1

ನ್ನಡ ನಾಡಿನಲ್ಲಿ ಹರಿದಾಸರು ಸಮುದಾಯ ಜೀವನದ ಮೇಲೆ ತಮ್ಮ ಪ್ರಭಾವ ಮೂಡಿಸಿ, ಕನ್ನಡ ನುಡಿಯನ್ನು ತಮ್ಮದೇ ಕೊಡುಗೆಯಿಂದ ಸಿಂಗರಿಸಿ, ತಮ್ಮ ನಡೆ-ನುಡಿ ಆಚಾರ-ವಿಚಾರಗಳಿಂದ ನಾಡಿನ ಸಂಸ್ಕೃತಿಯನ್ನು ಹಿಗ್ಗಿಸಿದ ಘಟ್ಟವೊಂದಿದ್ದಿತು. ಕ್ರಿ.ಶ. ೧೪೦೪ರಲ್ಲಿ ಹುಟ್ಟಿದ ಶ್ರೀಪಾದರಾಜರಿಂದ ಈ ಘಟ್ಟವು ಮೊದಲಾಯಿತೆನ್ನಬಹುದು; ೧೫೬೪ರಲ್ಲಿ ತೀರಿಕೊಂಡ ಪುರಂದರದಾಸರ ಕಾಲದಲ್ಲಿ ಇದು ಮುಗಿಲು ಮುಟ್ಟಿತು. ಮುಂದೆ ೧೮೦೯ರಲ್ಲಿ ದೇಹವಿಟ್ಟ ಜಗನ್ನಾಥದಾಸರ ಕಾಲದವರೆಗೂ ಈ ಘಟ್ಟ ಮುಂದುವರಿಯಿತು. ಇದೇನು ಇದ್ದಕ್ಕಿದ್ದಂತೆ ಎದ್ದುಕೊಳ್ಳಲಿಲ್ಲ; ಇದ್ದಕ್ಕಿದ್ದಂತೆ ಕಣ್ಮರೆಯಾಗಲೂ ಇಲ್ಲ. ಶ್ರೀಪಾದರಾಜರಿಗೆ ಮೊದಲೇ, ಎಂದರೆ ಸುಮಾರು ಆರುನೂರು ವರ್ಷಗಳ ಹಿಂದೆಯೇ ಇದರ ಉಗಮವನ್ನು ಗುರುತಿಸಬಹುದು. ಜಗನ್ನಾಥ ದಾಸರನಂತರವೂ ಇದು ಉಳಿದುಕೊಂಡು ಬಂದಿತು. ಇಂದಿಗೂ ಪೂರ್ಣವಾಗಿ ಮರೆಯಾಗಿಲ್ಲ. ಆದರೆ ಈ ಘಟ್ಟವೆಂಬುದೊಂದು ಪರ್ವಕಾಲ. ಆಗ ಹುಟ್ಟಿಕೊಂಡ ಸಾಹಿತ್ಯ, ಸೂಚನೆಗೊಂಡ ಸುಧಾರಣೆಗಳು ಬೇರೂರಿಕೊಂಡ ಸಾಂಸ್ಕೃತಿಕ ಪ್ರಕಾರ ಇವು ನಾಡಿನ ಜನರಿಗೆ ಇಂದಿಗೂ ಪ್ರಸಕ್ತವಾಗುತ್ತವೆ.

ಕನ್ನಡ ನಾಡಿನ ಜನಜೀವನದಲ್ಲಿ ಹರಿದಾಸರು ಕೈಕೊಂಡ ಕೆಲಸ, ಗಳಿಸಿದ ಗೆಲುವು, ತೋರಿದ ದಾರಿ, ಸಿದ್ಧಪಡಿಸಿದ ಸಾಹಿತ್ಯ ಇವುಗಳ ಹೆಗ್ಗಳಿಕೆಯನ್ನು ಗುರುತಿಸಬೇಕೆಂದರೆ ಈ ಪರ್ವಕಾಲದಲ್ಲೂ ಪುರಂದರದಾಸರು ಬದುಕಿನ ಸಮಯವನ್ನೇ (೧೯೮೦-೧೫೬೪) ನೋಡಬೇಕಾಗುತ್ತದೆ. ನೂರಾರು ದಾಸರ ಉಲ್ಲೇಖವಿದ್ದರೂ ಹತ್ತಾರು ದಾಸರ ರಚನೆಗಳು ಉಪಲಬ್ಧವಿದ್ದರೂ, ’ದಾಸರೆಂದರೆ ಪುರಂದರ ದಾಸರಯ್ಯಾ’ ಎಂದು ಅವರ ಗುರುಗಳಾದ ವ್ಯಾಸತೀರ್ಥರೇ ಹೇಳಿದ್ದು ಈ ಸಂದರ್ಭದಲ್ಲಿಯೂ ಸರಿಯಾದುದೇ. ಈ ಪರ್ವಕಾಲವನ್ನು ಅಧ್ಯಯನ ಮಾಡುವಾಗಲೂ ಪುರಂದರದಾಸರಿಗೆ ಮೊದಲು, ಪುರಂದರದಾಸರ ಕಾಲ. ಪುರಂದರದಾಸರಾದ ಮೇಲೆ ಎರಡು ಮೂರು ವಿಭಾಗಗಳನ್ನು ಮಾಡಿಕೊಳ್ಳುವುದಿದೆ. ಅದು ಸಮರ್ಪಕವಾದುದೂ ಹೌದು.

ಹರಿದಾಸಪಂಥದ ಸೊಗಡು ಶ್ರೀಪಾದರಾಜರಿಂದಲೇ (೧೪೫೦ರ ಸುಮಾರು) ಪ್ರಕಟವಾಯಿತಾದರೂ ಅದು ಮೈದುಂಬಿ ಬಂದದ್ದು ಅವರ ಶಿಷ್ಯರಾದ ವ್ಯಾಸತೀರ್ಥರ ಕಾಲದಲ್ಲಿ (೧೪೪೭-೧೫೩೯). ದಾಸಸಾಹಿತ್ಯ, ಶಾಸ್ತ್ರೀಯ ಸಂಗೀತ, ಜಾನಪದ ಕಲೆ ಇವುಗಳಿಗೆ ಒಂದಾದ ನೆಲೆಯನ್ನು ಕಾಣಿಸಿದವರು ಅವರು. ಅವರಿಗೆ ಅವರ ಕೆಲಸದಲ್ಲಿ ಎರಡು ಭುಜಗಳಂತಿದ್ದವರು ಪುರಂದರದಾಸರು, ಕನಕದಾಸರು (೧೫೦೮-೧೬೦೬) ಹರಿದಾಸ ಸಂಸ್ಕೃತಿಗೆ ಎರಡು ಕಣ್ಣುಗಳು ಇವರಿಬ್ಬರು. ಇವರಿಬ್ಬರ ಕೊಡುಗೆಗೆ, ಕಾಯಕಕ್ಕೆ ಸರಿಸಾಟಿಯಾಗಿ ಉಳಿದ ಯಾವ ದಾಸರದ್ದೂ ಇರಲಾರದು. ಹೀಗೆಂದ ಮಾತ್ರಕ್ಕೆ ಉಳಿದ ದಾಸರತ್ತ ನಾವು ಗಮನ ಹರಿಸುವ ಕೆಲಸವಿರದು ಎಂದೇನು ಅರ್ಥವಲ್ಲ. ಹರಿದಾಸಪಂಥವೆಂಬ ಆಂದೋಲನಕ್ಕೆ ಇಂಬುಕೊಟ್ಟು, ಹರಿದಾಸ್ಯವೆಂಬ ದೊಡ್ಡ ತೇರನ್ನು ಎಳೆದು ಸಾಹಿತ್ಯ ಸೇವೆ ಸಂಸ್ಕೃತಿ ಕೈಂಕರ್ಯಗಳನ್ನು ಕೈಗೂಡಿಸಿಕೊಂಡ ಹಲವರು ಹರಿದಾಸರು ನಮ್ಮ ಎಣಿಕೆಗೆ ಬರುತ್ತಾರೆ. ಅವರನ್ನು ಮರೆಯಲಾಗದು.

ಪ್ರಸಿದ್ಧರಾದ ಹರಿದಾಸರು ಜನರ ನೆನಪಿನಲ್ಲೆ ನಿಂತಿದ್ದಾರೆ ದಿಟ. ಆದರೆ ಅಜ್ಞಾತರಾದ ಅಪ್ರಸಿದ್ಧರಾದ ಎಷ್ಟೋ ಮಂದಿ ಹರಿದಾಸರಿಂದ ಆಗಾಗ, ಅಲ್ಲಲ್ಲಿ, ಅಷ್ಟಿಷ್ಟು ಜನಜಾಗ್ರತಿ ನಡೆದೇ ಇದೆ. ಈ ಮಾತು ಶಿವಶರಣರಿಗೂ, ಸಿದ್ದರಿಗೂ, ಅವಧೂತರಿಗೂ, ಸಾಧು-ಸಂತರಿಗೂ ಒಪ್ಪುತ್ತದೆ. ಊರು ಕೇರಿಗಳಲ್ಲಿ ತಿರುಗಾಡಿ ಸಜ್ಜನಿಕೆಯ ಬೆಳಕನ್ನು ಜನಸಾಮಾನ್ಯರ ನಡುವೆ ಬೆಳಗಿಸಿ, ಅದರಿಂದಲೇ ಕೃತಾರ್ಥರಾದ ಇಂಥವರಿಂದಲೇ ನಾಡಿನ ಸಂಸ್ಕೃತಿ ಊರ್ಜಿತವಾಗಿರುವುದು. ಇವರಿಗೆ ಜಾತಿ-ಮತ, ಪಂಥ-ಪರಂಪರೆ, ಶಾಸ್ತ್ರ-ಸಂಬಂಧವು ಇವು ಯಾವುವೂ ಅಡ್ಡಗೋಡೆಗಳಾಗಲಿಲ್ಲ. ಈ ಕೆಲಸ ಹೆಸರುಗೊಂಡ ನೇತಾರರಿಂದ ನಡೆಯಲಿಲ್ಲ. ಪಟ್ಟಭದ್ರ ಮಠಮಾನ್ಯರಿಂದ ನಡೆಯಲಿಲ್ಲ.

ಹರಿದಾಸರು ಕೈಗೊಂಡ ಕೆಲಸ ನಡೆದದ್ದು ಜನಸಾಮಾನ್ಯರ ನಡುವೆಯೇ ಜನಸಾಮಾನ್ಯರ ಸಲುವಾಗಿಯೇ, ಜನಸಾಮಾನ್ಯರ ನೆಲೆಯಲ್ಲಿಯೇ; ಹರಿದಾಸರೂ ಜನಸಾಮಾನ್ಯರೇ. ಇದು ಮುಖ್ಯವಾದ ವಿಚಾರ, ಅವರು ಜನಸಾಮಾನ್ಯರ ಅರಿವಿಗೆ ಬರುವಂಥ ಕನ್ನಡ ನುಡಿಯನ್ನೇ ಬಳಸಿಕೊಂಡರು; ಜನರ ದಿನನಿತ್ಯದ ಬದುಕಿನ ವಿಚಾರಗಳನ್ನೇ ಎತ್ತಿಕೊಂಡರು. ನುಡಿಕಟ್ಟಿನಲ್ಲಿಯೂ ಕ್ಲಿಷ್ಟತೆಯನ್ನು ಕೈಬಿಟ್ಟರು; ಸರಳತೆಗೆ ಒಲಿದರು. ತಾವು ಪಂಡಿತರಾದರೂ, ಜನರೆದುರು ತಮ್ಮ ಪಾಂಡಿತ್ಯವನ್ನು ಮೆರೆಯಲಿಲ್ಲ. ತಮ್ಮ ಮಾತುಗಳಿಗೆ ಶಾಸ್ತ್ರದ ಒತ್ತಾಸೆಯಿದ್ದರೂ ಶಾಸ್ತ್ರದ ಸೊಲ್ಲನ್ನು ಎತ್ತಿ ಹಿಡಿಯಲಿಲ್ಲ. ಆಧ್ಯಾತ್ಮವು ಜನರಿಗೆ ದಕ್ಕಬೇಕೆಂದೇ ಅವರು ದಾಸರಾದುದು. ಪಂಡಿತರೂ ಶಾಸ್ತ್ರವೇತ್ತರೂ ಅದುವರೆಗೆ ಆಧ್ಯಾತ್ಮವನ್ನು ಜನರಿಂದ ದೂರ ಮಾಡಿದ್ದುದನ್ನು ಕಂಡಿದ್ದವರು ಹರಿದಾಸರು. ಆ ದೋಷವನ್ನು ದೂರ ಮಾಡಲು ತೊಡಗಿದವರು ಅವರು.

ದಾಸಕೂಟ ಎಂಬ ಮಾತು ವಾಡಿಕೆಯಲ್ಲಿದೆಯಷ್ಟೆ? ಇದಕ್ಕೆ ಪ್ರತಿಯೋಗಿಯಾಗಿ ವ್ಯಾಸಕೂಟ ಎಂಬುದೂ ಬಳಕೆಯಲ್ಲಿದೆ. ದಿಟವಾಗಿ ಇವೇನು ಇದ್ದಂಥ ವ್ಯವಸ್ಥೆಯಲ್ಲ. ವ್ಯಾಸಕೂಟವೆಂಬ ಮಾತಿನ ಧ್ವನಿ ವೇದವ್ಯಾಸರು ಸಿದ್ಧಪಡಿಸಿದ ಬ್ರಹ್ಮ ಸೂತ್ರಗಳನ್ನು ಹಿಡಿದು. ಅದಕ್ಕೆ ಮಧ್ವಾಚಾರ್ಯರು ರಚಿಸಿರುವ ಭಾಷ್ಯ-ಅನುವ್ಯಾಖ್ಯಾನ ಮೊದಲಾದ ಗ್ರಂಥಗಳನ್ನೂ ಅವುಗಳಿಗೆ ಜನತೀರ್ಥರೇ ಮೊದಲಾದವರು ಒದಗಿಸಿರುವ ಟೀಕೆ ಟಿಪ್ಪಣೆಗಳನ್ನೂ ಅಧ್ಯಯನ ಮಾಡುತ್ತ, ಅಲ್ಲಿರುವ ಸಿದ್ಧಾಂತಗಳನ್ನು ಸಮರ್ಥಿಸುತ್ತ ಇರುವ ಪಂಡಿತರ ತಂಡ. ಇದಕ್ಕೆ ಕಾಲ-ದೇಶಗಳ ಭೇದವಿರದು. ವ್ಯಾಸತೀರ್ಥರ ಕಾಲದಲ್ಲಿಯೂ ಇದು, ವ್ಯಾಸಕೂಟವೆನಿಸಿಕೊಂಡಿತೋ ಏನೋ. ಮಧ್ವಾಚಾರ್ಯರ ಉಪಾಸನೆಯ ಎರಡು ಬಗೆಗಳನ್ನು ಹೇಳಿದರು. ಒಂದು ಶಾಸ್ತ್ರಾವಮರ್ಶನ ಇನ್ನೊಂದು ಧ್ಯಾನ. ಮೊದಲನೆಯ ಬಗೆಯನ್ನು ಹಿಡಿದವರು ವ್ಯಾಸಕೂಟದವರು. ಹಾಗೆ ಮಾಡದೆ ಭಾಗವತರಾಗಿ ಭಕ್ತಿಯೊಂದನ್ನೆ ಹಿಡಿದವರು ದಾಸರು.

ಆದರೆ ಇದೇನು ಖಂಡತುಂಡಾದ ವಿಭಾಗವಲ್ಲ. ಪೇಜಾವರ ಮಠಾಧೀಶರಾಗಿದ್ದ ವಿಜಯಧ್ವಜತೀರ್ಥರು ಭಾಗವತಕ್ಕೆ ವ್ಯಾಖ್ಯಾನವನ್ನು ರಚಿಸಿ ಭಾಗವತ ಧರ್ಮವನ್ನೇ ಎತ್ತಿಹಿಡಿದರು. ಸೋದೆಮಠದ ವಾದಿರಾಜಸ್ವಾಮಿಗಳು ಮಠಾಧೀಶರಾಗಿದ್ದರೂ ಹರಿದಾಸರಲ್ಲಿ ಅಗ್ರಮಾನ್ಯರು. ದಾಸಸಾಹಿತ್ಯಕ್ಕೆ ಅವರ ಕೊಡುಗೆ ವಿಶಿಷ್ಟವಾದುದು. ಉಡುಪಿಯ ಹಲವು ಮಠಗಳಲ್ಲಿ ಹರಿದಾಸರಿಗೆ ಮರ್ಯಾದೆಯ ಸ್ಥಾನವುಂಟು; ಪೂಜೆಯಲ್ಲಿ ಅವರು ಪಾಲ್ಗೊಳ್ಳುವುದುಂಟು. ಆದರೂ ಪಂಡಿತರು ಬೇರೆ, ದಾಸರು ಬೇರೆ ಎಂಬ ಎಣಿಕೆಯೇನೋ ಇದ್ದೇ ಇದೆ. ಪಂಡಿತರು ದಾಸರಾಗಿರುವುದೂ, ದಾಸರು ಪಂಡಿತರಾಗಿರುವುದೂ ಅಸಂಭವವೇ ನಿಲ್ಲದಿದ್ದರೂ ಬಹುಮಟ್ಟಿಗೆ ಕಾಣಸಿಗುವುದಿಲ್ಲವೆಂಬುದು ದಿಟ. ದಾಸರು ಜನರೊಂದಿಗೆ ಬೆರೆತುಕೊಂಡು ಆಧ್ಯಾತ್ಮದ ಒಲವನ್ನು ಅವರ ನೆಲೆಯಲ್ಲೇ ಅವರಲ್ಲಿ ಒಡಮೂಡಿಸಿದರು. ಪಂಡಿತರಾದರೋ ಜನರಿಂದ ದೂರ ನಿಂತು ಅವರ ಮೇಲೆ ಇರುವವರು ಎಂಬುವಂತೆ ತೋರಿಕೊಂಡು ಮೇಲಿನ ನೆಲೆಯಿಂದ ಆಧ್ಯಾತ್ಮವನ್ನು ಉಪದೇಶಿಸಿದರು; ಅವರ ಬೋಧನೆ ನಿರರ್ಥಕವಾದುದು ಸೋಜಿಗವೇನಲ್ಲ!

ಅದು ಏನಾದರಿರಲಿ, ವಾಡಿಕೆಯಲ್ಲಿ ಬಂದ ವ್ಯಾಸಕೂಟ-ದಾಸಕೂಟಗಳ ನಡುವೆ ಇದ್ದ ಅಂತರವನ್ನು ಅರಿತುಕೊಳ್ಳಬೇಕು. ದಾಸಕೂಟವೆಂಬ ಕಲ್ಪನೆಗೆ ಕಾರಣರಾದವರು ವ್ಯಾಸ ತೀರ್ಥರೇ; ಅವರ ಕಣ್ಮಣಿಗಳಾಗಿದ್ದವರು ಪುರಂದರದಾಸರು, ಕನಕದಾಸರು. ಇವರಿಬ್ಬರ ದಾರಿಯನ್ನು ಹಿಡಿದ ಹರಿದಾಸರಿಗೊಂದು ನೆಲೆಯನ್ನು ಕಲ್ಪಿಸಿಕೊಡುವುದು ಅವರ ಆಶಯವಾಗಿದ್ದಿತು. ಆದರೆ ಅವರು ಸಂಪ್ರದಾಯವೊಂದರ ಮಠಾಧೀಶರೂ ಆಗಿದ್ದವರು. ಮಠದ ಆಡಳಿತ ವ್ಯವಸ್ಥೆಯ ಅಧಿಕಾರವಿದ್ದುದು ಹರಿದಾಸರಲ್ಲದವರ ಕೈಯಲ್ಲಿಯೇ. ಮಠಾಧೀಶರು ತಾವೇ ಹರಿದಾಸರಂತೆ ತೋರಿಕೊಂಡು, ಹರಿದಾಸರನ್ನು ಆದರಿಸಿ, ಅವರೊಂದಿಗೇ ಇರ ತೊಡಗಿದಾಗ ಮಠದ ಅಧಿಕಾರಿಗೆ ಕಸಿವಿಸಿಯಾದುದು ಸಹಜವೇ. ಮಠದ ಪಂಡಿತರು ಅಧಿಕಾರಿಗಳನ್ನು ಆಶ್ರಯಿಸುತ್ತಿದ್ದರು; ಎಷ್ಟು ವೈದಿಕರಾದರೂ ವ್ಯವಹಾರದಲ್ಲಿ ಲೌಕಿಕರೇ. ಆದರೆ ಹರಿದಾಸರೇನು ಮಠದ ಅಧಿಕಾರಿಗಳನ್ನು ಓಲೈಸುವವರಲ್ಲ. ಅರಸನ ಓಲಗದಿಂದಲೇ ದೂರ ಇರುವವರು ಅವರು; ಅವರಿಗೆ ಅಧಿಕಾರಿಗಳಿಂದ ಆಗಬೇಕಾದುದೇನು? ಪರಮಾರ್ಥನ ನೆವದಿಂದ ವ್ಯವಹಾರದಲ್ಲೇ ಇರುವವರು ಪಂಡಿತರು; ವ್ಯವಹಾರದಲ್ಲಿದ್ದರೂ ಪರಮಾರ್ಥನನ್ನೆ ನಂಬಿಕೊಂಡವರು ಹರಿದಾಸರು. ತಮ್ಮ ನೆಲೆಯನ್ನು ತಮಗಾಗಿ ಗಟ್ಟಿಗೊಳಿಸಿಕೊಳ್ಳುವ ಹಂಬಲ ಅವರದ್ದು ಬೇರೆಯವರಿಗೂ ಆಧ್ಯಾತ್ಮದಲ್ಲಿ ರುಚಿ ಬರಲೆಂಬ ಬಯಕೆ ಇವರದ್ದು ಹೀಗೆ ವ್ಯಾಸಕೂಟದವರದ್ದು ಸ್ವಾರ್ಥ; ದಾಸಕೂಟದವರದ್ದು ಪರಾರ್ಥ.

ವ್ಯಾಸಕೂಟದವರಿಗೆ ಶಾಸ್ತ್ರವೊಂದೇ ಆಸರೆ; ಜ್ಞಾನವನ್ನು ಬಯಸಿದರೂ ಆಚಾರದಲ್ಲಿ ಕರ್ಮಠರು; ಅವರದ್ದು ಮಡಿವಂತಿಕೆ. ಬಹುವೇಳೆ ಅದು ತೋರಿಕೆಯಷ್ಟೆ. ಆದರೂ ಅವರಿಗೆ ವಿಚಾರ ಮಾಡಲು ಅಂಜಿಕೆ, ಹರಿದಾಸರಿಗೆ ಭಗವದನುಭವ ಮುಖ್ಯ; ಶಾಸ್ತ್ರ ಅದಕ್ಕೆ ನೆರವಾದರೆ ಸರಿ, ಶಾಸ್ತ್ರದ ಪ್ರಯೋಜನ ಅಷ್ಟೇ. ಶಾಸ್ತ್ರವನ್ನೇ ತಲೆಯ ಮೇಲೇರಿಸಿಕೊಳ್ಳಲೇಕೆ? ಆಚಾರವೂ ಆಷ್ಟೆ. ಸತ್ ಪ್ರವೃತ್ತಿಗಾಗಿ ಆಚಾರ ಇರಬೇಕಷ್ಟೆ; ಆಚಾರಕ್ಕೆ ಆಚಾರ ಎನ್ನಲೇಕೆ? ’ಮಡಿ ಮಡಿಯೆಂದು ಅಡಿಗಡಿಗೆ ಹಾರುವ’ ಬಿಕನಾಸಿ ಮಡಿವಂತಿಕೆಯನ್ನು ಹರಿದಾಸರು ಮೂದಲಿಸಿದರು. ವ್ಯಾಸಕೂಟದ ಪಂಡಿತರದ್ದು. ’ಉದರ ವೈರಾಗ್ಯ’ ವೆಂದು ಬಗೆದರು. ಬರಿಯ ಆಚಾರ, ಶಾಸ್ತ್ರವಿಚಾರಗಳಲ್ಲಿ ತೊಡಗಿರುವುದು ’ಹೋಗದೂರಿನ ದಾರಿ ಕೇಳಿದಂತೆ’ ಎಂದು ಪುರಂದರದಾಸರೇ ಹೇಳಿದರು. ಈ ಕಾರಣದಿಂದಲೇ ವ್ಯಾಸಕೂಟದ ವಿದ್ವಾಂಸರು ಹರಿದಾಸರನ್ನು ಅನಾಚಾರಿಗಳೆಂದು ಜರಿದು ದೂರವಿಟ್ಟರು.

ಹರಿದಾಸರೇನು ವ್ಯಾಸಕೂಟದ ಮಡಿವಂತರನ್ನು ಗೇಲಿ ಮಾಡಲು ಹಿಂಜರಿಯಲಿಲ್ಲ. ಪುರಂದರದಾಸರ ’ಗಿಳಿಯು ಪಂಜರದೊಳಿಲ್ಲ’ ಎಂಬ ಹಾಡನ್ನೇ ನೋಡಿ. ಇದೊಂದು ರೂಪಕ, ಇಲ್ಲಿ ಗಿಣಿಯೆಂದರೆ ಭಕ್ತಿ; ಭಾಗವತದಲ್ಲಿನ ಶುಕ. ಪಾಂಡಿತ್ಯದ ಪಂಜರದಲ್ಲಿಟ್ಟ ಭಕ್ತಿಯೆಂಬ ಗಿಣಿ ಅಲ್ಲಿರಲಾರದೇ ಹಾರಿ ಹೋಯಿತು! ರಾಮ ರಾಮ ಎಂಬ ಗಿಣಿ, ಒಂಬತ್ತು ಬಾಗಿಲ ಮನೆಯಲ್ಲಿ (ಎಂದರೆ ನಮ್ಮ ಶರೀರ, ’ನವದ್ವಾರೇ ಪುರೆ’) ತುಂಬಿದ ಸಂದಣಿ ಇರಲು (ಪ್ರಾಪಂಚಿಕ ವ್ಯವಹಾರ ತುಂಬಿಕೊಂಡಿರಲು, ಶಾಸ್ತ್ರ ಪ್ರಮೇಯಗಳೇ ನೆರೆದಿರಲು) ಅಂಬರಕ್ಕೆ (ಬಯಲಾಗಿ) ಹಾರಿಹೋಯಿತು. ಮಡಿವಂತರಾದ ಪಂಡಿತರ ಕೈಗೆ ಭಕ್ತಿ ಸಿಗಲಾರದು ಎಂದು ಇಲ್ಲಿನ ತಾತ್ಪರ್ಯ. ಹಾಗೆಯೇ ’ಡೊಂಕು ಬಾಲದ ನಾಯಕರು’ ವ್ಯಾಸಕೂಟದ ಹಿರಿಯರು; ಹರಿದಾಸರು ಹುಗ್ಗಿ ಮಾಡುವಲ್ಲಿ ತಗ್ಗಿಬಗ್ಗಿ ನೋಡುವವರು ಇವರು. ’ಹಿರೇ ಬೀದಿಯ ನೋಡುವವರು’, ಹಿರಿಯ ಬೀದಿಯೆಂದರೆ ಜ್ಞಾನ; ವ್ಯಾಸಕೂಟದಲ್ಲಿ ಜ್ಞಾನಕ್ಕೇ ಮನ್ನಣೆಯ ಮಣೆ. ಆದರೆ ಕರೇ ಬೂದಿಯಲ್ಲಿ ಹೊರಳುವವರು. ತಮಸ್ಸು ತುಂಬಿದ ಪ್ರಾಪಂಚಿಕ ವ್ಯವಹಾರದಲ್ಲಿ ಮುಳುಗಿರುವವರು. ಅರ್ಥವಿಲ್ಲದ ಮಡಿವಂತಿಕೆಯೇ ಅವರ ಡೊಂಕುಬಾಲ, ಬಾಲ ಹಿಂದಿರಬೇಕು; ಮುಂದಾಗಬಾರದು. ಅದರ ಸ್ವಭಾವವೇ ಡೊಂಕು, ಎಷ್ಟು ನೇರ ಮಾಡಿದರೂ ಡೊಂಕಾಗಿಯೆ ಬಿಡುತ್ತದೆ. ಭಕ್ತಿ ಮುಂದಿದ್ದು ಮಡಿವಂತಿಗೆ ಹಿಂದಿರಬೇಕು. ಎಷ್ಟಾದರೂ ಮಡಿವಂತಿಗೆ ಕರ್ಮಠರ ದಾರಿ; ಬಾಹ್ಯಾಂಗ, ’ನೀವೇನೂಟ ಮಾಡಿದಿರಿ?’ ಎಂದು ಮಾರ್ಮಿಕವಾಗಿ ಕೇಳುತ್ತಾರೆ. ಪಂಡಿತರ ಶಾಸ್ತ್ರಾವ ಮರ್ಶನದ ಫಲವೇನು? ಅದರಿಂದ ಭಗವದನುಭವ ವಾದೀತೆ? ಆದರೇನೋ ಸರಿಯೆ, ಶಾಸ್ತ್ರಾವಮರ್ಶನ ಸಾರ್ಥಕವಾಯಿತು.

’ಕದವ ಮುಚ್ಚಿದಳದೆಕೊ ಗಯ್ಯಾಳಿ ಮೂಳಿ’ ಎಂಬುದೂ ಹರಿದಾಸರನ್ನು ಅನಾಚಾರದವರೆಂದು ಜರಿಯುವ ಪಂಡಿತರನ್ನೇ ಕುರಿತದ್ದು. ಮಠದೊಳಗೆ ಅವರನ್ನು ಸೇರಿಸದೆ ಹೊರಗೆ ತಳ್ಳಿದ ಸಂದರ್ಭ ಅದು.

’ಅಂದುಗೆ ಕಿರುಗೆಜ್ಜೆ
ಮುಂಗಾಲಲಳವಟ್ಟ
ಧಿಂ ಧಿಮಿ ಧಿವಿಕೆಂದು
ಕುಣಿವ ದಾಸರ ಕಂಡು’

ತಮ್ಮೊಳಗಿದ್ದ ಪಾಪ ಬಯಲಾದೀತೆಂದು ಅಂಜಿ ಕದವನ್ನು ಮುಚ್ಚಿಕೊಳ್ಳುತ್ತಾರೆ. ಈ ಜನರದ್ದು ’ಉದರ ವೈರಾಗ್ಯ’,

ಊಟದ ಮಾರ್ಗದ ಜ್ಞಾನ’-
’ಬೂಟಕತನದಲಿ ಬಹು ಭಕ್ತಿಯ ಮಾಡಿ
ದಿಟನೀತ ಸರಿ ಯಾರಿಲ್ಲೆನಿಸಿ
ನಾಟಕಸ್ತ್ರೀಯಂತೆ ಬಯಲ ಡಂಬವ ತೋರಿ!’

ಬೂಟಾಟಿಕೆಯ ಆಚಾರವನ್ನು ಕಂಡು ದಾಸರಿಗೆ ’ನಗೆಯು ಬರುತಿದೆ’.

’ಹರಿವ ನೀರೊಳಗೆ ಮುಳುಗಿ
ಬೆರಳ ಎಣಿಸುವರ ಕಂಡು’

ಮನಸ್ಸೆಲ್ಲೋ, ಜಪದ ಸೊಲ್ಲೆಲ್ಲೋ! ಮತ್ತೆ ಈ ಮಡಿವಂತರು ದಾಸರನ್ನು ಜರಿದು ಮೂದಲಿಸುವ ಸಂದರ್ಭದಲ್ಲಿಯೂ, ದಾಸರು ಧೈರ್ಯದಿಂದ.

’ನಾ ನಿನ್ನ ಧ್ಯಾನದೊಳಿರಲು ಸದಾ
ಹೀನಮಾನವರೇನು ಮಾಡಬಲ್ಲರೋ, ರಂಗಾ?’

ಎಂದು ತಲೆಕೆಡಿಸಿಕೊಳ್ಳದೆ ನೆಮ್ಮದಿಯಿಂದಲೆ ಇದ್ದರು. ವ್ಯಾಸಕೂಟದವರಿಗೆ ಸ್ವಮತ ಮಂಡನೆ, ಪರಮತ ಖಂಡನೆ ಇದೇ ಮುಖ್ಯವಾಯಿತು. ತಮ್ಮ ಸಿದ್ಧಾಂತವನ್ನು ಯುಕ್ತಿಯಿಂದ ಸಮರ್ಥಿಸಿಕೊಂಡರೆ ಕೃತಾರ್ಥರು. ಮತ್ತೆ ತರ್ಕ, ನ್ಯಾಯ, ವ್ಯಾಕರಣ, ಇವುಗಳದ್ದೇ ಮೇಲಾಟ. ತಮ್ಮ ಸ್ವರೂಪೋದ್ದಾರ (ಆತ್ಮೋದ್ದಾರ)ದ ಕಡೆ ಗಮನ ಕಡಿಮೆ; ಲೋಕೋದ್ಧಾರದ ಉದ್ದೇಶವಂತೂ ದೂರವೇ ಉಳಿಯಿತು! ಸದಾಚಾರಪಾಲನೆಯ ಒಣ ಕಾತರದಲ್ಲಿ ಆಧ್ಯಾತ್ಮಿಕನಿಷ್ಠೆ ಬದಲಾಯಿತು. ಈ ಕೊರತೆಗಳನ್ನೆಲ್ಲ ತೀರಿಸಿದವರು ಹರಿದಾಸರು, ದಾಸಕೂಟದವರು.

ಕನಕದಾಸರ ಒಂದು ಪದದಲ್ಲಿ ವ್ಯಾಸಕೂಟದವರನ್ನು ದಿಟವಾಗಿ ಮಧ್ವ ದ್ವೇಷಿಗಳೆಂದೇ ಕರೆದಿರುವುದನ್ನು ಕಾಣಬಹುದು. (’ಅಂಧ ತಮಸು ಇನ್ನಾರಿಗೆ’ ಎಂಬ ಕೃತಿಯಲ್ಲಿ)

’ವ್ಯಾಸರ ಮಾತುಗಳಾಡುತ ವಿ
ಶ್ವಾಸಘಾತುಕನ ಮಾಡುತ
ದೋಷವೆಂದರಾನುಡಿ ಕೇಳದೆ ಸಂ
ತೋಷವೆಂದರೆ ನೋಡಿ ಬಾಳದೆ
ಶೇಷಶಯನ ಆದಿಕೇಶವರಾಯನ
ದಾಸರೊಡೆಯ ಮಧ್ಯದೇಷಿಗಳಲ್ಲದೆ’

ಇಲ್ಲಿ ವ್ಯಾಸರ ಮಾತುಗಳೆನ್ನುವಾಗ ಬ್ರಹ್ಮಸೂತ್ರಕಾರಣರಾದ ವೇದ ವ್ಯಾಸರೂ ಆಗಬಹುದು, ತಮ್ಮ ಗುರುಗಳಾದ ವ್ಯಾಸತೀರ್ಥರೂ ಆಗಬಹುದು. ಇಬ್ಬರ ಮಾತುಗಳೂ ಮೋಕ್ಷಕ್ಕೆ ಕಾರಣವಾಗುವಂಥವೇ. ಆದರೆ ಮಾತಿನ ಇಂಗಿತ ತಿಳಿದುಕೊಳ್ಳದೆ, ಮಾತುಗಳನ್ನೇ ಪುನರುಚ್ಚಾರಣೆ ಮಾಡಿದರೆ ಬಂದ ಫಲವೇನು? ಇದು ವಿಶ್ವಾಸಘಾತುಕತನ.

ದಾಸಕೂಟವೆಂದರೆ ಅದೊಂದು ಸಂಘಟಿತವಾದ ಸಂಸ್ಥೆಯೆಂದೋ, ನಿರ್ದಿಷ್ಟವಾದ ವ್ಯವಸ್ಥೆಯೆಂದೋ ಬಗೆಯಬಾರದು. ಅದೊಂದು ಕಲ್ಪನೆ ಅಷ್ಟೆ. ಹರಿದಾಸರು ಎಲ್ಲೆಲ್ಲಿ ಇರುತ್ತಿದ್ದರೂ ಯಾವ ಯಾವ ಕಾಲದಲ್ಲಿ ಇರುತ್ತಿದ್ದರೂ ಅವರ ಒಡಲೊಳಗೆ ತಾವು ದಾಸಕೂಟಕ್ಕೆ ಸೇರಿದವರೆಂಬ ಭಾವನೆ ಇರುವುದು ಮುಖ್ಯವಾದ ವಿವರ. ಅದು ಭಾವ ಪ್ರಧಾನವಾದುದು. ಇದೇನು ಮಠದಂತೆ ಯಾರೊಬ್ಬರ ಅಂಕೆಗೆ, ಆಡಳಿತಕ್ಕೆ ಒಳಪಟ್ಟಿದ್ದಲ್ಲ. ಅದಕ್ಕೊಂದು ಪ್ರಾದೇಶಿಕವಾದ ನೆಲೆ ಎಂಬುದಾಗಲಿ ಮೂರ್ತಸ್ವರೂಪವಾಗಲಿ ಇರದು. ಅದಕ್ಕೇನು ಸದಸ್ಯತ್ವವೆಂಬುದಿಲ್ಲ. ಶುಲ್ಕವಿಲ್ಲ, ನಿಯಾಮಾವಳಿಯಿಲ್ಲ, ಪ್ರವೇಶವಿಲ್ಲ, ಉಚ್ಚಾಟನೆಯಿಲ್ಲ, ಹರಿದಾಸರು ಎಲ್ಲಿ ಸೇರಿದರಲ್ಲಿ ದಾಸಕೂಟ ತೋರಿಕೊಳ್ಳುವುದು. ಭಜನೆಮಾಡುವಾಗ ದಾಸಕೂಟ; ಗೋಪಾಳ ಬುಟ್ಟಿ ಹಿಡಿದು ಹೊರಟಾಗ ದಾಸಕೂಟ; ಸಂಕೀರ್ತನ ನಡೆಯುವಾಗ ದಾಸಕೂಟ ಲೌಕಿಕ ಅದಿರದು; ವ್ಯವಹಾರಕ್ಕೆ ಅದರ ಅಗತ್ಯ ವಿರದು. ಆದರೆ ದಾಸ ಕೂಟದವರಿಗೆ ಅಂಕಿತವಿಲ್ಲದೆ ದೇಹವಿರಬಾರದು; ಅಂಕಿತವಾದರೋ ಗುರುವಿನಿಂದಲೇ ದೊರಕುವುದು. ಗುರುವೆಂದರೆ ಹಿರಿಯ ಹರಿದಾಸನೇ : ಅವನೇನು ಸಂನ್ಯಾಸಿಯೂ ಅಲ್ಲ, ಮಠಾಧೀಶನೂ ಅಲ್ಲ. ಹರಿದಾಸರ ಪೀಳಿಕೆಯಲ್ಲಿ ಬಂದ ಗೃಹಸ್ಥನೇ ಇದೊಂದು ಪದ್ಧತಿಯಿದೆ. ಅಂಕಿತ ನೀಡುವ ಹಿರಿಯರೆಲ್ಲರಿಗೆ ಮತ್ತೊಬ್ಬ ಹಿರಿಯ, ನಾಯಕ ಎಂಬುದಿಲ್ಲ. ಎಲ್ಲ ಹಿರಿಯರ ಸಂಘ-ಸಮಿತಿ ಎಂಬುದೂ ಇಲ್ಲ. ಆದರೆ ಪರಂಪರೆ ಮುಖ್ಯ. ಅಂಕಿತ ಕೊಡುವ ಹಿರಿಯ ತಾನು ಅಂಕಿತ ಪಡೆದುಕೊಂಡಿರಬೇಕು.

ಹರಿದಾಸರಾಗುವವರು ’ಸಾಲಮಾಡಲಿಬೇಡ, ಸಾಲದೆಂದೆನಬೇಡ, ನಾಳಿಗೇನೆಂಬ ಚಿಂತೆ ಬೇಡ’ ಎಂಬ ಸೂತ್ರವನ್ನು ಗಟ್ಟಿಯಾಗಿ ಹಿಡಿದವರು. ಹರಿದಾಸರು ಗೃಹಸ್ಥರೇ ಆದುದರಿಂದ, ಲೌಕಿಕವೃತ್ತಿಯನ್ನು ಸಾಮಾನ್ಯವಾಗಿ ಹಿಡಿಯದೆ ಇರುವುದರಿಂದ, ಅವರು ಬದುಕನ್ನು ನಿರ್ವಹಿಸುವುದು ಸುಲಭವೇನಲ್ಲ.

’ಹರಿದಾಸ ದೀಕ್ಷೆ ಬಲು ಕಷ್ಟ ಕಷ್ಟವೆಂದು ಕಾಣೋ
ಮನುಜಾಧಮಗೆ ಇದು ಸುಲಭವಲ್ಲವೋ ಪ್ರಾಣಿ!’

ಇದ್ದುದರಲ್ಲಿ ತಾನಾಗಿ ಬಂದದ್ದರಲ್ಲಿ ತೃಪ್ತರಾಗಿರಬೇಕು. ಶ್ರೀಪಾದರಾಜರು ಹೇಳಿದಂತೆ’ಇಟ್ಟಾಂಗೆ ಇರುವೆನೊ ಹರಿಯೆ, ಎನ್ನ ದೊರೆಯೆ!’ ಎಂಬುದೇ ಹರಿದಾಸರ ಜೀವನಸೂತ್ರ. ಬದುಕು ಚೆನ್ನಾಗಿರಬೇಕೆಂದು ಪ್ರಪಂಚದ ಬಲೆಯಲ್ಲಿ ಸಿಲುಕಿಕೊಂಡರೆ ಕೆಲಸ ಕೆಡುತ್ತದೆ. ’ಸಾಲದು ಇನ್ನಷ್ಟು ಬೇಕು’ ಎಂದರೆ ’ನಾಳಿಗಿಡಬೇಕು ’ಎಂಬ ಸಂಗ್ರಹಬುದ್ದಿಯಿದ್ದರೆ ಅವನು ಹರಿದಾಸನಲ್ಲ.’ ಇಷ್ಟು ದೊರಕಿದರೆ ಇನ್ನಷ್ಟರಾಸೆ’ ಇದ್ದಾಗ ’ಎಂತಾದರೂ ಚಿಂತೆ ಬಿಡದು’. ಹರಿದಾಸನ ಮುಖ್ಯಲಕ್ಷಣ ನಿಶ್ಚಿಂತನಾಗಿರುವುದು, ಅಂಜಿಕೆ-ಕಳವಳ ಬಿಟ್ಟರುವುದು. ’ಹರಿಚಿತ್ತ ಸತ್ಯ’ವೆಂದು ಗಟ್ಯಾಗಿ ನಂಬಿರುವುದು. ’ನಾನೇಕ ಬಡವನೋ ನಾನೇಕೆ ಪರದೇಶಿ, ಶ್ರೀನಿಧೇ ಹರಿ ನೀನಿರುವತನಕ?’ ಎಂಬುದು ಅವರ ಧೈರ್ಯ.

ಇದೊಂದು ಮನೋಧರ್ಮ, ಜೀವನಕ್ರಮ. ಇದನ್ನು ವೃತ್ತಿಯಾಗಿ ಹಿಡಿದವರೂ ಇದ್ದರೆನ್ನಿ; ಹರಿದಾಸರಾಗಿಯೂ ಬೇರೆ ವೃತ್ತಿಗಳನ್ನು ಹಿಡಿದವರೂ ಇದ್ದರು. ಆದರೆ ಅವರೆಲ್ಲರ ಮನೋಧರ್ಮ ಹಾರಿದಾಸ್ಯದ್ದು. ಶರೀರವು ಸಾಧನ ಶರೀರವೆಂಬ ಎಣಿಕೆ ಅವರದ್ದು; ಪುರಂದರದಾಸರು ಹೇಳಿದ್ದಂತೆ ’ಮಾನವಜನ್ಮ ದೊಡ್ಡದು’ ಎಂಬ ನಂಬಿಕೆ; ಅದನು ಹಾನಿಮಾಡಬಾರದೆಂಬ ತವಕ. ಶ್ರೀಪಾದರಾಜರು ಹರಿದಾಸರ ಮನೋಧರ್ಮವನ್ನು ’ಇದನಾದರು ಕೊಡದಿದ್ದರೆ’ ಎಂಬ ಕೀರ್ತನೆಯಲ್ಲಿ ಸಂಗ್ರಹಿಸಿದ್ದಾರೆ. ಅವರು ದೇವರನ್ನು ಬೇಡಿಕೊಂಡು ಬಯಸುವುದಿಷ್ಟೆ ’ವಾಸುದೇವನೆ, ನಿನ್ನ ದಾಸರ ದಾಸರ ದಾಸರ ದಾಸ್ಯವ ಕೊಡು ಸಾಕು’ ಎಂಬುದು

’ಗ್ರಾಸವಾಸಗಳಿಗೆ ಇಲ್ಲವೆಂದು ನಿನ್ನ
ಬೇಸರಿಸಿ ಬೇಡ ಬಂದುದಿಲ್ಲ!
ಸತಿಸುತರುಗಳ ಸಹಿತವಾಗಿ ನಾ
ಹಿತದಿಂದ ಇರಬೇಕೆಂಬೊದಿಲ್ಲ!
……………
ಸಾಲವಾಯಿತೆಂದು ಸಂಬಳ ಎನಗೆ
ಸಾಲದೆಂದು ಬೇಡಬಂದುದಿಲ್ಲ
ಒಡವೆಗಳಿಲ್ಲ ಒಡ್ಯಾಣಗಳಿಲ್ಲೆಂದು
ಬಡವನೆಂದು ಬೇಡಬಂದುದಿಲ್ಲ!
ಆಗಬೇಕು ರಾಜ್ಯಭೋಗಗಳೆನಗೆಂದು
ಈಗ ನಾ ಬೇಡಬಂದುದಿಲ್ಲ !”

’ಇತರ ವಿಷಯಂಗಳಿಗೆರಗಿಸದೆ ಮನಕೆ ನಿನ್ನ ಕಥಾಮೃತದ ಕೊಡು’, ’ನಾಲಗೆಯಲ್ಲಿ ನಿನ್ನ ನಾಮದುಚ್ಚಾರಣೆಯ ಪಾಲಿಸು’, ಒಡೆಯ ನಿನ್ನಡಿಗಳಿಗೆರಗುವುದಕೆ ಮನ ಬಿಡದಿಹದೊಂದನು ಕೊಡು ಎಂದು ಬೇಡಿಕೊಳ್ಳುತ್ತಾರೆ.

ಇಲ್ಲಿ ಇದೊಂದು ವಿಚಾರವನ್ನೂ ಗಮನಿಸಬೇಕು. ದಾಸಕೂಟವೆಂದರೆ ಮಾಧ್ವಮತಕ್ಕೆ ಸೇರಿದ್ದೆಂಬ ಕಲ್ಪನೆಯಿದೆ. ಇದರಲ್ಲಿ ಸ್ವಲ್ಪ ಮಟ್ಟಿಗೆ ತಥ್ಯಾಂಶವಿದ್ದರೂ, ಅದು ಸಂಪೂರ್ಣವಾಗಿ ದಿಟವಲ್ಲ. ಮಧ್ವಾಚಾರ್ಯರೇ ಹರಿದಾಸರಾಗಿದ್ದವರು : ಅವರ ದ್ವಾದಶಸ್ತೋತ್ರವೆ ಇದಕ್ಕೆ ಸಾಕ್ಷಿ. ಅವರ ನೇರವಾದ ಶಿಷ್ಯ ನರಹರಿತೀರ್ಥರು ಹರಿದಾಸರಪರಂಪರೆಯ ಪ್ರವರ್ತಕರೆಂದು ಹೇಳುವವರಿದ್ದಾರೆ. ಇವರ ಒಂದೆರಡು ಕನ್ನಡ ಹಾಡುಗಳೂ ಉಳಿದುಬಂದಿವೆಯೆನ್ನಿ. ಮಾಧ್ವವೇದಾಂತದ ಕೆಲವು ಪ್ರಮೇಯಗಳನ್ನು ಎತ್ತಿ ಹಿಡಿಯುವ ಪದಗಳು ಪುರಂದರದಾಸರ ಸಾಹಿತ್ಯ ಸೃಷ್ಟಿಯಲ್ಲಿ ಸೇರಿಬಂದಿರುವುದೂ ದಿಟ ಶ್ರೀಪಾದರಾಜರೂ ವ್ಯಾಸತೀರ್ಥರೂ ಮಾಧ್ವವೇದಾಂತದ ನಿಲುವನ್ನು ಸಮರ್ಥಿಸಿ ಸಂಸ್ಕೃತದಲ್ಲಿ ಗ್ರಂಥರಚನೆ ಮಾಡಿರುವುದೂ ಹೌದು. ಆದರೆ ಇಷ್ಟದಿಂದ ದಾಸಪಂಥದ ಧೋರಣೆ ಮಾಧ್ವಮತಕ್ಕೆ ಸೀಮಿತವಾದುದು ಎಂದರೆ ತಪ್ಪಾಗುತ್ತದೆ. ವಿಜಯದಾಸರೂ ಅವರನಂತರ ದಾಸರೂ ಹದಿನಾರಾಯಣೆ ಮಾಧ್ವರೆಂಬುದನ್ನು ಕಾಣಿಸಿಕೊಂಡರು; ಈ ಮಾತನ್ನು ಮೊದಲ ದಾಸರಿಗೆ ಅನ್ವಯಿಸುವಂತಿಲ್ಲ. ಶ್ರೀಪಾದರಾಜರು, ವ್ಯಾಸತೀರ್ಥರು, ಪುರಂದರದಾಸರು, ಕನಕದಾಸರು ಇವರಿಂದ ಸಿದ್ಧವಾದ ದಾಸಸಾಹಿತ್ಯ ಹೀಗೆ ಸಂಕುಚಿತವಾದುದಲ್ಲ; ಕೇವಲ ಮಾಧ್ವವೆಂಬಂಥ ಒಲವು ಕಾಣಸಿಗುವುದಿಲ್ಲ. ಮಾನವಸಹಜವಾದ ಶೀಲ, ಮೌಲ್ಯಗಳನ್ನೇ ಎತ್ತಿಹಿಡಿದರು. ಪುರಂದರ ದಾಸರಂತೂ, ’ಮಾನವ ಜನ್ಮ ದೊಡ್ಡದು’ ಎಂದೇ ಸ್ಪಷ್ಟವಾಗಿ ಹೇಳಿದರು. ’ಎಲ್ಲರನು ಸಲಹುವನು ಇದಕೆ ಸಂಶಯ ಬೇಡ’ ಎಂಬ ಆಶ್ವಾಸನೆ ನೀಡಿದರು ’ಬಲ್ಲಿದನು ನೀನೆಂದು ಬಡವರ ಬಾಯ ಬಡಿಯದಿರು’ ಎಂದು ಎಚ್ಚರಿಸಿದರು ತಾತ್ವಿಕ ನಿಲುವು ಏನೇ ಇರಲಿ, ವ್ಯವಹಾರದಲ್ಲಿ ಮಾನವೀಯತೆಗೆ ಒತ್ತುಕೊಡುವುದು ದಾಸ ಸಾಹಿತ್ಯದಲ್ಲಿ ಎದ್ದು ಕಾಣುತ್ತದೆ.

ವ್ಯಾಸರಾಜರ ಮಾತಿನಲ್ಲಿ ಹರಿದಾಸ ಕೂಟವೆಂದರೆ ಗೆಜ್ಜೆಯ ಕಾಲಲಿ ಕಟ್ಟಿ, ಲಜ್ಜೆಬಿಟ್ಟು, ಹರಿಯ ನಾಮ ಗರ್ಜನೆ ಮಾಡುತ್ತ ಅಘವರ್ಜಿತರಾಗಿಪ್ಪರ ಸಂಘ, ಪುರಂದರದಾಸರು ’ಸಂಘವಾಗಲಿ ಸಾಧುಸಂಗವಾಗಲಿ’ ಎಂದಾಗ ತಮ್ಮ ಗುರುಗಳು ಹೇಳಿದ ಸಂಘವೇ ಅವರ ನೆನಪಿನಲ್ಲಿದ್ದುದು, ಸಾಧುಗಳ ಸಂಗವೆಂದರೆ ವರ್ಣಾಶ್ರಮಗಳ ಎಣಿಕೆಯೇನಿರದು. ’ಯಾವ ಕುಲದವನಾದರೇನು, ಅವನಾದರೇನು ಆತ್ಮ ಭಾವವನರಿತಮೇಲೆ?’ ಎಂದರು ಪುರಂದರದಾಸರು. ಕನಕದಾಸರು ’ದಾಸನಾಗೋ ಭವಪಾಶನೀಗೋ ವಿ-ಶೇಷನಾಗೋ!’ ಎಂದು ಕರೆಕೊಟ್ಟರಲ್ಲವೆ? ದಾಸನೆಂದರೆ ವಿಶೇಷ ವ್ಯಕ್ತಿ; ಭವದ ಯಾವ ಪಾಶವೂ ಅವನನ್ನು ಕಟ್ಟಿಹಾಕಲಾರದು. ಕುಲ, ಜಾತಿ, ಮತ, ಮಮತೆ, ಅಭಿಮಾನ, ಆಚಾರ, ಪುಣ್ಯ, ಪಾಪ ಎಲ್ಲವೂ ಭವದ ಪಾಶಗಳೇ ತಾನೆ? ಇವುಗಳಿಗೆ ಅಂಟಿಕೊಂಡವನು ದಾಸನು ಹೇಗಾದಾನು? ಎಂದರೆ, ಅವನು ಅನಾಚಾರಿಯಾಗಿರುವನೆಂದರ್ಥವಲ್ಲ; ಅವರು ಅನಾಚಾರಿಯಾಗಿರುವುದು ಸಾಧ್ಯವೂ ಇಲ್ಲ. ತನ್ನೊಳಗೆ ಭಗವದನುಭವವನ್ನು ಪಡೆದುಕೊಂಡವನು ಮಿಥ್ಯಾಚಾರದಲ್ಲಿಹೇಗೆ ತಾನೆ ತೊಡಗಿಯಾನು? ಇತರರಂತೆ ಅವನು ಅದನ್ನು ಮೇಲೇರಿಸಿಕೊಂಡು ಎಲ್ಲೆಲ್ಲಿಯೂ ಇರುವ ಭಗವಂತನ ಅರಿವಿನಿಂದ ಜಾರುವುದಿಲ್ಲ. ದೋಣಿ ನೀರಿನಲ್ಲಿರಬೇಕು; ಆದರೆ ನೀರು ದೋಣಿಯೊಳಗೆ ಸೇರಬಾರದು. ಇದೇ ವಿಶೇಷ.

ಹರಿದಾಸರ ಸಂಪ್ರದಾಯಕ್ಕೆ ಪ್ರಧಾನವಾದ ಪ್ರೇರಣೆ ಭಾಗವತ ಧರ್ಮವೆಂಬುದನ್ನು ಮರೆಯಬಾರದು. ಹದಿನೆಂಟು ಪುರಾಣಗಳಲ್ಲೊಂದಾದ ಭಾಗವತವೆಂಬ ಗ್ರಂಥದಿಂದ ಹೊರಹೊಮ್ಮಿದ್ದು ಭಾಗವತಧರ್ಮವಲ್ಲ; ಪ್ರಾಚೀನವಾದ ಭಾಗವತಧರ್ಮದ ಸ್ವಾರಸ್ಯವನ್ನು ಪ್ರತಿಪಾದಿಸಲು, ಸಮರ್ಥಿಸಲು ಸಿದ್ಧವಾದದ್ದು ಭಾಗವತಪುರಾಣ. ಭಾಗವತ ಪುರಾಣವೇ ಆಗಲಿ, ಅದಕ್ಕೊಂದು ವಿಶಾಲವಾದ, ಸ್ವತಂತ್ರವಾದ ನೆಲೆಯಿದೆ. ಇದು ಎಲ್ಲ ಮತಗಳವರಿಗೂ ಸಮ್ಮತವಾದದ್ದೇ. ಇದಕ್ಕೆ ವ್ಯಾಖ್ಯಾನ ರಚಿಸಿರುವವರಲ್ಲಿ ಅದ್ವೈತಿಗಳೂ ಇದ್ದಾರೆ, ವಿಶಿಷ್ಟಾದ್ವೈತಿಗಳೂ ಇದ್ದಾರೆ, ದ್ವೈತಿಗಳೂ ಇದ್ದಾರೆ.ಇತರರೂ ಇದ್ದಾರೆ, ಇದರ ಹಿನ್ನೆಲೆಯಲ್ಲಿರುವ ಭಾಗವತಧರ್ಮ ಮಹಾಭಾರತದಲ್ಲೇ ಕಾಣಸಿಗುತ್ತದೆ; ಭಗವದ್ಗೀತೆಯೂ ಭಾಗವತಧರ್ಮವನ್ನು ಪುರಸ್ಕರಿಸುವ ಗ್ರಂಥವೇ, ಮಧ್ವಾಚಾರ್ಯರು ಈ ಧರ್ಮವನ್ನು ವಿಶೇಷವಾಗಿ ಎತ್ತಿ ಹಿಡಿದರೆಂಬುದೇನೋ ದಿಟ; ಅವರ ತಾತ್ವಿಕ ನಿಲುವು ಬಹುಮಟ್ಟಿಗೆ ಭಾಗವತ ಸಂಪ್ರದಾಯಕ್ಕೆ ಹೊಂದಿಕೊಂಡು ಬಂದಿತು. ಅಂತರಂಗ ಶುದ್ದಿ, ಬಹಿರಂಗ ಶೀಲ, ಬಿಂಬೋಪಾಸನೆ, ಏಕಾಂತ ಭಕ್ತಿ, ಸರ್ವಭೂತಹಿತ, ಸರ್ವಸಮತಾಭಾವ, ಇವು ಭಾಗವತಸಂಪ್ರದಾಯದಲ್ಲಿ ಹಾಸುಹೊಕ್ಕಾಗಿ ಸೇರಿಬರುವ ವಿವರಗಳು. ದಾಸಸಾಹಿತ್ಯದಲ್ಲಿ ಪ್ರಮುಖವಾಗಿ ಕಾಣಸಿಗುವ ವಿವರಗಳು ಇವೇ.

ಈ ವಿವರಗಳಿಗೆಲ್ಲ ಉಗಮಸ್ಥಾನವೆಂದರೆ ಏಕಾಂತ ಭಕ್ತಿಯೇ. ’ಸಕಲ ಸಾಧನಕೆಲ್ಲ ಸಿದ್ಧಗೊಳಿಸುವುದು ಭಕುತಿ ಸಾಧನವಲ್ಲದನ್ಯ ಸಾಧನವುಂಟೇ?’ ಭಕ್ತಿಯು ಪರಿಪಾಕವಾಗಿ ಗಾನದಲ್ಲಿ ಮಾರ್ಪಡುತ್ತದೆಯೆಂಬ ಕಾರಣದಿಂದಲೇ ದಾಸರು ಸಂಗೀತಮಾಧ್ಯಮವನ್ನು ಹಿಡಿದರು. ಭಾಗವತ ಧರ್ಮದ ಸಂದೇಶವಾಗಿ ಶ್ರೀಪಾದರಾಜರು ಉಗಾಭೋಗವೊಂದರಲ್ಲಿ.

’ಧ್ಯಾನವು ಕೃತಯುಗದಿ
ಯಜನ ಯಜ್ಞವು ತ್ರೇತಾಯುಗದಿ
ದಾನವಾಂತಕನ ದೇವತಾರ್ಚನೆ ದ್ವಾಪರ ಯುಗದಿ
ಆ ಮಾನವರಿಗೆಷ್ಟು ಫಲವೊ ಅಷ್ಟು ಫಲವು
ಕಲಿಯುಗದಿ ಗಾನದಲಿ ಕೇಶವಯೆನಲು
ಕೈಗೂಡುವನು ರಂಗವಿಠಲ!’

ಎಂದು ಹೇಳಿದರು ’ರಂಗನೇ ಕೊಳಲನೂದುತ ಬಂದ’ ನೆಂದಮೇಲೆ ಅವನ ಭಕ್ತರ ವಿಚಾರ ಹೇಳುವುದೇನು? ’ಗಾಯನವ ಮಾಡಿದವ ಹರಿಮೂರ್ತಿ ನೋಡಿದವ’ ಎಂದರು ಪುರಂದರದಾಸರು. ಸಂಗೀತದ ಸ್ವಾರಸ್ಯವಿರುವುದು, ಸಾರ್ಥಕತೆಯಿರುವುದು ಏಕಾಂತ ಭಕ್ತಿಯಲ್ಲಿ; ಭಗವನ್ಮಾಹಾತ್ಮ್ಯಜ್ಞಾನ-ಪೂರ್ವಕವಾದ ಪ್ರೇಮದಲ್ಲಿ. ಪುರಂದರ ದಾಸರು ಹೇಳಿದಂತೆ ’ತಾಳ ಮೇಳಗಳಿದ್ದು, ಪ್ರೇಮವಿಲ್ಲದೆ ಗಾನ’ವನ್ನು ಹರಿಯು ನಂಬಲಾರ; ಅದು ಬರಿಯ ಡಂಭಕದ ಕೂಗಾಟ.

ಹರಿದಾಸ ಪದ್ಧತಿಯು ಇನ್ನೊಂದು ವಿಶೇಷವೆಂದರೆ ಬಿಂಬೋಪಾಸನೆಯ ಮೇಲೆ ಅವರು ಕೊಟ್ಟ ಒತ್ತು. ಇದು ಭಾಗವತ ಸಂಪ್ರದಾಯದಲ್ಲಿನ ಲಕ್ಷಣವೇ. ಮಧ್ವಾಚಾರ್ಯರೂ ಇದನ್ನು ಎತ್ತಿ ಹಿಡಿದರಾದರೂ ಶಾಸ್ತ್ರಾವಿಮರ್ಶೆಯ ಜೋರಿನಲ್ಲಿ, ಖಂಡನಮಂಡನಗಳ ಕಾವಿನಲ್ಲಿ, ಸ್ವಸಿದ್ದಾಂತ ರಕ್ಷಣೆಯ ಭರದಲ್ಲಿ ಇದು ಹಿಂದೆ ಸರಿದು ನಿಂತಿತು. ಮತ್ತೆ ಇದನ್ನು ಮೇಲೆತ್ತಿ ನಿಲ್ಲಿಸಿದವರು ಹರಿದಾಸರು. ಎಲ್ಲರ ಒಡಲೊಳಗೆ ಇರುವ ಪರಮಾತ್ಮನ ಮೂರ್ತಿಯನ್ನು ಬಿಂಬವೆನ್ನುತ್ತಾರೆ ಇದನ್ನು ಸಾಕ್ಷಾತ್ಕರಿಸಿಕೊಳ್ಳುವುದೇ ಸಾಧನೆ, ಉಪಾಸನೆ, ಇದು ಅಂತರಂಗಪೂಜೆ, ಮಾನಸಪೂಜೆ, ವಿಜಯದಾಸರ ’ಹರಿದಾಸಲಕ್ಷಣ’ ಸುಳಾದಿಯಲ್ಲಿ ಈ ಉಪಾಸನೆಯ ವಿವರಗಳನ್ನು ತಿಳಿಸುತ್ತ ’ನೆರೆದ ಸಂದಣಿಯೊಳುಪಚರಿಸದೆ… ತನ್ನೊಳು ಪರಮತತ್ತ್ವ ತಿಳಿದು… ನೆರೆನಂಬಲಿ ಬೇಕು ಕುರುಹು ಕಾಣಿಸುವಂತೆ!’ ಎಂಬುದನ್ನು ಮನಗಾಣಿಸಿದ್ದಾರೆ. ಬಿಂಬೋಪಾಸನೆಯ ಬಹಿರಂಗಗಳನ್ನೂ ಅವರೇ ಬೇರೆಡೆ ತಿಳಿಸಿದ್ದಾರೆ.

’ದುರಿತರಾಶಿಯ ಬಿಡಿಸು | ದುಸ್ಸಂಗವನೆ ಕೆಡಿಸು | ನಿರುತ
ನಿನ್ನವರೊಳಗೆ ಸುಖ ಪಡಿಸೋ | ಪರಮವಚನ ನುಡಿಸು | ಸನ್ಮಾರ್ಗದಲಿ
ನಡಿಸು | ಪರಮರಹಸ್ಯದುಪದೇಶ ಕೊಡಿಸೋ |’
ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ |
ಉಂಡು ಉಟ್ಟದ್ದೆಲ್ಲ ವಿಷ್ಣುಪೂಜೆ |
ತಂಡತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ |
ಹಿಡಿದ ಹಟ ಪೂರೈಸಲದು ಹರಿಸಂಕಲ್ಪ |
ನಡೆದಾಡುವುದೆಲ್ಲ ತೀರ್ಥಯಾತ್ರೆ |
ಸಡಗರದಲಿಪ್ಪುದೇ ಶ್ರೀಶನಾಜ್ಞೆ |

ಶ್ರೀಪಾದರಾಜರ ’ಬಾರೋ ಮನೆಗೆ ಗೋವಿಂದ’ ಎನ್ನುವ ಕೀರ್ತನೆಯಲ್ಲಿ ಮನೆಯೆಂದರೆ ಮನುಷ್ಯನ ಒಡಲೆಂದೇ ಅರ್ಥ. ಕಡೆಯಲ್ಲಿ ಅವರು

’ಪ್ರಾಣಪತಿ ಹೃದಯಾಬ್ಜಮಂಟಪ
ಸ್ಥಾನದೊಳಗಭಿವ್ಯಾಪ್ತಚಿನುಮಯ
ಧ್ಯಾನಗೋಚರನಾಗಿ ಕಣ್ಣಿಗೆ
ಕಾಣಿಸುವೆ ಶ್ರೀರಂಗವಿಠಲ’

ಎಂದು ಸ್ಪಷ್ಟಪಡಿಸಿದ್ದಾರೆ. ಬಿಂಬಮೂರ್ತಿಯ ಸ್ಥಾನ ಹೃದಯ. ಅವರೇ ಇನ್ನೊಂದು ಕೃತಿಯಲ್ಲಿ ’ನಾ ನಿನಗೇನು ಬೇಡುವುದಿಲ್ಲ! ಎನ್ನ ಹೃದಯ ಕಮಲದೊಳು ನಿಂದಿರೊ ಹರಿಯೆ!’ ಎಂದೂ, ’ಬುದ್ಧಿನಿನ್ನೊಳು ಕುಣಿದಾಡಲಿ ಎನ್ನ! ಚಿತ್ತ ನಿನ್ನಲಿ ನಲಿದಾಡಲಿ ಹರಿಯೆ!’ ಎಂದೂ ಬೇಡಿಕೊಂಡಿದ್ದಾರೆ. ಹೀಗೆಯೇ ಮೊದಲಾಗುವ ಇನ್ನೊಂದು ಕೃತಿಯಲ್ಲಿ ’ಚಿತ್ತ ನಿನ್ನೊಳು ಮುಳುಗಾಡಲಿ ಹರಿಯೆ ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ ರಂಗ ವಿಠಲ ನಿನ್ನ ದಯವಾಗಲಿ ಹರಿಯೆ!’ ಎಂದಿದ್ದಾರೆ. ’ಕುಂತಪಿತನೆ ಎನ್ನ ಅಂತರಂಗದಿ ನಿನ್ನ! ಸಂತತ ನೆನೆವಂತ ಚಿಂತನೆ ನಿಲಿಸೆಂದು’ ಸೆರೆಗೊಡ್ಡಿ ಬೇಡಿಕೊಂಡಿರುವ ಮತ್ತೊಂದು ಕೃತಿಯಿದೆ. ’ನಿನ್ನಾಧೀನ ಶರೀರ ಚೇಷ್ಟಗಳೆಲ್ಲ’ ಎಂದು ಮೊದಲಾಗುವ ಸುಳಾದಿಯಲ್ಲಿ ’ಅಂತರಾತ್ಮನೆ ನಿನ್ನ ಮಹಿಮೆಗೆ ನಮೊ ಎಂಬೆ’ ಎಂಬ ಸೊಲ್ಲು ಬರುತ್ತದೆ.

ಹೀಗೆ ತಮ್ಮ ಗುರುಗಳಾದ ಶ್ರೀಪಾದರಾಜರು ತೋರಿದ ದಾರಿಯನ್ನೇ ಹಿಡಿದ ವ್ಯಾಸ ತೀರ್ಥರು ’ಅಂತರಂಗದಲ್ಲಿ ಹರಿಯ ಕಾಣದವ ಹುಟ್ಟುಕುರುಡನೋ’ ಎಂದು ಸ್ಪಷ್ಟವಾಗಿ ಹೇಳಿ ಬಿಂಬೋಪಾಸನೆಯ ಅಗತ್ಯವನ್ನು ಅರುಹಿದರು. ಅದರ ಸ್ವರೂಪವನ್ನೂ ಸೂಚಿಸಿದರು

’ಎನ್ನ ಬಿಂಬ ಮೂರುತಿಯ ಪೂಜಿಸುವೆ ನಾನು |
ಮನಮುಟ್ಟಿ ಅನುದಿನದ ಮರೆಯದೇ ಜನರೆ ||
ಗಾತ್ರವೇ ಮಂದಿರ ಹೃದಯವೇ ಮಂಟಪ |
ನೇತ್ರವೇ ಮಹದ್ವೀಪ ಹಸ್ತ ಚಾಮರವೋ ||
ಯಾತ್ರೆ ಪ್ರದಕ್ಷಿಣೆ ಶಯನ ನಮಸ್ಕಾರ |
ಶಾಸ್ತ್ರ ಮಾತುಗಳೆಲ್ಲ ಮಂತ್ರಂಗಳೋ ||
ಎನ್ನ ಸ್ವರೂಪವೆಂಬುದೆ ರನ್ನಗನ್ನಡಿ |
ಎನ್ನ ಮನೋವೃತ್ತಿಯೆಂಬುದೆ ಛತ್ರಿಕೆ ||
ಇನ್ನು ನುಡಿದ ಹರಿನಾಮಾಮೃತವೆ ತೀರ್ಥ|
ಎನ್ನ ಮನವೆಂಬುದೇ ರತ್ನ ಸಿಂಹಾಸನವು ||
ಅನ್ಯದೇವತೆ ಯಾಕೆ ಅನ್ಯ ಪ್ರತಿಮೆ ಯಾಕೆ ?
ಅನ್ಯವಾದ ಮಂತ್ರ ತಂತ್ರಗಳು ಯಾಕೆ ?
ಎನ್ನಲ್ಲಿ ಭರಿತ ಸಾಧನೆಗಳು ಇರುತಿರಲು
ಚೆನ್ನಾಗಿ ಸಿರಿಕೃಷ್ಟನನು ಪೂಜಿಸುವೆ ||’

ಅವರ ಇನ್ನೊಂದು ಕೃತಿ

’ರಂಗಯ್ಯ ಮನೆಗೆ ಬಂದರೆ ಅಂತ
ರಂಗದಿ ಗುಡಿ ಕಟ್ಟಿ ಕುಣಿವೆ ನಾ | ’

ಎಂದು ಆರಂಭವಾಗುತ್ತದೆ. ಇಲ್ಲಿ ಮನೆಯೆಂದರೆ ಮನುಷ್ಯನ ದೇಹವೇ ರಂಗ ಅಲ್ಲಿಗೆ ಬರುವುದೆಂದರೆ ಅವರು ಅಲ್ಲಿಯೇ ಇರುವ ಅರಿವು ಮೂಡುವುದಷ್ಟೆ. ಸುಳಾದಿಯೊಂದರಲ್ಲಿ ಬಿಂಬೋಪಾಸನೆಯ ಸ್ವಾರಸ್ಯವನ್ನು ತಾವು ಹರಿದಾಸರಿಂದಲೇ (ಎಂದರೆ ಪುರಂದರದಾಸರು, ಕನಕದಾಸರಿಂದಲೇ) ಕಂಡುಕೊಂಡುದನ್ನು ಮರೆಮಾಚದೆ ತಿಳಿಸಿದ್ದಾರೆ; ಪ್ರಾಮಾಣಿಕವಾದ ಕೃತಜ್ಞತೆಯ ಮಾತನಾಡಿದ್ದಾರೆ.

’ನಿಧಿಯ ಮೇಲೆ ಇದ್ದು ನಿಧಿಯನರಿಯದಂತೆ
ತನ್ನ ಕಂಠಮಣಿಯ ತಾ ಮರೆತಂತೆ
ಕಣ್ಣೆರೆಯದ ಹಸುಳೆ ತಾಯನರಿಯದಂತೆ
ಎನ್ನಲ್ಲಿ ಹೊಂದಿಪ್ಪ ನಿನ್ನನರಿಯದಂತೆ
ನಿನ್ನ ತೋರಿದರೆನಗೆ ನಿನ್ನ ದಾಸರು ಸಿರಿಕೃಷ್ಣ||’

ಪುರಂದರದಾಸರ ರಚನೆಗಳಲ್ಲಿ ಬಿಂಬೋಪಾಸನೆಯ ವಿಚಾರ ಧಾರಾಳವಾಗಿ ಬಂದಿದೆ (ಕಣ್ಣಿನೊಳಗೆ ನೋಡೊ ಹರಿಯ, ಒಳಗಣ್ಣಿನಿಂದಲಿ ನೋಡೊ|| ಮುಜಗದ ದೊರೆಯ| ಮೊದಲಾದ ಕೀರ್ತನೆಗಳಲ್ಲಿ). ಬಿಂಬೋಪಾಸನೆಯ ಕ್ರಮವಿಡಿದ ನಿರೂಪಣೆ ನಮಗೆ ದೊರಕುವುದು ವಿಜಯದಾಸರ ಮತ್ತು ಗೋಪಾಲದಾಸರ ಕೃತಿಗಳಲ್ಲಿ. ’ಬಿಂಬ ಮೂರುತಿ ಧ್ಯಾನ ಇಂಬಾಗಿ ಮಾಡಲು, ಇಂಬುತೋರುವನಲ್ಲಿ ವಿಜಯವಿಠಲ ಪೊಳೆದು’, ’ಡಿಂಬ ದೊಳಗೆ ಹೃದಯಾಂಬರದಲಿ ಪೊಳೆವ’, ’ಆಧ್ಯಾತ್ಮ ತಿಳಿವುದು ಭೌತಿಕದೇಹದೊಳು’, ’ಬಿಂಬಮೂರುತಿಯ ಪರೋಕ್ಷವಾಗದೆ ಗತಿಯೆಂಬುದು ಸಲ್ಲ’, ’ಬಿಂಬನೆಂಬ ಪ್ರಾಜ್ಞನನು ಭವ ತಿಳಿದು’, ’ಅಂತರಂಗದಲ್ಲಿ ಅಂತರಾತ್ಮಕ ನೀನು, ಸಂತತ ಪೊಳೆವುತ್ತ ನಿಂತು ಸೊಬಗಿನಿಂದ’, ’ಒಳಗೊಂದು ಮೂರುತಿ ನೆಲೆಯಾಗಿ ಇರಲಾಗಿ’ ಮೊದಲಾಗಿ ವಿಜಯದಾಸರ ಮಾತುಗಳೂ ’ಧ್ಯಾನವನು ಮಾಡು ಬಿಂಬಮೂರುತಿಯ| ಆನಂದದಲಿ ಕುಳಿತು ಅಂತರಂಗದಲಿ’ ಮತ್ತು ’ಧ್ಯಾನವನು ಮಾಡು ಮನುಜಾ | ದೇಹಾಂತರ್ಗತ ಹರಿಯ |’ ಎಂಬ ಗೋಪಾಲದಾಸರ ರಚನೆಗಳೂ ಬಿಂಬೋಪಾಸನೆಯ ಕ್ರಮವನ್ನು ಸ್ಪಷ್ಟಪಡಿಸುತ್ತವೆ.

ಭಾಗವತದಲ್ಲಿ ಬಂದಿರುವ ಬಿಂಬಪೂಜೆಯ ಕ್ರಮವನ್ನು ಮಧ್ವಾಚಾರ್ಯರ ತಂತ್ರ ಸಾರವೂ, ವಿಷ್ಣುಸಂಹಿತ, ಪ್ರಕಾಶಸಂಹಿತೆ, ಯೋಗದೀಪಿಕಾ ಮೊದಲಾದ ಗ್ರಂಥಗಳೂ ವಿವರಿಸುವುದನ್ನು ಹರಿದಾಸರು ಮೆಚ್ಚಿಕೊಂಡು, ಸಾಕ್ಷಾತ್ಕಾರಕ್ಕೆ ಇದುವೆ ಸಾಧನ ಎಂಬುದನ್ನು ಮನಗಂಡು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಬಿಂಬಾಪರೋಕ್ಷವನ್ನು ಅನುಭವಿಸಿದರು. ಅವರ ರಚನೆಗಳ ಹಿನ್ನೆಲೆಯಲ್ಲಿರುವುದು ಈ ಅನುಭವವೇ. ಇದನ್ನು ನಾವು ಗುರುತಿಸದಿದ್ದರೆ ದಾಸಸಾಹಿತ್ಯದ ಅಥವಾ ದಾಸಸಂಸ್ಕೃತಿಯ ಸ್ವಾರಸ್ಯವನ್ನು ಕಂಡುಕೊಳ್ಳುವುದು ಕಷ್ಟ. ಬಿಂಬಾನುಭವ ನೆಲೆಯಲ್ಲಿಯೇ ಪುರಂದರದಾಸರು ’ ಸಂಸಾರವೆಂಬಂಥ ಭಾಗ್ಯವಿರಲಿ’, ’ಈಸಬೇಕು, ಇದ್ದು ಜೈಸಬೇಕು’, ಬಂದದ್ದೆಲ್ಲಾ ಬರಲಿ’, ’ಅಂಜಿಕಿನ್ಯಾತಕಯ್ಯ’, ’ಆದದ್ದೆಲ್ಲಾ ಒಳಿತೇ ಆಯಿತು’ಎಂಬ ಉತ್ಸಾಹವನ್ನು ಧೈರ್ಯವನು ತಳೆದದ್ದು. ಹೀಗೆ ದಾಸಸಾಹಿತ್ಯದ ಸಾಮಗ್ರಿ ’ಅನುಭವದಡುಗೆಯೆ’ಎಂಬುದನ್ನು ಅರಿತುಕೊಳ್ಳಬೇಕು.

ಮನುಷ್ಯರೆಲ್ಲರಿಗೆ ಇದು ಸಾಧ್ಯವೆಂಬ ಕಾರಣದಿಂದಲೇ ಪುರಂದರದಾಸರು ’ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲುಬೇಡಿ, ಹುಚ್ಚಪ್ಪಗಳಿರಾ!’ ಎಂಬ ಪ್ರೀತಿಯ ಕರೆಯನ್ನು ಎಲ್ಲರಿಗೆ ನೀಡಿದರು. ಆಧ್ಯಾತ್ಮ ನಿಷ್ಠೆಯಿಂದ ಆತ್ಮೋದ್ಧಾರ; ಆತ್ಮೋದ್ಧಾರದಿಂದ ಲೋಕೋದ್ಧಾರ, ಇದಕ್ಕೆಲ್ಲ ಕಾರಣವಾಗುವುದು ಮನುಷ್ಯನ ದೇಹವು ಸಾಧನಶರೀರವಾಗಿ ಮಾರ್ಪಟ್ಟಾಗ. ಇದು ಹರಿದಾಸ ಸಂಸ್ಕೃತಿಯ ಸಾರಸರ್ವಸ್ವ. ಮಾನವನಲ್ಲಿ ದೈವ ಅಂತರ್ಯಾಮಿಯಾಗಿ ಬಿಂಬುರೂಪದಿಂದ ಇದ್ದುಕೊಂಡು, ತನ್ನ ಅರಿವನ್ನು ಅವನ ಬುದ್ಧಿಯಲ್ಲಿ ಮೂಡಿಸಿ, ಅವನ ಉದ್ಧಾರಕ್ಕೆ ಕಾರಣವಾಗುವುದೆಂಬ ಸಂದೇಶ ಹರಿದಾಸರದ್ದು. ಎಲ್ಲ ಕಾಲಕ್ಕೂ ಎಲ್ಲ ಜನರಿಗೂ ಪ್ರಸಕ್ತವಾಗುವ ಸಂದೇಶ ಇದಾಗಿದೆ.