ಮಾನವನ ಚೆಲುವಿನ ಪ್ರಜ್ಞೆ ಆದಿಕಾಲದಲ್ಲಿ ಅಭಿವ್ಯಕ್ತಿಗೊಂಡದ್ದು ಕುಣಿತ, ಹಾಡು ಮತ್ತು ಲಯಬದ್ಧ ಮಾತುಗಳಲ್ಲಿ ಎಂದು ವಿದ್ವಾಂಸರು ಶೋಧಿಸಿದ್ದಾರೆ. ಇವುಗಳಲ್ಲಿಯೂ ತಾಳಗತಿಗೆ ತಕ್ಕ ಕುಣಿತ ಮೊದಲು, ತಾಳ ಮೇಳಗಳಿಗೆ ಒಗ್ಗುವ ಹಾಡು ಆಮೇಲೆ, ಲಯಬದ್ಧವಾದ ಮಾತು ಅದಕ್ಕೂ ಈಚೆಗೆನ್ನಬಹುದು. ಏಕೆಂದರೆ ಮಾನವನಿಗೆ ಭಾಷೆಯ ಬಳಕೆ ದೊರೆತುದೇ ವಿಕಾಸದ ಕಾಲ ಕ್ರಮದಲ್ಲಿ ಕಡೆ ಕಡೆಗೆ. ಭಾಷೆಯ ಬಳಕೆ ಪರಿಚಿತವಾಗುವ ಮುನ್ನವೇ ಅವನು ತನ್ನ ವಿವಿಧ ಚಿತ್ತ ವೃತ್ತಗಳ. ವಿಶೇಷತಃ-ಹರ್ಷ ವಿಷಾಧಗಳ, ಭಕ್ತಿ-ಭಯಗಳ ಅವಿಷ್ಕಾರಕ್ಕೆ, ತಾನು ನಂಬಿದ್ದ ದೇವತಾದಿಗಳ ಆವಾಹನೆಗೆ, ಕುಣಿತ-ಹಾಡುಗಳನ್ನು ಬಳಸುತ್ತಿದ್ದನೆಂಬುದನ್ನು ಇಂದಿನ ಆದಿವಾಸಿಗಳ ಜೀವನದ ಅಧ್ಯಯನದಿಂದಲೂ ಕಂಡುಕೊಳ್ಳಬಹುದು. ನೃತ್ಯ-ಗೀತೆಗಳು ಅಂದು ವೈಯಕ್ತಿಕ ಪ್ರಜ್ಞೆಯ ಅಭಿವ್ಯಕ್ತಿಗಿಂತ ಹೆಚ್ಚಾಗಿ ಸಾಮೂಹಿಕ ಪ್ರಜ್ಞೆಯ ಅಭಿವ್ಯಕ್ತಿಗಳಾಗಿದ್ದುವು. ಅದು ಬರುಬರುತ್ತ ವಾಗಂಶವನ್ನೂ ಮೈಗೂಡಿಸಿಕೊಂಡಾಗ ಭಾಷೆ ಮತ್ತು ಛಂದಸ್ಸಿನ ಉಗಮವಾಯಿತೆನ್ನಬಹುದು; ಏಕೆಂದರೆ ಆದಿಮಾನವನ ಮಾತು, ಹಾಡು-ಕುಣಿತಗಳಂತೆ ಸಹಜವಾಗಿಯೇ ಲಯಾನುಸಾರಿಯಾಗಿರುತ್ತದೆ. ಲಯಾನ್ವಿತ ಭಾಷೆಯನ್ನೇ ಛಂದಸ್ಸೆನ್ನಬಹುದು. ಹಾಗೆ ಲಯಾನ್ವಿತವಾಗಿ ಶಬ್ದಗಳನ್ನು ರಚಿಸಬಲ್ಲಾತನೆ ಕವಿ. ಸಾಮಾನ್ಯವಾಗಿ ಪ್ರಾಚೀನ ಮಾನವ ಸಂಸ್ಕೃತಿಗಳಲ್ಲೆಲ್ಲ ನೃತ್ಯ, ಗೀತೆ, ಕಾವ್ಯ ಮೂರು ಮುಪ್ಪುರಿಯಾಗಿ ಬಂದರಲ್ಲೊಂದು ಕೂಡಿಕೊಂಡೇ ಇರುತ್ತವೆ. ಮೂರರಲ್ಲೂ ಸೃಷ್ಟಿಶೀಲವಾದ ಪ್ರತಿಭೆಯ ಭಾಷಾವ್ಯಾಪಾರ ಅಂತರ್ಗತವಾಗಿರುತ್ತದೆ.

ಭಾಷಾಗತಿ ಮತ್ತು ಛಂದಸ್ಸು ಕಾವ್ಯದ ಸಹಜ ಸ್ವರಾಂದೋಲನ. ಅದರಿಂದಲೇ- ಕಾವ್ಯಕ್ಕೆ ಚಲನಶೀಲತೆ ಉಂಟಾಗುತ್ತದೆ. ಅದನ್ನು ಕವಿ ಸ್ಪೂರ್ತಿಯಿಂದಲೋ ಇಲ್ಲವೆ ಬುದ್ಧಿಪೂರ್ವಕವಾಗಿಯೋ ನಿಯತಲಯ, ವಿನ್ಯಾಸಗಳಿರುವ ಪದ್ಯಪಾದಗಳನ್ನು ಕವಿ ನಿರ್ಮಿಸುತ್ತಾನೆ. ಈ ಪದ್ಯಲಯಗಳನ್ನು ಅಳತೆ ಮಾಡುವ ಮಾನದಂಡವೇ ಭಾಷೆ ಮತ್ತು ಛಂದಸ್ಸು. ಭಾಷೆಯ ಅದ್ಯಯನದಲ್ಲಿ ಲಯದ ಪಾತ್ರ ಮುಖ್ಯ. ಒಂದರ್ಥದಲ್ಲಿ ಲಯವೇ ಭಾಷೆಯ ಜೀವಾಳ. ಮನುಷ್ಯನ ಮೂಲಭೂತ ಪ್ರವೃತ್ತಿಯಲ್ಲಿ ನಿಯಮ ಬದ್ಧವಾದ ಲಯದ ರಚನೆಯೂ ಒಂದೆನ್ನಬಹುದು. ನಿಸರ್ಗ ನಿಯಮದಲ್ಲಿ ಕೂಡ ಸಮುದ್ರದ ಅಲೆಗಳು ಒಂದು ವ್ಯವಸ್ಥಿತ ರೀತಿಯಿಂದ ಏಳುತ್ತವೆ. ಬೀಳುತ್ತವೆ. ಗಾಳಿ ಮತ್ತು ಶಬ್ದಗಳು ನಿಯತವಾದ ಗತಿಯಿಂದ ಚಲಿಸುತ್ತವೆ. ಮನುಷ್ಯನ ಹೃದಯ ಹಾಗೂ ನಾಡಿಗಳು ನಿಯತ ಕ್ರಮದಿಂದ ಮಿಡಿಯುತ್ತಿರುತ್ತವೆ. ಆಡು ಮಾತಿನಲ್ಲಿಲ್ಲದ ಒಂದು ಹೆಚ್ಚಿನ ತೀವ್ರತೆ ಹಾಗೂ ಪರಿಣಾಮಕಾರತ್ವವು ಈ ಭಾಷಾಗತಿ ಮತ್ತು ಛಂದೋನಿಯಮಗಳಿಂದ ಬದ್ಧವಾದ ಕವಿವಾಣಿಯಲ್ಲಿ ಎದ್ದು ಕಾಣುತ್ತದೆ.

ನಿಯತಾಕ್ಷರ ಸಂಖ್ಯೆಯ (Iso-Syllabic) ಪದ್ಯದ ಸಾಲುಗಳ ಇಲ್ಲವೆ ನಿಯತ ಗುರು, ಲಘುಗಳ ವಿನ್ಯಾಸಗಳು ಇಲ್ಲವೆ ಸ್ವಾರಾಘಾತವಿರುವ ಶಬ್ದಾಂಶಗಣಗಳಿಂದಾದ (accentual) ಸಾಲುಗಳ ಇಲ್ಲವೆ ನಿಯತ ಮಾತ್ರಾಕಾಲವಿರುವ ಗಣಗಳಿಂದಾದ ಸಾಲುಗಳ ಸಂಯೋಜನೆಯಷ್ಟೇ ಭಾಷಾಗತಿ ಮತ್ತು ಛಂದಸ್ಸೆಂದು ತಿಳಿಯಬಾರದು. ಪ್ರತಿ ಪದ್ಯದ ಸಾಲಿನಲ್ಲಿಯೂ ನಿಯತ ಸ್ಥಾನದಲ್ಲಿ ಬರಬೇಕಾದ ಯತಿ, ಆದಿಪ್ರಾಸ ಹಾಗೂ ಅಂತ್ಯ ಪ್ರಾಸಗಳ ರಚನಾ ವ್ಯವಸ್ಥೆಯೂ ಛಂದಸ್ಸಿನ ಅವಿಭಾಜ್ಯ ಅಂಗವೆಂದೇ ತಿಳಿಯುವುದು ಯುಕ್ತ. ಅಕ್ಷರ ಹಾಗೂ ಗುರು-ಲಘು ಗಳ ಸ್ಥಾನಗಳ ನಿಯಮಗಳಲ್ಲದೆ ಯತಿವೂ (ವಿರಾಮ) ಛಂದಸ್ಸಿನ ಮೂಲಭೂತ ಲಕ್ಷಣಾಂಶದಲ್ಲಿಯೇ ಅಂತರ್ಗತವಾಗುತ್ತದೆ. ಇದನ್ನು ಕಾವ್ಯದ ಸಂದರ್ಭದಲ್ಲಿ ಅನ್ವಯಿಸಿ ಹೇಳುವುದಾದರೆ ಕವಿಯ ಭಾವ, ಲಯದ ಚೌಕಟ್ಟಿನಲ್ಲಿ ಹರಳುಗೊಂಡಾಗ ಅರ್ಥ ಪುಷ್ಠಿ ಪಡೆಯುತ್ತದೆ. ಕವಿಯ ಭಾವನೆಗಳನ್ನು ಘನೀಭವಿಸಿ ನಿಲ್ಲುವಲ್ಲಿ ಭಾಷೆ ಮತ್ತು ಛಂದಸ್ಸು ಪ್ರಮುಖ ಪಾತ್ರ ವಹಿಸುತ್ತದೆ. ಭಾವ, ಭಾಷೆ, ಕಾವ್ಯಬಂಧ ಇವು ಅವಿನಾಭಾವವಾಗಿ ಒಂದು ಇನ್ನೊಂದಕ್ಕೆ ಪೂರಕವಾಗಿವೆ. ಕಾವ್ಯದಲ್ಲಿ ಭಾಷೆ, ಶೈಲಿ, ಅಲಂಕಾರಗಳಂತೆ ಛಂದಸ್ಸು ಕಾವ್ಯದ ಒಳಗಿನ ಅಂಗ ಎಂಬುದು ಗಮನಿಸಬೇಕಾದ ಸಂಗತಿಯಾಗಿದೆ.

ಈವರೆಗೆ ಛಂದಸ್ಸು ಮತ್ತು ಭಾಷೆಯ ಅಧ್ಯಯನವನ್ನು ಸಾಂಪ್ರದಾಯಿಕ ಮತ್ತು ಆಧುನಿಕ ಎಂಬ ಎರಡು ರೀತಿಯಲ್ಲಿ ಅಧ್ಯಯನ ಮಾಡಲಾಗುತ್ತಿದೆ. ಸಾಂಪ್ರದಾಯಿಕವಾದುದು ಪದ್ಯಗಳಿಗೆ ಗುರು-ಲಘು ಪ್ರಸ್ತಾರ ಹಾಕಿ ನಿಯಮ-ಉದಾಹರಣೆ ಸಮೇತವಾಗಿ ಅದರ ಸ್ವರೂಪ ವಿವಿರಿಸುವುದು. ಸಾಂಪ್ರದಾಯಿಕ ಅಧ್ಯಯನ ಕ್ರಮ ಅಕ್ಷರ ಮಾತ್ರೆ, ಅಂಶ ಗಣಗಳ ಲೆಕ್ಕಗಳ ಕಟ್ಟು. ಒಂದು ರೀತಿಯಲ್ಲಿ ಅದು ಶವದ ಶಸ್ತ್ರ ಚಿಕಿತ್ಸೆಯಿದ್ದಂತೆ. ಈ ವಿಧಾನದಲ್ಲಿ ಬದಲಾವಣೆ ಅವಶ್ಯ ಮಾತ್ರವಲ್ಲ. ಅನಿವಾರ್ಯ, ಆಧುನಿಕವಾದುದು ಕಾವ್ಯದ ಭಾವಾಭಿ ವ್ಯಕ್ತಿಗೆ ಸಂಬಂಧಿಸಿದುದು. ಕಾವ್ಯದ ಭಾವ, ರಸಗಳಿಗೆ ಹೇಗೆ ಗಣಾಕ್ಷರಗಳು ಸಂಘಟಿಸುತ್ತವೆ. ಭಾಷೆ ಮತ್ತು ಛಂದಸ್ಸಿನ ಗತಿ, ಲಯಗಳು ಹೇಗೆ ಚಲನಶೀಲವಾಗಿ ಹೊಸ ಹೊಳಪನ್ನು ತರುತ್ತವೆ ಎಂಬುದು ಇಲ್ಲಿ ಮುಖ್ಯ. ಕನ್ನಡದಲ್ಲಿ ಇಂತಹ ಅಧ್ಯಯನ ಇನ್ನೂ ದೃಢವಾಗಿ ಕಾಲೂರಬೇಕಾಗಿದೆ. ಸೇಡಿಯಾಪು ಕೃಷ್ಣಭಟ್ಟ, ಡಿ.ಎಸ್. ಕರ್ಕಿ, ಎಂ.ಚಿದಾನಂದಮೂರ್ತಿ, ಟಿ.ವಿ. ವೆಂಕಟಾಚಲಶಾಸ್ತ್ರೀ ಈ ಕೆಲವು ವಿದ್ವಾಂಸರು ಈ ದೃಷ್ಟಿಯಿಂದ ತಕ್ಕಮಟ್ಟಿಗೆ ಅಧ್ಯಯನ ಮಾಡಿದ್ದಾರೆ. ಆದರೂ ಆಗಬೇಕಾಡ ಕೆಲಸ ಬೆಟ್ಟದಷ್ಟಿದೆ.

ಕನ್ನಡ ಅಧ್ಯಯನ ಕ್ಷೇತ್ರದಲ್ಲಿ ಛಂದಸ್ಸು ಮತ್ತು ಸಾಹಿತ್ಯವಿಮರ್ಶೆಯ ಅಧ್ಯಯನದ ಜೊತೆಗೆ ಭಾಷೆಯ ಅಧ್ಯಯನವನ್ನು ಹೋಲಿಸಿದರೆ ಭಾಷೆಯ ಅಧ್ಯಯನ ತುಂಬ ಮಂದಗತಿಯಿಂದ ನಡೆದಿದೆ. ಕಾವ್ಯದಲ್ಲಿ ಛಂದಸ್ಸು, ಶೈಲಿ, ಅಲಂಕಾರಗಳಂತೆ ಭಾಷೆಯು ಕಾವ್ಯದ ಒಳಗಿನ ಅಂಗ. ಉಳಿದ ಭಾಷಾಂಗಗಳ ಜೊತೆಗೆ ಲಯ ಸಾವಯವ ಸಂಬಂಧವನ್ನು ಹೊಂದಿರುವುದರಿಂದ ಕಾವ್ಯವನ್ನು ಸಮಗ್ರವಾಗಿ ಅಧ್ಯಯನ ಮಾಡುವಾಗ ಅದರ ಮಹತ್ವದ ಅಂಗವಾದ ಭಾಷೆಯನ್ನು ಗಮನಿಸಬೇಕಾಗುತ್ತದೆ. ಕಾವ್ಯಬಂಧಗಳ ವರ್ಣನಾತ್ಮಕ ವಿಶ್ಲೇಷಣೆ ನನಗೆ ಮುಖ್ಯವಲ್ಲ. ಏಕೆಂದರೆ ಅಂತಹ ವಿಶ್ಲೇಷಣೆಯಿಂದ ಭಾಷಾಧ್ಯಯನ ಲೆಕ್ಕಾಚಾರದ ವಿಷಯವಾಗಿ ಅಧ್ಯಯನಕಾರರಿಂದ ದೂರವಾಗುವುದುಂಟು. ಅಥವಾ ಅಧ್ಯಯನ ಶುಷ್ಕವಾಗುವುದುಂಟು. ಭಾಷಾಧ್ಯಯನ ಅರ್ಥಪೂರ್ಣವಾಗಿ ನಡೆಯಲು ಕಾವ್ಯಬಂಧ, ಕವಿಯ ಆಶಯ ಮತ್ತು ಭಾಷಿಕ ಸಂದರ್ಭ ಇವುಗಳನ್ನು ಅನುಲಕ್ಷಿಸಿ ಅಧ್ಯಯನ ನಡೆಯಬೇಕಾಗುತ್ತದೆ. ಉದಾ. ಪಂಪಾದಿ ಚಂಪು ಕವಿಗಳು ಯುದ್ಧ ವರ್ಣನೆಯ ಸಂದರ್ಭದಲ್ಲಿ ಮಹಾಸ್ರಗ್ಧರೆ ವೃತ್ತವನ್ನು ಬಳಸಲು ಕಾರಣವೇನು? ಯುದ್ಧದ ಗಾಂಬೀರ್ಯ, ಕೌತುಕ, ವೀರ, ಏರುನಡೆ ಮುಂತಾದ ವಿವರಗಳನ್ನು ಒಂದು ಸೂತ್ರದಲ್ಲಿ ಮನಗಂಬುವಂತೆ ಹೆಣೆಯಲು ಈ ವೃತ್ತ ನೆರವಾಗುತ್ತದೆ. ಒಂದು ವೇಳೆ ಕೇವಲ ಮಹಾಸ್ರಗ್ಧರೆಯ ಗಣಗಳ ಲೆಕ್ಕಾಚಾರ ಮಾಡಿ, ವಿಶ್ಲೇಷಿಸಿದರೆ ಭಾಷಾಧ್ಯಯನವೇ ಶುಷ್ಕವಾಗುತ್ತದೆ. ಪದ್ಯ ಜಾತಿಗಳಲ್ಲಿ ಯತಿ, ಗತಿ, ತಾಳ ಮತ್ತು ಲಯ ಇವುಗಳ ಸ್ಥಾನ ವಿವೇಚನೆಯ ಜೊತೆಗೆ ಭಾವಕ್ಕಿರುವ ಅವುಗಳ ಸಂಬಂಧದ ವಿವೇಚನೆಯು ಅಷ್ಟೇ ಮುಖ್ಯ. ಭಾಷೆ ಮತ್ತು ಭಾವದ ಜೊತೆಗೆ ಭಾಷಾಗತಿಗಳ ಶೋಧ ನಡೆದರೆ ಭಾಷೆಯ ಅಧ್ಯಯನ ತುಂಬ ಸ್ವಾರಸ್ಯಕರವಾಗುತ್ತದೆ.

ಕಾವ್ಯದಲ್ಲಿ ಪದರಚನೆ ಮತ್ತು ಛಂದಃಶಿಲ್ಪ ಇವು ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಭಾವ ಬಂಧವನ್ನು ಬಿಟ್ಟು ಭಾಷೆ ಕಾವ್ಯಭಾಷೆ ಇರುವುದಿಲ್ಲ. ಕಾವ್ಯಭಾಷೆಯಂತೆ ಭಾಷೆಗೂ ಸಾಮಾಜಿಕ ಆಯಾಮವಿದೆ. ಅದನ್ನು ಗುರುತಿಸಬೇಕಾಗಿದೆ. ಕಾವ್ಯವನ್ನು ಪಠಿಸುವಾಗ ಅಥವಾ ರಾಗಬದ್ಧವಾಗಿ ಹಾಡುವಾಗ ಅವುಗಳಲ್ಲಿಯ ಪದರಚನೆ, ಶ್ರುತಿ, ಆವೃತ್ತಿ, ತೀವ್ರತೆ, ಕಂಪನ ವಿಸ್ತಾರ ಮತ್ತು ಸ್ವರವಿಸ್ತಾರ ಮುಂತಾದ ಭೌತಧ್ವನಿಶಾಸ್ತ್ರದ ಅವಿಭಾಜಕ ಅಂಶಗಳ ಹಿನ್ನೆಲ್ಲೆಯಲ್ಲಿ ಕಾವ್ಯದ ಶಿಲ್ಪವನ್ನು ವಿಶ್ಲೇಷಿಸಬೇಕಾಗಿದೆ. ಹತ್ತನೆಯ ಶತಮಾನದ ಪದರಚನೆ ಮತ್ತು ಹದಿನಾರನೆಯ ಶತಮಾನದ ಪದರಚನೆಯಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬರುವುದರಿಂದ ಸಹಜವಾಗಿ ಲಯದಲ್ಲಿಯೂ ಆ ಭಿನ್ನತೆ ಗೋಚರಿಸುತ್ತವೆ. ಒಂದು ಭಾಷೆಯಲ್ಲಿ ಎಲ್ಲ ಭಾಷಾರಚನೆಗಳು ಏಕಕಾಲಕ್ಕೆ ಉದಯಿಸುವುದಿಲ್ಲ. ಆ ಭಾಷೆಯನ್ನು ಆಡುವ ಜನಾಂಗದ ಮನೋಭಾವವನ್ನು ಅಥವಾ ಒಂದು ಕಾವ್ಯರಚನೆಯಲ್ಲಿ ಕವಿಯ ಆಶಯವನ್ನು ಪಡೆದಂತೆ ಹಳೆಯ ಲಯಗಳಲ್ಲಿ ಹೊಸ ಪದರಚನೆಗಳು ರೂಪುಗೊಳ್ಳುತ್ತಾ ಹೋಗುತ್ತವೆ. ಒಂದು ಜನಾಂಗದ ಹಾಡುಗಳಲ್ಲಿ ಕಾಣುವ ಭಾಷೆಯ ವಿನ್ಯಾಸದಲ್ಲಿ ಆ ಜನಾಂಗದ ಭಾವ ಸಂಸ್ಕಾರ ಸ್ಪಷ್ಟವಾಗಿ ಗೋಚರಿಸುತ್ತದೆ. ಇದರರ್ಥ ಅಭಿವ್ಯಕ್ತಿಯ ಸಂವೇದನೆಗೂ ಭಾಷೆಗೂ ಕಾವ್ಯದ ಆಶಯಕ್ಕೂ ಬೆಸುಗೆಯಿರುವುದರಿಂದ ಭಾಷೆಯನ್ನು ಛಂದಸ್ಸು ಶೈಲಿ ಇಂತಹ ಭಾಷಾಂಗಗಳ ಜೊತೆಗೆ ಪೃಥಕ್ಕರಿಸಿ ನೋಡಬೇಕಾಗುತ್ತದೆ. ಆಗ ಭಾಷೆಯ ಅಧ್ಯಯನಕ್ಕೆ ಸಂಬಂಧಿಸಿದಂತೆ ಹೊಸ ಆಲೋಚನೆಗಳು ಹೊಳೆದು ಆ ಕ್ಷೇತ್ರದಲ್ಲಿ ಹೊಸ ದಾರಿ ತೆರೆಯಬಹುದು. ಒಂದು ಅಧ್ಯಯನ ಕ್ಷೇತ್ರದ ಪರಿಧಿಯನ್ನು ವಿಸ್ತರಿಸುವುದು ಅದೇ ಆಗಿದೆ.

ಪಾಶ್ಚಿಮಾತ್ಯ ಮತ್ತು ದೇಸಿ ತತ್ವ, ಸಿದ್ಧಾಂತಗಳನ್ನು ಅನುಲಕ್ಷಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಹೊಸ ವಾಗ್ವಾದಗಳು, ಸಂವಾದಗಳು ಆರಂಭವಾಗಿವೆ; ಸಿದ್ಧಾಂತಗಳೂ ಹುಟ್ಟಿಕೊಂಡಿವೆ. ಅದು ಆ ಕ್ಷೇತ್ರದ ಅಭಿವೃದ್ಧಿಯ ಸೂಚಕವೂ ಹೌದು. ಉದಾಹರಣೆಗೆ ಭಾಷೆಯನ್ನು ಕುರಿತು ಹೇಳುವುದಾದರೆ ವ್ಯಾಕರಣವು ಇಂದು ಅಧ್ಯಯನದ ಚಲನಶೀಲತೆಯಿಂದಾಗಿ ಭಾಷಾವಿಜ್ಞಾನವಾಗಿ ಮಾರ್ಪಟ್ಟು ಸಾಹಿತ್ಯ ಸಂಬಂಧಿ ಜ್ಞಾನ ಕ್ಷೇತ್ರಗಳಲ್ಲಿ ತನ್ನ ಹಸ್ತ ಹೆಜ್ಜೆಗಳನ್ನಿಟ್ಟಿದೆ. ಆದರೆ ಛಂದಸ್ಸಿನ ಅಧ್ಯಯನ ಮಾತ್ರ ಸೀಮಿತ ಚೌಕಟ್ಟಿಗೆ ಒಳಪಟ್ಟಿದೆ. ಛಂದಸ್ಸಿನ ಅಧ್ಯಯನಕ್ಕೆ ಚಲನಶೀಲತೆ ತರಬೇಕಾಗಿದೆ.

ಛಂದೋಗತಿಗೆ ಕಾವ್ಯದ ಬಾಹ್ಯ ಕಟ್ಟಳೆಗಳಿಗಿಂದ ಒಳಗೆ ಹೊಮ್ಮುವ ರಸಭಾವಾಳೇ ಮುಖ್ಯ. ಕಾವ್ಯವನ್ನು ಗಟ್ಟಿಯಾಗಿ ಓದಿಕೊಂಡು ಅಥವಾ ಓದಿ ಹೇಳಿದ್ದನ್ನು ಆಲಿಸಿ ಕಾವ್ಯದ ಮರ್ಮ ಸ್ಥಾನಗಳನ್ನು ಗುರುತಿಸಬೇಕಾಗುತ್ತದೆ. ಕಾವ್ಯದ ಒಳಾಂಗಗಳಾದ ಶಬ್ದಚಿತ್ರ, ಅಲಂಕಾರ, ರಸ-ಭಾವಗಳ ಜೊತೆಗೆ ಭಾಷಾಗತಿ ಮತ್ತು ಛಂದೋಲಯ ಸಾಗುವ ಬಗೆ ತುಂಬ ಮುಖ್ಯವಾಗಿದೆ (ಲಯ-ಚಲನೆ-ಆವರ್ತನೆ) ಇದರಿಂದ ಸಹೃದಯನಿಗೆ ಕಾವ್ಯದ ಆಶಯ ಸುಲಭವಾಗಿ ಅರ್ಥವಾಗಿ, ರಸಾನಂದ ಪ್ರಾಪ್ತವಾಗುತ್ತದೆ. ಭಾಷೆಯ ರಚನೆಗೂ ಮತ್ತು ಛಂದಸ್ಸಿಗೂ ತುಂಬ ನಿಕಟತ್ವವಿದೆ. ಹಳಗನ್ನಡದ ರಚನೆಗೂ ಸಂಸ್ಕೃತ, ಪ್ರಾಕೃತ ಛಂದಸ್ಸಿಗೂ, ದೇಸಿ ಕಾವ್ಯ ಬಂಧಗಳಿಗೂ ದೇಸಿ ಮಟ್ಟುಗಳಿಗೂ ತುಂಬ ನಿಕಟತ್ವವಿದೆ. ಕನ್ನಡ ಛಂದಸ್ಸು ಒಂದರ್ಥದಲ್ಲಿ ಸಂಸ್ಕೃತ, ಪ್ರಾಕೃತ ಮತ್ತು ದೇಸಿ ರೂಪಗಳ ತ್ರಿವೇಣಿ ಸಂಗಮವಾಗಿದೆ. ೧೨ನೇ ಶತಮಾನದಲ್ಲಿ ವಚನಕಾರರು ಲಯದಲ್ಲಿ ಹೊಸತನ ತಂದರು. ವಚನಗಳ ಜೊತೆಯಲ್ಲೇ ತೆಕ್ಕೆ ಬಿದ್ದದ್ದು, ಸಂಗೀತ ಸಹಯೋಗದಿಂದ ಕೂಡಿದ ಸ್ವರವಚನ. ಅದನ್ನು ನಿಜಗುಣ ಶಿವಯೋಗಿ, ಮುಪ್ಪಿನ ಷಡಕ್ಷರಿ ಮೊದಲಾದವರು ಮುಂದುವರಿಸಿದರು. ಅದೇ ವೇಳೆಯಲ್ಲಿ ದಾಸ ಸಾಹಿತ್ಯ ಉಗಮವಾಯಿತು. ಕೀರ್ತನೆಯಲ್ಲಿ ರಾಗ, ತಾಳ ಬದ್ಧವಾದ ಪಲ್ಲವಿ, ಅನುಪಲ್ಲವಿ ಮತ್ತು ಚರಣಗಳು ನಿರ್ಮಾಣವಾದವು.

ದೇಸಿ ಛಂದಸ್ಸು ಮಾರ್ಗ ಸಂಪ್ರದಾಯವನ್ನು ಅನುಸರಿಸದೇ ಶಿಥಿಲತೆ ಕಡೆಗೆ ಒಲಿದಿದೆ. ಕನ್ನಡ ಛಂದಸ್ಸಿಗೆ ವಿನೂತನವಾದ ಅನೇಕ ಪದ್ಯಬಂಧಗಳನ್ನು ದೇಸಿ ಛಂದಸ್ಸು ನೀಡಿದೆ. ಇದಕ್ಕೆ ದಾಸಸಾಹಿತ್ಯ ಹೊರತಲ್ಲ. ದಾಸರು ಜನತಾ ಪ್ರತಿನಿಧಿಗಳಾಗಿ, ಜನಮಧ್ಯದಲ್ಲಿಯೇ ಇದ್ದು ದೈನಂದಿನ ವ್ಯವಹಾರದಲ್ಲಿ ಜನಸಾಮಾನ್ಯರ ಭಾಷೆಯ ಲಯವನ್ನೇ ತಮ್ಮ ಕೀರ್ತನ ರಚನೆಗೆ ಬಳಸಿದರು ಎಂಬುದು ಬಹಳ ಮುಖ್ಯವಾದ ಸಂಗತೊ. ಪ್ರಕೃತ ಅಧ್ಯಯನದಲ್ಲಿ ಪುರಂದರದಾಸ, ಕನಕದಾಸ, ವಿಜಯದಾಸ, ಗೋಪಾಲದಾಸ ಅವರ ರಚನೆಗಳನ್ನು ಕೇಂದ್ರವಾಗಿಟ್ಟುಕೊಂಡು ಅಲ್ಲಿಯ ಲಯಗಳ ಜಾಡನ್ನು ಹಿಡಿದು ಹೊಸಬಂಧಗಳು ಹೇಗೆ ರೂಪಿತವಾಗಿವೆ ಎಂಬುದರ ಬಗ್ಗೆ ಸ್ಥೂಲವಾಗಿ ವಿವೇಚಿಸಲಾಗಿದೆ. ಭಾಷೆ, ಶೈಲಿ, ಅಕ್ಷರಾವೃತ್ತಿ, ಭಾವಾಭಿವ್ಯಕ್ತಿ, ಮಾತ್ರಾಲಯ, ಅಂಶಲಯ ಮುಂತಾದ ವಿಷಯಗಳ ಬಗ್ಗೆ ಮೊದಲ ಬಾರಿಗೆ ಹೊಸ ಮಾಹಿತಿ ನೀಡಿದೆ; ವಿಶ್ಲೇಷಿಸಿದೆ ಹೀಗೆ ರೂಪಿತವಾದ ದಾಸಸಾಹಿತ್ಯದಲ್ಲಿ ಬಳಕೆಯಾದ ಭಾಷಾಗತಿ ಮತ್ತು ಛಂದೋಲಯಗಳ ಬಗ್ಗೆ ಅಧ್ಯಯನ ಮಾಡುವುದೇ ಪ್ರಸ್ತುತ ಅಧ್ಯಯನದ ಉದ್ದೇಶವಾಗಿದೆ.

ಈ ಅಧ್ಯಯನದಲ್ಲಿ ದಾಸ ಸಾಹಿತ್ಯದ ಭಾಷೆಯನ್ನು ಕುರಿತು ಹೀಗೆ ಅಭ್ಯಾಸ ಮಾಡುತ್ತ ಅದರ ಫಲಿತ ರೂಪದ ವಿಚಾರಗಳನ್ನು ಮಂಡಿಸುವ ಉದ್ದೇಶವನ್ನು ಹೊಂದಲಾಗಿದೆ. ಆ ಮೂಲಕ ಭಾಷಾ ಬಳಕೆಯ ಹೊಸ ಸಾಧ್ಯತೆಗಳನ್ನು ಕುರಿತು ಚಿಂತನೆಗಳನ್ನು ಬೆಳೆಸುವುದಾಗಿದೆ. ಕಾವ್ಯ ಸಂವೇದನೆಯ ಭಾಗವಾಗಿ ಭಾಷೆ ಚರ್ಚೆಯನ್ನು ಗಮನಿಸುವ ಆಸಕ್ತಿ ಈಗ ಬಲವಾಗಿದೆ. ಒಟ್ಟಾರೆಯಾಗಿ ಭಾಷಾಶಾಸ್ತ್ರದ ತತ್ವಗಳನ್ನು ಕುರಿತಂತೆ ಕನ್ನಡದಲ್ಲಿ ಈವರೆಗೆ ಬಂದಿರುವ ವಿವೇಚನೆಯನ್ನು ವಿಸ್ತರಿಸುವ, ಮರುಪರಿಶೀಲಿಸುವ ಮತ್ತು ಹೊಸಬಗೆಯಿಂದ ಆಲೋಚಿಸುವ ಉದ್ದೇಶವನ್ನು ಈ ಅಧ್ಯಯನ ಹೊಂದಿರುವುದರಿಂದ್ ಅದಕ್ಕೆ ತಕ್ಕಂತೆ ಅಧ್ಯಯನ ವ್ಯಾಪ್ತಿಯನ್ನು ರೂಪಿಸಿಕೊಳ್ಳಲಾಗಿದೆ.