ಅಪೂರ್ಣ ಕ್ರಿಯಾಪದಗಳು : ಅಪೂರ್ಣ ಕ್ರಿಯಾಪದಗಳು ಮೂರು ಗುಂಪುಗಳಾಗುತ್ತವೆ.

೧. ಅಭೂತನೂನ್ಯ ೨. ಭೂತನೂನ್ಯ ೩. ನಿಷೇಧನೂನ್ಯ

. ಅಭೂತನೂನ್ಯ : -ಉತ್ತ-ವುತ ಮತ್ತು -ಉತ್ತಗಳು ಅಭೂತನೂನ್ಯ ಪ್ರತ್ಯಯಗಳಾಗಿವೆ.

ಉತ/ ಉತ್ತಗಳು ಸ್ವಚ್ಛಂದ ಪರಿವರ್ತನೆಯಲ್ಲಿರುತ್ತವೆ.

ಕನಲುತ                       ಕನಲುತ್ತ
ಕಾಣುತ                       ಕಾಣುತ್ತೆ
ಕರಗುತ                       ಕರಗುತ್ತ
ಬಾಚುತ                      ಬಾಚುತ್ತ
ತಿರುಹುತ                    ತಿರುಹುತ್ತ
ತೂಗುತ                      ತೂಗುತ್ತ
ಒಲೆವುತ                      ತರಿವುತ
ತರಿವುತ                       ಹೊಳೆವುತ
ಸುರಿವುತ                      ಕುಣಿವುತ
ಬಯವುತ                    ಸುಯತ
ಇತ್ಯಾದಿ

. ಭೂತನೂನ್ಯ : ಇ, ಉ ಇವು ಭಾತನೂನ್ಯ ಪ್ರತ್ಯಯಗಳಾಗಿವೆ.

ಕೂಡು                        ಕೂಡಿ
ನೋಡಿ                        ನೋಡಿ
ತೋರು                       ತೋರಿ
ಆಗು                           ಆಗಿ
ಮಾಡು                       ಮಾಡಿ
ಹೊಗಳು                     ಹೊಗಳಿ
ಅಳುಕು                       ಅಳಕ
ಇತ್ಯಾದಿ

. ನಿಷೇಧನೂನ್ಯ : ‘ಅದೆ’ ಎಂಬ ನಿಷೇಧನೂನ್ಯ ಪ್ರತ್ಯಯವು ಧಾತುವಿಗೆ ನೇರವಾಗಿಯೇ ಸೇರುತ್ತದೆ.

ಕೂಡದೆ                       ಕಾಣದೆ
ನೋಡದೆ                     ತಡೆಯದೆ
ಬೀಳದೆ                        ತರದೆ
ಕೆಣಕದೆ                        ಈಯದೆ
ಮಾಣದೆ                      ಬರದೆ
ಇತ್ಯಾದಿ

ಕೆಲವು ಭೂತನೂನ್ಯ ಪದದಲ್ಲಿ ‘ಆಡು’ ಧಾತವೂ ಮತ್ತು ಅದರ ರೂಪಗಳು ಪುನರಾವರ್ತನೆಯ ಅರ್ಥವನ್ನು ಕೊಡುತ್ತವೆ.

ತುಳಿದಾಡು                  ಹರಿದಾಡು
ಎಚ್ಚಾಡು                   ಕುಟ್ಟಾಡು
ಮುಳುಗಾಡು               ಹೊಯ್ದಾಡು

ಭೂತನೂನ್ಯಗಳ ಪದದಲ್ಲಿ ‘ಹಾಯ್ಯು’ ಧಾತುವೂ ಮತ್ತು ಅದರ ರೂಪಗಳು ಭಾವ ತೀವ್ರತೆಯ ಅರ್ಥವನ್ನು ಕೊಡುತ್ತವೆ.

ಜಿಗಿದು                        ಹಾಯ್ಕು
ಎತ್ತಿ                          ಹಾಯ್ಕು
ಇತ್ಯಾದಿ

ಕೆಡು, ಎಸು, ಹೊಗು ಮೊದಲಾದ ರೂಪಗಳಲ್ಲಿ ಕಂಡುಬರುವ ‘ಎ’, ‘ಒ’ ಸ್ವರಗಳು ಎಲ್ಲ ಕ್ರಿಯಾರೂಪಗಳಲ್ಲಿಯೂ ಕಂಡುಬರುತ್ತವೆ. ಕುಡು (ಕೊಡು), ಕುಯಿ (ಕೊಯ್) ಮೊದಲಾದ ರೂಪಗಳು ಕೆಲವು ಪ್ರಾಂತಭೇದಗಳಲ್ಲಿ ಉಳಿದುಕೊಂಡು ಬಂದಿರುವುದರಿಂದ ಅಂತಹ ಪ್ರಯೋಗಗಳು ಕ್ವಚಿತ್ತಾಗಿ ಕಂಡುಬರುತ್ತವೆ. ಭೂತಕಾಲದಲ್ಲಿ -ಇ, -ಎ ಕಾರಾಂತಗಳು ನಪುಂಸಕ ಲಿಂಗ ಏಕವಚನದಲ್ಲಿ -ಯಿದ್ ತೆಗೆದುಕೊಳ್ಳುತ್ತದೆ. ಉದಾ. ಸುಳಿ-ಯಿದ್-ತು>ಸುಳಿಯಿತು. ಸವೆ-ಯಿದ್/ತು>ಸವೆಯಿತ್ತು. ಹೀಗೆ ಕೆಲವು ಕಡೆಗಳಲ್ಲಿ ಇ- ಇದ್ ತೆಗೆದುಕೊಂಡ ಉದಾಹರಣೆಗಳೂ ಸಿಕ್ಕಿವೆ. ಅವೆಲ್ಲ ಉಕಾರಾಂತಗಳು. ಸುತ್ತು -ಇದ್-ತ್>ಸುತ್ತಿತ್ತು. ಮುಟ್ಟು-ಇದ್>ತು>ಮುಟ್ಟಿತ್ತು. ಮುತ್ತು-ಇ-ತು>ಮುಟ್ಟಿತು ಕ್ರಿಯಾಪದರಚನೆಯ ಈ ಎಲ್ಲ ನಿಯಮಗಳು ಛಂದಸ್ಸಿನ ಒತ್ತಡಗಳಿಂದ ಅಲ್ಪಸ್ವಲ್ಪ ಶಿಥಿಲವಾಗಬಹುದು.

ವಾಕ್ಯರಚನೆ : ಭಾಷೆಯಲ್ಲಿ ವಾಕ್ಯವು ಪೂರ್ಣ ಅರ್ಥನೀಡುವ ರಚನೆಯಾದ್ದರಿಂದ ಭಾಷಾ ರಚನೆಗಳಲ್ಲಿ ಅತ್ಯಂತ ದೊಡ್ಡ ರಚನೆ ಇದಾಗಿದೆ. ಆಕೃತಿಮಾ ಹಾಗೂ ಅವುಗಳಿಂದಾದ ಅಸಾಂದ್ರ ರಚನೆಯಬಗ್ಗೆ ವಾಕ್ಯರಚನಾಶಾಸ್ತ್ರದಲ್ಲಿ ಅಭ್ಯಸಿಸಲಾಗುತ್ತದೆ. ಉದಾ. ಆಗೋಪಿಯರು, ಆ. ಸುಂದರವಾದ ಗೋಪಿಯರು ಇಲ್ಲಿ ಆಗೋಪಿಯರು ಎಂಬುದು ಅಸಾಂದ್ರರಚನೆ ಅದನ್ನು ಅಂತರಿವಾಗಿ ಬೆಳವಣಿಗೆ ಮಾಡಬಹುದು. ದಾಸಸಾಹಿತ್ಯದ ವಾಕ್ಯದಲ್ಲಿ ಪದಗಳ ವಿನ್ಯಾಸದಲ್ಲಿ ನಿರ್ಭಂಧವಿಲ್ಲ. ಸಮಾನ್ಯವಾಗಿ ಎರಡು ಪೂರ್ಣವಿರಾಮಗಳ ಮಧ್ಯೆ ಸಾಮಾನ್ಯ ವಾಕ್ಯವಿರುತ್ತದೆ. ಅಂದರೆ ಒಂದೇ ಒಂದು ಪೂರ್ಣ ಕ್ರಿಯಾಪದವನ್ನು ಅದು ಒಳಗೊಂಡಿರುತ್ತದೆ. ಕೆಲವೊಮ್ಮೆ ಪೂರ್ಣ ಕ್ರಿಯಾಪದದ ಅಧ್ಯಾಹಾರವಿರುವುದುಂಟು. ಒಂದು ಸಾಮಾನ್ಯ ವಾಕ್ಯದಲ್ಲಿ ಒಂದು ಅಥವಾ ಹೆಚ್ಚು ಅಪೂರ್ಣ ಕ್ರಿಯಾಪದಗಳು ಇರಬಹುದು ಅಥವಾ ಇರದೇ ಇರಬಹುದು.

-ಏನೂ ಇಲ್ಲದ ಎರಡು ದಿನದ ಸಂಸಾರ
ಜ್ಞಾನದಲಿ ದಾನ ಧರ್ಮವ ಮಾಡಿರಯ್ಯ
-ಆವ ರೀತಿಯಿಂದ ನೀಯೆನ್ನ ಪಾಲಿಸೊ
ಶ್ರೀ ವಿಭು ಹಯವದನ

ವಿಶೇಷಣಗಳು ಕ್ರಿಯೆಯ ಕಾಲ, ಸ್ಥಳ, ರೀತಿಗಳನ್ನು ಸೂಚಿಸುತ್ತವೆ. ಸಾಮಾನ್ಯವಾಗಿ ನಾಮ ವಿಶೇಷಣಗಳು ನಾಮಪದದ ಪೂರ್ವದಲ್ಲಿ, ಕ್ರಿಯಾವಿಶೇಷಣಗಳು ಕ್ರಿಯಾಪದದ ಪೂರ್ವದಲ್ಲಿ ಬರುತ್ತವೆ. ಒಂದು ವೇಳೆ ಅವು ಬೇರೆಡೆ ಬಂದರೂ ಅವುಗಳು ಭಾಷಾವ್ಯವಹಾರದಲ್ಲಿ ವ್ಯತ್ಯಾಸವಿರುವುದಿಲ್ಲ.

-ರಂಗನಾಥನು ಇರಲಿಕ್ಕೆ ಜಂಗುಳಿ ದೇವಗಳೇಕೆ
ತುಂಗಭದ್ರೆ ಇರಲಿಕ್ಕೆ ಬಾವಿ ಕೆರೆಯೇಕೆ
– ಚಿನ್ನದ ಗಿರಿಯಿರಲಿಕ್ಕೆ ಕಬ್ಬಿಣದ ಮೊರಡಿಯೇಕೆ
ಮಂಗನಾದರೂ ಅಸಂಗ ನೆಂದೆನಿಸುವಿ

ದಾಸಸಾಹಿತ್ಯದಲ್ಲಿ ಸರಳವಾಕ್ಯ, ಪ್ರಶ್ನಾರ್ಥಕ ವಾಕ್ಯ, ಉದ್ಗಾರ ವಾಚಕವಾಕ್ಯ ಮತ್ತು ಪ್ರಶ್ನಾರ್ಥಕ ವಾಕ್ಯ ಎಂಬ ನಾಲ್ಕು ತರಹದ ವಾಕ್ಯಗಳು ಬಳಕೆಯಾಗಿವೆ. ಸಾಮಾನ್ಯವಾಗಿ ಒಂದು ನಾಮಪದ ಒಂದು ಕ್ರಿಯಾಪದ ಉಳ್ಳ ವಾಕ್ಯವೇ ಸರಳವಾಕ್ಯ. ಪ್ರಶ್ನೆ ಕೇಳುವ ರಚನೆಗಳೇ ಪ್ರಶ್ನಾರ್ಥಕ ವಾಕ್ಯಗಳು, ಆ ಕ್ಷಣದ ಭಾವನೆಯನ್ನು ಬಿಂಬಿಸುವಂತಹ ವಾಕ್ಯಗಳೆ ಉದ್ಗಾರವಾಚಕ ವಾಕ್ಯಗಳು, ವಿನಂತಿ, ಆಜ್ಞೆ, ಹಾರೈಕೆಯನ್ನು ಬಿಂಬಿಸುವಂತಹವು ಆಜ್ಞಾಧಾರಕ ವಾಕ್ಯಗಳಾಗಿವೆ.

-ಅಪರಾಧವೆಣಿಸದಲೆ ಕಾಯಬೇಕು
-ಅಂತರಂಗದ ಕದವು ತೆರೆಯಿತು
-ನೀ ಎನ್ನ ಕೈ ಬಿಡುವರೆ?
-ಪಾಪಿಬಲ್ಲನೆ ಪರರ ಸುಖ-ದುಃಖವ ?
-ಜಪವ ಮಾಡಿದರೇನು ತಪವ ಮಾಡಿದರೇನು
ಕಪಟಗುಣ ವಿಪರೀತ ಕಲುಷ ವಿದವರು !
-ಬಂದದುಃಖಗಳೆಲ್ಲ ನಿಲ್ಲದಲೆ ಕಳೆಯುವವು
ಚೆಂದಾದಿ ಕಾಗಿನೆಲೆಯಾದಿ ಕೇಶವನ ನೆಲೆ
-ಚಿತ್ತ ಶುದ್ಧಿಯಿಂದ ಪುರಂದರವಿಠಲನ
ನಿತ್ಯದಲಿ ನೆನೆನೆದು ಮುಕ್ತಿ ಪಡೆ ಮನುಜಾ

ದಾಸಸಾಹಿತ್ಯದಲ್ಲಿಯ ವಾಕ್ಯಗಳನ್ನು ಪ್ರಾಪ್ತವಾಕ್ಯಗಳು ಮತ್ತು ಅಪ್ರಾಪ್ರವಾಕ್ಯಗಳೆಂದು ಮತ್ತೆರಡು ರೀತಿಯಾಗಿ ವಿಂಗಡಿಸಬಹುದು. ಪ್ರಾಪ್ತವಾಕ್ಯಗಳು ಕ್ರಿಯಾಪದಸಹಿತ ಮತ್ತು ಕ್ರಿಯಾಪದರಹಿತ ಎಂದು ಎರಡು ರೀತಿಯಾಗಿ ವಿಂಗಡಿಸಬಹುದು.

ಕ್ರಿಯಾಪದ ಸಹಿತ:- ನೆನೆಮನವೆ ಪುರಂದರವಿಠಲನನು
ಎಂತು ನೆನೆಯಲು ಪಾಪ ಪರಿಹಾರವಲ್ಲದೆ
– ಭಜಿಸಿದರು ಗೋಪಿಯರು ಕೃಷ್ಣನನು

ಕ್ರಿಯಾಪದ ರಹಿತ : -ಏನು ಇಲ್ಲದ ಎರಡು ದಿನದ ಸಂಸಾರ
-ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ
-ಪಾಪಿ ಬಲ್ಲನೆ ?
-ಸಕಲವೆನಗೆ ನೀನೆ ಶ್ರೀ ಹರಿಯೆ

ಪೂರ್ಣ ಕ್ರಿಯಾಪದದಿಂದ ಕೂಡಿರದ ಘಟಕಗಳು ಮತ್ತು ಪೂರ್ಣ ಕ್ರಿಯಾಘಟಕವನ್ನು ಹೊಂದಿರದ ಘಟಕ ಸರಣಿಗಳು ಅಪ್ರಾಪ್ತ ವಾಕ್ಯಗಳೆನಿಸಿಕೊಳ್ಳುತ್ತವೆ. ಆದರೆ ಅವು ಸ್ವತಂತ್ರವಾಗಿ ನಿಲ್ಲುವಂತಿರಬೇಕು.

-ಎಲ್ಲಾಡಿ ಬಂದ್ಯೋ
-ಕಾಳಿಂಗನಾ ಮೆಟ್ಟಿ
-ರಂಗಯ್ಯ ಮನೆ ಬಂದರೆ
-ಇಂದು ಸೈರಿಸಿರಿ

ಉಪವಾಕ್ಯಗಳು :ಉಪವಾಕ್ಯಗಳು ಒಂದು ಕ್ರಿಯಾಘಟಕದಿಂದ ಉಂಟಾಗುತ್ತವೆ. ಉಪವಾಕ್ಯಗಳಲ್ಲಿ ಎರಡು ಬಗೆ, ಅ. ಮುಖ್ಯ ಆ. ಅಧೀನ ಮುಖ್ಯ ಉಪವಾಕ್ಯದ ಪೂರ್ಣ ಕ್ರಿಯಾಪದವು ಸಾಮಾನ್ಯ ಕರ್ತೃಪದದೊಡನೆ ಲಿಂಗ ಮತ್ತು ವಚನಗಳಲ್ಲಿ ಅನ್ವಯ ಗೊಂಡಿರುತ್ತದೆ. ಆದರೆ ಕೆಲವು ವೇಳೆ ಏಕವಚನ ನಪುಂಸಕಲಿಂಗದ ಪ್ರತ್ಯಯದಿಂದ ಕೂಡಿವ ಕ್ರಿಯಾಪದವು ಪುಂ ಸ್ತ್ರೀ ಬಹುವಚನದ ಕರ್ತೃಪದದೊಡನೆಯ ಸಹ ಅನ್ವಯಗೊಳ್ಳುತ್ತದೆ.

ಮುಖ್ಯ ಉಪವಾಕ್ಯಗಳು : ಪೂರ್ಣ ಕ್ರಿಯೆಯಿಂದ ಕೂಡಿದ ಘಟಕವಾಗಿದ್ದರೆ ಅದು ಮುಖ್ಯ ಉಪವಾಕ್ಯವಾಗುತ್ತದೆ.

-ಜಪವ ಮಾಡಿದರೇನು ತಪವ ಮಾಡಿದರೇನು
ಕಪಟಗುಣ ವಿಪರೀತಕಲುಷವಿದ್ದವರು

-ಉದರ ವೈರಾಗ್ಯವಿದು, ನಮ್ಮ
ಪದುಮನಾಭನಲ್ಲಿ ಲೇಶ ಭಕುತಿಯಿಲ್ಲ
-ದುರ್ವಾರ್ತೆಕೇಳಿ ಮನಬಿಡದೆ ಚಿಂತಿಸುತಿದೆ

ಅಧೀನವಾಕ್ಯ : ಅಪೂರ್ಣಕ್ರಿಯೆಯಿಂದ ಕೂಡಿದ ಘಟಕವಾಗಿದ್ದರೆ ಅದು ಅಧೀನ ಉಪವಾಕ್ಯವೆನಿಸುತ್ತದೆ.
-ಪಾಲೊಳಗದ್ದು
-ದಾರಿಯತೋರೋ ಗೋಪಾಲ
-ಗತಿಯಾವುದೆನಗೆ ?
-ತನುನಿನ್ನದು
-ಮಡಿಮಡಿಮಡಿಯೆಂದು
ಇತ್ಯಾದಿ

ದಾಸಸಾಹಿತ್ಯದ ವಾಕ್ಯಗಳನ್ನು, ವಾಕ್ಯರಚನೆಯನ್ನು ಸಹ ಈ ಕೆಳಗಿನಂತೆ ಸ್ಪಷ್ಟಪಡಿಸಬಹುದು. ಪದಪುಂಜರಚನಾ ನಿಯಮಗಳು ವಾಕ್ಯರಚನೆಯನ್ನು ಸಹ ಈ ಕೆಳಗಿನಂತೆ ಸ್ಪಷ್ಟಪಡಿಸಬಹುದು. ಪದಪುಂಜರಚನಾ ನಿಯಮಗಳು ವಾಕ್ಯರಚನೆಯನ್ನು ನೀಡುತ್ತವೆ. ಅಂದರೆ ಈ ನಿಯಮಗಳು ವಾಕ್ಯದ ನಿಕಟತಮ ಘಟಕಗಳ ವರ್ಗಗಳನ್ನೂ ಮತ್ತು ಅವುಗಳ ವ್ಯಾಕರಣ ಸಂಬಂಧವನ್ನು ಸೂಚಿಸುತ್ತವೆ.

ಸಿರಿಬಂದ ಕಾಲಕ್ಕೆ ಮರೆಯಬೇಡ
(ನಾಮಪುಂಜ) (ಕ್ರಿಯಾಪುಂಜ)
ಸಿರಿಬಂದ+ಕಾಲಕ್ಕೆ+ಮರೆಯಬೇಡ
ನಾಮಪುಂಜ ಕ್ರಿಯಾಪುಂಜ [ಬೇಡ]
ನಿಷೇಧರೂಪ

ಮೂಲವಾಕ್ಯ– ದಾರಿಯಾವುದಯ್ಯಾ
ಸೇರಿದ ವಾಕ್ಯ –ದಾರಿ ತೋರಿಸಯ್ಯ
ಉತ್ಪಾದಿತವಾಕ್ಯ –ದಾರಿಯಾವುದಯ್ಯಾ ವೈಕುಂಠಕ್ಕೆ ದಾರಿತೋರಿಸಯ್ಯಾ

ಇಲ್ಲಿ ವೈಕುಂಠಕ್ಕೆ ಎಂಬುದು ಅನುಪಲ್ಲವಿಯಲ್ಲಿ ಆಗಮವಾಗಿದೆ. ವಾಕ್ಯರಚನೆಯ ಭಾಗದಲ್ಲಿ ಆಕೃತಿಮಾ ಹಾಗೂ ಶಬ್ದಗಳಿಂದಾದ ಪದಪುಂಜ, ವಾಕ್ಯಖಂಡ, ವಾಕ್ಯ ಮುಂತಾದ ಅನೇಕ ರಚನೆಗಳ ಸ್ವರೂಪವನ್ನು ಸ್ಥೂಲವಾಗಿ ಗಮನಿಸಲಾಗಿದೆ.

ಅವ್ಯಯಗಳು : ರೂಪುಭೇದವಿಲ್ಲದವು ಅಂದರೆ ಲಿಂಗ, ವಚನ, ವಿಭಕ್ತಿಗಳ ವಿಕಾರವಿಲ್ಲದೆ ಒಂದೇ ರೂಪದಲ್ಲಿರುವ ಶಬ್ದಗಳು ‘ಅವ್ಯಯ’ ಗಳೆನಿಸುವವು. ಈ ಅವ್ಯಯ ರೂಪಗಳು ನಾಮವಿಭಕ್ತಿ ಕ್ರಿಯಾವಿಭಕ್ತಿ ಪ್ರತ್ಯಯಗಳನ್ನೂ ಮತ್ತು ಲಿಂಗ ವಚನಗಳನ್ನೂ ಹೊಂದಿರುವುದಿಲ್ಲ. ಉದಾ. ಮತ್ತು ಹಾಗೆ. ಆದರೆ, ಮುಂತಾದುವು. ಅವ್ಯಯಗಳು ಅನೇಕ ಬಗೆಯ ವಾಕ್ಯರಚನಾತ್ಮಕ ಕಾರ್ಯಗಳನ್ನು ನಿರ್ವಹಿಸುವ ಅಂಶಗಳಾಗಿವೆ. ಉದಾ.

-ವಿಠಲಾ ನಿನ್ನ ನಂಬಿದೆ ಎನ್ನ ಕಾಯೋ
-ನೇಮವಿಲ್ಲದ ಹೋಮವೇತಕಯ್ಯ ರಾಮ
ನಾಮವಲ್ಲದೆ ಮತ್ತೆ ನಮಗೆ ಬೇರೊಂದೆ ?
-ಆರು ಹಿತವರು ನಿನಗೆ ಈ ಮೂವರೊಳಗೆ
ನಾರಿಯೊ ಧಾರುಣಿಯೊ ಬಲುಧನದ ಸಿರಿಯೊ

ಅವು ಅವಧಾರಣೆ, ಪ್ರಶ್ನೆ, ಸಂದೇಹ, ಸಂಯೋಜನೆ ಮುಂತಾದ ವಾಕ್ಯ ಸಂಯೋಜನೆಯ ಕಾರ್ಯಗಳನ್ನು ನಿರ್ವಹಿಸುತ್ತವೆ. ಅವ್ಯಯಗಳು ಹೆಚ್ಚಾಗಿ ಏಕ ಆಕೃತಿಮಾಗಳಾಗಿರುತ್ತವೆ. ಹೆಚ್ಚಾಗಿ ಅವು ಮುಕ್ತ ಆಕೃತಿಮಾಗಳಾಗಿವೆ. ದಾಸಸಾಹಿತ್ಯದಲ್ಲಿ ಬಳಕೆಯಾದ ಅವ್ಯಯಗಳನ್ನು ಎಂಟು ರೀತಿಯಾಗಿ ವಿಂಗಡಿಸಬಹುದು.

೧.ಸಾಮಾನ್ಯವ್ಯಯ : ಯಾವುದೊಂದು ಕ್ರಿಯೆಯು ನಡೆದ ರೀತಿಯನ್ನು ಹೇಳುವಂಥವು ಅಂದರೆ ಕ್ರಿಯೆಯ ಸ್ಥಳ, ಕಾಲ, ರೀತಿಗಳನ್ನು ತಿಳಿಸುವಂತಹವು ‘ಸಾಮಾನ್ಯಾವ್ಯಯ’ಗಳೆನಿಸುವುವು.

ಸ್ಥಳಕ್ಕೆ : ಇಲ್ಲಿ, ಅಲ್ಲಿ, ಮೇಲೆ, ಕೆಳಗೆ ಮುಂತಾದವು

ಕಾಲಕ್ಕೆ : ಈಗ, ಆಗ, ನಾಳೆ, ನಿನ್ನೆ, ಅಂದು, ಇಂದು ಮುಂತಾದುವು

ರೀತಿಗೆ : ಮೆಲ್ಲನೆ, ತೆಳ್ಳಗೆ, ನೆಟ್ಟಿಗೆ, ಅಂತು, ಇಂತು ಮುಂತಾದುವು

.ಅನುಕರಣಾವ್ಯಯ : ಅರ್ಥವಿಲ್ಲದ ಧ್ವನಿವಿಶೇಷಗಳನ್ನು ಕೇಳಿದಂತೆ ಪುನಃ ಉಚ್ಚಾರಣೆ ಮಾಡಿ ಅನುಕರಿಸಿ ಹೇಳುವ ಶಬ್ದಗಳು ‘ಅನುಕರಣಾವ್ಯಯ’ಗಳೆನಿಸುವುವು. ಉದಾ. ಗಳಿಲನೆ, ಥಟ್ಟನೆ, ಗದಗದನೆ, ಖಣಿಖಣಿ, ಛಿಳಿಛಿಳಿ, ಧಗಧಗಿಲು ಮುಂತಾದವು

. ಸಂಬಂಧಕಾವ್ಯಯ :ಎರಡು ಅಥವಾ ಹಲವು ಪದಗಳ ಇಲ್ಲವೆ ಎರಡು ಅಥವಾ ಹಲವು ವಾಕ್ಯಗಳ ಸಂಬಂಧವನ್ನು ತೋರಿಸುವ ಶಬ್ದಗಳು ‘ಸಂಬಂಧಕಾವ್ಯಯ’ ಗಳೆನಿಸುವುವು. ಇವು ಪದಗಳ ಇಲ್ಲವೆ ವಾಕ್ಯಗಳ ಸಂಬಂಧಾರ್ಥ ಸೂಚಿಸುವುವಲ್ಲದೇ ಸಂಬಂಧಗೊಳಿಸುತ್ತವೆ. ಉದಾ : ಮತ್ತು, ಊ, ಸಂಗಡ, ಅಲ್ಲದೆ, ಹೊರತು, ಇಲ್ಲವೆ, ಆದ್ದರಿಂದ, ಆದುದರಿಂದಮುಂತಾದುವು

. ಸಂಬೊಧಕಾವ್ಯಯ : ಕರೆಯುವಾಗ ಉಪಯೋಗಿಸುವ ಶಬ್ದಗಳು ‘ಸಂಬೋಧಕಾವ್ಯಯ’ ಗಳೆನಿಸುವುವು. ಉದಾ. ಎಲೆ, ಎಲೋ, ಎಲಾ, ಇಲೇ, ಓ ಮುಂತಾದುವು

– ಎಲ್ಲಾಡಿ ಬಂದ್ಯೋ ಮುದ್ದುರಂಗಯ್ಯ ನೀ
ನೆಲ್ಲಾಡಿ ಬಂದ್ಯೋ ಕೃಷ್ಣಯ್ಯ

-ಪೋಗದಿರೆಲೊರಂಗ, ಬಾಗಿಲಿಂದಾಚೆಗೆ
ಭಾಗವತರು ಕಂಡರೆತ್ತಿ ಕೊಂಡೊಯ್ವರೊ

-ಮೊಸರು ತಂದಿನೊ ರಂಗಾ ಮಾರ್ಗವ ಬಿಡೊ
ಕಿಸರು ಹೊರಲಿಬೆಡ ಕೆಲಕೆ ಸಾರೋ

.ಭಾವಸೂಚಕಾವ್ಯಯ : ಹರ್ಷ, ದುಃಖ, ಕೋಪ, ಆಶ್ಚರ್ಯ, ಮೆಚ್ಚುಗೆ, ತಿರಸ್ಕಾರ ಇತ್ಯಾದಿ ಮನೋಭಾವಗಳನ್ನು ವ್ಯಕ್ತಪಡಿಸುವಾಗ ಅರ್ಥವಿಲ್ಲದ ಶಬ್ದಗಳನ್ನು ಬಳಸುತ್ತೇವೆ ಅವುಗಳನ್ನು ‘ಭಾವಸೂಚಕಾವ್ಯಯ’ ಗಳೆನಿಸುವುವು. ಉದಾ. ಅಯೋ, ಅಕಟಕಟಾ, ಆಹಾ, ಭಲೆ, ಭಲಾ, ಹಾ, ಆಹಾ, ಚಿ, ಥೂ, ಅರರೆ, ಧಿರುರೆ ಮುಂತಾದುವು.

.ಕ್ರಿಯಾವಾಚಕಾವ್ಯಯ : ವಾಕ್ಯದಲ್ಲಿಯ ಕ್ರಿಯಾಪದದ ಸ್ಥಾನದಲ್ಲಿದ್ದೂ ಕ್ರಿಯೆಯ ಅರ್ಥವನ್ನು ಹೇಳುವ ಅಥವಾ ಪೂರ್ಣಗೊಳಿಸುವ ಶಬ್ದಗಳು ‘ಕ್ರಿಯಾವಾಚಕಾಯ್ಯ’ಯಗಳೆನಿಸುವುವು. ಉದಾ. ಉಂಟು, ಬೇಕು, ಸಾಕು, ಬೇಡ, ಅಹುದು ಮುಂತಾದುವು.

-ಬೇಗ ಬಾ ರಂಗಯ್ಯ
-ಗೋಪಿಯ ರೊಡನೆ ಬಂದನು ನಮ್ಮ
ಕೃಷ್ಣಯ್ಯ
-ಇನ್ನು ಹೇಳುವುದೇನು
-ಸಿಕ್ಕಿದನೆಲೆ ಜಾಣೆ ಶ್ರೀ ವೇಣುಗೋಪಾಲ
ಭಕ್ತವತ್ಸಲ ದೇವನು

. ಅವಧಾರಣಾರ್ಥಕಾವ್ಯಯ : ಹಲವು ವಸ್ತುಗಳಲ್ಲಿ ಒಂದನ್ನು ನಿಶ್ಚಯಿಸುವುದು ‘ಅವಧಾರಣೆ’ ಎನಿಸುವುದು. ಹೀಗೆ ನಿಶ್ಚಯಾರ್ಥದಲ್ಲಿ ಬರುವ ಅವ್ಯಯ ಶಬ್ದಗಳು ‘ಅವಧಾರಣಾರ್ಥಕ ಅವ್ಯಯ’ಗಳು. ಈ ಪದಗಳಲ್ಲಿ ಎ, ಏ, ಉ, ಊ ಪ್ರತ್ಯಯಗಳು ನಿಶ್ಚಯಾರ್ಥ ಸೂಚಿಸುತ್ತವೆ.

-ನಿನ್ನೊಬ್ಬನೆ ರಂಗಯ್ಯ
-ಅವರು ಬದುಕಿದರೇನು
-ಗುಮ್ಮನ ಕರೆಯದಿರೆ ಅಮ್ಮ ನೀನು
-ಗುಮ್ಮನ ಕರೆಯದಿರೆ
-ಕಂಡುಕಂಡೂ ನೀ ಎನ್ನ ಕೈಬಿಡವರೆ ಕೃಷ್ಣ
ಪುಂಡರೀಕಾಕ್ಷ ಶ್ರೀ ಪುರುಷ್ಟೋತ್ತಮ ಹರೇ
-ಪಾಪಿಬಲ್ಲನೆ ಪರರ ಸುಖ ದುಃಖವ
ಕೋಪಿಬಲ್ಲನೆ ಶಾಂತಿ ಸುಗುಣದ ಘನವ

. ಪ್ರಶ್ನಾರ್ಥಕಾವ್ಯಯ : ಪ್ರಶ್ನೆ ಮಾಡುವಾಗ ಉಪಯೋಗಿಸುವ ಅವ್ಯಯಗಳು ‘ಪ್ರಶ್ನಾರ್ಥಕಾವ್ಯಯ’ಗಳೆನಿಸುವವು. ಈ ಪದಗಳಲ್ಲಿಯೂ ಎ, ಏ, ಓ, ಏನು ಎಂಬ ಪ್ರತ್ಯಯಗಳು ಪ್ರಶ್ನಾರ್ಥವನ್ನು ಸೂಚಿಸುತ್ತವೆ. ಉದಾ.

-ಹೊಲೆಯ ಹೊರಗಿಹನೆ ಊರೊಳಗಿಲ್ಲವೆ ?
ಹೊಲೆಗೇರಿಯೊಳು ಹೊಲೆಯ ಹೊಲತಿಲ್ಲವೆ ?
-ಜಪವ ಮಾಡಿದರೇನು ತಪವ ಮಾಡಿದರೇನು?
ಕಪಟಗುಣ ವಿಪರೀತ ಕಲುಷವಿದ್ದವರು
-ನೇಮವಿಲ್ಲದ ಹೋಮ ವೇತಕಯ್ಯಾ ರಾಮ
ನಾಮವಲ್ಲದೆ ಮತ್ತೆ ನಮಗೆ ಬೇರೊಂದೆ?
-ನೀ ಎನ್ನ ಕೈ ಬಿಡುವರೆ ?
-ಎನ್ನ ಪರಾಧವೇನು ?
-ನಿನ್ನ ಸೂತ್ರಾಡಿಸಿಧಾಂಗ ಆಡುವೆ ಹರಿ

ಭಾಷೆಯ ಇತರ ಘಟಕಗಳು : ಸಾಮಾನ್ಯವಾಗಿ ಕನ್ನಡ ಭಾಷೆಯಲ್ಲಿಯ ಶಬ್ದಗಳನ್ನು ದೇಶ್ಯ, ತತ್ಸಮ, ತದ್ಬವ ಹಾಗೂ ಅನ್ಯದೇಶ್ಯ ಎಂದು ನಾಲ್ಕು ವಿಧವಾಗಿ ವಿಂಗಡಿಸುವುದುಂಟು. ದಾಸಸಾಹಿತ್ಯದಲ್ಲಿ ಈ ನಾಲ್ಕು ವರ್ಗದ ಶಬ್ದಗಳು ದೊರೆಯುತ್ತವೆ.

ದೇಶ್ಯಶಬ್ದಗಳು : ಕನ್ನಡ ಭಾಷೆಯಲ್ಲಿಯ ಅಚ್ಚಕನ್ನಡ ಶಬ್ದಗಳನ್ನು ‘ದೇಶ್ಯ’ ಶಬ್ದಗಳೆನ್ನುತ್ತಾರೆ. ಜನಸಮುದಾಯದ ಮಧ್ಯ ಬದುಕಿದ ದಾಸರು ಹಲವಾರು ದೇಶಿಯ ರೂಪಗಳನ್ನು ಸಹಜವಾಗಿ ಬಲಸಿದ್ದಾರೆ. ದೇಶಿಯ ಅಕ್ಷರ ಭಂಡಾರ ದಾಸರಿಗೆ ಕೈವಶವಾಗಿದೆ. ಅಚ್ಚಗನ್ನಡ ಭಾಷೆಯ ಸತ್ವದೊಡನೆ ಜನವಾಣಿಯ ಜೀವಂತಿಕೆಯನ್ನು ಬೆರಸಿ ಭಾಷೆಯ ಶ್ರೀಮಂತಿಕೆಯನ್ನು ಅವರು ಅಭಿವೃದ್ಧಿ ಪಡಿಸಿದರು. ಅವರು ಬಳಸಿದ ಹಲವು ದೇಶ್ಯರೂಪಗಳು ಇಂತಿವೆ.

ಹೊಲ, ಮನೆ, ಅಮ್ಮ, ಆನೆ, ಕುದುರೆ, ಹೂ
ಮರ, ಅರಸು, ಅರೆ, ಆಲು, ಇಳಿ, ಉಡು
ಎಣ್ಣೆ, ಒಂದು, ಎರಡು, ಮೂರು, ಕದ, ಕಲ್ಲು
ಕಡಿಮೆ, ಕೈ, ಕಣ್ಣು, ಕಿವಿ, ಕಾಲು, ಕರಿ
ಕರು, ಗಿಡ, ತಲೆ, ತುರು, ನೆಲೆ, ಬಾಯಿ
ಮೊಸರು, ಮಜ್ಜಿಗೆ, ಹೊಳೆ, ಮೆಲ್ಲನೆ, ಬೆಚ್ಚನೆ
ಮುಂತಾದ ನಾಮಪದಗಳು.
ಆಗು, ಆಡು, ಇಕ್ಕು, ಇಡು, ಏಳು, ಒರೆ
ಓಡು, ಕೂಡು, ಕೆಡು, ಕೆದರು, ಬಿಡು
ಹೋಗು, ಹೊಯ್, ಹೋಗು ಮುಂತಾದ ಕ್ರಿಯಾರೂಪಗಳು.

ತತ್ಸಮಗಳು : ಸಂಸ್ಕೃತದಿಂದ ವಿಕಾರ ಹೊಂದದೆ ಕನ್ನಡದಲ್ಲಿ ಬಳಸುವ ಶಬ್ದಗಳನ್ನು ‘ತತ್ಸಮ’ಗಳೆಂದು ಕರೆಯುತ್ತಾರೆ. ಇವನ್ನು ಸಮಸಂಸ್ಕೃತವೆಂದೂ ಕರೆಯುವರು. ದಾಸರು ಸಂಸ್ಕೃತವನ್ನು ಚೆನ್ನಾಗಿ ಅರಗಿಸಿಕೊಂಡಿದ್ದರು. ಆದರೆ ಪಾಂಡಿತ್ಯ ಪ್ರದರ್ಶನಕ್ಕೆ ಅವರು ಹೋಗುವುದಿಲ್ಲ. ಭಾಷಾ ಸಂವಹನ ಅವರಿಗೆ ಮುಖ್ಯವಾಗಿದೆ. ಅವರು ಬಳಸುವ ಬಿಡಿಪದಗಳಾಗಲಿ, ಸಮಸ್ತರೂಪಗಳಾಗಲಿ ಕಾವ್ಯಾಭ್ಯಾಸಿಗಳಿಗೆ ಚಿರಪರಿಚಿತವಾದವು.

ಸೂರ್ಯ, ಚಂದ್ರ, ಕೃಷ್ಣ, ಹರಿ, ಸ್ತ್ರೀ,
ವನ, ಕಮಲ, ಭವನ, ಶುದ್ಧ, ಕವಿ, ಕಾವ್ಯ
ರವಿ, ಗಿರಿ, ಯತಿ, ಮತಿ, ಗತಿ, ಗಂಗೆ
ಆಕಾಶ, ಜಾತಿ, ಚತುರ, ಯೌವನ, ಶಿರ
ಔಷಧ, ಯೋಧ, ಧ್ಯಾನ, ಯಮ, ಯಾತ್ರೆ ಮುಂದಾದುವು.

ತದ್ಭವಗಳು : ಕನ್ನಡದ ನುಡಿಯಲ್ಲಿ ಹಾಸುಹೊಕ್ಕಾಗಿ ಹೆಣೆದುಕೊಂಡು ಬಂದು ದೇಶ್ಯಕ್ಕೆ ಸರಿಸಮವಾಗಿ ಬಳಕೆಯಾಗುವ ಬಲು ದೊಡ್ಡ ಸಂಖ್ಯೆಯ ಶಬ್ದಗಳೆಂದರೆ ತದ್ಭವಗಳು. ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ಅಲ್ಪಸ್ಪಲ್ಪ ವಿಕಾರ ಹೊಂದಿ ಇಲ್ಲವೆ ಪೂರ್ಣ ವಿಕಾರ ಹೊಂದಿ ಬಂದಿರುವ ಶಬ್ದಗಳನ್ನು ‘ತದ್ಭವ’ ಗಳೆಂದು ಹೇಳುವರು. ಈ ವಿಕಾರವು ಶಬ್ದದ ಅಂತ್ಯದಲ್ಲಿಯೂ, ಕೆಲವೆಡೆ ಮಧ್ಯದಲ್ಲಿಯೂ ಕಂಡುಬರುವುದು. ಇವು ಸಂಸ್ಕೃತದಿಂದ ಕನ್ನಡಕ್ಕೆ ಬರುವಾಗ ವಿಕಾರಹೊಂದಿದ ಕನ್ನಡ ಶಬ್ದಗಳೆಂದೇ ತಿಳಿಯಬೇಕು. ದಾಸರು ಪೂರ್ವಕಾವ್ಯಗಳ ಅಧ್ಯಯನದಿಂದ ಹಲವಾರು ಸಂಸ್ಕೃತ ಶಬ್ದಗಳನ್ನು ಕನ್ನಡ ಭಾಷೆಯ ಜಾಯಮಾನಕ್ಕೆ ಅನುಗುಣವಾಗಿ ಬಳಸಿದ್ದಾರೆ.

ಮಾಲೆ, ಬಾವಿ, ನಿದ್ದೆ, ಅಂಗ, ಉತ್ತರ
ಗಂಟೆ, ಜೋಗಿ, ಉರಗ, ಕುಮಾರ, ದಯೆ
ಲಕ್ಷ್ಮಿ, ಧರ್ಮ, ಗಂಧ, ಗಗನ, ಪಾದ
ವಾಣಿ, ಮಾತೆ, ಲೀಲೆ, ಪಿತೃ, ಮಾರ್ಗ
ಯುಗ, ರೇಖೆ, ಯುದ್ದ, ಶತ, ವೇಳೆ ಮುಂತಾದುವು.

ಅನ್ಯದೇಶ್ಯಗಳು : ಯಾವುದೇ ಭಾಷೆಯು ತನ್ನ ಸುತ್ತಲಿನ ಪರಿಸರ, ಸಂಪರ್ಕ ಮತ್ತು ಆಡಳಿತ ಪ್ರಭಾವಗಳಿಂದ ಬೆಳೆಯುತ್ತ ಹೋಗುತ್ತದೆ. ಅದರಂತೆ ಕನ್ನಡ ಭಾಷೆಯು ಪರಿಸರ

ದಿಂದ ನೆರೆ ಭಾಷೆಯ ಸಂಪರ್ಕದಿಂದ ಪ್ರಗತಿಹೊಂದಿದೆ. ಜನಸಮುದಾಯದ ಮಧ್ಯದಲ್ಲಿ ಬೆರೆತ ದಾಸರು ಜನಜಾಗೃತವುಂಟು ಮಾಡುವ ಸಂದರ್ಭದಲ್ಲಿ ಆ ಕಾಲದಲ್ಲಿ ಕರ್ನಾಟಕದಲ್ಲಿ ಪ್ರವೇಶ ಮಾಡಿದ ಅನ್ಯಭಾಷೆಗಳ ಸಂಪರ್ಕ ಅಥವಾ ಸ್ವೀಕರಣ ಕ್ರಿಯೆ ದಾಸರಿಗೆವುಂಟಾಗಿರಬೇಕು. ಸಹಜವಾಗಿ ದಾಸರ ಕೀರ್ತನೆಗಳಲ್ಲಿ ಅನ್ಯಭಾಷೆಯ ಶಬ್ದಗಳು ಸೇರಿಕೊಂಡಿವೆ.

ತಯಾರ್, ರೈತ, ಸಲಾಮು, ಕಾನೂನು, ರಸ್ತೆ, ಕಚೇರಿ
ಮಂಜೂರು, ನಕಲಿ, ಛಪ್ಪನ್ನದೇಶ, ಹುಜೂರ್
ಬುನಾದಿ, ಸಜೆ, ಪಗಾರ, ಪುಕಟೆ, ಲಿಲಾವ್
ಪಾಳತಿ, ಕುಮ್ಮುಕ್ಕು, ಜಾಹಿರ, ಅಂಜೂರು ಮುಂತಾದುವು.

ಹೊಸಶಬ್ದಗಳು : ಪೂರ್ವಕಾಲದಲ್ಲಿ ಗೋಚರವಾಗುವ ಆದರೆ ದಾಸಸಾಹಿತ್ಯದಲ್ಲಿ ಮಾತ್ರ ಬಳಕೆಯಾದ ಅಮೂಲ್ಯ ಶಬ್ದನಿಧಿ ದಾಸಸಾಹಿತ್ಯದಲ್ಲಿದೆ.

ಗಾರು, ಗಾಹು, ಜಗಡೆ, ಜರಡು, ಜಾಳು
ಡಿಳ್ಳ, ತಗಡು, ತೆತ್ತಿಸು, ತಟ್ಟು, ನಿಪ್ಪಸರ
ನಿಹಾರ, ಪಂಟಿಸು, ಬದಗ, ಬಣಗು, ಬೊಡ್ಡಿ
ಬೊಬ್ಬೆ, ಲಗ್ಗ, ಬಾಳಿ, ಹೀಹಾಳಿ, ಹುಗಿಲು
ಸದರ, ಸರಕು, ಹೊರಳು, ಮರಳು, ಲಟಕಟಿಸು ಮುಂತಾದುವು.

– ‘ಇಸು’ ಪ್ರತ್ಯಯಗಳಿಂದ ಸಾಧಿಸಿದ ಹಲವು ಶಬ್ಧಗಳಿವೆ. ಜಂಗುಳಿಸು, ನಿವಡಿಸು, ಭಾರಿಸು, ಹದುಳಿಸು ಇತ್ಯಾದಿ. ಸಂಸ್ಕೃತ ಶಬ್ದಗಳಿಗೆ ‘ಕ’ ಪ್ರತ್ಯಯ ಸೇರಿಸಿ ಹಲವು ರೂಪಗಳನ್ನು ಸಾಧಿಸಿದ್ದಾರೆ. ಆಧಾರಕ, ಸೂತ್ರಧಾರಕ, ಮಂತ್ರಸೂತ್ರಕ ಮುಂತಾದುವು. ದಾಸರು ಇಂತಹ ಹೊಸ ಪದಗಳನ್ನು ಟಿಂಕಿಸಿ ಕನ್ನಡ ಭಾಷೆಯ ಆಧುನೀಕರಣ ಪ್ರಕ್ರಿಯೆಗೂ ಕಾರಣವಾಗಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ.

ಇಲ್ಲಿಯವರೆಗೆ ದಾಸಸಾಹಿತ್ಯದ ಆಂತರಿಕ ರಚನೆಯನ್ನು ಕಂಡುಕೊಳ್ಳುವ ಪ್ರಯತ್ನ ಮಾಡಲಾಯಿತು. ಈ ಅಧ್ಯಾಯದಲ್ಲಿ ವ್ಯಾಕರಣ ವಿಚಾರಗಳ ಸ್ಥೂಲ ಪರಿಚಯದ ಪ್ರಯತ್ನ ತಕ್ಕಮಟ್ಟಿಗೆ ನಡೆದಿದೆ. ಇನ್ನೂ ಈ ಕುರಿತು ಕೆಲಸ ಆಗಬೇಕಾಗಿದೆ. ದಾಸಸಾಹಿತ್ಯದ ಶಬ್ಧ ಸಂಪತ್ತನ್ನು, ವಾಕ್ಯ ಪ್ರಯೋಗಗಳ ವೈವಿಧ್ಯವನ್ನು ಅರಿಯಬೇಕಾದರೆ ದಾಸಸಾಹಿತ್ಯದ ಪದಪ್ರಯೋಗ ಕೋಶ ಸಿದ್ಧವಾಗಬೇಕಾಗಿದೆ. ಭಾಷಾಭ್ಯಾಸಿಗಳಿಗೆ, ಸಂಶೋಧಕರಿಗೆ ಇದು ಎಂತಹ ಬೆಲೆಯುಳ್ಳ ಆಕರ ಗ್ರಂಥವೆಂಬುದನ್ನು ಆಯಾ ಕ್ಷೇತ್ರದಲ್ಲಿ ದುಡಿಯುವರು ಬಲ್ಲರು. ಅಂತಹ ಕೋಶ ಸಿದ್ಧವಾದರೆ ದಾಸರ ಎಲ್ಲ ಪ್ರಯೋಗಗಳು ಒಂದೆಡೆ ದೊರೆಯುವುದರಿಂದ ಅವುಗಳಲ್ಲಿಯ ಪರಸ್ಪರ ಹೋಲಿಕೆಗಳ ಮೂಲಕ ಧ್ವನಿಮಾ, ಪದ, ವಾಕ್ಯ ಹಾಗೂ ಅರ್ಥ ರಚನೆಗಳ ಸ್ವರೂಪವನ್ನು ನಿರ್ಣನಿಯಿಸುವುದಕ್ಕೂ ಬಹುಮಟ್ಟಿಗೆ ಸಾಧ್ಯವಾಗುವುದು. ದಾಸರ ಸಮಗ್ರ ಪ್ರಕೋಶ ಸಿದ್ಧವಾಗುವವರೆಗೆ ದಾಸರ ಭಾಷೆಯನ್ನು ಕುರಿತು ನಾವು ವ್ಯಕ್ತಪಡಿಸಿದ ಅಭಿಪ್ರಾಯಗಳು ತಾತ್ಪೂರ್ತಿಕವಾಗಿದ್ದು, ಪುನರ್ವಿಮರ್ಶೆಯ ಹಾದಿ ಕಾಯುತ್ತ ಇನ್ನು ಕೆಲಕಾಲ ನಿಂತಿರಬೇಕಾದುವು.