II

ದಾಸರ ರಚನೆಗಳಾದ ಕೀರ್ತನೆ, ಸುಳಾದಿ, ಉಗಾಭೋಗ, ವೃತ್ತನಾಮ, ದಂಡಿಗೆ-ಉದಯರಾಗ ಇವು ಮಧ್ಯಕಾಲೀನ ಕನ್ನಡ ಸಾಹಿತ್ಯದ ಕಾವ್ಯಪ್ರಕಾರಗಳಲ್ಲಿ ಸಮಾವೇಶಗೊಳ್ಳುತ್ತವೆ. ಇವುಗಳ ರಚನೆ ಸಾಮಾನ್ಯವಾಗಿ ವಿವರಣೆಗೆ, ನಿರೂಪಣೆಗೆ ಅಭಿಮುಖವಾಗಿರುತ್ತದೆ. ಕಥನ ನಿರ್ವಹಿಸುವ ವಿಧಾನದಲ್ಲಿ ನಾವೀನ್ಯವಿರುತ್ತದೆ. ಆ ಮೂಲಕ ಪಲ್ಲವಿಯ ಮುಖ್ಯ ಧಾಟಿಗೆ ನೆರವಾಗುವ ಸಿದ್ಧಾಂತವನ್ನು ಕಟ್ಟಿಕೊಡುತ್ತದೆ. ದಾಸರ ಪದಗಳಲ್ಲಿ ಪ್ರಾರಂಭದಲ್ಲಿ ಪಲ್ಲವಿ ನಂತರ ಅನುಪಲ್ಲವಿ ನಂತರ ಕೆಲವು ಪದ್ಯಗಳು ಕೊನೆಗೆ ಕಡ್ಡಾಯವಾಗಿ ಮುದ್ರಿಕೆ (ಅಂಕಿತ) ಇರುತ್ತದೆ. ಇದು ಅವುಗಳ ಸಂರಚನೆ (ಸಾಹಿತ್ಯ ಶಿಲ್ಪ). ಸಾಮಾನ್ಯವಾಗಿ ಮುದ್ರಿಕೆಯೊಂದು ಪದಗಳ ತಲೆಯ ಮೇಲೆ ರಾಗ, ತಾಳಗಳ ನಿರ್ದೇಶವಿರುತ್ತದೆ. ಮಧ್ವತತ್ವ ನಿರೂಪಣೆ ಹಾಗೂ ಲೋಕನೀತಿ ಆತ್ಮಶೋಧ ಇವು ಅವುಗಳ ವಸ್ತುನಿರೂಪಣೆಯಾಗಿದೆ.

ದಾಸ ಸಾಹಿತ್ಯದ ಮಾಧ್ಯಮವೆಂದರೆ ಹಾಡು. ಹಾಡಿನಲ್ಲಿ ಸಾಹಿತ್ಯ ಮತ್ತು ಸಂಗೀತಗಳು ಸೇರಿಕೊಂಡಿದ್ದು ಅವೆರಡರ ಸಂಬಂಧದ ಮೇಲೆ ಅವರು ಹೇಳಬೇಕಾದ ಅರ್ಥದ ತಿರುಳು ಅಡಕವಾಗಿರುತ್ತದೆ. ಅವರ ಹಾಡಿನ ಒಂದು ಅರ್ಥ ಭಾಷೆಯಾದರೆ ಇನ್ನೊಂದು ಅರ್ಥ ಸಂಗೀತವಾಗಿರುತ್ತದೆ. ಅವೆರಡೂ ಒಂದಕ್ಕೊಂದು ಪೂರಕವಾಗಿರುತ್ತದೆ. ದಾಸರು ಮಧುಕರ ವೃತ್ತಿಗಾಗಿ ಮನೆಮನೆಗೆ ತಿರುಗಾಡಲು ಹೋಗುವಾಗ ಅವರು ಸಂಗೀತದ ಕಲೆಯನ್ನು ಬೆಳೆಸಿಕೊಂಡರು. ಹಾಡು ತನ್ನ ಸಾಮಾಜಿಕತೆಯನ್ನು ಇಂತಹ ತಂತ್ರದ ಮೂಲಕ ನಿರ್ಮಿಸಿಕೊಳ್ಳುತ್ತದೆ. ಭಕ್ತಿಗೂ ಹಾಡಿನ ಇಂತಹ ಸ್ವರೂಪಕ್ಕೂ ನಿಕಟವಾದ ಸಂಬಂಧವಿದೆ. ಅದು ಭಕ್ತ ಮತ್ತು ಪರಮಾತ್ಮನ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.

ದಾಸರ ಕೃತಿಗಳಲ್ಲಿ ರಾಗ, ತಾಳ, ಲಯಬದ್ಧವಾಗಿದ್ದು ಸರಳ ಶೈಲಿಯಲ್ಲಿ ರಚಿತವಾಗಿರುವುದರಿಂದ ಒಮ್ಮೆ ಓದಿದವರಿಗೆ ಪುನಃ ಓದಬೇಕೆಂಬ, ಓದಿದ ಮೇಲೆ ಹಾಡಬೇಕೆಂಬ, ಹಾಡಿದ ಮೇಲೆ ಅಲ್ಲಿಯ ತತ್ವಗಳನ್ನು ಅರಿಯಬೇಕೆಂಬ ಆಸಕ್ತಿ ಒಡಮೂಡುತ್ತದೆ. ದೈನಂದಿನ ಮಾತಿನ ಬಳಕೆ ಹಾಗೂ ಆ ಕಾಲದ ವ್ಯವಹಾರಿಕ ಶಿಷ್ಟ ಕನ್ನಡದಲ್ಲಿ ದಾಸರ ಹಾಡುಗಳು ರಚನೆಯಾಗಿರುವುದರಿಂದ ಅವರು ವ್ಯಕ್ತಪಡಿಸುವ ಧೋರಣೆ, ಆಶಯಗಳು ಸುಲಭವಾಗಿ ಅರ್ಥವಾಗುತ್ತವೆ. ಹೆಚ್ಚಾಗಿ ಸಂವಾದದ ಧಾಟಿ ಇಲ್ಲಿ ಮುಖ್ಯವಾಗುತ್ತದೆ. ಸಾಮಾನ್ಯರನ್ನು ಕುರಿತು ಸಂಬೋಧಿಸುವ, ವಿಚಾರ ಹೇಳುವ ರಚನೆಯ ಕ್ರಮ ಅರ್ಥಪೂರ್ಣವಾಗಿದೆ.

’ಮಾನವ ಜನ್ಮ ದೊಡ್ಡದು, ಇದ
ಹಾನಿ ಮಾಡಲುಬೇಡಿ ಹುಚ್ಚಪ್ಪಗಳಿರಾ’
(ಪುರಂದರದಾಸ)

ಕಲ್ಲು ಸಕ್ಕರೆ ಕೊಳ್ಳಿರೊ ನೀವೆಲ್ಲರೂ
ಕಲ್ಲು ಸಕ್ಕರೆ ಕೊಳ್ಳಿರೊ|| ಪ ||
ಕಲ್ಲು ಸಕ್ಕರೆಯ ಸವಿ ಬಲ್ಲವರೆ ಬಲ್ಲರು
ಪುಲ್ಲನಾಭ ಕೃಷ್ಣನ ದಿವ್ಯನಾಮವೆಂಬ
(ಪುರಂದರದಾಸ)

’ಕುಲಕುಲ ಕುಲವೆನ್ನತಿಹರು
ಕುಲವ್ಯಾವುದು ಸತ್ಯ ಸುಖವುಳ್ಳ ಜನರಿಗೆ’
(ಪುರಂದರದಾಸ)

ಇಂತಹ ಸಂಭೋಧನೆಗಳಿಂದ ದಾಸರಿಗೆ ಜನಸಮುದಾಯವನ್ನು ಮುಟ್ಟಲು ಸಾಧ್ಯವಾಯಿತು. ಅಂತಹ ಸಂದರ್ಭದಲ್ಲಿ ದಾಸರು ಏಕಕಾಲದಲ್ಲಿ ಹಾಡುಗಾರ, ಪ್ರದರ್ಶನಕಾರ ಮತ್ತು ಕವಿಯಾಗಿ ಕಾರ್ಯತತ್ಪರವಾಗಿರುವುದನ್ನು ಕಾಣುತ್ತೇವೆ. ದಾಸರು ತಮ್ಮ ಉದ್ದೇಶ ಸಿದ್ದಿಗಾಗಿ ತಮ್ಮ ಹಾಡುಗಳಿಗೆ ಸಂಗೀತದ ಲೇಪನ ಕೊಟ್ಟಾರು. ಮಾಧ್ಯಮ ಕಾವ್ಯವಾದರೆ ಅದು ಪಂಡಿತರ ಸೊತ್ತಾಗಿ ಉಳಿದೀತು. ಮಾತುಗಳಲ್ಲಿ ಹೇಳಿದರೆ ಅವುಗಳಿಗೆ ಜನಪ್ರಿಯತೆ ಬಂದರೂ ಕ್ರಮೇಣ ಮರೆತು ಹೋಗಬಹುದೆಂದು ಭಾವಿಸಿದ ದಾಸರು ತಮ್ಮ ಬೋಧನೆಗಳಿಗೆ ಸಂಗೀತವನ್ನು ಆರಿಸಿಕೊಂಡರು. ತಾವು ಹೇಳಬೇಕೆಂದು ತೋರಿದುದನ್ನು ತಾಳ-ತಂಬೂರಿಯ ಮೂಲಕ ಗೀತವಾಗಿ ಹಾಡಿದರು. ರಾಗ, ಲಯಬದ್ಧವಾಗಿ ರಚನೆಗಳನ್ನು ಕೇಳಿದೊಡನೆಯೇ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುತ್ತವೆ. ಈ ಕಾರಣಗಳಿಂದ ದಾಸರ ಹಾಡುಗಳು ಕನ್ನಡಿಗರ ಮನೆ ಮನೆಗಳಲ್ಲಿ ಜೀವಂತ ಗತಿಯಾಗಿ ಉಳಿದಿವೆ. ದಾಸರ ಪದಗಳು ಒಂದು ಸ್ಥಿತಿಯನ್ನು ಬಿಂಬಿಸುತ್ತವೆ ಹೊರತು ಕ್ರಿಯೆಯನ್ನಲ್ಲ. ಪರಿಧಿ ಮತ್ತು ಕೇಂದ್ರಗಳ ಸಂಬಂಧ ಪ್ರತಿಯೊಂದು ಹಾಡಿನಲ್ಲಿಯೂ ಆವರ್ತವಾಗುತ್ತದೆ.

ದಾಸರು ಸಂಸಾರದ ನಿಸ್ಸಾರತೆಯನ್ನು ಮನಗಂಡು ಭಕ್ತಿ ಮಾರ್ಗದಲ್ಲಿ ಮುನ್ನಡೆಯುವ ತಮ್ಮ ಹಂಬಲವನ್ನು ಅಂತರಂಗ ನಿವೇದನೆಯ ಪದಗಳಲ್ಲಿ ವ್ಯಕ್ತಪಡಿಸಿದ್ದಾರೆ, ಭಕ್ತ ಮತ್ತು ಪರಮಾತ್ಮನ ಸಂಬಂಧವನ್ನು ತಮ್ಮ ಕೀರ್ತನೆಗಳಲ್ಲಿ ಎಳೆ ಎಳೆಗಳಾಗಿ ಬಿಡಿಸಿ ತೋರಿಸಿದ್ದಾರೆ. ಮರ್ತ್ಯದಲ್ಲಿ ಅವತರಿಸಿದ ಭಕ್ತ ಮರ್ತ್ಯದ ನಿಯಮಗಳನ್ನು ಅನುಸರಿಸಿ ನಡೆಯಬೇಕು. ಆದರೆ ಭಕ್ತನಿಗೆ ಅಲೌಕಿಕದ ವಾಸನೆ ಆಕರ್ಷಿಸುತ್ತದೆ. ಅದನ್ನೇ ಶ್ರೀ ಪಾದರಾಯರು ಒಂದು ಕೀರ್ತನೆಯಲ್ಲಿ ಹೀಗೆ ಹೇಳಿದ್ದಾರೆ.

ನಾರಾಯಣ ನಿನ್ನ ನಂಬಿದೆ ನಿನ್ನ
ಹೊರೆತು ಪೊರೆವ ದೈವ ಎಲ್ಲಿದೆ
ನಾನಾ ಯೋನಿಗಳಲ್ಲಿ ಬಂದೆನೊ
ಮನ ತಾಳಲಾರದೆ ಬಲು ನೊಂದೆನೊ
ದೀನ ರಕ್ಷಕ ಎನ್ನಗತಿ ಮುಂದೇನೊ
ಮಾನದಿ ಪಾಲಿಪ ದೊರೆನೀನೋ

ಅದರಂತೆ ವಿಜಯದಾಸರು ’ವಿಠಲಾನಿನ್ನನಂಬಿದೆ’, ಗೋಪಾಲದಾಸರು ’ಏನು ಬೇಡಲಿ ನಿನ್ನ ಬಳಿಗೆ ಬಂದು ನೀನಿತ್ತ ಸೌಭಾಗ್ಯ ನಿ ಬಿಡಲಾಗಿದೆ ಎನಗೆ’, ಪ್ರಸನ್ನ ವೆಂಕಟದಾಸರು ’ಪಿಡಿ ಎನ್ನ ಕೈಯ್ಯ’, ಮಹಿಪತಿ ದಾಸರು ’ಎನ್ನಪರಾಧವೇನು’, ವ್ಯಾಸರಾಯರು ’ನಿನ್ನಲ್ಲಿ ಇರಿಸಿ ಕಾಯೋ’ ಮುಂತಾದ ಕೀರ್ತನೆಗಳಲ್ಲಿ ಅರ್ಪಣಾ ಭಾಗ ಎದ್ದು ಕಾಣುತ್ತದೆ. ಕೆ.ವಿ.ನಾರಾಯಣ ಅವರು ಒಂದು ಸಂದರ್ಭದಲ್ಲಿ ಹೇಳಿದ ಮಾತುಗಳನ್ನೇ ಬಳಸಿ ಹೇಳುವುದಾದರೆ ಇಂತಹ ’ಕೀರ್ತನೆಗಳಲ್ಲಿ ’ಕಾಯುವಾತ’ (ದೇವರು) ಮೊರೆಹೋಗುವಾತ (ಭಕ್ತ) ಇವರು ಈ ಸಂವಾದದ ಮುಖ್ಯ ಪಾತ್ರಧಾರಿಯಾಗಿದ್ದಾರೆ’. ಶಿವಶರಣರು ಪ್ರತಿಪಾದಿಸಿದ ’ಶರಣ ಸರಿ ಲಿಂಗಪತಿ’ಯ ಮಧುರಭಕ್ತಿ ಇಲ್ಲಿದೆ. ವಚನಗಳನ್ನು ಹೋಲುವ ಉಗಾಭೋಗಗಳು ಭಾವ ಪ್ರಧಾನ ಗೀತೆಗಳಾಗಿದ್ದು. ಕಿಂಕರತೆ ಮತ್ತು ಸಮರ್ಪಣೆ ಭಕ್ತನಲ್ಲಿ ಧನ್ಯತೆಯನ್ನು ಮೂಡಿಸಿವೆ.

ಕೀರ್ತನೆಗಳ ರಾಚನಿಕ ವಿಶ್ಲೇಷಣೆಯನ್ನು ಗಮನಿಸಿ ಹೇಳುವುದಾದರೆ ಶಬ್ದ ಮತ್ತು ಅದು ಪ್ರತಿನಿಧಿಸುವ ವಸ್ತು ಅವುಗಳ ಸಂಬಂಧ ಯಾವಾಗಲೂ ಯಾದೃಚ್ಛಿಕವಾಗಿರುತ್ತದೆ. ಕನ್ನಡದಲ್ಲಿ ಗಿಡ ಎಂಬ ಶಬ್ದ ಒಂದು ವಸ್ತುವನ್ನು ಪ್ರತಿನಿಧಿಸುತ್ತದೆ ನಿಜ ಆದರೆ ಎಲ್ಲ ಭಾಷೆಗಳಲ್ಲಿಯೂ ಅದೇ ಪದವನ್ನು ಬಳಸಬೇಕೆಂದಿಲ್ಲ. ಶಬ್ದಾರ್ಥಗಳ ಸಂಬಂಧ ಯಾದೃಚ್ಛಿಕವಾಗಿರುತ್ತದೆ. ಶಬ್ದಗಳು ಹೊಂದಿರುವ ಅರ್ಥ ಅನಿಶ್ಚಿತ ಮತ್ತು ಅನಿರ್ದಿಷ್ಟವಾದದ್ದು. ಕೀರ್ತನೆಗಳಲ್ಲಿ ಭಾಷೆ ಮತ್ತು ಅದರ ಸಂವಹನ ಸಾಮರ್ಥ್ಯದ ಜಿಜ್ಞಾಸೆ ನಡೆದಿದೆ. ’ಹರಿ’ ಎನ್ನುವ ರೂಪ ಕೇವಲ ಕ್ರಿಯಾರೂಪವಲ್ಲದೇ ನಾಮರೂಪವಾಗಿಯೂ ಬಳಕೆಯಾಗಿದೆ. ವಿಜಯದಾಸರ ಕೀರ್ತನೆ ಹೀಗಿದೆ

ಎಲ್ಲಿದ್ದರೇನು ಹರಿಗಲ್ಲದವನು ?
ಸಲ್ಲುವುದೆಸದ್ಗತಿಗೆಸಂತತವುಜಪಿಸಿದರೆ
ಕಪ್ಪೆಕಮಲದ ಬಳಿಯ ತಪ್ಪದಲೆ ಅನುಗಾಲ
ಇಪ್ಪುವುದೆ ಒಂದು ಅರೆಘಳಿಗೆ ಬಿಡದೆ
ಒಪ್ಪದಿಂದಲಿ ಅದರ ಪರಿಮಳದ ಸೊಬಗು
ಕಪ್ಪೆವಾಸನೆಗೊಂಡು ಹರುಷ ಬಿಡಬಲ್ಲದು ?
………………………………………………
……………………………………………….
ತಿಳುವಳಿಕೆಯಿಲ್ಲದವ ಶ್ರೀ ವಿಜಯ ವಿಠಲನ
ಬಳಿಯಲಿದ್ದರೆ ಏನು ದೂರಿದ್ದರೇನು ?

ದೈವತ್ವದಲ್ಲಿಸರ್ವಸ್ವವನ್ನು ಹುಡುಕುವ ಭಕ್ತನ ಹವಣಿಕೆ, ಜಗತ್ತಿನ ಸೂತ್ರದಾರ ಶ್ರೀ ಹರಿ ಎಂಬ ನಂಬಿಕೆ ಈ ಕೀರ್ತನೆಯಲ್ಲಿದೆ. ಇಲ್ಲಿಯ ವಾಕ್ಯಗಳು ಪ್ರಶ್ನಾರ್ಥಕ ರೂಪದಲ್ಲಿವೆ. ದಾಸರು ಇಂತಹ ಪ್ರಶ್ನೆಗಳನ್ನು ಬಳಸುವುದರಿಂದ ಅವುಗಳ ಹಿಂದಿನ ರಚನೆಯ ಮತ್ತು ಅರ್ಥದ ತರ್ಕಗಳನ್ನು ಗಮನಿಸಿದಾಗ ಅವುಗಳ ಅರ್ಥ ನಿಷೇದಾರ್ಥಕವಾಗಿರುತ್ತದೆ. ಅದು ಅಧ್ಯಾಹಾರವಾಗಿರುತ್ತದೆ. ’ಎಲ್ಲಿದ್ದರೇನು ಹರಿಗಲ್ಲದವನು’? ಎಂಬ ಪ್ರಶ್ನೆ ಹಾಕಿ ಅದಕ್ಕೆ ಸಂಬಂಧಿಸಿದಂತೆ ಅನೇಕ ಸಾದೃಶ್ಯಗಳನ್ನು ಕೊಡುತ್ತಾರೆ. ಕೀರ್ತನೆಯ ರಚನೆಯ ಇನ್ನೊಂದು ವೈಶಿಷ್ಟ್ಯವೆಂದರೆ ಹೇಳಬೇಕಾದ ಸಂದೇಶ ಆರಂಭದ ಪಲ್ಲವಿಯಲ್ಲಿ ಬಂದು ಅದನ್ನು ಸಮರ್ಥಿಸುವವಿವರಣೆ ನಂತರದ ನುಡಿಗಳಲ್ಲಿ ಕಾಣಿಸುತ್ತದೆ. ಕನಕದಾಸರ ಒಂದು ಹಾಡನ್ನು ನೋಡಬಹುದು.

ನೇಮವಿಲ್ಲದ ಹೋಮವೇತಕಯ್ಯಾ ರಾಮ
ನಾಮವಲ್ಲದ ಮತ್ತೆ ನಮಗೆ ಬೇರೊಂದೆ ? ||ಪ||
ನೀರಮುಣುಗಲು ಏಕೆ ನಾರಿಯನು ಬಿಡಲೇಕೆ ?
ವಾರಕೊಂದುಪವಾಸ ವಿರ್ಲೇತಕೆ ?
ಘೋರ ಪಾತಕವೆಲ್ಲ ತೊಲಗಿ ಪೋಗುವುದು||೧||

ಅಂಬರವ ತೊರೆಯಲೇಕೆ ತಾಂಬೂಲ ಬಿಡಲೇಕೆ
ಡಂಭತನದಲ್ಲಿ ನೀನಿರಲೇತಕೆ ?
ಅಂಭೋಜನಾಭನನು ಭಾವದಲಿ ನೆನೆದರೆ
ಇಂಬುಂಟು ವೈಕುಂಠ ಪುರದೊಳಗೆ ಅಯ್ಯಾ||೨||

ಬಂಧದೊಳಗೇ ಬಿದ್ದು ಹರಿಯನೇ ನೆನೆಯುತಿರೆ
ಬೆಂದು ಹೋಗುವವು ದುರಿತಂಗಳೆಲ್ಲ
ಬಂದ ದುಃಖಗಳೆಲ್ಲ ನಲ್ಲದಲೆ ಕಳೆಯುವವು
ಚೆಂದಾದಿ ಕಾಗಿನೆಲೆಯಾದಿ ಕೇಶವನನೆನೆಯೆ||೩||

ನೇಮವಿಲ್ಲದ ಹೋಮವೇತಕಯ್ಯಾ? ಎಂಬ ಪಲ್ಲವಿಯಲ್ಲಿಯೇ ಅಂತರಂಗ ಶುದ್ಧಿ ಇಲ್ಲದೆ ಬೂಟಾಟಿಕೆಯಲ್ಲಿ ಕಾಲಹರಣ ಮಾಡುವವರ ಸ್ವರೂಪ ದರ್ಶನವಿದೆ. ಭಕ್ತಿ ಮಾರ್ಗದ ಪ್ರತಿಪಾದನೆಗೂ ಪರಮಾತ್ಮನ ಕರುಣೆಬೇಕು. ಹೀಗೆ ಹಾಡಿನ ಮುಖ್ಯ ಸಂದೇಶ ಆರಂಭದ ಸಾಲುಗಳಲ್ಲಿಯೇ ಸಿಗುತ್ತದೆ. ಅಂದರೆ ಕೀರ್ತನೆಗಳಲ್ಲಿ ಪಲ್ಲವಿಯೇ ವಸ್ತುವಿನ ಕೇಂದ್ರ ಬಿಂದುವಾಗಿ ನುಡಿಗಳೆಲ್ಲ ತರಂಗದಂತೆ ಅದರ ಸುತ್ತ ತಿರುಗುತ್ತದೆ. ಪಲ್ಲವಿಯಲ್ಲಿರುವುದು ನುಡಿಗಳಲ್ಲಿ ವಿಸ್ತಾರಗೊಳ್ಳುತ್ತದೆ. ಕೀರ್ತನೆಗಳಲ್ಲಿ ಪಲ್ಲವಿ ಮತ್ತು ನುಡಿಗಳ ಸಂಬಂಧ ಅರ್ಥಪೂರ್ಣವಾಗಿರುತ್ತದೆ. ಪಲ್ಲವಿಯ ಸಾರವೇ ಹಲವು ಸಾದೃಶ್ಯಗಳ ಮೂಲಕ ಪುನರಾವರ್ತನೆಯಾಗಿ ನುಡಿಯಲ್ಲಿ ಪ್ರಕಟವಾಗಿರುತ್ತದೆ. ಎಷ್ಟೋ ಸಾರಿ ಹಾಡುಗಳ ಉಳಿದ ಭಾಗ ಮರೆತರೂ ಪಲ್ಲವಿ, ಅನುಪಲ್ಲವಿಗಳು ಮಾತ್ರ ನೆನೆಪಿನಲ್ಲಿ ಉಳಿದು ಬಿಡುತ್ತವೆ.

ದಾಸರ ಕಾರ್ಯಕ್ಷೇತ್ರ ಜನಸಾಮಾನ್ಯರ ನಡುವೆ. ಬೇರೆ ಬೇರೆ ವೃತ್ತಿಗಳ ಹಾಗೂ ಬೇರೆಬೇರೆ ಸಮುದಾಯದ ಮನೋಧರ್ಮಗಳ ಜನರೊಂದಿಗೆ ಬೆರೆತು ಮಾತನಾಡುತ್ತ ಅವರವರ ವೃತ್ತಿ ಹವ್ಯಾಸಗಳಲ್ಲಿ ತೊಡಗಿರುತ್ತಲೇ ಭಕ್ತಿಯ ಹಿರಿಮೆಯನ್ನು ಮನಗಾಣಿಸಿ ಹಿಡಿಯಬೇಕಾದ ದಾರಿಯನ್ನು ತಿಳಿಸಿದರು. ಜನಸಾಮಾನ್ಯರ ಆಡುಭಾಷೆಯಲ್ಲಿಯೇ ತಮ್ಮ ತತ್ವ ಸಿದ್ಧಾಂತವನ್ನು ಹೇಳಿದುದು ದಾಸರು ಮಾಡಿದ ಭಾಷಿಕ ಕ್ರಾಂತಿಯೆನ್ನಬೇಕು. ಕನಕದಾಸರ ಒಂದು ಕೀರ್ತನೆ ಹೀಗಿದೆ.

ಹ್ಯಾಂಗೆ ನೀ ದಾಸನಾದೆ ಹೀಂಗೆ ಸಂಸಾರದೊಳು
ಮಂಗನಂದದಲಿ ಭವಭಂಗವ ಪಡುವವನು

ಇಲ್ಲಿ ಬಳಕೆಯಾಗಿ ಹ್ಯಾಂಗೆ, ಹೀಂಗೆ ಎಂಬ ಶಬ್ದಗಳು ಹೇಗೆ, ಹೀಗೆ ಎನ್ನುವ ಶಬ್ದಕ್ಕೆ ಸಮಾನವಾಗಿವೆ. ಈ ಕೀರ್ತನೆಯಲ್ಲಿಯೇ ಹೇಳಬೇಕಾದ ವಿಷಯವನ್ನು ನಿರೂಪಿಸುತ್ತ ಆಡುವ ಮಕ್ಕಳ ಕೈಗೆ ಕಡಲೆಯ ಬ್ಯಾಡಿದರೆ ಕೊಟ್ಟು ಕೂಡಿ ಆಡದವನು ನೀ ನೀ ಎಂತಹ ದಾಸಯ್ಯ ಎಂಬ ಶೈಲಿಯಲ್ಲಿ ಮುನ್ನಡೆಯುವ ಪ್ರಸಂಗಕಾರ ದಾಸನಲ್ಲ ಎಂಬ ಅರ್ಥದಲ್ಲಿ ಈ ಶಬ್ದಗಳು ಬಳಕೆಯಾಗಿವೆ.

ರೊಕ್ಕ ಎರಡಕ್ಕು ದುಃಖ ಕಾಣಕ್ಕ
ಮಕ್ಕಳ ಮರಿಗಳ ಮಾಡೋದು ರೊಕ್ಕ
ಸಕ್ಕರೆ ತುಪ್ಪವ ಸವಿಸೋದು ರೊಕ್ಕ
ಕಕ್ಕುಲಾತಿಯನು ಬಿಡಿಸೋದು ರೊಕ್ಕ
ಘಕ್ಕನೆ ಹೋದರೆ ಘಾತಕಾಣಕ್ಕ

ಬದುಕಿಗೆ ಅತ್ಯವಶ್ಯವಾದ ಹಣದ ಮೇಲಿನ ಅಪರಿಮಿತ ಆಸೆ ಎಲ್ಲ ಕ್ಲೇಶಕ್ಕೆ ಕಾರಣವಾಗುತ್ತದೆ. ದುಡ್ಡಿನ ಕರಾಳ ಮತ್ತು ಆನಂದ ಮುಖಗಳೆರಡನ್ನು ಪುರಂದರದಾಸರು ಬಣ್ಣಿಸಿದ್ದಾರೆ. ಇಲ್ಲಿ ಕಕ್ಕುಲಾತಿ ಎಂಬುದು ಪ್ರೀತಿ, ಕಾಳಜಿ ಎಂಬರ್ಥದಲ್ಲಿ ಬಳಕೆಯಾಗಿದೆ. ಹೀಗೆಯೆ ಲೊಳಲೊಟ್ಟೆ ಎಂಬ ರೂಪವು ಒಳಗೆ ಏನೂ ಇರದ ಟೊಳ್ಳು, ಕುಂಟ ಸುದ್ದಿ ಸುಳ್ಳುಸುದ್ಧಿ ಎಂಬರ್ಥದಲ್ಲಿ ಬಳಕೆಯಾಗಿದೆ. ಹಾಗೆಯೇ ದಿಂಡೆಕಾರು ದುಷ್ಟ ಮೊದಲಾದ ಅಸಂಖ್ಯಾತ ಶಬ್ದಗಳು ನಿಘಂಟಿನ ಕಣ್ಣುತಪ್ಪಿಸಿ ಮೂಲೆಯಲ್ಲಿ ಕುಳಿತಿವೆ. ಭಾಷಾ ಬಳಕೆಯ ದೃಷ್ಟಿಯಿಂದ ಅವುಗಳ ಅಧ್ಯಯನ ಆಗಬೇಕಾಗಿದೆ.

ದಾಸರು ಕಾವ್ಯ ನಿಘಂಟುಗಳಿಂದ, ಸಂಸ್ಕೃತ ಕೋಶಗಳಿಂದ ಶಬ್ದಗಳನ್ನು ಹೆಕ್ಕಿ ಕೊಳ್ಳದೆ ಸಮಾಜದಲ್ಲಿ ಬಳಕೆಯಾಗುವ ಶಬ್ಧಗಳನ್ನೇ ಬಳಕೆಗೆ ತಂದದ್ದು ದಾಸ ಸಾಹಿತ್ಯದ ದೊಡ್ಡ ಸಾಧನೆ ಎನ್ನಬಹುದು. ಇದರಿಂದ ಕನ್ನಡ ದೇಸಿಕೋಶವನ್ನು ಶ್ರೀಮಂತಗೊಳಿಸುವ ಮತ್ತು ಬಳಕೆಯ ವ್ಯಾವಹಾರಿಕ ಕನ್ನಡಕ್ಕೆ ಚಾಲನೆ ಕೊಡುವ ಸತ್ ಪರಂಪರೆಯನ್ನು ವಚನಕಾರರಂತೆ ದಾಸರು ಬೆಳೆಸಿದರು.

ಮುಸುರೆ ತೊಳೆಯಬೇಕು ಈ ಮನಸಿನ
ಮುಸುರೆ ತೊಳೆಯಬೇಕು
ಮುಸುರೆ ತೊಳೆಯಬೇಕು ಗುಸುಗುಸು ಬಿಡಬೇಕು
ಈಶ ಪ್ರೇರಣೆಯೆಂಬೊ ಹಸಿಯ ಹುಲ್ಲನು ಹಾಕಿ

ಮುಸುರೆ ಎಂಬುದನ್ನು ದಾಸರು ಮನಸ್ಸಿನ ಕೊಳಕು ಗುಣ ಎಂಬರ್ಥದಲ್ಲಿ ಬಳಸಿದ್ದಾರೆ. ಅದನ್ನು ತೊಳೆದ ನಂತರವೇ ಪುರಂದರ ವಿಠಲನಿಗೆ ಅರ್ಪಿಸುವಂತೆ ಹೇಳುತ್ತಾರೆ. ಅಚ್ಚ ಕನ್ನಡದ ಆಡುಮಾತುಗಳನ್ನು ಸಹಜವಾಗಿ ದಾಸರು ಬಳಸಿದ್ದಾರೆ. ದಾಸರು ಮೊದಲ ಬಾರಿಗೆ ಅನೇಕ ಹೊಸ ಶಬ್ದರೂಪಗಳನ್ನು ಬಳಸಿದ್ದಾರೆ. ಕಾಕುಬುದ್ಧಿ-ವಕ್ರಬುದ್ಧಿ, ವಾದಬುದ್ಧಿ ವಿವಾದ ಬೆಳೆಸುವ ಪ್ರವೃತ್ತಿ. ಕಂಗಳಯ್ಯ-ಕುರುಡ ಶ್ವಾನನ ಕುಳಿ-ತಿಪ್ಪೆಗುಂಡಿ, ದುರ್ವಾದಿ-ದುಷ್ಟಮಾತು ಭಾವೆಯಳು-ಹೆಂಡತಿ ಚಿಕ್ಕನುಡಿ-ಸಣ್ಣ ಮಾತು ಹೀಗೆ ದಾಸರು ಸಂಸ್ಕೃತ ಕನ್ನಡ ಎಂಬ ಭೇದವನ್ನೇ ಗಮನಿಸದೇ ಅರ್ಥಸಂವಹನವನ್ನಷ್ಟೇ ಅನುಲಕ್ಷಿಸಿ ಶಬ್ದಗಳನ್ನು ಸೃಷ್ಟಿಸಿದ್ದಾರೆ.

ದಾಸರು ಅನೇಕ ಪದಪುಂಜಗಳನ್ನು ಬಳಸಿದ್ದಾರೆ.ಅವು ಸಾಂಸ್ಕೃತಿಕವಾಗಿ ಅನನ್ಯತೆಯಿಂದ ಕೂಡಿವೆ. ’ ಋಣಕಾಣೆ’ ಎಂದರೆ ’ಋಣ’ ಎಂದರೆ ಸಾಲ. ಇದು ಮೂರು ಬಗೆಯಾದದ್ದು ದೇವಋಣ, ಪಿತೃಋಣ, ಋಷಿಋಣ, ಇವುಗಳಿಂದ ಬಿಡುಗಡೆ ಹೊಂದುವ, ಪಾರಾಗುವ ರೀತಿ ತಿಳಿಯದು ಎಂಬುದು ಆ ಪದದ ಅರ್ಥ.’ ಕಂಬಳಿಯೊಳ ಬುತ್ತಿ ನಿಂಬಿ ಎಲೆಯಾಗಿನ ಊಟ’ ಇಲ್ಲಿ ದಾಸರು ಭೌತಿಕ ಜಗತ್ತಿನಲ್ಲಿ ಸಿಗುವ ಸುಖ ಸಂಪತ್ತುಗಳನ್ನು ಕುರಿತು ಹೇಳಿದ್ದಾರೆ. ಕಂಬಳಿಯಲ್ಲಿ ಕಲಸಿದ ಬುತ್ತಿ ಏನೇ ಮಾಡಿದರೂ ತಿನ್ನಲು ಯೋಗ್ಯವಲ್ಲ; ನಿಂಬೆಯ ಎಲೆಯ ಊಟದಿಂದಲೂ ತೃಪ್ತಿ ದೊರೆಯುವುದಿಲ್ಲ. ಹಾಗೆಯೇ ಲೌಕಿಕ ಜಗತ್ತಿನ ಬದುಕು ಕೂಡ ಎಂದಿದ್ದಾರೆ. ಹೋಲಿಕೆ ತುಂಬ ಸಾರ್ಥಕವಾಗಿದೆ. ಹೀಗೆ ಬೇರೆ ಬೇರೆ ಹೋಲಿಕೆಗಳಿಂದ ಜೀವನದ ಅಶಾಶ್ವತೆಯನ್ನು ಹೇಳುತ್ತ ಹೋಗಿ, ಕೊನೆಗೆ ಮಹಾ ಸುಕೃತದ ಫಲವಾಗಿ ಮನುಷ್ಯ ಜನ್ಮ ಬಂದಿದೆ. ಅದನ್ನು ಶ್ರೀ ಹರಿಯ ಧ್ಯಾನದಿಂದ ಸಾರ್ಥಕಗೊಳಿಸಿಕೊಳ್ಳಬೇಕು ಎನ್ನುತ್ತಾರೆ ದಾಸರು. ಕೆಲವು ಸಂಸ್ಕೃತ ಶಬ್ಧಗಳನ್ನು ಕನ್ನಡಿಸಿದ್ದಾರೆ. ಅಜ್ಞಾನ- ಮರಹು, ಯಜಮಾನ- ತೆತ್ತಿಗ, ದಾನ-ಕೋಡು, ಪೀಡಕ-ಕಾಟುಗ, ಆಶ್ರಯ-ಇಂಬು ಮುಂತಾದವು.

ದಾಸರಿಗೆ ತಾವು ಹೇಳುವ ವಿಷಯ ಜನರಿಗೆ ಸರಿಯಾಗಿ ಅರ್ಥವಾಗುವುದಾಗಿರಬೇಕು. ತಮ್ಮ ಕಾಲದಲ್ಲಿ ಪ್ರಚಲಿತವಾಗಿದ್ದ ಆ ಮಾತಿನ ಹಲವಾರು ಶಬ್ಧಗಳನ್ನು ಬಳಸಿದ್ದಾರೆ. ಸಾಹ್ಯ- ಒಡನಾಟ, ಸ್ವಾದ-ರುಚಿ, ಖೋಡಿ-ಅಜ್ಞಾನಿ, ವಾಳಿ-ಬೇಸರ, ತುಂಟ, ಕಲ್ಲಿ-ಚೀಲ, ಕಾಂಚಿ-ಡಾಬು, ಬೊಜ್ಜೆ-ಹೊಟ್ಟೆ, ಪೆಂಟಿ-ಮುದ್ದೆ, ವರ್ಮ- ಗುಟ್ಟು, ಸೇಡು, ಮುಸಲ-ಒನಕೆ, ಈಡಾಡಿ-ಬೀಸಾಡಿ, ಜತ್ತು-ಜೊತೆ, ಅನುವು-ಅವಕಾಶ, ಬವಣಿ-ತೊಂದರೆ, ದಾತ ಯಜಮಾನ, ದಾಸರು ಸುತ್ತಾಡುವಾಗ ಇಂತಹ ಆಡುರೂಪಗಳನ್ನು ಬಳಸುವುದರಿಂದ ಜನ ಸಾಮಾನ್ಯರಿಗೆ ಹೆಚ್ಚು ಹತ್ತಿರವಾದರು. ಇದರಿಂದ ಭಾಷೆ ಸಂಕೀರ್ಣತೆಯಿಂದ ದೂರವಾಗಿ ಘನವಾದ ವಿಷಯಗಳನ್ನು ದ್ರವರೂಪಗೊಳಿಸಿ ಹೇಳಿದರು. ಇದರಿಂದ ಕೀರ್ತನೆಯ ಆಶಯ ಜನರಿಗೆ ಸುಲಭವಾಗಿ ಅರ್ಥವಾಯಿತು.

ದಾಸರ ಹಾಡುಗಳು ಗೇಯ ಪ್ರಧಾನವಾದವು. ಅವುಗಳ ಲಯವನ್ನು ಅಧ್ಯಯನ ಮಾಡುವುದರಿಂದ ನಮ್ಮ ಛಂದಸ್ಸಿನ ಪ್ರವಾಹದಲ್ಲಿ ಅಜ್ಞಾತವಾಗಿ ಉಳಿದಿರುವ ಎಷ್ಟೋ ದೇಶಿಬಂಧಗಳನ್ನು ಕಂಡುಕೊಳ್ಳಬಹುದಲ್ಲದೆ ಅವುಗಳ ಹಾಡುವ ವಿಧಾನಗಳನ್ನು ಗುರುತಿಸಿಬಹುದು. ದಾಸರ ಹಾಡುಗಳಲ್ಲಿ ನಿರ್ದಿಷ್ಟವಾದ ಬಂಧ ಅಡಕವಾಗಿದ್ದರೂ ಅವುಗಳಲ್ಲಿ ಸ್ವಚ್ಛಂದದ ನಾಡಿ ಸ್ಪಂದಿಸಿದೆ ಎಂಬುದು ವೇದ್ಯವಾಗುತ್ತದೆ. ಅಂತಹ ಸಂದರ್ಭದಲ್ಲಿ ಅಕ್ಷರ ವಿನ್ಯಾಸದಲ್ಲಿ ಹಿಗ್ಗುವ, ಕುಗ್ಗುವ ಸ್ವಾತಂತ್ರ್ಯವಿರುತ್ತದೆ.
ವಿವಿ ವಿವಿ
ತಂದೆತಾ|ಯಿಯುಇಲ್ಲ| ಬಂಧುಬಳ|ಗವು ಇಲ್ಲ
ವಿವಿಬ್ರ
ಇಂಗೇನು| ತರಹೆಳೆ|ಕೃಷ್ಣಾ
ವಿವಿವಿವಿ
ಮಂದರ|ಧರಶ್ರೀ| ಪುರಂದರ| ವಿಠಲ ನೀ
ವಿವಿ ಬ್ರ
ಒಂದು ನೆಲೆ| ಯಾಗಯ್ಯ| ಕೃಷ್ಣಾ
-ಪುರಂದರದಾಸ
೩ ೩೩ ೩
ಈಶ| ನಿನ್ನ| ಚರಣ| ಭಜನೆ
೩೩ ೩೩
ಆಸೆ| ಯಿಂದ| ಮಾಡು| ವೇನು
೩ ೩೩ ೩೩೩
ದೋಷ| ರಾಶಿ| ನಾಶ| ಮಾಡೊ| ಶ್ರೀಶ |ಕೇಶವ

-ಕನಕದಾಸ

ದಾಸರ ಹಾಡುಗಳಲ್ಲಿ ಹಲವು ಮಟ್ಟುಗಳು (ಸಾಂಗತ್ಯ, ಷಟ್ಪದಿ ಮುಂತಾದ) ಕಾಣಿಸಿಕೊಳ್ಳುತ್ತವೆ. ೧೬ನೆಯ ಶತಮಾನದಲ್ಲಿ ಭಕ್ತಿಯು ನಿಯತವಾದ ಲಯದಿಂದ ಕೂಡಿದ ಹಾಡುಗಳಲ್ಲಿ ಹೆಚ್ಚಾಗಿ ಹರಿಯಿತು ಮತ್ತು ಆ ಕಾಲದಲ್ಲಿ ಜಾನಪದದ ಲೇಪವ ಹೆಚ್ಚು ಅಂಶಗಣಗಳ ನಿರ್ಬಂಧವು ಈ ಗೀತಗಳಲ್ಲಿ ಒಂದಿಷ್ಟು ಸಡಿಲಿದಂತಿದೆ.

ಡಿ. ಎಸ್. ಕರ್ಕಿ ಅವರು ಒಂದು ಸಂದರ್ಭದಲ್ಲಿ ಹೇಳಿದ ಮಾತುಗಳನ್ನೇ ಬಳಸಿ ಹೇಳುವುದಾದರೆ ’ಶೈಲಿ ಒಂದಿಷ್ಟು ಗ್ರಾಮ್ಯವಾದರೂ ಚಿಂತೆಯಿಲ್ಲ ಛಂದಕ್ಕೆ ಅನುಕೂಲವಾಗುವಂತೆ ಭಾಷೆಯನ್ನು ಅಳವಡಿಸಿಕೊಳ್ಳುವ ಪ್ರವೃತ್ತಿ ದಾಸರ ಹಾಡುಗಳಲ್ಲಿ ಎದ್ದು ಕಾಣುತ್ತದೆ’.

-ನೀನ್ಯಾಕೊ ನಿನ್ನ ಹಂಗ್ಯಾಕೊ ||ಪ||
ನಿನ್ನ ನಾಮಬಲವೊಂದಿದ್ದರೆ ಸಾಕೊ
-ಜರತಾರಿ ಸೆರಗಿನ ಮತ್ತಾರಿ ಪತ್ತಲ
ಹೆರಳು ಬಂಗಾರ ರಾಗಟೆ ಗೊಂಡ್ಯ
………. ಕಾಲುಂಗುರ ಗೆಜ್ಜೆ ಪೈಜಮವು
ಪ್ರಸನ್ನ ವೆಂಕಟದಾಸ

ಇಂತಹ ಹಾಡುಗಳನ್ನು ಕೇಳುವುದೇ ಒಂದು ಸೊಗಸು. ದೇಸಿಯ ನುಡಿಯಲ್ಲಿ ಅಲ್ಲದೆ ಸಂಸ್ಕೃತ ಭೂಮಿಷ್ಠ ರಚನೆಗಳನ್ನೂ ದಾಸರು ರಚಿಸಿರುವರು.

ರಕ್ಷಮಾಂ ರಂಗೇಶ
ರಕ್ಷಮಾಂ ರಂಗೇಶ ರವಿಕೋಟಿ ಪ್ರಕಾಶ
ಪಕ್ಷಿವಾಹನ ಶ್ರೀಶ ಭವ್ಯ ಗುಣಕೋಶ

– ವಾದಿರಾಜ

ಪದ್ಯ ರಚನೆಗೆ ಶೈಲಿ ಅತಿ ಮುಖ್ಯವಾದುದು. ಭಾಷೆ ಮಾಧ್ಯಮದಿಂದಲೇ ಸಂಪರ್ಕ ಏರ್ಪಡುವುದರಿಂದ ಭಾಷೆ ಪರಿಣಾಮಕಾರಿಯಾಗುತ್ತದೆ. ಅಕ್ಷರಗಳನ್ನು ಕುಶಲತೆಯಿಂದ ಆರಿಸಿ ಜೋಡಿಸುವ ಕುಶಲತೆ ದಾಸರಿಗಿದೆ. ಅರ್ಥಾಲಂಕಾರಗಳು, ಲಯಕ್ಕೆ ತಕ್ಕಂತೆ ನಿರರ್ಗಳವಾಗಿ ಜೀಕುತ್ತವೆ. ಒಟ್ಟಿನಲ್ಲಿ ಕೀರ್ತನೆಗಳ ಶಿಲ್ಪರಚನೆ ವೈವಿಧ್ಯಪೂರ್ಣವಾಗಿದೆ.

ಒಂದಲ್ಲ ಒಂದು ಸಮಯದಲ್ಲಿ ಮನುಷ್ಯನಾದವನಿಗೆ ತನ್ನ ಜೀವನ ಹೇಗೆ ವ್ಯರ್ಥವಾಯಿತೆಂಬ ಚಿಂತೆ ಪಿಡಿಸದೆ ಇರದು. ಅದರಲ್ಲಿಯೂ ವಿಚಾರಮತಿಗಳಿಗೆ ಈ ಪ್ರಶ್ನೆ ಆಗಿಂದಾಗ್ಗೆ ಮುಖಕ್ಕೆ ಬಂದು ತಿವಿಯುತ್ತಲೇ ಇರುತ್ತದೆ. ಈ ಬಾಧೆಯನ್ನು ಕುರಿತು ವಾದಿರಾಜರು ಹೇಳಿರುವ ಸರಣಿ ಎಷ್ಟು ಸಹಜವಾಗಿದೆಯೆನ್ನುವುದನ್ನು ಅವರ ಒಂದು ಕೀರ್ತನೆಯಲ್ಲಿ ಕಾಣಬಹುದು.

’ಏನು ಬಂದ್ಯೋ ಜೀವವೆ ಶರೀರದೊಳು ವ್ಯರ್ಥವಾಗಿ’ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡು ಪರಿಪರಿಯಾಗಿ ಪರಿತಪಿಸಿ, ಕಡೆಗೆ

ಉಂಡು ಸುಖಿ ಅಲ್ಲ ಉಟ್ಟು ತೊಟ್ಟು ಪರಿಣಾಮ ಇಲ್ಲ
ಕೊಂಡು ಕೊಟ್ಟು ಹರಿಸೇವೆ ಮಾಡಲಿಲ್ಲ
ಮಂಡು ನಾಯಿಯಂತೆ ಮನೆಮನೆಗಳ ತಿರುಗಿ ಕೆಟ್ಟೆ
ಮಂಡ ಜೋಗಿ ಗುಣಂಗಳ ಬಿಡಿಸೊ ಹಯವದನ

ಎಂದು ಆತ್ಮವ್ಯಥೆಯನ್ನು ತಮ್ಮ ಇಷ್ಟದೇವತೆಯಲ್ಲಿ ತೋಡಿಕೊಳ್ಳುವರು. ಜೀವನದ ಬಗ್ಗೆ ಆಗಬಹುದಾದ ಜಿಗುಪ್ಸೆಯನ್ನು ಇಲ್ಲಿ ಮನಮುಟ್ಟುವಂತೆ ಹೇಳಿರುವರು.

ವಾದಿರಾಜರು ತಮ್ಮ ಮನೋಭಿಲಾಷೆಯನ್ನು ವ್ಯಕ್ತಪಡಿಸುವಲ್ಲಿ, ಅವರ ಭಾಷೆ ಎಷ್ಟು ಹದವಾಗಿ ಹೊಂದಿಕೊಂಡು ಬರುತ್ತದೆಯೆನ್ನುವುದನ್ನು ಒಂದು ಸಣ್ಣ ಕೀರ್ತನೆಯ ಮೂಲಕ ಹೇಗೆ ಗ್ರಹಿಸಬಹುದೆನ್ನುವುದನ್ನು ಇಲ್ಲಿ ಗಮನಿಸಲಾಗಿದೆ.

ಒಲ್ಲೆ ದುರಿತಗಳೊಲ್ಲೆ ಒಲ್ಲೆ
ಪುಲ್ಲನಾಭನ ಸ್ಮರಣೆ ಇಲ್ಲದೆ ಇರಲೊಲ್ಲೆ||ಪ||

ದುರ್ಜನರ ಸಂಗವನೆಂದೆಂದಿಗೂ ಒಲ್ಲೆ
ಸಜ್ಜನರ ವಿರಸಗಳೊಲ್ಲೆ ಒಲ್ಲೆ
ಅರ್ಜುನ ಸುಖ ನಿನ್ನ ಸೇವೆಯ ಬಿಡಲೊಲ್ಲೆ
ಅಬ್ಜಬಾಣನ ಮೇಳ ಒಲ್ಲೆ ಒಲ್ಲೆನೊ ಸ್ವಾಮಿ

ಒಲ್ಲೆನೆಂಬೊ ಅಹಂಕಾರ ಎಂದೆಂದಿಗೂ ಒಲ್ಲೆ
ಸಲ್ಲವ ಸುಖಗಳ ಒಲ್ಲೆ ಒಲ್ಲೆ
ಬಲ್ಲಿದ ಹರಿ ನಿಮ್ಮ ಪಾದವ ಬಿಡಲೊಲ್ಲೆ
ಕ್ಷುಲ್ಲದೇವರ ಪೂಜೆ ಒಲ್ಲೆ ಒಲ್ಲೆನೊ ಸ್ವಾಮಿ

ಹರಿನಾಮ ಸ್ಮರಣೆಯ ಮನದಿ ತೊರದಿರಲೊಲ್ಲೆ
ದುರವಿಷಯದಿ ಹರುಷ ಒಲ್ಲೆ ಒಲ್ಲೆ
ಕರುಣಿ ಹಯವದನನ್ನ ಕಂಡಲ್ಲದೆ ಮಿಕ್ಕ
ಕಾರುಣ್ಯದ ಹವಣು ಒಲ್ಲೆ ಒಲ್ಲೆನೊ ಸ್ವಾಮಿ

ಇಡೀ ರಚನೆಯಲ್ಲಿ ಕಂಡುಬರುವ ಭಾವ ಮತ್ತು ಭಾಷೆಗಳ ಮಧುರ ಬಾಂಧವ್ಯ ನಮ್ಮನ್ನು ಕೂಡಲೆ ಆಕರ್ಷಿಸುತ್ತದೆ. ’ಒಲ್ಲೆ’ನೆಂಬ ಶಬ್ದ ಪ್ರಯೋಗವಂತೂ ತನ್ನದೆ ಆದ ವೈಖರಿಯಿಂದ ವಿರಾಜಿಸುತ್ತಿದೆ. ಪುನರುಕ್ತಿಯ ಸಾರ್ಥಕ್ಯವೆನೆನ್ನುವುದನ್ನು ಇಲ್ಲೆ ಮನಗಾಣಬಹುದು. ವಾದಿರಾಜರ ವಾಗ್ವಿಲಾಸದ ವೈಭವವನ್ನು ಎಷ್ಟು ಹೇಳಿದರೂ ಸಾಲದು.

ಗೋಪಿಯೊಬ್ಬಳು ತನ್ನ ವಿರಹೋದ್ವೇಗದಲ್ಲಿ ಬೆಂದು, ನೊಂದು ಕಳವಳಿಸಿ ಕಡೆಗೆ ಗಿಣಿಯೊಂದಿಗೆ ತನ್ನ ಅಗಲಿಕೆಯ ನೋವನ್ನು ಹೇಳಿಕೊಳ್ಳುವ ಸಂದರ್ಭವನ್ನು ವಾದಿರಾಜರು ಬಗೆಬಗೆಯಲ್ಲಿ ವರ್ಣಿಸಿರುತ್ತಾರೆ. ಒಟ್ಟು ಹತ್ತು ನುಡಿಗಳಿರುವ ಈ ಕೀರ್ತನೆಯಲ್ಲಿನ ಕೆಲವು ನುಡಿಗಳಲ್ಲಿ ತೋರಿಬರುವ ಅವರ ಕಾವ್ಯದೃಷ್ಟಿ ಗಮನಾರ್ಹವಾದುದು. ಮೊತ್ತ ಮೊದಲ ಪಲ್ಲವಿಯಲ್ಲಿಯೇ ಈ ಗೋಪಿಯ ಹೃದಯಸ್ಪಂದನ ಹೇಗಿದೆಯೆನ್ನುವುದನ್ನು ಗಮನಿಸಬಹುದು.

ಗಿಣಿಯೆ ನಿನಗೇನು ಬೇಕದನೀವೆ ಹಯವದನ
ನೆನಿಪ ಹರಿಯನು ಕರೆತಾರೆ ಗಿಣಿಯೆ
ಮುನಿ ವಾದಿರಾಜನಿಗೆ ವರವೀವ ದೇವನವ
ನೆನೆವರ ಬಿಡೆನೆಲೆ ಗಿಣಿಯೆ

ವಾದಿರಾಜರು ತಾವು ಗೋಪಿಯ ಭಾವವನ್ನು ತಾಳಿ ತಮ್ಮ ಸ್ವಾಮಿಯನ್ನು ಸುತ್ತಿಸಿರುವ ಧಾಟಿ ಸ್ವಾರಸ್ಯವೆನ್ನಿಸುತ್ತದೆ. ಅನಂತರ ಆ ಗಿಣಿಯನ್ನು ಬಾಯಿತುಂಬ ಹೊಗಳುವ ಕ್ರಮ ವಿರಹದಗ್ಧಳಾದ ಗೋಪಿಯ ಗೋಗರೆತಕ್ಕೆ ತಕ್ಕಂತಿದೆ.

ಮೂರು ಬಣ್ಣದ ಕೊರಳ ತಿರಿಯುಳ್ಳ ಗಿಣಿ ನೀನು
ಮೂರು ಬಣ್ಣದ ಚಾರುನಯನ
ಮೀರ ನಿನ್ನ ಬಿನ್ನಪವ ಗಿಣಿಯೆ

ಸತತ ಸಿರಿದೇವಿಯರ ಸುತನೆನಿಪ ಕಾಮನಿಗೆ
ರಥವಾಗಿ ಮೆರೆವೆ ನೀ ಗಿಣಿಯೆ
ಕೃತಕೃತ್ಯನಾದರೂ ಅದರಿಂದ ನಿನ್ನ ಮಾತ
ಪ್ರತಿಪಾಲಿಸುವನೆಲೆಗಿಣಿಯೆ

** *

ಕೆಂದಾವರೆಯ ಪೋಲ್ವ ನಿನ್ನ ಚರಣ ಹರಿಯ ಪದ
ದಂದವನು ತಂದು ತೋರು ಗಿಣಿಯೆ
ಚೆಂದದ ಅವನ ಚೆಂದುಟಿಯಂತೆ ನಿನ್ನ ಚೆಲುವ ಮುಖ ಕೆಂಪು
ತಂದು ಮುಂದಿರಿಸು ನೀ ಗಿಣಿಯೆ

ಅವನ ವಾಹನನೆನಿಪ ಗರುಡನ ಕುಲದಲುದ್ಭವಿಸಿ
ದವ ನೀನೆಲೆ ಗಿಣಿಯೆ
ಅವನ ಮುದ್ದು ನುಡಿಯ ಬಲ್ಲರೆ ನೀನು ಜಗದೊಳಗೆ
ಸವಿ ಮಾತುಗಳ ನಡುವೆ ಗಿಣಿಯೆ

ಗಗನದಲಿ ನೆಲೆಸಿಹುದು ನಮ್ಮ ಪತಿಯ ಚೆಲುವ ಪಾದ
ಗಗನದೆಡೆಯೆ ಗಮನ ನಿನಗೆ
ಸೊಗಸುನುಡಿಯಿಂದವನ ಪದಕೆ ಬಿನ್ನಹ ಮಾಡಿ
ಸುಗುಣನ ಕರೆತಾರೆ ಗಿಣಿಯೆ

***

ಉರದಲ್ಲಿ ಸಿರಿವತ್ಸಯೆಂಬ ಕುರುಹುಂಟವಗೆ
ಕರಗಳಲಿ ಶಂಖ ಚಕ್ರಗಳು
ಕೊರಳಲ್ಲಿ ಕೌಸ್ತುಭಣಮಣಿಯಿಹ ಹಯವದನ ನ
ಮ್ಮರಸನೆಂದರಿತುಕೊ ಗಿಣಿಯೆ

ಪ್ರಣಯದ ಪ್ರಪಂಚದಲ್ಲಿ ಶಂಕಸಾರಿಕೆಗಳ ದೌತ್ಯ ಸರ್ವ ಸಾಧಾರಣ. ಆದರೆ, ಕವಿಯಾದವನು ಅದನ್ನು ಹೇಗೆ ಬಳಸಿಕೊಳ್ಳುವನೆನ್ನುವುದರಲ್ಲಿ ಅವರ ನೈಪುಣ್ಯ ಅಡಗಿದೆ. ಪ್ರಕೃತದಲ್ಲಿ ವಾದಿರಾಜರು ಗಿಣಿಯನ್ನು ಹೊಗಳಿ ಅದನ್ನು ಹಿಗ್ಗಿಸುವುದಲ್ಲದೆ, ಕೆಲವೆಡೆಗಳಲ್ಲಿ ಗೋವಿಂದನಿಗೂ ಗಿಳಿಗೂ ಇರಬಹುದಾದ ಸಂಬಂಧ ಕಲ್ಪಿಸಿರುವುದನ್ನು ಗಮನಿಸಬಹುದು. ಗೋಪಿಯ ಹೃದಯದ ಅಂತರಾಳವನ್ನು ಗ್ರಹಿಸಿದ ವಾದಿರಾಜರು ಇಲ್ಲಿ ನಿರೂಪಿಸಿರುವ ಈ ಸಂಭೋಧನ ಸಂವಿಧಾನ ತುಂಬ ಸಫಲವಾಗಿದೆ. ಒಟ್ಟು ಶಿಲ್ಪ ರಚನೆಯೇ ಸಾಹಿತ್ಯದಸ್ವಾರಸ್ಯವನ್ನು ಸವಿಯಲಿ ತಕ್ಕ ಸಾಕ್ಷಿಯಂತಿದೆ.

ವಾದಿರಾಜರು ಎಷ್ಟು ಅನಾಯಾಸವಾಗಿ ಪ್ರಾಸಾನುಪ್ರಾಸಗಳನ್ನು ಬಳಸುತ್ತಾರೆ ಎನ್ನುವುದನ್ನು ನಾವು ಗಮನಿಸಬಹುದು. ಉಡುಪಿಯ ಶ್ರೀಕೃಷ್ಣನನ್ನು ಕುರಿತ ಈ ಕೆಳಗಿನ ಕೀರ್ತನೆಯಲ್ಲಿ ಪ್ರತಿಯೊಂದು ಪಂಕ್ತಿಯ ಕಡೆಯ ಎರಡು ಶಬ್ದಗಳಲ್ಲಿ ಕಂಡುಬರುವ ಪ್ರಾಸಸಾಮ್ಯವನ್ನು ಗಮನಿಸಬಹುದು.