ದಾಸ ಸಾಹಿತ್ಯದ ಭಾಷಾ ಬಳಕೆಯನ್ನು ಕುರಿತು ಈವರೆಗೆ ಪರಿಶೀಲಿಸಿದ್ದಾಯಿತು. ಈ ಪರಿಶೀಲನೆಯಿಂದ ತಿಳಿದುಬಂದ ಪ್ರಮುಖ ಅಂಶಗಳನ್ನು ಹೀಗೆ ಸಂಗ್ರಹವಾಗಿ ನಿರೂಪಿಸಬಹುದು.

೧. ಭಾಷೆ ಮತ್ತು ಛಂದಸ್ಸಿನ ದೃಷ್ಟಿಯಿಂದ ದಾಸ ಸಾಹಿತ್ಯ ಹೊಸ ಪ್ರಯೋಗಗಳನ್ನು ಮಾಡಿದೆ. ರೂಢಿಯಲ್ಲಿರುವ ಗ್ರಾಂಥಿಕ ಕನ್ನಡ ಭಾಷೆಯ ಮೂಲಕವೇ ಕಾವ್ಯ ಸೃಷ್ಟಿಮಾಡುವ ಸವಾಲನ್ನು ದಿಟ್ಟವಾಗಿ ಎದುರಿಸಿದೆ. ಕಾವ್ಯಾನುಭವಕ್ಕೆ ತಕ್ಕಂತೆ ಭಾಷೆಯನ್ನು ವೈವಿಧ್ಯಮಯವಾಗಿ ದುಡಿಸಿಕೊಳ್ಳುವ ಮೂಲಕ ಸಾರ್ಥಕ ಕೀರ್ತನೆಗಳನ್ನು ನೀಡಿದೆ. ದೇಸಿಲಯಗಳ ಸಹಾಯದಿಂದ ಭಾಷೆಯನ್ನು ನವೀನಗೊಳಿಸಿದೆ. ಗ್ರಾಂಥಿಕ ಭಾಷೆಗೆ ಜನಪದ ಲಯ, ನುಡಿಗಟ್ಟು ಅದರ ಸ್ವರೂಪವನ್ನು ಕಸಿ ಮಾಡುವುದರ ಮೂಲಕ ದಾಸರು ಹೊಸಭಾಷೆಯನ್ನು ಸೃಷ್ಟಿಸಿದರು. ದೇಸಿಲಯಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದರ ಮೂಲಕ ಅಭಿವ್ಯಕ್ತಿಗೆ ಹೊಸತನ ತಂದರು. ಪುರಂದರದಾಸರು, ಕನಕದಾಸರು, ವಿಜಯದಾಸರು ಮುಂತಾದವರ ರಚನೆಗಳಲ್ಲೆಲ್ಲ ಇದನ್ನು ಕಾಣಬಹುದಾಗಿದೆ. ಈ ನವೀನ ಭಾಷಾ ಸೃಷ್ಟಿಯಿಂದಾಗಿಯೇ ಉಳಿದ ಸಾಹಿತ್ಯ ಪ್ರಕಾರಗಳಿಗಿಂತ ದಾಸ ಸಾಹಿತ್ಯ ಭಿನ್ನವಾಗಿ ಕಾಣಿಸಲು ಸಾಧ್ಯವಾಗಿದೆ.

೨. ಆ ವರೆಗೆ ಸಾಂಪ್ರದಾಯಿಕ ಜಾಡಿನಲ್ಲಿ ಸಾಗುತ್ತಿದ್ದ ಕವಿಗಳು ಅಥವಾ ಕನ್ನಡ ಅಭಿವ್ಯಕ್ತಿ ಕ್ರಮ ಹೊಸರೂಪಗಳ ಅನ್ವೇಷಣೆಗೆ ತೊಡಗಿತು. ಭಾಷೆ ಮತ್ತು ಛಂದಸ್ಸಿನ ಮೂಲ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಪ್ರಮುಖ ಬದಲಾವಣೆಗಳು ನಡೆದವು. ಪಾದದ ಉದ್ದವನ್ನು ಅಗತ್ಯಕ್ಕೆ ತಕ್ಕಂತೆ ಹಿಗ್ಗಿಸುವುದು. ಕುಗ್ಗಿಸುವುದು ನುಡಿಯಲ್ಲಿದ್ದ ೨ ರಿಂದ ೬ ರವರೆಗಿನ ಪಾದದ ಕಟ್ಟನ್ನು ಮುರಿದು ಪಂಚಪದಿ, ಸಪ್ತಪದಿ ಮುಂತಾದ ಹೊಸಬಂಧಗಳನ್ನು ರೂಪಿಸುವುದು, ಆದಿಪ್ರಾಸದ ನಿಯತತೆಯ ಕಟ್ಟನ್ನು ಕಳಚಿ ಅಂತ್ಯ ಪ್ರಾಸವನ್ನು ವಿಶೇಷವಾಗಿ ಬಳಕೆಗೆ ತಂದುದು ಅವರ ಮತ್ತೊಂದು ಸಾಧನೆಯಾಗಿದೆ.

೩. ಮಾತ್ರಾ ಛಂದಸ್ಸುಗಳ ಬಳಕೆಯಲ್ಲಂತೂ ಈ ಯುಗವು ಬಹಳ ಪ್ರಮುಖವಾದುದು. ಒಂದು ದೃಷ್ಟಿಯಿಂದ ಇದನ್ನು ಮಾತ್ರಾ ಛಂದಸ್ಸು ಯುಗವೆಂದರೂ ತಪ್ಪಾಗದು ಈ ಯುಗದಲ್ಲಿ ಮಾತ್ರಾ ಬಳಕೆಯಲ್ಲಿ ವೈವಿಧ್ಯವನ್ನು ಸಾಧಿಸಲಾಗಿದೆ. ಅಂಶ ಛಂದಸ್ಸಿನಲ್ಲಿಯೂ ಪದ ರಚನೆಯಲ್ಲೂ ಕೂಡ ಪ್ರಯೋಗಶೀಲತೆ ಮುಂದುವರೆಯಿತು. ಪ್ರಚಾರ ತಗ್ಗಿದ ಅಕ್ಕರದ ಪ್ರಭೇದಗಳನ್ನು ಮತ್ತೆ ಪ್ರಚಾರಕ್ಕೆ ತರಲಾಯಿತು. ಅಕ್ಕರಗಳಲ್ಲಿ ದಾಸರಿಗೆ ಪ್ರಿಯವಾದುದೆಂದರೆ ಪಿರಿಯಕ್ಕರ. ಅದರ ಭಾವಾಭಿವ್ಯಕ್ತಿ ಬಹುಸುಂದರ. ಅಂಶಗಣರಚನೆ ಎಷ್ಟು ಸಹಜವೆಂಬುದು ದಾಸರ ರಚನೆಗಳಿಂದ ವೇದ್ಯವಾಗುತ್ತದೆ. ಅದು ದಾಸರ ಔಚಿತ್ಯ ಪ್ರಜ್ಞೆಯನ್ನು ತಿಳಿಸುತ್ತದೆ. ಅಲ್ಲಿಯ ಗಣಮೈತ್ರಿ, ಪದಮೈತ್ರಿ ಆಕರ್ಷಕ. ಎರಡರಲ್ಲೂ ನಾದಗುಣವೇ ಮಿಗಿಲಾಗಿದೆ.

೪. ದಾಸರು ಭಾಷೆ ಹಾಗೂ ಛಂದಸ್ಸಿನ ವೈವಿಧ್ಯ ಸಾಧನೆಗೆ ಸಂಬಂದಿಸಿದಂತೆ ಮುಡಿ, ಪದ್ಮಗಣ, ಗಣಪರಿವೃತ್ತಿ ಮುಂತಾದವನ್ನು ಬಳಸಿಕೊಂಡರು. ಸಾಮಾನ್ಯವಾಗಿ ಪಾದಾದಿಯ ದ್ವಿಲಘುಗಳಿಂದ ಆರಂಭವಾಗುವ ಮಟ್ಟುಗಳು ಭಾಷಾವ್ಯಾಪಾರಕ್ಕೆ ಸಮುಚಿತವಾಗಿ ಒಗ್ಗಿಕೊಳ್ಳುತ್ತವೆ. ಪಾದಾದಿಯಲ್ಲಿ ಎರಡು ಲಘು-ಗುರು ವಿನ್ಯಾಸ ಕನ್ನಡಕ್ಕೆ ಕಷ್ಟವಾಗುವ ಗಣ ವಿನ್ಯಾಸ. ಕೀರ್ತನೆಗಳ ಪಾದಾದಿಯಲ್ಲಿ ಎರಡು ಲಘುಗಳು ಬರುವುದರಿಂದ ಕನ್ನಡ ಜಾಯಮಾನಕ್ಕೆ ಸಹಜವಾಗಿ ಒಗ್ಗಿಕೊಳ್ಳುತ್ತವೆ. ಶಬ್ದ ಮತ್ತು ಅರ್ಥಕ್ಕಿಂತ ರಸಾನುಭವ ವೇದ್ಯವಾಗುತ್ತದೆ. ಛಂದೋಲಯದ ಜೊತೆಗೆ ಕೀರ್ತನೆಗಳಲ್ಲಿರುವ ಅರ್ಥದ ಅಭಿವ್ಯಕ್ತಿಗೆ ನೆರವಾಗುವ ಇನ್ನೊಂದು ಅಂಶವೆಂದರೆ ಪ್ರಾಸ. ದಾಸರು ಪ್ರಾಸವನ್ನು ಹದವರಿತು ಬಳಸುತ್ತಾರೆ. ಅಕ್ಷರಾವೃತ್ತಿ ಮತ್ತು ಭಾವಾಭಿವ್ಯಕ್ತಿ ಸಮವಾಗಿ ಅವರ ಅಭಿವ್ಯಕ್ತಿಯಲ್ಲಿ ಸಾಗುತ್ತವೆ.

೫. ಛಂದಸ್ಸಿನ ಕಟ್ಟೆಳೆಯಿಂದ ಶಿಥಿಲತೆ ಕಡೆಗೆ ಅವರು ತಿರುಗಿದುದು ಛಂದಸ್ಸಿನ ಅಧ್ಯಯನದಲ್ಲಿ ಮುಖ್ಯವಾದ ಘಟ್ಟ. ದಾಸರು ಪ್ರತಿಬಿಂಬಿಸುವ ಸಮಾಜಮುಖಿ ಚಿಂತನೆಗಳಿಗೆ ಅವರಿಗೆ ಭಕ್ತಿಯ ಪ್ರತಿಪಾದನೆಯಷ್ಟೇ ಗುರಿಯಾಗಿರಲಿಲ್ಲ. ತಮ್ಮ ಸುತ್ತಿನ ಬದುಕನ್ನು ಹಸನಾಗಿಸುವ ಕಾಳಜಿ ಅವರದಾಗಿತ್ತು. ಅಂತಹ ಜೀವನ ಮೌಲ್ಯಗಳನ್ನು ಹಾಡಿನಲ್ಲಿ ಬೆಸೆದರು. ಆಗ ನಿಯಮಗಳ ಶಿಥಿಲತೆ ಅವರಿಗೆ ಮುಖ್ಯವಾಗಿತ್ತು. ಪಾದದ ಉದ್ದ, ಪಾದಗಳ ಸಂಖ್ಯೆ. ಸಂಯೋಜನ ವಿಧಾನ ಈ ಎಲ್ಲದರಲ್ಲೂ ವೈವಿಧ್ಯ ಸಾಧಿಸಲಾಗಿದೆ. ಇದರಿಂದ ಅನಿಯತ ಪದಿಯಲ್ಲಿ ಪರಾಕಾಷ್ಠೆಯನ್ನು ಮುಟ್ಟಿ ಆನಂತರ ಅದು ಮುಕ್ತ ಛಂದಸ್ಸಿಗೆ ಹೊರಳಿತು. ಇಷ್ಟೊಂದು ವೈವಿಧ್ಯಮಯ ಬೆಳವಣಿಗೆಯನ್ನು ಮುಕ್ತ ಛಂದಸ್ಸು ಕೀರ್ತನೆಗಳ ಪ್ರವಾಹದಲ್ಲಿ ಪ್ರವೇಶಿಸಿತು.

೬. ದಾಸರ ರಚನೆಗಳ ಭಾಷೆ ಮತ್ತು ಛಂದಸ್ಸು ಮುಂದಿನ ತಲೆಮಾರಿನ ದೇಸಿ ಮಟ್ಟುಗಳಿಗೆ ಪ್ರೇರಣೆ ಒದಗಿಸಿತು. ದಾಸರ ನಂತರ ಸ್ವರವಚನಕಾರರು, ತತ್ವಪದಕಾರರು ತಮ್ಮ ರಚನೆಗಳಲ್ಲಿ ದಾಸರು ಯಾವ ಯಾವ ಭಾವನೆಗಳನ್ನು ಯಾವ ಯಾವ ಛಂದದಲ್ಲಿ ಭಾಷಾಗತಿಯಲ್ಲಿ ಪ್ರಯೋಗಿಸಿದರೋ ಅದೇ ರೀತಿಯಲ್ಲಿ ಬಳಸಿರುವುದನ್ನು ಕಂಡುಬರುತ್ತದೆ. ಅದು ದಾಸರಿಗೆ ಸಂದ ಸಮುಚಿತ ಗೌರವವೇ ಆಗಿದೆ. ದಾಸರ ಪ್ರತಿಭಾವಿಲಾಸ ೧೯ನೆಯ ಶತಮಾನದವರೆಗೆ ಹರಡಿದೆಯೆಂದರೆ ವಿಸ್ಮಯವೆನಿಸುತ್ತದೆ. ಮುಂದಿನವರು ದಾಸರು ಬಳಸಿದ ಪ್ರಾಸ ಸಂಯೋಜನೆಯಷ್ಟೇ ಬಳಸಿ ಅದೇ ಭಾಷಾಗತಿ ಮತ್ತು ಛಂದೋಬಂಧದಲ್ಲಿ ತಮ್ಮ ಭಾವಾಭಿವ್ಯಕ್ತಿ ಗೊಳಿಸಿದ್ದಾರೆ.

೭. ದಾಸರ ವೈವಿಧ್ಯಮಯವಾದ ಪ್ರಾಸ ಸಂಯೋಜನೆ ಅನಾದೃಶ್ಯವಾದುದು. ಅವರ ಪ್ರತಿಭಾಶಕ್ತಿ ಎಷ್ಟು ಅದ್ಭುತವಾದುದೆಂದರೆ ಪ್ರಾಸ ಸಂಯೋಜನೆಯಲ್ಲಿ ಪುನರುಕ್ತಿಯಿಲ್ಲ; ಒಂದರಂತೆ ಮತ್ತೊಂದಿಲ್ಲ. ಅದರಿಂದಾಗುವ ರಸಾಭಿವ್ಯಂಜನೆ ಅನುಭವ ವೇದ್ಯ. ಕ್ವಚಿತ್ತಾಗಿ ಯಮಕಕ್ಕೆ, ಛೇಕಾನುಪ್ರಾಸಕ್ಕೆ ಆಸ್ಪದ ದೊರೆತಿದೆ. ಕ್ವಚಿತ್ತಾದ ಪ್ರಾಸೋ ಲ್ಲಂಘನೆಯು ಕವಿಯ ಪ್ರತಿಭಾದಾರಿದ್ರ್ಯವಲ್ಲ. ಸೂಕ್ಷ್ಮವಾಗಿ ಪರಿಶೀಲಿಸಿದರೆ ಅದೂ ರಸಪುಷ್ಟಿಯಾಗದಿರದು. ಅದು ನೀಡುವ ಶ್ರವಣ ಸುಖ, ತರುವ ಅರ್ಥ ಗುರುತ್ವ ಅನಾದೃಶ್ಯವಾದುದು.

೮. ದಾಸರ ರಚನೆಗಳ ಸಾರವನ್ನು (ತಿರುಳು) ನಾದಮಯತೆಯಿಂದ ಅರ್ಥದ ನೆಲೆಗೆ ಒಯ್ದದ್ದು ದಾಸಸಾಹಿತ್ಯದ ಮುಖ್ಯ ನೆಲೆಯಾಗಿದೆ. ದಾಸರು ಆಡುಮಾತಿನ ಲಯವನ್ನೇ ಕಾವ್ಯವನ್ನಾಗಿ ಪರಿವರ್ತಿಸಿದರು. ಇದರಿಂದ ದಾಸರ ರಚನೆಗಳಿಗೆ ಒಂದು ರೀತಿಯ ಸೊಗಡು, ನಾದಮಯತೆ ಪ್ರಾಪ್ತವಾಯಿತು. ಇದರಿಂದ ದಾಸರು ಕಾವ್ಯವನ್ನು ನಾದದ ನೆಲೆಯಿಂದ ಅರ್ಥದ ನೆಲೆಗೆ ಕೊಂಡೊಯ್ದರು. ಇದು ಭಾಷಾ ರಚನೆಯಲ್ಲಿ ಅವರು ಮಾಡಿದ ಮಹತ್ವದ ಘಟ್ಟ. ಈ ದಾರಿಯೇ ದಾಸಸಾಹಿತ್ಯ ಹೊಸ ಸ್ವರೂಪವನ್ನು ಪಡೆದುಕೊಳ್ಳುವುದಕ್ಕೆ ಕಾರಣವಾಯಿತೆನ್ನಬಹುದು.

ಕನ್ನಡ ಭಾಷೆ ಮತ್ತು ಛಂದಸ್ಸಿನ ಬೆಳವಣಿಗೆಯ ದೃಷ್ಟಿಯಿಂದ ನೋಡಿದಾಗ ದಾಸ ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ. ಅದು ತನ್ನದೇ ಆದ ವಿಶಿಷ್ಟತೆಯನ್ನು ಉಳಿಸಿಕೊಂಡ ಸಾಹಿತ್ಯ ಪ್ರಕಾರವಾಗಿದೆ. ಕನ್ನಡ ಸಾಹಿತ್ಯ ವಾಹಿನಿಯ ಬಿಕ್ಕಟ್ಟಿನ ಸಂದರ್ಭದಲ್ಲಿ, ಸಾಂಸ್ಕೃತಿಕ ಒತ್ತಡದಲ್ಲಿ ದಾಸಸಾಹಿತ್ಯ ವಿಶಿಷ್ಟ ಹೆಜ್ಜೆಯನ್ನಿಟ್ಟಿದೆ. ಕಾಲದ ಅಗತ್ಯಕ್ಕೆ ತಕ್ಕಂತೆ ವೈವಿಧ್ಯಮಯವಾದ ಪ್ರಯೋಗಗಳ ಮೂಲಕ ಹಾಗೂ ಹೊಸದಾದ ಚಿಂತನೆಗಳ ಮೂಲಕ ಕನ್ನಡ ಸಾಹಿತ್ಯದಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದೆ. ದಾಸರು ಬಳಸಿದ ಭಾಷಾರಚನೆಯ ಈ ಹೊಸ ಪ್ರಯೋಗಗಳನ್ನೇ ಈ ಅಧ್ಯಯನದಲ್ಲಿ ವಿಶ್ಲೇಷಿಸಲಾಗಿದೆ.

ದಾಸಸಾಹಿತ್ಯ ಸಂಸ್ಕೃತಿ ಬಗೆಗಿನ ಸಾಂಪ್ರದಾಯಿಕ ತಿಳಿವಳಿಕೆಯನ್ನು ವರ್ತಮಾನದ ಸಂದರ್ಭಕ್ಕೆ ತಕ್ಕಂತೆ ಮುರಿದು ಕಟ್ಟುವ ಆಲೋಚನೆಯನ್ನು ಹೊಂದಬೇಕಾಗಿದೆ. ಇದಕ್ಕಾಗಿ ನಾಡಿನಾದ್ಯಂತ ದಾಸಸಾಹಿತ್ಯವನ್ನು ಆಧುನಿಕ ವೈಚಾರಿಕ ಮೂಸೆಯಲ್ಲಿರಿಸಿ ವಿಚಾರ ಸಂಕಿರಣಗಳ -ವಾಗ್ವಾದಗಳ – ಸಮ್ಮೇಳನಗಳ ಮೂಲಕ ನೆಲೆಸಿದ ತಿಳಿವಳಿಕೆಯನ್ನು ಮರುಹೊಂದಾಣಿಕೆಗೆ ಗುರಿಪಡಿಸಬೇಕಾಗಿದೆ

ಲಾಗಾಯ್ತಿನಿಂದ ದಾಸಸಾಹಿತ್ಯವನ್ನು ಬಹುಮಟ್ಟಿಗೆ ಸಾಹಿತ್ಯ ಹಾಗೂ ಭಕ್ತಿಯ, ಇನ್ನು ಕೆಲವೊಮ್ಮೆ ಮಾಧ್ವ ಪ್ರಮೇಯಗಳ ಹಿನ್ನೆಲೆಯಲ್ಲಿ ನೋಡಲಾಯಿತು. ವಾಸ್ತವವಾಗಿ ಶರಣ ಸಾಹಿತ್ಯದ ಬಳಿಕ ಕರ್ನಾಟಕದ ನೆಲೆಯಲ್ಲಿ ಏರ್ಪಟ್ಟ ರಾಜಕೀಯ, ಸಾಮಾಜಿಕ ಸನ್ನಿವೇಶಗಳ ಒತ್ತಡ – ತಲ್ಲಣಗಳ ಹಿನ್ನೆಲೆಯಲ್ಲಿರಿಸಿ ದಾಸ ಆಂದೋಲನವನ್ನು ನೋಡಬೇಕಾಗಿದೆ. ವ್ಯಾಸಕೂಟದ ಉದ್ದೇಶ ಹಾಗೂ ತಿಳಿವಳಿಕೆಗಳು ದಾಸಕೂಟಾದ ಮೂಲಕ ಹೊಸ ವೈಚಾರಿಕ ಸ್ವರೂಪವನ್ನು ಪಡೆದು ಸಂಸ್ಕೃತದ ಅರಿವು ಕನ್ನಡದ ಒದಗೆಯಲ್ಲಿ ಹರಿಸಲು ಸಾಧ್ಯವಾದದ್ದು ಗಮನಾರ್ಹ ಅಂಶ, ಗ್ರಂಥಗಳೊಳಗಿನ ಸ್ಥಾವರ ಧರ್ಮವನ್ನು ಜಂಗಮ ಮಾನವ ಧರ್ಮವಾಗಿಸಿದ್ದು ದಾಸರ ಒಂದು ಸಾಧನ. ತಮ್ಮ ರಚನೆಗಳಿಂದ ನಡೆಗೆ ಪಾರದರ್ಶಕತೆಯನ್ನು ತಂದಿತು. ನುಡಿಗೆ ಸಂಗೀತದ ಸಂಸ್ವರ್ಶವನ್ನು ಒದಗಿಸಿ ಬದುಕಿನ ಭಾಗ್ಯ ದೊಡ್ಡದು, ಮಾನವ ಜನ್ಮ ದೊಡ್ಡದು ಎಂದರವರು. ವ್ಯಾಸರಾಯರಂತಹ ಸನ್ಯಾಸಿಗಳು ಕನಕ-ಪುರಂದರಂತಹ ದಾಸರನ್ನು ರೂಪಿಸಿದ್ದು, ಲಿಂಗದ ಹಳ್ಳಿಯ ಬಡೇಸಾಭಿ ರಾಮದಾಸರಾದದ್ದು, ಮಹಿಪತಿರಾಯರು ಮುಸಲ್ಮಾನ್ ಸಾಧಕ ಶಹಾನುಂಗದಿಂದ ಆಧ್ಯಾತ್ಮಿಕ ಪ್ರೇರಣೆ ಪಡೆದುದು ದಾಸಸಾಹಿತ್ಯ ಸಂಸ್ಕೃತಿಯು ಮತೀಯ ಚೌಕಟ್ಟನ್ನು ಮೀರಿ ವಿಶ್ವಮಾನದತ್ತ ಚಲಿಸಿದುದರ ಸಂಕೇತ.

ಜನಸಮುದಾಯದ ನಡುವೆ ಬದುಕಿದ ದಾಸರು ಸಮಾಜದ ಕಿಲುಬನ್ನು ತೊಳೆವ ಕೆಲವನ್ನು ಮಾಡಿದರು. ಸಾಮಾಜಿಕ ದೌರ್ಬಲ್ಯ, ದೋಷಗಳನ್ನು ಪ್ರಶ್ನಿಸುವ ಮೂಲಕ ಸಾಮಾಜಿಕವಾಗಿ ಸ್ಪಂದಿಸಿದರು. ಮನುಕುಲದ ಉತ್ಥಾನದ ಆಶಯದಲ್ಲಿ ದಾಸರು ಪ್ರಶ್ನೆಯನ್ನಷ್ಟೇ ಮಾಡಿ ಸುಮ್ಮನಾಗುವುದಿಲ್ಲ. ಪರಿಹಾರ ಹೇಳುವ ಮೂಲಕ ಅಮಿತಿಯನ್ನು ದಾಟುವ ಬಗೆಯನ್ನು ಹೇಳುತ್ತಾರೆ.

ದಾಸಸಾಹಿತ್ಯ-ಸಂಸ್ಕೃತಿಯ ಚಳುವಳಿಯನ್ನು ಸಮಾಜೋ-ಸಾಂಸ್ಕೃತಿಕ ಪರಿಪ್ರೇಕ್ಷ್ಯದಲ್ಲಿರಿಸಿ ನೋಡಬೇಕಾಗಿದೆ. ಶರಣ ಸಾಹಿತ್ಯ ಸಂಸ್ಕೃತಿಯ ಅಧ್ಯಯನದ ಕಟ್ಟೋಣದ ಮಾದರಿಯಿಂದ ಪ್ರೇರಣೆ ಪಡೆದು ಆ ಮಾದರಿಯಲ್ಲಿ ದಾಸಸಾಹಿತ್ಯ-ಸಂಸ್ಕೃತಿಯ ಅನನ್ಯತೆಯ ಶೋಧನೆ ನಡೆಯಬೇಕಾಗಿದೆ. ದಾಸಸಾಹಿತ್ಯವನ್ನು ಮರು ಓದಿಗೆ ಒಳಪಡಿಸಬೇಕಾಗಿದೆ. ಹೀಗೆ ದಾಸಸಂಸ್ಕೃತಿಯ ಅಧ್ಯಯನದ ಪಾಥೇಯವನ್ನು ಕಟ್ಟುವ ಜತೆಗೆ ಆ ತಿಳಿವಳಿಕೆಯನ್ನು ಕೆರೆಯ ನೀರನ್ನು ಕೆರೆಗೆ ಚೆಲ್ಲುವ ಮಾದರಿಯಲ್ಲಿ ಎಲ್ಲರಿಗೆ ಹಂಚುವ ಕೆಲಸವನ್ನು ವಿದ್ವಾಂಸರು ಮಾಡಬೇಕಾಗಿದೆ. ಸಂಸ್ಕೃತಿ ಶೋಧರ ಭಾಷೆಯ ಪಾತಳಿಯಲ್ಲಿ ಈ ಅಧ್ಯಯನ ಕೈಕೊಳ್ಳಲಾಗಿದೆ.

ಇಲ್ಲಿಯವರೆಗೆ ಭಾಷಾಶಾಸ್ತ್ರಜ್ಞರು, ಛಂದಶ್ಯಾಸ್ತ್ರಜ್ಞರು ಛಂದಸ್ಸನ್ನು ಗಣ, ನಿಯಮಗಳಿಗೆ ಮಾತ್ರ ಲಕ್ಷಣ, ಪದರಚನೆ, ಧ್ವನಿರಚನೆ, ನಿರೂಪಣೆ ಮಾಡಿದ್ದಾರೆ. ಭಾಷೆ, ಛಂದಸ್ಸಿನ ಭಾವಾಭಿವ್ಯಕ್ತಿ, ರಸಗ್ರಹಣ ಕುರಿತು ಅಷ್ಟಾಗಿ ವಿಚಾರ ಮಾಡಿಲ್ಲ. ಈ ಅಧ್ಯಯನ ಅದನ್ನು ಪೂರೈಸಿದೆ. ದಾಸರ ರಚನೆಗಳನ್ನು ಕೇಂದ್ರವಾಗಿಟ್ಟುಕೊಂಡು ಭಾಷೆ ಮತ್ತು ಛಂದಸ್ಸಿನ ಅಧ್ಯಯನವನ್ನು ಮರುಓದಿಗೆ ಒಳಪಡಿಸಲಾಗಿದೆ. ಭಾಷಾರಚನೆ ಮತ್ತು ಛಂದಸ್ಸಿನ ಬಗೆಗಿನ ಸಾಂಪ್ರದಾಯಿಕ ತಿಳಿವಳಿಕೆಯನ್ನು ವರ್ತಮಾನದ ಸಂದರ್ಭಕ್ಕೆ ತಕ್ಕಂತೆ ಮುರಿದು ಕಟ್ಟುವ ಹೊಸ ಚಿಂತನೆಯನ್ನು ಮಾಡಲಾಗಿದೆ. ದಾಸರ ಸಮಾಜಮುಖಿ ಚಿಂತನೆಗೆ ಅವರ ಭಾಷಾಗತಿ ಮತ್ತು ಛಂದೋಲಯ ಹೇಗೆ ಸಹಕಾರಿಯಾಯಿತು ಎಂಬುದರ ಕಡೆಗೆ ಗಮನ ಸೆಳೆಯಲಾಗಿದೆ. ಎಂಬುದನ್ನು ಈ ಅಧ್ಯಯನದಲ್ಲಿ ಸೋದಾಹರಣವಾಗಿ ನಿರೂಪಿಸಲಾಗಿದೆ.