ನುಷ್ಯನ ಚೇತನ ಸದಾ ಸ್ವಾತಂತ್ರ್ಯದೆಡೆಗೆ ತುಡಿಯುತ್ತಿರುತ್ತದೆ. ಧರ್ಮ, ದೇವರು, ಜಾತಿ, ಪಂಥ ಇವುಗಳಲ್ಲಿ ತುಂಬ ಶ್ರದ್ಧೆಯುಳ್ಳ ಮನುಷ್ಯರೂ ಸಹಿತ ತಮಗೆ ನೋವು, ಕಷ್ಟ-ನಷ್ಟಗಳಾದಾಗ ಸ್ವಾಭಿಮಾನಕ್ಕೆ, ವ್ಯಕ್ತಿಸ್ವಾತಂತ್ರಕ್ಕೆ ಪೆಟ್ಟು ಬಿದ್ದಾಗ ತಾನು ನಂಬಿದ ಆದರ್ಶಗಳನ್ನು ದೂಷಿಸದೆ ಇರುವುದಿಲ್ಲ. ಅವನು ಒಳಗಿನಿಂದಲೇ ಪ್ರತಿಭಟನೆ ವ್ಯಕ್ತಪಡಿಸದೆ ಸುಮ್ಮನಿರುವುದಿಲ್ಲ. ದಾಸರು ಇದಕ್ಕೆ ಹೊರತಾಗಿಲ್ಲ. ಹರಿದಾಸರ ಸಾಮಾಜಿಕ ಪ್ರಜ್ಞೆಗೆ ’ಸಮಾಜ ವಿಮರ್ಶೆ’ ವಿಭಾಗದಲ್ಲಿಯ ಕೀರ್ತನೆಗಳು ಉತ್ತಮ ನಿದರ್ಶನಗಳಾಗಿವೆ. ಸಂಸಾರದಲ್ಲಿ ನಿಂತು ಅದನ್ನು ಗೆಲ್ಲ ಹೊರಟ ದಾಸರು ನಮ್ಮ ಸಾಮಾಜಿಕ ಅನಿಷ್ಟಗಳ ಮೇಲೆ ತಮ್ಮ ಕೀರ್ತನೆಗಳ ಛೂಬಾಣ ಎಸೆದರು. ಸಂಸಾರದ ನಿಸ್ಸಾರತೆ, ಮನುಷ್ಯರ ಆಷಾಡಭೂತಿತನಇಲ್ಲಿ ವಿಡಂಬನೆಗೆ ಗುರಿಯಾಗಿವೆ. ಉದರ ನಿಮಿತ್ತ ನಾನಾ ವೇಷಗಳನ್ನು ತೊಟ್ಟು ನಿಂತ ಡಾಂಭಿಕರನ್ನು ದಾಸರು ನಮ್ಮೆದುರು ಮೆರವಣಿಗೆ ಮಾಡಿ ಅಣಕಿಸಿರುವರು. ಅಂತರಂಗ ಶುದ್ಧಿ ಹಾಗೂ ಸಾಮಾಜಿಕ ಶುದ್ಧಿ ಜೊತೆಯಲ್ಲಿಯೇ ಸಾಗಬೇಕೆಂಬ ತಿಳಿವಳಿಕೆ ಇಲ್ಲಿದೆ. ದಾಸರು ಅಂತರ್ ಜಗತ್ತಿನ ಅನುಭವ ಹೊಂದಿ ಅನುಭವಿಗಳಾಗಿರುವಂತೆ ಈ ಲೋಕದ ಅನುಭವವನ್ನು ಸಾಕಷ್ಟು ಹೊಂದಿರುವರೆಂಬುದನ್ನು ಇಲ್ಲಿಯ ಗೀತಗಳಲ್ಲಿ ಕಾಣಬಹುದು. ಅವರ ತೆರೆದ ದೃಷ್ಟಿ ಸಮಾಜದ ಕಣ್ಣನ್ನು ತೆರೆಯಿಸಲು ಯತ್ನಿಸಿತು. ಆ ಸಂದರ್ಭದಲ್ಲಿ ಅವರು ಬಳಸುವ ಭಾಷೆಯಲ್ಲಿ ಗಂಭೀರತೆಯಿದೆ; ಕೊಂಕೂ ಇದೆ. ಈ ಅಧ್ಯಾಯದಲ್ಲಿ ಸಾಮಾಜಿಕ ಭಾಷಾಶಾಸ್ತ್ರದ ನೆಲೆಯಲ್ಲಿ ಅವರ ಕೀರ್ತನೆಗಳನ್ನು ಪರಿಶೀಲಿಸಲಾಗಿದೆ.

ದಾಸರು ವ್ಯವಸ್ಥೆಯ ವಿರುದ್ಧ ದಟ್ಟವಾಗಿ ದನಿಯೆತ್ತಿದ್ದಾರೆ. ಧರ್ಮ, ಜಾತಿ ವ್ಯವಸ್ಥೆಯ ಬಗ್ಗೆ, ಆಚಾರ ವಿಚಾರಗಳ ಬಗ್ಗೆ ತಮಗೆ ಬೇಸರವಾದಾಗ ನೇರವಾಗಿ ಇಲ್ಲವೆ ಪರೋಕ್ಷವಾಗಿ ವಿವಿಧ ರೂಪಕಗಳ ಮೂಲಕ ವಿಡಂಬಿಸಿದ್ದಾರೆ. ನೊಂದವರ, ಶೋಷಿತರ ಪರ ಸಾಂತ್ವನ ಹೇಳುವಲ್ಲಿ ಅವರು ಬಳಸುವ ಭಾಷೆ ನೀತಿ ಬೋಧೆಯಂತೆ ಪರಿಣಾಮಕಾರಿಯಾಗಿದೆ. ಸಮಾಜದಲ್ಲಿಯ ಡಂಬಾಚಾರಗಳಿಗೆ ಕನ್ನಡಿ ಹಿಡಿಯುವ ಹಾಗೂ ಜೀವನ ಪರವಾದ ಅವರ ಕೀರ್ತನೆಗಳಲ್ಲಿ ನಯವಾದ ಉಪದೇಶವಿದೆ, ಗಂಭೀರವಾದ ಎಚ್ಚರಿಕೆಯಿದೆ. ಅವರು ಬಳಸುವ ಭಾಷೆಯಲ್ಲಿ ವಾಚ್ಯಾರ್ಥವಿದ್ದಂತೆ ಲಕ್ಷಣಾರ್ಥವೂ ಇದೆ. ದಾಸರು ಬಿಂಬಿಸುವ ಸಾಮಾಜಿಕ ಸ್ವರೂಪ ಸಮುದಾಯದ ವಿವಿಧ ವಲಯಗಳಿಂದ ಮೂಡಿಬಂದಿದೆ. ಅದು ಆಯಾಕಾಲದ ಸಾಮಾಜಿಕ ಮತ್ತು ಚಾರಿತ್ರಿಕ ಸಂದರ್ಭವನ್ನು ಪ್ರತಿನಿಧಿಸುತ್ತವೆ. ಬಂಡವಾಳಶಾಹಿ ಮತ್ತು ಜಮೀನುದಾರಿ ವ್ಯವಸ್ಥೆಯೂ ಕೆಳವರ್ಗದವರಲ್ಲಿ ನಿಮ್ನವಾಗಿ ಕಾಣುತ್ತಿದ್ದ ಅಂಶಗಳನ್ನು ದಾಸರು ಬಯಲಿಗೆಳೆದರು. ವರ್ಗರಹಿತ ಸಮಾಜಕ್ಕೆ ಸಾಮಾಜಿಕ ನ್ಯಾಯಕ್ಕೆ ದಾಸರು ನಾಂದಿ ಹಾಡಿದರು.

ಹೊಲೆಯ ಹೊರಗಿಹನೆ ಊರೊಳಗಿಲ್ಲವೆ||ಪ||
ಹೊಲೆಗೇರಿಯೊಳು ಹೊಲೆಯ ಹೊಲತಿಲ್ಲವೇ||ಅ.ಪ||

ಶೀಲವನು ಕೈಕೊಂಡು ನಡೆಸದಾತನೆ ಹೊಲೆಯ
ಕೇಳಿ ಹರಿಶಾಸ್ತ್ರಗಳ ಹೇಳದವ ಹೊಲೆಯ
ಆಳಾಗಿ ಅರಸರನೊಳು ಮುನಿವವನೆ ಹೊಲೆಯ
ಸೂಳೆಯರ ಹೋಗುವವ ಶುದ್ಧ ಹೊಲೆಯ ||೧||

ಇದ್ದಾಗ ದಾನಧರ್ಮವ ಮಾಡದವ ಹೊಲೆಯ
ಕದ್ದು ತನ್ನೊಡಲು ಪೊರೆವವನೆ ಹೊಲೆಯ
ಪದ್ಧತಿಯ ಬಿಟ್ಟು ನುಡಿಗಳನಾಡುವವ ಹೊಲೆಯ
ಮದ್ದಿಕ್ಕಿ ಕೊಲ್ಲುವವ ಮಾರಿ ಹೊಲೆಯ||೨||

ಕೊಂಡ ಋಣವನು ಕೊಡದಿದ್ದವನೆ ಹೊಲೆಯ
ಬಂಡು ಮಾತುಗಳ ಬಯಲಿಗಿಕ್ಕುವವ ಹೊಲೆಯ
ಗಂಡ ಹೆಂಡಿರ ಮಧ್ಯ ಭೇದ ಹಚ್ಚುವವ ಹೊಲೆಯ
ಹೆಂಡತಿಯ ಇಚ್ಚೆಯಲಿ ನಡೆವವ ಹೇಡಿ ಹೊಲೆಯ ||೩||

ಆಶೆಯನು ಹುಟ್ಟಿಸಿ ಭಾಷೆ ತಪ್ಪುವ ಹೊಲೆಯ
ಲೇಸು ಉಪಕಾರವನು ಅರಿಯದವ ಹೊಲೆಯ
ಕಾಸು ಕೊಟ್ಟು ಬಹಳ ಕೊಟ್ಟೆನೆಂಬವ ಹೊಲೆಯ
ಹೇಸದಲೆ ಹುಸಿಯಾಡುವವ ಹುಟ್ಟು ಹೊಲೆಯ ||೪||

ಅರಿತು ಅನ್ಯಾಯವನು ಮರೆಮಾಳ್ಪನೇ ಹೊಲೆಯ
ಗುರು-ಹಿರಿಯರೆನ್ನದ ಹಿರಿಯ ಹೊಲೆಯ
ಪುರನಿಂದ ಆತ್ಮಸ್ತುತಿ ಮಾಡುವವನತಿ ಹೊಲೆಯ
ಪುರಂದರ ವಿಠಲ ನೆನೆಯದವ ಪಾಪಿ ಹೊಲೆಯ||೫||

ಸಚ್ಚಾರಿತ್ರ್ಯದ ಚೌಕಟ್ಟನ್ನು ಸಮಕಾಲೀನ ಸಮಾಜದ ಮುಂದಿಟ್ಟ ದಾಸರು ಜಾತಿಭೇದ, ಮೇಲು-ಕೀಳು ವಿಚಾರ ಒಪ್ಪಲಿಲ್ಲ. ಹೊಲೆತನ ಎಂಬುದು ಪುರಂದರ ದಾಸರ ದೃಷ್ಟಿಯಲ್ಲಿ ಅಪೂರ್ಣತೆ, ಶೀಲ ದೌರ್ಬಲ್ಯ, ಮನೆಮುರುಕತನ, ಹುಸಿಕ. ಇವರೆಲ್ಲರೂ ಪುರಂದರದಾಸರ ದೃಷ್ಟಿಯಲ್ಲಿ ಹೊಲೆಯರು. ದಾಸರ ವರ್ಗರಹಿತ ಸಮಾಜದ ಮೌಲ್ಯಗಳನ್ನು ಕಂಡುಕೊಳ್ಳಲು ಸಮುದಾಯದಲ್ಲಿಯ ವಾಸ್ತವ ಚಿತ್ರಗಳನ್ನು ಕಟ್ಟಿ ಅಭಿವ್ಯಕ್ತಿಸಿದ್ದಾರೆ. ಆ ಮೂಲಕ ಬದಲಾವಣೆ ತರಲು ಅವರು ಯತ್ನಿಸಿದ್ದಾರೆ. ಸಿದ್ಧ ಮಾದರಿಯ ಸಮಾಜದ ಪರಿವರ್ತನೆಯನ್ನು ಬಯಸಿ ಕೀರ್ತನೆಗಳು ರೂಪ ಮತ್ತು ಆಶಯಗಳನ್ನು ನಿರ್ಮಿಸಿಕೊಂಡಿದೆ. ದಾಸರು ಈ ಕೀರ್ತನೆ ಒಂದು ಕಾಲದ ಚಾರಿತ್ರಿಕ ದಾಖಲೆಯಾತಿಯೂ ಇದೆ. ಎಷ್ಟೋ ಸಂದರ್ಭಗಳಲ್ಲಿ ಸಮಾಜವಾದಿಗಳು ಹೇಳದೆ ಇರುವ ವಾಸ್ತವಿಕ ಸತ್ಯಾಂಶಗಳನ್ನು ಕೀರ್ತನೆಗಳಲ್ಲಿ ಕಾಣಬಹುದು. ಪ್ರತಿಯೊಂದು ಯುಗವು ಕಾವ್ಯ-ಕಲಾಕೃತಿಗಳ ಮೂಲಕ ತನ್ನ ಕಾಲದ ಆಲೋಚನೆಗಳನ್ನು ಪ್ರತಿನಿಧಿಸುತ್ತದೆ. ಅಲ್ಲದೆ ಅವು ತನ್ನದೇ ಆದ ರೂಪ-ಆಶಯಗಳನ್ನು ಹೊಂದಿರುತ್ತದೆ. ದಾಸರು ತಾವು ಬದುಕುತ್ತಿದ್ದ ಸಮಾಜ ಜೀವನದ ಚಿತ್ರಗಳನ್ನು ಕೀರ್ತನೆಗಳಲ್ಲಿ ಹಿಡಿದಿಟ್ಟಿದ್ದಾರೆ. ದುರ್ಜನರನ್ನು ಜಾಲಿಯ ಮರಕ್ಕೆ ಹೋಲಿಸಿರುವುದು ಸೂಕ್ತವಾಗಿದೆ.

ಜಾಲಿಯ ಮರದಂತೆ ಧರೆಯೊಳು ||ಪ||
ದುರ್ಜನರು ಜಾಲಿಯ ಮರದಂತೆ ||ಅ.ಪ||

ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳಿಲ್ಲ
ಹಸಿದು ಬಂದವರಿಗೆ ಹಣ್ಣು ಇಲ್ಲ
ಕುಸುಮ ವಾಸನೆಯಿಲ್ಲ ಕೂಡಲು ಸ್ಥಳವಿಲ್ಲ
ರಸದಲ್ಲಿ ಸ್ವಾದವು ವಿಷದಂತೆ ಇರುತಿಹ ||೧||

ಊರ ಹಂದಿಗೆ ಷಡ್ರಸಾನ್ನವಿಕ್ಕಲು
ನಾರುವ ದುರ್ಗಂಧ ಬಿಡುಬಲ್ಲುದೆ
ಘೋರ ಪಾಪಿಗೆ ತತ್ವಜ್ಞಾನ ಪೇಳಲು
ಕ್ರೂರ ಕರ್ಮನ ಬಿಟ್ಟು ಸುಜನವಾಗುವನೆ ||೨||

ತನ್ನಿಂದ ಉಪಕಾರ ತೊಟಕಾದರೂ ಇಲ್ಲ
ಬಿನ್ನಾಣ ಮಾತಿಗೆ ಕೊನೆಯಿಲ್ಲವು
ಅನ್ನಕ್ಕೆ ಸೇರಿದ ಕುನ್ನಿ ಮಾನವರಂತೆ
ಇನ್ನಿವರ ಕಾರ್ಯವು ಪುರಂದರ ವಿಠಲ ||೩||

ಈ ಕೀರ್ತನೆ ದುಷ್ಟತನದ ಸ್ವರೂಪವನ್ನು ಸಮರ್ಥವಾಗಿ ಪ್ರತಿಬಿಂಬಿಸುತ್ತದೆ. ಜಾಲಿಯ ಮರಗಳು ಪೋಷಕರ ನೆರವಿಲ್ಲದೆ ತಾವಾಗಿಯೇ ಬೆಳೆಯುತ್ತವೆ. ದುರ್ಜನರೂ ಅಷ್ಟೇ. ಅವರು ಸಮಾಜಕ್ಕೆ ಬೇಡದಿದ್ದರೂ ಸಮಾಜ ಅಂತಹವರನ್ನು ಬಯಸದಿದ್ದರೂ ಆ ಜನ ತಾವಾಗಿಯೇ ವಕ್ರವಾಗಿ ಬೆಳೆದು ವಿಜೃಂಭಿಸುತ್ತಾರೆ. ಜಾಲಿಯ ಮರದ ಹಿನ್ನೆಲೆಯಲ್ಲಿ ದುರ್ಜನರ ಛಾಯೆಯನ್ನು ಗುರುತಿಸುತ್ತ ಈ ಕೀರ್ತನೆ ಸಾಗುತ್ತದೆ. ಚಿಗುರಿನಿಂದ ಬೇರಿನವರೆಗೆ ಮುಳ್ಳುಗಳಿಂದ ಕೂಡಿರುವ ಜಾಲಿಯ ಮರದಂತೆಯೇ ದುರ್ಜನರ ಬದುಕು. ಆ ಮರ ಬಿಸಿಲಲ್ಲಿ ಬಳಲಿ ಬಂದವರಿಗೆ ನೆರಳು ಕೊಡಲಾರದು ಹಾಗೆಯೇ ಸಮಾಜ ದುರ್ಜನರಿಂದ ಏನೂ ಬಯಸುವುದಿಲ್ಲ. ಅವರಿಂದ ಸಮಾಜಕ್ಕೆ ಪ್ರಯೋಜನವಿಲ್ಲ ದುರ್ಜನರ ನಡತೆಯನ್ನು ಜಾಲಿಯ ಮರಕ್ಕೆ ಹೋಲಿಸಿರುವುದು ತುಂಬ ಸೂಕ್ತವಾಗಿದೆ. ವೃಕ್ಷ ಸಂಪತ್ತಿನ ಎಲ್ಲ ಗುಣಗಳಿಂದಲೂ ಜಾಲಿಯ ಮರ ಹೇಗೆ ವಂಚಿತವಾಗಿದೆಯೊ ಹಾಗೂ ವ್ಯಕ್ತಿ ಸಂಪನ್ನತೆಯ ಎಲ್ಲ ಗುಣಗಳಿಂದಲೂ ದುರ್ಜನರು ವಂಚಿತರಾಗಿರುತ್ತಾರೆ ಎಂಬ ಭಾವವನ್ನು ಈ ಕೀರ್ತನೆ ನಿರೂಪಿಸುತ್ತದೆ. ಮನುಷ್ಯನಿಗೆ ಸಾಮಾಜಿಕ ಕ್ರಿಯಾತ್ಮಕತೆ ಇರಬೇಕೆಂಬುದರ ಬಗೆಗೆ ಒಮ್ಮತವಿದೆ. ದಾಸರು ಸಮಕಾಲೀನ ಜೀವನದ ವಾಸ್ತವವನ್ನು ಅರ್ಥಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಮಾಜದ ಸದಸ್ಯರನ್ನು ಸರಿದಾರಿಗೆ ತರಲು ಹೆಣಗಿದ್ದಾರೆ. ಅವರ ರಚನೆಗಳು ಬದುಕಿನ ಶೋಧನೆಗಳಾಗಿವೆ. ಸಮುದಾಯದಲ್ಲಿ ಸಂಘರ್ಷಣೆ ಪ್ರಭಾವ ವಸ್ತುವಾದದ್ದು. ದಾಸರಿಗೆ ತಮ್ಮ ಕಾಲದ ಸಮಾಜದ ಕೇಂದ್ರ ವಸ್ತುವಾಯಿತು. ಸಮಾಜದ ಎಲ್ಲ ವಲಯಗಳ ರೂಪರೇಷೆಗಳನ್ನು. ಕೆಲಸ ಕಾರ್ಯಗಳನ್ನು ಕೀರ್ತನೆಗಳ ಮೂಲಕ ಹಿಡಿದಿಟ್ಟಿದ್ದಾರೆ. ಕೀರ್ತನೆಯಲ್ಲಿ ಅವರು ಹೇಳಬಯಸುವ ಸಾಮಾಜಿಕ ಚೌಕಟ್ಟು ಅಂತರ್ಗತವಾಗಿದೆ. (ಸಮತಾವಾದದ ಸಾಮಾಜಿಕ ರಚನೆಯ ಆಶಯಗಳು) ದಾಸರು ಒಂದು ವಸ್ತುವನ್ನು ಹೇಳುವಾಗಲೆಲ್ಲ ಅವರ ಹಿಂದಿರುವ ವರ್ಗ ಹೋರಾಟವನ್ನು, ಶೋಷಣೆಯನ್ನು, ಬಡತನದ ತುಡಿತವನ್ನು ಗಾಢವಾದ ರೀತಿಯಲ್ಲಿ ಚಿತ್ರಿಸುತ್ತಾರೆ. ಅಲ್ಲಿ ಇಲ್ಲವೂ ಗ್ರಾಹ್ಯವೇ. ಧನ ವ್ಯಾವೋಹದ ಸ್ವರೂಪವನ್ನು ಪುರಂದರ ದಾಸರು, ವಾದಿರಾಜರು ತಮ್ಮ ಕೀರ್ತನೆಗಳಲ್ಲಿ ಸೊಗಸಾಗಿ ಹೇಳಿದ್ದಾರೆ.

ರೊಕ್ಕ ಎರಡಕ್ಕು ದುಃಖ ಕಾಣಕ್ಕ
ಮಕ್ಕಳ ಮರಿಗಳ ಮಾಡೋದು ರೊಕ್ಕ
ಸಕ್ಕರೆ ತುಪ್ಪವ ಸರಿಸೋದು ರೊಕ್ಕ
ಕಕ್ಕುಲಾತಿಯನು ಬಿಡಿಸೋದು ರೊಕ್ಕ
ಘಕ್ಕನೆ ಹೋದರೆ ಘಾತ ಕಾಣಕ್ಕ
………………………………………….
………………………………………….
ವಿದ್ಯವ ಮನುಜರ ಕರಸೋದು ರೊಕ್ಕ
ಹೊದ್ದುನ ಜನರನು ಬಿಡಿಸೋದು ರೊಕ್ಕ
ಮುದ್ದು ಪುರಂದರ ವಿಠಲನ ಮರೆಸುವ
ಬಿದ್ದೋಗೋ ರೊಕ್ಕವ ಸುಡುನೀನಕ್ಕ

ಹಣದ ಮೇಲಿನ ಅತಿಯಾಸೆ ಎಲ್ಲ ದುಃಖ ಆತಂಕಗಳಿಗೂ ಕಾರಣವಾಗುತ್ತದೆ. ಹಣದ ದುಃಖ ಮತ್ತು ಕರಾಳ ಮುಖಗಳನ್ನು ಪುರಂದರದಾಸರು ಸೊಗಸಾಗಿ ವರ್ಣಿಸಿದ್ದಾರೆ. ಆ ಕೀರ್ತನೆಯಲ್ಲಿ ಪ್ರಾಸವು ಮನೋಹರವಾಗಿ ಬಳಕೆಯಾಗಿ ಹೇಳಬೇಕಾದ ವಿಚಾರವನ್ನು ಪರಿಣಾಮಕಾರಿಯಾಗಿ ವ್ಯಕ್ತಪಡಿಸಿದೆ. ಅದರಂತೆ ವಾದಿರಾಜರು ಹಣದ ಮಹಿಮೆಯನ್ನು ಬೇರೊಂದು ರೀತಿಯಲ್ಲಿ ರೇಖಿಸಿದ್ದಾರೆ.

ಹಣವೆ ನಿನ್ನಯ ಗುಣವೇನು ಬಣ್ಣಿಪೆನೊ
ಹಣವಿಲ್ಲದವನೊಬ್ಬ ಹೆಣವೇ ಸರಿ ಕಂಡ್ಯಾ

ಬೆಲೆಯಾಗದವನೆಲ್ಲ ಬೆಲೆಯ ಮಾಡುಸುವಿ
ಎಲ್ಲ ವಸ್ತುಗಳವಿದ್ದಲ್ಲೆ ತರಿಸುವಿ
ಕುಲಗೆಟ್ಟವರ ಸತ್ಕುಲಕ್ಕೆ ಸೇರಿಸುವಿ
ಹೊಲೆಯನಾದರೂ ತಂದೊಳಗಿರಿಸುವಿ||೧||

ಅಂಗನೆಯ ಸಂಗ ಅತಿಶಯದಿ ಮಾಡಿಸುವಿ
ಶೃಂಗಾರಾಭರಣಂಗಳ ಬೇಗ ತರಿಸುವಿ
ಮಂಗನಾದರೂ ಅನಂಗನೆಂದೆನಿಸುವಿ
ಕಂಗಳಿಲ್ಲದವಗೆ ಮಗಳ ಕೊಡಿಸುವಿ

ಧನ ಪ್ರಧಾನ ಮೌಲ್ಯಗಳ ಖಂಡನೆ ಈ ಕೀರ್ತನೆಯಲ್ಲಿದೆ. ಹಣ ಗೈಯುವ ಅನರ್ಥಗಳನ್ನು ದಾಸರು ಟೀಕಿಸಿದರು. ಧನ ಪಿಪಾಸೆ ಭಕ್ತಿ ಮಾರ್ಗದಲ್ಲಿ ಅಡ್ಡಿಒಡ್ಡುವುದನ್ನು ದಾಸರು ಅರಿತು ಅದರಿಂದ ದೂರ ನಿಂತರು. ಸಮಾಜ ಬಾಂಧವರೂ ಹಾಗೆ ನಿಲ್ಲಬೇಕೆಂದು ಹಂಬಲಿಸಿದರು. ಹಣದ ಸ್ವರೂಪವನ್ನು ಕಲಾತ್ಮಕ ಪ್ರತಿಮೆಗಳ ಮೂಲಕ, ರೂಪಕ, ಶಬ್ದ ಚಿತ್ರಗಳ ಮೂಲಕ ಸೊಗಸಾಗಿ ನಿರೂಪಿಸಿದ್ದಾರೆ. ದಾಸರು ಸಮಾಜವನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ.

ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ
ಕುಲದ ನೆಲೆಯ ನೇನಾದರೂ ಬಲ್ಲಿರ
ಹುಟ್ಟಿದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸ ಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆನೆಕಂಡ್ಯ ಮನುಜ

ಕನಕದಾಸರು ಈ ಕೀರ್ತನೆಯಲ್ಲಿ ಜಾತಿರಹಿತ ಸಮಾಜದ ಮಹತ್ವವನ್ನು ಬಿಂಬಿಸಿದ್ದಾರೆ. ಸಮಾಜವಾದದ ತಳಹದಿಯ ಮೇಲೆ ಸಮಾಜ ಕಟ್ಟಲು ಜನರ ಮನಃಪರಿವರ್ತನೆ ಮಾಡಲು ಅವರು ಯತ್ನಿಸಿದ್ದಾರೆ. ಭಾಷಾ ಬಳಕೆಯ ಮೂಲಕ ಸಾಮಾಜಿಕ ಬದಲಾವಣೆಗೆ ಅಗತ್ಯವಾದ ಘೋಷಣೆಗಳನ್ನು ಜನತೆಗೆ ಕೀರ್ತನೆಗಳ ಮೂಲಕ ಪ್ರಚಾರ ಮಾಡಿದ್ದಾರೆ.

ಕುಲ ಕುಲ ಕುಲವೆನ್ನುತ್ತಿಹರು
ಕುಲವ್ಯಾವುದು ಸತ್ಯಸುಖವುಳ್ಳ ಜನರಿಗೆ ?

ಎಂದು ಕನಕದಾಸರು ಪ್ರಶ್ನೆ ಮಾಡಿದ್ದಾರೆ. ದಾಸರ ಒಂದೊಂದು ಕೀರ್ತನೆಯೂ ಒಂದಲ್ಲ ಒಂದು ರೀತಿಯಲ್ಲಿ ಆಲೋಚನೆಯನು ಹೇಳುವಂತಹುದಯೇ ಆಗಿದೆ. ಈ ಕೀರ್ತನೆಗಳು ಯಾವುದೂ ಅರ್ಥವಿಲ್ಲದ ಶಬ್ದಗಳಾಗಿ ಉಳಿದಿಲ್ಲ. ಯಾವ ಕೀರ್ತನೆಯನ್ನು ತೆಗೆದುಕೊಂಡರೂ ಈ ಮಾತು ಸ್ಪಷ್ಟವಾಗುತ್ತದೆ. ಹೀಗಿರುವಾಗ ಬರೆಹಗಾರ ತನ್ನ ಕಾಲದ ಸಮಾಜ ಜೀವನದ ಬಗೆಗೆ ಬೆಳೆದು ಬಂದ ತಿಳಿವಳಿಕೆಯನ್ನು ತನ್ನದಾಗಿಸಿಕೊಳ್ಳಬೇಕಾಗುತ್ತದೆ. ದಾಸರು ಈ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಸಮಾಜಕ್ಕೆ ಒಳಿತವಾಗುವ ರೀತಿಯಲ್ಲಿ ಬರೆದಿದ್ದಾರೆ. ದಾಸರು ತಮ್ಮ ಕಾಲದ ವೈರುಧ್ಯಗಳ ಆಳವನ್ನು ಸಮಗ್ರವಾಗಿ ಗ್ರಹಿಸಿದ್ದಾರೆ. ಅವು ವರ್ತಮಾನಕ್ಕೂ ಅನ್ವಯಿಸುತ್ತವೆ. ದಾಸರು ಸಮಕಾಲೀನ ವಸ್ತುವನ್ನೆತ್ತಿಕೊಂಡು ಶಕ್ತಿಶಾಲಿ ಕಾವ್ಯ ನಿರ್ಮಾಣ ಮಾಡಿದರು. ಅವರ ಕೀರ್ತನೆಗಳು ಈಗಿನ ಸಾಮಾಜಿಕ, ರಾಜಕೀಯ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳಲಿಕ್ಕೆ ನೆರವಾಗುತ್ತವೆ. ದಾಸರು ಜೀವನದ ಸಮಗ್ರ ಚಿತ್ರವನ್ನು ಗ್ರಹಿಸಿ ಅದರೊಳಗೆ ಕೆಲಸ ಮಾಡುವ ವೈರುಧ್ಯಗಳ ನಾಡಿ ಹಿಡಿದು. ಹೊಸ ಬದುಕಿಗಾಗಿ ಹೋರಾಟ ಮಾಡುವ ಶಕ್ತಿಗಳನ್ನು ಗುರುತಿಸಿಕೊಂಡು ಅವುಗಳ ಸತ್ಯ ಚಿತ್ರಣವನ್ನು ರೇಖಿಸಿದ್ದಾರೆ. ದಾಸರು ತಮ್ಮ ತಿಳಿವಳಿಕೆಯ ಬೇರುಗಳನ್ನು ಸಮಾಜ ವಿಶ್ಲೇಷಣೆಯ ತತ್ವದ ನೆಲೆಯಲ್ಲಿ ಗ್ರಹಿಸಿದ್ದಾರೆ. ಸಂಕುಚಿತ ದೃಷ್ಟಿಯನ್ನು ಹೋಗಲಾಡಿಸಿ ಉದಾತ್ತ ಧ್ಯೇಯವನ್ನು ಪ್ರತಿಪಾದಿಸಿದ್ದಾರೆ.

ಆಚಾರ‍ವಿಲ್ಲದ ನಾಲಗೆ ನಿನ್ನ
ನೀಚ ಬುದ್ಧಿಯ ಬಿಡು ನಾಲಗೆ
ಚಾಡಿ ಹೇಳಲು ಬೇಡ ನಾಲಗೆ
ನಿನ್ನ ಬೇಡ ಕೊಂಬುವೆನು ನಾಲಗೆ
ರೂಢಿಗೊಡೆಯ ಶ್ರೀ ರಾಮನ ನಾಮನ
ಪಾಡುತಲಿರು ಕಂಡ್ಯ ನಾಲಗೆ

ಪುರಂದರ ದಾಸರು ಮಾತಿನ ಕ್ರಿಯಾತ್ಮಕ ಧೋರಣೆ ಹೇಗಿರಬೇಕೆಂಬುದನ್ನು ಹೇಳಿದ್ದಾರೆ. ಮಾತು ವ್ಯಕ್ತಿಯ ವ್ಯಕ್ತಿತ್ವವನ್ನು ಅಳೆಯುವ ಅಳತೆಗೋಲಾಗಿದೆ. ಶರಣರು ಹೇಳುವ ’ಮಾತೆಂಬುದು ಜ್ಯೋತಿರ್ಲಿಂಗ’ ಎಂಬ ತತ್ವವನ್ನೇ ದಾಸರು ಪ್ರತಿಪಾದಿಸಿದ್ದಾರೆ. ಇದು ದಾಸರ ಲೋಕಾನುಭವವನ್ನು ತಿಳಿಸುತ್ತದೆ. ಸಾಹಿತ್ಯ ಮತ್ತು ಕ್ರಾಂತಿಗಳೆರಡೂ ಭಾಷೆಯ ಮೂಲಕ ಹುಟ್ಟುವಂತಹವು. ಎರಡಕ್ಕೂ ಪ್ರಜಾ ಜೀವನವೇ ಕೇಂದ್ರ. ಸಮಾಜದಲ್ಲಾದ ಬದಲಾವಣೆ ಭದ್ರವಾಗಿ ಮುಂದುವರಿಯಬೇಕಾದರೆ ಸಾಮಾಜಿಕ ದೃಷ್ಟಿಕೋನಗಳು ಬದಲಾಗಿರುವಾಗಲೆಲ್ಲ ಕೀರ್ತನೆಗಳ ವಸ್ತು, ಶೈಲಿ ರೂಪಗಳು ಅಂದರೆ ರಚನಾಸೂತ್ರಗಳು ಬದಲಾಗಿವೆ. ಭಾಷಾ ಬಳಕೆಯಲ್ಲಿಯೂ ಬದಲಾವಣೆ ಕಂಡುಬರುತ್ತದೆ. ದಾಸರು ಪಾಪಿಗಳ, ಕೋಪಿಗಳ ಸ್ವಭಾವವನ್ನು ವಿವಿಧ ರೂಪಕಗಳಿಂದ ಚಿತ್ರಿಸಿದ್ದಾರೆ.

ಪಾಪಿ ಬಲ್ಲನೆ ಪರರ ಸುಖ ದುಃಖವ
ಕೋಪಿ ಬಲ್ಲನೆ ಶಾಂತಿ ಸುಗುಣದ ಘನವ

ಕತ್ತೆ ಬಲ್ಲುದೆ ಹೊತ್ತ ಕುತ್ತರಿಯ ಪರಿಮಳವ
ಮೃತ್ಯು ಬಲ್ಲಳೆ ವೇಳೆ ಹೊತ್ತೆಂಬುದ
ತೊತ್ತು ಬಲ್ಲಳೆ ಮಾನಾಪಮಾನವೆಂಬುದನು
ಮತ್ತೆ ಬಲ್ಲುದೆ ಬೆಕ್ಕು ಹರಿಯ ಮೀಸಲವ ||೧||

ಹೇನು ಬಲ್ಲುದೆ ಮುಡಿವ ಹೂವಿನ ಪರಿಮಳವ
ಶ್ವಾನ ಬಲ್ಲುದೆ ರಾಗ ಭೇದಂಗಳ
ಮೀನು ಬಲ್ಲದೆ ನೀರು ಸವುಳು ಸ್ವಾದೆಂಬುದನು
ಹೀನ ಬಲ್ಲನೆ ಸುಗಮ ದುರ್ಗುಣವನು ||೨||

ಬಾಳೆಬಲ್ಲುದೆ ಮರಳಿ ಫಲವಾಗೋ ಸುದ್ದಿಯನು
ಸೂಳೆ ಬಲ್ಲಳೆ ಗೆಳೆಯಗಿಹ ಬಡತನವ
ಕೇಳಬಲ್ಲನೆ ಕಿವುಡ ಏಕಾಂತ ಮಾತುಗಳ
ಹೇಳಬಲ್ಲನೆ ಮೂಕ ಕನಸ ಕಂಡುದನು ||೩||

ಕಾಗೆ ಬಲ್ಲುದೆ ಒಳ್ಳೆ ಕೋಗಿಲೆಯ ಸ್ವರವನ್ನು
ಗೂಬೆಬಲ್ಲುದೆ ಹಗಲ ಹರಿದಾಟವ
ಜೋಗಿ ಬಲ್ಲನೆ ಮನೆಯೊಳಿಲ್ಲ ಉಂಟೆಂಬುದನು
ರೋಗಿ ಬಲ್ಲನೆ ಮೃಷ್ಟಾನ್ನದ ರುಚಿಯ||೪||

ಹೇಡಿ ಬಲ್ಲನೆ ರಣದ ಸಾಹಸದ ಶೌರ್ಯವನು
ಕೋಡಗವು ಬಲ್ಲುದೆ ರತ್ನದ ಬೆಲೆಯ
ಬೇಡಿದುದ ಕೊಡಲು ಪುರಂದರವಿಠಲನಲ್ಲದೆ
ನಾಡದೈವಗಳೇನು ಕೊಡಬಲ್ಲವೋ||೫||

ಪುರಂದರ ದಾಸರು ಈ ಕೀರ್ತನೆಯಲ್ಲಿ ಸಮಾಜ ಜೀವನದಲ್ಲಿ ಅನುದಿನ ಕಾಣುವ ಡಂಭಾಚಾರಿಗಳನ್ನು ವಿಡಂಬಿಸಿದ್ದಾರೆ. ಆ ಮೂಲಕ ಏಕದೇವೋಪಾಸನೆಯನ್ನು ಪ್ರತಿಪಾದಿಸಿದ್ದಾರೆ. ಭಕ್ತಿಯ ಹೆಸರಿನಲ್ಲಿ ನಾಡಾಡಿ ದೈವಗಳನ್ನು ನಂಬುವ ಬಗೆಯನ್ನು ಹಲವು ಬಗೆಯ ದೃಷ್ಟಾಂತಗಳೊಂದಿಗೆ ನಿರಾಕರಿಸಿದ್ದಾರೆ. ಇಲ್ಲಿಯ ಕತ್ತೆ, ಹೇನು, ಶ್ವಾನ, ಮೀನು, ಬಾಳೆ, ಸೂಳೆ, ಕಾಗೆ, ಗೂಬೆ, ಜೋಗಿ, ರೋಗಿ, ಹೇಡಿ, ಕೋಡಗ ಇಂತಹ ಸಾಮಾಜಿಕ ಸ್ತರದ ದೃಷ್ಟಾಂತಗಳು ದಾಸರ ಸೂಕ್ಷ್ಮ ನಿರೀಕ್ಷಣ ಸಾಮರ್ಥ್ಯವನ್ನು ಪ್ರಕಟಿಸುತ್ತವೆ. ಅದರಲ್ಲಿ ಜನಸಾಮಾನ್ಯರ ಆಶೆ-ಆಶೋತ್ತರಗಳು ಅಡಗಿರುವಂತೆಯೇ ಜನಸಾಮಾನ್ಯರನ್ನು ಹಿಡಿದಿಟ್ಟ ಸಾಂಪ್ರದಾಯಿಕ ವಿಚಾರಗಳೂ ಹೇರಳವಾಗಿವೆ. ದುರ್ಜನರ ವಿವರಗಳು ಪುರಂದರದಾಸ ಮತ್ತು ಕನಕದಾಸರ ಕೀರ್ತನೆಗಳಲ್ಲಿ ವ್ಯಕ್ತವಾದಷ್ಟು ಗಂಭೀರವಾಗಿ ಬೇರೆಲ್ಲೂ ವ್ಯಕ್ತವಾಗಿಲ್ಲ. ಪಾಪಿಗಳ ಮನೋಧರ್ಮವನ್ನು ಅವರಲ್ಲಿ ಅಂತರ್ಗತವಾದ ಆಲೋಚನೆಗಳನ್ನು ಅರಿತು ಸಜ್ಜನರು ದೂರವಿರಬೇಕೆಂಬ ತತ್ವವೂ ಆ ಕೀರ್ತನೆಯಲ್ಲಿದೆ. ದಾಸರು ಜನರಿಗೆ ತಿಳಿಯುವ ರೀತಿಯಲ್ಲಿ ಅವರ ದಿನನಿತ್ಯದ ಬದುಕಿನಿಂದಲೇ ತೆಗೆದುಕೊಂಡ ಮಾತು, ವಿಚಾರಗಳನ್ನು ಪಾಂಡಿತ್ಯವಿಲ್ಲದೆ ಸಹಜವಾಗಿ ಆಡುಭಾಷೆಯಲ್ಲಿ ಹೇಳಿದ್ದಾರೆ. ಇಂತಹದೊಂದು ಬದಲಾವಣೆ ಸಾಮಾಜಿಕ ಸಂಬಂಧಗಳಲ್ಲಿ ಉಂಟಾಗಬಹುದಾದ ಸ್ಥಿತ್ಯಂತರಗಳನ್ನು ಅವಲಂಬಿಸಿಯೇ ಆಗುವಂತಹುದು.

ದಾಸರು ಡಂಭಾಚಾರದ ಭಕ್ತಿಯನ್ನು ಕುರಿತು ಹೇಳುವಾಗ ಬಳಸಿರುವ ಭಾಷೆಯಲ್ಲಿ ಹಲವಾರು ಕೀರ್ತನೆಗಳಲ್ಲಿ ಕಂಡುಬರುತ್ತವೆ. ಅವು ಡಂಭಾಚಾರದ ಭಕ್ತಿಯ ಸ್ಪಷ್ಟ ಚಿತ್ರಣವನ್ನು ಕೊಡುವಲ್ಲಿ ಯಶಸ್ವಿಯಾಗಿವೆ.

ಉದರ ವೈರಾಗ್ಯವಿದು ನಮ್ಮ
ಪದುನನಾಭನಲ್ಲಿ ಲೇಶಭಕುತಿಯಿಲ್ಲ

ಉದಯಕಾಲದಿಲೆದ್ದು ಗಡಗಡನಡುಗುತ
ನದಿಯೊಳು ವಿಂದೆವೆಂದು ಹಿಗ್ಗುತಲಿ
ಮದಮತ್ಸರ ಕ್ರೋಧ ಒಳಗೆ ಬಚ್ಚಿಟ್ಟುಕೊಂಡು
ಬದಿಯಲಿದ್ದವರಿಗಾಶ್ಚರ್ಯ ತೋರುವುದು

ಕರದಲ್ಲಿ ಜಪಮಣಿ ಬಾಯಲಿ ಮಂತ್ರವು
ಅರಿವೆಯ ಮುಸುಕು ಮೋರೆಗೆ ಹಾಕಿ
ಪರಸತಿಯುಳ ಗುಣಸ್ಮರಿಸುತ ಅನುದಿನ
ಪರಮ ವೈರಾಗ್ಯಶಾಲಿಯೆಂದೆನಿಪುದು

ಇಂತಹ ಕಪಟ ಆರಾಧನೆಯನ್ನು ಆರಾಧಕರನ್ನು ದಾಸರು ವಾಚಾಮಗೋಚರವಾಗಿ ಅಣಕಿಸಿ ಅವಹೇಳನ ಮಾಡಿದ್ದಾರೆ. ಬದುಕಿನ ತತ್ವ, ಆದರ್ಶಗಳನ್ನು ಅರಿಯದೆ ತೋರಿಕೆಯ ಆಚರಣೆಯನ್ನು ಮಾಡುವ ಜನರ ನಡವಳಿಕೆಯನ್ನು ದಾಸರು ಟೀಕಿಸಿದ್ದಾರೆ. ಡೋಂಗಿತನ ಸಲ್ಲದೆಂದು ಅವರು ಅನೇಕ ಸಲ ಎಚ್ಚರಿಸಿದ್ದಾರೆ. ಸಿಕ್ಕಸಿಕ್ಕಲ್ಲಿ ಸ್ನಾನ ಮಾಡುವ ತೋರಿಕೆಯ ಭಕ್ತನನ್ನು ಗುಂಡು ಮುಳುಗಿನ ಹಕ್ಕಿಗೆ ಹೋಲಿಸಿದ್ದಾರೆ. ಅಂದರೆ ಭಕ್ತಿ ಡಂಬಾಚಾರದ ರೀತಿಯನ್ನು ಅದು ವಿವರಿಸುತ್ತದೆ. ದುಷ್ಟ ಜನರ ಗೆಳೆತನ ಅಪಾಯಕಾರಿಯೆಂದು ಪುರಂದರದಾಸರು ಹಲವು ಪದಪುಂಜಗಳ ಮೂಲಕ ಹೇಳಿದ್ದಾರೆ.

ತುದಿನಾಲಿಗೆ ಬೆಲ್ಲ ಎದೆಗತ್ತರಿಯವರ ಸಂಗಬೇಡ
ಹೃದಯ ದಾಕ್ಷಿಣ್ಯವನರಿಯದ ಮನುಜರ ಪ್ರಸಂಗಬೇಡ

ದುಗ್ಗಾಣಿ ಎಂಬುದು ದುರ್ಜನರ ಸಂಗ
ದುಗ್ಗಾಣಿ ಬಲು ಕೆಟ್ಟದಣ್ಣ

ದುರ್ಜನರ ಸಂಗ ಎಂದಿಗೂ ಒಲ್ಲೆನು ಇಂಥ
ಸಜ್ಜನರ ಸಂಗದೊಳಗಿರಿ ಸೆನ್ನ ರಂಗ

ತುದಿನಾಲಗೆ ಬೆಲ್ಲ, ಎದೆಗತ್ತರಿ ಇಂತಹ ಪದಪುಂಜಗಳು ಮಾತು ಮತ್ತು ಆಚರಣೆಯ ಅಂತರವನ್ನು ಹೇಳುತ್ತವೆ. ಅಂತವರ ಸಂಗಬೇಡವೆಂದು ದಾಸರು ಎಚ್ಚರಿಸಿದ್ದಾರೆ. ಅಂತಹವರನ್ನು ದುಗ್ಗಾಣಿ (ಕಡಿಮೆ ಬೆಲೆ)ಗೆ ಹೋಲಿಸುವುದು ಸೂಕ್ತವಾಗಿದೆ. ದಾಸರು ಒಂದೆಡೆ ದುರ್ಜನರ ಸಂಗಕ್ಕಿಂತ ಸಜ್ಜನರ ಜೊತೆ ಜಗಳವೇ ಲೇಸೆಂದು ಹೇಳಿದ್ದಾರೆ. ಹೇಳಬೇಕಾದ ಸಂಗತಿಗಳನ್ನು ತಿಳಿಯಾದ ದೇಸಿ ಭಾಷೆಯಲ್ಲಿ ಅಭಿವ್ಯಕ್ತಿಸಿದ್ದಾರೆ. ಅವದೂತರಂತೆ, ಅಲೆಮಾರಿಯಂತೆ ತಿರುಗುತ್ತಿದ್ದ ದಾಸರಿಗೆ ಜನಜೀವನದ ಆಳವಾದ ಗ್ರಹಿಕೆ ಸಾಧ್ಯವಾಗಿದೆ. ಜನರ ಸಾಮಾಜಿಕ ಬದುಕಿನ ನಾಡಿಮಿಡಿತ ಅವರಿಗೆ ಚೆನ್ನಾಗಿ ಗೊತ್ತಿತ್ತು. ಲೋಕದಲ್ಲಿ ಸಾಮಾಜಿಕ ನ್ಯಾಯಕ್ಕಾಗಿ ದನಿ ಎತ್ತಿದ ಹೋರಾಟಗಾರರಾಗಿಯೂ ದಾಸರು ಕಾಣಿಸುತ್ತಾರೆ.

ಕೊಬ್ಬಲಿರಬೇಡ ಮನುಜ ನೀನು ಕೊಬ್ಬಲಿರಬೇಡ
ಸಿರಿಮಾನಬಂದಾಗ ಬಿರಿಬಿರಿ ನಡೆವರು
ಸರಿಯಲಾರೆನೆಂದು ಮಿಡುಕುವರು
ಸಿರಿಹೋದ ಮರುದಿನ ಬಡತನ ಬಂದರೆ
ಹುರುಕ ಹತ್ತಿದಂತೆ ಕೆರೆಕೊಂಬರಯ್ಯ

ಸಂಪತ್ತು ಅಧಿಕಾರ ಇದ್ದಾಗ ಎಲ್ಲರೂ ನಮ್ಮವರೆನ್ನುವರು ಅವು ಹೋದ ಮರುದಿನ ಬಂಧೂಗಳೂ ದೂರಾಗುವರು. ಆ ಕಾರಣ ಸಂಪತ್ತು, ಅಧಿಕಾರವಿದ್ದಾಗ ಚಿತ್ತ ಸ್ವಾಸ್ಥ್ಯ ಇರಬೇಕು ಎಂಬುದು ಈ ಕೀರ್ತನೆಯ ಸಾರ. ಪ್ರಕೃತಿಯ ವಿವಿಧ ವಸ್ತುಗಳೊಡನೆ ವ್ಯಕ್ತಿಯ ಸ್ವಭಾವವನ್ನು ಹೋಲಿಸಲಾಗಿದೆ. ಇದು ವಿಷಯವನ್ನು ನೇರವಾಗಿ ಮತ್ತು ಸರಳವಾಗಿ ಮನದಟ್ಟು ಮಾಡಿಕೊಡುತ್ತದೆ. ದಾಸರ ಇಂತಹ ರಚನೆಗಳಲ್ಲಿ ವ್ಯಂಗ್ಯ ವಿಡಂಬನೆ, ಶ್ಲೇಷಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ದಾಸರು ಸಾಮಾಜಿಕ ವಾಸ್ತವ ದೃಷ್ಟಿಕೋನವನ್ನು ಗಳಿಸಿಕೊಂಡಿದ್ದಾರೆ. ಅವರು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ್ದಾರೆ. ಜ್ಞಾನದ ಬಾಗಿಲವನ್ನು ಜಾತಿ ಮತ ಭೇದವಿಲ್ಲದೆ ಎಲ್ಲರಿಗೂ ತೆರೆದರು.

ಆವ ಕುಲವಾದರೇನು ಅವನಾದರೇನು
ಆತ್ಮ ಭಾವವರಿತ ಮೇಲೆ
ಹಸಿ ಕಬ್ಬು ಡೊಂಕಿರಲು ಅದರ ರಸ ತಾನು ಡೊಂಕೇನೊ
ವಿಷಯಾಸೆಗಳೇ ಬಿಟ್ಟು ಹಸನಾದ ಗುರುಭಕ್ತಿ ಮಾಡೋ ಮನುಜಾ

ನಾನಾ ವರ್ಣದ ಆಕಳು ಅದು ನಾನಾವರ್ಣದ ಕ್ಷೀರವೇನೊ
ಹೀನ ಕರ್ಮಗಳನ್ನು ಬಿಟ್ಟು ಹಿಗ್ಗಿ ಜ್ಞಾನ ಬಲಿಸೊ ಮನಜಾ

ಕುಲದ ಮೇಲೆ ಹೋಗಬೇಡ ಮನುಜ ಕುಲವಿಲ್ಲ ಜ್ಞಾನಿಗಳಿಗೆ
ವರದ ಪುರಂದರವಿಠಲನ ಪಾದವ ಸೇರಿ ಮುಕ್ತನಾಗೊ ಮನುಜಾ

ಕುಲನಿರಾಕರಣೆ ಈ ಕೀರ್ತನೆಯ ತಿರುಳು. ಯಾವ ಕುಲದವರಾದರೂ ಭಕ್ತಿ, ಜ್ಞಾನ ಮುಖ್ಯ ಎಂದು ಹೇಳಿದ್ದಾರೆ. ದಾಸರು, ವಿಷಯಾಸೆ ಬಿಡುವುದು, ಗುರುನಿಷ್ಠೆ ಬೆಳೆಸಿಕೊಳ್ಳುವುದು, ಕೆಟ್ಟ ಆಚರಣೆಗಳನ್ನು ಮಾಡದಿರುವುದು ಇವು ಬದುಕಿನ ಧ್ಯೇಯವಾಗಬೇಕು. ಕುಡಿಯುವ ನೀರು, ಸುಡುವ ಬೆಂಕಿ, ಉಸಿರಾಡಿಸುವ ಗಾಳಿ ಒಂದೇ ಆಗಿರುವಾಗ ಜಾತಿ ಭೇದವೇಕೆ? ಎಂಬುದನ್ನು ದಾಸರು ಪ್ರಶ್ನಿಸಿದ್ದಾರೆ. ಅದಕ್ಕಾಗಿ ಅವರು ’ಹಸಿ ಕಬ್ಬು ಡೊಂಕಿರಲು ಅದರ ರಸ ಡೊಂಕೆ’, ಆಕಳು ಕಪ್ಪಾಗಿದ್ದರೂ ಅದರ ಹಾಲುಕಪ್ಪೇ? ಎಂಬ ಸುಂದರವಾದ ಉಪಮೆಗಳನ್ನು ಕೊಟ್ಟಿರುವುದು ಔಚಿತ್ಯಪೂರ್ಣವಾಗಿದೆ. ಜಪ ತಪ, ತೀರ್ಥಯಾತ್ರೆ ಮಂತ್ರ ಪಠನಗಳ ಹೊರವಲಯದಲ್ಲಿಯೇ ಸುತ್ತುವ ಜನರಿಗೆ ಅಂತರಂಗದ ಶುದ್ದಿ ಇಲ್ಲದಿದ್ದರೆ ಪ್ರಯೋಜನವಿಲ್ಲ ಎಂಬ ಕಟುಸತ್ಯ ಇಲ್ಲಿ ಬಳಕೆಯಾದ ರಚನೆಗಳಿಗೆ ಪ್ರೇರಕವಾಗಿದೆ. ಭಗವಂತನ ಸನ್ನಿದಿಗೆ ಹೋಗಬಯಸುವವರು ಗುರಿಯನ್ನು ತಲುಪುವ ಬಾಣವಾಗಬೇಕಾದರೆ ಅಗತ್ಯವಾದ ಜಾತ್ಯತೀತ ಮನೋಭಾವನೆಗಳನ್ನು ರೂಢಿಸಿಕೊಳ್ಳಬೇಕು. ಹೊರಗಿನ ಕಪಟ ಆಚರಣೆಗಳಿಗಿಂತ ಅಂತರಂಗದಲ್ಲಿ ಪರಮಾತ್ಮ ನಮ್ಮ ನಂಬುದರಲ್ಲಿ ಬದುಕಿನ ಸಾರ್ಥಕತೆಯಿದೆ. ನುಡಿದಂತೆ ನಡೆಯದ ಭಕ್ತರನ್ನು ದಾಸರು ಟೀಕಿಸಿದ್ದಾರೆ.

ಎಲ್ಲಾನು ಬಲ್ಲೆನೆಂಬುವಿರಲ್ಲ ಅವಗುಣ ಬಿಡಲಿಲ್ಲ
ಸೊಲ್ಲಿಗೆ ಶರಣರ ಕಥೆಗಳ ಪೇಳುತ
ಅಲ್ಲದ ನುಡಿಯನು ನುಡಿಯುವಿರಲ್ಲ
ಕಾವಿಯನುಟ್ಟು ತಿರುಗುವಿರಲ್ಲ ಕಾಮವ ಬಿಡಲಿಲ್ಲ
ನೇಮನಿಷ್ಠಗಳ ಮಾಡುವಿರಲ್ಲ ತಾಮಸ ಬಿಡಲಿಲ್ಲ