ನಡೆ ನುಡಿಗಳ ನಡುವೆ ಅನೋನ್ಯ ಬೆಸುಗೆ ಇರಬೇಕು. ತೋರಿಕೆಯ ಆಚರಣೆಗೆ ಭಗವಂತ ಒಲಿಯನು. ಭಕ್ತ ಜ್ಞಾನಿಯಾಗಬೇಕಾದರೆ ಚಿತ ಶುದ್ಧಿ ಅವಶ್ಯ. ಹೊರಗಿನ ಡಂಬಾಚಾರದ ಆಚರಣೆಯಿಂದ ಯಾವುದೇ ಸಿದ್ಧಿ ಏರ್ಪಡದು. ಸಾಧನೆಗೆ ಹೊರಗಿನ ಆಚಾರಕ್ಕಿಂತ ಭಗವಂತನ ಮೇಲಿನ ಗೌರವಪೂರ್ವಕ ಶ್ರದ್ಧೆ ಭಕ್ತಿ ಅವಶ್ಯವಾಗಿದೆ. ದಾಸರು ಸಂಸ್ಕರಿಸಿದ ಪದ ಪುಂಜಗಳು ಭವಿಗಳ ನಿಷ್ಕಾಳಜಿ, ನಿಧಾನ ದ್ರೋಹ, ಗತಿಹೀನ ಜನತೆಯ ತೊಳಲಾಟ ನಿಸ್ಸಹಾಯಕತೆ ಈ ದ್ವಂದ್ವಗಳನ್ನು ಬಿಚ್ಚಿಡುತ್ತ ಕೀರ್ತನೆಯ ಒಂದು ಪ್ರಮುಖ ಆಶಯವಾದ ಮುಗ್ಧ ಜನರ ಶೋಷಣೆಯ ಸ್ವರೂಪವನ್ನು ವಿವರಿಸುತ್ತದೆ. ದಾಸರು ಜನಪರ ಧೋರಣೆಯಿಂದ ಸಾಹಿತ್ಯ ಸೃಷ್ಟಿಸಿದರು. ಕನ್ನಡ ನಾಡಿನ ಬದುಕಿನಲ್ಲಿ ಬೇರುಬಿಟ್ಟ ಕನ್ನಡದ ಸ್ವಂತಿಕೆಯಲ್ಲಿ ಕಾವ್ಯಗಳನ್ನು ಹುಟ್ಟುಕಾಕಿದ ಕೀರ್ತಿ ದಾಸರಿಗೆ ಸಲ್ಲಬೇಕು. ಸಮುದಾಯದಲ್ಲಿ ಶ್ರೀಮಂತವರ್ಗ ತನ್ನ ಹಿಡಿತವನ್ನು ಹೆಚ್ಚಿಸಿಕೊಳ್ಳಲು ಸಮಾದಲ್ಲಿದ್ದ ಎಲ್ಲ ಮಾನವೀಯ ಸಂಬಂಧಗಳನ್ನು ಪುಡಿಮಾಡಿ ಪ್ರತಿಯೊಂದು ಹಣವನ್ನು ಅವಲಂಬಿಸುವಂತೆ ಮಾಡಿದ್ದು ಇದು ಕವಿಯ ಮನೋಧರ್ಮಕ್ಕೆ ಅನ್ಯಾಯವೆಂದು ಕಂಡು ಈ ಅನ್ಯಾಯದ ವಿರುದ್ದಹ ಪ್ರತಿಭಟನೆಯ ಸಲುವಾಗಿಯೇ ಸಾಮಾಜಿಕ ಕೀರ್ತನೆಗಳನ್ನು ದಾಸರು ರಚಿಸಿದರು. ಸಮುದಾಯದಲ್ಲಿ ಹೊಸಚೈತನ್ಯ ತಂದರು. ಬದುಕಿನ ಮೌಲ್ಯಗಳನ್ನು ಎತ್ತಿ, ವೈಭವಿಸಿ ಅವು ಪುನರುತ್ಥಾನಗೊಳ್ಳಬೇಕೆಂದು ಆಶಿಸಿದರು. ಅವರ ರಚನೆಗಳು ಸಾಮಾಜಿಕ ಬದಲಾವಣೆಗೆ ಅವಕಾಶವನ್ನು ಮಾಡಿಕೊಟ್ಟವು. ಈ ಉದ್ದೇಶದಿಂದ ದಾಸರು ಬಹಳ ಶಕ್ತಿಶಾಲಿ ಕೀರ್ತನೆಗಳನ್ನು ರಚಿಸಿದರು. ಅವರ ಪ್ರಗತಿಶೀಲ ಚಳುವಳಿ ಹೊಸ ಚಿಂತನಾ ಕ್ರಮವನ್ನು ಹುಟ್ಟುಹಾಕಿತು. ಭಾಷಾ ಬಳಕೆಯಲ್ಲಿ ಸಹಜತೆಯನ್ನು ತಂದರು. ಗುರುವಿನ ಮಹತ್ವವನ್ನು ಒಂದು ಕೀರ್ತನೆಯಲ್ಲಿ ಪುರಂದರದಾಸರು ಸೊಗಸಾಗಿ ಹೇಳಿದ್ದಾರೆ.

ಗುರುವಿನ ಗುಲಾಮನಾಗುವ ತನಕ
ದೊರೆಯದಣ್ಣ ಮುಕುತಿ
ಪರಿಪರಿ ಶಾಸ್ತ್ರವನೇವನೋದಿದರೇನು
ವ್ಯರ್ಥವಾಯಿತು ಭಕುತಿ
ಆರುಶಾಸ್ತ್ರವೋದಿದರಿಲ್ಲ ಮೂರಾರು
ಪುರಾಣವ ಮುಗಿಸಿದರಿಲ್ಲ
ಸಾರಿ ಸಜ್ಜನರ ಸಂಗವ ಮಾಡದೆ
ಧೀರನಾಗಿ ತಾ ಮೆರೆದರೆ ಇಲ್ಲ

ಸಾಧನೆಗೆ ಹೊರಗಿನ ಆಚಾರಕ್ಕಿಂತ ಅಂತರಂಗದ ಗುರುವಿನ ಮೇಲಿನ ಗೌರವ ಪೂರ್ವಕ ಅವಿಷ್ಕಾರ ಅವಶ್ಯ ಎನ್ನುವುದು ಈ ಕೀರ್ತನೆಯೆ ಆಶಯ, ಗುಲಾಮ ಎಂದರೆ ಅಹಂಕಾರ ರಹಿತ ಮನೋಧರ್ಮ, ಗುರುವಾದವನು ಶಿಷ್ಯರನ್ನು ಸರಿಯಾದ ಮಾರ್ಗಕ್ಕೆ ಹಚ್ಚದಿದ್ದರೆ ಅಂತಹ ಶಿಷ್ಯನ ಪಾಡು ಏನಾಗುತ್ತದೆಂಬುದನ್ನು ’ಬಳ್ಳಿ ಗುರುವಿನ ಕೈ ಬಳ್ಳಿಗರುಡ ಪಿಡಿದು ಕಾಣದೆ ಡೊಂಗುರವ ಬಿದ್ದಂತೆ’ ಎಂದು ಶರಣರು ವರ್ಣಿಸಿದ್ದಾರೆ. ಇಲ್ಲಿ ದಾಸರ ದೃಷ್ಟಿ ಗುರುವೆನಿಸಿಕೊಳ್ಳಬೇಕಾದವನ ಸಾಧನೆಯ ಮಟ್ಟವೇನಿರಬೇಕೆಂಬುದರ ಕಡೆಗೂ ಹರಿದಿದೆ. ಕನ್ನಡ ಕಾವ್ಯಲೋಕಕ್ಕೆ ಬಹಳ ಮಹತ್ತರವಾದ ಸಾಮಾಜಿಕ ಚಿಂತನೆಯ ಕಾವ್ಯ ಜಗತ್ತನ್ನು ಸೃಷ್ಟಿಸಿದರು ದಾಸರು. ಲೋಕ ಮತ್ತು ಮನುಷ್ಯರ ನಡುವಿನ ವಾಸ್ತವ ಸಂಬಂಧಗಳನ್ನು ಅರಿತು ಪ್ರತಿಭಟನಾತ್ಮಕ

“ಅನ್ಯ ಸತಿಯರೊಲುಮೆಗೊಲಿದು ಅಧಮಗತಿಗೆ ಬೀಳಲೇಕೆ
ತನ್ನ ಸತಿಯರೊಲುಮೆಗೊಲಿದು ತಾನು ಸುಖಿಸಬಾರದೆ ”

“ಆಚಾರವಿಲ್ಲದ ನಾಲಗೆ ನಿನ್ನ
ನೀಚ ಬುದ್ಧಿಯ ಬಿಡುನಾಲಗೆ”

“ಜ್ಞಾನವೊಂದೇ ಸಾಕು ಮುಕ್ತಿಗೆ
ಇನ್ನೇನು ಬೇಕು ಹುಚ್ಚುಮರುಳೆ”

“ತನುವ ನೀರೊಳಗದ್ದಿ ಫಲವೇನು ತನ್ನ
ಮನದಲ್ಲಿ ದೃಢಭಕ್ತಿ ಇಲ್ಲದ ಮನುಜನು”

ದಾಸರಿ ಡಂಬಾಚಾರಿಗಳನ್ನು ನೋಡಿ ತಮ್ಮ ಧೋರಣೆಗೆ ಅನುಗುಣವಾಗಿ ತಮ್ಮ ಕಿವಿಗಳನ್ನು ಸೂಕ್ಷ್ಮವಾಗಿಟ್ಟುಕೊಂಡು ಪ್ರತಿಕ್ರಿಯಿಸಿದ್ದಾರೆ. ನೂರಾರು ಸಾಮಾಜಿಕ ಸಂದರ್ಭಗಳ ಹಿನ್ನೆಲೆಯಲ್ಲಿ ಅವರು ಎತ್ತಿಕೊಂಡ ಪದಪುಂಜಗಳು ಕೀರ್ತನೆಗಳ ಉದರದಲ್ಲಿ ಚೆನ್ನಾಗಿ ಬೆರೆತಿವೆ. ದಾಸರ ಅನುಭವದ ಸಾರವೇ ಅಲ್ಲಿ ಅಡಗಿದೆ. ಅವುಗಳಿಂದ ಆಗಿನ ಚಾರಿತ್ರಿಕ ಸ್ಥಿತಿಯನ್ನು ತಿಳಿಯಬಹುದಾಗಿದೆ. ಮಾನವನ ಆಗು ಹೋಗುಗಳಿಗೆಲ್ಲ ಮನಸ್ಸೆ ನಿಮಿತ್ತ ಹಾಗೂ ಅದರ ನೈಜ ಸ್ವಭಾವವನ್ನು ವಿಜಯದಾಸರು ಚೆನ್ನಾಗಿ ಬಲ್ಲರು.

ಮನಸ್ಸು ನಿಲ್ಲಿಸುವುದು ಬಹಳ ಕಷ್ಟ
ಗುಣಿಸುವುದು ನಿಮ್ಮೊಳಗೆ ನೀವೆ ನೆಲೆ ಬಲ್ಲವರು
ಮುರಿದೋಡಿ ಬರುವ ರಣರಂಗ ನಿಲ್ಲಿಸಬಹುದು
ಹರಿಯುತಿಹ ನದಿಗಳನು ತಿರುಗಿಸಲಿಸಬಹುದು
ಕರಿಸೊಕ್ಕಿ ಬರುತಿರಲು ತಡೆದು ನಿಲ್ಲಿಸಬಹುದು
ದುರುಳಮನ ನಿಲ್ಲಿಸುವುದು ಸುರರಿಗಳವಲ್ಲ

ಇಂತಹ ಚಪಲ ಚಿತ್ತಕ್ಕೆ ಎಚ್ಚರಿಕೆ ಅಗತ್ಯವಷ್ಟೇ. ಆ ಬಗ್ಗೆಯೂ ದಾಸರು ಸಲಹೆ ಕೊಟ್ಟಿರುವರು. ಅಂತಹ ಸಂದರ್ಭದಲ್ಲಿ ದಾಸರು ಪರಿಣಾಮಕಾರಿ ರೂಪದ ಸಾದೃಶ್ಯಗಳನ್ನು ನೀಡಿದ್ದಾರೆ.

ಎಚ್ಚತ್ತು ಇರು ಕಂಡ್ಯ ಮನವೇ ನಮ್ಮ
ಅಚ್ಚುತನಂಘ್ರಿಯ್ಯ ನೆನೆ ಕಂಡ್ಯ ಮನವೆ

ಹಾಳು ಹರಟೆಗೆ ಹೋಗಬೇಡ, ಕಂಡ
ಕೂಳುಗಳನು ತಿಂದು ಒಡಲ್ಹೊರೆಯಬೇಡ

ಕಾಲ ವ್ಯರ್ಥ ಕಳೆಯಬೇಡ, ನಮ್ಮ
ಪ್ರಾರಬ್ಧ ಕರ್ಮಕ್ಕೆ ಮನ ಸೋಲಬೇಡ

ನಾನು ಎಂಬುದು ಬಿಡು ಕಂಡ್ಯ ನಿನ್ನ
ಮಾನಾಪಮಾನಕ್ಕೆ ಹರಿಯೆನ್ನು ಕಂಡ್ಯ

ಜ್ಞಾನಿಗಳೊಡನಾಮ ಕಂಡ್ಯ, ವಿಷಯ
ಜೇನೆಂದು ಮೆದ್ದರೆ ಅದು ವಿಷ ಕಂಡ್ಯ

ಪಾಪ ಪುಣ್ಯಗಳಿಗೆಲ್ಲ ಮನಸ್ಸೇ ಹೊಣೆ, ಅದರ ಅರಿವು ನಮಗಾದರೆ ಎಷ್ಟೋ ಕ್ಲೇಶಗಳು ಪರಿಹಾರವಾಗುವವು. ಈ ವಿಚಾರದ ಬಗ್ಗೆ ವಿಜಯದಾಸರು ಮಾಡಿರುವ ವಿಮರ್ಶೆ ಅಮೂಲ್ಯವೆನಿಸುತ್ತದೆ.

ಪಾಪವೆಂಬುದು ಹೊರಗಿಹುದೆ, ತನ್ನ
ಕೋಪವಲ್ಲದೆ ಬೇರೆ ಹೊಸದಾಗಿ ಬಹುದೆ
ಅಪವರ್ಗಕೆ ಮಾರ್ಗವಹುದೆ ಬಹು
ತಾಪಸಿಗಾದರೂ ಸಾಧನವಹುದೆ
ಪುಣ್ಯವೆಂಬುದು ಬೇರಿಲ್ಲ, ನಾನಾ
ರಣ್ಯ ಚರಿಸಿದರು ದೊರಕುವುದಿಲ್ಲ
ಮನಯ ಬಿಡದೆ ಮತ್ತೊಂದಿಲ್ಲ, ನಿರುತ
ಅನ್ಯರಾಸೆಯ ಬಿಡಲು ಗತಿಗವಸಲ್ಲ
ವೈಕುಂಠವೆಂಬುದು ಅಲ್ಲೆ ಬರಿದೆ
ಲೌಕಿಕ ತೊರೆದರೆ ಇಪ್ಪೋದು ಇಲ್ಲೆ

ಕೋಪ ತಾಪಗಳಿಗಿಂತ ಮಿಗಿಲಾದ ಪಾಪವೆಂಬುದು ಬೇರೆ ಇಲ್ಲ ಎಂದು ಹೇಳಿರುವ ಮಾತು ಎಷ್ಟು ಹಿರಿದಾದುದೋ ಲೌಕಿಕ ವ್ಯವಹಾರಗಳನ್ನು ಅನಾಸಕ್ತಿಯಿಂದ ಆಚರಿಸುವವನಿಗೆ ಈಭೂಲೋಕವೇ ವೈಕುಂಠ ಸಮಾನವೆಂಬ ಕಲ್ಪನೆಯೂ ಗುರುತರವಾದದ್ದು. ’ಮನಸ್ಸಿದ್ದರೆ ಮಾರ್ಗವುಂಟು’ ಎಂಬ ಹೇಳಿಕೆ ಸುಪ್ರಸಿದ್ಧವಷ್ಟೆ. ಅಂತೆಯೆ ದೈವ ಚಿಂತನೆಗೆ ಸಾಧನವಿಲ್ಲ ಎಂದು ಯಾರೂ ಹೇಳುವಂತಿಲ್ಲ. ವಿಜಯದಾಸರು ತಮ್ಮ ಒಂದು ಕೀರ್ತನೆಯಲ್ಲಿ ಈ ತತ್ವವನ್ನು ಬಹಳ ಅಮೋಘವಾಗಿ ಒಂದು ರಚನೆಯಲ್ಲಿ ಪ್ರತಿಪಾದಿಸಿರುವರು.

ಸಾಧನಕೆ ಬಗೆಗಾಣೆನೆನ್ನಬಹುದೆ
ಸಾದರದಿ ಗುರುಕರುಣ ತಾ ಪಡೆದ ಬಳಿಕ

ಕಂಡಕಂಡದ್ದೆಲ್ಲ ಕಮಲನಾಭನ ಮೂರ್ತಿ
ಉಂಡು ಉಟ್ಟಿದ್ದೆಲ್ಲ ವಿಷ್ಣುಪೂಜೆ
ತಂಡ ತಂಡದ ವಾರ್ತೆ ವಾರಿಜಾಕ್ಷನ ಕೀರ್ತಿ

ಹಿಂಡು ಮಾತುಗಳೆಲ್ಲ ಹರಿಯ ನಾಮ
ಹಿಡಿದ ಹಠ ಪೂರೈಸಲದು ಹರಿಯ ಸಂಕಲ್ಪ
ನಡೆದಾಡುವೋದೆಲ್ಲ ತೀರ್ಥಯಾತ್ರೆ
ಬಡತನವು ಬರಲದೇ ಭಗವದ್ಭಜನೆಯೋಗ
ಸಡಗರದಲಿಪ್ಪುದೆ ಶ್ರೀಶನಾಜ್ಞೆ

ಮಾನವನ ನಿತ್ಯ ಜೀವನ ಸಾರ್ಥಕವಾಗುವುದಕ್ಕೆ ಇದಕ್ಕಿಂತ ಸರಳವಾದ ಮಾರ್ಗ ಬೇರೆಯಾವುದಿದೆ? ಈ ರೀತಿ ನಮ್ಮ ಬದುಕು ತಿದ್ದಿ ಹದನಾದರೆ ಪರಮಾತ್ಮ ದೂರವಿರುವನೆನ್ನಿಸುವುದಿಲ್ಲ. ಮಡಿಮಡಿ ಎಂದು ಹಾರಾಡುತ್ತಿದ್ದುದನ್ನು ನೋಡಿ ಗೋಪಾಲದಾಸರು ಮಡಿಯನ್ನು ಕುರಿತು ಸುಳಾದಿಯನ್ನು ಹೇಳಿದರು.

ಮಡಿಮಾಡಬೇಕು ಒಳ್ಳೆನಡತೆ ಕಲಿಯಬೇಕು
ಬುಡುಗುಳಿಯಂತೆ ಮಿಂದು ಗುಡುಗುಡುಗುಟ್ಟತ
ಮಡಿಮಾಡಿದರದು ಮಾಡಿಯಾಗ ಬಲ್ಲುದೆ ಕಂ
ಡೆಡೆಯಲ್ಲಿವ್ಯಾಪ್ತನಾದ ಗೋಪಾಲ ವಿಠಲನೆಂದು
ದೃಢನುಡಿಯನೊಮ್ಮೆ ನುಡಿದು ಮಡಿ ಮಾಡಿದವ
…………………. ಮಡಿವಂತನೊ ||೧||

ಮಡುವಿನೊಳಗಿದ್ದ ಕರಿರಾಜನ ನೋಡು
ಕಡುಪಾತಕಿಯಾದ ಅಜಾಮಿಳನ ನೋಡು
ಕಡಲ ಶಯನ ಗೋಪಾಲವಿಠಲನ ನಾಮ
ನುಡಿದರಲ್ಲದೆ ಮಡಿ ಮಾಡಿದಣಿದರೆ ||೨||

ಪರ ಉಪಕಾರ ಇರಬೇಕು, ಪ್ರತಿಕ್ಷಣ
ಪರರು ತನ್ನವರು ಸಮರೆಂದು ತಿಳಿಯಬೇಕು ||೩||
………………………………………………
ಸತ್ವಜೀವರಿಗೆ ಹರಿ ಕರುಣವನ್ನೆ ಮಾಡಿ
ಮುಕ್ತಿಯ್ಯೆದುವರು ಶಕ್ತ್ಯಾನುಸಾರದಿಂದ ||೪||

ಚಿತ್ತದಲ್ಲಿ ಹರಿಯ ಕಾಂಬುವ ಭಕ್ತರಿಗೆ
ಮತ್ತೆ ಇತರ ಜನರವರಿಗೆ ಸರಿಯೆ      ||೫||

ಇಂತಹ ಕೀರ್ತನ ವ್ಯಾಖ್ಯಾನಾದಿಗಳಿಂದ ಗೋಪಾಲದಾಸರು ಆ ಶುಷ್ಕ ಪಂಡಿತರ ಬಹಿರಾಡಂಬರವನ್ನು ಅಡಗಿಸಿ, ನಿಜವಾದ ಭಕ್ತಿ ಅಂತಃಶುದ್ಧಿ ಸದಾಚಾರ ಮುಂತಾದ ತತ್ವವನ್ನು ರಹಸ್ಯಗಳನ್ನು ಜನಬಳಕೆಯ ನುಡಿಗಳಲ್ಲಿ ತಿಳಿಸಿಕೊಟ್ಟರು. ಭಗವಂತನ ನಾಮದ ಬಲವು ಭಕ್ತರಲ್ಲಿ ಅಥವಾ ದಾಸರಲ್ಲಿ ಬಲವಾಗಿ ಬಾಳಬೇಕಾದರೆ ಅವನಲ್ಲಿ ಸದಾಚಾರವು ಬೆಳೆದು ನಿಂತಿರಬೇಕು. ಅದಿಲ್ಲದೆ ಮುಕ್ತಿಯಿಲ್ಲ. ಮೋಹನ ದಾಸರಂತೂ ಈ ವಿಷಯದಲ್ಲಿ ಬಹುಮುಂದುವರೆದವರಾಗಿದ್ದಾರೆ. ಗುರುಗಳನ್ನು ಬಿಟ್ಟು ಆಚೆಈಚೆ ಸರಿಯುವುದಿಲ್ಲ ಗುರುಗಳ ಮಹತ್ವದ ಎಳೆ ಎಳೆಯನ್ನೂ ಅರಿತಿದ್ದಾರೆ. ಅದರ ಬೆಳಕಿನಲ್ಲಿ ತಮ್ಮ ಜೀವನವನ್ನು ಹೊಳೆಯಿಸಿದ್ದಾರೆ.

ಗುರುವಿನ ಧರ್ಮ ಕೋರಣ್ಯದಭಿಕ್ಷ ಅರಿತುನೀಡಲು ಮೋಕ್ಷ
ಮರೆತುಬಿಟ್ಟರೆ ಕಪಾಲು ಮೋಕ್ಷ ಯಮನಲ್ಲಾಗೋದು ಶಿಕ್ಷ

ಎಂದು ಬಹುಅಧಿಕಾರವಾಣಿಯಿಂದ ಹೇಳಿದ ದಾಸರು, ವಿದ್ಯಾರ್ಥಿಗೆ ವಿನಯ ಬೇಕೆಂದು, ಅದು ಇಲ್ಲದಿದ್ದರೆ ಯಾವ ಶಿಕ್ಷೆ ಎಂಬುದನ್ನು ಒಂದೆಡೆ ಪ್ರಸ್ತಾಪಿಸಿದ್ದಾರೆ.

ಖಂಡುಗ ಜೀವನ ಕೈಲಿ ಹಿಡಿದುಕೊಂಡು | ಮುಂಡೆಬಾಗಿ
ನಿಮ್ಮಂಗದೊಳಗೆ | ಅಂಡಲೆಯಲು ಮೋರೆ ಹಿಂಡಿಕೊಂಡರೆ
ಯಮ | ದಂಡನೆ ಎಂಬುದು ಎಂದಿಗೂ ತಪ್ಪದು ||

ಎಂಬುದಾಗಿ ಬಹುಸ್ಪಷ್ಟವಾಗಿ ತಿಳಿಸಿದ್ದಾರೆ ಅಲ್ಲಿಂದ ಮುಂದೆ ವೈಷ್ಣವ ದಾಸರಾದ ಇವರು ಜ್ಞಾನವು ಎಲ್ಲಿಂದಲೇ ಬರಲಿ ಅದನ್ನು ನಿರ್ಮಲ ಹೃದಯದಿಂದ ಸ್ವೀಕರಿಸಬೇಕೆನ್ನುತ್ತಾರೆ. ಅಲ್ಲಿ ಮೇಲು ಕೀಳೆಂದು ಚರ್ಚಿಸಲಾಗದು. ಒಳ್ಳೆಯ ವಸ್ತು ಅದು ಎಲ್ಲಿದ್ದರೂ ಅದು ಒಳ್ಳೆಯದೇ ಆಗಿದೆ. ಅಂತೆಯೇ ಅವರು ಹೃದಯ ವೈಶಾಲ್ಯದಿಂದ

ಜಂಗಮರು ಜಗತ್ಪಾವನರು|ಲಿಂಗಾಂಗಿಗಳು ನಿಸ್ಸಾಂಗಿಗಳು |
ಹಿಂಗದೆ ಸಿತಾಂಗನ ಭಕ್ತರ ಪದ, ಉಂಗುಟ ತೊಳೆದು
ಅಗ್ಗಣಿ ಧರಿಸೋ

ಎಂದು ಹೇಳುವಾಗ ಸಮನ್ವಯ ದೃಷ್ಟಿಯೂ ಅವರ ಪರಮತ ಸಹಿಷ್ಣುತೆಯೂ ಒಡೆದು ಕಾಣುತ್ತದೆ. ಸುಪಥ ಮಾರ್ಗನಿರ್ದೇಶನವೂ ಸ್ಪಷ್ಟವಾಗುತ್ತದೆ. ಸಂಸಾರದ ನೈಜತೆಯನ್ನು ದಾಸರು ಹೇಳಿದ್ದಾರೆ.

ನೆಚ್ಚದಿರು ಸಂಸಾರ ಕಡೆಗೆ ಹಾಕುವದಲ್ಲ
ಮೆಚ್ಚುಗೊಳಿಸುವುದು ವಿಷಯದಲಿ
ಎಚ್ಚತ್ತು ಪ್ರವರ್ತಿಸು ಇನ್ನಾದರೂ ಸಿರಿ
ಅಚ್ಯುತನ ಪಾದವನು ನಂಬೋ ಪ್ರಾಣಿ

ಎಂದು ಆರಂಭವಾಗುವ ಕೃತಿಯಲ್ಲಿ ಸಂಸಾರದ ಕ್ಷಣಿಕತೆಯನ್ನು ಎತ್ತಿ ತೋರಿಸಲಾಗಿದೆ. ದೇಹ ಸೌಂದರ್ಯಕ್ಕಾಗಿ ಬರುವ ಅಹಂಕಾರದ ಟೀಕೆ ಇಲ್ಲಿ ಸ್ವಲ್ಪ ಕಟುವಾಗಿ ಮೂಡಿಬಂದಿದೆ.

ಪುಂಪೆಣ್ಗಳಿಂದ ಪುಟ್ಟಿದ ದೇಹವನ್ನು ತಿಳಿ
ಕೆಂಪು ಬಿಳಿದಿನ ವರ್ಣ ಮಿಳಿತ
ಇಂಪಾಗಿದೆಯೆಂದು ಹಿಗ್ಗದಿರೆಲವೊ ಹೊಲೆ
ಗುಂಪುನಾರುವುದು ತೊಳೆಯದೆ ಇರಲು

ಧನದ ಮದ ಬಂದರೆ ಆಗ ನಡೆಯುವ ಮನೋಪಲ್ಲಟಗಳನ್ನು ದಾಸರು ವರ್ಣಿಸಿದ್ದಾರೆ.

ಗಳಿಸಿ ಧನ ತರುವಾಗ ಸುತ್ತ ನೆರೆದಿಹರೆಲ್ಲ
ಭಳಿರೆ ಇವ ಮಹಾತ್ಮನೆಂದು
ಘಳಿಗೆ ತೊಲಗಲು ಧನವು ಕರಗಿ ತಿಂದು ಪೋಗಿ
ಹಳಿದು ಹತ್ತಿರೆದು ಅಣಕಿಪರೊ ಪ್ರಾಣಿ

ಎಂದು ಎಚ್ಚರಿಕೆ ಇಲ್ಲಿ ರೇಖಿತವಾಗಿದೆ. ಹೆಣ್ಣಿನಮೋಹದಲ್ಲಿ ಸಿಕ್ಕು ಅದೇ ಸಂತೋಷವೆಂದರೆ ಆ ಭ್ರಮಾಲೋಕವನ್ನು ದಾಸರು ಆಡುಭಾಷೆಯಲ್ಲಿ ಅಭಿವ್ಯಕ್ತಿಸಿದ್ದಾರೆ.

ಹುಬ್ಬಿನಿಂದಲಿ ಹೊಡೆದು ಹೃದಯದ ಕಗ್ಗಂಟು
ಕಬ್ಬು ಕಾರ್ಮುಕನಿಂದ ಬಿಡಿಸಿ
ಉಬ್ಬಿಸ್ಯುಕ್ಕಿನ ತಂತಿಯಂತೆ ಮಾತುಗಳಾಡಿ
ಉಬ್ಬಸವ ಬಡಿಸುವಳೋ ನಾರಿ ಪ್ರಾಣಿ

ಎನ್ನುವ ವಿವೇಕದ ನುಡಿ ಮನೋಜ್ಞವಾಗಿ ಬಳಕೆಯಾಗಿದೆ. ಹೀಗೆ ಸಂಸಾರದ ವಿವಿಧ ಸಂಗತಿಗಳೆಲ್ಲ ಆಶಾಶ್ವತವೆಂದು ಸಾರಿದ ದಾಸರು ಮಾನಸಿಕ ಸ್ವಾಸ್ಥ್ಯಕ್ಕೆ ಭಗವಂತನ ಸ್ವರಣೆ ಬೇಕೆಂದು ಹೇಳಿದ್ದಾರೆ.

ಹಲವು ಹಂಬಲ ಸಲ್ಲ ಅದ್ಯಂತ ಕಾಲದಲಿ
ಗಳಿಸಿಕೋ ಪೂರ್ಣಾಯುವಾಯು
ಒಲಿಯದಲೆ ನಿನ್ನೊಳಗೆ ವಿಜಯವಿಠಲರೇಯ
ಸುಳಿಯ, ಜಾಗ್ರತನಾಗಲೋ ಪ್ರಾಣಿ

ಎಂದು ನಿತ್ಯವಾದ ಆನಂದದ ದಾರಿಯನ್ನು ಸೂಚಿಸುತ್ತಾರೆ. ಅಹಂಕಾರ ಪಡಬೇಡ, ನಿಂದನೆ ಮಾಡಬೇಡ ಎನ್ನುವ ಭಾವಬಿಂಬಿಸುವ ಕೀರ್ತನೆಯನ್ನು ಹರಪನಹಳ್ಳಿ ಭೀಮವ್ವ ಹೇಳಿದ್ದಾಳೆ.

ನಿಂದೆ ಮಾಡಬೇಡೋ ಪರ
ನಿಂದೆ ಮಾಡಬೇಡೋ
ಇಂದಿರೇಶನ ಪಾದಕೊಂದಿ ಭಜಿಪರಿ
ಗೊಂದನೆ ಮಾಡೋ
ಕೋಪಗೊಳ್ಳಬೇಡೋ ಮನಸೇ…………………
ಸೊಕ್ಕೂ ಮಾಡಬೇಡೋ ಯಮನ
ಲೋಕಖೋಗಬೇಡೋ

ಭೀಮವ್ವ ತನ್ನೆಲ್ಲ ಹಾಡುಗಳನ್ನು ಭಕ್ತಿಪೂರ್ವಕವಾಗಿ ತನಗೆ ಸಹಜವಾದ ಭಾಷೆಯಲ್ಲಿ ಸರಳವಾಗಿ, ನಿರರ್ಗಳವಾಗಿ ಹಾಡಿದ್ದಾಳೆ. ಭಕ್ತಿ ಅವಳ ಎಲ್ಲ ಹಾಡುಗಳ ಪ್ರೇರಕ ಹಾಗೂ ರೂಪಕ ಶಕ್ತಿ. ಸಾಲವನು ಮಾಡಿ ಪರಿತಪಿಸುವ ಜನರನ್ನು ಕಂಡು ದಾಸರು ಅಣಕ ಮಾಡಿದ್ದಾರೆ. ಪರೋಕ್ಷವಾಗಿ ಸಾಲ ಮಾಡದಿರೆಂದು ಉಪದೇಶಿಸಿದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕೆಂದು ಅವರು ಅನೇಕ ಸಾರಿ ಎಚ್ಚರಿಸಿದ್ದಾರೆ.

ಸಾಲವನು ಕೊಳುವಾಗ ಸಡಗರದ ಸಿರಿಯೋ
ಸಾಲಿಗನು ಬಂದು ಕೇಳಲಾಗಡರಿ ತುರಿಯೋ

ಹಣ ತಂದ ದಿನ ಅವನ ಮನೆಯೊಳಗೆ ಹಬ್ಬೂಟ
ವನಿತೆಯೊಳೆನುತಿಹ್ಯನು ನನಗಾರು ಸರಿಯೆ
ಹಣಕೊಟ್ಟ ಧಣಿ ಬಂದು ಮನೆ ಮುಂದೆ ಕುಳ್ಳಿರಲು
ಹೆಣ ಇರುವ ಮನೆಗಿಂತ ಘನದುಃಖಿ ಕೇಳೋ

ರಾಮದಾಸರ ಈ ಕೀರ್ತನೆಯಲ್ಲಿ ಸಾಲತಂದು ಇಲ್ಲದ ಸಂಭ್ರಮ ಮಾಡುವ ವ್ಯಕ್ತಿಯೊಬ್ಬರ ಚಿತ್ರ ಸೊಗಸಾಗಿ ಬಂದಿದೆ. ಸಾಲ ಕೊಟ್ಟ ಮಾಲಿಕ ಬಂದಾಗ ’ಹೆಣ ಇರುವ ಮನೆ’ಯಾಗುತ್ತದೆ. ಎಂಬ ಪದಪುಂಜ ತುಂಬ ಅರ್ಥಪೂರ್ಣವಾಗಿದೆ. ನೇರ ಅಭಿವ್ಯಕ್ತಿಯಿದೆ. ಸಮುದಾಯದ ವಕ್ರಬುದ್ಧಿಯವರನ್ನು ವಿಡಂಬಿಸುವಾಗ ದಾಸರು ಅನೇಕ ಬೈಗುಳ ಪದಗಳನ್ನು ತಮ್ಮ ಕೀರ್ತನೆಯಲ್ಲಿ ಹೆಣೆದಿದ್ದಾರೆ. ರಾಮದಾಸರ ಕೆಲವು ಕೀರ್ತನೆಗಳಲ್ಲಿನ ಬೈಗುಳಗಳ ಸಹಜ ಅಭಿವ್ಯಕ್ತಿಯನ್ನು ಗಮನಿಸಬಹುದು.

ಎಕೆ ಚಿಂತಿಪೆ ನೀ ಎಲೆ ಕೋತಿ ಮನವೆ
ಲೋಕನಾಥನ ಪಾದ ಗುಟ್ಟ್ಯಾಗಿ ನಂಬದಲೆ

ಎಲ್ಲಿಂದ ಬಂದಿದ್ದೆಲೆ ಖೋಡಿ ನೀ
ನೆಲ್ಲಿಗೆ ಹೋಗ್ತಿದ್ದಿ ತ್ವರೆ ಮಾಡಿ

ಎಲೆ ಎಲೆ ಎಲೆ ಥೂ ಪರದೇಸಿ ನೀ
ಸುಳ್ಳೆ ಸುಳ್ಳೆ ಮಾಡಬೇಡ ಚೌಕಾಸಿ

ಎಲೆ ಎಲೆ ಎಲೆ ಮೂದಿಮೂಳಿ ನಿನ್ನ
ಕಲ್ಮಷ ಇನ್ನು ತೊಳಿವಲ್ಲಿ
ಇನಿತು ನಾಚಿಕಿಲ್ಲ ರೋಗಿ ನೀನು
ತಿಣಿತಿಣಿಕಾದಿ ಮುದಿಗೂಗಿ

ಕಾರುಯಾರಮನೆಗಂಟು ಖೋಡಿ
ಚೋರತ್ವದ ಪಹಾರ ಮಾಡಿ ತಿಂದದ್ದೆಲ್ಲ

ಕಾಲಕಳೆಯಬೇಡ ಮನವೇ
ಮೂಳನಾಗಬೇಡ

ಕೀಳು ಯೋಚನೆ ಬಿಡು ಖೋಡಿಮನವೆ
ಮೇಲುಸಂಪದ ಪಡಿಮಾಧವನಿಂ ಬೇಡಿ

ದಾಸರು ತಮ್ಮ ಭಾವಾನುಭವಗಳನ್ನು ಸರಳವಾಗಿ, ನೇರವಾಗಿ ಮತ್ತು ಪರಿಣಾಮಕಾರಿಯಾದ ಬೈಗುಳಗಳ ಮೂಲಕ ಅಭಿವ್ಯಕ್ತಿಸಿದ್ದಾರೆ. ಸಮುದಾಯದ ಮಧ್ಯೆ ಬದುಕಿದ ದಾಸರು ಕುಲ, ಜಾತಿ, ಮಡಿ, ಮೈಲಿಗೆಯ ವಿಷಯದಲ್ಲಿ ತಮ್ಮ ನೈಜ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಖೋಡಿ, ಮತಿಗೆಟ್ಟವ, ದೆಸೆಗೆಟ್ಟವ, ಮೂಳ ಇಂತಹ ಬೈಗುಳ ರೂಪಗಳ ಮೂಲಕ ಜನರನ್ನು ಮಿಂಡಬಿಸಿ ಸರಿದಾರಿಗೆ ತರಲು ಯತ್ನಿಸಿದ್ದಾರೆ. ಬೈಗುಳಗಳ ಹೊಡೆತ ತುಂಬ ಸೂಕ್ಷ್ಮವಾದುದು. ಬೈಗುಳವು ಮನುಷ್ಯನ ಸಹಜ ಸ್ವಭಾವಕ್ಕೆ ಅವನಲ್ಲಿರುವ ಪ್ರಾಣಿತನಕ್ಕೆ ಹತ್ತಿರವಾದುದು. ದಾಸರು ಬಳಸಿದ ಬೈಗುಳ ಪದಗಳ ಹಿಂದೆ ಅಪಾರ ಕಳಕಳಿಯಿದೆ. ಸಾಮಾಜಿಕ ಹೊಲಸು ಆ ಮೂಲಕ ವ್ಯಕ್ತವಾಗಿ ಅಭಿವ್ಯಕ್ತವಾಗಿ ಹೊರ ಬೀಳುವುದಕ್ಕೆ ಬೈಗುಳಗಳು ಅಗತ್ಯವಾದ ಮಾಧ್ಯಮ. ಎಂದರೆ ಬೈಗುಳಕ್ಕೆ ಸಮಾಜವನ್ನು ತಿದ್ದುವಿಕೆಯ ಮೌಲ್ಯವೂ ಇದೆ. ಸಮಾಜ ತನ್ನ ನೀತಿ ಪ್ರಜ್ಞೆಯನ್ನು ಕಾಪಾಡಿಕೊಳ್ಳುವಲ್ಲಿ ಬೈಗುಳಗಳು ಪ್ರಮುಖ ಪಾತ್ರವಹಿಸುತ್ತವೆ. ತಾಮಸವನು ತ್ಯಜಿಸಿ ದಾಸರ ಪ್ರೇಮವನ್ನು ಬಯಸುವುದು ದಾಸರ ಉದ್ದೇಶವಾಗಿದೆ. ಬೈಗುಳಗಳಂತೆ ದಾಸರು ಸಮುದಾಯದಲ್ಲಿಯ ನಡತೆ ತಪ್ಪಿದವರನ್ನು ಸುಮಾರ್ಗಕ್ಕೆ ತರಲು ಅನೇಕ ನುಡಿಗಟ್ಟುಗಳನ್ನು ಬಳಸುತ್ತಾರೆ. ಅವರ ಕೀರ್ತನೆಗಳಲ್ಲಿ ವಿಶಿಷ್ಟ್ಯ ಅರ್ಥ ಕೊಡುವ ನುಡಿಗುಟ್ಟುಗಳ ಪ್ರಸ್ತಾಪ ಬಂದಿದೆ.

ಅವು ಸಾಮಾಜಿಕ ಒತ್ತಡಕ್ಕನುಗುಣವಾಗಿ ಬದಲಾವಣೆಗೊಳ್ಳುತ್ತಿರುತ್ತದೆ. ಆದರೆ ಮೂಲದ ರೂಪವನ್ನೇನೂ ಸಂಪೂರ್ಣವಾಗಿ ಬದಲಾಯಿಸಿಕೊಳ್ಳುವುದಿಲ್ಲ. ದಾಸ ಸಾಹಿತ್ಯದಲ್ಲಿ ಬರುವ ನುಡಿಗಟ್ಟುಗಳ ಕೆಲವು ಉಲ್ಲೇಖಗಳನ್ನು ಹೀಗೆ ಕಲೆ ಹಾಕಬಹುದು.

ಬಾಲಹೋದನರಿಯಂತೆ | ತನ್ನ ಅವಲಕ್ಷಣವನ್ನೇ ಒಳಿತೆಂದು ಸಾರುವುದು
ಬೇತಾಳ ಹಸಿವು | ಹಿಂಗಲಾರದ ಹಸಿವು
ಎಮ್ಮೆಯ ಮೇಲೆ ಮಳೆಗರೆದ ಹಾಗೆ | ವ್ಯರ್ಥ

ಕತ್ತೆಯ ಮುಂದೆ ಕಿನ್ನರಿ ಬಾರಿಸಿದಂತೆ | ವ್ಯರ್ಥ
ಬಾವಿಯೊಳಗಿನ ಕಪ್ಪೆಯಂತೆ | ಸಂಕುಚಿತ ವ್ಯಕ್ತಿ
ಗೋದಲೆಯನಾಯಿ | ತಾನೂತಿನ್ನದೆ ಇತರರಿಗೂ ಕೊಡದವ

ಸ್ವರ್ಗದ ಬಾಗಿಲಲಿ ನರಕದ ನಾಯಿಯಂತೆ | ಒಳಿತಿನ ಬಳಿಕೆಟ್ಟುದು ಇರುವುದು
ನಾಯಿ ಮುಟ್ಟಿದ ಮಡಕೆಯಂತೆ | ಅಪವಿತ್ರ
ಮಂಗಮಾಯ | ಕಣ್ಮರೆ
ಮೊಸಳೆಯ ಕಣ್ಣಿರು | ತೋರಿಕೆಯ ಅಳು
ಹಾವಿನ ಹೆಡೆಯ ರತ್ನದಂತೆ | ಮುಟ್ಟಲು ಅಸಾಧ್ಯ

ಸತ್ತ ಹಾವನ್ನು ಬಡಿದಂತೆ | ಹೇಡಿಯ ಕೆಲಸ
ಕೈಯಾಸೆ | ಲಂಚದಾಸೆ
ಕೈಕಚ್ಚು | ತೊಂದರೆ ಕೊಡು
ಕುರುಡು ದೀಪ | ಮುಸುಕಾಗಿ ಉರಿಯುವ ದೀಪ
ಮನಸ್ಸಿನಲ್ಲಿ ಮಂಡಿಗೆ ತಿನ್ನು | ಸಲ್ಲದ ಆಶೆ ಪಡು

ಅವರ ರಚನೆಗಳನ್ನು ಓದುತ್ತ ಹೋದರೆ ಅವರ ಶಬ್ಧಭಂಡಾರದ ವಿಸ್ತಾರ ಅಚ್ಚರಿ ಹುಟ್ಟಿಸುತ್ತದೆ. ಒಂದೇ ಅರ್ಥಕೊಡುವ ಹಲವು ಪದಗಳನ್ನು ಬಳಸಿದ್ದಾರೆ. ನಾರಾಯಣ, ಕುಮಾರ, ಪುಷ್ಪಕರ, ಪಂಚಬಾಣ ಇತ್ಯಾದಿ. ದಾಸರು ಮಾತಿನ ಭಾವವನ್ನು ಸ್ಪಷ್ಟಪಡಿಸಲು ಅನೇಕ ನುಡಿಗಟ್ಟುಗಳನ್ನು ಸಹಜವಾಗಿ ಮತ್ತು ಧಾರಾಳವಾಗಿ ಬಳಸಿದ್ದಾರೆ (ಹರಿಯಿಕ್ಕು, ಹೊರೆಕೆಲಸ, ಆಡಿನಮೊಲೆಯಂತೆ). ಅವು ಕೀರ್ತನೆಗಳಲ್ಲಿ ಬಂದಾಗ ವಿಶೇಷ ಅರ್ಥವನ್ನು ಕೊಡುತ್ತವೆ. ಅದರಿಂದ ಮಾತಿನ ಭಾವದ ಒಳಪದರಿನ ಛಾಯೆಯು ಸ್ಪಷ್ಟವಾಗಿ, ನುಡಿಯ ಶಕ್ತಿಯು ಹೆಚ್ಚುತ್ತದೆ. ದೇಸೀಯ ಮೂಲದ ಈ ನುಡಿಗಟ್ಟುಗಳು ಕೆಲವು ವ್ಯಕ್ತಿಯ ಗುಣವನ್ನು ಸೂಚಿಸಿದರೆ ಕೆಲವು ಕ್ರಿಯೆಯನ್ನು ವಿಶ್ಲೇಷಿಸುತ್ತವೆ. ಸಮುದಾಯದ ನಡುವೆ ಬದುಕಿದ ದಾಸರು ಸಮಾಜದ ಅರೆಕೊರೆಗಳನ್ನು ಸೂಕ್ಷ್ಮವಾಗಿ ಗಮನಿಸಿ ತಮ್ಮ ಕೀರ್ತನೆಗಳೆಂಬ ಛೂಬಾಣ ಎಸೆದಿದ್ದಾರೆ. ಅವರ ರಚನೆಗಳಲ್ಲಿ ಶ್ಲೇಷ, ವ್ಯಂಗ್ಯ, ರೂಪಕ ಇತ್ಯಾದಿ ಶಾಬ್ದಿಕ ಅಭಿವ್ಯಕ್ತಿಗಳು ಲಿಖಿತ ಮತ್ತು ವಾಕ್ ಪರಂಪರೆಯಲ್ಲಿ ಉಳಿದು ಸಾಗಿಬಂದಿವೆ. ಕನ್ನಡ ಭಾಷೆ ಶಕ್ತಿಯುತವಾಗಿ ಅವರ ರಚನೆಗಳಲ್ಲಿ ಬಳಕೆಯಾಗಿದೆ.