ಭಾಷೆಯ ಮುಖ್ಯ ಉದ್ದೇಶ ಭಾಷಿಕರ ಮಧ್ಯ ಸಂಪರ್ಕವನ್ನು ಸಾಧಿಸುವುದೇ ಆಗಿದೆ. ಭಾಷೆಯ ಮೂಲಕ ಮನುಷ್ಯ ಸಮಾಜದ ಮಧ್ಯ ತನ್ನ ಕಾರ್ಯನಿರ್ವಹಿಸುತ್ತಾನೆ. ಭಾಷೆಯ ಮೂಲಕವೇ ಭಾಷಿಕರು ತಮ್ಮ ವಿಚಾರಗಳನ್ನು, ಅನಿಸಿಕೆಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಸಾಮಾನ್ಯವಾಗಿ ಭಾಷೆಯೆಂದರೆ ಸಮಾಜದ ಸಂಪರ್ಕಕ್ಕಾಗಿ ಇರುವ ಯಾದೃಚ್ಛಿಕ. ಮೌಖಿಕ ಧ್ವನಿಸಂಕೇತಗಳ ವ್ಯವಸ್ಥೆಯಾಗಿದೆ. ಭಾಷೆಯಲ್ಲಿ ಧ್ವನಿಗಳು ವ್ಯವಸ್ಥಿತವಾಗಿ ನಿರ್ದಿಷ್ಟ ನಿಯಮಾನುಸಾರವಾಗಿ ಬಳಕೆಯಾಗುತ್ತವೆ. ಭಾಷೆಯಲ್ಲಿ ಬಳಕೆಯಾಗುವ ಧ್ವನಿಗಳೂ ಸಂಕೇತಾತ್ಮಕವಾಗಿರುತ್ತವೆ. ಆ ಭಾಷಧ್ವನಿಗಳು ಮೌಖಿಕ ಧ್ನನಿ ಸಂಕೇತಗಳಾಗಿವೆ. ಭಾಷೆಯಲ್ಲಿ ಬಳಕೆಯಾಗುವ ಶಬ್ದಗಳಲ್ಲಿ ಅರ್ಥ ಅಡಗಿ ಕುಳಿತಿರುವುದಿಲ್ಲ. ಶಬ್ದಗಳು ಕಾಲ, ದೇಶ, ಪರಿಸರಗಳಿಂದ ಅರ್ಥ ಪಡೆದುಕೊಳ್ಳುತ್ತವೆ. ಒಂದು ಶಬ್ದಕ್ಕೆ ಒಂದು ಅರ್ಥ ರೂಢಿಗತವಾಗಿ ಪ್ರಾಪ್ತವಾಗುತ್ತದೆ. ಒಂದು ವಸ್ತು, ವಿಚಾರ, ಭಾವನೆಯನ್ನು ಇದೇ ಧ್ವನಿ ಮೊತ್ತದಿಂದ ಗುರುತಿಸಬೇಕೆಂಬ ಸಾರ್ವತ್ರಿಕ ನಿಯಮ ಇರುವುದಿಲ್ಲ. ಅವು ಒಂದು ಭಾಷಾ ಸಮುದಾಯದ ಭಾಷಿಕರ ಮನೋವೃತ್ತಿಯನ್ನು ಅವಲಂಬಿಸಿರುತ್ತವೆ. ಹೀಗಾಗಿ ಭಾಷೆಯ ಮುಖ್ಯ ಉದ್ದೇಶ ಸಾಮಾಜಿಕ ಸಂಪರ್ಕವಾಗಿದೆ.

ಭಾಷೆಯು ವ್ಯಕ್ತಿಗೆ ಪರಂಪರಾಗತವಾಗಿ ಬರದೆ ಕಲಿಕೆಯಿಂದ, ಅನುಕರಣೆಯಿಂದ ಬರುವಂತಹದಾಗಿದೆ. ಮನೆಯ, ಶಾಲೆಯ ಪರಿಸರದಲ್ಲಿ ಪಾಲಕರು, ಸಹೋದರ-ಸಹೋದರಿಯರು, ಶಿಕ್ಷಕರು, ಸ್ನೇಹಿತರು ಮಗುವಿನ ಭಾಷಾಕಲಿಕೆಗೆ ಪರೋಕ್ಷವಾಗಿ ಇಲ್ಲವೇ ಪ್ರತ್ಯಕ್ಷವಾಗಿ ನೆರವಾಗುತ್ತಾರೆ. ಭಾಷೆಯ ಮೂಲಕವೇ ನಮ್ಮ ನಡೇ-ನುಡಿ, ಆಚಾರ-ವಿಚಾರ ಹಾಗೂ ಮನಸ್ಸಿನ ಭಾವನೆಗಳು ಪೀಳಿಗೆಯಿಂದ ಪೀಳಿಗೆಗೆ ಸಾಗಿಸಲ್ಪಡುತ್ತವೆ. ಇದನ್ನು ಗಮನಿಸಿದರೆ ಭಾಷೆ ಸಂಸ್ಕೃತಿಯ ವಾಹಕವೂ ಆಗಿದೆ. ಭಾಷೆಯೂ ಸಮುದಾಯದ ಭಾಷಿಕರ ಅನುಭವದ ಫಲವಾಗಿ ರೂಪುಗೊಂಡಿದೆ. ಆದುದರಿಂದ ಅದು ಆ ಸಮುದಾಯದ ಚರಿತ್ರೆ ಮತ್ತು ಅಭಿವ್ಯಕ್ತಿಯಲ್ಲಿ ವ್ಯಕ್ತವಾಗುತ್ತದೆ. ಭಾಷೆಯಲ್ಲಿ ಬಳಕೆಯಾಗುವ ಪದಗಳಿಗೆ ಅರ್ಥವಿರುತ್ತದೆ. ಅರ್ಥರಹಿತ ಪದಗಳಿಗೆ ಭಾಷೆಯಲ್ಲಿ ಸ್ಥಾನವಿರುವುದಿಲ್ಲ. ಅರ್ಥವಿರುವುದರಿಂದಲೇ ಸಂವಹನಿಸಲು ಸಹಕಾರಿಯಾಗಿದೆ. ನಾವು ಒಮ್ಮೆ ಮಾತನಾಡಿದಂತೆ ಇನ್ನೊಮ್ಮೆ ಮಾತನಾಡುವುದಿಲ್ಲ. ಒಮ್ಮೆ ಬರೆದಂತೆ ಇನ್ನೊಮ್ಮೆ ಬರೆಯುವುದಿಲ್ಲ ಇದಕ್ಕೆ ಕಾರಣವೆಂದಎ ಭಾಷೆಯು ಸೃಜನಶೀಲತೆಯ ಗುಣಹೊಂದಿರುತ್ತದೆ. ಹೀಗಾಗಿ ಸಂಸ್ಕೃತಿ ಸಂವಹನಕ್ಕೆ ಭಾಷೆ ಮುಖ್ಯ ಸಾಮಗ್ರಿ. ಅದಿಲ್ಲದಿದ್ದಎ ಮಾನವನ ನೈಜ ನಡವಳಿಕೆಯೇ ಇರುತ್ತಿರಲಿಲ್ಲ. ಭಾಷೆ ಮುಖ್ಯವಾಗಿ ರೂಪುಗೊಳ್ಳುವುದು ಮಾನವನ ಮಿದುಳೂ ಮತ್ತು ಧ್ವನ್ಯಂಗಗಳಿಂದ. ಮಾನವ ವರ್ತನೆಯ ಮೂರು ಮುಖ್ಯ ಅಂಶಗಳು ಅಂದರೆ ಸಮಾಜ. ಸಂಸ್ಕೃತಿ ಮತ್ತು ಭಾಷಿಕರ ಒಲವು ಇವುಗಳನ್ನು ತಿಳಿಯಲು ಸಾಂಸ್ಕೃತಿಕ ಸ್ಥಿತಿಗತಿಗಳನ್ನು ಅರಿಯಲು ಭಾಷೆ ಸಹಾಯಕವಾಗಿದೆ.

ಕನ್ನಡ ಮಟ್ಟಿಗೆ ಹೇಳುವುದಾದರೆ ನಾವು ನಮ್ಮ ಸುತ್ತಲಿನ ಪರಿಸರದ ಪ್ರಭಾವದಿಂದ ಹಾಗೂ ಅನುಕರಣೆಯಿಂದ ಕನ್ನಡವನ್ನು ಕಲಿತಿದ್ದೇವೆ. ನಿರಂತರ ಭಾಷಾ ಸಂಪರ್ಕವೇ ಭಾಷಾ ಕಲಿಕೆಗೆ ಉತ್ತಮ ಅವಕಾಶವಾಗಿರುತ್ತದೆ. ಕನ್ನಡ ಭಾಷೆ ಬೆಳೆದು ಬಂದ ಬಗೆ, ಆ ಸಂದರ್ಭದಲ್ಲಿ ಅದು ಕಂಡ ವಿಕಾಸಕ್ರಮಗಳನ್ನು ಸ್ಥೂಲವಾಗಿ ಗಮನಿಸುವುದು ಅಗತ್ಯವಾಗಿದೆ. ದ್ರಾವಿಡ ಭಾಷೆಗಳಲ್ಲಿ ತಮಿಳು ಭಾಷೆಯನ್ನು ಬಿಟ್ಟರೆ ಕನ್ನಡವು ಎರಡನೆಯ ಪ್ರಾಚೀನ ಭಾಷೆಯಾಗಿದೆ. ಕನ್ನಡವು ತಮಿಳಿನಂತೆ ಉತ್ತಮ ಸಾಹಿತ್ಯವನ್ನು ಸಂಪಾದಿಸಿದೆ. ಕನ್ನಡ ಭಾಷೆಯ ಅತ್ಯಂತ ಪ್ರಾಚೀನ ಲಿಖಿತ ದಾಖಲೆ ಎಂದರೆ ಕ್ರಿ.ಶ.ಸು.೪೫೦ರ ಹಲ್ಮಿಡಿ ಶಾಸನ. ಈ ಶಾಸನ ರಚನೆಯಾಗುವ ವೇಳೆಗೆ ಕನ್ನಡ ಭಾಷೆಯಲ್ಲಿ ಪ್ರೌಢಸಾಹಿತ್ಯ ನಿರ್ಮಾಣವಾಗಿರಬಹುದೆಂದು ಊಹಿಸಲು ಅವಕಾಶವಿದೆ. ಯಾವುದೇ ಭಾಷೆ ಮೊದಲು ಆಡುನುಡಿಯ ಮೂಲಕ ಹೊರಹೊಮ್ಮುತ್ತದೆ. ಕಾಲಾನಂತರ ಅದರಲ್ಲಿ ಸಾಹಿತ್ಯ ನಿರ್ಮಾಣವಾಗುತ್ತದೆ. ಕ್ರಿ.ಶ.ಸು.೮೫೦ರ ಸುಮಾರಿಗೆ ರಚಿತವಾದ ’ಕವಿರಾಜಮಾರ್ಗ’ ದಲ್ಲಿ ಕವಿರಾಜ ಮಾರ್ಗಕಾರ ಕನ್ನಡಿಗರ ಸ್ವಭಾವ, ಕನ್ನಡ ನಾಡಿನ ವಿಸ್ತಾರ, ಕನ್ನಡ ಭಾಷೆಯ ಪ್ರಭೇದಗಳು ಮುಂತಾದ ಹಲವಾರು ವಿಷಯಗಳನ್ನು ಹೇಳಿರುವುದರಿಂದ ಎಂಟು-ಒಂಬತ್ತನೆಯ ಶತಮಾನದ ಸುಮಾರಿಗೆ ಕನ್ನಡ ಸಾಕಷ್ಟು ಪ್ರಬುದ್ಧ ಭಾಷೆಯಾಗಿ ಹೊರಹೊಮ್ಮಿತ್ತೆಂಬುದು ಸ್ಪಷ್ಟವಾಗುತ್ತದೆ. ನಂತರದ ಕಾಲಾವಧಿಯಲ್ಲಿ ಕನ್ನಡ ಭಾಷೆ ಇನ್ನಷ್ಟು ಪ್ರೌಢವಾಗುತ್ತ ನಡೆದು ಸಾಹಿತ್ಯ ರಚನೆಯೂ ತೀವ್ರವಾಗಿ ಸಾಗಿತು. ಕನ್ನಡ ಭಾಷೆಯ ಬದಲಾವಣೆಯ ಅವಸ್ಥಾಭೇದಗಳನ್ನು ಸ್ಥೂಲವಾಗಿ ಮೂರು ರೀತಿಯಾಗಿ ಗುರುತಿಸಬಹುದು. ಇಲ್ಲಿ ಒಂದು ಮಾತನ್ನು ಹೇಳಬೇಕೆನಿಸುತ್ತದೆ. ಬದಲಾವಣೆಯು ಭಾಷೆಯ ಬೆಳವಣಿಗೆಯ ಲಕ್ಷಣ. ಅತಿಯಾದ ವ್ಯಾಕರಣದ ಕಟ್ಟುಪಾಡುಗಳಿಂದ ಭಾಷೆಯ ಬಳಕೆ ನಿಂತು ಹೋಗಿ ಕ್ರಮೇಣ ಈ ಭಾಷೆ ಹತ್ಯೆಯಾಗುವುದುಂಟು, ಉದಾ. ಲ್ಯಾಟಿನ್, ಸಂಸ್ಕೃತ ಮುಂತಾದವು. ಆದರೆ ಕನ್ನಡ ಭಾಷೆಯು ಮಡಿವಂತಿಕೆಯನ್ನು ಮೀರಿ ಬಳಕೆಯ ಹೊಸ ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಂಡು ಕಾಲದಿಂದ ಕಾಲಕ್ಕೆ ಬೇರೆ ಬೇರೆ ಅವಸ್ಥೆಗಳನ್ನು ಕಂಡು ಬದಲಾವಣೆ ಯಾಗುತ್ತ ಬೆಳವಣಿಗೆ ಹೊಂದುತ್ತ ಬಂದಿತು. ಅದು ಕನ್ನಡ ಭಾಷೆಯ ಜೀವಂತಿಕೆಯ ಲಕ್ಷಣವಾಗಿದೆ.

ಕನ್ನಡದ ಉಪಲಬ್ಧ ಮೊದಲ ಕೃತಿ ಕವಿರಾಜಮಾರ್ಗ. ಆ ಕೃತಿ ರಚನೆಯ ಪೂರ್ವದಲ್ಲಿ ಕ್ರಿ.ಶ.ಸು. ೮೫೦ಕ್ಕೂ ಪೂರ್ವದಲ್ಲಿದ್ದ ಕನ್ನಡವನ್ನು ಪೂರ್ವದ ಹಳಗನ್ನಡವೆಂದು ಹೆಸರಿಸಲಾಗುತ್ತದೆ (ಸುಮಾರು ೪೫೦ ರಿಂದ ೮೫೦). ಕ್ರಿ.ಶ. ೮ ನೆಯ ಶತಮಾನದಿಂದ ೧೨ನೆಯ ಶತಮಾನದ ಅವಧಿಯನ್ನು ಹಳಗನ್ನಡವೆಂದು ಗುರುತಿಸಲಾಗಿದೆ. ಈ ಯುಗವು ಭಾಷೆ ಹಾಗೂ ಸಾಹಿತ್ಯದ ದೃಷ್ಟಿಯಿಂದ ಪ್ರೌಢಸಂಪ್ರದಾಯದ ಸ್ಥಿರತೆ ಮತ್ತು ಘನತೆಗಳನ್ನು ಹೊಂದಿತ್ತು. ರಾಜಕೀಯವಾಗಿ ಕದಂಬ-ಗಂಗ, ರಾಷ್ಟ್ರಕೂಟ, ಚಾಲುಕ್ಯರ ಆಡಳಿತದಿಂದ ಸಂಪದ್ಭರಿತವಾಗಿತ್ತು. ಜೈನಧರ್ಮ ಅತ್ಯಂತ ಪ್ರಮುಖ ಧರ್ಮವಾಗಿತ್ತು. ಚಂಪು ಕಾವ್ಯರೂಪ ಈ ಯುಗದಲ್ಲಿ ಕಳಸ ಮುಟ್ಟಿತು. ಪಂಪ-ಪೊನ್ನ-ರನ್ನ ಮುಂತಾದ ಶ್ರೇಷ್ಠರು ಈ ಕಾಲದಲ್ಲಿಯೇ ಇದ್ದರು. ಹೀಗೆ ಭಾಷೆ-ಶೈಲಿ, ವಸ್ತು, ಛಂದಸ್ಸು, ಅಲಂಕಾರ ಇವುಗಳಲ್ಲಿ ಸಂಸ್ಕೃತದ ಪ್ರಭಾವ ಹೇರಳವಾಗಿತ್ತು.

ಕ್ರಿ.ಶ.ಸು. ೧೪ನೆಯ ಶತಮಾನದ ವೇಳೆಗೆ ಕನ್ನಡ ಭಾಷೆ ಹಳಗನ್ನಡ ಅವಸ್ಥೆಯಿಂದ ನಡುಗನ್ನಡಕ್ಕೆ ತಿರುಗಿತು. ಹಳಗನ್ನಡವು ಹೆಚ್ಚಾಗಿ ಆಸ್ಥಾನ ಭಾಷೆಯಾಗಿ ವಿದ್ವಾಂಸರಿಗೆ ಮಾತ್ರ ಸೀಮಿತವಾಗಿತ್ತು. ಜನಸಾಮಾನ್ಯರು ಸಾಹಿತ್ಯದಿಂದ ದೂರಸರಿದಿದ್ದರು. ಜೈನಧರ್ಮ ಮತ್ತು ರಾಜ್ಯಶಕ್ತಿಗಳು ಈ ಕಾಲಾವಧಿಯಲ್ಲಿ ಜನತೆಯ ಮೇಲಿನ ತಮ್ಮ ಹಿಡಿತವನ್ನು ಕಳೆದುಕೊಳ್ಳಲಾರಂಭಿಸಿದವು. ತತ್ಪರಿಣಾಮವಾಗಿ ಸಾಹಿತ್ಯ ಜನಮುಖಿಯಾಗತೊಡಗಿತು. ಹಾಗೆ ನೋಡಿದರೆ ೧೨ನೆಯ ಶತಮಾನದ ಶಿವಶರಣರು ನಡುಗನ್ನಡ ಸಾಹಿತ್ಯದ ಹರಿಕಾರರೆನಿಸಿಕೊಳ್ಳುತ್ತಾರೆ. ಆ ಭಕ್ತಿ ಸಾಹಿತ್ಯವನ್ನು ಮುಂದೆ ದಾಸರು ಮುಂದುವರಿಸಿಕೊಂಡು ಹೋದರು. ವೈಚಾರಿಕ ಕ್ರಾಂತಿ, ಸಾಮಾಜಿಕ ಆಂದೋಲನ, ಸಾಮಾಜಿಕ ಬದಲಾವಣೆ ಇವು ಶರಣರ, ದಾಸರ ಮುಖ್ಯ ಗುರಿಯಾಗಿತ್ತು. ಅವರು ತಮ್ಮ ಕಾಲದ ಸಮುದಾಯದ ಭಾಷೆಯನ್ನೇ ತಮ್ಮ ಅಭಿವ್ಯಕ್ತಿಗೆ ಮಾಧ್ಯಮವನ್ನಾಗಿಸಿಕೊಂಡರು. ಆ ಮೂಲಕ ಜನಸಮುದಾಯಕ್ಕೆ ನೀತಿ ಭೋಧನೆ ಮಾಡಿ ಮಾರ್ಗದರ್ಶಕರಾದರು. ಬಸವಣ್ಣನವರು ಹೇಳುವಂತೆ

ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗಮೆಚ್ಚಿ ಅಹುದೆನಬೇಕು

ಈ ವಚನದಲ್ಲಿ ಮಾತಿನ ಮಹತ್ವವನ್ನು ಹೇಳಿ ಸಾಮಾಜಿಕ ಪರಿವರ್ತನೆಗೆ ಅವರು ಭಾಷೆಯನ್ನು ಒಂದು ಸಾಧನವಾಗಿ ಬಳಸಿದರು. ಭಾಷೆ ಬಳಕೆಗೆ ತಕ್ಕಂತೆ ವಚನ, ರಗಳೆ, ಸಾಂಗತ್ಯ, ಕೀರ್ತನೆ-ಈ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದರು. ಈ ಕಾಲಾವಧಿಯಲ್ಲಿ ಸಂಸ್ಕೃತದ ಪ್ರಭಾವ ಹಿಂದಕ್ಕೆ ಸರಿದು ದೇಸಿಯ ಸರಳತೆ ಮುನ್ನಡೆಗೆ ಬಂದಿತು. ಹಳಗನ್ನಡದ ಚಂಪುಶೈಲಿಯ ಕಾವ್ಯಗಳು ’ವಸ್ತುಕ’ ಎನಿಸಿಕೊಂಡರೆ ದೇಸಿಮೂಲದ ಕೃತಿಗಳು ’ವರ್ಣಕ’ ಎನಿಸಿಕೊಂಡವು. ರಾಜಾಶ್ರಯವಿರದಿದ್ದರೂ ಸಮಾಜದ ಬೆಂಬಲದಿಂದ ಈ ಯುಗದ ಪ್ರಮುಖ ಕವಿಗಳು (ಶರಣರು, ಹರಿಹರ-ರಾಘವಾಂಕ, ಕುಮಾರವ್ಯಾಸ, ದಾಸರು) ಕೃತಿರಚನೆ ಮಾಡಿದರು. ಈ ಅಧ್ಯಾಯದಲ್ಲಿ ದಾಸರ ಭಾಷಾ ಸ್ವರೂಪ ಬಗೆಗೆ ಚರ್ಚೆ ಬೆಳೆಸಲಾಗಿದೆ.

ದಾಸರ ಅಭಿವ್ಯಕ್ತಿಯ ಮಾಧ್ಯಮದಲ್ಲಿ ಭಾಷೆಯೂ ಒಂದಾಗಿದೆ. ಅವರು ಹಾಡು, ಕುಣಿತ, ಸಂಗೀತದೊಂದಿಗೆ ಪ್ರಾದೇಶಿಕ ಭಾಷೆಯನ್ನು ಹಾಡುವಿಕೆಯಲ್ಲಿ ಸಮ್ಮಿಳನ ಮಾಡಲು ಹಾತೊರೆಯುತ್ತಾರೆ. ಇದು ಕೇಳುಗರ ಕುತೂಹಲ, ಆಸಕ್ತಿ ಕೆರಳಿಸಿ ಸಹೃದಯರನ್ನು ಆಕರ್ಷಿಸುತ್ತದೆ. ಈ ಪ್ರಕ್ರಿಯೆಯು ಭಾಷೆಯ ಸೃಜನಶೀಲತ್ಲೆಯ ನೆಲೆಯಲ್ಲಿಯೇ ನಡೆಯುತ್ತದೆ. ಅಂತಹ ಸಂದರ್ಭದಲ್ಲಿ ಅವರು ಬಳಸುವ ಭಾಷಾ ಪ್ರಯೋಗ ಮತ್ತು ಸಂಗೀತವು ಶಿಥಿಲತೆಯ ಹಾದಿ ತುಳಿಯುತ್ತದೆ. ಆಗ ಹೊಸ ಪದಗಳ ಸೃಷ್ಟಿಯಾಗುವುದು ಹಾಗೂ ಹಳೆಯ ಪದಗಳಿಗೆ ಸ್ಥಾಪಿತ ಅರ್ಥಗಳು ಬಿದ್ದು ಹೋಗಿ ಹೊಸ ಅರ್ಥ ಬರುವ ಪ್ರಕ್ರಿಯೆ ನಡೆಯುತ್ತದೆ. ಹೊಸ ವಾಕ್ಯ ರಚನೆಗಳು ಸಿದ್ಧವಾಗುವ ಪ್ರಕ್ರಿಯೆಯೂ ನಡೆಯುತ್ತದೆ

ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ
ಸಜ್ಜನ ಸಂಗದೊಳಗಿರಿಸೆನ್ನರಂಗ
ಉಂಡ ಮನೆಗೆರಡನು ಎಣಿಸುವಾತನ ಸಂಗ
ಕೊಂಡೆಯವ ಪೇಳಿ ಕಾದಿಸುವವನ ಸಂಗ
ತಂದೆತಾಯನು ಬೈದು ಬಾಧಿಸುವವನ ಸಂಗ
ನಿಂದಕರ ಸಂಗ ಬಹು ಭಂಗ ರಂಗ-
…………………………………………………..
…………………………………………………..

ಕನಕದಾಸರ ಈ ಕೀರ್ತನೆ ತುಂಬ ಹೃಧ್ಯವಾಗಿದೆ. ದುರ್ಜನರ ಸಂಗ ಸಲ್ಲದು. ಇದರಿಂದ ವ್ಯಕ್ತಿಯ ಹಾಗೂ ಸಮುದಾಯದ ಉನ್ನತಿಗೆ ಮಾರಕವಾಗುವುದಾಗಿ ಸೂಚಿರುತ್ತಾರೆ. ಸುಲಭ ಗ್ರಾಹ್ಯವಾದ ಸರಳ ವಿಚಾರವನ್ನು ವಿವರಣಾತ್ಮಕವಾಗಿ, ಅರ್ಥಪೂರ್ಣವಾಗಿ ಸಾದೃಶ್ಯಗಳ ಮೂಲಕವಾಗಿ ಮಂಡಿಸುವ ರೀತಿ ಇದು. ’ಸಂಗ’, ’ರಂಗ’ ಎಂಬ ಪದಗಳು ಪುನರಾವರ್ತನೆಯಾದರೂ ಕೇಳುವುದಕ್ಕೆ ಹಿತಕಾರಿಯಾಗಿವೆ. ಇಲ್ಲಿ ದಾಸರ ಸೂಕ್ಷ್ಮ ಸಂವೇದನೆ ಪ್ರಕಟವಾಗುವುದಲ್ಲದೆ ಪದಗಳ ಬಳಕೆಯೂ ಗಮನಾರ್ಹವಾಗಿದೆ.

ಗಳಿಸಿಕೊಳ್ಳಿರೊ ಸಾಧುಸಜ್ಜನ ಸಂಗವ
ಗಳಿಗಿಯೊಳು ತೋರಿಕೊಡುವರು ಅಂತರಂಗವ
ಹೊಟ್ಟೆಗೆ ಮೊಟ್ಟೆಗೆ ಕೆಟ್ಟು ಹೋಗಬ್ಯಾಡಿರೊ
ಹುಟ್ಟಿ ಬಂದ ಮ್ಯಾಲೆ ಹರಿನಾಮ ಘಟಿಸಿಗೆಳ್ಳಿರೊ

ಸಾಧು ಸಜ್ಜನರ ಸಂಗವನು ಗಳಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಮಹಿಪತಿದಾಸರು, ಲೌಕಿಕ ಆಸೆಗೆ ಬಲಿಯಾಗಿ ಮನುಷ್ಯತ್ವವನ್ನು ಕಳೆದುಕೊಳ್ಳದಂತೆ ಸೂಚಿಸಿದ್ದಾರೆ. ಇಲ್ಲಿ ಭಾಷೆ ಪ್ರಜ್ಞಾಪೂರ್ವಕವಾಗಿ ಪ್ರಕಟವಾಗಿದೆ. ಭಾಷೆಯ ಅರ್ಥಸಾಧ್ಯತೆಗಳನ್ನು ಸಂವಹನ ಗೊಳಿಸಲು ಪದಗಳೂ ಬಳಕೆಯಾದರೆ ಅದು ಹೊರಡಿಸುವ ಅರ್ಥಸಾಧ್ಯತೆಗಳ ಹೊಸ ಆಯಾಮಗಳನ್ನು ಅಧ್ಯಯನಕಾರ ವಿಶ್ಲೇಷಿಸಬೇಕಾಗುತ್ತದೆ. ಮಹಿಪತಿದಾಸರು ರಾವಣ, ಕೌರವರ ದೃಷ್ಟಾಂತವನ್ನು ನೀಡಿ ಅವರ ಪತನದಿಂದ ಎಚ್ಚರಗೊಳ್ಳುವಂತೆ ಹಾಗೂ ಅದರಿಂದಾದ ಪರಿಣಾಮವನ್ನು ಕುರಿತು ಹೇಳುತ್ತಾರೆ. ಅಲ್ಲಿಯ ಭಾಷೆಯ ಬಳಕೆ ಸಹೃದಯದ ಮೇಲೆ ಬೀರಬಹುದಾದ ಪರಿಣಾಮ ಅದ್ಭುತವಾಗಿದೆ. ಪದಗಳ ಬಳಕೆ ಕೇವಲ ನುಡಿಗಳಾಗದೆ ಅವು ಒಂದು ಭಾಷಾ ಸಮುದಾಯದ ಸಂವೇದನೆಯ ಭಾಗವಾಗಿ ರೂಪು ಪಡೆಯುತ್ತವೆ. ಸಮಕಾಲೀನ ಸಂವೇದನೆಗಳಿಗೆ ಪೌರಾಣಿಕ ವಿಷಯಗಳನ್ನು ಲೇಪಿಸಿ ವಿಭಿನ್ನ ನೆಲೆಯಿಂದ ಮನುಷ್ಯ ಸ್ವಭಾವವನ್ನು ದಾಸರು ಚಿತ್ರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸುತ್ತಾರೆ.

ದಾಸ ಸಾಹಿತ್ಯದ ಸಾಧನೆಗಳಲ್ಲಿ ಮುಖ್ಯವಾದುದೆಂದರೆ ಭಾಷೆಯ ಮತ್ತು ಚಿಂತನೆಯ ದಿಕ್ಕನ್ನು ಸಮಾಜದ ಕಡೆಗೆ ಹೊರಳಿಸಿದುದು. ಗಹನವಾದ ಧಾರ್ಮಿಕ ಅಂಶಗಳನ್ನು ಜನರಿಗೆ ಸುಲಭವಾಗಿ ತಿಳಿಯುವ ಸರಳಗನ್ನಡದಲ್ಲಿ ಹೇಳಿದುದು ದಾಸರು ಮಾಡಿದ ವೈಚಾರಿಕ ಕ್ರಾಂತಿಯಾಗಿದೆ. ಎಲ್ಲೆ ಭಾಷೆ ಬದಲಾಗುತ್ತದೆಯೊ ಅಲ್ಲಿ ಹೊಸ ಚಿಂತನಾಕ್ರಮ ಶುರುವಾಗುತ್ತದೆ. ಹೊಸ ಸಂವೇದನೆಗಳನ್ನು ಸಮರ್ಥವಾಗಿ ಮೂಡಿಸುವ ಮುನ್ನ ಭಾಷೆ ತಾನೇ ಒಂದು ಬಗೆಯ ಸಂಸ್ಕರಣಕ್ಕೆ ಒಳಗಾಗುತ್ತದೆ. ಜನಸಾಮಾನ್ಯರ ನೋವು-ನಲಿವು, ಸಂತೋಷ-ಹತಾಶೆ ಇವುಗಳನ್ನು ಸಾಹಿತ್ಯ ರಚನೆಗೆ ವಸ್ತುವಾಗಿಟ್ಟುಕೊಂಡು ಐತಿಹಾಸಿಕ ದಾಖಲೆಗಳಾಗಿ ದಾಸರ ಕೀರ್ತನೆಗಳು ರೂಪುತಾಳಿವೆ. ಸಮಾಜವು ನಿರೀಕ್ಷಿಸುವ ದಾಸರ ಕೀರ್ತನೆಗಳು ರೂಪು ತಾಳಿವೆ. ಹೊಸ ಸಮಾಜವು ನಿರೀಕ್ಷಿಸುವ ಹೊಸ ಸಂವೇದನೆಗಳು ಭಾಷೆಯ ಮೂಲಕ ಅಭಿವ್ಯಕ್ತವಾಗುತ್ತವೆ. ತಾವು ಹೇಳಬೇಕಾದುದನ್ನು ನಿಖರವಾಗಿ, ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ ದಾಸರು. ಕನಕದಾಸರ ಕೀರ್ತನೆ ಹೀಗಿದೆ.

ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ
ನಿತ್ಯ ಅನ್ನದಾನವಿರಲು ಭಯವು ಯಾತಕೆ
ತಾನು ಉಣ್ಣದೆ ಪರರಿಗಿಕ್ಕದ ಧನವಿದ್ಯಾತಕೆ
ಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ
ಜ್ಞಾನವಿಲ್ಲದೆ ನೂರುಕಾಲ ಬದುಕಲ್ಯಾತಕೆ
ಮಾನಹೀನವಾಗಿ ಬಾಳ್ವ ಮನಜನ್ಯಾತಕೆ
ಮಾತುಕೇಳದೆ ಮಲೆತು ನಡೆವ ಮಕ್ಕಳ್ಯಾತಕೆ
ಪ್ರೀತಿಯಿಲ್ಲದೆ ಎಡೆಯಲಿಕ್ಕಿದ ಅನ್ನವ್ಯಾತಕೆ
ನೀತಿಯರಿತು ನಡೆಯದಿರುವ ಭಂಟನ್ಯಾತಕೆ
ಸೋತ ಹೆಣ್ಣಿಗೆ ಹೆದ್ರಿ ನಡೆವ ಪುರುಷ್ಯನ್ಯಾತಕೆ
ಸನ್ನೆಯನತಿರು ನಡೆಯದಿರುವ ಪುರುಷನ್ಯಾತಕೆ
ಮನ್ನಣಿಂದ ನಡೆಸದಿರುವ ದೊರೆಯಿದ್ಯಾತಕೆ
ಮುನ್ನಕೊಟ್ಟು ಪಡೆಯದಿನ್ನು ಬಯಸಲ್ಯಾತಕೆ ಪ್ರ
ಚೆನ್ನ ಆದಿಕೇಶವನಲ್ಲದೆ ದೈವವ್ಯಾತಕೆ

ಕಡುನಿಷ್ಠೆಯ ಭಕ್ತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆನ್ನುವುದು ದಾಸರ ನಿಲುವು. ಬದುಕು ಸಹ್ಯವಾಗಬೇಕಾದರೆ ಮನುಷ್ಯ ಕೆಲವೊಂದು ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ದಾನಶೀಲತೆ. ಜ್ಞಾನದ ಹಸಿವು, ದೈರ್ಯವಂತಿಕೆ, ನಯನೀತಿಯ ಸೊಗಲು ಬದುಕಿನಲ್ಲಿ ಏರ್ಪಟ್ಟಗಲೇ ಅದು ನಿಜವಾದ ಬದುಕಾಗುತ್ತದೆ ಎನ್ನುವುದು ಈ ಕೀರ್ತನೆಯ ಹಿಂದನ ಆಶಯವಾಗಿದೆ.’ನೀತಿಯರಿತು ನಡೆಯದಿರುವ ಭಂಟನ್ಯಾತಕೆ’, ’ಮನ್ನಣಿಯಿದ ನಡೆಸದಿರುವ ದೊರೆಯು ಇದ್ದುಯಾತಕೆ’ ಇಂತಹ ಮಾತುಗಳು ವಿಜಯನಗರ ಅರಸರ ರಾಜಕೀಯ ಸ್ಥಿತಿಯನ್ನು ನಿರ್ವಚಿಸುತ್ತವೆ. ಭಾಷೆ ವ್ಯಾವಹಾರಿಕ ನೆಲೆಯಿಂದ ಸಿಡಿದು ಸಾಮಾಜಿಕ ಚಿಂತನೆಯ ನೆಲೆಯಲ್ಲಿ ಪ್ರವೇಶಿಸುತ್ತದೆ. ಸರಳತೆ, ಸ್ಪಷ್ಟತೆಗಳಿಗೆ ಒತ್ತುಕೊಡುವ ನಿರೂಪಣ ವಿಧಾನವನ್ನು ಕವಿ ಬೆಂಬಲಿಸಿರುವುದು ಇಲ್ಲಿ ಸ್ಪಷ್ಟವಾಗಿದೆ. ತನ್ನ ಕಾಲದ ಸಾಮಾಜಿಕ ಮತ್ತು ಪರಿಸರದ ಸಮಸ್ಯೆಗಳಿಗೆ ಸ್ಪಂದಿಸದೆ ಬರಿಯ ಶಾಸ್ತೋಕ್ತ ಅಲಂಕಾರಗಳನ್ನು ವರ್ಣಿಸುವ ನಿರ್ಜನ ಭಾಷಾ ಪ್ರೌಢಿಮೆ ದಾಸರಿಗೆ ಹಿಡಿಸುವುದಿಲ್ಲ. ಶಬ್ದಸ್ಪೋಟದಿಂದ ಸಮಾಹಿಕ ದರ್ಶನವಾಗುತ್ತದೆಂಬ ತಾತ್ತ್ವಿಕ ವಿವೇಚನೆ ಕೀರ್ತನೆಗಳ ರಚನೆಗೆ ಒಂದು ಪ್ರಭಲವಾದ ಕಾರಣವೆನಿಸುತ್ತದೆ. ಬಳಸುವ ಶಬ್ದಗಳ ಹಿಂದೆ ಸೂಕ್ತವಾದ ಅರ್ಥವಂತಿಕೆ ತುಂಬಿರಬೇಕೆಂದು ದಾಸರು ನಂಬಿದ್ದಾರೆ. ಶಬ್ದಾರ್ಥಗಳ ಬಳಕೆಯಲ್ಲಿ ಪ್ರಾಮಾಣಿಕತೆಯ ಕಡೆಗೆ ಅವರು ಒತ್ತು ಕೊಡುತ್ತಾರೆ. ಸಾಹಿತ್ಯ ಸಮಾಜದ ಪ್ರತಿಬಿಂಬ ಎನ್ನುವುದು ಕೀರ್ತನೆಗಳಲ್ಲಿ ಸೊಗಸಾಗಿ ವ್ಯಕ್ತವಾಗಿದೆ. ಸಮಾಜದ ವಸ್ತು ಸ್ಥಿತಿಯನ್ನೇ ಸಹೃದಯರ ಮುಂದೆ ತೆರೆದಿಡುತ್ತಾರೆ.

ಹೆಣ್ಣು ಕೊಟ್ಟತ್ತೆ ಮಾವಂದಿರ ಮನೆಯಲ್ಲಿ
ಸೇರಿ ಇರುವರೆ ಎಲೆ ಮನುಜ
ಬಂದ ಮೊದಲು ಇತ್ತ ಬನ್ನಿಕುಳ್ಳಿರೆಂದು ಬಲು ಉಪಚರಿಸುವರು
ಅಂದಿನ ಮರುದಿನ ಬಂದ ಸ್ನೇಹಿತರನ್ನು ಕಂಡಂತೆ ಕಾಣುವರೊ
ಬಂದ ಮೂರರಲ್ಲಿ ಪರದೇಶಿಯ ಕಂಡಂತೆ ಸಡ್ಡೆ ಮಾಡದೆ ಇಹರೊ
ಮುದದಿಂದ ನಾಲ್ಕು ದಿವಸವಿದ್ದರೆ ಮಾನಭಂಗ ಮಾಡಿ ಮಾತಾಡುವರೋ

ಸ್ವಾಭಿಮಾನರಹಿತ ವ್ಯಕ್ತಿಯೊಬ್ಬ ಅತ್ತೆಮಾವಂದಿರರ ಮನೆಯಲ್ಲಿ ನೆಲೆಸಿದಾರ ಅಲ್ಲಿ ಅವನಿಗಾದ ದುಸ್ಥಿತಿಯನ್ನು ಈ ಕೀರ್ತನೆಯಲ್ಲಿ ಪುರಂದರ ದಾಸರು ಸೊಗಸಾಗಿ ಹೇಳಿದ್ದಾರೆ. ಕನಕದಾಸರು ’ವರಕವಿಗಳ ಮುಂದೆ’ ಎಂಬ ಕೀರ್ತನೆಯಲ್ಲಿ ಇಂತಹದೆ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ’ಬಡತನ ಬಂದಾಗ ನೆಂಟರ ಬಾಗಿಲ ಸೇರಬಾರದು’ ಎಂದು ಸೂಚಿಸಿದ್ದಾರೆ. ಇಲ್ಲಿ ಭಾಷೆ ಅಪಾರ ಅನುಭವದ ಪರಿಣಾಮವಾಗಿ ರೂಪುಗೊಂಡಿದೆ. ಅನುಭವ ಜನ್ಮದ ಇಂತಹ ಕೀರ್ತನೆಗಳಲ್ಲಿ ಭಾಷೆ ಅರ್ಥಪೂರ್ಣವಾಗಿ ಬಳಕೆಯಾಗಿವೆ. ಕೀರ್ತನೆಗಳ ರಚನೆ ಕನ್ನಡ ಭಾಷೆಗೆ ವಿಶಿಷ್ಟವಾಗಿದೆಯಲ್ಲದೆ, ಹೊಸ ಹೊಸ ಸಾಮಾಜಿಕ ಭಾವನೆಗಳಿಗೆ ಸ್ಪಂದಿಸಲು ಯೋಗ್ಯವಾಗಿದೆ. ಭಾಷೆ ಸಮುದಾಯದೊಂದಿಗೆ ಮುಖಾಮುಖಿಯಾಗಿ ತಾತ್ವಿಕ ಹೊಳಹನ್ನು ಚಿತ್ರಿಸುತ್ತದೆ. ದಾಸರು ಸಮುದಾಯವನ್ನು ಸೂಕ್ಷ್ಮ ನಿರೀಕ್ಷಣ ದೃಷ್ಟಿಯಿಂದ ನೋಡಿ ಲೋಕಜ್ಞಾನ, ಗೇಯತೆ, ಆಡುಮಾತಿನ ಲಯ ಇವುಗಳಿಂದ ಸತ್ಯವನ್ನು ಕಂಡುಕೊಳ್ಳುವ, ಕಂಡುದನ್ನು ಪ್ರಾಮಾಣಿಕವಾಗಿ ನಿರೀಕ್ಷಿಸುವ ಖಚಿತ ಉದ್ದೇಶ ಅವರಿಗಿದೆ ಎಂಬ ಅಂಶವೂ ಇದರಿಂದ ತಿಳಿದುಬರುತ್ತದೆ. ದಾಸರ ಸಾಮಾಜಿಕ ಪ್ರಜ್ಞೆ ಎರಡು ರೀತಿಯಲ್ಲಿ ಅಭಿವ್ಯಕ್ತವಾಗುತ್ತದೆ. ಮೊದಲನೆಯದು ಹಾಡು, ಎರಡನೆಯದು ಪ್ರದರ್ಶನ, ಕುಣಿಯುತ್ತ ಹಾಡಿನ ಭಾವವನ್ನು ಅಥವಾ ಕೀರ್ತನೆಯ ತಿರುಳನ್ನು ಪುನರ್ ಸೃಷ್ಟಿ ಮಾಡುತ್ತಾನೆ. ಆ ಸಂದರ್ಭದಲ್ಲಿ ಕೀರ್ತನಕಾರನ ಹಾವಭಾವವೇ ಸಹೃದಯ ಸಮುದಾಯವನ್ನು ತಲುಪುವುದು.

ದಾಸರು ತಮ್ಮ ಅನಿಸಿಕೆಗಳನ್ನು ,ದರ್ಶನವನ್ನು ಕೀರ್ತನೆಗಳ ಮೂಲಕ ಅಭಿವ್ಯಕ್ತಿಸಿದರು. ಈ ಕಾರಣಕ್ಕಾಗಿಯೇ ಕೀರ್ತನೆಗಳ ಭಾಷೆಯಲ್ಲಿ ದೇವರು-ಭಕ್ತರ ನಡುವೆ ನಡೆಯುವ ಸಂಭಾಷಣೆಯಲ್ಲಿ ಆತ್ಮೀಯವೆನ್ನಬಹುದಾದ ತೀವ್ರತೆಯಿಂದೆ; ಕಳಕಳಿಯಿದೆ. ಇಲ್ಲಿ ಒಂದು ಅಂಶವನ್ನು ಮತ್ತೆ ಸ್ಪಷ್ಟಪಡಿಸಬೇಕಾಗಿದೆ. ಭಾಷೆಯಲ್ಲಿ ಬಳಸುವ ಶಬ್ದಕ್ಕೂ ಅದು ಸೂಚಿಸುವ ಅರ್ಥಕ್ಕೂ ಯಾವ ಸಂಬಂಧವೂ ಇಲ್ಲ ಎಂಬುದನ್ನು ಭಾಷಾ ವಿಜ್ಞಾನಿಗಳು ಬಲ್ಲರು. ದಾಸರು ಶಬ್ದ ಮತ್ತು ಅರ್ಥಗಳ ಸ್ವರೂಪವನ್ನು ತಮ್ಮದೇ ಆದ ಶೋಧನೆಯ ಪಥದಿಂದ ಕಂಡುಕೊಂಡಿದ್ದಾರೆ. ಕೀರ್ತನೆಗಳ ರಚನೆಯ ಹಿಂದೆ ಇಂತಹದೊಂದು ಚಿಂತನೆಯಿದೆ ಬಹುಶಃ ಸಮಾಜದಲ್ಲಿ ಶಬ್ದಾರ್ಥಗಳ ಹಿನ್ನೆಲೆಯಲ್ಲಿ ಈ ಬಗೆಯ ಆಲೋಚನೆ ಸಮೂಹ ಪ್ರಜ್ಞೆಯಲ್ಲಿ ಮೂಡಿಬಂದಿರಬೇಕು. ಈ ಸಮೂಹ ಪ್ರಜ್ಞೆಗೆ ದಾಸರು ಸರಿಯಾಗಿ ಸ್ಪಂದಿಸಿದ್ದಾರೆ.

ಕೀರ್ತನೆಗಳ ಸ್ವರೂಪವು ವಿಶೇಷವಾದದ್ದಾಗಿದೆ. ದಾಸರು ಬಾಯಿ ಮಾತನ್ನೇ ಅವಲಂಬಿಸಿ ತಮ್ಮ ಅನುಭವಕ್ಕೆ ಅಭಿವ್ಯಕ್ತಿಯನ್ನು ಕೊಟ್ಟರು. ನಮ್ಮ ಮಾತುಗಾರಿಕೆ ಮೂರ್ತರೂಪ ತಾಳಬೇಕಾದರೆ ಬರಬಣಿಗೆ ಬೇಕಾಗುತ್ತದೆ. ದಾಸರು ಬಾಯಿ ಮಾತಿನಲ್ಲಿ ಹೇಳಿದ್ದನ್ನು ಇದು ವಚನಗಳಲಿ ಬರೆದಿಟ್ಟುಕೊಳ್ಳುವ ವ್ಯವಸ್ಥೆ ಆಗ ಇತ್ತೆಂದು ಕಾಣುತ್ತದೆ. ಆ ವ್ಯವಸ್ಥೆ ಇಲ್ಲದಿದ್ದರೆ ಕೀರ್ತನೆಗಳು ಈಗ ಲಭ್ಯವಾಗುತ್ತಿರಲಿಲ್ಲ. ಇದು ಅಷ್ಟು ಮಹತ್ವದ ಸಂಗತಿಯಲ್ಲ. ದಾಸರ ಕೀರ್ತನೆಗಳು ಮುಖ್ಯವಾಗಿ ಬಾಯಿ ಮಾತಿನ ರೂಪಗಳಾಗಿವೆ. ನಮ್ಮ ನಾಡಿಅಲ್ಲೆ ಬರವಣಿಗೆಯ ಸಂಪ್ರದಾಯಕ್ಕಿಂತ ಬಾಯಿ ಮಾತಿನ ಸಂಪ್ರದಾಯ ಹೆಚ್ಚು ಗಟ್ಟಿ ಮುಟ್ಟಾಗಿರುವುದರಿಂದ ಕೀರ್ತನೆಗಳು ಇಂದಿಗೂ ಉಳಿದುಕೊಂಡು ಬೆಳೆದುಕೊಂಡು ಬಂದಿವೆ ಎಂಬುದು ಗಮನಿಸಬೇಕಾದ ಅಂಶ.

ದಾಸರ ಕೀರ್ತನೆಗಳ ಇನ್ನೊಂದು ಮುಖ ಅವರ ಭಾಷೆಯ ಬಳಕೆಯಲ್ಲಿದೆ. ಪಾದದ ನಿಯತತೆ, ಪ್ರಾಸದ ಕಟ್ಟು, ಸಂಸ್ಕೃತ ಸಮಾಸಗಳ ಹೆಣಿಗೆ, ಪೆಡಸು ಶೈಲಿ ಈ ಎಲ್ಲ ಬಂಧಗಳಿಂದ ಪಾರಾಗಲು ಅವರು ದೇಸಿ ಮಾದರಿಯ ಕೀರ್ತನ ಉಗಾಭೋಗ, ಸುಳಾದಿ ಮುಂತಾದ ರೂಪಗಳನ್ನು ಬಳಸಿಕೊಂಡರು. ಪದ್ಯದ ಅಂತಃ ಸ್ವರೂಪವನ್ನು ಕಾಯ್ದುಕೊಂಡು ಗದ್ಯದ ಲಯವನ್ನು ಮೆರೆಯುವ ಕೀರ್ತನೆಗಳು ಅವರ ಅಭಿವ್ಯಕ್ತಿಗೆ ಸೂಕ್ತ ಮಾಧ್ಯಮವಾಯಿತು. ಸವೆದ ದಾರಿಯಾಗಿದ್ದ್ದ ಸಿದ್ಧ ಶೈಲಿಯನ್ನು ಬಿಟ್ಟು ಶೈಲಿಯನ್ನು ಬಿಟ್ಟು ಶಾಸ್ತ್ರ ಸಂಕಲೆಯಿಂದ ಕಳಚಿ ಕೊಂಡ ಮುಕ್ತಗೇಯ ರಚನೆಗಳನ್ನು ಸೃಷ್ಟಿಸಿಕೊಂಡರು. ಆಡುಮಾತಿನ ಧಾಟಿಯನ್ನು ವಿಶೇಷವಾಗಿ ಹಿಡಿದಿಟ್ಟರು.

ಅಕೋ                      ತರಿದ್ಯೊ                              ಎಂಬೋ
ಬ್ಯಾಡ                       ಮೀರಿದ್ಯ                              ಹೇಳ್ವ
ಮ್ಯಾಲೆ                      ಸೇರಿದ್ಯ                     ಮಾಡ್ಯಾರೊ
ನೀನಾಕೋ                 ಉಂಬೋ                  ತಕ್ಕೊಂಡು
ನೀನಾದ್ಯೋ                ತಿಂಬೋ                              ಎಂಧೇಳಿ
ಗಳಿಸಿಕೊಳ್ಳಿರೊ            ಹೊಡೆದಾಡದಿರೊ                    ಹ್ಯಾಂಗೆ

ಮುಂತಾದ ವಿಶಿಷ್ಟ ರಚನೆಯ ನುಡಿಗಳನ್ನು ಬಳಸಿದ್ದಾರೆ. ಇಲ್ಲಿಯ ಒಂದೊಂದು ಮಾತು ಕ್ರಿಯಾವಾಚಿಗಳಾಗಿಯೇ ಉಳಿಯದೆ, ಕ್ರಿಯೆಗಳಾಗಿ ಪರಿಣಮಿಸುತ್ತದೆ. ಕೀರ್ತನೆಗಳ ಪಂಕ್ತಿಗಳು ಅರ್ಥ, ಲಯಕ್ಕೆ ಅನುಗುಣವಾಗಿ ಪುನರಾವರ್ತನೆಯಾಗುವ ರೀತಿ ಸಂವಾದ ಕೌಶಲ್ಯದ ದೃಷ್ಟಿಯಿಂದ ಔಚಿತ್ಯಪೂರ್ಣವಾಗಿದೆ. ಅಯ್ಯ, ಅಣ್ಣ, ಅಪ್ಪ, ಅಣ್ಣಯ್ಯ, ಅಪಯ್ಯ, ಮಾವಯ್ಯ, ಕಂದಾ ಮುಂತಾದ ಸಂಬೋಧನೆಗಳು ದಾಸ ಸಾಹಿತ್ಯದ ಭಾಷೆಯ ಮೆರುಗಿನ ಅಂಶಗಳಾಗಿವೆ. ಸಂದರ್ಭಕ್ಕೆ ತಕ್ಕಂತೆ ಭಾಷೆಯನ್ನು ಬಳಸುವುದು ಗಮನಾರ್ಹ ಅಂಶ, ಪುರಂದರ ದಾಸರ ಬುಡಬುಡಿಕೆಯ ಪದದಲ್ಲಿ ಬುಡಬುಡಿಕೆಯ ಭಾಷೆ, ಪ್ರಸನ್ನ ವೆಂಕಟದಾಸರ ಬಾಲಕೃಷ್ಣನ ವರ್ಣನೆಯಲ್ಲಿ ಬಾಲಭಾಷೆ ಬಳಕೆಯಾಗಿದೆ. ದಾಸರ ಚಿಂತನೆಯಲ್ಲಿ ತಾರ್ಕಿಕತೆಯಿರುವುದರಿಂದ ಬಳ್ಳಿಯಿಂದ ಹೂ ಅರಳಿದಂತೆ ಒಂದು ಮತ್ತೊಂದಕ್ಕೆ ಪೂರಕ ಪೋಷಕವಾಗಿ ವಿಚಾರಗಳು ಹೊರಹೊಮ್ಮುತ್ತವೆ. ಪ್ರಥಮ ಘಟ್ಟದ ಹರಿದಾಸರಾದ ಶ್ರೀಪಾದರಾಜ, ವ್ಯಾಸರಾಯ, ವಾದಿರಾಜ ಹಾಗೂ ದ್ವಿತೀಯ ಘಟ್ಟದ ದಾಸರಾದ ವಿಜಯದಾಸ, ಜಗನ್ನಾಥದಾಸ, ಗೋಪಾಲದಾಸ ಇವರ ಕೀರ್ತನೆಗಳ ಭಾಷೆ ಬಳಕೆಯಲ್ಲಿ ಸ್ವಲ್ಪ ಪೆಡಸು ಶೈಲಿ ಮತ್ತು ಸಂಸ್ಕೃತ ಮಿಶ್ರಣವಿರುವಂತೆ, ಮಿಕ್ಕ ದಾಸರ ಕೀರ್ತನೆಗಳ ಭಾಷಾ ಬಳಕೆಯಲ್ಲಿ ಆಡುಮಾತಿನ ಛಾಯೆ ಎದ್ದು ಕಾಣುತ್ತದೆ. ಸ್ಥೂಲವಾಗಿ ಹೇಳುವುದಾದರೆ ದಾಸರ ರಚನೆಗಳಲ್ಲಿ ಪುಟ್ಟ ಪುಟ್ಟ ವಾಕ್ಯಗಳು; ಅಪ್ಪಟ ಕನ್ನಡ ಮಾತುಗಳೇ ಅಧಿಕ. ಕ್ರಿಯೆಯನ್ನು ನಿರ್ವಿಘ್ನವಾಗಿ ಮುಂದೆ ಮುಂದೆ ಹರಿಸುವ ಚಾಲನ ಶಕ್ತಿಯಾಗಿ ಇಲ್ಲಿಯ ಭಾಷೆ ಮೂಡಿದೆ.

ಕನ್ನಡ ಅನುಭಾವ ಸಾಹಿತ್ಯದಲ್ಲಿ ವಚನ ಸಾಹಿತ್ಯದ ನಂತರದ ಕಾಲದಲ್ಲಿ ದಾಸ ಸಾಹಿತ್ಯ ಕಣ್ಣು ಕಟ್ಟಿನಿಲ್ಲುತ್ತದೆ. ಶಿವಶರಣರಂತೆ ಹರಿದಾಸರು ಭಕ್ತಿ ಪ್ರಧಾನ ಸಾಹಿತ್ಯವನ್ನು ವಿಪುಲವಾಗಿ ನಿರ್ಮಿಸಿದರು. ತಿಳಿಯಾದ ನಿರೂಪಣೆ, ಹೃದಯ ವೈಶಾಲ್ಯ, ಆಡುಮಾತಿನ ಲಯ ಇವು ದಾಸ ಸಾಹಿತ್ಯದ ಜನಪ್ರಿಯತೆಗೆ ಕಾರಣಗಳು. ಸುಮಾರು ಐದು ಶತಮಾನಗಳ ವ್ಯಾಪ್ತಿಯ ಈ ಭಕ್ತಿ ಸಾಹಿತ್ಯವನ್ನು ಹಲವಾರು ಹರಿದಾಸರು ಪೋಷಿಸಿ, ಬೆಳೆಸಿದರು. ಹದಿನೈದನೆಯ ಶತಮಾನದಲಿ ಅಂಕುರಿಸಿದ ದಾಸ ಪರಂಪರೆ ಮಧ್ಯ ಮಧ್ಯದಲ್ಲಿ ಮುಗ್ಗರಿಸಿದರೂ ಹದಿನೆಂಟನೆಯ ಶತಮಾನದ ವರೆಗೆ ಜೀವಂತ ಶಕ್ತಿಯಾಗಿ ಕಾರ್ಯನಿರ್ವಹಿಸಿ ಕನ್ನಡ ಸಾಹಿತ್ಯಕ್ಕೆ ಬೆಲೆಯುಳ್ಳ ಕೊಡುಗೆ ನೀಡಿದೆ.