ಒಂದು ಭಾಷಾ ಕ್ಷೇತ್ರದಲ್ಲಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ಭಾಷಾ ಸಮುದಾಯಗಳು ಪರಸ್ಪರ ಬಂದಾಗ ಪರಸ್ಪರ ಕೋಡುಕೊಳ್ಳುವಿಕೆ ನಡೆಯುವುದು ಸಹಜ. ಒಂದು ಭಾಷಾ ಸಮುದಾಯದಲ್ಲಿಲ್ಲದ ವಸ್ತು, ವಿಚಾರ, ವ್ಯವಹಾರಕ್ಕೆ ಸಂಬಂಧಿಸಿದ ಶಬ್ದಗಳು ಅನ್ಯಭಾಷೆಯ ಸಮುದಾಯದಲ್ಲಿದ್ದರೆ ಅದನ್ನು ಇನ್ನೊಂದು ಭಾಷಾ ಸಮುದಾಯ ಸ್ವೀಕರಿಸುತ್ತದೆ. ಅನ್ಯ ಭಾಷಾ ಸಮುದಾಯದಲ್ಲಿಲ್ಲದ ವಸ್ತು, ವಿಚಾರ, ವ್ಯವಹಾರಕ್ಕೆ ಸಂಬಂಧಿಸಿದ ಶಬ್ದಗಳು ಇನ್ನೊಂದು ಸಮುದಾಯದಲ್ಲಿದ್ದರೆ ಅದು ಅನ್ಯಭಾಷಾ ಸಮುದಾಯಕ್ಕೆ ನೀಡುತ್ತದೆ. ಹೀಗೆ ಎರಡು ಭಾಷೆಗಳ ನಡುವೆ ನಡೆಯುವ ಎರವಲು ಕ್ರಿಯೆಗೆ ಭಾಷಾಸ್ವೀಕರಣ ಎಂದು ಹೆಸರು. ಭಾಷೆಯು ಸಂಸ್ಕೃತಿಯ ವಾಹಕವಾಗಿದೆ. ಸ್ವೀಕರಣ ಕ್ರಿಯೆ ನಡೆಯುವುದು ಎರಡು ಭಾಷಿಕ ಸಂಸ್ಕೃತಿಗಳಲ್ಲಿ. ಸಮುದಾಯಗಳ ಭಾವನೆಗಳು ಭಾಷೆಯ ಮೂಲಕ ವ್ಯಕ್ತವಾಗುತ್ತವೆ.

ಎರಡು ಅಥವಾ ಹೆಚ್ಚು ಭಾಷಾ ಸಮುದಾಯಗಳು ರಾಜಕೀಯ, ಧಾರ್ಮಿಕ, ಸಾಮಾಜಿಕ ಕಾರ‍ಣಗಳಿಂದ ಪರಸ್ಪರ ನಿಕಟತ್ವವನ್ನು ಪಡೆಯುತ್ತವೆ. ಒಂದು ಸಮುದಾಯದ ಪ್ರಭಾವ ಇನ್ನೊಂದು ಸಮುದಾಯದ ಮೇಲೆ ಗಾಳವಾಗಿ ಪ್ರಭಾವ ಬೀರುತ್ತದೆ. ಅಂತಹ ಭಾಷಿಕ ಸನ್ನಿವೇಶದಲ್ಲಿ ಎರಡು ಭಾಷಾಸಮುದಾಯದ ಭಾಷೆಗಳಲ್ಲಿಯ ಶಬ್ದಗಳು ವಿನಿಮಯವಾಗುತ್ತವೆ. ಕಿತ್ತೂರು ಕರ್ನಾಟಕದ ಪ್ರದೇಶದಲ್ಲಿ ಸುಮಾರು ಇನ್ನೂರು ವರ್ಷಗಳ ಕಾಲ (ಸಂ. ೧೫-೧೭ ಶತಮಾನ) ಮುಸ್ಲಿಂಮರು ಮತ್ತು ಪೇಶ್ವೆಗಳು ಆಡಳಿತ ನಡೆಸಿದ್ದರಿಂದ ಸಾವಿರಾರು ಉರ್ದು ಮತ್ತು ಮರಾಠಿ ಪದಗಳು ಕರ್ನಾಟಕದ ಉತ್ತರ ಭಾಗದಲ್ಲಿ ಸೇರಿಕೊಂಡಿವೆ (ಶಿಕ್ಷಣ, ವ್ಯಾಪಾರ ಮುಂತಾದ ವಲಯಗಳಲ್ಲಿ). ಅಲ್ಲದೆ ಅವು ಸಹಜವಾಗಿ ಬಳಕೆಯಾಗಿವೆ. ವಿಜಾಪುರ ಪರಿಸರದ ಆದಿಲ್ ಶಾಹಿ ಕಾಲದಲ್ಲಿ ಸಾಹಿತ್ಯ ಕೃಷಿ ಮಾಡಿದ ರುಕ್ಮಾಂಗದ ಪಂಡಿತರು, ಕಾಖಂಡಕಿ ಮಹಿಪತಿರಾಯರು, ಕೃಷ್ಣರಾಯರು, ಗಲಗಲಿ ಅವ್ವ ಮುಂತಾದವರ ಕೃತಿಗಳಲ್ಲಿ ಕನ್ನಡದ ಜೊತೆಗೆ ಉರ್ದು, ಮರಾಠಿ, ಪರ್ಶಿಯನ್ ಭಾಷೆಗಳು ಸಹಜವಾಗಿ ಬೆರೆತಿವೆ ಈ ಅಧ್ಯಾಯದಲ್ಲಿ. ಕಾಖಂಡಕಿ ಮಹಿಪತಿ ದಾಸರ ಕೃತಿಗಳಲ್ಲಿ ಸ್ವೀಕರಣ ಕ್ರಿಯೆ ಯಾವ ರೀತಿ ನಡೆದಿದೆ ಅದರ ಸ್ವರೂಪ ಎಂತಹದು ಈ ಕುರಿತು ಚರ್ಚೆ ಬೆಳೆಸಲಾಗಿದೆ. ಒಂದು ರೀತಿಯ ಧಾರ್ಮಿಕ ಹಾಗೂ ಭಾಷಾ ಸಾಮರಸ್ಯತೆಯ ತುಡಿತ ಅವರ ರಚನೆಗಳ ತಾತ್ವಿಕತೆಯಾಗಿತ್ತು. ಜೊತೆಗೆ ಆದಿಲ್ ಶಾಹಿಯ ಕಾಲದಲ್ಲಿ ವಿಜಾಪುರದಲ್ಲಿ ಅಂದು ಹಲವಾರು ಭಾಷೆಗಳ ಸಂಗಮವಾಗಿ ಪರಸ್ಪರ ಪ್ರೇರಣೆ ಮತ್ತು ಪ್ರಭಾವದಿಂದಾಗಿ ಭಾಷಾ ಮಿಶ್ರಣದ ಸಾಹಿತ್ಯ ಕೃತಿಗಳು ರೂಪುಗೊಂಡಿರುತ್ತವೆ. ಈ ಹಿನ್ನೆಲೆಯಲ್ಲಿ ಮಹಿಪತಿದಾಸರ ಕೆಲವು ರಚನೆಗಳನ್ನು ಗಮನಿಸಬಹುದು.

ಜ್ಞಾನಭ್ಯಾಸ ಮಾಡಿ ಹೀಗೆ
ತಾನೋಲಿದು ಜ್ಞಾನಗುರು ಖುನಾಗುವ್ಹಾಂಗೆ
ಮನದಲಿ ಬಾವ್ಹಾಂಗೆ ನೆನೆದಲಿ ಕಾಂಭಾಂಗೆ
ತನುವಿರಲಿ ಖಾತ್ರಿಗೊಂಡೆ ತಾನೆಲೆ ಗೊಂಭಾಂಗೆ
…………………………………………..
………………………………………….
ದಿಂಡಿಬಂದಿತು ಭಾರಿಸುತ ಬಾಹ್ಯಾಂತ್ರಲಿಂವ್ಹಾಂಗೆ
ಲೇಸಾಗಿ ಮಹಿಪತಿಸ್ವಾಮಿ ಒಲುವ್ಹಾಂಗೆ

ಈ ಕೀರ್ತನೆಯಲ್ಲಿ ಖೂನ, ಖಾತ್ರಿ ಇಂತಹ ಪರ್ಸೋ ಅರ್ಯಾಬಿಕ್ ಶಬ್ದಗಳು ಸಹಜವಾಗಿ ಬಳಕೆಯಾಗಿವೆ.’ಖೂನ’ ಎಂಬ ರೂಪ ಅಲ್ಲಿ ಕೋತಿ, ವಧೆ ಎಂಬರ್ಥದಲ್ಲಿ ಬಳಕೆಯಾಗಿದೆ. ವಿಜಾಪುರ ಪರಿಸರದಲ್ಲಿ ಆ ಅರ್ಥಗಳ ಜೊತೆಗೆ ’ಗುರುತು’ , ’ಪರಿಚಯ’ ಎಂಬರ್ಥದಲ್ಲಿಯೂ ಆ ರೂಪ ಬಳಕೆಯಾಗಿದೆ. ಅದರಂತೆ ಖಾತರ > ಖಾತ್ರಿ ಆಗಿ ರೂಪ ಬದಲಾವಣೆಯಾಗಿದೆ. ಅದರರ್ಥ ನಂಬುಗೆ, ವಿಶ್ವಾಸ, ’ದಿಂಡಿ’ ಎಂಬುದು ಮರಾಠಿ ರೂಪ (ದಿಂಡೀ > ದಿಂಡಿ) ಅದರರ್ಥ ಭಜನೆ ಮೇಳ.

ನಮ್ಮಪ್ಪನ ಕಂಡೆ ಅಪಾರ ಮಹಿಮೆಯುಳ್ಳವ
ಅಪ್ಪನ ಕಂಡೆನಗೆ ತಾ ಅಪಾರ ಖುಶಿಯಾಯಿತು
……………………………………………….
………………………………………………
ತುಂಬಿ ತುಳುಕಿತಾನಂದ ಹೋಯಿತು ನನ್ನ
ಬೇಅಬರು, ಬೇಕೂಫ್ ಕುಂಬಿನಿಯೊಳಗೆ
ಪೂರ್ಣ ಅಂಬುಜಾಕ್ಷಿ……….. ಮಹಿಪತಿಸ್ವಾಮಿ

ಇಲ್ಲಿ ಬಳಕೆಯಾದ ’ಬೇ ಅಬುರು’ ಎಂಬುದು ಹಿಂದೂಸ್ತಾನಿ ಪದ. ಅದರರ್ಥ ಅವಮರ್ಯಾದೆ, ತಿರಸ್ಕಾರ ’ಬೇಕೂಪ್’ ಎಂಬ ಪದದ ಅರ್ಥ ಅವಿವೇಕಿ. ಅದೇ ಮೂಲದ ’ಖುಶಿ’ ಎಂದರೆ ಹಿಗ್ಗು, ಸಂತೋಷ. ರಾಯರ ಕೀರ್ತನೆಗಳಲ್ಲಿ ಇಂತಹ ನೂರಾರು ಅನ್ಯದೇಶಿಯ ಪದಗಳು ಸಿಗುತ್ತವೆ. ಜಬರ್ದಸ್ತು-ಒತ್ತಾಯ, ಜಕೀರ-ದಾಸ್ತಾನು, ಸಂಗ್ರಹ, ತರಿತೀಪು-ಪ್ರೀತಿ, ಪ್ರೇಮ, ದಾನಿ-ಕರಂಡಕ ಪಾತ್ರೆ, ಗುಲಾಮೀ-ಆಳುತನ ಮುಂತಾದವು. ಇಂತಹ ರೂಪಗಳು ಸಹಜವಾಗಿ ಮತ್ತು ಅರ್ಥಪೂರ್ಣವಾಗಿ ಬಳಕೆಯಾಗಿವೆ. ಅವೆಲ್ಲ ಈಗಲೂ ಪ್ರತಿನಿತ್ಯ ಜನರ ಬಾಯಲ್ಲಿ ಉಪಯೋಗದಲ್ಲಿವೆ. ಒಂದು ಭಾಷೆಗೆ ಬೇರೊಂದು ಭಾಷೆಯಿಂದ ಎರವಲಾಗಿ ಬಂದಿರುವ ಶಬ್ಧಗಳನ್ನು ಚಾರಿತ್ರಿಕವಾಗಿ ಅಭ್ಯಾಸ ಮಾಡಿದರೆ ಆ ಭಾಷೆಯ ಸಾಂಸ್ಕೃತಿಕ ಚರಿತ್ರೆಯನ್ನು ಪುನರ್ ಸೃಷ್ಟಿಸಬಹುದು. ಮಹಿಪತಿದಾಸರು ಬಹುಭಾಷಾ ವಿಶಾರದವರಾಗಿದ್ದರು. ಕನ್ನಡದ ಹೊರತಾಗಿ ಮರಾಠಿ, ಉರ್ದು, ತೆಲುಗು, ಅಂದಿನ ದಖನಿ ಭಾಷೆಯಲ್ಲಿ ಕೆಲವು ಕೀರ್ತನೆಗಳನ್ನು ರಚಿಸಿದ್ದಾರೆ. ’ಭಾಷಾಮಿಶ್ರಣ’ ಕ್ರಿಯೆ ಅವರ ರಚನೆಗಳಲ್ಲಿ ಧಾರಾಳವಾಗಿ ನಡೆದಿದೆ. ಅಂತಹ ಕೆಲವು ಮಿಶ್ರಭಾಷಾ ಕೃತಿಗಳು ಇಂತಿವೆ.

ಸಮಾಜೋ ಭಾಯಿ ಸುಕುನಾ ಚಾರೋ ಖುದಾಕಾ
ತೆಲುಗು ಕನ್ನಡ ತುರಕಾರೆ ವಂದೇ ಸುಖ ||ಧ್ರು||

“?ದೇಖೋ ಭಾಯಿ ದಿಸತಾ ತುಮನಾ ನಮರೋಮೆ-ನಜರೋಮೆ
ತನ್ನೊಳಗದೆ ಅತಿ ಸೂಕ್ಷ್ಮವಾಗಿ ತಿಳಿಕೋಮೆ ತಿಳಕೋವೆ
ಸದ್ಗುರು ವಚನ ಶೋಧುನಿ ಪಾಹಾ ಸಪ್ರೇಮ ಸಪ್ರೇಮ
ಚಡುವಯ್ಯ ಉನ್ನದಿ ಪೂರ್ಣಘನ ಮಹಿಮೆ ||೧||
………………………………………………
………………………………………………
ಆನಂದ ಆಹೆ ತುಜ ಮಹಿಪತಿ ಸುಖ ಮೋಠಾ
ಸಿದ್ದ ನೋಡಿರೋಯ ಸಾಕ್ಷಾತ್ಕಾರವ||ಧ್ರು||

ಸಾಧುಕಾದಸ್ತೆ ಪಂಜಲೇಣಾ
ಸಾಧುಕೆ ಸಂಗ ಕರಣಾ ಸಾಧ್ಯವಾಹುವುದು
ಸದ್ಗುರು ಕರುಣಾ ನಿಧರಿಯೊ ಜಾಣಾ
…………………………………………………
………………………………………………..
ಮಹಾಗುರು ಉಪದೇಶಾ ಮಹಿಪತಿಗಾಯಿತು
ಅತಿಸಂತೋಷಾ ಜೀವಕ ಭವ ಭಯನಾ ಶಾ ||೨||
ಬಾಟ ಪಕಡೋ ಸೀದಾ | ನಘಡೇ ತೇಥೆ ಬಾಧಾ |
ಇದುವೆ ಗುರು ನಿಜಬೋಧ | ಸ್ವಸುಖ ಸಮ್ಮತದಾದಾ ||ಧು||

ಬಂದಗೀ ಕರ್ತಾ ಕರಕೇ ಝತಾ | ತಿಳಿಯದು ನಿಜಘನದಾಟಾ
ಮರ್ಮನ ಕಳತಾ ಕರಣೇ ಖೋಟಾ | ಕೇಳಿ ಶ್ರೀ ಗುರುವಿಗೆ ನೀಟಾ
…………………………………………………
…………………………………………………
ಮಹಿಪತಿಗಾಯಿತು ಬಲು ಆನಂದಾ | ಹರೀಮ್ಹಣಾ ಗೋವಿಂದಾ ||

ಬಹುಭಾಷಿಕ ಕ್ಷೇತ್ರದಲ್ಲಿ ಬದುಕಿದ ಮಹಿಪತಿರಾಯರಿಗೆ ಎರಡು ಅಥವಾ ಎರಡಕ್ಕಿಂತ ಹೆಚ್ಚು ಭಾಷೆಗಳನ್ನು ಉಪಯೋಗಿಸುವ ಮತ್ತು ತಮ್ಮ ಭಾವನೆಗಳನ್ನು ಆ ಭಾಷೆಗಳಲಿ ಅಭಿವ್ಯಕ್ತಿಸುವ ಸಾಮರ್ಥ್ಯವಿತ್ತು ಎಂಬುದು ಮೇಲಿನ ಅವರ ಕೀರ್ತನೆಗಳಿಂದ ವ್ಯಕ್ತವಾಗುತ್ತದೆ. ವಿಜಾಪುರ ಪರಿಸರದ ಭಾಷೆಯನ್ನು ಅಧ್ಯಯನ ಮಾಡುವಾಗ ಮಹಿಪತಿರಾಯರ ಕೀರ್ತನೆಗಳು ಬಹುಮುಖ್ಯ ಆಕರಗಳಾಗುತ್ತವೆ.

ಮುಸ್ಲಿಂ ಕೋಮಿಗೆ ಸೇರಿದ ರಾಮದಾಸರು (ಸು. ೧೮ನೆಯ ಶತಮಾನ) ಸ್ವ ಪ್ರಯತ್ನ, ಸಾಧನೆಗಳ ಮೂಲಕ ದಾಸಸಾಹಿತ್ಯಕ್ಕೆ ಅಮೂಲ್ಯ ಕಾಣಿಕೆ ಸಲ್ಲಿಸಿದ್ದಾರೆ. ಅವರ ರಚನೆಗಳಲ್ಲಿರುವ ಭಾಷೆ, ಛಂದಸ್ಸು, ಶೈಲಿ ವಸ್ತು ಮುಂತಾದ ವಿಷಯಗಳ ಅಧ್ಯಯನ ಯೋಗ್ಯವಾಗಿವೆ. ರಾಮದಾಸರು ತಮ್ಮ ಭಾವನೆಗಳನ್ನು ಅಭಿವ್ಯಕ್ತಿಸುವಾಗ ಸಹಜವಾಗಿ ಉರ್ದು ರೂಪಗಳು ಅವರ ರಚನೆಗಳಲ್ಲಿ ಬೆರೆತುಕೊಂಡಿವೆ.

ದಾತ ಹೈ ತೂಹೀ ಮೇರಾ ಹರಿಯೇ
ಕೃಪಾಕರ ಚರಣ ತುಮ್ಹಾರೇ |ಪ|

ಕೋಯೀ ನಹೀ ದುನಿಯಾಮೇ ಮೇರೇ ಹಿಮ್ಮತ
ಜಾನಕೀನಾಥ ತುಮ್ಹಾರೇ ಶಿವಾಯ್ ರಹಕೇ
ದೇವತಾ ಕೋಯೀನಹಿ ದಿಖತಾ ||೧||

ಹಿರಸ್ಕೇ ಚಕ್ಕರ್ಮೇ ಗಿರ್ಕರ್ ಬಹುತ್ ಮೈ
ಟಕ್ಕರ್ ಖಾಯಾರೇ ಮುರಾರಿ
ಜಗ್ ಲೇನ್ ದೇನ್ ಕಾ ಬಜಾರ ಹೈ ಇಜ್ಜತ್ ಬಚ್ಯಾರೇ ||೨||

……………………………….
……………………………….
………………………………
ಗಫಲತ್ ದುನಿಯಾ ದರಿಯಾನೇ ತೀರ್ಕರ್
ಪಾರ್ ಹೋನೇಕಾ ಸೂರತ್ ದಿಖಾದೇ ಶ್ರೀರಾಮ
ಜಲ್ದೀಸೇ ಬಚಾಲೇ ಅಫತ್ಸೇ

ರಾಮದಾಸರ ಇಂತಹ ರಚನೆಗಳಲ್ಲಿ ಉರ್ದುರೂಪಗಳು ಕನ್ನಡದೊಂದಿಗೆ ಮಿಶ್ರಣವಾಗಿವೆ. ಕೀರ್ತನೆಗಳಲ್ಲಿ ಕಂಡುಬರುವ ಸ್ವೀಕರಣ ಪದಗಳ ಅಭ್ಯಾಸ ಮಾಡುವಾಗ ನಾವು ಬಹುಮುಖ್ಯವಾಗಿ ಗಮನಿಸಬೇಕಾಗಿರುವುದು ಅರಬ್ಬಿ, ಪಾರಸಿ, ಮರಾಠಿ ಮತ್ತು ಉರ್ದು ಭಾಷೆಗಳಿಂದ ಬರುವ ಪದಗಳನ್ನು. ಈ ಭಾಷೆಗಳಿಂದಲೇ ನಮಗೆ ಅತಿಹೆಚ್ಚು ಪದಗಳು ಬಂದಿವೆ. ಅವುಗಳ ರಚನೆ ಕನ್ನಡದ ರಚನೆಯೊಂದಿಗೆ ಹೊಂದಿಕೆಯಾದ ಬಗೆಯನ್ನು ಕುರಿತು (ಸಂವಹನದ ದೃಷ್ಟಿಯಿಂದ) ಅಧ್ಯಯನ ಆಗಬೇಕಾಗಿದೆ.

ಒಂದು ಭಾಷೆಯಿಂದ ಶಬ್ದಗಳು ಇನ್ನೊಂದು ಭಾಷೆಗೆ ಬಂದರೆ ಶಬ್ದಕೋಶ ವಿಸ್ತರಣೆಯಾಗುತ್ತದೆ. ಎರವಲು ಪದಗಳನ್ನು ಕುರಿತಾದ ವ್ಯಾಸಂಗವು ಭಾಷಾಶಾಸ್ತ್ರದ ಬಹುಮುಖ್ಯವಾದ ಅಂಗವಾಗಿದೆ. ಭಾಷೆಯ ರಚನೆಯ ದೃಷ್ಟಿಯಿಂದ ಅದು ಎಷ್ಟು ಮುಖ್ಯವೋ ಸಂಸ್ಕೃತಿಯ ದೃಷ್ಟಿಯಿಂದಲೂ ಅಷೇ ಮುಖ್ಯವಾದುದು.[1]

* * *

 

[1]*ಒಂದು ಭಾಷೆಯನ್ನು ಮಾತನಾಡುವಾಗ ಮತ್ತೊಂದು ಭಾಷೆ ಪದಗಳನ್ನು, ವಾಕ್ಯಗಳನ್ನು ಬೆರೆಸುವುದು ಭಾಷಾಮಿಶ್ರಣವಾಗಿದೆ (code Mixing).
*ಇಲ್ಲಿ ಉಕ್ತವಾದ ಕೀರ್ತನೆಗಳನ್ನು ಜಿ. ವರದರಾಜರಾವ್ ಅವರ ಸಂಪಾದಿಸಿದ ’ಶ್ರೀ ಮಹಿಪತಿರಾಯರ ಕೃತಿಗಳು’ (೧೯೭೬) ಸ್ವಾಮಿರಾವ ಕುಲಕರ್ಣಿ ಅವರು ಸಂಪಾದಿಸಿದ ’ಶ್ರೀ ರಾಮದಾಸರ ಕೀರ್ತನೆಗಳು (೨೦೦೧) ಈ ಕೃತಿಗಳಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಅದರಂತೆ ಇಲ್ಲಿ ಉಕ್ತವಾದ ಮಿಶ್ರ ಭಾಷಾ ಕೃತಿಗಳನ್ನು ಡಾ. ಕೃಷ್ಣಕೊಲ್ಹಾರ ಕುಲಕರ್ಣಿ
ಅವರ ಕಾಖಂಡಕಿ ಮಹಿಪತಿರಾಯರು (೧೯೮೯) ಎಂಬ ಕೃತಿಯ ಅನುಬಂಧ ಭಾಗದಿಂದ ಆಯ್ಕೆ ಮಾಡಿಕೊಳ್ಳಲಾಗಿದೆ. ಆ ಬರೆಹಗಳಿಗೆ ಉಪಕೃತ.