ನ್ನಡ ಸಾಹಿತ್ಯದ ತವನಿಧಿಗಳಲ್ಲಿ ದಾಸಸಾಹಿತ್ಯವೂ ಒಂದು. ಹಿಮಾಲಯದ ಎತ್ತರದಿಂದ ಹರಿದುಬಂದ ಗಂಗೆ ಬಯಲಿನಲ್ಲಿಳಿದು ನೆಲವನ್ನೆಲ್ಲ ಫಲದ್ರೂಪ ಮಾಡುವಂತೆ ಕನ್ನಡ ಸಾಹಿತ್ಯ ಶರಣರು ಮತ್ತು ದಾಸರ ಸಾಹಿತ್ಯಗಳಲ್ಲಿ ಫಲಪ್ರದವಾಗಿ ಹರಿಯಿತು. ಶರಣರ ತರುವಾಯ ಭಕ್ತಿ ಪರಂಪರೆಯನ್ನು ಉಜ್ವಲವಾಗಿ ಬೆಳೆಗಿಸಿದವರು ಹರಿದಾಸರು. ಜನರ ಮೇಲೆ ನಿರಂತರ ಪ್ರಭಾವವನ್ನು ಬೀರುವ ಜನಸಂಮುಖತೆ ದಾಸಸಾಹಿತ್ಯದ ಪ್ರಮುಖ ಲಕ್ಷಣಗಳಲ್ಲಿ ಒಂದು. ಮಧ್ವಸಿದ್ಧಾಂತ ಪ್ರತಿಪಾದನೆಯಷ್ಟೆ ದಾಸರ ಉದ್ದೇಶವಲ್ಲ. ತಾವು ಬದುಕಿದ ಪರಿಸರವನ್ನು ಹಸನಾಗಿಸುವುದು, ಸಮಾಜದಲ್ಲಿದ್ದ ಅಂದ ಕಂದಾಚಾರಗಳನ್ನು ಲೇವಡಿ ಮಾಡಿ ಜನರನ್ನು ಸರಿಯಾದ ದಾರಿಗೆ ತರುವುದು ಅವರ ಉದ್ದೇಶವಾಗಿತ್ತು. ಸಾಹಿತ್ಯಕ್ಕೆ ಸಂಗೀತದ ಲೇಪನ ಮಾಡಿದ್ದು. ಆಡುನುಡಿಯನ್ನು ತಮ್ಮ ಅಭಿವ್ಯಕ್ತಿಗೆ ಬಳಸಿದ್ದು ದಾಸರು ಮಾಡಿದ ಭಾಷಿಕ ಕ್ರಾಂತಿ ಎನ್ನಬಹುದು. ದಾಸರ ಹಾಡುಗಳು ಪ್ರಸ್ತಾರದ ಮತ್ತು ಲಯದ ಬಿಗಿ ಕಟ್ಟಿಲ್ಲದೆ ಸಹಜ ಮನೋಹರವಾದ ಗೇಯತೆಯನ್ನು ಪಡೆದಿವೆ. ಇಲ್ಲಿ ರಾಗ ತಾಳಬದ್ಧವಾಗಿ ಪಲ್ಲವಿ, ಅನುಪಲ್ಲವಿ ನುಡಿಗಳ ಸಂಯೋಜನೆಯಿರುತ್ತದೆ. ಈ ಕಾರಣಗಳಿಂದಲೇ ದಾಸರ ಹಾಡುಗಳನ್ನು ಇಂದಿಗೂ ಹಳ್ಳಿಗರು ಭಜನೆ ಇತ್ಯಾದಿ ಸಂದರ್ಭದಲ್ಲಿ ಸೊಗಸಾಗಿ ಹಾಡುತ್ತಾರೆ. ಸಮಕಾಲೀನ ಸಾಹಿತ್ಯಿಕ ವಾಗ್ವಾದಗಳ ಹಿನ್ನೆಲೆಯಲ್ಲಿ ದಾಸ ಸಾಹಿತ್ಯವನ್ನು ಮರು ಓದಿಗೆಯೊಳಪಡಿಸಬೇಕಾಗಿದೆ.

ಕರ್ನಾಟಕಕ್ಕೆ ಮಿಶನರಿಗಳ ಆಗಮನದಿಂದ ಪ್ರಾಚೀನ ಕೃತಿಗಳ ಸಂಪಾದನೆ ಮತ್ತು ಪ್ರಕಟಣ ಕಾರ್ಯ ಆರಂಭವಾಯಿತೆನ್ನಬಹುದು. ಇದಕ್ಕೆ ದಾಸ ಸಾಹಿತ್ಯವೂ ಹೊರತಲ್ಲ. ಧರ್ಮ ಪ್ರಸಾರ, ಬೈಬಲ್ ಅನುವಾದಕ್ಕೆ ತೊಡಗಿದ ಮಿಶನರಿ ಪಂಡಿತರು ಕಾವ್ಯ, ಶಾಸ್ತ್ರ, ಗ್ರಂಥಸಂಪಾದನೆ ಈ ಕ್ಷೇತ್ರದ ಅಧ್ಯಯನಕ್ಕೆ ತಮ್ಮನ್ನೇ ತಾವು ತೊಡಗಿಸಿಕೊಂಡರು. ದಾಸ ಸಾಹಿತ್ಯ ಪ್ರಕಟಣೆಯನ್ನು ಮೊದಲು ಆರಂಭಿಸಿದರು ಮಿಶನರಿ ವಿದ್ವಾಂಸ ಹೆರ್ಮನ್ ಮೋಗ್ಲಿಂಗ್ (೧೮೫೦). ಅವರ ‘ದಾಸರ ಪದಗಳು’ ದಾಸ ಸಾಹಿತ್ಯದ ಮೊದಲ ಸಂಪಾದನೆಯ ಕೃತಿ ದಾಸರ ಹಾಡುಗಳನ್ನು ಪಠ್ಯಪುಸ್ತಕದಲ್ಲಿ ಸೇರಿಸಿ ವಾಚಕರಿಗೆ ಒದಗಿಸಿದ ಶ್ರೇಯಸ್ಸು ಮಿಶನರಿಗಳಿಗೆ ಸಲ್ಲಬೇಕು.

೧೯೨೦ ರಿಂದ ೧೯೪೦ರ ಕಾಲಮಾನ ದಾಸಸಾಹಿತ್ಯ ಸಂಪಾದನೆಯ ಸುವರ್ಣಯುಗವೆಂದು ಹೇಳಬಹುದು. ಗೋರೆಬಾಳು ಹನುಮಂತರಾಯ, ಸುಬೋಧ ರಾಮರಾಯ ಮತ್ತು ಪಾವಂಜೆ ಗುರುರಾಯರು ತಮ್ಮ ಜೀವನಮಾನವನ್ನೇ ದಾಸ ಸಾಹಿತ್ಯ ಅಧ್ಯಯನ ಮತ್ತು ಸಂಪಾದನೆಗೆ ಮೀಸಲಿಟ್ಟರು.

ಗೋರೆಬಾಳರು ಲಿಂಗಸೂರನ್ನು ಕೇಂದ್ರವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕದ ಹಳ್ಳಿ ಹಳ್ಳಿಗೆ ಹೋಗಿ ದಾಸರ ಹಸ್ತಪ್ರತಿಗಳನ್ನು ಸಂಗ್ರಹಿಸುವ ಕಾರ್ಯವನ್ನು ಮಾಡಿದರು. ಕನ್ನಡ ಅಧ್ಯಯನದ ಆರಂಭದ ಹಂತದಲ್ಲಿ ಕ್ಷೇತ್ರಕಾರ್ಯಕ್ಕೆ ಒತ್ತುಕೊಟ್ಟವರಲ್ಲಿ ಗೋರೆಬಾಳರು ಪ್ರಮುಖರು. ೧೯೪೪ರಲ್ಲಿ ಲಿಂಗಸೂರಿನಲ್ಲಿ ತಮ್ಮ ಆರಾಧ್ಯದೈವ ವರದೇಂದ್ರನ ಹೆಸರಿನಲ್ಲಿ ‘ವರದೇಂದ್ರ ಹರಿದಾಸ ಸಾಹಿತ್ಯ ಮಂಡಲ’ವನ್ನು ಸ್ಥಾಪಿಸಿದರು. ಆ ಮೂಲಕ ದಾಸ ಸಾಹಿತ್ಯವನ್ನು ಸಂಯೋಜಿಸಿ, ಪ್ರಕಟಿಸುವ ಕಾರ್ಯ ಕೈಕೊಂಡರು. ಗೋರೆಬಾಳರು ವಿಜಯದಾಸರ ಸುಳಾದಿಗಳನ್ನು ಒಂಬತ್ತು ಸಂಪುಟಗಳಲ್ಲಿ ಮಿಕ್ಕದಾಸರ ಸುಳಾದಿಗಳನ್ನು ಐದು ಸಂಪುಟಗಳಲ್ಲಿಪ್ರಕಟಿಸಿದ್ದಾರೆ. ಜಗನ್ನಾಥದಾಸರ ಹರಿಕಥಾಮೃತ ಟೀಕಾಸಾರವನ್ನು ಆರು ಸಂಪುಟಗಳಲ್ಲಿ ಪ್ರಕಟಿಸಿದುದು ಗೋರೆಬಾಳರ ಪರಮಸಾಧನೆಯಾಗಿದೆ. ೧೯೬೦ರ ವರೆಗೆ ಗೋರೆಬಾಳರು ಒಟ್ಟು ೯೫೦ ಸುಳಾದಿಗಳನ್ನು, ೧೦೦೦ ಉಗಾಭೋಗಗಳನ್ನು, ಐದುವರೆ ಸಹಸ್ರ ಕೀರ್ತನೆಗಳನ್ನು ಹಾಗೂ ಹದಿನೈದು ಗದ್ಯ ಗ್ರಂಥಗಳನ್ನು ಪ್ರಕಟಿಸಿದರು. ಗೋರೆಬಾಳರು ವರದೇಂದ್ರ ಹರಿದಾಸ ಸಾಹಿತ್ಯ ಮಂಡಲದ ಮೂಲಕ ಅಪ್ರಕಟಿತವಾದ ಹರಿದಾಸ ಸಾಹಿತ್ಯವನ್ನು ಪರಿಷ್ಕರಿಸಿ, ಪ್ರಕಟಿಸಿ, ಕನ್ನಡ ಸಾಹಿತ್ಯಕ್ಕೆ ಸಲ್ಲಿಸಿದ ಸೇವೆ ಅಮೂಲ್ಯವಾದುದು. ವಚನ ಸಾಹಿತ್ಯಕ್ಕೆ ಹಳಕಟ್ಟಿ ಅವರು ಹೇಗೋ ದಾಸ ಸಾಹಿತ್ಯಕ್ಕೆ ಗೋರೆಬಾಳರು ಹಾಗೆಯೇ.

ಸುಬೋಧರಾಮರಾಯರು ಮಾಡಿದ ಕೆಲಸಗಳಲ್ಲಿ ಶಾಶ್ವತವಾಗಿ ನಿಲ್ಲುವಂತಹದ್ದು ದಾಸ ಸಾಹಿತ್ಯ ಕ್ಷೇತ್ರಕ್ಕೆ ಅವರು ದುಡಿದದ್ದು. ಈ ವಿದ್ವತ್ ಕಾರ್ಯವು ಅವರಿಗೆ ದಾಸಸಾಹಿತ್ಯ ಪ್ರವರ್ತಕಾರೆಂದು ಚರಿತ್ರೆಯಲ್ಲಿ ಶಾಶ್ವತ ಸ್ಥಾನ ದೊರಕಿಸಿ ಕೊಟ್ಟಿದೆ. ಕ್ಷೇತ್ರಕಾರ್ಯದ ನೆರವಿನಿಂದ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಸಂಯೋಜಿಸಿ ಸಂಪಾದಿಸಿದರು. ತಾವು ಪ್ರಾರಂಭಿಸಿದ ಸುಭೋಧ ಕುಸುಮಾಂಜಲಿಯ ಅಡಿಯಲ್ಲಿ ‘ಹರಿದಾಸ ಕೀರ್ತನ ತರಂಗಿಣಿ’ ಎಂಬ ಮಾಲೆಯನ್ನು ಆರಂಭಿಸಿ ಪುರಂದರದಾಸರ, ಕನಕದಾಸರ, ಜಗನ್ನಾಥದಾಸರ, ವಿಜಯದಾಸರ, ಶ್ರೀವಾದಿರಾಜರ, ಶ್ರೀಪಾದರಾಜರ ಹಾಗೂ ಮೋಹನ ದಾಸರ ಕೃತಿಗಳನ್ನು ೧೨ ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ. ದಾಸ ಸಾಹಿತ್ಯಕ್ಕೆ ಅವು ಬೆಲೆಯುಳ್ಳ ಕೊಡುಗೆಗಳಾಗಿವೆ.

ದಾಸಸಾಹಿತ್ಯ ಸಂಪಾದನೆಗೆ ವೈಯಕ್ತಿಕ ಸೇವೆ ಸಲ್ಲಿಸಿದವರಲ್ಲಿ ಪಾವಂಜೆ ಗುರುರಾಯರು ಪ್ರಮುಖರು. ಶ್ರೀಯುತರು ಹಸ್ತಪ್ರತಿಗಳಿಂದ ಹಾಗೂ ದಾಸರ ಆರಾಧನಾ ಉತ್ಸವಗಳಲ್ಲಿ ಮೌಖಿಕವಾಗಿ ಸಾಗುತ್ತಿದ್ದ ದಾಸರ ರಚನೆಗಳನ್ನು ದಾಖಲಿಸಿಕೊಳ್ಳುತ್ತಿದ್ದರು. ಪಾವಂಜೆಯವರು ಸಂಗ್ರಹಿಸಿ, ಪ್ರಕಟಿಸಿದ ದಾಸಸಾಹಿತ್ಯ ಸಂಪುಟಗಳು ಹಲವು ಇಂತಿವೆ. ಪಾವಂಜೆಯವರು ಪುರಂದರದಾಸರ, ವಾದಿರಾಜ, ಕನಕದಾಸರ, ವಿಜಯದಾಸರ, ಗೋಪಾಲದಾಸರ, ಜಗನ್ನಾಥದಾಸರ, ಕೀರ್ತನೆಗಳನ್ನು ಸಂಪಾದಿಸಿದ್ದಾರೆ. ಅದರಂತೆ ದಾಸರು ರಚಿಸಿದ ಕಥನ ಕವನಗಳನ್ನು, ವ್ರತ ಕಥೆಗಳ ಹಾಡುಗಳನ್ನು ಸಂಪಾದಿಸಿರುವರು. ಶ್ರೀ ಪಾವಂಜೆಯವರು ಸಂಪಾದಿಸಿದ ದಾಸರ ರಚನೆಗಳಿಗೆ ಅಭ್ಯಾಸಪೂರ್ಣ ಪ್ರಸ್ತಾವನೆ ಬರೆದಿದ್ದಾರೆ. ಹರಿದಾಸರ ಜೀವನ, ಸಾಧನೆ ಹಾಗೂ ಅವರ ರಚನೆಗಳ ವೈಶಿಷ್ಟ್ಯಗಳನ್ನು ಪ್ರಸ್ತಾವನೆಯಲ್ಲಿ ಚರ್ಚಿಸಿದ್ದಾರೆ.

ಬೆಟಗೇರಿ ಕೃಷ್ಣಶರ್ಮ ಮತ್ತು ಹುಚ್ಚರಾಯ ಬೆಂಗೇರಿ ಅವರು ಜೊತೆ ಸೇರಿ ಪುರಂದರ ದಾಸರ ಸಾಹಿತ್ಯವನ್ನು ಆರು ಸಂಪುಟಗಳಲ್ಲಿ ಸಂಪಾದಿಸಿ, ಪ್ರಕಟಿಸಿದ್ದಾರೆ. ಪುರಂದರದಾಸರ ಸಾಹಿತ್ಯವು ಪೂಜಾತತ್ವ, ಆರ್ತಭಾವ, ಮಹಾತ್ಮ್ಯಜ್ಞಾನ, ಕೃಷ್ಣಲೀಲೆ, ಲೋಕನೀತಿ ಮತ್ತು ಸಂಕೀರ್ಣ ಸಂಗ್ರಹ ಎಂಬು ಆರು ಭಾಗಗಳಲ್ಲಿ ಹಬ್ಬಿಕೊಂಡಿವೆ. ದಾಸ ಪರಂಪರೆ, ಭಾಷೆ, ಹಾಡುಗಳ ಲಯ, ಛಂದಸ್ಸು ಇವುಗಳ ಹಿನ್ನೆಲೆಯಲ್ಲಿ ಪ್ರಸ್ತಾವನೆ ಬರೆದಿದ್ದಾರೆ. ಈ ಮೊದಲು ಸಾಗಿ ಬಂದಿದ್ದ ಸಂಪಾದಿತ ಪುರಂದರ ಸಾಹಿತ್ಯದಲ್ಲಿಯ ಕೊರತೆಗಳನ್ನೆಲ್ಲಾ ನಿವಾರಿಸಿದ್ದಾರೆ, ಬೆಟಗೇರಿ ಮತ್ತು ಬೆಂಗೇರಿಯವರು.

ಗೋರೆಬಾಳ, ಸುಬೋಧ, ಪಾವಂಜೆ, ಬೆಟಗೇರಿ ಇವರ ನಂತರ ದಾಸ ಸಾಹಿತ್ಯವನ್ನು ವ್ಯಾಪಕವಾಗಿ ಪ್ರಕಟಿಸಲು ಪ್ರಯತ್ನಿಸಿದುದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ. ಈ ಸಂಸ್ಥೆಯ ಒಂದು ಶಾಖೆಯಾಗಿ ಹರಿದಾಸ ಸಾಹಿತ್ಯ ಸಂಪಾದನೆ, ಪ್ರಕಟಣೆ ಎಂಬ ಒಂದು ಯೋಜನೆ ಅಸ್ತಿತ್ವಕ್ಕೆ ಬಂದಿತು (೧೯೬೮). ಡಾ.ಜಿ. ವರದರಾಜರಾವ್ ಅವರ ನೇತೃತ್ವದಲ್ಲಿ ಹಸ್ತಪ್ರತಿಗಳ ಸಂಗ್ರಹ, ಸಂಪಾದನೆ, ಪ್ರಕಟಣೆ ಹಾಗೂ ಅಧ್ಯಯನ ನಡೆಸಲು ಆರಂಭವಾಯಿತು. ಇದರ ಫಲವಾಗಿ ಶ್ರೀಪಾದರಾಜರ ಕೃತಿಗಳು, ಶ್ರೀ ಮಹಿಪತಿರಾಯರ ಕೃತಿಗಳು, ಶ್ರೀ ಗೋಪಲದಾಸರ ಕೃತಿಗಳು, ಶ್ರೀ ವಾದಿರಾಜರ ಕೃತಿಗಳು, ಹರಪನಹಳ್ಳಿ ಭೀಮವ್ವಳ ಹಾಡುಗಳು, ಶ್ರೀ ಜಗನ್ನಾಥದಾಸರ ಕೃತಿಗಳು, ಶ್ರೀ ಪ್ರಸನ್ ವೆಂಕಟದಾಸರ ಕೃತಿಗಳು, ಹೆಳವನ ಕಟ್ಟೆ ಗಿರಿಯಮ್ಮನ ಹಾಡುಗಳು, ಶ್ರೀ ರಾಮದಾಸರ ಕೃತಿಗಳು ಮತ್ತು ಶ್ರೀಮಹಿಪತಿರಾಯರ ಕೃತಿಗಳು ಇಂತಹ ಮೌಲಿಕ ಸಂಪುಟಗಳು ಪ್ರಕಟವಾದವು. ಒಟ್ಟಿನಲ್ಲಿ ಮೈಸೂರು ವಿಶ್ವವಿದ್ಯಾಯಲದ ದಾಸ ಸಾಹಿತ್ಯ ಸಾಧನೆ ಅಪೂರ್ವವಾಗಿದೆ. ಐತಿಹಾಸಿಕ ಮಹತ್ವವುಳ್ಳದಾಗಿದೆ. ಜಿ. ವರದರಾಜರಾಯರಿಗೆ ಟಿ.ಎನ್. ನಾಗರತ್ನ, ಟಿ.ಕೆ. ಇಂದುಬಾಯಿ ಅವರು ನೇರವಾಗಿದ್ದರೆಂದು ವಿಶೇಷವಾಗಿ ಹೇಳಬೇಕಾಗಿದೆ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ದಾಸಸಾಹಿತ್ಯದ ಸಮಗ್ರ ಸಂಪುಟಗಳನ್ನು ಹೊರತಂದಿದೆ. ಇದೂ ಸಹಿತ ಚಾರಿತ್ರಿಕ ದಾಖಲೆಯಾಗಿದೆ.

ಕನ್ನಡ ಸಂಸ್ಕೃತಿಯ ಸಂವರ್ಧನೆಗೆ ಉಗಮಗೊಂಡ ಕನ್ನಡ ವಿಶ್ವವಿದ್ಯಾಲಯದಲ್ಲಿ ವಿವಿಧ ಪೀಠಗಳಿರುವಂತೆ ಪುರಂದರದಾಸ ಅಧ್ಯಯನ ಪೀಠವಿದೆ (೧೯೯೯). ಕಳೆದ ನಾಲ್ಕು ವರ್ಷಗಳಿಂದ ಪೀಠವು ಪ್ರೊ. ಎ.ವಿ. ನಾವಡ ಅವರ ನೇತೃತ್ವದಲ್ಲಿಗುರುತರ ಕೆಲಸ ಮಾಡಿದೆ. ಹಸ್ತಪ್ರತಿಗಳ ಸಂಗ್ರಹ, ಸಂಪಾದನೆ, ದಾಸ ಸಂಸ್ಕೃತಿ ಸಮ್ಮೇಳನ ಏರ್ಪಡಿಸುವುದು ಆ ಮೂಲಕ ದಾಸರ ಕೀರ್ತನೆಗಳನ್ನು ಹೊಸ ಕಾಲದ ವಾಗ್ವಾದಗಳಿಗೆ, ಚರ್ಚೆಗೆ ಅಣಿಗೊಳಿಸುವುದು ಇಂತಹ ಕೆಲಸಗಳನ್ನು ವ್ಯಾಪಕವಾಗಿ, ಯೋಜನಾ ಬದ್ಧವಾಗಿ ಮುನ್ನಡೆಸಿಕೊಂಡು ಹೋಗಲಾಗುತ್ತಿದೆ.

ದಾಸ ಸಾಹಿತ್ಯವನ್ನು ಈಗ ಸಿದ್ದವಿರುವ ಪ್ರಾಚೀನ ಮಾರ್ಗ ಕೃತಿಗಳ ಸಂಪಾದನೆಯ ವಿಧಾನದಲ್ಲಿಯೇ ಸಂಪಾದಿಸಬೇಕೆ? ಅಥವಾ ಬೇರೊಂದು ವಿಧಾನವನ್ನು ಕಂಡುಹಿಡಿಯಬೇಕೆ? ಎಂಬ ಪ್ರಶ್ನೆ ಈಗ ಅಧ್ಯಯನಕಾರರನ್ನು ಕಾಡುತ್ತಿದೆ. ನನ್ನ ಪ್ರಕಾರ ದಾಸಸಾಹಿತ್ಯ ಸಂಪಾದನೆಗೆ ಬೇರೊಂದು ವಿಧಾನವೇ ಸೂಕ್ತ. ಮಾರ್ಗ ಸಾಹಿತ್ಯ ಸಂಪಾದನೆಗೂ ದಾಸ ಸಾಹಿತ್ಯ ಸಂಪಾದನೆಗೂ ತುಂಬ ಅಂತರವಿದೆ. ಮಾರ್ಗ ಸಾಹಿತ್ಯವನ್ನು ಕವಿ ರಚಿಸಿದ ನಂತರ ಲಿಪಿಕಾರರು ಅದನ್ನು ಪ್ರತಿ ಮಾಡುತ್ತಾರೆ. ಅಂತಹ ಕೆಲವು ಹಸ್ತಪ್ರತಿಗಳನ್ನು ಕಲೆಹಾಕಿ, ಪೀಳಿಗೆಯನ್ನು ರಚಿಸಿ ಒಪ್ಪಿತ ಪಾಠವನ್ನು ಸುಲಭವಾಗಿ ಗುರುತಿಸಬಹುದು.

ದಾಸ ಸಾಹಿತ್ಯದ ಪರಿಸ್ಥಿತಿ ಹಾಗಿಲ್ಲ. ದಾಸಸಾಹಿತ್ಯ ಅಂಶ ಗಣದ ಮೇಲೆ ನಿಂತ ಮಟ್ಟುವಾಗಿದೆ. ಶೈಥಿಲ್ಯದ ಕಡೆಗೆ ಅದರ ಒಲವು. ಜೊತೆಗೆ ಅಲ್ಲಿ ಸಂಗೀತಕ್ಕೆ ಪ್ರಾಧಾನ್ಯತೆಯಿದೆ. ಇದರಿಂದ ದಾಸರು ಹಾಡಿದ ನಂತರ ಅದು ಕಂಠಸ್ಥವಾಗಿ ಉಳಿದು ಒಬ್ಬರಿಂದ ಇನ್ನೊಬ್ಬರಿಗೆ ಪ್ರಚಾರವಾಗುತ್ತದೆ. ಎಷ್ಟೋ ದಿನಗಳ ಬಳಿಕ ಬರೆಹದಲ್ಲಿ ದಾಖಲಾಗುತ್ತದೆ. ಈ ಹಾಡುಗಳನ್ನು ಸಾಮಾನ್ಯ ವಿದ್ಯಾವಂತರು ಹಾಡುವುದರಿಂದ ಮೂಲಪಾಠ ಕೆಲವು ಸಾರಿ ತಪ್ಪಿ ಹೋಗುವುದುಂಟು ಅಥವಾ ಬಿಟ್ಟು ಹೋಗುವುದುಂಟು. ಹೀಗಾಗಿ ಒಬ್ಬರೇ ಹರಿದಾಸರ ಕೃತಿಗಳು ಒಂದೇ ಕಡೆ ಸಿಗುವುದಿಲ್ಲ (ವಿಜಯದಾಸರ ರಚನೆಗಳು ಮಾತ್ರ ಇದಕ್ಕೆ ಅಪವಾದವಾಗಿವೆ). ದಾಸ ಸಾಹಿತ್ಯ ಸಂಪಾದಿಸಲು ಹೊರಟ ಸಂಪಾದಕನಿಗೆ ಎರಡು ಸಮಸ್ಯೆಗಳು ತಲೆದೊರುತ್ತವೆ.

ದಾಸ ಸಾಹಿತ್ಯ ಹಾಡುಗಬ್ಬವಾಗಿರುವುದರಿಂದ ಆದಿ ಪ್ರಾಸಾಕ್ಷರದ ನಿರ್ಬಂಧವು ಈ ಹಾಡುಗಳಲ್ಲಿ ಒಂದಿಷ್ಟು ಸಡಿಲಗೊಂಡಿರುತ್ತದೆ. ಗಣಗಳಲ್ಲಿ ಸೇರಿದ ಅಂಶಗಳ ಸಂಖ್ಯೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಇವುಗಳಿಂದ ಹಸ್ತಪ್ರತಿಗಳ ಬಾಹುಳ್ಯ ಅಧಿಕವಾಗಿರುತ್ತದೆ. ಹಾಗೂ ವೈವಿಧ್ಯತೆಯಿಂದ ಕೂಡಿರುತ್ತದೆ. ಇಂತಹ ಸಂದರ್ಭದಲ್ಲಿ ಹಸ್ತಪ್ರತಿಗಳ ಸಂಯೋಜನೆಯ ಕೆಲಸ ಮುಗಿದ ಮೇಲೆ ಅವುಗಳನ್ನು ತಾಳೆ ಮಾಡಿ ಭಿನ್ನ ಪಾಠಗಳನ್ನು ಗುರುತಿಸಬೇಕು. ಭಿನ್ನ ಪಾಠಗಳ ಹಾಡನ್ನು ಒಂದು ಘಟಕವಾಗಿ ಪರಿಗಣಿಸಬೇಕು. ಪಠ್ಯದಲ್ಲಿ ಪ್ರಾದೇಶಿಕ ಚಹರೆಗಳು ಕಾಣಿಸುತ್ತವೆ. ಹೀಗಾಗಿ ದಾಸ ಸಾಹಿತ್ಯದಲ್ಲಿ ಒಂದು ಪಠ್ಯ ಎನ್ನುವುದು ಇರುವುದಿಲ್ಲ. ಬಹುರೂಪಿ ಪಠ್ಯ ಇರುವುದು ಸಹಜ. ಹರಪನಹಳ್ಳಿ ಪ್ರದೇಶದ ಭೀಮವ್ವನ ಹಾಡುಆ ಪ್ರದೇಶದಲ್ಲಿ (ಹರಪನಹಳ್ಳಿ) ಒಂದು ಬಗೆಯಾಗಿದ್ದರೆ ಬೆಳಗಾವಿ ಪ್ರದೇಶದ ಕಡೆಗೆ ಇನ್ನೊಂದು ರೀತಿಯಾಗಿರುತ್ತದೆ.

ಹರಪನಹಳ್ಳಿ ಪ್ರದೇಶದ ಕಡೆಗೆಬೆಳಗಾವಿ ಪ್ರದೇಶದ ಕಡೆಗೆ

ದೇವೇಂದ್ರನ ಸೊಸೆ ದೇವಕ್ಕಿ ತನಯಳು                   ದೇವೇಂದ್ರನ ಸೊಸೆಯ
ದೇವಕಿ ತನಯಳು
ಏನೇನು ಬಯಸಿದಳು                                          ಏನೇನು ಬಯಸುವಳು
ಒಂದು ತಿಂಗಳು ತುಂಬಲು ಸುಭದ್ರ                        ಒಂದು ತಿಂಗಳು ತುಂಬಲು ಸುಭದ್ರ
ಅಂಜೂರಿ ದ್ರಾಕ್ಷಿ ಕಿತ್ತಳೆ ಜಂಬು                              ದ್ರಾಕ್ಷಿ ಕಿತ್ತಳೆ ಜಂಜು
ನೇರಳು ಬಯಸಿದಳು                                          ನೀರಲೆ ಬಯಸಿದಳು
ಅಂಬುಜಾಕ್ಷನ ತಂಗಿ ಪೈಜರಣರುಳಿಗೆಜ್ಜೆಕಾ              ತಂಗಿ ಕಾಲಲ್ಲಿ ಸರಗೆಜ್ಜೆ ಕಾಲುಂಗರ
ಲುಂಗರ ಕಿರುಪಲ್ಯ ಇಟ್ಟೇನೆಂಬುವಳಿ                      ಕಿರುಪಿಲ್ಯ ಇಟ್ಟೇನೆಂಬುವಳು
ಎರಡು ತಿಂಗಳು ತುಂಬಲ ಸುಭದ್ರ                          ಎರಡು ತಿಂಗಳು ತುಂಬಲು ಸುಭದ್ರ
ಪರಡಿ ಮಾಲತಿ ಸಣ್ಣ ಶ್ಯಾವಿಗೆ                             ಪರಡಿ ಪಾಯಸ ಸಣ್ಣ
ಬಯಸಿದಳು……..                                             ಶ್ಯಾವಿಗಿ ಬಯಸುವಳು
ಪರಮೇಶನ ತಂಗಿ ಹರಡಿ ಕಂಕಣ ಹಸ್ತ                     ತಂಗಿ ಹರಡಿ ಕಂಕಣ ಹಸ್ತ
ಕಡಗ ಹಿಂಬಳೆ ದ್ವಾರ್ಯ ಇಟ್ಟೇನೆಂಬುವಳು             ಕಡಗ ಹಸಿರುಬಳೆ ಇಟ್ಟೇನೆಂಬುವಳ್

…… ಈ ಜಾಗದಲ್ಲಿ ಗರ್ಭಿಣಿ ಹೆಂಗಸರ ಅಣ್ಣನೆ ಹೆಸರು ಇರುತ್ತದೆ.

ಹಲವು ಜನ ಹಾಡಿದ ಗೀರ ರಚನೆಗಳು ಆ ಪ್ರದೇಶದ ಅನನ್ಯತೆಯನ್ನು ತೋರಿಸುತ್ತವೆ. ರಚನೆಗಳು ಭಾಷಾ ದೃಷ್ಟಿಯಿಂದ ಶುದ್ಧ, ಪ್ರತಿ ದೃಷ್ಟಿಯಿಂದ ಪೂರ್ವ ಹಾಗೂ ಕಥೆಯ ದೃಷ್ಟಿಯಿಂದ ಸಮಗ್ರವಾಗಿರಲು ಸಾಕು. ಒಂದು ವೇಳೆ ಪೂರ್ಣ ಪ್ರತಿಯಲ್ಲಿ ಅಲ್ಪಸಲ್ಪ ಭಾಷಾ ದೋಷಗಳಿದ್ದರೆ ಮಿಕ್ಕ ಪಾಠಗಳಿಂದ ತಿದ್ದಬಹುದು. ಪುರಂದರದಾಸರ ಕೀರ್ತನೆವೊಂದರಲ್ಲಿ

ಸಿಂಗ ಪೆಗಲೇರಿದಾಗ ಕರಿ ಭಂಗವೇಕೆ ಮತ್ತವಗೆ
ರಂಗನ ಕೃಪೆಯುಳ್ಳವಗೆ ಭವ ಭಂಗಗಳೇ ತಕ್ಕವಗೆ
ಮಂಗಳ ಮಹಿಮ ಪುರಂದರವಿಠಲಲಶು
ಭಾಂಗನ ದಯವೊಂದಿದ್ದರೆ ಸಾಲದೆ

ಇಲ್ಲಿ ೧[1]ಕರಿ ಎಂಬ ಪಾಠಕ್ಕೆ ಕರೆ, ಕರೆಂಗೆ ಮುಂತಾದ ಪಾಠಗಳಿವೆ. ಆದರೆ ಮೂಲಪಾಠ ಜೋಪಾನವಾಗಿ ಉಳಿದುಬಂದಿದೆ.

ಜಗನ್ನಾಥದಾಸರ ಕೀರ್ತನೆಯೊಂದು ಹೀಗಿದೆ.
‘ಕಮಲಾಕ್ಷ ಮರಿಯಿಟ್ಟ ದ್ರೌಪಧಿಯ ಕಾಯ್ದೋ ಅಳುಕಾದೇ’

ಇಲ್ಲಿ ‘ಮುಡಿಯುಟ್ಟಿ ದ್ರೌಪದಿಯ’ ಎಂಬುದು ಅಪಪಾಠ, ಲಿಪಿಕಾರನ ಸ್ಖಾಲಿತ್ಯ, ದ್ರೌಪದಿ ಮುಡಿ ಇಡುವುದು ಸಾಧ್ಯವಿಲ್ಲದ ಸಂಗತಿ. ಹಸ್ತಪ್ರತಿಯಲ್ಲಿ ‘ಕಮಲಾಕ್ಷ’ ಮೊರೆಯಿಟ್ಟ ದ್ರೌಪದಿಯ ಕಾಯ್ದೋ ಎಂದಿದೆ.

ದಾಸಸಾಹಿತ್ಯ ಸಂಪಾದನೆಯ ಇನ್ನೊಂದು ಸಮಸ್ಯೆಯೆಂದರೆ ಅಂಕಿತ ನಿರ್ಧರಿಸುವ ವಿಚಾರ. ‘ಬದುಕಿದೆನು ಬದುಕಿದೆನು ಭವ ಹಿಂಗಿತು’ ಎಂಬ ಪ್ರಸಿದ್ಧ ಕೀರ್ತನೆ ಪುರಂದರ ಮತ್ತು ಕನಕರ ರಚನೆಗಳಲ್ಲಿ ದೊರೆಯುತ್ತದೆ. ಇವು ಸಂಗೀತ ಲೇಪನವುಳ್ಳ ಹಾಡುಗಬ್ಬಗಳಾಗಿರುವುದರಿಂದಹೀಗಾಗುವುದುಂಟು. ಹಾಗಾದರೆ ಆ ರಚನೆ ಯಾರದು ಎಂಬ ಸಮಸ್ಯೆ ತಲೆದೊರುತ್ತದೆ. ಆಗ ಸಂಪಾದಕನಿಗೆ ಏಕೈಕ ಮಾರ್ಗವೆಂದರೆ ಹಸ್ತಪ್ರತಿಗಳನ್ನು ಪರಿಶೀಲಿಸಿ, ಯಾರ ರಚನೆ ಹೆಚ್ಚು ಪುನರಾವೃತ್ತಿಯಾಗಿದೆ ಎಂಬುದನ್ನು ತಿಳಿದುಕೊಂಡು ಸೂಕ್ತ ನಿರ್ಣಯಕ್ಕೆ ಬರಬೇಕಾಗುತ್ತದೆ.

ಪಾಠ ಸಂಯೋಜನೆಯಲ್ಲಿ ಹರಿದಾಸ ಕೃತಿಗಳ ಭಾಷೆಯ ಸ್ವರೂಪವನ್ನು ಸಂಪಾದಕ ಗಮನದಲ್ಲಿಡಬೇಕಾಗುತ್ತದೆ. ಅದು ನಡುಗನ್ನಡ ಕಾಲವಾದುದರಿಂದ ಎಷ್ಟೋ ಶಬ್ದಗಳ ದ್ವಿತ್ವ ವಿರಳವಾಗಿದೆ. ಯುಕ್ತಿ – ಯುಕುತಿ, ಮುಕ್ತಿ -ಮುಕುತಿ, ಮುಂತಾದವು. ಇದಲ್ಲದೆ ಹರಿದಾಸರು ಆಡು ರೂಪಗಳನ್ನು ಬಳಸುತ್ತಾರೆ. ಬ್ಯಾಡ, ವೈಯಾರ, ಕೋಡಂಗಿ, ಗಡಗಿ ಮುಂತಾದುವು. ಮಹಿಪತಿದಾಯರ ಕೃತಿಗಳಲ್ಲಿ ಅಲ್ಲಾ, ಹರಕತ್ ಇಂತಹ ಅನ್ಯದೇಶ ಪದಗಳ ಬಳಕೆ ಹೇರಳವಾಗಿವೆ. ಅವುಗಳನ್ನು ತಿದ್ದಬಾರದು. ಏಕೆಂದರೆ ಅವುಗಳಿಗೆ ಅವುಗಳದೇ ಆದ ಅನನ್ಯತೆಯಿದೆ.

ದಾಸರ ಹಾಡುಗಳಲ್ಲಿ ಕೇಳುಗಾರಿಕೆಗೆ ಮಹತ್ವದ ಪಾತ್ರವಿದೆ. ಶ್ರವಣ ಪಾತಳಿಯ ಆ ಹಾಡುಗಳನ್ನು ಸಂಪಾದಿಸುವಾಗ ರಾಗ, ತಾಳಗಳ ಸೂಚನೆಗಳನ್ನು ಸ್ಪಷ್ಟವಾಗಿ ದಾಖಲಿಸಬೇಕು. ಮೈಸೂರು ವಿಶ್ವವಿದ್ಯಾಲಯದ ದಾಸ ಸಾಹಿತ್ಯದ ಆವೃತ್ತಿಗಳಲ್ಲಿ ಅ ಸೂಚನೆಗಳಿವೆ.

ಕಂಡರ ಕಾಣಬೇಕು ಮಂಡಲದೊಡೆಯನ ||ಧುವ||
ತುಂಡ ಮುಂಡಾಗೋಗದು ಖಂಡಿತಾಗ್ಯನುಮಾನ

ಕಾಣುವದೊಂದೆ ಖೂನ ಜ್ಞಾನಾಗಬೇಕು ಪೂರ್ಣ            ೧
ಸ್ವಾನುಭವದ ಸ್ಥಾನ ತಾನೆ ಗುರು ವಿಧಾನ

ಸಾಹಿಸಲಿಕ್ಕ್ಯುಪಾಯ ಇದೆ ಸದ್ಗುರು ಕೈಯ
ಬೋಧಿಸುವ ನಮ್ಮಯ್ಯ ಆದಿತತ್ವ ದಾದಿಯ ೨

ತನ್ನಿಂದ ತಾನೆ ಬಂದು ಕಣ್ನಿನೊಳಾದನಿಂದು
ಧನ್ಯಗೈಸಿದ ಮಹಿಪತಿ ಗುರು ಕೃಪಾಸಿಂಧು     ೩

ದಾಸರ ಹಾಡುಗಳು ಹಾಡುಗಬ್ಬಗಳಾದುದರಿಂದ ಹಸ್ತಪ್ರತಿಗಳಲ್ಲಿರುವ ರಾಗ, ತಾಳಗಳನ್ನು ಉಳಿಸಿಕೊಳ್ಳಬೇಕು. ಏಕೆಂದರೆ ಕನ್ನಡ ಕಾವ್ಯಗಳು ಕೇಳುವ ಸಂಸ್ಕೃತಿವುಳ್ಳದ್ದಾಗಿವೆ ಎಂಬುದನ್ನು ಗಮನಿಸಬೇಕು.

ದಾಸ ಸಾಹಿತ್ಯ ಸಂಪಾದನೆಯನ್ನು ಕುರಿತು ಎ.ವಿ.ನಾವಡ ಅವರು ವ್ಯಕ್ತಪಡಿಸಿದ ಅಭಿಪ್ರಾಯಗಳು ತುಂಬ ಮೌಲಿಕವಾಗಿವೆ.

೧.ಪಾಠ ನಿರ್ಣಯಕ್ಕಾಗಿ ಹತ್ತು ಹಲವು ಪ್ರತಿಗಳನ್ನು ಬಳಸಿ ಒಂದು ಶುದ್ಧ ಪ್ರತಿ ತಯಾರಿಸುವುದು, ಮೌಖಿಕ ಪರಂಪರೆಗೆ ಸೇರಿದ ದಾಸರ ಹಾಡುಗಳಿಗೆ ಒಗ್ಗದು.

೨.ಹಾಡುವ ಸಂಪ್ರದಾಯಕ್ಕೆ ಸೇರಿದ ಮೌಖಿಕ ರಚನೆ ಹಾಗೂ ಪ್ರಸರಣಕ್ಕೊಳಗಾಗುತ್ತಿರುವ ದಾಸರ ಪದಗಳ ಬಹುತ್ವವನ್ನು ನಾಶಮಾಡಿ ಯಾವುದೋ ಒಂದು ಭಾಷಾರಚನೆಗೆ ಬಲವಂತವಾಗಿ ಒಗ್ಗಿಸುವುದು ಸಾಧುವೆನಿಸದು.

೩.ಅಂಕಿತದ ಸಂದೇಹ ಬಂದಾಗ, ರಚನೆಯ ಕರ್ತೃತ್ವ ಪ್ರಶ್ನೆ ಎದುರಾದಾಗ ಹಲವು ಹಸ್ತಪ್ರತಿಗಳನ್ನು ಪರಿಶೀಲಿಸಬಹುದು. ಮೌಖಿಕ ವಾರಸುದಾರರ ನಾಲಗೆಯಲ್ಲಿ ಏನಿದೆ ಎಂದು ಪರಿಶೀಲಿಸಬಹುದು[2]. ದಾಸರ ಹಾಡುಗಳ ಪ್ರಸಾರವಾಗುವ ಮೌಖಿಕ ಸಂಪ್ರದಾಯಕ್ಕೂ ಸಹಿತ ಸಂಪಾದಕ ಒತ್ತು ಕೊಡಬೇಕು.

ಒಟ್ಟಿನಲ್ಲಿ, ದಾಸಸಾಹಿತ್ಯಕ್ಕೆ ಮಾರ್ಗಕಾವ್ಯಗಳಂತೆ ಸ್ಥಿರ ಪಠ್ಯಗಳಿರುವುದಿಲ್ಲ. ಅಲ್ಲಿರುವುದು ಚರಪಠ್ಯ. ದಾಸರ ಹಾಡುಗಳು ಚಲನಶೀಲವಾಗಿರುವುದರಿಂದ ಆ ಸಾಹಿತ್ಯದ ಸಂಪಾದನೆಯ ಮಾನದಂಡಗಳು ಮಾರ್ಗಸಾಹಿತ್ಯಕ್ಕಿಂತ ಭಿನ್ನವಾಗಿವೆ.

 

[1]ಡಾ. ಜಿ. ವರದರಾಜರಾವ್, ಶ್ರೀ ಮಹಿಪತಿರಾಯರ ಕೃತಿಗಳು (೧೯೭೬) ಮೈಸೂರು ವಿಶ್ವವಿದ್ಯಾಲಯ, ಮೈಸೂರು ಪು.೧೨೭೬

[2]ಎ.ವಿ. ನಾವಡ, ’ವಾಕ್ ಪರಂಪರೆ ಮತ್ತು ದಾಸಸಾಹಿತ್ಯ ಸಂಪಾದನೆ’ (ಅಪ್ರಕಟಿತ ಲೇಖನ).