ದಾಸ ಸಾಹಿತ್ಯದ ರಚನೆ ೧೫ನೆಯ ಶತಮಾನದಲ್ಲಿ ಆರಂಭವಾಗಿ ೧೮ನೆಯ ಶತಮಾನದವರೆಗೂ ಸಾಗಿ ಬಂದಿದೆ. ನರಹರಿತೀರ್ಥ, ವ್ಯಾಸರಾಯ, ವಾದಿರಾಜ ಮೊದಲಾದ ದಾಸರು ಕನಕ-ಪುರಂದರರ ಪೂರ್ವದಲ್ಲಿ ಇದ್ದು ಕೀರ್ತನೆಗಳನ್ನು ರಚಿಸಿದರೂ ‘ಕೀರ್ತನೆ’ ಎಂಬುದು ಒಂದು ಸಾಹಿತ್ಯ ಪ್ರಕಾರವಾಗಿ ರೂಪುಗೊಂಡು ಸ್ವತಂತ್ರ ಅಸ್ತಿತ್ವವನ್ನು ಪಡೆದು ಸಮಾಜಮುಖಿಯಾಗಿ ಹೊರಳಿದ್ದು ೧೬ನೆಯ ಶತಮಾನದ ಮಧ್ಯಭಾಗದಲ್ಲಿ. ದಾಸರು ಜನಭಾಷೆಯಲ್ಲಿ ಹೃದಯವನ್ನು ಸೊರೆಗೊಳ್ಳಬಲ್ಲ ಕೀರ್ತನೆಗಳನ್ನು ರಚಿಸಿ, ಹಾಡಿ ಜನರನ್ನು ತಮ್ಮತ್ತ ಸೆಳೆದುಕೊಂಡರು, ಕೀರ್ತನೆಗಳು ಸಂಗೀತ ಪ್ರಧಾನವಾಗಿದ್ದು ಸಾಹಿತ್ಯದೊಡನೆ ಅವು ಸಾಮರಸ್ಯವನ್ನು ಪಡೆದವು. ಸಂಗೀತಕ್ಕೆ ಸಂಬಂಧಿಸಿದಂತೆ ವಿವಿಧ ರಾಗ ತಾಳಗಳಲ್ಲಿಯೂ ಸಾಹಿತ್ಯಕ್ಕೆ ಸಂಬಂಧಿಸಿದಂತೆ ವಿವಿಧ ಛಂದಸ್ಸುಗಳಲ್ಲಿಯೂ ದಾಸರು ಸಾಹಿತ್ಯವನ್ನು ರಚಿಸಿದರು. ಜನರ ನಿತ್ಯ ಜೀವನದ ಸಮಸ್ಯೆಗಳನ್ನು ಎದುರಿಸುವ, ಪರಿಹರಿಸುವಹಾಗೂ ಅವರ ಆಧ್ಯಾತ್ಮಿಕ ನೀರಡಿಕೆಯನ್ನು ಹೋಗಲಾಡಿಸುವಂತಹ ಸಾಹಿತ್ಯ ರಚನೆ ದಾಸರಿಗೆ ಅಗತ್ಯವಿತ್ತು. ಕನಕ ದಾಸರರಂಥವರು ಅದನ್ನು ಪೂರೈಸಿದರು.

ದಾಸರು ಭಾಗವತ ಧರ್ಮವನ್ನು ಮತ್ತು ಭಕ್ತಿ ತತ್ವವನು ತಮ್ಮ ಜೀವನದಲ್ಲಿ ಅಳವಡಿಸಿ ಅದನ್ನು ಪ್ರತಿಪಾದಿಸಿದರು. ಪುಸ್ತಕ ಓದಿ ಸ್ವಂತ ಜೀವನಕ್ಕೆ ಸಂಬಂಧವಿಲ್ಲದ ತತ್ವಗಳನ್ನು ಪ್ರತಿಪಾದಿಸಿಲ್ಲ. ಅಲ್ಲದೆ ಮತವನ್ನು ಮೀರಿದ ನೀತಿ, ಧರ್ಮ ಹಾಗೂ ಮಾನವೀಯ ಮೌಲ್ಯಗಳನ್ನು ಸಾಂಸ್ಕೃತಿಕ ಸಂಕಥನಗಳನ್ನು ದಾಸರು ಅರಿತವರಾಗಿದ್ದರು. ಮತ್ತು ಅವುಗಳಿಗೆ ಹೆಚ್ಚಿನ ಬೆಲೆ ಕೊಡುವರಾಗಿದ್ದರು. ಇವಿಲ್ಲದೆ ತಮ್ಮ ಮತವೇ ಇರಲಿ ಅನ್ಯರ ಮತವೇ ಇರಲಿ ಅವರು ಅದನ್ನು ಒಪ್ಪುವವರಲ್ಲ. ಆದ್ದರಿಂದಲೇ ದಾಸ ಸಾಹಿತ್ಯಕ್ಕೆ ಸರ್ವಮಾನ್ಯತೆ ದೊರೆಯಿತು. ದಾಸರ ರಚನೆಗಳು ಲಯದ ಬಿಗಿಕಟ್ಟಿಲ್ಲದೆ ಸಹಜ ಮನೋಹರವಾದ ಗೇಯತೆಯನ್ನು ಪಡೆದಿವೆ. ಸಂಗೀತಶಾಸ್ತ್ರ ಅರಿಯದ ಹೆಣ್ಣುಮಕ್ಕಳು,ಹಳ್ಳಿಗರು ದಾಸರ ರಚನೆಗಳನ್ನು ಸೊಗಸಾಗಿ ಹಾಡುತ್ತಿರುವುದನ್ನು ಕೇಳಿದರೆ ಅತಿಶಾಸ್ತ್ರದ ಬಾಧೆಯಿಲ್ಲದೆ ಈ ಸಂಪ್ರದಾಯ ಇಂದಿಗೂ ಬೆಳೆದುಕೊಂಡು ಬಂದಿರುವುದು ದಾಸ ಸಾಹಿತ್ಯದ ಜೀವಂತಿಕೆಗೆ ಸಾಕ್ಷಿಯಾಗಿದೆ.

ಕನ್ನಡ ಭಾಷೆಯ ಬೆಳವಣಿಗೆಯಲ್ಲಿ ಕ್ರಿ.ಶ. ೧೬೦೦ ರಿಂದ ೧೮೫೦ರ ನಡುವಣ ಕಾಲವು ನಡುಗನ್ನಡ ಮತ್ತು ಹೊಸಗನ್ನಡಗಳ ಸಂಧಿಕಾಲ. ಈ ಕಾಲಕ್ಕಾಗಲೇ ಕನ್ನಡ ಸಾಹಿತ್ಯದ ಮೂರು ಘಟ್ಟಗಳು ಮುಗಿದು ನಾಲ್ಕನೇ ಘಟ್ಟ ಕಾಲಿಕ್ಕಿತು. ರಾಜಕೀಯ ಮತ್ತು ಚಾರಿತ್ರಿಕ ದೃಷ್ಟಿಯಿಂದ ಮಹಮ್ಮದೀಯರ, ಮರಾಠರ ಮತ್ತು ಆಂಗ್ಲರ ಪ್ರಭಾವ ಕರ್ನಾಟಕದ ಮೇಲೆ ಉಂಟಾಯಿತು. ಇದು ಭಾಷಾ ದೃಷ್ಟಿಯಿಂದಲೂ ಒಂದು ಪ್ರಮುಖ ಸ್ಥಾನ ಪಡೆದಿತ್ತೆಂಬುದರ ಬಗ್ಗೆ ಸಂದೇಹವಿಲ್ಲ. ಸಂಕೀರ್ಣತೆಯಿಂದ ಸರಳತೆಯ ಕಡೆಗೆ ಹರಿಯುವುದು ಭಾಷೆಯ ಗುಣ, ಆದರೆ ಭಾಷೆ ಯಾವ ನಿರ್ದಿಷ್ಟ ಕಾಲದಲ್ಲಿ ಬದಲಾವಣೆಯಾಯಿತೆಂದು ಗುರುತಿಸುವುದು ಕಷ್ಟ. ಅಲ್ಲದೆ ಗ್ರಾಂಥಿಕ ಭಾಷೆಯನ್ನು ಆಧಾರವಾಗಿಟ್ಟುಕೊಂಡಾಗ ಭಾಷಿಕ ಬದಲಾವಣೆಯನ್ನು ಸೂಚಿಸುವುದಂತೂ ಬಹಳ ಕಷ್ಟ. ಇದಕ್ಕೆ ಕಾರಣ ಗ್ರಂಥಸ್ಥ ಭಾಷೆಗೂ ಆಡುನುಡಿಗೂ ಇರುವ ಕಂದರವಾಗಿದೆ.

ಈ ಹಿನ್ನೆಲೆಯಲ್ಲಿ ಕೀರ್ತನೆಗಳ ಭಾಷೆಯನ್ನು ನೋಡಿದಾಗ ಅದು ಆ ಕಾಲಕ್ಕೆ ರಚಿತವಾಗುತ್ತಿದ್ದ ಇತರ ಸಾಹಿತ್ಯದ ಕಾವ್ಯಭಾಷೆಗಿಂತ ಭಿನ್ನವಾಗಿದೆ. ಆ ಭಿನ್ನತೆ ವ್ಯಾಕರಣ ಪ್ರಕ್ರಿಯೆಯಲ್ಲಿ ಹೆಚ್ಚು ಉಕ್ತವಾಗಿ ತೋರುತ್ತದೆ. ಧ್ವನಿರಚನೆಯಲ್ಲಿ ಯಾವ ಲಿಖಿತ ಸಾಹಿತ್ಯದ ಬಗೆಗೂ ಹೆಚ್ಚು ಹೇಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ದಾಸರು ಹೇಗೆ ಉಚ್ಚರಿಸುತ್ತಿದ್ದರು ಎಂಬುದನ್ನು ಕಂಡುಹಿಡಿಯಲು ಸಾಧ್ಯವಿಲ್ಲ. ಅದಕ್ಕೆ ಯಾವ ಸಾಕ್ಷ್ಯಗಳಿಲ್ಲ. ಅಲ್ಲಿಯ ವಿವರಣೆಯೆಲ್ಲ ಚಾಕ್ಷುಷ ವರ್ಣಗಳನ್ನೇ ಅವಲಂಬಿಸಿರುತ್ತದೆ. ಎರಡನೆಯ ಕಾರಣ ಸಂಪಾದಕರು ಹಸ್ತಪ್ರತಿಯನ್ನು ಶುದ್ಧಗೊಳಿಸುವಾಗ ಭಾಷೆಯ ಶಾಸ್ತೋಕ್ತ ಪ್ರಯೋಗಗಳ ಕಡೆಗೆ ದೃಷ್ಟಿಯಿಟ್ಟು ಸಂಪಾದನೆ ಮಾಡುತ್ತಾರೆ. ಇದರ ಪರಿಣಾಮವಾಗಿ ಭಾಷೆಯ ನೈಜಚಿತ್ರ ವ್ಯಾಕರಣ ನಿಯಮಗಳ ಹಿಂದೆ ಮಸುಕಾಗುತ್ತದೆ. ಹಸ್ತಪ್ರತಿಗಳನ್ನು ಲಿಪಿಕರಿಸುವಾಗ ಲಿಪಿಕಾರರು ತಮ್ಮ ಕಾಲದ ಭಾಷೆಯ ಉಚ್ಚಾರಣೆಗೆ ತಕ್ಕಂತೆ ಭಾಷೆಯನ್ನು ರೇಖಿಸಿದ್ದಾರೆ. ಅದನ್ನು ಸಂಪಾದಕರು ಅಪಪ್ರಯೋಗವೆಂದು ಕರೆದು ಪ್ರಮಾಣೀಕೃತ ರೂಪದಲ್ಲಿ ಸಂಪಾದಿಸಿ ತಿದ್ದುತ್ತಾರೆ. ಹೀಗೆ ತಿದ್ದಿದರೆ ಆಯಾ ಕಾಲದ ಭಾಷೆಯ ಪ್ರಾತಿನಿಧಿಕ ಚಿತ್ರ ಸರಿಯಾಗಿ ಸಿಕ್ಕುವುದಿಲ್ಲ. ಆದ್ದರಿಂದ ಇಲ್ಲಿ ಕೀರ್ತನೆಗಳ ಭಾಷೆಯನ್ನು ಕುರಿತು ಆಡಿದ ಮಾತುಗಳೆಲ್ಲ ಸಂಪಾದಿತ ಕೀರ್ತನೆಗಳ ಆಧಾರದ ಮೇಲೆಯೇ (ಲಿಖಿತ ದಾಖಲೆ) ಇದೆಯೆಂಬುದನ್ನು ಲಕ್ಷಿಸಬೇಕಾಗುತ್ತದೆ.

ಪ್ರಸ್ತುತ ಅಧ್ಯಾಯನದಲ್ಲಿ ಕೀರ್ತನೆಗಳ ವರ್ಣನಾತ್ಮಕ ವ್ಯಾಕರಣ ಕುರಿತು ವಿವೇಚಿಸಲಾಗಿದೆ. ಭಾಷೆಯ ಆಂತರಿಕ ರಚನೆಯನ್ನು ಅರಿಯುವುದೇ ಭಾಷಾವಿಜ್ಞಾನದ ಮುಖ್ಯ ಉದ್ದೇಶ. ಭಾಷೆ ನಿತ್ಯ ಪರಿವರ್ತನಶೀಲವಾದರೂ ಅದನ್ನು ಗಣನೆಗೆ ತಾರ‍ದೇ ಒಂದು ಕಾಲದ ಒಂದು ಪ್ರದೇಶದ ಭಾಷೆಯ ರಚನೆಯನ್ನು ನೀಡುವುದೇ ವರ್ಣನಾತ್ಮಕ ವಿಧಾನ ಎನಿಸಿಕೊಳ್ಳುತ್ತದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಭಾಷೆಯ ಅಧ್ಯಯನ ಒಂದು ಕಾಲಕ್ಕೆ ಒಂದು ಪ್ರದೇಶಕ್ಕೆ ಸೀಮಿತವಾದುದನ್ನು ವರ್ಣನಾತ್ಮಕ ಪದ್ಧತಿ ಎನ್ನುತ್ತೇವೆ. ಈ ರೀತಿಯ ಅಧ್ಯಯನವೇ ವರ್ಣನಾತ್ಮಕ ಭಾಷಾವಿಜ್ಞಾನವೆನಿಸಿಕೊಳ್ಳುತ್ತದೆ. ವರ್ಣನಾತ್ಮಕ ಭಾಷಾವಿಜ್ಞಾನವು ಈ ಕೆಳಗಿನ ಅಂಶಗಳನ್ನು ಒಳಗೊಂಡಿದ್ದು ಪ್ರತಿಯೊಂದು ಅಂಶವೂ ಒಂದೊಂದು ಶಾಸ್ತ್ರಕ್ಕೆ ಕಾರಣವಾಗಿದೆ.

೧.ಧ್ವನಿರಚನೆ

೨.ಪದರಚನೆ

೩.ವಾಕ್ಯರಚನೆ

ಧ್ವನಿರಚನೆ : ಭಾಷಾಧ್ವನಿಗಳ ಅಭಾಸವೇ ಧ್ವನಿಮಾಶಾಸ್ತ್ರ. ಪ್ರತಿಯೊಂದು ಭಾಷೆಯು ತನ್ನ ಜಾಯಮಾನಕ್ಕನುಗುಣವಾಗಿ ಶಬ್ದಗಳನ್ನು ತನ್ಮೂಲಕ ಧ್ವನಿಗಳನ್ನು ಪಡೆದುಕೊಂಡು ಬೆಳೆಯುತ್ತಿರುತ್ತದೆ. ಭಾಷೆಯಲ್ಲಿಯ ಮುಖ್ಯವಾದ ಧ್ವನಿಗಳಿಗೆ ‘ಧ್ವನಿಮಾ’ ಗಳೆಂದು ಹೆಸರು. ಉಚ್ಚಾರಣೆಯ ಅತಿಚಿಕ್ಕ ಘಟಕವೇ ಧ್ವನಿಮಾ. ಆದ್ದರಿಂದ ಭಾಷೆಯಲ್ಲಿಯ ಮುಖ್ಯವಾದ ಧ್ವನಿಗಳನ್ನು ಗುರಿತಿಸಿ, ವಿಂಗಡಿಸಿ, ಭಾಷೆಯ ಮುಖ್ಯ ಉದ್ದೇಶವಾದ ಸಾಮಾಜಿಕ(ಸಂಪರ್ಕ) ವ್ಯವಹಾರಕ್ಕೆ ಅಳವಡಿಸಿದರೆ ಸಾಕು. ಈ ಮುಖ್ಯವಾದ ಧ್ವನಿಗಳೇ ಧ್ವನಿಮಾಗಳು. ಇಂತಹ ಧ್ವನಿಮಾಗಳ ಅಧ್ಯಯನವನ್ನು ಒಳಗೊಂಡಿರುವುದೇ ಧ್ವನಿರಚನಾಶಾಸ್ತ್ರ ಎನಿಸುತ್ತದೆ. ಭಾಷೆಗೆ ವರ್ಣಮಾಲೆಯನ್ನೊದಗಿಸಿ ಲಿಪಿಗೆ, ತನ್ಮೂಲಕ ಜ್ಞಾನ ಸಂಗ್ರಹಕ್ಕೆ ಕಾರಣವಾಗುತ್ತದೆ. ಧ್ವನಿರಚನಾ ಶಾಸ್ತ್ರ ಭಾಷಾಧ್ವನಿಗಳನ್ನು ಸ್ವರಗಳೆಂದು ಮತ್ತು ವ್ಯಂಜನಗಳೆಂದು ಸ್ಥೂಲವಾಗಿ ವರ್ಗೀಕರಿಸಬಹುದು. ಅವುಗಳನ್ನು ಸ್ವತಂತ್ರವಾಗಿ ಉಚ್ಚರಿಸಲು ಸಾಧ್ಯವಿದೆ. ಉಚ್ಚಾರಣೆಯಲ್ಲಿಯ ಈ ಘಟಕಗಳನ್ನು ಪ್ರತ್ಯೇಕವಾಗಿ ವಿಭಜಿಸಬಹುದು.

ಸ್ವರಗಳು : ಸ್ವತಂತ್ರವಾಗಿ ಉಚ್ಚಾರ ಮಾಡಲು ಬರುವ ಅಕ್ಷರಗಳು ಸ್ವರಗಳು. ಅವುಗಳನ್ನು ಉಚ್ಚರಿಸುವಾಗ ಹವೆ ಅಖಂಡ ಪ್ರವಾಹವಾಗಿ ಯಾವುದೇ ರೀತಿಯ ಅಡೆತಡೆಯಿಲ್ಲದೆ ಸಾಗುತ್ತದೆ. ನಾಲಗೆಯ ಸ್ಥಿತಿಯನ್ನು ಅನುಲಕ್ಷಿಸಿ ಈ ಕಾಲದ ಸ್ವರಗಳನ್ನು ಈ ಕೆಳಗಿನಂತೆ ಸೂಚಿಸಬಹುದು.

ಇ           ಈ      ಉ      ಊ
ಎ          ಏ       ಒ       ಓ
ಅ    ಆ

‘ಇ’ ಮತ್ತು ‘ಈ’ ಸ್ವರಗಳನ್ನು ಉಚ್ಚರಿಸುವಾಗ ನಾಲಗೆಯ ಮುಂಭಾಗವನ್ನು ಉಪಯೋಗಿಸಿದ್ರೆ ‘ಉ’ ಮತ್ತು ‘ಊ’ ಸ್ವರಗಳನ್ನು ಉಚ್ಚರಿಸುವಾಗ ನಾಲಗೆಯ ಹಿಂಭಾಗವನ್ನು ‘ಅ’ ಮತ್ತು ‘ಆ’ ಸ್ವರಗಳನ್ನು ಉಚ್ಚರಿಸುವಾಗ ನಾಲಗೆಯ ಮಧ್ಯಭಾಗವನ್ನು ‘ಎ’, ‘ಏ’, ‘ಒ’, ‘ಓ’ ಸ್ವರಗಳನ್ನು ಉಚ್ಚರಿಸುವಾಗ ನಾಲಗೆಯ ಉನ್ನತ ಮಧ್ಯಭಾಗವನ್ನು ಉಪಯೋಗಿಸಲಾಗುತ್ತದೆ. ಹೀಗೆ ಕೀರ್ತನೆಗಳಲ್ಲಿ ಅ. ಇ. ಉ. ಎ. ಒ ವರ್ಣಗಳು ಹ್ರಸ್ವ ದೀರ್ಘಗಳಾಗಿ ೧೦ ಸ್ವರಗಳಿವೆ. ಅಲ್ಲದೆ ದೀರ್ಘಗಳಾದ ಐ. ಔ ಎಂಬ ಎರಡು ಸಂಧ್ಯಾಕ್ಷರಗಳಿವೆ. ಸಂಸ್ಕೃತದಿಂದ ಎರವಲು ಪಡೆದ ಋ ವರ್ಣ ಸಂಸ್ಕೃತದಿಂದಎರವಲು ಪಡೆದ ಪದಗಳಲಿ ಮಾತ್ರ ಕಂಡುಬರುತ್ತದೆ. ಆ ಕಾಲದಲ್ಲಿ ಅದರ ಉಚ್ಚಾರಣೆ ಹೇಗಿತ್ತೆಂಬುದನ್ನು ತಿಳಿಯುವುದು ಕಷ್ಟ.

ವ್ಯಂಜನಗಳು:ಸ್ವತಂತ್ರವಾಗಿ ಉಚ್ಚಾರ ಮಾಡಲು ಬಾರದ ಅಕ್ಷರಗಳು ‘ವ್ಯಂಜನಗಳು’, ಈ ವ್ಯಂಜನಗಳನ್ನು ಉಚ್ಚಾರ ಮಾಡಬೇಕಾದರೆ ಸ್ವರಗಳ ಸಹಾಯ ಬೇಕಾಗುತ್ತದೆ. ವ್ಯಂಜನಗಳನ್ನು ಉಚ್ಚರಿಸುವಾಗ ಶ್ವಾಸ ಪ್ರವಾಹಕ್ಕೆ ಧ್ವನ್ಯಂಗಗಳು ತಡೆಯನ್ನುಂಟು ಮಾಡುತ್ತವೆ. ಭಾಷಾಶಾಸ್ತ್ರಜ್ಞರು ವ್ಯಂಜನಗಳನ್ನು ಸ್ಪರ್ಶಗಳು ಮತ್ತು ಸತತಗಳು (Continuant) ಎಂದು ವರ್ಗೀಕರಿಸಿದ್ದಾರೆ. ಸ್ವರ್ಶಗಳು ಶ್ವಾಸ ಪ್ರವಾಹದ ಸಂಪೂರ್ಣ ತಡೆಯಿಂದ ಉಂಟಾದರೆ ಸತತಗಲನ್ನುಚ್ಚರಿಸುವಾಗ ಹವೆ ಎಲ್ಲಿಯೂ ತಡೆಯಲ್ಪಡುವುದಿಲ್ಲ. ವ್ಯಂಜನಗಳ ಗುಣಧರ್ಮಗಳನ್ನು ಅನುಲಕ್ಷಿಸಿ ಈ ಕೆಳಗಿನಂತೆ ವಿಂಗಡಿಸಬಹುದು.

ಸ್ಪರ್ಶ ಓಷ್ಠ್ಯ ದಂತ್ಯ ವರ್ತ್ಯ ಮೂರ್ಧವ್ಯ ತಾಲವ್ಯ ಕಂಠ್ಯ
ಪ್, ಬ್ ತ್, ದ್   ಟ್, ಡ್ ಚ್, ಜ್ ಕ್, ಗ್
ಅನುಪಾಸಿಕ ಮ್   ನ್ ಣ್    
ಪಾಶ್ವಿಕ     ಲ್ ಳ್    
ಸಕ್ಕತ್ ತಾಡಿತ     ರ್      
ಬಹುತಾಡಿತ            
ಉಷ್ಮ     ಸ್ ಷ್ ಶ್ ಹ್
ಈಷತ್ ಸ್ಪರ್ಶ ವ್       ಯ್  

ಮೇಲಿನ ಪಟ್ಟಿಯನ್ನು ತಯಾರಿಸುವಾಗ ಆಧುನಿಕ ಧ್ವನಿಶಾಸ್ತ್ರಕ್ಕನುಗುಣವಾಗಿ ವರ್ಗೀಕರಿಸಲಾಗಿದೆ. ವ್ಯಂಜನಗಳಲ್ಲಿ. ಕ್, ಗ್, ಚ್, ಜ್, ಟ್, ಡ್, ತ್, ದ್,ಪ್,ಬ್ ಗಳು ಸ್ಪರ್ಶಗಳು. ಇವು ಪದರಚನೆಯಲ್ಲಿ ಎಲ್ಲೆಡೆಯಲ್ಲಿಯೂ ಬರಬಲ್ಲವು. ಅನುನಾಸಿಕಗಳಲಿ ಮ್, ನ್, ಣ್ ಗಳೂ ಸಹಿತ ಎಲ್ಲೆಡೆ ಬರಬಲ್ಲವು. ಆದರೆಙ, ಞ್ ಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಅವು ಕ್ರಮವಾಗಿ ‘ಕ’ ವರ್ಗ ಮತ್ತು ‘ಚ’ ವರ್ಗಗಳ ಪೂರ್ವದಲ್ಲಿ ಬರಬಲ್ಲವು. ಊಷ್ಮ ಮತ್ತು ಈಷತ್ ಸ್ಪರ್ಶಗಳಾದ ಸೊ,ಷ್, ಶ್, ಹ್, ವ್, ಯ್, ಗಳು ಸ್ವತಂತ್ರವಾಗಿ ಬರಬಲ್ಲವು. ಶ್, ಷ್ ಗಳು ಸಂಸ್ಕೃತ ಶಬ್ದಗಳಲ್ಲಿ ಮಾತ್ರ ಬರುತ್ತವೆ. ಸ್, ವು ಎಲ್ಲೆಡೆಗೆ ಬರುತ್ತದೆ. ಸ್ವರಗಳಲ್ಲಿ ಇ, ಎ, ಉ, ಹಾಗೂ ಒ ಹಾಗೂ ಅವುಗಳ ದೀರ್ಘಗಳು ಪದಾದಿಯಲ್ಲಿ ಬಂದಾಗ ಕ್ರಮವಾಗಿ ಮೊದಲೆರಡು ಸ್ವರಗಳ ಹಿಂದೆ ‘ಯ್’ ಹಾಗೂ ಉಳಿದೆರಡು ಸ್ವರಗಳ ಹಿಂದೆ ‘ವ್’ ವಿಕಲ್ಪವಾಗಿ ಕಾಣಿಸಿಕೊಳ್ಳುತ್ತದೆ. ಇದು ಕೀರ್ತನೆಗಳ ವರ್ಣ ವ್ಯವಸ್ಥೆಯ ಸ್ವರೂಪವಾಗಿದೆ.

ಕೀರ್ತನೆಗಳ ಭಾಷಿಕ ಸ್ವರೂಪ : ಮೇಲೆ ವಿವರಿಸಿದಂತೆ ಕೀರ್ತನೆಗಳಲ್ಲಿಯ ಧ್ವನಿರಚನೆಯನ್ನು ಅನುಲಕ್ಷಿಸಿ ಆ ಕಾಲದ ಭಾಷೆಯ ಕೆಲವು ವೈಲಕ್ಷಣ್ಯಗಳನ್ನು ಕಲೆ ಹಾಕಬಹುದು.

೧. ಕೀರ್ತನೆಗಳ ಭಾಷೆಯಲ್ಲಿ ವರ್ಣಸಮೀಕರಣವನ್ನು (ಸಮರೂಪಧಾರಣೆ ಕಾಣಬಹುದು.

ಪರ್ದು             >     ಪದ್ದು
ಉರ್ದು            >     ಉದ್ದು
ಎರ್ದೆ              >     ಎದ್ದೆ
ಗರ್ದೆ               >     ಗದ್ದೆ

೨. ‘ಱ’ ಕಾರವು ‘ರ’ ಕಾರದೊಡನೆ, ‘ಱಿ’ ಕಾರವು ‘ಳ’ ಕಾರದೊಡನೆ ವಿಲೀನಗೊಳ್ಳುತ್ತಿರುವುದನ್ನು ಕೆಳಗಿನ ಉದಾಹರಣೆಗಳೊಂದಿಗೆ ತಿಳಿಯಬಹುದು.

ಪೊಱಿಲು        –      ಹೊಳಲು
ನೆಗಱ್ತೆ             –      ನೆಗಳ್ತೆ
ಬಾಱು             –      ಬಾಳು
ಮಱೆ             –      ಮಳೆ
ಅಱೆ               –      ಅರಿ
ಮಱೆ             –      ಮರಿ
ಮುಂತಾದವು

೩. ವ್ಯಂಜನಾಂತ ಪದಗಳು ಸ್ವರಾಂತಗಳಾಗಿವೆ

ನಾನ್              –      ನಾನು
ನೀನ್              –      ನೀನು
ತಾಱು             –      ತಾಳು
ಉಸಿರ್            –      ಉಸಿರು
ನಾರ್              –      ನಾರು
 ಮುಂತಾದುವು

೪. ಹಳಗನ್ನಡದ ಕೊರಲ್, ಬೆರಲ್, ಪರಲ್ ಮುಂತಾದ ಕೆಲವು ಲಾಂತ ಪದಗಳು ಕೀರ್ತನೆಗಳಲ್ಲಿ ಳಾಂತಗಳಾಗಿವೆ.

ಕೊರಲ್           –      ಕೊರಳು
ಬೆರಲ್            –      ಬೆರಳು
ಪರಲ್            –      ಪರಳು

೫. ಅನುಸ್ವರಯುಕ್ತ ಹಳಗನ್ನಡ ರೂಪಗಳು ಈ ಕಾಲದ ಭಾಷೆಯಲ್ಲಿ ಅನುಸ್ವರ ಲುಪ್ತಗೊಂಡಿದೆ. ಅನುಸ್ವರ ಲುಪ್ತಗೊಂಡಿದೆ.

ದಾಂಟು           >     ದಾಟು
ತೋಂಟ          >     ತೋಟಾ
ಬೇಂಟೆ             >     ಬೇಟೆ
ಜಿನುಂಗು         >     ಜಿನುಗು

ಮುಂತಾದುವು

೬. ‘ಪ’ಕಾರ ‘ಹ’ ಕಾರವಾಗಿ ಪರಿವರ್ತನೆಯಾಗಿದೆ. ಕೀರ್ತನೆಗಳಲ್ಲಿ ‘ಹ’ ಕಾರದ ಪ್ರಾಚುರ್ಯ ಪ್ರಬಲವಾಗಿದೆ.

ಪಾವು              –      ಹಾವು
ಪಕ್ಕಿ               –      ಹಕ್ಕಿ
ರೂಪು             –      ರೂಹು
ಕೆಡವು              –      ಕೆಡಹು

ದ್ವಿತ್ವ ‘ಪ’ ಕಾರವು ಅದ್ವಿತ್ವವಾಗಿ ಆ ‘ಪ’ ಕಾರವು ‘ಹ’ ಕಾರವಾಗಿದೆ.

ಅಂತಪ್ಪ          >     ಅಂತಹ
ಇಂತಪ್ಪ          >     ಇಂತಹ
ಎಂತಪ್ಪ          >     ಎಂತಹ

೭. ಪದಮಧ್ಯದಲ್ಲಿ ಸ್ವರಗಳನ್ನು ಸೇರಿಸಿ ಸಂಯುಕ್ತಾಕ್ಷರಗಳನ್ನು ಸರಳೀಕರೀಸುವ ವಿಧಾನ ಕೀರ್ತನೆಗಳಲ್ಲಿ ಧಾರಾಳವಾಗಿ ನಡೆದಿದೆ.

ಉಕ್ತಿ               >     ಉಕುತಿ
ಭಕ್ತಿ                >     ಭಕುತಿ
ಮುಕ್ತಿ             >     ಮುಕುತಿ
ರಕ್ತ                >     ರಕುತ

೮. ಪದಾಂತ್ಯದ ‘ನ್’ ಕಾರಾಂತ ಪದಗಳು ಕೀರ್ತನೆಗಳಲ್ಲಿ ಅಂತ್ಯದ ‘ನ್’ ಕಾರ ಲೋಪವಾಗಿವೆ.

ಮರನ್            >     ಮರ
ಆತ್ಮನ್          >     ಆತ್ಮ
ಕೃಷ್ಣನ್         >     ಕೃಷ್ಣ
ಕರಿನ್             >     ಕರಿ

೯. ಸಂಸ್ಕೃತದ ಮಹಾಪ್ರಾಣ ಯುಕ್ತ ಪದಗಳು ಅಲ್ಪಪ್ರಾಣಗಳಾಗಿವೆ.

ಡಕ್ಕೆ               >     ಡಕ್ಕೆ
ಛಂದ             >     ಚಂದ
ಕೂಷ್ಮಾಂಡ     >     ಕುಂಬಳ
ಭ್ರಮರ           >     ಬವರ
ಘೂಗೆ            >     ಗೂಗೆ
ಮುಂತಾದುವು

೧೦. ಪ್ರಮಾಣಿಕೃತ ರೂಪಗಳು ಆಡುನುಡಿಯಲ್ಲಿ ಅಂದು ಹ್ರಸ್ವಗೊಳ್ಳುತ್ತಿದ್ದ ಕೆಲವು ರೂಪಗಳನ್ನು ಕಾಣಬಹುದು.

ಬದಿಯಲ್ಲಿ                  –        ಬದೇಲಿ
ಕಡಿಯಲ್ಲಿ                  –        ಕಡೇಲಿ

[ಇಯ>ಏ] ಧ್ವನಿ ಬದಲಾವಣೆ ಆಗಿದೆ

ಸ್ನೇಹವನ್ನು ಮಾಡು     –        ಸ್ನೇಹಮಾಡು – ಸ್ನೇಹಾಮಾಡು
ತಂದುಕೊಳ್ಳಬೇಕು        –        ತಂದುಕೋಬೇಕು[ಕೊಳ್ಳು]                    –        ಕೋ ಆಗಿದೆ.

ನಡುಗನ್ನಡ ಭಾಷೆಯ ಧ್ವನಿರಚನೆಯ ಪ್ರಕ್ರಿಯೆಗಳು ಬದಲಾವಣೆಯ ಹಂತವನ್ನು ದಾಸರ ಕೀರ್ತನೆಗಳಲ್ಲಿ ಕಾಣಬಹುದು. ಕೀರ್ತನೆಗಳಲ್ಲಿ ನಡುಗನ್ನಡ ಭಾಷೆ ನಿರ್ದಿಷ್ಟ ರೂಪತಾಳಿ ಆಡುನುಡಿಯನ್ನಾಧರಿಸಿ ಮೂಡಿಬಂದ ವಿಶಿಷ್ಟ ಅಭಿವ್ಯಕ್ತಿ ಮಾಧ್ಯಮವಾಗಿ ರೂಪು ತಳೆದಿದೆ.

ಸಂಧಿಕ್ರಿಯೆ : ಎರಡು ಅಕ್ಷರ(ಸ್ವರ ಇಲ್ಲವೆಗಳ ವ್ಯಂಜನಗಳ) ನಡುವೆ ಕಾಲ ವಿಳಂಭವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಯಬಾರದಂತೆ ಸೇರಿಸಿ ಉಚ್ಚರಿಸುವುದು ‘ಸಂಧಿ’ ಎನಿಸುವುದು. ಭಾಷಾಶಾಸ್ತ್ರೀಯ ದೃಷ್ಟಿಯಿಂದ ಹೇಳುವುದಾದರೆ ‘ಭಾಷೆಯನ್ನುಚ್ಚರಿಸುವಲ್ಲಿ ವಿರಾಮವನ್ನು ಕಳೆದುಕೊಂಡಾಗ ಆಗುವ ಧ್ವನಿಮಾಗಳ ಕೂಡುವಿಕೆಯೇ ಸಂಧಿ. ಸಂಧಿಯಿಂದಾಗುವ ಧ್ವನಿ ವ್ಯತ್ಯಾಸಗಳೇ ಸಂಧಿ ಕಾರ್ಯಗಳು[1]. ಸಂಧಿ ಕಾರ್ಯವು ಪದಮಧ್ಯ ಮತ್ತು ಪದಾಂತ್ಯಗಳಲ್ಲಿ ನಡೆಯುತ್ತದೆ. ಪ್ರಕೃತಿಗೆ ಪ್ರತ್ಯವನ್ನು ಹಚ್ಚುವಾಗ ಆಗುವ ಸಂಧಿಯನ್ನು ಪದಮಧ್ಯ ಸಂದಿಯೆನ್ನುತ್ತಾರೆ.

ತಲೆ + ಅನ್ನು = ತಲೆಯನ್ನು
ಗೋಪಿ+ ಅನ್ನು= ಗೋಪಿಯನ್ನು
ಪೂ+ಇನ= ಪೂವಿನ

ಪೂರ್ವಪದ, ಪರಪದದೊಡನೆ ಕೂಡುವಲ್ಲಿ ಆಗುವ ಸಂಧಿಯನ್ನು ಪದಾಂತ್ಯ ಸಂಧಿಯೆನ್ನುತ್ತಾರೆ.

ಕೃಷ್ಣನ+ಆಟ= ಕೃಷ್ಣನಾಟ
ಮನೆಯಲ್ಲಿ+ಇದ್ದ = ಮನೆಯಲ್ಲಿದ್ದ
ರಾಗ+ ಇಸು= ರಾಗಿಸು

ಮೇಲೆ ನಡೆದ ಸಂಧಿಕಾರ್ಯವನು ಅನುಲಕ್ಷಿಸಿ ಸಂಧಿಗಳನ್ನು ಅಂತಸ್ಸಂಧಿ ಮತ್ತು ಬಹಿಸ್ಸಂಧಿಗಳೆಂದು ಎರಡು ಪ್ರಭೇದಗಳಾಗಿ ಗುರುತಿಸಬಹುದು. ‘ಸಂಧಿ ಕಾರ್ಯದಲ್ಲಿ ಧ್ವನಿಮಾವ್ಯತ್ಯಾಸ ಒಂದು ಆಕೃತಿಮಾ ಸೀಮೆಯೊಳಗೆ ನಡೆದರೆ ಅದು ಅಂತಸ್ಸಂಧಿ. ಆಕೃತಿಮಾ ಸೀಮೆಯ ಹೊರಗೆ ಅರ್ಥಾತ್ ಎರಡು ಆಕೃತಿಮಾಗಳ ನಡುವೆ ಸಂಭವಿಸಿದರೆ ಅದು ಬಹಿಸ್ಸಂಧಿಯೆನಿಸಿಕೊಳ್ಳುತ್ತದೆ’೨[2].

ಅಂತಸ್ಸಂಧಿ : ೧. ಲೋಪಕ್ರಿಯೆ : ಸ್ವರದ ಮುಂದೆ ಸ್ವರವು ಬಂಧು ಸಂಧಿಯಾಗುವಾಗ ಪೂರ್ವಪದದ ಕೊನೆಯಲ್ಲಿರುವ ಸ್ವರವು ಸಂಧಿ ಪದದಲ್ಲಿ ಲೋಪವಾಗುವುದು. ಇದರಿಂದ ಮೂಲ ಅರ್ಥಕ್ಕೆ ಬಾಧೆ ಬರುವುದಿಲ್ಲ.

ಕೆಡು+ಅಲಿ = ಕೆಡಲಿ
ಸಿಗು+ಅಲಿ = ಸಿಗಲಿ
ಮರಳು+ಆಗು= ಮರುಳಾಗು
ಕಾಲು+ಆಳು= ಕಾಲಾಳು
ಉಂಟು+ಉಂಟು= ಉಂಟುಂಟು
ಇದ್ದು+ಏನು= ಇದ್ದೇನು
ಅವ+ಎಡೆ= ಅವೆಡೆ

. ಆದೇಶ ಕ್ರಿಯೆ : ಪರ ಪದದ ಆದಿಯಲ್ಲಿರುವ ಆಘೋಷ ಧ್ವನಿಗಳಾದ ಕ್, ತ್, ಮತ್ತು ಪ್ ಗಳು ಸಾಮಾನ್ಯವಾಗಿ ಘೋಷಗಳಾಗಿ ಮಾರ್ಪಡುತ್ತವೆ.

ಮಳೆ+ಕಾಲ= ಮಳೆಗಾಲ
ಮನ+ಕಾಣು= ಮನಗಾಣು
ನುಸುಳು+ಕಂಡಿ = ನುಸುಳಗಂಡಿ
ಮಯ್+ತಡವು= ಮೈದಡವು
ಬಗೆ+ತೋರು = ಬರೆದೋರು
ಹೊನ್+ತೇರು= ಹೊಂದೇರು
ಸುಖ+ಪಡು= ಸುಖಬಡು
ಬೆನ್+ಪತ್ತು= ಬೆಂಬತ್ತು

ಬಹಿಸ್ಸಂಧಿ : ಸ್ವರದ ಮುಂದೆ ಸ್ವರವು ಬಂದು ಸಂಧಿಯಾದಾಗ ಪೂರ್ವಪದ ಮತ್ತು ಉತ್ತರಪದಗಳೆರಡರಲ್ಲಿಯ ಎಲ್ಲ ಅಕ್ಷರಗಳು ಸಂಧಿ ಪದದಲ್ಲಿ ಇರುವುದಲ್ಲದೆ ಹೊಸದಾಗಿ ‘ಯ್’, ‘ವ್’ ವ್ಯಂಜನಗಳು ಆಗಮವಾಗಿ ಸೇರುತ್ತವೆ. ಇದನ್ನು ‘ಆಗಮಸಂಧಿ’ ಎಂದು ಹೇಳುವರು.

. ‘ಯ’ ಕಾರಾಗಮ ಕ್ರಿಯೆ : ಆ, ಇ, ಎ, ಏ, ಔ , ಓ ಸ್ವರಗಳ ಮುಂದೆ ಸ್ವರವು ಬಂದರೆ (ಸಂಧಿ ಪದದಲ್ಲಿ) ‘ಯ್’ ವ್ಯಂಜನ ಹೊಸದಾಗಿ ಆಗಮವಾಗುವುದು. ಇದನ್ನೇ ಭಾಷಾಶಾಸ್ತ್ರಜ್ಞರು ಪದಾಂತ್ಯದ ಪೂರ್ವಸ್ವರಗಳಿಗೆ ಸ್ವರಾದಿ ಪ್ರತ್ಯಯಗಳು ಪರವಾದರೆ ‘ಯ’ ಕಾರಾಗಮವಾಗುತ್ತದೆ ಎಂದು ಹೇಳಿದ್ದಾರೆ.

ಕಾ+ಉತ್ತ= ಕಾಯುತ್ತ
ದನಿ+ಅಲಿ= ದನಿಯಲಿ
ನುಡಿ+ಉಂಟು= ನುಡಿಯುಂಟು
ಭಾಷೆ+ಅ = ಭಾಷೆಯ
ಅಂಜಿಕೆ+ಉಂಟು = ಅಂಜಿಕೆಯುಂಟು

ii) ಓ, ಎಂಬ ಏಕಾಕ್ಷರ ಪ್ರಕೃತಿಗಳಿಗೆ ಸ್ವರಾದಿ ಪ್ರತ್ಯಯಗಳು ಪರವಾದರೆ ‘ಯ’ ಆಗಮವಾಗುವುದು.

ಜೋ+ಎಂದು= ಜೋಯೆಂದು
ನೋ+ಇಸು = ನೋಯಿಸು
ನೋ+ಎವು= ನೋಯೆವು
ತೋ+ಇಸು = ತೋಯಿಸು

. ‘ವ’ ಕಾರಾಗಮ ಕ್ರಿಯೆ : i)ಅ, ಆ, ಈ , ಉ, ಊ, ಓ, ಕಾರಗಳ ಮುಂದೆ ಸ್ವರವು ಬಂದರೆ ‘ವ್’ ವ್ಯಂಜನ (ಹೊಸದಾಗಿ) ಆಗಮವಾಗುವುದು. ಇದನ್ನೇ ಭಾಷಾಶಾಸ್ತ್ರಜ್ಞರು ಪೂರ್ವೇತರ ಸ್ವರಾಂತಗಳಿಗೆ ಅನ್ನು. ಈಗೆ ಅಥವಾ ಇತರ ವಿಭಕ್ತ್ಯೇತರ ಸ್ವರಗಳು ಪರವಾದರೆ ‘ವ’ ಕಾರಾಗಮವಾಗುವುದು ಎಂದು ಹೇಳಿದ್ದಾರೆ.

ಛಲ+ಇಲ್ಲ = ಛಲವಿಲ್ಲ
ಆ+ಊರು = ಆವೂರು
ಈ+ಓಣಿ= ಈವೋಣಿ
ಗುರು+ಎಮಗೆ= ಗುರುಯಮಗೆ
ಮಗು+ಎ= ಮಗುವೆ
ಹೂ+ಇಗೆ= ಹೂವಿಗೆ
ಗೋ+ಅನ್ನು = ಗೋವನ್ನು

||) ಅಂಗೀಕಾರಾರ್ಥಕ ಪ್ರತ್ಯಯವಾದ /-ಅ/ ಕಾರಕ್ಕೆ /-ಇ/ ಕಾರ ಪರವಾದಾಗಲೂ ‘ವ್’ ಕಾರ ಆಗಮನವಾಗುತ್ತದೆ.

ಕಾಣುವ+ಇದು=ಕಾಣುವವಿದು
ನೋಡುವ+ಇದು=ನೋಡುವವಿದು

ಒಂದು ಪ್ರಕೃತಿ ಅಥವಾ ಸಾಧಿತರೂಪ ಇನ್ನೊಂದು ಪ್ರಕೃತಿ ಪ್ರತ್ಯಯ ಅಥವಾ ಸಾಧಿತ ರೂಪದೊಡನೆ ಸೇರುವಾಗ ಇಂದಿನ ಕನ್ನಡದಲ್ಲಿ ಸಹಜವಾಗಿ ತೋರುವ ಮೊದಲ ಧಾತುವಿನ ಅಥವಾ ಸಾಧಿತ ರೂಪದ ಅಂತ್ಯ ಸ್ವರ ಲೋಪವಾಗುವಿಕೆ ಅಂದಿನಕನ್ನಡದಲ್ಲಿ ತೀರ ವಿರಳವಾಗಿ ಕಂಡುಬರುತ್ತದೆ. ಸಂಧಿ ಸ್ಥಾನದಲ್ಲಿ ಮೇಲಿನಂತೆ ‘ಯ್’ ಮತ್ತು’ವ್’ ಕಾರಾಗಮಗಳಾಗುತ್ತವೆ.

ನಾಮಪದ ರಚನೆ : ನಾಮಪದಗಳನ್ನುಂಟು ಮಡುವ ಮೂಲರೂಪವೇ ನಾಮಪ್ರಕೃತಿ ಅಥವಾ ಪ್ರಾತಿಪದಿಕ ಎನಿಸುವುದು. ಇಂತಹ ಪ್ರಾತಿಪದಿಕದ ಮುಂದೆ ನಾಮವಿಭಕ್ತಿ ಪ್ರತ್ಯಗಳು ಸೇರಿದಾಗ ನಾಮಪದಗಳಗುತ್ತವೆ. ಒಂದು ಅಥವಾ ಒಂದಕ್ಕಿಂತ ಹೆಚ್ಚು ಧ್ವನಿಗಳ ಸುಸಂಬದ್ಧವಾದ ಜೋಡಣೆ ಆಕೃತಿಯಾಗಿ, ಆದರಿಂದ ಆಕೃತಿಮಾ ಆಗಿ ಆಕೃತಿಮಾಗಳಿಂದ ಶಬ್ಧಗಳಾಗುತ್ತವೆ. ಅವುವೇ ನಾಮಆಕೃತಿಮಾಗಳು. ಅವು ಆಂತರಿಕವಾಗಿ ಬೆಳವಣಿಗೆ ಮಾಡಲು ಸಾಧ್ಯವಿಲ್ಲದ ಸಾಂದ್ರವಾಗಿ ಸಂಯೋಜಿಸಲ್ಪಟ್ಟಿರುತ್ತವೆ. ಉದಾ. ಹುಡುಗರು, ಗಿಡಗಳು, ಇತ್ಯಾದಿ. ನಾಮರೂಪಗಳು ಮನುಷ್ಯ, ಪ್ರಾಣಿ, ವಸ್ತು ಮೊದಲಾದವುಗಳ ಹೆಸರು ಹೆಳುವ ಶಬ್ದಗಳಾಗಿವೆ. ಆಕೃತಿಮಾ ರಚನೆಗೆ ಸಂಬಂಧಿಸಿದ ಸಾಮಾನ್ಯ ಅಂಶಗಳನ್ನು ಅನುಲಕ್ಷಿಸಿ ದಾಸ ಸಾಹಿತ್ಯದ ಪದಗಳನ್ನು ಮೂರು ವರ್ಗಗಳಾಗಿ ವಿಂಗಡಿಸಲ್ಪಡುತ್ತವೆ. ಅವೆಂದರೆ ನಾಮಪದಗಳು, ಕ್ರಿಯಾಪದಗಳು ಮತ್ತು ಅವ್ಯಯಗಳು ಎಂದು ಅವನ್ನು ಹೆಸರಿಸಬಹುದು. ಮೇಲೆ ಹೇಳಿದಂತೆ ಬಹುವಚನ ಪ್ರತ್ಯಯಗಳು ಮತ್ತು ವಿಭಕ್ತಿ ಪ್ರತ್ಯಯಗಳನ್ನು ಹತ್ತಿಸಬಹುದಾದ ಪದಗಳೇ ನಾಮಪದಗಳು. ಅದರಂತೆ ಕಾಲವಾಚಕ ಪ್ರತ್ಯಯಗಳು ಮತ್ತು ಪುರುಷವಾಚಕ ಪ್ರತ್ಯಯಗಳನ್ನು ಹತ್ತಿಸಬಹುದಾದ ಪದಗಳು ಕ್ರಿಯಾಪದಗಳು. ಮೇಲೆ ತಿಳಿಸಿದ ಯಾವುದೇ ಪ್ರತ್ಯಯಗಳನ್ನೂ ಹತ್ತಿಸಲುಬಾರದ ಪದಗಳೇ ಅವ್ಯಯಗಳು. ಈ ಭಾಗದಲ್ಲಿ ನಾಮ ಆಕೃತಿಮಾಗಳ ರಚನೆಯನ್ನು ಕುರಿತು ವಿವೇಚಿಸಲಾಗಿದೆ.

ಲಿಂಗ-ವಚನ : ಕನ್ನಡ ನಾಮಪದಗಳನ್ನು ಪುಲ್ಲಿಂಗ, ಸ್ತ್ರೀಲಿಂಗ ಮತ್ತು ನಪುಂಸಕಲಿಂಗ ಎಂದು ಮೂರು ಗುಂಪುಗಳಾಗಿ ವಿಂಗಡಿಸಲಾಗಿದೆ. ಸಾಮಾನ್ಯವಾಗಿ ಪುರುಷರನ್ನು ಸೂಚಿಸುವ ನಾಮಪದಗಳನ್ನು ಪುಲ್ಲಿಂಗ, ಸ್ತ್ರೀಯರನ್ನು ಸೂಚಿಸುವ ನಾಮಪದಗಳು ಸ್ತ್ರೀಲಿಂಗ ಮತ್ತು ಇತರ ನಾಮಪದಗಳು ನಪುಂಸಕಲಿಂಗಗಳಾಗುತ್ತವೆ. ಅದರಂತೆ ಕನ್ನಡದಲ್ಲಿ ಏಕವಚನ ಮತ್ತು ಬಹುವಚನ ಎಂಬ ಎರಡು ವಚನಗಳಿವೆ. ಏಕವಚನದಲ್ಲಿ ಪ್ರಾತಿಪದಿಕವೇ ಪ್ರಯೋಗವಾಗುತ್ತದೆ. ದಾಸ ಸಾಹಿತ್ಯದಲ್ಲಿ -ರು-ಆರು-ಗಳು- ಅಂದಿರು ಇವು ಬಹುವಚನ ಪ್ರತ್ಯಯಗಳಾಗಿವೆ.

‘ಅ’ ಕಾರಾಂತ ನಾಮಪದಗಳಿಗೆ -ರು ಸೇರುತ್ತದೆ.

ಗಾಯಕ           –      ಗಾಯಕರು
ತನುಜ             –      ತನುಜರು
ಭೂಪ             –      ಭೂಪರು
ಕಿಂಕರ              –      ಕಿಂಕರರು
ನಂದನ            –      ನಂದನರು

‘ಇ’ಕಾರ ಮತ್ತು ಎ ಕಾರಾಂತ ಸ್ತ್ರೀಲಿಂಗ ನಾಮಪ್ರಕೃತಿಗಳಿಗೆ -‘ಅರು’ ಸೇರುತ್ತದೆ.

ತಂಗಿ               –      ತಂಗಿಯರು
ನಾರಿ               –      ನಾರಿಯರು
ಚದುರೆ            –      ಚದುರೆಯರು
ಅಂಗನೆ            –      ಅಂಗನೆಯರು
ತರುಣಿ            –      ತರುಣಿಯರು
ಜಾಣೆ              –      ಜಾಣೆಯರು

ನಪುಂಸಕ ಲಿಂಗದ ನಾಮಪ್ರಕೃತಿಗಳಿಗೆ ‘ಗಳು’ ಸೇರುತ್ತದೆ.

ಮರ               –      ಮರಗಳು
ತರು               –      ತರುಗಳು
ಅಂಬು             –      ಅಂಬುಗಳು
ತಲೆ                –      ತಲೆಗಳು
ರಥ                –      ರಥಗಳು

ಬಂಧುಸೂಚಕ ನಾಮ ಪ್ರಕೃತಿಗಳಿಗೆ”ಅಂದಿರು’ ಸೇರುತ್ತದೆ.

ತಮ್ಮ             –      ತಮ್ಮಂದಿರು
ಅಣ್ಣ              –      ಅಣ್ಣಂದಿರು
ಬಹುವಚನ ಪ್ರತ್ಯಯವು ಗೌರವಾರ್ಥದ ಏಕವಚನವಾಗಿಯೂ ಪ್ರಯೋಗವಾಗುತ್ತದೆ.

ಗುರು              –      ಗುರುಗಳು
ಹಾರುವ          –      ಹಾರುವರು
ಅರಸ              –      ಅರಸರು

 

[1]೧. ವಿಲ್ಯಂ ಮಾಡ್ಲ ’ಕನ್ನಡ ವ್ಯಾಕರಣ ಸಮಸ್ಯೆಗಳು (೧೯೯೮) ಪು. ೨೫, ವಿದ್ಯಾನಿಧಿ ಪ್ರಕಾಶನ, ಗದಗ

[2]ನೋಡಿ. ವಿಲ್ಯಂ ಮಾಡ್ಲ ’ಕನ್ನಡ ವ್ಯಾಕರಣ ಸಮಸ್ಯೆಗಳು (೧೯೯೮) ಪು.೨೭.