯೇನೂ ದೊರೆತಂತೆ ಕಾಣುವುದಿಲ್ಲ. ಆದರೆ ಯಾವ ಭಾಷೆಯಲ್ಲೇ ಕರೆದರೂ ಅದು ಪರಮಾತ್ಮನಿಗೆ ಮುಟ್ಟತ್ತದೆಯೆಂಬ ಸತ್ಯವನ್ನು ಇಲ್ಲಿ ನಿರೂಪಿಸಿರುವಂತೆ ತೋರುತ್ತದೆ.

ಹರಿದಾಸರ ಕೃತಿಗಳಲ್ಲಿ ಸಂಸ್ಕೃತ ಶಬ್ದಗಳ ಬಳಕೆ ಕೂಡ ಹಿಂದೆ ಬಿದ್ದಿಲ್ಲ. ಯತಿಪರಂಪರೆಯವರ ಕೃತಿಗಳಲ್ಲಿ ಅವುಗಳ ಬಳಕೆ ಸ್ವಲ ಹೆಚ್ಚೆಂದೇ ಹೇಳಬೇಕು. ಉಳಿದವರಲ್ಲಿ ಕನ್ನಡ ಸಂಸ್ಕೃತಗಳ ಹದವರಿತ ಮಿಶ್ರಣ, ಕನ್ನಡಕ್ಕೆ ಹೆಚ್ಚಿನ ಪ್ರಾಶಸ್ತ್ಯ, ಅದರಲ್ಲೂ ಆಡುಮಾತಿನ ಧಾಟಿಗೆ ಪ್ರಧಾನ ಸ್ಥಾನ ಕೊಟ್ಟಿರುವುದು ವಿಶೇಷವಾಗಿ ಕಂಡುಬರುತ್ತದೆ.

ಹೀಗೆ ಹರಿದಾಸರ ಕೃತಿಗಳು ವೈವಿಧ್ಯಮಯವಾಗಿದ್ದು ಚೆಲುವಿನ ಗಣಿಗಳಾಗಿವೆ. ಕಠಿಣವಾದ ವೇದಾಂತವಿಚಾರಗಳು ಕೂಡ ಸರಳವಾಗಿ ಸಂವಹನಗೊಳ್ಳುವುದಕ್ಕೆ ಈ ಚೆಲುವೇ ಮೂಲ ಕಾರಣ. ಇದರ ಆಕರ್ಷಣೆಯ ಸಿಹಿಲೇಪನ ಅವಕ್ಕೆ ದೊರೆತಿದೆ, ಆ ಮೂಲಕ ಅವು ಜನರ ಜ್ಞಾನಜಠರವನ್ನು ಸುಲಭವಾಗಿ ಸೇರಲು ಸಾಧ್ಯವಾಗಿದೆ.

ಒಟ್ಟಿನಲ್ಲಿ ದಾಸಸಾಹಿತ್ಯದಲ್ಲಿ ಬಳಕೆಯಾದ ಶೈಲಿ ದೇಸಿ ಶೈಲಿ. ಒಂದು ಭಾಷೆಯನ್ನು ಸೃಜನಾತ್ಮಕವಾಗಿ ಬಳಸಿದಾಗ ಮಾತ್ರ ಅಂತಹ ಶೈಲಿ ವಿಧಾನ ಮಾಡುಬರುತ್ತದೆ. ಭಾಷೆಯನ್ನು ಸೃಜನಾತ್ಮಕವಾಗಿ ಬಳಸುವುದೆಂದರೆ ಚಿಂತನಶೀಲ ಮನಸ್ಸೊಂದು ಭಾಷೆಯ ರೂಢಿ, ಜಡವಾದ ವ್ಯಾವಹಾರಿಕ ಸ್ವರೂಪವನ್ನು ಮುರಿದು ತನ್ನ ಸಮೃದ್ಧವೂ ತೀವ್ರವೂ ಆದ ಅನುಭವಗಳಿಗೆ ತಕ್ಕಭಾಷಿಕ ಮಾಧ್ಯಮವನ್ನು ಕಟ್ಟುವ ಕ್ರಿಯೆಯಲ್ಲಿ ತೊಡಗುವುದೆಂದಂರ್ಥ. ಹದಿನಾರನೆಯ ಶತಮಾನದ ದಾಸರು ಸಾಮಾಜಿಕ ಅಂದೋಲನದಲ್ಲಿ ತೊಡಗಿಸಿಕೊಂಡಾಗ ಕನ್ನಡ ಭಾಷೆಯನ್ನು ಅತ್ಯಂತ ಸೃಜನಾತ್ಮಕವಾಗಿ ಬಳಸುವುದರ ಮೂಲಕ ‘ಕೀರ್ತನೆ’ ಎಂಬ ವಿಶಿಷ್ಟ ಅಭಿವ್ಯಕ್ತಿ ಪ್ರಕಾರವೊಂದನ್ನು ಕನ್ನಡ ಸಾಹಿತ್ಯ ಪರಂಪರೆಗೆ ಸೇರಿದ್ದು ತುಂಬ ಮಹತ್ವದ ಸಂಗತಿಯಾಗಿದೆ.