ನೆನೆವೆನನುದಿನ ನೀಲನೀರವ ವರ್ಣನ ಗುಣರನ್ನನ
ಮುನಿ ಜನಪ್ರಿಯ ಮುದ್ದು ಉಡುಪಿನ ರಂಅನ ದಯಾಪಾಂಗನ

ದೇವಕಿ ಜಠರೋದಯಾಂಬುಧಿ ಚಂದ್ರನ ಸುಖಸಾಂದ್ರನ
ಗೋವ್ರಜಕೆ ಘನ ಯಮುನೆಯ ದಾಟಿ ಬಂದನ ಅಲ್ಲಿ ನಿಂದನ
ಮಾವ ಕಳುಹಿದ ಮಾಯ ಶಠವಿಯ ಕೊಂದನ ಚಿದಾನಂದನ
ದೇವರಿಪು ದೈತ್ಯೇಂದ್ರ ಶಕಟನ ಒದ್ದನ ಶ್ರುತಿಸಿದ್ಧನ

ಗೋಕುಲದ ಗೋಪಿಯರ ಸಂಚಿತ್ತಚೋರನ ಬಹುಧೀರನ ಅ
ನೇಕ ನಾರಿಯರ್ವರಸನವನು ಕದ್ದೊಯ್ದನ ಪುರ(ತುರು?) ಗಾಯ್ದನ
ನಾಕಿಯರ ನೋಯಿಪ ಧೇನುಕ ವತ್ಸವಿಘಾತ ವಿಖ್ಯಾತನ
ಕಾಕುಮತಿ ಕಾಳಿಂಗನ ಫಣ ತುಳಿದನ ಅವಗೊಲಿದವ
***
ಸಂತತವೀ ಸಾರ ಕತೆಯನು ಕೇಳ್ವರ ನೆಲೆ ಬಾಳ್ವರ
ಕಂತುಪಿತ ಕಾರುಣ್ಯದಿಂದಲಿ ಹೊರೆವನು ಸುಖಗರೆವನು
ಇಂತು ಇಳೆಯ ಸುಜನರ ಸಲಹುವ ಕಾಂತನ ಸಿರಿವಂತನ
ಪಂಥವುಳ್ಳಪ್ರಸನ್ನ ಹಯದನ್ನನ ಮುನಿಮಾನ್ಯನ

ಒಟ್ಟು ಒಂಬತ್ತು ನುಡಿಗಳಿರುವ ಈ ರಚನೆಯಲ್ಲಿ ವಾದಿರಾಜರು ಬಹುಮಟ್ಟಿಗೆ ಶ್ರೀಕೃಷ್ಣನ ಲೀಲಾವಿಲಾಸಗಳನ್ನು ನಿರೂಪಿಸುವರು. ಪ್ರತಿಯೊಂದು ನುಡಿಯಲ್ಲಿಯೂ ಈ ಪ್ರಾಸವಿಲಾಸ ಒಟ್ಟು ಕೀರ್ತನೆಗೇ ವಿಶೇಷ ಕಾಂತಿಯನ್ನು ನೀಡುವಂತಿದೆ.

ಪುರಂದರದಾಸರ ರಚನೆಗಳಲ್ಲಿ ಭಕ್ತಿ ಸ್ಥಾಯಿಯಾದರೂ ಅವರ ಹೃದಯಾನುಭವ ಉಕ್ಕಿ ಹರಿಯುವಲ್ಲಿ ಸಾಹಿತ್ಯದ ಸೌಂದರ್ಯ ಸಹಜವಾಗಿಯೇ ಕೂಡಿಕೊಂಡು ಬರುವುದರಿಂದ ಒಂದೊಂದು ಬಂಧವೂ ಭಾವಗೀತದಂತಿರುತ್ತದೆ. ’ಶ್ರೀಕೃಷ್ಣನನ್ನು ಕಂಡಿರಾ?’ ಎಂದು ಕೇಳುವ ಅವರ ಉತ್ಸಾಹ ಹೇಗೆ ನಮ್ಮನ್ನು ಸೆಳೆದು ನಿಲ್ಲಿಸುತ್ತದೆ ಎನ್ನುವುದನ್ನು ಇಲ್ಲಿನ ಕೀರ್ತನೆಯಲ್ಲಿ ನೋಡಿರಿ.

ನೋಡುವುದೇ ಕಣ್ಣು ಕೇಳುವುದೇ ಕಿವಿ
ಪಾಡುವುದೇ ವದನ

ಪುರಂದರರಂತೆ ಕನಕದಾಸರ ಕೃತಿಗಳಲ್ಲಿ ಎದ್ದು ಕಾಣುವ ಗುಣವೆಂದರೆ, ಅವರು ಆಡಿದ ಮಾತುಗಳು ಸಾಮತಿಗಳಂತೆ ಅರ್ಥಗರ್ಭಿತವಾಗಿರುತ್ತವೆ. ಅಹುದಾದರಹುದೆನ್ನಿ ಅಲ್ಲವಾದರಲ್ಲವೆನ್ನಿ ಎಂಬ ಪಲ್ಲವಿಯಲ್ಲಿ ಕಂಡುಬರುವ ಖಂಡಿತೋಕ್ತಿ ಇಡೀ ಕೀರ್ತನೆಯಲ್ಲಿ ಕೇಳಿ ಬರುತ್ತದೆ. ಅವರ ಲೋಕಾನುಭವದ ವ್ಯಾಪ್ತಿಯನ್ನು ಈ ಕೃತಿಯ ಯಾವ ನುಡಿಯಲ್ಲಾದರೂ ಗ್ರಹಿಸಬಹುದು. ’ದೇವರಿಲ್ಲದ ಗುಡಿಯು ಪಾಳು ಬಿದ್ದಂಗಡಿಯು, ಭಾವವಿಲ್ಲದ ಭಕುತಿ ಅದು ಕುಹುಕ ಯುಕುತಿ’, ’ಧರ್ಮದಿಲ್ಲದ ಅರಸು ಮುರಿದ ಕಾಲಿನ ಗೊರಸು, ನಿರ್ಮಲಿಲ್ಲದ ಮನಸು ತಾ ಕೊಳಚೆ ಹೊಲಸು’, ’ಉಂಡು ನಗದಿಹ ಮೊರೆ ಅದು ಕಹಿಯ ಸೋರೆ’ ಇದು ಕನಕದಾಸರು ತಾವು ಕಂಡ ಜೀವನದ ಒಂದು ಮುಖ.

ಕನಕದಾಸರ ರಚನೆಗಳಲ್ಲಿ ಭಾವ ಪರವಶತೆಗಿಂತಲೂ ಚಿಂತನೆಯ ಪಾಲು ಮಿಗಿಲೆನ್ನಬಹುದು. ’ಜೀವ’ವನ್ನು ಕುರಿತು ಅವರು ಆಲೋಚಿಸಿರುವ ಸರಣಿ ಇದಕ್ಕೆ ಒಳ್ಳೆಯ ಉದಾಹರಣೆ.

ಎಲ್ಲಿಂದ ಬಂದೆ ಮುಂದೆತ್ತ ಪೈಣ
ಇಲ್ಲಿ ನಿನಗೆಷ್ಟು ದಿನವಾಲಸ್ಯ ಮರುಳೆ ?

ಇದು ತಮಗೆ ತಾವೇ ಹಾಕಿಕೊಂಡ ಪ್ರಶ್ನೆ. ತಾವೇ ಆ ಬಗ್ಗೆ ಚಿಂತಿಸತೊಡಗಿದುದರ ಪರಿಣಾಮ ಇದು.
ಮಾತೆಯುದರದೊಳು ನವಮಾಸ ಮಲಮೂತ್ರದೊಳು

ಯಾತನೆಯು ಯೋನಿಮುಖ ಮಾರ್ಗವಿಡಿದು
ಭೂತಳಕೆ ಬಂದು ಹದನೇನು ತೀರಿಸಿಕೊಂಡೆ
ಜಾತಿ ಯಾವುದು ನಿನ್ನ ಪೆಸರೇನು ಮರಳೆ

ಮುಂದ್ಯಾವ ಪಥವ ಸೇರುವೆ ಮರುಳೆ ಸಾಕಿನ್ನು
ಹಿಂದೆ ನೆರವಾದ ನಿನಗಾಪ್ತರುಂಟೆ
ಒಂದು ಗೂಡಿದ ಸತಿಸುತರೆಲ್ಲ ವರ್ಜಿಪರು
ನಿಂದು ಮಾತಾಡು ಬಳಲಿದೆ ಬರಿದೆ ಮರುಳೆ

ಬರವಿದ್ಯಾತಕೆ ನಿನ್ನ ಸ್ಥಳವೆಲ್ಲಿ ನೆಲೆಯಾಗಿ
ಇರುವ ಮಂದಿರವ್ಯಾವುದದನೆನಗೆ ಪೇಳೊ
ಧರೆಯೊಳಗೆ ವರ ಕಾಗಿನೆಲೆಯಾದಿಕೇಶವನ
ಸಿರಿಚರಣ ಕಮಲವನು ನೆರೆನಂಬಿ ಸುಖಿಸೊ

’ಜೀವ’ದ ಪಾಡಿಗಾಗಿ ನೊಂದುಕೊಂಡ ಕನಕದಾಸರು. ಜನ್ಮಜನ್ಮಾಂತರಗಳ ಸುರಳಿಯನ್ನು ಸ್ಮರಿಸಿ ಆ ಬಗ್ಗೆ ಇನ್ನೂ ಅದ್ಭುತವಾಗಿ ಆಲೋಚಿಸಿರುವರು.

ಹಲವು ಜನ್ಮದ ತಾಯಿ ಎನಗಿತ್ತ ಮೊಲೆಹಾಲು
ನಲಿನಲಿದು ಉಂಡಾಗ ನೆಲಕೆ ಬಿದ್ದಾ ಹಾಲು
ಅಳೆದು ನೋಡಿದರೆ ಕ್ಷೀರಾಬ್ಧಿಗಿಂ ಮಿಲು, ತಾ
ನುಳುತ ಸುರಿದಶ್ರುಜಲವು
ಬಳಿಕ ಲವಣಾರ್ಣವಕೆ ಮೂರ ಮಡಿ, ಈ ತನುವಿ
ನೆಲು ಕೂಡಿದರೆ ಮಹಮೇರುವಿಗೆ ನಾಲ್ಕು ಮಡಿ,
ಸುಲಿದ ಚರ್ಮವು ಹಾಸಿದರೆ ಈ ಭೂಮಿಗೈದು ಮಡಿ
ನೆಲೆ ಯಾವುದೀ ದೇಹಕೆ ಕೃಷ್ಣಾ …………

ಈ ಜೀವ ಎಂಬತ್ತುನಾಲ್ಕೂ ಲಕ್ಷಯೋನಿಗಳಲ್ಲಿ ಹುಟ್ಟಿ ತೊಳಲಿ ಬಳಲಿ ಕಡೆಗೆ ನರಜನ್ಮವನ್ನು ಪಡೆಯವುದೆಂಬ ಅಭಿಪ್ರಾಯವನ್ನು ಕನಕದಾಸರು ಹೇಳಿರುವ ರೀತಿ ನೂತನವಾಗಿದೆ.

ಕೃಷ್ಣನ ಚೆಲುವನ್ನು ಬೊಟ್ಟು ಮಾಡಿ ಹೇಳುವ ದಾಸರ ಕಲೆಯ ಕೌಶಲ್ಯವನ್ನು ತುಂಬ ಸೊಗಸಾಗಿದೆ.

ಪುಂಗೊಳಲೂದುತ ಮೃಗ ಪಕ್ಷಿಗಳನೆಲ್ಲ
ಸಂಗಳಿಸುತಲಿಪ್ಪನ
ಅಂಗಜ ಜನಕ ಗೋಪಾಂಗನೇರೊಡನೆ ಬೆಳ
ದಿಂಗಳೊಳಗೆ ಸುಳಿದಾಡೊ ರಂಗಯ್ಯನ

ಪುಂಗೊಳಲ ಪವಾಡವನ್ನು ಪ್ರಥಮತಃ ಪ್ರಸ್ತಾಪಿಸುವರು. ಅದರ ನಾದ ಕೇಳಿ ಬರುವುದೇ ತಡ, ಮೃಗಪಕ್ಷಿಗಳು ಸುತ್ತುಗೂಡುವುವು. ಇದು ನಾದದ ಆಕರ್ಷಣೆಯಾದರೆ ಆತನ ಆಕೃತಿಯಂತೂ ಅಯಸ್ಕಾಂತ ಶಿಲೆಯಂತೆ ಗೋಪಿಯರನ್ನು ಬರಮಾಡಿಕೊಂಡಿತು ಎಂಬ ಹೇಳಿಕೆ ಹೃದಯಂಗಮವಾಗಿದೆ. ಆತನು ’ಅಂಗಜಜನಕ’ ಎಂಬ ವಿಶೇಷಣದಲ್ಲಿ ಈ ಆಕರ್ಷಣೆಯ ರಹಸ್ಯ ಅಡಗಿದೆ, ಇನ್ನು ಆಗಿನ ಸಮಯವಾದರೋ ಹಾಲುಚೆಲ್ಲಿದ ಬೆಳದಿಂಗಳು ಎಂಬ ಬಳಿಕ ಹೆಚ್ಚು ವ್ಯಾಖ್ಯಾನವೇ ಬೇಕಿಲ್ಲ.

ಈ ಚೆಲುವ ಗೋಪಾಲನ ಅಮೋದ ಆನಂದಗಳನ್ನು ಪುರಂದರದಾಸರು ಆಯ್ದ ಸಾದೃಶ್ಯಗಳ ಮೂಲಕ ತಿಳಿಯ ಹೇಳುವರು.

ನವಿಲಂತೆ ಕುಣಿವ ಹಂಸೆಯಂತೆ ನಲಿವ
ಮರಿ ಕೋಗಿಲೆಯಂತೆ ಕೂಗುವ
ಎರಳೆಯ ಮರಿಯಂತೆ ಚಿಗಿಚಿಗಿದಾಡುವ
ತುಂಬಿ ಝೆಂಕರಿಸುವಂದದಿ ಝೆಂಕರಿಪನ

ನವಿಲ ನರ್ತನ, ಹಂಸದ ಬೆಡಗು, ಮರಿಕೋಗಿಲೆಯ ಇನಿದನಿ, ಜಿಂಕೆ ಮರಿಯ ನೆಗೆದಾಟ, ತುಂಬಿದ ಇಂಪುಗಳನ್ನು ಅನುಭವಿಸಿದವರಿಗೆ ಪುರಂದರದಾಸರ ಈ ಹೋಲಿಕೆಗಳು ಎಷ್ಟು ಹೊಂದಿಕೊಂಡು ಬರುತ್ತವೆ ಎನ್ನುವುದು ವ್ಯಕ್ತವಾಗುತ್ತದೆ.

ಕಡೆಯ ನುಡಿಯಲ್ಲಿ ಕೃಷ್ಣನ ಸ್ಪರ್ಶಮಾತ್ರದಿಂದ ಆಗುವ ಆಶ್ಚರ್ಯವನ್ನು ಒಂದು ಪೌರಾಣಿಕ ಉಪಮಾನದ ಮೂಲಕ ವಿಶದಪಡಿಸುವರು.

ಮುರುಡು ಕುಬ್ಜೆಯ ಡೊಂಕು ತಿದ್ದಿ ರೂಪವ ಮಾಡಿ
ಸೆರೆಯ ಪಿಡಿಸಿಕೊಂಬನ
ಗರುಡ ಗಮನ ಸಿರಿ ಪುರಂದರವಿಠಲನ
ಶರಣಾಗತ ಸುರಧೇನು ರಂಗಯ್ಯನ

ಈ ನುಡಿಯಲ್ಲಿ ಚಿತ್ತದ ಆಕರ್ಷಣೆಗಿಂತಲೂ ತರ್ಕದ ಕೈ ಮೇಲಾಗಿರುವುದರಿಂದ ನಾವು ನಿರೀಕ್ಷಿಸಬಹುದಾದಷ್ಟು ರಸಾನುಭವ ದೊರೆಯದೆ ಇರುವುದು ಸಹಜವೇ ಸರಿ. ಆದರೂ ಕುಬ್ಜೆಯ ಉಪಮಾನವನ್ನು ಒಂದು ಸಂಕೇತ ಮಾತ್ರವೆಂದು ಭಾವಿಸಿದರೆ, ನಮ್ಮ ಮನದ ಕೊಂಕು ಕೋರೆಗಳನ್ನು ತಿದ್ದಬಲ್ಲ ಮುರಲೀಲೋಲ ಭಕ್ತರ ಕಾಮಧೇನುವೆನ್ನುವುದರಲ್ಲಿ ಸಂದೇಹವಿಲ್ಲ. ದೈವಭಕ್ತಿ ಹೃದಯಾಂತರಾಳದಿಂದ ಹೊರಹೊಮ್ಮಿ ಬಂದಾಗ ಆ ಮೂಲಕ ಎಂತಹ ಉತ್ಕೃಷ್ಟವಾದ ಸಾಹಿತ್ಯ ಸೃಷ್ಟಿಯಾಗಬಲ್ಲದು ಎನ್ನುವುದಕ್ಕೆ ಈ ಕೀರ್ತನೆ ಒಂದು ನಿದರ್ಶನ ಮಾತ್ರ! ಪುರಂದರದಾಸರ ಭಕ್ತಿಭಂಡಾರದಲ್ಲಿ, ಇಂಥವು ಹಲವಾರಿವೆ. ಅವುಗಳನ್ನು ಹುಡುಕಿಕೊಂಡು ಹೋಗಬೇಕಾಗಿಲ್ಲ; ಯಾವುದನ್ನು ಆರಿಸಿಕೊಳ್ಳಬೇಕೆಂಬುದೇ ಇಲ್ಲಿನ ಮಹಾಸಮಸ್ಯೆ. ’ಶ್ರೀಪತಿ ಪಾದಾರವಿಂದ ಸೇವೆ’ಯನ್ನು ಕೈಕೊಂಡ ಪುರಂದರದಾಸರು ತಮ್ಮ ಕೀರ್ತನೆಯಲ್ಲಿ ತಾವೇ ಹೇಳಿಕೊಂಡಿರುವಂತೆ ಇವುಗಳು ಸಮಯದ ಸ್ಫೂರ್ತಿಯಿಂದ ಅನಾಯಾಸವಾಗಿ ಹುಟ್ಟಿ ಬಂದ ಆಶುರಚನೆಗಳು.

ವಿಜಯದಾಸರು ಭಗವಂತನ ಭಕ್ತವಾತ್ಸಲ್ಯವನ್ನು ಪ್ರತಿಪಾದಿಸುವಲ್ಲಿ ಪ್ರಯೋಗಿಸಿರುವ ಸಾದೃಶ್ಯಗಳು ಕೇವಲ ಲೌಕಿಕವಾಗಿರುವಷ್ಟೇ ಅಲ್ಲದೆ ಸರ್ವಜನ ಗ್ರಾಹ್ಯವೂ ಹೌದು. ಹರಿದಾಸ ಸಾಹಿತ್ಯರಾಶಿಯಲ್ಲಿಯೇ ಇದೊಂದು ರಸವತ್ತಾದ ಕೀರ್ತನೆ.

ಭಕುತಜನ ಮುಂದೆ ನೀನವರ ಹಿಂದೆ||ಪ||
ಯುಕುತಿ ಕೈಕೊಳ್ಳದೊ ಗಯ ಗದಾಧರನೆ||ಅ.ಪ||
ಕಟ್ಟೆರಡು ಬಿಗಿದು ನದಿ ಸೂಸಿ ಹರಿಯುತ್ತಿರೆ
ಕಟ್ಟಲೆಯಲ್ಲಿ ಹರಿಗೋಲು ಹಾಕಿ
ನೆಟ್ಟನೆ ಆಚೆಗೀಚೆಗೆ ಪೋಗಿ ಬರುವಾಗ
ಹುಟ್ಟು ಮುಂದಲ್ಲದೆ ಹರಿಗೋಲು ಮುಂದೆ ?
ಕಾಳೆ ಹೆಗ್ಗಾಳೆ ದುಂದುಭಿ ಭೇರೆ ತಮಟೆ ನಿ
ಸ್ಸಾಳ ನಾನಾ ವಾದ್ಯ ಘೋಷಣಗಳು
ಸಾಲಾಗಿ ಬಳಿವಿಡಿದು ಸಂಭ್ರಮದಿ ಬರುವಾಗ
ಆಳು ಮುಂದಲ್ಲದೆ ಅರಸು ಮುಂದೆ ?
ಉತ್ಸಾವ ವಾಹನದಿ ಬೀದಿಯೊಳು ಮೆರೆಯುತಿರೆ
ಸತ್ಸಂಗತಿಗೆ ಹರಿದಾಸರೆಲ್ಲ
ವತ್ಸಲ, ಸಿರಿ ವಿಜಯವಿಠಲ ವೆಂಕಟಾಧೀಶ
ವತ್ಸ ಮುಂದಲ್ಲದೆಧೇನು ತಾ ಮುಂದೆ ?

ಭಗವಂತನು ಭಕ್ತನ ಬೆಂಗಾವಲಿನಲ್ಲಿರುವನು ಎನ್ನುವ ಅಭಿಪ್ರಾಯದ ಪ್ರತಿಪಾದನೆಯೇ ಈ ಕೀರ್ತನೆಯ ಮುಖ್ಯ ಗುರಿ. ತುಂಬು ಹೊಳೆಯನ್ನು ಹರಿಗೋಲಿನಲ್ಲಿ ದಾಟುವಲ್ಲಿ ಅಂಬಿಗನು ತನ್ನ ಕೈಯಲ್ಲಿರುವ ಹುಟ್ಟನ್ನು ಮುಂದೆ ಹಾಕುವನೇ ವಿನಾ ಹಿಂದಲ್ಲವಷ್ಟೆ? ಮಹಾರಾಜರು ಸಮಸ್ತ ವೈಭವದಿಂದ ಮೆರವಣಿಗೆಯಲ್ಲಿ ಬರುವಾಗ, ಆತನ ಪರಿವಾರದವರು ಮುಂದೆ ಬರುವುದನ್ನು ಎಲ್ಲರೂ ಬಲ್ಲರು. ಹಾಲು ಕರೆಯುವ ಹಸು ತನ್ನ ಕರುವನ್ನು ಮುಂದೆ ಬಿಟ್ಟುಕೊಂಡು ತಾನು ಹಿಂದೆ ಬರುವುದನ್ನು ಯಾರು ತಾನೆ ಅರಿಯರು? ಈ ಚಿರಪರಿಚಿತ ಸನ್ನಿವೇಶಗಳನ್ನು ಅವಲಂಬಿಸಿ, ವಿಜಯದಾಸರು ಭಗವಂತನ ಸರ್ವದಾ ಹಿಂದೆ ನಿಂತು ತನ್ನ ಭಕ್ತರನ್ನು ಮುಂದೆ ಸುರಕ್ಷಿತವಾಗಿ ನಡೆಸಿಕೊಂಡು ಹೋಗುವನೆಂದು ಹೇಳಿರುತ್ತಾರೆ. ಭಕ್ತವಾತ್ಸಲ್ಯದ ಸ್ವರೂಪವನ್ನು ಮನದಟ್ಟು ಮಾಡಿಕೊಡುವ ಈ ರಚನೆ ಆಲೋಚಿಸಿದಷ್ಟೂ ರಮಣೀಯವೆನ್ನಿಸುತ್ತದೆ.

ವಿಜಯದಾಸರ ಸುಳಾದಿಗಳ ನೆಲೆಯನ್ನು ಅಳೆದು ನೋಡುವುದು ಬಹು ಕಠಿಣ. ಅಲ್ಲಿ ದಾಸರ ವಾಣಿ ತುಂಬು ಹೊಳೆಯಂತೆ ಪ್ರವಹಿಸುತ್ತದೆ. ಶಾಸ್ತ್ರ ನಿಬಿಡವಾಗಿದ್ದರೂ ಅವರ ಅಂತರಂಗದ ಅನುಭವದಿಂದ ಅವು ಆಹ್ಲಾದದಾಯಕವಾಗಿ ಪರಿಣಮಿಸಿವೆ. ಹರಿನಾಮ ಹರಿಭಕ್ತರ ಪಾಲಿಗೆ ಹಡೆದ ತಾಯಿಯಂತೆ ಹಿತವೆನ್ನುವರು.

ತೊಟ್ಟಿಲೊಳಗೆ ಇಪ್ಪ ಶಿಶುವಿನ ಮೊಗ ನೋಡಿ
ತುಷ್ಟಳಾಗಿ ಜನನಿ ತೆಗೆದೆತ್ತಿ ಮೊಲೆಯ
ಕೊಟ್ಟು ಸಂತೈಸುವ ತೆರದಲ್ಲಿ ಎನಗೆ
ವಿಜಯವಿಠಲನೆಂಬ ಜನನಿ ಇರಲಿಕ್ಕೆ
ಕಷ್ಟಪಡುವುದ್ಯಾಕೆ ಕಂಡದ್ದು ಹಂಬಲಿಸಿ
ಇಷ್ಟು ಮೂರುತಿ ರಂಗ ವಿಜಯವಿಠಲರೇಯನ
ಪಟ್ಟಣ ಸೇರುವುದು ಒಂದೆ ನಾಮದಿಂದ

ಭಗವಂತನ ಭಕ್ತವಾತ್ಸಲ್ಯವನ್ನು ಚಿತ್ರಿಸುವಲ್ಲಿ ಹೇಗೆ ದೈನಂದಿನ ಜೀವನವನ್ನು ಕಣ್ಣೆದುರು ಇಟ್ಟುಕೊಂಡಿದ್ದರೋ. ಹರಿನಾಮದ ಹಿರಿಮೆಯನ್ನು ಹೇಳುವಲ್ಲಿಯೂ ದಾಸರು ಮಾತೃವಾತ್ಸಲ್ಯದ ಅಂತಃಕರಣವನ್ನು ಆದರ್ಶವನ್ನಾಗಿ ಭಾವಿಸಿರುತ್ತಾರೆ.

ಲೌಕಿಕ ಸುಖ ಸಂತೋಷಗಳಿಗೆ ಇತಿಮಿತಿಗಳುಂಟೆ? ಆದಿ ಅಂತ್ಯಗಳಿಲ್ಲದ ಈ ಮನೋಧರ್ಮವನ್ನು ವಿಜಯದಾಸರು ವ್ಯಕ್ತಪಡಿಸುವಲ್ಲಿ ಅವರು ಅನುಸರಿಸಿರುವ ಕ್ರಮ ಅನ್ಯದೃಶವೆಂಬಂತಿದೆ.

ಧರೆ ಸವೆಯಿತು, ಮೇರುಗಿರಿ ಸವೆಯಿತು, ಮದ
ಕರಿ ಮೊದಲಾದ ಸಂಚಠ ಸವೆಯಿತು, ಸರ್ವ
ಧರಣಿಯನು ಹೊತ್ತ ಉರುಗರಾಜನ ದಿವ್ಯ
ಶಿರ ಸವೆಯಿತು, ಸೂರ್ಯನ ವರರಥ ಸವೆಯಿತು, ಅಂ
ಬರದಲಿ ಹಾರುವ ಗರುಡನ ಗರಿಗಳು
ಇರದೆ ಸವೆದವು, ನಿರ್ಜರರ ಗಣ ಮಿಕ್ಕಾದ
ವರಗಾತ್ರಗಳೆಲ್ಲ ಪರಿಪರಿಯಿಂದಲಿ ಸವೆದವು ಸವೆದವಯ್ಯ
ಪರಮ ಪುರುಷ ನಮ್ಮ ವಿಜಯವಿಠಲ ಎನ್ನ
ಮರುಳುಗೊಲಿಸುವ ಮನ ಸವೆಯದೊ ಕಾಣೊ

ವಿಜಯದಾಸರ ವಿಚಾರಲಹರಿಗೆಒಪ್ಪುವಂತೆ ಈ ಸುಳಾದಿಯ ಶೈಲಿ ವೈಭವಪೂರ್ಣವಾಗಿ ಸಾಗುತ್ತದೆ.
ವಿಜಯದಾಸರು ಪುಂಖಾನುಪುಂಖವಾಗಿ ಉಪಮಾನಗಳನ್ನು ಬಳಸುವುದರಲ್ಲಿ ಅಗ್ರಗಣ್ಯರು. ಅವಶ್ಯವಿದ್ದಲ್ಲಿ ಒಂದೇ ಅಭಿಪ್ರಾಯವನ್ನು ನೀಡಿದಾಗಿಯೂ ಬೆಳೆಸಬಲ್ಲರು.

ಉಪವಾಸದವನಿಗೆ ಊರು ತುಂಬಿದರೇನು?
ಅಪಹಾಸಗೊಳಿಸುವ ಗೆಳೆಯನಾದರೇನು?
ಕುಪಿತ ಬಿಡದವನ ಕೂಡೆ ಉಂಡರೇನು?
ಉಪಹಾರ ಅರಿಯದವ ಊಟಕ್ಕೆ ಬಂದರೇನು ?
ಹಪ ಹಾಕಿ ಉಣಿಸುವ ಆಪ್ತನಾದರೆ ಏನೋ !
ಕೃಪೆ ಮಾಡದವನ ಚರಣ ತೊಳೆದರೇನೋ ?
ತಪಸಿಗಳೊಡೆಯ ಶ್ರೀ ವಿಜಯವಿಠಲರಾಯನ
ಶ್ರೀಪಾದ ಕಾಣದವಗೆ ಅಪವರ್ಗದ ಗೊಡವೇನು

ದೈವಾನುಗ್ರಹವನ್ನು ಕೋರಿ ಹಂಬಲಿಸುವಲ್ಲಿ, ವಿಳಂಬವನ್ನು ತಡೆಯಲಾರದೆ ಭಗವಂತನಲ್ಲಿ ಮಾಡಿಕೊಂಡಿರುವ ವಿಜ್ಞಾಪನೆಯಿದು. ಈ ಸುಳಾದಿಯ ಜತೆ ಮುದ್ದು ಮುಖವ ತೋರೋ ಮುಚುಕುಂದವರದನೆ ಎದ್ದುಕರವ ಮುಗಿವೆ ವಿಜಯವಿಠಲ ಗುರುವೆ ಎಂದು ಮುಗಿಯುವುದನ್ನು ಗಮನಿಸಿದರೆ ವಿಜಯದಾಸರ ಹೃದಯದ ಹೊಯ್ದಾಟದ ಕಲ್ಪನೆಯಾಗುತ್ತದೆ.

ವಿಜಯದಾಸರಿಗೆ ಮಾತೃವಾತ್ಸಲ್ಯದಲ್ಲಿರುವ ವಿಶ್ವಾಸ ಬಹುದೊಡ್ಡದು. ಭಕ್ತ ಸಂರಕ್ಷಕನಾದ ಭಗವಂತನು ತಟಸ್ಥನಾದಂತೆ ತೋರಿಬರಲು ಭಕ್ತನು ತನ್ನ ಸ್ವಾಮಿಯನ್ನು ಹೇಗೆ ಆಶ್ರಯಿಸುವನು ಎನ್ನುವುದನ್ನು ಮಾತೃವಾತ್ಸಲ್ಯದ ನಿದರ್ಶನವನ್ನು ನಿಡಿದಾಗಿ ಬೆಳೆಸಿ ತಿಳಿಸಿರುವ ಈ ಸಂದರ್ಭವನ್ನು ನೋಡಬಹುದು.

ಮಗನ ಠಕ್ಕಿಸಿ ತಾಯಿ ಮಲಗಿರಲು ಶಿಶುವು
ಮಗುಳೆ ಕ್ರಮಗೆಟ್ಟು, ಕಂಡಲ್ಲಿ ಅರಸಿ
ಕಣ್ಣಿಗೆ ಬೀಳದಿರೆ ತಾಯಿ, ಮಗುವು ದು:ಖಿಸಿ ನೋಡಿ ತಾ
ನಗುತ ಬೇಗನೆ ಬಂದು ತಕ್ಕೈಸಿ ಮುದ್ದಾಡಿ ಬಗೆ
ಬಗೆ ಲಾಲನೆ ಮಾಡಿ ದಿವ್ಯಾನ್ನವನು
ತುತ್ತುಗಳ ಬಾಯೊಳಗಿಟ್ಟು ತೃಪ್ತ ಮಾಡಿ
ಮಲಗಿಸಿ ಜೋಗುಳ ಪಾಡಿ ಮತ್ತೆ ಏಳಲು ಎತ್ತಿ
ಮೊಗವನೀಕ್ಷಿಸಿ ಮೊಲೆಗೊಟ್ಟು ರಕ್ಷಿಸುವಳೊ,
ಅಗಣಿತ ಮಹಿಮನೆ ತಾಯಿಯಂದದಿ
ಎನಗೆ ಇಂದು ತಿಳಿದು ಠಕ್ಕಿಸಿ ಲೀಲೆ ತೋರುವ
ಬಗೆ ಇದೆ ಸಿದ್ಧವಾಗಿದೆ ದೇವ ಎನ್ನನು
ಅಗಡುಗೊಳಿಸದಿರು ಅನಿಮಿತ್ತ ಬಂಧವ
ಜಗದೊಳು ತಾಯಿ ಬಾಲಕನಿಗೆ ಭೇದವೆ
ಸುಗುಣ ಸುಂದರ ಕಾಯ ವಿಜಯವಿಠಲರಾಯ
ಮಿಗೆ ಮನದೊಳಗೆ ವ್ಯಾಪಿಸಿದ ಕಲ್ಮಷ ಕಳೆಯೊ

ವಿಜಯದಾಸರು ಸುಳಾದಿಯ ಮಾಧ್ಯಮವನ್ನು ಅರಿಸಿಕಂಡು ಅದರಲ್ಲಿ ತಮ್ಮ ಪ್ರತಿಭೆ ಪ್ರಕಾರ ಬಹಳ ಚೆನ್ನಾಗಿ ಪಳಗಿತು. ಆದ್ದರಿಂದ ವಿಜಯದಾಸರ ತರುವಾಯ ಬಂದ ಅನೇಕ ಹರಿದಾಸರು ಈ ಮಾಧ್ಯಮವನ್ನೇ ಸ್ವೀಕರಿಸಿರುವುದು ಕಂಡುಬರುತ್ತದೆ. ಕೀರ್ತನೆ ಮತ್ತು ಉಗಾಭೋಗಗಳಲ್ಲಿ ಮಾತಿಗೆ ಎಷ್ಟು ಮಿತಿಯುಂಟೋ, ಸುಳಾದಿಯಲ್ಲಿ ಮಾತಿನ ನಿರರ್ಗಳತೆಗೆ ಅಷ್ಟೂ ಪ್ರಯೋಜನವೂ ಆಗಿದೆ.

ವಚನಕಾರರಂತೆ ದಾಸರು ಸಂಸ್ಕೃತವನ್ನು ಬಿಟ್ಟು ತಮ್ಮ ಅನುಭವ, ತತ್ವಗಳನ್ನು ತಿಳಿಯಲು ಆಡುನುಡಿ ಕನ್ನಡವನ್ನು ಮಾಧ್ಯಮವನ್ನಾಗಿ ಬಳಸಿರುವುದರಿಂದ ಜನತೆಯೊಂದಿಗೆ ಅರ್ಥಪೂರ್ಣ ಸಂಬಂಧ ಹೊಂದಲು ಅವರಿಗೆ ಸಾಧ್ಯವಾಯಿತು. ಭಾಷೆಯಲ್ಲಿ ಸರಳತೆ ಹಾಗೂ ಭಕ್ತಿ ಇವು ದಾಸ ಸಾಹಿತ್ಯದ ಮುಖ್ಯ ಸ್ಥಾಯಿಗಳಾಗಿವೆ. ಈ ಕಾರಣಗಳಿಂದ ಎಂತಹ ಗಹನ ಅಂಶಗಳನ್ನು ಸರಳ ಶೈಲಿಯಲ್ಲಿ ’ಸಾಮಾಜಿಕ ಕ್ರಿಯೆ’ಯಾಗಿ ಅಭಿವ್ಯಕ್ತಿಸುವ ಕಲೆ ಅವರಿಗೆ ಪ್ರಾಪ್ತವಾಗಿದೆ. ಅವರ ಪಾಲಿಗೆ ದೇವರು ತುಂಬ ಹತ್ತಿರದವನು. ಮತ್ತೆ ಮತ್ತೆ ಅವನ ಚರಣ ಕಮಲವನ್ನು ಬಣ್ಣಿಸಿ ನೆನೆಸಿ ಸಂತೋಷ ಪಟ್ಟರೂ ಅವರಿಗೆ ತೃಪ್ತಿಯಿಲ್ಲ. ಪುರಂದರದಾಸರು ಒಂದೆಡೆ ಹೇಳುತ್ತಾರೆ ?

ಸಂಸಾರ ಎಂಬಂಥ ಭಾಗ್ಯವಿರಲಿ
ಕಂಸಾರಿ ನೆನೆವೆಂಬ ಸೌಭಾಗ್ಯವಿರಲಿ||ಪ||

ತಂದೆ ನೀನೇ ಕೃಷ್ಣ ತಾಯಿ ಇಂದಿರೆ ದೇವಿ
ಪೊಂದಿದ ಅಣ್ಣನು ವನಸಂಭವನು
ಇಂದುಮುಖಿ ಸರಸ್ವತಿ ದೇವಿಯೇ ಅತ್ತಿಗೆಯು
ಎಂದೆಂದಿಗೂ ವಾಯುದೇವರೆ ಗುರು||೧||

ಭಾರತಿ ದೇವಿಯೆ ಗುರುಪತ್ನಿಯು ಎನಗೆ
ಗರುಡ ಶೇಷಾದಿಗಳೆ ಗುರುಪುತ್ರರು
ಹರಿದಾಸರೆಂಬವರೆ ಇಷ್ಟಬಾಂಧವರೆನಗೆ
ಹರಿಭಜನೆ ನಡೆಯುತಿಹ ಸ್ಥಳವೆ ಮಂದಿರವು||೨||
ಸರ್ವಾಭಿಮಾನವನು ತ್ಯಜಿಸುವುದೆ ಸುಸ್ನಾನ
ಹರಿಯ ನಾಮವೆ ಇನ್ನು ಅಮೃತಪಾನ
ವರದ ಪುರಂದರವಿಠಲ ನಿನ್ನ ಪಾದ ಧ್ಯಾನ
ಕರುಣಿಸಿ ಅನವರತ ಕರಿಪಿಡಿದು ಕಾಯೊ||೩||

ದಾಸವರ್ಯರು ಭಗವಂತನಲ್ಲಿ ಆರ್ತರಾಗಿ ಮೊರೆಯಿಟ್ಟು ಕರಪಿಡಿದು ಕಾಯೆಂದು ಕೇಳಿದ್ದಾರೆ. ಈ ಸಂಸಾರ ಕ್ಲೇಶಗಳಿಂದ ಕೂಡಿದ್ದು ಇದರಲ್ಲಿ ಹಿಗ್ಗುವಂಥದೇನೂ ಇಲ್ಲ. ಹಾಗೆ ನೋಡಿದರೆ ಇಲ್ಲಿ ಎಲ್ಲವೂ ಲೋಳಲೊಟ್ಟೆ. ಶ್ರೀಹರಿಯ ಕರುಣೆ ಪಡೆಯಲು ಇದು ಅಪರೂಪ ಸಾಧನ. ಅಂತೆಯೆ ಚಿಂತೆಯಿಂದ ಕೂಡಿದ ಸಂಸಾರದಲ್ಲಿ ದಾಸರು ದಾರಿ ತೋರಿದ್ದಾರೆ.

ಅನುಗಾಲವು ಚಿಂತೆ ಈ ಜೀವಕ್ಕೆ ತನ್ನ
ಮನವು ಶ್ರೀರಂಗನೊಳು ಮೆಚ್ಚುವ ತನಕ

ಸತಿಯು ಇದ್ದರು ಚಿಂತೆ ಇಲ್ಲದಿದರು ಚಿಂತೆ
ಮತಿಹೀನ ಸತಿಯಾದರೂ ಚಿಂತೆಯು
…………………………………………
ಪುತ್ರರಿದ್ದರು ಚಿಂತೆ ಪುತ್ರರಿಲ್ಲದ ಚಿಂತೆ
ಅತ್ತು ಅನ್ನಕೆ ಕಾಡುವ ಚಿಂತೆಯು

ಪೊಡವಿಯೊಳಗೆ ಸಿರಿ ಪುರಂದರವಿಠಲನ
ಬಿಡದೆ ಚಿಂತಿಸಿದರೆ ಚಿಂತೆ ನಿಶ್ಚಿಂತೆ

ಆದ್ದರಿಂದ ಶ್ರೀ ಹರಿಯ ಚಿಂತನೆಯೆ ನಮಗೆ ಪರಮಾರ್ಥ ಸಾಧಕವಾದುದು, ಅದಕ್ಕಾಗಿ ಹರಿಭಕ್ತರ ಸಹವಾಸವಿರಬೇಕು. ಹರಿಧ್ಯಾನಪರನಾಗಿರಬೇಕು, ವಿಠಲನ ಚರಣವನು ನಂಬಿ ಅವನನ್ನೆ ಶರಣು ಹೋಗಬೇಕು. ಬಿಡದೆ ’ನಿನ್ನ ಸ್ಮರಣೆ ಒಂದು ಕೊಡು ಸಾಕು’ ಎಂದು ದಾಸರು ಶ್ರೀ ಹರಿಯನ್ನು ಮತ್ತೆ ಮತ್ತೆ ಬೇಡಿದ್ದಾರೆ :

ಒಂದೇ ನಾಮವು ಸಾಲದೆ ಶ್ರೀಹರಿಯೆಂಬ
ಒಂದೇ ನಾಮವು ಸಾಲದೆ

ಒಂದೇ ನಾಮವು ಭವಬಂಧನ ಬಿಡಿಸುವ
ದೆಂದು ವೇದಗಳಾನಂದದಿ ಸ್ತುತಿಪುವು
…………………………………………
ಹಿಂದೊಬ್ಬ ಮುನಿಪುತ್ರನು ಪತಿತನಾಗಿ
ನಿಂದ್ಯಕರ್ಮದೊಳಿರಲು

ಮಂದಮತಿಯಾಗಿ ಬಂದಂತ್ಯ ಕಾಲದೊಳ್
ಕಂದ ನಾರಾಯಣನೆಂದು ಕರೆಯಲಭಯವಿತ್ತ

ಶ್ರೀ ಹರಿಯ ಅನವರತ ನಾಮಸ್ಮರಣೆಯೊಡನೆ, ಹರಿಭಕ್ತರ ಸತ್ಸಂಗವನ್ನೂ ತನಗೆ ಕರುಣಿಸಬೇಕೆಂದು ವಿಜಯದಾಸರು ಹಾಡಿದ್ದಾರೆ :

ನಿನ್ನ ಜನ ಸಂಗ ಕೊಡೊ ಎನ್ನಂತರಂಗನೆ
ಘನ್ನ ಸುಗುಣಾಂತರಂಗ ಮಂಗಳಾಂಗ

ಇಂಥ ಸತ್ಸಂಗದ ಫಲವಾಗಿ ಹರಿದಾಸರು ಸದಾಕಾಲ ಹರಿಸ್ಮರಣೆಯಲ್ಲಿರುವರು. ಇಂಥ ಹರಿಭಕ್ತರಾಗಿ ಬಾಳುವುದಕ್ಕಿಂತ ಹೆಚ್ಚಿನ ಭಾಗ್ಯವಿಲ್ಲವೆಂದು ಮನಗಂಡು ಹರ್ಷಪಡುವರು. ಅಂತೆಯೆ ಶ್ರೀ ವ್ಯಾಸರಾಜರು ಬೇಡಿಕೊಳ್ಳುತ್ತಾರೆ.

ಜನುಮ ಜನುಮದಲಿ ಕೊಡು ಕಂಡ್ಯ ಹರಿಯೆ ||ಪ||
ಅನಿಮಿತ್ತಬಂಧು ಶ್ರೀಕೃಷ್ಣ ದಯದಿಂದ ಎನಗೆ||ಅ.ಪ||

ಮರೆಯ ಊರ್ಧ್ವಪುಂಡ್ರ ಎರಡಾರು ನಾಮವು
ಕೊರಳೊಳು ತುಳಸಿಯ ವನಮಾಲೆಯು
ಮರೆವ ಶಂಖ ಚಕ್ರ ಭುಜದೊಳೊಪ್ಪುತ ನಿಮ್ಮ
ಸ್ಮರಿಸುತ್ತ ಹಿಗ್ಗುವ ವೈಷ್ಣವ ಜನುಮವ ||೧||

ಹರಿಯೆ ಸರ್ವೋತ್ತಮ ರಾಣಿ ಲಕುಮಿ ಬೊಮ್ಮ
ಹರಿ ಇಂದ್ರಾದ್ಯಖಿಳರು ಪರಸೇವಕರು
ವರ ತಾರತಮ್ಯ ಪಂಚಭೇದ ಸತ್ಯವೆಂದು
ನೆರೆ ಪೇಳುವ ವಾಯು ಮತದ ಸುಜ್ಞಾನವ||೨||

ಸಕಲ ವಿಬುಧೋತ್ತಮರಲಿ ನಮ್ರತೆಯು
ಸುಖತೀರ್ಥರಲ್ಲಿ ಮುಖ್ಯಗುರು ಭಾವನೆಯು
ಮುಕುತಿಪ್ರದಾಯಕ ಸಿರಿಕೃಷ್ಣ ನಿನ್ನಲಿ
ಅಕಳಂಕವಾದ ನವವಿಧ ಭಕುತಿಯನು||೩||

ಇಂಥ ನಮ್ರತೆ ಹರಿಭಕ್ತಿ ಗುರುಭಕ್ತಿಗಳು ದೊರಕಿದಾಗ ಬಿಸಿಲು ಬೆಳದಿಂಗಳಾಗುವದು. ಕತ್ತಲು ಹೋಗಿ ಬೆಳಕಾಗುವುದು. ವಿಷ ಅಮೃತವಾಗುವದು. ಆದ್ದರಿಂದ ಶ್ರೀ ಪಾದರಾಜರು ಹೀಗೆನ್ನುತ್ತಾರೆ :

ನಾ ನಿನಗೇನು ಬೇಡುವುದಿಲ್ಲ ಎನ್ನ ||ಪ||
ಹೃದಯ ಮಂಟಪದೊಳು ನಿಂತಿರೊ ಕೃಷ್ಣ ||ಅ.ಪ||

ಶಿರ ನಿನ್ನ ಚರಣದಲ್ಲೆರಗಲಿ ಎನ್ನ
ಚಕ್ಷುಗಳು ನಿನ್ನ ನೋಡಲಿ
ಕರ್ಣ ಗೀತಂಗಳ ಕೇಳಲಿ ಎನ್ನ
ನಾಸಿಕ ನಿರ್ಮಾಲ್ಯ ಘ್ರಾಣಿಸಲಿ ಕೃಷ್ಣ||೧||

ನಾಲಿಗೆ ನಿನ್ನ ಕೊಂಡಾಡಲಿ
ಕರಗಳೆರಡು ನಿನಗೆ ಮುಗಿಯಲಿ
ಪಾದ ತೀರ್ಥಯಾತ್ರೆ ಮಾಡಲಿ ನಿನ್ನ
ಧ್ಯಾನವೆನಗೆ ಒಂದು ಕೊಡು ಕಂಡ್ಯ ಹರಿಯೆ||೨||

ಬುದ್ಧಿ ನಿನ್ನೊಳು ಕುಣಿದಾಡಲಿ ಎನ್ನ
ಚಿತ್ತ ನಿನ್ನೊಳು ನಲಿದಾಡಲಿ
ಭಕ್ತಜನರ ಸಂಗ ದೊರಕಲಿ ರಂಗ
ವಿಠಲ ನಿನ್ನ ದಯಮಾರ್ಗ ಹರಿಯೆ

ಸಕಲ ಇಂದ್ರಿಯಗಳನ್ನು ನಿಗ್ರಹಿಸಿ ಅವುಗಳನ್ನು ಶ್ರೀ ಹರಿಸ್ಮರಣೆ ಸೇವೆಯಲ್ಲಿ ತೊಡಗಿಸಿದಾಗ ಹರಿದಾಸರಿಗೆ ಪರಮಾನಂದವಾಗುತ್ತದೆ. ನೆನಹಿನಾತುರ ಗೊಟ್ಟು ಅವರನ್ನು ಹರಿಯು ತನ್ನ ದಾಸನನ್ನಾಗಿ ಸ್ಪೀಕರಿಸುತ್ತಾನೆ.

ದಾಸಸಾಹಿತ್ಯದ ಶಿಲ್ಪರಚನೆಯನ್ನು ಗಮನಿಸಿದಾಗ ಅದರ ವೈವಿಧ್ಯವು ಅದರ ಜನ ಪ್ರಿಯತೆಗೆ ಮುಖ್ಯ ಕಾರಣವಾಗಿದೆ. ಅದರಲ್ಲಿ ರಾಗ ತಾಳಬದ್ದವಾದಂತಹ ಅಚ್ಚುಕಟ್ಟಾದ ಹಾಡುಗಳಿವೆ. ಲಯ ಪ್ರಧಾನವಾದಂತಹ ಸುಳಾದಿಗಳಿವೆ. ಆಡುಮಾತಿನ ಲಯದಿಂದ ಕೂಡಿದ ಸ್ವರ ಪ್ರಧಾನವಾದ ಗೀತೆಗಳಿವೆ. ಹಾಲುಸಕ್ಕರೆ ಹಿತವಾಗಿ ಬೆರೆತಂತೆ ಸಂಗೀತ ಸಾಹಿತ್ಯಗಳು ಹಿತವಾಗಿ ಬೆರೆತು ಅತ್ಯಂತ ಮಧುರವಾದ ಕಾವ್ಯಾನಂದ ನೀಡುತ್ತವೆ. ತನ್ಮೂಲಕ ದಾಸರು ಮಾನವೀಯ ಮೌಲ್ಯಗಳು ಜನರ ಬದುಕಿನಲ್ಲಿ ಬೇರುಬಿಡುವಂತೆ ಪ್ರಯತ್ನಿಸಿದರು.

ದಾಸಸಾಹಿತ್ಯದ ರಚನೆಯನ್ನಾಧರಿಸಿ ಅದರ ಸಂಪಾದನೆಯ ವೈಧಾನಿಕತೆಯನ್ನು ಕುರಿತು ಮರುಪರಿಶೀಲನೆ ಆಗಬೇಕಾಗಿದೆ. ಸಂಪಾದನೆಯ ನೆಲೆಯಲ್ಲಿ ದಾಸ ಸಾಹಿತ್ಯದ ಶೈಲಿಯನ್ನು ಗಮನಿಸಬಹುದಾಗಿದೆ. ದಾಸಸಾಹಿತ್ಯವನ್ನು ಈಗ ಸಿದ್ಧವಿರುವ ಪ್ರಾಚೀನ ಮಾರ್ಗಕೃತಿಗಳ ಸಂಪಾದನೆಯ ವಿಧಾನದಲ್ಲಿಯೇ ಸಂಪಾದಿಸಬೇಕೆ? ಅಥವಾ ಬೇರೊಂದು ವಿಧಾನವನ್ನು ಕಂಡುಹಿಡಿಯಬೇಕೆ? ನನ್ನ ಪ್ರಕಾರ ದಾಸಸಾಹಿತ್ಯ ಸಂಪಾದನೆಗೆ ಬೇರೊಂದು ವಿಧಾನವೇ ಸೂಕ್ತ. ಮಾರ್ಗಸಾಹಿತ್ಯ ಸಂಪಾದನೆಗೂ ದಾಸಸಾಹಿತ್ಯ ಸಂಪಾದನೆಗೂ ತುಂಬ ಅಂತರವಿದೆ. ಮಾರ್ಗಸಾಹಿತ್ಯವನ್ನು ಕವಿ ರಚಿಸಿ ನಂತರ ಲಿಪಿಕಾರರು ಅದನ್ನು ಪ್ರತಿಮಾಡುತ್ತಾರೆ. ಅಂತಹ ಕೆಲವು ಹಸ್ತಪ್ರತಿಗಳನ್ನು ಕಲೆಹಾಕಿ ಪೀಳಿಗೆಯನ್ನು ರಚಿಸಿ ಒಪ್ಪಿತಪಾಠವನ್ನು ಸುಲಭವಾಗಿ ಗುರುತಿಸಬಹುದು.

ದಾಸಸಾಹಿತ್ಯದ ಪರಿಸ್ಥಿತಿ ಹಾಗಿಲ್ಲ. ದಾಸಸಾಹಿತ್ಯ ಅಂಶಗಣದ ಮೇಲೆ ನಿಂತ ಮಟ್ಟುವಾಗಿದೆ. ಶೈಥಿಲ್ಯದ ಕಡೆಗೆ ಅದರ ಒಲವು ಹಾಗೂ ಅಲ್ಲಿ ಸಂಗೀತಕ್ಕೆ ಪ್ರಧಾನ್ಯತೆಯಿದೆ. ಇದರಿಂದ ದಾಸರು ಹಾಡಿದ ನಂತರ ಅದು ಕಂಠಸ್ಥವಾಗಿ ಉಳಿದು ಒಬ್ಬರಿಂದ ಇನ್ನೊಬ್ಬರಿಗೆ ಪ್ರಸರಣಗೊಳ್ಳುತ್ತದೆ. ಎಷ್ಟೋ ದಿನಗಳ ಬಳಿಕ ಬರೆಹದಲ್ಲಿ ದಾಖಲಾಗುತ್ತದೆ. ಈ ಹಾಡುಗಳನ್ನು ಸಾಮಾನ್ಯ ವಿದ್ಯಾವಂತರು ಹಾಡುವುದರಿಂದ ಮೂಲಪಾಠ ಕೆಲವು ಸಾರಿ ತಪ್ಪಿ ಹೋಗುವುದುಂಟು. ಹೀಗಾಗಿ ಒಬ್ಬರೇ ಹರಿದಾಸರ ಕೃತಿಗಳು ಒಂದೇಕಡೆ ಸಿಗುವುದಿಲ್ಲ (ವಿಜಯ ದಾಸರ ರಚನೆಗಳು ಮಾತ್ರ ಇದಕ್ಕೆ ಅಪವಾದವಾಗಿವೆ). ದಾಸಸಾಹಿತ್ಯ ಸಂಪಾದಿಸಲು ಹೊರಟ ಸಂಪಾದಕನಿಗೆ ಎರಡು ಸಮಸ್ಯೆಗಳು ತಲೆದೊರುತ್ತವೆ.

ಅ. ಹಸ್ತಪ್ರತಿಗಳ ಬಾಹುಳ್ಯತೆಯಿಂದ ಯಾವ ಪಾಠವನ್ನು ಅಂಗೀಕರಿಸಬೇಕು ?
ಆ. ಅಂಕಿತ ನಿರ್ಧಾರ ಮಾಡುವುದು

ದಾಸಸಾಹಿತ್ಯ ಹಾಡುಗಬ್ಬವಾಗಿರುವುದರಿಂದ ಆದಿ ಪ್ರಾಸಾಕ್ಷರದ ನಿರ್ಬಂಧವು ಈ ಹಾಡುಗಳಲ್ಲಿ ಒಂದಿಷ್ಟು ಸಡಿಲಗೊಂಡಿರುತ್ತದೆ. ಗಣಗಳಲ್ಲಿ ಸೇರಿದ ಅಂಶಗಳ ಸಂಖ್ಯೆಯಲ್ಲಿ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ. ಇವುಗಳಿಂದ ಹಸ್ತಪ್ರತಿಗಳ ಬಾಹುಳ್ಯ ಅಧಿಕವಾಗಿರುತ್ತದೆ ಹಾಗೂ ವೈವಿಧ್ಯತೆಯಿಂದ ಕೂಡಿರುತ್ತದೆ. ಇಂತಹ ಸಂದರ್ಭದಲ್ಲಿ ಹಸ್ತಪ್ರತಿಗಳ ಸಂಯೋಜನೆಯ ಕೆಲಸ ಮುಗಿದ ಮೇಲೆ ಅವುಗಳನ್ನು ತಾಳೆ ಮಾಡಿ ಭಿನ್ನ ಪಾಠಗಳನ್ನು ಗುರುತಿಸಬೇಕು. ಭಿನ್ನಪಾಠಗಳ ಹಾಡನ್ನು ಒಂದು ಘಟಕವಾಗಿ ಪರಿಗಣಿಸಬೇಕು. ಪಠ್ಯದಲ್ಲಿ ಪ್ರಾದೇಶಿಕ ಚಹರೆಗಳು ಕಾಣಿಸುತ್ತವೆ. ಹೀಗಾಗಿ ದಾಸಸಾಹಿತ್ಯದಲ್ಲಿ ಒಂದು ಪಠ್ಯ ಎನ್ನುವ ಇರುವುದಿಲ್ಲ. ಬಹುರೂಪಿ ಪಠ್ಯ ಇರುವುದು ಸಹಜ. ಹರಪನಹಳ್ಳಿ ಪ್ರದೇಶದ ಭೀಮವ್ವನ ಹಾಡು ಆ ಪ್ರದೇಶದಲ್ಲಿ ಒಂದು ಬಗೆಯಾಗಿದ್ದರೆ ಬೆಳಗಾವಿ ಪ್ರದೇಶದ ಕಡೆಗೆ ಇನ್ನೊಂದು ರೀತಿಯದಾಗಿರುತ್ತದೆ.

ಹರಪನಹಳ್ಳಿ ಪ್ರದೇಶದ ಕಡೆಬೆಳಗಾವಿ ಪ್ರದೇಶದ ಕಡೆಗೆ

ದೇವೇಂದ್ರನ ಸೊಸೆ ದೇವಕ್ಕಿ ತನಯಳು                             ದೇವೇಂದ್ರನ ಸೊಸೆ ದೇವಕಿ ತನಯಳು
ಏನೇನು ಬಯಸಿದಳು                                                   ಏನೇನು ಬಯಸುವಳು
ಒಂದು ತಿಂಗಳು ತುಂಬಲು ಸುಭದ್ರ                                  ಒಂದು ತಿಂಗಲು ತುಂಬಲು ಸುಭದ್ರ
ಅಂಜೂರಿ ದ್ರಾಕ್ಷಿ ಕಿತ್ತಳೆ ಜಂಬು ನೇರಳ ಬಯಸಿದಳು             ದ್ರಾಕ್ಷಿ ಮಾವು ಜಂಬು ನೇರಲೆ ಬಯಸುವಳು
ಅಂಬುಜಾಕ್ಷನ ತಂಗಿ ಪೈಜಣರುಳಿ ಗೆಜ್ಜೆ                            ಅಂಬುಜಾಕ್ಷನ ತಂಗಿ ಕಾಲಲ್ಲಿ ಸರಗಜ್ಜೆ
ಕಾಲುಂಗರ ಕುರುಪಿಲ್ಯ ಇಟ್ಟೇನೆಂಬುವಳು                         ಕಾಲುಂಗರ ಕುರುಪಿಲ್ಯ ಇಟ್ಟೇನೆಂಬುವಳು
ಎರಡು ತಿಂಗಳು ತುಂಬಲು ಸುಭದ್ರ                                  ಎರಡು ತಿಂಗಳು ತುಂಬಲು ಸುಭದ್ರ
ಪರಡಿ ಮಾಲತಿ ಸಣ್ಣಶ್ಯಾವಿಗೆ ಬಯಸಿದಳು                       ಪರಡಿಪಾಯಸ ಸಣ್ಣಶ್ಯಾವಿಗಿ ಬಯಸುವಳು
ಪರವೇಶನ ತಂಗೆ ಹರಡಿ ಕಂಕಣ                                       ಪರವೇಶನ ತಂಗಿ ಹರಡಿ ಕಂಕಣ
ಹಸ್ತ ಕಡಗ ಹಿಂಬಳೆ ದ್ವಾರ್ಯ ಇಟ್ಟೇನೆಂಬುವಳು               ಹಸ್ತ ಕಡಗ ಹಸಿರುಬಳೆ ಇಟ್ಟೇನೆಂಬುವಳು

ಹಲವು ಜನ ಹಾಡಿದ ಗೀತ ರಚನೆಗಳು ಆ ಪ್ರದೇಶದ ಅನನ್ಯತೆಯನ್ನು ತೋರಿಸುತ್ತವೆ. ರಚನೆಗಳು ಭಾಷಾದೃಷ್ಟಿಯಿಂದ ಶುದ್ಧ, ಪ್ರತಿದೃಷ್ಟಿಯಿಂದ ಪೂರ್ಣ ಹಾಗೂ ಕಥೆ ಸಮಗ್ರವಾಗಿರಲು ಸಾಕು. ಒಂದು ವೇಳೆ ಪೂರ್ಣಪ್ರತಿಯಲ್ಲಿ ಅಲ್ಪಸ್ವಲ್ಪ ಭಾಷಾ ದೋಷಗಳಿದ್ದರೆ ಮಿಕ್ಕ ಪಾಠಗಳಿಂದ ತಿದ್ದಬಹುದು. ಪುರಂದರದಾಸರ ಕೀರ್ತನೆವೊಂದರಲ್ಲಿ;

ಸಿಂಗನ ಪೆಗಲೇರಿದಾಗ ಕರಿ ಭಂಗವೇಕೆ ಮತ್ತವಗೆ
ರಂಗನ ಕೃಪೆಯುಳ್ಳವಗೆ ಭವ ಭಂಗಗಳೇ ತಕ್ಕವಗೆ
ಮಂಗಳ ಮಹಿಮ ಪುರಂದರವಿಠಲ ಶು
ಭಾಂಗನ ದಯವೊಂದಿದ್ದರೆ ಸಾಲದೆ

ಇಲ್ಲಿ ’ಕರಿ’ ಎಂಬ ಪಾಠಕ್ಕೆ ಕರೆ, ಕರೆಂಗೆ ಮುಂತಾದ ಪಾಠಗಳಿವೆ. ಆದರೆ ಮೂಲಪಾಠ ಜೋಪಾನವಾಗಿ ಉಳಿದುಬಂದಿದೆ. ಜಗನ್ನಾಥದಾಸರ ಕೀರ್ತನೆಯೊಂದು ಹೀಗಿದೆ’ಕಮಲಾಕ್ಷ ಮರಿಯಿಟ್ಟ ದ್ರೌಪದಿಯ ಕಾಯ್ದೋ ಅಳುಕಾದೇ’ ಇಲ್ಲಿ ಮರಿಯಿಟ್ಟ ದ್ರೌಪದಿಯ ಎಂಬುದು ಅಪಪಾಠ, ಲಿಪಿಕಾರನ ಸ್ಖಾಲಿತ್ಯ ದ್ರೌಪದಿ ಮರಿ ಇಡುವುದು ಸಾಧ್ಯವಲ್ಲದ ಸಂಗತಿ. ಹಸ್ತಪ್ರತಿಯಲ್ಲಿ ’ಕಮಲಾಕ್ಷ ಮೊರೆಯಿಟ್ಟ ದ್ರೌಪದಿಯ ಕಾಯ್ಯೋ’ ಎಂದಿದೆ.

ದಾಸಸಾಹಿತ್ಯ ಸಂಪಾದನೆಯ ಇನ್ನೊಂದು ಸಮಸ್ಯೆಯೆಂದರೆ ಅಂಕಿತ ನಿರ್ಧರಿಸುವ ವಿಚಾರ ’ಬದುಕಿದೆನು ಬದುಕಿದೆನು ಭವಹಿಂಗಿತು’ ಎಂಬ ಪ್ರಸಿದ್ಧ ಕೀರ್ತನೆ ಪುರಂದರ ಮತ್ತು ಕನಕರ ರಚನೆಗಳಲ್ಲಿ ದೊರೆಯುತ್ತದೆ. ಇವು ಹಾಡುಗಬ್ಬಗಳಾಗಿರುವುದರಿಂದ ಹೀಗಾಗುವುದುಂಟು. ಹಾಗಾದರೆ ಆ ರಚನೆ ಯಾರದು? ಎಂಬ ಸಮಸ್ಯೆ ತಲೆದೊರುತ್ತದೆ. ಆಗ ಸಂಪಾದಕನಿಗೆ ಏಕೈಕ ಹಸ್ತಪ್ರತಿಗಳನ್ನು ಪರಿಶೀಲಿಸಿ ಯಾರ ರಚನೆ ಪುನರಾವೃತ್ತಿಯಾಗಿದೆ ಎಂಬುದನ್ನು ತಿಳಿದುಕೊಂಡು ಸೂಕ್ತ ನಿರ್ಣಯಕ್ಕೆ ಬರಬೇಕಾಗುತ್ತದೆ.

ಪಾಠ ಸಂಯೋಜನೆಯಲ್ಲಿ ಹರಿದಾಸ ಕೃತಿಗಳ ಭಾಷೆಯ ಸ್ವರೂಪವನ್ನು ಸಂಪಾದಕ ಗಮನದಲ್ಲಿಡಬೇಕಾಗುತ್ತದೆ. ಅದು ನಡುಗನ್ನಡಕಾಲವಾದುದರಿಂದ ಎಷ್ಟೋ ಶಬ್ದಗಳ ಸಂಯುಕ್ತಾಕ್ಷರಗಳು ಸರಳೀಕರಣಗೊಂಡಿವೆ. ದ್ವಿತ್ವ ವಿರಳವಾಗಿದೆ. ಯುಕ್ತಿ-ಯುಕುತಿ, ಮುಕ್ತಿ-ಮುಕುತಿ ಮುಂತಾದುವು. ಇದಲ್ಲದೆ ಹರಿದಾಸರು ಆಡುರೂಪಗಳನ್ನು ಬಳಸುತ್ತಾರೆ ಬ್ಯಾಡ, ವೈಯಾರ, ಕೋಡಂಗಿ, ಗಡಗಿ ಮುಂತಾದುವು. ಮಹಿಪತಿರಾಯರ ಕೃತಿಗಳಲ್ಲಿ ಅಲ್ಲಾ, ಹರಕತ್ ಇಂತಹ ಅನ್ಯದೇಶಗಳ ಬಳಕೆಯಾಗಿವೆ. ಅವುಗಳನ್ನು ತಿದ್ದಬಾರದು. ಏಕೆಂದರೆ ಅವುಗಳಿಗೆ ಅವುಗಳದೇ ಆದ ಅನನ್ಯತೆಯಿದೆ. ದಾಸಸಾಹಿತ್ಯ ಸಂಪಾದನೆಯನ್ನು ಕುರಿತು ಪ್ರೊ.ಎ.ವಿ.ನಾವಡರು ಅಭಿಪ್ರಾಯಗಳು ತುಂಬ ಮೌಲಿಕವಾಗಿವೆ. ೧. ಪಾಠ ನಿರ್ಣಯಕ್ಕಾಗಿ ಹತ್ತು ಹಲವು ಪ್ರತಿಗಳನ್ನು ಬಳಸಿ ಒಂದು ಶುದ್ಧಪ್ರತಿ ತಯಾರಿಸುವುದು ಮೌಖಿಕ ಪರಂಪರೆಗೆ ಸೇರಿದ ದಾಸರ ಹಾಡುಗಳಿಗೆ ಒಗ್ಗದು. ೨. ಹಾಡುವ ಸಂಪ್ರದಾಯಕ್ಕೆ ಸೇರಿದ ಮೌಖಿಕ ರಚನೆ ಹಾಗೂ ಪ್ರಸರಣಕ್ಕೊಳಗಾಗುತ್ತಿರುವ ದಾಸರ ಪದಗಳ ಬಹುತ್ವವನ್ನು ನಾಶ ಮಾಡಿ ಯಾವುದೋ ಒಂದು ಭಾಷಿಕರಚನೆಗೆ ಬಲವಂತವಾಗಿ ಒಪ್ಪಿಸುವುದುಸಾಧುವೆನಿಸದು.೩. ಅಂಕಿತದ ಸಂದೇಹ ಬಂದಾಗ, ರಚನೆಯ ಕರ್ತೃತ್ವ ಪ್ರಶ್ನೆ ಎದುರಾದಾಗ ಹಲವು ಹಸ್ತಪ್ರತಿಗಳನ್ನು ಪರಿಶೀಲಿಸಬಹುದು. ಮೌಖಿಕ ವಾರಸುದಾರರ ನಾಲಗೆಯಲ್ಲಿ ಏನಿದೆ ಎಂದು ಪರಿಶೀಲಿಸಬಹುದು[1]. ಒಟ್ಟಿನಲ್ಲಿ ದಾಸ ಸಾಹಿತ್ಯಕ್ಕೆ ಮಾರ್ಗಕಾವ್ಯಗಳಂತೆ ಸ್ಥಿರ ಪಠ್ಯಗಳಿರುವುದಿಲ್ಲ. ಅಲ್ಲಿರುವುದು ಚರಪಠ್ಯ ದಾಸರ ಹಾಡುಗಳ ಚಲನಶೀಲವಾಗಿರುವುದರಿಂದ ಭಾಷಿಕ ವೈಲಕ್ಷಣಗಳನ್ನು ಅನುಲಕ್ಷಿಸಿ ದಾಸ ಸಾಹಿತ್ಯದ ಸಂಪಾದನೆಯ ಮಾನದಂಡಗಳು ಮಾರ್ಗಸಾಹಿತ್ಯಕ್ಕಿಂತ ಭಿನ್ನವಾಗಿವೆ.

 

[1]೧. ಎ.ವಿ. ನಾವಡ ’ವಾಕ್ ಪರಂಪರೆ ಮತ್ತು ದಾಸಸಾಹಿತ್ಯ ಸಂಪಾದನೆ’ (ಅಪ್ರಕಟಿತ ಲೇಖನ)