ದಾಸರು ತಮ್ಮ ಕೀರ್ತನೆಗಳ ಮೂಲಕ ಆಧ್ಯಾತ್ಮ ಸಾಧನೆ ಹಾಗೂ ಸಮಾಜ ಬೋಧನೆಯನ್ನು ಏಕಕಾಲಕ್ಕೆ ಕೈಕೊಂಡರು. ಸಮಕಾಲೀನ ಬದುಕಿನ ಸ್ಥಿತ್ಯಂತರಗಳನ್ನು, ಸಂಸಾರದ ನಶ್ವರತೆಯನ್ನು ತಮ್ಮ ಕೀರ್ತನೆಗಳ ಮೂಲಕ ಹರಿಬಿಟ್ಟರು. ಪರಿಣಾಮಕಾರಿಯಾಗಿ ಬಿಂಬಿಸಿದರು. ಅವರ ಸಾಮಾಜಿಕ ಪ್ರಜ್ಞೆ ತುಂಬ ತೀಕ್ಷ್ಣವಾಗಿದೆ. ಅದು ಮೃದು ವಿನೋದವಾದ ಅವರ ಪದಗಳಲ್ಲಿ ಹದವಾಗಿ ಬೆರೆತಿದೆ. ದಾಸರು ಸಮಾಜದ ಲೋಪ ದೋಷಗಳನ್ನು ಮೃದುವಾಗಿ ಖಂಡಿಸಿ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾಮಾಜೀಕರಣಕ್ಕೆ ಕಾರಣರಾದರು. ಹರಿದಾಸರಲ್ಲಿ ಅಗ್ರಗಣ್ಯರಾದ ಪುರಂದರದಾಸರ ಕೀರ್ತನೆಗಳಲ್ಲಿ ಸಾಮಾಜೀಕರಣದ ಅಂಶಗಳು ಯಾವ ರೀತಿ ಸಮ್ಮೀಳನವಾಗಿದೆ? ಅವುಗಳಿಗಿರುವ ಸಾಂಸ್ಕೃತಿಕ ಮಹತ್ವವೇನು? ಎಂಬ ಪ್ರಶ್ನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಇಲ್ಲಿ ಚರ್ಚೆ ಬೆಳೆಸಲಾಗಿದೆ.

ಒಂದು ಕಾಲಘಟ್ಟದಲ್ಲಿ ರಚಿತವಾದ ರಚನೆಗಳಿಗೆ ಸಾಂಸ್ಕೃತಿಕವಾಗಿ ಮುಖಾಮುಖಿಯಾಗಬೇಕಾದರೆ ಆ ಕಾಲದ ಯುಗಧರ್ಮವನ್ನು ಗಮನಿಸಬೇಕಾಗುತ್ತದೆ. ಪುರಂದರದಾಸರು ಬದುಕಿದ ಕಾಲದಲ್ಲಿ (ಸು.೧೬ನೆಯ ಶತಮಾನ) ಸಮಾಜ ರಚನೆ ಹೆಚ್ಚು ಸಂಕೀರ್ಣವಾಗುತ್ತ ನಡೆದಿತ್ತು. ಪರಕೀಯ ಸಂಸ್ಕೃತಿಯ ಆಘಾತಗಳಿಂದ ಭಾರತೀಯ, ಕರ್ನಾಟಕ ಸಂಸ್ಕೃತಿ ತನ್ನ ಮೌಲಿಕ ಸಿದ್ಧಾಂತವನ್ನು ಮತ್ತೊಮ್ಮೆ ಪರೀಕ್ಷೆಗೊಳಪಡಿಸುವ ಅವಶ್ಯಕತೆಯುಂಟಾಯಿತು. ಜೊತೆಗೆ ರಾಜಕೀಯ ಅಸ್ಥಿರತೆ ಹಾಗೂ ಸಾಮಾಜಿಕ ಶಿಕ್ಷಣದ ಅಭಾವದಿಂದಾಗಿ ಸಮುದಾಯಗಳಲ್ಲಿ ಸ್ವಾಸ್ಥ್ಯ ಇರಲಿಲ್ಲ. ಸಾಹಿತ್ಯದ ಮೂಲಕ ಹೊಸ ಮೌಲ್ಯಗಳನ್ನು ರೂಪಿಸಿ ಕಾವ್ಯನಿಷ್ಠೆ ಮತ್ತು ಜೀವನಿಷ್ಠೆ ಇವುಗಳಲ್ಲಿ ಸಮನ್ವಯವನ್ನು ಸಾಧಿಸುವ ಅವಶ್ಯಕತೆಯಿತ್ತು. ಪುರಂದರದಾಸರು ಮತ್ತು ಅವರ ಸಮಕಾಲೀನರು ಸಂಗೀತ ಮತ್ತು ಸಾಹಿತ್ಯದ ಮೂಲಕ ಸಾಮಾಜಿಕ ಸಮನ್ವಯ ಸಾಧಿಸಿ ಪ್ರಸ್ತುತ ಕಾಲಕ್ಕೂ ಸುಸಂಗತರಾಗಿದ್ದಾರೆ. ಅಂತರಂಗ ನಿವೇದನೆ, ಸಮರ್ಪಣಭಾವ, ಸಮಾಜ ವಿಮರ್ಶೆ ಮತ್ತು ನೀತಿ ಬೋಧೆ ಇವು ಪುರಂದರದಾಸರ ಕೀರ್ತನೆಗಳ ನಾಲ್ಕು ಮುಖ್ಯ ಮುಖಗಳು. ಅವುಗಳ ಸಮಾಜೋ ಭಾಷಿಕ ಆಯಾಮವನ್ನು ಪರಿಶೀಲಿಸಬಹುದು.

’ಅಂತರಂಗ ನಿವೇದನೆ’ಯ ಕೀರ್ತನೆಗಳಲ್ಲಿ ದಾಸರ ಮನಸ್ಸಿನ ಏರಿಳಿತಗಳ ಚಿತ್ರ ಹುದುಗಿದೆ. ಸಾಧಕನ ಮನೋಭೂಮಿಕೆ ಇಲ್ಲಿ ಸ್ಪುಟವಾಗಿ ಕಂಗೊಳಿಸುತ್ತದೆ. ಇಲ್ಲಿಯ ಆತ್ಮನಿವೇದನೆ, ಸಮರ್ಪಣ ಭಾವದ ಮೊದಲ ಮೆಟ್ಟಲಾಗಿದೆ. ಸಂಸಾರದ ನಿಸ್ಸಾರತೆಯನ್ನು ಮನಗಂಡ ದಾಸರು ಭಕ್ತಿಮಾರ್ಗದಲ್ಲಿ ಮುನ್ನಡೆವ ತಮ್ಮ ಹಂಬಲವನ್ನು ಇಲ್ಲಿ ತೋಡಿಕೊಂಡಿರುವ ರೀತಿ ಇದು.

ನಾ ನಿನ್ನೊಳನ್ಯ ಬೇಡುವುದಿಲ್ಲ ಎನ್ನ
ಹೃದಯ ಕಮಲದೊಳು ನಿಂದಿರು ಹರಿಯೆ
ನಾನಿನ್ನೊಳನ್ಯ ಬೇಡುವುದಿಲ್ಲ

ಶಿತ ನಿನ್ನ ಚರಣಕೆ ಎರಗಲಿ ಎನ್ನ
ಚಕ್ಷು ಸದಾ ನಿನ್ನ ನೋಡಲಿ ಹರಿಯೆ
ಕರ್ಣ ಗೀತಂಗಳ ಕೇಳಲಿ ನಿನ್ನ
ನಿರ್ಮಾಲ್ಯನಾಸವಾಘ್ರಾಣಿಸಲಿ ಹರಿಯೆ

ನಾಲಿಗೆ ನಿನ್ನ ಕೊಂಡಾಡಲಿ ಎನ್ನ
ಕರಗಳೆರಡು ನಿನ್ನನರ್ಚಿಸಲಿ ಹರಿಯೆ
ಚರಣ ತೀರ್ಥಯಾತ್ರೆ ಮಾಡಲಿ ಎನ್ನ
ಮನ ನಿನ್ನ ಅನುದಿನ ಸ್ಮರಿಸಲಿ ಹರಿಯೆ

ಬುದ್ದಿನಿನ್ನೊಳು ಬೆರತೋಗಲಿ ಎನ್ನ
ಚಿತ್ತನಿನ್ನೊಳು ಸ್ಥಿರವಾಗಲಿ ಹರಿಯೆ
ಭಕ್ತ ಜನರ ಸಂಗಮವಾಗಲಿ ಪುರಂ
ದರವಿಠಲನೆ ಇಷ್ಟೇ ದಯಮಾಡೋ ಹರಿಯೆ

ಸಂಸಾರದ ಬಂಧನದಲ್ಲಿ ಸಿಕ್ಕು ಬಳಲಿದ ಚೇತನ, ಬಿಡುಗಡೆಗಾಗಿ ಹಂಬಲಿಸುತ್ತಿದೆ. ನಿಷ್ಕಾಮ ಭಕ್ತಿಯ ಮಾದರಿ ಇಲ್ಲಿದೆ. ಕಿಂಕರ ಭಾವ ಹೆಪ್ಪುಗಟ್ಟಿದೆ. ’ದಾರಿಯಾವುದಯ್ಯಾ ವೈಕುಂಠಕ್ಕೆ ದಾರಿತೋರಿಸಯ್ಯಾ’ ಇಂತಹ ಕೀರ್ತನೆಗಳಲ್ಲಿ ಸಂಬಂಧವಾಚಕ ಮತ್ತು ಸಂಬೋಧನೆಗಳನ್ನು ಪೋಣಿಸುತ್ತ ಹರಿಯ ಜೊತೆಗೆ ಸಂಬಂಧ ಕಲ್ಪಿಸಲು ಯತ್ನಿಸುತ್ತಾರೆ. ಸಾಧಕರು ಮುಕ್ತಿಯ ಬೆನ್ನುಬೀಳದೆ ಭಕ್ತಿಯೊಂದನ್ನನುಸರಿಸಿದರೆ ಮುಕ್ತಿಯು ತಾನೇ ಅಳವಡುವುದು ಎಂಬುದು ದಾಸರ ಅಭಿಮತ ಶ್ರೀ ಪಾದರಾಯರ ’ನಾರಾಯಣ ನಿನ್ನ ನಂಬಿದೆ’, ವ್ಯಾಸರಾಯರ ’ನಿನ್ನಲ್ಲಿ ಇರಿಸಿ ಕಾಯೋ’, ವಾದಿರಾಜರ ”ದಾರಿಯ ತೋರೋ ಗೋಪಾಲ’ ಕನಕದಾಸರ ’ಆರೂಸಂಗಡ ಬಾಹೋರಿಲ್ಲ’, ’ತಲ್ಲಣಿಸದಿರು ಕಂಡ್ಯ’, ಮಹಿಪತಿದಾಸರ ’ಎನ್ನ ಪರಾಧವೇನು’? ವಿಜಯದಾಸರ ’ವಿಠಲಾ ನಿನ್ನ ನಂಬಿದೆ’, ’ಅಂತರಂಗದ ಕದ’, ಪ್ರಸನ್ನ ವೆಂಕಟದಾಸರ ’ಪಿಡಿ ಎನ್ನ ಕಯ್ಯಾ’,ಗೋಪಾಲದಾಸರ ’ಏನು ಬೇಡಲಿ’ ಜಗನ್ನಾಥ ದಾಸರ ’ಗತಿಯಾವುದೆನಗೆ’? ’ಅಪರಾಧ ಏಣಿಸದಲೆ’ ಇಂತಹ ಕೀರ್ತನೆಗಳಲ್ಲಿ ಜಗತ್ತು ನಶ್ವರ, ಮುಕ್ತಿಯೊಂದೇ ಶಾಶ್ವತ, ಮುಕ್ತಿ ಪಡೆಯಲು ಬದುಕನ್ನು ಸಾಧನವಾಗಿಸಿಕೊಳ್ಳಬೇಕು. ಎಂಬ ಅಂತರಂಗದ ನಿರೀಕ್ಷಣೆಯನ್ನು ನಿಸ್ಸಂಕೋಚವಾಗಿ ಕೈದಿರುವುದು ವಿಶೇಷ. ವಚನಕಾರರಲ್ಲಿ ಕಂಡುಬರುವ ಶರಣ ಸತಿ, ಲಿಂಗಪತಿ ಎಂಬ ಸೌಹಾರ್ಥಭಾವ ಮತ್ತು ಮಧುರ ಭಕ್ತಿಯನ್ನಿಲ್ಲಿ ನೆನೆಯಬಹುದು.

ಗ್ರಾಮೀಣ ಪರಿಸರದ ಭಾಷೆಯನ್ನು ರೂಡಿಸಿಕೊಂಡ ಈ ಕೀರ್ತನೆಗಳು ಈ ನೆಲದ ಕಸುವನ್ನು ಹಿರಿ ಪರಿಪುಷ್ಪವಾಗಿವೆ. ದೈವತ್ವದ ಸನ್ನಿಧಿಯನ್ನು ಸೇರಲು ಭಕ್ತ ಮಾಡುತ್ತಿರುವ ಕಾತರ ಇಲ್ಲಿಯ ಗೀತಗಳ ಹಿನ್ನೆಲೆಯಿದೆ. ಅಭಿವ್ಯಕ್ತಿಯ ಸಾಧನವಾದ ಭಾಷೆ ಇಲ್ಲಿ ಒಮ್ಮೆ ಕಳವಳವಾಗಿ, ಇನ್ನೊಮ್ಮೆ ಸಂಭ್ರಮವಾಗಿ, ಮತ್ತೊಮ್ಮೆ ನಿರಾಶೆಯಾಗಿ ಸುಳಿಯುತ್ತದೆ. ಕೀರ್ತನೆಗಳಲ್ಲಿ ದೈನ್ಯ, ಕಾರುಣ್ಯ, ಭಯ, ಪ್ರಸನ್ನತೆ ಇಂತಹ ಭಾವನೆಗಳು ಒಡಮೂಡಿವೆ.

ಇತ್ತ ಬಾ ಎಂಬುವರಿಲ್ಲ ಇರವ ಕೇಳುವರಿಲ್ಲ
ಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ. ಎಂಬಲ್ಲಿ ದೈನ್ಯ

ಮರಣವು ಆವಾಗ ಬರುವುದೊ ತನ್ನ
ಶರೀರ ಯಾವಾಗ ಮುರಿವುದೂ. ಎಂಬಲ್ಲಿ ಅ ಭಯ

ಅಸಹಾಯಕವಾದ ತನ್ನನ್ನು ದೇವರು ಕಾಯಬೇಕೆಂಬ ದೀನ ಮೊರೆ ಇಂತಹ ನೂರಾರು ಕೀರ್ತನೆಗಳಲ್ಲಿದೆ. ಜೀವನದ ಅಸ್ಥಿರತೆಯನ್ನು ಯಥಾರ್ಥವಾಗಿ ಚಿತ್ರಿಸಿದ್ದಾರೆ. ಇಂತಹ ಸಾಲುಗಳು ದಾಸರ ವರ್ಣನಾ ರೀತಿಗೂ ಕನ್ನಡಿ ಹಿಡಿಯುತ್ತವೆ.
ಮಾನವ ಬದುಕಿನ ಯಾತನೆಗೆ ಸಾಂತ್ವನ ನೀಡಲು ಭಕ್ತಿ ಅಗತ್ಯವೆಂದು ದಾಸರು ತಮ್ಮ ಎಲ್ಲ ಕೀರ್ತನೆಗಳ ಬುನಾದಿಯನ್ನಾಗಿ ಮಾಡಿಕೊಂಡಿದ್ದಾರೆ. ಇಹದ ಬದುಕನ್ನು ನಿಯಂತ್ರಿಸಿ ಅನೇಕ ಕಷ್ಟ ಕಾರ್ಪಣ್ಯಗಳಿಂದ ತನ್ನನ್ನು ರಕ್ಷಿಸಿ ಕೊಳ್ಳಲು ಹಾಗೂ ಅಂತರಂಗಾ ಶುದ್ಧಿಗೆ ಭಗವತ್ ಅನುಗ್ರಹ ಅವಶ್ಯವೆಂದು ಅವರು ಬಲವಾಗಿ ನಂಬಿದ್ದಾರೆ. ಅದಕ್ಕಾಗಿ ಭಕ್ತರಾಗಲು ಜನಸ್ತೋಮಕ್ಕೆ ಕಳಕಳಿಯ ಕರೆ ನೀಡಿದ್ದಾರೆ. ’ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ’, ’ನೀನೇ ದಯಾಳೋ ನಿರ್ಮಲ ಚಿತ್ತಗೋವಿಂದ’, ’ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ’ ಇಂತಹ ಕೀರ್ತನೆಗಳಲ್ಲಿ ಭಗವಂತನಲ್ಲಿ ವಿಶ್ವಾಸವಿರಿಸಿರುವುದು. ಆತನನ್ನು ನಂಬಿದವರಿಗೆ ಯಾರಿಗೂ ಭಯವಿಲ್ಲ ಎಂಬ ಆಶಾಭಾವ ಧ್ವನಿಸುತ್ತದೆ.

ಬದುಕಿನ ನಶ್ವರವನ್ನು ಕುರಿತು ಕೆಲವು ಕೀರ್ತನೆಗಳು ದಾಸರ ಭಕ್ತಿವಿಕಾಸದಲ್ಲಿ ಇನ್ನೊಂದು ಮಹತ್ವದ ಘಟ್ಟವನ್ನು ನಿರೂಪಿಸುತ್ತವೆ. ಇಲ್ಲಿ ಭಕ್ತನು ತನ್ನ ಸರ್ವಸ್ವವನ್ನು ದೇವರಿಗೆ ಅರ್ಪಿಸಿ, ತಾನು ಕೇವಲ ನಿಮಿತ್ತ ಮಾತ್ರವಾಗಿ ಉಳಿಯುವನು. ಕಿಂಕರಭಾವ ಇಲ್ಲಿಯ ಗೀತಗಳಲ್ಲಿ ಹುದುಗಿದೆ.

ಲೊಳಲೊಟ್ಟೆ ಬದುಕು ಲೊಳಲೊಟ್ಟೆ

ಆನೆ ಕುದುರೆ ಒಂಟೆ ಲೊಳಲೊಟ್ಟೆ ಬಹು
ಸೇನೆ ಭಂಡಾರವು ಲೊಳಲೊಟ್ಟೆ
ಮಾನಿನಿಯರ ಸಂಗ ಲೊಳಲೊಟ್ಟೆ
ದೊಡ್ಡ ಕ್ಷೋಣೀಶನೆಂಬುದು ಲೊಳಲೊಟ್ಟೆ

ಮುತ್ತು ಮಾಣಿಕ್ಯ ಲೊಳಲೊಟ್ಟೆ, ಚಿನ್ನ
ಛತ್ರಚಾಮರ ಧ್ವಜ ಲೊಳಲೊಟ್ಟೆ
ಸುತ್ತಗಲಕೋಟೆ ಲೊಳಲೊಟ್ಟೆ
ಮತ್ತೆ ಉತ್ತಮ ಪ್ರಭುತ್ವ ಲೊಳಲೊಟ್ಟೆ

ಕಂಟಕರೆಂಬರು ಲೊಳಲೊಟ್ಟೆ ನಿನ್ನ
ನಂಟರು ಇಷ್ಟರು ಲೊಳಲೊಟ್ಟೆ
ಉಂಟಾದ ಪುರಂದರವಿಠಲ ರಾಯನ
ಭಂಟನಾಗದವ ಲೊಳಲೊಟ್ಟೆ

ಬದುಕಿನ ನಿಸ್ಸಾರತೆಯನ್ನು (ಲೊಳಲೊಟ್ಟೆ) ಪುರಂದರದಾಸರು ಸರಳವಾಗಿ, ನೇರವಾಗಿ ಮನಮುಟ್ಟುವಂತೆ ಪ್ರತಿಪಾದಿಸಿದ್ದಾರೆ. ಮುಕ್ತಿಯೊಂದೆ ಶಾಶ್ವತ ಸುಖ. ಅದನ್ನು ಪಡೆಯಲು ಭಕ್ತನ ನಿರಂತರ ಹೋರಾಟ ದೇವ ಸನ್ನಿದಿಯಲ್ಲಿ ಬದುಕು ಸಾರ್ಥಕತೆ ಪಡೆಯುವುದೆಂಬ ಭಾವನೆ ಇಲ್ಲಿ ಪ್ರಬಲವಾಗಿದೆ. ಪುರಂದರದಾಸರ ’ಅನುಗಾಲವು ಚಿಂತೆ, ನೀ ಎನ್ನ ಕೈ ಬಿಡುವರೆ?’ ಇಂತಹ ಕೀರ್ತನೆಗಳಲ್ಲಿ ಅರ್ಪಣಾಭಾವದ ತುಡಿತ ತೀವ್ರವಾಗಿದೆ. ಬದುಕಿನ ಜೀವಂತಿಕೆಗೆ ಸೌಹಾರ್ದ, ಸಾಮರಸ್ಯಗಳು ಅತ್ಯಗತ್ಯ. ಅದಕ್ಕೆ ಕೆಲವು ರೂಪಕಗಳನ್ನು ಅವರು ನೀಡಿದ್ದಾರೆ.

ಕಲ್ಲಾಗಿರಬೇಕು ಕಠಿಣ ಭವ ತೊರೆಯೊಳಗೆ
ಬಿಲ್ಲಾಗಿರಬೇಕು ಬಲ್ಲವರೊಳಗೆ
ಬೆಲ್ಲವಾಗಲು ಬೇಕು ಬಂಧುಜನರೊಳಗೆ
ಬುದ್ಧಿಯಲಿ ತನುಮನ ತಿದ್ದಿ ಕೊಳ್ಳಲು ಬೇಕು

ಭಕ್ತ ಮತ್ತು ಭಗವಂತ, ಸ್ವಾಮಿ-ಸೇವಕ ಇವುಗಳ ನಡುವಿನ ಸಂಬಂಧದ ರಹಸ್ಯ ಅರ್ಥಪೂರ್ಣವಾಗಿ ಮೂಡಿಬಂದಿದೆ. ಅವೆರಡರ ನಡುವಿನ ಸಂಬಂಧದ ಮೇಲೆ ಅರ್ಥ ಪ್ರತೀತಿ ಅವಲಂಬಿಸಿರುತ್ತದೆ. ವೈಚಾರಿಕ ಸ್ಪಷ್ಟತೆಗೆ ದಾಸರು ತರುವ ಜೀವನ ಚಿತ್ರಗಳು ತುಂಬ ಸೊಗಸಾಗಿವೆ. ನಮ್ಮ ಸಂಸ್ಕೃತಿಯಲ್ಲಿ ಅಡಗಿರುವ ಪರಂಪರೆ ಮತ್ತು ಶ್ರದ್ದೆ ಮಾನವ ಬದುಕನ್ನು ರೂಪಿಸುವ ಜಲಧಾರೆಗಳಾಗಿವೆ. ಶ್ರೀ ಪಾದರಾಯರ ’ಪಾಲೊಳಗದ್ದು’, ವ್ಯಾಸರಾಯರ ’ಚಿತ್ತಗೊಟ್ಟು ಕಾಯು ಕಂಡ್ಯ’, ವಾದಿರಾಜರ ’ಆವರೀತಿಯಿಂದ ನೀಯೆನ್ನ’, ಕನಕದಾಸರ ’ದಾಸಾನುದಾಸನಾನು’, ’ತನುನಿನ್ನದು’, ಇಂತಹ ನೂರಾರು ಕೀರ್ತನೆಗಳಲ್ಲಿ ಅರ್ಪಣಾಭವವಿಲ್ಲದಿದ್ದರೆ ಮನಸ್ಸು ಶುದ್ಧವಾಗದು ಎಂಬ ಅಂಶ ಜೀವಂತವಾಗಿ ಮಿಡಿಯುತ್ತವೆ. ಪರಮಾತ್ಮನ ಅನುಗ್ರಹದಿಂದ ಮಾತ್ರ ಮುಕ್ತಿ ಸಾಧ್ಯ ಎಂಬ ಅವರ ನಂಬಿಕೆ ಇಲ್ಲಿ ಇನ್ನಷ್ಟು ದೃಢವಾಗಿದೆ. ಸಮರ್ಪಣಭಾವದ ಇನ್ನೊಂದು ಮುಖವೆಂದರೆ ಭಕ್ತ ಹೊಂದುವ ಆನಂದ ಪರವಶತೆ. ಈ ಪರಮಾನಂದ ಹಲವು ರೂಪಗಳಲ್ಲಿ ಅವರ ಕೀರ್ತನೆಗಳಲ್ಲಿ ಹೊರಹೊಮ್ಮಿದೆ. ಸಮರ್ಪಣೆ ಭಕ್ತನಲ್ಲಿ ಧನ್ಯತೆಯ ಭಾವ ಹುಟ್ಟಿಸಿದೆ. ಭಾಷೆಯ ಲಲಿತಮುಖದ ಬಳಕೆಯೇ ಹೆಚ್ಚು ಪುರಂದರರಲ್ಲಿ. ಇವರ ಬಹುಪಾಲು ಕೀರ್ತನೆಗಳಲ್ಲಿ ಭಾವಗೀತಾತ್ಮಕ ಸ್ಪರ್ಶ ಇರುವುದು ಗಮನಾರ್ಹ. ಇದೇ ಕಾರಣಕ್ಕೆ ಮೂಲತಃ ಇದು ಜೀವನ ದರ್ಶನಕ್ಕೆ ಸಂಬಂಧಿಸಿದ ಅಂಶವೂ ಹೌದು. ಅವರ ಕೀರ್ತನೆಗಳ ಅಭಿವ್ಯಕ್ತಿಯೆಂದರೆ ಜೀವನದ ಸಾತ್ವಿಕ ದರ್ಶನವಾಗಿದೆ.

ಹರಿದಾಸರ ಸಾಮಾಜಿಕ ಪ್ರಜ್ಞೆಗೆ ’ಸಮಾಜ ವಿಮರ್ಶೆ’ಯ ಕೀರ್ತನೆಗಳು ಉತ್ತಮ ನಿದರ್ಶನಗಳಾಗಿವೆ. ಸಂಸಾರದಲ್ಲಿ ನಿಂತು ಅದನ್ನು ಗೆಲ್ಲ ಹೊರಟ ದಾಸರು ಸಾಮಾಜಿಕ ಅನಿಷ್ಟಗಳ ಮೇಲೆ ತಮ್ಮ ಕೀರ್ತನೆಗಳ ಛೂಬಾಣ ಎಸೆದರು. ಸಂಸಾರದ ನಿಸ್ಸಾರತೆ, ಮನುಷ್ಯರ ಆಷಾಢ ಭೂತಿತನ ಇಲ್ಲಿ ವಿಡಂಬನೆಗೆ ಗುರಿಯಾಗಿವೆ. ಆ ಮೂಲಕ ಬದುಕನ್ನು ತಿದ್ದುವ, ತೀಡುವ ಹೃದಯ ಸ್ಪರ್ಶಿಯ ಭಾವನೆ ಕೀರ್ತನೆಗಳಲ್ಲಿ ವ್ಯಕ್ತವಾಗಿದೆ. ಸಚ್ಚಾರಿತ್ರ್ಯದ ಚೌಕಟ್ಟನ್ನು ಸಮಕಾಲೀನ ಸಮಾಜದ ಮುಂದಿಟ್ಟ ದಾಸರು ಜಾತಿಭೇದ, ಲಿಂಗ ಅಸಮಾನತೆ, ಮೇಲು ಕೀಳು ಇಂತಹ ಸಾಮಾಜಿಕ ಸ್ತರ ವಿನ್ಯಾಸವನ್ನು ಒಪ್ಪಲಿಲ್ಲ. ಸಾಮಾಜಿಕ ಸಮಾನತೆಯನ್ನು ಮನದಟ್ಟು ಮಾಡಿಸಲು ಪುರಂದರದಾಸರು ತಮ್ಮ ಕೆಲವು ಕೀರ್ತನೆಗಳಲ್ಲಿ ಪ್ರಯತ್ನಿಸಿದ್ದಾರೆ.

ಹೊಲೆಯ ಹೊರಗಿಹನೆ ಊರೊಳಗಿಲ್ಲವೇ
ಹೊಲಗೇರಿಯೊಳು ಹೊಲೆಯ ಹೊಲತಿಲ್ಲವೇ

ಶೀಲವನು ಕೈಕೊಂಡು ನಡೆಸದಾತನೆ ಹೊಲೆಯ
ಕೇಳಿ ಹರಿಶಾಸ್ತ್ರಗಳ ಹೇಳದವ ಹೊಲೆಯ
ಇದ್ದಾಗ ಧಾನಧರ್ಮವ ಮಾಡದವ ಹೊಲೆಯ
ಕೊಂಡ ಋಣವನು ತಿರುಗಿ ಕೊಡದಿದ್ದವನೆ ಹೊಲೆಯ
ಲೇಸು ಉಪಕಾರವನು ಅರಿಯದವ ಹೊಲೆಯ
ಇತ್ಯಾದಿ

ಸಂಪ್ರದಾಯಬದ್ಧವಾದ ಜಾತಿವ್ಯವಸ್ಥೆಯನ್ನೇ ದಾಸರು ಪ್ರಶ್ನಿಸಿ ಸಂಪ್ರದಾಯಶೀಲರಿಗೆ ಸವಾಲು ಹಾಕಿದರು. ಯಾರು ವಾಮಮಾರ್ಗವನ್ನು ಹಿಡಿದು ಬದುಕುತ್ತಾರೋ ಅವರು ಯಾವುದೇ ಸಮುದಾಯಕ್ಕೆ ಸೇರಿರಲಿ ಅವರು ಅಪೂರ್ಣರೇ. ಎಂಬ ಭಾವ ಕೀರ್ತನೆಗಳಲ್ಲಿ ಹುದುಗಿದೆ. ಭಾರತೀಯ ಸಂಸ್ಕೃತಿಯ ಮೌಲ್ಯವಾದ ಸಾಮಾಜಿಕ ಸಮಾನತೆಗಾಗಿ ದಾಸರು ಇತ್ತ ಮಹಾದಾನ ಇಂತಹ ಕೀರ್ತನೆಗಳು ಸಮುದಾಯದ ಎಲ್ಲ ವರ್ಗದವರನ್ನು ಗೌರವಿಸಿ ಸಾಮರಸ್ಯದಿಂದ ಕಾಣಬೇಕೆಂದು ಪುರಂದರದಾಸರು ಒತ್ತಿ ಹೇಳುತ್ತಾರೆ. ಎಲ್ಲ ವರ್ಗದ ಧ್ವನಿಯಾಗಿಸಿ ಅವರ ಕೀರ್ತನೆಗಳು ಅವು ಬದುಕಿಗೆ ಹೊಸವಿಸ್ತಾರವನ್ನು ತಂದುಕೊಟ್ಟವು. ಬದುಕಿನ ಸೂಕ್ಷ್ಮಸಂವೇದನೆ, ಅಭಿವ್ಯಕ್ತಿಯ ನಿರ್ದಿಷ್ಟತೆ ಮತ್ತು ಸಂಯಮದ ಅಭಿವ್ಯಕ್ತಿಯ ಕಡೆಗೆ ಪುರಂದರದಾಸರು ಸಾಕಷ್ಟು ಗಮನ ನೀಡಿರುವುದನ್ನು ಕಾಣಬಹುದು.

ತುರುಕರು ಕರೆದರೆ ಉಣಬಹುದಣ್ಣ
ತುರುಕರು ಕರೆದರೆ ಅತಿಪುಣ್ಯವಯ್ಯ
ತುರುಕರಿಂದ ಮುಟ್ಟುಮಡಿ ಬಿಟ್ಟು ಹೋಗುವುದು
ತುರುಕರಿಂದಲಿ ಎಂಜಲು ಹೋಗುವುದು
ತುರುಕರ ಕೂದಲು ತುರುಬಿಗೆ ಸುತ್ತಿದರೆ
ಎಣಿಕೆಯಿಲ್ಲದ ಮುತ್ತೈದೆಯರಣ್ಣ
ಇತ್ಯಾದಿ

ಇಲ್ಲಿ ತುರುಕರು ಎನ್ನುವ ಪದ ಶ್ಲೇಷಾರ್ಥವನ್ನು ಧ್ವನಿಸುತ್ತದೆ. ತುರುಕರೆಂದರೆ ಮುಸ್ಲಿಂರು; ತುರುಕರು ಈ ಜೋಡುನುಡಿಗೆ ’ಹಸುಕರು’ ಎಂಬ ಅರ್ಥವೂ ಪ್ರಾಪ್ತವಾಗುತ್ತದೆ. ಅದೆನೇ ಇರಲಿ ಅಂಚಿಗೆ ತಳ್ಳಲ್ಪಟ್ಟ ಸಮುದಾಯದ ಬಗೆಗೆ ಗೌರವ ಭಾವನೆ ಇಂತಹ ಕೀರ್ತನೆಗಳಲ್ಲಿ ಅಡಗಿದೆ. ಹೃದಯವಂತಿಕೆಯನ್ನು ಬೆಳೆಸಿಕೊಳ್ಳಬೇಕೆನ್ನುವ ಒಳನೋಟವನ್ನು ಇಲ್ಲಿ ನೋಡಬಹುದು. ಅನೇಕ ಹೊಸವಾಗ್ವಾದಗಳಿಗೆ ಚರ್ಚೆಗಳಿಗೆ ಇಂತಹ ಕೀರ್ತನೆಗಳು ದಾರಿಮಾಡಿಕೊಡುತ್ತವೆ. ’ಆರು ಹಿತವರು ನಿನಗೆ’?, ’ಜಾಲಿಯ ಮರದಂತೆ ಧರೆಯೊಳು ದುರ್ಜನರು ಜಾಲಿಯ ಮರದಂತೆ’’ಉದರವೈರಾಗ್ಯವಿದು’, ’ಪಾಪಿ ಬಲ್ಲನೆ ಪರರ ಸುಖ ದುಃಖವ, ಕೋಪಿ ಬಲ್ಲನೆ ಶಾಂತಿ ಸುಗುಣವ ಘನವ’, ಇಂತಹ ಕೀರ್ತನೆಗಳ ಸಾರವೆಂದರೆ ಹೆಣ್ಣು, ಹೊನ್ನು, ಮಣ್ಣು ಅಶಾಶ್ವತ, ದುರ್ಜನರಿಂದ ದೂರವಿರುವಿಕೆ, ಅಂತರಂಗ ಶುದ್ಧಿ ಇಲ್ಲದೆ ಬೂಟಾಟಿಕೆಯಲ್ಲಿ ಕಾಲಹರಣ ಮಾಡುವವರ ಸ್ವರೂಪ ದರ್ಶನ ಜೊತೆಗೆ ಭಕ್ತಿ ಮಾರ್ಗದ ಪ್ರತಿಪಾದನೆ ಇಲ್ಲದೆ ಸಂಸ್ಕೃತಿ ಸಂವರ್ದನೆಗೆ ಸಂಬಧಿಸಿದ ಇಂತಹ ಸಂಗತಿಗಳ ಮೂಲಕ ಮನುಜನನ್ನು ಉತ್ತಮ ಮನುಜರನ್ನಾಗಿಸುವ ದಾರಿಯನ್ನು ಅವರು ತೋರಿಸಲು ಯತ್ನಿಸಿದ್ದಾರೆ. ಭಾಷಿಕರನ್ನು ಆರೋಗ್ಯಪೂರ್ಣ ಸಮಾಜದಲ್ಲಿ ಸಮಾಜೀಕರಿಸುವ ಬಗೆಯನ್ನು ಇಂತಹ ಕೀರ್ತನೆಗಳಲ್ಲಿ ಕಾಣಬಹುದು. ಅವರ ತೆರೆದ ದೃಷ್ಟಿ ಸಮಾಜದ ಕಣ್ಣನ್ನು ತೆರೆಯಿಸಲು ಯತ್ನಿಸಿತು. ಪುರಂದರದಾಸರ ಬಹುಮಟ್ಟಿನ ಕೃತಿಗಳು ನಮ್ಮ ಸಮಕಾಲೀನ ವಾಗ್ವಾದಗಳ ಭೂಮಿಕೆಯನ್ನು ಒಳಗೊಂಡಿರುವುದರಿಂದ ಸಾಮಾಜಿಕ ಅಧ್ಯಯನದಲ್ಲಿ ಆಸಕ್ತಿಯನ್ನು ಹುಟ್ಟಿಸುತ್ತವೆ.

ದಾಸರು ಬದುಕಿನ ನೆಲೆಯನ್ನು ವಿಸ್ತರಿಸಿದರು; ಸಾಮಾನ್ಯ ಜನತೆಯ ಸುಮಾರ್ಗಕ್ಕಾಗಿ ಲೋಕ ನೀತಿಯನ್ನು ಬೋಧಿಸಿದರು. ಅವರ ಲೋಕ ನೀತಿಯ ಸ್ವರೂಪ ಸಾರ್ವತ್ರಿಕವಾಗಿದೆ. ಅದು ಯಾವುದೇ ಒಂದು ಮತ, ದೇಶ, ಕಾಲದ ಸೊತ್ತಲ್ಲ ದಾಸರ ಕೀರ್ತನೆಗಳ ಹಿರಿಮೆ ಲೋಕನೀತಿಯಲ್ಲಿದೆ. ಅವುಗಳಲ್ಲಿ ಅನೇಕ ಮತಗಳ ಸಾರವಿರುವಂತೆ ಅಜ್ಞಾನ, ಡಂಭಾಚಾರದ ಟೀಕೆಯೂ ವ್ಯಕ್ತವಾಗಿದೆ. ಮನುಷ್ಯಪರವಾದ ಮೌಲ್ಯಗಳನ್ನು, ನಿಲುವುಗಳನ್ನು ಹಲವರು ಕೀರ್ತನೆಗಳಲ್ಲಿ ಅವರು ನಿರಂತರವಾಗಿ ಪ್ರಸ್ತಾಪಿಸುತ್ತಲೇ ಹೋಗಿದ್ದಾರೆ.

ಮಾನವ ಜನ್ಮ ದೊಡ್ಡದು, ಇದ
ಹಾನಿ ಮಾಡಲಿಬೇಡಿ ಹುಚ್ಚಪ್ಪಗಳಿರಾ

ಕಣ್ಣು ಕೈ ಕಾಲ್ಕಿವಿ ನಾಲಿಗೆ ಇರಲಿಕ್ಕೆ
ಮಣ್ಣು ಮುಕ್ಕಿ ಮರುಳಾಗುವರೆ
ಹೆಣ್ಣು ಮಣ್ಣಿಗಾಗಿ ಹರಿಯ ನಾಮಾಮೃತ
ಉಣ್ಣದೆ ಉಪವಾಸ ಇರುವರೆ ಖೋಡಿ

ಕಾಲನದೂತರು ಕಾಲ್ಪಿಡಿದೆಳೆವಾಗ
ತಾಳು ತಾಳೆಂದರೆ ಕಾಳುವರೆ?
ಧಾಳಿಬಾರದ ಮುನ್ನ ಧರ್ಮವ ಗಳಿಸಿರೊ
ಸುಳ್ಳಿವ ಸಂಸಾರ ಸುಳಿಗೆ ಸಿಕ್ಕಲು ಬ್ಯಾಡಿ

ಮಾನವ ಜನ್ಮದ ಸಾರ್ಥಕತೆಗೆ ನೀಡಿದ ದಾಸರ ಸಂದೇಶವಿದು. ಮನಸ್ಸಿನ ಚಂಚಲತೆ ಆಗಾಗ್ಗೆ ಪ್ರವಾಹ ಮಾಡುತ್ತಿರುತ್ತದೆ. ಇದಕ್ಕಾಗಿ ಮನುಷ್ಯ ಯಾವಾಗಲೂ ಜಾಗೃತವಾಗಿರಬೇಕು. ಬದುಕಿನಲ್ಲಿ ಯಾವ ಕಷ್ಟವನ್ನು ಅನುಭವಿಸದೆ ಅಹಂಕಾರದಿಂದ ಸೆಟೆದು ನಿಂತ ಮಾನವರಿಗೆ ದಾಸರು ಎಚ್ಚರಿಕೆ ನೀಡಿದ್ದಾರೆ ’ಕೊಬ್ಬಿನಲಿರಬೇಡವೊ ಏ ಮನುಜ ಕೊಬ್ಬಿನಲಿರಬೇಡವೋ’,’ನೆಚ್ಚದಿರು ಈ ಭಾಗ್ಯ ಅರಿವಿಗೂ ಸ್ಥಿರವಲ್ಲ, ನೆಚ್ಚದಿರು ಎಚ್ಚರಿಕೆ’ ಈ ಮೂಲಕ ದೇಹದ ಅನಿತ್ಯತ್ವವನ್ನು ಜೀವನದ ಅಲ್ಪತೆಯನ್ನು ಒತ್ತಿ ಹೇಳಿದ್ದಾರೆ ದಾಸರು.

ದಾಸರು ಸಾಮಾಜಿಕ ಸ್ತರವಿನ್ಯಾಸವನ್ನು ಪ್ರಭಲವಾಗಿ ವಿರೋಧಿಸಿದರು. ಸಮಾಜ ರಚನೆಯಲ್ಲಿ ಎಲ್ಲ ವರ್ಗ, ವರ್ಣಗಳಿಗೆ ಸಮಾನ ಸ್ಥಾನವಿದೆ. ಭಾಷಿಕರಲ್ಲಿ ಪರಸ್ಪರ ಸಹಕಾರ, ಅರಿವು ಬಹಳ ಮುಖ್ಯವೆಂದು ಬಹಳ ಪರಿಣಾಮಕಾರಿಯಾಗಿ ಹೇಳಿದ್ದಾರೆ. ಮಡಿ ಮೈಲಿಗೆಗಳಿಗಿರುವ ಸಾಂಪ್ರದಾಯಿಕ ಅರ್ಥಕ್ಕೆ ಪುರಂದರದಾಸರು ಹೊಸ ತಿರುವು ತೋರಿದರು.

ಮಡಿ ಮಡಿ ಮಡಿಯೆಂದಡಿಗಡಿಘಾರುತಿ
ಮಡಿ ಮಾಡುವ ಬಗೆ ಬೇರುಂಟು
ಪೊಡವಿಪಾಲಕನ ಪಾದಧ್ಯಾನವನು
ಬಿಡದೆ ಮಾಡುವುದು ಅದು ಮಡಿಯು

ಬಟ್ಟೆಯ ನೀರೊಳಗದ್ದಿ ಒಣಗಿಸಿ
ಉಟ್ಟುಕೊಂಡರೆ ಅದು ಮಡಿಯಲ್ಲ
ಹೊಟ್ಟೆಯೊಳಗಿನ ಕಾಮಕ್ರೋಧವ
ಬಿಟ್ಟು ನಡೆದರೆ ಅದು ಮಡಿಯು
ಇತ್ಯಾದಿ

ಸಂಪ್ರದಾಯಶೀಲವಾದ ಮಡಿಯ ಕಲ್ಪನೆಯನ್ನು ಪ್ರಶ್ನಿಸುತ್ತಾರೆ, ದಾಸರು ಅದಕ್ಕೆ ಪೂರಕವಾಗಿ ಅವರು ಕೊಡುವ ನಿದರ್ಶನಗಳು ತುಂಬ ವೈಚಾರಿಕವಾಗಿವೆ. ಆ ಮೂಲಕ ಸಮಾಜದ ಕಳಂಕವನ್ನು ಅಳಿಸಿ ಹಾಕಲು ಯತ್ನಿಸಿದರು. ಜನಸಾಮಾನ್ಯರ ಅರಿವಿನ ಎಲ್ಲೆಯನ್ನು ವಿಸ್ತರಿಸಿದ ಅವರು ಯಾವ ಕಾಲಕ್ಕೂ ನೋಡಿದರೂ ಸಮಾಜವಾದಿಗಳಾಗಿಯೇ, ಪ್ರಗತಿಪರರಾಗಿಯೇ ಕಾಣುತ್ತಾರೆ.’ನಿಂದಕರಿರಬೇಕು ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧಿಯೋ ಹಾಂಗೆ’,’ಆಚಾರವಿಲ್ಲದ ನಾಲಿಗೆ ನೀಚಬುದ್ಧಿ ಬಿಡುನಾಲಿಗೆ’, ‘ಬೇವು ಬೆಲ್ಲದೊಳಿಡಲೇನು’ ‘ಹಾವಿಗೆ ಹಾಲೆರೆದರೇನು ಫಲ’ ತೆಗಳಿಕೆಯು ಭಕ್ತನನ್ನು ಎಚ್ಚರಿಸಿ ಸನ್ಮಾರ್ಗಕ್ಕೆ ಹಚ್ಚುವುದೆಂದು ಪುರಂದರದಾಸರ ನಂಬಿಕೆ. ನಾಲಗೆಗೆ ಆಚಾರ ಭೋಧಿಸುವ ಮೂಲಕ ದಾಸರು ಸಮಕಾಲೀನ ಸಮಾಜಕ್ಕೆ ನೀತಿ ಧರ್ಮಗಳ ಕಿವಿಮಾತು ಹೇಳಿದರು. ಆತ್ಮೋದ್ದಾರದಿಂದ ಮಾತ್ರವೇ ಲೋಕೋದ್ಧಾರ ಎನ್ನುವ ಇತ್ಯಾತ್ಮಕ ನಿಲುವು ಪುರಂದರದಾಸರದು. ದಾಸರು ಎಂದೂ ಸಂಸಾರವನ್ನು ನಿರಾಕರಿಸಿಲ್ಲ ಸಂಸಾರದಲ್ಲಿದ್ದು ಕೊಂಡೆ ಲೌಕಿಕ ಮತ್ತು ಆಗಮಿಕ ಯಶಸ್ಸನ್ನು ಗಳಿಸಬೇಕೆಂದು ಕರೆಯಿತ್ತಿದ್ದಾರೆ.’ಈಸಬೇಕು ಇದ್ದು ಜಯಿಸಬೇಕು ಹೇಸಿಗೆ ಸಂಸಾರದಲಿ ಆಸೆಲೇಶ ಇಡದ ಹಾಗೆ’ ಸಂಸಾರದಲ್ಲಿದ್ದರೂ ಅದರಲ್ಲಿ ಪೂರ್ಣಲೀನರಾಗದೆ ಅದು ಅಶಾಶ್ವತ ಎಂಬ ಪ್ರಜ್ಞೆ ಇರಬೇಕೆಂದು ಹಲವು ದೃಷ್ಟಾಂತಗಳಿಂದ ಸ್ಪಷ್ಟಪಡಿಸಿದ್ದಾರೆ. ಇಲ್ಲೆಲ್ಲ ಅವರ ಸಾಮಾಜಿಕ ಕಾಳಜಿ ಅಡಗಿದೆ. ಯಾವುದೇ ಕಾಲಮಾನದ ಒಬ್ಬ ಲೇಖಕ ವಿಶಿಷ್ಟ ಸಾಮಾಜಿಕ ಸಂದರ್ಭಗಳಲ್ಲಿ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವುದು ಭಾಷೆ ಸಾಹಿತ್ಯದ ಅಭ್ಯಾಸಿಗಳಿಗೆ ತುಂಬ ಉಪಯುಕ್ತವಾಗುತ್ತದೆ. ಸಾಮಾಜಿಕ ಆಂದೋಲನಗಳು ಹೇಗೆ ನಮ್ಮ ಸಾಂಸ್ಕೃತಿಕ ಸಂದರ್ಭದ ಭಾಗವೇ ಆಗುತ್ತವೆ ಎಂಬುದನ್ನು ಪುರಂದರರ ಅನೇಕ ಕೀರ್ತನೆಗಳು ಪರಿಚಯ ಮಾಡಿಕೊಡುತ್ತವೆ.

ನಿರಾಡಂಬರ ಶೈಲಿ, ಆಡುಭಾಷೆಯ ಬಳಕೆಯಿಂದ ಧ್ವನಿ ಪೂರ್ಣವಾದ ಕೀರ್ತನೆಗಳು ಜನಮುಖಿಯಾದವು. ಭಾಷೆ ಸಾಹಿತ್ಯವನ್ನು ಸಂಸ್ಕೃತ ಭೂಯಿಷ್ಟ ಶೈಲಿಯಿಂದ ಬಿಡಿಸಿದ್ದು ದಾಸರು ಮಾಡಿದ ದೊಡ್ಡ ಭಾಷಿಕ ಕ್ರಾಂತಿ. ಅವರ ಕೀರ್ತನೆಗಳು ಸಾಧಿಸಿದ ಇನ್ನೊಂದು ಸಂಗತಿಯೆಂದರೆ ಅಂಶಲಯನ್ನು ಅಳವಡಿಸಿಕೊಂಡದ್ದು, ಇದರಿಂದ ಕೀರ್ತನೆಗಳ ನಾದದ ಗತಿ ನಿಯತವಾಗಿ ಹರಡಿದೆ. ಸಮಾಜ ಜಾಗೃತಿಗೆ ಒತ್ತು ಕೊಟ್ಟ ದಾಸರಿಗೆ ವಿಷ್ಣುಗಣ ಪ್ರಧಾನವಾದ ಕನ್ನಡದ ಪದರಚನೆ ಅವರ ಅಭಿವ್ಯಕ್ತಿಗೆ ನೇರವಾಯಿತು. ನೀತಿಬೋಧೆಯಲ್ಲಿ ಸಂವಾದದ ಧಾಟಿ ಹೃದಯ ತಟ್ಟುತ್ತವೆ. ‘ಬಂಧುಗಳ ಒಡನಾಟ ಬೆಲ್ಲದ ವಿಷವಾಯಿತಲ್ಲ’. ಇಂತಹ ಹಾಡುಗಳ ಉದ್ದಕ್ಕೂ ಇದೇ ಬಗೆಯ ಸಂವಾದ ನಡೆಯುತ್ತದೆ. ಭಾಷೆ ಇರುವುದೇ ಸಂವಾದಕ್ಕಾಗಿ ಎಂಬುದನ್ನು ಈ ಹಾಡು ಸ್ಪಷ್ಟಪಡಿಸುತ್ತದೆ.’ಪಾಪಿ ಬಲ್ಲನೆ’? ಎಂಬ ಕೀರ್ತನೆಯಲ್ಲಿ ಬರುವ ರೂಪಕಗಳನ್ನು ಗಮನಿಸಿದಾಗ ಇದು ವೇದ್ಯವಾಗುತ್ತದೆ.

ಕತ್ತೆ ಬಲ್ಲುದೆ ಹೊತ್ತ ಕತ್ತುರಿಯ ಪರಿಮಳವ
ಹೇನು ಬಲ್ಲುದೆ ಮುಡಿದ ಹೂವಿನ ಪರಿಮಳವ
ಕಾಗೆಬಲ್ಲುದೆ ಒಳ್ಳೆ ಕೋಗಿಲೆಯ ಸ್ವರವನ್ನು
ಗೂಗೆಬಲ್ಲುದೆ ಹಗಲ ಹರಿದಾಟವ

ಹಾಡು ತನ್ನ ಸಾಮಾಜಿಕತೆಯನ್ನು ಇಂತಹ ಸಂವಾದ ಧಾಟಿಯ ಮೂಲಕ ಬಾಯಿ ಮಾತನ್ನು ಬರವಣಿಗೆಗೆ ಸ್ಥಿರಗೊಳಿಸಲು ಯತ್ನಿಸುತ್ತದೆ. ಸಮರ್ಪಣಭಾವದ ಕೀರ್ತನೆಗಳಲ್ಲಿ ಭಾಷಾ ಬಳಕೆಯಲ್ಲಿ ಭಾವ ತೀವ್ರತೆ ಮತ್ತು ಭಾವನೆಯ ಉತ್ಕಟತೆಯಿದೆ. ನೂರಾರು ರೂಪಕ, ನುಡಿಗಟ್ಟುಗಳಿಂದ ಭಾಷೆ ಶಕ್ತಿಯುತವಾಗಿ ಬಳಕೆಯಾಗಿದೆ. ಸಮಾಜ ವಿಮರ್ಶೆಯ ಕೀರ್ತನೆಗಳಲ್ಲಿ.

ಹೀಗೆ ದಾಸರ ಕೀರ್ತನೆಗಳಲ್ಲಿ ಭಕ್ತಿ ಪ್ರತಿಪಾದನೆ ಅಷ್ಟೆ ಅಲ್ಲ ತಮ್ಮ ಸುತ್ತಿನ ಬದುಕನ್ನು, ಪರಿಸರವನ್ನು ಹಸನಾಗಿಸುವ ಕಾಳಜಿಯಿದೆ; ಸಾಮಾಜಿಕ ಹೊಣೆಗಾರಿಕೆಯಿದೆ, ಕೀರ್ತನೆಗಳಲ್ಲಿ ಲೌಕಿಕ ಬದುಕನ್ನು ಉತ್ತಮಿಸಿಕೊಂಡು ಮನುಷ್ಯ ಪ್ರೇಮವನ್ನು ಬೆಳೆಸಿಕೊಳ್ಳುವ, ಬದುಕಿನ ಸವಾಲುಗಳನ್ನು ಎದುರಿಸುವ, ಮನುಷ್ಯರನ್ನು ಸಮಾಜೀಕರಿಸುವ ಅಂಶಗಳು ಪರಿಣಾಮಕಾರಿಯಾಗಿ ಮೂಡಿಬಂದಿವೆ. ದಾಸರ ಚಿಂತನಾಕ್ರಮ ಜನ ಪರವಾದ ಅವರ ಸಾಂಸ್ಕೃತಿಕ ನಿರ್ವಚನ ಕೀರ್ತನೆಗಳಲ್ಲಿ ಸೊಗಸಾಗಿ ಮೂಡಿಬಂದಿದೆ.